ಇಲ್ಲಿ ಬಿಡಿಸಿ ಹೇಳುವುದು ಏನಿದೆ? ಅಥವಾ ಇದನ್ನೂ ಕೂಡ ಬಿಡಿಸಿ ಹೇಳಬೇಕಾಗಿ ಬಂದಿರುವುದು ನಮ್ಮ ಸಮಸ್ಯೆ ಇರಬಹುದು. ಜಗತ್ತಿನಲ್ಲಿ ಎಲ್ಲರೂ ಎಲ್ಲದರ ಬಗ್ಗೆ ಮಾತನಾಡಬಹುದು, ಮಾತನಾಡುತ್ತಾರೆ. ಯುದ್ಧ, ಕ್ಷಾಮ, ಭಕ್ತಿ, ದೇವರು, ಶಿಕ್ಷಣ ನೀತಿ, ಬಾಹ್ಯಾಕಾಶ, ಕಾಡ್ಗಿಚ್ಚು, ಕ್ರಿಕೆಟ್ ಸ್ಕೋರ್. ಆದರೆ ಅವರ ದಿನನಿತ್ಯದ ಕಷ್ಟ ಸುಖ ಇರುತ್ತಲ್ಲ, ಅದನ್ನು ಹೇಳಿಕೋಬೇಕು. ಅದನ್ನು ಇನ್ನೊಬ್ಬರು ಹೇಳುವಾಗ ಕೇಳಿಸಿಕೊಳ್ಳಬೇಕು. ಇನ್ನೊಬ್ಬರಿಂದ ಇದನ್ನೆಲ್ಲ ಹೇಳಿಸುವ, ಹೊರಡಿಸುವ ಕಲೆ ಗೊತ್ತಿರಬೇಕು. ಈಗ ಅಂತಹವರು ಇಲ್ಲವೇ ಇಲ್ಲ.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”
ನಮ್ಮ ಮನೆ ಆರನೇ ಕ್ರಾಸಿನಲ್ಲಿದೆ. ಇನ್ನು ಮೂರು ಕ್ರಾಸ್ ಏರಿ ಹೋದರೆ ಮುಖ್ಯ ರಸ್ತೆ ಬರುತ್ತದೆ. ಈ ಮುಖ್ಯ ರಸ್ತೆ ಬೆಂಗಳೂರಿನ ಮುಖ್ಯ ಮತ್ತು ಪ್ರಸಿದ್ಧ ರಸ್ತೆಗಳಲ್ಲಿ ಒಂದು. ಹೆಸರು ಹೇಳದೇ ಹೋದರೂ ಪಂಡಿತರಾದ ನಿಮಗೆ ಮತ್ತು ಪಂಡಿತರಲ್ಲದ ಎಲ್ಲ ಪಾಮರ ಶ್ರೇಷ್ಠ ಓದುಗರಿಗೆ ಗೊತ್ತಾಗಿಯೇ ಆಗುತ್ತದೆ.
