ಬೆಳಗ್ಗಿನಿಂದ ಸಾಯಂಕಾಲದ ತನಕ ಕಛೇರಿಯ ಜಗಲಿಯಲ್ಲಿ, ವಕೀಲರ ಬೈಠಾಕಿನಲ್ಲಿ, ಜಮೀನ್ದಾರರ ಸಭೆಯಲ್ಲಿ ಕಾಲಕಳೆಯುತ್ತಿದ್ದ ರಾಯರು ಅಂದು ಬೇಗನೆ ಹಿಂದಿರುಗಿದುದನ್ನು ಕಂಡು ಎಲ್ಲರಿಗೂ ಆಶ್ಚರ್ಯವಾಯಿತು. ರಿಕ್ವಿಜಿಶನ್ ಅಧಿಕಾರಿಗಳು ನಾಳೆ ಗ್ರಾಮಕ್ಕೆ ತನಿಖೆಗೆ ಬರುವರೆಂಬ ಗುಪ್ತವಾರ್ತೆಯೇ ಅವರ ಬರೋಣಕ್ಕೆ ಕಾರಣವಾಗಿತ್ತು. ಅಧಿಕಾರಿಗಳು ತಮ್ಮಂಥವರ ಮಾಳಿಗೆ ಮನೆಗಳನ್ನು ಮಾತ್ರ ಜಡ್ತಿ ಮಾಡುವರಲ್ಲದೆ ಗಿರಿಜೆಯರಂತಹ ಜೋಪಡಿಗಳಿಗೆ ಬಗ್ಗಿಕೊಂಡು ನುಗ್ಗಲಾರರೆಂದು ಅವರು ತಿಳಿದಿದ್ದರು. ತಮ್ಮಲ್ಲಿರುವ ಅಕ್ಕಿಯು ಅಧಿಕಾರಿಗಳ ಕಣ್ಣಿಗೆ ಬಿದ್ದರೆ ತಾನು ಕಷ್ಟನಷ್ಟಗಳಿಗೆ ಗುರಿಯಾಗಬೇಕಾದೀತೆಂದೂಹಿಸಿ, ಇದನ್ನು ತಪ್ಪಿಸಲು ಗಿರಿಜೆಯ ಜೋಪಡಿಯಲ್ಲಿ ಕೆಲವು ಮುಡಿಗಳನ್ನು ಬಚ್ಚಿಡುವುದೆಂದು ವಕೀಲರ ಹಾಗೂ ಕೆಲವು ಅನುಭವಶಾಲಿಗಳ ಸೂಚನೆ ಮೇರೆಗೆ ರಾಯರು ನಿರ್ಣಯಿಸಿದ್ದರು.
ಡಾ. ಬಿ. ಜನಾರ್ದನ ಭಟ್ ಸಾದರಪಡಿಸುವ ಓಬಿರಾಯನಕಾಲದ ಕಥಾ ಸರಣಿಯಲ್ಲಿ ಫ್ರಾನ್ಸಿಸ್ ದಾಂತಿ ಬರೆದ ಕಥೆ “ರಾಯರ ಬಾವಿ”

 

ಗಿರಿಜೆಯದು ಚಿಕ್ಕ ಸಂಸಾರ. ಅವಳ ಗಂಡ ಗಿರಿಯನು ಸಾಯುವ ಕಾಲಕ್ಕೆ ಇಪ್ಪತ್ತು ವರುಷ ಪ್ರಾಯದ ತನಗೊಪ್ಪಿಸಿ ಹೋಗಿದ್ದ ಒಂದು ವರುಷದ ಕರಿಯನನ್ನು ಐದು ವರುಷಗಳವರೆಗೆ ಸಾಕಿ ಆರು ವರುಷಕ್ಕೆ ತಂದಿಟ್ಟಿದ್ದಳು. ಚಿಕ್ಕ ಸಂಸಾರವಾದರೂ ಚೊಕ್ಕವಾಗಿ ಸಾಗುತ್ತಿತ್ತು. ಗಿರಿಜೆಯದು ಸರಳ ಮನಸ್ಸು. ಅವಳಂತಹ ವಿಧವೆಯರು ಸಮಾಜದ ಕಟ್ಟಳೆಗೆ ಬೆದರಿ ವಿವಾಹವಾಗದೆ ಉಳಿಯುತ್ತಿದ್ದರೆ ಅವಳು ಸತ್ತು ಸ್ವರ್ಗದಲ್ಲಿರುವ ಗಿರಿಯನು ಎಲ್ಲಿ ತನ್ನ ಮೇಲೆ ಸಿಟ್ಟುಗೊಳ್ಳುವನೋ ಎಂದು ಹೆದರಿ ಮದುವೆಯಾಗದೆ ಉಳಿದಿದ್ದಳು.

