ಈ NDIS ಸಹಾಯವನ್ನು ಪಡೆಯಲು ಕೆಲವು ಅರ್ಹತಾ ಮಾನದಂಡಗಳಿವೆ. ಅನುದಾನವನ್ನು ಕೋರಲು ಅಭ್ಯರ್ಥಿಗಳು ತಮಗಿರುವ ಅಂಗ ಮತ್ತು ಮಾನಸಿಕ ನ್ಯೂನತೆಗಳ ತಪಾಸಣಾ ವರದಿಗಳನ್ನು ಸಲ್ಲಿಸಬೇಕು. ತಮ್ಮ ಕುಟುಂಬ ವಾರ್ಷಿಕ ಆದಾಯ, ಸ್ಥಿರ, ಅಸ್ಥಿರ ಆಸ್ತಿ ವಿವರಗಳು, ಇರುವ ಸಾಮರ್ಥ್ಯಗಳ ಬಳಕೆ, ದೌರ್ಬಲ್ಯಗಳಿಂದ ಆಗುತ್ತಿರುವ ಪರಿಣಾಮ, ಹೀಗೇ ಅನೇಕ ದಾಖಲೆಗಳನ್ನು ಒದಗಿಸಬೇಕು. ಇವನ್ನೆಲ್ಲಾ ಪಡೆಯುವುದು, ಒದಗಿಸುವುದು ಸುಲಭದ ಮಾತಲ್ಲ. ಅನೇಕರಿಗೆ ಇದು ದೊಡ್ಡ ಚಾಲೆಂಜ್. ಇವರೊಡನೆ ಇವರ ಕುಟುಂಬ ಸದಸ್ಯರೂ ಕಣಕ್ಕಿಳಿದು ಪರದಾಡಬೇಕು. ಇರುವ ಪ್ರತಿಯೊಂದು ನ್ಯೂನತೆಗೂ ವಿವಿಧ ವರದಿಗಳು, ದಾಖಲೆಗಳು ಬೇಕಾಗುತ್ತದೆ. ಜನರು ವ್ಯವಸ್ಥೆಯೊಡನೆ ಹೋರಾಡುತ್ತಾ ಬೇಸತ್ತು ಹೋಗುತ್ತಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ
ಪ್ರಿಯ ಓದುಗರೆ,
ಮೊನ್ನೆ ಒಂದು ದಿನ ಕೆಲಸ ದಿನದ (ವರ್ಕಿಂಗ್ ಡೇ) ಅವಧಿ ಮುಗಿಯುತ್ತಾ ಬಂದಿತ್ತು. ಅಂದರೆ ಗಡಿಯಾರದಲ್ಲಿ ನಾಲ್ಕು ಗಂಟೆ ದಾಟಿತ್ತು. ನಾನು ಮತ್ತು ನನ್ನ ಸಹೋದ್ಯೋಗಿಯೊಬ್ಬರು ಸೇರಿ ಇಬ್ಬರೇ ಉಳಿದಿದ್ದೆವು. ನನ್ನ ಬದಿ ಇರುವ ಕಿಟಕಿಗಳತ್ತ ನಡೆದು ಬಂದ ಆಕೆಯ ನಿಟ್ಟುಸಿರು ಕೇಳಿಸಿತು. ಇಲ್ಲಿ ಆಸ್ಟ್ರೇಲಿಯಾದಲ್ಲಿ ‘ಆರ್ ಯೂ ಓಕೆ?’ ಎಂದು ಕೇಳುವುದು ಸರ್ವೇಸಾಮಾನ್ಯ. ಕೇಳಿದೆ. ನನ್ನತ್ತ ತಿರುಗಿ ಪೇಲವ ನಗೆ ನಕ್ಕರು. ‘ಲಾಂಗ್ ಡೇ ಅಲ್ವಾ,’ ಅಂದೆ ನಾನು. ಆಕೆಯ ಕಣ್ಣಲ್ಲಿ ನೀರಾಡಿತು. ಮಾನಸಿಕ ದೌರ್ಬಲ್ಯಗಳಿರುವ ಅವರ ವಯಸ್ಕ ಮಗನನ್ನು ನಿಭಾಯಿಸುವುದರ ಕುರಿತು ಹೇಳಿದರು. ಮಗನೇನೋ ಸರ್ಕಾರದ NDIS ಅನುದಾನವನ್ನು ಪಡೆಯುತ್ತಾ, ಬೇರೆ ನಿವಾಸದಲ್ಲಿದ್ದಾನೆ. ಅವನ ದಿನನಿತ್ಯ ಜೀವನದ ಅಗತ್ಯಗಳನ್ನು ನೋಡಿಕೊಳ್ಳಲು ಸಪೋರ್ಟ್ ವರ್ಕರ್, ಮನೆ ಕ್ಲೀನರ್, ಊಟ ಒದಗಿಸುವ ಸಂಸ್ಥೆ ಎಲ್ಲವೂ ಇದೆ. ಅನುದಾನದ ಮೂಲಕ ಅವನು ಪ್ರತಿ ತಿಂಗಳೂ ವೈದ್ಯಕೀಯ ಮತ್ತು ಇತರ ಆರೋಗ್ಯ ಸೇವೆ ಒದಗಿಸುವ ಸಿಬ್ಬಂದಿಯನ್ನು ಮನೆಯಲ್ಲೇ ಭೇಟಿಯಾಗುತ್ತಾನೆ. ಜೀವನದ ಗುಣಮಟ್ಟವನ್ನು ಅನುಭವಿಸಲು ಒಂದಷ್ಟು ಕ್ರೀಡೆ, ಪೈಂಟಿಂಗ್ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದಾನೆ. ಅವನಮ್ಮ, ನನ್ನ ಸಹೋದ್ಯೋಗಿ, ಪ್ರತಿ ಮೂರು ದಿನಗಳಿಗೊಮ್ಮೆ ಫೋನ್ ಮಾಡುವುದು, ಆಗಾಗ ಅವನನ್ನು ನೋಡುವುದು ಮಾಡುತ್ತಾರೆ. ಅವನಿಗೆ ತಾಯಿಯ ಕುರಿತು ಬಹಳ ಅಸಮಾಧಾನ, ಕೋಪ, ಸಿಡುಕು ಇದೆಯಂತೆ. ತನ್ನ ಸ್ಥಿತಿಗೆ ಅಮ್ಮನೇ ಕಾರಣ ಎಂದು ದೂಷಿಸುತ್ತಾನಂತೆ. ಇವರಿಗೆ ಎಷ್ಟೇ ದುಃಖವಾದರೂ ತನ್ನ ಕರುಳಿನ ಕುಡಿಯನ್ನು ತೊರೆದುಕೊಳ್ಳುವಂತಿಲ್ಲ. ಎಷ್ಟೇ ಕಷ್ಟವಾದರೂ ತನ್ನ ಮಾನಸಿಕ ಸಮತೋಲನವನ್ನು ಅವರು ಕಾಯ್ದುಕೊಳ್ಳಬೇಕು. ಇದೆಲ್ಲಾ ಹೇಳುತ್ತಾ ಬೇಸರಿಸಿಕೊಂಡರು. ಅವರ ಮಾತಿಗೆ ನನ್ನ ಕಿವಿಗಳನ್ನು ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಹೇಳಿದರು. ನಾನೊಂದಿಷ್ಟು ಸಮಾಧಾನದ ಮಾತನ್ನಾಡಿದೆ.
