ಕಾದಂಬರಿಯಲ್ಲಿರುವ ಪಾತ್ರಗಳು ಒಂದೇ ರೀತಿಯವರಲ್ಲ. ಅವರ ಬದುಕಿನ ಗುರಿಗಳೂ ಒಂದೇ ಅಲ್ಲ. ಆದರೆ ಅವರ ಅನುಭವಗಳ ಹಿಂದೆ ಮನುಷ್ಯನ ಬದುಕನ್ನು ಜೋಡಿಸುವ ಯಾವುದೋ ಅದೃಶ್ಯ ತಂತಿ ಇದೆ. ಅದೇ ಕಾದಂಬರಿಯ ಲಯ. ಒಂದೊಂದು ಪಾತ್ರ ತನ್ನದೇ ಆದ ದಾರಿಯಲ್ಲಿ ಸಾಗಿದರೂ ಬದಲಾಗುತ್ತಿರುವ ಕಾಲದಲ್ಲಿ ನಾವು ಏನನ್ನು ಉಳಿಸಿಕೊಳ್ಳಬೇಕು, ಏನನ್ನು ಬಿಟ್ಟುಬಿಡಬೇಕು, ಪರಂಪರೆ ಎಂದರೆ ಅಂಧಾನುಕರಣವೇ, ಆಧುನಿಕತೆ ಎಂದರೆ ಮೂಲದಿಂದ ಸಂಪೂರ್ಣ ನಿರಾಕರಣೆಯೇ, ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಾಜದ ಮೌಲ್ಯಗಳು ಪರಸ್ಪರ ತಾಕಲಾಟವಾಡುತ್ತವೆಯೇ ಎನ್ನುವ ಅನೇಕ ವಿವರಗಳನ್ನು ಶಾಸ್ತ್ರಿಗಳು ಈ ಕಾದಂಬರಿಯಲ್ಲಿ ಕಟ್ಟಿಕೊಡುತ್ತಾರೆ.
ಲಕ್ಷ್ಮೀನಾರಾಯಣ ಶಾಸ್ತ್ರಿ ಅವರ “ಲಯ” ಕಾದಂಬರಿ ನಾರಾಯಣ ಯಾಜಿ ಬರಹ ನಿಮ್ಮ ಓದಿಗೆ
ಕಾದಂಬರಿಗೆ ‘ಲಯ’ ಎಂದು ಹೆಸರಿಡುವುದು ಸುಲಭ. ಆದರೆ ಕಾದಂಬರಿಯೊಳಗೆ ಆ ಲಯವನ್ನು ಕಾಪಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಸಂಗೀತದಲ್ಲಿ ಲಯ ತಪ್ಪಿದರೆ ರಾಗದ ಸೌಂದರ್ಯ ಕುಸಿಯುತ್ತದೆ; ಯಕ್ಷಗಾನದಲ್ಲಿ ಲಯ ತಪ್ಪಿದರೆ ಹೆಜ್ಜೆ, ಮಾತು, ಅಭಿನಯಗಳೆಲ್ಲ ಪರಸ್ಪರ ಸಂಬಂಧ ಕಳೆದುಕೊಳ್ಳುತ್ತವೆ. ಹಾಗೆಯೇ ಕಾದಂಬರಿಯಲ್ಲಿ ಬದುಕಿನ ವಿವಿಧ ಪಾತ್ರಗಳು, ಪ್ರದೇಶಗಳು, ವಿಚಾರಗಳು ಮತ್ತು ಕಾಲಘಟ್ಟಗಳು ಒಂದರೊಳಗೊಂದು ಹರಿಯುತ್ತಾ ಓದುಗನ ಅನುಭವದಲ್ಲಿ ಏಕಸೂತ್ರವಾಗಬೇಕಾದರೆ ಅದರ ಹಿಂದೆ ಲೇಖಕನಿಗೆ ಜೀವನವನ್ನು ನೋಡುವ ಒಂದು ಅಂತರ್ಲಯ ಬೇಕಾಗುತ್ತದೆ. ಲಕ್ಷ್ಮೀನಾರಾಯಣ ಶಾಸ್ತ್ರಿಯವರ ಲಯ ಕಾದಂಬರಿಯನ್ನು ಓದಿದಾಗ ಮುಖ್ಯವಾಗಿ ಕಾಣಿಸುವುದು ಇದೇ ಅಂತರ್ಲಯ.
ಎಂಭತ್ತನಾಲ್ಕರ ವಯಸ್ಸಿನಲ್ಲಿ, ಸುಮಾರು ಆರು ದಶಕಗಳಿಗೂ ಮೀರಿದ ಪತ್ರಿಕೋದ್ಯಮದ ಅನುಭವವನ್ನು ಬೆನ್ನಿಗೆ ಕಟ್ಟಿಕೊಂಡು, ಬದುಕಿನ ಅನೇಕ ಮುಖಗಳನ್ನು ಕಂಡಿರುವ ಒಬ್ಬ ಲೇಖಕ ಕಾದಂಬರಿಯ ಮೂಲಕ ತನ್ನೊಳಗೆ ಸಂಗ್ರಹವಾಗಿದ್ದ ಅನುಭವಗಳನ್ನು ಕಥೆಯ ರೂಪಕ್ಕೆ ತಂದಿರುವುದರ ಹಿಂದೆ ಒಂದು ದೀರ್ಘವಾದ ಜೀವನದ ಅವಲೋಕನವಿರುತ್ತದೆ. ಲಯದ ಮಹತ್ವವೂ ಇಲ್ಲಿಯೇ ಇದೆ. ಇದು ಶಾಸ್ತ್ರಿಗಳ ಮೊದಲ ಕಾದಂಬರಿಯಾದರೂ ಬರಹದಲ್ಲಿ ಪತ್ರಕರ್ತನ ಒಳನೋಟ, ಯಕ್ಷಗಾನದ ರಂಗಾನುಭವ, ಸಂಗೀತದ ಸೂಕ್ಷ್ಮತೆ, ಸಾಹಿತ್ಯದ ಒಡನಾಟ ಮತ್ತು ಉತ್ತರ ಕನ್ನಡದ ಸಾಂಸ್ಕೃತಿಕ ಮಣ್ಣಿನ ದೀರ್ಘ ಪರಿಚಯವಿದೆ.

