ಪೂರ್ಣಚಂದ್ರ ತೇಜಸ್ವಿಯವರು ಹೊಸ ಸಹಸ್ರಮಾನ ಶುರುವಾಗುವಾಗ ಬರೆದ ‘ಮಿಲನಿಯಮ್ ಸೀರೀಸ್‌’ನಲ್ಲಿ ಕಾಂಬೋಡಿಯಾದ ಅಂಗ್‌ಕೋರ್ ವಾಟ್‌ ದೇವಸ್ಥಾನದ ಬಗ್ಗೆ ಓದುವವರೆಗೆ ನನಗೆ ಅದರ ಬಗ್ಗೆ ಏನೇನೂ ಗೊತ್ತಿರಲಿಲ್ಲ. ಮೊದಲ ಸಲ ಓದಿದಾಗ ಎಂಥ ರೋಮಾಂಚನವಾಗಿಹೋಗಿತ್ತು! ಎಲ್ಲೋ ದೂರ ದೇಶದಲ್ಲಿ ಹಿಂದೂ ದೇವಸ್ಥಾನವೊಂದು ಇದೆ ಅನ್ನುವುದೇ ಒಂದು ರೋಮಾಂಚನದ ವಿಷಯ. ಲೇಖನದ ಜೊತೆ ಹಾಕಿದ್ದ ಫೋಟೋ ನೋಡಿದ ಮೇಲಂತೂ ನಾನು ದಂಗಾಗಿದ್ದೆ. ದೇಗುಲ ಮತ್ತು ಅದನ್ನು ಬಳಸಿದ್ದ ಆ ಮರ ಎರಡೂ ಉತ್ಕಟ ಪ್ರೇಮದಲ್ಲಿರುವ ಇಬ್ಬರು ಪ್ರೇಮಿಗಳ ಹಾಗೆ ಕಂಡರು… ಅದ್ಭುತ ಮೈಥುನದಲ್ಲಿರುವ ಪ್ರೇಮಿಗಳಂತೆ! ಆ ಸ್ಥಿತಿಯಲ್ಲಿ ಅವ ಉಸಿರಾಡದಂತೆ ಅವಳನ್ನು ಬಳಸಿದ್ದನೋ-ಇವಳು ಅವನನ್ನು ವಯ್ಯಾರದಿಂದ ಸುತ್ತಿದ್ದಳೋ ಅಂತ ಕೇಳಿದರೆ ಏನು ಹೇಳುತ್ತೀರ ನೀವು?! ಹಾಗಿತ್ತು ಆ ನೋಟ. ಆದರೆ ಮತ್ತೂ ಒಂದು ದುರಂತದ ಸಂಗತಿ ಅಂದರೆ ಅವು ಅತೀ possessiveness ಇರುವ ಪ್ರೇಮಿಯೊಬ್ಬನ/ಳ ರೀತಿ ಕೂಡಾ ಇತ್ತು!! ಮರವನ್ನು ತೆಗೆದರೆ ದೇಗುಲಕ್ಕೆ ಆಧಾರವೇ ಇಲ್ಲದೆ ಬಿದ್ದುಹೋಗುವ ಸ್ಥಿತಿ… ಹಾಗಂತ ಇರುವ ಹಾಗೇ ಬಿಟ್ಟು ಬಿಡೋಣವೆಂದರೆ ಅಗಾಧ ಹರಡಿದ್ದ ಮರ ದೇಗುಲಕ್ಕೆ ಉಸಿರಾಡಲೂ ಬಿಡದೇ, ಅದರ ಅಸ್ತಿತ್ವಕ್ಕೇ ಸಂಚಕಾರ ತರಬಹುದೇನೋ ಅನ್ನಿಸುವಂತೆ… ಹೇಳಿ, ಇಂಥ ದೇಗುಲ ನೋಡಲೇಬೇಕೆನ್ನುವ ಹುಚ್ಚು ಹತ್ತಿದ್ದರಲ್ಲಿ ಯಾವ ಆಶ್ಚರ್ಯವಿತ್ತು?