ಈ ರಸ್ತೆಯ ಮಧ್ಯದಲ್ಲಿ ಒಳ್ಳೆ ರಾಜಾ ಬಿಲ್ಡಿಂಗ್ ತರ ಒಂದು ದೊಡ್ಡ ಕಾಂಪ್ಲೆಕ್ಸ್ ಇದೆ. ಹದಿನೇಳು-ಹದಿನೆಂಟು ಅಂತಸ್ತುಗಳದ್ದು. ಸಾವಿರಾರು ಕಛೇರಿಗಳು ಇಲ್ಲಿವೆ. ಇಲ್ಲಿ ಕೆಲಸ ಮಾಡಿ ಭೂಖಂಡದ ಬೇರೆ ಬೇರೆ ಭಾಗಗಳನ್ನು ತಲುಪುತ್ತವೆ. ಅವುಗಳ ಬೋರ್ಡುಗಳನ್ನು ನೋಡುವುದೇ ಒಂದು ಜಾತ್ರೆಯನ್ನು ನೋಡಿದಂತಾಗುತ್ತದೆ. ಅದನ್ನು ನೋಡುವುದೇ ಒಂದು ಚಂದ. ಚಂದ ಎಂದು ಏಕೆ ಹೇಳಿದೆನೆಂದರೆ, ನನಗೆ ಕನ್ನಡ ಚೆನ್ನಾಗಿ ಬರುತ್ತದೆ. ಇಂಗ್ಲಿಷ್ ಕೂಡ ಪರವಾಗಿಲ್ಲ ಎಂದು ನನ್ನ ಮಕ್ಕಳು ಮೊಮ್ಮಕ್ಕಳು ಹೇಳುತ್ತಾರೆ. ಬೋರ್ಡುಗಳು ಮಾತ್ರ ಭಾರತದ ಸಕಲ ನೂರೆಂಟು ಭಾಷೆಗಳಲ್ಲೂ, ವಿದೇಶಿ ಭಾಷೆಗಳಲ್ಲೂ, ಲಿಪಿಗಳಲ್ಲೂ ಇವೆ. ಆದರೆ ಬೋರ್ಡುಗಳ ಬಣ್ಣ ಒಂದಕ್ಕಿಂತ ಒಂದು ಚೆನ್ನಾಗಿದೆ. ಬೇರೆ ದೇಶಗಳ ಬೋರ್ಡ್ ಆದರೆ ಕಂಪನಿಗಳ ಹೆಸರಿನ ಜೊತೆಗೆ ಆಯಾ ದೇಶಗಳ ರಾಷ್ಟ್ರಧ್ವಜಗಳನ್ನು ಕೂಡ ಬೋರ್ಡಿನ ಮಧ್ಯಭಾಗದಲ್ಲಿ ಎದ್ದು ಕಾಣುವಂತೆ ಬರೆಸಿರುತ್ತಾರೆ. ನಂತರ ಕಂಪನಿಯ ವಿಳಾಸ-ವಿವರಗಳು. ರಾಷ್ಟ್ರಧ್ವಜದ ಬಣ್ಣ, ವಿವರಗಳನ್ನು ನೆನಪಿನಲ್ಲಿಟ್ಟುಕೊಂಡು ಮನೆಗೆ ಬಂದು ಇನ್ನೂ ಒಂದನೇ ತರಗತಿ ಓದುತ್ತಿರುವ ನನ್ನ ಮೊಮ್ಮಗನ ಹತ್ತಿರವಿರುವ Flag Book ನಿಂದ ಯಾವ ಯಾವ ಬೋರ್ಡ್ ಯಾವ ಯಾವ ದೇಶದ್ದು, ಯಾವ ಯಾವ ಕಂಪನಿಯದ್ದು ಎಂದು ಮನನ ಮಾಡಿಕೊಳ್ಳುತ್ತೇನೆ. ಅದೂ ಕೂಡ ಒಂದು ರೀತಿಯಲ್ಲಿ ಪ್ರಯೋಜನವಿಲ್ಲ. ಏಕೆಂದರೆ, ಬೋರ್ಡುಗಳು ಬೇಗ ಬೇಗ ಬದಲಾಗುತ್ತಿರುತ್ತವೆ. ಎಲ್ಲ ಬಣ್ಣದ, ಎಲ್ಲ ದೇಶಗಳ ಬೋರ್ಡುಗಳು ಕೂಡ ಬದಲಾಗುತ್ತವೆ. ನಮ್ಮ ಮಾತೃ ಭಾಷೆಯಾದ ಕನ್ನಡದ ಬೋರ್ಡುಗಳು ಕೂಡ. ಬಾಡಿಗೆ ಕೊಡುವುದೆಂದರೆ, ದೇಹದಲ್ಲಿರುವ ಕೊನೆಯ ಕಣದ ರಕ್ತ ಮಾತ್ರವಲ್ಲ, ದೇಹದೊಳಗಿರುವ ಸಕಲ ಮಜ್ಜೆ ಕೂಡ ಮಾಯವಾಗುತ್ತದೆ ಎಂಬ ಭಯವಿದೆ. ಆದರೂ ಬೋರ್ಡುಗಳ ಬದಲಾಗುತ್ತಿರುವ ಬಣ್ಣ, ಸಂಖ್ಯೆಗಳನ್ನು ಗಮನಿಸಿದರೆ, ನಮ್ಮ ಭವ್ಯ ಬೆಂಗಳೂರು, ಇನ್ನೂ ಭವ್ಯವಾದ ಭಾರತ ಯಾವ ದಿಕ್ಕಿನಲ್ಲಿ ಚಲಿಸುತ್ತಿದೆ, ನೆಗೆಯುತ್ತಿದೆ ಎಂದು ಶಾಲಾಬಾಲಕರಿಗೂ ಗೊತ್ತಾಗಿ ಹೆಮ್ಮೆಯಾಗುತ್ತದೆ.
