ಇನ್ನು ಸ್ವಲ್ಪ ಹೊತ್ತು ಹೀಗೇ ಇದ್ದಿದ್ದರೆ, ಮೂರು ವರ್ಷವಾದ ಮೇಲೆ ಮತ್ತೆ ಒಟ್ಟುಗೂಡಿದ್ದ ಗುಂಪು, ಎಲ್ಲವನ್ನೂ ಮನಸ್ಸು ಬಿಚ್ಚಿ ಮಾತಾಡಿಕೊಳ್ಳಲು ಇಷ್ಟಪಟ್ಟಿದ್ದ ಕುಟುಂಬ, ಮಾತಿಗೇ ವಿಷಯವೇ ಇಲ್ಲದೆ ಅಸಹನೀಯವಾಗುತ್ತಿತ್ತು, ಅವನ ಪಾಲಿಗೆ. ಆದರೂ ತುರ್ತಾಗಿ ಇತ್ಯರ್ಥವಾಗಲೇಬೇಕಾದ ಒಂದು ವಿಷಯವಿತ್ತು. ಹೀಗೋ ಹಾಗೋ ಎರಡರಲ್ಲಿ ಒಂದು ಇವತ್ತೇ ತೀರ್ಮಾನಮಾಡಬೇಕು ಎಂದು ಬೆಳಗ್ಗೆ ಎದ್ದ ತಕ್ಷಣ ರಾಸ್ಕೋಲ್ನಿಕೋವ್ಗೆ ಅನಿಸಿತ್ತು.
ಪ್ರೊ. .ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮೂರನೆಯ ಭಾಗದ ಮೂರನೆಯ ಅಧ್ಯಾಯ

 

‘ಹುಷಾರಾಗಿದಾನೆ! ಹುಷಾರಾಗಿದಾನೆ!’ ಒಳಕ್ಕೆ ಬರುತ್ತಿರುವವರನ್ನು ಕಂಡು ಝೋಸ್ಸಿಮೋವ್ ಕೂಗಿ ಹೇಳಿದ. ಅವನು ಬಂದು ಹತ್ತು ನಿಮಿಷವಾಗಿತ್ತು. ನಿನ್ನೆಯ ದಿನ ಸೋಫಾದ ಯಾವ ತುದಿಯಲ್ಲಿ ಕೂತಿದ್ದನೋ ಅಲ್ಲೇ ಇವತ್ತೂ ಕೂತಿದ್ದ. ಇನ್ನೊಂದು ತುದಿಯಲ್ಲಿ ರಾಸ್ಕೋಲ್ನಿಕೋವ್ ಕೂತಿದ್ದ. ಚೆನ್ನಾಗಿ ಮೈ ತೊಳೆದು, ಅಚ್ಚುಕಟ್ಟಾಗಿ ಬಟ್ಟೆ ತೊಟ್ಟು, ನೀಟಾಗಿ ತಲೆಬಾಚಿದ್ದ. ಅವನು ಹೀಗೆಲ್ಲ ಮಾಡಿ ಎಷ್ಟೋ ಕಾಲವಾಗಿತ್ತು. ಇದ್ದಕಿದ್ದ ಹಾಗೆ ರೂಮು ತುಂಬಿ ಹೋಯಿತು. ಆದರೂ ಬಂದವರ ನಡುವೆಯೇ ನಸ್ತಾಸ್ಯಾ ಹೇಗೋ ಜಾಗಮಾಡಿಕೊಂಡು ಅವರ ಮಾತು ಕೇಳುತ್ತ ನಿಂತಳು.

ನಿನ್ನೆಗೆ ಹೋಲಿಸಿದರೆ ಇವತ್ತು ರಾಸ್ಕೋಲ್ನಿಕೋವ್ ನಿಜವಾಗಲೂ ಸುಧಾರಿಸಿದ್ದ. ಮುಖ ಮಾತ್ರ ಬಿಳಿಚಿತ್ತು, ಮುನಿದಿದ್ದ, ಖಿನ್ನನಾಗಿದ್ದ. ಹೊರ ನೋಟಕ್ಕೆ ಗಾಯಗೊಂಡ ಮನುಷ್ಯನ ಹಾಗೆ, ಅಥವಾ ತೀರ ನೋವು ತಿನ್ನುತ್ತಿರುವವನ ಹಾಗೆ ಕಾಣುತ್ತಿದ್ದ. ಹುಬ್ಬು ಗಂಟಿಕ್ಕಿತ್ತು, ತುಟಿ ಬಿಗಿದಿತ್ತು, ಕಣ್ಣು ಕೆಂಪಾಗಿತ್ತು. ಮಾತು ಕಡಮೆಯಾಗಿತ್ತು, ಮಾತು ಆಡಿದರೂ ತನಗೇ ಆಡಿಕೊಂಡ ಹಾಗೆ, ಯಾವುದೋ ಕರ್ತವ್ಯ ನಿಭಾಯಿಸುತ್ತಿರುವ ಹಾಗೆ ಕಾಣುತ್ತ ಅವನ ಮುಖದಲ್ಲಿ, ಇಡೀ ಮೈಯಲ್ಲಿ ಕಳವಳದ ಛಾಯೆಯಿತ್ತು.

ನೋವು ತಿನ್ನುತ್ತಿರುವ ಗಾಯಾಳುವಿನಂಥ ಚಿತ್ರ ಪೂರ್ಣವಾಗುವುದಕ್ಕೆ ಇರಬೇಕಾಗಿದ್ದ ಮುರಿದ ತೋಳಿಗೆ ಕಟ್ಟಿದ ಪಟ್ಟಿಯೊ, ಬೆರಳಿನ ಗಾಯಕ್ಕೆ ಸುತ್ತಿದ ಬ್ಯಾಂಡೇಜೋ ಇರಲಿಲ್ಲ, ಅಷ್ಟೆ.

ಖಿನ್ನಗೊಂಡು ಮಂಕಾಗಿದ್ದ ಅವನ ಮುಖ ಅಮ್ಮ ಮತ್ತು ತಂಗಿ ಬಂದ ತಕ್ಷಣ ಬೆಳಕು ಬಿದ್ದ ಹಾಗಿತ್ತು. ಅದುವರೆಗೂ ನೋವು ತಿನ್ನುತ್ತಿರುವಂತೆ ಕಾಣುತ್ತಿದ್ದ ಮುಖದಲ್ಲಿ ಈಗ ಹಿಂಸೆಯನ್ನು ಅನುಭವಿಸುತ್ತಿರುವ ಭಾವ ಮೂಡಿತ್ತು. ಮುಖದ ಹೊಳಪು ತಟ್ಟನೆ ಮಾಸಿತು, ವೇದನೆ ಮಾತ್ರ ಹಾಗೇ ಉಳಿದಿತ್ತು. ಇದೀಗ ವೈದ್ಯಕೀಯ ವೃತ್ತಿಯನ್ನು ಆರಂಭಿಸಿ, ಪ್ರಾಕ್ಟೀಸಿನ ರುಚಿಯನ್ನು ಕಾಣುತ್ತ ಯೌವನ ಸಹಜ ಉತ್ಸಾಹದಿಂದ ರೋಗಿಯನ್ನು ಗಮನಿಸುತ್ತಿದ್ದ ಝೋಸ್ಸಿಮೋವ್‍ ಗೆ ಆಶ್ಚರ್ಯವಾಗಿತ್ತು. ಮನೆಯ ಆತ್ಮೀಯರನ್ನು ಕಂಡ ಸಂತೋಷದ ಬದಲಾಗಿ, ‘ಇನ್ನೊಂದೆರೆಡು ಗಂಟೆಗಳ ಕಾಲ ಹಿಂಸೆಯನ್ನು ಅನುಭವಿಸಿ ಮುಗಿಸುವುದು ಅನಿವಾರ್ಯ, ಅನುಭವಿಸುತ್ತೇನೆ,’ ಎಂಬ ಬೈಚಿಟ್ಟ ದೃಢ ನಿರ್ಧಾರ ರಾಸ್ಕೋಲ್ನಿಕೋವ್‍ ನ ಮುಖದಲ್ಲಿ ಕಾಣುತ್ತಿತ್ತು. ಆನಂತರ ನಡೆದ ಸಂಭಾಷಣೆಯಲ್ಲಿ ಪ್ರತಿಯೊಂದು ಪದವೂ ರೋಗಿಯ ಯಾವುದೋ ಸೂಕ್ಷ್ಮವಾದ ನರವನ್ನು ಹಿಡಿದು ಮೀಟುತ್ತಿದೆ, ಯಾವುದೋ ಗಾಯವನ್ನು ಕೆದಕುತ್ತಿದೆ, ಹಾಗಿದ್ದರೂ ನಿನ್ನೆಯ ದಿನ ಒಂದೊಂದು ಮಾತಿಗೂ ಕೆರಳಿ ರೇಗುತಿದ್ದವನು ಈ ದಿನ ಭಾವನೆಗಳನ್ನು ಬಚ್ಚಿಟ್ಟುಕೊಂಡು ತನ್ನ ಮೇಲೆ ತಾನೇ ನಿಯಂತ್ರಣ ಸಾಧಿಸುತ್ತಿದ್ದಾನೆ ಅನ್ನುವುದನ್ನು ಕಂಡು ಝೋಸ್ಸಿಮೋವ್ ಬೆರಗಾಗಿದ್ದ.

ರಾಸ್ಕೋಲ್ನಿಕೋವ್ ಅಮ್ಮನಿಗೂ ತಂಗಿಗೂ ಮುತ್ತಿಡುತ್ತ, ‘ಹೌದು, ಇವತ್ತು ಹುಷಾರಾಗಿದೀನಿ ಅನಿಸತ್ತೆ,’ ಅಂದ. ತಕ್ಷಣವೇ ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾಳ ಮುಖ ಬೆಳಗಿತು. ‘ನಿನ್ನೆ ಇದ್ದ ಹಾಗಿಲ್ಲ,’ ಎಂದು ಸೇರಿಸುತ್ತ ರಝುಮಿಖಿನ್‍ ನ ಕೈಯನ್ನು ಸ್ನೇಹದಿಂದ ಕುಲುಕಿದ.

‘ನನಗೂ ಆಶ್ಚರ್ಯ ಆಗಿದೆ ಇವತ್ತು,’ ಅಂದ ಝೋಸ್ಸಿಮೋವ್. ಅವರೆಲ್ಲ ಬಂದದ್ದು ಅವನಿಗೆ ಖುಷಿಯಾಗಿತ್ತು. ಯಾಕೆಂದರೆ ಕಳೆದ ಹತ್ತು ನಿಮಿಷದಲ್ಲಿ ರೋಗಿಯ ಜೊತೆ ಮಾತನಾಡುತ್ತ ಮಾತಿನ ಎಳೆ ಕತ್ತರಿಸಿಹೋಗಿತ್ತು. ‘ಇವನು ಹೀಗೇ ಇನ್ನು ಮೂರು ನಾಲ್ಕು ದಿನ ಸುಧಾರಿಸಿಕೊಂಡರೆ ಒಂದು ತಿಂಗಳು, ಅಲ್ಲ, ಎರಡು, ಮೂರು ತಿಂಗಳ ಹಿಂದೆ ಇದ್ದಷ್ಟೇ ಚೆನ್ನಾಗಿ ಆಗತಾನೆ. ಯಾಕೆ ಅಂದರೆ ಈ ಕಾಯಿಲೆ ಬಹಳ ಹಿಂದೆಯೇ ಶುರುವಾಗಿದೆ… ಹ್ಞಾ? ಹೀಗೆ ಆರೋಗ್ಯ ಕೆಡುವುದಕ್ಕೆ ಸ್ವತಃ ನೀನೇ ಕಾರಣ ಅಂತ ಒಪ್ಪುತ್ತೀಯಾ?’ ಏನಾಗಿಬಿಡುತ್ತದೋ ಎಂದು ಮನಸಿನಲ್ಲಿ ಹೆದರಿಕೆ ಇಟ್ಟುಕೊಂಡು, ಸ್ವಲ್ಪವೇ ನಗುತ್ತ ಅಂದ.

‘ಇರಬಹುದು,’ ಅಂದ ರಾಸ್ಕೋಲ್ನಿಕೋವ್.

‘ಏನು ಹೇಳತೇನೆ ಅಂದರೆ,’ ಡಾಕ್ಟರನ ವಿಶ್ವಾಸ ಹೆಚ್ಚುತ್ತ, ಅದೇ ಕಾರಣಕ್ಕೆ ಸಂತೋಷ ಪಡುತ್ತ ಹೇಳಿದ ಝೋಸ್ಸಿಮೋವ್ ಮಾತಾಡಿದ.
‘ನೀನು ಪೂರಾ ವಾಸಿಯಾಗುವುದು ನಿನ್ನ ಕೈಯಲ್ಲೇ ಇದೆ. ನಿನ್ನ ಕಾಯಿಲೆಗೆ ಮೂಲ ಕಾರಣ ಏನೋ ಅದನ್ನ, ಕಾಯಿಲೆಯ ಬೇರನ್ನ ಕಿತ್ತು ಹಾಕಬೇಕು. ಆಗ ಮಾತ್ರ ನಿನ್ನ ಕಾಯಿಲೆ ಪೂರ್ತಿ ವಾಸಿಯಾಗತ್ತೆ ಇಲ್ಲದಿದ್ದರೆ ಇನ್ನೂ ಹೆಚ್ಚಾಗತ್ತೆ. ಆ ಕಾರಣ ಏನು ಅಂತ ನನಗೆ ಗೊತ್ತಿಲ್ಲ, ನಿನಗೆ ಗೊತ್ತಿರತ್ತೆ. ನೀನು ಬುದ್ಧಿವಂತ, ನಿನ್ನ ನೀನೇ ನೋಡಿಕೊಂಡು ವಿಚಾರ ಮಾಡಿರುತ್ತೀಯ. ನನಗನ್ನಿಸತ್ತೆ ನೀನು ಯೂನಿವರ್ಸಿಟಿಯನ್ನು ಬಿಟ್ಟಾಗಲೇ ನಿನ್ನ ಕಾಯಿಲೆ ಶುರುವಾಗಿರಬಹುದು. ಏನೂ ಕೆಲಸ ಇಲ್ಲದೆ ಇರುವುದಕ್ಕೆ ಸಾಧ್ಯವಿಲ್ಲ. ನೀನು ದುಡಿಯಬೇಕು, ಕಷ್ಟಪಟ್ಟು ದುಡಿಯಬೇಕು, ನಿನಗೆ ನೀನೇ ಒಂದು ಗುರಿ ಹಾಕಿಕೊಳ್ಳಬೇಕು, ಅದರಿಂದ ನಿನಗೆ ಬಹಳ ಒಳ್ಳೆಯದಾಗತ್ತೆ.’

