ಅಪ್ಪ ತೋಟಕ್ಕೆ ಬೇಸಾಯ ಮಾಡಿಸಬೇಕೆಂದು ಸೋಗೆ ಗರಿಗಳನ್ನೆಲ್ಲ ರಾಶಿ ಮಾಡಿಟ್ಟಿದ್ದ. ಗುರುತಿಸಲು ಸುಲಭವಾಗುವಂತೆ ಸತ್ತ ಮರಗಳಿಗೆ ಹಗ್ಗ ಕಟ್ಟಿದ್ದ. ಆ ದಿನ ಸೇರೇಗಾರನನ್ನು ಕರೆಸಿ ಹದಿನೆಂಟು ಸಾವಿರಕ್ಕೆ ಗುಂಡಾಗುತ್ತಿಗೆ ಮಾತಾಡಿ ಮಾರನೇ ದಿನದಿಂದಲೇ ತಯಾರಿ ಶುರುಮಾಡುವ ಭರವಸೆಯಲ್ಲಿ ಆ ದಿನ ಮಲಗಿದ್ದ. ರಾತ್ರೋ ರಾತ್ರಿ ಅವನಿಗೆ ಹೆಮರೇಜಾಯಿತು. ಮತ್ತೆಂದೂ ಅವನು ತೋಟಕ್ಕಿಳಿಯಲೇ ಇಲ್ಲ. ಗಟ್ಟಿಮುಟ್ಟಾಗಿದ್ದ, ಎರೆಡಾಳಿನಷ್ಟು ಬಲಶಾಲಿಯಾಗಿದ್ದ ಅವನಿಗೆ ತಾನು ಬಹಳ ವರ್ಷ ಬದುಕುತ್ತೇನೆ, ಇನ್ನಷ್ಟು ಕಾಲ ತೋಟ, ವ್ಯವಸಾಯ ನೋಡಿಕೊಳ್ಳುತ್ತೇನೆ ಎಂಬ ನಂಬಿಕೆಗಳಿದ್ದವು. ಸಾವು ಅವನ್ನೆಲ್ಲ ಭ್ರಮೆಯಾಗಿಸಿಬಿಟ್ಟಿತು.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ” ನಿಮ್ಮ ಓದಿಗೆ
ಮೊದಲ ಸಲ ಫೇಸ್ಬುಕ್ಕನ್ನು ನೋಡಿದಾಗ ಅದನ್ನು ತೋರಿಸಿದ ಗೆಳೆಯನ ಹತ್ತಿರ ‘ಇದನ್ನ ನೋಡ್ಬೇಕಂದ್ರೆ ಮೊಬೈಲ್ನಲ್ಲಿ ಮೆಮೋರಿ ಕಾರ್ಡ್ ಇರ್ಲೇ ಬೇಕಾ?’ ಎಂದು ಕೇಳಿದ್ದೆ. ಅದಕ್ಕೆ ನನ್ನ ಗೆಳೆಯ ಕಿಸಿಕಿಸಿ ನಕ್ಕು ಇಲ್ಲ, ಹಾಗೇನಿಲ್ಲ ಎಂದಿದ್ದ. ಅದಿನ್ನೂ ಆಗಷ್ಟೇ ಮೊಬೈಲ್ ಬಂದಿದ್ದ ಸಮಯ. ಫೋನೆಂದರೆ ಒಂದು ಡಯಲ್ ಪ್ಯಾಡ್ ಹಾಗೂ ಇನ್ನೊಂದು ಮಾತಾಡುವ ಡಿವೈಸ್- ಎರಡು ಭಾಗಗಳು ಇರಲೇಬೇಕು ಎಂದುಕೊಂಡಿದ್ದ ನಾವು ಅವೆರಡೂ ಒಂದರಲ್ಲೇ ಬರುತ್ತವೆ ಎಂಬ ಅಚ್ಚರಿಯನ್ನೇ ಇನ್ನೂ ಅರಗಿಸಿಕೊಂಡಿರಲಿಲ್ಲ. ಇಂತಿರುವಾಗ ಅದೇ ಮೊಬೈಲು ಹಾಡು ಹೇಳುತ್ತದೆ, ಸಿನಿಮಾ ತೋರಿಸುತ್ತದೆ ಎಂಬೆಲ್ಲ ಅದ್ಭುತಗಳು ಒಂದೊಂದಾಗಿ ನಮ್ಮ ಮೇಲೆ ಎರಗಿದ್ದವು. ಇನ್ನು ಈ ಫೇಸ್ಬುಕ್ಕೆಂಬ ಮಾಯಾ ಜಗತ್ತಿನ ಬಗ್ಗೆ ಗೊತ್ತಿರುವುದಾದರೂ ಹೇಗೆ?
