Advertisement
ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ..: ವಿನಾಯಕ ಅರಳಸುರಳಿ ಅಂಕಣ

ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ..: ವಿನಾಯಕ ಅರಳಸುರಳಿ ಅಂಕಣ

ಕೆಲವೊಮ್ಮೆ ಅಚಾನಕ್ಕಾಗಿ ಬೆಂಗಳೂರಿನ ಮೇಲೆ ಪ್ರೀತಿಯುಕ್ಕುತ್ತದೆ. ಈ ಶಹರ ನಮಗೆ ಬದಕು ಕೊಟ್ಟಿದೆ, ಇದಿನ್ನು ನಮ್ಮ ಊರು, ನಾನಿನ್ನು ಇಲ್ಲಿಯವನು ಎಂದು ನಂಬಲು ಪ್ರಯತ್ನಿಸುತ್ತೇವೆ.‌ ಆಗಲೇ ನಾವು ಪ್ರತಿದಿನ ವ್ಯವಹರಿಸುವ ಅಂಗಡಿಯವನು ಇದ್ದಕ್ಕಿದ್ದಂತೆ ಹತ್ತು ರೂಪಾಯಿಗಾಗಿ ಬಿರುಮಾತಾಡುತ್ತಾನೆ. ವರ್ಷದಿಂದ ಪಕ್ಕದ ಮನೆಯಲ್ಲೇ ವಾಸವಿರುವ ಹೆಂಗಸು ಯಕಶ್ಚಿತ್ ನ್ಯಾಲೆಯ ಮೇಲಿನ ಬಟ್ಟೆ ತೆಗೆದಿಲ್ಲವೆಂಬ ಕಾರಣಕ್ಕೆ ಜಗಳಕ್ಕೆ ನಿಲ್ಲುತ್ತಾಳೆ. ಹೆಗಲ ಮೇಲೆ ಕೈ ಹಾಕಿಕೊಂಡು ಜೊತೆಗೇ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ಮಿತ್ರ ಆಫೀಸು ಬದಲಿಸಿದ ಮರುಕ್ಷಣ ಕರೆ ಸ್ವೀಕರಿಸದೇ, ಮೆಸೇಜೂ ಮಾಡದೇ ಮಾಯವಾಗಿಬಿಡುತ್ತಾನೆ.
ವಿನಾಯಕ
ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಬರಹ ನಿಮ್ಮ ಓದಿಗೆ

ಆಗಿನ್ನೂ ನಮ್ಮ ಡಿಗ್ರಿ ಅಂತಿಮ ವರ್ಷದ ಪರೀಕ್ಷೆಗಳು ಮುಗಿದ ಸಮಯ. ಪರೀಕ್ಷೆ ನಡೆಯುತ್ತಿದ್ದಷ್ಟೂ ಕಾಲ ಓದು-ಅಂಕ-ಪಾಸು ಎಂಬೆಲ್ಲ ಚಿಂತೆಗಳು, ಕಾಲೇಜು-ಕೊನೆಯ ದಿನಗಳು-ನೆನಪು-ಸ್ನೇಹ-ಬಾಂಧವ್ಯ ಎಂಬೆಲ್ಲ ಭಾವುಕತೆಗಳು ನಮ್ಮನ್ನಾವರಿಸಿಕೊಂಡಿದ್ದವು. ಒಂದು ಸಾರಿ ಪರೀಕ್ಷೆ ಮುಗಿಯಿತು ನೋಡಿ? ಸುತ್ತ ನೆರೆದು ಚೀರುತ್ತಿದ್ದ ಸಾವಿರ ಜೀರುಂಡೆಗಳು ಒಮ್ಮೆಗೇ ಮಾಯವಾದಂತೆ, ಭರ್ರೋ ಎಂದು ಸುರಿದ ಮಳೆಯೊಂದು ಹಠಾತ್ತನೆ ನಿಂತು ಹೋದಂತೆ ಅತೀವ, ಅಸಹನೀಯ ನಿಶ್ಯಬ್ಧ ನಮ್ಮನ್ನಾವರಿಸಿತು. ಈಗ ನಾವು ಬೆಳಿಗ್ಗೆ ಬೇಗ ಏಳಬೇಕಿರಲಿಲ್ಲ. ಒಂದೂವರೆ ದೋಸೆ ತಿಂದು ಏಳೂ ಮೂವ್ವತ್ತರ ಬಸ್ಸಿಗಾಗಿ ಬಸ್ ಸ್ಟ್ಯಾಂಡಿಗೆ ಓಡಬೇಕಿರಲಿಲ್ಲ. ಕಾಲೇಜಿಗೆ ತಡವಾಗುತ್ತದೆನ್ನುವ ಭಯವಿರಲಿಲ್ಲ. ಊಟಕ್ಕೆ ಇಷ್ಟೇ ಸಮಯ, ನಿದ್ರೆಗೆ ಇಷ್ಟೇ ಹೊತ್ತು ಎಂಬೆಲ್ಲ ವೇಳಾಪಟ್ಟಿಗಳಿರಲಿಲ್ಲ. ಕಟ್ಟೆಗಳೆಲ್ಲ ಒಡೆದು, ಬೇಲಿಗಳೆಲ್ಲ ತೆರೆದು ಇದ್ದಕ್ಕಿದ್ದಂತೆ ಸೃಷ್ಟಿಯಾಗಿರುವ ಅನಂತ ಬಿಡುವಿನಲ್ಲಿ ಏನು ಮಾಡುವುದೆಂದೇ ನಮಗೆ ತಿಳಿಯಲಿಲ್ಲ.