(ಲಕ್ಷ್ಮೀನಾರಾಯಣ ಶಾಸ್ತ್ರಿ)
ಶರಾವತಿಯ ತೀರದಲ್ಲಿ ಕಥೆಯೊಂದು ಮೊಳಕೆಯೊಡೆಯುತ್ತದೆ. ಆದರೆ ಅದು ಶರಾವತಿಯ ತೀರದಲ್ಲಿಯೇ ನಿಂತುಹೋಗುವುದಿಲ್ಲ. ಗ್ರಾಮದಿಂದ ನಗರಕ್ಕೆ, ಮುಂಬೈಯಿಂದ ವಿದೇಶದವರೆಗೆ ಅದರ ಹರಿವು ಸಾಗುತ್ತದೆ. ಈ ಹರಿವು ವಾಸ್ತವವಾಗಿ ಭಾರತೀಯ ಬದುಕಿನ ಒಂದು ಸಾಂಸ್ಕೃತಿಕ ಯಾನವಾಗಿದೆ. ಸ್ಥಳ ಬದಲಾಗುತ್ತದೆ; ಜನ ಬದಲಾಗುತ್ತಾರೆ; ಬದುಕಿನ ವಿಧಾನ ಬದಲಾಗುತ್ತದೆ; ಆದರೆ ಮನುಷ್ಯನೊಳಗಿನ ಕೆಲವು ಮೂಲಭೂತ ಪ್ರಶ್ನೆಗಳು ಬದಲಾಗುವುದಿಲ್ಲ. ಒಂದರೊಳಗೊಂದು ಲಯವಾಗುತ್ತಲೇ ಹೊಸ ಹೊಸತಾಗಿ ರೂಪುಗೊಳ್ಳುತ್ತದೆ.
ಕಾದಂಬರಿಯಲ್ಲಿರುವ ಪಾತ್ರಗಳು ಒಂದೇ ರೀತಿಯವರಲ್ಲ. ಅವರ ಬದುಕಿನ ಗುರಿಗಳೂ ಒಂದೇ ಅಲ್ಲ. ಆದರೆ ಅವರ ಅನುಭವಗಳ ಹಿಂದೆ ಮನುಷ್ಯನ ಬದುಕನ್ನು ಜೋಡಿಸುವ ಯಾವುದೋ ಅದೃಶ್ಯ ತಂತಿ ಇದೆ. ಅದೇ ಕಾದಂಬರಿಯ ಲಯ. ಒಂದೊಂದು ಪಾತ್ರ ತನ್ನದೇ ಆದ ದಾರಿಯಲ್ಲಿ ಸಾಗಿದರೂ ಬದಲಾಗುತ್ತಿರುವ ಕಾಲದಲ್ಲಿ ನಾವು ಏನನ್ನು ಉಳಿಸಿಕೊಳ್ಳಬೇಕು, ಏನನ್ನು ಬಿಟ್ಟುಬಿಡಬೇಕು, ಪರಂಪರೆ ಎಂದರೆ ಅಂಧಾನುಕರಣವೇ, ಆಧುನಿಕತೆ ಎಂದರೆ ಮೂಲದಿಂದ ಸಂಪೂರ್ಣ ನಿರಾಕರಣೆಯೇ, ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಾಜದ ಮೌಲ್ಯಗಳು ಪರಸ್ಪರ ತಾಕಲಾಟವಾಡುತ್ತವೆಯೇ ಎನ್ನುವ ಅನೇಕ ವಿವರಗಳನ್ನು ಶಾಸ್ತ್ರಿಗಳು ಈ ಕಾದಂಬರಿಯಲ್ಲಿ ಕಟ್ಟಿಕೊಡುತ್ತಾರೆ.
