‘ವಿಶಿಷ್ಟ ಪದ ರಚನೆಯೇ ರೀತಿ’ ಎಂದು ವಾಮನ ಅಭಿಮತ ಪಡುವುದನ್ನು ಇಲ್ಲಿ ಉಲ್ಲೇಖಿಸುತ್ತಲೇ ಮಧು ಬಿರಾದಾರ ಅವರ ‘ದೊರೆ ನೆತ್ತಿ ಗರುಡ’ ಕವನ ಸಂಕಲನದಲ್ಲಿನ ವಿಶಿಷ್ಟ ಪದ ರಚನೆಗಳು ವಿಶೇಷವಾಗಿ ಗಮನ ಸೆಳೆಯುತ್ತವೆ. ಉತ್ತರ ಕರ್ನಾಟಕದ ಬಿರುಸಾದ ಭಾಷೆ, ಉಕ್ತಿ ಹಾಗೂ ಶೈಲಿ ಅವರ ಕವನಗಳಲ್ಲಿ ವಿಶಿಷ್ಟವಾಗಿ ಕಾಣುತ್ತೇವೆ. ಪೂರ್ಣ ಪ್ರಮಾಣದಲ್ಲಿ ಅದೇ ಭಾಷೆಯನ್ನು ಬಳಸಿದರೆ ರಾಜ್ಯದ ಉಳಿದ ಭಾಗಗಳಲ್ಲಿ ಅರ್ಥವಾಗದೇ ಹೋಗುವ ಸಾಧ್ಯತೆಗಳ ಎಚ್ಚರಿಕೆಯಲ್ಲಿಯೇ ಮಧು ಹಿತವಾಗಿ-ಮಿತವಾಗಿ ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಲ್ಲಿ ಮಾತ್ರ ಬಳಸಿ ಕವಿತೆಗಳಿಗೆ ಒಂದು ಹದ ತಂದಿರುವುದನ್ನು ಕಾಣಬಹುದು. ‘ದರಿಯಾಗ್ ಯಾನ್ ನಡ್ಡಾದ್’ ಕವಿತೆಯಂತೂ ಪೂರ್ಣವಾಗಿ ಭಾಷಾ ಪ್ರಯೋಗಕ್ಕೆ ಒಳಗೊಂಡಿರುವುದನ್ನು ನೋಡಬಹುದು.
ಮಧು ಬಿರಾದಾರ ಕವನ ಸಂಕಲನ “ದೊರೆ ನೆತ್ತಿ ಗರುಡ” ಕುರಿತು ಶೋಭಾ ನಾಯಕ ಬರಹ
ಕವಿಯೊಬ್ಬ ಲೋಕಾಂತಗಳ ಜೊತೆ ಜೊತೆಯೇ ಬಚ್ಚಿಟ್ಟ ಏಕಾಂತದ ಗುಟ್ಟಿನ ರಟ್ಟಿಗೆ ಜೊತೆಯಾಗುವುದು. ಎಲ್ಲರೂ ದೂರವಾದಾಗ ಕವಿತೆ ಬಂಧುವಾಗಿ, ಗೆಳೆಯನಾಗಿ, ಪ್ರೇಮಿಯಾಗಿ ಜೊತೆ ಸಾಗುವುದು. ಧರ್ಮ, ತತ್ವಜ್ಞಾನಗಳೆಲ್ಲ ಅವರವರ ವ್ಯಾಖ್ಯಾನದನುಸಾರ ಬಗೆ ಬಗೆಯದಾಗುತ್ತಾ ಹೋಗುತ್ತವೆ. ಮನುಷ್ಯನ ಹಿತವನ್ನು ನೋಡುತ್ತಾ ಬರುವ ಧರ್ಮ, ತದನಂತರದಲ್ಲಿ ಪರಿವರ್ತನೆಗೊಳಗಾಗುತ್ತ ಬರುವುದನ್ನು ಮಧು ಬಿರಾದಾರರ ‘ದೊರೆ ನೆತ್ತಿ ಗರುಡ’ ಸಂಕಲನದ ಕವಿತೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಅದರ ಸಂಕೀರ್ಣತೆಯ ಸ್ವರೂಪವನ್ನು ಅರಿಯಬಹುದಾಗಿದೆ. ಜೀವನವನ್ನಷ್ಟೇ ಪ್ರತ್ಯೇಕಿಸಿ ನೋಡುವಂತಿಲ್ಲ ಎಂಬುದನ್ನು ಸಹ ಇಲ್ಲಿನ ಕವಿತೆಗಳು ಹೇಳುತ್ತಿವೆ. ಒಬ್ಬ ವ್ಯಕ್ತಿ ಭಕ್ತನೂ, ಅನುಯಾಯಿಯೂ, ಮಗನೂ, ಪ್ರೇಮಿಯೂ, ಗೆಳೆಯನೂ ಎಲ್ಲವೂ ಏಕಕಾಲದಲ್ಲಿ ಆಗುವ ಸಾಧ್ಯತೆಗಳಿದ್ದಾಗಲೂ ಸಮಾಜ ಕೇವಲ ಅವನನ್ನು ಒಂದೇ ಒಂದು ದೃಷ್ಟಿಕೋನದಿಂದ ಅಳೆದರೆ ಅನಾಹುತಕ್ಕೆ ಎಡೆಮಾಡಿಕೊಡುವುದೆಂಬ ಕಳಕಳಿಯ ಕವಿತೆಗಳು ಒಂದೆಡೆಯಾದರೆ; ಮನುಷ್ಯನ ಅತ್ಯಂತ ಖಾಸಗಿಯಾದ ಪ್ರೇಮ ಜೀವನಕ್ಕೂ ಧರ್ಮ ಹೇಗೆ ತಳಕು ಹಾಕಿಕೊಳ್ಳುತ್ತದೆ ಎಂಬುದು ಮತ್ತೊಂದೆಡೆ. ಮಧು, ತಮ್ಮ ಸುತ್ತಲಿನ ಘಟನೆಗಳಿಂದಲೂ ಪ್ರಭಾವಿತ ಹಾಗೂ ಆಘಾತರಾಗಿರುವುದನ್ನು ಏಕಕಾಲದಲ್ಲಿ ಅಭಿವ್ಯಕ್ತಿಸುವ ಪ್ರಯತ್ನ ಮಾಡುತ್ತಲೇ; ತನ್ನೆದೆಯೊಳಗೆ ಗೂಡು ಕಟ್ಟಿದ ಪ್ರೇಮ ಪಾರಿವಾಳದ ಗೂಡನ್ನು ಯಾರೊಂದಿಗೂ ಹಂಚಿಕೊಳ್ಳಲಾಗದೇ ಮಸ್ಲಿನ್ ಪರದೆಯನ್ನು ರಕ್ಷಿಸಿಕೊಳ್ಳಲು ಬಳಸಿಕೊಂಡು ಪ್ರೇಮ ನಿವೇದನೆಯನ್ನು ಕವಿತೆಗಳ ಮುಖೇನ ಮಾಡಿದ್ದಾರೆ. ಆತ್ಮಕ್ಕೆ ಇಟ್ಟ ಬುದ್ಧನ ದೀಪ / ಬೆಳಕು ಕೊಟ್ಟೇ ಕೊಡುವ ಕುರಿತು / ನಮ್ಮ ಗುಡಿಸಲಲ್ಲಿ / ನಾವು ನಾವೇ ಮುನಿಸಿಕೊಂಡಿದ್ದರ ಬಗ್ಗೆ ಹೇಳಿಕೊಳ್ಳಲಾಗದ ನೋವಿದೆ ಎನ್ನುವಲ್ಲಿ ಬೆವರಿನ ಘೋಷವಾಕ್ಯ ಈಗ ‘ಬಹುದು’ದರ ಒಳಗಾಗಿರುವುದನ್ನು ಕವಿ ಅಭಿವ್ಯಕ್ತಿಸುತ್ತಲೇ ‘ಯುದ್ಧ ಮಾತ್ರ ಮನುಷ್ಯನೊಂದಿಗೆ’ ಎಂದು ಸಾರುತ್ತಾನೆ. ಜಗತ್ತಿನ ಹುಚ್ಚಾಟದ ಮನುಷ್ಯ ಎದುರಾಗುವ ಕಾಲದ ಕುರಿತು ಹೇಳುತ್ತಲೇ ಒಂಟಿತನ ಮತ್ತು ಏಕಾಂತಗಳ ದಾಯಾದಿ ಕೊಸರಾಟವನ್ನು ಹೇಳುವ ಮಧು ಕಾಲನ ಬೇಲಿ ದಾಟಿ ಹೊರಟಿರುವ ಚರಿತ್ರೆಯ ಹಕ್ಕಿ, ವಲಸೆ ಹಕ್ಕಿಗೆ ತಾಯಿಯಾಗುವುದನ್ನು ಹೇಳುತ್ತಲೇ ಈ ದುಷ್ಕಾಳದಲ್ಲಿ ಒಲವಿನ ದೀಪ ಎಲ್ಲಿ ಹಚ್ಚಲಿ ಎಂಬುದನ್ನು ಪ್ರಶ್ನಿಸುತ್ತಾರೆ.