ನಾವು ಥಾಯ್‌ಲ್ಯಾಂಡ್‌ಗೆ ಹೋಗಿ ಮೂರು ದಿನ ಪಟ್ಟಾಯಾದಲ್ಲಿ ಕಳೆದು ಆ ನಂತರ ಕಾಂಬೋಡಿಯಾಗೆ ಹೋಗುವ ಪ್ಲ್ಯಾನ್ ಹಾಕಿದೆವು. ಜನವರಿ 20ರ ಮಧ್ಯರಾತ್ರಿ ಬೆಂಗಳೂರಿಂದ ಹೊರಟು ಆ ನಂತರ ಸೀದಾ ಪಟ್ಟಾಯಕ್ಕೆ ಹೋಗಿದ್ದಾಯ್ತು. ಈ ಬ್ಯಾಂಕಾಕ್ ಮತ್ತು ಪಟ್ಟಾಯ ಇವೆಲ್ಲ ನನಗೆ ಆಸಕ್ತಿಯಿರದ ಜಾಗಗಳಾದ್ದರಿಂದ ಅಲ್ಲೆಲ್ಲ ಎಷ್ಟೇ ಅಡ್ಡಾಡಿದರೂ, ನೋಡಿದರೂ ಯಾವುದೂ ಮನಸ್ಸಿಗೆ ಇಳಿಯಲೇ ಇಲ್ಲ. ಮನಸ್ಸಿನ ತುಂಬ ಅಂಗ್‌ಕೋರ್ ವಾಟ್‌ಗೆ ಯಾವಾಗ ಹೋಗುತ್ತೀನೋ ಅನ್ನುವ ತುಡಿತವೊಂದೇ. ಹಾಗೂ ಹೀಗೂ ಪಟ್ಟಾಯಾ ಪ್ರವಾಸದಿಂದ ಬ್ಯಾಂಕಾಕ್‌ಗೆ ವಾಪಸ್ಸಾಗಿ ಮರುದಿನ ಕಾಂಬೋಡಿಯಾಗೆ ಹೊರಟಾಗಲೇ ಮನಸ್ಸು ಶಾಂತವಾಗಿದ್ದು. ನಾವು ಕಾಂಬೋಡಿಯಾದಿಂದ ಸಿಯಮ್ ರೀಪ್‌ಗೆ-ಅಂದರೆ ಅಂಗ್‌ಕೋರ್ ವಾಟ್ ಇರುವ ಜಾಗಕ್ಕೆ ರೋಡ್ ಪ್ರಯಾಣ ಮಾಡೋಣ ಅಂತ ನಿರ್ಧರಿಸಿದ್ದೆವು. ವಿಮಾನದಲ್ಲಿ ಕೂತು ಹಾರಿಬಿಟ್ಟರೆ ಅಲ್ಲಿನ ಹಳ್ಳಿಗಳು, ಮನೆಗಳು, ರಸ್ತೆಗಳು ಯಾವುದರ ಪರಿಚಯವೂ ಆಗುವುದೇ ಇಲ್ಲ. ಹಾಗಾಗಿ ರೋಡ್ ಮೂಲಕ ಹೋದರೆ ಅವೆಲ್ಲದರ glimpse ಆದರೂ ಸಿಗುತ್ತದೆ ಅನ್ನುವ ಆಸೆ ನಮ್ಮದು. ಹಾಗಾಗಿ ಬ್ಯಾಂಕಾಕ್‌ನಿಂದ 300 ಕಿಲೋಮೀಟರ್ ದೂರದ ಸಿಯಮ್ ರೀಪ್‌ಗೆ ಬಸ್ಸಿನಲ್ಲಿ ಹೊರಟಿದ್ದಾಯ್ತು.