ಸನ್ನಿವೇಶವು ಹಲವು ಬಾರಿ ಕದಡಿಸುವುದಿತ್ತು ಅವಳ ನಿರ್ಧಾರವನ್ನು. ಆದರೆ ಅದೊಂದು ಕ್ಷಣ ಮಾತ್ರ. ‘ನೀರೆಳೆಯಲು ಹೋಗುವ, ಬಾ ಗಿರಿಜಾ’ ಎಂದು ಗಿರಿಯನಾಡುತ್ತಿದ್ದ ತುಂಬ ಪ್ರೇಮದ ಮಾತನ್ನು ಜ್ಞಾಪಿಸಿಕೊಂಡೊಡನೆ ಅದು ಮಾಯವಾಗುತ್ತಿತ್ತು; ನಿರ್ಧಾರವು ಮತ್ತಷ್ಟು ಗಟ್ಟಿಯಾಗುತ್ತಿತ್ತು. ‘ಗಿರಿಜಾ… ನನ್ನ ಕುಡಿಯನ್ನು ನೀರೆರೆದು ಕಾಪಾಡು’ ಎಂದು ಪ್ರಾಣೋತ್ಕೃಮಣ ಕಾಲದಲ್ಲಿ ಗಿರಿಯನಾಡಿದ್ದ ಅಂತಿಮೋಕ್ತಿಯನ್ನೂ ಅದರ ಭಾವಾರ್ಥವನ್ನೂ ಅವಳು ಸಾಯುವ ತನಕ ಮರೆಯಲಾರದವಳಾಗಿದ್ದಳು. ಗಿರಿಜೆಗೆ ಅವಳ ತಾಯಿ ಗಳಿಸಿಟ್ಟಿದ್ದ ಆಸ್ತಿಯೆಂದರೆ ಗಂಡ – ಗಿರಿಯ. ಗಂಡನು ಮಾಡಿಕೊಟ್ಟಿದ್ದ ಬದುಕೆಂದರೆ ಮಗ – ಕರಿಯ. ತನ್ನ ಧನಿಯಾದ ರಾಯರ ಮನೆಯಲ್ಲಿ ಕೂಲಿ ಕೆಲಸ ಮಾಡಿ ಮುಸುರೆ ತೊಳೆದು ದಿನಕ್ಕೆರಡು ಪಾವು ಅಕ್ಕಿ, ರಾಯರ ಮನೆಯವರುಂಡುಳಿದ ಒಂದು ಮುಷ್ಟಿ ಅನ್ನ, ಇದಿಷ್ಟರಿಂದ ಸುಖವಾಗಿ ಸಂಸಾರ ಸಾಗಿಸುತ್ತಿದ್ದಳು.

******

ವಿಶ್ವದೆಲ್ಲೆಡೆಯಲ್ಲೂ ಯುದ್ಧ – ಯುದ್ಧವೆಂಬ ಭಯಂಕರ ಕೂಗು ಹಬ್ಬಿತ್ತು. ಮುಡಿಗಳ ಮೇಲೆ ಮುಡಿಗಳನ್ನು ಕಟ್ಟಿ ಹಾಕಿ ಕಾಳಸಂತೆ ಮಾಡುತ್ತಾ ತನಿಖೆಗೆ ಬಂದಲ್ಲಿ ಕಾಡುಪೊದೆಗಳಲ್ಲಿ ಅಡಗಿಸಿಟ್ಟು ಬಡಜನರ ಗೋಣ್ಮುರಿಯುವ ಬಂಡವಾಳಶಾಹಿಗಳ ಬಾಯಿಯಿಂದಲೂ, ಬಂಗಾಲದಂತಹ ಬರಗಾಲವು ಬಂದು ಕಂಗಾಲು ಮಾಡಬಹುದಾದ ದುಸ್ಥಿತಿಯಿಂದಲೂ ಬಡಜನರನ್ನು ತಪ್ಪಿಸಲಿಕ್ಕೋಸುಗ ಎಲ್ಲೆಲ್ಲೂ ದೇಶರಕ್ಷಣಾ ಕಾನೂನುಗಳು ಹೊರಬಿದ್ದಿದ್ದುವು; ಹಸುಗೆ ಕಾರ್ಡುಗಳು ಹೊರಟ್ಟಿದ್ದುವು. ಈ ಕ್ರಮದಿಂದ ಗಿರಿಜೆಗೆ ರಾಯರ ಮನೆಯಲ್ಲಿ ದೊರೆಯುತ್ತಿದ್ದ ಪಾವಕ್ಕಿ – ಮುಷ್ಟಿ ಅನ್ನಕ್ಕೆ ಧಕ್ಕೆ ತಗಲಿತು. ಎಲ್ಲಾ ಬಡವರಂತೆ ಅವಳಿಗೂ ಹಸುಗೆಯ ಕಾರ್ಡು ಸಿಕ್ಕಿತ್ತು. ಸಿಕ್ಕಿದುದನ್ನು ಕುದಿಸಿ ತಿಳಿಯನ್ನು ತಾನು ಕುಡಿದು ಅನ್ನವನ್ನು ಕರಿಯನಿಗಿಕ್ಕಿ ತೃಪ್ತಳಾಗಿದ್ದಳು. ಯುದ್ಧ, ಹಿಟ್ಲರ್, ಜರ್ಮನಿ, ರೇಶನ್, ಕಂಟ್ರೋಲು ಮೊದಲಾದ ನವಪದಗಳನ್ನು ಅವಳೂ ಕೇಳಿದ್ದಳು.