ಒಂದು ಸಮಯಕ್ಕೆ ಪ್ರಸ್ತುತವಾಗಿದ್ದ ಪ್ರಶ್ನೆಗಳು ಕಾಲಾಂತರದಲ್ಲಿ ಅಸಂಬದ್ಧವೂ, ಅಪ್ರಬುದ್ಧವೂ ಆಗಿಬಿಡುತ್ತವೆ. ಆಗಿನ ಕಾಲಕ್ಕೇ ಕಂಪ್ಯೂಟರ್ ತಜ್ಞನಾಗಿದ್ದ ಗೆಳೆಯ ನನ್ನ ದಡ್ಡ ಪ್ರಶ್ನೆಗೆ ಹೀಹೀ ಎಂದು ನಕ್ಕು ನನ್ನದೂ ಒಂದು ಫೇಸ್ಬುಕ್ ಅಕೌಂಟ್ ಸೃಷ್ಟಿಸಿ ಅದರಲ್ಲಿ ಅವನಿಗೇ ಫ್ರೆಂಡ್ ರಿಕ್ವೆಸ್ಟ್ ಕಳಿಸಿಕೊಂಡು, ನನ್ನನ್ನು ‘ಫ್ರೆಂಡ್’ ಆಗಿ ಸ್ವೀಕರಿಸಿದ್ದ. ಜೀವಂತವಾಗಿ ಪಕ್ಕದಲ್ಲೇ ಇರುವ ಗೆಳೆಯನ ಜೊತೆ ಈ ಫೇಸ್ಬುಕ್ ಲೋಕದೊಳಗೆ ಹೊಸದಾಗಿ ಹೇಗೆ ನಡೆದುಕೊಳ್ಳಬೇಕೆಂದು ಗೊತ್ತಾಗದೆ ನಾನು ಮನೆಗೆ ಹೋದ ಮೇಲೆ ಪೆದ್ದು ಪೆದ್ದಾಗಿ ಅವನ ಫೋಟೋಗಳಿಗೆ ಕಮೆಂಟು ಮಾಡಿದ್ದೆ. ಅವನು ಅವ್ಯಾವುದಕ್ಕೂ ಪ್ರತಿಕ್ರಿಯಿಸದೆ ಪ್ರಬುದ್ಧತೆ ಮೆರೆದಿದ್ದ.
ಅಲ್ಲಿ ಫ್ರೆಂಡ್ಸ್ಗಳಾಗಿ ಸೇರ್ಪಡೆಯಾದ ಉಳಿದವರಾದರೂ ನನ್ನ ಬಾಲ್ಯದ ಗೆಳೆಯರೇ ಆಗಿದ್ದರು. ಮೈಸೂರು, ಉಜಿರೆ, ಉಡುಪಿಗಳಲ್ಲಿ ಓದುತ್ತಿದ್ದ ಅವರೆಲ್ಲ ತಮ್ಮ ಗೆಳೆಯರ ಜೊತೆ ಸುತ್ತಾಡಿದ, ಊಟಕ್ಕೆ ಹೋದ, ಬರ್ತಡೇ ಪಾರ್ಟಿ ಮಾಡಿದ, ಹುಡುಗಿಯರ ಕೈ ಹಿಡಿದು ನಿಂತ ಫೋಟೋಗಳನ್ನು ಅಲ್ಲಿ ಶೇರ್ ಮಾಡಿಕೊಂಡಿದ್ದರು. ಶಾಲೆಯಲ್ಲಿ ಜೊತೆಗಿದ್ದಾಗ ನನ್ನಂತೆಯೇ ಹೇಪೆಕರರಾಗಿದ್ದವರ ಈ ವಿನೂತನ ಜಗತ್ತಿನ ವಿನ್ಯಾಸಗಳನ್ನು ನೋಡಿ ನನಗೆ ಅಚ್ಚರಿಯಾಗಿತ್ತು. ಅವಕ್ಕೆಲ್ಲ ನಾನು ಪೆದ್ದು ಪೆದ್ದಾಗಿ ಕಮೆಂಟು ಮಾಡಿದ್ದೆ. ಇನ್ನು ನನಗಿಂತ ಚಿಕ್ಕವರಾದ ಜೂನಿಯರ್ಗಳೂ ಸೇರಿದಂತೆ ಹಲವರೆಲ್ಲ ಈ ಫೇಸ್ಬುಕ್ ಲೋಕದ ಸ್ಟಾರ್ಗಳಾಗಿ ಬದಲಾಗಿದ್ದರು. ಅಲ್ಲಿ ಅವರ ಫೋಟೋಗಳಿಗೆ ಹಲವಾರು ಲೈಕ್ಸ್ಗಳೂ, ಕಮೆಂಟುಗಳೂ ಬರುತ್ತಿದ್ದವು. ಕಾಲೇಜಿನಲ್ಲೂ ಆ ಬಗ್ಗೆ ಚರ್ಚೆಗಳಾಗುತ್ತಿದ್ದವು. ಕಾಲೇಜಿನ ಕಾರಿಡಾರುಗಳಲ್ಲಿ ಸಾಮಾನ್ಯರಾಗಿ ಓಡಾಡುತ್ತಿದ್ದವರು ಫೇಸ್ಬುಕ್ ಗೋಡೆಯಲ್ಲಿ ಇದ್ದಕ್ಕಿದ್ದಂತೆ ಕನ್ನಡಕ ತೊಟ್ಟು ಆಕಾಶ ನೋಡುತ್ತ ಬದುಕಿನ ಯಾವುದೋ ವೇದಾಂತ ಹೇಳುವ ತಾರೆಗಳಾಗಿ ನಿಂತುಬಿಟ್ಟಿದ್ದರು. ಇಂಟರ್ನೆಟ್ಟಿನಿಂದ ಹೆಕ್ಕಿ ತಂದ ಅವರದಲ್ಲದ ಸಾಲುಗಳು ಅವರ ವ್ಯಕ್ತಿತ್ವಕ್ಕೆ ಹೊಂದಿಕೆಯಾಗದಿದ್ದರೂ ನೋಡುವವರ ಕಣ್ಣಿಗೆ ಅವರದೇ ನಿಲುವುಗಳಂತೆ ಭಾಸವಾಗುತ್ತ ಭ್ರಮೆ ಸೃಷ್ಟಿಸಿದ್ದವು.