ಹೋದ ವಾರ ವಾಕಿಂಗ್ ಮುಗಿಸಿಕೊಂಡು ಬರುವಾಗ ಕತ್ತು ನಿಮಿರಿಸಿ ಬೋರ್ಡುಗಳ ಸಮೂಹದ ಕಡೆ ನೋಡುತ್ತಿದ್ದಾಗ ಒಂದು ಬೋರ್ಡ್ ನನ್ನನ್ನ ಆಕರ್ಷಿಸಿ, ನಾನು ಕಕ್ಕಾಬಿಕ್ಕಿಯಾದೆ.
“ಕಷ್ಟ ಸುಖದವರು ಬೇಕು. ಕೂಡಲೇ ಸಂಪರ್ಕಿಸಿ” ಎಂದಿತ್ತು.
ನನಗೆ ತಲೆಬುಡ ಅರ್ಥವಾಗಲಿಲ್ಲ. ನನ್ನಂತೆ ಏನೂ ಕೆಲಸವಿಲ್ಲದೆ ಫುಟ್ಪಾತಿನಲ್ಲಿ ಓಡಾಡುತ್ತಿದ್ದ ಒಂದು ನಾಲ್ಕು ಜನ ಅಲಾಲ್ ಟೋಪಿಗಳನ್ನು ನಿಲ್ಲಿಸಿ ಇದೇನಿದು ಎಂದು ಕೇಳಿದೆ. ಅವರು ಬೋರ್ಡನ್ನು ನನ್ನನ್ನು ಒಟ್ಟಿಗೇ ನೋಡಿದರು. ಮತ್ತೆ ಮತ್ತೆ ನನ್ನ ಕಡೆ ನೋಡುತ್ತಾ ಬೇರೆ ಕಡೆ ಮುಖ ತಿರುಗಿಸಿದರು. ನಾನೊಬ್ಬ ಪೆಕರು ಮನುಷ್ಯ ಎನ್ನುವಂತೆ ನಕ್ಕರು.
ಒಬ್ಬ ಮುದುಕಪ್ಪ ನಕ್ಕಾಗ ಮಾತ್ರ ನನ್ನನ್ನು ಕೀಳಾಗಿ ಕಾಣುವ ಮನೋಭಾವ ಮುಖದಲ್ಲಿ ಕಾಣಲಿಲ್ಲ. ಕೂದಲು ಪೂರ್ತಿಯಾಗಿ ನೆರೆದಿತ್ತು. ಆದರೆ ಮೀಸೆ ಮಾತ್ರ ಕಡು ಕಪ್ಪು ಬಣ್ಣ. ಬಲಗಿವಿಗೆ ಬೆಳ್ಳಿ ವಾಲೆ.
