ಪುಸ್ತಕದ ಮೊದಲ ಮತ್ತು ಅಂತಿಮ ಭಾಗದಲ್ಲಿ ಹತ್ತು ಕಾಲ್ಪನಿಕ ನಗರಗಳ ವರ್ಣನೆಗಳಿದ್ದರೆ, ಮಧ್ಯದ ಭಾಗಗಳಲ್ಲಿ ಐದೈದು ನಗರಗಳ ವರ್ಣನೆಗಳಿವೆ. ಪೋಲೋ ವರ್ಣಿಸುವ 55 ನಗರಗಳನ್ನು, ನಗರ ಮತ್ತು ಸ್ಮೃತಿ, ನಗರ ಮತ್ತು ಬಯಕೆ, ನಗರ ಮತ್ತು ಸಂಜ್ಞೆ, ಸಪೂರ ನಗರ, ವ್ಯಾಪಾರದ ನಗರ, ಕಂಗಳು ಮತ್ತು ನಗರ, ಇತ್ಯಾದಿ ಹನ್ನೊಂದು ವಿಷಯ-ಕೇಂದ್ರಿತ ಗುಂಪುಗಳಾಗಿ ವರ್ಣಿಸಲಾಗಿದೆ. ಅಲ್ಲದೇ ಪ್ರತಿ ಅಧ್ಯಾಯದಲ್ಲಿಯೂ ಪೋಲೋ ಮತ್ತು ಕುಬ್ಲಾ ಖಾನರ ನಡುವಿನ ಸಂಭಾಷಣೆ ಒಟ್ಟಾರೆ ಅಧ್ಯಾಯದ ಚೌಕಟ್ಟಾಗಿ ಕಂಡುಬರುತ್ತದೆ.
ಕತೆಗಾರ ಇಟಾಲೋ ಕ್ಯಾಲ್ವಿನೋ ಬರೆದ “ಇನ್ವಿಸಿಬಲ್ ಸಿಟೀಸ್” ಕೃತಿಯ ಬಗ್ಗೆ ಬರೆದಿದ್ದಾರೆ ಕಮಲಾಕರ ಕಡವೆ

 

ಕೆಲವು ಕೃತಿಗಳನ್ನು ನಾವು ಇತರರ ಕಲ್ಪನೆಗಳ ಕುರಿತ ಕುತೂಹಲಕ್ಕಾಗಿ ಓದುತ್ತೇವೆ; ಕೆಲವನ್ನು ಓದುತ್ತ ಓದುತ್ತ ನಮ್ಮದೇ ಕಲ್ಪನಾ ಶಕ್ತಿಗೆ ಚಾಲನೆ ಕೊಡುತ್ತೇವೆ. ಕೆಲವು ಕೃತಿಗಳಲ್ಲಿ ಕತೆಯ ಹಂದರ ಮುಖ್ಯವಾದರೆ, ಕೆಲವು ಪಾತ್ರಗಳಿಗೆ ಪ್ರಾಧಾನ್ಯ ನೀಡುತ್ತವೆ, ಕೆಲವು ಹಿನ್ನೆಲೆಯ ನಿರೂಪಣೆಗೆ. ಕೃತಿಯ ಪ್ರಧಾನ ಅಂಶವನ್ನು ಗ್ರಹಿಸಿ, ಅದನ್ನು ವರ್ಗೀಕರಿಸುವುದು ವಾಡಿಕೆ. ಅಂತೂ, ಓದುವ ಕ್ರಿಯೆಯಲ್ಲಿ ವರ್ಗೀಕರಣದ ಪಾತ್ರವೂ ಗಮನಾರ್ಹವಾದುದೇ. ಉದಾಹರಣೆಗೆ, ನಾವು ಓದುತ್ತಿರುವ ಪುಸ್ತಕವನ್ನು ಇತಿಹಾಸಕ್ಕೆ ಸಂಬಂಧಿಸಿದ್ದು ಎಂಬ ಗ್ರಹಿಕೆಯಿಂದ ಓದುವುದಕ್ಕೂ, ಕಥನವೆಂಬ ಗ್ರಹಿಕೆಯಿಂದ ಓದುವುದಕ್ಕೂ ವ್ಯತ್ಯಾಸವಿದೆ ತಾನೆ. ಎಷ್ಟೋ ಕೃತಿಗಳು, ಅದರಲ್ಲೂ ಪುರಾತನ ಕೃತಿಗಳು, ನಮ್ಮನ್ನು ಗೊಂದಲಕ್ಕೆ ಈಡಾಗಿಸಬಹುದು – ಯಾವುದನ್ನು ವಾಸ್ತವವೆಂದು ಓದುತ್ತೇವೆಯೊ, ಅದು ರಂಜನೆಗಾಗಿ ಬರೆದ ಕಾಲ್ಪನಿಕ ವಿವರಗಳುಳ್ಳ ಕೃತಿಯಿರಬಹುದು.