ಹೀಗೆ ಫೇಸ್ಬುಕ್ ತೆರೆದ ಮೂರ್ನಾಲ್ಕು ವರ್ಷಗಳ ತನಕ ನಾನು ಅಲ್ಲಿಯೂ ಪೇಲವ, ದಡ್ಡ ವ್ಯಕ್ತಿಯೇ ಆಗಿದ್ದೆ. ಇಲ್ಲಿನಂತೆಯೇ ಅಲ್ಲಿಯೂ ಎಲ್ಲರೂ ನಾನು ಹಾಕುವ ಹಲ್ಕಿರಿದ ಫೋಟೋಗಳನ್ನೂ, ಶೇರ್ ಮಾಡುವ ಪೋಸ್ಟ್ ಗಳನ್ನೂ ಅತ್ಯಂತ ಗೌರವಯುತವಾಗಿ ಕಡೆಗಣಿಸುತ್ತಿದ್ದರು. ಹೀಗಿದ್ದ ನಾನು ಜೇಡದಿಂದ ಕಚ್ಚಿಸಿಕೊಂಡ ದಡ್ಡನೊಬ್ಬ ಇದ್ದಕ್ಕಿದ್ದಂತೆಯೇ ಸ್ಪೈಡರ್ ಮ್ಯಾನಾದಂತೆ ಸೂಪರ್ ಮ್ಯಾನಾಗಿ ಬದಲಾಗಿದ್ದು ಪ್ರಕಟವಾದ ನನ್ನ ಕವಿತೆಯೊಂದನ್ನು ಮೊದಲ ಬಾರಿಗೆ ಫೇಸ್ಬುಕ್ಕಿಗೆ ಹಾಕಿದಾಗ. ಆ ಹೊತ್ತಿಗಾಗಲೇ ನಾನು ಕಂಪನಿ ಕೆಲಸಕ್ಕೆ ಸೇರಿ, ಬೆಂಗಳೂರಿನ ಏಕಾನತೆಗೆ ಸಿಕ್ಕು, ಹತ್ತಾರು ಕವಿತೆಗಳನ್ನ ಬರೆದು ಬಿಸಾಕಿಯಾಗಿತ್ತು. ಅವುಗಳ ಪೈಕಿಯೇ ಒಂದು ಪಂಜು ಪತ್ರಿಕೆಯಲ್ಲಿ ಪ್ರಕಟವಾಗಿ, ಅದನ್ನು ನಾನು ಎಫ್ಬೀಯಲ್ಲಿ ‘ನನ್ನ ಮೊದಲ ಪ್ರಕಟಿತ ಕವಿತೆ’ ಎಂದು ಹಾಕಿಕೊಂಡ ಬಳಿಕ ಎಲ್ಲವೂ ಬದಲಾಯಿತು.
