Advertisement
ಆಸ್ಟ್ರೇಲಿಯಾದಲ್ಲಿ ಮಹಿಳಾ ನಡಿಗೆ ಗುಂಪು: ವಿನತೆ ಶರ್ಮಾ ಅಂಕಣ

ಆಸ್ಟ್ರೇಲಿಯಾದಲ್ಲಿ ಮಹಿಳಾ ನಡಿಗೆ ಗುಂಪು: ವಿನತೆ ಶರ್ಮಾ ಅಂಕಣ

ನನಗೆ ಆಸ್ಟ್ರೇಲಿಯಾದಲ್ಲಿ ‘ಹೊರತುಪಡಿಸುವ’ ಮನೋಭಾವದ ಅನುಭವ ದಟ್ಟವಾಗಿರುವುದರಿಂದ ಈಚೀಚೆಗೆ ಆ ಮನೋಭಾವದ ಮಜಲುಗಳ, ಅದು ವ್ಯಕ್ತವಾಗುವ ಹಿನ್ನೆಲೆಗಳ ಬಗ್ಗೆ ಆಸಕ್ತಿ ಬೆಳೆದಿದೆ. ಕೆಲತಿಂಗಳ ಹಿಂದೆ ನಡಿಗೆ ಗುಂಪಿಗೆ ವಾಪಸ್ಸಾದಾಗ ನನ್ನ ಪರಿಚಯದಾಕೆ ಉತ್ಸಾಹದಿಂದ ಬರಮಾಡಿಕೊಂಡರು. ಬೇರೆಯವರಿಗೆ ನಾನು ನನ್ನ ಹೆಸರನ್ನು ಹೇಳಿಕೊಂಡು, ಕೆಲವರ್ಷಗಳ ಹಿಂದೆ ನಿಮ್ಮ ಜೊತೆ ನಡೆಯುತ್ತಿದ್ದೆ, ಎಂದೆಲ್ಲಾ ಪೀಠಿಕೆ ಕೊಟ್ಟೆ. ಇತರರಲ್ಲಿ ಅದೇ ಉದಾಸೀನತೆ. ಪುನಃ ಎಲ್ಲರೂ ಬಿಳಿಯರೆ.
ಡಾ.
ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

ಪ್ರಿಯ ಓದುಗರೆ,

ಕೆಲವರ್ಷಗಳ ಹಿಂದೆ ನಾನೊಂದು ಮಹಿಳಾ ಸೌಖ್ಯ ನಡಿಗೆ ಗುಂಪಿಗೆ ಸೇರಿದ್ದೆ. ನಾವೆಲ್ಲಾ ಒಂದಷ್ಟು ಮಹಿಳೆಯರು ಸೇರಿ ನಾನು ಅವರ ಜೊತೆ ವಾರಕ್ಕೊಮ್ಮೆ ಐದು ಕಿಲೋಮೀಟರ್ ನಡೆಯುತ್ತಿದ್ದೆ. ಆರೋಗ್ಯ, ಮೈತೂಕ ಎಲ್ಲವೂ ಸಮರ್ಪಕವಾಗಿದೆ ಎಂದುಕೊಂಡಿದ್ದರೆ ಅದೃಷ್ಟ ಕೈಕೊಟ್ಟಿತು. ನನ್ನ ಮಂಡಿಯಲ್ಲಿನ meniscus ಪೂರ್ತಿ ಹರಿದುಹೋಗಿ ಸರಿಯಾಗಿ ನಡೆಯಲಾರದೇ ಈ ಮಹಿಳಾ ನಡಿಗೆಯ ಗುಂಪನ್ನು ಬಿಟ್ಟಿದ್ದೆ. ಕೆಲತಿಂಗಳ ಹಿಂದೆ ಗುಂಪಿಗೆ, ವಾರದ ಮಹಿಳಾ ನಡಿಗೆಗೆ ವಾಪಸ್ಸಾದೆ.

