ರಾಸ್ಕೋಲ್ನಿಕೋವ್ ಮಾತ್ರ ತನ್ನ ಕೆಲಸವನ್ನು ಸ್ಪಷ್ಟವಾಗಿ, ಸಂಕ್ಷಿಪ್ತವಾಗಿ ಕೆಲವೇ ಮಾತುಗಳಲ್ಲಿ ಹೇಳಿದ. ತಾನು ಮಾತನಾಡಿದ ರೀತಿಯಿಂದ ತನಗೇ ಖುಷಿಯಾಗಿ ಪೋರ್ಫಿರಿಯನ್ನು ಗಮನವಿಟ್ಟು ನೋಡುವುದರಲ್ಲೂ ಗೆದ್ದ. ರಾಸ್ಕೋಲ್ನಿಕೋವ್ ಮಾತಾಡುತ್ತಿರುವಷ್ಟೂ ಹೊತ್ತು ಪೋರ್ಫಿರಿ ಅವನ ಮೇಲೆ ನೆಟ್ಟಿದ್ದ ದೃಷ್ಟಿಯನ್ನು ಕದಲಿಸಲಿಲ್ಲ.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮೂರನೆಯ ಭಾಗದ ಐದನೆಯ ಅಧ್ಯಾಯ

 

ರಾಸ್ಕೋಲ್ನಿಕೋವ್ ಮನೆಯೊಳಕ್ಕೆ ಕಾಲಿಡುತ್ತಿದ್ದ. ಇನ್ನೇನು ಆಸ್ಫೋಟಿಸಲಿರುವ ಕುಲುಕುಲು ನಗುವನ್ನು ಬಹಳ ಕಷ್ಟಪಟ್ಟು ತಡೆದುಕೊಂಡಿರುವವನ ಹಾಗೆ ಕಾಣುತ್ತಿದ್ದ. ನಾಚಿಕೆಯಲ್ಲಿ ಸಿಟ್ಟಿನಲ್ಲಿ ಮುಖವೆಲ್ಲ ದಾಸವಾಳದಷ್ಟು ಕೆಂಪಾಗಿ ಕುರಿಯ ಹಾಗೆ ಅವನನ್ನು ಹಿಂಬಾಲಿಸಿಕೊಂಡು ಬಂದ ಬಡಕಲು ಮೈಯ ರಝುಮಿಖಿನ್. ಅವನ ಮುಖ, ಇಡೀ ಮೈ ತಮಾಷೆಯಾಗಿ ಕಾಣುತ್ತ ರಾಸ್ಕೋಲ್ನಿಕೋವ್‍ ನ ನಗುವಿಗೆ ಕುಮ್ಮಕ್ಕು ಕೊಡುತ್ತಿದ್ದವು. ರಾಸ್ಕೋಲ್ನಿಕೋವ್‍ ಗೆ ಇನ್ನೂ ಮನೆಯೊಡೆಯನ ಪರಿಚಯವಾಗಿರಲಿಲ್ಲ. ಮನೆಯೊಡೆಯ ರೂಮಿನ ಮಧ್ಯದಲ್ಲಿ ನಿಂತು ಒಳಕ್ಕೆ ಬಂದ ಇಬ್ಬರನ್ನೂ ಯಾರಿವರು ಅನ್ನುವ ಹಾಗೆ ನೋಡುತ್ತಿದ್ದ. ರಾಸ್ಕೋಲ್ನಿಕೋವ್ ಮನೆಯೊಡೆಯನತ್ತ ಕೈ ಚಾಚಿದ. ಬಹಳ ಪ್ರಯತ್ನಪಟ್ಟು ನಗುವನ್ನು ತಡೆದುಕೊಂಡು ಒಂದೆರಡು ಮಾತಿನಲ್ಲಿ ತನ್ನ ಪರಿಚಯ ಮಾಡಿಕೊಂಡ. ಮುಖದಲ್ಲಿ ಗಾಂಭೀರ್ಯ ತಂದುಕೊಂಡು ಒಂದೆರಡು ಮಾತಾಡುವಷ್ಟರಲ್ಲಿ ಸಹಜವಾಗಿ, ಆಕಸ್ಮಿಕ ಅನ್ನುವ ಹಾಗೆ ರಝುಮಿಖಿನ್‍ ನತ್ತ ಮತ್ತೆ ನೋಡಿದ. ನೋಡುತ್ತಿದ್ದ ಹಾಗೇ ಇದುವರೆಗೆ ಅದುಮಿಟ್ಟಿದ್ದ ನಗು ತಾನೇ ತಾನಾಗಿ ಎಲ್ಲ ಅಡೆತಡೆ ಮುರಿದು ನುಗ್ಗಿ ನುಗ್ಗಿ ಬಂದಿತು. ರಾಸ್ಕೋಲ್ನಿಕೋವ್ ಎಷ್ಟು ‘ಎದೆ ತುಂಬಿ’ ನಗುತ್ತಿದ್ದನೆಂದರೆ ಅದು ಇಡೀ ಪ್ರಸಂಗಕ್ಕೆ ಹೃತ್ಪೂರ್ವಕವಾದ ಹಾಸ್ಯದ ಲೇಪವನ್ನು ತೀರ ಸಹಜವಾಗಿಯೇ ನೀಡಿತ್ತು. ಹಾಗೆ ಹಾಸ್ಯಲೇಪನ ಮಾಡುವುದಕ್ಕೆ ರಝುಮಿಖಿನ್ ಸಹಾಯಮಾಡುತ್ತಿದ್ದ ಹಾಗಿತ್ತು.

ತೋಳು ಬೀಸುತ್ತ ‘ಥೋ, ದೆವ್ವಾ!’ ಅಂದ. ಬೀಸಿದ ತೋಳು ಪುಟ್ಟ ದುಂಡು ಮೇಜಿನ ಮೇಲಿದ್ದ ಖಾಲಿ ಟೀ ಲೋಟಕ್ಕೆ ತಾಗಿ ಅದು ಹಾರಿ ನೆಲಕ್ಕೆ ಬಿದ್ದು ಒಡೆದು ಹೋಯಿತು, ಮೇಜು ಅತ್ತಿತ್ತ ಉರುಳಾಡಿತು. ‘ಮಾನ್ಯರೇ, ಇದೇಕೆ ಹೀಗೆ ಕುರ್ಚಿ ಮೇಜು ಮುರಿಯುತ್ತಿದ್ದೀರಿ? ಇದರಿಂದ ಸಾರ್ವಜನಿಕ ಹಣ ಪೋಲಾಗುತ್ತದೆ,’ ಎಂದು ಪೋರ್ಫಿರಿ ಗೊಗೋಲ್ ನಾಟಕದ ಮಾತನ್ನು ಚೀರಿ ಹೇಳಿ ಖುಷಿಪಟ್ಟ.

ಇಡೀ ದೃಶ್ಯ ಹೀಗಿತ್ತು: ಆತಿಥೇಯನ ಕೈ ಕುಲುಕಲೆಂದು ಅವನತ್ತ ಚಾಚಿದ್ದ ತನ್ನ ಕೈಯನ್ನು ರಾಸ್ಕೋಲ್ನಿಕೋವ್ ಅಲ್ಲೇ ಮರೆತಿದ್ದ. ನಗುವನ್ನು ಸಾಧ್ಯವಾದಷ್ಟೂ ಬೇಗ, ಸಾಧ್ಯವಾದಷ್ಟು ಸಹಜವಾಗಿ ಮುಗಿಸಲು ತಕ್ಕ ಕ್ಷಣಕ್ಕೆ ಕಾಯುತ್ತಿದ್ದ. ಟೇಬಲ್ಲು ಬಿದ್ದು, ಗಾಜಿನ ಲೋಟ ಒಡೆದದ್ದರಿಂದ ರಝುಮಿಖಿನ್ ತೀರ ಮುಜುಗರಪಡುತ್ತಿದ್ದ. ಚೆಲ್ಲಾಡಿದ್ದ ಗಾಜಿನ ಚೂರುಗಳನ್ನು ಮಂಕಾಗಿ ನೋಡುತ್ತ ಥೂ ಅಂದು, ತಟ್ಟನೆ ಕಿಟಕಿಯತ್ತ ತಿರುಗಿ, ಮನೆಯಲ್ಲಿದ್ದ ಸಾರ್ವಜನಿಕರಿಗೆ ಬೆನ್ನು ಮಾಡಿ ನಿಂತು ಕಿಟಕಿಯಿಂದಾಚೆ ಕಣ್ಣು ನೆಟ್ಟು, ಆದರೂ ಏನನ್ನೂ ನೋಡದೆ ನಿಂತಿದ್ದ. ಪೋರ್ಫಿರಿ ಪೆಟ್ರೊವಿಚ್ ಬೇಸರವೇನೂ ಇಲ್ಲದೆ ಗಟ್ಟಿಯಾಗಿ ನಗುತ್ತಿದ್ದರೂ ಬಂದವರು ವಿವರಣೆಗಳನ್ನು ನೀಡುವುದು ಅಗತ್ಯವಾಗಿತ್ತು. ಮೂಲೆಯಲ್ಲಿದ್ದ ಕುರ್ಚಿಯ ಮೇಲೆ ಪೋಲೀಸ್ ಸ್ಟೇಶನ್ನಿನ ಗುಮಾಸ್ತ ಝಮ್ಯೋತೋವ್ ಕೂತಿದ್ದ. ಅತಿಥಿಗಳು ಬಂದಾಗ ಎದ್ದು ನಿಂತು ಬಾಯಿ ದೊಡ್ಡದಾಗಿ ಅಗಲಿಸಿ ಮುಗುಳ್ನಗುತ್ತ ಗೊಂದಲಕ್ಕೊಳಗಾಗಿ ಇಡೀ ಸನ್ನಿವೇಶವನ್ನೂ ರಾಸ್ಕೋಲ್ನಿಕೋವ್‍ ನನ್ನೂ ನಂಬಲಾಗದು ಇದನ್ನೆಲ್ಲ ಅನ್ನುವ ಹಾಗೆ ನೋಡುತ್ತಿದ್ದ. ಝಮ್ಯೋತೋವ್‍ ಅಲ್ಲಿದ್ದದ್ದು ಅನಿರೀಕ್ಷಿತವಾಗಿತ್ತು. ಅವನು ಇದ್ದದ್ದು ರಾಸ್ಕೋಲ್ನಿಕೋವ್‍ ಗೆ ಹಿತವೆನ್ನಿಸಲಿಲ್ಲ.

‘ಏನು ನಡೆಯುತ್ತಿದೆ ಇಲ್ಲಿ?’ ಎಂದು ಮನಸ್ಸಿನಲ್ಲೇ ಅಂದುಕೊಂಡ.

ತುಂಬ ಮುಜುಗರಕ್ಕೆ ಒಳಗಾದವನ ಹಾಗೆ ತೋರಿಸಿಕೊಳ್ಳಲು ಯತ್ನಿಸುತ್ತ ‘ನಾನು ರಾಸ್ಕೋಲ್ನಿಕೋವ್…’ ಅಂದ.

‘ಅಯ್ಯೋ ದೇವರೇ, ಬನ್ನಿ, ಬನ್ನಿ. ನಿಮ್ಮ ಭೇಟಿಯಾದದ್ದು ಬಹಳ ಸಂತೋಷ…’ ಅಂದು ರಝುಮಿಖಿನ್‍ ನತ್ತ ತಿರುಗಿ ‘ಏನು, ಇವನಿಗೆ ಹಲೋ ಅನ್ನುವ ಯೋಚನೆಯೂ ಇಲ್ಲವೋ?’ ಅಂದ ಪೋರ್ಫಿರಿ ಪೆಟ್ರೊವಿಚ್.

‘ಯಾಕೆ ಹೀಗೆ ಮುನಿಸಿಕೊಂಡಿದಾನೋ, ದೇವರಿಗೇ ಗೊತ್ತು. ನಿಮ್ಮ ಮನೆಗೆ ಬರತಾ ನಾನು ಸುಮ್ಮನೆ ನೀನು ರೋಮಿಯೋ ಹಾಗೆ ಕಾಣತೀಯ ಅಂದೆ. ಅದನ್ನ ನಿಜಮಾಡಿಬಿಟ್ಟ… ಇಷ್ಟೇ ನಡೆದದ್ದು’ ಅಂದ ರಾಸ್ಕೋಲ್ನಿಕೋವ್.

ರಝುಮಿಖಿನ್ ಹಿಂದೆ ತಿರುಗಿ ನೋಡದೆ, ‘ಹಂದೀ!’ ಅಂದ.

‘ಒಂದು ಪುಟ್ಟ ಪದ ಕೇಳಿ ಇಷ್ಟು ಸಿಟ್ಟು ಮಾಡಿಕೊಳ್ಳಬೇಕಾದರೆ ಗಂಭೀರವಾದ ಕಾರಣವೇ ಇರಬೇಕು,’ ಅನ್ನುತ್ತ ಪೋರ್ಫಿರಿ ನಕ್ಕ.

‘ಆಹಾ… ಪತ್ತೇದಾರ ಇವನು!… ದೆವ್ವ ಹಿಡಿಯಲಿ ನಿಮ್ಮನ್ನೆಲ್ಲ,’ ಅಂದ ರಝುಮಿಖಿನ್. ಇದ್ದಕಿದ್ದ ಹಾಗೆ ಏನೂ ಆಗಿಯೇ ಇಲ್ಲವೇನೋ ಅನ್ನುವ ಹಾಗೆ ಜೋರಾಗಿ ನಕ್ಕ, ಮುಖದಲ್ಲಿ ಸಂತೋಷವಿತ್ತು.

‘ಸಾಕು ಈ ಹುಚ್ಚಾಟ. ಬಂದ ಕೆಲಸ ಮೊದಲು. ಇಗೋ, ಇವನು ರೋಡಿಯೋನ್ ರೊಮಾನೊವಿಚ್ ರಾಸ್ಕೋಲ್ನಿಕೋವ್, ನನ್ನ ಸ್ನೇಹಿತ. ಇವನು ನಿಮ್ಮ ಬಗ್ಗೆ ಕೇಳಿದಾನೆ, ನಿಮ್ಮನ್ನ ಭೇಟಿಯಾಗಬೇಕು ಅನ್ನುತಿದ್ದ. ಮತ್ತೆ ನಿಮ್ಮಿಂದ ಅವನದೊಂದು ಸಣ್ಣ ಕೆಲಸ ಆಗಬೇಕಾಗಿದೆ. ಹಾ! ಝಮ್ಯತೋವ್! ಇದೇನು ಇಲ್ಲೀ? ನಿಮ್ಮಿಬ್ಬರಿಗೂ ಪರಿಚಯ ಇದೆಯಾ? ಯಾವಾಗಿಂದ?’ ಎಂದು ಕೇಳಿದ ರಝುಮಿಖಿನ್.

‘ಏನಿದೆಲ್ಲಾ!’ ರಾಸ್ಕೋಲ್ನಿಕೋವ್ ಕಸಿವಿಸಿಪಡುತ್ತ ಮನಸ್ಸಿನಲ್ಲೇ ಅಂದುಕೊಂಡ.

ಝಮ್ಯೊತೋವ್‍ ಗೆ ಸ್ವಲ್ಪ ಮುಜುಗರವಾದಂತಿತ್ತು.

‘ನಿನ್ನೆ ಭೇಟಿಯಾಗಿದ್ದೆವು, ನಿಮ್ಮ ಮನೆಯಲ್ಲೇ,’ ಲೋಕಾಭಿರಾಮವಾಗಿ ಅಂದ.

‘ಸದ್ಯ.. ನಿಮನ್ನ ಪರಸ್ಪರ ಪರಿಚಯ ಮಾಡಿಸುವ ನನ್ನ ಕಷ್ಟವನ್ನು ದೇವರೇ ತಪ್ಪಿಸಿದ. ಹೋದವಾರವೆಲ್ಲ ಈ ಝಮ್ಯತೋವ್ ನಿನ್ನ ಪರಿಚಯ ಮಾಡಿಕೊಡು ಅನ್ನತಿದ್ದ, ಪೋರ್ಫಿರಿ. ಈಗ ನೀವಿಬ್ಬರೂ ನನ್ನ ಅಗತ್ಯವೇ ಇಲ್ಲದೆ ಪರಿಚಯ ಮಾಡಿಕೊಂಡಿದ್ದೀರಿ. ಎಲ್ಲಿ ನಿನ್ನ ಹೊಗೆಸೊಪ್ಪು?’ ಪೋರ್ಫಿರಿಯನ್ನು ಕೇಳಿದ ರಝುಮಿಖಿನ್.

ಪೋರ್ಫಿರಿ ಮನೆಯಲ್ಲಿ ತೊಡುವಂಥ ತಕ್ಕಮಟ್ಟಿಗೆ ಸ್ವಚ್ಛವಾಗಿದ್ದ ಅಂಗಿ, ತೆಳ್ಳನೆ ಚಪ್ಪಲಿ ತೊಟ್ಟಿದ್ದ. ಸುಮಾರು ಮೂವತ್ತು ವಯಸಿನವನು, ಮಾಮೂಲಿಗಿಂತ ಕಡಮೆ ಎತ್ತರವಿದ್ದ. ಸ್ವಲ್ಪ ಸ್ಥೂಲಕಾಯದವನು. ದುಂಡು ಹೊಟ್ಟೆ, ಮೀಸೆ ಇರದಂತೆ ನಯವಾಗಿ ಕ್ಷೌರ ಮಾಡಿದ ಮುಖ, ದಪ್ಪನೆಯ ಹಿಂಭಾಗದಲ್ಲಿ ಗುಂಡಗೆ ಉಬ್ಬಿದ ತಲೆಯ ಮೇಲೆ ಚಿಕ್ಕದಾಗಿ ಕತ್ತರಿಸಿದ ಕೂದಲು, ಸ್ವಲ್ಪ ಚಪ್ಪಟೆಯಾದ ಮೂಗು, ನಸುಹಳದಿ ಅನಿಸುವಂಥ ಬಣ್ಣದ ಮುಖ. ಬೇರೆಯವರನ್ನ ಅಣಕಿಸಿ ಖುಷಿಪಡುತ್ತಿದ್ದಾನೆ ಅನ್ನುವ ಭಾವ ಅವನ ಮುಖದಲ್ಲಿತ್ತು. ಕಣ್ಣಿನಲ್ಲಿ ವದ್ದೆ ಹೊಳಪು, ಯಾರಿಗೋ ಕಣ್ಣುಮಿಟುಕಿಸುತ್ತಿರುವ ಹಾಗೆ ಅನಿಸುತ್ತಿತ್ತು.

ಪಟಪಟ ಬಡಿದುಕೊಳ್ಳುವ ಬಿಳಿಯ ರೆಪ್ಪೆ ಇರದಿದ್ದರೆ ಒಳ್ಳೆಯತನದ ಭಾವ ಸೂಚಿಸುತ್ತಿದೆ ಅನಿಸುವಂಥ ಮುಖ ಅದು. ಅವನ ಇಡೀ ಆಕಾರಕ್ಕೂ ಅವನ ಕಣ್ಣಿಗೂ ಹೊಂದಿಕೆಯಾಗುತ್ತಿರಲಿಲ್ಲ. ಒಂದು ಥರಾ ಹೆಣ್ಣುತನವನ್ನು ತೋರುವ ಅವನ ಆಕಾರದಲ್ಲಿ ಕಣ್ಣಿಗೆ ಕಾಣುವುದಕ್ಕಿಂತ ಹೆಚ್ಚು ಗಾಂಭೀರ್ಯವನ್ನು ಅಡಗಿಸಿಟ್ಟ ಹಾಗಿತ್ತು.

ಮನೆಗೆ ಬಂದ ಅತಿಥಿಗೆ ಏನೋ ಕೆಲಸವಿದೆ ಅನ್ನುವುದನ್ನು ಕೇಳಿದ ತಕ್ಷಣ ಅವನು ರಾಸ್ಕೋಲ್ನಿಕೋವ್‍ ಗೆ ಸೋಫಾದ ಮೇಲೆ ಕೂರಲು ಜಾಗ ತೋರಿಸಿ ತಾನೂ ಅದೇ ಸೋಫಾದ ಇನ್ನೊಂದು ತುದಿಯಲ್ಲಿ ಕೂತ. ಕೆಲಸವೇನೆಂದು ಬಂದವನೇ ಹೇಳಲೆಂದು ನಿರೀಕ್ಷಿಸುತ್ತ, ಅವನನ್ನೇ ಕುತೂಹಲದಿಂದ, ಗಂಭೀರವಾಗಿ ದಿಟ್ಟಿಸಿದ. ‘ದೊರೆಯುತ್ತಿರುವ ಗಂಭೀರ ಗಮನಕ್ಕೆ ತಕ್ಕುದಲ್ಲ ನಾವು ಹೇಳಲಿರುವ ವಿಷಯ,’ ಎಂದು ನಮಗೇ ಅನಿಸಿದಾಗ ಮುಜುಗರ ಹುಟ್ಟಿಸುತ್ತದಲ್ಲ, ಅಂಥ ನೋಟ ಅದು. ಆದರೆ ರಾಸ್ಕೋಲ್ನಿಕೋವ್ ಮಾತ್ರ ತನ್ನ ಕೆಲಸವನ್ನು ಸ್ಪಷ್ಟವಾಗಿ, ಸಂಕ್ಷಿಪ್ತವಾಗಿ ಕೆಲವೇ ಮಾತುಗಳಲ್ಲಿ ಹೇಳಿದ. ತಾನು ಮಾತನಾಡಿದ ರೀತಿಯಿಂದ ತನಗೇ ಖುಷಿಯಾಗಿ ಪೋರ್ಫಿರಿಯನ್ನು ಗಮನವಿಟ್ಟು ನೋಡುವುದರಲ್ಲೂ ಗೆದ್ದ. ರಾಸ್ಕೋಲ್ನಿಕೋವ್ ಮಾತಾಡುತ್ತಿರುವಷ್ಟೂ ಹೊತ್ತು ಪೋರ್ಫಿರಿ ಅವನ ಮೇಲೆ ನೆಟ್ಟಿದ್ದ ದೃಷ್ಟಿಯನ್ನು ಕದಲಿಸಲಿಲ್ಲ. ರಝುಮಿಖಿನ್ ಅವರೆದುರಿಗೆ ಟೇಬಲ್ಲಿನ ಇನ್ನೊಂದು ಬದಿಯಲ್ಲಿ ಕೂತು ಅಸಹನೆಯಲ್ಲಿ ಚಡಪಡಿಸುತ್ತ, ಸ್ವಲ್ಪ ಅತಿ ಅನ್ನುವ ಹಾಗೆ ಕೂತಲ್ಲೇ ಸರಿದಾಡುತ್ತ, ಮಾತು ಕೇಳಿಸಿಕೊಂಡ.