ಭಾರತೀಯ ಅಥವಾ ಪಾಶ್ಚಾತ್ಯ ಸಾಹಿತ್ಯದ ಒಂದೇ ಮಾದರಿಯಲ್ಲಿ ಕಟ್ಟಿಹಾಕಲು ಸಾಧ್ಯವಿಲ್ಲ. ಆದರೂ ತುಲನಾತ್ಮಕ ಸಾಹಿತ್ಯದ ದೃಷ್ಟಿಯಿಂದ ನೋಡಿದರೆ ಕೆಲವು ದೂರದ, ಆದರೆ ಅರ್ಥಪೂರ್ಣ ಸಾಮ್ಯಗಳು ಕಾಣುತ್ತವೆ. George Eliot ಅವರ ಪ್ರಸಿದ್ಧ Middlemarch ಕಾದಂಬರಿಯಲ್ಲಿ ಒಂದು ನಾಯಕನ ಅಥವಾ ನಾಯಕಿಯ ಏಕೈಕ ಕಥೆಯಿಲ್ಲ. ಒಂದು ಸಣ್ಣ ಪಟ್ಟಣದೊಳಗಿನ ಹಲವು ವ್ಯಕ್ತಿಗಳ ಬದುಕು, ಅವರ ಆಸೆ, ಆಕಾಂಕ್ಷೆ, ವಿವಾಹ, ಮೌಲ್ಯಗಳು, ಸಾಮಾಜಿಕ ಸಂಬಂಧಗಳು ಮತ್ತು ಬದಲಾಗುತ್ತಿರುವ ಕಾಲದ ಒತ್ತಡಗಳು ಪರಸ್ಪರ ಹೆಣೆದುಕೊಂಡು ಒಂದು ಸಂಪೂರ್ಣ ಕಾಲಘಟ್ಟದ ಸಾಮಾಜಿಕ ಮನಸ್ಸಿನ ಚಿತ್ರವಾಗುತ್ತವೆ. ಲಯದಲ್ಲಿಯೂ ಇದೇ ರೀತಿಯ ಒಂದು ಬಹುಸ್ತರದ ರಚನಾತ್ಮಕ ಪ್ರಯತ್ನ ಕಾಣಿಸುತ್ತದೆ. ಪ್ರತಿ ಪಾತ್ರವೂ ತನ್ನದೇ ಕಥೆಯನ್ನು ಹೊತ್ತು ಬರುತ್ತದೆ; ಆದರೆ ಅಂತಿಮವಾಗಿ ಆ ಕಥೆಗಳು ವ್ಯಕ್ತಿಗಳ ಕಥೆಗಳಾಗಿ ಉಳಿಯದೆ ಒಂದು ಸಮಾಜದ, ಒಂದು ಸಂಸ್ಕೃತಿಯ, ಒಂದು ಕಾಲದ ಕಥೆಗಳಾಗುತ್ತವೆ.
ಎರಡೂ ಕೃತಿಗಳಲ್ಲಿ ಕಾಣುವ ‘ಬಹುಪಾತ್ರಗಳ ಮೂಲಕ ಒಂದು ಸಮಾಜದ ಮನಸ್ಸನ್ನು ಹಿಡಿಯುವ’ ಕಥನತಂತ್ರವನ್ನು ಗಮನಿಸಬಹುದು. Goerge Eliot ಅವರ Middlemarchನಲ್ಲಿ ಇಂಗ್ಲೆಂಡಿನ ಒಂದು ಕಾಲಘಟ್ಟದ ಸಾಮಾಜಿಕ ಬದಲಾವಣೆಗಳು ವ್ಯಕ್ತಿಗಳ ಬದುಕಿನೊಳಗೆ ಪ್ರತಿಫಲಿಸಿದರೆ, ಶಾಸ್ತ್ರಿಯವರ ಲಯದಲ್ಲಿ ಉತ್ತರ ಕನ್ನಡದ ಸಾಂಸ್ಕೃತಿಕ ನೆಲೆಯಿಂದ ಆರಂಭವಾದ ಅನುಭವಗಳು ಗ್ರಾಮ, ನಗರ, ಮುಂಬೈ ಮತ್ತು ವಿದೇಶದವರೆಗೆ ವಿಸ್ತರಿಸಿ ಸಮಕಾಲೀನ ಭಾರತೀಯ ಸಮಾಜದ ಹಲವು ಮುಖಗಳನ್ನು ತೋರಿಸುತ್ತವೆ. ಒಂದು ಅರ್ಥದಲ್ಲಿ Middlemarch ಒಂದು ಪಟ್ಟಣವನ್ನು ಕಾದಂಬರಿಯ ಪಾತ್ರವನ್ನಾಗಿಸಿದರೆ, ಲಯ ತನ್ನ ಕಥಾ ವ್ಯಾಪ್ತಿಯ ಮೂಲಕ ಹಲವು ಭೌಗೋಳಿಕ ಪ್ರದೇಶಗಳನ್ನು ಒಂದೇ ಸಾಂಸ್ಕೃತಿಕ ಸಂವಾದದೊಳಗೆ ತರುತ್ತದೆ.
K. Narayan ಅವರ The Guide ಜೊತೆಗೂ ಒಂದು ಸಣ್ಣ ಆದರೆ ಗಮನಾರ್ಹ ಸಾಮ್ಯವಿದೆ. ಅಲ್ಲಿ ವ್ಯಕ್ತಿಯ ಬದುಕು ನಿಧಾನವಾಗಿ ಅವನ ಸುತ್ತಲಿನ ಸಮಾಜದ ನೈತಿಕ ಪ್ರಶ್ನೆಗಳಾಗಿ ವಿಸ್ತರಿಸುತ್ತದೆ. ಲಯದಲ್ಲಿಯೂ ವ್ಯಕ್ತಿಯ ಅನುಭವವು ವೈಯಕ್ತಿಕ ಮಟ್ಟದಲ್ಲಿ ನಿಲ್ಲದೆ ಧರ್ಮ, ಮೌಲ್ಯ, ಸಂಬಂಧ, ಪರಂಪರೆ, ಆಧುನಿಕತೆ ಮತ್ತು ಸಾಮಾಜಿಕ ಹೊಣೆಗಾರಿಕೆಯ ಪ್ರಶ್ನೆಗಳನ್ನು ಎಬ್ಬಿಸುತ್ತದೆ. ಆದರೆ ನಾರಾಯಣರ ಜಗತ್ತು ಮುಖ್ಯವಾಗಿ ಒಂದು ಕಾಲ್ಪನಿಕ ದಕ್ಷಿಣ ಭಾರತೀಯ ಪಟ್ಟಣದ ಸೂಕ್ಷ್ಮ ಸಾಮಾಜಿಕ ಲೋಕದಲ್ಲಿ ನೆಲೆಯೂರಿದ್ದರೆ, ಲಯ ತನ್ನ ಭೌಗೋಳಿಕ ಮತ್ತು ಸಾಂಸ್ಕೃತಿಕ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸುತ್ತದೆ.
