ಮೇಲ್ಜಾತಿಯ ಹಿಂದುಗಳನ್ನೇ ದೇವರೆಂದು ನಂಬಿ, ಅವರ ಸೇವೆಯನ್ನು ಮಾಡಿಕೊಂಡಿರುವಷ್ಟು ಕಾಲ ಹೊಲೆಯರು! ಹೊಲತಿಯರು! ಧಿಕ್ಕಾರವಿರಲಿ – ಒಡಹುಟ್ಟಿದ ಹಿಂದೂ ಮಾತೆಯ ಮಕ್ಕಳನ್ನು ಈ ಪ್ರಕಾರ ದೂರ ನಿಲ್ಲಿಸುವ ಈ ಸಮಾಜ ಪದ್ಧತಿಗೆ ಧಿಕ್ಕಾರವಿರಲಿ. ಹಿಂದೂ ಮತವನ್ನು ತಿರಸ್ಕರಿಸಿ, ಕ್ರೈಸ್ತ ಅಥವಾ ಮಹಮ್ಮದೀಯ ಮತವನ್ನು ಆದರಿಸಿ, ಅಲ್ಲಿ ಗೋಮಾಂಸಗಳನ್ನು ತಿಂದು ಬಂದರೆ, ಅದೇ ಪಂಚಮರು, ಪಾವನರಾದರು! ಪರಿಶುದ್ಧರಾದರು! ಅಂಥವರನ್ನು ಹಿಂದುಗಳು ಮುಟ್ಟಬಹುದು. ಆತಂಕವಿಲ್ಲ. ಶಾಸ್ತ್ರ ವಿರೋಧವಿಲ್ಲ.
ಡಾ. ಜನಾರ್ದನ ಭಟ್ ಸಾದರಪಡಿಸುತ್ತಿರುವ ಓಬಿರಾಯನ ಕಾಲದ ಕಥಾ ಸರಣಿಯಲ್ಲಿ ಪುಂಡೂರು ಲಕ್ಷ್ಮೀನಾರಾಯಣ ಪುಣಂಚತ್ತಾಯರು ಬರೆದ ಕತೆ “ಚೌಕಾರು ಮೇರಿ”

 

(ಚೌಕಾರು ಯಾನೆ ಮೇರಿಬಾಯಿಯು ಒಂದು ಬುಟ್ಟಿ ಸಾಮಾನನ್ನು ಹೊತ್ತುಕೊಂಡು ಬರುವಳು)

ಚೌಕಾರುಮೇರಿ : ಅಮ್ಮಾ, ಹಿಂಗಾರ, ಕೇದಿಗೆ, ಮಲ್ಲಿಗೆ, ತುಲಸಿ, ಹಾಲು, ಜೇನು, ಸೀಯಾಳ – ಇವೆಲ್ಲಾ ನನ್ನಲ್ಲಿವೆ. ಎಲ್ಲವೂ ನಿಮ್ಮ ದೇವರಿಗೆ ಯೋಗ್ಯವಾಗಿದೆ. ದೇವಸ್ಥಾನಕ್ಕೆ ಹೋಗುವಾಗ ಏನಾದರೂ ತೆಗೆದುಕೊಳ್ಳಬಾರದೇ? ಗಂಗಮ್ಮನವರೇ –

ಗಂಗಮ್ಮ : ಕೇದಿಗೆ, ಜೇನು, ಹಿಂಬಾರ, ಸೀಯಾಳ- ಇವನ್ನು ಮಾತ್ರ ನಿಮ್ಮಿಂದ ನಾವು ಪಡೆಯಬಹುದು. ತುಲಸಿ, ಮಲ್ಲಿಗೆ, ಹಾಲು- ಇವನ್ನು ನಿಮ್ಮಿಂದ ಪಡೆಯಲಾಗದೆಂದು ನಿನಗೆ ಗೊತ್ತಿಲ್ಲವೇ?

ಚೌಕಾರುಮೇರಿ : ಅದೇನಮ್ಮ ನಿಮ್ಮ ಕ್ರಮ? ಕೆಲವು ಮಾತ್ರ ಆಗಬಹುದು. ಕೆಲವು ಮಾತ್ರ ಆಗಲಾರದು – ಇದೆಂತಹ ಅಕ್ರಮ ಧರ್ಮ?

