ಗೇರುಹಣ್ಣನ್ನು ತಿಂದು ಬೀಜವನ್ನು ಎಲ್ಲರೂ ಸೇರಿ ಒಂದೆಡೆ ಕೂಡಿಡುತ್ತಿದ್ದೆವು. ನೂರು ಬೀಜಗಳಾದ ಮೇಲೆ ಅದನ್ನು ಕಮ್ತೀರ ಅಂಗಡಿಗೆ ಕೊಟ್ಟರೆ ಅವರು ನಮಗೆಲ್ಲ ಒಂದೊಂದು ಆಯ್ಸ್-ಕ್ಯಾಂಡಿ ಕೊಡುತ್ತಿದ್ದರು. ತಂಪಾಗಿರುವ ಅದನ್ನು ತಿನ್ನುತ್ತಾ ಅದಕ್ಕೆ ಹಾಕಿರುವ ಕೆಂಪನೆಯ ಬಣ್ಣ ನಮ್ಮ ಬಾಯಿಯ ಸುತ್ತಮುತ್ತ ಚಂದದ ಪ್ರಭಾವಳಿಯನ್ನು ರಚಿಸುತ್ತಿತ್ತು. ನಮ್ಮ ಈ ಘನಂದಾರಿ ನಡೆ ಅದು ಹೇಗೋ ಪರಮಜ್ಜನಿಗೆ ಗೊತ್ತಾಗಿಬಿಡುತ್ತಿತ್ತು. ಆಗೆಲ್ಲಾ ಆತನೂ “ಎಂಥಾ ಅಂದ್ರೂ ತಮಾ ಕಾಲ ಕೆಟ್ಟುಹೋತು” ಎನ್ನುತ್ತಾ ಹೀಗೆ ಬಾಯಿಗೆ ಹಾಕಿದ ಕವಳವನ್ನು ಉಗಿಯುತ್ತಾ ನೀರನ್ನು ಕುಡಿಯುತ್ತಾ ನನ್ನ ಅಪ್ಪನ ಹತ್ತಿರವೋ, ಶಾಲೆಯ ಮಾಸ್ತರರ ಹತ್ತಿರವೋ ಹೇಳುತ್ತಿರುವುದು ನೆನಪಾಯಿತು.
ತಮ್ಮ ಬಾಲ್ಯಕಾಲದ ದಿನಗಳ ಕುರಿತು ಬರೆದಿದ್ದಾರೆ ನಾರಾಯಣ ಯಾಜಿ

ಭಿತ್ತಿಯಲಿ ಅಚ್ಚಳಿಯದ ನೆನಪುಗಳ ಬೆನ್ನುಹತ್ತಿ

“ಎಂಥಾ ಅಂದ್ರೂ ತಮಾ ಕಾಲ ಕೆಟ್ಟು ಹೋತು” ಎನ್ನುತ್ತಾ ಕವಳವನ್ನು ಹೊರಗೆ ತೋಟದ ಅಡಿಕೆಯ ಮರದ ಬುಡಕ್ಕೆ ಪಿಛಕ್ಕೆಂದು ಚಿಮ್ಮಿಸಿ ಚೆಂಬಿನಲ್ಲಿದ್ದ ನೀರನ್ನು ಗಟ ಗಟನೆ ಕುಡಿಯುತ್ತಿರುವ ಗೋಪಾಲಣ್ಣ ಹಕ್ಕೆಚಿಟ್ಟೆಯ ಮೇಲೆ ಕುಳಿತ. “ಕೂತ್ಕೋ ಈಗ, ಊರು ಕೇರಿಯಲ್ಲಾ ಮೊದ್ಲಾಂಗಿಲ್ಲೆ” ಎನ್ನುವ ಆತನ ವರಾತ ಸಾಗುತ್ತಲೇ ಇರುವಾಗ ನನಗೆ ಅವನ ಅಜ್ಜ ಪರಮಜ್ಜನ ನೆನಪಾಯಿತು. ನಮ್ಮ ಬಾಲ್ಯದಲ್ಲಿ ಅವರ ಮನೆಯ ಗೇರುಬೇಣಕ್ಕೆ ಹೋಗಿ ಗೇರುಹಣ್ಣನ್ನು ಕದ್ದು ತಿಂದು ಅವನಿಂದ ಬಯ್ಗಳನ್ನು ಕೇಳಿಸಿಕೊಳ್ಳುತ್ತಾ ತಪ್ಪಿಸಿಕೊಂಡು ಓಡಿಹೋದ ದಿನಗಳವು. ಆಗ ಗೋಪಾಲಣ್ಣನೂ ನಮ್ಮ ಜೊತೆಗೆ ಇರುತ್ತಿದ್ದ. ಗೇರುಹಣ್ಣನ್ನು ತಿಂದು ಬೀಜವನ್ನು ಎಲ್ಲರೂ ಸೇರಿ ಒಂದೆಡೆ ಕೂಡಿಡುತ್ತಿದ್ದೆವು. ನೂರು ಬೀಜಗಳಾದ ಮೇಲೆ ಅದನ್ನು ಕಮ್ತೀರ ಅಂಗಡಿಗೆ ಕೊಟ್ಟರೆ ಅವರು ನಮಗೆಲ್ಲ ಒಂದೊಂದು ಆಯ್ಸ್-ಕ್ಯಾಂಡಿ ಕೊಡುತ್ತಿದ್ದರು. ತಂಪಾಗಿರುವ ಅದನ್ನು ತಿನ್ನುತ್ತಾ ಅದಕ್ಕೆ ಹಾಕಿರುವ ಕೆಂಪನೆಯ ಬಣ್ಣ ನಮ್ಮ ಬಾಯಿಯ ಸುತ್ತಮುತ್ತ ಚಂದದ ಪ್ರಭಾವಳಿಯನ್ನು ರಚಿಸುತ್ತಿತ್ತು.