(ಮಾರ್ಕೋ ಪೋಲೋ)

ಮಾರ್ಕೋ ಪೋಲೋನ “ದ ಬುಕ್ ಆಫ್ ಮಾರ್ವೆಲ್ಸ್” (ಅಥವಾ “ದ ಟ್ರಾವೆಲ್ಸ್ ಆಫ್ ಮಾರ್ಕೋ ಪೋಲೋ”) ಕೃತಿಯನ್ನೇ ಉದಾಹರಣೆಗೆ ನೋಡಬಹುದು. ಈ ಕೃತಿ ವೆನಿಸ್ಸಿನ ವರ್ತಕ-ಪ್ರವಾಸಿಗನಾದ ಮಾರ್ಕೋ ಪೋಲೋ ಏಶಿಯಾ, ಅದರಲ್ಲೂ ಚೀನಾದ ಯುವಾನ್ ಸಾಮ್ರಾಜ್ಯದಲ್ಲಿ ಕೈಗೊಂಡ ಪ್ರವಾಸದ ವರದಿ ಎಂದು ಸಾಮಾನ್ಯವಾಗಿ ಓದಲಾಗಿದೆ. ರೋನಾಲ್ಡ್ ಲಥಾಮ್ ಎಂಬ ಬ್ರಿಟೀಷ್ ವಿದ್ವಾಂಸನ ಪ್ರಕಾರ, ಮಾರ್ಕೋ ಪೋಲೋ ಈ ಕೃತಿಯ ರಚನೆಯಲ್ಲಿ ರಸ್ಟಿಕೆಲ್ಲೋ ಎಂಬ ರೋಮಾಂಚಕ ಕಥನಗಳ ಬರಹಗಾರನ ನೆರವು ಪಡೆದಿದ್ದ. ಮಧ್ಯಯುಗೀನ ಕಾಲದಲ್ಲಿ ಜನಪ್ರಿಯ ರೋಮಾಂಚಕ ಕಥಾನಕಗಳಿಗೆ ಪ್ರಸಿದ್ಧನಾಗಿದ್ದ ರಸ್ಟಿಕೆಲ್ಲೋ, ಸಮಕಾಲೀನ ಓದುಗರ ರುಚಿ ಅರಿತಿದ್ದವನಾದ್ದರಿಂದ, ಅದಕ್ಕೆ ತಕ್ಕಂತೆ ಮಾರ್ಕೋ ಪೋಲೋನ ಕಥನಕ್ಕೆ “ಮಸಾಲೆ” ಹಾಕಿ, ರಮಣೀಯ ಮಾಡಿದ್ದ. ಡೇವಿಡ್ ಮಾರ್ಗನ್ ಎಂಬ ಇತಿಹಾಸಕಾರನೂ ಸಹ ಮಾರ್ಕೋ ಪೋಲೋನ ಕೃತಿ ಮಧ್ಯಯುಗೀನ ರೋಮಾಂಚಕ ಕಥಾನಕವೇ ಹೊರತು ವಾಸ್ತವದ ಇತಿಹಾಸವಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾನೆ.

ಲೂಗಿ ಫೊಸ್ಕೋಲೋ ಎಂಬ ಇಟಲಿಯ ವಿದ್ವಾಂಸನ ಪ್ರಕಾರ ಮಾರ್ಕೋ ಪೋಲೋನ ಕೃತಿಯಲ್ಲಿರುವ ಪುಟಗಟ್ಟಲೆ ವರ್ಣನೆಗಳು ರಸ್ಟಿಕೆಲ್ಲೋ ಮೊದಲು ಪ್ರಕಟಿಸಿದ್ದ ಕೃತಿಗಳಿಂದ ನೇರವಾಗಿ ಎತ್ತಿಕೊಂಡಿರುವಂತವು. ತನ್ನ ಸಮಕಾಲೀನ ಓದುಗರು ಕೃತಿಯೊಂದನ್ನು ಓದಬಯಸುವ ಬಗೆಯಲ್ಲಿ ಬರೆದ ಕೃತಿಯೇ ವಿನಃ, ಐತಿಹಾಸಿಕ ನಿಖರತೆಯುಳ್ಳದ್ದಲ್ಲ ಎಂದು ಈ ವಿದ್ವಾಂಸರ ವಾದ. ಉದಾಹರಣೆಗೆ, ಕುಬ್ಲಾ ಖಾನ್ ತನ್ನನ್ನು ಯಾಂಗಜ಼ೂ ಪ್ರಾಂತದ ರಾಜ್ಯಪಾಲನನ್ನಾಗಿ ಮೂರು ವರ್ಷಕ್ಕೋಸ್ಕರ ನೇಮಿಸಿದ್ದನೆಂದು ಮಾರ್ಕೋ ಪೋಲೋ ಹೇಳಿಕೊಳ್ಳುತ್ತಾನೆ. ಆದರೂ, ಚೀನಾದ ಐತಿಹಾಸಿಕ ಮೂಲಗಳಲ್ಲಿ ಇದು ಎಲ್ಲಿಯೂ ನಮೂದಿಸಲ್ಪಟ್ಟಿಲ್ಲ.