‘ಹೌದು, ಸರಿ ಈ ಮಾತು… ಮತ್ತೆ ಯೂನಿವರ್ಸಿಟಿಗೆ ಹೊಗತೇನೆ. ಆಮೇಲೆ, ಎಲ್ಲಾ ಸರಿಹೋಗತ್ತೆ, ನಯವಾದ ರೇಶಿಮೆ ಥರ, ಸರಿಯಾಗಿ ನಡೆಯುವ ಗಡಿಯಾರದ ಥರ,’ ಅಂದ ರಾಸ್ಕೋಲ್ನಿಕೋವ್.

ಹೆಂಗಸರ ಮನಸಿನ ಮೇಲೆ ಪರಿಣಾಮ ಬೀರಬೇಕೆಂದು ಇಷ್ಟು ಹೊತ್ತೂ ಮಾತಾಡಿದ ಝೊಸ್ಸಿಮೋವ್ ಮಾತು ಮುಗಿಸಿ ರೋಗಿಯತ್ತ ತಿರುಗಿ ನೋಡಿ, ರಾಸ್ಕೋಲ್ನಿಕೋವ್‍ ನ ಮುಖದಲ್ಲಿ ಲೇವಡಿಯ, ಅಣಕದ ಭಾವ ಕಂಡು ಬೆಚ್ಚಿಬಿದ್ದ. ಒಂದು ಕ್ಷಣವಷ್ಟೇ ಆ ಭಾವ ಇದ್ದದ್ದು. ಪುಲ್ಚೇರಿಯ ಅಲೆಕ್ಸಾಂಡ್ರೋವ್ನ ಝೋಸ್ಸಿಮೋವ್‍ ಗೆ ಕೃತಜ್ಞತೆ ಹೇಳುವುದಕ್ಕೆ, ಅದರಲ್ಲೂ ನಿನ್ನೆ ರಾತ್ರಿ ವಸತಿಗೃಹಕ್ಕೆ ಬಂದು ರೋಗಿಯ ಪರಿಸ್ಥಿತಿ ತಿಳಿಸಿದ್ದಕ್ಕೆ ಥ್ಯಾಂಕ್ಸ್ ಹೇಳುವುದಕ್ಕೆ ಶುರು ಮಾಡಿದಳು.

‘ಏನೂ? ನಿಮ್ಮನ್ನ ನೋಡುವುದಕ್ಕೆ ರಾತ್ರಿಯೂ ಬಂದಿದ್ದನಾ? ಅಂದರೆ ಪ್ರಯಾಣ ಮಾಡಿ ಆಯಾಸವಾಗಿದ್ದ ನಿಮಗೆ ನಿದ್ರೆ ಕೂಡ ಮಾಡಕ್ಕೆ ಆಗಿಲ್ಲ?’ ದಿಗಿಲಾದವನ ಹಾಗೆ ಕೇಳಿದ ರಾಸ್ಕೋಲ್ನಿಕೋವ್.

‘ಏನಿಲ್ಲ, ಎರಡು ಗಂಟೆ ಆಗಿತ್ತು. ಅಷ್ಟೇ. ಊರಲ್ಲಿರುವಾಗ ಕೂಡ ನಾನೂ ದುನ್ಯಾ ಮಲಗೋ ಹೊತ್ತಿಗೆ ಎರಡು ಗಂಟೆ ಆಗಿರತ್ತೆ, ಗೊತ್ತಲ್ಲಾ,’ ಅಂದಳು ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ.

‘ನನಗೂ ಅಷ್ಟೇ. ಹೇಗೆ ಥ್ಯಾಂಕ್ಸ್ ಹೇಳಬೇಕೋ ತಿಳೀತಿಲ್ಲ,’ ಹುಬ್ಬು ಗಂಟಿಕ್ಕಿ ನೆಲವನ್ನು ದಿಟ್ಟಿಸುತ್ತ ರಾಸ್ಕೋಲ್ನಿಕೋವ್ ಮಾತು ಮುಂದುವರೆಸಿದ. ‘ದುಡ್ಡುಕೊಡುತ್ತೇವೆ ಅಂದರೂ ಕೂಡ… ಥ್ಯಾಂಕ್ಸ್ ಹೇಳಬೇಕು (ಝೋಸ್ಸಿಮೋವ್‍ ನತ್ತ ತಿರುಗಿ) ದುಡ್ಡಿನ ವಿಚಾರ ಎತ್ತಿದ್ದಕ್ಕೆ ಕ್ಷಮಿಸಿ, ನೀವು ನನಗೆ ಇಷ್ಟೊಂದು ವಿಶೇಷ ಗಮನ ಕೊಡುವುದಕ್ಕೆ ನಾನೇನು ಮಾಡಿದ್ದೇನೋ ಗೊತ್ತಿಲ್ಲ, ನಿಜವಾಗಲೂ ಹೇಳತಿದ್ದೇನೆ,’ ಅಂದ.

‘ಸುಮ್ಮನೆ ತಲೆ ಕೆಡಿಸಿಕೊಳ್ಳಬೇಡ,’ ಝೋಸ್ಸಿಮೋವ್ ಬಲವಂತವಾಗಿ ನಕ್ಕು ಹೇಳಿದ. ‘ನೀನು ನನ್ನ ಮೊದಲ ರೋಗಿ ಅಂದುಕೋ. ನಾವು ಡಾಕ್ಟರುಗಳು ಪ್ರಾಕ್ಟೀಸು ಶುರುಮಾಡಿದಾಗ ಸಿಗುವ ಮೊದಲ ಕೇಸನ್ನು ನಮ್ಮದೇ ಸ್ವಂತ ಮಗು ಅನ್ನುವ ಹಾಗೆ ನೋಡಿಕೊಳ್ಳತೇವೆ. ಕೆಲವರಂತೂ ಮೊದಲ ಕೇಸುಗಳನ್ನ ಪ್ರೀತಿಸಕ್ಕೂ ಶುರು ಮಾಡತಾರೆ. ನನ್ನ ಹತ್ತಿರ ರೋಗಿಗಳು ಸಾಲುಗಟ್ಟಿ ನಿಂತಿಲ್ಲ.’

ರಾಸ್ಕೋಲ್ನಿಕೋವ್ ರಝುಮಿಖಿನ್‍ ನನ್ನು ತೋರಿಸುತ್ತ ‘ಇವನ ವಿಚಾರ ಹೇಳೋದೇ ಬೇಡ. ಇವನಿಗೂ ಅಷ್ಟೆ, ನನ್ನಿಂದ ಬರೀ ತೊಂದರೆ ಅವಮಾನ ಅಷ್ಟೇ ಸಿಕ್ಕಿರೋದು,’ ಅಂದ.

‘ಕೇಳಿ ಇವನ ಮಾತನ್ನ! ಏನಿವತ್ತು ಸೆಂಟಿಮೆಂಟಲ್ ಮೂಡಿನಲ್ಲಿದ್ದೀಯಾ, ಹ್ಯಾಗೆ?’ ಅಂದ ರಝುಮಿಖಿನ್.

ಅವನು ಸ್ವಲ್ಪ ಗಮನಿಸಿ ನೋಡಿದ್ದಿದ್ದರೆ ರಾಸ್ಕೋಲ್ನಿಕೋವ್ ಭಾವುಕನಾಗಿಲ್ಲ, ಬದಲಾಗಿ ಅದಕ್ಕೆ ವಿರುದ್ಧವಾದ ಭಾವದಲ್ಲಿದ್ದಾನೆ ಅನ್ನುವುದು ತಿಳಿಯುತ್ತಿತ್ತು. ದುನ್ಯಾ ಅದನ್ನು ಗಮನಿಸಿದ್ದಳು, ಕಳವಳಪಡುತ್ತ ಅಣ್ಣನನ್ನೇ ನೋಡುತ್ತಿದ್ದಳು.

‘ನಿನ್ನ ವಿಚಾರವಂತೂ ಎತ್ತುವುದಕ್ಕೇ ಧೈರ್ಯವಿಲ್ಲ, ಅಮ್ಮಾ,’ ಅಂದು ಬೆಳಿಗ್ಗೆಯಷ್ಟೇ ಬಾಯಿಪಾಠ ಮಾಡಿದ್ದನ್ನು ಒಪ್ಪಿಸುವವನ ಹಾಗೆ ರಾಸ್ಕೋಲ್ನಿಕೋವ್ ಹೇಳಿದ. ‘ನಿನ್ನೆಯೆಲ್ಲಾ ನೀನು ಎಷ್ಟು ಹಿಂಸೆ ಅನುಭವಿಸಿದ್ದೀಯ, ನನಗೆ ಎಚ್ಚರವಾಗಲಿ ಎಂದು ಎಷ್ಟು ಹಂಬಲಿಸಿದ್ದೀಯ ಅಂತ ಬಹಳ ಯೋಚನೆ ಮಾಡಿದೆ.’ ಇಷ್ಟು ಹೇಳಿದವನೇ ನಗುತ್ತ ತನ್ನ ತಂಗಿಯತ್ತ ಮೌನವಾಗಿ ಕೈ ಚಾಚಿದ.. ಆ ನಗುವಿನಲ್ಲಿ ಈಗ ಕೃತಕವಲ್ಲದ ಸಹಜ ಪ್ರೀತಿ ಒಂದು ಕ್ಷಣ ಮಿಂಚಿತ್ತು. ದುನ್ಯಾ ಆ ಕೈಯನ್ನು ತಟ್ಟನೆ ಹಿಡಿದು, ತನ್ನ ಸಂತೋಷ, ಕೃತಜ್ಞತೆಗಳನ್ನು ತೋರಿಸುವ ಹಾಗೆ ಒತ್ತಿದಳು. ನಿನ್ನೆ ರೇಗಿ ಜಗಳವಾಡಿದ ಮೇಲೆ ಇದೇ ಮೊದಲು ಅವಳನ್ನು ರಾಸ್ಕೋಲ್ನಿಕೋವ್ ಮಾತನಾಡಿಸಿದ್ದು. ಅಣ್ಣ ತಂಗಿಯರ ನಡುವೆ ಹೀಗೆ ಕೊನೆಗೂ ಮಾತಿಲ್ಲದೆ ರಾಜಿಯಾದದ್ದನ್ನು ಕಂಡು ಅಮ್ಮ ಪರವಶವಾಗಿದ್ದಳು, ಸಂತೋಷಪಡುತ್ತಿದ್ದಳು.

‘ಇದಕ್ಕೇ ನೋಡಿ, ಇವನನ್ನ ಕಂಡರೆ ನನಗೆ ಇಷ್ಟ!’ ಎಲ್ಲವನ್ನೂ ಉತ್ಪ್ರೇಕ್ಷೆ ಮಾಡುವ ರಝುಮಿಖಿನ್ ತಾನು ಕುಳಿತಿದ್ದ ಕುರ್ಚಿಯಲ್ಲೇ ಪಕ್ಕಕ್ಕೆ ಹೊರಳಿ ಹೇಳಿದ. ‘ತಟಕ್ ಅಂತ ಮನಸಿನ ಭಾವನೆ ತೋರಿಸಿಬಿಡತಾನೆ!…’

ಅಮ್ಮ ಮನಸಿನಲ್ಲೇ ಅಂದುಕೊಂಡಳು: ನನ್ನ ಮಗ ಎಲ್ಲ ಎಷ್ಟು ಚೆನ್ನಾಗಿ ನಿಭಾಯಿಸಿದ. ಅವನ ಮನಸಲ್ಲಿ ದೊಡ್ಡ ಭಾವನೆಗಳಿವೆ. ಉದಾತ್ತ ಮನುಷ್ಯ ಅವನು. ನಿನ್ನೆ ದಿನ ತಂಗಿ ಜೊತೆ ಹುಟ್ಟಿಕೊಂಡಿದ್ದ ಮನಸ್ತಾಪಾನ ಇವತ್ತು ಎಷ್ಟು ಸರಳವಾಗಿ, ಸೂಕ್ಷ್ಮವಾಗಿ ಮುಗಿಸಿಬಿಟ್ಟ. ಸರಿಯಾದ ಸಮಯಕ್ಕೆ ಕೈಚಾಚಿದ, ಪ್ರೀತಿಯಿಂದ ನೋಡಿದ, ಮುಗೀತು!… ಅವನ ಕಣ್ಣು ಎಷ್ಟು ಚಂದ… ಮುಖ ಎಷ್ಟು ಚಂದ!… ದುನ್ಯಾಗಿಂತಾನೂ ಚೆನ್ನಾಗಿದಾನೆ… ಆದರೆ ಮಾತ್ರ, ಅವನು ಹಾಕ್ಕೊಂಡಿರೋ ಬಟ್ಟೇನೋ, ಅದನ್ನ ತೊಟ್ಟಿರೋ ಚಂದಾನೋ, ದೇವರೇ, ದೇವರೇ!… ಅಫಾನ್ಸೆ ಅಂಗಡಿಯಲ್ಲಿರೋ ಕೆಲಸದ ಹುಡುಗ ಕೂಡ ಇದಕ್ಕಿಂತ ಚೆನ್ನಾಗಿ ಬಟ್ಟೆ ತೊಡತಾನೆ!… ಓಡಿ ಹೋಗಿ ಮಗನ್ನ ಅಪ್ಪಿಕೋ ಬೇಕು ಅನ್ನಿಸತ್ತೆ… ಅಳಬೇಕು ಅನಿಸತ್ತೆ…! ಈಗಿನ್ನೂ ಪ್ರೀತಿಯಿಂದ ಮಾತಾಡಿದ… ಭಯ ಆಗತ್ತೆ, ಭಯ ಆಗತ್ತೆ, ದೇವರೇ! ಇನ್ನೂ ಪ್ರೀತಿಯಿಂದಾನೇ ಮಾತಾಡತಾ ಇದಾನೆ… ದೇವರೇ! ಯಾಕೆ ಭಯ ಆಗತಾ ಇದೆ ನನಗೀಗ..?’