“ಒಂದು ಕೈಯಲ್ಲಿ ಕೋವಿ
ಇನ್ನೊಂದು ಕೈಯಲ್ಲಿ ಶ್ವೇತ ಪಾರಿವಾಳ
ಬರುತ್ತಾನೆ ಇಂದ್ರ ಲೋಕದಿಂದೊಬ್ಬ”

(ಮಧು ಬಿರಾದಾರ)
ರಕ್ತ ಹೀರಲು ಎನ್ನುವ ಸಾಲುಗಳಲ್ಲಿಯೇ ಇವತ್ತಿನ ನಾಟಕೀಯ ಜಗತ್ತಿನ ಮನುಷ್ಯನ ಸ್ವರೂಪವನ್ನು ಸಾರುತ್ತದೆ. ಇಲ್ಲಿ ಎಲ್ಲರೂ ಸುಮ್ಮನೆ ಪರ-ವಿರೋಧದ ಕೂಗುಗಳನ್ನು ಹಾಕುತ್ತಾರೆ. ಹಾಗೆ ನೋಡಿದರೆ ಯಾವ ವಿದ್ಯಮಾನವೂ ನಮ್ಮದಾಗಿ ಉಳಿದಿರುವುದಿಲ್ಲ. ಕೇವಲ ಇಂತಹವರು ಎದುರಾದಾಗ ನಮ್ಮೊಳಗಿನ ರಾಕ್ಷಸತನವನ್ನು ಬಡಿದೆಬ್ಬಿಸುವುದನ್ನು ಬಿಟ್ಟರೆ ಇನ್ನೇನು ಆಗಲು ಸಾಧ್ಯವಿಲ್ಲ. ಇಲ್ಲಿ ಎಲ್ಲದಕ್ಕೂ ಒಂದು ನಿಯಂತ್ರಣವಿದೆ ಎಂಬುದನ್ನು ದೇವರ ನೆಲದಲ್ಲಿ ಶಾಂತಿ, ಸಂಕರದ ಸಂಕಥನ, ಹ-ರಾಮಿ ಚರಿತ್ರೆ, ಯುದ್ಧ ಕವಿತೆಗಳು ಮತ್ತೆ ಮತ್ತೆ ಹೇಳುತ್ತವೆ.
‘ವಿಶಿಷ್ಟ ಪದ ರಚನೆಯೇ ರೀತಿ’ ಎಂದು ವಾಮನ ಅಭಿಮತ ಪಡುವುದನ್ನು ಇಲ್ಲಿ ಉಲ್ಲೇಖಿಸುತ್ತಲೇ ಮಧು ಬಿರಾದಾರ ಅವರ ‘ದೊರೆ ನೆತ್ತಿ ಗರುಡ’ ಕವನ ಸಂಕಲನದಲ್ಲಿನ ವಿಶಿಷ್ಟ ಪದ ರಚನೆಗಳು ವಿಶೇಷವಾಗಿ ಗಮನ ಸೆಳೆಯುತ್ತವೆ. ಉತ್ತರ ಕರ್ನಾಟಕದ ಬಿರುಸಾದ ಭಾಷೆ, ಉಕ್ತಿ ಹಾಗೂ ಶೈಲಿ ಅವರ ಕವನಗಳಲ್ಲಿ ವಿಶಿಷ್ಟವಾಗಿ ಕಾಣುತ್ತೇವೆ. ಪೂರ್ಣ ಪ್ರಮಾಣದಲ್ಲಿ ಅದೇ ಭಾಷೆಯನ್ನು ಬಳಸಿದರೆ ರಾಜ್ಯದ ಉಳಿದ ಭಾಗಗಳಲ್ಲಿ ಅರ್ಥವಾಗದೇ ಹೋಗುವ ಸಾಧ್ಯತೆಗಳ ಎಚ್ಚರಿಕೆಯಲ್ಲಿಯೇ ಮಧು ಹಿತವಾಗಿ-ಮಿತವಾಗಿ ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಲ್ಲಿ ಮಾತ್ರ ಬಳಸಿ ಕವಿತೆಗಳಿಗೆ ಒಂದು ಹದ ತಂದಿರುವುದನ್ನು ಕಾಣಬಹುದು. ‘ದರಿಯಾಗ್ ಯಾನ್ ನಡ್ಡಾದ್’ ಕವಿತೆಯಂತೂ ಪೂರ್ಣವಾಗಿ ಭಾಷಾ ಪ್ರಯೋಗಕ್ಕೆ ಒಳಗೊಂಡಿರುವುದನ್ನು ನೋಡಬಹುದು.