ವಿಶೇಷ ಸಾಮರ್ಥ್ಯವುಳ್ಳವರು, ವಿಶೇಷ ಚೈತನ್ಯ ಇರುವವರು, ದೇಹದ ಅಂಗಗಳಿಗೆ ಊನವಾಗಿರುವವರು, ಅಂಗನ್ಯೂನತೆ, ಅಂಗವಿಕಲತೆ ಇರುವವರು ಅಂತೆಲ್ಲಾ ನಾವು ಕೇಳುತ್ತಿರುತ್ತೀವಿ. ಇವರಿಗೆ ಒಂದಷ್ಟು ಆಸರೆ ಕೊಡಲು ಈಗ ಅನೇಕ ದೇಶಗಳಲ್ಲಿ ಬಗೆಬಗೆಯ ಸಂಸ್ಥೆಗಳೂ, ಸ್ವಯಂಸೇವಕರು, ಸರಕಾರಿ ಸೌಲಭ್ಯಗಳು ಇವೆ. ಈ ಮಾದರಿಯಲ್ಲೆ ಆಸ್ಟ್ರೇಲಿಯಾದಲ್ಲಿ ಸರ್ಕಾರಿ ಕಾರ್ಯನೀತಿಯನ್ನಾಧರಿಸಿ NDIS ಅನ್ನೊ ಒಂದು ಅನುದಾನ ಕಾರ್ಯಕ್ರಮವಿದೆ. ಇದು National Disability Insurance Scheme ಅಂತ. ಅಂಗನ್ಯೂನತೆ, ಅಂಗ ದೌರ್ಬಲ್ಯವಿದ್ದು, ಸಹಾಯ ಪಡೆಯಲು ಅರ್ಹರಾಗಿದ್ದರೆ ಅವರಿಗೆ ಆಸ್ಟ್ರೇಲಿಯನ್ ಕೇಂದ್ರ ಸರ್ಕಾರವು ಆರ್ಥಿಕ ಸಹಾಯ ಒದಗಿಸುತ್ತದೆ. ಈ ಸಹಾಯದಿಂದ ಆ ವ್ಯಕ್ತಿ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯುವುದು, ಮನೋವೈದ್ಯರು, ಕೌನ್ಸೆಲರ್, ಸಮಾಜಕಾರ್ಯಕರ್ತರು, ವಿಶೇಷ ಔಷಧಿಗಳು, ಸಾಮಗ್ರಿಗಳು, ಸಾಧನಗಳು, ಇತ್ಯಾದಿಗಳನ್ನು ಪಡೆಯಬಹುದು. ಅಷ್ಟೇ ಅಲ್ಲ, ಈ ವ್ಯಕ್ತಿಗಳು ತಮ್ಮ ಸಮುದಾಯದಲ್ಲಿ ಸಕ್ರಿಯವಾಗಿ ಬೆರೆತು ಪಾಲ್ಗೊಳ್ಳಲು ಅವರು ಸಪೋರ್ಟ್ ವರ್ಕರ್‌ಗಳನ್ನು ಪಡೆಯಬಹುದು. ಅಂಗನ್ಯೂನತೆಗಳಿದ್ದರೂ ತಮ್ಮ ಜೀವನವನ್ನು ನಿಭಾಯಿಸಿಕೊಂಡು, ಕುಟುಂಬದವರಿಗೆ ಹೊರೆಯಾಗದಂತೆ ಬದುಕಬಹುದು.
೨೦೧೩ ರಲ್ಲಿ NDIS ಎನ್ನುವ ಸರ್ಕಾರಿ ಅನುದಾನ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು ಆಸ್ಟ್ರೇಲಿಯಾದ ಏಕಮಾತ್ರ ಮಹಿಳಾ ಪ್ರಧಾನಮಂತ್ರಿ ಜೂಲಿಯಾ ಗಿಲ್ಲಾರ್ಡ್. ಕಾರ್ಯಕ್ರಮವು ಹಂತಹಂತಗಳಲ್ಲಿ ಅನುಷ್ಠಾನಕ್ಕೆ ಬಂದು, ೨೦೨೦ ರಲ್ಲಿ ಪೂರ್ಣಗೊಂಡಿದೆ. ಈ ಕಾರ್ಯಕ್ರಮವನ್ನು ರೂಪಿಸುವುದಕ್ಕೆ, ಕಾರ್ಯರೂಪಕ್ಕೆ ತರಲು ಅನೇಕ ಸಮುದಾಯ ಸಂಸ್ಥೆಗಳು, ಜನರು ಕಷ್ಟಪಟ್ಟಿದ್ದಾರೆ. ತಮ್ಮ ಅಂಗನ್ಯೂನತೆ-ಆರೋಗ್ಯ ಸಮಸ್ಯೆಗೆ ತಕ್ಕುದಾದ ಸೇವೆಯನ್ನು ಪಡೆಯುವುದು, ಅದರ ನಿರ್ಧಾರವನ್ನು ತಾವೇ (ಕುಟುಂಬ ಸದಸ್ಯರ ಜೊತೆಗೆ) ಮಾಡುವುದು, ಯಾರಿಂದ ಸೇವೆ ಪಡೆಯುವುದು, ಇತ್ಯಾದಿಗಳನ್ನು ತೀರ್ಮಾನಿಸುವುದರಿಂದ ಅವರ ಮಾನವ ಹಕ್ಕುಗಳಿಗೆ ಮಾನ್ಯತೆ ಸಿಕ್ಕಿತ್ತು.
