Advertisement
ಶರೀಫ್ ಕಾಡುಮಠ ಬರೆದ ಈ ದಿನದ ಕವಿತೆ

ಶರೀಫ್ ಕಾಡುಮಠ ಬರೆದ ಈ ದಿನದ ಕವಿತೆ

ನಿನ್ನೆ ಹದ ಮಣ್ಣ ನೆಲ
ಇಂದು ಮಿದು ಮೈಯ ಮಸಣ
ಕಾಲಿಟ್ಟಲ್ಲಿ ಮಗುವೊಂದು ಮಲಗಿದೆ
ಬಿಳಿಯ ಅರಿವೆ ಹೊದ್ದು ಶಾಂತವಾಗಿ
ಮತ್ತೆ ಶಾಲೆಗೆ ಹೊರಡುವ ಚಿಂತೆಯಿಲ್ಲದೆ

ಗೊತ್ತಿರಲಿಲ್ಲ ಅವಕ್ಕೆ
ಅದೇ ಕೊನೆಯೆಂದು

ಎದುರು ಕೂತ ಗೆಳತಿಗೆ
ಬೆಂಚಿನಡಿಯಿಂದ ಕಾಲು ತಾಕಿಸಿ
ಕಾಟ ಕೊಟ್ಟ ನೆನಪಿನ ನಗುವಿನ್ನೂ
ಬಾಕಿಯಿತ್ತು
ಅರ್ಧ ಬರೆದ ಆನೆಯ ಚಿತ್ರಕ್ಕೆ
ಕೆಂಪು ನೆತ್ತರ ಬಣ್ಣವಿನ್ನೂ ಬಳಿಯುವುದಿತ್ತು
ಕ್ಷಮಿಸಿ… ಕೆಂಪಲ್ಲ, ಕಂದು ಬಣ್ಣ

ಮೊನ್ನೆ ಮೊನ್ನೆ
ಅಪ್ಪ ಕೊಡಿಸಿದ್ದ
ಬೊಂಬೆ ಚಿತ್ರದ ಥರ್ಮಾಸು
ಇನ್ನೇನು ಗೆಳತಿಗೆ ತೋರಿಸುವುದಿತ್ತು
ಮುನಿಸು ಮರೆತು
ಅವಳ ಬಳಿ ಮಾತಾಡುವುದಿತ್ತು
ಆಡದ ಮಾತೆಷ್ಟು
ಹಾಗೆಯೇ ಉಳಿಯಿತು

ಕದ್ದ ಪೆನ್ಸಿಲ್ಲು
ಗೊತ್ತಾಗದ ಹಾಗೆ
ಪಕ್ಕದವಳ ಬ್ಯಾಗಿಗೆ ತುರುಕಿ
ಸಿಕ್ಕಿ ಬಿದ್ದು ಕಳ್ಳಿಯಾಗುವುದಿತ್ತು
ಬಿದ್ದು ಸಿಕ್ಕ, ಮಣ್ಣೊರೆಸಿಟ್ಟ
ಮಾವಿನ ಕಾಯಿ
ನಾಳೆಯೊಂದು ದಿನದಲಿ
ಹಣ್ಣಾಗುವುದಿತ್ತು

ಟೀಚರು ಕೊಟ್ಟುಹೋದ
ಹೋಂ ವರ್ಕಿನ ತಲೆನೋವಿತ್ತು
ಚೂರೇ ಚೂರು ಬರೆದುಕೊಡೆಂದು
ಅಮ್ಮನಿಗೆ ಕಾಡಿಸುವುದಿತ್ತು

ಸಂಜೆಯಾಗಿದ್ದಿದ್ದರೆ
ಒಂದು ಬಾಯ್ ಆದರೂ
ಹೇಳಿ‌ ಹೊರಡಬಹುದಿತ್ತು

ಗೊತ್ತಿರಲಿಲ್ಲ ಮಕ್ಕಳಿಗೆ
ಹೊತ್ತು ಕಂತುವ ಮುನ್ನ
ಕಡುಗೆಂಪು ಕಡಲಿನಲಿ
ಸೂರ್ಯ ಮುಳುಗುತ್ತಾನೆಂದು

ತೋಡಿಟ್ಟ ಗುಂಡಿಗಳು
ಕಾಣಿಸುತ್ತಿವೆ
ಜೋಡಿಸಿಟ್ಟ
ಕ್ಲಾಸ್ ರೂಮಿನ ಬೆಂಚಿನಂತೆ
ಮಕ್ಕಳು‌ ಈಗಷ್ಟೇ
ಮಧ್ಯಾಹ್ನದ ಅನ್ನವುಂಡು
ತಣ್ಣಗೆ ಮಲಗಿದಂತೆ