ನಮ್ಮ ಈ ಘನಂದಾರಿ ನಡೆ ಅದು ಹೇಗೋ ಪರಮಜ್ಜನಿಗೆ ಗೊತ್ತಾಗಿಬಿಡುತ್ತಿತ್ತು. ಆಗೆಲ್ಲಾ ಆತನೂ “ಎಂಥಾ ಅಂದ್ರೂ ತಮಾ ಕಾಲ ಕೆಟ್ಟುಹೋತು” ಎನ್ನುತ್ತಾ ಹೀಗೆ ಬಾಯಿಗೆ ಹಾಕಿದ ಕವಳವನ್ನು ಉಗಿಯುತ್ತಾ ನೀರನ್ನು ಕುಡಿಯುತ್ತಾ ನನ್ನ ಅಪ್ಪನ ಹತ್ತಿರವೋ, ಶಾಲೆಯ ಮಾಸ್ತರರ ಹತ್ತಿರವೋ ಹೇಳುತ್ತಿರುವುದು ನೆನಪಾಯಿತು. ಅದೇ ಭಂಗಿಯಲ್ಲಿ ಚಕ್ಕಳ ಹಾಕಿಕುಳಿತು ಮೇಲೆ ನೋಡುತ್ತಿರುವ ಗೋಪಾಲ ಮತ್ತು ಅವನ ಅಜ್ಜ ಪರಮನ ನಡುವೆ ಯಾವಾಗ ಕಾಲ ಕೆಟ್ಟು ಹೋಯಿತು, ಏನು ಬದಲಾವಣೆಯಾಯಿತು ಎಂದು ಆಲೋಚಿಸಿದೆ. ಪರಮಜ್ಜನದು ಪಾಣಿಪಂಚೆ, ಗೋಪಾಲಣ್ಣನದು ಬಣ್ಣದ ಲುಂಗಿ, ಪರಮಜ್ಜನ ಬಾಂದಿ ಹೊಗೆಸೊಪ್ಪಿನ ಜಾಗದ ತಾಂಬೂಲ ಬಟ್ಟಲಿನಲ್ಲಿ ಗುಟ್ಕಾ ಪ್ಯಾಕೆಟ್ ರಾರಾಜಿಸುತ್ತಿತ್ತು. ಆ ಕಾಲದಲ್ಲಿ ಎಳೆಯ ಮುಂಡವಾಗಿದ್ದ ಅಡಿಕೆಯ ಮರ ಈಗ ತೋಟದಲ್ಲಿನ ಮರಗಳ ನಡುವೆ ಎತ್ತರಕ್ಕೆ ಬೆಳೆದು ಈ ಬದಲಾವಣೆಗೆ ಸಾಕ್ಷಿಯಾಗಿತ್ತು. ಮೊದಲು ಆಜ್ಜ ನಂತರ ಮೊಮ್ಮಗ ದಿನವೂ ಇಪ್ಪತ್ತು ಮೂವತ್ತು ಸಾರಿ ಅದಕ್ಕೆ ಪುಷ್ಟವಾಗಿ ಆಹಾರ ಒದಗಿಸುತ್ತಿದ್ದರು. ಮನೆಯ ಗುಂದಕ್ಕೆ ಹೊಂದಿಕೊಂಡ ಆ ಮರಕ್ಕೆ ನೀರು ಹಾಕಲು ಆಗುತ್ತಿರಲಿಲ್ಲ. ಆದರೂ ಅದು ನೀರಿನ ಅವಶ್ಯಕತೆಯಿಲ್ಲದೇ ಬೆಳೆದು ಒಳ್ಳೆಯ ಫಲಕೊಡುತ್ತಿರುವುದಕ್ಕೆ ಕಾರಣ ಈ ಅವರ ಮನೆಯ ಪರಂಪರೆಯಂತೆ ಬಂದ ತಾಂಬೂಲ ಸಿಂಚನವೆಂದು ಗೋಪಾಲಣ್ಣನ ಹೆಂಡತಿ ಸಾವಿತ್ರತ್ತಿಗೆ ತಮಾಷೆಯಿಂದ ಆಗಾಗ ಹೇಳುತ್ತಿರುವುದುಂಟು. ಅಜ್ಜ ಮೊಮ್ಮಗನ ಉವಾಚವಾದ ಕಾಲಕೆಟ್ಟುಹೋಯಿತು ಎನ್ನುವ ಮಾತಿಗೆ ಅದೊಂದೆ ಸಾಕ್ಷಿಯಾಗಿತ್ತು.

ನಾವೆಲ್ಲ ಕಳೆದ ಬಾಲ್ಯದ ನೆನಪಾಯಿತು. ನಮ್ಮೂರ ನಡುವೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ರಾಷ್ಟ್ರೀಯ ಹೆದ್ದಾರಿಯೆಂದರೆ ವಿವಿಧ ಜನಗಳು ಬಂದು ಹೋಗುವ ಊರು. ಅಭಿವೃದ್ಧಿಯ ಮಾನದಂಡ ಹೆದ್ದಾರಿಯ ಮೇಲೆ ಓಡುವ ನಮ-ನಮೂನೆಯ ವಾಹನಗಳ ಮೇಲಿನಿಂದ ನಿರ್ಧಾರವಾಗುತ್ತದೆ. ಊರಿನಿಂದ ಹೊರಗೆ ಹೋದವರು ಒಂಡೆರೆಡು ವರ್ಷಗಳ ನಂತರ ತಿರುಗಿ ಬಂದಾಗ ಊರು ಬದಲಾವಣೆಯಾಗಿದೆ, ಗುರುತೇ ಸಿಗುತ್ತಿಲ್ಲ ಎನ್ನುವ ಮಾತುಗಳು ಇಲ್ಲಿ ಸಾಮಾನ್ಯ. ಈ ಪರಿವರ್ತನೆಯೆನ್ನುವುದು ರಸ್ತೆಯ ಅಗಲೀಕರಣದ ನೆಪದಲ್ಲಿ ನಿರಂತರವಾಗಿ ನೋಡುತ್ತಲೇ ಬಂದಿರುತ್ತೇವೆ. ನಮ್ಮ ಊರಿನ ಪಶ್ಚಿಮಕ್ಕೆ ಅರಬ್ಬೀ ಸಮುದ್ರವಿದೆ. ನಮಗೆಲ್ಲ ಕೂಗಳತೆಯಲ್ಲಿರುವ ಸಮುದ್ರ ಮಳೆಗಾಲದಲ್ಲಿ ಮಾತ್ರ ಭಯಂಕರವಾಗಿ ಆರ್ಭಟಿಸುತ್ತಿತ್ತು. ಇನ್ನುಳಿದ ಕಾಲದಲ್ಲಿ ಭರತ ಇಳಿತ ಮಾತ್ರ. ಆಗೆಲ್ಲ ನಿರ್ಜನ ಪ್ರದೇಶ ಅದು. ನಾವು ಹುಡುಗರು ಮನೆಯವರ ಕಣ್ಣುತಪ್ಪಿಸಿ ಸಮುದ್ರಕ್ಕೆ ಓಡುತ್ತಿದ್ದೆವು. ಸಮುದ್ರದಂಡೆಗೆ ಹೊಂದಿಕೊಂಡಿರುವ ಸಾಯಬ್ರರ ಕೇರಿಯವರೆಲ್ಲ ಸಮುದ್ರದ ದಿಕ್ಕಿಗೆ ಮುಖಮಾಡಿ ನಮಾಜು ಮಾಡುತ್ತಿದ್ದರು. ಆ ದಿಕ್ಕಿಗೆ ದುಬಾಯಿಯೂ ಇದೆ ಎಂದು ಅತ್ತರದ ಪರಿಮಳದೊಂದಿಗೆ ಆಕರ್ಷಕವಾಗಿ ಕಾಣುವ ವಾಚನ್ನು ಕಟ್ಟಿದ ಕೈಯಿಂದ ಕಾಣುವಂತೆ ಹಾವಭಾವದ ಮೂಲಕ ವಿವರಿಸುವ ದುಬಾಯಿಯ ವರ್ಣನೆ ನಮಗೂ ಗಲ್ಫ್ ದೇಶ ನೋಡುವ ಆಸೆಯನ್ನು ಹುಟ್ಟಿಸುತ್ತಿತ್ತು. ಎಂದಾದರೂ ಒಂದು ದಿನ ದುಬಾಯಿಗೆ ಹೋಗುವ ಕನಸು ಕಾಣುತ್ತಿದ್ದೆವು.