ನೋಡಿ ಇಲ್ಲಿ ಕೆಲಸಕ್ಕೆ ಜಾಹಿರಾತು ಕೊಟ್ಟಿದ್ದಾರೆ. Hiring ನಡೀತಿದೆ ಅಂತ ಅರ್ಥ. ಅರ್ಜಿಯಿಲ್ಲ, ಸಂದರ್ಶನವಿಲ್ಲ. ಯಾರು ಬೇಕಾದರೂ ನೇರವಾಗಿ ಹೋಗಿ ಕೆಲಸ ಕೇಳಬಹುದು. ಆಯ್ಕೆಯಾದರೆ ಆವತ್ತೇ, ಅಲ್ಲೇ ರಿಪೋರ್ಟ್ ಮಾಡಿಕೊಳ್ಳಬೇಕು.
ನಿಮಗ್ಯಾಕೆ ಇವೆಲ್ಲ ಬಿಡಿ. ನಿವೃತ್ತರಂತೆ ಕಾಣುತ್ತೀರಿ, ಅಲ್ಲವೇ ಎಂದು ಆತ್ಮೀಯವಾಗಿಯೇ ನಗುತ್ತಾ ಹೊರಟುಹೋದರು.
*****
ರಾತ್ರಿಯೆಲ್ಲಾ ನನಗೆ ಕನಸಿನಲ್ಲಿ ಅದೇ ಬೋರ್ಡು. ಮಗ್ಗಲು ಬದಲಾಯಿಸಿದೆ. ರಗ್ಗನ್ನು ಮುಖದ ತುಂಬಾ ಹೊದ್ದುಕೊಂಡೆ. ಬೆಳಿಗ್ಗೆ ಎದ್ದು ಯೋಗ ಮಾಡುವಾಗ, ಪ್ರಾಣಾಯಾಮ ಮಾಡುವಾಗಲೂ ಅದೇ ಬೋರ್ಡ್ ಎದುರಿಗೆ ನಿಂತು ನನ್ನನ್ನು ಬಾ, ಬಾ ಎಂದು ಕರೆದ ಹಾಗೆ.
ಸರಿ, ತಿಂಡಿ ಮುಗಿಸಿ, ಆತುರಾತುರವಾಗಿ ಬೋರ್ಡ್ ಸೂಚಿಸಿದ ದಿಕ್ಕಿನಲ್ಲೆ ಹೋಗಿ ಸ್ವಾಗತ ಕಛೇರಿ ಎದುರಿಗೆ ನಿಂತುಕೊಂಡೆ. ಹಿತವಾದ ವೀಣಾವಾದನ ಕೇಳುತ್ತಿತ್ತು. ಹಾಯ್ ಎನಿಸುವಷ್ಟು ಮಾತ್ರ ಏರ್ ಕಂಡೀಷನರ್ ಹಾಕಿದ್ದರು. ಶ್ರೀಗಂಧದ ಸುವಾಸನೆ.
ವೃತ್ತಾಕಾರದ ಟೇಬಲ್, ಕರಿಮರದ್ದು. ಕೌಂಟರ್ನಲ್ಲಿ ಒಬ್ಬ ಸುಮಂಗಲಿ ಕುಳಿತಿದ್ದರು, ಎದುರುಗಡೆ ಒಂದು ನೋಟ್ ಬುಕ್ ಇಟ್ಟುಕೊಂಡು. ಶ್ರೀರಾಮ ಜಯ, ಜಯ ಶ್ರೀ ರಾಮ ಎಂದು ಒಂದೇ ಉಸಿರಿನಲ್ಲಿ ಬರೆಯುತ್ತಿದ್ದರು. ನನ್ನನ್ನು ನೋಡಿದವರೇ ತಟಕ್ಕನೆ ಬರೆಯುವುದನ್ನು ನಿಲ್ಲಿಸಿ, ಪ್ರಸನ್ನವದನರಾಗಿ, ಬನ್ನಿ, ಕುಳಿತುಕೊಳ್ಳಿ, ನಿಮಗೇನು ಬೇಕು ಎಂದು ಸಾವಕಾಶವಾಗಿ ಕೇಳಿದರು. ನಾನು ಉತ್ತರಿಸುವ ಮೊದಲೇ ಅವರ ಕಛೇರಿಯಲ್ಲಿ ಸಿಗುವ ಎಲ್ಲ therapy ಗಳ ಬಗ್ಗೆ ವಿವರ ತಿಳಿಸಿ ಒಂದು ಸಚಿತ್ರ ಪುಸ್ತಕ ಕೊಟ್ಟರು. ಮುಂದೆ ಮಾತನಾಡಲು ನನಗೇ ಹಿಂಜರಿಕೆಯಾಯಿತು. ಸಾವರಿಸಿಕೊಂಡೆ.