ಇವೆಲ್ಲಾ ನೆನಪಾಗುವುದು ಈ ಕೃತಿಯಲ್ಲಿ ಭಾರತೀಯ ಮತ್ತು ಪಾಶ್ಚಾತ್ಯ ಸಂಸ್ಕೃತಿಗಳ ನಡುವೆ ಉಂಟಾಗುವ ಅಂತರ, ಪರಸ್ಪರ ಅರಿವಿನ ಪ್ರಯತ್ನ ಮತ್ತು ‘ಇನ್ನೊಬ್ಬನ’ ಕಣ್ಣಿನಿಂದ ಸ್ವಂತ ಸಂಸ್ಕೃತಿಯನ್ನು ನೋಡುವ ಅವಕಾಶ, “ಲಯ” ದ ಪ್ರಮುಖ ಆಯಾಮಗಳು. ಲಯದಲ್ಲಿನ ಸೋಫಿಯಾ ಪಾತ್ರದ ಮೂಲಕವೂ ಭಾರತೀಯ ಸಂಸ್ಕೃತಿಯನ್ನು ಹೊರಗಿನ ಮನಸ್ಸೊಂದು ಎದುರಿಸುವ ಸಂದರ್ಭ ಸೃಷ್ಟಿಯಾಗುತ್ತದೆ. ಈ ಮೂಲಕವಾಗಿ ಲಯದಲ್ಲಿ ಭಾರತೀಯ ಸಂಸ್ಕೃತಿಯ ಒಳಗಿನ ಮೌಲ್ಯಸಂಕಟ ಮತ್ತು ಅದರ ಸಮಕಾಲೀನ ಅರ್ಥವನ್ನು ಹುಡುಕುವುದರಲ್ಲಿ ಹೆಚ್ಚು. ಇದು ಒಂದು ಕುಟುಂಬದ ಕಥೆಯಾಗದೇ ಹಲವು ಬದುಕುಗಳ ಸಂಗಮವಾಗಿ ಮೂಡಿಬಂದಿದೆ.
ಶಾಸ್ತ್ರಿಯವರ ವ್ಯಕ್ತಿತ್ವದ ಒಂದು ಪ್ರಮುಖ ಆಯಾಮ ಅವರ ಪತ್ರಿಕೋದ್ಯಮ. ಲಯದ ಪಾತ್ರಗಳನ್ನು ಗಮನಿಸಿದಾಗ ಈ ಪತ್ರಕರ್ತನ ಕಣ್ಣು ಅನೇಕ ಕಡೆ ಕಾಣಿಸುತ್ತದೆ. ಪಾತ್ರಗಳು ಕೇವಲ ಕಥೆಯನ್ನು ಮುಂದಕ್ಕೆ ಸಾಗಿಸುವ ಗೊಂಬೆಗಳಲ್ಲ; ಅವು ತಮ್ಮದೇ ಆದ ಸಾಮಾಜಿಕ ಮತ್ತು ನೈತಿಕ ಹಿನ್ನೆಲೆಯೊಂದಿಗೆ ನಿಂತಿವೆ.
ಚಂದ್ರಣ್ಣನಂತಹ ಪಾತ್ರದ ಮೂಲಕ ಯಕ್ಷಗಾನದ ಮೂಲ ಸ್ವರೂಪದ ಬಗ್ಗೆ ಎದ್ದಿರುವ ಆತಂಕವನ್ನು ಲೇಖಕರು ದಾಖಲಿಸುತ್ತಾರೆ. ಇದು ಕೇವಲ ‘ಹಳೆಯದು ಒಳ್ಳೆಯದು, ಹೊಸದು ಕೆಟ್ಟದ್ದು’ ಎನ್ನುವ ಸರಳ ಸಂಪ್ರದಾಯವಾದಿ ನಿಲುವಲ್ಲ. ಕಲೆಯ ರೂಪಾಂತರ ಅನಿವಾರ್ಯವೆಂಬುದನ್ನು ಒಪ್ಪಿಕೊಂಡೇ ಅದರ ಆತ್ಮವನ್ನು ಕಳೆದುಕೊಳ್ಳಬಾರದು ಎಂಬ ಎಚ್ಚರಿಕೆ ಅದು. ಈ ನಿಲುವು ಲಯದ ಬಹುಮುಖ್ಯ ಸಾಂಸ್ಕೃತಿಕ ಧ್ವನಿಗಳಲ್ಲೊಂದು.