ನಮ್ಮ ಕಲ್ಪನೆಯಲ್ಲಿ ಸಮುದ್ರ ನಮ್ಮ ಭರತಭೂಮಿಯ ಗಡಿ. ಹಾಗಾಗಿ ಸಮುದ್ರದ ನೀರಿನಲ್ಲಿ ಕಾಲಿಟ್ಟು ದುಬಾಯಿ, ಅಮೇರಿಕಾ ಎಲ್ಲಾ ದೇಶಗಳಿಗೆ ಹೋಗಿದ್ದೇನೆ ಎಂದು ಕೂಗುತ್ತಾ “ವಿದೇಶ ಪ್ರವಾಸಕ್ಕೆ ಹೋಗಿಬಂದ ಸುಖವನ್ನು ಅನುಭವಿಸುತ್ತಿದ್ದೆವು”!

ಒಂದು ಕಡೆ ಸಹ್ಯಾದ್ರಿ, ಒಂದು ಬದಿ ಕಡಲು ಇರುವ ಉತ್ತರ ಕನ್ನಡದಲ್ಲಿ ನದಿ, ಗುಡ್ಡ, ಕಡಲು ಇವೆಲ್ಲವೂ ನಮಗೆ ಹೊಸತಲ್ಲ. ಸಹ್ಯಾದ್ರಿಯ ಗುಡ್ಡಗಳ ಸಾಲು ತನ್ನ ಸೆರಗನ್ನು ಹಾಸುತ್ತಾ ಸಮುದ್ರದಲ್ಲಿ ಇಳಿಯುವ ಕಡೆ ಬಂಡೆಗಲ್ಲುಗಳು ಸಮುದ್ರದಾಳದೊಳಗೆ ಸುಮಾರು ದೂರ ಸಾಗುತ್ತದೆ. ಅಲ್ಲೆಲ್ಲ ಕಪ್ಪೆಚಿಪ್ಪುಗಳು ಬೆಳೆಯುತ್ತವೆ. ಇಲ್ಲಿ ಸಮುದ್ರದ ತೆರೆಗಳು ಅಬ್ಬರದಿಂದ ಬಂಡೆಗೆ ಅಪ್ಪಳಿಸಿ ಹದಿನೈದು ಇಪ್ಪತ್ತಡಿ ಎತ್ತರಕ್ಕೆ ಹಾರುವ ರುದ್ರ ರಮಣೀಯ ನೋಟ ಎಂಥವರನ್ನೂ ಪರವಶಗೊಳಿಸುತ್ತದೆ. ಸಮುದ್ರಕ್ಕೆ ಇಳಿತ ಬಂದಾಗ ಸುಮಾರು ಫರ್ಲಾಂಗ್ ದೂರ ಹಿಂದೆ ಸರಿದಿರುತ್ತದೆ. ನಂತರ ಭರತ ಬಂದಾಗ ಹೆಚ್ಚುಕಡಿಮೆ ಗುಡ್ಡದ ಬುಡದವರೆಗೆ ನೀರು ತುಂಬಿಕೊಂಡು ಅವಷ್ಟೆ ಭಾಗಗಳು ದ್ವೀಪದಂತಾಗುತ್ತದೆ. ಅಲ್ಲಿನ ಬಂಡೆಗಳ ಮೇಲೆ ಕಪ್ಪೆಚಿಪ್ಪುಗಳು ಸ್ಥಳೀಯ ಭಾಷೆಯಲ್ಲಿ ಬಳಚು ಎಂದು ಕರೆಯುವ ಮೃದ್ವಂಗಿಗಳು ಬೆಳೆಯುತ್ತವೆ. ಅವು ತಿನ್ನಲು ಬಲು ರುಚಿಯಾಗಿರುವ ಕಾರಣ ಅದಕ್ಕೆ ತುಂಬಾ ಬೇಡಿಕೆಯಿದೆ. ಅದರಲ್ಲೂ ಬೊಂಬಾಯಿಯಲ್ಲಿ ಇರುವ ನಮ್ಮೂರ ಕೊಂಕಣಿಗರಿಗೆ ಇದೆಂದರೆ ಪ್ರಾಣ. ಇಳಿತದ ಹೊತ್ತಿನಲ್ಲಿ ಇದನ್ನು ತೆಗೆದು ಭರತ ಬರುವ ಲಕ್ಷಣ ಕಾಣಿಸಿದಾಗ ಆ ಜಾಗವನ್ನು ಬಿಟ್ಟು ಹೋಗಬೇಕು. ಮೀನುಗಾರರಿಗೋ (ಖಾರ್ವಿ ಜನಾಂಗ) ಅವನ್ನು ತೆಗೆಯುವುದೆಂದರೆ ಚಿಟಿಕೆ ಹೊಡೆದಷ್ಟೆ ಸುಲಭದ ಕೆಲಸ. ಅವರು ನಿಪುಣ ಈಜುಗಾರರೂ ಹೌದು.