ಕಾಲೇಜಿನ ಮೊದಲ ಹಾಗೂ ಎರಡನೇ ವರ್ಷಗಳು ಮುಗಿದ ಮಧ್ಯಂತರದ ರಜೆಗಳನ್ನು ನಾವು ಅತ್ಯಂತ ಸಂಭ್ರಮದಿಂದ ಸ್ವಾಗತಿಸಿದ್ದೆವು. ಆಗಲೂ ಇಂಥದೇ ಸ್ವೇಚ್ಛೆಯಿತ್ತಾದರೂ ಅದಕ್ಕೆ ಕೇವಲ ಎರಡು ತಿಂಗಳ ಗಡುವಿತ್ತು. ಯಾವುದು ಬೇಗ ಮುಗಿದು ಹೋಗುತ್ತದೋ ಅದನ್ನು ನಾವು ಹೆಚ್ಚು ಆಚರಿಸುತ್ತೇವೆ. ಹಾಗಾಗಿ ಮೊದಲ ಹಾಗೂ ಎರಡನೇ ವರ್ಷದ ಡಿಗ್ರಿ ಮುಗಿದ ರಜೆಯಲ್ಲಿ ನಾವು ಅತ್ಯಂತ ಸಂಭ್ರಮಿಸಿದ್ದೆವು. ಅಜ್ಜನ ಮನೆಗೋ, ಮತ್ತೆಲ್ಲಿಗೋ ಹೋಗಿದ್ದೆವು. ಮತ್ತೆ ಕಾಲೇಜು ಶುರುವಾದಾಗ ಅಯ್ಯೋ ಎಂದಿದ್ದೆವು. ಸರಿಯಾಗಿ ಇಷ್ಟು ದಿನಕ್ಕೆ ಈ ರಜೆ ಮುಗಿಯತ್ತದೆ ಎಂಬ ತಿಳುವಳಿಕೆಯೇ ನಮ್ಮನ್ನು ಹೆಚ್ಚು ಕ್ರಿಯಾಶೀಲರನ್ನಾಗಿಸಿತ್ತು. ಆದರೆ ಅಂಥಾ ಯಾವುದೇ ಕೊನೆಯ ದಿನಗಳೂ ಕಾಣಿಸದ, ಅಸಲಿಗೆ ಮುಂದೇನು ಎನ್ನುವುದೇ ಗೊತ್ತಿಲ್ಲದ ಡಿಗ್ರಿಯ ಅಂತಿಮ ಪರೀಕ್ಷಾ ನಂತರದ ರಜೆಯು ನಮ್ಮನ್ನು ಅಧೀರರನ್ನಾಗಿಸಿತು. ನಿರುಪಾಯರನ್ನಾಗಿಸಿತು. ನನ್ನ ಸಹಪಾಠಿ ಗೆಳೆಯರ ಪೈಕಿ ಕೆಲವರು ಇನ್ನಾದರೂ ಕಾಲೇಜು ಚಾಲ್ತಿಯಲ್ಲಿದ್ದ ದಿನಗಳಂತೆಯೇ ಬೆಳಗ್ಗೆ ಎದ್ದು ನೇರ ಪಟ್ಟಣದ ಬಸ್ಸು ಹತ್ತಿ ಹೋಗುತ್ತಿದ್ದರು. ಬೈಕಿದ್ದವರು ಬೈಕಿನಲ್ಲಿ ಪೇಟೆಗೆ ಹೋಗಿ, ಗೆಳೆಯರನ್ನು ಹಿಂದೆ ಕೂರಿಸಿಕೊಂಡು ಮುಗಿದ ಕಾಲೇಜಿನ ಆವರಣದಲ್ಲಿ ಸುಮ್ಮನೆ ಅಲೆಯುತ್ತಿದ್ದರು. ಕಾಲೇಜಿನ ಕ್ಯಾಂಟೀನಿನಲ್ಲಿ ಬನ್ಸ್, ಟೀ ಕುಡಿದು ಎದ್ದು ಬರುತ್ತಿದ್ದರು. ಶೈಕ್ಷಣಿಕವಾಗಿ ಹಠಾತ್ತನೆ ಮುಗಿದಿದ್ದ ಕಾಲೇಜು ಭಾವನಾತ್ಮಕವಾಗಿ ಮಾತ್ರ ನಮ್ಮೆಲ್ಲರೊಳಗೂ ಜಾರಿಯಲ್ಲಿತ್ತು.