ಆಸ್ಟ್ರೇಲಿಯಾದಲ್ಲಿ ಸುಮಾರು ಐದು ಲಕ್ಷಕ್ಕೂ ಹೆಚ್ಚಿನ ಜನರು NDIS ಮುಖಾಂತರ ಅನೇಕ ರೀತಿಗಳ ಸೇವೆಗಳನ್ನು, ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇವರಲ್ಲಿ ಸುಮಾರು ಎಂಭತ್ತು ಸಾವಿರಕ್ಕೂ ಹೆಚ್ಚು ಮಕ್ಕಳಿದ್ದಾರೆ. ವೃದ್ಧರ ಆರೈಕೆ ಮತ್ತು ಸೇವಾ ಕೇಂದ್ರಗಳಲ್ಲಿ ವಾಸಿಸುತ್ತಿರುವ ಸಾವಿರಾರು ವೃದ್ಧರಿದ್ದಾರೆ. ಮಾನಸಿಕ ನ್ಯೂನತೆಗಳಿಂದ ಸಮಾಜದಿಂದ ದೂರವಾಗಿರುವ ಅನೇಕ ಒಂಟಿ ಯುವಕ, ಯುವತಿಯರಿದ್ದಾರೆ. ದೈಹಿಕ ದೌರ್ಬಲ್ಯಗಳಿದ್ದರೂ ಛಲದಿಂದ ತಮ್ಮ ವಿಶೇಷ ಸಾಮರ್ಥ್ಯಗಳನ್ನು ಬಳಸಿಕೊಂಡು ಅಸ್ಮಿತೆಯನ್ನು ಉಳಿಸಿಕೊಂಡಿರುವವರೂ ಇದ್ದಾರೆ.

ಈ NDIS ಸಹಾಯವನ್ನು ಪಡೆಯಲು ಕೆಲವು ಅರ್ಹತಾ ಮಾನದಂಡಗಳಿವೆ. ಅನುದಾನವನ್ನು ಕೋರಲು ಅಭ್ಯರ್ಥಿಗಳು ತಮಗಿರುವ ಅಂಗ ಮತ್ತು ಮಾನಸಿಕ ನ್ಯೂನತೆಗಳ ತಪಾಸಣಾ ವರದಿಗಳನ್ನು ಸಲ್ಲಿಸಬೇಕು. ತಮ್ಮ ಕುಟುಂಬ ವಾರ್ಷಿಕ ಆದಾಯ, ಸ್ಥಿರ, ಅಸ್ಥಿರ ಆಸ್ತಿ ವಿವರಗಳು, ಇರುವ ಸಾಮರ್ಥ್ಯಗಳ ಬಳಕೆ, ದೌರ್ಬಲ್ಯಗಳಿಂದ ಆಗುತ್ತಿರುವ ಪರಿಣಾಮ, ಹೀಗೇ ಅನೇಕ ದಾಖಲೆಗಳನ್ನು ಒದಗಿಸಬೇಕು. ಇವನ್ನೆಲ್ಲಾ ಪಡೆಯುವುದು, ಒದಗಿಸುವುದು ಸುಲಭದ ಮಾತಲ್ಲ. ಅನೇಕರಿಗೆ ಇದು ದೊಡ್ಡ ಚಾಲೆಂಜ್. ಇವರೊಡನೆ ಇವರ ಕುಟುಂಬ ಸದಸ್ಯರೂ ಕಣಕ್ಕಿಳಿದು ಪರದಾಡಬೇಕು. ಇರುವ ಪ್ರತಿಯೊಂದು ನ್ಯೂನತೆಗೂ ವಿವಿಧ ವರದಿಗಳು, ದಾಖಲೆಗಳು ಬೇಕಾಗುತ್ತದೆ. ಜನರು ವ್ಯವಸ್ಥೆಯೊಡನೆ ಹೋರಾಡುತ್ತಾ ಬೇಸತ್ತು ಹೋಗುತ್ತಾರೆ.
