ಪ್ರಬಂಧಕಾರರಾಗಿ ಯೋಗಿಂದ್ರರ ಅಲೆದಾಟಕ್ಕೆ ವೈಚಾರಿಕತೆಯ ನೆಲೆಗಟ್ಟು ಇರುವಂತೆ ಭಾವುಕತೆಯ ಸ್ಪರ್ಶವೂ ಇದೆ. ‘ಬೆಳಕಿನ ಹಬ್ಬಕ್ಕೆ ಊರಿಗೆ ಹೋದದ್ದು’ ಪ್ರಬಂಧ, ಏಕಕಾಲಕ್ಕೆ ಬ್ರಿಟನ್ನು ಮತ್ತು ಮರವಂತೆಯ ನಡುವೆ ಮನೋವ್ಯಾಪಾರ ಸಾಧ್ಯವಾಗಿರುವ ವಿಶಿಷ್ಟ ರಚನೆಯಿದು. ಲೇಖಕ ಊರಿನಲ್ಲಿ ಹೆಜ್ಜೆಯಿಟ್ಟಾಗ ಮುತ್ತಿಕೊಳ್ಳುವ ದೀಪಾವಳಿಯ ಸಹಸ್ರ ಸಹಸ್ರ ದೀಪಗಳಂಥ ನೆನಪುಗಳು ಪ್ರಬಂಧದಲ್ಲಿ ಬೆಳಗಿವೆ. ‘ನಮ್ಮೂರು ಕಟ್ಟುತ್ತಿರುವ ಬೆಳಕಿನ ಮನೆಯೊಳಗೆ ನಾನೂ ಅಲೆದಾಡುತ್ತಿದ್ದೇನೆ’ ಎನ್ನುವ ಪ್ರಬಂಧಕಾರರ ಅನಿಸಿಕೆ ಓದುಗನದೂ ಆಗುತ್ತದೆ. ‘ರಜೆ, ರೈಲು ಗಾಲಿಗಳು ಮತ್ತು ಸುಬ್ರಹ್ಮಣ್ಯ ಕ್ರಾಸ್’ – ರೈಲು ಪ್ರಯಾಣವೊಂದರ ಅನುಭವ.
ಯೋಗೀಂದ್ರ ಮರವಂತೆ ಪ್ರಬಂಧಗಳ ಸಂಕಲನ “ನನ್ನ ಕಿಟಕಿ”ಗೆ ರಘುನಾಥ ಚ.ಹ. ಬರೆದ ಮುನ್ನುಡಿ

ಯೋಗೀಂದ್ರ ಮರವಂತೆ ಅವರ ‘ನನ್ನ ಕಿಟಕಿ’ ಪ್ರಬಂಧ ಪ್ರಕಾರದ ಬಗ್ಗೆ ಪ್ರೀತಿಯುಕ್ಕಿಸುವ ಪ್ರಬಂಧಗಳ ಸಂಕಲನ. ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಕಲೆಹಾಕಿದ ವಿವರಗಳ ಆಕರ್ಷಕ ಜೋಡಣೆಯೇ ಪ್ರಬಂಧ ಎನ್ನುವಂತಾಗಿರುವ ದಿನಗಳಲ್ಲಿ, ರಮ್ಯ ಭಾಷೆಯಲ್ಲಿ ರೂಪುಗೊಂಡ ಬರವಣಿಗೆಯನ್ನು ಪ್ರಬಂಧವೆಂದು ಪ್ರಕಟಿಸುತ್ತಿರುವ ಸಂದರ್ಭದಲ್ಲಿ, ಯೋಗೀಂದ್ರರ ಪ್ರಬಂಧಗಳು ‘ಪ್ರಬಂಧ ಧ್ವನಿ’ಯ ಮೂಲಕ ಗಮನಸೆಳೆಯುತ್ತವೆ. ಪ್ರಬಂಧದ ಶಿಲ್ಪ ಹಾಗೂ ಧ್ವನಿಯ ಕಸುಬುದಾರಿಕೆಯ ಬಗ್ಗೆ ಗಮನಕೊಡುವ ನಿಜ ಪ್ರಬಂಧಗಳ ಕಾರಣದಿಂದಾಗಿ ‘ನನ್ನ ಕಿಟಕಿ’ ಗಮನಸೆಳೆಯುತ್ತದೆ. ಯೋಗಿಂದ್ರರ ಪ್ರಬಂಧಗಳಲ್ಲೂ ವಿವರಗಳಿವೆ. ಆಕರ್ಷಕ ಹೆಣಿಗೆಯೂ ಇದೆ. ಆದರೆ, ಈ ವಿವರಗಳು ಮಾಹಿತಿಯಾಗಿಯಷ್ಟೇ ಉಳಿಯದೆ, ಮೋಹಕ ಭಾಷೆ ಬಣ್ಣದ ಹೊದಿಕೆಯಾಗಿಯಷ್ಟೇ ಉಳಿಯದೆ, ಹೊಸ ನೋಟವೊಂದನ್ನು ಕಟ್ಟಿಕೊಡುವ ಮೂಲಕ ಪ್ರಬಂಧದ ಸಾರ್ಥಕ ಕ್ಷಣಗಳನ್ನು ದಕ್ಕಿಸಿಕೊಂಡಿವೆ.

‘ನನ್ನ ಕಿಟಕಿ’ ಸಂಕಲನದ ೨೬ ಪ್ರಬಂಧಗಳು ಎರಡು ಭಾಗಗಳಲ್ಲಿ ವಿಂಗಡಣೆಗೊಂಡಿವೆ. ಮೊದಲ ಭಾಗದ ಪ್ರಬಂಧಗಳು ಪ್ರಬಂಧಕಾರರ ಊರು-ತವರಿನ ಭಿತ್ತಿಯಲ್ಲಿ ರೂಪುಗೊಂಡಿದ್ದರೆ, ಎರಡನೇ ಭಾಗದ ರಚನೆಗಳ ಕೇಂದ್ರದಲ್ಲಿರುವುದು ಪ್ರಬಂಧಕಾರರ ಕರ್ಮಭೂಮಿ ಇಂಗ್ಲೆಂಡು. ಈ ಪ್ರಬಂಧಗಳನ್ನು ‘ಕಿಟಕಿಯೊಳಗಿನ ರಚನೆಗಳು’ ಹಾಗೂ ‘ಹೊರಗಿನ ರಚನೆಗಳು’ ಎಂದೂ ಹೇಳಬಹುದು. ಊರ ಹಿನ್ನೆಲೆಯ ನೆನಪುಗಳು ಸಹಜವಾಗಿಯೇ ಆರ್ದ್ರತೆಯನ್ನು ಹೊಂದಿದ್ದು ನೆನಪುಗಳಿಗೆ ಹೆಚ್ಚು ಆತುಕೊಂಡಿದ್ದರೆ, ಉತ್ತರಾರ್ಧದ ರಚನೆಗಳು ವರ್ತಮಾನದ ನೆಲೆಗಟ್ಟಿನವು ಹಾಗೂ ಬೌದ್ಧಿಕತೆಯನ್ನು ಹೆಚ್ಚು ಅವಲಂಬಿಸಿದವು.