ನಮ್ಮ ಹುಡುಗರದೊಂದು ಗುಂಪಿತ್ತು. ಅದರಲ್ಲಿ ಸಾಧುಸ್ವಭಾವದಿಂದ ಹಿಡಿದು ಪುಂಡರವರೆಗೆ ಎಲ್ಲಾ ಗುಣಗಳಿಂದ ಕೂಡಿದವರಿದ್ದೆವು. ಬೇಸಿಗೆಯ ರಜೆಯಲ್ಲೊಮ್ಮೆ ನಾವೆಲ್ಲಾ ಕದ್ದುಮುಚ್ಚಿ ಸಮುದ್ರಕ್ಕೆ ಹೋಗಿದ್ದೆವು. ಅಲ್ಲಿ ಖಾರ್ವಿ ಮಹಿಳೆಯರು ಈ ಬಳಚನ್ನು ತೆಗೆಯುತ್ತಿದ್ದರು. ಸಮುದ್ರಲ್ಲಿ ಇಳಿತವಿತ್ತು. ನಾವು ಆಡುತ್ತಾ ಆ ಬಂಡೆಯ ಮೇಲೆ ಹೋಗಿ ನಿಂತೆವು. ನಮಗೆ ತೋರಿದ ರೀತಿಯುಲ್ಲಿ ಮಂಗಾಟ ಮಾಡುತ್ತಿದ್ದವರಿಗೆ ಸಮಯ ಸರಿದದ್ದೇ ಅರಿವಾಗಲಿಲ್ಲ. ನೋಡುತ್ತಿರುವಂತೆ ಸಮುದ್ರ ತುಂಬಿಕೊಳ್ಳತೊಡಗಿತು. ಆಚೆ ಈಚೆ ನೋಡುವಾಗ ಮೀನುಗಾರ ಮಹಿಳೆಯರು ಕಾಣಿಸುತ್ತಿಲ್ಲ. ಅವರು ಉಬ್ಬರವಿಳಿತದ ಸಮಯವನ್ನು ಅರಿತು ಮರಳಿದ್ದರು. ನಾವೋ ಒಂದು ಬಂಡೆಯಿಂದ ಮತ್ತೊಂದು ಬಂಡೆಗೆ ಹಾರುತ್ತಾ ಬರಬೇಕು. ಸಮುದ್ರದ ಅಲೆಯ ಹೊಡತಕ್ಕೆ ಸಿಕ್ಕಿದ ಬಂಡೆಗಳ ಅಂಚುಗಳು ಚಾಕುವಿಗಿಂತ ಹರಿತವಾಗಿರುತ್ತವೆ. ಇನ್ನೇನು ಕೊನೆಯ ಬಂಡೆಗಳನ್ನು ದಾಟಿ ಗುಡ್ಡವನ್ನು ಏರಿ ಕುಳಿತುಕೊಳ್ಳಬೇಕು ಎನ್ನುವಷ್ಟರಲ್ಲಿ ದೈತ್ಯಾಕಾರದ ಅಲೆಯೊಂದು ಹೊಡೆದ ರಭಸಕ್ಕೆ ನಮ್ಮ ಗುಂಪಿನ ಪಾಪದ ಹುಡುಗ ಸುರೇಶ ಈ ಬಂಡೆಯ ನಡುವೆ ಜಾರಿ ಬೀಳಬೇಕೆ!! ಇಡೀ ಬಂಡೆಯೇ ಜಲಾವೃತ್ತವಾಗಿವೆ. ಸುರೇಶನನ್ನು ಎರಡೂ ಬಂಡೆಗಳ ನಡುವೆ ತಿಕ್ಕಿ ತಿಕ್ಕಿ ಹಾಕುತ್ತಿವೆ. ಪುಣ್ಯಕ್ಕೆ ದಂಡೆಯ ಹತ್ತಿರವಿರುವುದರಿಂದ ಕಾಲಿಗೆ ನೆಲ ಸಿಗುತ್ತಿದ್ದರೂ ಆಧರಿಸಿ ಅವನಿಂದ ಮೇಲೆ ಬರಲಾಗುತ್ತಿಲ್ಲ. ಮತ್ತೊಂದು ಅಲೆಯ ಹೊಡೆತಕ್ಕೆ ನಾವೆಲ್ಲರು ತೋಯ್ದು ತೊಪ್ಪೆಯಾಗಿ ಬಿಟ್ಟಿದ್ದೆವು. ಎಲ್ಲರೂ ಕಂಗಾಲು. ಸುರೇಶನಿಗೆ ಬಂಡೆಗಪ್ಪಳಿಸುವ ಅಲೆ, ಆ ಉಪ್ಪು ನೀರು ಆತನ ಗಾಯಕ್ಕೆ ಮಾಡುವ ವೇದನೆ “ಅಯ್ಯೋ ಸತ್ತೇss, ಬನ್ರೋSSS” ಎನ್ನುತ್ತಾ ಕೂಗುತ್ತಿದ್ದ. ಬಂಡೆಗೆ ಅಪ್ಪಳಿಸುವ ಅಲೆಗಳು ನಮ್ಮನ್ನೂ ಸೆಳೆದೊಯ್ಯುಲು ಹೆಚ್ಚಿನ ಸಮಯ ಬೇಕಾಗಿರಲಿಲ್ಲ. ಸಮುದ್ರದ ಅಬ್ಬರದಲ್ಲಿ ನಮ್ಮ ಕೂಗು ಯಾರಿಗೂ ಕೇಳಿಸುತ್ತಿಲಿರಲಿಲ್ಲ. ಕಣ್ಣು ಮುಚ್ಚಿ ಕೂಗಿಕೊಳುತ್ತಿದ್ದ ನಮ್ಮನ್ನು ಯಾರೋ ಬಂದು ಎಳೆದಂತಾಯಿತು. ನೋಡಿದರೆ ಮೀನುಗಾರ ಮಹಿಳೆಯರು ಮತ್ತು ಗಂಡಸರು ಹೇಗೋ ಹೇಗೋ ಬಂದು ನಮ್ಮನ್ನು ಎತ್ತಿ ದಂಡೆಗೆ ತಂದು ಬಿಟ್ಟಿದ್ದರು. ಕೊನೆಗೆ ತಿಳಿದದ್ದು, ನಾವೆಲ್ಲಾ ಅಲ್ಲಿ ಆಡುತ್ತಿರುವುದನ್ನು ಆ ಮಹಿಳೆಯರು ನೋಡಿದ್ದರಂತೆ. ನಾವು ಬರದೇ ಇರುವುದನ್ನು ಗಮನಿಸಿದ ಅವರು ಮನೆಗೆ ಮರಳಿದವರು ಅಲ್ಲಿನ ಮೀನುಗಾರರನ್ನು ಕರೆದುಕೊಂಡು ನಮ್ಮನ್ನು ರಕ್ಷಿಸಲು ಬಂದಿದ್ದರು.

ನಮ್ಮ ಅವಸ್ಥೆಯನ್ನು ನೋಡಿದ ಅವರು ಜೀವವನ್ನು ಪಣಕಿಟ್ಟು ಆ ಬಂಡೆಗೆ ಬಂದು ನಮ್ಮನ್ನು ರಕ್ಷಿಸಿದ್ದರು. ಸುರೇಶನ ಮೈಯೆಲ್ಲ ಗಾಯವಾಗಿ ಆತ ಬದುಕಿದ್ದೇ ಒಂದು ಪವಾಡ. ಅವರ ನಿಪುಣ ಈಜಿನ ಕಾರಣಕ್ಕೆ ನಾವೆಲ್ಲ ಬಚಾವ್. ಮೀನುಗಾರರ ಮುಖಂಡ ಓಮು ಖಾರ್ವಿ ನಮ್ಮನ್ನು ನೋಡಿದವನೇ “ಹೈವೇಂಚ ಪೂತು ಹೆನಿss” (ಇವರೆಲ್ಲಾ ಹವ್ಯಕರ ಮಕ್ಕಳು) ಎಂದವನೇ ಅಲ್ಲೇ ಬೆಳೆದ ಗಾಳಿಮರದ ಸಣ್ಣ ಕೋಲನ್ನು ತೆಗೆದುಕೊಂಡು “…ಪುತೋ ಅನಿ ಕಾಮ ನಾ ಅಶಿಲ್ವೇ (…ಮಕ್ಕಳೇ ಬೇರೆ ಕೆಲಸ ನಿಮಗೆ ಇಲ್ಲವಾಗಿತ್ತಾ)” ಎನ್ನುತ್ತಾ ಬೆನ್ನಮೇಲೆ ಸರಿಯಾಗಿ ಬಾರಿಸಿ ಮನೆಗೆ ತಂದು ಬಿಟ್ಟ. ಕಟ್ಟುಮಸ್ತಾದ ಆಳು ಆತ. ಆಮೇಲೆ ಮನೆಯಲ್ಲಿ ಸಿಕ್ಕ ಕಜ್ಜಾಯ ಬೇರೆಯೇ. ಸುರೇಶನಿಗಂತೂ ಸಮುದ್ರದ ಹೊಡತೆದ ಜೊತೆಗೆ ಈ ಪೆಟ್ಟು ಬೋನಸ್. ನಾನು ದೊಡ್ಡವನಾದಮೇಲೂ ಓಮು ಈ ಘಟನೆಯನ್ನು ನೆನೆಸಿಕೊಂಡು ತಮಾಷೆ ಮಾಡುತ್ತಿದ್ದ. ಎದೆಯೆತ್ತರಕ್ಕೆ ಬೆಳೆದ ಅವನ ಮಗ ಆಳ ಸಮುದ್ರದ ಮೀನುಗಾರಿಕೆಗೆ ಹೋದಾಗ ಬೋಟು ಮುಳುಗಿ ಆತನೂ ಸಮುದ್ರಪಾಲಾದ ನೋವು ಮಾತ್ರ ಅವನ ಎದೆಯಲ್ಲಿಯೇ ಹೆಪ್ಪುಗಟ್ಟಿತ್ತು.