ಗುಂಪನ್ನು ಹುಟ್ಟುಹಾಕಿದ ಮಹಿಳೆ ಒಂದು ವಯಸ್ಸಾದವರ ಯೋಗಕ್ಷೇಮ ಕೇಂದ್ರದಲ್ಲಿ ಉದ್ಯೋಗಿ. ಇಂತಹ ಕೇಂದ್ರವನ್ನು ಇಲ್ಲಿ Aged Care Centre ಅನ್ನುತ್ತಾರೆ. ಶಾಲಾ-ಪೂರ್ವ ವರ್ಷಗಳಲ್ಲಿ ಪುಟ್ಟ ಮಕ್ಕಳಿಗೆ ಇರುವ Childcare Centre ನಂತೆ ವಯಸ್ಸಾದವರನ್ನು ಅಥವಾ ಹಿರಿಯ ವಯಸ್ಕರನ್ನು ನೋಡಿಕೊಳ್ಳಲು Aged Care Centre ಇರುತ್ತವೆ. ಈ ಕೇಂದ್ರಗಳನ್ನು ಸರ್ಕಾರದ ಕಾನೂನುಕ್ರಮಗಳನ್ನು ಅನುಸರಿಸಿ ಕಡ್ಡಾಯವಾಗಿ ನೋಂದಾಯಿಸಬೇಕು. ಲೈಸೆನ್ಸ್ ಪಡೆಯಬೇಕು. ಸರ್ಕಾರದಿಂದ ಇವಕ್ಕೆ ಸ್ವಲ್ಪ ಸಹಾಯಧನ ಸಿಗುತ್ತದೆ. ಕೇಂದ್ರಗಳು ಸರಿಯಾದ ಗುಣಮಟ್ಟದಲ್ಲಿ ಕೆಲಸ ಮಾಡುತ್ತಿವೆಯೆ ಎಂದು ಪ್ರತಿವರ್ಷವೂ ಸರ್ಕಾರದಿಂದ ಕ್ವಾಲಿಟಿ ಚೆಕ್ ನಡೆಯುತ್ತದೆ.

ಹೀಗೆ ಮಕ್ಕಳಿಗಾಗಿ, ಹಿರಿಯ ವಯಸ್ಕರಿಗೆ (older adults ಎನ್ನುತ್ತಾರೆ) ಇರುವ Care Centre ವ್ಯವಸ್ಥೆ ಹುಟ್ಟಿದ್ದು ಅದೇ ಕೈಗಾರೀಕರಣ ಕ್ರಾಂತಿ ಶುರುವಾದ ದೇಶಗಳಲ್ಲಿ – ಬ್ರಿಟನ್, ಅಮೆರಿಕಾ, ಮತ್ತು ಐರೋಪ್ಯ ದೇಶಗಳಲ್ಲಿ. ಕೆಲಸ ಮಾಡುವ, ಗಟ್ಟಿಮುಟ್ಟಾದ, ಆರೋಗ್ಯದಿಂದಿರುವ ಗಂಡಸರೆಲ್ಲಾ ಫ್ಯಾಕ್ಟರಿಗಳಲ್ಲಿ ದುಡಿಯಲಾರಂಭಿಸಿದಾಗ ಅವರ ಮನೆಯ ಹೆಂಗಸರು ಬೇರೆ ಎಲ್ಲಾ ರೀತಿಗಳ ಕೆಲಸ ನಿರ್ವಹಣೆಯನ್ನು ಹೊರಬೇಕಾಯ್ತು. ಐದು ವರ್ಷಗಳು ತುಂಬುವಾಗ ಮಕ್ಕಳು ಕಡ್ಡಾಯವಾಗಿ ಶಾಲೆಗೆ ಸೇರಬೇಕಾಯ್ತು. ಅವರು ಓದುವುದನ್ನು, ಬರೆಯುವುದನ್ನು ಕಲಿಯಲೇಬೇಕೆಂದೂ, ಮತ್ತು ಒಂದಷ್ಟು ಗಣಿತ ಜ್ಞಾನವನ್ನು ಪಡೆಯಲೇಬೇಕು ಎನ್ನುವ ಶಾಲಾಪಠ್ಯ ತಯಾರಾಯ್ತು. ಯಾಕೆಂದರೆ ಮುಂದೆ ಈ ಮಕ್ಕಳು ಕಾರ್ಖಾನೆಗಳಲ್ಲಿ ಕೆಲಸ ಮಾಡುವಾಗ ಈ literacy ಮತ್ತು numeracy ಬೇಕಾಗುತ್ತದೆ.

