“ಒಮ್ಮೆ ಬ್ಯಾಸಿಗಿ ಮದ್ಯಾನದಾಗ ಆಯಿ ಹಳ್ಳಕ್ಕ ನೀರ ತರಾಕ ಹೋಗಿ, ಜೋಡಗೊಡಾ ಹೊತ್ತು ಹೊಡಮಳ್ಳಿ ಬರೂದ್ರಾಗ ಮುತ್ತ್ಯಾ ಹೊಲದಿಂದ ಬಂದಬಿಟ್ಟಾನವ್ವಿ. ನೀರಡಿಶ್ಯಾನ. ಮನ್ಯಾಗ ಕುಡ್ಯಾಕ ಮುಕ್ಕ್ ನೀರಿಲ್ಲ. ಮುತ್ತ್ಯಾ ತಾಪಗೆದ್ದು, “ಹಾಂ ಅಧೆಂಗ ನೀ ಇಟ್ಟ್ ತಡಾ ಮಾಡೀದಿ ಬರಾಕ! ನಡಿ ರಂಡಿ ನೀ ಅದ ಹಳ್ಳದ್ ದಂಡ್ಯಾಗ ಇರು. ಅಲ್ಲೇ ನಿಂದ್ರು. ದsರ್’ಕರ್ತಾ ಕೊಡಾ ಕೆಳಗಿಳಿಶಿ ಕುಂತೆಪಾ ಅಂದ್ರ ನಿನ್ನ ಸಿಗದು ಅಗಶಿ ಬಾಗಲಕ್ಕ ತೋರ್ಣಾ ಕಟ್ತತೀನಿ ಹುಶಾರ್!” ಅಂತಂದು, ಕೊಡದ ದರ್ಶಿಲೆ ಆಯಿನ್ನ ಕಾದ ಉಸಕಿನ ಮ್ಯಾಲ ಬರೆಗಾಲಿಲೇ ನಿಂದ್ರಿಶಿದ್ನಂತ.”
ಜಯಲಕ್ಷ್ಮಿ ಪಾಟೀಲ್ ಬರೆಯುವ “ಗರ್ದಿ ಗಮ್ಮತ್ತು” ಅಂಕಣದ ಒಂಭತ್ತನೆಯ ಬರಹ
ನಾನು ಚಿಕ್ಕವಳಿದ್ದಾಗ, ಯಾರಾದರೂ ನಮ್ಮ ಸಣ್ಣವ್ವನ ಎದುರು, ‘ಇಂಥಿಂಥವಳ ಗಂಡ ಬಲು ಸಿಟ್ಟಿನವ’ ಎಂದರೆ ಸಾಕು, ಅವಳ ಮನಸ್ಸಲ್ಲಿ ಹಂಚಿಬಟ್ಟು ಹಾಕಿಂದಂಥ, ತಾನು ಕೇಳಿದ, ಸ್ವಲ್ಪ ಕಾಲದ ಮಟ್ಟಿಗೆ ನೋಡಿದ ತನ್ನ ಮುತ್ತ್ಯಾನ ಸಿಟ್ಟಿನ ಕತೆಯನ್ನು ಹೇಳುವವಳೇ ಆಕೆ.
“ಅವ್ವೀ, ಇದೇನ ಸಿಟ್ಟು ಬಿಡು, ನಮ್ಮುತ್ತ್ಯಾ ಇದ್ನಲ್ಲ ಮಲಕಪ್ಪ ಸಾವ್ಕಾರ, ಅಂವಾ ಎಂಥಾ ಸಿಟ್ಟಿನ ಮನಷ್ಯಾ ಅಂದ್ರ, ಆಯಿ ರೊಟ್ಟಿ ಮಾಡ್ತಿದ್ದ್ರ ಅಂವಾ ಉಣ್ಣಾಕ ಕುಂದ್ರಬೇಕು. ಹಂಚಿನ ಮ್ಯಾಲಿನ ರೊಟ್ಟಿ ಸೀದಾ ಅವನ ತಾಟೀಗೇ ಬೀಳಬೇಕು. ಮತ್ತ ಅಂವಾ ಉಸ್ ಉಸ್ ಅಂಕೋತ ಆ ರೊಟ್ಟಿ ಉಂಡು ಮುಗುಸೂದ್ರಾಗ ಇನ್ನೊಂದ್ ರೊಟ್ಟಿ ಹಂಚಿನ ಮ್ಯಾಲಿಂದ ಅವನ ತಾಟಿನ್ಯಾಗ ಬೀಳಬೇಕು. ಜsರ್’ಕರ್ತಾ ತುಸಾ ತಡಾ ಆತು ಅಂದ್ರ ಅದೇ ಒಲ್ಯಾನ ಒಡಗಟಗಿ ತೊಗೊಂಡಕ್ಯಾಸಿ ಆಯಿಗೆ ಹೊಡಿತಿದ್ನಂತ!