‘ಹ್ಞಾ, ರೋದ್ಯಾ,’ ಮಗ ಆಡಿದ್ದ ಮಾತಿಗೆ ಉತ್ತರ ಕೊಡಲು ತಟ್ಟನೆ ಮಾತಾಡಿದಳು, ‘ನಿನ್ನೆ ದಿನ ನನಗೂ ದುನ್ಯಾಗೂ ಎಷ್ಟು ದುಃಖ ಆಯಿತು, ಗೊತ್ತಾ ನಿನಗೆ? ಎಲ್ಲಾ ಮುಗೀತು, ಯೋಚನೆ ಮಾಡು, ನಿನ್ನ ನಿನ್ನ ನೋಡಬೇಕು ಅಂತ ಆತರಪಡತಾ ಸ್ಟೇಶನ್ನಿನಿಂದ ಇಲ್ಲಿಗೇ ನೆಟ್ಟಗೆ ಬಂದು. ಆ ಹೆಂಗಸು—ಹೋ! ಇಲ್ಲೇ ಇದಾಳಲ್ಲಾ, ನಸ್ತಾಸ್ಯ,… ಹೇಗಿದ್ದೀಯಮ್ಮಾ!…. ಇವಳು ನಿನಗೆ ಜ್ವರ ಇದೆ, ಈಗ ತಾನೇ ಎದ್ದು ಎಲ್ಲೋ ಹೊರಟು ಹೋದೆ, ನಿನಗೆ ಸನ್ನಿ, ಜನ ಹುಡುಕತಾ ಇದಾರೆ ಅಂದಳು. ನಾನು ಹೇಳಿದರೆ ನಂಬಲ್ಲ, ಆದರೂ ಹೇಳತೇನೆ. ಆ ಸುದ್ದಿ ಕೇಳಿದ ತಕ್ಷಣ ನಮ್ಮ ಪರಿಚಯದ ಲೆಫ್ಟಿನೆಂಟು ಪೊತಾನ್ಚಿಕೋವ್ ಜ್ಞಾಪಕ ಬಂತು. ಅವರು ನಿಮ್ಮಪ್ಪನ ಸ್ನೇಹಿತರು. ನಿನಗೆ ಅವರ ಜ್ಞಾಪಕ ಇರಲ್ಲ. ಅವರೂ ನಿನ್ನ ಹಾಗೇ ಸನ್ನಿ ಹಿಡಿದಿದ್ದಾಗ ಮನೆ ಬಿಟ್ಟು ಹೊರಟು ಹೋಗಿದ್ದರು. ಮನೆ ಅಂಗಳದ ಬಾವಿಯಲ್ಲಿ ಅವರ ಹೆಣ ಪತ್ತೆ ಆಗುವ ಹೊತ್ತಿಗೆ ಒಂದು ದಿನ ಕಳೆದು ಹೋಗಿತ್ತು. ಅಷ್ಟೇ ಅಲ್ಲ, ಇನ್ನೂ ಜಾಸ್ತಿ ಏನೇನೋ ಯೋಚನೆ ಬಂದವು ನಮ್ಮ ಮನಸಿಗೆ. ಇನ್ನೇನು ಓಡಿ ಹೋಗಿ ಪೀಟರ್ ಪೆಟ್ರೋವಿಚ್‍ ನ ಕಾಣಬೇಕು, ಅವನ ಸಹಾಯವಾದರೂ ಕೇಳೋಣ, ನಾವು ಇಬ್ಬರೇ, ಊರು ಗೊತ್ತಿಲ್ಲ… ಅಂದುಕೊಂಡೆವು… ಏನು ಮಾಡೋದು, ನಾವು ಇಬ್ಬರೇ, ಉರು ಗೊತ್ತಿಲ್ಲಾ… ಅವಳ ದನಿ ಸಣ್ಣಗಾಗಿ ನಿಂತು ಹೋಯಿತು. ಈ ಸದ್ಯಕ್ಕೇನೋ ಎಲ್ಲರೂ ಸಂತೋಷವಾಗಿದ್ದರೂ ಪೀಟರ್ ಪೆಟ್ರೋವಿಚ್ ಸುದ್ದಿ ತೆಗೆಯುವುದು ಅಪಾಯ ಅನ್ನುವ ಯೋಚನೆ ಬಂದಿತ್ತು ಅವಳಿಗೆ.

‘ಹೌದೌದು… ಪಾಪ, ಪಾಪಾ…’ ಅಂತ ಗೊಣಗಿಕೊಂಡ ರಾಸ್ಕೋಲ್ನಿಕೋವ್. ಅವನೊಳಗೆ ಅನುಮಾನ, ಅಪನಂಬಿಕೆ, ಸಿಟ್ಟು ಮೊಳಕೆಯೊಡೆಯುತ್ತಿರುವುದು ಗೊತ್ತಾಗುವ ಹಾಗಿತ್ತು. ದುನ್ಯಾ ಅಣ್ಣನನ್ನು ಆಶ್ಚರ್ಯದಿಂದ ನೋಡಿದಳು.

‘ಇನ್ನೇನೋ ಹೇಳಬೇಕೂ ಅಂತಿದ್ದೆ…’ ನೆನಪು ಮಾಡಿಕೊಳ್ಳಲು ಪ್ರಯತ್ನಿಸುತ್ತ ರಾಸ್ಕೋಲ್ನಿಕೋವ್ ಹೇಳಿದ- ‘ಹ್ಞಾ, ಇದೂ. ಅಮ್ಮಾ ನೀನು, ಮತ್ತೆ ದುನ್ಯಾ ನೀನೂ, ದಯವಿಟ್ಟು ಬೆಳಗ್ಗೆ ಎದ್ದ ತಕ್ಷಣ ನೋಡಕ್ಕೆ ನನಗೆ ಇಷ್ಟ ಇರಲಿಲ್ಲ ಅಂದುಕೋಬೇಡಿ. ನೀವು ಈಗ ಬರತೀರಿ, ಆಗ ಬರತೀರಿ ಅಂತ ಕಾಯತಾ ಇದ್ದೆ,’ ಅಂದ.

‘ಯಾಕೆ, ರೋದ್ಯಾ!’ ಪುಲ್ಚೇರಿಯಾ ಅಲೆಕ್ಸಾಂಡ್ರೋವ್ನಾ ಆಶ್ಚರ್ಯಪಡುತ್ತ ಕೇಳಿದಳು.

‘ಇದೇನು! ಕರ್ತವ್ಯ ಅನ್ನುವ ಹಾಗೆ ನಮ್ಮ ಜೊತೆ ಮಾತಾಡತಾ ಇದಾನಾ…’ ಅಂದುಕೊಂಡಳು ದುನ್ಯಾ. ‘ಜಗಳ ಬೇಡ, ಕ್ಷಮಿಸಿ ಅಂತ ಕೇಳತಾ ಇದಾನೆ, ಇದೇನೋ ಮಾಡಲೇಬೇಕಾದ ಕಷ್ಟದ ಕೆಲಸ, ನೆನಪಿಟ್ಟುಕೊಂಡ ಪಾಠ ಅನ್ನುವ ಹಾಗೆ…’

‘ಎದ್ದ ತಕ್ಷಣ ಬರಬೇಕು ಅಂತಿದ್ದೆ. ಈ ಬಟ್ಟೆಗಳಿಂದ ತಡ ಆಯಿತು. ರಾತ್ರೀನೇ ಹೇಳಿದ್ದೆ, ಅವಳಿಗೆ, ನಸ್ತಾಸ್ಯಾಗೆ… ರಕ್ತದ ಕಲೆ ಎಲ್ಲಾ ತೊಳೆದುಬಿಡು ಅಂದ… ಈಗಷ್ಟೇ ನಾನು ಬಟ್ಟೆ ಹಾಕಿಕೊಂಡದ್ದು ಮುಗೀತು,’ ಅಂದ ರಾಸ್ಕೋಲ್ನಿಕೋವ್.

‘ರಕ್ತ! ಯಾವ ರಕ್ತ?’ ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾಗೆ ಆಶ್ಚರ್ಯವಾಗಿತ್ತು, ಭಯವಾಗಿತ್ತು.

‘ಏನೋ ಬಿಡಮ್ಮಾ… ತಲೆ ಕೆಡಿಸಿಕೊಳ್ಳಬೇಡ… ನಿನ್ನೆ ನಾನು ಸ್ವಲ್ಪ ಸನ್ನಿ ಬಂದ ಹಾಗೆ ಅಲೆಯುವುದಕ್ಕೆ ಹೋಗಿದ್ದೆನಲ್ಲಾ ಆಗ ರಕ್ತ ಮೆತ್ತಿಕೊಂಡಿತ್ತು. ಯಾರೋ ಒಬ್ಬ ಕುದುರೆಗಾಡಿಗೆ ಸಿಕ್ಕಿದ್ದ… ಆಫೀಸಿನಲ್ಲಿ ಕೆಲಸ ಮಾಡೋನು, ಯಾರೋ…’

‘ಸನ್ನಿ ಅಂತೀಯ, ಎಲ್ಲಾ ಜ್ಞಾಪಕ ಇಟ್ಟುಕೊಂಡಿದೀಯ ಮತ್ತೆ?’ ರಝುಮಿಖಿನ್ ಕೇಳಿದ.

ರಾಸ್ಕೋಲ್ನಿಕೋವ್ ವಿಶೇಷವಾದ ಎಚ್ಚರಿಕೆಯಲ್ಲಿ ಉತ್ತರ ಕೊಟ್ಟ-‘ನಿಜ. ನನಗೆ ಎಲ್ಲಾ, ಸಣ್ಣಪುಟ್ಟ ವಿವರ ಕೂಡ ಜ್ಞಾಪಕ ಇದೆ. ಆದರೆ ಯಾಕೆ ಹಾಗೆ ಮಾಡಿದೆ ಇದನ್ನ, ಯಾಕೆ ಹಾಗೆ ಹೇಳಿದೆ ಅದನ್ನ ಅಂತ ಕೇಳಿದರೆ ಮಾತ್ರ ವಿವರಿಸುವುದು ಕಷ್ಟ ಆಗತ್ತೆ.’

‘ಈ ಕಾಯಿಲೆಯಲ್ಲಿ ಹೀಗಾಗುವುದುಂಟು,’ ಝೋಸ್ಸಿಮೋವ್ ಹೇಳಿದ. ‘ಅಂಥ ಪರಿಸ್ಥಿತಿಯಲ್ಲಿ ಅಚ್ಚುಕಟ್ಟಾಗಿ, ಚಾಚು ತಪ್ಪದೆ ಕೆಲಸ ಮಾಡಬಹುದು ರೋಗಿ. ಆದರೆ ಹಾಗೆಲ್ಲ ಮಾಡುವುದಕ್ಕೆ ಕಾರಣ ಮಾತ್ರ ಅವನ ಕೈಯಲ್ಲಿರಲ್ಲ, ಬದಲಾಗಿ ಯಾವು ಯಾವುದೋ ಮನಕಲಕುವ ಅಸ್ಪಷ್ಟ ಚಿತ್ರಗಳಲ್ಲಿರುತ್ತವೆ ಮನಸಿನಲ್ಲಿ. ಇಂಥ ರೋಗಿಗಳು ಕನಸಿನಲ್ಲಿ ಮಾಡುವ ಹಾಗೆ ಮಾಡತಾರೆ,’ ಅಂದ.

‘ಅವನನ್ನ ಅರೆಹುಚ್ಚ ಅಂದುಕೊಂಡಿದಾನೆ, ಒಳ್ಳೆಯದೇ ಆಯಿತು,’ ಅಂದುಕೊಂಡ ರಝುಮಿಖಿನ್.

‘ಆರೋಗ್ಯವಾಗಿರುವವರೂ ಕೂಡ ಒಂದೊಂದು ಸಲ ಹೀಗೇ, ಅಲ್ಲವಾ?’ ದುನ್ಯಾ ಆತಂಕದಿಂದ ಕೇಳಿದಳು.

‘ನಿಜವಾದ ಮಾತು. ಒಂದು ಅರ್ಥದಲ್ಲಿ ನಾವೆಲ್ಲರೂ ಹುಚ್ಚರೇನೇ. ವ್ಯತ್ಯಾಸ ಏನಪ್ಪ ಅಂದರೆ ಹುಚ್ಚರು ನಮಗಿಂತ ಜಾಸ್ತಿ ಹುಚ್ಚರಾಗಿರತಾರೆ, ಹಾಗಾಗಿ ಆರೋಗ್ಯವಂತರಿಗೂ ಹುಚ್ಚರಿಗೂ ವ್ಯತ್ಯಾಸ ಇರತ್ತೆ. ಪೂರ್ತಿ ಸಮಚಿತ್ತ ಇರುವ ಮನುಷ್ಯ ನೂರಕ್ಕಲ್ಲ, ಸಾವಿರಕ್ಕಲ್ಲ ಲಕ್ಷಕ್ಕೊಬ್ಬ ಸಿಗುವುದೂ ಕಷ್ಟ. ಸಿಕ್ಕರೂ ಅವನು ಸಮಚಿತ್ತ ಅನ್ನುವುದರ ದುರ್ಬಲ ಮಾದರಿ ಥರ ಇರತಾನೆ…’

ಜಾಣತನವಿಲ್ಲದೆ ಬಳಸಿದ ಹುಚ್ಚ ಅನ್ನುವ ಮಾತು ಕೇಳಿ ಅಲ್ಲಿದ್ದವರ ಮುಖ ಹಿಂಡಿತ್ತು. ಝೋಸ್ಸಿಮೋವ್ ತನಗೆ ಪ್ರಿಯವಾದ ವಿಚಾರವನ್ನು ಕುರಿತು ಮೈಮರೆತು ಮಾತಾಡುತ್ತಿದ್ದ. ರಾಸ್ಕೋಲ್ನಿಕೋವ್ ಯಾವುದರತ್ತಲೂ ಗಮನವೇ ಇಲ್ಲವೆನ್ನುವ ಹಾಗೆ ಯೋಚನೆಯಲ್ಲಿ ಮೈ ಮರೆತು ಕೂತಿದ್ದ. ಒಣಗಿದ ತುಟಿಯ ಮೇಲೆ ವಿಲಕ್ಷಣವಾದ ಕಿರುನಗೆಯಿತ್ತು. ಯಾವುದೋ ಸಿಕ್ಕು ಬಿಡಿಸುತ್ತಿರುವ ಹಾಗಿದ್ದ ಅವನು.