******

ಅವಳ ಧನಿರಾಯರು ಗ್ರಾಮದ ಆಢ್ಯ ಸದ್ಗೃಹಸ್ಥರು. ಮೊನ್ನೆ ತಾನೇ ಅವರನ್ನು ಗ್ರಾಮದ ‘ಫುಡ್ ರಿಲೀಫ್ ಕಮಿಟಿ’ಯ ಕಾರ್ಯದರ್ಶಿಯನ್ನಾಗಿ ಅಧಿಕಾರಿಗಳು ಆರಿಸಿದ್ದರು. ರಾಯರಿಗೆ ಗಿರಿಜೆಯಂತಹ ಬಿಡುಒಕ್ಕಲುಗಳು ಮಾತ್ರವಲ್ಲದೆ ಎರಡೂವರೆ ಕೋರ್ಜಿವರೆಗೆ ಗೇಣಿ ಕೊಡುವ ಚಾಲಗೇಣಿ ಒಕ್ಕಲುಗಳು ಇದ್ದರು. ಗೇಣಿಯನ್ನು ಆದಷ್ಟು ಬೇಗನೆ ವಸೂಲು ಮಾಡಿ, ಕಾರ್ತಿ ತಿಂಗಳಾರಂಭದಿಂದ ಕನ್ಯಾ ತಿಂಗಳಾಂತ್ಯದವರೆಗೂ ಒಕ್ಕಲುಗಳಿಗೆ ಅಕ್ಕಿಯನ್ನು ಸಾಲ ಕೊಟ್ಟು, ಒಂದಕ್ಕೆ ಎರಡರಂತೆ ವಸೂಲು ಮಾಡುತ್ತಿದ್ದ ರಾಯರು, ಕೇಳಿದರೆ ಕುಬೇರನಿಗೂ ಕೈಕಡ ಕೊಡಲು ಶಕ್ತರಿದ್ದರು. ಅವರ ಪತ್ನಿ ಶ್ರೀಮತಿಯವರು ಮಾಳಿಗೆ ಮೆಟ್ಟಲುಗಳಿಂದ ಕೆಳಗಿಳಿಯುವುದು, ಗಿರಿಜೆಯು ಮಾಳಿಗೆ ಮೆಟ್ಟಿಲುಗಳನ್ನು ಹತ್ತುವಷ್ಟೇ ಅಪರೂಪವಾಗಿ. ಒಮ್ಮೊಮ್ಮೆ ‘ಅಮ್ಮನವರು ಬಿಸಿಲನ್ನು ಕಾಣಬಾರದು ತಾನು ನೆರಳನ್ನು ನೋಡಬಾರದು. ಇದಾವ ನ್ಯಾಯ?’ ಎಂದು ಗಾಳಿ ಬಿಸಿಲೆನ್ನದೆ ಗೇಯುವಾಗ ಅವಳೆಣಿಸುವುದಿತ್ತು. ‘ಛೆ, ಇದು ಬರಿಯ ಭ್ರಮೆ; ಹೀಗೆ ಯೋಚಿಸುತ್ತಾ ಕುಳಿತರೆ ತಾನೇನಾದರೂ ಅವರಂತಾಗಬಹುದೇ’ ಎಂದು ಅವಳೇ ಅವಳಷ್ಟಕ್ಕೆ ಸಮಜಾಯಿಸಿಕೊಳ್ಳುವುದೂ ಇತ್ತು.

******

ಎಂದಿನಂತೆ ಅಂದು ಕೂಡಾ ಗಿರಿಜೆಯು ರಾಯರಲ್ಲಿ ಕೆಲಸಕ್ಕೆ ಹೋಗಿದ್ದಳು. ಬೆಳಗ್ಗಿನಿಂದ ಸಾಯಂಕಾಲದ ತನಕ ಕಛೇರಿಯ ಜಗಲಿಯಲ್ಲಿ, ವಕೀಲರ ಬೈಠಾಕಿನಲ್ಲಿ, ಜಮೀನ್ದಾರರ ಸಭೆಯಲ್ಲಿ ಕಾಲಕಳೆಯುತ್ತಿದ್ದ ರಾಯರು ಅಂದು ಬೇಗನೆ ಹಿಂದಿರುಗಿದುದನ್ನು ಕಂಡು ಎಲ್ಲರಿಗೂ ಆಶ್ಚರ್ಯವಾಯಿತು. ರಿಕ್ವಿಜಿಶನ್ ಅಧಿಕಾರಿಗಳು ನಾಳೆ ಗ್ರಾಮಕ್ಕೆ ತನಿಖೆಗೆ ಬರುವರೆಂಬ ಗುಪ್ತವಾರ್ತೆಯೇ ಅವರ ಬರೋಣಕ್ಕೆ ಕಾರಣವಾಗಿತ್ತು. ಅಧಿಕಾರಿಗಳು ತಮ್ಮಂಥವರ ಮಾಳಿಗೆ ಮನೆಗಳನ್ನು ಮಾತ್ರ ಜಡ್ತಿ ಮಾಡುವರಲ್ಲದೆ ಗಿರಿಜೆಯರಂತಹ ಜೋಪಡಿಗಳಿಗೆ ಬಗ್ಗಿಕೊಂಡು ನುಗ್ಗಲಾರರೆಂದು ಅವರು ತಿಳಿದಿದ್ದರು. ತಮ್ಮಲ್ಲಿರುವ ಅಕ್ಕಿಯು ಅಧಿಕಾರಿಗಳ ಕಣ್ಣಿಗೆ ಬಿದ್ದರೆ ತಾನು ಕಷ್ಟನಷ್ಟಗಳಿಗೆ ಗುರಿಯಾಗಬೇಕಾದೀತೆಂದೂಹಿಸಿ, ಇದನ್ನು ತಪ್ಪಿಸಲು ಗಿರಿಜೆಯ ಜೋಪಡಿಯಲ್ಲಿ ಕೆಲವು ಮುಡಿಗಳನ್ನು ಬಚ್ಚಿಡುವುದೆಂದು ವಕೀಲರ ಹಾಗೂ ಕೆಲವು ಅನುಭವಶಾಲಿಗಳ ಸೂಚನೆ ಮೇರೆಗೆ ರಾಯರು ನಿರ್ಣಯಿಸಿದ್ದರು.