NDIS ಬಗ್ಗೆ ಈ ವಾರ ಬಹಳ ಚರ್ಚೆ ನಡೆಯುತ್ತಿದೆ. ಮುಂದಿನ ವಾರ ಮಂಡಿಸಲಿರುವ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ NDIS ಅನುದಾನಕ್ಕೆ ಕಡಿವಾಣ ಬೀಳಲಿದೆ. ಇದರಿಂದ ಅನೇಕ ಸಾವಿರ ಜನರಿಗೆ ತೊಂದರೆಯಾಗಲಿದೆ ಎಂದು ಕೋಪ, ಆಕ್ರೋಶ, ಅಸಮಾಧಾನ ವ್ಯಕ್ತವಾಗಿದೆ. ಸರಕಾರಕ್ಕೆ ಬಿಲಿಯನ್ ಗಟ್ಟಲೆ ಉಳಿತಾಯ.
ಕೇಂದ್ರ ಸರಕಾರದ ಸಮಜಾಯಿಷಿ ಏನೆಂದರೆ ಈ ಕಡಿವಾಣಕ್ಕೆ ಕಾರಣವಿದೆ. ಅನೇಕ ಖಾಸಗಿ ಸಂಸ್ಥೆಗಳು NDIS ಫಲಾನುಭವಿಗಳ ಅನುದಾನವನ್ನು ದುರುಪಯೋಗ ಮಾಡಿಕೊಳ್ಳುತ್ತಿವೆ. ಈ ಸಂಸ್ಥೆಗಳು ಫಲಾನುಭವಿಗಳನ್ನು ನೋಂದಣಿಸಿಕೊಂಡು ಅವರಿಗೆ ಸಲ್ಲಬೇಕಾದ ಸರಿಯಾದ ಸೇವೆಗಳನ್ನು ಒದಗಿಸುತ್ತಿಲ್ಲ. ಅನೇಕ ಫಲಾನುಭವಿಗಳಿಗೆ ತಮಗೆ ಯಾವ್ಯಾವ ಸೇವೆ ಸೌಲಭ್ಯಗಳು ಬೇಕು ಎನ್ನುವುದು ಕೂಡ ವಿವರವಾಗಿ ತಿಳಿದಿಲ್ಲ. ಅವರಿಂದ ಈ ಸಂಸ್ಥೆಗಳು ತಮಗೆ ಇಂತಿಂಥಾ ಸೇವೆ, ಸೌಲಭ್ಯಗಳು, ಸಾಧನಗಳು ಬೇಕು ಎಂದು ಸುಳ್ಳುಸುಳ್ಳೇ ಬರೆಸಿಕೊಂಡು ಹಣ ಪಡೆದು, ಅವನ್ನೆಲ್ಲಾ ಒದಗಿಸುವ ಗೋಜಿಗೇ ಹೋಗುವುದಿಲ್ಲ.
ಆಸ್ಟ್ರೇಲಿಯಾದಲ್ಲಿರುವ ಬಂಡವಾಳಶಾಹಿ ನವ ಉದಾರೀಕರಣ (ಕ್ಯಾಪಿಟಲಿಸ್ಟ್ ನಿಯೋ-ಲಿಬೆರಲ್) ಆರ್ಥಿಕ ವ್ಯವಸ್ಥೆಯಲ್ಲಿ ಪ್ರತಿಯೊಂದೂ ಸೇವೆಯನ್ನೂ ಒಂದು ಐಟಂ ಎಂದು ಗುರುತಿಸಲಾಗುತ್ತದೆ. ಆಯಾ ಐಟಂ ಗೆ ಇಷ್ಟಿಷ್ಟು ಫೀಸ್ ಎಂದು ನಿಗದಿಯಾಗಿರುತ್ತದೆ. ಉದಾಹರಣೆಗೆ, ಹಲ್ಲು-ವಸಡು ಆರೋಗ್ಯ ತಪಾಸಣೆಗೆಂದು ದಂತವೈದ್ಯರ ಬಳಿ ಹೋದರೆ, ಹಲ್ಲುಗಳ ಚೆಕ್-ಅಪ್ ಗೆಂದು ಒಂದು ಐಟಂ ಮತ್ತು ಫೀಸ್. ವಸಡಿನ ಚೆಕ್-ಅಪ್ ಗೆ ಇಷ್ಟು ಫೀಸ್. ಹಲ್ಲು ಶುಭ್ರ ಮಾಡಲು ಅದೊಂದು ಐಟಂ ಮತ್ತು ಅದಕ್ಕೆ ಇಷ್ಟು ಫೀಸ್. ಜೊತೆಗೆ ದಂತವೈದ್ಯರ consultation ಐಟಂ ಮತ್ತು ಫೀಸ್.