ಗಂಗಮ್ಮ : ಮುಳ್ಳಿನ ಮರದ ಕೇದಿಗೆ, ‘ಟೊಳ್ಳಿನ’ ಮರದ ಹಿಂಗಾರ, ಕಳ್ಳಿನ ಮರದ ಸೀಯಾಳ, ಗೆಲ್ಲಿನ ಮೇಲಿನ ಜೇನು ಇವನ್ನು ತೆಗೆಯುವುದಕ್ಕೆ ಎಷ್ಟು ಕಷ್ಟ ಉಂಟು! ಮರಕ್ಕೆ ಹತ್ತಬೇಕು. ಅಪಾಯಕ್ಕೆ ಗುರಿಯಾಗಬೇಕು, ಈ ಕಷ್ಟ ಯಾರಿಗೆ ಬೇಕು! ಅದುದರಿಂದ ಇಂತಹವನ್ನು ‘ಹೊಲೆಯ’ರಿಂದಾದರೂ ಪಡೆಯಬಹುದೆಂದು ಬುದ್ದಿವಂತರಾದ ನಮ್ಮ ಹಿರಿಯರು ನಿಯಮವನ್ನು ಹೇಳಿರುವರು. ಎಷ್ಟಾದರೂ ನಮ್ಮ ಹಿರಿಯರು ಜಾಣರಲ್ಲವೇ? ಯಾರಾದರೂ ಅಪಾಯಕ್ಕೆ ಗುರಿಯಾಗಬಾರದಲ್ಲವೇ? ಮತ್ತೆ ತುಲಸಿ, ಮಲ್ಲಿಗೆ, ಹಾಲು – ಇವುಗಳ ಸಂಗ್ರಹದಲ್ಲಿ ಏನೂ ಅಪಾಯವಿಲ್ಲ. ಅದಕ್ಕೆ ಪರರ ಸಹಾಯ ಬೇಕಾಗಿಲ್ಲ. ಇಷ್ಟಾದರೂ ನಮ್ಮ ನಮ್ಮ ಕೆಲಸಗಳನ್ನು ನಾವು ನಾವೇ ಮಾಡಬೇಕಲ್ಲವೇ? ಆದುದರಿಂದ ಪೂರ್ವಾಚಾರ ಧರ್ಮ ಪ್ರಕಾರ ನಾವು ಹೊಲತಿಯರಿಂದ ಪಡೆಯಬಹುದಾದ – ದೇವರಿಗೂ ಆಗಬಹುದಾದ – ಕೇದಿಗೆ, ಹಾಲು, ಹಿಂಗಾರ, ಸೀಯಾಳ, ಜೇನುಗಳನ್ನು ದೂರವಿಡು. ನಾನು ತೆಗೆದುಕೊಳ್ಳುತ್ತೇನೆ. ದುಡ್ಡು ನಾಳೆ ಕೊಡುತ್ತೇನೆ ಇಡು ಅಲ್ಲಿ.