ಆ ಬದಲಾವಣೆ ಅದ್ಭುತವಾಗಿತ್ತು. ನನ್ನ ಸಹೋದ್ಯೋಗಿ ಹುಡುಗರೇ ನನ್ನನ್ನು ‘ಓ ಏನ್ರೀ ನಿಮ್ಮ ಕವಿತೆ, ಅಬ್ಬಾಬ್ಬಾ’ ಎಂದೆಲ್ಲ ಬಿಲ್ಡಪ್ ಕೊಟ್ಟರು. ಅವರಲ್ಲಿ ಹೆಚ್ಚಿನವರು ಆ ಕವಿತೆಯನ್ನು ಓದಿದ್ದೇ ಸುಳ್ಳಾಗಿತ್ತು. ಅದರಲ್ಲೂ ತುಳು ಭಾಷಿಕಳಾದ ಹುಡುಗಿಯೊಬ್ಬಳು ಏನೋ ಮಾತಾಡುವಾಗ ‘ನೀವು ಬಿಡಿ ಸಾಹಿತಿಗಾರರು’ ಎಂದುಬಿಟ್ಟಳು. ತೋಟದಲ್ಲಿ ಅಡಿಕೆ ಮರ ಹತ್ತುವ ಕೊನೆಗಾರರ ನೋಡಿದ್ದ ನನಗೆ ಸಾಹಿತಿಗಾರ ಎನ್ನುವುದೂ ಅಂಥದೇ ಮರಹತ್ತುವ ಕೆಲಸದಂತೆ ಭಾಸವಾಯಿತು. ನಾನೇ ಕೊನೆಗಾರನಾಗಿ ಬದಲಾಗಿ ಅಡಿಕೆ ಮರವೇರಿದಂತೆ ಕಲ್ಪನೆಮಾಡಿಕೊಂಡೆ.
ಅಲ್ಲಿಲ್ಲಿ ಬರಹಗಳು ಪ್ರಕಟವಾಗಿ, ಚಿಕ್ಕಪುಟ್ಟ ಪ್ರಶಸ್ತಿಗಳು ಬಂದು, ಹಲಕೆಲವರು ಹೊಗಳುತ್ತಿದ್ದಂತೆಯೇ ನನ್ನೊಳಗೇ ನಾನು ಭಯಾನಕ ಸಾಹಿತಿಯಾಗಿ ಬದಲಾದೆ. ನಾನು ಸಿಕ್ಕಾಪಟ್ಟೆ ಜ್ಞಾನಿ, ಉಳಿದವರೆಲ್ಲ ಚಿಕ್ಕಪುಟ್ಟ ಬರಹಗಾರರು, ನನ್ನ ಮಟ್ಟಕ್ಕೆ ಬರೆಯುವುದಕ್ಕೆ ಯಾರಿಗೆ ಬರುತ್ತೆ ಎಂದು ರಾವಣನಂತೆ ಒಳಗೇ ಅಟ್ಟಹಾಸ ಮಾಡಿದೆ. ಯಾರಿಗೂ ಕಾಣದ ಹತ್ತು ತಲೆಗಳು ಕನ್ನಡಿಯಲ್ಲಿ ನನಗೆ ಮಾತ್ರ ಕಂಡವು. ನನ್ನ ಕವಿತೆ, ಕಥೆಗಳಿಗೆ ನನ್ನ ಊರಿನವರಿಂದ ಹೆಚ್ಚಿನ ಪ್ರತಿಕ್ರಿಯೆ ಬರುತ್ತಿದ್ದುದರಿಂದ ಊರಲ್ಲಿ ನಾನೀಗ ಬೋ ಫೇಮಸ್ಸಾಗಿದ್ದೀನೆಂಬ ಭ್ರಮೆಯನ್ನು ನನಗೆ ನಾನೇ ಸೃಷ್ಟಿಸಿಕೊಂಡೆ. ಎಫ್ಬೀಯಲ್ಲಿ ಏನಾದರೂ ವಾದ ನಡೆಯುತ್ತಿದ್ದರೆ, ಎಂತದೋ ಚರ್ಚೆಯಾಗುತ್ತಿದ್ದರೆ ನಾನು ಅದಕ್ಕೆ ಸೆನ್ಸಿಬಲ್ಲಾಗಿ ಕಮೆಂಟ್ ಮಾಡಬೇಕು, ಪ್ರಬುದ್ಧವಾಗಿ ಒಂದು ಪರಿಹಾರ ಕೊಡಬೇಕು ಎಂದೆಲ್ಲ ಅಂದುಕೊಳ್ಳುತ್ತಿದ್ದೆ. ಮನೆಯಲ್ಲಿ ಅಪ್ಪ-ಅಮ್ಮನ ಮಧ್ಯೆ, ಅವರ ಹಾಗೂ ತಮ್ಮನ ನಡುವೆ ಆಗುವ ಸಾಮಾನ್ಯ ಜಗಳಗಳನ್ನು ಹೇಗೆಲ್ಲ ಮೆಚೂರ್ಡಾಗಿ ಬಗೆಹರಿಸಬೇಕು ಎಂದೆಲ್ಲ ಕಲ್ಪಿಸಿಕೊಳ್ಳುತ್ತಿದ್ದೆ. ಊರಿನಲ್ಲಿ ನಡೆಯುವಾಗ ಯಾರೋ ನನ್ನನ್ನು ಗಮನಿಸುತ್ತಿದ್ದಾರೆಂಬ ಭ್ರಮೆಗೆ ನನ್ನ ನಡಿಗೆಯ ಶೈಲಿಯೇ ಬೇರೆಯಾಯಿತು. ಹೀಗೆ ಯಾರದೋ ಕಣ್ಣಿನಲ್ಲಿ ಮೂಡಬಹುದಾದ ನನ್ನ ಬಿಂಬಕ್ಕನುಸಾರವಾಗಿ ನನ್ನನ್ನು ಬದಲಾಯಿಸಿಕೊಳ್ಳುವ ವಿಫಲ ಪ್ರಯತ್ನವನ್ನು ಒಂದಷ್ಟು ದಿನ ಮಾಡಿದೆ.