ಸ್ನೇಹಿತರ ವಲಯದಲ್ಲಿ ಪರೀಕ್ಷೆ ಮುಗಿದ ಬಳಿಕ ಚರ್ಚೆಗೀಡಾದ ಮೊದಲ ವಿಷಯ ಮುಂದೇನು? ಎನ್ನುವುದು. ಅಸ್ಪಷ್ಟವಾಗಿಯಾದರೂ ಎಲ್ಲರ ಕಣ್ಣಲ್ಲಿದ್ದದ್ದೂ ಒಂದೇ: ಬೆಂಗಳೂರು! ಎಂಎನ್ಸೀಗಳು, ಸಿಎ ಫರ್ಮ್‌ಗಳು, ಅಲ್ಲಿನ ಇಂಟರ್ವ್ಯೂಗಳಲ್ಲಿ ಕೇಳಬಹುದಾದ ಪ್ರಶ್ನೆಗಳು, ಶಹರದಲ್ಲಿ ಉಳಿದುಕೊಳ್ಳಲಿಕ್ಕೆ ಸಾಧ್ಯವಿರುವ ಗೆಳೆಯರ ರೂಮುಗಳು, ಸಂಬಂಧಿಕರ ಮನೆಗಳು… ಹೀಗೇ ಅಮೂರ್ತವಾಗಿ ಕಣ್ಮುಂದೆ ನಿಂತಿರುವ ಅಗೋಚರ ಪ್ರಶ್ನಾಪತ್ರಿಕೆಗೆ ಗೆಳೆಯರು ತಮ್ಮಷ್ಟಕ್ಕೆ ನಾವೇ ಉತ್ತರಿಸಿಕೊಂಡಿದ್ದರು. ಅವರೆಲ್ಲರ ಮಾತುಗಳನ್ನಷ್ಟೇ ಕೇಳುತ್ತ ನಿಂತಿದ್ದ, ಆದರೆ ಅವರ ಬಳಿಯಿದ್ದಂಥ ಯಾವ ಕೀ ಆನ್ಸರ್‌ಗಳೂ ಇಲ್ಲದ ನಾನು ತುಸು ಹೆಚ್ಚೇ ಕಂಗಾಲಾಗಿದ್ದೆ. ಬೆಂಗಳೂರಿಗೆ ಹೋಗಿ ಬದುಕಬಲ್ಲೆನೆಂಬ ನಂಬಿಕೆ ನನಗಿರಲಿಲ್ಲ. ಅಸಲಿಗೆ ಊರನ್ನು ಬಿಡುವ ಮನಸ್ಸೇ ಇರಲಿಲ್ಲ. ಎಂಕಾಂ ಮಾಡೋಣವೆಂದುಕೊಂಡೆನಾದರೂ ಅದು, ಎದುರು ನಿಂತಿರುವ ಮುಂದೇನು ಎಂಬ ಜೀವಮಾನದ ಪ್ರಶ್ನೆಯನ್ನು ಎರಡು ವರ್ಷಗಳಷ್ಟು ಮುಂದಕ್ಕೆ ತಳ್ಳುವ ಉಪಾಯವಾಗಿತ್ತೇ ಹೊರತು ಓದುವ ಹಂಬಲವೇನೂ ನನಗಿರಲಿಲ್ಲ. ಅದಕ್ಕೆ ಸರಿಯಾಗಿ ಅಪ್ಪನೂ ಮುಂದೆ ಓದಿಸುವುದಕ್ಕೆ ನಿರಾಕರಿಸಿದ. ಹೀಗೆ ಗ್ರಹಗತಿಗಳೆಲ್ಲವೂ ಬೆಂಗಳೂರಿನ ಕಡೆಗೇ ಬೆಟ್ಟು ಮಾಡಲಾಗಿ ನಾನು ಮಹಾನಗರ ತಲುಪಿದೆ.

ಕೆಲವೊಮ್ಮೆ, ಚಳಿಯ ಬೆಳಗುಗಳಲ್ಲಿ ಬಾವಿಯಿಂದ ಸೇದಿದ ನೀರು ಹಿಡಿದು ಯೋಚಿಸುತ್ತ ನಿಂತಿರುವ ನಾವು ಥಟ್ಟನೆ ಇಡೀ ಬಿಂದಿಗೆಯನ್ನೇ ಮೈಮೇಲೆ ಸುರಿದುಕೊಳ್ಳುತ್ತೇವೆ. ಆ ಮೂಲಕ ಮನಸ್ಸಿನಲ್ಲಿರುವ ಚಳಿಯನ್ನು ಮೊದಲು ಸೋಲಿಸಿ ನಂತರ ದೇಹದ ಚಳಿಯನ್ನು ಎದುರಿಸುತ್ತೇವೆ. ಈಗ ಯೋಚಿಸುವಾಗ ಅಂದು ನಾನು ಮಾಡಿದ್ದೂ ಅದನ್ನೇ ಅನ್ನಿಸುತ್ತದೆ. ಬೆಂಗಳೂರಿಗೆ ಹೋಗಲಾರೆ, ಊರಿನಲ್ಲೂ ಇರಲಾರೆ ಎನ್ನುವಂತಿದ್ದ ನಾನು ಹಠಾತ್ತನೆ ಅದೊಂದು ದಿನ, ನನಗೇ ಈಗ ಅಚ್ಚರಿಯಾಗುವಂತೆ ಬೆಂಗಳೂರಿನ ಬಸ್ಸು ಹತ್ತಿ ಹೊರಟುಬಿಟ್ಟೆ. ಉದ್ದೇಶವೇ ಇಲ್ಲದ ಬೆಳಗುಗಳು, ಏನನ್ನೂ ಮಾಡದೆ ಸುಮ್ಮನೆ ಕಳೆಯುವ ದಿನಗಳು, ಸಿಕ್ಕವರೆಲ್ಲ ಕರೆದು ಕರೆದು ಕೇಳುವ ‘ಮುಂದೇನು ಮಡ್ತೀಯಪ್ಪಾ?’ ಎಂಬ ಪ್ರಶ್ನೆ, ಕೊನೆಗೆ ನನ್ನನ್ನೂ ಕಾಡುತ್ತಿದ್ದ ನಾಳೆ ಏನೋ? ಎಂಬ ಸವಾಲು… ಇವೆಲ್ಲದರಿಂದ ಪಾರಾಗಿ ಓಡಲಿಕ್ಕೆ ಕಂಡ ಏಕಮಾತ್ರ ದಾರಿಯೆಂದರೆ ಅದು ಬೆಂಗಳೂರಿನದ್ದು. ಬೆಂಗಳೂರಿನ ಬಗ್ಗೆ, ಅಲ್ಲಿ ಉಳಿದುಕೊಳ್ಳುವ ತಾವುಗಳ ಬಗ್ಗೆ, ಅಲ್ಲಿ ಹುಡುಕಬೇಕಾದ ಕೆಲಸಗಳ ಬಗ್ಗೆ ಸ್ವಲ್ಪವಾದರೂ ತಿಳುವಳಿಕೆಯಿದ್ದ ಗೆಳೆಯರೆಲ್ಲ ಇನ್ನೂ ಡಿಗ್ರಿ ಫಲಿತಾಂಶದ ನಿರೀಕ್ಷೆಯಲ್ಲಿರುವಾಗಲೇ, ಅವ್ಯಾವುದೂ ಇಲ್ಲದ ನಾನು ಮಾತ್ರ ನನ್ನಿಂದಲೇ ಬೆನ್ನಟ್ಟಲ್ಪಟ್ಟವನಂತೆ ಓಡಿ ಬೆಂಗಳೂರು ತಲುಪಿದೆ.