ರಾಸ್ಕೋಲ್ನಿಕೋವ್ ನಿದ್ರೆಯಿಂದ ಎದ್ದವನ ಹಾಗೆ ಮಾತಾಡಿದ. ‘ಏನು? ಹ್ಞೂಂ… ಹೌದ… ನಿನ್ನೆ ಗಾಡಿಗೆ ಸಿಕ್ಕಿದವನನ್ನ ಅವನ ಮನೆಗೆ ಕರಕೊಂಡು ಹೋಗುವಾಗ ಬಟ್ಟೆಯೆಲ್ಲ ರಕ್ತ ಆಯಿತು. ಅಂದ ಹಾಗೆ ಅಮ್ಮಾ… ನಿನ್ನೆ ಕ್ಷಮಿಸಲಾಗದಂಥ ತಪ್ಪು ಮಾಡಿದೆ ನಾನು. ನನಗೆ ತಲೆ ಸರಿ ಇರಲಿಲ್ಲ… ನೀನು ಕೊಟ್ಟಿದ್ದೆಯಲ್ಲ ಆ ದುಡ್ಡೆಲ್ಲಾನೂ ಸತ್ತುಹೋದವನ ಹೆಂಡತಿಗೆ ಕೊಟ್ಟುಬಿಟ್ಟೆ, ಸಾವಿನ ಕಾರ್ಯಗಳ ಖರ್ಚಿಗೆ. ಪಾಪ, ಗಂಡ ಇಲ್ಲದವಳು, ಕ್ಷಯ… ಮೂರು ಸಣ್ಣ ಮಕ್ಕಳು, ಈಗ ಅನಾಥರು, ಹೊಟ್ಟೆಗೆ ಏನೂ ಗತಿ ಇಲ್ಲ… ಇನ್ನೊಬ್ಬಳು ದೊಡ್ಡ ಮಗಳಿದಾಳೆ… ಅವರನ್ನೆಲ್ಲ ನೋಡಿದ್ದರೆ ನೀನೇ ದುಡ್ಡುಕೊಟ್ಟುಬಿಡತಾ ಇದ್ದೆ. ಆದರೂ ಈಗ ಅನ್ನಿಸತಾ ಇದೆ ಅಷ್ಟು ದುಡ್ಡು ಹೊಂದಿಸುವುದಕ್ಕೆ ನಿನಗೆ ಎಷ್ಟು ಕಷ್ಟ ಆಗಿತ್ತು, ಇನ್ನೊಬ್ಬರಿಗೆ ಸಹಾಯ ಮಾಡುವುದಕ್ಕೆ ಮೊದಲು ಅಂಥ ಸಹಾಯ ಮಾಡುವುದಕ್ಕೆ ನಮಗೆ ಅಧಿಕಾರ ಇರಬೇಕು. ಇಲ್ಲದೆ ಇದ್ದರೆ ನಾಯಿ ಸಾವು ಸಾಯಬೇಕು,’ ಅನ್ನುತ್ತ ನಕ್ಕ, ‘ಸರಿ ಅಲ್ಲವಾ, ದುನ್ಯಾ?’ ಅಂದ.

‘ಅಲ್ಲ, ಸರಿಯಲ್ಲ,’ ದುನ್ಯಾ ದೃಢವಾಗಿ ಅಂದಳು.

‘ಥೂ, ಇವಳಿಗೆ ಇವಳದೇ ಆಯಿತು…’ ಗೊಣಗಿದ, ಅವಳತ್ತ ನೋಡಿದ ನೋಟದಲ್ಲಿ ದ್ವೇಷವಿತ್ತು, ಮುಖದಲ್ಲಿ ವ್ಯಂಗ್ಯವಾದ ನಗುವಿತ್ತು.
‘ಗೊತ್ತಿರಬೇಕಾಗಿತ್ತು ನನಗೆ… ತುಂಬ ಅದ್ಭುತವಾದ ವಿಚಾರ ಕಣಮ್ಮಾ… ಒಳ್ಳೆಯದು… ನಿನಗೇ ಗೊತ್ತಾಗತ್ತೆ, ಒಂದು ಸೂಕ್ಷ್ಮವಾದ ಗೆರೆ ಇದೆ, ಅದನ್ನ ದಾಟಿದರೆ ದುಃಖ, ದಾಟದೆ ಇದ್ದರೆ ಇನ್ನೂ ದುಃಖ. ಎಲ್ಲಾ ನಾನ್ಸೆನ್ಸ್!’ ಅಂದ. ಮಾತು ಎಲ್ಲೆಲ್ಲೋ ಹೋಗುತ್ತಿದೆ ಎಂದು ತನ್ನ ಮೇಲೇ ರೇಗಿಕೊಂಡು ತಟ್ಟನೆ ಅಂದ, ‘ಅಮ್ಮಾ ನನ್ನ ಕ್ಷಮಿಸು,’ ಅಂದ.

‘ಅಯ್ಯೋ, ರೋದ್ಯಾ, ಪರವಾಗಿಲ್ಲ, ಬಿಡಪ್ಪಾ. ನೀನು ಏನು ಮಾಡಿದರೂ ಒಳ್ಳೆಯದೇ ಮಾಡತೀಯ ಅಂತ ನನಗೆ ಗೊತ್ತು!’ ಅಂದಳು ಅಮ್ಮ.

ನಗುವಿನ ಹಾಗೆ ಕಾಣುವಂತೆ ಬಾಯನ್ನು ವಕ್ರಮಾಡಿಕೊಂಡು, ‘ಅಷ್ಟೊಂದು ನಂಬಬೇಡಮ್ಮಾ,’ ಅಂದ ರಾಸ್ಕೋಲ್ನಿಕೋವ್. ಈ ಎಲ್ಲ ಮಾತಿನಲ್ಲೂ ಆಮೇಲೆ ನೆಲಸಿದ ಮೌನದಲ್ಲೂ ರಾಜಿಯಲ್ಲೂ ಅದರಿಂದ ಹುಟ್ಟಿದ ಸಂತೋಷದಲ್ಲೂ ಒಂದು ಥರ ಬಿಗಿ ಇತ್ತು. ಅದು ಎಲ್ಲರ ಅನುಭವಕ್ಕೂ ಬಂದಿತ್ತು.

ಅಮ್ಮನನ್ನೂ ತಂಗಿಯನ್ನೂ ನೋಡುತ್ತಾ, ‘ಅಂದರೆ, ನನ್ನ ಕಂಡರೆ ನಿಜವಾಗಲೂ ಭಯ ಅವರಿಗೆ,’ ಅಂದುಕೊಂಡ ರಾಸ್ಕೋಲ್ನಿಕೋವ್. ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾಳ ಮೌನ ಬೆಳೆದಷ್ಟೂ ಅವಳ ಒಳಗಿನ ಪುಕ್ಕಲುತನವೂ ಬೆಳೆಯುತ್ತಿತ್ತು.

‘ಅವರು ಕಣ್ಣೆದುರಿಗೆ ಇಲ್ಲದೆ ಇದ್ದಾಗಲೇ ಅವರ ಮೇಲೆ ನನಗೆ ಪ್ರೀತಿ ಇತ್ತು ಅನಿಸತ್ತೆ,’ ಅನ್ನುವ ಭಾವನೆ ರಾಸ್ಕೋಲ್ನಿಕೋವ್ ತಲೆಯಲ್ಲಿ ಮಿಂಚಿ ಹೋಯಿತು.

‘ಗೊತ್ತಾ ರೋದ್ಯಾ, ಮಾರ್ಫಾ ಪೆಟ್ರೊವ್ನಾ ಸತ್ತು ಹೋದಳು!’ ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ತಟ್ಟನೆ ಅಂದಳು.

‘ಯಾವ ಮಾರ್ಫಾ?’

‘ಅಯ್ಯೋ ದೇವರೇ, ಅದೇ ಮಾರ್ಫಾ.. ಸ್ವಿಡ್ರಿಗೈಲೋವ್‍ ನ ಹೆಂಡತಿ! ಅವಳ ವಿಚಾರ ನಿನಗೆ ಕಾಗದದಲ್ಲಿ ಬರೆದಿದ್ದೆನಲ್ಲಾ?’

‘ಹ್ಞಾ.. ಹ್ಞ.. ಹ್ಞಾ, ಜ್ಞಾಪಕ ಬಂತು… ಸತ್ತಳಾ ಹಾಗಾದರೆ…’ ನಿದ್ದೆಯಿಂದ ತಟ್ಟನೆದ್ದವನ ಹಾಗೆ ಕೇಳಿದ. ‘ನಿಜವಾಗಲೂ ಸತ್ತಳಾ? ಏನಾಗಿತ್ತು?’

‘ಸಡನ್ನಾಗಿ ಹೋಗಿಬಿಟ್ಟಳು!’ ಅವನ ಕುತೂಹಲದಿಂದ ಹುಮ್ಮಸ್ಸು ಪಡೆದುಕೊಂಡು ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ಮುಂದುವರೆಸಿದಳು. ‘ನಿನಗೆ ಕಾಗದ ಕಳಿಸಿದೆನಲ್ಲಾ, ಆವತ್ತೇ… ಸುಮಾರಾಗಿ ಅದೇ ಹೊತ್ತಿಗೆ. ಅವಳ ಸಾವಿಗೆ ಅವಳ ಗಂಡನೇ ಕಾರಣವಂತೆ. ಅವಳನ್ನ ಚೆನ್ನಾಗಿ ಹೊಡೆದ ಅನ್ನತಾರೆ!’

‘ಅವರು ಜಗಳ ಆಡತಿದ್ದರಾ. ಒಬ್ಬರನ್ನ ಕಂಡರೆ ಒಬ್ಬರಿಗೆ ಆಗತಿರಲಿಲ್ಲವಾ?’ ತಂಗಿಯತ್ತ ತಿರುಗಿ ಕೇಳಿದ.

‘ಇಲ್ಲ. ಚೆನ್ನಾಗೇ ಇದ್ದರು. ಅವಳ ಜೊತೆ ಅವನು ತುಂಬ ಸಮಾಧಾನವಾಗಿ ನಡಕೊಳ್ಳತಿದ್ದ. ಏಳು ವರ್ಷ ಅವಳೇನು ಮಾಡಿದರೂ ಸಹಿಸಿಕೊಂಡಿದ್ದ.’

‘ಹಾಗಾದರೆ ಅಷ್ಟು ಕೆಟ್ಟವನಲ್ಲ! ಏಳು ವರ್ಷ ತಡೆದುಕೊಂಡಿದ್ದ ಅಂದರೆ ಸುಮ್ಮನೇನಾ? ನೀನು ಅವನ ಪರವಾಗಿ ಮಾತಾಡತಾ ಇದೀಯ, ದುನ್ಯಾ.’

‘ಇಲ್ಲ… ಅವನಿಗಿಂತ ಭಯ ಹುಟ್ಟಿಸುವ ಇನ್ನೊಬ್ಬನ್ನ ಕಂಡಿಲ್ಲ,’ ಅನ್ನುವಾಗ ಅವಳ ಮೈ ಸಣ್ಣಗೆ ಕಂಪಿಸಿತು. ಹುಬ್ಬು ಗಂಟಿಕ್ಕಿ ಯೋಚನೆಯಲ್ಲಿ ಮುಳುಗಿದಳು.

‘ಅವತ್ತು ಬೆಳಿಗ್ಗೆ ಜಗಳ ಆಗಿತ್ತು ಗಂಡ ಹೆಂಡತಿ ಮಧ್ಯೆ,’ ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ಆತುರವಾಗಿ ಮುಂದುವರೆಸಿದಳು.

‘ಆಮೇಲೆ, ತಕ್ಷಣ ಗಾಡಿಗೆ ಕುದುರೆ ಕಟ್ಟಿ ಅಂತ ಅಂದಳು – ಊಟವಾದ ಮೇಲೆ ಟೌನಿಗೆ ಹೋಗೋದಕ್ಕೆ. ಜಗಳ ಆದಾಗೆಲ್ಲ ಅವಳು ಟೌನಿಗೆ ಹೋಗುತ್ತಿದ್ದಳು. ಚೆನ್ನಾಗಿ ಊಟ ಮಾಡಿದಳು ಅಂತಾರೆ.’

‘ಜಗಳ ಆಡಿದ್ದರೂ ಊಟ ಮಾಡಿದಳಾ?’

‘ಅದು ಅವಳ… ಅಭ್ಯಾಸ. ಊಟ ಮುಗಿಸಿದ ತಕ್ಷಣ, ಸ್ನಾನದ ಮನೆಗೆ ಹೋದಳು… ಸ್ನಾನ ಅನ್ನುವುದು ಅವಳಿಗೆ ಔಷಧಿಯ ಹಾಗೆ. ಊಟ ಮುಗಿದ ತಕ್ಷಣ ಹೋಗಿ ತಣ್ಣನೆ ನೀರಿಗೆ ಕಾಲಿಟ್ಟಳು. ಕಾಲಿಡುತಿದ್ದ ಹಾಗೇ ಲಕ್ವ ಹೊಡೀತು.’

‘ಅದೇ ಆಶ್ಚರ್ಯ!’ ಅಂದ ಝೋಸ್ಸಿಮೋವ್.

‘ಅವಳಿಗೆ ತುಂಬಾ ಹೊಡೆದಿದ್ದನಾ?’

‘ಹೊಡೆದಿದ್ದನೋ ಬಿಟ್ಟನೋ, ಜೀವ ಅಂತೂ ಹೋಯಿತೋ?’ ಅಂದಳು ದುನ್ಯಾ.

‘ಹ್ಞಂ… ಅಲ್ಲಾ ಅಮ್ಮಾ, ನನಗೆ ಹೇಳಕ್ಕೆ ಎಂಥ ವಿಷಯ ಎತ್ತಿಕೊಂಡಿದೀಯಲ್ಲ ನಾನ್ಸೆನ್ಸ್!‘ ರೇಗಿಕೊಂಡು ತಟ್ಟನೆ ಅಂದ ರಾಸ್ಕೋಲ್ನಿಕೋವ್, ಮಾತಾಡುವ ಉದ್ದೇಶ ಇರಲಿಲ್ಲ, ಸುಮ್ಮನೆ ಮಾತು ಬಂತು ಅನ್ನುವ ಹಾಗೆ.

‘ಏನು ಮಾತಾಡಬೇಕೋ ಗೊತ್ತಾಗಲೇ ಇಲ್ಲಪ್ಪಾ,’ ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾಳ ಬಾಯಿಂದ ಮಾತು ಜಾರಿತು.

‘ನಿಮಗೆಲ್ಲ ಏನು ನನ್ನ ಕಂಡರೆ ಭಯಾನಾ?’ ರಾಸ್ಕೋಲ್ನಿಕೋವ್ ತುಟಿ ಸೊಟ್ಟ ಮಾಡಿ ನಕ್ಕ.

‘ನಿಜ ಹೇಳಬೇಕೆಂದರೆ, ಭಯಾನೇ,’ ದುನ್ಯಾ ಅಣ್ಣನನ್ನು ನೇರವಾಗಿ ದುರುಗುಟ್ಟಿ ನೋಡುತ್ತ, ಅಂದಳು. ‘ಮಹಡಿ ಮೆಟ್ಟಿಲು ಹತ್ತತಾ ಇರೋವಾಗ ಅಮ್ಮನಿಗೆ ಭಯ ಆಗಿ ಕ್ರಾಸ್ ಕೂಡ ಮಾಡಿಕೊಂಡಳು.’