ಒಮ್ಮೆ ಬ್ಯಾಸಿಗಿ ಮದ್ಯಾನದಾಗ ಆಯಿ ಹಳ್ಳಕ್ಕ ನೀರ ತರಾಕ ಹೋಗಿ, ಜೋಡಗೊಡಾ ಹೊತ್ತು ಹೊಡಮಳ್ಳಿ ಬರೂದ್ರಾಗ ಮುತ್ತ್ಯಾ ಹೊಲದಿಂದ ಬಂದಬಿಟ್ಟಾನವ್ವಿ. ನೀರಡಿಶ್ಯಾನ. ಮನ್ಯಾಗ ಕುಡ್ಯಾಕ ಮುಕ್ಕ್ ನೀರಿಲ್ಲ. ಮುತ್ತ್ಯಾ ತಾಪಗೆದ್ದು, “ಹಾಂ ಅಧೆಂಗ ನೀ ಇಟ್ಟ್ ತಡಾ ಮಾಡೀದಿ ಬರಾಕ! ನಡಿ ರಂಡಿ ನೀ ಅದ ಹಳ್ಳದ್ ದಂಡ್ಯಾಗ ಇರು. ಅಲ್ಲೇ ನಿಂದ್ರು. ದsರ್’ಕರ್ತಾ ಕೊಡಾ ಕೆಳಗಿಳಿಶಿ ಕುಂತೆಪಾ ಅಂದ್ರ ನಿನ್ನ ಸಿಗದು ಅಗಶಿ ಬಾಗಲಕ್ಕ ತೋರ್ಣಾ ಕಟ್ತತೀನಿ ಹುಶಾರ್!” ಅಂತಂದು, ಕೊಡದ ದರ್ಶಿಲೆ ಆಯಿನ್ನ ಕಾದ ಉಸಕಿನ ಮ್ಯಾಲ ಬರೆಗಾಲಿಲೇ ನಿಂದ್ರಿಶಿದ್ನಂತ. ಊರಾನ ಮಂದಿ, “ಚೊಲೊ ಅಲ್ಲ ಮಲಕಪ್ಪ ಇದು. ಗುರ್ಶಾಂತವ್ವಗ ಹಿಂಗ ತ್ರಾಸ್ ಕೊಡಬ್ಯಾಡ. ನೆಲಾ ಅನ್ನೂದು ಬೆಂಕಿ ಹಾಶ್ಗ್ಯಾಗೇತಿ. ಆ ಹೆಣಮಗಳು ಹೆಂಗ ತಡಕೊಂಡಾಳ, ಹೋಗು ಹೋಗಿ ಕರ್ಕೊಂಡಾ ಬಾ ಮನಿಗೆ” ಅಂತಂದ್ರ, ಅವ್ರ್ಯಾರೂ ಇನ್ನೊಮ್ಮೆ ಇವ್ರ ಉಸಾಬರಿಗೆ ಬಂದಿರಬಾರ್ದು ಅಂಥಾ ಮಾತ ಅವರಿಗೆ ಅಂದು ಕಳಿಶಿದ್ನಂತ. ಸಂಜ್ಯಾಗುಮಟ ಅಕಿನ್ನ ಅಲ್ಲೇ ನಿಂದ್ರಿಶಿದ್ದ್ನಂತ. ಅಕಿಗೆ ನಿಂತೂ ನಿಂತೂ ಹೆಜ್ಜಿ ಕಿತ್ತಿ ಇಡಾಕ ಆಗಲಾರ್ದಂಗ ಆಗಿಹೋಗಿತ್ತಂತ. ಅಂಗಾಲ ಭರ್ತಿ ಕೆಪಾಗ ಉಸ್ಕಿನಂಗ ಗುಳ್ಳಿ ಆಗಿದ್ವಂತ. ಮುಂದ ಎಂಟಾನಎಂಟ್ ದಿನ ಆಯಿಗೆ ನಡ್ಯಾಕ ಬಂದಿರ್ಲಿಲ್ಲಂತ. ಅಂಥಾವಂವ ನಮ್ಮುತ್ತ್ಯಾ!