ಪುಸ್ತಕವೊಂದು ನಮಗೆ ವಾಸ್ತವಿಕ ಜಗತ್ತಿನೊಡನೆ ಅನುಸಂಧಾನಕ್ಕೆ ಎಡೆಮಾಡಿಕೊಡುತ್ತದಾದರೂ, ಅದು ವಾಸ್ತವವನ್ನೇ ಕಟ್ಟಿಕೊಡುತ್ತದೆ ಎನ್ನುವುದು ಭ್ರಮೆ ಎಂದು ವಾದಿಸುವ ಹಲವಾರು ಕೃತಿಗಳಿವೆ. ಯಾಕೆಂದರೆ, ಪುಸ್ತಕವೊಂದರಲ್ಲಿ ಬಿಂಬಿತವಾದುದು ಒಂದು ಬಿಂಬ ಮಾತ್ರವೇ ಹೊರತು ಸಂಪೂರ್ಣ ಸತ್ಯವಾಗಿರುವುದಿಲ್ಲ. ಸಾಹಿತ್ಯಿಕ ಕೃತಿಗಳ ಸಂಧರ್ಭದಲ್ಲಿ, ಅವುಗಳ ಕಾಲ್ಪನಿಕತೆಯನ್ನು ಎತ್ತಿತೋರಿಸಿ, ಕತೆಯೊಂದು ನಿರೂಪಿತವಾಗುವ ಪ್ರಕ್ರಿಯೆಯೆಡೆಗೆ ಓದುಗರ ಗಮನ ಸೆಳೆವ ಸ್ವಯಂ-ಪ್ರಜ್ಞೆಯ ಕಥಾನಕಗಳ ಸಾಲಿನಲ್ಲಿ ಇಟಾಲೊ ಕ್ಯಾಲ್ವಿನ್ ಅವರ “ಇನ್ವಿಸಿಬಲ್ ಸಿಟೀಸ್” (1972) ಕೂಡ ಒಂದು. ಯಾವುದೇ ಬಗೆಯ ವರ್ಗೀಕರಣಕ್ಕೂ ಸವಾಲೆಸೆಯುವ ಈ ಕೃತಿಯನ್ನು ಪ್ರಾಯೋಗಿಕ ಕಥನವೆನ್ನುವುದೇ, ಉತ್ತರ-ಆಧುನಿಕ ಕಾದಂಬರಿ ಎನ್ನುವುದೇ, ಪ್ರವಾಸ-ಕಥನವೆನ್ನುವುದೇ, ಸೈ-ಫೈ ಅಥವಾ ವೈಜ್ಞಾನಿಕ ಕಥಾನಕವೆನ್ನುವುದೇ, ಐತಿಹಾಸಿಕ ಫ್ಯಾಂಟಸಿ ಎನ್ನುವುದೇ, ಅತಿವಾಸ್ತವಾದಿ (surrealist) ಕೃತಿ ಎನ್ನುವುದೇ ಎಂಬ ಗೊಂದಲ ಓದುಗರಿಗಾದರೆ ಆಶ್ಚರ್ಯವೇನಲ್ಲ. ಹಾಗೆ ನೋಡಿದರೆ, ಈ ಮಾತನ್ನು ಇಟಲಿಯ ಈ ಬರಹಗಾರನ ಯಾವ ಕೃತಿಯ ಕುರಿತಾಗಿಯೂ ಹೇಳಬಹುದು. ಕಲ್ಪನೆಗಳ ಗಡಿಯನ್ನು ವಿಸ್ತರಿಸಿದ ಕತೆಗಾರನೆಂದೇ ಇಟಾಲೊ ಕ್ಯಾಲ್ವಿನ್ ಹೆಸರುವಾಸಿ.