ಚೌಕಾರುಮೇರಿ : ಗಂಗಮ್ಮನವರೇ, ಏನು ನಾನು ಹೊಲತಿಯೆಂದು ತಿಳಿದಿರೇ? ನಾನು ಕ್ರೈಸ್ತ ಜಾತಿಗೆ ಸೇರಿರುವುದು ನಿಮಗೆ ಗೊತ್ತಿಲ್ಲವೇ? ಈ ‘ಕುರುಸು’ ನಿಮ್ಮ ಕಣ್ಣಿಗೆ ಕಾಣುವುದಿಲ್ಲವೇ? ಗಂಗಮ್ಮನವರೇ, ನಾನು ಆ ಚೌಕಾರು ಅಲ್ಲ , ಈ ಮೇರಿ ಗೊತ್ತಾಯಿತೇ? ಬಾಯಿಗಳಾದವರು ತಮ್ಮ ಬುಟ್ಟಿಯಲ್ಲಿ ಸಾಯಂಕಾಲ ಮಾತ್ಸ್ಯ, ಮಾಂಸ, ಮೊಟ್ಟೆಗಳನ್ನು ಮೀನು ಮಾರ್ಕೇಟಿನಿಂದ ಕೊಂಡುಹೋಗಿ, ಅದೇ ಬುಟ್ಟಿಯಲ್ಲಿ ಮರುದಿನ ಜಾಜಿ, ಮಲ್ಲಿಗೆ, ಸಂಪಿಗೆಯನ್ನು ಹೂ ಮಾರ್ಕೇಟಿಗೆ ತಂದರೂ ಬೇಡ ಎಂದು ಹೇಳುವ ಬ್ರಾಹ್ಮಣರುಂಟೇ? ಜಾಜಿಮಲ್ಲಿಗೆಯ ಹೂಮಾಲೆಯನ್ನು ಹಲ್ಲಿನಿಂದ ಕಚ್ಚಿ ತುಂಡು ಮಾಡಿ ಕೊಟ್ಟರೂ ಬಿಟ್ಟು ಹೋಗುವ ಭಟ್ಟರುಂಟೇ? ಇವುಗಳು ಬೇಡವೆಂದು ಹೇಳುವ ದೇವರುಂಟೇ? ಈ ಬುಟ್ಟಿಯು ಆ ಹಿಂದಿನ ಮರಿಯಮ್ಮನ ಕಾಲದಿಂದ ಕಾಯಿಪಲ್ಯ, ಹೂ, ಗೇರುಬೀಜಗಳನ್ನು ಹೂ ಮಾರ್ಕೇಟಿಗೆ ತರುವುದು, ಸಂಜೆ ಮಾಂಸ, ಮೊಟ್ಟೆ, ಮತ್ಸ್ಯಗಳನ್ನು ಮೀನು ಮಾರ್ಕೇಟಿನಿಂದ ಹೊರುವುದು – ಈ ಪ್ರಕಾರ ತನ್ನ ಮನೆಯ ಹಾಗೂ ಪರರ ಮನೆಯ ಆಹಾರಗಳನ್ನು ತುಂಬಿಸಿಕೊಳ್ಳುತ್ತಿದ್ದು, ಇಂದು ಈಗ ನನ್ನನ್ನು ಕ್ರೈಸ್ತಜಾತಿಗೆ ಸೇರಿಸಿದ ಅಮ್ಮನ ದಯದಿಂದ ಈ ಮೇರಿ ಬಾಯಿಯ ಕೈಗೆ ಬಂದಿರುವುದು. ಎಷ್ಟು ಪರಿಶುದ್ಧಳಾದ ನನ್ನಮ್ಮನ ಕೈಯಿಂದ ನನಗೆ ಸಿಕ್ಕಿರುವುದೆಂದು ನಿಮಗೆ ಗೊತ್ತೇ? ಏನು ಹೇಳುವಿರಿ? ನೋಡಿರಿ ಕುರುಸು – ನಾನು ಮೇರಿಬಾಯಿ.

ಗಂಗಮ್ಮ : ಓಹೋ! ನೀನು ಕ್ರೈಸ್ತಳಾದ ಸಂಗತಿ ನನಗೆ ಗೊತ್ತಿರಲಿಲ್ಲ, ಮೇರಿಬಾಯಿ, ಸಂತೋಷವಾಯಿತು. ತಿಳಿಯದೆ ನೂಕಾಡಿದೆನು. ಕ್ಷಮಿಸಬೇಕು. ನಿನ್ನಂತಹ ಬಾಯಿಗಳಿಲ್ಲದಿದ್ದರೆ ಈ ಊರ ಜನರ ಬಾಯಿಗೆ ಮಣ್ಣಾಗುತ್ತಿತ್ತು. ದೇವರಿಗೆ ಹೂವೇ ಇಲ್ಲವಾಗಿತ್ತು. ಮಂಗಳೂರಿನಂತಹ ಪಟ್ಟಣದ ಜನರ ಮತ್ತು ದೇವರ ಜೀವನವು ಬಾಯಿಗಳ ಕೈಯಲ್ಲಿದೆ. ಮೇರಿಬಾಯಿ, ಎಲ್ಲಿ? ನಿನ್ನ ಬುಟ್ಟಿಯಲ್ಲಿರುವ ಎಲ್ಲಾ ವಸ್ತುಗಳನ್ನೂ ತೆಗೆದುಕೊಂಡು ನನ್ನೊಡನೆ ಬಾ. ದೇವರ ಮಂಟಪದಲ್ಲಿ ತಂದಿಡು. ದುಡ್ಡು ನಾಳೆ ಕೊಡುತ್ತೇನೆ. ಹೋಗುವಾ. (ಎಂದು ಹೊರಡುವಳು)