ಪೋರ್ಫಿರಿ ‘ಇದು ಮಾಮೂಲು ವ್ಯವಹಾರ’ ಅನ್ನುವ ಹಾಗೆ ನೋಡುತ್ತ. ‘ಸದರಿ ಘಟನೆಯ ಬಗ್ಗೆ, ಅಂದರೆ ಆ ಕೊಲೆಯ ಬಗ್ಗೆ ನನಗೆ ತಿಳಿದು ಬಂದಿತು, ಹಾಗಾಗಿ ನಾನು ಇಂತಿಂಥಾ ವಸ್ತುಗಳನ್ನು ಕೊಲೆಯಾದ ಮಹಿಳೆಯ ಬಳಿ ಅಡವಿಟ್ಟಿದ್ದೆ ಎಂದು ಸದರಿ ಕೊಲೆಯ ತನಿಖೆಯನ್ನು ನಡೆಸುತ್ತಿರುವ ಅಧಿಕಾರಿಗೆ ತಿಳಿಸಲು, ಮತ್ತು ಸದರಿ ವಸ್ತುಗಳನ್ನು ಹಿಂಪಡೆಯಲು ಅನುಮತಿ ಕೋರುತ್ತೇನೆ ಅಂತ ಬರೆದುಕೊಡಬೇಕು. ಅಥವಾ ಇನ್ನೂ ಒಳ್ಳೆಯದೆಂದರೆ… ಅವರೇ ನಿನ್ನ ಪರವಾಗಿ ಬರೆದುಕೊಡುತ್ತಾರೆ…. ಒಟ್ಟು ಈ ಅರ್ಥದಲ್ಲಿ, ಪೋಲೀಸರಿಗೆ ಹೇಳಿಕೆ ಕೊಡಬೇಕು’, ಅಂದ.

‘ನೋಡಿ, ವಸ್ತುಗಳು ನನ್ನವು, ನನಗೆ ದುಡ್ಡು ದೊರೆತಾಗ ಅವನ್ನು ಪಡೆದುಕೊಳ್ಳುತ್ತೇನೆ ಅಂತಲೂ ಸೇರಿಸಬೇಕು…’ ಅಂದ ರಾಸ್ಕೋಲ್ನಿಕೋವ್.

‘ಪರವಾಗಿಲ್ಲ. ಅದೆಲ್ಲ ಏನೂ ಬೇಕಾಗಿಲ್ಲ,’ ಅನ್ನುತ್ತ ಪೋರ್ಫಿರಿ ಪೆಟ್ರೊವಿಚ್ ಸೂಕ್ಷ್ಮ ಸಂಗತಿಯನ್ನು ತಣ್ಣಗೆ ತಳ್ಳಿ ಹಾಕಿದ. ‘ಬೇಕಾದರೆ ಸದರೀ ಕೊಲೆಯ ಬಗ್ಗೆ ತಿಳಿದುಬಂದು… ಇತ್ಯಾದಿ ಬರೆದು ನನಗೇ ನೇರವಾಗಿ ಕೂಡ ಅರ್ಜಿ ಕೊಡಬಹುದು,’ ಅಂದ.

‘ಮಾಮೂಲೀ ಬಿಳೀ ಹಾಳೆ ಮೇಲೆ ಬರಕೊಟ್ಟರೆ ಸಾಕಲ್ಲವಾ? ಅಥವಾ ಛಾಪಾ ಕಾಗದ?’ ವಿಷಯದ ಹಣಕಾಸಿನ ಮುಖದ ಬಗ್ಗೆ ಆಸಕ್ತಿ ತೋರುತ್ತ ರಾಸ್ಕೋಲ್ನಿಕೋವ್ ಆತುರದಲ್ಲಿ ನಡುವೆ ಬಾಯಿ ಹಾಕಿದ.

‘ಓಹೋ, ತೀರಾ ಮಾಮೂಲೀ ಪೇಪರಾದರೆ ಸಾಕು!’ ಪೋರ್ಫಿರಿ ಪೆಟ್ರೊವಿಚ್ ತಟ್ಟನೆ ಅವನನ್ನು ನೋಡಿದ. ಆ ನೋಟದಲ್ಲಿ ಅಣಕದ ಸುಳಿವಿರಲಿಲ್ಲ, ರಾಸ್ಕೋಲ್ನಿಕೋವ್‍ ಗೆ ಕಣ್ಣು ಹೊಡೆಯುವವನ ಹಾಗೆ ಕಣ್ಣನ್ನು ಕಿರಿದು ಮಾಡಿ ನೋಡಿದ. ಹಾಗೆ ನೋಡಿದ್ದು ಒಂದು ಕ್ಷಣದಷ್ಟು ಹೊತ್ತು ಮಾತ್ರವಾದ್ದರಿಂದ ರಾಸ್ಕೋಲ್ನಿಕೋವ್‍ ಗೆ ಹಾಗನ್ನಿಸಿರಬಹುದು. ‘ಅವನು ಕಣ್ಣುಹೊಡೆದ, ಯಾಕೋ ಯಾವ ದೆವ್ವಕ್ಕೆ ಗೊತ್ತು!’ ಎಂದು ದೇವರ ಮೇಲೆ ಆಣೆಮಾಡಿ ಹೇಳುವುದಕ್ಕೂ ರಾಸ್ಕೋಲ್ನಿಕೋವ್ ಸಿದ್ಧನಿದ್ದ.

‘ಅವನಿಗೆ ಗೊತ್ತು!’ ಅನ್ನುವ ಯೋಚನೆ ಮಿಂಚಿನ ಹಾಗೆ ಅವನ ಮನಸಿನಲ್ಲಿ ಹೊಳೆಯಿತು.

‘ಸಣ್ಣಪುಟ್ಟ ವಿಚಾರ ಹೇಳಿ ತೊಂದರೆ ಕೊಡುತ್ತಿದ್ದೇನೆ, ಕ್ಷಮಿಸಿ. ನನ್ನ ವಸ್ತುಗಳು ಹೆಚ್ಚೆಂದರೆ ಐದು ರೂಬಲ್ ಬಾಳುತ್ತವೆ. ಅವನ್ನು ನನಗೆ ಕೊಟ್ಟವರ ನೆನಪಿಗೆ ಬೆಲೆ ಕಟ್ಟುವುದಕ್ಕೆ ಆಗದು. ನನಗೆ ದುಡ್ಡು ಸಿಕ್ಕ ತಕ್ಷಣ… ಅಂದರೆ…’ ಅನ್ನುತ್ತ ತಡವರಿಸಿದ. ‘ಅದಕ್ಕೇನಾ ನಿನ್ನೆ ನೀನು ಅಷ್ಟು ಅಪ್ಸೆಟ್ ಆಗಿದ್ದು, ಮುದುಕಿ ಹತ್ತಿರ ಗಿರವಿ ಇಟ್ಟವರನ್ನ ಪೋರ್ಫಿರಿ ಹುಡುಕತಾ ಇದಾರೆ ಅಂತ ನಾನು ಝೋಸ್ಸಿಮೋವ್‍ ಗೆ ಹೇಳಿದಾಗ!’ ರಝುಮಿಖಿನ್ ಬೇಕೆಂದೇ ನಡುವೆ ಬಾಯಿ ಹಾಕಿ ಕೇಳಿದ.

ರಾಸ್ಕೋಲ್ನಿಕೋವ್‍ ಗೆ ಸಹಿಸಲು ಆಗಲಿಲ್ಲ. ಕೋಪದಲ್ಲಿ ಉರಿಯುತ್ತಿದ್ದ ಅವನ ಕಪ್ಪು ಕಣ್ಣು ರಝುಮಿಖಿನ್‍ ನತ್ತ ದುರುಗುಟ್ಟಿದವು. ಅವನು ತಟ್ಟನೆ ಅರ್ಥಮಾಡಿಕೊಂಡು ಸುಮ್ಮನಾದ.

‘ಏನು, ತಮಾಷೆ ಮಾಡತಾ ಇದೀಯಾ ಬ್ರದರ್?’ ರಾಸ್ಕೋಲ್ನಿಕೋವ್ ಕೋಪ ನಟಿಸುತ್ತ ರಝುಮಿಖಿನ್ ನನ್ನು ಕೇಳಿದ. ‘ಒಪ್ಪತೇನೆ ನೋಡು. ನಿನ್ನ ಕಣ್ಣಿಗೆ ನಾನು ಕೆಲಸಕ್ಕೆ ಬಾರದ ವಸ್ತುಗಳ ಬಗ್ಗೆ ತೀರ ತಲೆಕೆಡಿಸಿಕೊಳ್ಳೋನ ಥರ ಕಾಣಬಹುದು. ನನ್ನನ್ನ ದುರಾಸೆಯವನು, ಅಹಂಕಾರಿ ಅಂದುಕೊಳ್ಳಬೇಡ. ನನ್ನ ಮಟ್ಟಿಗೆ ಅವು ಕೆಲಸಕ್ಕೆ ಬಾರದವು ಅಲ್ಲವೇ ಅಲ್ಲ. ಏನು ಮಹಾ ಒಂದು ಕೊಪೆಕ್ ಬೆಲೆಯ ಬೆಳ್ಳಿ ಗಡಿಯಾರ ಇರಬಹುದು, ನಮ್ಮಪ್ಪನ ನೆನಪಿಗೆ ನನ್ನ ಹತ್ತಿರ ಇರೋದು ಮಾತ್ರ ಅದೊಂದೇ. ನೀನು ಬೇಕಾದರೆ ನಗು,’ ತಟ್ಟನೆ ಪೋರ್ಫಿರಿಯತ್ತ ತಿರುಗಿದ, ‘ನಮ್ಮ ತಾಯಿ ಬಂದಿದಾರೆ, ಅವಳಿಗೇನಾದರೂ ಈ ವಿಚಾರ ತಿಳಿದರೆ…’ ಮತ್ತೆ ರಝುಮಿಖಿನ್‍ ನತ್ತ ನೋಡುತ್ತ ತನ್ನ ಧ್ವನಿಯಲ್ಲಿ ಕಂಪನವನ್ನು ಕಷ್ಟಪಟ್ಟು ತಂದುಕೊಳ್ಳುತ್ತ, ‘ಅಪ್ಪನದು ಅಂತ ಉಳಿದಿದ್ದ ಅದೊಂದು ಕೊನೇ ಆಸ್ತೀನೂ ಇಲ್ಲ ಅಂತ ಗೊತ್ತಾದರೆ ಅಮ್ಮನಿಗೆ ಎಷ್ಟು ದುಃಖ ಆಗತ್ತೆ! ಹೆಂಗಸರೂ!’ ಅಂದ.

‘ಉಹ್ಞೂಂ, ಹಾಗಲ್ಲ ನಾನಂದಿದ್ದು!’ ರಝುಮಿಖಿನ್ ಸಿಡುಕಿದ.

‘ಚೆನ್ನಾಗಿತ್ತಾ? ನ್ಯಾಚುರಲ್ಲಾ? ಅತೀ ಮಾಡಲಿಲ್ಲವಾ? ಹೆಂಗಸರೂ ಅಂತ ಯಾಕಂದೆ?’ ರಾಸ್ಕೋಲ್ನಿಕೋವ್ ಅಂಜುತ್ತ ಮನಸಿನಲ್ಲೇ ಕೇಳಿಕೊಂಡ.’

‘ನಿಮ್ಮ ತಾಯಿ ಬಂದಿದಾರಾ?’ ಪೋರ್ಫಿರಿ ಯಾವುದೋ ಕಾರಣ ಇಟ್ಟುಕೊಂಡು ಕೇಳಿದ.

‘ಹೌದು.’

‘ಯಾವಾಗ?’

‘ನಿನ್ನೆ ಸಾಯಂಕಾಲ.’

ಏನೋ ಯೋಚನೆ ಮಾಡುವವನ ಹಾಗೆ ಪೋರ್ಫಿರಿ ಸುಮ್ಮನಾದ.

‘ನಿಮ್ಮ ವಸ್ತುಗಳು ಕಳೆದು ಹೋಗಲ್ಲ. ನೀವು ಬರುತ್ತೀರಿ ಅಂತ ನಾನು ಕಾಯತಾ ಇದ್ದೆ,’ ಪೋರ್ಫಿರಿ ಸಾವಕಾಶವಾಗಿ ತಣ್ಣನೆ ದನಿಯಲ್ಲಿ ಹೇಳಿದ.

ವಿಶೇಷವಾದದ್ದು ಏನೂ ನಡೆದಿಲ್ಲ ಅನ್ನುವ ಹಾಗೆ ಆಶ್‍ ಟ್ರೇಯನ್ನು ತೀರ ಸೌಜನ್ಯದಿಂದ ರಝುಮಿಖಿನ್‍ ಗೆ ಕೊಟ್ಟ. ಅವನು ಸಿಗರೇಟಿನ ಬೂದಿಯನ್ನು ಕಾರ್ಪೆಟ್ಟಿನ ಮೇಲೆಲ್ಲ ಬೀಳಿಸುತ್ತಿದ್ದ. ರಾಸ್ಕೋಲ್ನಿಕೋವ್ ಬೆಚ್ಚಿಬಿದ್ದ. ಪೋರ್ಫಿರೋ ಅದನ್ನು ನೋಡದವನ ಹಾಗೆ, ಸಿಗರೇಟಿನ ಬೂದಿಯ ಮೇಲೇ ಗಮನವಿದ್ದವನ ಹಾಗೆ ಇದ್ದುಬಿಟ್ಟ.

‘ಏ-ಏನೂ? ಕಾಯುತ್ತಿದ್ದೀರಾ? ಹಾಗಾದರೆ ಇವನು ಅಲ್ಲಿ ವಸ್ತುಗಳನ್ನ ಗಿರವಿ ಇಟ್ಟಿದ್ದ ಅನ್ನುವುದು ಗೊತ್ತಿತ್ತಾ! ರಝುಮಿಖಿನ್ ಆಶ್ಚರ್ಯಪಡುತ್ತ ಕೇಳಿದ.

‘ನಿಮ್ಮ ಉಂಗುರ, ವಾಚು ಎರಡನ್ನೂ ಒಂದು ಪೇಪರಿನಲ್ಲಿ ಸುತ್ತಿ, ಅದರ ಮೇಲೆ ನಿಮ್ಮ ಹೆಸರನ್ನ ಸ್ಪಷ್ಟವಾಗಿ ಬರೆದಿಟ್ಟಿದ್ದಳು. ಯಾವ ತಿಂಗಳು, ಯಾವ ದಿನ ಗಿರವಿ ಇಟ್ಟಿದ್ದು ಅನ್ನುವುದನ್ನೂ ಬರೆದಿದ್ದಳು.’

‘ಅದು ಹೇಗೆ ಅಷ್ಟೊಂದೆಲ್ಲ ಗಮನಿಸಿದಿರಿ?’ ರಾಸ್ಕೋಲ್ನಿಕೋವ್ ವಿಚಿತ್ರವಾಗಿ ಹಲ್ಲು ಕಿರಿಯುತ್ತ, ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡುವುದಕ್ಕೆ ಪ್ರಯತ್ನಪಟ್ಟು ವಿಫಲನಾದ. ತಟ್ಟನೆ, ‘ಅಲ್ಲ, ಏನು ಹೇಳಕ್ಕೆ ಹೋದೆ ಅಂದರೆ ಎಷ್ಟೊಂದು ಜನ ಗಿರವಿ ಇಟ್ಟಿದ್ದರಲ್ಲಾ, ಎಲ್ಲಾರದೂ ವಿವರ ಹೇಗೆ ನೆನಪಿಟ್ಟುಕೊಂಡಿದ್ದೀರೋ ಅಂತ ನಿಮ್ಮ ಗಮನ ಎಷ್ಟು ಅಂತ… ಮತ್ತೆ…’
(‘ಸ್ಟುಪಿಡ್! ಅಂಜುಬುರುಕ! ಯಾಕೆ ಹೀಗಾಡಿದೆ!’ ಎಂದು ಮನಸಿನಲ್ಲಿ ತನ್ನನ್ನೇ ಬೈದುಕೊಂಡ)

‘ಗಿರವಿ ಇಟ್ಟಿದ್ದವರೆಲ್ಲ ಬಂದು ಹೋದರು. ನಿಜ ಹೇಳಬೇಕಂದರೆ ನೀವು ಮಾತ್ರ ಇದುವರೆಗೂ ಇಲ್ಲಿಗೆ ಬರುವ ದೊಡ್ಡ ಮನಸ್ಸು ಮಾಡಲಿಲ್ಲ,’ ಕಂಡೂ ಕಾಣದಂಥ ಅಣಕದ ದನಿಯಲ್ಲಿ ಪೋರ್ಫಿರಿ ಮಾತಾಡಿದ.

‘ಹುಷಾರಿರಲಿಲ್ಲ.’

‘ನಾನೂ ಕೇಳಿಪಟ್ಟೆ. ಯಾಕೋ ನಿಮ್ಮ ಆರೋಗ್ಯ ಕೆಟ್ಟಿದೆ ಅಂದರು. ಈಗಲೂ ಸ್ವಲ್ಪ ಬಿಳಿಚಿಕೊಂಡೇ ಇದೀರಿ.’

‘ಬಿಳಿಚಿಲ್ಲ! ಚೆನ್ನಾಗೇ ಇದ್ದೇನೆ ನಾನು!’ ರಾಸ್ಕೋಲ್ನಿಕೋವ್ ತಟ್ಟನೆ ಕೋಪದಲ್ಲಿ, ಒರಟಾಗಿ ನುಡಿದ. ಅವನ ದನಿ ಬದಲಾಗಿತ್ತು. ಒಳಗೆ ಕುದಿಯುತ್ತಿದ್ದ ಕೋಪವನ್ನು ಅದುಮಿಡಲು ಆಗಲಿಲ್ಲ.

(‘ನನ್ನ ಸಿಟ್ಟೇ ನಾನು ಎಡವಿ ಬೀಳುವ ಹಾಗೆ ಮಾಡತ್ತೆ’ ಅನ್ನುವ ಯೋಚನೆ ಹೊಳೆಯಿತು.’ ಮತ್ತೇ? ಇವರೆಲ್ಲ ಯಾಕೆ ಹೀಗೆ ಹಿಂಸೆ ಕೊಡಬೇಕು?’ ಅಂದುಕೊಂಡ.)

‘ಚೆನ್ನಾಗಿದಾನಂತೆ, ಚೆನ್ನಾಗಿ!’ ರಝುಮಿಖಿನ್ ಶುರುಹಚ್ಚಿಕೊಂಡ. ‘ಕೇಳಿ ಇವನ ಮಾತನ್ನ! ನಿನ್ನೆವರೆಗೂ ಸನ್ನಿ ಇತ್ತು, ಮೈ ಮೇಲೆ ಎಚ್ಚರ ಕೂಡ ಇರಲಿಲ್ಲ… ನೀವು ನಂಬತೀರಾ ಪೋರ್ಫಿರಿ… ಇವನಿಗೆ ನೆಟ್ಟಗೆ ನಿಲ್ಲಕ್ಕೂ ಆಗತಿರಲಿಲ್ಲ, ನಾವು, ಅಂದರೆ ನಾನೂ ಝೋಸ್ಸಿಮೊವ್ ಇಬ್ಬರೂ ಇವನ ರೂಮಿನಿಂದ ಹೊರಟ ತಕ್ಷಣ ಏನು ಮಾಡಿದ ಗೊತ್ತಾ ಇವನು, ಎದ್ದು ಬಟ್ಟೆ ತೊಟ್ಟು, ಕಳ್ಳ ತಪ್ಪಿಸಿಕೊಂಡು ಅಲೆಯುವುದಕ್ಕೆ ಹೋಗಿದ್ದ. ಸಿಕ್ಕಿದ್ದು ಮಧ್ಯರಾತ್ರಿ ಹೊತ್ತಿಗೆ. ಹೇಳತೇನೆ ಕೇಳಿ, ಅಷ್ಟು ಹೊತ್ತೂ ಪೂರಾ ಸನ್ನಿ ಹಿಡಿದೇ ಇತ್ತು ಅವನಿಗೆ! ಸ್ಪೆಶಲ್ ಕೇಸು ಇವನು!’