(ಯೋಗೀಂದ್ರ ಮರವಂತೆ)

ಸಂಕಲನದ ಮೊದಲ ರಚನೆ ‘ಮತ್ತೆ ಹಾಡಾಗಿದೆ ಮಳೆಸಂಗೀತ’ ಯೋಗೀಂದ್ರರ ಪ್ರಬಂಧ ಕೌಶಲ್ಯಕ್ಕೆ ನಿದರ್ಶನದಂತಿರುವ ರಚನೆ. ಭಾವಗೀತದಂಥ ಭಾಷೆ, ಓದಿನ ಅನುಭವ, ಆ ಅನುಭವ ಕರುಣಿಸಿದ ಒಳನೋಟ – ಎಲ್ಲವೂ ಹದವಾಗಿ ಒದಗಿಬಂದ ರಚನೆಯಿದು. ಭಾರತದಲ್ಲಿ ಆರಂಭವಾಗಿರುವ ಮಳೆಗಾಲವನ್ನು ನೆಪವಾಗಿಟ್ಟುಕೊಂಡು, ಬರಹಗಾರರನ್ನು ಮಳೆ ಯಾವೆಲ್ಲ ಬಗೆಯಲ್ಲಿ ಕಾಡಿದೆ ಎನ್ನುವುದನ್ನು ಚಿತ್ರಿಸುವ ಈ ಪ್ರಬಂಧ ತಾನೇ ಒಂದು ಶಬ್ದಚಿತ್ರವಾಗಿ ರೂಪುಗೊಂಡಿದೆ. ಟ್ಯಾಗೋರರ ಮಳೆ ರಚನೆಗಳನ್ನು ನೆನಪಿಸುವ ಪ್ರಬಂಧ, ಮಳೆಯ ಸ್ವಾಗತಕ್ಕೆ ಶಾಂತಿನಿಕೇತನದಲ್ಲಿ ಅವರು ಆರಂಭಿಸಿದ ‘ಬರ್ಷ ಮಂಗಲ್’ ಎನ್ನುವ ಹಬ್ಬವೀಗ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾಗಳಲ್ಲಿ ಆಚರಣೆಗೊಳ್ಳುತ್ತಿದ್ದು, ಈ ಮಳೆಹಬ್ಬ ಬಂಗಾಳಿ ಜನರನ್ನು ಭಾವನಾತ್ಮಕವಾಗಿ ಬೆಸೆಯುವ ತಂತುವಾಗಿರುವುದನ್ನು ಗುರ್ತಿಸುತ್ತದೆ. ರವೀಂದ್ರರ ಮಳೆಕವಿತೆಗಳು ನಮ್ಮನ್ನು ಭಾವನಾತ್ಮಕವಾಗಿ ಮಾತ್ರವಲ್ಲದೆ, ವೈಚಾರಿಕ ನೆಲೆಯಲ್ಲೂ ಕಾಡಬೇಕಾಗಿದೆ ಎನ್ನುವ ಅರಿವು ಹಾಗೂ ಅವರ ಕವಿತೆಗಳ ನಿಸರ್ಗಪ್ರೇಮ ರಮ್ಯ ಕಾವ್ಯವೊಂದರ ಓದಿನ ಖುಷಿಗಷ್ಟೇ ಸೀಮಿತವಾಗದೆ ಪ್ರಾಕೃತಿಕ ಎಚ್ಚರವನ್ನು ನಮ್ಮೊಳಗೆ ಹೊತ್ತಿಸಬೇಕಾಗಿದೆ ಎನ್ನುವ ಕಳಕಳಿಯಲ್ಲಿ ಪ್ರಬಂಧ ಕೊನೆಗೊಳ್ಳುತ್ತದೆ. ಮಳೆಯ ನೆಪದ ಈ ಪಯಣ ಅರಿವಿನ ನೆಲೆಯಲ್ಲಿ ಕೊನೆಗೊಳ್ಳುವುದು ಪ್ರಬಂಧದ ಸಾರ್ಥಕಕ್ಷಣ.

‘ಮುಂಗಾರಿನ ಮಂದ ಬಣ್ಣಗಳು ಅಘನಾಶಿನಿಯ ಮೀನುದೋಣಿಗಳು’ ಛಾಯಾಗ್ರಾಹಕ ದಿನೇಶ್ ಮಾನೀರರ ಕುಮಟಾದ ಛಾಯಾಚಿತ್ರಗಳಿಗೆ ಸಂವಾದಿಯಾಗಿ ಮೂಡಿರುವ ಪ್ರಬಂಧ. ಮೋನೊಕಲರ್ ಚಿತ್ರಗಳ ನೆಪದಲ್ಲಿ ಪ್ರಬಂಧ ಕಟ್ಟಿಕೊಡುವ ಬಹುವರ್ಣದ ಬಿಂಬಗಳು ಅದೆಷ್ಟು ಮೋಹಕವಾಗಿವೆಯೆಂದರೆ, ಹಿಂದೆಂದೂ ಕಂಡಿರದವರ ಎದೆಯಲ್ಲೂ ಕುಮಟಾ ಹಾಗೂ ಅಘನಾಶಿಯ ನಕಾಶೆ ಅಚ್ಚಾಗಿಬಿಡುತ್ತದೆ.

ಶಬ್ದಚಿತ್ರಗಳನ್ನು ಕಟ್ಟುವ ಯೋಗೀಂದ್ರರ ಶೈಲಿಗೆ ಒಂದು ಉದಾಹರಣೆ ನೋಡಿ:

“ಮುಂಗಾರಿನ ಸಮಯದಲ್ಲಿ ಇಲ್ಲಿ ವ್ಯವಸಾಯದ ಜೊತೆಗೆ ಮೀನುಗಾರಿಕೆಯೂ ಸಾಗುತ್ತದೆ; ಭತ್ತವೂ ಬೆಳೆಯುತ್ತದೆ, ಹೊಳೆಮೀನೂ ಸಿಗುತ್ತದೆ! ಭತ್ತ ಬೆಳೆಯುವುದೂ ನೀರಲ್ಲಿ ಮೀನು ಹಿಡಿಯುವುದೂ ನೀರಲ್ಲೆ. ಅಘನಾಶಿನಿಯಲ್ಲಿ ದೋಣಿ ಸಂಚಾರ ನಿರಂತರ. ಸ್ಥಳೀಯ ಮೀನುಗಾರರು ಹತ್ತಿರದ ಐಗಳಕುರ್ವೆ ದ್ವೀಪಕ್ಕೆ ಹೋಗಿಬರುತ್ತಿರುತ್ತಾರೆ. ದೋಣಿ ನಿರ್ವಾಹಕರು ಬಲಿಷ್ಠ ಪುರುಷರೇ ಆಗಿರಬೇಕಾಗಿಲ್ಲ. ಇಲ್ಲಿನ ಮಕ್ಕಳು ಹೆಮ್ಮಕ್ಕಳು ದೋಣಿ ನಡೆಸುವುದು ಕಾಣಿಸುತ್ತದೆ. ಸಣ್ಣ ಮಕ್ಕಳೂ ದೋಣಿಯನ್ನು ತಾವು ಬಯಸಿದಂತೆ ಚಲಾಯಿಸಬಲ್ಲರು ತಾವು ನುಡಿಯುವಂತೆ ನಡೆಸಬಲ್ಲರು. ಹೀಗೆ ನೋಡುತ್ತಾ ಸಾಗುವಾಗ ನೂರಾರು ದೋಣಿಗಳು ಅಘನಾಶಿನಿಯಲ್ಲಿ ಕಾಣಿಸುತ್ತವೆ. ಕೆಲವು ಚಲಿಸುವವುಗಳು ಕೆಲವು ಕಟ್ಟಿಹಾಕಲ್ಪಟ್ಟುವುಗಳು. ದೋಣಿಗಳನ್ನು ಬಂಧಿಸಿದ ಗೂಟಕ್ಕೆ ಸಾವಿರ ಸಾವಿರ ಮೀನುಗಳನ್ನು ಮೋಸದಲ್ಲೊ ಸಾಹಸದಲ್ಲೊ ಹಿಡಿದ ಬಲೆಗಳನ್ನು ನೇತು ಹಾಕಿರುವುದೂ ಕಂಡೀತು. ದೋಣಿ ಮತ್ತು ಬಲೆಗಳನ್ನು ನಿಭಾಯಿಸುವ ಯಜಮಾನರು ಇಲ್ಲದ ಹೊತ್ತಲ್ಲಿ ಅವನ್ನು ಕಟ್ಟಿದ ಗೂಟವೇ ಮೇಲ್ವಿಚಾರಣೆಯ ಜವಾಬ್ದಾರಿ ಹೊತ್ತಿರುತ್ತದೆ. ಕೆಲವು ಒಂಟಿ ದೋಣಿಗಳು ಕೆಲವು ಸಂಸಾರಸ್ಥ ದೋಣಿಗಳು ಮತ್ತೆ ಕೆಲವು ಯುಗಳಗೀತೆ ಹಾಡುವ ನಾವೆಗಳು. ಇಲ್ಲಿ ವಿಹರಿಸುವ ದೋಣಿಗಳು ಮತ್ತು ದೋಣಿಯನ್ನು ತೇಲಿಸುತ್ತ ಮೆಲ್ಲಗೆ ಹರಿಯುವ ನದಿಯೂ ಒಂದು ಇನ್ನೊಂದರ ಮುಖ ನೋಡಿ ಸನ್ನೆ ಮಾಡುತ್ತವೆ, ಮಾತನಾಡುತ್ತವೆ, ಸುಖ ದುಃಖ ಕಷ್ಟ ಸುಖ ಹಂಚಿಕೊಳ್ಳುತ್ತವೆ. ಅಘನಾಶಿನಿಯ ಹರಿವಿನ ಮೇಲಿನ ದೋಣಿಗಳು, ದೋಣಿಯ ಮೇಲಿನ ಮೋಡಗಳು ಕೈ ಕೈ ಹಿಡಿದು ಚಲಿಸಿದಂತೆ ಭಾಸವಾಗುತ್ತದೆ. ಪುರಾತನ ಪರಿಚಯದ ಪಾರಂಪರಿಕ ಗೆಳೆತನದ ಸಖಸಖಿಯರಂತೆ ಯಾವುದೊ ಕಾಲದ ಒಡನಾಡಿಗಳಂತೆ ನಗೆಬೀರುತ್ತವೆ.”

ಮೇಲಿನ ಶಬ್ದಚಿತ್ರ ಅಘನಾಶಿನಿಯ ಪರಿಸರದ ಚೆಲುವನ್ನಷ್ಟೇ ಕಟ್ಟಿಕೊಡುವುದಿಲ್ಲ. ಆ ಪರಿಸರದಲ್ಲಿ ಬದುಕು ಕಂಡುಕೊಂಡ ಜೀವಗಳ ಸೌಂದರ್ಯವನ್ನೂ ಅವುಗಳ ತವಕ ತಲ್ಲಣಗಳನ್ನೂ ಕಾವ್ಯಕ್ಕೆ ಸಮೀಪವಾದ ಭಾಷೆಯಲ್ಲಿ ಪ್ರಬಂಧಕಾರರು ಕಾಣಿಸುತ್ತಾರೆ.