ಇರಾನಿನ ಗಾಂಧಿ ಆಸ್ಪತ್ರೆ
ಗಾಯಗೊಂಡಿದೆ ದಾಳಿಗೆ
ಇಂಡಿಯಾದ ರೇಡಿಯೋದಿಂದ
ಹಾಡೊಂದು ತೇಲಿದೆ ಗಾಳಿಗೆ
“ವೈಷ್ಣವ ಜನ ತೋ ತೇನೆ ಕಹಿಯೆ ಜೆ
ಪೀಡ್‌ ಪರಾಯಿ ಜಾಣೇ ರೇ
ಪರ್ ದುಃಖೇ ಉಪಕಾರ್ ಕರೇ ತೊಯೆ
ಮನ್ ಅಭಿಮಾನ್ ನ ಆಣೇ ರೇ…”

(ಇರಾನಿನ ಶಾಲೆಯೊಂದರ ಮೇಲೆ ನಡೆದ ಭೀಕರ ದಾಳಿ ಅಂದಾಜು 150 ಮಕ್ಕಳ ಸಾವಿಗೆ ಕಾರಣವಾಯಿತು. ಸಣ್ಣಪುಟ್ಟ ಕನಸುಗಳ ಮಕ್ಕಳ ಜಗತ್ತು ನಾಳೆ ಇಲ್ಲದೆ, ಕ್ಷಣದಾಚೆಗಿನ ಜಗತ್ತೇ ಇಲ್ಲದೆ ಮರೆಯಾಗಿ ಹೋದದ್ದನ್ನು ಕವಿತೆಯಲ್ಲಿ ದಾಖಲಿಸಲು ಪ್ರಯತ್ನಿಸಿರುವೆ. ‘ವೈಷ್ಞವ ಜನ ತೋ…’ ಮಹಾತ್ಮ ಗಾಂಧಿಯವರ ಅತ್ಯಂತ ಪ್ರಿಯವಾದ ಭಜನೆಯ ಹಾಡು. ಜಯಂತ ಕಾಯ್ಕಿಣಿ ಅವರು ಕನ್ನಡಕ್ಕೆ ಅನುವಾದಿಸಿರುವ ಈ ಹಾಡು, ‘ಎಲ್ಲರ ನೋವನು ಬಲ್ಲವನಾದರೆ ಗೆಲ್ಲುವೆ ನೀನು ಜಗವನ್ನೇ…’ ಎಂಬ ಸಾಲಿನೊಂದಿಗೆ ಆರಂಭವಾಗುತ್ತದೆ..)

About The Author

ಶರೀಫ್ ಕಾಡುಮಠ

ಶರೀಫ್ ಕಾಡುಮಠ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನವರು. ಪ್ರಸ್ತುತ ಸೌದಿ ಅರೇಬಿಯಾದ ರಿಯಾಧ್‌ನಲ್ಲಿದ್ದಾರೆ. ಇವರ ಅನೇಕ ಬರಹ, ಕವಿತೆಗಳು ಪತ್ರಿಕೆ, ವೆಬ್ ಸೈಟ್‌ಗಳಲ್ಲಿ ಪ್ರಕಟವಾಗಿವೆ.

2 Comments

  1. Riyaz AKR

    ‘ಅರ್ಧ ಬರೆದ ಆನೆಯ ಚಿತ್ರ’, ‘ಅಪ್ಪ ಕೊಡಿಸಿದ್ದ ಥರ್ಮಾಸು’, ‘ಬೆಂಚಿನಡಿಯಿಂದ ಕಾಲು ತಾಕಿಸಿ ಕಾಟ ಕೊಟ್ಟ ನೆನಪು’—ಇಂತಹ ಸಣ್ಣ ಸಣ್ಣ, ಮುಗ್ಧ ವಿವರಗಳ ಮೂಲಕವೇ ಸಾವಿನ ಕ್ರೂರತೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ದಾಟಿಸಿದ್ದೀರಿ. ತೋಡಿಟ್ಟ ಗುಂಡಿಗಳನ್ನು ಕ್ಲಾಸ್ ರೂಮಿನ ಬೆಂಚುಗಳಿಗೆ ಹೋಲಿಸಿದ ಆ ಸಾಲುಗಳು ಬಹಳ ಹೊತ್ತು ಕಾಡುತ್ತವೆ. ಕೊನೆಯಲ್ಲಿ ‘ವೈಷ್ಣವ ಜನ ತೋ’ ಸಾಲುಗಳ ಬಳಕೆ ಇಂದಿನ ಜಗತ್ತಿನ ವಿಪರ್ಯಾಸವನ್ನು ಮಾರ್ಮಿಕವಾಗಿ ಪ್ರಶ್ನಿಸುತ್ತದೆ. ಇದೊಂದು ಕರುಳು ಹಿಂಡುವ, ಅದ್ಭುತ ಕವಿತೆ

    Reply
  2. ARUNDHATI SAVADATTI

    ಹೃದಯ ಕರಗಿಸಿದ ಕವಿತೆ…ಸತ್ತ ಮಕ್ಕಳ ನೆನೆ‌ಸಿ

    Reply

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