‘ನಿಜವಾಗಲೂ! ಪೂರಾ ಸನ್ನಿ? ಎಲ್ಲಾದರೂ ಉಂಟೇ!’ ಪೋರ್ಫಿರಿ ಒಂದು ಥರಾ ತಲೆ ಆಡಿಸಿದ, ಹೆಂಗಸರ ಹಾಗೆ.

‘ನಾನ್ಸೆನ್ಸ್! ನಂಬಬೇಡಿ ಅದನ್ನ! ನಂಬಲೇಬೇಡಿ! ಏನಂದರೆ ಏನು, ನೀವೆಲ್ಲ ಹೇಗಿದ್ದರೂ ನಂಬಲ್ಲ!’ ಇಷ್ಟು ಹೊತ್ತಿಗೆ ಕೋಪಗೊಂಡಿದ್ದ ರಾಸ್ಕೋಲ್ನಿಕೋವ್‍ ನಿಂದ ಈ ಮಾತು ಜಾರಿತು.’ ಈ ವಿಚಿತ್ರ ಮಾತು ಪೋರ್ಫಿರೆ ಕಿವಿಗೆ ಬಿದ್ದ ಹಾಗೆ ತೋರಲಿಲ್ಲ.

‘ನೀನು ಹೊರಗೆ ಹೇಗಯ್ಯಾ ಹೋದೆ? ಸನ್ನಿ ಇರಲಿಲ್ಲವಾ?’ ರಝುಮಿಖಿನ್ ತಟ್ಟನೆ ತಾಳ್ಮೆ ಕಳೆದುಕೊಂಡು ಕೇಳಿದ. ‘ಹೊರಕ್ಕೆ ಯಾಕೆ ಹೋದೆ? ಏನು ಕೆಲಸ ಇತ್ತು? ಗುಟ್ಟಾಗಿ ಯಾರಿಗೂ ತಿಳಿಯದ ಹಾಗೆ ಹೋಗಿದ್ದು ಯಾಕೆ? ಬುದ್ಧಿ ನೆಟ್ಟಗಿದ್ದೂ ಮಾಡಿದ ಕೆಲಸವಾ ಇದು? ಸದ್ಯ, ಅಪಾಯ ತಪ್ಪಿತಲ್ಲ, ಈಗ ನೇರವಾಗಿ ಕೇಳಬಹುದು ನಾನು.’

‘ನಿನ್ನೆ ಇವರನ್ನೆಲ್ಲ ನೋಡಿ ನೋಡಿ ಸಾಯುವಷ್ಟು ಬೇಜಾರಾಗಿತ್ತು ನನಗೆ,’ ರಾಸ್ಕೋಲ್ನಿಕೋವ್ ತಟ್ಟನೆ ಪೋರ್ಫಿರಿಯತ್ತ ತಿರುಗಿ, ಸವಾಲೆಸೆಯುವಂತೆ ಹಲ್ಲುಕಿರಿಯುತ್ತ ಮಾತಾಡಿದ. ‘ಅದಕ್ಕೇ ಇವರ ಕೈಗೆ ಸಿಗದ ಹಾಗೆ ಇರೋದಕ್ಕೆ ಬೇರೆ ಬಾಡಿಗೆ ಮನೆ ಹುಡುಕತಾ ಇದ್ದೆ, ನನ್ನ ಹತ್ತಿರ ಇರುವ ದುಡ್ಡೆಲ್ಲ ತಗೊಂಡು ಹೊರಟೆ. ನನ್ನ ಹತ್ತಿರ ದುಡ್ಡು ಇರುವುದನ್ನ ಝಮ್ಯೊತೋವ್ ನೋಡಿದ್ದರು. ಏನನ್ನತೀರಿ ಝಮ್ಯೊತೋವ್? ನಾನು ನಿನ್ನೆ ಬುದ್ದಿ ನೆಟ್ಟಗೆ ಇರುವ ಹಾಗೆ ಇದ್ದೆನೋ ಸನ್ನಿ ಹಿಡಿದವರ ಹಾಗೋ? ಏನನ್ನತೀರಿ? ದಯವಿಟ್ಟು ನೀವೇ ಹೇಳಿ.’

ಸಾಧ್ಯವಿದ್ದಿದ್ದರೆ ಆ ಕ್ಷಣವೇ ಅವನು ಝಮ್ಯೊತೋವ್‍ ನ ಕುತ್ತಿಗೆ ಹಿಚುಕಿಬಿಡುತ್ತಿದ್ದ. ಝಮ್ಯತೋವ್‍ ನ ಮೌನ, ಅವನ ಕಣ್ಣಿನ ನೋಟ ಎರಡೂ ರಾಸ್ಕೋಲ್ನಿಕೋವ್‍ ಗೆ ಇಷ್ಟವಾಗಲಿಲ್ಲ.

‘ನನ್ನ ಕೇಳಿದರೆ ಇವನು ನಿನ್ನೆ ಬುದ್ಧಿ ಇರುವವರ ಹಾಗೇ ಮಾತಾಡಿದ. ಜಾಣತನವೂ ಬೇಕಾದಷ್ಟಿತ್ತು. ಸ್ವಲ್ಪ ಸಿಟ್ಟು ಜಾಸ್ತಿ ಇತ್ತು, ಅಷ್ಟೆ,’ ಝಮ್ಯೊತೋವ್ ಶುಷ್ಕವಾದ ದನಿಯಲ್ಲಿ ಹೇಳಿದ.

‘ಮತ್ತೆ ಇವತ್ತು ನಿಕೊದಿಮ್ ಫೋಮಿಚ್ ನನಗೆ ಹೇಳಿದ, ನೀವು ನಿನ್ನೆ ರಾತ್ರಿ ಬಹಳ ಹೊತ್ತಾದ ಮೇಲೆ ಸರ್ಕಾರಿ ಅಧಿಕಾರಿಯ ಮನೆಗೆ ಹೋಗಿದ್ದಿರಂತೆ, ಅವನು ಕುದುರೆಯ ಕಾಲಿಗೆ ಸಿಕ್ಕಿ ಅಪಘಾತ ಆಗಿತ್ತಂತೆ….’ ಪೋರ್ಫಿರಿ ಕೇಳಿದ.

‘ಅಧಿಕಾರಿಯ ವಿಷಯಾನೇ ನೋಡಿ,’ ರಝುಮಿಖಿನ್ ಹೇಳಿದ: ‘ಅವನ ಮನೆಯಲ್ಲಿ ನೀನು ಹುಚ್ಚನ ಹಾಗೆ ನಡೆದುಕೊಂಡೆಯೋ ಇಲ್ಲವೋ? ಸಾವಿನ ಕಾರ್ಯಕ್ಕೆ ಅಂತ ಅಧಿಕಾರಿಯ ವಿಧವೆಗೆ ನಿನ್ನ ಹತ್ತಿರ ಇದ್ದ ದುಡ್ಡೆಲ್ಲ ಕೊಟ್ಟುಬಿಟ್ಟೆ! ಅಲ್ಲಾ ಅವಳಿಗೆ ಸಹಾಯ ಮಾಡಬೇಕು ಅಂತಿದ್ದರೆ ಅವಳಿಗೆ ಹದಿನೈದು, ಬೇಡ ಇಪ್ಪತ್ತು ರೂಬಲ್ ಕೊಡು. ನಿನಗೆ ಅಂತ ಕೊನೇ ಪಕ್ಷ ಮೂರು ರೂಬಲ್ ಆದರೂ ಇಟ್ಟುಕೊಳ್ಳಬೇಕಲ್ಲವಾ? ನಿನ್ನ ಹತ್ತಿರ ಇದ್ದ ಇಪ್ಪತ್ತೈದು ರೂಬಲ್ಲೂ ಕೊಟ್ಟುಬಿಟ್ಟೆ.’

‘ನಿನಗೆ ಗೊತ್ತಿಲ್ಲದ ಹಾಗೆ ನನಗೆ ಎಲ್ಲೋ ಕೊಪ್ಪರಿಗೆ ಹಣ ಸಿಕ್ಕಿರಬಹುದು. ಅದಕ್ಕೇ ನಾನು ನಿನ್ನೆ ಎರಡೂ ಕೈಯಲ್ಲಿ ದುಡ್ಡು ಬಾಚಿ ಕೊಟ್ಟಿರಬಹುದು… ನನಗೆ ದುಡ್ಡು ಸಿಕ್ಕಿದ್ದು ಝಮ್ಯತೋವ್ ಅವರಿಗೆ ಗೊತ್ತು! ಕ್ಷಮಿಸಿ, ದಯವಿಟ್ಟು.ʼ ಅನ್ನುತ್ತ ಪೋರ್ಫಿರಿಯತ್ತ ತಿರುಗಿದ. ರಾಸ್ಕೋಲ್ನಿಕೋವ್‍ ನ ತುಟಿ ನಡುಗುತ್ತಿದ್ದವು ‘ಅರ್ಧ ಗಂಟೆ ಹೊತ್ತು ಹೀಗೆ ಕೆಲಸಕ್ಕೆ ಬಾರದ ಮಾತಾಡಿ ನಿಮ್ಮ ಸಮಯ ವ್ಯರ್ಥಮಾಡಿದೇವೆ. ನಮ್ಮನ್ನ ಕಂಡು ನಿಮಗೆ ಅಸಹ್ಯ ಆಗಿರಬಹುದು, ಅಲ್ಲವಾ?’

‘ಇಲ್ಲ, ಖಂಡಿತ ಇಲ್ಲ. ನಿಮ್ಮ ಬಗ್ಗೆ ನನಗೆ ಎಷ್ಟು ಕುತೂಹಲ ಹುಟ್ಟಿದೆ ಅದು ನಿಮಗೆ ಗೊತ್ತಿಲ್ಲ. ನಿಮ್ಮನ್ನ ನೋಡುವುದೂ ನಿಮ್ಮ ಜೊತೆ ಮಾತಾಡುವುದೂ ಎರಡೂ ಆಸಕ್ತಿ ಹುಟ್ಟಿಸಿವೆ. ನೀವು ಕೊನೆಗೂ ಬಂದಿರಲ್ಲ, ಅದೇ ಸಂತೋಷ,’ ಅಂದ ಪೊರ್ಫಿರಿ.

‘ಸರಿ, ನಮಗೆ ಟೀಯಾದರೂ ತರಿಸೀ! ನನ್ನ ಗಂಟಲು ಒಣಗತಾ ಇದೆ!’ ಅಂದ ರಝುಮಿಖಿನ್.

‘ಆಹಾ, ಅದ್ಭುತವಾದ ವಿಚಾರ! ಎಲ್ಲಾರೂ ಟೀ ಕುಡಿಯೋಣ. ಅಲ್ಲಾ, ಟೀಗೆ ಮೊದಲು ಏನಾದರೂ ಸ್ವಲ್ಪ ಬಾಯಾಡಿಸುವುದಕ್ಕೆ…?’

‘ಓಹೋ, ಖಂಡಿತ ಆಗಬಹುದು.’

ಟೀಗೆ ಹೇಳುವುದಕ್ಕೆ ಫೋರ್ಫಿರಿ ಪೆಟ್ರೊವಿಚ್ ಎದ್ದು ಹೋದ.

ರಾಸ್ಕೋಲ್ನಿಕೋವ್‍ ನ ತಲೆಯೊಳಗೆ ಆಲೋಚನೆಗಳು ಸುಂಟರ ಗಾಳಿಯ ಹಾಗೆ ಸುತ್ತುತ್ತಿದ್ದವು. ಮನಸಿಗೆ ಬಹಳ ಕಿರಿಕಿರಿಯಾಗಿತ್ತು.

‘ಏನಪ್ಪಾ ಅಂದರೆ, ಅವರು ಈಗ ಬಚ್ಚಿಡುತ್ತಾನೂ ಇಲ್ಲ. ಉಪಚಾರಕ್ಕೆ ಕೂಡ ಬೆಲೆ ಕೊಡುತ್ತಾ ಇಲ್ಲ. ಅಲ್ಲಾ, ನನ್ನ ಬಗ್ಗೆ ನಿಕೋದಿನ್ ಫೋಮಿಚ್‍ ಜೊತೆ ಹೇಗೆ ಮಾತಾಡಿದೆ ಪೋರ್ಫಿರಿ? ನನ್ನ ಪರಿಚಯವೇ ನಿನಗಿಲ್ಲವಲ್ಲಾ? ಬೇಟೆ ನಾಯಿಗಳ ಥರ ನನ್ನ ಮೇಲೆ ಕಣ್ಣಿಟ್ಟು ಹೊಂಚು ಹಾಕತಾ ಇದಾರೆ, ಅದನ್ನ ಬಚ್ಚಿಡಬೇಕು ಅಂತಲೂ ಅನ್ನಿಸಿಲ್ಲ ಅವರಿಗೆ. ಎಲ್ಲರಿಗೂ ಗೊತ್ತಾಗುವ ಹಾಗೇ ನನ್ನ ಮುಖದ ಮೇಲೆ ಉಗೀತಿದಾರೆ!’ ಅಂದುಕೊಂಡ. ಕೋಪದಿಂದ ಅವನ ಮೈ ನಡುಗುತ್ತಿತ್ತು. ‘ಬೆಕ್ಕಿನ ಹಾಗೆ ಚೆಲ್ಲಾಟ ಆಡಿ ಪ್ರಾಣಸಂಕಟ ಕೊಡಬೇಡಿ. ಅದು ಮರ್ಯಾದೆ ಅಲ್ಲ. ನೇರಾ ನೇರಾ ಬಂದು ನನ್ನ ಎದುರಿಸಿ… ಬಿಡಲ್ಲಾರೀ, ನನ್ನ ಜೊತೆ ಹೀಗೆ ಚೆಲ್ಲಾಟ ಆಡಕ್ಕೆ ಬಿಡಲ್ಲಾರೀ. ಎದ್ದು ನಿಂತು ಎಲ್ಲಾರ ಎದುರಿಗೆ ಎಲ್ಲಾನೂ ಒದರಿಬಿಡತೇನೆ… ನಿಮ್ಮನ್ನ ಕಂಡರೆ ನನಗೆ ಎಷ್ಟು ಅಸಹ್ಯ ಅಂತ ನಿಮಗೇ ಆಗ ಗೊತ್ತಾಗತ್ತೆ…’ ಅವನ ಯೋಚನೆಗಳಿಗೆ ಒಂದೆರಡು ಕ್ಷಣ ಬಿಡುವು ಸಿಕ್ಕಿತ್ತು.

‘…ಅಲ್ಲಾ, ಬಿಸಿಲು ಕುದುರೆಯ ಸವಾರಿ ಮಾಡತಾ ಇದ್ದೇನಾ? ಇದೆಲ್ಲಾನೂ ನನ್ನ ಕಲ್ಪನೆ ಆಗಿದ್ದರೆ, ಭ್ರಮೆ ಆಗಿದ್ದರೆ ಏನು ಗತಿ? ನನಗೆ ಅನುಭವ ಸಾಲದು, ಅದಕ್ಕೇ ಸುಮ್ಮ ಸುಮ್ಮನೆ ಸಿಟ್ಟುಮಾಡಿಕೊಂಡಿದ್ದೇನಾ? ನಾನು ಹಾಕಿರುವ ಪಾರ್ಟು ಸರಿಯಾಗಿ ಮಾಡುವುದಕ್ಕೆ ಆಗುತ್ತಿಲ್ಲವಾ? ಅವನು ಆಡಿದ ಮಾತೆಲ್ಲ ಸಹಜವಾಗಿ ಆಡಿದ ಮಾಮೂಲೀ ಮಾತು ಆಗಿದ್ದರೇ? ಆದರೂ, ಈ ಮಾತಿನ ಹಿಂದೆ ಏನೋ ಇದೆ… ಯಾವಾಗ ಬೇಕಾದರೂ ಆಡಬಹುದಾಗಿದ್ದ ಮಾತು. ಆದರೂ ‘ಅವಳ ರೂಮಿನಲ್ಲಿ’ ಅಂತ ಯಾಕೆ ಅಂದ? ನಾನು ‘ಜಾಣ’ ಮಾತಾಡಿದೆ ಅಂತ ಝಮ್ಯೊತೋವ್ ಯಾಕೆ ಅಂದ? ಯಾಕೆ ಇವರೆಲ್ಲರ ಮಾತಿನ ಧ್ವನಿ ಧಾಟಿ ಹೀಗಿದೆ? ಹೌದು… ಮಾತಿನ ಧ್ವನಿ… ರಝುಮಿಖಿನ್ ಕೂಡ ಈ ಮಾತೆಲ್ಲ ಆಗುವಾಗ ಇಲ್ಲೇ ಇದ್ದ. ಅವನ ಮನಸಿಗೆ ಯಾಕೆ ಹೀಗೆಲ್ಲ ಅನಿಸಿಲ್ಲ? ಮುದ್ದು ಬೊಂಬೆ ಅವನು! ಅವನಿಗೆ ಏನೂ ಅನಿಸಲ್ಲ! ನನಗೆ ಜ್ವರ ಏರತಾ ಇರಬೇಕು. ಈಗ ಸ್ವಲ್ಪ ಹೊತ್ತಿಗೆ ಮುಂಚೆ ಪೋರ್ಫಿರಿ ನನಗೆ ಕಣ್ಣು ಹೊಡೆದನಾ ಇಲ್ಲವಾ? ನಾನ್ಸೆನ್ಸ್. ಅವನು ಯಾಕೆ ನನಗೆ ಕಣ್ಣು ಹೊಡೆಯಬೇಕು? ಅವರು ನನ್ನ ಕೆರಳಿಸತಾ ಇದಾರಾ ಅಥವಾ ರೇಗಿಸಿ ತಮಾಷೆ ಮಾಡತಾ ಇದಾರಾ? ಇದೆಲ್ಲಾ ನನ್ನ ಭ್ರಮೆ ಇರಬೇಕು ಅಥವಾ ಅವರಿಗೆ ಎಲ್ಲಾ ಗೊತ್ತಿರಬೇಕು!…

ಝಮ್ಯೊತೋವ್ ಕೂಡ ಎಂಥ ಠೇಂಕಾರ ಮಾಡಿದ… ಹೌದಾ? ರಾತ್ರಿ ಕಳೆಯುವುದರೊಳಗೆ ಝಮ್ಯೊತೋವ್ ಮನಸ್ಸು ಬದಲಾಯಿಸಿದನಾ? ಮನಸ್ಸು ಬದಲಾಯಿಸಿದಾನೆ ಅನಿಸತ್ತೆ! ಇಲ್ಲಿ ಎಷ್ಟು ಆರಾಮಾಗಿ ಕೂತಿದಾನೆ, ಆದರೂ ಇದೇ ಮೊದಲಂತೆ ಇಲ್ಲಿಗೆ ಬಂದಿದ್ದು! ಪೋರ್ಫಿರೆ ಅವನ್ನೇನು ಅತಿಥಿ ಥರ ನೋಡತಾ ಇಲ್ಲ. ಅವನ ಕಡೆ ಬೆನ್ನು ಹಾಕಿ ಕೂತಿದ್ದ. ಇವರಿಬ್ಬರೂ ಖದೀಮರ ಥರ ಒಂದಾಗಿದಾರೆ, ಅದೂ ನನ್ನ ಹಿಡಿದು ಹಾಕುವುದಕ್ಕೆ! ನಾವು ಬರೋದಕ್ಕೂ ಮೊದಲು ನನ್ನ ಬಗ್ಗೆನೇ ಮಾತಾಡತಾ ಕೂತಿದ್ದರು, ಅನುಮಾನವೇ ಇಲ್ಲ!… ಆ ಮುದುಕಿ ಮನೆಗೆ ನಾನು ಮತ್ತೆ ಹೋಗಿದ್ದೆ ಅನ್ನೋದು ಅವರಿಗೆ ಗೊತ್ತಾ?

‘ನಿನ್ನೆ ದಿನ ಮನೆ ನೋಡಕ್ಕೆ ಹೋಗಿದ್ದೆ,’ ಅಂದಾಗ ಅವನಿಗೆ ಸೂಕ್ಷ್ಮ ತಿಳಿಯಲಿಲ್ಲ… ಸುಮ್ಮನೆ ಇದ್ದುಬಿಟ್ಟ. ಮನೆ ವಿಚಾರ ಎತ್ತಿ ಜಾಣತನದ ಕೆಲಸ ಮಾಡಿದೆ, ಮುಂದೆ ಉಪಯೋಗಕ್ಕೆ ಬರತ್ತೆ! ನನಗೆ ಸನ್ನಿ ಹಿಡಿದಿತ್ತು ಅನ್ನತಾರೆ! ಹ ಹ್ಹ ಹ್ಹಾ! ನಿನ್ನೆ ಸಂಜೆ ನಡದದ್ದೆಲ್ಲ ಅವನಿಗೆ ಪೂರಾ ಗೊತ್ತಿದೆ! ಅಮ್ಮ ಬಂದಿರೋದು ಮಾತ್ರ ತಿಳಿದಿಲ್ಲ!… ಆ ಪಿಶಾಚಿ ಮುದುಕಿ ದಿನ, ವಾರ ಎಲ್ಲಾ ಬರೆದಿಟ್ಟಿದಾಳಂತೆ! ಬರೀ ಸುಳ್ಳು! ನಾನು ಅವರಿಗೆ ಸಿಕ್ಕಿಬೀಳಲ್ಲ! ವಾಸ್ತವಾಂಶ ಯಾವುದೂ ಇಲ್ಲ, ಎಲ್ಲಾ ಬರೀ ಊಹೆ! ಇಲ್ಲ, ನನಗೆ ವಾಸ್ತವ ಅಂಶಗಳನ್ನ ಮಾತ್ರ ಹೇಳತಿದಾರೆ! ಮನೆ ಹುಡುಕಿದ್ದು ಕೂಡ ವಾಸ್ತವಾಂಶ ಅಲ್ಲ, ಸನ್ನಿ ಹಿಡಿದಾಗಿನ ಮಾತು, ಅವರಿಗೆ ಏನು ಹೇಳಬೇಕು ನನಗೆ ಗೊತ್ತಿದೆ.… ಕೊಲೆ ಆದಮೇಲೆ ಮುದುಕಿ ಮನೆಗೆ ಹೋಗಿದ್ದೆ ಅನ್ನುವುದು ಅವರಿಗೆ ಗೊತ್ತಾ? ಅದು ನನಗೆ ಗೊತ್ತಾಗುವ ತನಕ ಇಲ್ಲಿಂದ ಅಲ್ಲಾಡಲ್ಲ.