ಅದೇ ಸಮಯದಲ್ಲಿ ಶಾಸ್ತ್ರಿಯವರು ಪರಂಪರೆಯ ಎಲ್ಲವನ್ನೂ ಪ್ರಶ್ನಾತೀತವಾಗಿ ಒಪ್ಪಿಕೊಳ್ಳುವುದಿಲ್ಲ. ದೇವದತ್ತ ಶರ್ಮಾ ಮತ್ತು ಸೋಫಿಯಾ ನಡುವಿನ ವಿಚಾರಲೋಕದಲ್ಲಿ ಭಾರತೀಯ ಪರಂಪರೆಯ ಬಗ್ಗೆ ಲೇಖಕರು ಒಂದು ಸೂಕ್ಷ್ಮ ಪ್ರಶ್ನೆಯನ್ನು ಎತ್ತುತ್ತಾರೆ. ಭಾರತೀಯ ಸಂಸ್ಕೃತಿ ಎಂದರೆ ಕೇವಲ ಆಚರಣೆಗಳ ಮೊತ್ತವಲ್ಲ; ಅದರೊಳಗೆ ಕಾಲಕಾಲಕ್ಕೆ ಮರುಪರಿಶೀಲನೆಗೊಳಗಾಗುವ ಧರ್ಮಸಂಕಟಗಳೂ ಇವೆ. ರಾಮಾಯಣ, ಮಹಾಭಾರತಗಳಂತಹ ಮಹಾಕಾವ್ಯಗಳಲ್ಲಿಯೇ ಮನುಷ್ಯನ ನೈತಿಕತೆಯ ಪ್ರಶ್ನೆಗಳಿಗೆ ಒಂದೇ ಉತ್ತರ ಸಿಕ್ಕಿಲ್ಲ. ಹೀಗಿರುವಾಗ ಇಂದಿನ ಕಾಲದಲ್ಲಿ ಯಾವುದನ್ನಾದರೂ ‘ನಮ್ಮ ಪರಂಪರೆ’ ಎಂಬ ಒಂದೇ ಕಾರಣಕ್ಕೆ ಸ್ವೀಕರಿಸಬೇಕು ಎನ್ನುವುದು ಸಂಸ್ಕೃತಿಯ ಅರಿವಲ್ಲ. ಲಯದ ಪ್ರಗತಿಶೀಲತೆ ಇಲ್ಲಿಯೇ ಹೆಚ್ಚು ಅರ್ಥಪೂರ್ಣವಾಗುತ್ತದೆ. “ಪರಂಪರೆಯನ್ನು ತಿರಸ್ಕರಿಸದೆ, ಪರಂಪರೆಯೊಳಗೇ ವಿವೇಕವನ್ನು ಹುಡುಕುವುದು” ಕಾದಂಬರಿಯ ಮೂಲಭೂತ ವೈಚಾರಿಕ ಗುಣ.
ಸೋಫಿಯಾ ಪಾತ್ರವೂ ಈ ಹಿನ್ನೆಲೆಯಲ್ಲಿ ವಿಶೇಷ ಗಮನ ಸೆಳೆಯುತ್ತದೆ. ವಿದೇಶಿ ನೆಲದಿಂದ ಭಾರತೀಯ ಸಂಸ್ಕೃತಿಯತ್ತ ಬರುವ ಅವಳ ಪ್ರಯಾಣವನ್ನು ಕೇವಲ ಭಾರತೀಯ ಸಂಸ್ಕೃತಿಯ ಶ್ರೇಷ್ಠತೆಯ ಪ್ರಚಾರವೆಂದು ಓದಿದರೆ ಕಾದಂಬರಿಯ ಸೂಕ್ಷ್ಮತೆಯ ಬಹುಭಾಗ ಕಳೆದುಹೋಗುತ್ತದೆ. ಅದರೊಳಗೆ ಒಂದು ದೊಡ್ಡ ಸಾಂಸ್ಕೃತಿಕ ಸಂವಾದವಿದೆ. ಭಾರತವನ್ನು ಹೊರಗಿನಿಂದ ನೋಡುವ ಕಣ್ಣು, ಭಾರತವನ್ನು ಒಳಗಿನಿಂದ ಬದುಕುವ ಕಣ್ಣು, ಇವೆರಡೂ ಪರಸ್ಪರ ಎದುರಾಗುತ್ತವೆ. ಭಾರತೀಯತೆಯ ಮೌಲ್ಯ ಹೊರಗಿನವನಿಗೆ ಕಾಣುವಾಗ, ಒಳಗಿನವನಿಗೆ ತನ್ನದೇ ಸಂಸ್ಕೃತಿಯನ್ನು ಹೊಸದಾಗಿ ನೋಡುವ ಅವಕಾಶ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಮುಂಬೈಯೂ ಕಾದಂಬರಿಯಲ್ಲಿ ಕೇವಲ ಒಂದು ನಗರವಲ್ಲ. ಅದು ಭಾರತದ ಬಹುಸ್ವರೂಪದ ಆಧುನಿಕತೆಯ ರೂಪಕ. ಗ್ರಾಮದಿಂದ ಬಂದವನು ತನ್ನ ಪ್ರತಿಭೆಗೆ ಹೊಸ ವೇದಿಕೆಯನ್ನು ಕಂಡುಕೊಳ್ಳುವ ಸ್ಥಳವೂ ಅದೇ; ತನ್ನ ಮೂಲದಿಂದ ದೂರವಾಗುವ ಅಪಾಯ ಎದುರಾಗುವ ಸ್ಥಳವೂ ಅದೇ. ಕೃಷ್ಣನ ಪಾತ್ರದ ಬೆಳವಣಿಗೆ ಈ ದ್ವಂದ್ವವನ್ನು ಸೂಚಿಸುತ್ತದೆ. ತನ್ನ ಪ್ರತಿಭೆಯಿಂದ ಮೇಲೇರಿದ ವ್ಯಕ್ತಿಯ ಕಥೆಯ ಹಿಂದೆ ‘ನಗರ ಯಾರನ್ನು ಸ್ವೀಕರಿಸುತ್ತದೆ?’ ಎನ್ನುವುದಕ್ಕಿಂತ ‘ತನ್ನನ್ನು ತಾನು ರೂಪಿಸಿಕೊಳ್ಳುವವನಿಗೆ ನಗರ ಎಷ್ಟು ಅವಕಾಶ ಕೊಡುತ್ತದೆ?’ ಎನ್ನುವ ಪ್ರಶ್ನೆ ಅಡಗಿದೆ.