ಯೋಗೀಂದ್ರರ ಪ್ರಬಂಧಗಳ ಕಟ್ಟುವಿಕೆ ಹಾಗೂ ನುಡಿಗಟ್ಟು ಜಯಂತ ಕಾಯ್ಕಿಣಿಯವರ ಕಥೆಗಳನ್ನು ನೆನಪಿಸುವಂತಹದ್ದು. ಯಾವುದೋ ಒಂದು ಕ್ಷಣ ಅಥವಾ ಒಂದು ಅನುಭವದ ಬೆನ್ನತ್ತಿ ನಡೆಸುವ ಪಯಣದಲ್ಲಿ ಓದುಗನನ್ನೂ ಅವನಿಗರಿವಿಲ್ಲದಂತೆಯೇ ಸಹಪಯಣಿಗನನ್ನಾಗಿಸಿಕೊಳ್ಳುವ ಕಾಯ್ಕಿಣಿಯವರ ಕಥೆಗಳ ಗಾಳಿ ಇಲ್ಲಿನ ಪ್ರಬಂಧಗಳಿಗೂ ಸೋಕಿದೆ. ಬಹುತೇಕ ಸಂದರ್ಭಗಳಲ್ಲಿ ನಿರ್ದಿಷ್ಟ ಉದ್ದೇಶವಿಲ್ಲದೆ ಸಾಗುವ ಅಥವಾ ಲಘುವಾದ ಎಳೆಯೊಂದರ ಚುಂಗು ಹಿಡಿದು ಪ್ರಾರಂಭವಾಗುವ ಈ ಅಲೆದಾಟ, ದಾರಿಯುದ್ದಕ್ಕೂ ಎಡತಾಕುವ ಅಗಣಿತ ಬಿಂಬಗಳನ್ನು ತನ್ನದಾಗಿಸಿಕೊಳ್ಳುತ್ತ ಕೊಲಾಜ್ ರೂಪ ಪಡೆದುಕೊಳ್ಳುತ್ತದೆ. ಈ ಬಗೆಯ ಅಲೆದಾಟ, ಬಹುತೇಕ ಸಂದರ್ಭಗಳಲ್ಲಿ ಸಾವಯವ ಅನುಭವವಾಗಿ ಮೈದಾಳುವ ಬದಲು, ಬಿಡಿ ಬಿಡಿ ಬಿಂಬಗಳ ರೂಪದಲ್ಲಿ ಕಳೆದುಹೋಗಿ, ಅಂತಿಮವಾಗಿ ಮೋಹಕ ಭಾಷೆಯ ಅನುರಣನವಾಗಿಯಷ್ಟೆ ಉಳಿದುಬಿಡುತ್ತದೆ. ಆದರೆ, ಯೋಗೀಂದ್ರರ ರಚನೆಗಳಲ್ಲಿ ಈ ಅಲೆದಾಟ ಮೋಹಕ ಭಾಷೆಯಲ್ಲಿ ಕಳೆದುಹೋಗದೆ, ಅರ್ಥಸಾಧ್ಯತೆಗಳ ಬೆಳಕನ್ನು ಓದುಗರ ಮನಸ್ಸಿಗೆ ಹಾಯಿಸುತ್ತದೆ. ಆ ಬೆಳಕಿನಲ್ಲಿ ಓದುಗ ತನ್ನ ಕೈಲಾದಷ್ಟು ದೂರ ಸಾಗಲಿಕ್ಕೂ ಅವಕಾಶ ಕಲ್ಪಿಸುತ್ತದೆ. ಈ ಬಗೆಯ ಅಲೆದಾಟಕ್ಕೆ ಉದಾಹರಣೆಗಳಾಗಿ, ‘ನನ್ನ ಕಿಟಕಿ’, ‘ಕಚೇರಿಯೊಂದರ ಕಿಚನ್ ಕಥನ’ ಹಾಗೂ ‘ಪಾಪಡಂ ಪುರಾಣ’ಗಳನ್ನು ಗಮನಿಸಬಹುದು. ಸಂಕಲನದ ಅತ್ಯಂತ ಯಶಸ್ವಿ ರಚನೆಗಳೂ ಆದ ಈ ಪ್ರಬಂಧಗಳನ್ನು, ಪ್ರಬಂಧಕಾರರಾಗಿ ಯೋಗೀಂದ್ರ ಅವರು ರೂಢಿಸಿಕೊಂಡಿರುವ ಶೈಲಿಯ ಚೆಲುವಿನ ಹಿನ್ನೆಲೆಯಲ್ಲೂ ಗಮನಿಸಬಹುದು.

ಸಂತೆಯ ಬಯೋಸ್ಕೋಪ್ ಡಬ್ಬಿ ವಿಶ್ವರೂಪ ತೋರಿಸಿದಂತೆ, ‘ನನ್ನ ಕಿಟಕಿ’ ಪ್ರಬಂಧದ ಕಿಟಕಿ ಮಾಯಾಲೋಕಕ್ಕೆ ಬೆಳಕಿಂಡಿ. ‘ನನ್ನ ಕಿಟಕಿ’ ಬರಹಗಳ ಪ್ರಬಂಧಕಾರರಾಗಿ ಯೋಗಿಂದ್ರರ ಪ್ರಾತಿನಿಧಿಕ ಪ್ರಬಂಧವಾಗಿಯೂ ನೋಡಬಹುದು. ‘ಒಳಗೇ ಇದ್ದು ಹೊರಜಗತ್ತಲ್ಲಿ ಇಣುಕುವವರಿಗೆ ಈ ಕಿಟಕಿಯೇ, ಬಾಗಿಲು ರಸ್ತೆ ಸೇತುವೆ ಎಲ್ಲವೂ.’ ಈ ಕಿಟಕಿ ಯೋಗಿಂದ್ರರ ಬಹುತೇಕ ಪ್ರಬಂಧಗಳಲ್ಲಿ ದರ್ಶನದ ರೂಪದಲ್ಲಿ ಮರುಕಳಿಸುತ್ತದೆ. ‘ಕಿಟಕಿಯ ಚೌಕದ ಒಂದು ಬದಿಯಿಂದ ಯಾವ ಆಕೃತಿಯ ಪ್ರವೇಶವಾದರೂ ಅದರ ಮುನ್ನೋಟ ಮೊದಲು ಸಿಗುತ್ತದೆ, ಮತ್ತೆ ಅದು ಕಿಟಕಿಯಿಂದ ನಿರ್ಗಮಿಸುವಾಗ ಹಿನ್ನೋಟದ ದರ್ಶನವಾಗುತ್ತದೆ. ಒಂದೇ ವ್ಯಕ್ತಿಯ ಎರಡು ಆಯಾಮಗಳು ಎರಡು ವಿಭಿನ್ನ ವ್ಯಕ್ತಿಗಳಾಗಿ ಕಾಣಿಸುವುದೂ ಇದೆ.’