ಸರಿ, ಹೆಂಗಸರು ತಂತಮ್ಮ ಕುಟುಂಬಗಳಲ್ಲಿನ ಚಿಕ್ಕ ಮಕ್ಕಳನ್ನು ಮತ್ತು ವಯಸ್ಸಾದವರನ್ನು ನೋಡಿಕೊಳ್ಳುವುದರ ಜೊತೆ ಬೇರೆಲ್ಲಾ ಜವಾಬ್ದಾರಿಗಳನ್ನು ಹೊರುವುದು ಕಷ್ಟವಾಯ್ತು. ಹೆಂಗಸರಿಗೆ ಪರಸ್ಪರ ಸಹಾಯ ಮಾಡಲು ಸಮುದಾಯ ಮಟ್ಟದಲ್ಲಿ ಸಣ್ಣದಾಗಿ ಮಕ್ಕಳನ್ನು ನೋಡಿಕೊಳ್ಳುವ ಅನೌಪಚಾರಿಕ ಗುಂಪುಗಳ ಸೃಷ್ಟಿಯಾಯ್ತು. ಮುಂದೆ ಇವಕ್ಕೆ ಸರಕಾರದ ಬೆಂಬಲ, ಸಹಾಯ ಲಭಿಸಿ, ಅವನ್ನು ಔಪಚಾರಿಕವಾಗಿ ನೋಂದಾಯಿಸುವ ಕ್ರಮಗಳು ಬಂದವು. ಶಾಲಾ-ಪೂರ್ವ ಮಕ್ಕಳಿಗೆಂದು ಶುರುವಾದ ವ್ಯವಸ್ಥೆ ಕಾಲಕ್ರಮೇಣ ಹಿರಿಯ ವಯಸ್ಸಿನವರಿಗೆ ಕೂಡ ಲಭ್ಯವಾಯ್ತು.