ಸಣ್ಣವ್ವ ಈ ಕತೆ ಹೇಳಿದಾಗಲೆಲ್ಲ ನಾನೆಂದೂ ನೋಡಿರದ ಆಕೆಯ ಆಯಿ, ಮುತ್ತ್ಯಾ, ಅವರ ಅಡುಗೆಮನೆ, ಹಳ್ಳದ ದಂಡೆ, ಉಸುಕು, ಎಲ್ಲರನ್ನೂ, ಎಲ್ಲವನ್ನೂ ನಾನೂ ನೋಡಿದ್ದೇನೆ ಎನ್ನುವಷ್ಟು ಗಾಢ ಪರಿಣಾಮ ಬೀರುತ್ತಿತ್ತು.
ನಂತರ ನಾನು ತುಸು ದೊಡ್ಡವಳಾಗಿ, ರೇಣುಕಾ ಎಲ್ಲಮ್ಮ ಜಮದಗ್ನಿಯ ಕತೆ ಕೇಳಿದ ಮೇಲೆ, ಕೊಡ, ನೀರ ದಂಡೆ, ಉಸುಕು, ಊರ ಜನ, ಗಂಡನ ಸಿಟ್ಟು, ಹೆಂಡತಿಯ ನಿಷ್ಠೆ ಎಲ್ಲವೂ ಹೋಲಿಕೆಯಾಗಿ, ಅವರೇ ಮತ್ತೆ ಸಣ್ಣವ್ವನ ಆಯಿ ಮುತ್ತ್ಯಾ ಆಗಿ ಮರುಜನ್ಮ ಪಡೆದಿದ್ದರೇನೋ ಅನಿಸತೊಡಗಿತ್ತು. ಸಧ್ಯ ಇವರ ಮಗ ಪರುಶರಾಮನಾಗಲಿಲ್ಲ ಅಷ್ಟೇ ವ್ಯತ್ಯಾಸ!
ಅಂದಿನಿಂದ, ಅದಕ್ಕೂ ಶತಶತಮಾನಗಳಷ್ಟು ಹಿಂದಿನಿಂದ ಇಂದಿನವರೆಗೆ ಅದೆಷ್ಟೋ ಹೆಣ್ಣುಮಕ್ಕಳು ಇಂಥ, ಇದಕ್ಕಿಂತ ಭಯಂಕರ ನೋವು, ಅವಮಾನಗಳನ್ನು ಸಹಿಸುತ್ತ ಸಂಸಾರ ನಡೆಸುತ್ತಿದ್ದಾರೆ. ಎದುರಿಸಲಾಗದೆ ಕೈಲಾಗದವರಾಗಿ ಅಲ್ಲ, ತಿರುಗಿಬಿದ್ದಷ್ಟೂ ರಾಕ್ಷಸರಾಗಿಬಿಡುವ ಗಂಡಂದಿರ ಪೈಶಾಚಿಕತೆಗೆ ಹೆದರಿಯೋ, ಮಕ್ಕಳ ಭವಿಷ್ಯಕ್ಕಾಗಿಯೋ, ಬದುಕಬೇಕೆಂಬ ಸಹಜ ಹಂಬಲಕ್ಕಾಗಿಯೋ ಇಂಥಾ ದಾರುಣ ಸ್ಥಿತಿಯನ್ನು ವಿದ್ಯಾವಂತ, ಅವಿದ್ಯಾವಂತ ಎರಡೂ ವರ್ಗದ ಹೆಣ್ಣುಮಕ್ಕಳು ಸಹಿಸುತ್ತಲಿದ್ದಾರೆ.
ಸುಮಾರು ಇಪ್ಪತ್ತು ವರ್ಷಗಳ ಹಿಂದೆ ವಿಜಯ್ ತೆಂಡೂಲ್ಕರ್ ಅವರ ಕೊನೆಯ ನಾಟಕ ‘ಬೇಬಿ’ಯನ್ನು ಕನ್ನಡಕ್ಕೆ ಅನುವಾದಿಸಿದೆ ನಾನು. ಅನುವಾದಗೊಂಡ ಹತ್ತು ವರುಷಗಳ ನಂತರ ಪುಸ್ತಕ ಪ್ರಕಟವೂ ಆಯಿತೆನ್ನಿ. ಅದಲ್ಲ ವಿಷಯ. ‘ಬೇಬಿ’ ನಾಟಕದ ಕಥಾ ವಸ್ತು ಸ್ತ್ರೀ ದೌರ್ಜನ್ಯವನ್ನು ಬಿಂಬಿಸುವಂಥದ್ದು.