ಪಾಪ, ಹಳ್ಳಿಯ ಹೆಂಗಸಿಗೆ ರೇಶನ್ ಕಾರ್ಡನ್ನು ಉಪಯೋಗಿಸುವವರ ಮನೆಯಲ್ಲಿ ಅಕ್ಕಿ ದಾಸ್ತಾನಿರಬಾರದೆಂಬ ಕಾನೂನೇನು ಗೊತ್ತು? ಗಿರಿಜೆಯು ಒಪ್ಪಿದಳು. ಧನಿಯು ಹೇಳುವಾಗ ಅಲ್ಲವೆನ್ನಲಾಗುವುದೆ? ಒಕ್ಕಲು ಹೋಗು ಎಂದರೆ? ರಾಯರು ಮಾತು ಮುಂದುವರಿಸಿ ‘ಒಂದು ವೇಳೆ ಮುಡಿಗಳು ಅಧಿಕಾರಿಗಳ ಕಣ್ಣಿಗೆ ಬಿದ್ದರೆ ನಿನ್ನವೇ ಎಂದು ಹೇಳಿಬಿಡು’ ಎಂದು ಬುದ್ಧಿವಾದ ಹೇಳಿದರು. ಗಿರಿಜೆಯು ಒಪ್ಪಿಕೊಂಡು ಗಿರಿಯನಾಣೆ ಹಾಕಿ ಮಾತುಕೊಟ್ಟಳು.

ಗಿರಿಜೆಗೆ ಅವಳ ತಾಯಿ ಗಳಿಸಿಟ್ಟಿದ್ದ ಆಸ್ತಿಯೆಂದರೆ ಗಂಡ – ಗಿರಿಯ. ಗಂಡನು ಮಾಡಿಕೊಟ್ಟಿದ್ದ ಬದುಕೆಂದರೆ ಮಗ – ಕರಿಯ. ತನ್ನ ಧನಿಯಾದ ರಾಯರ ಮನೆಯಲ್ಲಿ ಕೂಲಿ ಕೆಲಸ ಮಾಡಿ ಮುಸುರೆ ತೊಳೆದು ದಿನಕ್ಕೆರಡು ಪಾವು ಅಕ್ಕಿ, ರಾಯರ ಮನೆಯವರುಂಡುಳಿದ ಒಂದು ಮುಷ್ಟಿ ಅನ್ನ, ಇದಿಷ್ಟರಿಂದ ಸುಖವಾಗಿ ಸಂಸಾರ ಸಾಗಿಸುತ್ತಿದ್ದಳು.

ಸುಮಾರು ಅರ್ಧರಾತ್ರಿಯ ಸಮಯ, ಜನರಿಗಿರುವಂತೆ ನಿದ್ದೆ – ಚಳಿಗಳಿಗೆ ಬಡವ ಬಲ್ಲಿದರೆಂಬ ಭೇದವಿದೆಯೇ? ಹಗಲುಟ್ಟಿದ್ದನ್ನೇ ರಾತ್ರಿಯಲ್ಲಿ ಹೊದೆದುಕೊಂಡು ಮಲಗಿದ್ದರು, ಗಿರಿಜೆ – ಕರಿಯರು. ಗಿರಿಜೆಯ ಜೋಪಡಿಗೆ ಬಾಗಿಲಿರಲಿಲ್ಲ. ಇತ್ತ ರಾಯರು ಇದುವೇ ತಕ್ಕ ಸಮಯವೆಂದು ತನ್ನ – ಒಕ್ಕಲುಗಳಿಂದ ಹತ್ತು ಮುಡಿ ಅಕ್ಕಿಯನ್ನು ಹೊರಿಸಿಕೊಂಡು ಗಿರಿಜೆಯ ಜೋಪಡಿಗೆ ಬಂದು ಕರೆದರೆ ಸದ್ದಾಗುವುದೆಂದು ಟೋರ್ಚ್ ಹಾಕಿದರು ಒಳಗೆ. ಹಗಲೆಲ್ಲಾ ದುಡಿದು ನಿದ್ದೆಯಲ್ಲಿ ಮೈಮರೆತು ಅರ್ಧ ಬತ್ತಲೆಯಾಗಿ ಬಿದ್ದುಕೊಂಡಿದ್ದ ಗಿರಿಜೆಯನ್ನು ಕಂಡು ರಾಯರ ಮನಸ್ಸಿನ ಒಳದನಿಯೊಂದು ಏನೋ ಉಸಿರಿತು ಅವರೊಡನೆ.