ಇಲ್ಲ, ನಾನು ಎಲ್ಲ ರೀತಿಯಿಂದಲೂ ಆರೋಗ್ಯವಾಗಿದ್ದೀನಿ. ಕಷ್ಟ ಸುಖದವರು ಬೇಕಾಗಿದ್ದಾರೆ ಎಂದು ಬೋರ್ಡ್ನಲ್ಲಿ ಬರೆದಿದೆಯಲ್ಲ, ಅಂತ ಬೋರ್ಡನ್ನು ನಾನು ಈವತ್ತೇ ಮೊದಲು ನೋಡುತ್ತಿರುವುದು. ಕಷ್ಟ ಸುಖದವರು ಅಂತ ಎಲ್ಲಿದ್ದಾರೆ? ಅವರೇಕೆ ನಿಮಗೆ ಬೇಕು?
ನೀವೇ ಈ ರೀತಿಯ ಪ್ರಶ್ನೆಗಳನ್ನು, ವಿವರಗಳನ್ನು ಮೊದಲ ಬಾರಿಗೆ ಕೇಳಿಕೊಂಡು ಬಂದಿರುವವರು. ನೋಡಿ ಇಲ್ಲಿ ನಾವು ನಾನಾ ತರದ therapy ಗಳನ್ನು ಕೊಡ್ತೀವಿ. ಮಂಡಿಗೆ, ಹಿಮ್ಮಡಿಗೆ, ಪಾದಕ್ಕೆ, ಮುಂಗೈಗೆ, ಬೆನ್ನಿಗೆ, ಕತ್ತಿನ ಹಿಂಭಾಗಕ್ಕೆ, ಭುಜಗಳಿಗೆ, ಹೀಗೆ. ದಿನವೂ ಇದು ನಡೆಯುತ್ತೆ. ಗಿರಾಕಿಗಳು ಕೂಡ ಚೆನ್ನಾಗಿಯೇ ಬರ್ತಿದ್ದಾರೆ. ಬಿಸನೆಸ್ ಕೂಡ ಚೆನ್ನಾಗಿದೆ. ಆದರೆ ನಮಗೆ ಕಷ್ಟ ಸುಖದವರು ಬೇಕು. ಇನ್ನೊಬ್ಬರು ಇಲ್ಲಿಗೆ ಬಂದು ಕಷ್ಟ ಸುಖವನ್ನು ಯಾವುದೇ ಅಳುಕಿಲ್ಲದೆ ಹೇಳಿಕೊಳ್ಳುವಂತೆ ಮಾತನಾಡಿಸುವವರು ಬೇಕು. ಅಂತಹವರಿಗಾಗಿ ಹುಡುಕಾಡುತ್ತಿದ್ದೇವೆ. ಇಷ್ಟು ದಿನವಾದರೂ ಇನ್ನೂ ಒಬ್ಬರು ಕೂಡ ಬಂದಿಲ್ಲ.
ನನಗೆ ಗೊಂದಲವಾಯಿತು. ಹಾಗೆಲ್ಲ ಅಂದರೇನು ಎಂದು ಕೇಳಿದೆ.