ಹೆಣ್ಣೊಬ್ಬಳು ಅತ್ಯಾಚಾರ ಎಸಗಿದವನ ಬಳಿ, ‘ಸಮಾಜ ನೀನು ಮಾಡಿದ ತಪ್ಪಿಗೆ ನನ್ನನ್ನು ಬದುಕಗೊಡುತ್ತಿಲ್ಲ. ಆದ್ದರಿಂದ ನಿನ್ನ ಜೊತೆಯೇ ನಾನಿರುತ್ತೇನೆ’ ಎಂದು ಹೇಳಿ ನರಕದ ಬಾಗಿಲನ್ನು ತಟ್ಟುತ್ತಾಳೆ. ಆತ ಅವಳನ್ನು ಸ್ಲಮ್ ಒಂದರಲ್ಲಿ ಇರಿಸಿ, ಅಕ್ಷರಶಃ ನಾಯಿಯಂತೆ ನಡೆಸಿಕೊಳ್ಳುತ್ತಾನೆ.
ನಾಟಕವೇ ಆದರೂ ಆ ಹೆಣ್ಣಿನ ಪಾತ್ರವನ್ನು ಮಾಡಲು ಸಾಮಾನ್ಯವಾಗಿ ನಟಿಯರು ಒಪ್ಪುವುದೇ ದುಃಸ್ಸಾಹಸ! ಅಂಥಾ ಕ್ರೌರ್ಯ ತುಂಬಿದ ನಾಟಕವದು. ಅಂಥಾ ದುಷ್ಟ ವ್ಯಕ್ತಿಗಳು ಇರುವುದಿಲ್ಲವೇ? ವಿದ್ಯಾವಂತರಾಗಿದ್ದೂ ಅಂಥ ಹಿಂಸೆಯನ್ನು ಸಹಿಸುವ ಹೆಣ್ಣುಮಕ್ಕಳಿಲ್ಲವೇ? ಇದ್ದಾರೆ, ಅವರೂ ಇವರೂ ನಮ್ಮ ನಡುವೆಯೇ ಇದ್ದಾರೆ. ನನಗೆ ಪರಿಚಯವಾದ ಹೆಣ್ಣೊಬ್ಬಳ ಗಂಡ ಅವಳನ್ನು ಕಬ್ಬಿಣದ ಪಟ್ಟಾಪಟ್ಟಿ ಪಲ್ಲಂಗದ ಮೇಲೆ ಹಾಸಿಗೆ ಹಾಸದೆಯೇ ಅನುಭವಿಸುತ್ತಿದ್ದ. ಬೆನ್ನಮೂಳೆಗುಂಟ ಅವಳ ಬೆನ್ನ ಚರ್ಮ ಕಿತ್ತುಹೋಗಿತ್ತು! ಅವಳನ್ನು ಮನೆಯಲ್ಲಿ ಕಿಟಕಿಗಳನ್ನೂ ಮುಚ್ಚಿ ಕೂಡಿ ಹಾಕಿ ಹೊರಗಿನಿಂದ ಬೀಗ ಹಾಕಿಕೊಂಡು ಹೋಗುತ್ತಿದ್ದ. ಹಾಗಂತ ಆಕೆಯೇನು ಅಕ್ಷರ ಗೊತ್ತಿಲ್ಲದ ಹೆಣ್ಣುಮಗಳೇನೂ ಅಲ್ಲ. ವೈದ್ಯೆ ಆಕೆ!