ವಾಪಸ್ ನನ್ನ ಮಹಿಳಾ ನಡಿಗೆ ವಿಷಯಕ್ಕೆ ಬರೋಣವಂತೆ. ಗುಂಪನ್ನು ಹುಟ್ಟುಹಾಕಿದ ಮಹಿಳೆ ತಾನು ಕೆಲಸ ಮಾಡುವ Aged Care Centre ನಲ್ಲಿ ಗಮನಿಸಿದ್ದು ಏನೆಂದರೆ ಹಿರಿಯ ವಯಸ್ಕರಲ್ಲಿ ನಿಯಮಿತವಾಗಿ ನಡೆಯುವ ಉತ್ಸಾಹ, ಧೈರ್ಯ ಕಡಿಮೆಯಾಗುತ್ತದೆ. ಇದು ವಯೋಸಹಜ. ಅಯ್ಯೋ, ಕುಳಿತ ಜಾಗದಿಂದ ಏಳಲು ಕಷ್ಟ, ಎದ್ದು ಏನು ಮಾಡಬೇಕು ಎನ್ನುವ ನಿರುತ್ಸಾಹ. ಒಂದು ಪಕ್ಷ, ಎದ್ದು ನಿಂತು ಓಡಾಡಲು ಹೊರಟರೆ ಕೆಲವರಿಗೆ ತಾವು ಬಿದ್ದುಬಿಡಬಹುದು ಎನ್ನುವ ಆತಂಕ. ಬಿದ್ದು ಈಗಾಗಲೇ ಸವಕಲಾಗಿರುವ ಮೂಳೆಗಳು ಮುರಿದರೆ ಈ ವಯಸ್ಸಿನಲ್ಲಿ ಅದನ್ನೆಲ್ಲ ಸಹಿಸಿಕೊಳ್ಳಬೇಕೇ … ಎನ್ನುವ ಭಯ. ಅವರಿಗೆ ಬೇರೆಯವರು ಉತ್ಸಾಹ ತುಂಬಿ, ಧೈರ್ಯ ಕೊಟ್ಟು, ಕೈ ಹಿಡಿದು ನಡೆಸುತ್ತೀವಿ, ಬನ್ನಿ ಎಂದರೆ ಅದನ್ನು ಒಪ್ಪಿಕೊಳ್ಳಲು ಮುಜುಗರ ಮತ್ತು ಕೀಳರಿಮೆ. ಹೀಗೆ ಏನೇನೋ ಕಾರಣಗಳಿಂದ ಹಿರಿಯ ವಯಸ್ಕರು ನಡಿಗೆಯ ಅಭ್ಯಾಸವನ್ನು ಬಿಟ್ಟುಬಿಡುತ್ತಾರೆ. ಇದು ಅವರ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತದೆ. ಇದರಿಂದ ಕೇಂದ್ರದ ಕೆಲಸಗಾರರಿಗೆ ಮತ್ತು ಕುಟುಂಬದವರಿಗೆ ಬೇಸರವಾಗುತ್ತದೆ. ಆರೋಗ್ಯ ಕೆಟ್ಟಾಗ ಅದನ್ನು ನಿರ್ವಹಿಸಲು ಸಾಕಷ್ಟು ಹಣ, ಸಮಯ, ಸೇವೆಗಳ ಅಗತ್ಯವಿದೆ. ಒಟ್ಟಾರೆಯಾಗಿ ನೋಡಿದರೆ ಕುಟುಂಬಕ್ಕೆ, ಸಮಾಜಕ್ಕೆ, ಮತ್ತು ಆರ್ಥಿಕ ವ್ಯವಸ್ಥೆಗೆ ಹೊರೆ ಉಂಟಾಗುತ್ತದೆ.

ನಮ್ಮ ನಡಿಗೆ ಗುಂಪಿನ ಮುಂದಾಳು ಮಹಿಳೆ ತನ್ನ ಸಂಪರ್ಕಕ್ಕೆ ಬಂದಿದ್ದ ಇಬ್ಬರು ಹಿರಿಯ ವಯಸ್ಕ ಮಹಿಳೆಯರ ‘ನಡಿಗೆಯಿಲ್ಲದ’ ದೈನಂದಿನ ಜೀವನಕ್ರಮವನ್ನು ಗಮನಿಸಿದ್ದರು. ಈ ಇಬ್ಬರು ಮಹಿಳೆಯರು ತಂತಮ್ಮ ಮನೆಗಳಲ್ಲೇ ವಾಸಿಸುತ್ತಿದ್ದರೂ ಅವರದ್ದು ಒಬ್ಬಂಟಿ ಜೀವನ. ಮಕ್ಕಳೆಲ್ಲಾ ಆಸುಪಾಸಿನಲ್ಲೋ ಇಲ್ಲಾ ಬೇರೆ ನಗರಗಳಲ್ಲೊ ಇದ್ದರು. ಇವರಿಬ್ಬರಿಗೆ ಪ್ರತಿದಿನವೂ ಮನೆಬಿಟ್ಟು ಹೊರಬರುವ ಉತ್ಸಾಹವೇ ಇರಲಿಲ್ಲ.