ಮಾರ್ಕೋ ಪೋಲೋ ಮತ್ತು ಕುಬ್ಲಾ ಖಾನ್ ಹಲಹತ್ತು ನಗರಗಳ ಕುರಿತು ನಡೆಸುವ ಸಂಭಾಷಣೆಯೆಂದು “ಇನ್ವಿಸಿಬಲ್ ಸಿಟೀಸ್” (ಅದೃಶ್ಯ ನಗರಗಳು) ಕೃತಿಯನ್ನು ವರ್ಣಿಸಬಹುದೇನೋ. ಆದರೂ, ಓದುತ್ತ ಓದುತ್ತ ನಮಗೆ ವೇದ್ಯವಾಗುವ ವಿಚಾರವೆಂದರೆ, ಈ ಕೃತಿಯಲ್ಲಿ ಬರುವ ಮಾರ್ಕೋ ಪೋಲೋ ಐತಿಹಾಸಿಕ ಮಾರ್ಕೋ ಪೋಲೋ ಅಲ್ಲ; ಇಲ್ಲಿನ ಕುಬ್ಲಾ ಖಾನ್ ಕೂಡ ಐತಿಹಾಸಿಕ ವ್ಯಕ್ತಿಯಲ್ಲ. ಇತಿಹಾಸದಲ್ಲಿ ಬರುವ ಈ ಎರಡು ಪಾತ್ರಗಳ ಭೇಟಿ ಈ ಕಾಲ್ಪನಿಕ ಕಥನಕ್ಕೊಂದು ನೆಪ ಮಾತ್ರ. ಒಂದು ದೃಷ್ಟಿಯಲ್ಲಿ, ಈ ಕೃತಿಯ ಪಾತ್ರಗಳಿಗಿಂತಲೂ ಓದುಗನೇ ಮುಖ್ಯವಾಗಿಬಿಡುವಂತ ಕಥನವಿದು. ಕ್ಯಾಲ್ವಿನೋ ಖುದ್ದು ಹೇಳುವಂತೆ: “ಕತೆ ಧ್ವನಿಯನ್ನು ಅವಲಂಬಿಸಿರುವುದಿಲ್ಲ, ಬದಲಿಗೆ ಕಿವಿಯನ್ನು”. ಅಂದರೆ, ಓದುಗನ ಕಲ್ಪನೆಯೇ ಕತೆಯ ಜೀವಾಳ. ಓದುಗನ ಕಲ್ಪನೆಗೆ ಚಾಲನೆ ಕೊಡುವುದು ಕ್ಯಾಲ್ವಿನ್ನನ ಉದ್ದಿಶ್ಯವಿರಬಹುದು.

ಎಷ್ಟೋ ಕೃತಿಗಳು, ಅದರಲ್ಲೂ ಪುರಾತನ ಕೃತಿಗಳು, ನಮ್ಮನ್ನು ಗೊಂದಲಕ್ಕೆ ಈಡಾಗಿಸಬಹುದು – ಯಾವುದನ್ನು ವಾಸ್ತವವೆಂದು ಓದುತ್ತೇವೆಯೊ, ಅದು ರಂಜನೆಗಾಗಿ ಬರೆದ ಕಾಲ್ಪನಿಕ ವಿವರಗಳುಳ್ಳ ಕೃತಿಯಿರಬಹುದು.

ಮಾರ್ಕೋ ಪೋಲೋ ತನ್ನ ಪ್ರಯಾಣಕಾಲದಲ್ಲಿ ಕಂಡ ಅದ್ಭುತ ನಗರಗಳ ವರ್ಣನೆಗಳ ಮುಖಾಂತರ ಕಲ್ಪನಾಶಕ್ತಿಯ ಅನ್ವೇಷಣೆಯಲ್ಲಿ “ಇನ್ವಿಸಿಬಲ್ ಸಿಟೀಸ್” ಕೃತಿಕಾರ ತೊಡಗಿದ್ದಾರೆ ಎನ್ನಬಹುದು. ವಯಸ್ಸಾಗುತ್ತಿರುವ ಸಾಮ್ರಾಟ ಕುಬ್ಲಾ ಖಾನ್ ಮತ್ತು ವರ್ತಕ-ಪ್ರವಾಸಿ ಮಾರ್ಕೋ ಪೋಲೋ ನಡುವೆ ನಡೆವ ಸಂಭಾಷಣೆಯ ರೂಪದಲ್ಲಿ ಕತೆಯ ಚೌಕಟ್ಟು ಇದೆ. ಒಂಬತ್ತು ವಿಭಾಗಗಳಲ್ಲಿರುವ ಈ ಪುಸ್ತಕದಲ್ಲಿ, ಪೋಲೋ ತಾನು ಕಂಡಿರುವ ನಗರಗಳು ಎಂದು ಸಾಮ್ರಾಟ ಕುಬ್ಲಾ ಖಾನನಿಗೆ 55 ನಗರಗಳನ್ನು ವರ್ಣಿಸುತ್ತಾನೆ. ಈ ನಗರಗಳು, ಪುಸ್ತಕದ ಶೀರ್ಷಿಕೆಯೇ ಸೂಚಿಸುವಂತೆ, ಕಾಲ್ಪನಿಕವೆನ್ನುವುದು ಅವುಗಳ ವರ್ಣನೆಗಳಲ್ಲಿಯೇ ವಿದಿತವಾಗುತ್ತದೆ. ಒಂದು ಸ್ತರದಲ್ಲಿ ಕ್ಯಾಲ್ವಿನೋ ವರ್ಣಿಸುತ್ತಿರುವುದು ಮಾರ್ಕೋ ಪೋಲೋ ಕಂಡ ವಾಸ್ತವದ ನಗರಗಳಂತೂ ಅಲ್ಲ, ಆದರೆ, ಅವು ಸಾಂಕೇತಿಕ ರೂಪದಲ್ಲಿ ಮಾನವ ಸಂಸ್ಕೃತಿ, ಭಾಷೆ, ಸ್ಮೃತಿ, ಅನುಭವ, ಸ್ವಭಾವಗಳ ಕುರಿತಾದ ದೃಷ್ಟಾಂತಗಳು ಎಂದೂ ಓದುಗನಿಗೆ ಅನಿಸಬಹುದು.

ಈ ಕಾಲ್ಪನಿಕ ನಗರಗಳನ್ನು ಪುಸ್ತಕದ ಮೊದಲ ಮತ್ತು ಅಂತಿಮ ಭಾಗದಲ್ಲಿ ಹತ್ತು ನಗರಗಳ ವರ್ಣನೆಗಳಿದ್ದರೆ, ಮಧ್ಯದ ಭಾಗಗಳಲ್ಲಿ ಐದೈದು ನಗರಗಳ ವರ್ಣನೆಗಳಿವೆ. ಪೋಲೋ ವರ್ಣಿಸುವ 55 ನಗರಗಳನ್ನು ನಗರ ಮತ್ತು ಸ್ಮೃತಿ, ನಗರ ಮತ್ತು ಬಯಕೆ, ನಗರ ಮತ್ತು ಸಂಜ್ಞೆ, ಸಪೂರ ನಗರ, ವ್ಯಾಪಾರದ ನಗರ, ಕಂಗಳು ಮತ್ತು ನಗರ, ಇತ್ಯಾದಿ ಹನ್ನೊಂದು ವಿಷಯ-ಕೇಂದ್ರಿತ ಗುಂಪುಗಳಾಗಿ ವರ್ಣಿಸಲಾಗಿದೆ. ಪ್ರತಿ ಅಧ್ಯಾಯಕ್ಕೂ ಆರಂಭ ಹಾಗೂ ಅಂತ್ಯದ ವಿಭಾಗಗಳಿವೆ, ಅಲ್ಲದೇ ಪ್ರತಿ ಅಧ್ಯಾಯದಲ್ಲಿಯೂ ಪೋಲೋ ಮತ್ತು ಕುಬ್ಲಾ ಖಾನರ ನಡುವಿನ ಸಂಭಾಷಣೆ ಒಟ್ಟಾರೆ ಅಧ್ಯಾಯದ ಚೌಕಟ್ಟಾಗಿ ಕಂಡುಬರುತ್ತದೆ. ಹೀಗೆ, ಅತೀವ ಕಾಲ್ಪನಿಕ, ಅವಾಸ್ತವಿಕ ವರ್ಣನೆಗಳ ಈ ಕೃತಿ, ತನ್ನ ವಿನ್ಯಾಸದಲ್ಲಿ ಮಾತ್ರ ಅತ್ಯಂತ ನಿರ್ದಿಷ್ಟ ಸ್ವರೂಪ ಹೊಂದಿದೆ. ಈ ವಿನ್ಯಾಸ ಆಕಸ್ಮಿಕವಲ್ಲ, ಅದೊಂದು ಉದ್ದೇಶಪೂರ್ವಕ ವಿನ್ಯಾಸ. ಯಾಕೆಂದರೆ, ಇಟಾಲೋ ಕ್ಯಾಲ್ವಿನೋ “ಔಲೀಪೋ” ಎಂಬ ಪ್ರಾಯೋಗಿಕ ಬರಹಗಾರರ ಗುಂಪಿಗೆ ಸೇರಿದ ಲೇಖಕ. ಈ ಬರಹಗಾರರು ನಿರ್ದಿಷ್ಟ ವಿನ್ಯಾಸಕ್ಕೆ ಅನುಗುಣವಾದ ರಚನೆಗಳಿಗೆ ಹೆಸರಾದವರು.