ಹಾಗಿದ್ದೂ ಯಾಕೆ ಅವಳದನ್ನು ಸಹಿಸಿದಳು?! ಅವಳು ಮಾತ್ರವಲ್ಲ ದೌರ್ಜನ್ಯಕ್ಕೊಳಗಾಗುವ ಅಂಥ ಎಲ್ಲ ಹೆಣ್ಣುಮಕ್ಕಳು ಯಾಕೆ ಸಹಿಸುತ್ತಾರೆ? ಯಾಕೆ ಅಲ್ಲಿಂದ ಎದ್ದು ಆಚೆ ಬರುವುದಿಲ್ಲ? ಯಾಕೆಂದರೆ ಅವರ ತಲೆಯಲ್ಲಿ ವಿನಾಕರಣವಾಗಿ ಸಮಾಜ ತುಂಬಿರುವ ಭಯಗಳು! ಹಾಗಿದ್ದಿದ್ದರೆ ನಮಗೆ ಅಂಕಿಅಂಶಗಳೇ ಸಿಗುತ್ತಿರಲಿಲ್ಲ! ಎಲ್ಲರೂ ಹಾಗೆಯೇ ಸಹಿಸಿಕೊಂಡು ಇರುತ್ತಾರೆ ಅಂತೇನಿಲ್ಲ. ಎದ್ದು ಬಂದು ದೂರು ದಾಖಲಿಸುವವರೂ ಇದ್ದಾರೆ.

೨೦೨೩ರ NCRB (National Crime Records Bureau) ದ ವರದಿ ಪ್ರಕಾರ ಕರ್ನಾಟಕ ಒಂದರಲ್ಲೇ ಮಹಿಳೆಯರು ಮತ್ತು ಮಕ್ಕಳ ಮೇಲಿನ ಐವತ್ತೊಂದು ಸಾವಿರಕ್ಕೂ ಹೆಚ್ಚು ದೌರ್ಜನ್ಯ ಪ್ರಕರಣಗಳು ದಾಖಲಾಗಿವೆಯಂತೆ ಮತ್ತು ಮಹಿಳೆಯರ ಮೇಲಿನ ಸೈಬರ್ ಅಪರಾಧದಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆಯಂತೆ! ನಾವು ಏನನ್ನು ಮರೆಯಬಾರದು ಎಂದರೆ ಇದು; ‘ಮೌನವಾಗಿ ದೌರ್ಜನ್ಯ ಸಹಿಸದೆ, ಎದ್ದು ಬಂದು ಪೋಲಿಸ್ ಠಾಣೆಯಲ್ಲಿ ಸಲ್ಲಿಸಿದ ದೂರುಗಳ ಸಂಖ್ಯೆ’! ಇದಕ್ಕೆ ಎರಡು ಆಯಾಮಗಳಿವೆ. ಒಂದು, ೫೧ ಸಾವಿರದಷ್ಟು ಜನ (೨೦೨೩ರಲ್ಲಿ) ದೂರು ದಾಖಲಿಸುವಂಥ ಅನಿವಾರ್ಯತೆ ತಲೆದೋರಿದ್ದು ನಮ್ಮ ಸಮಾಜ ತಲೆ ತಗ್ಗಿಸುವ ವಿಷಯ ಹೌದಾದರೂ, ನಾವು ಕರ್ನಾಟಕದ ಹೆಣ್ಣುಮಕ್ಕಳು ದೌರ್ಜನ್ಯವನ್ನು ಸಹಿಸುವುದನ್ನು ನಿಲ್ಲಿಸುತ್ತಿದ್ದೇವೆ ಎನ್ನುವುದು ಮತ್ತು ಅಷ್ಟಕ್ಕೇ ನಿಲ್ಲದೇ ದೂರು ದಾಖಲಿಸುವಷ್ಟು ಗಟ್ಟಿಯಾಗುತ್ತಿದ್ದೇವೆ ಎನ್ನುವುದು ಇನ್ನೊಂದು. ಬಹುಶಃ ಈ ಸಂಖ್ಯೆಯ ಎರಡು ಮೂರು ಪಟ್ಟು ಹೆಣ್ಣುಮಕ್ಕಳು ಇನ್ನೂ ದೌರ್ಜನ್ಯವನ್ನು ಸಹಿಸಿಕೊಂಡೇ ಇದ್ದಾರೆ ಕರ್ನಾಟಕದಲ್ಲಿ. ಹಾಗಾದರೆ ಉಳಿದ ರಾಜ್ಯಗಳ ಹೆಣ್ಣುಮಕ್ಕಳು ಇಲ್ಲಿಗಿಂತ ಹೆಚ್ಚು ಸುರಕ್ಷಿತರೇ? ಖಂಡಿತ ಅಲ್ಲ! ಸುಶಿಕ್ಷಿತ ಜನರ ನಾಡಾದ ಕರ್ನಾಟಕದಲ್ಲೇ ಇಷ್ಟು ಪ್ರಕರಣಗಳು ಎಂದ ಮೇಲೆ, ಮನೆಯ ಪಡಸಾಲೆಗೂ ಬರಲು ಹೆದರುವ, ಗಂಡಸರಿಗೆ ಎದುರಾಗಿ ಮಾತಾಡುವುದೇ ಅಪರಾಧ ಎನ್ನುವ ವಾತಾವರಣದಲ್ಲಿರುವ, ತಮ್ಮ ಮೇಲಾಗುವ ಅನ್ಯಾಯಗಳನ್ನು ಸಹಿಸುತ್ತ ದೂರು ದಾಖಲಿಸಲೂ ಹೆದರುವ, ಇನ್ನೂ ಘೂಂಗಟ್ ಅಡಿಯಲ್ಲೇ ಇರುವ ಉತ್ತರ ಭಾರತದ ಅನೇಕ ರಾಜ್ಯಗಳ ಮತ್ತು ದಕ್ಷಿಣ ಭಾರತದ ಇತರ ರಾಜ್ಯಗಳಲ್ಲಿನ ದೌರ್ಜನ್ಯಕ್ಕೊಳಗಾಗುತ್ತಿರುವ ಹೆಣ್ಣುಮಕ್ಕಳ ಸ್ಥಿತಿ ಎಂಥಾ ಶೋಚನೀಯವಾಗಿರಬಹುದು….!?
ಯಾಕೆ ಹೆಚ್ಚಿನವರು ಪೊಲಿಸ್ ಠಾಣೆಗೆ ಹೋಗಿ ದೂರು ದಾಖಲಿಸುವುದಿಲ್ಲ?
೧) ಯಾಕೆಂದರೆ ಸುತ್ತಲಿನವರ ನೆರವು ಅವರಿಗಿಲ್ಲದೇ ಇರುವುದು ಮತ್ತು ಪ್ರಕರಣಗಳು ಹೊರಗೆ ಬಂದರೆ ಜನ ಆಡಿಕೊಳ್ಳುತ್ತಾರೆ, ಮನೆಯ ಮರ್ಯಾದೆ ಬೀದಿ ಪಾಲಾಗುತ್ತದೆ ಎನ್ನುವ ಸೋಗಿನಡಿ ಜವಾಬ್ದಾರಿ ವಹಿಸಿಕೊಳ್ಳುವುದರಿಂದ ತಪ್ಪಿಸಿಕೊಳ್ಳುವ ಹುನ್ನಾರದ ಜೊತೆಗೆ, ದೂರು ಕೊಟ್ಟರೆ ಕೋರ್ಟು ಕಚೇರಿಗಳ ಓಡಾಟ, ಅದಕ್ಕಾಗಿ ಖರ್ಚಾಗುವ ಹಣ, ಮುಖ್ಯ ಭೂಮಿಕೆಯ ಪರದೆಯ ಹಿಂದೆ ಕೆಲಸ ಮಾಡುವ ಮನಸ್ಥಿತಿಗಳು.
೨) ಮಕ್ಕಳಿದ್ದರೆ ಅವರನ್ನು ಬಿಟ್ಟು ಹೊರ ಹೋಗಲಾಗದ, ಹೋದರೆ ಅವರನ್ನು ಸಾಕಿ ಬೆಳೆಸುವಷ್ಟು ಆರ್ಥಿಕವಾಗಿ ಬಹಳಷ್ಟು ಹೆಣ್ಣುಮಕ್ಕಳು ಸಶಕ್ತರಾಗಿಲ್ಲದೇ ಇರುವುದು.
೩) ಆತ್ಮಬಲ ಮತ್ತು ಧೈರ್ಯದ ಕೊರತೆ.
೪) ಹೆಣ್ಣು ಇಂಥವನ್ನು ಸಹಿಸಿಕೊಂಡು ಹೋಗಬೇಕು, ಅದವಳ ಕರ್ಮ ಎಂದು ಉಪದೇಶಿಸುವ ಜನ ಈಗಲೂ ಸಾಕಷ್ಟು ಇದ್ದಾರೆ ಎನ್ನುವುದು.