‘ಅಯ್ಯೋ, ರೋದ್ಯಾ! ಸಿಟ್ಟು ಮಾಡಿಕೋಬೇಡ! ದುನ್ಯಾ, ಅದೆಲ್ಲಾ ಬೇಕಾ ಈಗ?’ ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ಗೊಂದಲದಲ್ಲಿ ಮಾತಾಡಿದಳು. ನಿಜ ಏನಪ್ಪಾ ಅಂದರೆ, ನಾವು ಇಲ್ಲಿಗ ಬರೋವರೆಗೂ, ರೈಲಿನಲ್ಲಿ ಕೂತು ಕನಸು ಕಾಣತಾ ಇದ್ದೆ-ನಿನ್ನ ನೋಡತೇನೆ, ಎಲ್ಲಾ ವಿಷಯ ನಿನಗೆ ಹೇಳತೇನೆ, ನೀನೂ ಎಲ್ಲಾ ಹೇಳತೀಯ ಅಂದುಕೊಳ್ಳತಾ ಇದ್ದೆ. ನನಗೆ ಎಷ್ಟು ಖುಷಿಯಾಗಿತ್ತು ಅಂದರೆ ನನಗೆ ಪ್ರಯಾಣ ಮಾಡಿದ್ದೇ ತಿಳೀಲಿಲ್ಲ! ಅಯ್ಯೋ, ಏನೇನೋ ಮಾತಾಡತಾ ಇದೀನಿ. ಈಗಲೂ ಖುಷಿಯಾಗಿದೀನಿ. ನಿನ್ನ ನೋಡಿದ್ದೇ ಸಂಭ್ರಮ, ರೋದ್ಯಾ! ದುನ್ಯಾ ಸುಮ್ಮನೆ ಏನೇನೋ ಹೇಳಬೇಡ, ನೀನು!”

‘ಸಾಕಮ್ಮಾ, ಸಾಕು, ಸಾಕು.’ ಅಮ್ಮನ ಕೈಯನ್ನು ಒಂದೇ ಸಮ ಹಿಸುಕುತ್ತ, ಅಮ್ಮನ ಮುಖ ನೋಡದೆ, ನೆಲ ನೋಡಿಕೊಂಡು ಮಾತಾಡಿದ ರಾಸ್ಕೋಲ್ನಿಕೋವ್. ‘ಬೇಕಾದ್ದೆಲ್ಲ, ಬೇಕಾದಷ್ಟು ಮಾತಾಡಣ, ಅದಕ್ಕೆ ಬೇಕಾದಷ್ಟು ಟೈಮಿದೆ.’

ಇಷ್ಟು ಹೇಳುತ್ತಿದ್ದ ಹಾಗೆ ಅವನ ಮನಸಿನಲ್ಲಿ ಗೊಂದಲ ಹುಟ್ಟಿತು, ಮುಖ ಮತ್ತೆ ಬಣ್ಣಗೆಟ್ಟಿತು. ಸಾವಿನಂಥ ತಣ್ಣನೆಯ ಭಾವ ಮೈಮನಸಿನಲ್ಲಿ ತುಂಬಿತು. ಮಾತಾಡುತಿದ್ದ ಹಾಗೇ ಸುಳ್ಳುಹೇಳುತ್ತಿದ್ದೇನೆ ಅನ್ನುವ ಸಂಗತಿ ಮನಸಿಗೆ ಸ್ಪಷ್ಟವಾಗಿತ್ತು. ಮನಸಿನಲ್ಲಿರುವುದನ್ನೆಲ್ಲ ಹೇಳುವಂಥ ಸಮಯ ಯಾವತ್ತೂ ಬರುವುದಿಲ್ಲ, ಅಷ್ಟೇ ಅಲ್ಲ, ತನ್ನ ಮನಸಿನಲ್ಲಿರುವ ಯಾವುದನ್ನೂ ಎಂದೂ ಯಾರ ಜೊತೆಯಲ್ಲೂ ಹೇಳಿಕೊಳ್ಳಲು ಸಾಧ್ಯವೇ ಇಲ್ಲ ಅನ್ನುವುದೂ ಅವನಿಗೆ ಹೊಳೆದಿತ್ತು. ಹಿಂಸೆ ಕೊಡುವ ಈ ಭಾವಗಳು ಎಷ್ಟು ಗಾಢವಾಗಿದ್ದವೆಂದರೆ ಒಂದು ಕ್ಷಣ ಅವನು ತನ್ನನ್ನೇ ಪೂರಾ ಮರೆತುಬಿಟ್ಟ. ಎದ್ದು ನಿಂತ. ಯಾರ ಮುಖವನ್ನೂ ನೋಡದೆ ಬಾಗಿಲಿನತ್ತ ಹೆಜ್ಜೆ ಹಾಕಿದ.

‘ಏನು ಮಾಡತಾ ಇದೀಯಾ?’ ಅವನ ತೋಳು ಹಿಡಿದು ಜೋರಾಗಿ ಕೇಳಿದ ರಝುಮಿಖಿನ್.

ರಾಸ್ಕೋಲ್ನಿಕೋವ್ ಮತ್ತೆ ಕೂತ. ಸುಮ್ಮನೆ ಸುತ್ತಲೂ ನೋಡಿದ. ರೂಮಿನಲ್ಲಿದ್ದ ಎಲ್ಲರೂ ತಬ್ಬಿಬ್ಬಾಗಿ ಅವನನ್ನೇ ನೋಡುತ್ತಿದ್ದರು.
‘ಯಾಕೆ ಎಲ್ಲರೂ ಮಂಕು ಹಿಡಿದವರ ಹಾಗೆ ಕೂತಿದ್ದೀರಿ?’ ನಿರೀಕ್ಷೆಯೇ ಮಾಡದಿದ್ದ ರೀತಿಯಲ್ಲಿ ರಾಸ್ಕೋಲ್ನಿಕೋವ್ ತಟ್ಟನೆ ಮಾತಾಡಿದ.
‘ಏನಾದರೂ ಹೇಳಿ. ಹೀಗೆ ಸುಮ್ಮನೆ ಕೂತಿರಕ್ಕಾಗಲ್ಲ. ಸರಿ, ಮಾತಾಡೀ! ಎಲ್ಲಾರೂ ಎಷ್ಟೋ ದಿನ ಆದಮೇಲೆ ಸೇರಿದೇವೆ, ಈಗ ಬಾಯಿಮುಚ್ಚಿಕೊಂಡು ಕೂತಿದೇವೆ! ಹೇಳಿ, ಏನಾದರೂ!’

‘ಸದ್ಯ, ದೇವರು ದೊಡ್ಡವನು. ಎಲ್ಲಿ ಮತ್ತೆ ನಿನ್ನೆ ಥರಾನೇ ಆಗತ್ತೋ ಅನಿಸಿತ್ತು ಒಂದು ಕ್ಷಣ,’ ಶಿಲುಬೆಯಾಕಾರದಲ್ಲಿ ಕ್ರಾಸ್ ಮಾಡಿಕೊಳ್ಳುತ್ತ ಅಂದಳು ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ.

‘ಏನಾಯಿತು ರೋದ್ಯಾ?’ ದುನ್ಯಾ ಅನುಮಾನಪಡುತ್ತ ಕೇಳಿದಳು.

‘ಏನಿಲ್ಲ. ಏನೋ ಜ್ಞಾಪಕ ಬಂತು, ಅಷ್ಟೇ,’ ಅಂದವನೇ ಇದ್ದಕಿದ್ದ ಹಾಗೆ ಜೋರಾಗಿ ನಕ್ಕ.

‘ಒಳ್ಳೆಯದೇ ಆಯಿತು. ಕೊನೆಗೂ ಮಾತಾಡಿದ. ಇಲ್ಲದೆ ಇದ್ದಿದ್ದರೆ ನನಗೂ ಅನುಮಾ…’ ಸೋಫಾದಿಂದ ಏಳುತ್ತ ಝೋಸ್ಸಿಮೋವ್ ಅಂದ.
‘ನಾನು ಹೊರಡತೇನೆ ಇನ್ನ. ಬರತೇನೆ, ಆಮೇಲೆ… ಸಾಧ್ಯವಾದರೆ… ನೀವು ಇಲ್ಲೇ ಇರೋದಾದರೆ…’
ಎಲ್ಲರಿಗೂ ತಲೆಬಾಗಿ ವಂದಿಸಿ ಹೊರಟು ಹೋದ.

‘ಎಷ್ಟು ಒಳ್ಳೇವನಲ್ಲವಾ!’ ಅಂದಳು ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ.

‘ಹ್ಞೂಂ, ಅದ್ಭುತವಾದ ಮನುಷ್ಯ, ಓದಿದಾನೆ, ಜಾಣ…’ ಹರಟೆಹೊಡೆಯುವವನ ಹಾಗೆ ರಾಸ್ಕೋಲ್ನಿಕೋವ್ ತಟ್ಟನೆ ಮಾತು ಸೇರಿಸಿದ. ಇದುವರೆಗೆ ಇಲ್ಲದಿದ್ದ ಉತ್ಸಾಹ ಬಂದಿತ್ತು. ‘ನನಗೆ ಕಾಯಿಲೆ ಆಗೋದಕ್ಕೆ ಮುಂಚೆ ಇವನನ್ನ ಎಲ್ಲಿ ನೋಡಿದ್ದೇ… ನೆನಪಿಲ್ಲ. ಎಲ್ಲೋ ನೋಡಿದ್ದೆ, ಒಟ್ಟು… ಇಗೋ ಇವನು ಇನ್ನೊಬ್ಬ ಒಳ್ಳೆಯವನು!’ ಅನ್ನುತ್ತ ರಝುಮಿಖಿನ್‍ ನನ್ನು ತೋರಿಸಿದ. ‘ನಿನಗೆ ಇಷ್ಟ ಆದನಾ ಇವನು, ದುನ್ಯಾ?’ ಎಂದು ಕೇಳಿದವನು ಕಾರಣವಿಲ್ಲದೆ ಜೋರಾಗಿ ನಕ್ಕುಬಿಟ್ಟ.

‘ತುಂಬ…’ ಅಂದಳು ದುನ್ಯಾ.

‘ಎಂಥಾ ಹಂದೀನೋ ನೀನು!’ ರಝುಮಿಖಿನ್ ಮುಜುಗರ ಪಡುತ್ತ, ಮುಖ ಕೆಂಪು ಮಾಡಿಕೊಂಡು, ಕುರ್ಚಿಯಿಂದ ಎದ್ದ. ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾಳ ಮುಖದಲ್ಲಿ ಕಿರುನಗೆ ಇತ್ತು. ರಾಸ್ಕೋಲ್ನಿಕೋವ್ ಗಹಗಹಿಸಿದ.

‘ಯಾಕೆ?… ಎಲ್ಲಿಗೆ ಹೊರಟೆ?’ ರಝುಮಿಖಿನ್‍ ನನ್ನು ಕೇಳಿದ.

‘ನಾನೂ.. ನಾನೂ ಕೂಡ… ಕೆಲಸ… ಹೋಗಬೇಕು…’

‘ಎಲ್ಲೂ ಹೋಗಬೇಕಾಗಿಲ್ಲ, ಇಲ್ಲೇ ಇರು. ಡಾಕ್ಟರು ಹೋದ ಅಂತ ನೀನೂ ಹೋಗಬೇಕಾ? ಬೇಡ… ಎಷ್ಟು ಗಂಟೆ?.. ಇನ್ನೂ ಹನ್ನೆರಡು, ಅಷ್ಟೇನಾ! ನಿನ್ನ ಗಡಿಯಾರ ಎಷ್ಟು ಮುದ್ದಾಗಿದೆ, ದುನ್ಯಾ! ಯಾಕೆ ಎಲ್ಲರೂ ಮತ್ತೆ ಸುಮ್ಮನಾದಿರಿ? ಬರೀ ನಾನೇ ಮಾತಾಡತಾ ಇದೀನಿ!’

‘ಮಾರ್ಫಿಯಾ ಪೆಟ್ರೋವ್ನಾ ಕೊಟ್ಟಿದ್ದು,’ ಅಂದಳು ದುನ್ಯಾ.

‘ತುಂಬ ಬೆಲೆ ಬಾಳತ್ತೆ,’ ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ಮಾತು ಸೇರಿಸಿದಳು.

‘ಹೆಂಗಸರ ಗಡಿಯಾರಕ್ಕಿಂತ ತುಂಬ ದೊಡ್ಡ ಸೈಜಿನದು.’

‘ದೊಡ್ಡದೇ ನನಗಿಷ್ಟ,’ ಅಂದಳು ದುನ್ಯಾ.

ರಝುಮಿಖಿನ್ ಮನಸಿನಲ್ಲೇ, ‘ಹಾಗಾದರೆ ಇದು ಅವಳನ್ನ ಮದುವೆಯಾಗುವವನು ಕೊಟ್ಟದ್ದಲ್ಲ!’ ಅಂದುಕೊಂಡ. ಅವನಿಗೆ ಯಾಕೋ ಬಹಳ ಸಂತೋಷವಾಗಿತ್ತು.

‘ಇದನ್ನೆಲ್ಲೋ ಪೀಟರ್ ಪೆಟ್ರೊವಿಚ್ ಕೊಡಿಸಿದ್ದು ಅಂದುಕೊಂಡಿದ್ದೆ,’ ಅಂದ ರಾಸ್ಕೋಲ್ನಿಕೋವ್.

‘ಇಲ್ಲ, ದುನ್ಯಾಗೆ ಅವನಿನ್ನೂ ಏನೂ ಕೊಟ್ಟಿಲ್ಲ.’

‘ನಾನು ಒಬ್ಬಳನ್ನ ಪ್ರೀತಿ ಮಾಡತಿದ್ದೆ…. ಮದುವೆ ಆಗಬೇಕು ಅಂತಿದ್ದೆ… ಜ್ಞಾಪಕ ಇದೆಯಾಮ್ಮಾ?’ ರಾಸ್ಕೋಲ್ನಿಕೋವ್ ಅಮ್ಮನ ಮುಖವನ್ನೇ ನೋಡುತ್ತ ತಟ್ಟನೆ ಕೇಳಿದ. ಅನಿರೀಕ್ಷಿತವಾದ ಮಾತಿನಿಂದ, ಮಾತಿನ ದನಿಯಿಂದ ಪುಲ್ಚೇರಿಯಾ ಬೆಚ್ಚಿದ್ದಳು.

‘ಹ್ಞೂ, ಇದೇ,’ ಅನ್ನುತ್ತ ದುನ್ಯಾಳನ್ನೂ ರಝುಮಿಖಿನ್‍ ನನ್ನೂ ನೋಡಿದಳು.