ಇನ್ನೊಂದು ನನ್ನ ನೆನಪಿಗೆ ಬರುವುದು ನಮ್ಮೂರಿನ ಮಳೆಗಾಲ. ಆರ್ದ್ರಾ ನಕ್ಷತ್ರದೊಂದಿಗೆ ಪ್ರಾರಂಭವಾದ ಮಳೆ ಮುಂದಿನ ಆರು ನಕ್ಷತ್ರದವರೆಗೆ ನಿರಂತರವಾಗಿ ಹೊಯ್ಯುತ್ತಿತ್ತು. ಅಷ್ಟುಕಾಲ ಸೂರ್ಯನ ದರುಶನವೇ ಆಗುತ್ತಿರಲಿಲ್ಲ. ಒಂದು ಮಾತು ಸತ್ಯ. ನಮ್ಮ ಬಾಲ್ಯದ ಕಾಲದ ಮಳೆಯ ಅನುಭವ ಈಗಿಲ್ಲ. ಕೃಷಿ ಆಧರಿತ ಮಲೆನಾಡು/ ಕರಾವಳಿಯ ಭಾಗಗಳಲ್ಲಿ ಮಳೆಗಾಲದ ನಾಲ್ಕು ತಿಂಗಳನ್ನು ಕಳೆಯಲು ಮಾಡುವ ಸಿದ್ಧತೆಯೇ ಬೇರೆ. ಯುಗಾದಿಯ ದಿನ ಊರಿನ ದೇವಸ್ಥಾನದಲ್ಲಿ ಜೋಯಿಸರು ಪಂಚಾಂಗ ಫಲವನ್ನು ಹೇಳುತ್ತಾ “ಈ ವರ್ಷ …. ಎನ್ನುವ ಹೆಸರಿನ ಮೋಡ ಆನೆಯ ಸೊಂಡಿಲ ಗಾತ್ರದಲ್ಲಿ ಬರುತ್ತಾ ದೇವಮಾನ ನಾಲ್ಕು ಕೊಳಗ ಮಳೆ ಸುರಿಸುತ್ತದೆ……..” ಎನ್ನುವಾಗ ಹಳ್ಳಿಯಲ್ಲಿ ಮುಂದಿನ ಎರಡು ತಿಂಗಳು ಆ ಕುರಿತಾದದ್ದದೇ ಚರ್ಚೆ. ಬೇಸಾಯಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು, ಗೊಬ್ಬರ ಗದ್ದೆಗೆ ಹಾಕಿಸಬೇಕು, ಒಂದು ಹೂಟಿ ಹೂಡಿ ಗದ್ದೆಯನ್ನು ಹದ ಮಾಡಬೇಕು ಅಂತೆಲ್ಲ ಗಂಡಸರು ತಿರುಗಿದರೆ, ಮನೆಯ ಹೆಂಗಸರಿಗೋ ಹಪ್ಪಳ, ಸಂಡಿಗೆ ತಯಾರಿಯ ಹಲಸಿನ ಬೇಳೆ ತೊಳೆದು ಮಳೆಗಾಲಕ್ಕೆಂದು ಕಾಪಿಡುವ ಗಡಿಬಿಡಿ. ಮಳೆಗಾಲ ಅಂದರೆ ಆ ನಾಲ್ಕು ತಿಂಗಳು ಹೊರಗಿನ ಸಂಪರ್ಕ ಇಲ್ಲದ ಕಾರಣ ಖರ್ಚಿಗೆ ಅಂತ ಅಕ್ಕಿ, ಬೇಳೆ, ಮೆಣಸು, ಸಾಂಬಾರ ಪದಾರ್ಥಗಳನ್ನೆಲ್ಲ ತಂದು ಬಿಸಿಲಿನಲ್ಲಿ ಒಣಗಿಸಿ ಸೇರಿಸಿಡಬೇಕು. ಒಕ್ಕಲಿಗರ ಕೇರಿಯಲ್ಲಿ ಇದರ ಜೊತೆಗೆ ಹಳ್ಳದ ದಂಡೆಯ ಮೇಲೆ ಒಣಗಿಸಿದ ಒಣಮೀನಿನ ಕಮಟು ವಾಸನೆ. ಈ ನಡುವೆ ಮದುವೆ, ಮುಂಜಿ ಅಂತ ನೆಂಟರಿಷ್ಟರ ಮನೆಗೆ ಹೋಗಿ ನಾಲ್ಕಾರು ದಿನ ಇದ್ದು ಬರಬೇಕು.