ಅದೇ ನಮ್ಮ ಗುಂಪಿನ ಮುಂದಾಳು ತನ್ನ ಸಮುದಾಯದ ಮಧ್ಯಮ ವಯಸ್ಸಿನ ಹೆಂಗಸರ ಕತೆಗಳನ್ನೂ ಕೇಳಿದ್ದರು. ಅದೇನೆಂದರೆ, ದಿನದ ಹೊತ್ತಿನಲ್ಲಿ ಇವರೆಲ್ಲಾ ತಾವು ಉದ್ಯೋಗ ಮಾಡುವ ಸ್ಥಳಗಳಲ್ಲಿ ಬಹಳ ಸಮಯ ಕೂತೇ ಕೆಲಸ ಮಾಡುವವರು. ಉದಾಹರಣೆಗೆ, ನನ್ನಂತೆ ಕಂಪ್ಯೂಟರ್ ಮುಂದೆ ಕೂತು ಎರಡು-ಮೂರು ಗಂಟೆಗಳ ಕಾಲ ಎದ್ದೇಳುವುದೇ ಇಲ್ಲ. ಒಮ್ಮೊಮ್ಮೆ ನನ್ನ ಮೀಟಿಂಗ್ ಗಳು ದಿನಪೂರ್ತಿ ಇರುತ್ತವೆ. ಜೊತೆಗೆ online ತರಗತಿಗಳು ಇರುತ್ತವೆ.

ನನಗೇನೋ ಕೆಲಸದ ಸ್ಥಳದಲ್ಲಿ ಸ್ವಲ್ಪ ಅನುಕೂಲವಿದೆ. ಅಲ್ಲಿ ಇರುವ ಡೆಸ್ಕ್ ಅನ್ನು ನಾನು ಬೇಕೆಂದಾಗ ಎತ್ತರಿಸಬಹುದು. ಎತ್ತರಿಸಿದಾಗ ನಾನು ನಿಂತುಕೊಂಡು, ಕಾಲುಗಳನ್ನು ಅಲ್ಲಾಡಿಸುತ್ತಾ ಕೆಲಸ ಮಾಡಬಹುದು. ಆದರೆ ನಮ್ಮ ಗುಂಪಿನ ಅನೇಕ ಮಹಿಳೆಯರಿಗೆ ಈ ಅನುಕೂಲವಿಲ್ಲ. ಉದ್ಯೋಗದ ಕೆಲಸ ಮುಗಿಸಿ ಮನೆಗೆ ಬಂದು ಸಂಜೆ ಊಟ ಮುಗಿಸಿ ಟಿವಿ ಮುಂದೆ ಕೂಡುವುದು. ಮತ್ತೆ ಸ್ಥಗಿತವಾದ ದೇಹ. ಅದಕ್ಕೆ ವ್ಯಾಯಾಮವಿಲ್ಲ. ಇದು ವಾರದ ಐದು ದಿನಗಳ ಕತೆ. ಇವರನ್ನು ತಮ್ಮ ಆರೋಗ್ಯದ ಚಿಂತೆ ಕಾಡುತ್ತಿತ್ತು.

ಹಾಗಾದರೆ ಈ ಮಹಿಳೆಯರು ಸಂಜೆ ಸಮಯದಲ್ಲಿ ವಾಕ್ ಹೋಗಬಹುದಲ್ಲ? ಉಹುಂ. ಅದೂ ಅಷ್ಟು ಸುಲಭವಲ್ಲ. ಒಬ್ಬರೇ ವಾಕ್ ಹೋಗಲು ನಿರುತ್ಸಾಹ. ಸಂಜೆ ಕತ್ತಲಾದ ಮೇಲೆ ಒಬ್ಬಂಟಿಯಾಗಿ ವಾಕ್ ಹೋಗಲು ಹೆದರಿಕೆ. ಇಪ್ಪತ್ತೊಂದನೇ ಶತಮಾನದಲ್ಲಿರುವ ನಾವು ಎಷ್ಟೆಲ್ಲಾ ಪ್ರಗತಿ ಸಾಧಿಸಿದ್ದರೂ ಹೆಂಗಸರ ಮೇಲೆ ನಡೆಯುವ ದೌರ್ಜನ್ಯ, ಅವರಿಗೆ ಕೊಡುವ ಹಿಂಸೆ, ಲೈಂಗಿಕ ಕಿರುಕುಳ ಇಂದಿಗೂ ತಪ್ಪಿದ್ದಲ್ಲ. ಆಸ್ಟ್ರೇಲಿಯಾದಲ್ಲೂ ಇವೆಲ್ಲಾ ದಿನನಿತ್ಯದ ಸಂಗತಿಗಳು.