ಕಾಂಬೋಡಿಯಾ ಮತ್ತು ಥಾಯ್‌ಲ್ಯಾಂಡ್ ನಡುವಿನ ಬಾರ್ಡರ್ ಪ್ರದೇಶವನ್ನು ಅರಣ್ಯಪ್ರಥೇಟ್ ಅನ್ನುತ್ತಾರೆ. ಕನ್ನಡದ ಯಾವನೋ ಇಲ್ಲಿ ಬಂದು ಅರಣ್ಯ ಪ್ರದೇಶ ಅಂತ ಉದ್ಗರಿಸಿದ್ದಕ್ಕೆ ಇದಕ್ಕೆ ಈ ಹೆಸರು ಬಂತಾ ಅಂತ ಉತ್ತರವಿಲ್ಲದ ಪ್ರಶ್ನೆ ಕೇಳಿಕೊಂಡೆ. ಈಗ ಅಲ್ಲಿ ಅರಣ್ಯವೆಲ್ಲ ಕಾಣಲಿಲ್ಲ ಅನ್ನುವುದು ಬೇರೆಯದೇ ಮಾತು. ಬ್ಯಾಂಕಾಕ್‌ನಿಂದ ಈ ಅರಣ್ಯಪ್ರಥೇಟ್‌ಗೆ ಮೂರು ಘಂಟೆ ಪ್ರಯಾಣ. ಥಾಯ್‌ಲ್ಯಾಂಡ್‌ನ ವಾಹನದಲ್ಲಿಳಿದು, ವೀಸಾ ಸಂಪಾದಿಸಿ ನಂತರ ಮತ್ತೊಂದು ಬಸ್ ಹಿಡಿದು ಸಿಯಮ್ ರೀಪ್ ಸೇರಬೇಕಿತ್ತು. ಈ ಥಾಯ್‌ಲ್ಯಾಂಡಿನಲ್ಲಿ ನಮ್ಮ ಗೈಡ್ ಆಗಿದ್ದವ ತುಂಬ ನಗುಮುಖದ ಸರಸಿ ಮನುಷ್ಯ.. ಅವನ ಹೆಸರು ಸಂಪೂರ್ಣ. ಅವನನ್ನು ನೋಡಿ ಥಾಯ್ ಜನರೆಲ್ಲ ಹೀಗೇ ಇರಬೇಕೇನೋ ಅಂತ ಭ್ರಮೆಗೆ ಬಿದ್ದಿದ್ದೆವು. ಆದರೆ ಈಗ ಹತ್ತಿದ ವ್ಯಾನ್‌ನ ಡ್ರೈವರ್ ಇದ್ದನಲ್ಲ, ಅವ ಇಡೀ ಜಗತ್ತಿನ ಕಾಠಿಣ್ಯವನ್ನೆಲ್ಲ ಮುಖದಲ್ಲಿ ತುಂಬಿಕೊಂಡು ಜಗತ್ತಿನ ಭಾರವೆಲ್ಲ ಅವನ ತಲೆಯ ಮೇಲೇ ಬಿದ್ದಿದೆಯೇನೋ ಅನ್ನುವ ಹಾಗೆ ಕೂತಿದ್ದ. ಅಸಾಧ್ಯ ಸಿಡುಕ. ಮುಖದಲ್ಲಿ ನಗುವಿನ ಸುಳಿವೇ ಇಲ್ಲ. ನಾವು ಕೂತಿದ್ದ ಮಿನಿ ಬಸ್ಸಿನಲ್ಲಿ ಒಂದು ಬೋರ್ಡ್ ‘ತಿಂದರೆ.