Advertisement
ಸಿ.ಬಿ. ಐನಳ್ಳಿ ಬರೆದ ಮೂರು ಕವಿತೆಗಳು

ಸಿ.ಬಿ. ಐನಳ್ಳಿ ಬರೆದ ಮೂರು ಕವಿತೆಗಳು

1. ಕದ ತೆರೆದರೆ….!

ಕಡುಮೌನದಿ ಮಡುಗಟ್ಟಿದ ನೋವ
ಮಂದಿಯಿಂದ ಮರೆಮಾಚಲೆಂದು
ಮನೆಯ ಕದ ತೆರೆದೆ

ನೀರವ ಮೌನ
ಹಾಳುಬಿದ್ದ ವಿಶಾಲ ಮನೆಯ ತುಂಬಾ
ಕಟ್ಟೆಯೊಡೆದು ನಿಂತ ನಿಶ್ಚಲ ನೀರು
ಒಂದು ದಿನದ ಸೋರಿಕೆಯಂತೂ ಅಲ್ಲ
ಮಂದಗೆ ಮಿಸುಕುತಿದೆ ಎದೆಯೊಡೆಯುವಂತೆ
ನಾರುವ ನೀರರಾಶಿಯ ಮೇಲೆ ಹೆಣವಾಗಿ
ತೇಲುತ್ತಿರುವ ಪ್ರೇಮ ಪತ್ರಗಳು
ದಿನಗಟ್ಟಲೆ ನೆನೆದು ಮಸಿಬಿಡುತ್ತಿರುವ ಅಕ್ಷರಗಳು
ಬಸಿದಿಟ್ಟಿದ್ದ ಬಯಕೆಗಳೆಲ್ಲ ಬೇರುಸಹಿತ
ಕರಗಿ ಕಣ್ಮರೆಯಾಗುತ್ತಿವೆ
ಬೇರಾವ ಬೆಳಗಿಗೂ ಇನ್ನು ಅರಳದಂತೆ
ದೃಶ್ಯಗಳೆಲ್ಲ ಅದೃಶ್ಯವಾದಂತಾಗಿ
ಅರೆಕ್ಷಣ ದಂಗಾದೆ…
ತೆರೆದ ಕದ ಮನಸಿನದು !

ಯಾವ ಕೋಣೆ ಗೂಣು ಕತ್ತಲಮೂಲೆ
ಕಾಣದ ಬ್ರೂಣ? ಎಷ್ಟೊಂದು ಪದರಗಳು
ಮನಸೆಂಬ ಮಾಯಾವಿಗೆ!
ಇಣುಕಿ ಮನೆ ನೋಡಿದಂತಲ್ಲವಲ್ಲ
ಉಸಿರು ಬಸಿರುಗಳಲಿ ಒಂದಾಗಬಯಸಿದ್ದ ಮನ
ಮುಚ್ಚಿರುವ ಅವಳೆದೆಯ ಕದವ
ಕಂಡೂ ಕೂಡ ಕಾಯುತ್ತಾ ಕುಳಿತಿದೆ
ಅಗುಳಿ ಇಟ್ಟಿರಲಿಕ್ಕಿಲ್ಲವೆಂಬ
ಆಸೆಯಲ್ಲಿ

ಸಂಬಂಧಗಳೂ ಜೀವಿಗಳಂತೆ
ಸಾಯಲೊಲ್ಲವು ಸಹಜವಾಗಿಯಲ್ಲದೆ

2. ಸಂಕ್ರಾಂತಿ ಮಗಳು

ನಾಡಿ ಎರಡಾಗಿ ಮಿಡಿದಂದಿನಿಂದ
ಭೂಮಿ ಎಂದೇ ಕರೆದಿದ್ದೆ
ಒಂಭತ್ತನೇ ತಿಂಗಳು ಪ್ರತಿದಿನ ನೀ
ಮಿಸುಕುತ್ತಿದ್ದೆ ಕೊಸರುತ್ತಿದ್ದೆ
ಖುಷಿಯಾದಾಗ ಅಮ್ಮನ ಮೂಲಕ
ತುಡಿದು ನನ್ನ ತಾಕುತ್ತಿದ್ದೆ
ನಾ ನಿನ್ನಮ್ಮನ
ಹೊಟ್ಟೆಗೊಂದು ಮುತ್ತಿಡುತ್ತಿದ್ದೆ