ಬಹುಶಃ ಹೆಚ್ಚಿನವರು ಬೆಂಗಳೂರಿಗೆ ಬಂದ ಕಥೆ ಇದೇ ರೀತಿಯದ್ದಾಗಿರುತ್ತದೆ. ಎರಡೋ ಮೂರೋ ಜೊತೆ ಬಟ್ಟೆಯಿರುವ ಚಿಕ್ಕ ಬ್ಯಾಗನ್ನು ಸರ್ವಸ್ವದಂತೆ ಜೋಪಾನವಾಗಿ ಹಿಡಿದು ಇಲ್ಲಿಗೆ ಬಂದ ಆ ದಿನಕ್ಕೂ ಈ ದಿನಕ್ಕೂ ಹೋಲಿಸಿ ನೋಡಿದರೆ ನಡುವೆ ಸರಿದ ಕಾಲದಲ್ಲಿ ನಾವು ಎಷ್ಟೆಲ್ಲ ಬದಲಾಗಿದ್ದೇವೆ! ಮಹಾನಗರಿ ನಮಗೆ ಏನೇನೆಲ್ಲ ಕೊಟ್ಟಿತೆಂದು ಯೋಚಿಸಿದರೆ ದೊಡ್ಡ ಪಟ್ಟಿಯೇ ತೆರೆದುಕೊಳ್ಳುತ್ತದೆ.‌

ಹಳ್ಳಿಯೆನ್ನುವುದು ಪುಟ್ಟ ಮೊಟ್ಟೆಯ ಮೇಲೆ ಕುಳಿತು ಕಾವು ಕೊಡುವ, ಪುಟಾಣಿ ಮರಿಯನ್ನು ಅಗಲಿಸಿದ ರೆಕ್ಕೆಯ ಮಡಿಲಿನಲ್ಲಿಟ್ಟುಕೊಂಡು ಸಾಕುವ ತಾಯಿ ಕೋಳಿಯಂಥದು. ಆದರೆ ಶಹರ ಅಟ್ಟಿಸಿಕೊಂಡು ಬಂದು ಜೀವನ ಪಾಠ ಕಲಿಸುವ ಹದ್ದಿನಂಥದು! ಅಲ್ಲಿ ಎಲ್ಲರೂ ನಮ್ಮವರೇ. ಎಲ್ಲರೂ ಪರಿಚಯವೇ. ಸಣ್ಣದೊಂದು ರಿಯಾಯಿತಿಯನ್ನು ಸ್ವೀಕರಿಸುತ್ತಲೇ ನಾವು ಅಲ್ಲಿ ಬದುಕುತ್ತೇವೆ. ಆದರೆ ಮಹಾನಗರ ಹಾಗಲ್ಲ. ಸ್ಟ್ಯಾಂಡಿನಲ್ಲಿ ಬಸ್ಸು ಹತ್ತುವಾಗ ಪಕ್ಕದಲ್ಲಿ ನಿಂತ ಆಸಾಮಿಯಿಂದ ಹಿಡಿದು ಕೆಲಸ ಸಿಕ್ಕ ಮೇಲೆ ಪಕ್ಕದ ಚೇರಿನಲ್ಲಿ ಕುಳಿತ ಸಹೋದ್ಯೋಗಿಗಳ ತನಕ ಎಲ್ಲರೂ ನಮಗಿಲ್ಲಿ ಪ್ರತಿಸ್ಫರ್ಧಿಗಳೇ. ರಿಯಾಯಿತಿ ಎನ್ನುವ ಪದವನ್ನು ತನ್ನ ಪದಕೋಶದಿಂದ ಕಿತ್ತೆಸೆದ ಬಳಿಕವೇ ಮಹಾನಗರವಾದ ಬೆಂಗಳೂರಿದು. ಇಂಥಾ ಶಹರದಲ್ಲಿ ಯಾವುದೂ ಉಚಿತವಾಗಿ ಸಿಗುವುದಿಲ್ಲ. ಬಸ್ಸಿನಲ್ಲಿ ಯಾರೋ ಪರ್ಸು ಕದಿಯುತ್ತಾನೆ. ಅಡ್ಡ ಬಂದ ಬೈಕಿನವನು ತನ್ನದೇ ತಪ್ಪಿದ್ದರೂ ತಾರಾಮಾರಿ ಬೈಯುತ್ತಾನೆ. ಬಾಸಿನ ಮಾತು ಯಾವಾಗಲೂ ಏನ್ರೀ ಇದು? ಎನ್ನುವ ಸಿಡುಕಿನಿಂದಲೇ ಶುರುವಾಗುತ್ತದೆ. ಮನೆಯ ಪಕ್ಕದಲ್ಲಿರುವ ಅಂಗಡಿಯವನು ಎರಡು ರುಪಾಯಿ ಚಾಕಲೇಟನ್ನೂ ಕಡ ಕೊಡುವುದಿಲ್ಲ…