ಫಕ್ಕನೆ ಬೆಳಕು ಬೆಳಗಿದ್ದನ್ನು ಕಂಡು ಎಚ್ಚೆತ್ತು ಗಿರಿಜೆಯು ರಾಯರಾಡಿದ್ದ ಮಾತುಗಳನ್ನು ಸ್ಮರಣೆಗೆ ತಂದುಕೊಂಡು ಹಣತೆ ಹೊತ್ತಿಸಿ ಹೊರಗೆ ತಂದಿಟ್ಟಳು. ರಾಯರು ಮುಡಿಗಳನ್ನು ಜೋಪಡಿಯೊಳಗಿರಿಸಿ ಹೊರಟು ಹೋದರು. ಗಿರಿಜೆಯು ತನ್ನ ಜೋಪಡಿಯು ಮುಡಿಗಳಿಂದ ತುಂಬಿರುವುದನ್ನು ಕಂಡು ಹಿಗ್ಗಿದಳು ಆನಂದದಿಂದ. ತನ್ನ ಜೀವಮಾನದಲ್ಲಿ ಇಷ್ಟೊಂದು ಮುಡಿಗಳನ್ನು ಕೂಡಿ ಹಾಕಬಹುದೇ, ಎಂದಾಲೋಚಿಸತೊಡಗಿದಳು. ಕರಿಯನನ್ನೆಬ್ಬಿಸಿ ‘ನೋಡು ಮಗು, ನಮ್ಮ ಮನೆಯಲ್ಲಿ ಇಂದು ಎಷ್ಟು ಮುಡಿಗಳಿವೆ ನೋಡು, ನೀನು ದೊಡ್ಡವನಾದ ಮೇಲೆ ಹೀಗೆಯೇ ಮುಡಿಗಳನ್ನು ಕೂಡಿಹಾಕುವಿಯಾ?’ ಎಂದು ಕೇಳಿದಳು. ಕರಿಯನು ನಿದ್ದೆಗಣ್ಣಿನಲ್ಲಿ ಹೂಂಗುಟ್ಟಿದನು. ಗಿರಿಜೆಗೆ ಅಂಗೈಯಲ್ಲಿ ಅಮೃತವಿದ್ದಂತೆ ತೋರಿತು ಕರಿಯನ ಉತ್ತರ ಕೇಳಿ. ಮಗನನ್ನು ಮುದ್ದಿಟ್ಟುಕೊಂಡು ಹಾಗೆಯೇ ಮಲಗಿಕೊಂಡಳು.