ಕಿಟಕಿಯ ಒಳ-ಹೊರಗಿನ ನೋಟ ಮತ್ತಷ್ಟು ವಿಸ್ತಾರಗೊಂಡಿರುವ ‘ಕಚೇರಿಯೊಂದರ ಕಿಚನ್ ಕಥನ’ – ಕಾರ್ಪೊರೇಟ್ ಕಚೇರಿಯ ಸೃಜನಶೀಲ ಸಂಘರ್ಷ ಮತ್ತು ಸಂಬಂಧಗಳಿಗೆ ಅಲ್ಲಿನ ಪುಟ್ಟ ಅಡುಗೆಮನೆ ವೇದಿಕೆಯಾಗುವುದನ್ನು ಸೂಚಿಸುವ ಪ್ರಬಂಧ. ಅಡುಗೆಮನೆಯ ಚೌಕಟ್ಟಿನಲ್ಲಿ ಮನೆಮಂದಿಯ ಸಂಬಂಧಗಳ ಹರಳುಗಟ್ಟುವ ಕೌಟುಂಬಿಕ ತಾತ್ವಿಕತೆಯನ್ನು ಬಹುರಾಷ್ಟ್ರೀಯ ಕಂಪನಿಯೊಂದರ ಕಿಚನ್ ಮೂಲಕ ಅನ್ವಯಿಸುವ ಈ ಪ್ರಬಂಧ, ಬಹುತ್ವದ ಪ್ರಯೋಗಶಾಲೆಯ ರೂಪದಲ್ಲಿ ಕಿಚನ್ ಅನ್ನು ಗುರ್ತಿಸುತ್ತದೆ. “ಅಡುಗೆಮನೆಯ ಉದಾತ್ತತೆ ಹೆಮ್ಮೆ ಹೊಣೆಗಾರಿಕೆಗಳು ನಮ್ಮ ಕಿಚನ್‌ಗೆ ಇಲ್ಲದಿದ್ದರೂ ನಮ್ಮ ಕಚೇರಿಯ ಮಟ್ಟಿಗೆ ಈ ಕಿಚನ್ ‘ಲಬ್ ಡಬ್’ ಒದಗಿಸುತ್ತದೆ. ಮತ್ತೆ ಇಲ್ಲಿ ರುಚಿ, ಹದ ಬೆರಸುವುದು, ತೊಳೆಯುವುದು, ಒರಸುವುದು ಎಲ್ಲವೂ ನಮ್ಮದೇ ಉಸಾಬರಿ; ಚಾಕರರೂ ಯಜಮಾನರೂ ನಾವೇ” ಎನ್ನುವ ಪ್ರಬಂಧ, ಅಡುಗೆಮನೆಯ ಜೀವಶಕ್ತಿಯನ್ನು ಮನಗಾಣಿಸುತ್ತದೆ. ಇಲ್ಲಿನ ಅಡುಗೆಮನೆ ಹಲವು ತಿನಿಸು ಪಾನೀಯಗಳ ಸಂಗಮ. ಹತ್ತಿಪ್ಪತ್ತು ದೇಶ ಊರುಗಳ ಪ್ರಾಣಿ ಸಸ್ಯಗಳನ್ನು ಮೂಲವಾಗಿ ಹೊಂದಿದ ಆಹಾರ ಕಿಚನ್‌ನಲ್ಲಿ ಬಿಸಿಯಾಗುತ್ತದೆ. ‘ಇಂಗ್ಲಿಷರಿಗೆ ಅತಿ ಪ್ರಿಯವಾದ ಬೇಕನ್, ಬೀಫ್, ಲ್ಯಾಂಬ್, ಚಿಕನ್‌ಗಳಿಂದ ಸುಪುಷ್ಟವಾದ ಆಹಾರದ ಜೊತೆ ಎಳೆಎಳೆಗಳು ಅಪ್ಪಿತಬ್ಬಿಕೊಂಡ ಚೈನಾದ ನೂಡಲ್ಸ್, ಇಟಾಲಿಯನ್ನರ ವಿಶಿಷ್ಟ ಆಕಾರದ ಪಾಸ್ತಾ, ಇನ್ನೆಲ್ಲಿಯದೋ ತೆಳುದಪ್ಪದ ಸೂಪುಗಳ ಆತ್ಮಗಳೂ ಸೇರಿ ಹುಟ್ಟಿದ ಹೊಸ ಜೀವಿಯೊಂದು ಬಂಧಿಸಿಟ್ಟ ಭೂತದಂತೆ ಕಿಚನ್ನಿನಲ್ಲಿ ಸುಳಿಯುತ್ತದೆ.’ ಮನೆಯ ಅಡುಗೆಮನೆಯಲ್ಲಿ ಸಂಬಂಧಗಳು ಸೊಗಸುಗೊಳ್ಳುವ ಬಗೆ ಬಹುರಾಷ್ಟ್ರೀಯ ಕಂಪನಿಯ ಕಿಚನ್‌ನಲ್ಲೂ ನಿಜವೆನ್ನಿಸುತ್ತದೆ. ಅಡುಗೆಮನೆಯ ಕೇಂದ್ರದೊಳಗೆ ಭೂಗೋಳ ದರ್ಶನ ಮಾಡಿಸುವ ಈ ವಿಶಿಷ್ಟ ಪ್ರಬಂಧ ಸೃಜನಶೀಲ ಪ್ರಬಂಧಕಾರನೊಬ್ಬ ಮಾಡಬಹುದಾದ ಸಾರ್ಥಕ ವಿಹಾರದಂತಿದೆ.