“ತನ್ನ ಪಂಜರದಲ್ಲಿ
ತಾನೇ ಬೆತ್ತಲೆಯಾಗುವ ಮನುಷ್ಯನಿಗೆ
ಬಯಲಲ್ಲೇಕೆ ಮುಚ್ಚು ಮರೆ ನಾಚಿಕೆಯ ಹೊದಿಕೆ”
ಎಂದು ಪ್ರಶ್ನಿಸುವ ಕವಿ ನಿನ್ನೆದುರು ಹೇಗೆ ಬಿಚ್ಚಿಕೊಳ್ಳಲಿ ಎನ್ನವ ಮುಜುಗರವು ಕಾಡುತ್ತದೆ ಎನ್ನುವ ಮಧು ಭಾವನಾ ಜೀವಿ. ಅವರ ಕವಿತೆಗಳಲ್ಲಿ ಭಾವನೆಗಳನ್ನು ಚಿಮ್ಮಿಸುವ ಒತ್ತಡ ‘ಕಾಲದ ರಶೀದಿ ಪುಟ’ಕ್ಕಿಂತಲೂ ಹೆಚ್ಚಿರುವುದು ಇಲ್ಲಿನ ಕವಿತೆಗಳಲ್ಲಿ ಕಂಡುಬರುತ್ತದೆ. ಇಲ್ಲಿನ ಬಹಳಷ್ಟು ಕವಿತೆಗಳಲ್ಲಿ ಪ್ರೀತಿಗಾಗಿ ಹಂಬಲಿಸುವ ಸುಮಧುರ ಮನಸು ಕಾಣುತ್ತದೆ. ಹಾಗೆಯೇ ಜಾತಿ, ಧರ್ಮ, ಪ್ರಜಾಪ್ರಭುತ್ವ, ಯುದ್ಧ, ಜಗಳಗಳು ಸಹ ಇಲ್ಲಿ ಕವಿಯ ಮನಸ್ಸನ್ನು ಘಾಸಿಗೊಳಿಸಿರುವುದನ್ನು ನೋಡಬಹುದು. ಒಂದು ಆಕ್ರಂದನ ಕವಿತೆಯನ್ನು ಪದೇಪದೇ ಅಸ್ವಸ್ಥ ಮಾಡುತ್ತಿರುವುದನ್ನು ಕವಿತೆಯ ಆಳದಲ್ಲಿ ಕಾಣಬಹುದು. ಅದು ಸಾಮಾಜಿಕವಾದ, ರಾಜಕೀಯವಾದ ಅಥವಾ ಪ್ರೇಮವಾದವೇ ಆಗಿರಬಹುದು. ಒಂದಲ್ಲ ಒಂದು ರೀತಿಯಿಂದ ಕವಿಯಾಳದಲ್ಲಿ ಕೂಗುವ ಆಕ್ರಂದನದ ಅಳಲು ಪದಗಳಾಟದಲ್ಲಿ ಸುರಿದುದನ್ನು ಕಾಣಬಹುದಾಗಿದೆ.

ಶೋಭಾ ನಾಯಕ ಅವರು ಕಾವ್ಯ, ಚಿತ್ರಕಲೆ, ಸಂಶೋಧನೆ ಹಾಗೂ ಅನುವಾದ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಬಹುಮುಖ ಪ್ರತಿಭೆ. ‘ಶಯ್ಯಾಗೃಹದ ಸುದ್ದಿಗಳು’, ‘ಅರ್ಧ ಮುಖಗಳ ಶಹರು’ ಕವನ ಸಂಕಲನಗಳ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.