ಹೀಗೆ ನಮ್ಮದಲ್ಲದ ವ್ಯಕ್ತಿತ್ವಗಳನ್ನು ತೊಟ್ಟುಕೊಳ್ಳುವುದು ಒಂದು ರೀತಿಯ ಹಿಂಸೆಯ ಕೆಲಸ. ಅಂಥಾ ಭ್ರಮೆಗಳು ಬಹಳ ದಿನ ಉಳಿಯುವುದಿಲ್ಲ. ಈಗ ಯೋಚಿಸಿ ನೋಡುವಾಗ ಇವು ಕೇವಲ ಸಾಹಿತಿಯಾದೆ ಎಂಬ ನಂಬಿಕೆಗೆ ಹುಟ್ಟಿದ ಭ್ರಮೆಗಳಲ್ಲ. ಹೊಸದಾಗಿ ದುಡಿಯಲು ಆರಂಭಿಸಿದ ಎಲ್ಲ ಹುಡುಗರಲ್ಲೂ (ಬಹುಷಃ ಹುಡುಗಿಯರಲ್ಲೂ) ಸಹಜವಾಗಿ ಕಾಣಿಸಿಕೊಳ್ಳುವ ನಡವಳಿಕೆಗಳವು. ಇಷ್ಟು ವರ್ಷ ಅಪ್ಪನ ಮೇಲೆ ಆಧರಿತವಾಗಿದ್ದವರಿಗೆ ಇದ್ದಕ್ಕಿದ್ದಂತೆ ತಮ್ಮದೇ ಸಂಪಾದನೆ ದೊರಕಿದಾಗ, ಮನೆಯ ಜೊತೆ ಕೆಲ ಇತರರಿಗೂ ಸಣ್ಣಪುಟ್ಟ ಮೊತ್ತ ಕೊಡಬಲ್ಲವರಾದಾಗ ಕೆಲವೊಮ್ಮೆ ಈ ಬದುಕು ಹೀಗೇ ಇರುತ್ತದೆ, ನಾನು ದಡ ಸೇರಿದೆ, ನನಗಿನ್ನು ಯಾರ ಹಂಗೂ ಇಲ್ಲ, ಹೀಗೆ ಒಬ್ಬನೇ ಎಲ್ಲವನ್ನೂ ನಿಭಾಯಿಸಬಲ್ಲೆ, ಇಡೀ ಜಗತ್ತಿಗೇ ಬುದ್ಧಿ ಹೇಳಬಲ್ಲೆ ಎಂಬೆಲ್ಲ ಭ್ರಮೆಗಳು ಕೆಲವರನ್ನು ಆವರಿಸುವುದಿದೆ. ಪ್ರ(ಕು)ಖ್ಯಾತ ಸಾಹಿತಿಯಾದೆ ಎಂಬ ನಂಬಿಕೆ ಈ ಪಟ್ಟಿಗೆ ಒಂದೆರಡು ಭ್ರಮೆಗಳನ್ನು ಹೆಚ್ಚಾಗಿ ಸೇರಿಸಿರಬಹುದಲ್ಲದೆ ಅದೇ ಎಲ್ಲದಕ್ಕೂ ಕಾರಣ ಆಗಿರಲಾರದು.