ಕಿಚನ್ ಕಥನದ ಕವಲಿನ ರೂಪದಲ್ಲಿ ‘ಪಾಪಡಂ ಪುರಾಣ’ ಪ್ರಬಂಧವನ್ನು ಓದಿಕೊಳ್ಳಬಹುದು. ಭಾರತ ಉಪಖಂಡದಲ್ಲಿ ‘ಕಿರುಸಹಾಯಕ’ನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಹಪ್ಪಳ, ಬ್ರಿಟನ್ ಪರಿಸರದಲ್ಲಿ ಸಂಸ್ಕೃತಿಯ ಚಹರೆಯಾಗಿ ಚಲಾವಣೆಗೊಳ್ಳುತ್ತದೆ. ‘ಬಿಗ್ ಬ್ರದರ್’ ರಿಯಾಲಿಟಿ ಶೋನಲ್ಲಿ ಶಿಲ್ಪಾ ಶೆಟ್ಟಿಯನ್ನು ಪರಕೀಯಳು, ಭಾರತೀಯ ಮೂಲದವಳು ಎಂದು ಹೀಗಳೆಯಲು ಬ್ರಿಟನ್‌ನ ಸಹಸ್ಪರ್ಧಿಗೆ ಒದಗಿಬಂದ ಪದ ಹಪ್ಪಳವೇ! ‘ಶಿಲ್ಪಾ ಪಾಪಡಂ’ ಎನ್ನುವ ಲೇವಡಿ, ಜನಾಂಗೀಯ ನಿಂದನೆಯ ವಿಷಯವಾಗಿ ಇಂಗ್ಲಿಷ್‌ನ ಪಾರ್ಲಿಮೆಂಟ್‌ನಲ್ಲೂ ಚರ್ಚೆಗೊಳಗಾಯಿತು. ಕಣ್ಣುಗಳಲ್ಲಿ ನೀರು ತುಂಬಿಕೊಂಡು ‘ಇಂದಿನ ಬ್ರಿಟನ್ ಹೀಗಿದೆಯೇ?’ ಎಂದು ರಿಯಾಲಿಟಿ ಶೋನಲ್ಲಿ ಶಿಲ್ಪಾ ಶೆಟ್ಟಿ ಕೇಳಿದ ಪ್ರಶ್ನೆ, ಶಿಸ್ತು, ಪರಂಪರೆ ಮತ್ತು ಸಂಸ್ಕೃತಿಯಲ್ಲಿ ತಮ್ಮನ್ನು ಶ್ರೇಷ್ಠರು ಎಂದು ತಿಳಿಯುವ ಇಂಗ್ಲಿಷರಿಗೆ ತಲೆ ತಗ್ಗಿಸಲು ಕಾರಣವಾಯಿತು. ಹಪ್ಪಳದ ಪ್ರಸ್ತಾಪ ಬ್ರಿಟಿಷರನ್ನು ಲಜ್ಜೆಗೀಡು ಮಾಡಿತ್ತು. ಕೊನೆಗೆ, ತಮ್ಮೂರಿನ ಹೆಣ್ಣುಮಗಳನ್ನು ಸೋಲಿಸುವ ಮೂಲಕ ಭಾರತೀಯಳನ್ನು ಗೆಲ್ಲಿಸಿದರು. ಬ್ರಿಟಿಷರ ಸಂಸ್ಕಾರಕ್ಕೆ ಉದಾಹರಣೆಯಂತೆ ಕಾಣಿಸುವ ಈ ಪಾಪಡಂ ಪುರಾಣ, ಜಗತ್ತಿನ ಬೇರೆ ಬೇರೆ ಭಾಗಗಳಿಗೆ ಭಾರತವನ್ನು ನೆನಪಿಸುವ ಮತ್ತು ಅವರು ಇದ್ದಲ್ಲಿಂದಲೇ ಇಂಡಿಯಾಕ್ಕೊಂದು ಸೇತುವೆ ಕಟ್ಟುವ ಸಾಮರ್ಥ್ಯ ಹಪ್ಪಳಕ್ಕಿರುವುದನ್ನು ಸೂಚಿಸುತ್ತದೆ. ಮಹಿಳಾ ಉದ್ಯೋಗದ ಯಶಸ್ಸಿನ ಉದಾಹರಣೆಯಾದ ‘ಲಿಜ್ಜತ್ ಪಾಪಡ್’ನ ಯಶೋಗಾಥೆಯೊಂದಿಗೆ ಕೊನೆಗೊಳ್ಳುವ ಈ ಪ್ರಬಂಧದೊಂದಿಗೆ, ‘ಒಂದು ನೂರು ವರ್ಷಗಳ ಹಿಂದಿನ ಒಂದು ಹತ್ಯಾಕಾಂಡದ ಕುರಿತು ಕ್ಷಮೆ’ ರಚನೆಯನ್ನು ಜೊತೆಗಿಟ್ಟು ನೋಡಬಹುದು. ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಕ್ಷಮೆ ಕೇಳಲು ಹಿಂಜರಿಯುತ್ತಲೇ ಇರುವ ಬ್ರಿಟಿಷ್ ಪ್ರಭುತ್ವದ ಸೋಗಲಾಡಿತನವನ್ನು ಈ ಬರಹ ಪ್ರಶ್ನಿಸುತ್ತದೆ. ಹಪ್ಪಳದ ವಿಷಯದಲ್ಲಿ ತೋರುವ ಸಂವೇದನೆ ಸಾಮೂಹಿಕ ಹತ್ಯಾಕಾಂಡದ ವಿಷಯದಲ್ಲಿ ಕುಂಟತೊಡಗಿದೆೆ. ಈ ಘಟನೆಯೊಂದಿಗೆ, ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟನ್ ಪರವಾಗಿ ಹೋರಾಡಿ ಸಾವಿಗೀಡಾದ ತೊಂಬತ್ತು ಸಾವಿರ ಯೋಧರ ಬಲಿದಾನದ ಬಗ್ಗೆ ಬ್ರಿಟಿಷರು ಕೃತಘ್ನರಾಗಿರುವುದನ್ನೂ ಪ್ರಬಂಧಕಾರರು ಗುರ್ತಿಸುತ್ತಾರೆ. ೧೮೬೦ರ ನಂತರ ಪೂರ್ವ ಮತ್ತು ದಕ್ಷಿಣ ಭಾರತ ತೀವ್ರ ಬರದ ದವಡೆಗೆ ಸಿಲುಕಿದ್ದಾಗಲೂ, ಭಾರತದಿಂದ ಬ್ರಿಟನ್‌ಗೆ ಧಾನ್ಯಗಳನ್ನು ಸಾಗಿಸುವುದನ್ನು ಮುಂದುವರಿಸಿದ ‘ಬ್ರಿಟಿಷ್ ರಾಜ್’ ಕ್ರೌರ್ಯದಿಂದ ಲಕ್ಷಾಂತರ ಜನ ಸಾವಿಗೀಡಾದುದನ್ನೂ ಪ್ರಬಂಧ ಸ್ಮರಿಸಿಕೊಳ್ಳುತ್ತದೆ. ಇತಿಹಾಸದ ಸಾಧನೆಗಳನ್ನು ಹೆಮ್ಮೆಯಿಂದ ಬಿಂಬಿಸಿಕೊಳ್ಳುವ, ದುಷ್ಕೃತ್ಯಗಳ ಹೊಣೆಗಾರಿಕೆಯನ್ನು ಮಾತ್ರ ನಿರಾಕರಿಸುವ ಸೋಗಲಾಡಿತನವನ್ನು ಈ ಪ್ರಬಂಧ ಸೂಕ್ಷ್ಮವಾಗಿ ಚಿತ್ರಿಸುತ್ತದೆ.

ಪ್ರಬಂಧಕಾರರಾಗಿ ಯೋಗಿಂದ್ರರ ಅಲೆದಾಟಕ್ಕೆ ವೈಚಾರಿಕತೆಯ ನೆಲೆಗಟ್ಟು ಇರುವಂತೆ ಭಾವುಕತೆಯ ಸ್ಪರ್ಶವೂ ಇದೆ. ‘ಬೆಳಕಿನ ಹಬ್ಬಕ್ಕೆ ಊರಿಗೆ ಹೋದದ್ದು’ ಪ್ರಬಂಧ, ಏಕಕಾಲಕ್ಕೆ ಬ್ರಿಟನ್ನು ಮತ್ತು ಮರವಂತೆಯ ನಡುವೆ ಮನೋವ್ಯಾಪಾರ ಸಾಧ್ಯವಾಗಿರುವ ವಿಶಿಷ್ಟ ರಚನೆಯಿದು. ಲೇಖಕ ಊರಿನಲ್ಲಿ ಹೆಜ್ಜೆಯಿಟ್ಟಾಗ ಮುತ್ತಿಕೊಳ್ಳುವ ದೀಪಾವಳಿಯ ಸಹಸ್ರ ಸಹಸ್ರ ದೀಪಗಳಂಥ ನೆನಪುಗಳು ಪ್ರಬಂಧದಲ್ಲಿ ಬೆಳಗಿವೆ. ‘ನಮ್ಮೂರು ಕಟ್ಟುತ್ತಿರುವ ಬೆಳಕಿನ ಮನೆಯೊಳಗೆ ನಾನೂ ಅಲೆದಾಡುತ್ತಿದ್ದೇನೆ’ ಎನ್ನುವ ಪ್ರಬಂಧಕಾರರ ಅನಿಸಿಕೆ ಓದುಗನದೂ ಆಗುತ್ತದೆ. ‘ರಜೆ, ರೈಲು ಗಾಲಿಗಳು ಮತ್ತು ಸುಬ್ರಹ್ಮಣ್ಯ ಕ್ರಾಸ್’ – ರೈಲು ಪ್ರಯಾಣವೊಂದರ ಅನುಭವ. ‘ರಿಕ್ಷಾ ಯಶವಂತಪುರ ನಿಲ್ದಾಣವನ್ನು ತಲುಪುವ ಹೊತ್ತಿಗೆ, ಜೀವನಚಕ್ರದೊಳಗಿನ ಬಾಲ್ಯ, ಯೌವನ, ಮುಪ್ಪು ಇವು ಯಾವುದನ್ನೂ ತಿಳಿಯದ ರೈಲುಚಕ್ರಗಳು ಹಳಿಯ ಮೇಲೆ ನನಗಿಂತ ಮೊದಲೇ ಬಂದು ನಿಂತಾಗಿದೆ.’