******

ಮರುದಿನ ಊರಲ್ಲೆಲ್ಲಾ ಗಲಾಟೆಯೇ ಗಲಾಟೆ! ರಿಕ್ವಿಜಿಶನ್ ಅಧಿಕಾರಿಯು ಗ್ರಾಮಾಧಿಕಾರಿಗಳೊಡನೆ ತನಿಖೆ ಮಾಡುತ್ತಾ ರಾಯರ ಮನೆಗೂ ಬಂದು ಅಲ್ಲಿಯೂ ತನಿಖೆ ನಡೆಸಿ ಅವರಲ್ಲಿದ್ದ ಎಂಟು ಮುಡಿ ಅಕ್ಕಿಯನ್ನು ಅವರ ಖರ್ಚಿಗೆಂದಿರಿಸಿ ಕಾಫಿ ಟಿಫಿನು ಮುಗಿಸಿ ಹೊರಡಲನುವಾಗಿ ಅಂಗಳಕ್ಕಿಳಿದರು. ಹಠಾತ್ತಾಗಿ ಅವರ ದೃಷ್ಟಿಯು ಜೋಪಡಿಯ ಬಳಿಯಲ್ಲಿ ನಿಂತುಕೊಂಡಿದ್ದ ಗಿರಿಜೆಯತ್ತ ಕಡೆ ತಿರುಗಿತು. ‘ಛೆ, ಅವಳೆದುರಿನಲ್ಲಿ ತನ್ನ ಅಧಿಕಾರವನ್ನು ಪ್ರದರ್ಶಿಸದಿದ್ದರೆ ತಾನು ಅಧಿಕಾರಿಯಾಗಿ ಫಲವೇನು ಬಂತು?’ ಎಂದೆಣಿಸಿ ಗ್ರಾಮಾಧಿಕಾರಿಗಳೊಡನೆ ಗಿರಿಜೆಯ ಜೋಪಡಿಯನ್ನು ಹೊಕ್ಕರು. ನೋಡುವುದೇನಿದೆ? ನಂಬಲಾರದ ನೋಟ! ಹತ್ತು ಮುಡಿಗಳು. ಗ್ರಾಮಾಧಿಕಾರಿಗಳಿಂದ ಗಿರಿಜೆಯು ಕಾರ್ಡನ್ನು ಉಪಯೋಗಿಸುತ್ತಿರುವಳೆಂದು ತಿಳಿದು ಇವಾರ ಮುಡಿಗಳೆಂದು ಕೇಳಿದರು. ಗಿರಿಜೆಗೆ ಹೆದರಿಕೆಯಿಂದ ದೇಹವು ಕಂಪಿಸತೊಡಗಿತಾದರೂ ಗಿರಿಯನಾಣೆ ಹಾಕಿದ ಬಳಿಕ ಮಾತು ತಪ್ಪುವಳೆ? ತನ್ನವೇ ಎಂದಳು. ಅಧಿಕಾರಿಯು ಮುಡಿಗಳನ್ನು ರಿಕ್ವಿಜಿಶನ್ ಮಾಡಿಸಿ, ರಾಯರ ಮನೆಯಲ್ಲಿ ಅಮಾನತಿಡಿಸಿ, ಗಿರಿಜೆಯ ಹಸುಗೆಯ ಕಾರ್ಡಿನ ನಂಬರನ್ನು ಬರೆದುಕೊಂಡು ಹೊರಟುಹೋದರು. ಇತ್ತ ರಾಯರು ಗಿರಿಜೆಗೆ ಹೆದರಬೇಡ ನಾನಿದ್ದೇನೆ ಎಂದು ಮಾತು ಕೊಟ್ಟರು.

******

ಹಸುರು ಕಾರ್ಡನ್ನು ಉಪಯೋಗಿಸುತ್ತಿದ್ದು ಮನೆಯಲ್ಲಿ ಹತ್ತು ಮುಡಿ ಅಕ್ಕಿಯನ್ನು ದಾಸ್ತಾನು ಮಾಡಿದ ತಪ್ಪಿಗಾಗಿ ಗಿರಿಜೆಗೆ ನೂರೈವತ್ತು ರೂಪಾಯಿ ಜುಲುಮಾನೆ; ಜುಲುಮಾನೆ ತೆರಲು ತಪ್ಪಿದ್ದಲ್ಲಿ ಎರಡು ತಿಂಗಳ ಕಠಿಣ ಸಜೆಯೆಂದು ವಿಧಿಸಲಾಯಿತು. ಕಾಸಿಗೂ ಗತಿಯಿಲ್ಲದಾಕೆ ನೂರೈವತ್ತು ರೂಪಾಯಿಗಳನ್ನು ಎಲ್ಲಿಂದ ಕೊಡಬಲ್ಲಳು? ಅಪೀಲು ಮಾಡುವ ಸಾಮರ್ಥ್ಯ ಅವಳಲ್ಲಿದೆಯೆ? ಆದರೆ ರಾಯರು ಮಾತು ಕೊಟ್ಟಿದ್ದಾರಲ್ಲವೇ? ಅವರಿಗೋಸುಗವಲ್ಲವೇ ಅವಳು ಈ ಜುಲುಮಾನೆಗೆ ಗುರಿಯಾದುದು. ರಾಯರು ತನ್ನನ್ನು ಜೈಲು ಸೇರಲು ಬಿಡರೆಂದು ಅವಳು ನಂಬಿದ್ದಳು. ದಾರಿಯಲ್ಲಿ ಹೋಗುತ್ತಿದ್ದ ಮಾರಿಗೆ ಅವಳ ಜೋಪಡಿಯನ್ನು ತೋರಿಸಿದವರು ರಾಯರಲ್ಲವೇ?