ಈ ಸಮಸ್ಯೆಗಳ ಪರಿಹಾರಕ್ಕಾಗಿ ಅನೇಕ ವಿಧಗಳ ಪ್ರಯತ್ನಗಳು ನಡೆದಿವೆ. ಮಹಿಳಾ ಯೋಗಕ್ಷೇಮ ನಡಿಗೆ ಗುಂಪು ಒಂದು ಉತ್ತಮ ಉದಾಹರಣೆ. ವಾರದ ಒಂದು ನಿರ್ದಿಷ್ಟ ದಿನ, ಸಂಜೆ ಆರು ಗಂಟೆಗೆ ಮಹಿಳೆಯರು ಒಂದು ಪಾರ್ಕಿನ ಮುಂದೆ ಇರುವ ಬೆಂಚಿನ ಬಳಿ ಸೇರುತ್ತಾರೆ. ಪ್ರತಿವಾರವೂ ಬರಲೇ ಬೇಕೆಂಬ ಒತ್ತಡವಿಲ್ಲ. ಆರು ಗಂಟೆಗೆ ಸೇರಿ ಪರಸ್ಪರ ಕುಶಲ ವಿಚಾರಿಸಿ ನಡೆಯಲಾರಂಭಿಸುತ್ತಾರೆ. ನಡೆಯುವ ಶೈಲಿ, ವೇಗ ಮುಂತಾದವುಗಳಲ್ಲಿ ಒತ್ತಡವಿಲ್ಲದೆ, ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ನಡೆಯುತ್ತಾರೆ.

ನಮ್ಮ ಗುಂಪಿನ ಮುಂದಾಳು ಮಹಿಳೆ ತನಗೆ ಪರಿಚಯವಾದ ಆ ಇಬ್ಬರು ಹಿರಿಯ ವಯಸ್ಕ  ಮಹಿಳೆಯರ ಜೊತೆ ಸಾವಧಾನವಾಗಿ ನಡೆಯುತ್ತಾರೆ. ಪಾರ್ಕಿನ ಹೊರಗಡೆ ಇರುವ ನಡಿಗೆ-ದಾರಿಯಲ್ಲಿ ನಡೆದು ಒಂದು ಸುತ್ತು ಮುಗಿಸಿದರೆ ಅದು ಒಂದು ಕಿಲೋಮೀಟರ್. ಕೆಲವರು ನಿಧಾನವಾಗಿ ಎರಡು ಸುತ್ತು ನಡೆಯುತ್ತಾರೆ. ವೇಗವಾಗಿ ನಡೆಯುವವರು ನಾಲ್ಕು, ಐದು ಸುತ್ತು ಮುಗಿಸುತ್ತಾರೆ. ನಡೆಯುವಾಗ ಪರಸ್ಪರರ ಮೇಲೆ ನಿಗಾ ಇಟ್ಟಿರುತ್ತಾರೆ. ಅವರು ಕ್ಷೇಮವೇ, ನಡೆಯುತ್ತಿರುವಾಗ ಕಾಲಿನ ಆರೋಗ್ಯ ಸಮರ್ಪಕವಾಗಿದೆಯೆ, ಎಂದೆಲ್ಲಾ ಗಮನಿಸುತ್ತಿರುತ್ತಾರೆ. ನಡೆಯುವಾಗ ಅದೂಇದೂ ಹರಟುತ್ತಿರುತ್ತಾರೆ. ವಾಕ್ ಮುಗಿಸಿದವರು ಪುನಃ ಅದೇ ಬೆಂಚಿನ ಬಳಿ ಬಂದು ಸೇರುತ್ತಾರೆ. ಪ್ರತಿಯೊಬ್ಬ ಮಹಿಳೆಯೂ ಕ್ಷೇಮವಾಗಿ ಮರಳುವುದನ್ನು ಕೇಳಿ ತಿಳಿದುಕೊಳ್ಳುತ್ತಾರೆ. ಎಲ್ಲರೂ ಕಡೆಯತನಕ ಇರುತ್ತಾರೆ ಎಂದೇನೂ ಇಲ್ಲ. ಆದರೆ ತಾವು ಹೋಗುವುದನ್ನು ತಿಳಿಸಿ ಹೋಗುತ್ತಾರೆ.