ಯಾಕಾದರೂ ಬಂದೆನೋ ಇಲ್ಲಿಗೆ? ಈಗ ಸಿಟ್ಟು ಬಂದಿದೆ, ಅದು ವಾಸ್ತವ! ಥೂ, ಎಷ್ಟು ಕೆರಳಿದೇನೆ ನಾನು! ಅಲ್ಲಾ, ಇದೂ ಒಳ್ಳೆಯದೇ ಇರಬಹುದು, ಕಾಯಿಲೆಯವನ ಪಾರ್ಟು ಮಾಡತಾ ಇದೀನಲ್ಲಾ! ಅವನು ಚಿಟುಕುಮುಳ್ಳು ಆಡಿಸತಾ ಇದಾನೆ, ನಾನು ಎಚ್ಚರ ತಪ್ಪಿ ನಿಜ ಹೇಳಲಿ ಅಂತ! ಯಾಕೆ ಬಂದೆ ನಾನು?’

ಅವನು ಸಿಗರೇಟಿನ ಬೂದಿಯನ್ನು ಕಾರ್ಪೆಟ್ಟಿನ ಮೇಲೆಲ್ಲ ಬೀಳಿಸುತ್ತಿದ್ದ. ರಾಸ್ಕೋಲ್ನಿಕೋವ್ ಬೆಚ್ಚಿಬಿದ್ದ. ಪೋರ್ಫಿರೋ ಅದನ್ನು ನೋಡದವನ ಹಾಗೆ, ಸಿಗರೇಟಿನ ಬೂದಿಯ ಮೇಲೇ ಗಮನವಿದ್ದವನ ಹಾಗೆ ಇದ್ದುಬಿಟ್ಟ.

ಇವೆಲ್ಲ ವಿಚಾರ ಒಂದೆರಡು ಕ್ಷಣದಲ್ಲಿ ಅವನ ತಲೆಯೊಳಗೆ ಮಿಂಚಿ ಹೋದವು.

ಪೋರ್ಫಿರಿ ಪೆಟ್ರೊವಿಚ್ ಬೇಗ ವಾಪಸು ಬಂದ. ಯಾಕೋ ಬಹಳ ಖುಷಿಯಾಗಿದ್ದ.

‘ನಿನ್ನೆ ನಿಮ್ಮ ಮನೆಯ ಪಾರ್ಟಿ ಆದಮೇಲೆ, ಬ್ರದರ್, ನನ್ನ ತಲೆ ಇದೆಯಲ್ಲಾ… ತಲೆ ಮಾತ್ರ ಅಲ್ಲ ಮೈಯೆಲ್ಲಾ ಒಂಥರಾ ಇದೆ,’ ತೀರ ಬೆರೆಯದೇ ದನಿಯಲ್ಲಿ, ನಗುನಗುತ್ತ ರಝುಮಿಖಿನ್‍ ಗೆ ಹೇಳಿದ.

‘ಎಂಜಾಯ್ ಮಾಡಿದಿರಿ ತಾನೇ? ತುಂಬ ಇಂಟರೆಸ್ಟ್ ಹುಟ್ಟಿದ್ದ ಹೊತ್ತಲ್ಲಿ ನಿಮ್ಮನ್ನು ಬಿಟ್ಟು ಹೋದೆ. ಕೊನೇಗೆ ಯಾರು ಗೆದ್ದರು?’

‘ಯಾರೂ ಗೆಲ್ಲಲಿಲ್ಲ. ಮೂಲ ಪ್ರಶ್ನೆಗಳಿಗೆ ಬಂದು ಮುಟ್ಟಿದೆವು. ನಮ್ಮ ತಲೆಗಳು ಮಾತ್ರ ಸ್ವರ್ಗದಲ್ಲಿ ತೇಲಾಡುತಿದ್ದವು!’

‘ರೋದ್ಯಾ, ನಿನ್ನೆ ಏನು ವಾದ ನಡೀತು, ಗೊತ್ತಾ? ಅಪರಾಧ ಅನ್ನೋದು ಇದೆಯೋ ಇಲ್ಲವೋ? ವಾದ ಮಾಡತಾ ಮಾಡತಾ ದೆವ್ವಕ್ಕೂ ನಾಚಿಕೆ ಆಗುವಂಥ ಸುಳ್ಳು ಹೇಳತಿದ್ದರು,’

‘ಚರ್ಚೆ ಮಾಡಕ್ಕೆ ಏನಿದೆ? ಅಪರಾಧ ಅನ್ನೋದು ಸಾಮಾಜಿಕ ಪ್ರಶ್ನೆ’ ರಾಸ್ಕೋಲ್ನಿಕೋವ್ ಅನ್ಯಮನಸ್ಕನಾಗಿ ಉತ್ತರಿಸಿದ.

‘ನಿನ್ನೆ ಚರ್ಚೆ ಮಾಡಿದ ಪ್ರಶ್ನೆ ಹೀಗಿರಲಿಲ್ಲ,’ ಅಂದ ಪೋರ್ಫಿರೆ.

‘ಇದೇ ಥರ ಇರಲಿಲ್ಲ, ನಿಜ,’ ರಝುಮಿಖಿನ್ ಉತ್ಸಾಹಿತನಾಗಿ, ಎಂದಿನಂತೆ ಕೆರಳಿ ಮಾತಾಡಿದ. ‘ನೋಡು ರೋದ್ಯ ನಿನ್ನ ಅಭಿಪ್ರಾಯ ಹೇಳು. ನಿನಗೇನನ್ನಿಸತ್ತೆ ಅದು ಬೇಕು ನನಗೆ. ನೀನು ಬರತೀಯ ಅಂತ ಹೊರಗೆ ನಿಂತು ಕಾಯತಾ ಇದ್ದೆ ನಿನ್ನೆ. ನೀನೂ ಬರತೀಯ ಅಂತ ಅವರಿಗೆಲ್ಲ ಹೇಳಿದ್ದೆ… ಮೊದಲು ಶುರುವಾಗಿದ್ದು ಸಮಾಜವಾದಿಗಳ ಮಾತಿನಿಂದ. ಸಮಾಜದ ವ್ಯವಸ್ಥೆಯಲ್ಲಿರುವ ಏರುಪೇರುಗಳನ್ನು ಪ್ರತಿಭಟಿಸುವಾಗ ಅಪರಾಧ ನಡೆಯುತ್ತದೆ ಅನ್ನುವುದು ಅವರ ವಾದ. ಇದು ಬಿಟ್ಟರೆ ಅಪರಾಧಕ್ಕೆ ಬೇರೆ ಕಾರಣ ಇಲ್ಲವೇ ಇಲ್ಲ, ಯಾವ ಕಾರಣಾನೂ ಇಲ್ಲ ಅನ್ನತಾರೆ!’

‘ಅದು ಸುಳ್ಳು!’ ಚೀರಿ ಹೇಳಿದ ಪೋರ್ಫಿರಿ ಪೆಟ್ರೊವಿಚ್. ಅವನಿಗೆ ಉತ್ಸಾಹ ಹುಟ್ಟಿದ್ದು ಎದ್ದು ಕಾಣುತಿತ್ತು. ನಗುತ್ತ ರಝುಮಿಖಿನ್‍ ನನ್ನು ನೋಡುತ್ತಿದ್ದ. ಅದರಿಂದ ರಝುಮಿಖಿನ್‍ ನ ಆವೇಶ ಮತ್ತೂ ಹೆಚ್ಚುತ್ತಿತ್ತು.

‘ಬೇರೆ ಯಾವ ಕಾರಣಾನೂ ಅವರು ಒಪ್ಪಲ್ಲ! ಸುಳ್ಳು ಹೇಳತಿಲ್ಲ ನಾನು… ಅವರ ಪುಸ್ತಕಗಳನ್ನ ತೋರಿಸತೇನೆ. ಅವರ ಪ್ರಕಾರ ಅಪರಾಧಕ್ಕೆ ಪರಿಸರವೇ ಕಾರಣ. ಅಪರಾಧಿಯು ‘ಪರಿಸರಕ್ಕೆ ಬಲಿ’ಯಾದವನು. ‘ಪರಿಸರಕ್ಕೆ ಬಲಿ’ ಅನ್ನುವುದು ಅವರಿಗೆ ಪ್ರಿಯವಾದ ನುಡಿಗಟ್ಟು. ಅಂದರೆ ಏನರ್ಥ—ಸಮಾಜದ ಸುವ್ಯವಸ್ಥಿತವಾಗಿದ್ದರೆ ಎಲ್ಲ ಅಪರಾಧಗಳೂ ತಟ್ಟನೆ ಮಾಯವಾಗುತ್ತವೆ. ಯಾಕೆಂದರೆ ಪ್ರತಿಭಟನೆ, ಪ್ರತಿರೋಧಗಳಿಗೆ ಅಂಥ ಸಮಾಜದಲ್ಲಿ ಕಾರಣವೇ ಇರಲ್ಲ. ಹಾಗಾಗಿ ಎಲ್ಲರೂ ನ್ಯಾಯವಂತರಾಗತಾರೆ. ಸ್ವಭಾವ ಅನ್ನುವುದು ಲೆಕ್ಕಕ್ಕೇ ಇಲ್ಲ. ಸ್ವಭಾವವನ್ನ ಗಡೀಪಾರು ಮಾಡಿದಾರೆ! ಮನುಷ್ಯ ಕುಲ ಮುಖ್ಯವಲ್ಲ ಅವರಿಗೆ. ಮನುಷ್ಯ ಕುಲ ಚಾರಿತ್ರಿಕವಾಗಿ ಸಾಗುತ್ತ ಕೊನೆಗೊಮ್ಮೆ ತನ್ನ ಸಹಜ ಸಮಾಜವನ್ನು ಸೃಷ್ಟಿಸಿಕೊಂಡೀತು ಅನ್ನುವುದು ಮುಖ್ಯವಲ್ಲ.

ಗಣಿತದ ಬುದ್ಧಿ ರೂಪಿಸಿದ ಸಮಾಜ ವ್ಯವಸ್ಥೆ ಜಾರಿಗೆ ಬಂದು ಇಡೀ ಮನುಷ್ಯಕುಲವನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ನ್ಯಾಯಪರ, ಪಾಪರಹಿತ, ಸಮಾಜವಾಗಿಬಿಡುತ್ತದೆ ಅಂದುಕೊಂಡಿದಾರೆ. ಬದುಕಿನ ಕ್ರಮದ, ಚಾರಿತ್ರಿಕ ಬೆಳವಣಿಗೆಯ ಸಾವಧಾನಕ್ಕಿಂತ ವೇಗವಾಗಿ ಆಗುವ ಬದಲಾವಣೆ ಇದು. ಹಾಗಾಗಿ ಅವರಿಗೆ ಚರಿತ್ರೆಯನ್ನು ಕಂಡರೆ ಆಗುವುದಿಲ್ಲ. ಆಕ್ರೋಶ, ಮೂರ್ಖತನ ಬಿಟ್ಟರೆ ಚರಿತ್ರೆಯಲ್ಲಿ ಇನ್ನೇನೂ ಇಲ್ಲ ಅನ್ನತಾರೆ. ಅದಕ್ಕೇ ಅವರಿಗೆ ಬದುಕಿನ ಕ್ರಮ ಇಷ್ಟವಾಗಲ್ಲ.

ಜೀವಂತವಾದ ಆತ್ಮ ಅವರಿಗೆ ಮುಖ್ಯವಲ್ಲ. ಯಾಕೆಂದರೆ ಜೀವಂತ ಆತ್ಮವು ಯಾಂತ್ರಿಕ ವ್ಯವಸ್ಥೆಯನ್ನು ಒಪ್ಪಲ್ಲ, ಜೀವಂತಿಕೆ ಬೇಕು ಅನ್ನುತ್ತದೆ. ಆತ್ಮ ಅನ್ನುವುದು ಅನುಮಾನಾಸ್ಪದ, ಪ್ರಾಚೀನ ಕಾಲಕ್ಕೆ ಸೇರಿದ ಪ್ರತಿಗಾಮೀ ಸಂಗತಿ ಅನ್ನುತ್ತಾರೆ. ಯಾಂತ್ರಿವಾದ ಸಮಾಜದಲ್ಲಿ ಕೊಳೆತ ಹೆಣದ ವಾಸನೆ ಸ್ವಲ್ಪ ಇದ್ದೀತು. ಇಚ್ಛೆ ಇರುವುದಿಲ್ಲ. ಗುಲಾಮಗಿರಿ ಇರುತ್ತದೆ, ದಂಗೆ ಇರುವುದಿಲ್ಲ. ಇಟ್ಟಿಗೆಗಳನ್ನು ಜೋಡಿಸಿ ಕಟ್ಟಿದ, ಕಾರಿಡಾರು, ರೂಮುಗಳಲ್ಲಿ ಬದುಕುವ ಯಾಂತ್ರಿಕ ಸಮುದಾಯವಿರುತ್ತದೆ ಇಂಥ ಸಮುದಾಯಭವನ ಸಿದ್ಧವಾಗಿರಬಹುದು, ಆದರೆ ಮನುಷ್ಯ ಸ್ವಭಾವ ಮಾತ್ರ ಇಂಥ ಬದುಕಿಗೆ ಸಿದ್ಧವಾಗಿಲ್ಲ. ಅದಕ್ಕೆ ಬದುಕು ಬೇಕು. ಯಾಂತ್ರಿಕ ನ್ಯಾಯಪರತೆಯ ಸಮಾನ ಸಮಾಜದ ಸ್ಮಶಾನಕ್ಕೆ ಹೋಗಲು ಮನುಷ್ಯ ಸ್ವಭಾವ ಸಿದ್ಧವಾಗಿಲ್ಲ. ಕೇವಲ ತರ್ಕವನ್ನಿಟ್ಟುಕೊಂಡು ನಿಸರ್ಗವನ್ನು, ಸ್ವಭಾವವನ್ನು ಮೀರಲು ಸಾಧ್ಯವಿಲ್ಲ. ತರ್ಕ ಅನ್ನುವುದು ಮೂರು ಸಾಧ್ಯತೆಗಳನ್ನು ಕಾಣುತ್ತದೆ.

ಬದುಕಿನಲ್ಲಿ ಕೋಟಿಗಟ್ಟಲೆ ಸಾಧ್ಯತೆಗಳಿವೆ. ಅವನ್ನೆಲ್ಲ ಕತ್ತರಿಸಿ ಎಸೆದು ಬದುಕಿನ ಎಲ್ಲವನ್ನೂ ಸುಖದ ಪ್ರಶ್ನೆಯಾಗಿ ಮಾತ್ರ ನೋಡಿದರೆ ಉತ್ತರ ಹುಡುಕುವುದು ಸುಲಭ. ಎಲ್ಲವೂ ಸರಳ, ಸ್ಪಷ್ಟ, ಯೋಚನೆ ಮಾಡಬೇಕಾದ ಅಗತ್ಯವೇ ಇಲ್ಲ. ಬದುಕಿನ ನಿಗೂಢತೆ ಅನ್ನುವುದು ಬರಿಯ ಪುಸ್ತಕದ ಸರಕಾಗಿ ಉಳಿಯುತ್ತದೆ ಅಷ್ಟೇ!’

‘ಥೂ, ಇವನು ಮತ್ತೆ ಸರಪಳಿ ಕಳಚಿಕೊಂಡು ತುತ್ತೂರಿ ಊದುವುದಕ್ಕೆ ಶುರುಮಾಡಿದ! ಎರಡೂ ಕೈ ಹಿಡಿದು ಕಟ್ಟಿಹಾಕಬೇಕು ಇವನನ್ನ!’ ಪೋರ್ಫಿರೆ ನಕ್ಕ. ರಾಸ್ಕೋಲ್ನಿಕೋವ್ ಕಡೆಗೆ ತಿರುಗಿ, ‘ನಿನ್ನೆ ಸಾಯಂಕಾಲವೆಲ್ಲ ಹೀಗೇ ಇತ್ತು. ಒಂದು ಕೋಣೆಯಲ್ಲಿ ಆರು ಜನ ಹೀಗೇ ಚೀರಾಡುತ್ತ ಚರ್ಚೆಮಾಡುತ್ತಿದ್ದರು. ಜೊತೆಗೆ ಕುಡಿಯುವುದೂ ನಡದೇ ಇತ್ತು. ಹೇಗಿದ್ದಿರಬಹುದು, ಕಲ್ಪನೆ ಮಾಡಿಕೊಳ್ಳಕಾಗತ್ತ?—ಇಲ್ಲ ಬ್ರದರ್, ಇಲ್ಲ. ನೀನು ಹೇಳತಿರುವುದು ತಪ್ಪು. ಅಪರಾಧದಲ್ಲಿ ಪರಿಸರದ ಪಾತ್ರ ಬಹಳ ದೊಡ್ಡದು, ಅದು ನನ್ನ ಅನುಭವ.’

‘ಪರಿಸರದ ಪಾತ್ರ ದೊಡ್ಡದಿರಬಹುದು ಅಂತ ಗೊತ್ತು. ಆದರೆ ನೋಡು, ನಲವತ್ತು ವರ್ಷದವನು ಹತ್ತು ವರ್ಷದ ಹುಡುಗಿಯನ್ನ ಅತ್ಯಾಚಾರ ಮಾಡಿದರೆ ಪರಿಸರ ಅವನ ಕೈಯಲ್ಲಿ ಹಾಗೆ ಮಾಡಿಸಿತೇನು?’

‘ಹ್ಞೂಂ. ಕರೆಕ್ಟಾಗಿ ಹೇಳಬೇಕೆಂದರೆ ಹತ್ತು ವರ್ಷದ ಹುಡುಗಿಯ ಮೇಲೆ ನಡೆದ ಅತ್ಯಾಚಾರದ ಅಪರಾಧಕ್ಕೆ ‘ಪರಿಸರ’ ಕಾರಣ. ಅನ್ನುವದನ್ನ ಸಮರ್ಪಕವಾಗಿ ವಿವರಿಸಬಹುದು.’ ಪೋರ್ಫಿರೆ ಆಶ್ಚರ್ಯ ಹುಟ್ಟಿಸುವಷ್ಟು ಗಂಭೀರವಾಗಿ ಹೇಳಿದ
ರಝುಮಿಖಿನ್‍ ಗೆ ಮೈ ಮೇಲೆ ಪ್ರಜ್ಞೆ ಇರದಷ್ಟು ಆಕ್ರೋಶ ಬಂದಿತ್ತು.

‘ನಿನ್ನ ರೆಪ್ಪೆಯ ಬಿಳಿಯ ಬಣ್ಣಕ್ಕೆ ಇವಾನ್ ದಿ ಗ್ರೇಟ್‍ ನ ಪ್ರತಿಮೆ ಇನ್ನೂರೈವತ್ತು ಅಡಿ ಎತ್ತರ ಇರುವುದೇ ಕಾರಣ ಅಂತ ತರ್ಕಬದ್ಧವಾಗಿ, ಸ್ಪಷ್ಟವಾಗಿ, ಖಚಿತವಾಗಿ, ಪ್ರಗತಿಪರವಾಗಿ, ಸ್ವಲ್ಪ ಉದಾರವಾದೀ ಬಣ್ಣವನ್ನೂ ಬಳಿದು ವಿವರಿಸತೇನೆ. ಏನು ಬೆಟ್?’

‘ಒಪ್ಪಿದೆ. ಅದು ಹೇಗೆ ಸಾಧಿಸುತ್ತೀಯ?’