“ಅತ್ತೆ ಇನ್ನೊಂದೆಂಟುದಿನ(!) ಇದ್ದು ಹೋಗರಾಗದಾ……” ಎಂಬ ಒತ್ತಾಯಕ್ಕೆ “ಇಲ್ಲೆ ಮಾರಾಯ್ತಿ, ಮಳೆಗಾಲದ ತಯಾರಿಯೇನೂ ಆಯ್ದಿಲ್ಲೆ…..” ಎನ್ನತ್ತಾ ಓಡೋಡಿ ಬರುವ ಗದ್ದಲವೇನು, ಅಕ್ಷಯ ತದಿಗೆಯಂದು ಬೀಜ ಮುಹೂರ್ತ ಮಾಡಲು ಒಕ್ಕಲನ್ನು ಒಟ್ಟುಮಾಡುವಾಗಲೇ ಆಳುಗಳು “ಒಡೆಯಾ ಈ ಕಂಬಳಿಗೆ ಅದಾಗಲೇ ಹತ್ತು ವರ್ಷವಾಗಿದೆ. ಲಡ್ಡಾಗಿ ಹೋಗಿದೆ, ಈ ವರ್ಷವಾದರೂ ಹೊಸ ಕಂಬಳಿ ಕೊಡಿಸಿ” ಎಂಬ ಬೇಡಿಕೆ. ಪೇಟೆಗೆ ಹೋಗಿ ಕಮ್ತಿರ ಅಂಗಡಿಯಲ್ಲಿ ಬರುವ ಬೆಳೆಯನ್ನು ಅಡವಿಟ್ಟು ಅವನ್ನೆಲ್ಲ ತರುವದು, ಒಂದೇ ಎರಡೇ. ಮಳೆಗಾಲದ ಬರುವಿಕೆಯ ಕುರಿತಾದ ಕಾತರ. ಮಳೆ ಕಾಲಿರಿಸಿತೆಂದರೆ ಸಾಕು, ಜೂನಿನಿಂದ ಆಗಷ್ಟ್‌ ಕೊನೆಯವರೆಗೆ ಹಳ್ಳಿಯಿಂದ ಹಳ್ಳಿ, ಕೇರಿಯಿಂದ ಕೇರಿ, ಮನೇಕಸಲ ಮನೆಯಿಂದ ಮತ್ತೊಂದು ಮನೆಗೆ ಸಂಪರ್ಕವೇ ಇರುವುದಿಲ್ಲ. ಮಳೆಗೆ ಗುಡ್ಡದಿಂದ ಬೀಳುವ ಅಬ್ಬಿ, ಅದನ್ನೇ ತೋಡಿನಲ್ಲಿ ತಂದು ಹಿತ್ತಲಿನಲ್ಲಿ ಪಾತ್ರೆಗಳನ್ನು ತೊಳೆಯುವ ವ್ಯವಸ್ಥೆ. ಮಕ್ಕಳು ಮಳೆಗಾಲದಲ್ಲಿ ಎಲ್ಲಿದ್ದಾರೆಂದು ಹುಡುಕುವದೇ ಬೇಡ, ಈ ಅಬ್ಬಿಯಲ್ಲಿ ತೋಯುತ್ತಾ ಸಂಭ್ರಮಿಸುವ ಕಾಲ. ಮಗನಿಗೆ ಶೀತಜ್ವರವಾದರೆ ಎಂಬ ಆತಂಕ ತಾಯಿಗೆ, ಅಜ್ಜಿಯಂದಿರಿಗೆ ಅದರ ಪ್ರತಿರೋಧಕ್ಕಾಗಿ ಕಷಾಯ ಮಾಡುವ ಧಾವಂತ! ಈ ಮದ್ಯೆ ಸಿಡಿಲಬ್ಬರ, ಮಿಂಚಿನ ಛಟ ಛಟ ಸದ್ದು, ಬೆದರಿ ಅಮ್ಮನ ಸೆರಗಿನಲ್ಲಿ ಅಡಗಿ ಕುಳಿತಿರುತ್ತಿದ್ದೆವು. ಅಜ್ಜಿ ಬಂದು “ಧನಂಜಯಾ ಎನ್ನಿ ಮಕ್ಕಳೆ, ಗುಡುಗುಮ್ಮ ನಿಮ್ಮನ್ನೇನೂ ಮಾಡುವುದಿಲ್ಲ” ಎಂದಾಗ ಅದನ್ನೇ ಅಮ್ಮನ ಸೆರಗಿನಮರೆಯಲ್ಲೇ ಗುನಿಗುನಿಸುವ ನೆನಪು.

ಆಗೆಲ್ಲ ನಿರ್ಜನ ಪ್ರದೇಶ ಅದು. ನಾವು ಹುಡುಗರು ಮನೆಯವರ ಕಣ್ಣುತಪ್ಪಿಸಿ ಸಮುದ್ರಕ್ಕೆ ಓಡುತ್ತಿದ್ದೆವು. ಸಮುದ್ರದಂಡೆಗೆ ಹೊಂದಿಕೊಂಡಿರುವ ಸಾಯಬ್ರರ ಕೇರಿಯವರೆಲ್ಲ ಸಮುದ್ರದ ದಿಕ್ಕಿಗೆ ಮುಖಮಾಡಿ ನಮಾಜು ಮಾಡುತ್ತಿದ್ದರು. ಆ ದಿಕ್ಕಿಗೆ ದುಬಾಯಿಯೂ ಇದೆ ಎಂದು ಅತ್ತರದ ಪರಿಮಳದೊಂದಿಗೆ ಆಕರ್ಷಕವಾಗಿ ಕಾಣುವ ವಾಚನ್ನು ಕಟ್ಟಿದ ಕೈಯಿಂದ ಕಾಣುವಂತೆ ಹಾವಭಾವದ ಮೂಲಕ ವಿವರಿಸುವ ದುಬಾಯಿಯ ವರ್ಣನೆ ನಮಗೂ ಗಲ್ಫ್ ದೇಶ ನೋಡುವ ಆಸೆಯನ್ನು ಹುಟ್ಟಿಸುತ್ತಿತ್ತು.

ಧೋ ಧೋ ಅಂತ ಸುರಿವ ಮಳೆಯಲ್ಲಿ ಶಾಲೆಗೆ ಹೋಗದಿರಲಂತೂ ಆಗುವುದಿಲ್ಲವಲ್ಲ! (ಜೋರಾಗಿ ಮಳೆ ಬಂತೆಂದರೆ ಶಾಲೆಗೆ ರಜೆ ಅಂತ ನಾವೇ ಘೋಷಿಸಿಬಿಡುವುದೂ ಇತ್ತು) ಮಳೆಯ ರಕ್ಷಣೆಗೆ ತಾಳೇ ಮರದ ಕೊಡೆ ಇಲ್ಲವೇ ಮರದ ಕಾವಿನ ಕೊಡೆ ಸಾಮಾನ್ಯ. ಸಿರಿವಂತರ ಮಕ್ಕಳು ಮತ್ತು ಅಕ್ಕೋರುಗ (ಮೇಡಂ)ಗಳು ಕಬ್ಬಿಣದ ಕಾವಿನ ಅಲಂಕಾರದ ಹಿಡಿಕೆಯ ಕೊಡೆತರುತ್ತಿದ್ದರು. ಮಡಚುವ ಕೊಡೆ ಆಗಿನ್ನೂ ಬಂದಿರಲಿಲ್ಲ. ಶಾಲೆಯ ಚಟುವಟಿಕೆಗಳಲ್ಲಿ ಮೊದಲ ಚರ್ಚಾಕೂಟವೇ “ಕೊಡೆ ಮೇಲೋ, ಕಂಬಳಿ ಮೇಲೋ” ಎನ್ನುವ ವಿಷಯದ ಕುರಿತಾಗಿರುತ್ತಿತ್ತು. ಆಗ ಕೊಡೆ ಉಳ್ಳವರ ಸಂಕೇತ, ಕಂಬಳಿ ಹಳ್ಳಿಯ ಬದುಕಿನ ಅಂಗ. ಚರ್ಚೆ ತಾರಕಕ್ಕೇರುತ್ತಿತ್ತು. ಮಾಸ್ತರುಗಳೂ ಕಂಬಳಿ ಕಡೆಗೇ ಇರುವುದರಿಂದ ಕಂಬಳಿಗೇ ಜಯವಾಗುತ್ತಿತ್ತು. ಈ ಕಂಬಳಿಯ ವೈಶಿಷ್ಟ್ಯವೂ ಅಂತಹುದೇ. ಲಂಗೋಟಿತೊಟ್ಟ ರೈತನಿಗೆ ಮಳೆಗಾಲದಲ್ಲಿ ಬೇರೇನಿಲ್ಲದಿದ್ದರೂ ಕಂಬಳಿ ಬೇಕೇ ಬೇಕು. ಕಂಬಳಿಕೊಪ್ಪೆ ಆತನಿಗೊಂದು ವಾಟರ್‌ಪ್ರೂಫ್ ಕವಚ. ಹಾಸಿದರೆ ಹಾಸಿಗೆಯಾದೆ, ಹೊದೆದರೆ ಹೊದಿಕೆಯಾದೆ, ಒಂದು ಬಿದರಕಡ್ಡಿ ಚುಚ್ಚಿ ತಲೆಗೇರಿಸಿದರೆ ಮಳೆಗೆ ರಕ್ಷಣೆಯಾಗುವ ಅದ್ಭುತ ಸಾಧನ ಇದು. ಜಡಿಮಳೆಗೆ ನಿಧಾನಕ್ಕೆ ಗೊಬ್ಬರ ತೊಟ್ಟಿಯಲ್ಲಿ ಅಡಗಿಸಿಟ್ಟ ಗೇರುಹಣ್ಣಿನ ಮಧುರಾಮೃತ(!) ಏರಿಸಿ ಕಂಬಳಿಕೊಪ್ಪೆ ಹೊದೆದು ಗದ್ದೆಗೆ ನಡೆದಾ ಎಂತಂದರೆ ಎಂಥ ಅಬ್ಬರದ ಮಳೆಯೇ ಬರಲಿ ಮಳೆಯೇ ಅವನಿಗೆ ಹೆದರಬೇಕು. ಬದು ಸರಿಮಾಡಿ, ನೀರು ಹರಿಯಲು ತೋಡು ಬಿಡಿಸಿ, ನಾಟಿಮಾಡಿ ಮುಗಿಸಿಯೇ ಅವ ಮನೆಗೆ ಮರಳುವುದು. ಕೆಲ ಸಂದರ್ಭಗಳಲ್ಲಿ ಮನೆಯೊಡೆಯನೂ ಆ ಮಧುರಾಮೃತಕ್ಕೆ ಪಾಲುದಾರನಾಗುತಿದ್ದ.