‘ರಜೆ, ರೈಲು ಗಾಲಿಗಳು ಮತ್ತು ಸುಬ್ರಹ್ಮಣ್ಯ ಕ್ರಾಸ್’ ಪ್ರಬಂಧದಲ್ಲಿ, ‘ಸಮುದ್ರ ಖಾಲಿ ಆದರೆ, ಸಮುದ್ರ ಇದ್ದ ಜಾಗದಲ್ಲಿ ದಿನವೂ ಸ್ವಲ್ಪ ಸ್ವಲ್ಪ ನೀರು ಹಾಕಿ ಮತ್ತೆ ಸ್ವಲ್ಪ ಉಪ್ಪು ಹಾಕಿ ಕದಡಿ ಹೊಸ ಸಮುದ್ರ ತಯಾರಿ ಮಾಡುತ್ತೇನೆ ಎಂದು ಹೇಳಿ ಸಣ್ಣ ಹುಡುಗ ನಿರಾಳವಾಗಿದ್ದಾನೆ. ಯಾವತ್ತು ಊರಿಗೆ ಬಂದರೂ, ಸಮುದ್ರವನ್ನು ಯಾರು ಕದ್ದುಕೊಂಡು ಹೋದರೂ, ಸಮುದ್ರವೇ ಇಲ್ಲ ಆಗುವ ಸಂದರ್ಭ ಇಲ್ಲ ಎಂದು ತಿಳಿದು ನಾನೂ ಸಮಾಧಾನವಾಗಿದ್ದೇನೆ’ ಎನ್ನುವ ಮಾತು ಬರುತ್ತದೆ. ಯಾರೂ ಕದಿಯಲಾಗದ ಈ ಸಮುದ್ರ ಭೌತಿಕವಾದುದಷ್ಟೇ ಅಲ್ಲ, ಮಾನಸಿಕವಾದುದೂ ಹೌದು. ಯೋಗೀಂದ್ರರ ಪ್ರಬಂಧಗಳಲ್ಲಿನ ಊರು ಬದಲಾವಣೆಗೊಡ್ಡಿಕೊಂಡ ಭೌತಿಕ ಪ್ರದೇಶವೂ ಹೌದು, ಭಾವಕೋಶದಲ್ಲಿನ ಬದಲಾಗದ ಪರಿಸರವೂ ಹೌದು. ಮರವಂತೆಯ ಕುರಿತಾದ ‘ಬೇಲೆಬದಿಯ ಆಮೆಪುರಾಣ’ ಪ್ರಬಂಧ ವ್ಯಕ್ತಿಚಿತ್ರದಂಥ ರಚನೆ. ಊರಿನ ಕುರಿತ ಯೋಗಿಂದ್ರರ ಪ್ರಬಂಧಗಳನ್ನು ಒಂದೇ ಕಥನದ ಹಲವು ತುಣುಕುಗಳಂತೆ ಜೋಡಿಸಿಕೊಂಡು ಓದಬಹುದು. ಎತ್ತ ಮುಖ ಮಾಡಿ ಬಿಟ್ಟರೂ ಕಡಲಿನತ್ತ ಮುಖ ಮಾಡುತ್ತಾ ಹೊರಡುವ ಆಮೆ ಮರಿಗಳಂತೆ ಪ್ರಬಂಧಕಾರರು ಮರಳುವುದೂ ಊರಿಗೆ, ಸಮುದ್ರದ ಮೊರೆತಕ್ಕೆ. ನಮ್ಮ ಬದುಕು ಮಹಾವೃಕ್ಷವಾಗಿ ಕೊಂಬೆರೆಂಬೆಗಳನ್ನು ಆಕಾಶಕ್ಕೆ ಹರಡಿಕೊಂಡಿದ್ದರೂ ಮಣ್ಣಮರೆಯಲ್ಲಿ ಬೇರುಗಳು ಹುದುಗಿರುವಂತೆ ನಮ್ಮ ಬದುಕೂ ಇರುವುದನ್ನು ಪ್ರಬಂಧಕಾರರು ಸೂಚಿಸುತ್ತಿರುವಂತಿದೆ.

(ರಘುನಾಥ ಚ.ಹ.)

ಅಪ್ಪಟ ಪ್ರಬಂಧಗಳ ಜೊತೆಗೆ, ಪ್ರಬಂಧಗಳಾಗಲು ಹವಣಿಸುವ ರಚನೆಗಳೂ ಈ ಸಂಕಲನದಲ್ಲಿವೆ. ‘ಖಾಲಿ ಕುರ್ಚಿ’ ಬರಹವನ್ನು ಕಥೆಯಂತೆಯೂ, ಡೈರಿಯ ಪುಟವೊಂದರ ದಾಖಲಾತಿಯಂತೆಯೂ ಓದಿಕೊಳ್ಳಬಹುದು. ಸಹೋದ್ಯೋಗಿಯೊಬ್ಬಳ ಗೈರುಹಾಜರಿಯಲ್ಲಿ ಅವಳು ಕೂರುತ್ತಿದ್ದ ಕುರ್ಚಿಯ ಖಾಲಿತನದಲ್ಲಿ ಅವಳ ವ್ಯಕ್ತಿಚಿತ್ರವನ್ನು ಕಟ್ಟಿಕೊಡುವ ತಂತ್ರ ಚೆನ್ನಾಗಿದೆ. ಅವಳ ಹಾಜರಿಯಲ್ಲಿ ಆಕೆಯ ಬಗೆಗಿದ್ದ ಪೂರ್ವಗ್ರಹಗಳು, ಈಗ ಗೈರುಹಾಜರಿಯಲ್ಲಿ ತಿಳಿಯಾಗಿ, ಆಕೆಯನ್ನು ಕಚೇರಿಯಲ್ಲಿನ ಎಲ್ಲರೂ ತಮಗರಿವಿಲ್ಲದಂತೆಯೇ ಹಚ್ಚಿಕೊಂಡಿದ್ದಾರೆ. ಸಹೋದ್ಯೋಗಿಯ ಗೈರುಹಾಜರಿಯಲ್ಲಿ, ಆಕೆ ಕಳುಹಿಸಿದ ಕೇಕುಗಳನ್ನು ತಿನ್ನುತ್ತ ಅವಳ ಹುಟ್ಟುಹಬ್ಬದ ಆಚರಣೆ ನಡೆಯುತ್ತದೆ. ಆ ಸಂಭ್ರಮದಲ್ಲಿ, ಚಿನ್ನದ ಕೂದಲುಗಳನ್ನು ಇಳಿಬಿಟ್ಟಿದ್ದ ಅವಳ ತಲೆಯಲ್ಲಿ ಕೂದಲಿನ ಕುರುಹೇ ಇಲ್ಲದ್ದನ್ನು ಮೆಲುಗಾಳಿಗೆ ನಕ್ಕು ಹಾಡಿ ತೊನೆದು ತೂಗುತ್ತಿದ್ದ ಬಂಗಾರದ ಕೇಶ ರಾಶಿ ಮಾಯವಾದುದನ್ನು ಸಹೋದ್ಯೋಗಿಯೊಬ್ಬ ಕೇಕು ತಿನ್ನುತ್ತಲೇ ತಿಳಿಸುವ ಕ್ರೌರ್ಯದ ಕಥನವೂ ಇಲ್ಲಿದೆ.