ಹಾಗಾದರೆ ಬರೀ ಇಂಥದೇ ಜನರನ್ನು ಗುಡ್ಡೆ ಹಾಕಿಕೊಂಡು ಈ ಶಹರ ಏನು ಮಾಡುತ್ತಿದೆಯೆಂದು ನೋಡಿದರೆ ಅದು ನಮ್ಮನ್ನು ಹೋರಾಟಗಾರರನ್ನಾಗಿಸುತ್ತಿದೆ! ಎಲ್ಲರೂ ಪ್ರತಿಸ್ಪರ್ಧಿಗಳೇ ಆಗಿರುವ ಊರಿನಲ್ಲಿ ನಾವು ಪ್ರತಿ ದಿನವೂ ಗೆಲುವಿನ ಹೊಸ ಹೊಸ ಪಾಠ ಕಲಿಯುತ್ತ ಚಾಣಾಕ್ಷರಾಗುತ್ತಿದ್ದೇವೆ. ಪರ್ಸು ಕದಿಯುವ ಕೈ ಸಂದಣಿಯ ಸಂದಿಯಿಂದ ಬರುವ ಮೊದಲೇ ಪರ್ಸು, ಮೊಬೈಲುಗಳನ್ನು ಸುರಕ್ಷಿತವಾಗಿಟ್ಟುಕೊಂಡು ಭದ್ರವಾಗುತ್ತಿದ್ದೇವೆ. ಬಾಸು ಬೈಯುವ ಮೊದಲೇ ಕೆಲಸ ಮಾಡಿ ಜಾಣರಾಗುತ್ತಿದ್ದೇವೆ. ಯಾರನ್ನೂ ಕಡ ಕೇಳದೆ ಸ್ವಾಭಿಮಾನಿಗಳಾಗುತ್ತಿದ್ದೇವೆ.

ಮನುಷ್ಯ ಮಾತ್ರರ ಜೊತೆಗೆ ಮಾತಾಡಲಾರದ ಅಂತರ್ಮುಖಿಗಳಿಗೂ ಹೊರ ಪ್ರಪಂಚದ ಜೊತೆ ವ್ಯವಹರಿಸುವ ಧೈರ್ಯ ಕಲಿಸುತ್ತದೆ ಬೆಂಗಳೂರು. ಬಾಯ್ಬಿಟ್ಟರೆ ಅಮ್ಮನ ಮೇಲೆ ಏರಿ ಹೋಗುತ್ತಿದ್ದ, ಅಪ್ಪನ ಜೊತೆ ಜಗಳ ಕಾಯುತ್ತಿದ್ದ ಮಗನಿಗೆ ಅಪ್ಪ-ಅಮ್ಮನ ಬೆಲೆಯನ್ನು ಅರ್ಥಮಾಡಿಸುವುದು ಇಲ್ಲಿಯ ಏಕಾಕಿತನ. ಊರನ್ನು, ಅಲ್ಲಿನ ಬಾಂಧವ್ಯಗಳನ್ನು, ಸಂಬಂಧಗಳ ಬೆಲೆಯನ್ನು, ಬದುಕನ್ನು ನೋಡಬೇಕಾದ ದೃಷ್ಟಿಕೋನವನ್ನು, ಕಾದು ನೋಡುವ ತಾಳ್ಮೆಯನ್ನು ಎಲ್ಲವನ್ನೂ ಕಲಿಸುತ್ತದೆ ಬೆಂಗಳೂರು. ಎಂಥಾ ಗಮಾರನನ್ನೂ ಸ್ಪರ್ಧೆಗೆ ಹಚ್ಚಿ ವೇಗ ಕಲಿಸುವುದು ಬೆಂಗಳೂರಿಗೆ ಗೊತ್ತಿದೆ. ಅದು ಸಂಪಾದನೆಯ ನೆಪದಲ್ಲಿ ಕೆಲಸ ಕಲಿಸುತ್ತದೆ. ಭಡ್ತಿಯ ಆಸೆ ತೋರಿಸಿ ಪರಿಶ್ರಮ ಕಲಿಸುತ್ತದೆ. ಪೈಪೋಟಿಯ ಹೆಸರಲ್ಲಿ ಏಕಾಗ್ರತೆ ತಿಳಿಸುತ್ತದೆ. ದುಡಿತ ನಿಲ್ಲಿಸಿದರೆ ಉಪವಾಸ ಕೆಡವಿ ಪಾಠ ಕಲಿಸುತ್ತದೆ. ಇಲ್ಲಿಗೆ ಮೊದಲ ಹೆಜ್ಜೆಯಿಟ್ಟು ಒಳಬಂದಾಗ ಇದ್ದ ಕೀಳರಿಮೆಗಳು, ಸಂಕುಚಿತ ಭಾವನೆಗಳು ಹಾಗೂ ರೋಗಗ್ರಸ್ತ ಮನಸ್ಥಿತಿಗಳ ಪೈಕಿ ಹಲವನ್ನು ಮಹಾನಗರಿ ಹತ್ತಿಕ್ಕುತ್ತದೆ. ಎತ್ತರದ ನಿಲುವು, ಬಲಶಾಲಿ ತೋಳು, ಚಂದದ ಮುಖ, ಆಕರ್ಷಕ ಮಾತು.. ಇವ್ಯಾವುದನ್ನೂ ಬೆಂಗಳೂರು ಕೇಳುವುದೇ ಇಲ್ಲ. ಅದರ ಶೈಲಿಯೇನಿದ್ದರೂ ನೇರ, ದಿಟ್ಟ, ನಿರಂತರ.

“ದುಡಿಯುತ್ತೀಯಾ?”