******

ರಾತ್ರಿಯ ಊಟದ ಹೊತ್ತಾಗಬಹುದು. ಶ್ರೀಮತಿಯವರು ತವರಿಗೆ ಹೋಗಿದ್ದುದರಿಂದ ರಾಯರು ಮಧ್ಯಾಹ್ನ ಮಾಡಿದ ಅಡುಗೆಯನ್ನೇ ರಾತ್ರಿಗೆ ಇಟ್ಟು ಉಂಡು ಗಿರಿಜೆಯ ಜೋಪಡಿಯತ್ತ ಬಂದರು. ರಾಯರ ಆಗಮನವು ರಾತ್ರಿ ಕಾಲದಲ್ಲಾದುದನ್ನು ಕಂಡು ಗಿರಿಜೆಯು ಶಂಕಿಸಿದಳು. ಅಂದಿನ ರಾತ್ರಿ ರಾಯರು ಟೋರ್ಚನ್ನು ಬೆಳಗಿಸಿ ಕಂಡ ದೃಶ್ಯವನ್ನು ಮರೆತಿರಲಿಲ್ಲ. ರಾಯರು ರೂಪಾಯಿಗಳನ್ನು ಕಟ್ಟಲು ಒಪ್ಪಿದರು. ಆದರೆ… ಆದರೆ ಎಂದೂ ಇಲ್ಲದ ಆ ಕಡೆಗಣ್ಣೋಟ ಆ ಹಾವಭಾವಗಳ ಅರ್ಥವೇನು? ರಾಯರ ಮಾತುಗಳು ಮೇರೆ ಮೀರಿದುವು. ಗಿರಿಜೆಯು ಅವರ ಆಶಾಂಕುರವು ಮುರಿಯುವಂತಹ ಉತ್ತರವನ್ನಿತ್ತಳು. ರಾಯರು ಅವಮಾನವನ್ನು ಸೈರಿಸಲಾರದೆ ರೂಪಾಯಿಗಳನ್ನು ಕೊಡಲಾರೆನೆಂದರು. ಗಿರಿಜೆಯು ರಾಯರ ಕಾಲುಗಳನ್ನು ಹಿಡಿದು ಬೇಡಿಕೊಂಡಳು. ನಿಷ್ಪಲ. ರಾಯರು ಎದ್ದು ಹೊರಟುಹೋದರು.

ಗಿರಿಜೆಗೆ ಆಕಾಶವೇ ಕಳಚಿ ಬಿದ್ದಂತಾಯಿತು. ರಾಯರ ಮಾತಿಗೊಡಂಬಡಲೇ? ಪಾಪಕಾರ್ಯ! ಗಿರಿಯನಿಗೆ ದ್ರೋಹ!! ಅದಾಗದು. ಕಾರಾಗೃಹ ಸೇರಲೆ? ಛೆ! ಅವಮಾನ. ಅವಮಾನವನ್ನೂ ಲೆಕ್ಕಿಸದೆ ಇದ್ದರೂ ಕರಿಯನ ಗತಿ? ಗಿರಿಯನ ಅಂತಿಮೋಕ್ತಿ? ಕೋಪಗೊಂಡ ರಾಯರು ಅವಳನ್ನು ಇನ್ನು – ಜೋಪಡಿಯಲ್ಲಿರಿಸಲು ಬಿಡುವರೆ? ಪ್ರಪಂಚವೇ ಶೂನ್ಯವೆನಿಸಿತವಳಿಗೆ. ಧನಿಕರೆನಿಸಿಕೊಂಡವರು ಮಳೆ ಬಂದತ್ತ ಕೊಡೆ ಹಿಡಿವರೆಂದು ಅವಳು ತಿಳಿದಿರಲಿಲ್ಲ. ರಾಯರ ಮಾತಿಗೆ ಸಮ್ಮತಿಸಿ ಬಾಳುವ ಆ ಹಾಳು ಬಾಳಿನ ಗೋಳಿಗಿಂತಲೂ ಮರಣದ ಮೌನವೇ ಲೇಸೆಂದೆನಿಸಿತವಳಿಗೆ. ನಿರ್ಗತಿಕಳಾದ ಗಿರಿಜೆಗೂ ಕರಿಯನಿಗೂ ಈಗ ಉಳಿದ ಗತಿಯೆಂದರೆ – ರಾಯರ ಬಾವಿ ಮಾತ್ರ.

(ಅಂತರಂಗ : 1945)