‘ಹ್ಞೂಮ್! ಹ್ಞಾ.. ಸರಿ! ಅಲ್ಲಾ. ನಿನಗೆ ಏನಂತ ಹೇಳಲಿ. ನನಗೆ ಅಷ್ಟು ಜ್ಞಾಪಕ ಕೂಡ ಇಲ್ಲ. ಅವಳು ತುಂಬ ವೀಕು,’ ಇದ್ದಕಿದ್ದ ಹಾಗೆ ಯಾವುದೋ ಯೋಚನೆಯಲ್ಲಿ ಕಳೆದುಹೋದವನ ಹಾಗೆ ನೆಲ ನೋಡುತ್ತ ಮಾತಾಡಿದ ರಾಸ್ಕೋಲ್ನಿಕೋವ್.

‘ಯಾವಾಗಲೂ ಕಾಯಿಲೆ.. ಭಿಕ್ಷೆ ಹಾಕೋದು, ದಾನ ಧರ್ಮ ಮಾಡುವುದು ಅವಳಿಗೆ ತುಂಬ ಇಷ್ಟ. ಕ್ರಿಶ್ಚಿಯನ್ ಕನ್ಯೆಯರ ಮಠಕ್ಕೆ ಸೇರಬೇಕು ಅಂತ ಅವಳಿಗೆ ಆಸೆ. ಒಂದು ಸಲ ಅದನ್ನ ಹೇಳತ ಕಣ್ಣಲ್ಲಿ ನೀರು ತಂದುಕೊಂಡಿದ್ದಳು. ಹ್ಞಾ, ಅದು ಮಾತ್ರ ಚೆನ್ನಾಗಿ ನೆನಪಿದೆ… ತೀರ ಸೀದಾ ಸಾದಾ ಹುಡುಗಿ. ಆವಾಗ ನಾನು ಅವಳನ್ನ ಮನಸ್ಸಿಗೆ ಅಷ್ಟು ಯಾಕೆ ಹಚ್ಚಿಕೊಂಡಿದ್ದೆನೋ ನಿಜವಾಗಲೂ ನನಗೇ ಗೊತ್ತಿಲ್ಲ. ಅವಳಿಗೆ ಅಷ್ಟೊಂದು ಕಾಯಿಲೆ ಅಂತ ಇರಬಹುದು… ಅವಳು ಕುಂಟೀನೋ ಗೂನು ಬೆನ್ನವಳೋ ಆಗಿದ್ದಿದ್ದರೆ ಇನ್ನೂ ಜಾಸ್ತಿ ಪ್ರೀತಿ ಮಾಡತಿದ್ದೆನೋ ಏನೋ…’ (ವಿಷಾದದ ನಗು ನಕ್ಕ.) ‘ಅದೊಂಥರಾ… ಬೇಸಗೆ ಶುರುವಾದಾಗ ಮನಸ್ಸು ಕೊತಕೊತ ಅನ್ನತ್ತಲ್ಲ ಅಂಥ ಭ್ರಮೆ’

ಅವನು ಸ್ವಲ್ಪ ಗಮನಿಸಿ ನೋಡಿದ್ದಿದ್ದರೆ ರಾಸ್ಕೋಲ್ನಿಕೋವ್ ಭಾವುಕನಾಗಿಲ್ಲ, ಬದಲಾಗಿ ಅದಕ್ಕೆ ವಿರುದ್ಧವಾದ ಭಾವದಲ್ಲಿದ್ದಾನೆ ಅನ್ನುವುದು ತಿಳಿಯುತ್ತಿತ್ತು. ದುನ್ಯಾ ಅದನ್ನು ಗಮನಿಸಿದ್ದಳು, ಕಳವಳಪಡುತ್ತ ಅಣ್ಣನನ್ನೇ ನೋಡುತ್ತಿದ್ದಳು.

‘ಅಲ್ಲ, ಭ್ರಮೆ ಅಲ್ಲ,’ ದುನ್ಯಾ ಉತ್ಸಾಹದಲ್ಲಿ ಹೇಳಿದಳು.

ತಂಗಿಯ ಮಾತಿಗೆ ಗಮನಕೊಡಲು ಹೆಣಗಿದ. ಅವಳ ಮಾತನ್ನು ಕೇಳಿಸಿಕೊಳ್ಳಲಿಲ್ಲವೋ, ಅರ್ಥವಾಗಲಿಲ್ಲವೋ ಅನ್ನುವ ಹಾಗಿದ್ದ. ಯೋಚನೆಯಲ್ಲಿ ಮುಳುಗಿದವನ ಹಾಗೆ ಎದ್ದ, ಅಮ್ಮನ ಹತ್ತಿರಕ್ಕೆ ಹೋದ, ಅಮ್ಮನಿಗೆ ಮುತ್ತಿಟ್ಟ, ಮತ್ತೆ ತನ್ನ ಜಾಗಕ್ಕೆ ಬಂದು ಕೂತ.

‘ಅವಳ ಮೇಲೆ ನಿನಗಿನ್ನೂ ಪ್ರೀತಿ ಇದೆ!’ ಅಂದಳು. ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾಳ ಮನಸ್ಸು ಮಿಡಿದಿತ್ತು.

‘ಅವಳನ್ನ? ಈಗ? ಹೋ.. ನೀನು ಅವಳ ಬಗ್ಗೆ ಹೇಳತಾ ಇದೀಯಾ! ಇಲ್ಲ. ಅದೆಲ್ಲ ಯಾವ ಕಾಲದಲ್ಲೋ ಬೇರೆ ಯಾವದೋ ಲೋಕದಲ್ಲಿ ನಡೆದ ಹಾಗಿದೆ… ನನ್ನ ಸುತ್ತಲೂ ಈಗ ನಡೀತಿರೋದೆಲ್ಲಾ ಇಲ್ಲಲ್ಲ ಬೇರೆ ಇನ್ನೆಲ್ಲೋ ನಡೀತಿರೋ ಹಾಗಿದೆ…’ ಅನ್ನುತ್ತ ಎಲ್ಲರನ್ನೂ ದಿಟ್ಟಿಸಿದ.

‘ಈಗಲೂ ಅಷ್ಟೇ, ನಿಮ್ಮನ್ನೆಲ್ಲ ಸಾವಿರ ಮೈಲಿ ದೂರದಿಂದ ನೋಡತಾ ಇದೀವಿ ಅನ್ನಿಸತ್ತೆ… ಆ ವಿಚಾರ ಈಗ ಯಾಕೆ ಮಾತಾಡತಿದೀನೋ ದೆವ್ವಕ್ಕೇ ಗೊತ್ತು… ಯಾಕೆ ಸುಮ್ಮನೆ ಪ್ರಶ್ನೆ ಕೇಳತೀರಿ?’ ಸುಮ್ಮನಾದ, ಚಡಪಡಿಸಿದ, ಉಗುರು ಕಚ್ಚಿಕೊಳ್ಳುತ್ತ ಮತ್ತೆ ಯೋಚನೆಯಲ್ಲಿ ಬಿದ್ದ.

ಭಾರವಾದ ಮೌನವಿತ್ತು. ‘ಇದೆಂಥಾ ರೂಮು ನಿನ್ನದು, ರೋದ್ಯಾ? ಹೆಣದ ಪೆಟ್ಟಿಗೆ ಥರಾ ಇದೆ! ನನಗೆ ಗೊತ್ತು, ಹೀಗೆ ನೀನು ಕೊರಗೋದಕ್ಕೆ ಈ ರೂಮೂ ಕಾರಣ, ನನಗೆ ಗೊತ್ತು.’ ತಟ್ಟನೆ ಮೌನವನ್ನು ಮುರಿದು ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ಅಂದಳು.
‘ನನ್ನ ರೂಮು?…’ ಮನಸ್ಸನ್ನು ಇನ್ನೆಲ್ಲೋ ಇಟ್ಟುಕೊಂಡು ಉತ್ತರ ಕೊಟ್ಟ. ‘ಹೌದು, ನನ್ನ ಈ ಪಾಡಿಗೆ ರೂಮು ಕೂಡ ಕಾರಣ ಅಂತ ನನಗೂ ಅನಿಸಿದೆ.’ ವಿಚಿತ್ರವಾಗಿ ಮುಖ ಮಾಡಿಕೊಂಡು… ‘ಗೊತ್ತಾ ಅಮ್ಮಾ, ನೀನು ಎಂಥ ವಿಚಿತ್ರ ಮಾತು ಹೇಳಿದೀಯ, ಗೊತ್ತಾ…’ ತಟ್ಟನೆ ಅಂದ.

ಇನ್ನು ಸ್ವಲ್ಪ ಹೊತ್ತು ಹೀಗೇ ಇದ್ದಿದ್ದರೆ, ಮೂರು ವರ್ಷವಾದ ಮೇಲೆ ಮತ್ತೆ ಒಟ್ಟುಗೂಡಿದ್ದ ಈ ಗುಂಪು, ಎಲ್ಲವನ್ನೂ ಮನಸ್ಸು ಬಿಚ್ಚಿ ಮಾತಾಡಿಕೊಳ್ಳಲು ಇಷ್ಟಪಟ್ಟಿದ್ದ ಕುಟುಂಬ, ಮಾತಿಗೇ ವಿಷಯವೇ ಇಲ್ಲದೆ ಅಸಹನೀಯವಾಗುತ್ತಿತ್ತು, ಅವನ ಪಾಲಿಗೆ. ಆದರೂ ತುರ್ತಾಗಿ ಇತ್ಯರ್ಥವಾಗಲೇಬೇಕಾದ ಒಂದು ವಿಷಯವಿತ್ತು. ಹೀಗೋ ಹಾಗೋ ಎರಡರಲ್ಲಿ ಒಂದು ಇವತ್ತೇ ತೀರ್ಮಾನಮಾಡಬೇಕು ಎಂದು ಬೆಳಗ್ಗೆ ಎದ್ದ ತಕ್ಷಣ ರಾಸ್ಕೋಲ್ನಿಕೋವ್‍ ಗೆ ಅನಿಸಿತ್ತು. ಅದೀಗ ನೆನಪಿಗೆ ಬಂತು. ಸಹಿಲಾಗದ ಮುಜುಗರದಿಂದ ತಪ್ಪಿಸಿಕೊಳ್ಳಲು ಅದನ್ನೇ ಬಳಸಿಕೊಂಡ ರಾಸ್ಕೋಲ್ನಿಕೋವ್.

‘ಕೇಳು, ದುನ್ಯಾ,’ ತುಂಬ ಗಂಭೀರವಾಗಿ, ನಿರ್ಭಾವುಕನಾಗಿ ಶುರುಮಾಡಿದ ರಾಸ್ಕೋಲ್ನಿಕೋವ್. ‘ನಿನ್ನೆ ನಾನು ಮಾತಾಡಿದ ರೀತಿ ಸರಿ ಇರಲಿಲ್ಲ. ಸಾರಿ. ಆದರೂ ಈ ಮಾತು ಹೇಳುವುದು ನನ್ನ ಕರ್ತವ್ಯ. ನಾನು ಅಥವಾ ಪೀಟರ್ ಪೆಟ್ರೊವಿಚ್ ಅಂತ ಹೇಳಿದ್ದೆನಲ್ಲ, ಅದರಲ್ಲಿ ಮಾತ್ರ ಯಾವ ಬದಲಾವಣೆನೂ ಇಲ್ಲ. ನಾನು ದುಷ್ಟನೇ ಇರಬಹುದು, ನೀನು ದುಷ್ಟಳಾಗಬೇಡ. ನಮ್ಮಿಬ್ಬರಲ್ಲಿ ಒಬ್ಬರು, ಯಾರು ಬೇಕು ಅಂತ ನೀನೇ ತೀರ್ಮಾನ ಮಾಡು. ಇಬ್ಬರಲ್ಲಿ ಒಬ್ಬರು. ನೀನೇನಾದರೂ ಅವನನ್ನ ಮದುವೆಯಾದರೆ ನಾನು ನಿನ್ನಣ್ಣ ಅಲ್ಲ, ನೀನು ನನ್ನ ತಂಗಿ ಅಲ್ಲ.’

‘ರೋದ್ಯಾ, ರೋದ್ಯಾ! ಇದೆಲ್ಲಾ ನಿನ್ನೆಯದೇ ಮಾತು. ನಿನ್ನನ್ನ ನೀನು ಯಾಕೆ ದುಷ್ಟ ಅಂದುಕೊಳ್ಳುತ್ತೀ? ನನಗೆ ತಡಕೊಳ್ಳಕ್ಕಾಗಲ್ಲ! ಎಲ್ಲಾ ನಿನ್ನೆ ಹೇಳಿದ ಮಾತೇ… ಅದೆ…’ ಕಹಿಯಾದ ದನಿಯಲ್ಲಿ ಅಂದಳು ಅಮ್ಮ.

ದುನ್ಯಾ ಕೂಡ ದೃಢವಾಗಿ, ನಿರ್ಭಾವುಕವಾಗಿ ಹೇಳಿದಳು- ‘ಅಣ್ಣಾ, ನೀನು ತಪ್ಪು ತಿಳಕೊಂಡಿದೀಯ, ನಾನು ರಾತ್ರಿಯೆಲ್ಲಾ ಯೋಚನೆ ಮಾಡಿದೆ, ನೀನು ಮಾಡುತ್ತಿರುವ ತಪ್ಪು ಗೊತ್ತಾಯಿತು. ಇನ್ಯಾರಿಗೋಸ್ಕರಾನೋ ಮತ್ತೆ ಯಾರಿಗಾಗಿಯೋ ನಾನು ತ್ಯಾಗ ಮಾಡತಾ ಇದೇನೆ ಅಂದುಕೊಂಡಿದೀಯ. ಹಾಗಲ್ಲವೇ ಅಲ್ಲ. ನಾನು ನನಗೋಸ್ಕರಾನೇ ಮದುವೆ ಆಗತಿದೇನೆ. ಕಷ್ಟ ಆಗತ್ತೆ, ನಿಜ. ನನ್ನ ಮದುವೆಯಿಂದ ನಮ್ಮ ಮನೆಗೂ ಒಳ್ಳೇದಾದರೆ ಸಂತೋಷ. ಆದರೆ ಅದೇ ಮುಖ್ಯ ಕಾರಣ ಅಲ್ಲ ನನ್ನ ನಿರ್ಧಾರಕ್ಕೆ…’

ರಾಸ್ಕೋಲ್ನಿಕೋವ್ ತುಟಿ ಕಚ್ಚಿ, ಮನಸಿನಲ್ಲೇ ಅಂದುಕೊಂಡ- ‘ಸುಳ್ಳು ಹೇಳತಾ ಇದಾಳೆ, ತನಗೇ ತಾನೇ ಸುಳ್ಳು ಹೇಳಿಕೊಳ್ಳತಾ ಇದಾಳೆ. ಅಭಿಮಾನ ಜಾಸ್ತಿ. ಬೇರೆಯವರಿಗೆ ಒಳ್ಳೆಯದಾಗಲಿ ಅಂತ ಮದುವೆ ಆಗತಿದೇನೆ ಅಂತ ಒಪ್ಪೋದೇ ಇಲ್ಲ! ಎಂಥಾ ದುಷ್ಟ ಜನ! ಇವರ ಪ್ರೀತೀನೂ ದ್ವೇಷದ ಹಾಗಿರತ್ತೆ. ನನಗೆ ಇವರು ಯಾರನ್ನ ಕಂಡರೂ ಆಗಲ್ಲ…’

ದುನ್ಯಾ ಮುಂದುವರೆಸಿದಳು: ‘ಮನೇಲ್ಲಿರೋದೂ ಕೆಟ್ಟ ಪರಿಸ್ಥಿತಿ, ಮದುವೆ ಆಗೋದೂ ಕೆಟ್ಟ ಪರಿಸ್ಥಿತಿ. ಒಂದೇ ಮಾತಿನಲ್ಲಿ ಹೇಳೋದಾದರೆ ಕಡಮೆ ಕೆಟ್ಟ ಪರಿಸ್ಥಿತಿ ಇರಲಿ ಅಂತಿದೇನೆ. ಪೀಟರ್ ಪೆಟ್ರೋವಿಚ್ ನನ್ನಿಂದ ಏನೇನು ಇಷ್ಟಪಡತಾನೋ ಅದೆಲ್ಲಾ ಮಾಡತೇನೆ. ಅಂದರೆ ಅವನಿಗೆ ಮೋಸ ಮಾಡತಾ ಇಲ್ಲ ನಾನು… ಅದ್ಯಾಕೆ ಹಾಗೆ ನಗತಾ ಇದೀಯ?’