‘ಆಹಾ, ಮತ್ತೆ ಆಟ ಕಟ್ಟತಾ ಇದಾನೆ, ದೆವ್ವ ಹಿಡೀಲಿ! ರಝುಮಿಖಿನ್ ತಟ್ಟನೆದ್ದು, ಕೈ ಬೀಸುತ್ತ ಮಾತಾಡಿದ. ನಿನ್ನ ಜೊತೆ ಮಾತಾಡುವವರಿಗೆ ಬುದ್ಧಿ ಇಲ್ಲ! ಇವನು ಬೇಕು ಅಂತಲೇ ಹೀಗೆ ಮಾಡತಾನೆ, ರೋದ್ಯಾ! ನಿನ್ನೆ ಅವರನ್ನೆಲ್ಲ ಬೇಸ್ತು ಬೀಳಿಸಬೇಕು ಅಂತ ಅವರ ಥರ ಮಾತಾಡಿದ. ದೇವರೇ! ಏನೇನೆಲ್ಲ ಹೇಳತಾ ಇದ್ದ ನಿನ್ನೆ! ಅವರಿಗೆಲ್ಲ ಸಿಕ್ಕಾಪಟ್ಟೆ ಖುಷಿ! ಒಂದೊಂದು ಸಾರಿ ಎರಡೆರಡು ವಾರ ಇಂಥ ಆಟ ಕಟ್ಟತಾನೆ. ಹೋದ ವರ್ಷ ಏನು ಮಾಡಿದ ಗೊತ್ತಾ… ಯಾಕೆ ಮಾಡಿದನೋ ದೇವರಿಗೇ ಗೊತ್ತು… ಸಂನ್ಯಾಸಿ ಆಗತೇನೆ ಅಂತ ನಮಗೆಲ್ಲ ಹೇಳಿದ. ಎರಡು ತಿಂಗಳು ಸಂನ್ಯಾಸಿ ಥರ ಇದ್ದ! ಮೊನ್ನೆ ಮೊನ್ನೆ ಮದುವೆ ಆಗತಾ ಇದೀನಿ ಅಂತ ನಮ್ಮನ್ನೆಲ್ಲ ನಂಬಿಸಿದ. ಎಲ್ಲ ರೆಡಿ ಆಯಿತು. ಮದುವೆಗೆ ಸೂಟು ಕೂಡ ಹೊಲಿಸಿಕೊಂಡ. ನಾವೆಲ್ಲ ಕಂಗ್ರಾಟ್ಸ್ ಅಂದೆವು. ಏನಪ್ಪಾ ಅಂದರೆ ಮದುವೆ ಹೆಣ್ಣು ಮಾತ್ರ ಇರಲಿಲ್ಲ… ಬರೀ ನಾಟಕ!’

‘ಹ್ಞಾ, ಅದು ಸುಳ್ಳು! ಸೂಟು ಮೊದಲೇ ಹೊಲಿಸಿದ್ದೆ, ನಿಮ್ಮ ಕಾಲೆಳೆಯುವುದಕ್ಕೆ ಮದುವೆ ಸೂಟು ಅದು ಅಂದೆ.’

‘ನೀವು ಅಷ್ಟು ಚೆನ್ನಾಗಿ ವೇಷ ಕಟ್ಟತೀರಾ?’ ರಾಸ್ಕೋಲ್ನಿಕೋವ್ ಮಾಮೂಲಾಗಿ ಕೇಳಿದ.

‘ನನಗೆ ವೇಷ ಕಟ್ಟುವುದಕ್ಕೆ ಬರಲ್ಲ ಅಂದುಕೊಂಡಿರಾ? ತಾಳಿ, ನಿಮ್ಮನ್ನೂ ಮರುಳು ಮಾಡತೇನೆ.-ಹಾ ಹಾ ಹ್ಞಾ! ಇಲ್ಲಾ, ನೋಡೀ ನಿಮಗೆ ಪೂರಾ ಸತ್ಯ ಹೇಳಿಬಿಡತೇನೆ! ಈ ಎಲ್ಲ ಪ್ರಶ್ನೆಗಳ ಮಾತು, ಅಪರಾಧ, ಪರಿಸರ, ಹತ್ತು ವರ್ಷದ ಹುಡುಗಿ ಇವೆಲ್ಲಾ ಪ್ರಶ್ನೆ ಬಂದದ್ದು, ನನಗೆ ಈ ವಿಷಯಗಳ ಬಗ್ಗೆ ಇರುವ ಕುತೂಹಲದ ಜೊತೆಗೆ ನಿಮ್ಮ ಲೇಖನದಿಂದ. ಅದಕ್ಕೆ ಅಪರಾಧ… ಅಂತ ಏನೋ ಹೆಸರಿತ್ತು ಅದಕ್ಕೆ, ಮರೆತು ಹೋಗಿದೆ. ಅದನ್ನ ಎರಡು ತಿಂಗಳ ಹಿಂದೆ ಪೀರಿಯಾಡಿಕಲ್ ಡಿಸ್ಕೋರ್ಸ್ ಪತ್ರಿಕೆಯಲ್ಲಿ ನೋಡಿದ್ದೆ.’

‘ನನ್ನ ಲೇಖನ? ಪೀರಿಯಾಡಿಕಲ್ ಡಿಸ್ಕೋರ್ಸ್‍ ನಲ್ಲಿ?’ ರಾಸ್ಕೋಲ್ನಿಕೋವ್ ಆಶ್ಚರ್ಯದಿಂದ ಕೇಳಿದ. ನಾನು ಆರು ತಿಂಗಳ ಹಿಂದೆ ಯಾವುದೋ ಪುಸ್ತಕದ ವಿಮರ್ಶೆ ಬರೆದೆ, ನಾನು ಯೂನಿವರ್ಸಿಟಿ ಬಿಟ್ಟಾಗ ಅದನ್ನ ವೀಕ್ಲೀ ಡಿಸ್ಕೋರ್ಸ್‍ ಗೆ ಕಳಿಸಿದ್ದೆ, ಪೀರಿಯಾಡಿಕಲ್‍ ಗೆ ಅಲ್ಲ.’

‘ಆದರೂ ಅದು ಪೀರಿಯಾಡಿಕಲ್ ಡಿಸ್ಕೋರ್ಸ್‍ ನಲ್ಲಿ ಬಂದಿತ್ತು.’

‘ಅಲ್ಲಾ, ವೀಕ್ಲೀ ಡಿಸ್ಕೋರ್ಸ್ ನಿಂತು ಹೋಯಿತು!’

‘ನಿಜಾ, ಇವರೇ. ವೀಕ್ಲೀ ಡಿಸ್ಕೋರ್ಸು ನಿಂತು ಹೋಯಿತು. ಅದು ಪೀರಿಯಾಡಿಕಲ್ ಡಿಸ್ಕೋರ್ಸಿನ ಜೊತೆಯಲ್ಲಿ ಸೇರಿ ಹೋಯಿತು. ಹಾಗಾಗಿ ನಿಮ್ಮ ಲೇಖನ ಎರಡು ತಿಂಗಳ ಹಿಂದೆ ಪೀರಿಯಾಡಿಕಲ್ ಡಿಸ್ಕೋರ್ಸಿನಲ್ಲಿ ಬಂದಿತ್ತು. ನಿಮಗೆ ಗೊತ್ತಿರಲಿಲ್ಲವಾ?’

ರಾಸ್ಕೋಲ್ನಿಕೊವ್‍ ಗೆ ನಿಜವಾಗಲೂ ಗೊತ್ತಿರಲಿಲ್ಲ.

‘ಅಯ್ಯೋ ದೇವರೇ, ನಿಮ್ಮ ಲೇಖನ ಪ್ರಿಂಟು ಮಾಡಿದ್ದರೆ ಅವರ ಹತ್ತಿರ ದುಡ್ಡು ಕೇಳಬಹುದಾಗಿತ್ತು ನೀವು! ಎಂಥಾವರಪ್ಪಾ! ಎಷ್ಟು ಒಂಟಿಯಾಗಿ ಬದುಕತಾ ಇದೀರಿ ಅಂದರೆ ನೇರವಾಗಿ ನಿಮಗೆ ಸಂಬಂಧಪಟ್ಟ ವಿಚಾರ ಕೂಡ ನಿಮಗೆ ಗೊತ್ತಿಲ್ಲ. ಇದು ವಾಸ್ತವಾಂಶ.’

‘ಭೇಷ್ ರೋದ್ಯಾ! ನನಗೂ ಗೊತ್ತಿರಲಿಲ್ಲ!’ ರಝುಮಿಖಿನ್ ಉದ್ಗಾರ ತೆಗೆದ. ‘ಇವತ್ತು ರೀಡಿಂಗ್ ರೂಮಿಗೆ ಹೋಗಿ ಆ ಪೇಪರು ಹುಡುಕತೇನೆ! ಎರಡು ತಿಂಗಳ ಹಿಂದೆಯಾ? ತಾರೀಕು ಎಷ್ಟು? ಇರಲಿ, ನಾನೇ ಹುಡಕತೇನೆ! ಎಂಥಾ ಸುದ್ದಿ! ನನಗೂ ಹೇಳಲಿಲ್ಲ ಇವನು!’

‘ಲೇಖನ ನನ್ನದು ಅಂತ ಹೇಗೆ ಗೊತ್ತಾಯಿತು? ನನ್ನ ಇನಿಶಿಯಲ್ ಮಾತ್ರ ಇತ್ತಲ್ಲವೇ?’

‘ಅಕಸ್ಮಾತ್ತಾಗಿ ತಿಳಿಯಿತು. ಅದರ ಸಂಪಾದಕ ನನ್ನ ಪರಿಚಯಸ್ಥ. ಆ ವಿಷಯದಲ್ಲಿ ಕುತೂಹಲ ಜಾಸ್ತಿ ನನಗೆ.’

‘ಜ್ಞಾಪಕ ಇದೆ. ಅಪರಾಧ ನಡೆಯುವಷ್ಟೂ ಸಮಯದಲ್ಲಿ ಅಪರಾಧಿಯ ಮನಸ್ಥಿತಿ ಹೇಗಿರುತ್ತದೆ ಅನ್ನುವುದನ್ನು ಪರಿಶೀಲನೆ ಮಾಡಿದ್ದೆ.’

‘ಹೌದು. ಅಪರಾಧ ಮಾಡುವಾಗ ಅಪರಾಧಿ ರೋಗದಿಂದ ನರಳುತ್ತಿರತಾನೆ ಅಂದಿದ್ದೀರಿ. ಇದು ಒರಿಜಿನಲ್ ವಿಚಾರ. ಆದರೂ… ನನಗೆ ಆಸಕ್ತಿ ಹುಟ್ಟಿಸಿದ ಸಂಗತಿ ಬೇರೆಯೇ ಇದೆ. ಲೇಖನದ ಕೊನೆಗೆ ಸುಮ್ಮನೆ ಹಾಗೇ ಅನ್ನುವ ಹಾಗೆ ಅಸ್ಪಷ್ಟವಾಗಿ ಒಂದು ವಿಚಾರ ಸೂಚಿಸಿದ್ದೀರಿ. ಏನೆಂದರೆ, ನಿಮಗೆ ನೆನಪಿರಬಹುದು, ಅದನ್ನ ನೀವು ವಿವರಿಸಿಲ್ಲ, ಸುಮ್ಮನೆ ಸೂಚಿಸಿದ್ದೀರಿ ಅಷ್ಟೆ… ಈ ಲೋಕದಲ್ಲಿ ಕೆಲವು ವ್ಯಕ್ತಿಗಳಿದಾರೆ, ತುಂಬ ಸಮರ್ಥರು… ಸಮರ್ಥರು ಅನ್ನುವುದಕ್ಕಿಂತ ಎಲ್ಲ ಥರದ ಉಲ್ಲಂಘನೆ ಮಾಡುವ, ಅಪರಾಧ ಮಾಡುವ ಹಕ್ಕು ಇರುವವರು ಅವರು, ಕಾನೂನುಗಳು ಅವರಿಗೆ ಅನ್ವಯವಾಗುವಂತಿಲ್ಲ ಅಂದಿದ್ದೀರಿ.’

ತನ್ನ ವಿಚಾರವನ್ನು ಬೇಕೆಂದೇ ಬಲವಂತವಾಗಿ, ತಿರುಚಿ ಹೇಳಿದ್ದನ್ನು ಕೇಳಿ ರಾಸ್ಕೋಲ್ನಿಕೋವ್ ಸಣ್ಣದಾಗಿ ನಕ್ಕ.

‘ಹ್ಞಾ! ಏನು? ಅದು ಹೇಗೆ ಆಗತ್ತೆ? ಅಪರಾಧ ಮಾಡುವ ಹಕ್ಕು? ಅಪರಾಧ ಮಾಡುವ ಹಕ್ಕು ಕೂಡ ಇದೆಯಾ?’ ಕಣ್ಣಲ್ಲಿ ಭಯ ತುಂಬಿಕೊಂಡು ರಝುಮಿಖಿನ್ ಕೇಳಿದ.

‘ಉಹ್ಞುಂ, ಅಲ್ಲ, ಹಾಗಲ್ಲ,’ ಪೋರ್ಫಿರಿ ಉತ್ತರಿಸಿದ. ‘ಲೇಖನ ಏನು ಹೇಳತ್ತೆ ಅಂದರೆ ಮನುಷ್ಯರಲ್ಲಿ ಸಾಮಾನ್ಯರು, ಅಸಾಮಾನ್ಯರು ಅಂತ ಎರಡು ಥರ ಇರತಾರೆ, ಸಾಮಾನ್ಯರಾದವರು ಯಾವಾಗಲೂ ವಿಧೇಯವಾಗಿ ಬದುಕಬೇಕು, ಕಾನೂನನ್ನು ಮೀರುವ ಹಕ್ಕು ಅವರಿಗಿಲ್ಲ, ಯಾಕೆಂದರೆ ಅವರು ಸಾಮಾನ್ಯರು. ಅಸಾಮಾನ್ಯರು ಇರುತ್ತಾರಲ್ಲ ಅವರಿಗೆ ಎಲ್ಲ ಕಾನೂನು ಮೀರುವ, ಅಪರಾಧಮಾಡುವ ಹಕ್ಕು ಇರುತ್ತದೆ, ಯಾಕೆಂದರೆ ಅವರು ಅಸಾಮಾನ್ಯರು. ನೀವು ಹೇಳಿದ್ದು ಇದೇ ಅಲ್ಲವೇ, ಅಥವಾ ನಾನೇ ತಪ್ಪು ತಿಳಿದಿದ್ದೇನೋ?’

‘ಹ್ಞಾಂ? ಹೇಗೆ? ಉಹ್ಞೂಂ, ಸಾಧ್ಯವೇ ಇಲ್ಲ!’ ಗೊಂದಲದಲ್ಲಿ ಗೊಣಗಿದ ರಝುಮಿಖಿನ್.

ರಾಸ್ಕೋಲ್ನಿಕೋವ್ ಮತ್ತೆ ನಕ್ಕ. ಈ ಪ್ರಶ್ನೆ ಯಾಕೆ, ನನ್ನ ವಾದವನ್ನು ಎಲ್ಲಿಗೆ ಮುಟ್ಟಿಸುತ್ತಿದ್ದಾರೆ ಅನ್ನುವುದು ತಟ್ಟನೆ ಅವನಿಗೆ ಹೊಳೆಯಿತು. ಸವಾಲನ್ನು ಒಪ್ಪಿ ಎದುರಿಸುವ ತೀರ್ಮಾನಕ್ಕೆ ಬಂದ.

‘ನಾನು ಹೇಳಿದ್ದರ ಅರ್ಥ ಹಾಗಲ್ಲ,’ ರಾಸ್ಕೋಲ್ನಿಕೋವ್ ಸೌಜನ್ಯದಿಂದ, ಸರಳವಾಗಿ ಹೇಳಿದ. ‘ಆದರೂ ನೀವು ಸ್ವಲ್ಪದರಲ್ಲಿ ಹೇಳಿದ್ದು ಸರಿಯಾಗಿದೆ, ಬೇಕಾದರೆ ಸಂಪೂರ್ಣ ಸರಿಯಾಗಿದೆ ಅಂತ ಒಪ್ಪುತ್ತೇನೆ, (ಪೋರ್ಫಿರಿ ಹೇಳಿದ್ದು ಸಂಪೂರ್ಣ ಸರಿಯಾಗಿದೆ ಅನ್ನುವುದಕ್ಕೆ ತನಗೆ ಬಹಳ ಖುಷಿ ಅನ್ನುವ ಹಾಗೆ ಮಾತಾಡಿದ.) ‘ಒಂದು ವ್ಯತ್ಯಾಸ ಏನಪ್ಪ ಅಂದರೆ, ಅಸಾಮಾನ್ಯ ವ್ಯಕ್ತಿಗಳು ಎಲ್ಲ ಕಾಲದಲ್ಲೂ ಎಲ್ಲ ರೀತಿಯ ಅತಿರೇಕದ ಉಲ್ಲಂಘನೆಗಳನ್ನು ಮಾಡುವುದಕ್ಕೆ ಬದ್ಧರು ಅನ್ನುವ ಅರ್ಥದಲ್ಲಿ ನೀವು ಹೇಳಿದಿರಲ್ಲ, ಅದು ನನ್ನ ಮಾತಲ್ಲ. ನಾನು ಹಾಗೆ ಬರೆದಿದ್ದರೆ ನನ್ನ ಲೇಖನವನ್ನು ಪ್ರಕಟಿಸಲು ಯಾರೂ ಒಪ್ಪುತ್ತಿರಲಿಲ್ಲ. ಅಸಾಮಾನ್ಯ ವ್ಯಕ್ತಿಗೆ ಮೀರುವ ಹಕ್ಕು ಇರಬೇಕು ಅಂತ ಸೂಚಿಸಿದ್ದೇನೆ, ಅಷ್ಟೆ.

ಅಸಾಮಾನ್ಯ ವ್ಯಕ್ತಿಗೆ ಬರುವ ಕೆಲವು ವಿಚಾರಗಳು ಇಡೀ ಮನುಷ್ಯ ಕುಲಕ್ಕೇ ಒಳಿತು ಮಾಡುವಂಥವಿರಬಹುದು. ಆ ವಿಚಾರಗಳನ್ನು ಕಾರ್ಯರೂಪಕ್ಕೆ ತರುವಾಗ ಕೆಲವು ಅಡೆತಡೆಗಳನ್ನು ಮೀರುವ ಹಕ್ಕು, ಅಧಿಕಾರದಿಂದಲೋ ಕಾನೂನಿನಿಂದಲೋ ಬಂದ ಹಕ್ಕಲ್ಲ, ಉಲ್ಲಂಘನೆಯ ಅಪರಾಧವನ್ನು ಮಾಡುವುದಕ್ಕೆ ತಮ್ಮ ಪ್ರಜ್ಞೆಗೆ ತಾವೇ ಅವಕಾಶ ಮಾಡಿಕೊಡುವ ಹಕ್ಕು, ಅಂಥವರಿಗೆ ಇರಬೇಕು; ಆಗ ಮಾತ್ರ ಅವರ ವಿಚಾರ, ಕಲ್ಪನೆಗಳಿಂದ ಮನುಷ್ಯಕುಲಕ್ಕೆ ಒಳಿತಾಗುತ್ತದೆ. ನಾನು ಹೇಳಿದ್ದು ಇಷ್ಟೇ. ನನ್ನ ಲೇಖನ ಸ್ಪಷ್ಟವಾಗಿಲ್ಲ ಅಂದಿರಿ. ನನ್ನ ಕೈಯಲ್ಲಿ ಎಷ್ಟಾಗುತ್ತದೋ ಅಷ್ಟರ ಮಟ್ಟಿಗೆ ವಿಷಯವನ್ನು ನಿಮಗೆ ಸ್ಪಷ್ಟಮಾಡುತ್ತೇನೆ. ನೀವೂ ಅದನ್ನೇ ಬಯಸುತ್ತೀರಿ ಅಂತ ತಿಳಿದಿದ್ದೇನೆ.

ಕೆಪ್ಲರ್ ಅಥವ ನ್ಯೂಟನ್‍ ನ ಸಂಶೋಧನೆಗಳು ಜಗತ್ತಿಗೆ ತಿಳಿಯಬೇಕಾದರೆ ಅದಕ್ಕೆ ಅಡ್ಡಿಯಾಗಿರುವ ಒಬ್ಬ ಅಥವ ಹತ್ತು ಅಥವ ನೂರು ಜನರ ಜೀವ ತೆಗೆಯದೆ ಬೇರೆ ದಾರಿಯೇ ಇಲ್ಲ ಎಂದಾಗಿದ್ದರೆ ಆಗ ನ್ಯೂಟನ್ ತನ್ನ ಸಂಶೋಧನೆಯು ಮನುಷ್ಯ ಕುಲಕ್ಕೆ ತಿಳಿಯುವಂತಾಗಲು ಆ ಒಬ್ಬ, ಹತ್ತು, ಅಥವ ನೂರು ಜನರನ್ನು ನಿವಾರಿಸುವುದು ಅವನ ಹಕ್ಕು ಮಾತ್ರವಲ್ಲ ಕರ್ತವ್ಯವೂ ಆಗಿರುತ್ತಿತ್ತು. ಇದರ ಅರ್ಥ ನ್ಯೂಟನ್‍ ಗೆ ತನ್ನಿಷ್ಟ ಬಂದ ಹಾಗೆ ಜನರನ್ನು ಕೊಲ್ಲುವ ಹಕ್ಕು ಇದೆ ಅಥವ ಬೀದಿಯಲ್ಲಿ ಓಡಾಡುವ ಜನರನ್ನೆಲ್ಲ ದೋಚುವ ಹಕ್ಕು ಇದೆ ಎಂದಲ್ಲ. ನನ್ನ ಲೇಖನದಲ್ಲಿ ವಿವರಿಸಿದ ಮುಖ್ಯ ಸಂಗತಿ ನೆನಪಾಗುತ್ತಿದೆ. ಏನೆಂದರೆ, ಮನುಷ್ಯಕುಲಕ್ಕೆ ಕಟ್ಟಳೆ, ಕಾನೂನು, ಸಂಹಿತೆಗಳನ್ನು ನೀಡಿದ ಎಲ್ಲರೂ, ಅತಿ ಪ್ರಾಚೀನ ಕಾಲದಿಂದ ಹಿಡಿದು ಎಲ್ಲ ಲೈಸರ್ಗೀಸ್, ಸೊಲೋನ್, ಮಹಮ್ಮದ್, ನೆಪೋಲಿಯನ್‍ ಎಲ್ಲರೂ ಕಟ್ಟಳೆ, ಕಾನೂನು ಮೀರಿದವರೇ ಆಗಿದ್ದರು, ಅಪರಾಧಿಗಳಾಗಿದ್ದರು. ಯಾಕೆಂದರೆ ಅವರೆಲ್ಲರೂ ಹೊಸ ಕಾನೂನುಗಳನ್ನು ನೀಡುವಾಗ ಹಳೆಯ ಕಾನೂನುಗಳನ್ನು ಮುರಿದರು, ಹೊಸ ಸಂಹಿತೆ, ಹೊಸ ಕಟ್ಟಳೆಗಳನ್ನು ರೂಪಿಸುವಾಗ ಸಮಾಜವು ಪವಿತ್ರವೆಂದು ಭಾವಿಸಿದ್ದ, ತಂದೆ ತಾತಂದಿರು ಪಾಲಿಸಿದ್ದ ಹಳೆಯ ಸಂಹಿತೆ, ಕಟ್ಟಳೆಗಳನ್ನು ಮುರಿದರು, ತಮ್ಮ ಗುರಿ ಸಾಧನೆಗೆ ರಕ್ತಪಾತಕ್ಕೂ ಹಿಂಜರಿಯಲಿಲ್ಲ.