ಕುಡಿದರೆ 500 ಬಾತ್.. ಅಂದರೆ 1000 ರೂಪಾಯಿ ದಂಡ ತೆರಬೇಕು’ ಅಂತ. ಅದು ಅವನದ್ದೇ ರೂಲ್ ಇರಬೇಕು. ನಾವು ನಮ್ಮೂರಿನ ಬಸ್ಸಿನಲ್ಲಿ No smoking ಅಂತ ಹಾಕಿದ್ದರೂ ಆರಾಮಕ್ಕೆ ಬೀಡಿ ಸೇದುತ್ತಾ ಇರುತ್ತಾರಲ್ಲ ಆ ಥರ ಇರಬೇಕು ಅಂದುಕೊಂಡೆವು. ಬ್ಯಾಂಕಾಕ್‌ನ ಹೋಟೆಲ್‌ನಲ್ಲಿ ಬೆಳಗಿನ ತಿಂಡಿಯ ಕಥೆ ಏನು ಹೇಳಲಿ? ನಮ್ಮೂರಲ್ಲಿ ಕಾರ್ನ್ ಫ಼್ಲೇಕ್ಸ್ ಕೊಟ್ಟರೆ ಥೂ ಅಂತ ಮುಖ ಸಿಂಡರಿಸುವ ನಾನು ಅಲ್ಲಿ ಕಾರ್ನ್ ಫ಼್ಲೇಕ್ಸ್ ಇಲ್ವಾ ಅಂತ ತಡಕಾಡುವ ಸ್ಥಿತಿ! ಎಲ್ಲ ಮಾಂಸಾಹಾರಿ ಅಡುಗೆಗಳ ಸಾಲು ಸಾಲು. ಅದನ್ನು ತಿನ್ನದ ನನ್ನಂಥ ಪರಮ ಪಾಪಿಗಳಿಗೆ ಕೆಟ್ಟ ಮುಖದ ಬ್ರೆಡ್ ಮತ್ತೆ ಅದರ ಜೊತೆಗೆ ಎರಡು ಥರದ ಜಾಮ್. ಜೊತೆಗೆ ಬೆಳ್ಳಂಬೆಳಗ್ಗೆ ಎದ್ದು ಕಲ್ಲಂಗಡಿ ಹಣ್ಣು. ಅಷ್ಟೇ!!! ಇನ್ನೇನೇನೂ ಗತಿ ಇಲ್ಲ. ನೂಡಲ್ಸ್ ತೆಗೆದರೆ ಅದರಲ್ಲಿ ಕೂಡಾ ‘ಆ’ ತರಕಾರಿಗಳು. ಯಾವ ಪಾತ್ರೆ ತೆಗೆದರೂ ಅದೇ. ಪಟ್ಟಾಯಾದಲ್ಲಿ ಇಡ್ಲಿ, ಮಸಾಲಾ ರೈಸ್, ಸಾಂಬಾರ್, ಚಟ್ನಿ ಅಂತ ಎಲ್ಲ ಸಿಗುತ್ತಿದ್ದುದರಿಂದ ಹೊಟ್ಟೆ ಬಿರಿಯ ತಿನ್ನುತ್ತಿದ್ದೆವು. ಹಾಗಾಗಿ ನಮ್ಮೂರು ಬಿಟ್ಟು ಬಂದ ಮೇಲೆ ಕೂಡಾ ನಮ್ಮ ದೇಶದಲ್ಲೇ ಇದ್ದೀವೇನೋ ಅನ್ನುವ ಥರ ಸುಖವಾಗಿದ್ದೆವು.