ಇಲ್ಲಿ ಬಿಡಿಸಿ ಹೇಳುವುದು ಏನಿದೆ? ಅಥವಾ ಇದನ್ನೂ ಕೂಡ ಬಿಡಿಸಿ ಹೇಳಬೇಕಾಗಿ ಬಂದಿರುವುದು ನಮ್ಮ ಸಮಸ್ಯೆ ಇರಬಹುದು. ಜಗತ್ತಿನಲ್ಲಿ ಎಲ್ಲರೂ ಎಲ್ಲದರ ಬಗ್ಗೆ ಮಾತನಾಡಬಹುದು, ಮಾತನಾಡುತ್ತಾರೆ. ಯುದ್ಧ, ಕ್ಷಾಮ, ಭಕ್ತಿ, ದೇವರು, ಶಿಕ್ಷಣ ನೀತಿ, ಬಾಹ್ಯಾಕಾಶ, ಕಾಡ್ಗಿಚ್ಚು, ಕ್ರಿಕೆಟ್ ಸ್ಕೋರ್. ಆದರೆ ಅವರ ದಿನನಿತ್ಯದ ಕಷ್ಟ ಸುಖ ಇರುತ್ತಲ್ಲ, ಅದನ್ನು ಹೇಳಿಕೋಬೇಕು. ಅದನ್ನು ಇನ್ನೊಬ್ಬರು ಹೇಳುವಾಗ ಕೇಳಿಸಿಕೊಳ್ಳಬೇಕು. ಇನ್ನೊಬ್ಬರಿಂದ ಇದನ್ನೆಲ್ಲ ಹೇಳಿಸುವ, ಹೊರಡಿಸುವ ಕಲೆ ಗೊತ್ತಿರಬೇಕು. ಈಗ ಅಂತಹವರು ಇಲ್ಲವೇ ಇಲ್ಲ.
ಪಾಕ್ ಆಕ್ರಮಿತ ಕಾಶ್ಮೀರ, ಹಣದುಬ್ಬರ, ಹೊಸ ಬ್ರಾಂಡಿನ ಕಾರು ಎಂದು ಮಾತು ಶುರು ಮಾಡಿಕೊಂಡು ನೀವು ಕೂಡ ನಿರರ್ಗಳವಾಗಿ ಮಾತಾಡಬಹುದು. ಯಾರು ಯಾರ ಹತ್ತಿರ ಬೇಕಾದರೂ ಮಾತಾಡಿಬಿಡಬಹುದು. ನಿಮ್ಮ ಮಗಳಿಗೆ ಮದುವೆ ಆಗಿದೆಯೇ? ಯಾಕೆ ಅಷ್ಟೊಂದು ಪ್ರಯತ್ನ ಪಟ್ಟರೂ ಆಗ್ತಾ ಇಲ್ಲ? ಮದುವೆ ಆದರೂ ಏಕೆ ಬೇಗ ಮಕ್ಕಳನ್ನು ಮಾಡಿಕೊಳ್ಳೋಲ್ಲ? ದಿನಕ್ಕೆ ಏಳೆಂಟು ಘಂಟೆ ಏಕೆ ಮೊಬೈಲ್ನಲ್ಲೇ ಇರ್ತಾರೆ? ಇದ್ದಕ್ಕಿದ್ದಂತೆ ಮನೆಯಲ್ಲಿ ಏಕೆ ಇಬ್ಬರಿಗೂ ಒಟ್ಟಿಗೇ ಹರ್ನಿಯಾ ಶಸ್ತ್ರಚಿಕೆತ್ಸೆ ಆಗಬೇಕಾಗುತ್ತದೆ? ಮೂವತ್ತು ವರ್ಷಕ್ಕೇ ಏಕೆ ತಲೆ ಬೋಳಾಗುತ್ತೆ? ಇದೆಲ್ಲವೂ ಮನುಷ್ಯನನ್ನು ಬಾಧಿಸುತ್ತದೆ. ಆದರೆ ಯಾರೂ ಯಾರಿಗೂ ಹೇಳಿಕೊಳ್ಳೋಕೆ ಹೋಗೋಲ್ಲ. ಹೀಗೆ ಕುಳಿತುಕೊಂಡು ಜನರನ್ನು ಮಾತನಾಡಿಸಲು, ಅವರಿಂದ ಕಷ್ಟು ಸುಖ ಹೇಳಿಸಲು ನಮಗೆ ಈಗ ಜನ ಬೇಕು. ಎಷ್ಟು ತಿಂಗಳಿಂದ ಇಲ್ಲಿ ಬೋರ್ಡ್ ಹಾಕಿದ್ದೇವೆ! ಒಂದೇ ಒಂದು ಅರ್ಜಿ ಕೂಡ ಬಂದಿಲ್ಲ. ಕಷ್ಟ ಸುಖದವರು ಬೇಕು ಅಂತ ಬೋರ್ಡ್ ಹಾಕಿ ತಿಂಗಳುಗಳೇ ಆಯಿತು.