******

ಟಿಪ್ಪಣಿ
‘ಶ್ರೀದಾಂತಿ’ ಎಂಬ ಹೆಸರಿನಲ್ಲೇ ಪ್ರಸಿದ್ಧರಾಗಿರುವ ಫ್ರಾನ್ಸಿಸ್ ದಾಂತಿ (1922-1991) ಅವರು ಅವಿಭಜಿತ ದಕ್ಷಿಣ ಕನ್ನಡದ ಮೊದಲ ಕ್ರೈಸ್ತ ಲೇಖಕರು. ಅವರು ದಾಂತಿ, ಸಿದ್ಧಾಂತಿ, ಶ್ರೀ ದಾಂತಿ ಮತ್ತು ಚಾಣಕ್ಯ ಎಂಬ ಕಾವ್ಯನಾಮಗಳಲ್ಲಿ ಬರೆಯುತ್ತಿದ್ದರು. ಮೂಡುಬೆಳ್ಳೆ ಸಮೀಪದ ಮಣಿಪುರ ಗ್ರಾಮದಲ್ಲಿ ಜನಿಸಿದ ದಾಂತಿಯವರು ಅಲೆವೂರಿನ ಸುಬೋಧಿನಿ ಹಾಯರ್ ಪ್ರೈಮರಿ ಶಾಲೆಯಲ್ಲಿ ಅಧ್ಯಾಪಕರಾಗಿದ್ದರು. ನಂತರ ಸಿಂಡಿಕೇಟ್ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ಸೇವೆಸಲ್ಲಿಸಿ ನಿವೃತ್ತರಾದರು.
ಅವರು ‘ಸುಬೋಧಿನಿ’ ಎಂಬ ತ್ರೈಮಾಸಿಕ ಪುಸ್ತಕ ಮಾಲೆಯನ್ನು ಪ್ರಾರಂಭಿಸಿ ಉದಯೋನ್ಮುಖ ಲೇಖಕರಿಗೆ ಪ್ರೋತ್ಸಾಹ ನೀಡಿದರು. ಅವರು ಪುಸ್ತಕ ವಿಮರ್ಶೆ ಹಾಗೂ ಕತೆಗಳನ್ನು ಜಿಲ್ಲೆಯ ಪತ್ರಿಕೆಗಳಲ್ಲಿ ನಿಯಮಿತವಾಗಿ ಬರೆಯುತ್ತಿದ್ದರು. 4 ನಾಟಕ ಕೃತಿಗಳು, 2 ಪದ್ಯ ಕೃತಿಗಳು ಹಾಗೂ 7 ಜೀವನ ಚರಿತ್ರೆಯ ಕೃತಿಗಳನ್ನು ಶ್ರೀದಾಂತಿಯವರು ಪ್ರಕಟಿಸಿದ್ದಾರೆ. ಅವರ ನೂರಾರು ಲೇಖನಗಳು ಹಾಗೂ ಕತೆಗಳು ಸಂಕಲನರೂಪದಲ್ಲಿ ಬಂದಿಲ್ಲ. ಪ್ರಸ್ತುತ ಕತೆ ‘ಅಂತರಂಗ’ ಪತ್ರಿಕೆಯಲ್ಲಿ 1945ರಲ್ಲಿ ಪ್ರಕಟವಾಗಿತ್ತು.
ಈ ಕತೆಯ ಹಿನ್ನೆಲೆ: ಎರಡನೆಯ ವಿಶ್ವಯುದ್ಧದ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಅಕ್ಕಿ, ಸಕ್ಕರೆ, ಸೀಮೆ ಎಣ್ಣೆ ಮುಂತಾದ ಜೀವನಾವಶ್ಯಕ ವಸ್ತುಗಳು ಸಿಗದೆ ಬದುಕು ಬಹಳ ದುಸ್ತರವಾಗಿತ್ತು. ಅದನ್ನು ಕೂಡಾ ಕತೆಗಾರರು ತಮ್ಮ ಕೃತಿಗಳಲ್ಲಿ ಚಿತ್ರಿಸಿದ್ದಾರೆ. ಸಿಕಂದರ್ ಕಾಪು ಅವರ ‘ಬಾಟ್ಲಿವಾಲ!’ ಕತೆ ಸೀಮೆ ಎಣ್ಣೆ ಸಿಗದೆ ಬಡವರು ಪರದಾಡುತ್ತಿದ್ದುದನ್ನು ದಾಖಲಿಸಿದೆ. ಈ ಕಥಾಸರಣಿಯ ಸಂಪಾದಕನ (ಬಿ. ಜನಾರ್ದನ ಭಟ್) ‘ಉತ್ತರಾಧಿಕಾರ’ ಕಾದಂಬರಿಯಲ್ಲಿ ದ್ವಿತೀಯ ಮಹಾಯುದ್ಧ ಕಾಲದಲ್ಲಿ ಜನರಿಗೆದುರಾಗಿದ್ದ ಕಷ್ಟಗಳ ವರ್ಣನೆಯಿದೆ. ‘ಪುಂಡಗೋಳಿಯ ಕ್ರಾಂತಿ’ ಎಂದು ಕರೆಯಬಹುದಾದ ಕಥಾನಕವೊಂದು ಇದರಲ್ಲಿದ್ದು, ಜನಸಾಮಾನ್ಯರಲ್ಲಿ ಎದ್ದಿದ್ದ ಹಾಹಾಕಾರ, ಕಳ್ಳಸಂತೆಯ ವ್ಯಾಪಾರಿಯೊಬ್ಬ ಅಕ್ಕಿ ಮೂಟೆಗಳನ್ನು ಸಾಗಿಸುವಾಗ ಬಡವರ ಗುಂಪೊಂದು ಸರಕಾರದ ಭಯವನ್ನೂ ಮೆಟ್ಟಿನಿಂತು ಅಕ್ಕಿಯ ಮುಡಿಗಳನ್ನು ದರೋಡೆಮಾಡಿದ ಘಟನೆಯ ವರ್ಣನೆಯಿದೆ. ಇದು ನಿಜವಾಗಿಯೂ ನಡೆದ ಘಟನೆಯನ್ನು ಆಧರಿಸಿದೆ.
ಫ್ರಾನ್ಸಿಸ್ ದಾಂತಿಯವರ ‘ರಾಯರ ಬಾವಿ’ ಇದೇ ಕಾಲಘಟ್ಟದಲ್ಲಿ ಉಳ್ಳವರು ಅಕ್ಕಿಮುಡಿಯನ್ನು ಅಡಗಿಸಿಡುವ ಸನ್ನಿವೇಶವನ್ನು ದಾಖಲಿಸಿರುವ ಕತೆಯಾಗಿದೆ.