ಗೋಪಾಲನ ಪಾತ್ರದಲ್ಲಿ ಕಾದಂಬರಿ ಮತ್ತೊಂದು ದಿಕ್ಕು ಪಡೆಯುತ್ತದೆ. ವಿದ್ಯಾಭ್ಯಾಸ, ಉದ್ಯೋಗ, ನಗರಜೀವನ, ಇವೆಲ್ಲ ಇದ್ದರೂ ತನ್ನ ಮಣ್ಣಿನತ್ತ ಮರಳುವ ಆಕಾಂಕ್ಷೆ ಅವನಲ್ಲಿ ಮೂಡುತ್ತದೆ. ಆದರೆ ಅದು ಹಳೆಯ ಗ್ರಾಮಕ್ಕೆ ಹಿಂತಿರುಗುವುದಲ್ಲ. ಹೊಸ ಜ್ಞಾನವನ್ನು ತೆಗೆದುಕೊಂಡು ಗ್ರಾಮವನ್ನು ಹೊಸ ರೀತಿಯಲ್ಲಿ ನೋಡುವ ಪ್ರಯತ್ನ. ಕೃಷಿಯನ್ನು ಕೇವಲ ಜೀವನೋಪಾಯವಲ್ಲ, ಪ್ರಯೋಗ ಮತ್ತು ಜವಾಬ್ದಾರಿಯ ಕ್ಷೇತ್ರವನ್ನಾಗಿ ನೋಡುವ ಮನೋಭಾವ ಇಲ್ಲಿ ಕಾಣುತ್ತದೆ. ಈ ಪಾತ್ರದ ಮೂಲಕ ಶಾಸ್ತ್ರಿಯವರು ಗ್ರಾಮವನ್ನು ರೊಮ್ಯಾಂಟಿಕ್ ನೆನಪಾಗಿ ಮಾತ್ರ ಕಾಣುವುದಿಲ್ಲ; ಅದು ಸಮಸ್ಯೆಗಳಿರುವ, ಆದರೆ ಪರಿಹಾರಗಳ ಸಾಧ್ಯತೆಯೂ ಇರುವ ಜೀವಂತ ಜಗತ್ತು ಎಂದು ನೋಡುತ್ತಾರೆ.
ಶಂಕರ್ ಅವಧಾನಿಯಂತಹ ಪಾತ್ರಗಳು ಲಯದ ಸಾಮಾಜಿಕ ಆಯಾಮವನ್ನು ಗಾಢಗೊಳಿಸುತ್ತವೆ. ಒಂದು ಕಾಲದಲ್ಲಿ ಊರಿನ ಸಂಕಟವನ್ನು ತನ್ನ ಸಂಕಟವೆಂದು ಭಾವಿಸುತ್ತಿದ್ದ ಹಿರಿಯರು ಇದ್ದರು. ಆ ಸಾಮಾಜಿಕ ಹೊಣೆಗಾರಿಕೆಯ ನಿಧಾನವಾದ ಕ್ಷಯವನ್ನು ಕಾದಂಬರಿ ದಾಖಲಿಸುತ್ತದೆ. ಇದು ಕೇವಲ ‘ಹಳೆಯ ಕಾಲ ಚೆನ್ನಾಗಿತ್ತು’ ಎಂಬ ನಾಸ್ಟಾಲ್ಜಿಯಾ ಅಲ್ಲ. ಸಮುದಾಯದ ಒಳಗಿನ ಪರಸ್ಪರ ಹೊಣೆಗಾರಿಕೆ ಕಡಿಮೆಯಾಗುತ್ತಿರುವುದರ ಕುರಿತ ಒಂದು ಸಾಮಾಜಿಕ ಆತಂಕ. ಶಾಸ್ತ್ರಿಯವರು ಸಮಾಜದ ಬದಲಾವಣೆಯನ್ನು ಕೇವಲ ವೈಯಕ್ತಿಕ ಬದುಕಿನ ಸಮಸ್ಯೆಯಾಗಿ ನೋಡುವುದಿಲ್ಲ; ಅದರ ಹಿಂದೆ ಇರುವ ಮೌಲ್ಯಪಲ್ಲಟವನ್ನೂ ಗಮನಿಸುತ್ತಾರೆ.
ಈ ಕಾದಂಬರಿಯ ಶಕ್ತಿ ಮತ್ತು ಸತ್ವ ವ್ಯಕ್ತವಾಗುವುದು ಭಾಷೆಯನ್ನು ದುಡಿಸಿಕೊಂಡಿರುವತ್ತ. ಒಂದು ಗ್ರಾಮದೊಳಗೆ ಸೀಮಿತವಾಗಿರುವ ಕಾದಂಬರಿಯಲ್ಲ. ಅದರ ಭೌಗೋಳಿಕ ವ್ಯಾಪ್ತಿ ದೊಡ್ಡದು; ಅದರ ಓದುಗರ ವ್ಯಾಪ್ತಿಯೂ ದೊಡ್ಡದು. ಆದ್ದರಿಂದ ಸಾಮಾನ್ಯ ಕನ್ನಡವನ್ನು ಮುಖ್ಯ ಮಾಧ್ಯಮವನ್ನಾಗಿ ಬಳಸಿರುವುದು ಮೆಚ್ಚಬೇಕಾದ ಸಂಗತಿ. ಸುಬ್ಬಜ್ಜ, ಅಜ್ಜಿಯಂತಹ ಸಂದರ್ಭಗಳಲ್ಲಿ ಕಾಣಿಸುವ ಭಾಷೆಯ ಝಲಕ್ ಆ ಮಣ್ಣಿನ ನೆನಪನ್ನು ಉಳಿಸಿಕೊಳ್ಳುತ್ತದೆ. ಮುಂದೆ ಹವ್ಯಕ ಭಾಷೆಯಲ್ಲೇ ಕಾದಂಬರಿ ಬರೆಯುವ ಲೇಖಕರ ಆಶಯವಿದ್ದರೆ, ಲಯಯನ್ನು ಆ ಪ್ರಯೋಗಕ್ಕೆ ಮುನ್ನುಡಿಯಾಗಿ ನೋಡುವುದೂ ಸಾಧ್ಯ.