“ಹ್ಞೂಂ”

“ಸ್ವಲ್ಪ ಚುರುಕಾದರೆ ಜಾಸ್ತಿ ದುಡಿಯಬಹುದು”

“ಪ್ರಯತ್ನಿಸುವೆ”

“ಎಷ್ಟು ದಿನ ಓಡುತ್ತಿರುತ್ತೀಯೋ ಅಷ್ಟು ದಿನ ಊಟ ಹಾಕುತ್ತೇನೆ. ಓಟ ನಿಲ್ಲಿಸಿದ ಮರುಕ್ಷಣ ನೀನುಂಟು, ನಿನ್ನೂರಿನ ಬಸ್ಸುಂಟು”

“ನಾನು ನಿಲ್ಲುವುದಿಲ್ಲ!”

ಇಂಥಾದ್ದೊಂದು ಸಂಭಾಷಣೆಯನ್ನು ತನ್ನೊಳಗೆ ಬರುವ ಪ್ರತಿ ಶ್ರಮಿಕನ ಬಳಿಯೂ ನಿಶ್ಯಬ್ಧವಾಗಿ ನಡೆಸುತ್ತದೆ ಬೆಂಗಳೂರು. ಅದರ ಈ ಮಾತುಗಳನ್ನು ಅದರಲ್ಲಿರುವ ನೂರಾರು ಅಪರಿಚಿತರು ಆಡುತ್ತಾರೆ. ಕೇಳಿಸಿಕೊಳ್ಳುತ್ತ ನಾವು ಮನುಷ್ಯರಾಗುತ್ತೇವೆ. ಇಲ್ಲಿ ಅಣ್ಣ ದುಡಿದ ಸಂಬಳ ಊರಲ್ಲಿ ಅಪ್ಪನ ಮಾತ್ರೆಗೆ ಹಣವಾಗುತ್ತದೆ. ಅಮ್ಮ ಕಾಫಿ ಕಾಯಿಸುವ ಹೊಸ ಪಾತ್ರೆಯಾಗುತ್ತದೆ. ತಂಗಿ ತೊಟ್ಟ ದಾವಣಿಯಾಗುತ್ತದೆ. ತಮ್ಮನ ಕೈಯಲ್ಲಿ ಮೊಬೈಲಾಗುತ್ತದೆ. ಮನೆಯ ಮಾಡಿಗೆ ತೇಪೆಯಾಗುತ್ತದೆ. ಹೊಸ ಮನೆಯೇ ಆಗುತ್ತದೆ.

ಇಷ್ಟೆಲ್ಲ ಆದರೂ ಅದೇಕೋ ಬೆಂಗಳೂರು ಒಳಕ್ಕೆ ಇಳಿಯುವುದೇ ಇಲ್ಲ. ಇಲ್ಲಿನ ಹೊಗೆಯಲ್ಲಿ ಕೆಮ್ಮದೇ ನಿರಾಳವಾಗಿ ಉಸಿರಾಡುವುದಕ್ಕೆ ಶ್ವಾಸಕೋಶಕ್ಕೆ ಸಾಧ್ಯವಾಗುವುದೇ ಇಲ್ಲ. ಎಲ್ಲವನ್ನೂ ಮಾರುವ ಇಲ್ಲಿನ ಅಪ್ಪಟ ಮಾರುಕಟ್ಟೆಯಲ್ಲಿ ನಮ್ಮನ್ನು ನಾವೇ ಕೊಂಡುಕೊಳ್ಳಲು ಒದ್ದಾಡುತ್ತೇವೆ.  ಸುಮ್ಮನೆ ಕೇಳಿದರೆ ನೂರು ಎನ್ನುವ, ಚೌಕಾಶಿ ಮಾಡಿದರೆ ಐವತ್ತಕ್ಕೇ ಕೊಡುವ ಇಲ್ಲಿನ ಚಾಣಾಕ್ಷ ವ್ಯಾಪಾರಿಗಳ ನಡುವೆ ಯಾವುದರ ಬೆಲೆ ಎಷ್ಟೆಂದು ಕಣ್ಣಲ್ಲೇ ನಿರ್ಧರಿಸಲಾಗದೇ ಪರದಾಡುತ್ತೇವೆ.‌ ಕರ್ನಾಟಕದವರು ಸಿಕ್ಕು ಮಾತನಾಡುವಾಗ ನಮ್ಮದು ತೀರ್ಥಹಳ್ಳಿ ಎಂದೋ, ಶಿವಮೊಗ್ಗ ಎಂದೋ ಹೇಳುತ್ತೇವೆ. ಹೊರ ರಾಜ್ಯದವರು ಸಿಕ್ಕಾಗ ನಮ್ಮದು ಕರ್ನಾಟಕವಾಗುತ್ತದೆ. ಬೆಂಗಳೂರು ಮಾತ್ರ ನಮ್ಮ ಊರಾಗದೆಯೇ ಉಳಿದುಹೋಗುತ್ತದೆ. ಅದಕ್ಕಾದರೂ ಆ ಬಗ್ಗೆ ವಿಷಾದವಿದ್ದಂತಿಲ್ಲ. ಯಾರನ್ನು ಬೇಕಾದರೂ ತನ್ನವನನ್ನಾಗಿಸಿಕೊಳ್ಳದೇ ಉಳಿಸಿಕೊಳ್ಳುವುದು ಅದಕ್ಕೂ ಗೊತ್ತಿದೆ.