NDIS ಅನುದಾನ ಪಡೆಯುತ್ತಿರುವ ಒಂದು ಉದಾಹರಣೆ ಇದು. ವೃದ್ಧ ಆರೈಕೆ ಮತ್ತು ಸೇವಾ ಕೇಂದ್ರದಲ್ಲಿ ವಾಸಿಸುತ್ತಿರುವ ಒಬ್ಬ ವೃದ್ಧರಿಂದ ತನಗೆ ದಿನನಿತ್ಯ ಸ್ನಾನ ಮಾಡಿಸಲು ಸಹಾಯ ಬೇಕು, ಎಂದು ಆ ಕೇಂದ್ರದ ಸಿಬ್ಬಂದಿ ಬರೆಸಿಕೊಂಡು, ಸ್ನಾನ ಎನ್ನುವ ಐಟಂ ಗೆ ಫೀಸ್ ಪಡೆಯುವುದು. ಆದರೆ ವಾಸ್ತವದಲ್ಲಿ ಆ ವೃದ್ಧ ವ್ಯಕ್ತಿಗೆ ಇಂತಹ ಸೇವೆಯನ್ನು ಆ ಸಂಸ್ಥೆ ಒದಗಿಸುವುದೇ ಇಲ್ಲ. ಹಣದ ಮತ್ತು ಸೇವೆಯ ದುರುಪಯೋಗವಾಗುತ್ತಿದೆ. ನಿಜವಾಗಿಯೂ ಸೇವೆಗಳು ಬೇಕಿರುವವರಿಗೆ ಕಷ್ಟವಾಗುತ್ತಿದೆ. ಸರಕಾರದ ಖಜಾನೆಗೆ ಕೂಡ ದೊಡ್ಡ ನಷ್ಟ.
ವಿಷಯ ಇಷ್ಟೇ ಅಲ್ಲ. ಗಗನಕ್ಕೆ ಏರಿರುವ ಬೆಲೆಗಳು, ಆರ್ಥಿಕ ಸಂಕಟಗಳು, ದಿನನಿತ್ಯ ಜೀವನದ ಕಾಸ್ಟ್ ಆಫ್ ಲಿವಿಂಗ್ ಸಮಸ್ಯೆ ಕೂಡ ಕೇಂದ್ರ ಸರ್ಕಾರದ ನಡೆಗೆ ಕುಮ್ಮಕ್ಕು ಕೊಟ್ಟಿವೆ. ಕೇಂದ್ರ ಸರ್ಕಾರದ ಹೇಳಿಕೆಯಂತೆ, ಪುಷ್ಟಿಯಾದ ಕಾರಣವಿಲ್ಲದೆ ಅನೇಕ ಸಾವಿರ ಜನರು NDIS ಅನುದಾನವನ್ನು ಪಡೆಯುತ್ತಿದ್ದಾರೆ. ಇವರ ಅಂಗನ್ಯೂನತೆಗಳ, NDIS ಮೇಲಿನ ಅವಲಂಬನೆಯನ್ನು ಮರು-ಪರಿಶೀಲಿಸಲಾಗುವುದು. ಕೆಲವೊಂದು ಸೇವೆಗಳ ಅಗತ್ಯವಿಲ್ಲದಿದ್ದರೂ ಅವನ್ನು ಪಡೆಯುತ್ತಿರುವವರನ್ನು ಪತ್ತೆಹಚ್ಚಿ ಅವರ ಅಗತ್ಯಗಳ ಪರೀಕ್ಷೆ ಮಾಡಬೇಕು. ಸಮಸ್ಯೆ ಇರುವುದು ಫಲಾನುಭವಿಗಳಲ್ಲೋ ಅಥವಾ ಅವರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಸೇವಾಸಂಸ್ಥೆಗಳದ್ದೋ ಎನ್ನುವುದರ ಪರಿಶೀಲನೆಯಾಗಲಿದೆ.