ಈ ಥರ ಬ್ರೆಡ್ ಅನ್ನು ತಿಂದು ನೊಂದು ಬೆಂದಿದ್ದೆವಲ್ಲ ಅಂತ ಬಸ್ಸಿನಲ್ಲಿ ಕೂತ ಸ್ವಲ್ಪ ಹೊತ್ತಿಗೆ ಎಲ್ಲರೂ ಅವರವರ ತಿಂಡಿ ಪ್ಯಾಕೆಟ್ ತೆಗೆದರು. ಕೋಡುಬಳೆ, ಅವಲಕ್ಕಿ, ನಿಪ್ಪಟ್ಟು, ಒಬ್ಬಟ್ಟು ಏನೆಲ್ಲ ಇತ್ತು. ಬಾಯಲ್ಲಿ ನೀರೂರಿಸಿಕೊಳ್ಳುತ್ತ ಪ್ಯಾಕೆಟ್ ತೆಗೆದೆವೋ ಇಲ್ಲವೋ ಈ ಗಂಟು ಮುಖದ ಡ್ರೈವರ್ ಅದನ್ನೆಲ್ಲ ತಿನ್ನಕೂಡದು ಅಂತ ಆರ್ಡರ್ ಹೊರಡಿಸಿದ. ಯಾಕೆ ಅಂದರೆ ಮಾತಿಲ್ಲ, ಕಥೆಯಿಲ್ಲ… ಸುಮ್ಮನೆ ಎದುರಿಗಿದ್ದ ಬೋರ್ಡ್ ತೋರಿಸಿದ. ನಾವು ಜೋಲುಮುಖ ಹಾಕಿ ಎಲ್ಲ ಪ್ಯಾಕೆಟ್ ಒಳಗಿಟ್ಟೆವು. ಆಮೇಲೆ ಸ್ವಲ್ಪ ಹೊತ್ತಾಯಿತು. ಸದ್ದಾಗದಂತೆ ಪ್ಯಾಕೆಟ್ ತೆಗೆದು ಕೋಡುಬಳೆ ಮೆತ್ತಗೆ ಮಾಡಿ ಸದ್ದಿಲ್ಲದೆ ಮುಕ್ಕುತ್ತಿದ್ದ ನಮ್ಮ ಜೊತೆಯವರೊಬ್ಬರನ್ನು ನೋಡಿ ನಗು ಬಂತು. ಸದ್ದು ತಡೆಯಬಹುದು. ಆದರೆ ಆ ಪರಿಮಳ? ಅದನ್ನೆಲ್ಲಿ ಮುಚ್ಚಿಡಲು ಸಾಧ್ಯ? ಆಕೆ ಪಾಪ ಸಖತ್ ಗುಟ್ಟಿನಲ್ಲಿ ತಿನ್ನುತ್ತಿರುವವರಂತೆ ಮುಖ ಮಾಡಿದ್ದರು. ಇನ್ನೊಂದಿಷ್ಟು ಹೊತ್ತಾಯಿತು… ಬೀರೇಶ್ವರರ ಕೈಗೆ ಕ್ಯಾನ್‌ಗಳು ಬಂದವು. ಅದು ಪರಿಮಳದಲ್ಲಿ ಕೋಡುಬಳೆಯ ಅಣ್ಣ!! ಅದನ್ನು ಮುಚ್ಚಿಡಲು ಸಾಧ್ಯವಾ? ಆ ಗಂಟುಮುಖದವ ಕನ್ನಡಿ ಅಡ್ಜಸ್ಟ್ ಮಾಡಿ ಅದರೊಳಗಿಂದ ಎಲ್ಲ ನೋಡುತ್ತಲೇ ಇದ್ದ. ಆದರೆ ಕೂಡಾ ಎಲ್ಲ ತಿಂದೇ ತಿಂದರು, ಕುಡಿದೇ ಕುಡಿದರು. ಅಷ್ಟರಲ್ಲಿ ಬಾರ್ಡರ್ ಬಂದಿತು.