ಮಹಾನಗರ ಸೊರಗುತ್ತಿರುವುದು ಇಬ್ಬರಿಂದ: ಒಂದು- ಬೆಂಗಳೂರು ಏನೇ ಮಾಡಿದರೂ ಅದು ತಪ್ಪು ಎನ್ನುವ ನಿರಭಿಮಾನಿಗಳಿಂದ. ಎರಡು- ಬೆಂಗಳೂರು ಏನು ಮಾಡಿದರೂ ಅದು ಸರಿ ಎನ್ನುವ ದುರಭಿಮಾನಿಗಳಿಂದ. ಇಲ್ಲಿ ನಗರಿ ನಮಗೇನು ಕೊಟ್ಟಿತೆನ್ನುವುದಕ್ಕೆ ಲೆಕ್ಕಗಳಿವೆಯೇ ಹೊರತು ನಾವು ಅದಕ್ಕೇನು ಕೊಡುತ್ತಿದ್ದೇವೆನ್ನುವುದಕ್ಕೆ ದಾಖಲೆಗಳಿಲ್ಲ. ಪಡೆಯುವ ಹಕ್ಕಿನ ವಿಷಯ ಬಂದಾಗ ಇಡೀ ಬೆಂಗಳೂರೇ ನಮ್ಮದಾಗುತ್ತದೆ. ಆದರೆ ನಿರ್ವಹಣೆ ಅಥವಾ ಭಾದ್ಯತೆಯ ವಿಷಯ ಬಂದಾಗ ನಮ್ಮನೆಯ ಕಾಂಪೌಂಡೊಳಗಿನದ್ದು ಮಾತ್ರ ನಮ್ಮದೆನ್ನುತ್ತೇವೆ. ನಾವು ಎಲ್ಲೆಂದರಲ್ಲಿ ಕಸ ಎಸೆಯುತ್ತೇವೆ. ಕೊಳಕು ನಗರ ಎನ್ನುವ ಹಣೆಪಟ್ಟಿ ಬೆಂಗಳೂರಿಗೆ ಅಂಟುತ್ತದೆ. ನಟ್ಟನಡುರಸ್ತೆಯಲ್ಲಿ ಜಗಳಕ್ಕೆ ನಿಲ್ಲುತ್ತೇವೆ. ರೌಡಿ ಸಾಮ್ರಾಜ್ಯವೆಂಬ ಕಳಂಕವನ್ನು ಮಹಾನಗರಿ ಹೊರುತ್ತದೆ. ಎಲ್ಲವನ್ನೂ ವ್ಯಾಪಾರೀ ದೃಷ್ಟಿಯಲ್ಲೇ ನೋಡಿ ಸುಲಿಗೆ ಮಾಡುತ್ತೇವೆ. ಮನುಷ್ಯತ್ವವೇ ಇಲ್ಲವೆನ್ನುವ ಟೀಕೆಗೆ ಶಹರ ಗುರಿಯಾಗುತ್ತದೆ. ಹೀಗೆ ನಾವು ಮಾಡುವುದು ಯಾವುದೋ, ಶಹರ ಮಾಡಿಸುವುದು ಯಾವುದೋ ತಿಳಿಯದ ಅಯೋಮಯ ಸ್ಥಿತಿಯಲ್ಲಿಯೇ ಬದುಕು ಮುಗಿದುಹೋಗುತ್ತದೆ.

*****

ಇವತ್ತಲ್ಲ ನಾಳೆ ಈ ಶಹರವನ್ನು ಬಿಟ್ಟುಹೋಗುತ್ತೇವೆ, ಅಲ್ಲೆಲ್ಲೋ ಇರುವ ಊರೇ ನಮ್ಮ ಕೊನೆಯ ನಿಲ್ದಾಣ ಎಂದುಕೊಂಡೇ ಪ್ರತಿದಿನ ಕೆಲಸಕ್ಕೆ ಹೊರಬೀಳುತ್ತೇವೆ.‌ ಆದರೆ ನಮ್ಮ ಮಾತುಗಳ ಬಗ್ಗೆ ಗಟ್ಟಿಯಾದ ನಂಬಿಕೆಯೇ ನಮಗಿಲ್ಲ.‌ ಬೈಯಬೈಯುತ್ತಲೇ ನಾವು ಈ ನಗರಿಗೆ ಒಗ್ಗಿಕೊಂಡಿದ್ದೇವೆ. ನಮಗೆ ಇದು ಕೊಡುವ ಅನಾಮಿಕತೆ ಬೇಕು. ಮೊಬೈಲು ಉಜ್ಜಿದೊಡನೆ ಎದುರು ಪ್ರತ್ಯಕ್ಷವಾಗುವ ಓಲಾ, ಊಬರ್, ಆಟೋಗಳು ಬೇಕು. ದೊಡ್ಡದಾಗಿ ಜಗಳ ಮಾಡಿದರೂ ವಿಚಾರಿಸಲು ಬರದ ತಮ್ಮ ಪಾಡಿನ ನೆರೆಯವರು ಬೇಕು. ಒಂದಕ್ಕೆ ಇನ್ನೊಂದು ಫ್ರೀ ಕೊಡುವ ಮಾಲ್‌ಗಳು ಬೇಕು. ಇದ್ಯಾವುದೂ ಅಲ್ಲಿರುವ ಆ ಊರಿನಲ್ಲಿಲ್ಲ. ಹಾಗಾಗಿಯೇ ಅದನ್ನು ಮನಸ್ಸಿನಲ್ಲಷ್ಟೇ ಇಟ್ಟುಕೊಂಡು ನಾವು ಇಲ್ಲಿ ವಾಸವಾಗಿದ್ದೇವೆ. ಊರಿನ ಪಾಲಿಗೆ ನಾವು ಬೆಂಗಳೂರಿನವರು. ಬೆಂಗಳೂರಿನ ಕಣ್ಣಲ್ಲಿ ಊರಿನವರು. ಇಲ್ಲಿದ್ದಾಗ, ಊರಿಗೆ ಹೋದಾಗ ಏನೇನು ಮಾಡಬೇಕೆಂದು ಲೆಕ್ಕ ಹಾಕುತ್ತೇವೆ. ಅಲ್ಲಿಗೆ ಹೋದಾಗ ಮರಳಿ ಬರುವ ಬಸ್ಸಿನ ಬಗ್ಗೆ ಯೋಚಿಸುತ್ತೇವೆ.‌