ನನ್ನದೇ ಒಂದು ಅಸ್ಮಿತೆಯ ಕೋನದಿಂದ ಗುಂಪಿನ ಸದಸ್ಯರ ಮನೋಭಾವ, ಚರ್ಯೆಯನ್ನು ಸ್ವಲ್ಪ ಗಮನಿಸಿದ್ದೀನಿ. ಈ ಗುಂಪಿಗೆ ಸೇರಿದ್ದ ಹೊಸತರಲ್ಲಿ ನನ್ನ ಹೆಸರನ್ನು ಹೇಳಲು  ಪರಿಯಚವಿದ್ದ ಒಬ್ಬಾಕೆಯನ್ನು ಬಿಟ್ಟು ಬೇರೆ ಯಾರಿಗೂ ಬರುತ್ತಿರಲಿಲ್ಲ. ಕಲಿಯುವ ಕುತೂಹಲವೂ ಇರಲಿಲ್ಲ. ಪ್ರಯತ್ನವನ್ನೂ ಮಾಡುತ್ತಿರಲಿಲ್ಲ. ನನ್ನನ್ನು ಹೊರತುಪಡಿಸಿ ಎಲ್ಲರೂ ಬಿಳಿಯರೆ. ಪರಿಚಯವಿದ್ದಾಕೆ ಮಾತ್ರ ನನ್ನನ್ನು ಮಾತನಾಡಿಸುತ್ತಿದ್ದರು. ನನ್ನ ಜೊತೆ ನಡೆಯುತ್ತಿದ್ದರು. ಬೇರೆಯವರ ಜೊತೆ ನಡೆದಾಗ ಸಂಭಾಷಣೆಗಳಲ್ಲಿ ಅವರು ಆಂಗ್ಲೊ-ಆಸ್ಟ್ರೇಲಿಯನ್ ಅಥವಾ ಯೂರೋಪಿಯನ್-ಆಸ್ಟ್ರೇಲಿಯನ್ ಎಂದು ಗುರುತಿಸಿಕೊಳ್ಳುವುದು ಸ್ಪಷ್ಟವಾಗಿತ್ತು. ಅದರ ಬಗ್ಗೆ ಅವರಿಗೆ ಹೆಮ್ಮೆಯಿತ್ತು.  ತಮ್ಮ ಪ್ರವಾಸಗಳ ಬಗ್ಗೆ ಮಾತನಾಡುವಾಗ ಅಲ್ಲಿ ತಾವು ಭೇಟಿ ಕೊಡುವ ಬ್ರಿಟನ್, ಯೂರೋಪ್, ಅಮೆರಿಕಾ ದೇಶಗಳ ಬಗ್ಗೆ ವಿಷಯವಿತ್ತು. ಯಾರೂ ಕೂಡ ನನ್ನ ದೇಶ, ಭಾಷೆ, ನನ್ನ ಪ್ರವಾಸದ ಬಗ್ಗೆ ಕೇಳುತ್ತಿರಲಿಲ್ಲ.

ವಸಹಾತುಶಾಹಿ ದೇಶವಾದ ಆಸ್ಟ್ರೇಲಿಯಾದ ಸಮಾಜದಲ್ಲಿಈ ರೀತಿ, ಇಂತಹ ‘ಹೊರತುಪಡಿಸುವ’ (exclusion) ನಿಲುವುಗಳು, ಮನೋಭಾವ ಬಹಳಾ ಸಹಜವಾಗಿ ಹೊರಹೊಮ್ಮುತ್ತದೆ. ತಿಳಿದವರು, ಬುದ್ಧಿವಂತರು, ಉನ್ನತ ಶಿಕ್ಷಣವುಳ್ಳವರು ಇತ್ಯಾದಿ ಜನರಲ್ಲೂ ಇದು ತನ್ನಂತಾನೇ ವ್ಯಕ್ತವಾಗುತ್ತದೆ. ಅದಕ್ಕೆ ಕೆಲವರು unconscious bias ಅನ್ನುತ್ತಾರೆ. ಅದರಿಂದ ನೇರವಾಗಿ ಮತ್ತೊಬ್ಬರಿಗೆ ಹಾನಿಯಾದಾಗ ಅದು ರೇಸಿಸಮ್ ಕೂಡ ಹೌದು.