ಮುಸಲಧಾರೆಯ ಮಳೆಗೆ ಮಲೆನಾಡಿನಲ್ಲಿ ಹೊರಗೆ ಕಾಲಿಡುವಂತೆಯೇ ಇಲ್ಲ. ಬಿರುಬೇಸಿಗೆಯಲ್ಲಿ ಎಲ್ಲಿರುತ್ತಿದ್ದವೋ, ಒಂದು ಮಳೆ ಬಿದ್ದದ್ದೇ ಹಿತ್ತಲಲ್ಲಿ ಉಂಬಳಕ್ಕೆಲ್ಲಾ ಜೀವ ಬಂದು ಬಿಡುತ್ತಿದ್ದವು. ನಮಗೆ ಗೊತ್ತಾಗದ ಹಾಗೆ ರಕ್ತ ಹೀರುತ್ತಾ ಇಷ್ಟುದ್ದವಾಗಿ ಬೆಳೆದು ಬಿಡುತ್ತಿದ್ದವು. ದೊಡ್ಡವರು ನೋಡಿ ಸ್ವಲ್ಪ ಸುಣ್ಣ ಅಥವಾ ಹೊಗೆಸೊಪ್ಪು ತಾಗಿಸಿದರೆ ಮಾತ್ರ ಬಿಡುಗಡೆ. ಹಾಗೆ ಬಿದ್ದ ಉಂಬಳವನ್ನು ಧೈರ್ಯವಿರುವ ಹುಡುಗ ಎತ್ತಿ ಬಚ್ಚಲ ಬೆಂಕಿಗೆ ಎಸೆದಾಗ ಚಟ ಚಟ ಅಂತ ಸದ್ದುಮಾಡುತ್ತಿರುವುದನ್ನ ನಾವೆಲ್ಲಾ ಬೆರಗಾಗಿ ನೋಡುತ್ತಿದ್ದೆವು.

ಮಳೆಗಾಲದ ತಿಂಡಿಯ ವಿಶೇಷವೇ ಬೇರೆ. ಆಗೆಲ್ಲಾ ಪೇಟೆಯಿಂದ ತರಕಾರಿ ತರುವ ಕ್ರಮವಿರಲಿಲ್ಲ. ಹಿತ್ತಲಲ್ಲಿ ಬೆಳೆದ ಕೆಸುವಿನ ಸೊಪ್ಪಿನ ಪತ್ರೊಡೆ, ತೊಗಚಿ ಸೊಪ್ಪಿನ ಚಟ್ನಿ, ಒಂದೆಲಗದ ತಂಬುಳಿ, ಉಪ್ಪಿನಲ್ಲಿ ಹಾಕಿಟ್ಟ ಹಲಸಿನ ತೊಳೆಯ ಸಾರು, ಸಣ್ಣಮೆಣಸು ಸೇರಿಸಿದ ಮಾವಿನಕಾಯಿಯ ಕೊರ್ಸುಗಾಯಿ, ಒಂದಕ್ಕಿಂತ ಒಂದು ರಸಕವಳಗಳು. ಮಧ್ಯಾಹ್ನ ಹಲಸಿನ ಕಾಯಿಯ ಹಪ್ಪಳ, ಚಿಪ್ಸ್ ಮೆಲ್ಲುತ್ತಾ ಚೆನ್ನೆಮಣೆ ಆಡುತ್ತಾ ಕುಳಿತರೆ ಮಳೆ ಹೊರಗೆ ತಾಳಹಾಕುತ್ತಿತ್ತು. ಈ ಸಂದರ್ಭಕ್ಕೆಂದು ಹಲಸಿನ ಹಣ್ಣಿನ ಕಡಬುಮಾಡಿ ನೆಂಟರನ್ನು ಕರೆಯುವ, ಬಿಸಿ ಬಿಸಿ ತುಪ್ಪದಲ್ಲಿ ಅದ್ದಿ ತಿನ್ನುವ ವೈಭವದ ಮುಂದೆ ಈಗಿನ ಪಿಜ್ಜಾ, ನೂಡಲ್ಸ್‌ಗಳನ್ನ ನಿವಾಳಿಸಬೇಕು. ಸಾಲುಸಲಾಗಿ ಬರುವ ಹಬ್ಬ ಮಳೆಗಾಲದ ವಿಶೇಷ. ಪ್ರತೀ ಹಬ್ಬಕ್ಕೂ ಅದರದೇ ಆದ ತಿಂಡಿ. ಗಣೇಶ ಚವತಿಗಂತೂ 21 ಬಗೆಯ ತಿಂಡಿಗಳು, ಆ ಮೇಲೆ ಅದು ಅರಗಲೆಂದೇ ಮಾಡುವ ಬಗೆಬಗೆಯ ಕಷಾಯ,

“ದೊಡ್ಡಮಳೆ ಬರಲಿ, ದೊಡ್ಡ ಕೆರೆ ತುಂಬಲಿ
ದೊಡ್ಡ ಗೌಡನ ಹೆಂಡ್ತಿ ಕೆರೆಯಲಿ ಬಿದ್ದು ಸಾಯಲಿ”
ಎಂದು ಹಾಡುತ್ತಾ ಅವನ್ನೆಲ್ಲ ಮೆಲ್ಲುವ ಆ ದಿನಗಳು ನನ್ನ ಮಕ್ಕಳಿಗಿಲ್ಲವಲ್ಲಾ ಎಂಬ ಕೊರಗೂ ಬರುತ್ತದೆ.