ಅವಳ ಮುಖವೂ ಕೆಂಪಾಗಿತ್ತು, ಅವಳ ಕಣ್ಣಲ್ಲಿ ಕೋಪವಿತ್ತು.

‘ಎಲ್ಲಾ ಕೆಲಸ ಮಾಡತೀಯಾ?’ ವಿಷ ತುಂಬಿದ ನಗು ನಗುತ್ತ ಕೇಳಿದ.

‘ಏನೇನು ಮಾಡಬಹುದೋ ಅದನ್ನ. ಪೀಟರ್ ಪೆಟ್ರೊವಿಚ್‍ ಮದುವೆಯ ಪ್ರಸ್ತಾಪ ಮಾಡಿದ ರೀತಿ ನೋಡಿದ ತಕ್ಷಣ ಅವನಿಗೆ ಏನು ಬೇಕು ಅನ್ನುವುದು ಅರ್ಥವಾಯಿತು. ಅವನಿಗೆ ಬಡಿವಾರ ಜಾಸ್ತಿ, ನಾನೇ ಎಲ್ಲರಿಗಿಂತ ಮೇಲು ಅನ್ನುವ ಭಾವನೆನೂ ಇದೆ. ಹಾಗೇ ನನಗೂ ಬೆಲೆ ಕೊಡತಾನೆ ಅಂದುಕೊಂಡಿದೇನೆ… ಯಾಕೆ ಮತ್ತೆ ಹಾಗೇ ನಗತಾ ಇದೀಯ?’

ಅವಳಿಗೂ ಕೋಪ ಬಂದಿತ್ತು, ಅವಳ ಕಣ್ಣು ಉರಿಯುತ್ತಿದ್ದವು.

‘ನೀನು ಯಾಕೆ ಮತ್ತೆ ನಾಚುತ್ತಾ ಇದೀಯ? ಸುಳ್ಳು ಹೇಳತಾ ಇದೀಯ. ತಾವು ಹೇಳಿದ್ದೇ ಸರಿ ಅನ್ನುವ ಹೆಂಗಸರ ಹಟ ನಿನ್ನದು. ನಿನ್ನ ಮಾತೇ ಸರಿ ಅಂತ ನನ್ನ ಒಪ್ಪಿಸುವುದಕ್ಕೆ ನೋಡತಾ ಇದೀಯ. ಪೀಟರ್ ಪೆಟ್ರೊವಿಚ್‍ ನ ಮೇಲೆ ನಿನಗೆ ಗೌರವ ಇರುವುದಕ್ಕೆ ಸಾಧ್ಯವೇ ಇಲ್ಲ. ನಾನು ಅವನನ್ನ ನೋಡಿದೇನೆ, ಅವನ ಜೊತೆ ಮಾತಾಡಿದೇನೆ. ನಿನ್ನನ್ನ ನೀನು ದುಡ್ಡಿಗೆ ಮಾರಿಕೊಳ್ಳತಾ ಇದೀಯ. ಕೆಟ್ಟ ಹೆಂಗಸಿನ ಹಾಗೆ ನಡಕೊಳ್ಳತಾ ಇದೀಯ. ಕೊನೆಪಕ್ಷ ಇನ್ನೂ ನಾಚಿಕೆ ಅನ್ನೋದು ಆಗತ್ತಲ್ಲ ನಿನಗೆ, ಅದೇ ಸಮಾಧಾನ.’

‘ಇಲ್ಲಾ, ಸುಳ್ಳು ಹೇಳತಾ ಇಲ್ಲ ನಾನು!’ ದುನ್ಯಾ ತಾಳ್ಮೆ ಕಳಕೊಂಡು ಚೀರಿದಳು. ‘ಅವನು ನನಗೆ ಬೆಲೆ ಕೊಡತಾನೆ, ನನ್ನ ಇಷ್ಟಪಡತಾನೆ, ನನ್ನೊಳಗೂ ಅವನ ಬಗ್ಗೆ ಗೌರವ ಇದೆ ಅಂತ ಗೊತ್ತಾಗೋವರೆಗೆ ಮದುವೆ ಆಗುವಂಥಾವಳಲ್ಲ ನಾನು. ಇವತ್ತು ಗೊತ್ತಾಗತ್ತೆ ಅದು. ಇಂಥಾ ಮದುವೆ ನೀನು ಹೇಳುವ ಹಾಗೆ ಕೆಟ್ಟ ಮದುವೆ ಅಲ್ಲ! ಅಕಸ್ಮಾತ್ ನೀನು ಹೇಳುವ ಹಾಗೆ ಅದು ಒಳ್ಳೇ ಮದುವೆ ಅಲ್ಲದೇ ಇದ್ದರೂನೂ ನಾನು ಒಂದು ಸಾರಿ ನಿರ್ಧಾರ ಮಾಡಿದ್ದಾಗಿದೆ ಅಂತ ತಿಳಿದಮೇಲೂ ನೀನು ಹೀಗೆಲ್ಲ ಹೇಳೋದು ಸರೀನಾ? ಕೆಟ್ಟದ್ದಲ್ಲವಾ? ನಿನ್ನಲ್ಲಿ ಇಲ್ಲದೆ ಇರೋ ಹೀರೋಯಿಸಂನ ನಾನು ತೋರಿಸಬೇಕು ಅಂತ ಯಾಕೆ ಅಂದುಕೊಳ್ಳತೀ? ದಬ್ಬಾಳಿಕೆ ಮಾಡೋ ಕೆಟ್ಟ ರಾಜನ ಥರಾ ನೀನು! ಹಾಳಾದರೆ ನಾನೊಬ್ಬಳು ಹಾಳಾಗತೇನೆ, ನಾನೇನೂ ಹೋಗಿ ಯಾರಿಗೂ ಚೂರಿ ಹಾಕಿಲ್ಲ! ಯಾಕೆ ಹಾಗೆ ನೋಡತಾ ಇದೀಯ ನನ್ನ? ಯಾಕೆ ಹಾಗೆ ನಿನ್ನ ಮುಖ ಬಣ್ಣಕೆಟ್ಟಿದೆ? ರೋದ್ಯಾ, ಏನಾಯ್ತು ರೋದ್ಯಾ, ರೋದ್ಯಾ!’

‘ದೇವರೇ, ಅವನು ಮೂರ್ಛೆ ಬೀಳೋ ಹಾಗೆ ಮಾಡಿದಳಲ್ಲಪ್ಪಾ ಇವಳು!’ ಅಂದಳು ಪುಲ್ಚೇರಿಯಾ ಅಲೆಕ್ಸಾಂಡ್ರೋವ್ನಾ.

‘ಇಲ್ಲ… ಇಲ್ಲ… ನಾನ್ಸೆನ್ಸ್… ಏನೂ ಆಗಿಲ್ಲ!… ಸ್ವಲ್ಪ ತಲೆ ತಿರುಗಿತು ನನಗೆ ಅಷ್ಟೇ!.. ಸ್ವಲ್ಪ ಹೆಚ್ಚು ಕಡಮೆ ಆದರೆ ಮೂರ್ಛೆ ಅಂತ ಅರಚಿಕೊಳ್ಳತೀಯ.. ಹ್ಞಂ.. ಏನು ಹೇಳತಾ ಇದ್ದೇ? ಮ್.. ಇದು.. ನೀನು ಅವನಿಗೆ ಗೌರವ ಕೊಡತೀಯ ಅಂತ, ಅವನು ನಿನಗೆ ಬೆಲೆ ಕೊಡತಾನೆ ಅಂತ, ಅದೇ ಅಲ್ಲವಾ ನೀನು ಹೇಳಿದ್ದು?… ಇವತ್ತು ಗೊತ್ತಾಗತ್ತೆ ಅಂದೆ ಅಲ್ಲವಾ? ಇವತ್ತು ಅಂದೆ ನೀನು… ಅಥವಾ ನನಗೇ ಸರಿಯಾಗಿ ಕೇಳಿಸಲಿಲ್ಲವಾ?’

‘ಅಮ್ಮಾ, ಅಣ್ಣನಿಗೆ ಆ ಕಾಗದ ತೋರಿಸು,’ ಅಂದಳು ದುನ್ಯಾ.

ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ನಡುಗುವ ಕೈಯಲ್ಲಿ ಆ ಕಾಗದವನ್ನು ತೆಗೆದು ಕೊಟ್ಟಳು. ಅವನು ತೀರ ಕುತೂಹಲಪಡುತ್ತ ಕಾಗದ ತೆಗೆದುಕೊಂಡ. ಕಾಗದ ಬಿಡಿಸಿ ಓದುವ ಮೊದಲು ತಟ್ಟನೆ ದುನ್ಯಾಳನ್ನು ನೋಡಿದ. ಅವನ ನೋಟದಲ್ಲಿ ಆಶ್ಚರ್ಯವಿತ್ತು.
ಯಾವುದೋ ಹೊಸ ವಿಚಾರ ಹೊಳೆದವನ ಹಾಗೆ ಯೋಚನೆ ಮಾಡಿದ. ‘ಅಲ್ಲಾ, ಯಾಕೆ ಹೀಗಾಡತಾ ಇದೀನಿ! ಇಷ್ಟೊಂದು ರಗಳೆ ಮಾಡತಾ ಇದೀನಿ! ಯಾಕೆ ಹೀಗೆ ಕೂಗಾಡತಾ ಇದೀನಿ! ಹೋಗಿ ನಿನಗಿಷ್ಟ ಬಂದವರನ್ನ ಮದುವೆ ಆಗು.’

ಗಟ್ಟಿಯಾಗಿ ಹೇಳಿದರೂ ತನಗೆ ತಾನೇ ಹೀಗೆ ಗೊಣಗಿಕೊಂಡ. ತಬ್ಬಿಬ್ಬಾದವನ ಹಾಗೆ ತಂಗಿಯನ್ನು ನೋಡಿದ.

ಕೊನೆಗೂ ಕಾಗದ ಬಿಡಿಸಿದ. ಮುಖದ ಮೇಲೆ ವಿಚಿತ್ರವಾದ ಅಚ್ಚರಿಯ ಭಾವ ಇನ್ನೂ ಇತ್ತು. ನಿಧಾನವಾಗಿ ಕಾಗದ ಓದಿದ. ಇನ್ನೊಂದು ಸಾರಿ ಓದಿದ. ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ಕಸಿವಿಸಿಪಡುತ್ತಿದ್ದಳು. ಏನೋ ವಿಶೇಷ ಘಟಿಸುತ್ತದೆಂದು ಎಲ್ಲರೂ ಕಾದಿದ್ದರು.

ಸ್ವಲ್ಪ ಹೊತ್ತು ಯೋಚನೆ ಮಾಡಿ, ಆಮೇಲೆ ಕಾಗದವನ್ನು ಅಮ್ಮನ ಕೈಗೆ ಕೊಡುತ್ತ ರಾಸ್ಕೋಲ್ನಿಕೋವ್ ‘ಆಶ್ಚರ್ಯ ಆಗತ್ತೆ,’ ಅನ್ನುತ್ತ ಮಾತು ಶುರುಮಾಡಿದ. ಅವನು ನಿರ್ದಿಷ್ಟವಾಗಿ ಯಾರನ್ನು ಕುರಿತೂ ಹೇಳುತ್ತಿರಲಿಲ್ಲ. ‘ಅವನು ಕೇಸುಗಳನ್ನ ನಡೆಸತಾನೆ, ಲಾಯರು. ಅವನು ಮಾತಾಡಿದರೆ ತೀರ ನಾಟಕ… ಆದರೂ ಓದು ಬರಹ ಗೊತ್ತಿಲ್ಲದವರ ಥರ ಇವೆ ಅವನ ಅಕ್ಷರ.’

ಅವನಿಂದ ಇಂಥ ಮಾತು ಯಾರೂ ನಿರೀಕ್ಷಿಸಿರಲಿಲ್ಲ. ಹಾಗಾಗಿ ಎಲ್ಲರೂ ಮಿಸುಕಾಡಿದರು.

‘ಅವರೆಲ್ಲ ಹಾಗೇ ಬರೆಯೋದು,’ ರಝುಮಿಖಿನ್ ತಟ್ಟನೆ ಅಂದ.

‘ಅಂದರೆ, ನೀನಾಗಲೇ ಇದನ್ನ ಓದಿದೀಯ?’

‘ಹ್ಞೂಂ.’

‘ನಾವೇ ಅವನಿಗೆ ತೋರಿಸಿದೆವು, ರೋದ್ಯಾ. ಏನು ಮಾಡಣ ಅಂತ ಅವನನ್ನ ಕೇಳಿದೆವು… ’ ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ಮುಜುಗರಪಡುತ್ತ ಅಂದಳು.

‘ವಕೀಲರ ಶೈಲಿಯಲ್ಲಿ ಬರೆದಿದ್ದಾನೆ. ಕಾನೂನಿನ ದಾಖಲೆಗಳನ್ನ ವಕೀಲರು ಈಗಲೂ ಹಾಗೇ ಬರೆಯುತ್ತಾರೆ,’ ಅಂದ ರಝುಮಿಖಿನ್.