ಕೇಂದ್ರ ಸರ್ಕಾರವು ಇದೇ ವಾರ ಘೋಷಿಸಿರುವ NDIS ತಿದ್ದುಪಡಿ, ಸುಧಾರಣಾ ಮಾರ್ಪಾಡು ಕ್ರಮಗಳು ಆಸ್ಟ್ರೇಲಿಯಾದ ಸಮಾಜದಲ್ಲಿ ತಲ್ಲಣದ ಅಲೆಗಳನ್ನೆಬ್ಬಿಸಿದೆ. ತಿದ್ದುಪಡಿಯಿಂದ NDIS ಫಲಾನುಭವಿಗಳಿಗೆ ಏನಿಲ್ಲವೆಂದರೂ ವಾರ್ಷಿಕವಾಗಿ ಸುಮಾರು ಐದು ಸಾವಿರ ಡಾಲರ್ ಲುಕ್ಸಾನು. ಇದಲ್ಲದೆ, ಬೇಕಿರುವ ಸೇವೆ ಮತ್ತು ಅದರ ಲಭ್ಯತೆಗಳ ನಡುವೆ ಇರುವ ಕಂದಕಗಳು, ಸೇವೆ-ಸಾಧನಗಳ ಬೆಲೆಗೆಳು ಏರಿದ್ದರೂ NDIS ಅನುದಾನದ ಹಣದ ಪ್ರಮಾಣ ಕಡಿಮೆಯೇ ಇರುವುದು, ಆರೋಗ್ಯ-ಅಂಗ ನ್ಯೂನತೆಗಳ ಪರಿಶೀಲನೆ ಪ್ರಕ್ರಿಯೆಯಲ್ಲಿ ಸೋರಿ ಹೋಗುತ್ತಿರುವ ಜನರ ಸಮಯ ಮತ್ತು ತಾಳ್ಮೆ. ತನಗೊಂದು ನಿರ್ದಿಷ್ಟ ಅಂಗ ನ್ಯೂನತೆಯಿದ್ದರೂ ಅದನ್ನು ತಪಾಸಣಾ ಪಟ್ಟಿಯಲ್ಲಿ ಸೇರಿಸದೇ ತಾನು NDIS ಸೇವಾ ಅನುದಾನದಿಂದ ವಂಚಿತರಾಗುವುದು.

ಆಸ್ಟ್ರೇಲಿಯನ್ ಜನತೆ ಮತ್ತು ಸರ್ಕಾರದ ನಡುವೆ ನಡೆಯುತ್ತಿರುವ NDIS ಸುಧಾರಣಾ ಮಾರ್ಪಾಡು ವಿಷಯದ ತಿಕ್ಕಾಟವು ಬೆಟ್ಟು ಮಾಡಿ ತೋರಿಸುತ್ತಿರುವುದು ಬಂಡವಾಳಶಾಹಿ ನವ ಉದಾರೀಕರಣ ಆರ್ಥಿಕ ವ್ಯವಸ್ಥೆಯಲ್ಲಿರುವ ಬಿರುಕುಗಳನ್ನು. ಸಮಾಜದಲ್ಲಿ, ಸಮುದಾಯದಲ್ಲಿ ವ್ಯಕ್ತಿ-ಕೇಂದ್ರಿತ ವ್ಯವಸ್ಥೆ ಇದ್ದರೆ ಸೇವೆ ಎನ್ನುವುದಕ್ಕೆ ಹಣದ ಮೌಲ್ಯವನ್ನು ಹೇರಬೇಕು. ಇದರಿಂದ ಆ ಹಣದ ಕಡೆಗೆ ನಮ್ಮ ಗಮನ ಹೋಗುತ್ತದೆ. ಸೇವೆಯ ಬಗ್ಗೆ ಇರಬೇಕಾದ ಬದ್ಧತೆ, ನಿಷ್ಠೆ, ಶ್ರದ್ಧೆಗಳು ಟೊಳ್ಳಾಗುತ್ತವೆ. ಪರಾಲಂಬಿತರಾಗಿರುವ ಒಬ್ಬ ವೃದ್ಧರಿಗೆ ಬೇಕಾದ ದಿನನಿತ್ಯದ ಸ್ನಾನ ಶುಭ್ರತೆಗಳಿಂದ ಅವರು ವಂಚಿತರಾದಾಗ ಅಲ್ಲಿ ಸೋಲುವುದು ನಮ್ಮ ಮೌಲ್ಯಗಳು, ಮಾನವ ಸಂಬಂಧಗಳು. ಗೆಲ್ಲುವುದು ಹಣ-ಆಧಾರಿತ ವ್ಯವಸ್ಥೆಯ ಅಟ್ಟಹಾಸ.

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