ಪ್ರಾಚೀನ ಕಟ್ಟಳೆಗಳನ್ನು ಪ್ರಾಮಾಣಿಕವಾಗಿ ನಂಬಿದ್ದ ಮುಗ್ಧ ಜನರ ರಕ್ತ ಸುರಿಸಲಿಲ್ಲವೇ ಅವರು? ಗಮನಿಸಬೇಕಾದ ಮಾತೆಂದರೆ ಮನುಷ್ಯಕುಲದ ಸ್ಥಾಪಕರು, ದೀಪಕರು ಎಲ್ಲರೂ ಭಯಂಕರ ರಕ್ತಪಾತಕ್ಕೆ ಕಾರಣರಾಗಿದ್ದಾರೆ. ಮಹಾಪುರುಷರು ಮಾತ್ರವಲ್ಲ, ಸಾಮಾನ್ಯರು ತುಳಿಯದ ಹಾದಿಯಲ್ಲಿ ಸಾಗುವ ಎಲ್ಲರೂ, ಒಂದಿಷ್ಟಾದರೂ ಹೊಸತನ್ನು ಹೇಳಬಲ್ಲ ಸಾಮರ್ಥ್ಯವಿರುವವರು ತಮ್ಮ ಸ್ವಭಾವದ ಕಾರಣದಿಂದಲೇ ಅಪರಾಧಿಗಳಾಗುವುದನ್ನು, ಕಟ್ಟಳೆಗಳನ್ನು ಮೀರುವವರಾಗುವುದನ್ನು ತಪ್ಪಿಸಿಕೊಳ್ಳಲಾರರು. ಇದು ಬಲುಮಟ್ಟಿಗೆ ಖಚಿತವಾದ ಸಂಗತಿ. ಇಲ್ಲದಿದ್ದರೆ ಸವೆದ ಹಾದಿಯನ್ನು ಬಿಟ್ಟು ಹೊಸ ಹಾದಿ ಹಿಡಿಯುವುದಕ್ಕೆ ಅವರಿಗೆ ಸಾಧ್ಯವಾಗುತ್ತಲೇ ಇರಲಿಲ್ಲ. ಹಳೆಯ ಹಾದಿಯಲ್ಲಿ ಸಾಗಲು ಅವರು ಒಪ್ಪುತ್ತಲೂ ಇರಲಿಲ್ಲ. ಹಳೆಯ ಹಾದಿಯನ್ನು ಒಪ್ಪದಿರುವುದು ನನ್ನ ಅಭಿಪ್ರಾಯದಲ್ಲಿ ಅವರ ಕರ್ತವ್ಯವೇ ಆಗಿದೆ. ಹಾಗೆ ನೋಡಿದರೆ ಇದರಲ್ಲೆಲ್ಲ ಹೊಸತೇನೂ ಇಲ್ಲ. ಇದನ್ನೆಲ್ಲ ಸಾವಿರಾರು ಸಲ ಬರೆದಿದ್ದಾರೆ, ಓದಿದ್ದಾರೆ. ಜನರನ್ನು ನಾನು ಸಾಮಾನ್ಯರು, ಅಸಾಮಾನ್ಯರು ಎಂದು ವಿಂಗಡಿಸಿರುವುದರಲ್ಲಿ ಸ್ಪಷ್ಟತೆ ಇಲ್ಲ, ಖಚಿತತೆ ಇಲ್ಲ ಅನ್ನುವುದನ್ನು ಒಪ್ಪುತ್ತೇನೆ. ಅವರೆಷ್ಟು ಜನ ಇದ್ದಾರೆ, ಇವರೆಷ್ಟು ಜನ ಇದ್ದಾರೆ ಅನ್ನುವ ಖಾನೇಶುಮಾರಿ ನನಗೆ ಮುಖ್ಯವಲ್ಲ. ಸಾಮಾನ್ಯ-ಅಸಾಮಾನ್ಯ ಅನ್ನುವ ವಿಂಗಡಣೆ ಮಾತ್ರ ಮುಖ್ಯ.

ಜನರನ್ನು ಸಾಮಾನ್ಯವಾದ ರೀತಿಯಲ್ಲಿ, ನಿಸರ್ಗದ ನಿಯಮಕ್ಕೆ ಅನುಸಾರವಾಗಿ ಎರಡು ವರ್ಗಗಳಲ್ಲಿ ವಿಂಗಡಿಸಿಕೊಳ್ಳುವುದು ಮುಖ್ಯ: ಕೆಳಗಿನ ವರ್ಗದವರು, ಅಥವ ಸಾಮಾನ್ಯರು, ತಮ್ಮಂಥವರೇ ಜೀವಿಗಳನ್ನು ಹುಟ್ಟಿಸುವ ಕೆಲಸಕ್ಕೆ, ಮನುಷ್ಯ ವಂಶಾಭಿವೃದ್ಧಿಯ ಮುಖ್ಯ ಉದ್ದೇಶಕ್ಕಾಗಿ ಇರುವವರು. ಇನ್ನೊಂದು ವರ್ಗ ನಿಜವಾದ ಮನುಷ್ಯರದ್ದು, ಅಸಾಮಾನ್ಯರದ್ದು. ಅವರು ತಮ್ಮ ಪರಿಸರದಲ್ಲಿ ನಿಜವಾಗಲೂ ಹೊಸತಾದ ಮಾತು ಆಡುವ ಕೌಶಲವನ್ನೋ ವರವನ್ನೋ ಪಡೆದಿರುವವರು. ಸಹಜವಾಗಿಯೇ ಈ ಎರಡು ವರ್ಗಗಳಲ್ಲಿ ಅಸಂಖ್ಯವಾದ ಉಪವಿಭಾಗಗಳಿವೆ. ಆದರೂ ಎರಡೂ ವರ್ಗಗಳ ಸಾಮಾನ್ಯ ಲಕ್ಷಣಗಳು ಸ್ಪಷ್ಟವಾಗಿಯೇ ಇವೆ.

ಮೊದಲನೆಯ ವರ್ಗಕ್ಕೆ ಸೇರಿದವರು, ಅಥವಾ ಸಾಮಾನ್ಯರು, ಸ್ವಭಾವತಃ ಸಂಪ್ರದಾಯವಾದಿಗಳು, ನೆಮ್ಮದಿಯಾಗಿರುವವರು, ಗಂಭೀರವಾಗಿರುವವರು, ವಿಧೇಯರು, ವಿಧೇಯರಾಗಿರಲು ಬಯಸುವವರು. ವಿಧೇಯರಾಗಿರುವುದು ಅವರ ಕರ್ತವ್ಯ, ಯಾಕೆಂದರೆ ಅದು ಅವರ ವಿಧಿ, ವಿಧೇಯರಾಗಿರುವುದು ಅವಮಾನ ಎಂದು ಅನಿಸುವುದಿಲ್ಲ ಅವರಿಗೆ. ಎರಡನೆಯ ವರ್ಗಕ್ಕೆ ಸೇರಿದವರು ಮೀರುವ ಸ್ವಭಾವದವರು, ಕಾನೂನು, ಸಂಪ್ರದಾಯ ಇತ್ಯಾದಿಗಳನ್ನೆಲ್ಲ ಮೀರುತ್ತಾರೆ. ಅಥವಾ ತಮ್ಮ ಸಾಮರ್ಥ್ಯಕ್ಕೆ ತಕ್ಕ ಹಾಗೆ ನಾಶಮಾಡಲು ಬಯಸುತ್ತಾರೆ. ಅವರ ಅಪರಾಧಗಳು, ಉಲ್ಲಂಘನೆಗಳು ಸಹಜವಾಗಿಯೇ ಸಾಪೇಕ್ಷವಾಗಿರತವೆ, ಬಗೆಬಗೆಯಾಗಿರುತ್ತವೆ. ವರ್ತಮಾನಕ್ಕಿಂತ ಉತ್ತಮವಾದದ್ದನ್ನು ಸಾಕ್ಷಾತ್ತು ಮಾಡಿಕೊಳ್ಳುವುದಕ್ಕಾಗಿ ಈಗ ಇರುವುದನ್ನು ಬಗೆಬಗೆಯಾಗಿ ನಾಶಮಾಡುವುದಕ್ಕೆ ತೊಡಗುತ್ತಾರೆ. ಅಂಥ ಅಸಾಮಾನ್ಯ ವ್ಯಕ್ತಿ ತನ್ನ ಗುರಿಯನ್ನು ಸಾಧಿಸುವುದಕ್ಕಾಗಿ ಹೆಣಗಳ ಮೇಲೆ ಹೆಜ್ಜೆ ಹಾಕುವುದೂ ರಕ್ತದ ಹೊಳೆಯಲ್ಲಿ ಕಾಲಿಟ್ಟು ನಡೆಯುವುದೂ ಅಗತ್ಯವಾದರೆ ಹಾಗೇ ಮಾಡು ಎಂದು ಅಂತಸ್ಸಾಕ್ಷಿಗೆ ಅನುಮತಿ ಕೊಡುವ ಹಕ್ಕು ಅವನಿಗೆ ಇರಬೇಕು. ನನ್ನ ಕೇಳಿದರೆ ಆ ಅಸಾಮಾನ್ಯ ರಕ್ತದ ಹೊಳೆ ದಾಟಬೇಕು, ಹೆಣದ ಮೇಲೆ ಹೆಜ್ಜೆ ಹಾಕಬೇಕು, ಅದು ಅವನ ವಿಚಾರದ ಗಹನತೆಗೆ ಅನುಗುಣವಾಗಿರಬೇಕು.

ಈ ಅರ್ಥದಲ್ಲಿಯಷ್ಟೇ ಅಸಾಮಾನ್ಯರಿಗೆ ಅಪರಾಧಮಾಡುವ, ಕಟ್ಟಳೆ ಮೀರುವ ಹಕ್ಕು ಇರಬೇಕು ಎಂದು ನನ್ನ ಲೇಖನದಲ್ಲಿ ಹೇಳಿದ್ದೇನೆ. ಏನೇ ಇರಲಿ, ಹೆದರುವ ಕಾರಣವಿಲ್ಲ, ಯಾಕೆಂದರೆ ಜನಸಮೂಹವು ಅಸಾಮಾನ್ಯರ ಈ ಹಕ್ಕನ್ನು ಎಂದೂ ಗುರುತಿಸಿ ಮಾನ್ಯಮಾಡುವುದೇ ಇಲ್ಲ. ಜನರು ಅಸಾಮಾನ್ಯರನ್ನು ನೇಣಿಗೇರಿಸುತ್ತಾರೆ, ಹಾಗೆ ಮಾಡಿ ಸಾಂಪ್ರದಾಯಿಕತೆಯ ಉದ್ದೇಶವನ್ನು ಸರಿಯಾಗಿ ನಿರ್ವಹಿಸುತ್ತಾರೆ. ಆದರೂ ಮುಂದಿನ ತಲೆಮಾರುಗಳ ಸಾಮಾನ್ಯರು ಉಲ್ಲಂಘನೆಯ ಅಪರಾಧಗಳಿಗಾಗಿ ಶಿಕ್ಷೆಗೆ ಒಳಗಾದವರನ್ನು ಹೊಗಳಿ ಅಟ್ಟಕ್ಕೇರಿಸಿ ಪೂಜೆ ಮಾಡುತ್ತಾರೆ. ಮೊದಲನೆಯ ವರ್ಗಕ್ಕೆ ಸೇರಿದ ಸಾಮಾನ್ಯರು ಎಂದೆಂದಿಗೂ ವರ್ತಮಾನದ ಒಡೆಯರು. ಎರಡನೆಯ ವರ್ಗದ ಅಸಾಮಾನ್ಯರು ಭವಿಷ್ಯದ ಒಡೆಯರು. ಸಾಮಾನ್ಯರು ಜಗತ್ತನ್ನು ಪೊರೆಯುತ್ತಾರೆ, ಸಂತತಿಯನ್ನು ಬೆಳೆಸುತ್ತಾರೆ. ಅಸಾಮಾನ್ಯರು ಜಗತ್ತನ್ನು ಒಂದು ಗುರಿಯತ್ತ ನಡೆಸುತ್ತಾರೆ, ನಾಯಕತ್ವ ವಹಿಸಿಕೊಳ್ಳುತ್ತಾರೆ. ಸಾಮಾನ್ಯರು, ಅಸಾಮಾನ್ಯರು ಈ ಇಬ್ಬರಿಗೂ ಬದುಕುವ ಪೂರ್ಣ ಹಕ್ಕು ಇದೆ. ನನ್ನ ಮಟ್ಟಿಗೆ ಎಲ್ಲ ಮನುಷ್ಯರ ಹಕ್ಕುಗಳೂ ಸಮಾನವಾದವು – [ಕ್ರಿಸ್ತ ಮತ್ತು ಕ್ರಿಸ್ತನ ಅನುಯಾಯಿಗಳ ಆಳ್ವಿಕೆಗೆ ಒಳಪಟ್ಟ] ಹೊಸ ಜರುಸಲೆಂ ಸೃಷ್ಟಿಯಾಗುವವರೆಗೆ!’

‘ಹಾಗಾದರೆ ಹೊಸ ಜೆರುಸಲೆಂ ಬಗ್ಗೆ ಇನ್ನೂ ನಂಬಿಕೆ ಇದೆ?’

‘ಇದೆ.’ ಕಾರ್ಪೆಟ್ಟಿನ ಮೇಲೆ ಯಾವುದೋ ಒಂದು ಬಿಂದುವನ್ನು ಹುಡುಕಿಕೊಂಡು ಅದನ್ನೇ ನೋಡುತ್ತ ಹೇಳಿದ. ಮಾತನಾಡುತಿದ್ದಷ್ಟೂ ಹೊತ್ತೂ ಹಾಗೇ ಇದ್ದ.

‘ಮತ್ತೆ… ಮತ್ತೆ… ದೇವರನ್ನೂ ನಂಬುತ್ತೀರಿ? ಇಷ್ಟೊಂದು ಕುತೂಹಲ ತೋರಿಸುತ್ತಿರುವುದಕ್ಕೆ ಕ್ಷಮಿಸಿ.’

‘ನಂಬುತ್ತೇನೆ,’ ರಾಸ್ಕೋಲ್ನಿಕೋವ್ ಪೋರ್ಫಿರಿಯನ್ನು ನೋಡುತ್ತ ಹೇಳಿದ.

‘ಮತ್ತೆ… ಸತ್ತ ಲಾಝರೆಸ್ ಮರಳಿ ಬರುತ್ತಾನೆ ಅನ್ನುವುದನ್ನೂ…?’

‘ನಂಬುತ್ತೇನೆ. ಇದನ್ನೆಲ್ಲ ಯಾಕೆ ಕೇಳತೀರಿ?’

‘ಅಕ್ಷರಶಃ?’

‘ಅಕ್ಷರಶಃ.’

‘ಐ ಸೀ… ಕ್ಷಮಿಸಿ, ನೀವು ಆಗಲೇ ಹೇಳಿದಿರಲ್ಲ, ಅಂಥ ಅಪರಾಧ ಮಾಡಿದವರಿಗೆ ಯಾವಾಗಲೂ ಶಿಕ್ಷೆ ಆಗಿಲ್ಲ. ಕೆಲವರಂತೂ…’

‘ತಾವು ಬದುಕಿರುವಾಗಲೇ ಗೆಲುವು ಸಾಧಿಸಿದರು, ಅನ್ನುತ್ತೀರಾ? ಅವರು ಗೆದ್ದರು, ಹೌದು. ಗೆದ್ದಮೇಲೆ…’

‘ತಮಗೆ ತಾವೇ ಶಿಕ್ಷೆಕೊಟ್ಟುಕೊಂಡರು, ಅಲ್ಲವೇ?’

‘ಅಗತ್ಯ ಕಂಡರೆ ಶಿಕ್ಷೆ ಕೊಟ್ಟುಕೊಂಡರು. ನಿಜ ಹೇಳಬೇಕೆಂದರೆ ಅಸಾಮಾನ್ಯರು ಯಾವಾಗಲೂ ತಮ್ಮನ್ನೇ ಶಿಕ್ಷಿಸಿಕೊಂಡಿದಾರೆ. ನೀವು ಹೇಳಿದ್ದು ನಿಜವಾಗಲೂ ಜಾಣ ಮಾತು.’

‘ಥ್ಯಾಂಕ್ಸ್. ಇದನ್ನ ಸ್ವಲ್ಪ ಹೇಳಿ. ಸಾಮಾನ್ಯರು ಯಾರು ಅಸಾಮಾನ್ಯರು ಯಾರು ಅಂತ ಹೇಗೆ ನಿರ್ಧಾರ ಮಾಡುವುದು? ಹುಟ್ಟು ಮಚ್ಚೆ ಥರ ಏನಾದರೂ ಗುರುತು ಇರುತ್ತದೋ ಹೇಗೆ? ಏನು ಹೇಳುವುದಕ್ಕೆ ಹೊರಟೆ ಅಂದರೆ, ಹೊರನೋಟಕ್ಕೇ ಸ್ಪಷ್ಟವಾಗುವಂಥ ಲಕ್ಷಣನಾದರೂ ಇರಬೇಕು. ಕಾನೂನು ಹೇಳಿದ ಹಾಗೆ ನಡಕೊಳ್ಳುವ ನನ್ನ ಪ್ರಾಕ್ಟಿಕಲ್ ಕಸಿವಿಸಿ ಅರ್ಥಮಾಡಿಕೊಳ್ಳಿ. ಅಸಾಮಾನ್ಯರನ್ನ ಗುರುತು ಹಿಡಿಯುವ ಹಾಗೆ ವಿಶೇಷ ಉಡುಪು, ಲಾಂಛನ, ಇಂಥದ್ದೇನನ್ನಾದರೂ ಮಾಡಲು ಆಗುತ್ತದಾ?… ಯಾಕೆಂದರೆ, ಸಾಮಾನ್ಯನಾದವನೊಬ್ಬನು ತಾನು ಅಸಾಮಾನ್ಯ ಅಂತ ಭಾವಿಸಿಕೊಂಡು, ನೀವು ಹೇಳಿದ ಹಾಗೆ ‘ಅಡೆತಡೆಗಳನ್ನೆಲ್ಲ ನಿವಾರಿಸಿ’ಕೊಳ್ಳುವುಕ್ಕೆ ಶುರು ಮಾಡಿದರೆ ಎಂಥ ಗೊಂದಲ ಹುಟ್ಟಬಹುದು?’

‘ಹ್ಞಾಂ, ಬಹಳ ಸಾರಿ ಹೀಗಾಗಿದೆ! ಇದು ನೀವು ಆಗಲೇ ಹೇಳಿದ್ದಕ್ಕಿಂತ ಇನ್ನೂ ಜಾಣ ಮಾತು…’

‘ಥ್ಯಾಂಕ್ಸ್.’