ಕಾದಂಬರಿಯ ಅಂತ್ಯದ ಕುರಿತು ಕೇಳಬಹುದಾದ ಮತ್ತೊಂದು ಪ್ರಶ್ನೆ ಆರಂಭದಲ್ಲಿ ಹಿಡಿದ ಶರಾವತಿಯ ಮೂಲದೊಂದಿಗೆ ಕಥೆ ಮತ್ತೆ ಏಕೆ ಒಂದಾಗಲಿಲ್ಲ? ಇದು ನಿಜಕ್ಕೂ ಚರ್ಚೆಗೆ ಅರ್ಹವಾದ ಪ್ರಶ್ನೆ. ಆದರೆ ಪ್ರತಿಯೊಂದು ಕಥೆಯೂ ತನ್ನ ಆರಂಭಕ್ಕೆ ಮರಳಿ ಬಂದು ವೃತ್ತವನ್ನು ಪೂರ್ಣಗೊಳಿಸಬೇಕೆಂಬುದು ಕಾದಂಬರಿಯ ಅನಿವಾರ್ಯ ನಿಯಮವಲ್ಲ. ಕೆಲವೊಮ್ಮೆ ನದಿ ತನ್ನ ಮೂಲದಿಂದ ಹೊರಟು ಸಮುದ್ರ ಸೇರುವವರೆಗೆ ಅನೇಕ ಉಪನದಿಗಳನ್ನು ಸೇರಿಸಿಕೊಳ್ಳುತ್ತದೆ. ಅಂತಿಮವಾಗಿ ನಾವು ಮೂಲವನ್ನು ಹುಡುಕಿದರೆ ಅದು ನಮ್ಮ ನೆನಪಿನಲ್ಲಿ ಇರುತ್ತದೆ; ಕಥೆಯ ದೇಹದಲ್ಲಿ ಇರಬೇಕೆಂಬ ನಿಯಮವಿಲ್ಲ. ಲಯಯ ಅಂತ್ಯವೂ ಇದೇ ಸ್ವಭಾವದ್ದು. ಪಾತ್ರಗಳು ತಮ್ಮ ತಮ್ಮ ಅನುಭವದ ಒಂದು ಹಂತವನ್ನು ತಲುಪಿದಾಗ ಕಥೆ ಮುಗಿಯುತ್ತದೆ. ಅದು ಗಣಿತದ ಸಮೀಕರಣದಂತೆ ಪ್ರತಿಯೊಂದು ಕೊಂಡಿಯನ್ನೂ ಮತ್ತೆ ಜೋಡಿಸಿ ಮುಕ್ತಾಯಗೊಳ್ಳುವುದಿಲ್ಲ. ಬಹುಶಃ ಅದಕ್ಕಾಗಿಯೇ ಮುಂದಿನ ಭಾಗದ ಸಾಧ್ಯತೆಯೂ ಲೇಖಕರ ಮನಸ್ಸಿನಲ್ಲಿ ಮೂಡಿದೆ. ಕಥೆ ಮುಗಿದರೂ ಅದರ ಕೆಲವು ಧ್ವನಿಗಳು ಓದುಗರೊಳಗೆ ಮುಂದುವರಿಯುತ್ತವೆ.
ರಕ್ಷಾಪುಟದ ಅಮೂರ್ತ ಚಿತ್ರಕಲೆಯ ಕುರಿತ ಆಕ್ಷೇಪವೂ ಇದೇ ರೀತಿಯ ಒಂದು ಆಸಕ್ತಿದಾಯಕ ವಿಷಯ. ‘ಅಬ್ಸರ್ಡ್ ಆರ್ಟ್’ ಅಥವಾ ಡಿಜಿಟಲ್ ಅಮೂರ್ತತೆಯನ್ನು ಬಳಸಿರುವುದರಿಂದ ಚಿತ್ರವು ಕಥೆಯ ದೃಶ್ಯವನ್ನೇ ನೇರವಾಗಿ ಹೇಳುವುದಿಲ್ಲ. ಆದರೆ ಲಯ ಎಂಬ ಹೆಸರಿನ ಕಾದಂಬರಿಗೆ ನೇರ ಚಿತ್ರಕ್ಕಿಂತ ಸಂಕೇತ ಮುಖ್ಯವಾಗಬಹುದು. ಕಥೆಯಲ್ಲಿರುವ ಅನೇಕ ಜೀವಿತಗಳ, ಪರಸ್ಪರ ಛೇದಿಸುವ ದಾರಿಗಳ, ಪೂರ್ಣವಾಗಿ ಹಿಡಿಯಲಾಗದ ಅನುಭವಗಳ ರೂಪವನ್ನು ಅಮೂರ್ತ ಕಲೆಯೊಂದು ಸೂಚಿಸುವ ಸಾಧ್ಯತೆಯಿದೆ. ಒಳಪುಟದ ವಿನ್ಯಾಸದ ಗುಣಮಟ್ಟದ ಪ್ರಶ್ನೆ ಪ್ರಕಾಶನ ವ್ಯವಸ್ಥೆಗೆ ಸಂಬಂಧಿಸಿದ್ದಾದರೂ, ರಕ್ಷಾಪುಟದ ಸೌಂದರ್ಯಮೌಲ್ಯವನ್ನು ಕಾದಂಬರಿಯ ವಿಷಯದ ಸಂಕೇತಶಾಸ್ತ್ರದೊಂದಿಗೆ ಓದುವುದು ಹೆಚ್ಚು ನ್ಯಾಯಯುತ.