ನನ್ನ ಪ್ರಕಾರ ಭ್ರಮೆಗಳಲ್ಲಿ ಮೂರು ರೀತಿಯಿದೆ. ಒಂದು ಶಾರ್ಟ್ ಟರ್ಮ್ ಭ್ರಮೆಗಳು. ಎರಡು ಲಾಂಗ್ ಟರ್ಮ್ ಭ್ರಮೆಗಳು. ಮೂರು ಲೈಫ್ ಟೈಮ್ ಭ್ರಮೆಗಳು. ಮೊನ್ನೆ ಬಜೆಟ್ನಲ್ಲಿ ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇಯ್ನ್, ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ ಎಂದು ವಿಂಗಡಿಸಿ ಟ್ಯಾಕ್ಸ್ ಹಾಕಿದರಲ್ಲ? ಇದೂ ಹಾಗೇ. ನಾನೀಗ ದೊಡ್ಡ ಸಾಹಿತಿ, ನಾನೀಗ ಫೇಮಸ್ಸಾದೆ ಎಂಬ ನಂಬಿಕೆಗಳು, ಫೇಸ್ಬುಕ್, ಯೂಟ್ಯೂಬ್, ಇನ್ಸ್ಟಾಗ್ರಾಮ್ ಗಳಲ್ಲಿ ರಾತ್ರೋರಾತ್ರಿ ವೈರಲ್ಲಾದ ವೀಡಿಯೋಗಳು ಕೊಡುವ ಜನಮನ್ನಣೆ, ಹೊಸದಾಗಿ ಪರಿಚಯವಾದವರ ಮೇಲೆ ಹುಟ್ಟುವ ಇವನು ಒಳ್ಳೆಯವನು ಅಥವಾ ಕೆಟ್ಟವನು ಎಂಬ ಮೊದಮೊದಲ ಅಭಿಪ್ರಾಯಗಳು, ಹೊಸ ಸಹೋದ್ಯೋಗಿ ತೋರಿಸುವ ಅತಿಯಾದ ಆತ್ಮೀಯತೆ, ನನ್ನ ಗಂಡನಿಗೆ ಕೋಪವೇ ಬರಲ್ಲ, ಹಿ ಈಸ಼್ ಸೋ ಕೂಲ್ ಎಂಬ ಬಿಲ್ಡಪ್ ಗಳು, ಹೊಸದಾಗಿ ಶುರುಮಾಡಿದ ವ್ಯವಹಾರವೊಂದು ನಮ್ಮನ್ನು ಉದ್ಧಾರ ಮಾಡಿಬಿಡುತ್ತದೆ ಎಂದುಕೊಳ್ಳುವುದು, ಮೊದಲ ವೀಡಿಯೋ ಎಡಿಟ್ ಮಾಡಿದ ಯೂಟ್ಯೂಬರ್ರೊಬ್ಬ ತಾನು ಫೇಮಸ್ಸಾದೆ, ಸಾವಿರ ಸಾವಿ ಹಣ ಮಾಡಿಬಿಡುತ್ತೇನೆ ಎಂದುಕೊಳ್ಳುವುದು… ಇವೆಲ್ಲ ಶಾರ್ಟ್ ಟರ್ಮ್ ಭ್ರಮೆಗಳು. ಬದುಕು ಇವನ್ನೆಲ್ಲ ಕೆಲವೇ ದಿನಗಳಲ್ಲಿ ಹರಿದು ಹಾಕುತ್ತದೆ.
ಇನ್ನು ಪ್ರಿಯಕರನ ಮೇಲೆ ಹುಟ್ಟುವ ಇವನು ಜಗತ್ತಿನ ಅತ್ಯುತ್ತಮ ವ್ಯಕ್ತಿ ಎಂಬ ನಂಬಿಕೆ, ಶ್ರೀಮಂತನನ್ನು ಮದುವೆಯಾಗಿ ಇನ್ನೇನೂ ಚಿಂತೆಯೇ ಇಲ್ಲ ಎಂದುಕೊಳ್ಳುವುದು, ಈ ಪಕ್ಷ ಅಧಿಕಾರಕ್ಕೆ ಬಂದರೆ ದೇಶ ಉದ್ಧಾರವಾಗುತ್ತದೆ ಎನ್ನುವುದು, ಒಂದು ಕಾಲಕ್ಕೆ ಆತ್ಮೀಯವಾಗಿರುವ ಸ್ನೇಹಿತರು ಜೀವನುದ್ದುದ್ದಕ್ಕೂ ಹೀಗೇ ಇರುತ್ತಾರೆಂದು ನಂಬುವುದು, ನಾನು ಗಟ್ಟಿ ಕುಳ, ನನಗೆ ಖಾಯಿಲೆಗಳೇ ಬರುವುದಿಲ್ಲ ಎಂದು ಬಗೆಯುವುದು, ನನ್ನ ಮಗನನ್ನು ಶಿಸ್ತಿನಲ್ಲಿ ಸಾಕಿದ್ದೇನೆಂದುಕೊಳ್ಳುವುದು ಇವೆಲ್ಲ ಲಾಂಗ್ ಟರ್ಮ್ ಭ್ರಮೆಗಳು. ಇವು ಥಟ್ಟನೆ ಹರಿಯುವುದಿಲ್ಲ. ಸಮಯ ಕೆಟ್ಟಾಗ, ಪರಿಸ್ಥಿತಿ ಬದಲಾದಾಗ ಇವು ನಶಿಸುತ್ತವೆ. ಕೆಲವೊಮ್ಮೆ ಸರಿಯುವ ಸಮಯದ ಜೊತೆಗೇ ಇವು ನಮಗೆ ಗೊತ್ತಾಗದಂತೆ ಮಾಯವೇ ಆಗಿರುತ್ತವೆ. ಯಾವುದೋ ಹಂತದಲ್ಲಿ ಅರೆ, ನನ್ನ ಈ ನಂಬಿಕೆ ಏನಾಯಿತು ಎಂದು ನಾವೇ ಯೋಚಿಸುವಂತಾಗುತ್ತದೆ. ನಾನು ಗಟ್ಟಿ ಮನುಷ್ಯ ಎಂದುಕೊಂಡಿದ್ದೆ. ಆದರೆ ಕಳೆದೆರಡು ವರ್ಷಗಳಿಂದ ನಮಗೆ ಖಾಯಿಲೆಗಳು ಬರುತ್ತಲೇ ಇವೆಯಲ್ಲ, ನಾನು ಆರೋಗ್ಯವಂತ ಎನ್ನುವುದರಿಂದ ನಾನು ಯಾದಿಕೂರ ಎಂಬ ನಂಬಿಕೆಗೆ ಯಾವಾಗ ಹೊರಳಿಕೊಂಡೆ ಎಂದು ನಾವೇ ಕಂಗಾಲಾಗುತ್ತೇವೆ.