ನಾವು ಹೋಗುತ್ತಿರುವಾಗಲೇ ನಮ್ಮ ಗೈಡ್ ಹೇಳಿದ್ದರು ‘ಬಾರ್ಡರ್ ಅಂದರೆ ಮತ್ತು ವೀಸಾ ಆಫೀಸ್ ಅಂದರೆ ಪೂರಾ ಹೈ ಟೆಕ್ ಕಲ್ಪನೆ ಏನೂ ಮಾಡಿಕೋಬೇಡಿ. ಅದೊಂದು ಮಾಮೂಲಿ ಜಾಗವಷ್ಟೇ. ಹಾಗಾಗಿ ಎಲ್ಲ procedure ನಿಧಾನಕ್ಕೆ ಸಾಗುತ್ತೆ. ತಾಳ್ಮೆ ಇಟ್ಕೋಬೇಕು’ ಅಂತ. ಆದರೆ ಈಗ ಎದುರಾದ ಬಾರ್ಡರ್ ನೋಡಿ ದಂಗಾದೆ. ಅಸಾಧ್ಯ ಕೊಳಕು ಜಾಗ. ಸಿಕ್ಕಾಪಟ್ಟೆ ಜನ. ರಸ್ತೆ ಪಕ್ಕದಲ್ಲಿ ಹುಣಿಸೆಹಣ್ಣು ಮತ್ತೆ ಇನ್ನೆಂಥದ್ದೋ ಹಣ್ಣುಗಳನ್ನೆಲ್ಲ ಗುಡ್ಡೆ ಹಾಕಿಕೊಂಡು ಮಾರುತ್ತಾ ಕೂತ ಸಣ್ಣ ಪುಟ್ಟ ವ್ಯಾಪಾರಿಗಳು, ಅಲ್ಲೇ ಒಂದು ಮರಕ್ಕೆ ಒಂದು ಬೆಡ್ ಶೀಟ್ ಕಟ್ಟಿ ಮಗುವನ್ನು ಮಲಗಿಸಿದ್ದ ಅಮ್ಮ, ಅಲ್ಲೇ ಕೊಳಕು ಕಟ್ಟೆಯ ಮೇಲೆ ಕೂತು ನೂಡಲ್ಸ್ ಮಾಡಿ ತಿನ್ನುತ್ತಾ ಕೂತಿದ್ದ ದಣಿದ ಮುಖದ ಯುವಕ, ರಸ್ತೆ ಬದಿಯಲ್ಲಿ ರಿಪೇರಿಗಾಗಿ ಅಗೆದಿದ್ದ ರಾಶಿ ರಾಶಿ ಮಣ್ಣು, ನಾನಾ ರೂಪದ ತಳ್ಳು ಗಾಡಿಗಳು… ರಸ್ತೆಯ ಮೂಲಕ ಬಾರ್ಡರ್ ದಾಟಿದ್ದೂ ಸಾರ್ಥಕ ಅನ್ನಿಸಿ ಬಿಟ್ಟಿತು ಆ ಕ್ಷಣದಲ್ಲಿ. ಎಷ್ಟೊಂದು ಬಗೆ ಬಗೆಯ ಜನರು!

ನೆತ್ತಿಯ ಮೇಲೆ ಬೆಳಿಗ್ಗೆ ಹತ್ತೂವರೆಯ ಹೊತ್ತಿಗೇ ಸುಡುವ ರಣ ಬಿಸಿಲು. ಥಾಯ್‌ಲ್ಯಾಂಡ್‌ಗಿಂತ ತುಂಬ ಸೆಖೆ. ಆ ಸುಡುವ ಬಿಸಿಲಿನಲ್ಲಿ ಸುಮಾರು ಎಲ್ಲ ಜನರ ತಲೆಯ ಮೇಲೂ ಒಂದೊಂದು ಸ್ಕಾರ್ಫ಼್ ಮತ್ತು ಅದಕ್ಕೆ ಮ್ಯಾಚ್ ಆಗುವಂತ ಒಂದು ಬಟ್ಟೆಯ ಹ್ಯಾಟ್. ಆ ಬಿಸಿಲಲ್ಲಿ ಅದನ್ನು ಹಾಕಿದ್ದ ಅವರನ್ನು ನೋಡಿ ನನಗೇ ಸೆಖೆಯಾಗಲು ಶುರುವಾಯ್ತು! ಮತ್ತೆ ಎಲ್ಲ ಹೆಂಗಸರ ಮತ್ತು ಗಂಡಸರ ಉಡುಪೆಂದರೆ ಪ್ಯಾಂಟ್ ಮತ್ತು ಶರ್ಟ್. ಮುದುಕಿಯರಿರಲಿ, ಹುಡುಗಿಯರಿರಲಿ ಅದೇ ಡ್ರೆಸ್ ಕೋಡ್ ಮತ್ತು ಆ ಸೆಖೆಯಲ್ಲೂ ಸುಮಾರು ಜನ ಸ್ವೆಟರ್ ಹಾಕಿದ್ದನ್ನು ನೋಡಿ ಮತ್ತಿಷ್ಟು ದಣಿವು ಬಂದು ಬೆವತೆ. ದೇಶ ದೇಶಗಳ ಮಧ್ಯದ ಬಾರ್ಡರ್ ಹೀಗೂ ಇರಬಹುದು ಅನ್ನುವುದು ನನಗೆ ಗೊತ್ತಾಯಿತು. ಬಾರ್ಡರ್ ಅಂತ ಇದ್ದ ಕಮಾನಿನಡಿಯಲ್ಲಿ ಜನ ಸಾಗರ. ಆ ಕಡೆಯಿಂದ ಈ ಕಡೆಗೆ ಮತ್ತು ಈ ಕಡೆಯಿಂದ ಆ ಕಡೆಗೆ ಅಸಂಖ್ಯಾತ ಸಾಮಾನುಗಳ ಸಾಗಣೆ. ಎಳನೀರು, ತೆಂಗಿನಕಾಯಿ, ಪ್ಲಾಸ್ಟಿಕ್ ಸಾಮಾನು, ಕಬ್ಬಿಣದ ಬಕೆಟ್, ಗೋಣಿ ಚೀಲಗಳು, ತರಕಾರಿಗಳು, ಚಾಪೆ, ದಿಂಬು, ಬಟ್ಟೆಗಳು, scrap… ಹೋಗುತ್ತಲೇ ಇತ್ತು, ಬರುತ್ತಲೇ ಇತ್ತು. ಅಲ್ಲಿಳಿದ ಕೂಡಲೇ ಗಮನಿಸಿದ ಮತ್ತೊಂದು ವಿಷಯವೆಂದರೆ ಚಿತ್ರ ವಿಚಿತ್ರ ತಳ್ಳುಗಾಡಿಗಳು. ಯಾವುದೋ ಮನುಷ್ಯ ಎಳೆಯುತ್ತಿರುವ ಗಾಡಿಯ ಒಳಗೆ ಮನುಷ್ಯರು ಕೂತಿರುತ್ತಿದ್ದರು. ಇನ್ಯಾವುದೋ ಗಾಡಿಯನ್ನು ಎಳೆಯುತ್ತಿದ್ದಾತನ ಪರಿಚಯಸ್ಥ ಎದುರಾಗಿ ಅವನ ಗಾಡಿಯನ್ನು ಸ್ಕೂಟರಿಗೆ ಅಟ್ಯಾಚ್ ಮಾಡಿ ಭರ್ರಂತ ಹೊರಡುತ್ತಿದ್ದ. ಯಾವುದೋ ಗಾಡಿಗೆ ಇದ್ದಕ್ಕಿದ್ದ ಹಾಗೆ ಇನ್ಯಾವುದೋ ಆಟೋ ಹಿಂದಿನ ಕೊಂಡಿ ಸಿಕ್ಕಿಸಿ ಹೊರಟು ಬಿಡುತ್ತಿದ್ದರು… ನನಗಂತೂ ಇವೆಲ್ಲ ನೋಡಲು ತಮಾಷೆಯಾಗಿತ್ತು.