ಸುಮಂಗಲಿ ಕಳಕಳಿಯಿಂದಲೇ ಹೇಳುತ್ತಿದ್ದರು. ಅವರು ಹೇಳುತ್ತಿರುವುದೆಲ್ಲ ನಿಜ ಅನಿಸಿತು. ನಿಜ ಅನಿಸಿಯೇ ಹೇಳಿರಬೇಕು.
ಸರಿ ಮೇಡಂ. ಇದಕ್ಕೆಲ್ಲ ಏನು ವಿದ್ಯಾರ್ಹತೆ ಬೇಕು. ತರಬೇತಿ ಎಲ್ಲಿ ಸಿಗುತ್ತೆ.
ಸುಮಂಗಲಿಯ ಮುಖದಲ್ಲಿ ಹಾಸ್ಯದ ಎಳೆಯೊಂದು ಮೂಡಿತು.
ನೋಡಿ, ಹಿಂದಿನ ಕಾಲದಲ್ಲಿ ಜನ, ಜಗುಲಿ ಮೇಲೆ, ಮೆಟ್ಟಿಲ ಕೆಳಗೆ, ಹಿತ್ತಲಲ್ಲಿ, ಉದ್ಯಾನವನದಲ್ಲಿ ಕುಳಿತುಕೊಂಡು ಇದನ್ನೆಲ್ಲ ಮಾತಾಡುತ್ತಿದ್ದರಲ್ಲವೇ? ಅಂತಹ ದಿನಗಳು, ಅಂತಹ ಜನರು ಮತ್ತೆ ಬರಬೇಕು ಅಂತ ನಮ್ಮ ಆಸೆ.
ನಿಮ್ಮಿಂದಲೇ ಪ್ರಾರಂಭವಾಗಲಿ. ನಾಳೆಯಿಂದ ಕೆಲಸಕ್ಕೆ ಬನ್ನಿ ಎಂದು ಶುಭಾಶಯ ಕೋರಲು ಕೈ ನೀಡೇ ಬಿಟ್ಟರು.
೭೨ ವರ್ಷದ ನನ್ನನ್ನು, ನನ್ನಂತಹವನನ್ನು ಕೂಡ ಹೀಗೆ ದಿಢೀರನೆ, ಅದೂ ಗುರುತು ಪರಿಚಯವಿಲ್ಲದವನನ್ನು ಕೆಲಸ ಮಾಡಲು ನಾಳೆಯಿಂದಲೇ ಆಹ್ವಾನಿಸುತ್ತಿದ್ದಾರಲ್ಲ ಎಂದು ಗಲಿಬಿಲಿಯಾಯಿತು. ಅವರ ವಿಚಾರ, ಮಾತು, ಆಹ್ವಾನ, ಎಲ್ಲವೂ ವಿಚಿತ್ರವೆನಿಸಿತು. ಆದರೆ ಕಣ್ಣೆದುರಿಗೇ ನಡೆಯುತ್ತಿದೆಯಲ್ಲ ಎನಿಸಿತು.
ಆಯ್ತು. ಮನೆಯಲ್ಲಿ ವಿಚಾರಿಸಿಕೊಂಡು ಬರ್ತೀನಿ ಅಂತ ಸಡಗರದಿಂದ ಹೇಳಿ ಮನೆಗೆ ಓಡೋಡಿ ಬಂದು ಉತ್ಸಾಹದಿಂದ ಹೇಳಿಕೊಂಡೆ.