‘ದಯವಿಟ್ಟು ಗಮನದಲ್ಲಿಟ್ಟುಕೊಳ್ಳಿ. ನಾನು ಸಾಮಾನ್ಯರು ಎಂದು ಕರೆದವರಲ್ಲಿ ಮಾತ್ರ ಇಂಥ ಗೊಂದಲ ಇರುತ್ತದೆ. ವಿಧೇಯತೆಯೇ ಅವರ ಪ್ರವೃತ್ತಿಯಾಗಿದ್ದರೂ, ಒಮ್ಮೊಮ್ಮೆ, ಹಸುಗಳಿಗೂ ಇರುವಂಥ ತುಂಟತನದ ಕಾರಣದಿಂದ ಸಾಮಾನ್ಯರಲ್ಲಿ ಕೆಲವರು ತಾವು ಹಳತನ್ನು ನಾಶಮಾಡಲು ಬಂದವರು, ಪ್ರಗತಿಪರರು, ಹೊಸ ವಾಕ್ಕು ನುಡಿಯಲು ಬಂದವರು ತಾವು ಎಂದು ಕಲ್ಪಿಸಿಕೊಳ್ಳುತ್ತಾರೆ. ಅದು ಅವರ ಪ್ರಾಮಾಣಿಕ ಭ್ರಮೆ. ಹಾಗೆಯೇ ನಿಜವಾದ ಹೊಸ ಮನುಷ್ಯರನ್ನು ಅವರು ಗುರುತುಹಿಡಿಯಲೂ ಆಗದವರು. ಹಳೆಯ ಕಾಲದವರು, ಹೊಸ ಮನುಷ್ಯರನ್ನು ಹುಚ್ಚರೆಂದು ಹೀಗಳೆಯುವುದೂ ಉಂಟು. ನನ್ನ ಕೇಳಿದರೆ ಅಸಾಮಾನ್ಯರೆಂದು ನಟಿಸುವ ಸಾಮಾನ್ಯರಿಂದ ಅಂಥ ಅಪಾಯವೇನೂ ಇಲ್ಲ. ಅವರ ಬಗ್ಗೆ ನೀವು ಹೆದರಬೇಕಾಗಿಯೂ ಇಲ್ಲ. ಯಾಕೆಂದರೆ ಅವರು ಒಂದು ಹೆಜ್ಜೆ ಮುಂದಿಟ್ಟರೆ ಎರಡು ಹೆಜ್ಜೆ ಹಿಂದೆ ಸರಿಯುತ್ತಾರೆ. ಅಸಾಮಾನ್ಯರ ಹಾಗೆ ಬಹಳ ಕಾಲ ನಟಿಸಲು ಸಾಧ್ಯವಿಲ್ಲ. ಆಗಾಗ ಅವರಿಗೆ ಚಾವಟಿಯಲ್ಲಿ ಹೊಡೆದು ನಿಮ್ಮ ಜಾಗ ಇದು ಅಂತ ತೋರಿಸುವ ಅಗತ್ಯ ಇದೆ. ಅಥವಾ ಅದೂ ಬೇಕಾಗಿಲ್ಲ. ಅವರು ತಮಗೆ ತಾವೇ ಶಿಕ್ಷೆ ಕೊಟ್ಟುಕೊಳ್ಳುತ್ತಾರೆ. ಯಾಕೆ ಅಂದರೆ ಸಭ್ಯಸ್ಥರು, ಕೆಲವರು ತಮ್ಮಂಥವರ ಸೇವೆ ಮಾಡುತ್ತಾರೆ, ಇನ್ನು ಕೆಲವರು ತಮಗೆ ತಾವೇ ಶಿಕ್ಷೆಕೊಟ್ಟುಕೊಳ್ಳುತ್ತಾರೆ, ಸಾರ್ವಜನಿಕವಾಗಿ ಬಗೆಬಗೆಯಲ್ಲಿ ಪಶ್ಚಾತ್ತಾಪ ವ್ಯಕ್ತಪಡಿಸುತ್ತಾರೆ, ಇಂಥವರ ಬಗ್ಗೆ ಹೆದರಿಕೆ ಬೇಕಿಲ್ಲ, ನಿಸರ್ಗದ ಕಾನೂನು ಅದು.

‘ಸದ್ಯ, ಕೊನೆಯ ಪಕ್ಷ ಸಾಮಾನ್ಯರ ವಿಷಯದಲ್ಲಿ ನೀವು ಭರವಸೆ ಕೊಟ್ಟಿದ್ದೀರಿ. ಏನಪ್ಪಾ ಅಂದರೆ, ಬೇರೆಯವರಿಗೆ ಚಾಕು ಹಾಕುವ ಹಕ್ಕು ಇರುವವರು, ನೀವು ಅಸಾಮಾನ್ಯರು ಅಂತ ಕರೆಯುತ್ತೀರಲ್ಲ ಅವರು, ಬಹಳ ಜನ ಇದ್ದಾರೋ? ಅಸಾಮಾನ್ಯರಿಗೆ ತಲೆಬಾಗಿ ವಂದಿಸುವುದಕ್ಕೆ ನಾನೇನೋ ಸಿದ್ಧ. ಆದರೂ ಅಂಥವರು ಬಹಳವಿದ್ದರೆ ಹೆದರಿಕೆ ಹುಟ್ಟುತ್ತದಲ್ಲವೇ?’

‘ಚಿಂತೆ ಮಾಡಬೇಡಿ,’ ರಾಸ್ಕೋಲ್ನಿಕೋವ್ ಮೊದಲಿನ ಧಾಟಿಯಲ್ಲೇ ಮುಂದುವರೆಸಿದ. ‘ಹೊಸ ವಿಚಾರಗಳೊಡನೆ, ನಿಜವಾದ ಹೊಸ ವಾಕ್ಕನ್ನು ನುಡಿಯುವ ಸಾಮರ್ಥ್ಯ ಇರುವವರು ಸ್ವಲ್ಪವಾದರೂ ಹೊಸತನ ಇರುವುದನ್ನು ನುಡಿಯುವವರು ಹುಟ್ಟುವುದು ತೀರ ತೀರಾ ಅಂದರೆ ತೀರ ಕಡಮೆ ಸಂಖ್ಯೆಯಲ್ಲಿ. ಈ ಎರಡೂ ವರ್ಗಗಳ, ಒಂದೊಂದೂ ವರ್ಗದ ಉಪವಿಭಾಗಗಳ ಜನ ಎಷ್ಟೆಷ್ಟು ಹುಟ್ಟಬೇಕು ಅನ್ನುವುದಕ್ಕೆ ಸ್ಪಷ್ಟವಾದ, ಖಚಿತವಾದ ನೈಸರ್ಗಿಕ ನಿಯಮಗಳು ಇರಲೇಬೇಕು. ಆ ನಿಯಮ ಏನು ಅನ್ನುವುದು ಸದ್ಯಕ್ಕಂತೂ ತಿಳಿದಿಲ್ಲ. ಮುಂದೆ ಖಂಡಿತ ತಿಳಿಯುತ್ತದೆ ಅನ್ನುವ ನಂಬಿಕೆ ಇದೆ.

ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿರುವ ಸಾಮಾನ್ಯರು ಜಗತ್ತಿನಲ್ಲಿ ತುಂಬಿರುವುದಕ್ಕೆ ಒಂದೇ ಕಾರಣ. ಏನೆಂದರೆ ವಿಶೇಷವಾದ ಪ್ರಯತ್ನಪಟ್ಟು, ವಿವಿಧ ಬಗೆಯ ಸಂಕರಗಳ ಪ್ರಯೋಗ ನಡೆಸಿ, ನಿಗೂಢ ನಿಯಮಗಳಿಗೆ ಅನುಸಾರವಾಗಿ ಸಾವಿಕ್ಕೊಬ್ಬರಾಗಿ ಜನಿಸುವ, ನಿಜವಾದ ಸ್ವಾತಂತ್ರ್ಯ ಕಿಂಚಿತ್ತಾದರೂ ಇರುವ ಮನುಷ್ಯನಿಗೆ ಅವರು ಜನ್ಮಕೊಡಬೇಕು. ಹೆಚ್ಚಿನ ಸ್ವಾತಂತ್ರ್ಯ ಇರುವವರು ಲಕ್ಷಕ್ಕೊಬ್ಬರು ಹುಟ್ಟಿಯಾರು. ಪ್ರತಿಭಾವಂತರು ಕೋಟಿಗೊಬ್ಬರು. ಮನುಷ್ಯ ಕುಲದ ಚರಿತ್ರೆಗೆ ಕಿರೀಟಪ್ರಾಯರಾಗುವ ಮಹಾನ್ ಪ್ರತಿಭಾವಂತರು ಹುಟ್ಟಲು ನಿಸರ್ಗದಲ್ಲಿ ಸಾವಿರಾರು ಕೋಟಿ ಪ್ರಯೋಗಗಳು ನಡೆಯಬೇಕು. ಇದೆಲ್ಲ ನಡೆಯುವ ಪ್ರಯೋಗಶಾಲೆಯಲ್ಲಿ ಇಣುಕಿ ನೋಡಿದವನಲ್ಲ ನಾನು. ಯಾವುದೋ ಒಂದು ನಿಗೂಢ ನಿಯಮ ಇರಲೇಬೇಕು, ಎಲ್ಲವೂ ಕೇವಲ ಆಕಸ್ಮಿಕವಾಗಿರಲಾರದು.’

‘ಏನಿದು? ನೀವಿಬ್ಬರೂ ಒಬ್ಬರ ಕಾಲು ಒಬ್ಬರು ಎಳೀತಾ ತಮಾಷೆ ಮಾಡತಿದೀರಾ? ರೋದ್ಯಾ, ಸೀರಿಯಸ್ಸಾಗಿ ಹೇಳತಾ ಇದೀಯಾ ನೀನು’ ರಝುಮಿಖಿನ್ ಕೇಳಿದ.

ರಾಸ್ಕೋಲ್ನಿಕೋವ್ ಮೌನವಾಗಿ ತಲೆ ಎತ್ತಿದ. ಮುಖದಲ್ಲಿ ದುಃಖವಿತ್ತು. ಉತ್ತರ ಹೇಳಲಿಲ್ಲ. ಮೌನ ದುಃಖದ ಈ ಮುಖ ಪೋರ್ಫಿರಿಯ ಮುಖಕ್ಕಿಂತ ತೀರ ಬೇರೆ ಥರ ಕಂಡಿತು ರಝುಮಿಖಿನ್‍ ಗೆ. ಪೋರ್ಫಿರಿಯ ಮುಖದಲ್ಲಿ ಮುಚ್ಚುಮರೆಯಿಲ್ಲದ ಆಕ್ರಮಣಶೀಲ, ಸೌಜನ್ಯರಹಿತ ಅಣಕವಿತ್ತು, ಅದು ಭಯ ಹುಟ್ಟಿಸುತಿತ್ತು.

‘ನಿಜವಾಗಲೂ ಇಬ್ಬರೂ ಗಂಭೀರವಾಗಿ ಮಾತಾಡುತಿದ್ದೀರಿ ಅಂತಾದರೆ, ನೋಡಿ… ಬ್ರದರ್, ನೀನು ಹೇಳಿದ್ದು ನಿಜ. ಇದರಲ್ಲೆಲ್ಲ ಹೊಸತೇನೂ ಇಲ್ಲ, ನಾವೂ ನೂರಾರು ಪುಸ್ತಕಗಳಲ್ಲಿ, ಭಾಷಣಗಳಲ್ಲಿ ಕೇಳಿದೇವೆ. ರಕ್ತಪಾತಕ್ಕೆ ಅಂತಸ್ಸಾಕ್ಷಿಯ ಅನುಮತಿ ಇದ್ದರೆ ಸಾಕು ಅನ್ನುವುದು, ನಿಜವಾಗಲೂ ಒರಿಜಿನಲ್ ಮಾತು, ನೀನು ಮಾತ್ರ ಹೇಳಿರುವ ಮಾತು. ಇದನ್ನು ಒಂದು ಥರ ದುರಭಿಮಾನದಿಂದ ಅನ್ನುವ ಹಾಗೆ ಹೇಳುತ್ತೀಯ… ಇದು ಅಧಿಕೃತ ಕಾನೂನುಬದ್ಧ ರಕ್ತಪಾತಕ್ಕಿಂತ ಭಯಂಕರವಾಗಿದೆ,’ ಅಂದ ರಝುಮಿಖಿನ್.

‘ನಿಜ, ನಿಜ,’ ಪೋರ್ಫಿರಿ ಪ್ರತಿಧ್ವನಿ ಕೊಟ್ಟ.

‘ಇಲ್ಲ, ಇಲ್ಲ. ನಿನ್ನ ಯೋಚನೆಗಳಲ್ಲಿ ಕೊಚ್ಚಿಕೊಂಡು ಹೋಗಿದೀಯ! ಅದು ತಪ್ಪು ರೋದ್ಯಾ. ಓದತೇನೆ… ನೀನು ಮೈಮರೆತಿದೀಯ! ಇಂಥ ಮಾತು ನಿನ್ನಿಂದ ಬರಲಾರದು… ಓದತೇನೆ ನಾನು.’

‘ಅದೆಲ್ಲ ಲೇಖನದಲ್ಲಿಲ್ಲ. ನಾನು ಸುಮ್ಮನೆ ಸೂಚನೆ ಕೊಟ್ಟಿದೇನೆ, ಅಷ್ಟೆ,’ ಅಂದ ರಾಸ್ಕೋಲ್ನಿಕೋವ್.

‘ಸರಿ, ಸರಿ,’ ಪೋರ್ಫಿರಿಗೆ ಸುಮ್ಮನೆ ಕೂರಲು ಆಗಲಿಲ್ಲ. ‘ಅಪರಾಧವನ್ನು ನೀವು ಯಾವ ದೃಷ್ಟಿಯಿಂದ ನೋಡುತ್ತೀರಿ ಅನ್ನುವುದು ಬಹಳ ಮಟ್ಟಿಗೆ ಸ್ಪಷ್ಟವಾಯಿತು… ಹೀಗೆ ಒತ್ತಾಯ ಮಾಡಿ ಕೇಳುತಾ ಇದೇನೆ, ತಪ್ಪು ತಿಳಿಯಬೇಡಿ… ನೀವು ಹೇಳಿದ ಸಾಮಾನ್ಯ-ಅಸಾಮಾನ್ಯ ಅನ್ನುವ ಎರಡು ವರ್ಗಗಳ ಬಗ್ಗೆ ನನಗೆ ಇದ್ದ ಗೊಂದಲ ತೋರಿಸಿ ತಿದ್ದಿದ್ದೀರಿ… ಸರಿ, ಆದರೆ… ವ್ಯಾವಹಾರಿಕವಾದ ಕೇಸುಗಳ ಬಗ್ಗೆ ನನಗೆ ಆತಂಕ ಇದೆ! ಯಾವನೋ ಒಬ್ಬ ಮನುಷ್ಯ, ಅಥವಾ ಯುವಕ, ಯಾವ ಕಾರಣಕ್ಕೋ ಏನೋ ತಾನೇ ಪ್ರಾಚೀನ ಕಾಲದಲ್ಲಿ ಸ್ಪಾರ್ಟನರನ್ನು ಸೂರ್ಯದೇವನ ಆಣತಿಯ ಮೇಲೆ ಆಳಿದ ಲೈಸರ್ಗಸ್ ಅಂದುಕೊಂಡು ಅಥವಾ ಭವಿಷ್ಯದ ಮಹಮದ್ ಅಂದುಕೊಂಡು ತನಗೆ ಎದುರಾಗುವ ಅಡ್ಡಿ ಆತಂಕಗಳನ್ನ, ಮನುಷ್ಯರನ್ನ ನಿವಾರಿಸತಾ ಹೋದರೆ ನನ್ನಂಥವರು, ಅಂದರೆ ನಾನು, ಸುದೀರ್ಘವಾದ ಹೋರಾಟಕ್ಕೆ ಸಿದ್ಧವಾಗಬೇಕು. ಅಪಾರವಾದ ಹಣ ಬೇಕು… ನನ್ನ ಮಾತಿನ ಅರ್ಥ ತಿಳಿಯಿತಲ್ಲವೇ?’

ಝಮ್ಯೊತೋವ್ ತಾನಿದ್ದ ಮೂಲೆಯಿಂದಲೇ ಬುಸುಗುಟ್ಟಿ ಸಿಟ್ಟು ತೋರಿಸಿದ. ರಾಸ್ಕೋಲ್ನಿಕೋವ್ ಅವನತ್ತ ನೋಡಲೂ ಇಲ್ಲ.
‘ಒಪ್ಪಲೇಬೇಕು,’ ರಾಸ್ಕೋಲ್ನಿಕೋವ್ ಶಾಂತವಾಗಿ ಉತ್ತರಿಸಿದ. ‘ಅಂಥ ಕೇಸುಗಳು ಖಂಡಿತವಾಗಿಯೂ ಇರುತ್ತವೆ. ಪೆದ್ದರು, ಅಹಂಕಾರಿಗಳು, ಅದರಲ್ಲೂ ವಿಶೇಷವಾಗಿ ಯುವಕರು ಹೀಗೆ ಆಡಬಹುದು.’

‘ಹಾಗಾದರೆ, ಸರಿ, ಆಮೇಲೇನು?’

‘ಆಮೇಲೆ ಏನೂ ಇಲ್ಲ,’ ಅನ್ನುತ್ತ ರಾಸ್ಕೋಲ್ನಿಕೋವ್ ಸಣ್ಣದಾಗಿ ನಕ್ಕ. ‘ಹಾಗೆ ನಡೆದರೆ ನನ್ನ ತಪ್ಪಲ್ಲ. ಯಾವಾಗಲೂ ಇದ್ದದ್ದು, ಯಾವಾಗಲೂ ಇರುವುದು ಹಾಗೇನೇ. (ರಝುಮಿಖಿನ್‍ ನತ್ತ ಕತ್ತು ವಾಲಿಸಿ ಮಾತಾಡಿದ) ಏನಾಯಿತು ಅದರಿಂದ? ನಿಮ್ಮ ಹತ್ತಿರ ಗಡೀಪಾರು ಶಿಕ್ಷೆ, ಸೆರೆಮನೆ, ಕೋರ್ಟು, ಪತ್ತೇದಾರರು, ಕಠಿಣ ಶ್ರಮದ ಜೈಲುಗಳು ಎಲ್ಲಾ ಇವೆಯಲ್ಲಾ? ಚಿಂತೆ ಯಾಕೆ? ಹೋಗಿ ಅಪರಾಧಿಗಳನ್ನ ಹಿಡಿಯಿರೀ!’

‘ಹಿಡಿದ ಮೇಲೆ?’

‘ಅಪರಾಧಿಗೆ ಆಗಬೇಕಾದದ್ದು ಆಗತ್ತೆ.’

‘ನಿಮ್ಮ ಮಾತು ತರ್ಕಬದ್ಧವಾಗೇ ಇದೆ. ಸರಿ, ಅವನ ಅಂತಸ್ಸಾಕ್ಷಿಯ ವಿಚಾರ ಏನು?’

‘ಅದನ್ನ ಕಟ್ಟಿಕೊಂಡು ನಿಮಗೇನಾಗಬೇಕು?’

‘ಮನುಷ್ಯ ಕುಲದ ವಿಚಾರ ಅದು.’

‘ಯಾವನಿಗೆ ಅಂತಸ್ಸಾಕ್ಷಿ ಇದೆಯೋ ಅವನು ತನ್ನ ತಪ್ಪು ಒಪ್ಪಿಕೊಂಡರೆ ಕೊರಗಿ ನೋಯುತ್ತಾನೆ. ಅದೇ ಅವನಿಗೆ ಶಿಕ್ಷೆ. ಜೊತೆಗೆ ನೀವು ಕೊಡುವ ಕಠಿಣ ಶಿಕ್ಷೆಗಳೂ ಇವೆಯಲ್ಲ.’

‘ನಿಜವಾದ ಪ್ರತಿಭೆ ಇರುವವರು, ಇನ್ನೊಬ್ಬರಿಗೆ ಚೂರಿ ಹಾಕುವ ಅಧಿಕಾರ ಯಾರಿಗೆ ಇದೆಯೋ ಅವರು, ಎಷ್ಟೇ ರಕ್ತ ಪಾತಕ್ಕೆ ಕಾರಣರಾದರೂ ವೇದನೆಪಡತಕ್ಕದ್ದಲ್ಲ, ನೋವು ತಿನ್ನತಕ್ಕದ್ದಲ್ಲ, ಅಲ್ಲವಾ?’ ರಝುಮಿಖಿನ್ ಹುಬ್ಬು ಗಂಟಿಕ್ಕಿ ಕೇಳಿದ.

‘ತಕ್ಕದ್ದಲ್ಲ ಅನ್ನುವ ಮಾತು ಯಾಕೆ? ಇಲ್ಲಿ ಅನುಮತಿಯ ಮಾತೂ ಇಲ್ಲ, ನಿಷೇಧದ ಮಾತೂ ಇಲ್ಲ. ತನಗೆ ಬಲಿಯಾದವರ ಬಗ್ಗೆ ಮರುಕವಿದ್ದರೆ ನೋವು ತಿನ್ನಲಿ… ಅಸಾಮಾನ್ಯ ವಿಶಾಲ ಹೃದಯಿಗಳ ಪಾಲಿಗೆ ವೇದನೆ, ನೋವು ಇವೆಲ್ಲ ಇದ್ದದ್ದೇ. ನಿಜವಾದ ಮಹಾಪುರುಷ ಮಹಾ ವೇದನೆಯನ್ನೇ ಅನುಭವಿಸುತ್ತಾನೆ… ಅನ್ನಿಸತ್ತೆ,’ ಅಂದು ರಾಸ್ಕೋಲ್ನಿಕೋವ್ ತಟಕ್ಕನೆ ವಿಷಾದದ ದನಿಯಲ್ಲಿ ಅಂದ. ಅದು ಸಂಭಾಷಣೆಯ ಮಾತಿನ ಹಾಗೂ ಇರಲಿಲ್ಲ.

ರಾಸ್ಕೋಲ್ನಿಕೋವ್ ಎದ್ದ. ಆಲೋಚನೆಯಲ್ಲಿ ಮುಳುಗಿದವನ ಹಾಗೆ ಕಣ್ಣೆತ್ತಿ ಎಲ್ಲರನ್ನೂ ನೋಡಿದ. ನಕ್ಕ. ಕ್ಯಾಪು ಎತ್ತಿಕೊಂಡ. ಅವನು ಬಂದಾಗ ಇದ್ದ ಸ್ಥಿತಿಗೆ ಹೋಲಿಸಿದರೆ ತೀರ ಶಾಂತವಾಗಿದ್ದ. ಅವನಿಗೂ ಹಾಗನ್ನಿಸಿತ್ತು. ಎಲ್ಲರೂ ಎದ್ದರು.