ಅಂದು ಸಂಕ್ರಾಂತಿ
ನೀ ತಿರುಗುವ ಸದ್ದು ಕೇಳಲಿಲ್ಲ
ಉದಯ ಎನ್ನಲೇ
ಅಸ್ತಮಾನ ಎನ್ನಲೇ
ಸಾವಿನ ಹುಟ್ಟು
ಹುಟ್ಟಿನ ಸಾವು
ಮೌನದ ಮಾತು
ಮಾತಿನ ಮೌನ
ಎರಡೂ ಒಂದೇ ಎನ್ನಲೇ
ಒಂದೇ ಎರಡೂ ಎನ್ನಲೇ?
ನನ್ನ ಹುಟ್ಟಿನ ಬಗ್ಗೆ
ಹೆಮ್ಮೆಯಿಂದ ಹೇಳುತ್ತಿದ್ದಳು ಅವ್ವ
ನಿನ್ನ ಮುಗ್ಧ ಅದ್ವೈತೀ ಮುಖದಲಿ
ಎಷ್ಟೊಂದು ಸೂಕ್ಷ್ಮ ನನ್ನದೇ ಅಂತಿಮ
ದರ್ಶನ
ನನ್ನ ದಿಕ್ಕು ದೃಷ್ಟಿ ಸಮಷ್ಟಿಯೆಲ್ಲಾ ಬದಲಾದ ದಿನ
ಹುಟ್ಟುವ ಮೊದಲೇ ಸತ್ತಳೇ?
ತೊದಲುತ್ತಾನೆ ನಿನ್ನ ತಮ್ಮ
ಬಿಡು ತಿಳಿಯದವನಿಗೆ
ಸಂಬಂಧಗಳಿಗೂ
ಜೀವವಿದೆಯಂತೆ ಮಗಳೇ
ಸಕಲ ಜೀವಿಗಳಂತೆ

ದಶಕ ದಾಟಿತು
ನಮ್ಮಿಬ್ಬರ ಸಂಬಂಧಕ್ಕೆ
ಮಾತುಗಳಿಲ್ಲದೆ ನುಂಗಿಕೊಂಡು
ಹೋದ ನಿನ್ನ ನೋವು ಹೆತ್ತೊಡಲುಗಳ
ನಡುವೆ ಎಬ್ಬಿಸಿದ ಮೌನದ ಅಲೆಗಳು
ಭಯಾನಕ

ನೀನೊಂದು ಹಾಡದ ಹಾಡು
ಬರೆಯಲಾಗದ ಕವಿತೆ
ಬಯಲ ರೂಪ
ಬಂದೆಯೋ ಹೋದೆಯೋ
ಚೇತನಕೆ ಸಾವಿಲ್ಲ
ಹುಟ್ಟೆಲ್ಲಿ?

ನಿಂತ ಭೂಮಿ ಅನುಭವ
ತಿರುಗುವುದು ಅನುಭಾವ

3. ಕತ್ತಲೆ

ಹುಕಿಗೆ ಬಿದ್ದು ಹುಟ್ಟುತ್ತವೆ
ಕವಿತೆಗಳು ಒಂದರಿಂದೊಂದು
ಏನಿದೆಯೋ ಅಲ್ಲಿ
ಎಲ್ಲಾ ಮತಿ ಸ್ಮೃತಿ ಕೃತಿಗಳ
ಚಿಮ್ಮಿಸುವ ಸೆಲೆ
ಅವ್ಯಕ್ತ ವ್ಯಕ್ತವಾಗಿಸುವ ಕಲೆ
ಭಾವನೆಗಳ ಬಲೆ
ಚಂದ್ರನ ನೆಲೆ
ನಾಗರ ಮಲೆ
ಕತ್ತಲೆ

ಗಾಳಿಗೆ ನೇತುಹಾಕಿದ್ದ ಪಟದಿಂದ
ಮಾತೃಭಾಷಾ ಕಣ್ಣೆರಡು ನೆಲಕೆ ಬಿದ್ದಸದ್ದು
ಮೆತ್ತಿದ ಮಣ್ಣ ತೊಳೆದು ಎತ್ತಿಕೊಂಡೆ
ಮೈಯೆಲ್ಲಾ ಹಗುರಾಗಿ
ಒಳಗೆಲ್ಲ ಬೆಳಗಾಗಿ
ಎಚ್ಚರ ಮರೆವು ಬೆರೆತಂತಾಯಿತು
ಒಡಲ ಕೂಸು ಶೂನ್ಯ
ಪಿಳಿಪಿಳಿ ನೋಡಿ
ನಕ್ಕಿತು

ಕವಿ ಪರಿಚಯ: ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲಿಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ ಧಾರವಾಡ

About The Author

ಡಾ. ಸಿ. ಬಿ. ಐನಳ್ಳಿ

ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯಲ್ಲಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಸಿ. ಬಿ. ಐನಳ್ಳಿಯವರು ಮೂಲತಃ ಬಳ್ಳಾರಿ ಜಿಲ್ಲೆಯವರು. ಇಂಡಿಯನ್-ಅಮೇರಿಕನ್ ಲೇಖಕಿ ‘ಜುಂಪಾ ಲಾಹಿರಿಯ ಕೃತಿಗಳಲ್ಲಿ ವಸ್ತು ಮತ್ತು ತಂತ್ರಗಳ ಅಧ್ಯಯನ’ಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

4 Comments

  1. Prof. Jagadeesh

    Wow!! Congratulations Dear 💐

    Reply
    • Veeresh Patil

      Amazing sir, sankaranti magalu is heart touching

      Reply
  2. MahabaliCH

    Tumba chennagi mudibandidave Sir nimma kavithegalu

    Reply
  3. Mayur Masuti

    Beautiful poems.

    Reply

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