ಕೊನೆಯದಾಗಿ ಈ ಸಿದ್ಧಾಂತವೇ ಶ್ರೇಷ್ಠ, ಈ ವರ್ಗದವರು ಮಾತ್ರ ಒಳ್ಳೆಯವರು, ಈ ಜಾತಿಯವರೆಲ್ಲ ಕೆಟ್ಟವರು ಎಂಬ ನಂಬಿಕೆಗಳು, ಹೀಗೆ ಬರೆದರೆ ಮಾತ್ರ ಶ್ರೇಷ್ಠ ಸಾಹಿತ್ಯ ಎಂಬ ವಾದಗಳು, ಕೆಲವೊಂದು ಆದರ್ಶಗಳು, ನಮ್ಮ ಬಗ್ಗೆ ನಮಗೇ ಇರುವ ನಾನು ಮಾಡಿದ್ದು ಸರಿ, ನಾನು ಪ್ರಾಮಾಣಿಕವಾಗಿ ಬದುಕಿದೆ, ನಾನು ಸಕ್ಕತ್ ಖಡಕ್ ಪಾರ್ಟಿ ಎಂಬೆಲ್ಲ ಅಭಿಪ್ರಾಯಗಳು, ಬದುಕಿನುದ್ದಕ್ಕೂ ನಾನು ಈ ವರ್ಗಕ್ಕೆ ಮಾತ್ರ ಬೆಂಬಲ ಕೊಟ್ಟು ಅಥವಾ ಈ ವರ್ಗವನ್ನು ವಿರೋಧಿಸಿ ಏನೋ ಕ್ರಾಂತಿ ಮಾಡಿದೆ ಎಂಬ ವಿತಂಡ ವಾದಗಳು, ದೇವರಿದ್ದಾನೆ ಅಥವಾ ಇಲ್ಲ ಎನ್ನುವ ಶರಾಗಳು, ನಾನು ಆ ಕೆಲಸಕ್ಕೆ ಸೇರಿದ್ದರೆ ಬೇರೆ ರೀತಿಯೇ ಇರುತ್ತಿದ್ದೆ, ಆ ಕ್ಷಣದಲ್ಲಿ ಹಾಗೆ ನಡೆದುಕೊಂಡಿದ್ದರೆ ಬದುಕು ಬೇರೆಯೇ ಆಗುತ್ತಿತ್ತು, ಈ ಒಂದು ನಿರ್ಧಾರ ನನ್ನ ಬದುಕನ್ನು ಬದಲಿಸಿತು ಎಂಬ ಸಮಾಧಾನ/ಅಸಮಾಧಾನಗಳು… ಇವೆಲ್ಲ ಲೈಫ್ ಟೈಮ್ ಭ್ರಮೆಗಳು.
ಶಾರ್ಟ್ ಟರ್ಮ್ ಭ್ರಮೆಗಳು ಕಳಚಿದಾಗ ಅವಮಾನವಾಗುತ್ತದೆ. ಲಾಂಗ್ ಟರ್ಮ್ ಭ್ರಮೆಗಳು ಹರಿದಾಗ ಆಘಾತವಾಗುತ್ತದೆ. ಲೈಫ್ ಟೈಮ್ ಭ್ರಮೆಗಳು ಕರಗುವುದೇ ಇಲ್ಲ. ಒಂದೊಂದು ಭ್ರಮೆಗೂ ಅದರದ್ದೇ ಆದ ತೆರಿಗೆ ವಸೂಲಿ ಮಾಡುತ್ತವೆ. ದೇವರೆಂಬ ಫೈನಾನ್ಸ್ ಮಿನಿಸ್ಟರ್ ಎಲ್ಲ ರೀತಿಯ ಭ್ರಮೆಗೂ ಒಂದೊಂದು ಬಗೆಯ ಟ್ಯಾಕ್ಸನ್ನು ಹಾಕಿಯೇ ಇದ್ದಾನೆ.