‘ನನ್ನ ಬೈದರೆ ಬೈದುಕೊಳ್ಳಿ, ನನ್ನ ಮೇಲೆ ಸಿಟ್ಟು ಬಂದರೆ ಸಿಟ್ಟು ಮಾಡಿಕೊಳ್ಳಿ. ನಿಮಗೆ ತೊಂದರೆ ಕೊಡುತ್ತಾ ಇದೇನೆ, ಗೊತ್ತು. ಆದರೂ ಒಂದು ಚಿಕ್ಕ ಪ್ರಶ್ನೆ ಕೇಳದೆ ಇರಲಾರೆ. ನನ್ನ ತಲೆಗೆ ಬಂದ ವಿಚಾರ ಮರೆತು ಹೋಗಬಾರದು ಅಂತ ಕೇಳತಾ ಇದೇನೆ,’ ಪೋರ್ಫಿರಿ ಅಂದ.’

‘ಸರಿ, ನಿಮ್ಮ ವಿಚಾರ ಹೇಳಿ,’ ಅಂದು ರಾಸ್ಕೋಲ್ನಿಕೋವ್ ಕಾಯುತ್ತ ನಿಂತ. ಅವನ ಬಿಳಿಚಿದ ಮುಖ ಗಂಭೀರವಾಗಿತ್ತು.

‘ಅಲ್ಲ… ನನಗೆ ನಿಜವಾಗಲೂ ಗೊತ್ತಿಲ್ಲ… ಹೇಗೆ ಹೇಳಲಿ ಅಂತ… ಎಂಥ ಹುಡುಗಾಟದ ವಿಚಾರ ಅಂದರೇ… ಮನಶ್ಶಾಸ್ತ್ರದ ವಿಚಾರ… ಏನಂದರೆ… ಹೇಳಲಾರೆ… ಹ್ಹೆ ಹ್ಹೆ ಹ್ಹೇ!- ಏನಂದರೇ ಆ ಲೇಖನ ಬರೆಯೋವಾಗ ನೀವು ಇಷ್ಟೇ ಇಷ್ಟು, ಒಂದಿಷ್ಟೇ ಆದರೂ ಸರಿ, ನೀವೇ ಅಸಾಮಾನ್ಯ ವ್ಯಕ್ತಿ ಅಂತ ಅಂದುಕೊಂಡಿದ್ದೀರಾ? ನಿಮ್ಮ ಅರ್ಥದಲ್ಲಿ ಹೊಸ ವಾಕ್ಕು ನುಡಿಯುವಂಥ ವ್ಯಕ್ತಿ ಅಂತ… ಅಂದರೆ… ಹೌದಾ?’

‘ಇರಬಹುದು,’ ರಾಸ್ಕೋಲ್ನಿಕೋವ್ ತಿರಸ್ಕಾರದಿಂದ ಅಂದ.

ರಝುಮಿಖಿನ್ ವಿಚಲಿತನಾದ.

‘ಹೌದಾದರೆ, ಲೌಕಿಕವಾದ ಸೋಲುಗಳಿಂದಲೋ, ಬಿಕ್ಕಟ್ಟಿನ ಪರಿಸ್ಥಿತಿಗಳ ಕಾರಣದಿಂದಲೋ ಅಥವಾ ಲೋಕಕ್ಕೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿಂದಲೋ ಅಡಚಣೆಗಳನ್ನು ದಾಟುವ ನಿರ್ಧಾರ… ಕೊಲೆ ಅಥವಾ ದರೋಡೆ ಮಾಡುವಂಥ ನಿರ್ಧಾರ ಮಾಡುವಂಥವರಾ ನೀವು?’ ಎಂದು ಕೇಳಿ, ಮೊದಲಿನ ಹಾಗೇ ಎಡಗಣ್ಣು ಮಿಟುಕಿಸಿ, ಸದ್ದಿಲ್ಲದೆ ನಕ್ಕ.

‘ಹಾಗೆ ತೀರ್ಮಾನ ಮಾಡಿದರೂ ಖಂಡಿತ ನಿಮಗೆ ಹೇಳುವವನಲ್ಲ,’ ರಾಸ್ಕೋಲ್ನಿಕೋವ್ ಉದ್ಧಟ ತಿರಸ್ಕಾರದ ದನಿಯಲ್ಲಿ ಅಂದ.

‘ಏನಿಲ್ಲ, ನಿಮ್ಮ ಲೇಖನ ಸರಿಯಾಗಿ ಅರ್ಥಮಾಡಿಕೊಳ್ಳೋಣ ಅಂತ ಬೌದ್ಧಿಕ ಕುತೂಹಲಕ್ಕೆ ಕೇಳಿದೆ, ಅಷ್ಟೆ. ಇನ್ನೇನೂ ಇಲ್ಲ,’ ಅಂದ ಪೋರ್ಫಿರಿ.

‘ಥೂ, ಇವನ ಮನಸಿನಲ್ಲಿರುವುದು ಸ್ಪಷ್ಟವಾಗಿ ತಿಳಿಯತ್ತೆ!’ ರಾಸ್ಕೋಲ್ನಿಕೋವ್ ಮನಸಿನಲ್ಲೇ ಅಂದುಕೊಂಡ.

‘ದಯವಿಟ್ಟು ಕೇಳಿ,’ ರಾಸ್ಕೋಲ್ನಿಕೋವ್ ಭಾವವಿಲ್ಲದ ದನಿಯಲ್ಲಿ ಹೇಳಿದ, ‘ನನ್ನನ್ನೇ ನಾನು ಮಹಮ್ಮದ್ ಅಂತಲೋ ನೆಪೋಲಿಯನ್ ಅಂತಲೋ ಅಂಥ ಇನ್ಯಾರೋ ಅಂತಲೋ ಅಂದುಕೊಂಡಿಲ್ಲ. ಹಾಗಾಗಿ ನಾನೇನು ಮಾಡಬಲ್ಲೆ ಎಂಬ ನಿಮ್ಮ ಪ್ರಶ್ನೆಗೆ ತಕ್ಕ ಉತ್ತರ ಕೊಡಲಾರೆ.’

‘ಅಯ್ಯೋ ದೇವರೇ! ನಮ್ಮ ರಶಿಯಾದಲ್ಲಿ ಈಗ ಯಾರು ತಾನೇ ನಾನೇ ನೆಪೊಲಿಯನ್ ಅಂದುಕೊಳ್ಳಲ್ಲ, ಹೇಳಿ?’ ಪೋರ್ಫಿರಿ ತಟ್ಟನೆ ಅತಿ ಪರಿಚಯದ ಸಲುಗೆಯಲ್ಲಿ ಮಾತಾಡಿದ. ಅವನ ಮಾತಿನ ದನಿಯಲ್ಲಿ ಈಗ ಏನೋ ಒಂದು ಸ್ಪಷ್ಟತೆ ಇತ್ತು.

‘ನಾನೇ ಭವಿಷ್ಯದ ನೆಪೋಲಿಯನ್ ಅಂದುಕೊಂಡ ಯಾವನೋ ಒಬ್ಬ ಗಿರವಿ ಮುದುಕಿ ಅಲ್ಯೋನ ಇವಾನೋವ್ನಾಳ ಕತೆ ಮುಗಸಿರಬಹುದಲ್ಲಾ?’ ಝೋಮ್ಯತೋವ್ ತಾನು ಕೂತಿದ್ದ ಮೂಲೆಯಿಂದಲೇ ತಟ್ಟನೆ ಅಂದ.

ರಾಸ್ಕೋಲ್ನಿಕೋವ್ ಸುಮ್ಮನಿದ್ದ. ಅವನ ಮೇಲೇ ದೃಷ್ಟಿ ಪೋರ್ಫಿರಿಯ ಮೇಲೇ ನೆಟ್ಟಿತ್ತು. ರಝುಮಿಖಿನ್ ಮಂಕಾಗಿ ಹುಬ್ಬುಗಂಟಿಕ್ಕಿಕೊಂಡಿದ್ದ. ಅವನಿಗೆ ಏನೋ ಹೊಳೆದ ಹಾಗಿತ್ತು. ಸಿಟ್ಟಿನಿಂದ ಸುತ್ತಲೂ ನೋಡಿದ. ಮೌನದ ಕ್ಷಣಗಳು ಕಳೆದವು. ರಾಸ್ಕೋಲ್ನಿಕೋವ್ ಹೊರಟ.

‘ಆಗಲೇ ಹೊರಟಿರಾ!’ ಪೋರ್ಫಿರಿ ಸವಿಯಾದ ದನಿಯಲ್ಲಿ ಸ್ನೇಹಪೂರ್ಣವಾಗಿ ಕೇಳುತ್ತ ಕೈ ಮುಂದೆ ಚಾಚಿದ. ‘ನಿಮ್ಮ ಪರಿಚಯವಾಗಿದ್ದು ನನಗೆ ತುಂಬ, ತುಂಬ ಸಂತೋಷ. ನಿಮ್ಮ ಕೆಲಸ ಏನಿದೆ ಅದು ಖಂಡಿತ ಆಗತ್ತೆ, ಅನುಮಾನವೇ ಬೇಡ. ನಾನು ಹೇಳಿದ ಥರ ಒಂದು ಅರ್ಜಿ ಕೊಡಿ.. ಅಥವ ಇನ್ನೂ ಒಳ್ಳೇದಂದರೆ ಯಾವತ್ತಾದರೂ, ಸಾಧ್ಯವಾದರೆ ನಾಳೆಯೇ ನಮ್ಮ ಕಛೇರಿಗೆ ಬನ್ನಿ. ಹನ್ನೊಂದು ಗಂಟೆ ಹೊತ್ತಿಗೆ ಮಾತಾಡಣ. ಯಾಕೆ ಅಂದರೆ ಅಲ್ಲಿ ಅವಳನ್ನ ಕೊನೇ ಸಾರಿ ನೋಡಿದವರು ನೀವೇ. ನಿಮ್ಮಿಂದ ಹೆಚ್ಚಿನ ವಿಷಯ ತಿಳಿಯಬಹುದು…’ ಎಂದು ವಿನಯದಲ್ಲೇ ಅಂದ.

‘ಅಧಿಕೃತವಾಗಿ ನನ್ನ ವಿಚಾರಣೆ ಮಾಡಬೇಕು ಅನ್ನುತ್ತೀರಾ?’ ರಾಸ್ಕೋಲ್ನಿಕೋವ್ ತಟಕ್ಕನೆ ಮೊನಚಾಗಿ ಕೇಳಿದ.

‘ವಿಚಾರಣೆ? ವಿಚಾರಣೆ ಯಾಕೆ? ಈಗ ಅದರ ಅಗತ್ಯ ಇಲ್ಲ. ನೀವು ನನ್ನ ತಪ್ಪು ತಿಳಿದಿರಿ.. ನೋಡೀ ನಾನು ಯಾವ ಅವಕಾಶಾನೂ ಕೈ ಬಿಡಲ್ಲ. ಅವಳ ಹತ್ತಿರ ಗಿರವಿ ಇಟ್ಟ ಮಿಕ್ಕವರನ್ನೆಲ್ಲ ಆಗಲೇ ಮಾತಾಡಿಸಿದೇನೆ… ಅವರ ಸಾಕ್ಷಿ ಪಡೆದಿದ್ದೇನೆ… ನೀವೇ ಕೊನೆಯವರಾದ್ದರಿಂದ… ಓ, ಹೌದು, ಅಂದ ಹಾಗೆ… ಅಂದ ಹಾಗೆ ..!’ ಏನೋ ಸಂತೋಷವಾದವರ ಹಾಗೆ ತಟ್ಟನೆ ‘ಹೋ!’ ಅಂದ. ‘ಅಂದ ಹಾಗೆ ಈಗ ನೆನಪಿಗೆ ಬಂತು… ಏನಾಗಿದೆ ನನಗೆ!’ ರಝುಮಿಖಿನ್‍ ನತ್ತ ತಿರುಗಿದ. ‘ನೀನು ಆ ಬಣ್ಣ ಬಳಿಯುವ ನಿಕೋಲಾಯ್ ನ ಬಗ್ಗೆ ನನ್ನ ಹತ್ತಿರ ವದರತಾನೇ ಇದ್ದೆ… ಆ ಹುಡುಗ ಏನೂ ತಪ್ಪು ಮಾಡಿಲ್ಲ ಅಂತ ನನಗೇ ಗೊತ್ತು… ರಾಸ್ಕೋಲ್ನಿಕೋವ್‍ ನತ್ತ ತಿರುಗಿದ, ‘ನಾನೇನು ಮಾಡಲೀ, ಮಿಟ್ಕಾನ ಕೂಡ ವಿಚಾರಿಸಬೇಕಾಯಿತು… ಏನಂದರೆ, ನೋಡಿ, ಅವತ್ತು ಸಾಯಂಕಾಲ… ಮಹಡಿ ಮೆಟ್ಟಿಲು ಮುಖ್ಯ… ಕ್ಷಮಿಸಿ, ನೀವು ಅಲ್ಲಿ ಎಂಟು ಗಂಟೆಗೆ ಮುಂಚೆ ಇದ್ದಿರಾ?’

‘ಎಂಟಕ್ಕೆ ಮೊದಲೇ,’ ರಾಸ್ಕೋಲ್ನಿಕೋವ್ ಉತ್ತರಿಸಿದ. ಹೇಳುತ್ತಿದ್ದ ಹಾಗೇ ನಾನು ಹೇಳಬಾರದಿತ್ತು ಅನ್ನುವ ಸಣ್ಣ ಕಸಿವಿಸಿಯೂ ಮೂಡಿತು.

‘ಹಾಗಾದರೆ, ಎಂಟಕ್ಕೆ ಮೊದಲು ಮೆಟ್ಟಿಲ ಮೇಲೆ ಸಾಗಿದ ನೀವು ಕೊನೆಯ ಪಕ್ಷ ಇಬ್ಬರು ಕೆಲಸಗಾರರನ್ನು ಖಾಲಿ ಅಪಾರ್ಟ್‍ಮೆಂಟಿನಲ್ಲಿ ನೋಡಿದ ನೆನಪು ಇದೆಯಾ?- ಎರಡನೆಯ ಮಹಡಿಯಲ್ಲಿ? ಅಥವಾ ಕೊನೆಯ ಪಕ್ಷ ಇಬ್ಬರಲ್ಲಿ ಒಬ್ಬರನ್ನ? ಅವರು ಮನೆಗೆ ಬಣ್ಣ ಬಳಿಯುತ್ತಿದ್ದರು. ನೋಡಲಿಲ್ಲವಾ? ಇದು ಅವರ ಮಟ್ಟಿಗೆ ತುಂಬ ಮುಖ್ಯವಾದ ವಿಚಾರ…’

‘ಬಣ್ಣ ಬಳಿಯೋರು? ಉಹ್ಞೂಂ. ಇಲ್ಲ, ನಾನು ನೋಡಲಿಲ್ಲ…’ ರಾಸ್ಕೋಲ್ನಿಕೋವ್ ನೆನಪು ಕೆದಕಿಕೊಳ್ಳುತ್ತಿರುವವನ ಹಾಗೆ ನಿಧಾನವಾಗಿ ಹೇಳಿದ. ಅದೇ ಹೊತ್ತಿಗೆ ಅವನ ಮೈಯ ಮಾಂಸಖಂಡಗಳೆಲ್ಲ ಬಿಗಿದುಕೊಂಡಿದ್ದವು. ಯಾವ ಹೆಜ್ಜೆಯಲ್ಲಿ ನಾನು ಬೋನಿಗೆ ಬೀಳುವ ಹಾಗೆ ಮಾಡುತ್ತಾರೋ… ಒಂದು ವಿವರವನ್ನೂ ಗಮನಿಸದೆ ಇರಬಾರದು ನಾನು ಅನ್ನುವ ಆತಂಕದಲ್ಲಿ ಒಳಗೇ ಹೆಪ್ಪುಗಟ್ಟಿದ್ದ. ‘ಇಲ್ಲ, ನಾನು ಏನೂ ನೋಡಲಿಲ್ಲ, ಬಾಗಿಲು ತೆರೆದುಕೊಂಡಿದ್ದ ಯಾವ ಮನೆಯನ್ನೂ ನೋಡಲಿಲ್ಲ… ಆದರೆ ನಾಲ್ಕನೆಯ ಮಹಡಿಯಲ್ಲಿ,’ (ಬೋನು ಎಲ್ಲಿದೆ ತಿಳಿದು ಗೆದ್ದೆ ಅನ್ನುವ ಭಾವ ಮೂಡಿತ್ತು) ‘ಹ್ಞಾ, ನೆನಪಿಗೆ ಬಂತು, ಯಾರೋ ಅಧಿಕಾರಿ ಮನೆ ಖಾಲಿ ಮಾಡಿ ಹೋಗುತಿದ್ದ… ಆ ಮನೆ ಗಿರವಿ ಮುದುಕಿ ಅಲ್ಯೋನ ಇವಾನೋವ್ನಾ ಮನೆಯ ಎದುರಿಗೇ ಇತ್ತು… ಹೌದು… ಹೌದು… ಜ್ಞಾಪಕ ಬಂತು… ಮಾಜಿ ಸೈನಿಕರು ಸೋಫಾದಂಥದ್ದು ಏನೋ ತಗೊಂಡು ಗೋಡೆಗೆ ಒತ್ತರಿಸಿಕೊಂಡು ಹೋಗುತ್ತಿದ್ದರು… ಆದರೆ ಬಣ್ಣ ಬಳಿಯುವವರು?- ಉಹ್ಞೂಂ, ನೆನಪಿಲ್ಲ ನನಗೆ… ಬಣ್ಣ ಬಳಿಯುವವರು ಯಾರೂ ಇರಲಿಲ್ಲ ಅಲ್ಲಿ… ಬಾಗಿಲು ತೆಗೆದುಕೊಂಡಿದ್ದ ಮನೆ, ಉಹ್ಞೂಂ, ಅಂಥಾ ಮನೇನೂ ಕಣ್ಣಿಗೆ ಬೀಳಲಿಲ್ಲ…’

‘ಅಲ್ಲಾ, ಏನಾಗಿದೆ ನಿನಗೆ!’ ತಟ್ಟನೆ ಎಚ್ಚೆತ್ತವನ ಹಾಗೆ, ಅರ್ಥವಾದವನ ಹಾಗೆ ರಝುಮಿಖಿನ್ ಉದ್ಗಾರ ತೆಗೆದ. ‘ಅಪರಾಧ ನಡೆದ ದಿನವೇ ಬಣ್ಣ ಬಳಿಯುವವರು ಅಲ್ಲಿ ಕೆಲಸ ಮಾಡತಿದ್ದರು, ಮತ್ತೆ ಎರಡು ದಿನ ಮೊದಲೂ ಅಲ್ಲಿದ್ದರು! ಅದಕ್ಕೆ ಇವನನ್ನ ಯಾಕೆ ಕೇಳಬೇಕು?’ ಅಂದ.

‘ಥೂ! ಎಲ್ಲ ಬರೀ ಗೊಂದಲ!’ ಪೋರ್ಫಿರಿ ಹಣೆ ಬಡೆದುಕೊಂಡ. ‘ದೆವ್ವ ಹಿಡೀಲಿ! ಈ ಕೇಸಿನಲ್ಲಿ ನನ್ನ ಬುದ್ದಿ ಎಡವತಾ ಇದೆ.’ ಎಂದು ಕ್ಷಮೆ ಕೇಳುವ ದನಿಯಲ್ಲಿ ರಾಸ್ಕೋಲ್ನಿಕೋವ್‍ ಗೆ ಹೇಳಿದ. ‘ಇದು ನಮಗೆ ಎಷ್ಟು ಮುಖ್ಯ ಅಂದರೆ ಅವತ್ತು ರಾತ್ರಿ ಏಳರಿಂದ ಎಂಟರ ಒಳಗೆ ಬಣ್ಣ ಬಳಿಯುವವರನ್ನ ಅಲ್ಲಿ ಯಾರಾದರೂ ಕಂಡಿದ್ದವರು ನಮಗೆ ಸಿಗಬೇಕು. ನಿಮ್ಮಿಂದ ನನಗೆ ಸಹಾಯ ಆಗುತ್ತೇನೋ ಅಂದುಕೊಂಡೆ. ಎಲ್ಲ ಗೊಂದಲ.’ ಅಂದ.

‘ಹ್ಞೂಂ, ಹುಷಾರಾಗಿರಬೇಕು!’ ರಾಸ್ಕೋಲ್ನಿಕೋವ್ ಮಂಕಾಗಿ ಹೇಳಿದ.

ಈ ಕೊನೆಯ ಮಾತು ಆಡುವಾಗ ಅವರು ತಲೆಬಾಗಿಲಿಗೆ ಬಂದಿದ್ದರು. ಪೋರ್ಫಿರಿ ಪೆಟ್ರೋವಿಚ್ ಆಪ್ತಮಿತ್ರನ ಹಾಗೆ ಅವರನ್ನ ಕಳಿಸಿಕೊಡಲು ಬಂದಿದ್ದ. ಅವರು ಮಂಕಾಗಿಯೇ ಬೀದಿಗೆ ಕಾಲಿಟ್ಟರು. ಕೆಲವು ಹೆಜ್ಜೆ ನಡೆಯುವವರೆಗೆ ಒಂದೂ ಮಾತಾಡಲಿಲ್ಲ. ರಾಸ್ಕೋಲ್ನಿಕೋವ್ ಆಳವಾಗಿ ಉಸಿರೆಳೆದುಕೊಂಡ.