‘ಸೈಬರ್ ಯುದ್ಧ’ ಬರಹ ಗುಂಪಿಗೆ ಸೇರದ ಪದದಂತಿದೆ. ‘ಶಿಕ್ಷಕರ ದಿನ ಅಕ್ಷರ ನಮನ’, ‘ಸ್ಕೂಲ್ ಬ್ಯಾಗ್ ರೂಪಕ’ ಬರಹಗಳು ಭಾರತ ಮತ್ತು ಬ್ರಿಟನ್‌ನಲ್ಲಿನ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯ ಚಿತ್ರಗಳನ್ನು ನೀಡುವಂತಹವು. ‘ಕೇಟಿಯ ಹೆರಿಗೆ ರಜೆ’, ‘ಬ್ರಿಸ್ಟಲ್ ಬಾನಿನಲ್ಲಿ ಬಿಸಿಗಾಳಿ ಬಲೂನುಗಳು’, ‘ಸೆಪ್ಟೆಂಬರ್ ಎನ್ನುವ ತಲ್ಲಣದ ಮಾಸ’ – ಇವೆಲ್ಲವೂ ಅನಿವಾಸಿ ಭಾರತೀಯ ಲೇಖಕನ ಅಂಕಣ ಬರಹಗಳಾಗಿ ಗಮನಸೆಳೆಯುತ್ತವೆ. ಪ್ರಬಂಧ ಧ್ವನಿ ಕಡಿಮೆ ಇರುವ ಲಹರಿಗಳ ರೂಪದಲ್ಲಿ ಇವು ಓದಿಸಿಕೊಳ್ಳುತ್ತವೆ. ಜಾವೇದ್ ಅಬಿದಿ ಅವರ ಕುರಿತಾದ ‘ತನ್ನಂತಿರುವವರ ಒಳಿತಿಗಾಗಿಯೇ ಬದುಕಿದ್ದ ವಿಶಿಷ್ಟ ಚೇತನ’ ಹಾಗೂ ‘ಸುಳಿಗಾಳಿಯಂತಿದ್ದ ಸುಧೀರನ ನೆನಪು’ ವ್ಯಕ್ತಿಚಿತ್ರ ಬರಹಗಳಾಗಿವೆ. ‘ಮೊಘಲ್ ಎ ಆಜಮ್’, ‘ಜೀರ್ಜಿಂಬೆ’, ‘ರಿಸರ್ವೇಷನ್’ ಸಿನಿಮಾಗಳ ಕುರಿತ ವಿಶ್ಲೇಷಣೆಗಳು ದೃಶ್ಯಮಾಧ್ಯಮದ ಬಗೆಗಿನ ಯೋಗಿಂದ್ರರ ಆಸಕ್ತಿಯ ಫಲಶ್ರುತಿಗಳಿಂತಿವೆ.

ಅಂಕಣ ಬರಹಗಳ ರೂಪದ ರಚನೆಗಳನ್ನು ಹೊರತುಪಡಿಸಿ ನೋಡಿದರೆ, ‘ನನ್ನ ಕಿಟಕಿ’ ಸೊಗಸಾದ ಪ್ರಬಂಧಗಳ ಸಂಕಲನ. ಹೊಸ ಬೆಳಕಿಗೆ ಹಂಬಲಿಸುತ್ತಿರುವ ಕನ್ನಡ ಪ್ರಬಂಧ ಪ್ರಕಾರಕ್ಕೆ ದೊರೆತಿರುವ ಹೊಸ ಕಿಟಕಿಯ ರೂಪದಲ್ಲಿ ಈ ಕೃತಿ ಮುಖ್ಯವಾದುದು. ಯೋಗೀಂದ್ರರ ಪ್ರಬಂಧ ಕೌಶಲ ಮುಂದಿನ ದಿನಗಳಲ್ಲಿ ಪಡೆಯಬಹುದಾದ ರೂಪದ ಬಗ್ಗೆ ಸಾಹಿತ್ಯದ ವಿದ್ಯಾರ್ಥಿಯಾಗಿ ನಾನಂತೂ ತೆರೆದಕಣ್ಣಾಗಿರುವೆ. ಅರ್ಥಪೂರ್ಣ ಪ್ರಬಂಧಗಳನ್ನು ನೀಡಿದ್ದಕ್ಕಾಗಿ ಮರವಂತೆಯ ಯೋಗೀಂದ್ರರಿಗೆ ಅಭಿನಂದನೆ. ಈ ಸಂಕಲನ, ಓದುಗರಿಗೆ ಹೊಸ ಅನುಭವದ ಕಿಟಕಿಗಳನ್ನು ತೆರೆಯುತ್ತದೆಂದು ನಂಬುವೆ. ಹಾಗೆಯೇ, ಓದುಗರ ಪ್ರೀತಿಯ ಕಾವು ಪ್ರಬಂಧಕಾರರಿಗೆ ಸಾಧ್ಯತೆಗಳ ಹೊಸ ಬೆಳಕಿಂಡಿಗಳನ್ನು ಕಾಣಿಸಲೆಂದು ಪ್ರೀತಿಯಿಂದ ಹಾರೈಸುವೆ.

(ಕೃತಿ: ನನ್ನ ಕಿಟಕಿ (ಪ್ರಬಂಧಗಳು), ಲೇಖಕರು: ಯೋಗೀಂದ್ರ ಮರವಂತೆ, ಪ್ರಕಾಶಕರು: ಪ್ರಿಸಮ್ ಬುಕ್ಸ್, ಬೆಲೆ: 225/-)