೫) ತಮ್ಮನೆಯ ಹೆಣ್ಣುಮಕ್ಕಳಿಗೊಂದು ನ್ಯಾಯ, ಹೆಂಡತಿ, ಸೊಸೆ, ಅತ್ತಿಗೆಯಾಗಿ ಬಂದಿರುವ ಹೆಣ್ಣಿಗೊಂದು ನ್ಯಾಯ ಎನ್ನುವ ಸಣ್ಣ ಆಲೋಚನೆಯ ಮನಸ್ಥಿತಿ.
ಹೀಗೆಯೇ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ದೌರ್ಜನ್ಯಗಳನ್ನು ತಡೆಯಲು ಏನು ಮಾಡಬಹುದು?
೧) ಹೆಣ್ಣುಮಕ್ಕಳೇ ಆರಂಭದಲ್ಲಿಯೇ ತಮ್ಮ ಮೇಲಾಗುವ ದೌರ್ಜನ್ಯವನ್ನು ದಿಟ್ಟತನದಿಂದ ತಡೆಯುವ ಕೆಲಸ ಮಾಡಬೇಕು.
೨) ಅದಾಗದೇ ಹೋದ ಪಕ್ಷದಲ್ಲಿ ನಮ್ಮ ಭಾರತದ ಕಾನೂನಿನು ಹೆಣ್ಣುಮಕ್ಕಳ ಪರವಾಗಿ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ಅದನ್ನು ವಿವೇಚನೆಯಿಂದ ಬಳಸಿಕೊಳ್ಳಬೇಕು.
೩) ಆರ್ಥಿಕವಾಗಿ ಸಬಲರಾಗಬೇಕು. ದೌರ್ಜನ್ಯದಿಂದ ಮುಕ್ತರಾಗುವಲ್ಲಿ ಸಾಕಷ್ಟು ಬಲ ಇದರಿಂದ ದೊರೆಯುತ್ತದೆ.
೪) ಹೆಣ್ಣುಮಕ್ಕಳಿಗೆ ಅಕ್ಷರಭ್ಯಾಸದ ಜೊತೆಗೆನೇ ಮನೋಧೈರ್ಯ ತುಂಬುವ ಕೆಲಸವಾಗಬೇಕು.
೫) ಗಂಡುಮಕ್ಕಳಿಗೆ ಮತ್ತು ಹೆಣ್ಣುಮಕ್ಕಳಿಗೆ ಇಬ್ಬರೂ ಸಮಾನರು ಎನ್ನುವುದನ್ನು ಪರಸ್ಪರ ಗೌರವಿಸುವುದನ್ನು, ಪ್ರೀತಿಸುವುದನ್ನು ತಮ್ಮ ನಡತೆಯ ಮೂಲಕ ಅಭ್ಯಾಸ ಮಾಡಿಸಬೇಕು.
೬) ಬಾಲ್ಯದಲ್ಲಿ ಅಂಥ ವಾತಾವರಣ ಸಿಗದ ಗಂಡಸರ ಮನಸ್ಥಿತಿ ಬೆಳೆದ ಮೇಲಾದರೂ ಬದಲಾಗಲೇಬೇಕು.
೭) ಮರ್ಯಾದೆ ಹೋಗುತ್ತದೆ ಎನ್ನುವ ಭಯ ದೌರ್ಜನ್ಯ ಎಸಗುವವರಲ್ಲಿ ಇರಬೇಕಾದ ಎಚ್ಚರ. ಅನುಭವಿಸುವವರಲ್ಲಲ್ಲ.

ಬದುಕನ್ನು, ದಾಂಪತ್ಯವನ್ನು ಸುಂದರ ಮಾಡಿಕೊಳ್ಳುವ ಅವಕಾಶ ಎಲ್ಲರಿಗೂ ಇರುತ್ತದೆ. ಅದನ್ನು ಒಣ ಅಹಂ ಇಲ್ಲವೇ ಕೀಳರಿಮೆಯಿಂದ ಬಹಳಷ್ಟು ಜನ ಗಂಡಸರು ಕೈಯಾರೆ ಹಾಳು ಮಾಡುತ್ತಾರೆ. ಹೆಣ್ಣಿನ ಮೇಲೆ ಅವರೆಸಗುವ ದೌರ್ಜನ್ಯ ಅವಳ ಸಂತೋಷ, ನೆಮ್ಮದಿಯನ್ನು ಮಾತ್ರವಲ್ಲ ತಮ್ಮ ನೆಮ್ಮದಿ ಮತ್ತು ಸಂತೋಷಕ್ಕೂ ಅದುವೇ ಕೊಡಲಿಪೆಟ್ಟು ಅನ್ನುವುದನ್ನ ಮರೆಯಬಾರದು.

ಲೇಖಕಿ, ರಂಗ ಕಲಾವಿದೆ ಜಯಲಕ್ಷ್ಮಿ ಪಾಟೀಲ್ ಉತ್ತರ ಕರ್ನಾಟಕದ ಬಿಜಾಪುರ ಜಿಲ್ಲೆಯ ನಿಂಬಾಳದವರು. ನೀಲ ಕಡಲ ಭಾನು’ (ಕವನ ಸಂಕಲನ) ‘ಹೇಳತೇವ ಕೇಳ’ (ಮಹಿಳಾ ದೌರ್ಜನ್ಯದ ವಿರುದ್ಧದ ಲೇಖನ ಸಂಗ್ರಹದ ಪುಸ್ತಕದ) ‘ಮುಕ್ಕು ಚಿಕ್ಕಿಯ (ಕಾದಂಬರಿ) ವಿಜಯ್ ತೆಂಡೂಲ್ಕರ್ ಅವರು ಬರೆದ ಮರಾಠಿ ಮೂಲದ ನಾಟಕ ‘ಬೇಬಿ’ (ಅನುವಾದಿತ ನಾಟಕ) ಇವರ ಪ್ರಕಟಿತ ಕೃತಿಗಳು. ‘ಜನದನಿ’ (ಲೈಂಗಿಕ ದೌರ್ಜನ್ಯಗಳ ವಿರುದ್ಧ ಹೋರಾಡುತ್ತಿರುವ ಸಂಸ್ಥೆ) ಸಂಸ್ಥಾಪಕಿ. ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳಂಥ ಸಾಮಾಜಿಕ ಪಿಡುಗನ್ನು ತೊಲಗಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿಯನ್ನುಂಟು ಮಾಡುವ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.



ಚಂದದ ಲೇಖನ. ಹೆಣ್ಣು ಗಂಡು ಎನ್ನದೇ ಎಲ್ಲರೂ ಮಂಥಿಸಬೇಕಾದ ವಿಷಯ. ಸಮಾನತೆ ಹಣ್ಣುಗಳು ಎಲ್ಲವೂ ಹಿಂದಿಗಿಂತ ಹೆಚ್ಚು ಉದ್ದೀಪನಗೊಂಡಿದ್ದರೂ ಒಂದು ಹಂತಕ್ಕೆ ಬಂದಾಗ ಹೆಣ್ಣಿನ ವಿಷಯದಲ್ಲಿ ಸೋಲುತ್ತಿವೆ ಈಗಲೂ ಎನ್ನುವುದು ಚಿಂತನೆಯ ವಿಷಯ. ಸಹನೆಯ ವಿಷಯದಲ್ಲಿ ಹೆಣ್ಣಿನ ಶಕ್ತಿ ಅಪ್ರತಿಮ. ಆದರೆ ಅದೇ ಗಂಡಿನ ಆಯುಧ ಆಗುವ ಮಟ್ಟಕ್ಕೆ ಹೋಗದಂತೆ ನಿಭಾಯಿಸುವ ಶಕ್ತಿ ಮತ್ತು ಯುಕ್ತಿಯನ್ನು ಹೆಣ್ಣು ಮೈಗೂಡಿಸಿಕೊಳ್ಳಬೇಕಾಗುತ್ತದೆ. ಅದೇ ಸಮಯದಲ್ಲಿ ಗಂಡೂ ತನ್ನ ಹಮ್ಮು ಬಿಮ್ಮುಗಳ ಗಡಸುತನವನ್ನು ಕಡಿಮೆಗೊಳಿಸಿಕೊಂಡು ಅವಳ ಸ್ವಾಭಾವಿಕ ಸೂಕ್ಷ್ಮಗಳನ್ನು ಗಮನಿಸುವಂತಾಗಬೇಕು.
ಮುತ್ತ್ಯಾನ ಕಥೆಯ ಮೂಲಕ ಈ ಎಲ್ಲಾ ಆಯಾಮಗಳ ವಿವರ ಬಿಚ್ಚಿಟ್ಟೀದ್ದೀರಿ. ಅಭಿನಂದನೆಗಳು ಜಯಕ್ಕಾ.