ಮಳೆಗಾಲವೆಂದರೆ ಅದೊಂದು ಕನಸಿನ ಅರಮನೆ ಖಂಡಿತಾ ಅಲ್ಲ. ಹೆಚ್ಚಿನ ಶ್ರಾದ್ಧಗಳೆಲ್ಲ ಬರುವದು ಮಳೆಗಾಲದಲ್ಲೆ. ಸರಿಯಾದ ಔಷಧೋಪಚಾರ ದೊರೆಯದೇ ಮಳೆಯೊಂದಿಗೆ ಬರುವ ಬೇನೆಗೆ ಬಲಿಯಾಗುವವರು ಜಾಸ್ತಿ. ಈ ಸಂದರ್ಭದಲ್ಲಿ ಮನೆಯಲ್ಲಿನ ವಯಸ್ಸಾದವರೆಲ್ಲ ಹೇಳುವ ಸಾಮಾನ್ಯವಾದ ಮಾತೆಂದರೆ “ಈ ಮಳೆಗಾಲವೊಂದನ್ನ ಕಳೆದರೆ ಮುಂದಿನ ವರ್ಷ ಮೊಮ್ಮಗನ ಮುಂಜಿ ನೋಡಬಹುದು” ಇಡೀ ಊರು ಕೇರಿ ದ್ವೀಪವಾಗುವ ಈ ಹೊತ್ತಿನಲ್ಲಿ ಯಾರಿಗಾದರೂ ಶೀಕು ಸಂಕಟ ಬಂತೆಂದರೆ ಸಾಕು, ವ್ಯಕ್ತಿಯ ಬದುಕುವ ಆಸೆ ಬಿಟ್ಟಂತೆಯೆ! ಅಂತಹ ರೋಗಿಗಳನ್ನು ಕಂಬಳಿಯಲ್ಲಿ ಕಟ್ಟಿ ನಾಲ್ಕು ಜನ ಹೊತ್ತೊಯ್ಯುತ್ತಾ ಪೇಟೆಯ ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ರೋಗ ಉಲ್ಬಣಿಸಿರುತ್ತಿತ್ತು. ಆಗೆಲ್ಲ ಮಳೆಗೆ ಶಾಪ ಹಾಕುತ್ತಾ ಊರಿಗೆ ರಸ್ತೆ ಬಂದು ಮೋಟಾರು ಗಾಡಿ ಓಡಾಡುವಂತಾಗಲಪ್ಪ ಎಂದು ಎಲ್ಲರೂ ಹರಕೆ ಹೊತ್ತವರೇ.

“ನನ್ನ ಕಾಲಕ್ಕೆ ಈ ಬೇಸಾಯ ಸಾಕು, ನನ್ನ ಮಕ್ಕಳಿಗೆ ಈ ಕಷ್ಟ ಬೇಡ”ವೆಂಬ ಅಮ್ಮನ ನಿಟ್ಟಿಸಿರು, ಅಪ್ಪನ ಮೇಲೆ ತಂದ ಒತ್ತಡ, ಈ ಎಲ್ಲ ಕಷ್ಟಗಳ ನಡುವೆ ಬೆಳೆದ ಬೆಳೆ ಪೇಟೆಗೆ ತಂದು ಮಾರಿದರೆ ಸಿಗುವದು ಆ ಅಲ್ಪ ಮೊತ್ತ ಹಳ್ಳಿಯ ಬದುಕಿಗೆ ವಿಮುಖ ಮಾಡಿದ್ದು ಹೌದು. ಬೆಳೆದ ಬೆಳೆಳೆ ಸಾಹುಕಾರ “ಹೆಗ್ಡೇರೆ, ನಿಮ್ಮ ಹೋದ ವರ್ಷದ ಲೆಕ್ಕಾ ಚುಕ್ಥಾ, ಈ ವರ್ಷದ್ದು ಹಾಗೇ ಇದೆ, ಇರಲಿ ಬಿಡಿ, ನಿಮಗೆ ಮಾತ್ರ ಮುಂದಿನ ವರ್ಷಕ್ಕೆ ಮುಂಗಡ ಕೊಡುವೆ……” ಎನ್ನುವ ದಯೆ ಬೇರೆ! ಮೌನದಿಂದ ಅಪ್ಪ ಅದೇ ಮಳೆಗೆ ಶಾಪ ಹಾಕಿದ್ದಂತೂ ನಿಜ.

ಮಳೆಗಾಲದ ಆ ದಿನದ ವೈಭವವನ್ನು ವರ್ಣಿಸುವುದು ಸುಲಭ, ಮತ್ತೆ ಆ ನಾಲ್ಕು ತಿಂಗಳನ್ನ ಅನುಭವಿಸುತ್ತೀರಾ ಎಂದರೆ ಸಾಧ್ಯವಾಗದ ಮಾತು. ಆದರೂ ನಗರದ ಕಾಂಕ್ರಿಟ್ ಕಾಡಿನಲ್ಲಿ ಸಣ್ಣ ಮಳೆಗೆ ದೊಡ್ಡ ನೆರೆ ಬಂದು ಜನರ ಬದುಕು ಅಸಹನೀಯವಾಗುವುದನ್ನ ಕಂಡಾಗ ಅನಿಸುವದಿಷ್ಟು. ಪ್ರಕೃತಿ ಸಹಜವಾದ ಮಳೆಗಾಲ ರುದ್ರ ರಮಣೀಯ. ಇಲ್ಲಿ ನಗರದಲ್ಲಿ ಮನುಷ್ಯ ಆ ಮಳೆಗಾಲವನ್ನು ಭೀಬತ್ಸ ಮತ್ತು ಅಸಹ್ಯ ಮಾಡಿದ್ದಾನೆ.

ಬಾಲ್ಯದ ನೆನಪುಗಳನ್ನು ಹೊರತರುತ್ತಲೇ ಗೋಪಾಲಣ್ಣನ ಮನೆಯಲ್ಲಿ ಚಹ ಕುಡಿಯುತ್ತಿರುವಾಗ ಪರಮಜ್ಜ ಇಡಗುಂಜಿ ತೇರಿನಲ್ಲಿ ಯಾವಾಗಲೋ ತಂದು ಮನೆಯ ಗೋಡೆಯಲ್ಲಿ ನೇತು ಹಾಕಿದ್ದ ಗೀತಾಚಾರ್ಯನ ಬಣ್ಣದ ಚಿತ್ರದಲ್ಲಿ “ಪರಿವರ್ತನೆ ಜಗದ ನಿಯಮ” ಈಗಲೂ ಮಸುಕಾಗಿಯಾದರೂ ಕಾಣುತ್ತಿತ್ತು. ಕಾಲ ಕೆಟ್ಟು ಹೋಗಿರುವುದೋ ಅಥವಾ ಊರು ಕೆಟ್ಟುಹೋಗಿರುವುದೋ ಅಥವಾ ನಾವೇ ಕೆಟ್ಟುಹೋಗಿದ್ದೇವೆಯೋ ಎನ್ನುವುದು ಅರ್ಥವಾಗದೇ ಸುಮ್ಮನಾದೆ.