ಹೀಗಿರುವಾಲೇ ಕೆಲವೊಮ್ಮೆ ಅಚಾನಕ್ಕಾಗಿ ಬೆಂಗಳೂರಿನ ಮೇಲೆ ಪ್ರೀತಿಯುಕ್ಕುತ್ತದೆ. ಈ ಶಹರ ನಮಗೆ ಬದಕು ಕೊಟ್ಟಿದೆ, ಇದಿನ್ನು ನಮ್ಮ ಊರು, ನಾನಿನ್ನು ಇಲ್ಲಿಯವನು ಎಂದು ನಂಬಲು ಪ್ರಯತ್ನಿಸುತ್ತೇವೆ.‌ ಆಗಲೇ ನಾವು ಪ್ರತಿದಿನ ವ್ಯವಹರಿಸುವ ಅಂಗಡಿಯವನು ಇದ್ದಕ್ಕಿದ್ದಂತೆ ಹತ್ತು ರೂಪಾಯಿಗಾಗಿ ಬಿರುಮಾತಾಡುತ್ತಾನೆ. ವರ್ಷದಿಂದ ಪಕ್ಕದ ಮನೆಯಲ್ಲೇ ವಾಸವಿರುವ ಹೆಂಗಸು ಯಕಶ್ಚಿತ್ ನ್ಯಾಲೆಯ ಮೇಲಿನ ಬಟ್ಟೆ ತೆಗೆದಿಲ್ಲವೆಂಬ ಕಾರಣಕ್ಕೆ ಜಗಳಕ್ಕೆ ನಿಲ್ಲುತ್ತಾಳೆ. ಹೆಗಲ ಮೇಲೆ ಕೈ ಹಾಕಿಕೊಂಡು ಜೊತೆಗೇ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ಮಿತ್ರ ಆಫೀಸು ಬದಲಿಸಿದ ಮರುಕ್ಷಣ ಕರೆ ಸ್ವೀಕರಿಸದೇ, ಮೆಸೇಜೂ ಮಾಡದೇ ಮಾಯವಾಗಿಬಿಡುತ್ತಾನೆ. ವರ್ಷಗಳಿಂದ ನಮ್ಮ ಮನೆಯಂತೆ ನೋಡಿಕೊಂಡ ಬಾಡಿಗೆ ಮನೆಯನ್ನು ಬಿಟ್ಟ ಬಳಿಕ ಅದರ ಮಾಲಿಕ ಅಡ್ವಾನ್ಸು ಹಿಂದೆ ಕೊಡದೇ ಸತಾಯಿಸುತ್ತಾನೆ.

ಬೆಂಗಳೂರು ಮತ್ತೆ ಪ್ರಶ್ನೆಯಾಗಿ ಕಾಡುತ್ತದೆ.

ವಲಸೆ ಬಂದ ತಲೆಮಾರು ಹಾಗೂ ಅವರನ್ನು ಸ್ವೀಕರಿಸಿದ ಶಹರ – ಇಬ್ಬರೂ ಅನುಭವಿಸಲೇ ಬೇಕಾದ ತ್ರಿಶಂಕು ಸ್ಥಿತಿಯಿದು. ಅದು ನಮಗೆ ಶಾಪ. ಜೊತೆಗೆ ಬೆಂಗಳೂರಿಗೂ. ಲೇಖಕರೊಬ್ಬರು ಹೇಳುವಂತೆ ನಮ್ಮ ಮುಂದಿನ ತಲೆಮಾರಿಗೆ ಈ ಪರಿಯ ಗೊಂದಲವಿಲ್ಲ. ಅವರಿಗೆ ಬೆಂಗಳೂರು ಹುಟ್ಟಿದೂರು. ಸ್ವಂತದೂರು. ಹೀಗೆ ಬೆಂಗಳೂರನ್ನು ಸ್ವಂತವೆಂದು ಒಪ್ಪುವ-ಅಪ್ಪುವ ತಲೆಮಾರೊಂದು ಗಲ್ಲಿಗಲ್ಲಿಯನ್ನೂ ಪೂರ್ಣವಾಗಿ ಆವರಿಸಿಕೊಳ್ಳುವ ಶಾಪಮುಕ್ತಿಯ ಕ್ಷಣಕ್ಕಾಗಿ ಮಹಾನಗರಿ ಕಾಯುತ್ತಿದೆ.

About The Author

ವಿನಾಯಕ ಅರಳಸುರಳಿ

ವಿನಾಯಕ ಅರಳಸುರಳಿ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೋಕಿನ ಅರಳಸುರಳಿ ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿ ಪಡೆದಿದ್ದು ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟ್ಸ್ ಹುದ್ದೆ ನಿರ್ವಹಿಸುತ್ತಿದ್ದಾರೆ. ಸಣ್ಣ ಕಥೆ, ಲಲಿತ ಪ್ರಬಂಧ ಹಾಗೂ ಕವಿತೆಗಳನ್ನು ಬರೆದಿದ್ದು ‘ನವಿಲುಗರಿ ಮರಿ ಹಾಕಿದೆ' ಹೆಸರಿನ ಲಲಿತ ಪ್ರಬಂಧ ಸಂಕಲನ ಹಾಗೂ 'ಮರ ಹತ್ತದ ಮೀನು' ಕಥಾ ಸಂಕಲನಗಳು ಪ್ರಕಟವಾಗಿವೆ.

2 Comments

  1. Kamalakar Rao

    ಬರಹ ತುಂಬಾ ಚನ್ನಾಗಿದೆ

    Reply
  2. Bhaskar Jois

    Very nice 💯

    Reply

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