‘ಇದು ಕಾನೂನಿನ ಭಾಷೆ ಅಲ್ಲ, ವ್ಯವಹಾರದ ಶೈಲಿ. ವಿದ್ಯಾವಂತರು ಬರೆದ ಹಾಗಿಲ್ಲ, ಅಕ್ಷರ ಗೊತ್ತಿಲ್ಲದ ಪಕ್ಕಾ ವ್ಯವಹಾರಸ್ಥ ಬರೆದ ಹಾಗಿದೆ!’

‘ಪೀಟರ್ ಪೆಟ್ರೋವಿಚ್ ದುಡ್ಡಿಲ್ಲದೆ ಓದುವುದಕ್ಕೆ ಕಷ್ಟಪಟ್ಟಿದ್ದನ್ನ ಯಾವತ್ತೂ ಮುಚ್ಚಿಟ್ಟಿಲ್ಲ. ಕಾಸು ಕಾಸು ಕೂಡಿಸಿ ಕಷ್ಟಪಟ್ಟು ಈ ಹಂತಕ್ಕೆ ಬಂದಿದೇನೆ ಅಂತ ಹೆಮ್ಮೆ ಪಟ್ಟುಕೊಳ್ಳತಾನೆ,’ ತನ್ನಣ್ಣನ ಮಾತಿನ ದನಿಯಿಂದ ಮನಸ್ಸು ನೊಂದಿದ್ದ ದುನ್ಯಾ ಹೇಳಿದಳು.

‘ಹೆಮ್ಮೆಪಟ್ಟುಕೊಳ್ಳಲಿ, ಅದಕ್ಕೆ ಒಂದಷ್ಟು ಕಾರಣ ಇದೆ, ಇಲ್ಲ ಅನ್ನಲ್ಲ ನಾನು. ಇಡೀ ಕಾಗದ ಓದಿ ಇಂಥ ಸಣ್ಣ ವಿಚಾರ ಹೇಳಿದೆ ಅಂತ ನಿನಗೆ ಬೇಜಾರಾಗಿದೆ ಅನಿಸತ್ತೆ ದುನ್ಯಾ. ನಿನ್ನ ಕೆರಳಿಸೋದಕ್ಕೇ ಹೀಗೆ ನಾಟಕ ಮಾಡತಿದೇನೆ ಅನ್ನಿಸಿರಬಹುದು. ಹಾಗಲ್ಲ. ಅವನ ಬರವಣಿಗೆಯ ರೀತಿಯಿಂದ ನನ್ನ ಗಮನಕ್ಕೆ ಬಂದ ಒಂದು ವಿಚಾರದಿಂದ ಹೀಗೆ ಮಾತಾಡಿದೆ. ಆ ಸಂಗತಿ ಸದ್ಯದ ಮಟ್ಟಿಗೆ ಚಿಲ್ಲರೆ ವಿಚಾರ ಅಲ್ಲ. ಈ ಮಾತು ನೋಡು, ‘ಏನೇ ಆದರೂ ಹೊಣೆ ನಿಮ್ಮದೇ’— ಅಂತ ಬಹಳ ಅರ್ಥಪೂರ್ಣವಾಗಿ, ಸ್ಪಷ್ಟವಾಗಿ ಹೇಳಿದ್ದಾನೆ. ಆಮೇಲೆ, ನಾನೇನಾದರೂ ಬಂದರೆ ಅವನು ‘ತಕ್ಷಣ ಅಲ್ಲಿಂದ ಹೊರಟುಬಿಡುತ್ತೇನೆ,’ ಎಂದು ಬೆದರಿಸುವ ಮಾತು ಬಂದಿದೆ. ಈ ಬೆದರಿಕೆಯಲ್ಲಿ ಅವನ ಮಾತು ಕೇಳದಿದ್ದರೆ ತಾನೇ ಪೀಟರ್ಸ್‍ಬರ್ಗ್‍ ಗೆ ಕರೆದುಕೊಂಡು ಬಂದಿರುವ ನಿಮ್ಬಿಬ್ಬರನ್ನೂ ತಕ್ಷಣವೇ ಬಿಟ್ಟು ಹೊರಟು ಹೋಗುವ ಬೆದರಿಕೆಯೂ ಇದೆ. ಈಗ ಹೇಳು, ಪೀಟರ್ ಪೆಟ್ರೊವಿಚ್ ಆಡಿರುವ ಈ ಮಾತನ್ನು ಇಗೋ ಇವನು (ರಝುಮಿಖಿನ್‍ ನನ್ನು ತೋರಿಸಿದ) ಅಥವಾ ಝೋಸ್ಸಿಮೋವ್ ಬರೆದಿದ್ದರೆ ನಿನಗೆ ಸಿಟ್ಟು ಬರುತಿತ್ತೋ ಇಲ್ಲವೋ?’

‘ಇ-ಇಲ್ಲ.’ ದುನ್ಯಾ ಉತ್ತೇಜಿತಳಾಗಿ ಹೇಳಿದಳು. ‘ಅವನು ಹೇಳಿರುವ ರೀತಿ ತೀರ ಸೀದಾ ಸಾದಾ ಅನ್ನುವುದನ್ನು ಒಪ್ಪುತ್ತೇನೆ. ಒಳ್ಳೆಯ ಶೈಲಿ ಇರುವ ಬರಹಗಾರನಲ್ಲ ಅನ್ನೋದೂ ನಿಜ. ನೀನು ಇಷ್ಟೊಂದು ತರ್ಕ ಮಾಡತೀಯ ಅಂದುಕೊಂಡಿರಲಿಲ್ಲ…’ ಅಂದಳು.

‘ಬರೆದಿರುವುದು ವಕೀಲರ ಶೈಲಿಯಲ್ಲಿ, ಹಾಗಿರದಿದ್ದರೆ ಇದು ಕಾನೂನಿನ ವಿಚಾರ ಅನ್ನಿಸುವ ಹಾಗೆ ಹೇಳಕ್ಕೆ ಆಗಲ್ಲ. ಹೇಳಿರುವ ಕ್ರಮವೂ ಸ್ವಲ್ಪ ಹೆಚ್ಚೇ ಒರಟೂ ಆಗಿರಬಹುದು. ಅದಕ್ಕಿಂತ ಹೆಚ್ಚಾಗಿ ಇನ್ನೊಂದು ಮಾತು ಬಳಸಿದ್ದಾನಲ್ಲ ಅದನ್ನು ತೋರಿಸಿ ನಿನಗೆ ನಿರಾಸೆ ಮಾಡದೆ ವಿಧಿಯಿಲ್ಲ. ಅದು ನನ್ನ ಮಟ್ಟಿಗೆ ಕೀಳು ಆಪಾದನೆಯ ಹಾಗಿದೆ. ನಿನ್ನೆ ನಾನು ಕ್ಷಯ ರೋಗಿಯಾಗಿದ್ದ, ಅದೇ ಆಗ ಗಂಡಸತ್ತಿದ್ದ ಹೆಂಗಸಿಗೆ ದುಡ್ಡುಕೊಟ್ಟೆ, ನಿಜ. ‘ಅಂತ್ಯಸಂಸ್ಕಾರದ ನೆಪದಲ್ಲಿ’ ಅನ್ನುವ ಮಾತು ಬಳಸಿದ್ದಾನೆ ಅವನು ಪತ್ರದಲ್ಲಿ. ನೆಪವಲ್ಲ, ಅಂತ್ಯಸಂಸ್ಕಾರಕ್ಕೇ ಹಣ ಕೊಟ್ಟದ್ದು ನಾನು. ಕೊಟ್ಟದ್ದು ವಿಧವೆ ಹೆಂಗಸಿಗೇ ಹೊರತು ಪತ್ರದಲ್ಲಿ ಹೇಳಿರುವ ಹಾಗೆ ‘ಸಂಶಯಾಸ್ಪದ ನಡವಳಿಕೆಯʼ ಅವಳ ಮಗಳಿಗಲ್ಲ. (ಆ ಮಗಳನ್ನು ನಾನು ನೋಡಿದ್ದು ನಿನ್ನೆಯೇ) ಹೀಗೆ ಬರೆಯುವುದರ ಹಿಂದೆ ನನ್ನ ಹೆಸರಿಗೆ ಮಸಿ ಬಳಿಯುವ ಆತುರ ಕಾಣತ್ತೆ, ನಿನಗೂ ನನಗೂ ಜಗಳ ತಂದಿಡುವ ಉದ್ದೇಶ ಕಾಣತ್ತೆ ಮತ್ತೆ ಅವನು ಕಾನೂನಿನ ಭಾಷೆಯಲ್ಲಿ ಮಾತಾಡುತ್ತಾನೆ, ಆದರೂ ಅವನ ಮನಸಿನಲ್ಲಿ ಏನಿದೆ ಅದು ಸ್ಪಷ್ಟವಾಗತ್ತೆ. ಅವನು ಬುದ್ಧಿವಂತ, ಆದರೆ ನೋಡು, ಬುದ್ಧಿವಂತಿಕೆಯಿಂದ ವರ್ತಿಸೋದಕ್ಕೆ ಬರಿಯ ಬುದ್ಧಿವಂತಿಕೆಯಷ್ಟೇ ಸಾಕಾಗಲ್ಲ. ಇದನ್ನೆಲ್ಲ ಒಟ್ಟಿಗೆ ನೋಡಿದರೆ ಅವನ ಸ್ವಭಾವ ತಿಳಿಯತ್ತೆ… ಅವನು ನಿನಗೆ ತುಂಬ ಬೆಲೆ ಕೊಡೋನ ಹಾಗೆ ನನಗೆ ಕಾಣಲ್ಲ… ನಿನಗೆ ಒಳ್ಳೆಯದಾಗಲಿ ಅನ್ನೋ ಆಸೆ, ನಿನಗೆ ತಿಳಿವಳಿಕೆ ಬರಲಿ ಅಂತ ಇದೆಲ್ಲ ಹೇಳಿದೆ…’

ದುನ್ಯಾ ಮಾತಾಡಲಿಲ್ಲ. ಅವಳು ತೀರ್ಮಾನ ಮಾಡಿ ಆಗಿತ್ತು. ಸಂಜೆಯಾಗಲೆಂದು ಕಾಯುತ್ತಿದ್ದಳು, ಅಷ್ಟೇ.

‘ಏನು ತೀರ್ಮಾನ ಮಾಡಿದೆ, ರೋದ್ಯಾ?’ ಪುಲ್ಚೇರಿಯಾ ಅಲೆಕ್ಸಾಂಡ್ರೋವ್ನಾ ಕೇಳಿದಳು. ವ್ಯವಹಾರದ ಮಾತು ಅನ್ನುವ ಹಾಗೆ ಮಾತಾಡುತಿದ್ದ ಮಗನನ್ನು ಕಂಡು ಅವಳ ಚಿಂತೆ ಹೆಚ್ಚಾಗಿತ್ತು.

‘ತೀರ್ಮಾನ ಮಾಡಿದೀಯಾ ಅಂತ ಕೇಳಿದರೆ ಏನರ್ಥ, ಅಮ್ಮಾ?’

‘ಅಲ್ಲಾ, ನೀನು ಬರಬಾರದು, ನೀನು ಬಂದರೆ ತಾನು ಹೊರಟು ಹೋಗುತ್ತೇನೆ ಅಂತ ಪೀಟರ್ ಪೆಟ್ರೊವಿಚ್ ಬರೆದಿದ್ದಾನೆ. ಅದಕ್ಕೇ, ನೀನು ಏನು ತೀರ್ಮಾನ ಮಾಡಿದೇ, ಅಂತಾ…’

‘ಅದನ್ನ ತೀರ್ಮಾನ ಮಾಡಬೇಕಾದೋರು ನೀವು, ನಾನಲ್ಲ. ಮೊದಲನೇದಾಗಿ, ಅಂಥ ಪೀಟರ್ ಪೆಟ್ರೊವಿಚ್‍ ನ ಅಂಥ ಮಾತಿನಿಂದ ಬೇಜಾರಾಗಿದೆಯೋ ಇಲ್ಲವೋ ಅನ್ನೋದು, ಎರಡನೇದು ದುನ್ಯಾಗೆ ಬೇಜಾರಾಗಿದೆಯೋ ಅನ್ನೋದು. ನಿಮಗೆ ಯಾವುದು ಸರಿ ಅನ್ನಿಸತ್ತೋ ಹೇಳಿ, ಹಾಗೆ ಮಾಡತೇನೆ,’ ಅಂದ ರಾಸ್ಕೋಲ್ನಿಕೋವ್ ಭಾವವಿರದ ದನಿಯಲ್ಲಿ.

‘ದುನ್ಯಾ ಆಗಲೇ ತೀರ್ಮಾನ ಮಾಡಿದಾಳೆ. ಅವಳ ತೀರ್ಮಾನಾನೇ ನನ್ನದೂ,’ ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ಆತುರಪಡುತ್ತ ಹೇಳಿದಳು.

‘ರೋದ್ಯಾ, ನೀನು ಬರಬೇಕು, ತಪ್ಪದೆ ಬರಬೇಕು ಅಂತ ನನ್ನ ಆಸೆ. ಬರತೀಯ ತಾನೇ?’ ಅಂದಳು ದುನ್ಯಾ.

‘ಖಂಡಿತ.’

ರಝುಮಿಖಿನ್‍ ನನ್ನು ನೋಡುತ್ತಾ ‘ನೀವೂ ಅಷ್ಟೆ, ಸರಿಯಾಗಿ ಎಂಟು ಗಂಟೆಗೆ ನೀವೂ ಬರಬೇಕು. ಅಮ್ಮಾ, ನಾನು ಇವರನ್ನೂ ಕರೀತಿದೇನೆ,’ ಅಂದಳು.

‘ಸರಿ, ದುನ್ಯಾ. ನಿನ್ನಿಷ್ಟ. ನೀನು ಹೇಗೆ ಹೇಳತೀಯೋ ಹಾಗೆ. ನನಗೆ ಸುಲಭ ಆಯಿತು. ಸುಳ್ಳು ಹೇಳಕ್ಕೆ, ನಾಟಕ ಮಾಡಕ್ಕೆ ನನಗೆ ಬರಲ್ಲ. ಪೀಟರ್ ಪೆಟ್ರೊವಿಚ್‍ ಗೆ ಸಿಟ್ಟು ಬಂದರೆ ಬರಲಿ…ʼ

(ಕಲಾಕೃತಿಗಳು: ಪ್ಯಾಬ್ಲೋ ಪಿಕಾಸೋ)