ನನಗೆ ಆಸ್ಟ್ರೇಲಿಯಾದಲ್ಲಿ ‘ಹೊರತುಪಡಿಸುವ’ ಮನೋಭಾವದ ಅನುಭವ ದಟ್ಟವಾಗಿರುವುದರಿಂದ ಈಚೀಚೆಗೆ ಆ ಮನೋಭಾವದ ಮಜಲುಗಳ, ಅದು ವ್ಯಕ್ತವಾಗುವ ಹಿನ್ನೆಲೆಗಳ ಬಗ್ಗೆ ಆಸಕ್ತಿ ಬೆಳೆದಿದೆ. ಕೆಲತಿಂಗಳ ಹಿಂದೆ ನಡಿಗೆ ಗುಂಪಿಗೆ ವಾಪಸ್ಸಾದಾಗ ನನ್ನ ಪರಿಚಯದಾಕೆ ಉತ್ಸಾಹದಿಂದ ಬರಮಾಡಿಕೊಂಡರು. ಬೇರೆಯವರಿಗೆ ನಾನು ನನ್ನ ಹೆಸರನ್ನು ಹೇಳಿಕೊಂಡು, ಕೆಲವರ್ಷಗಳ ಹಿಂದೆ ನಿಮ್ಮ ಜೊತೆ ನಡೆಯುತ್ತಿದ್ದೆ, ಎಂದೆಲ್ಲಾ ಪೀಠಿಕೆ ಕೊಟ್ಟೆ. ಇತರರಲ್ಲಿ ಅದೇ ಉದಾಸೀನತೆ. ಪುನಃ ಎಲ್ಲರೂ ಬಿಳಿಯರೆ.

ಅವರನ್ನು ನನ್ನ ಜೊತೆ ‘ಒಳಪಡಿಸಿಕೊಳ್ಳುವ’ ತಂತ್ರವನ್ನನುಸರಿಸಿ ಪ್ರತಿವಾರವೂ ಹಾಜರಾಗುತ್ತಿದ್ದ ಮಹಿಳೆಯರ ಹೆಸರನ್ನು ಹಿಡಿದು ಅವರನ್ನು ಸಂಭೋದಿಸಿ ಅವರ ಯೋಗಕ್ಷೇಮದ ಬಗ್ಗೆ ವಿಚಾರಿಸಲಾರಂಭಿಸಿದೆ. ಆಸಕ್ತಿಯ ವಿಷಯವೆಂದರೆ, ನಾನು ಮಾತನಾಡುತ್ತಿರುವುದು ಹೆಚ್ಚಾದಂತೆ ಬೇರೆ ಮಹಿಳೆಯರು ನನ್ನ ಕಡೆ ಗಮನ ಕೊಡುತ್ತಿದ್ದಾರೆ. ಈಗ ಮೂವರು ನನ್ನ ಹೆಸರನ್ನು ಹೇಳುತ್ತಾರೆ. ಹಿರಿಯ ವಯಸ್ಸಿನ ಒಬ್ಬ ಮಹಿಳೆ ನನ್ನನ್ನು ದೃಷ್ಟಿಸಿ ಮಾತನಾಡುತ್ತಾರೆ. ಅಲ್ಪ ಮಟ್ಟದಲ್ಲಾದರೂ ಸಾಮಾಜಿಕ ಬದಲಾವಣೆ ಆಗುತ್ತಿದೆ.

About The Author

ಡಾ. ವಿನತೆ ಶರ್ಮ

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