(ಇಟಾಲೋ ಕ್ಯಾಲ್ವಿನೋ)

ಕೃತಿಯ ಸರಿಸುಮಾರು ಅರ್ಧಕ್ಕೆ ಪೋಲೋನನ್ನು ಕುಬ್ಲಾ ಖಾನ ಅವನ ಮೂಲ ನಗರದ ಕುರಿತಂತೆ ವಿಚಾರಿಸಿದಾಗ, ಪೋಲೋ ಹೇಳುತ್ತಾನೆ, “ಪ್ರತಿ ಸಲವೂ ನಗರವೊಂದನ್ನು ನಾನು ವರ್ಣಿಸುತ್ತಲಿರುವಾಗ ವೆನಿಸ್ಸಿನ ಯಾವುದೋ ಒಂದು ಅಂಶವನ್ನೇ ವರ್ಣಿಸುತ್ತಲಿರುತ್ತೇನೆ” ಎಂದು. ಇದೊಂದು ಕತೆಯೇ ಇಲ್ಲದ ಕಥಾನಕವಾದರೂ ಕೂಡ ಕತೆಯ ನಿರೂಪಣೆಗೆ ಸಂಬಂಧಿಸಿದ ಅನೇಕ ಸೂಚನೆಗಳಿವೆ. ಕೃತಿಯ ಶುರುವಿನಲ್ಲೇ ನಿರೂಪಕ ಮಾರ್ಕೋ ಪೋಲೋನ ವರದಿಗಳನ್ನು ಪೂರ್ಣ ನಂಬುವುದಿಲ್ಲ ಎಂಬ ಮಾತಿದೆ. ಆದರೂ, ಕುಬ್ಲಾ ಖಾನ ಈ ವಿದೇಶಿ ಪ್ರವಾಸಿಗನ ಕತೆಗಳನ್ನು ಕೇಳಲು ಉತ್ಸುಕನಾಗಿಯೇ ಇರುತ್ತಾನೆ. ವಿವಿಧ ನಗರಗಳ ಪ್ರವಾಸಗಳ ತರುವಾಯ ಪೋಲೋ ಸಾಮ್ರಾಟನಿಗೆ ಒಪ್ಪಿಸುವುದು ಸಂಪತ್ತಲ್ಲ, ಬದಲಿಗೆ ಕಥನಗಳು ಎನ್ನುವ ವಿಷಯ ಇಲ್ಲಿ ಮುಖ್ಯವೆಂದು ನನಗನಿಸಿತು.

“ಇನ್ವಿಸಿಬಲ್ ಸಿಟೀಸ್” ಕೃತಿಯಲ್ಲಿ ಪ್ರಧಾನ ಪಾತ್ರಗಳೇ ಇಲ್ಲ – ಪೋಲೋ ಆಗಲೀ, ಕುಬ್ಲಾ ಖಾನ್ ಆಗಲೀ ಕೃತಿಯ ಕೇಂದ್ರವಾಗಿ ಬರುವುದಿಲ್ಲ. ಹಾಗೆ ನೋಡಿದರೆ, ಈ ಕೃತಿಯ ಕೇಂದ್ರ ಪಾತ್ರವಾಗಿ ಬರುವವು ನಗರಗಳೇ. ಪ್ರತಿಯೊಂದಕ್ಕೂ ತನ್ನದೇ ವಿಶಿಷ್ಟತೆಯಿದೆ, ಪ್ರತಿಯೊಂದು ನಗರಕ್ಕೂ ಇರುವುದು ಮಹಿಳಾ ಹೆಸರು, ಕಾಲದೇಶಗಳ ಮಿತಿಗಳನ್ನು ಮೀರಿದ ಅಂಶಗಳು ಪ್ರತಿ ನಗರದ ವರ್ಣನೆಯಲ್ಲೂ ಕಾಣಬರುತ್ತವೆ. ಒಂದೆಡೆ, ಕುಬ್ಲಾ ಖಾನ ಸಂದೇಹದಿಂದ ಹೇಳುತ್ತಾನೆ: “ನೀನು ವರ್ಣಿಸುವ ಈ ನಗರಗಳು ಇರಲಾರವು. ಬಹುಶಃ ಅವು ಎಂದೂ ಎಲ್ಲಿಯೂ ಇರಲಿಲ್ಲ. ಮುಂದೆಯೂ ಇರಲಾರವು. ಯಾಕೆ ಇಂತಹ ಕಾಲ್ಪನಿಕ ಕತೆಗಳನ್ನು ಹೇಳುತ್ತೀಯಾ?”. ಇದಕ್ಕೆ ಪೋಲೋ ನೀಡುವ ಸಮಜಾಯಿಶಿ ಅಂದರೆ: “ಇರುವ ನಗರಗಳು ನಶಿಸಿ, ಅವುಗಳನ್ನು ಪುನರ್‌ನಿರ್ಮಿಸಲಾಗದೇ, ನೆನಪಿಸಿಕೊಳ್ಳಲಾಗದೇ ಇರುವುದಕ್ಕೆ ಸಂವಾದಿಯಾಗಿ ನಗರಗಳ ಸಾಧ್ಯತೆಯನ್ನು ನಾನು ಕಲ್ಪಿಸಿಕೊಳ್ಳುತ್ತೇನೆ”.