ಚೌಕಾರುಮೇರಿ : ಆಗಬಹುದಮ್ಮಾ. (ಸ್ವಗತಂ) ಇದೀಗ ಹಿಂದೂಶಾಸ್ತ್ರ. ಬಡವಳಾದ ನಾನು ಹೊಲತಿ ಚೌಕಾರುವಾಗಿದ್ದರೆ ಇಂದು ಈ ಗಂಗಮ್ಮನವರು ಈ ಮಾತನ್ನು ಹೇಳುತ್ತಿದ್ದರೇ? ಮೇಲ್ಜಾತಿಯ ಹಿಂದುಗಳನ್ನೇ ದೇವರೆಂದು ನಂಬಿ, ಅವರ ಸೇವೆಯನ್ನು ಮಾಡಿಕೊಂಡಿರುವಷ್ಟು ಕಾಲ ಹೊಲೆಯರು! ಹೊಲತಿಯರು! ಧಿಕ್ಕಾರವಿರಲಿ – ಒಡಹುಟ್ಟಿದ ಹಿಂದೂ ಮಾತೆಯ ಮಕ್ಕಳನ್ನು ಈ ಪ್ರಕಾರ ದೂರ ನಿಲ್ಲಿಸುವ ಈ ಸಮಾಜ ಪದ್ಧತಿಗೆ ಧಿಕ್ಕಾರವಿರಲಿ. ಹಿಂದೂ ಮತವನ್ನು ತಿರಸ್ಕರಿಸಿ, ಕ್ರೈಸ್ತ ಅಥವಾ ಮಹಮ್ಮದೀಯ ಮತವನ್ನು ಆದರಿಸಿ, ಅಲ್ಲಿ ಗೋಮಾಂಸಗಳನ್ನು ತಿಂದು ಬಂದರೆ, ಅದೇ ಪಂಚಮರು, ಪಾವನರಾದರು! ಪರಿಶುದ್ಧರಾದರು! ಅಂಥವರನ್ನು ಹಿಂದುಗಳು ಮುಟ್ಟಬಹುದು. ಆತಂಕವಿಲ್ಲ. ಶಾಸ್ತ್ರ ವಿರೋಧವಿಲ್ಲ.

ಹುಲಿ, ಬೆಕ್ಕು, ಹಂದಿ, ಕೋಣಗಳೂ ಸ್ವಜಾತಿಯ ಮೃಗಗಳನ್ನು ಮುಟ್ಟುತ್ತವೆ, ಒಂದಾಗಿ ಕೂಡುತ್ತವೆ. ಆದರೆ ಮಾನವ ವರ್ಗದಲ್ಲಿ ಒಂದೇ ರೀತಿಯ ರಕ್ತ, ನರ, ನಾಡಿಗಳುಳ್ಳ ಮನುಷ್ಯ ವರ್ಗದಲ್ಲಿ , ಹಿಂದೂ ಜಾತಿಯಲ್ಲಿ ಒಬ್ಬರನ್ನೊಬ್ಬರು ಮುಟ್ಟಕೂಡದಂತೆ. ಜಾತಿಗೆ ಜಾತಿ ಪಗೆ! ಅಯ್ಯೋ! ಏನನ್ಯಾಯವಿದು? ಎಂತಹ ಅನೀತಿಯಿದು? ಹಿಂದೂ ಸಮಾಜಪದ್ಧತಿಯೆ! ಇದನ್ನು ಕಂಡೇ ನಾನು ಕ್ರೈಸ್ತಜಾತಿಗೆ ಸೇರಲಿಕ್ಕೆ ಕಾರಣ. ಪಂಚಮಳಾಗಿದ್ದವರೆಗೆ ಸತ್ರಸಾಲೆಗಳಲ್ಲಿ , ದಾರಿ ಕೇರಿಗಳಲ್ಲಿ ಚೌಕಾರುವಿಗೆ ಎಲ್ಲಿಯೂ ಪ್ರವೇಶವಿಲ್ಲ. ಆದರೆ ಈ ಮೇರಿಬಾಯಿಗೆ ಎಲ್ಲಿ ಹೋಗುವುದಕ್ಕೂ ಆತಂಕವಿಲ್ಲ.

ಆದುದರಿಂದಲೇ ಈ ಸಾಮಾಗ್ರಿಗಳನ್ನೆಲ್ಲಾ ದೇವಸ್ಥಾನದೊಳಗೆ ತಂದಿಡು – ಎಂದು ಗಂಗಮ್ಮನವರ ಅಪೇಕ್ಷೆ. ಆಗಲಿ, ದೇವಾಲಯಕ್ಕೆ ಹೋಗಿ ಇವುಗಳನ್ನು ಇಟ್ಟು ಬರುವೆನು. (ಎಂದು ಗಂಗಮ್ಮನೊಡನೆ ಹೋಗುವಳು.)