ನನ್ನ ಉತ್ಸಾಹ, ಸಂಭ್ರಮ ಕಂಡು, ಈ ಇಳಿ ವಯಸ್ಸಿನಲ್ಲಿ ಇಂತಹ ಪೆದ್ದುತನವೇ ಎಂದು ಎಲ್ಲರೂ ನಕ್ಕರು. ನಗುತ್ತಲೇ ಇದ್ದರು. ಇದನ್ನು ಹೇಳುವಾಗ ಸಂಜೆ ಹೊತ್ತು ಮಂಡಕ್ಕಿ ಪುರಿ ತಿನ್ನುತ್ತಿದ್ದರು. ತಮಾಷೆ ಮಾತೆಂದು ಖುಷಿಯಾಗಿ ಅಡುಗೆ ಮನೆಯಿಂದ ಡಬ್ಬ ತಂದು ಪುರಿಯನ್ನು ಇನ್ನೊಂದು ಸಲ ಎಲ್ಲರ ಮುಂದೆ ಗುಡ್ಡೆ ಹಾಕಿಕೊಂಡು ಬಾಯಿ ತುಂಬಾ ನಗುತ್ತಾ ಚಪ್ಪರಿಸುತ್ತಾ ತಿಂದರು.
ಆಯ್ತು. ಹಾಗೆಲ್ಲ ಪೆದ್ದು ಪೆದ್ದಾಗಿ ಹೋಗಬೇಡಿ. ಇದೆಲ್ಲವನ್ನೂ ನಾವು ಮಾತನಾಡುವುದರಿಂದ, ಇನ್ನೊಬ್ಬರಿಂದ ಮಾತನಾಡಿಸುವುದರಿಂದ ಏನೂ ಪರಿಣಾಮವಾಗುವುದಿಲ್ಲ. ನಾವು ಹೇಳಿಕೊಂಡರೂ ಅಷ್ಟೇ, ಇನ್ನೊಬ್ಬರ ಹತ್ತಿರ ಹೇಳಿಸಿದರೂ ಅಷ್ಟೇ. ಅದಕ್ಕೇ ಯಾರೂ ಸತ್ಸಂಗದ ಸಭೆಗಳಲ್ಲಿ ಇದನ್ನೆಲ್ಲ ಮಾತಾಡೋಲ್ಲ. ಇದನ್ನೆಲ್ಲ ಒಳಗಡೇನೇ ಇಟ್ಟುಕೊಂಡು ಜೀವನ ಸಾಗಿಸಬೇಕು. ಜನ ಜೀವನ ಸಾಗಿಸ್ತಾರೆ.
ನಾಳೆಯಿಂದ Main Road ನಲ್ಲಿ ವಾಕಿಂಗ್ ಹೋಗಬೇಡಿ ಅಂತ ನಿಷೇಧಾಜ್ಞೆ ಹೊರಡಿಸಿದರು.
ಭಯದಲ್ಲಿ ಒಂದಷ್ಟು ದಿನ ನಾನು ಸುಮ್ಮನಿದ್ದೆ. ಮತ್ತೆ ಎಂದಿನಂತೆ ಹಿಂದಿನ ರೀತಿಯಲ್ಲೇ ವಾಕಿಂಗ್ ಹೋಗಲು ಶುರು ಮಾಡಿದೆ.

ಈಗಲೂ ಅದೇ ಕಟ್ಟಡ.
ಅದೇ ಬೋರ್ಡು.
ಅದೇ ಜಾಹಿರಾತು,
ಇಲ್ಲ, ಪ್ರಾರ್ಥನೆ – “ಕಷ್ಟ ಸುಖದವರು ಬೇಕು.” ದಿನವೂ ಕಾಣುತ್ತಿದೆ,
ಕಾಣುತ್ತದೆ,
ಕಾಣುತ್ತಲೇ ಇದೆ.

ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.