ಅಪ್ಪ ತೋಟಕ್ಕೆ ಬೇಸಾಯ ಮಾಡಿಸಬೇಕೆಂದು ಸೋಗೆ ಗರಿಗಳನ್ನೆಲ್ಲ ರಾಶಿ ಮಾಡಿಟ್ಟಿದ್ದ. ಗುರುತಿಸಲು ಸುಲಭವಾಗುವಂತೆ ಸತ್ತ ಮರಗಳಿಗೆ ಹಗ್ಗ ಕಟ್ಟಿದ್ದ. ಆ ದಿನ ಸೇರೇಗಾರನನ್ನು ಕರೆಸಿ ಹದಿನೆಂಟು ಸಾವಿರಕ್ಕೆ ಗುಂಡಾಗುತ್ತಿಗೆ ಮಾತಾಡಿ ಮಾರನೇ ದಿನದಿಂದಲೇ ತಯಾರಿ ಶುರುಮಾಡುವ ಭರವಸೆಯಲ್ಲಿ ಆ ದಿನ ಮಲಗಿದ್ದ. ರಾತ್ರೋ ರಾತ್ರಿ ಅವನಿಗೆ ಹೆಮರೇಜಾಯಿತು. ಮತ್ತೆಂದೂ ಅವನು ತೋಟಕ್ಕಿಳಿಯಲೇ ಇಲ್ಲ. ಗಟ್ಟಿಮುಟ್ಟಾಗಿದ್ದ, ಎರೆಡಾಳಿನಷ್ಟು ಬಲಶಾಲಿಯಾಗಿದ್ದ ಅವನಿಗೆ ತಾನು ಬಹಳ ವರ್ಷ ಬದುಕುತ್ತೇನೆ, ಇನ್ನಷ್ಟು ಕಾಲ ತೋಟ, ವ್ಯವಸಾಯ ನೋಡಿಕೊಳ್ಳುತ್ತೇನೆ ಎಂಬ ನಂಬಿಕೆಗಳಿದ್ದವು. ಸಾವು ಅವನ್ನೆಲ್ಲ ಭ್ರಮೆಯಾಗಿಸಿಬಿಟ್ಟಿತು.

ಆಕೆ ರಾತ್ರಿ ಮಾರನೇ ದಿನಕ್ಕೆಂದು ದೋಸೆ ಹಿಟ್ಟು ನೆನೆಹಾಕಿ ಮಲಗಿದ್ದಳು. ರಾತ್ರೋರಾತ್ರಿ ಹೃದಯ ಸ್ತಂಭನವಾಯಿತು. ಬದುಕು ಆಕೆಯ ಪಾಲಿಗೆ ದೋಸೆಯ ಹಿಟ್ಟನ್ನು ಮಾತ್ರ ಸತ್ಯ ಮಾಡಿ ದೋಸೆಯನ್ನು ಭ್ರಮೆಯಾಗಿಸಿತು. ಕೆಲವೊಮ್ಮೆ ಈ ಇಡೀ ಬದುಕೇ ಒಂದು ಭ್ರಮೆಯೇನೋ ಅನ್ನಿಸುವುದಿದೆ. ಯಾವುದು ಭ್ರಮೆ, ಯಾವುದು ನಿಜ ಅರಿಯದೆ ಒದ್ದಾಡುತ್ತೇವೆ.
ಹರಟೆ ಎಲ್ಲಿಂದ ಎಲ್ಲಿಗೋ ತಲುಪಿಬಿಟ್ಟಿತು ಅಲ್ವಾ. ಇಂಥಾದ್ದನ್ನು ಆರಂಭಿಸಿ ಹೀಗೇ ಮುಗಿಸುತ್ತೇವೆ ಎಂದುಕೊಳ್ಳುವುದೂ ಒಂದು ಭ್ರಮೆಯೇ.

ವಿನಾಯಕ ಅರಳಸುರಳಿ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೋಕಿನ ಅರಳಸುರಳಿ ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿ ಪಡೆದಿದ್ದು ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟ್ಸ್ ಹುದ್ದೆ ನಿರ್ವಹಿಸುತ್ತಿದ್ದಾರೆ. ಸಣ್ಣ ಕಥೆ, ಲಲಿತ ಪ್ರಬಂಧ ಹಾಗೂ ಕವಿತೆಗಳನ್ನು ಬರೆದಿದ್ದು ‘ನವಿಲುಗರಿ ಮರಿ ಹಾಕಿದೆ’ ಹೆಸರಿನ ಲಲಿತ ಪ್ರಬಂಧ ಸಂಕಲನ ಹಾಗೂ ‘ಮರ ಹತ್ತದ ಮೀನು’ ಕಥಾ ಸಂಕಲನಗಳು ಪ್ರಕಟವಾಗಿವೆ.