ಪೋಲೋ ವರ್ಣಿಸುವ ನಗರಗಳು ಸುಲಭ, ಸರಳ ಜಾಗಗಳಲ್ಲ; ಅವು ಅದ್ಭುತಗಳ ಆಗರ. ಆದರೆ, ಅವುಗಳಲ್ಲಿ ತೋರಿಕೆಗೆ ಮೀರಿದ ಸ್ಥಿತಿ ಇರುತ್ತವೆ: ರಮಣೀಯ ನೀಲಿ ಕೊಳಗಳಿಂದ ತುಂಬಿದ ಹಿಪೇಶಿಯಾದಲ್ಲಿ ಆತ್ಮಘಾತಕರ ಕಣ್ಣುಗಳನ್ನು ಕಚ್ಚುವ ಏಡಿಗಳಿವೆ; ಲೌಡೋಮಿಯಾ ನಗರವು ಇನ್ನೂ ಹುಟ್ಟದವರದ್ದು – ಅಲ್ಲಿಯ ವಾಸಿಗಳು ಇನ್ನೂ ಹುಟ್ಟಿರದವರಿಗಾಗಿಯೇ ಪ್ರತ್ಯೇಕ ನಗರ ಸೃಷ್ಟಿಸಿರುತ್ತಾರೆ; ಆಕ್ಟೇವಿಯಾ ಎನ್ನುವುದು ಜೇಡದ ಬಲೆಯ ನಗರ – ಅಲ್ಲಿನ ಜನ ಪ್ರಪಾತವೊಂದರ ಮೇಲೆ ಬಲೆಯೊಂದರಲ್ಲಿ ತೂಗುತ್ತಿರುತ್ತಾರೆ; ಅರ್ಜಿಯಾ ನಗರದಲ್ಲಿ ವಾಯುವಿನ ಬದಲಿಗೆ ಮಣ್ಣು ತುಂಬಿದೆ. ಸಂಕ್ಷಿಪ್ತ ಅಧ್ಯಾಯಗಳಲ್ಲಿ ಬರುವ ಈ ವರ್ಣನೆಗಳು ನಗರವೊಂದರ ಭೌತಿಕ ರೂಪದ ಬದಲು, ಅದು ಧ್ವನಿಸಬಹುದಾದ ವಿಚಾರ, ಕಲ್ಪನೆಗಳಿಗೆ ಒತ್ತುಕೊಡುವಂತಿವೆ. ಹೀಗೆ, ಈ ಅವಾಸ್ತವಿಕ ನಗರಗಳು ಕಾಲದೇಶಕ್ಕೆ ನಿರ್ದಿಷ್ಟವಾದ ಶಹರಗಳ ಬದಲಿಗೆ, ಮಾನವನ ಮಾನಸಿಕ, ಸಾಂಸ್ಕೃತಿಕ, ಸಾಮಾಜಿಕ ಸ್ತರಗಳ ಸಾಧ್ಯತೆಯ ಕುರುಹುಗಳಾಗಿಯೂ ಓದುಗರಿಗೆ ಹೊಳೆಯಬಹುದು. ಉದಾಹರಣೆಗೆ, ಜೋಬೀಯ್ಡಿ ಎಂಬ ಹೆಸರಿನ ನಗರದ ವರ್ಣನೆ ಹೀಗಿದೆ:

“ಈ ನಗರದ ಸ್ಥಾಪನೆಯ ಕುರಿತಾದ ಐತಿಹ್ಯ ಇಂತಿದೆ. ಹಲವಾರು ದೇಶಗಳ ಗಂಡಸರಿಗೆ ಒಮ್ಮೆ ಒಂದೇ ರೀತಿಯ ಕನಸು ಬಿತ್ತು. ಅವರು ಕಂಡ ಕನಸಲ್ಲಿ ಹೆಣ್ಣೊಬ್ಬಳು ನಗರ ಮಧ್ಯದಲ್ಲಿ ಓಡುತ್ತಲಿದ್ದಳು. ಅವರೆಲ್ಲರೂ ಅವಳನ್ನು ಹಿಂದಿನಿಂದ ನೋಡಿದ್ದರು. ಉದ್ದ ಕೂದಲಿನ ಆಕೆ ನಗ್ನಳಾಗಿದ್ದಳು. ಕನಸಲ್ಲಿ, ಅವರೆಲ್ಲ ಅವಳನ್ನು ಹಿಂಬಾಲಿಸಿ ಓಡುತ್ತಿದ್ದರು. ಅಲ್ಲಿ ತಿರುಗಿ, ಇಲ್ಲಿ ಹೊರಳಿ ಓಡಿದ ಅವರಿಗೆ ಕೊನೆಗೂ ಅವಳು ಸಿಗುವುದಿಲ್ಲ. ಕನಸಿನಿಂದ ಎಚ್ಚರಾದ ಮೇಲೆ ಅವರೆಲ್ಲ ಆ ನಗರವನ್ನು ಹುಡುಕಿ ಹೊರಟರು. ಅವರ್ಯಾರಿಗೂ ಆ ನಗರ ಸಿಗಲಿಲ್ಲವಾದರೂ, ಒಬ್ಬರನ್ನೊಬ್ಬರು ಸಂಧಿಸಿದರು. ತಾವು ಕನಸಿನಲ್ಲಿ ಕಂಡ ನಗರವನ್ನು ಕಟ್ಟಬೇಕೆಂದು ಅವರು ನಿರ್ಧರಿಸುತ್ತಾರೆ. ಪ್ರತಿಯೊಬ್ಬನೂ ಕೂಡ ಕನಸಿನಲ್ಲಿ ತಾನು ಸಾಗಿದ ದಾರಿಯನ್ನು ಅನುಸರಿಸಿ ನಗರ ನಿರ್ಮಿತಿಗೆ ತೊಡಗುತ್ತಾನೆ. ಕನಸಿನಲ್ಲಿ ಯಾವ ಜಾಗದಲ್ಲಿ ಆ ಹೆಣ್ಣು ಕಾಣೆಯಾಗಿದ್ದಳೋ, ಆ ಜಾಗವನ್ನು ಮಾತ್ರ ಭಿನ್ನವಾಗಿ ನಿರ್ಮಿಸುತ್ತಾರೆ – ಆಕೆ ಮತ್ತೆ ಪಾರಾಗದಂತೆ.”

ತಮರಾ ಎನ್ನುವ ನಗರವನ್ನು ವರ್ಣಿಸುತ್ತ ಪೋಲೋ, ಆ ನಗರವನ್ನು ಅರಿತುಕೊಳ್ಳುವ ಮೊದಲೇ ಆ ನಗರದಿಂದ ನಿರ್ಗಮಿಸಿ ಆಗಿರುತ್ತದೆ ಎನ್ನುತ್ತಾನೆ. ಕ್ಯಾಲ್ವಿನೋನ “ಇನ್ವಿಸಿಬಲ್ ಸಿಟೀಸ್” ಓದುಗನ ಅನುಭವವೂ ಸ್ವಲ್ಪ ಹೀಗೆಯೇ ಇರಬಹುದು: ಈ ಕೃತಿ ತೆರೆಯುತ್ತಿರುವ ಲೋಕದ ಗ್ರಹಿಕೆ ಆಗುವುದರೊಳಗೇ ಓದು ಮುಗಿದಿರುತ್ತದೆ. ಓದುಗನ ಆಸಕ್ತಿಯನ್ನು ಹಿಡಿದಿಟ್ಟುಕೊಳ್ಳುವ ಈ ಕೃತಿ ಪ್ರತಿ ಪುಟದಲ್ಲಿಯೂ ನಮ್ಮಿಂದ ಸಕ್ರಿಯ ಕಲ್ಪನೆಯನ್ನೇ ಕೇಳುತ್ತದೆ. ಹಾಗೆ ನೋಡಿದರೆ, ಇದೊಂದು ಅಸಾಧ್ಯತೆಗಳ ವರ್ಣನೆಯ ಕೃತಿ. ಅಥವಾ ಅಸಾಧ್ಯ ಪುಸ್ತಕವೆಂದೇ ಅನ್ನಬಹುದು. ಯಾಕೆಂದರೆ, ಕ್ಯಾಲ್ವಿನೋ ಒಂದು ಕಡೆ ಹೇಳಿರುವ ಹಾಗೆ: “ನಾನು ಈವರೆಗೆ ಬರೆದಿರುವ ಬಹಳಷ್ಟು ಪುಸ್ತಕಗಳು – ಹಾಗೆಯೇ ಮುಂದಿನವೂ ಕೂಡ – ಶುರುವಾಗುವುದು ಅಂತಹ ಪುಸ್ತಕವೊಂದನ್ನು ಬರೆಯುವುದೇ ಅಸಾಧ್ಯವೆನ್ನುವ ವಿಚಾರದ ಮೂಲಕ. ಅಂತಹ ಪುಸ್ತಕದ ರಚನೆ ಅಸಾಧ್ಯವೆಂದು ಯಾವಾಗ ನನಗೆ ಸಂಪೂರ್ಣವಾಗಿ ನಂಬಿಕೆ ಬರುತ್ತದೆಯೋ, ಆಗ ನಾನು ಅಂತಹ ಒಂದು ಕೃತಿರಚನೆಗೆ ತೊಡಗಿಕೊಳ್ಳುತ್ತೇನೆ”.