ಒಟ್ಟಿನಲ್ಲಿ, ಲಯಯನ್ನು ಅದರ ಕಥೆಯಷ್ಟರಿಂದ ಅಳೆಯುವುದು ಸಮರ್ಪಕವಲ್ಲ. ಇದು ಒಂದು ತಲೆಮಾರಿನ ಸಾಂಸ್ಕೃತಿಕ ಸ್ಮೃತಿ ಮತ್ತೊಂದು ತಲೆಮಾರಿನ ಪ್ರಶ್ನೆಗಳೊಂದಿಗೆ ನಡೆಸುವ ಸಂವಾದ. ಯಕ್ಷಗಾನದ ರಂಗದಿಂದ ಸಂಗೀತದ ಸ್ವರದವರೆಗೆ, ಶರಾವತಿಯ ಹಸಿರಿನಿಂದ ಮುಂಬೈಯ ಮಹಾನಗರದವರೆಗೆ, ಕೃಷಿಯ ಮಣ್ಣಿನಿಂದ ಭಾರತೀಯ ಸಂಸ್ಕೃತಿಯ ಅಧ್ಯಯನ ಕೇಂದ್ರದ ಕಲ್ಪನೆಯವರೆಗೆ, ವೈಯಕ್ತಿಕ ಸಂಬಂಧಗಳಿಂದ ಸಾಮಾಜಿಕ ಮೌಲ್ಯಗಳವರೆಗೆ—ಕಾದಂಬರಿ ಹಲವು ಸ್ವರಗಳನ್ನು ಒಂದೇ ವಾದ್ಯದಲ್ಲಿ ನುಡಿಸಲು ಪ್ರಯತ್ನಿಸುತ್ತದೆ. ಈ ಕಾದಂಬರಿಯಲ್ಲಿ ಭಾರತೀಯತೆಯನ್ನು ಹೊರಗಿನ ಮತ್ತು ಒಳಗಿನ ದೃಷ್ಟಿಗಳ ನಡುವಿನ ಸಂವಾದವಾಗಿ ನೋಡುವ ಕ್ಷಣಗಳನ್ನೂ ಸೃಷ್ಟಿಸುತ್ತದೆ. ಆದರೆ ಈ ಎಲ್ಲ ಹೋಲಿಕೆಗಳ ಅಂತ್ಯದಲ್ಲಿ ಲಯ ತನ್ನದೇ ಮಣ್ಣಿಗೆ ಮರಳುತ್ತದೆ. ಅದರ ಶರಾವತಿ, ಅದರ ಯಕ್ಷಗಾನ, ಅದರ ಉತ್ತರ ಕನ್ನಡದ ಸಾಂಸ್ಕೃತಿಕ ಸ್ಮೃತಿ, ಅದರ ಭಾರತೀಯ ಧರ್ಮಸೂಕ್ಷ್ಮತೆ, ಇವೆಲ್ಲವೂ ಈ ಕಾದಂಬರಿಯನ್ನು ಈ ಮಣ್ಣಿನಲ್ಲಿ ರೂಪುಗೊಂಡ ಬೆಳೆದ ಫಲಭರಿತ ವೃಕ್ಷದಂತೆ ತೋರುತ್ತದೆ. ವಿಶ್ವಸಾಹಿತ್ಯದ ಮಹತ್ವದ ಕೃತಿಗಳೊಂದಿಗೆ ಸಂವಾದ ನಡೆಸಬಲ್ಲ ಕೃತಿಯಾಗಿದೆ. ಜೊತೆಗೆ ತನ್ನದೇ ನೆಲೆಯಿಂದ ವಿಶ್ವಮಾನವೀಯ ಪ್ರಶ್ನೆಗಳನ್ನು ಎತ್ತುತ್ತದೆ.

ಏಕೆಂದರೆ ಲಯಯ ಅತ್ಯಂತ ದೊಡ್ಡ ಗುಣ ಬದುಕಿನ ಅಪೂರ್ಣತೆಯೊಳಗೇ ಒಂದು ಅರ್ಥಪೂರ್ಣ ಲಯವನ್ನು ಹುಡುಕುವುದು. ಈ ಕಾದಂಬರಿ ಕಥೆಯ ಲಯವಲ್ಲ ಮಾತ್ರ; ಕಾಲದ ಲಯ, ಸಂಸ್ಕೃತಿಯ ಲಯ, ಮನುಷ್ಯ ಮನುಷ್ಯನೊಳಗಿನ ಲಯ.

ನಾರಾಯಣ ಯಾಜಿಯವರು ಮೂಲತ ಉತ್ತರ ಕನ್ನಡದ ಯಕ್ಷಗಾನದ ಊರಾದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡುತ್ತಿರುವ ಅವರ ಆಸಕ್ತಿ ಯಕ್ಷಗಾನ, ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್. ಯಕ್ಷಗಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಕನ್ನಡದ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಸದ್ಯ ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕ ಮಹಾ ಪ್ರಬಂಧಕ.