ನಮ್ಮ ಟೂರ್ ಆಪರೇಟರ್ ಪುಣ್ಯಾತ್ಮ ಅಲ್ಲಿದ್ದ ಕೂಲಿಯವರತ್ತ ತಿರುಗಿಯೂ ನೋಡದೇ ನಮ್ಮ ಕೈಲೇ ಲಗೇಜ್ ಹೊರೆಸುವ ಶಪಥ ತೊಟ್ಟಿದ್ದ ಅಂತ ಕಾಣುತ್ತದೆ. ಎಷ್ಟೊಂದು ಜನ ಕೂಲಿಯವರು ಕೇಳಿದರೂ ಈತ ಕೇಳಿಸದವರಂತೆ ಎತ್ತಲೋ ನೋಡುತ್ತ ನಿಂತಾಗ ನಮ್ಮ ನಮ್ಮ ಲಗೇಜ್‌ಗಳಿಗೆ ಕೈ ಹಾಕಿ ಆ ಹೆಣಭಾರದ ಸೂಟ್‌ಕೇಸ್ ಎಳೆದುಕೊಂಡು ಬಾರ್ಡರ್ ಕಡೆ ಕಾಲೆಳೆದುಕೊಂಡು ನಡೆದೆವು. ಎದುರಲ್ಲಿ ‘Kingdom of Cambodia’ ಅಂತ ಬರೆದಿದ್ದ ದೊಡ್ಡ arch ಕಂಡಾಗ ಈ ಕ್ಷಣಕ್ಕಾಗಿ.. ಈ ಕ್ಷಣಕ್ಕಾಗಿ ಎಷ್ಟೊಂದು ವರ್ಷಗಳು ಪರಿತಪಿಸಿದ್ದೆ ಅನ್ನುವುದು ನೆನಪಾದ ಕೂಡಲೇ ರೋಮಾಂಚನವಾಗಿಬಿಟ್ಟಿತು. ಅಲ್ಲಿ ನಮಗಾಗಿ ಕಾಯುತ್ತಿದ್ದ ಕಾಂಬೋಡಿಯ ಗೈಡ್‌ಗೆ ನಮ್ಮನ್ನು ಒಪ್ಪಿಸಿ ಥಾಯ್‌ಲ್ಯಾಂಡ್‌ನ ಗೈಡ್ ವಿದಾಯ ಹೇಳಿದ. ನಮ್ಮ ನಮ್ಮ ಪಾಸ್‌ಪೋರ್ಟ್‌ಗಳನ್ನು ಸ್ವಾಗತಿಸಿದ ಅವನ ಕೈಗೆ ಒಪ್ಪಿಸಿದೆವು. ಆಮೇಲೆ ಅವನು ನಮ್ಮನ್ನು ಇನ್ನಿಷ್ಟು ನಡೆಸಿ ಒಂದು ಕ್ಯೂನಲ್ಲಿ ನಿಲ್ಲಿಸಿದ. ಆ ಆಫೀಸಿನ ಒಳಗೆಲ್ಲ ಕಣ್ಣು ಹಾಯಿಸಿದೆ. ಅದನ್ನು ನೋಡಿದರೆ ನಮ್ಮ ಕಲಾಸಿಪಾಳ್ಯದ ಬಸ್ ಸ್ಟ್ಯಾಂಡ್ ನೆನಪಾಯ್ತು! ಯಪ್ಪಾ ದೇವರೇ! ಒಂದು asbestos sheet ಹೊದೆಸಿದ ಸಣ್ಣ ರೂಮು ಅದು. ಅಲ್ಲೇ ನಾಲ್ಕು ಕ್ಯೂಗಳು ಬೇರೆ. ವೀಸಾ ಆಫೀಸಿನ ನಡುವಿನಲ್ಲಿ ಪರಿಸರದ ಕಾಳಜಿಯ ಸಂಕೇತದ ಹಾಗೆ ಕಡಿಯದೇ ಹಾಗೇ ಉಳಿಸಿಟ್ಟ ಒಂದು ಮರ ಬೇರೆ! ಅಸಾಧ್ಯ ಧಗೆ ರೂಮಿನ ಒಳಗೆಲ್ಲ. ನಮ್ಮ ತಮಿಳುನಾಡಿನ ಥರದ ಹವಾಮಾನ. ನಾಲ್ಕು ಸಾಲಿನ ಕ್ಯೂನಲ್ಲಿನ ರಾಶಿ ಜನಕ್ಕೆ ಅಲ್ಲೊಂದು ಇಲ್ಲೊಂದು pedestal ಫ಼್ಯಾನ್ ಮಾತ್ರ. ಆ ಕ್ಯೂನಿಂದ ತುಂಬ ಬೇಗ ಆಚೆ ಬಂದೆವು.

ಆಮೇಲೆ ಮತ್ತೊಂದಿಷ್ಟು ನಡೆದು ಕಾಂಬೋಡಿಯಾ ಒಳಗೆ ಕಾಲಿರಿಸಿದೆವು. ವೀಸಾ ಸ್ಟ್ಯಾಂಪ್ ಆಗಿ ಬರುವುದನ್ನೇ ಕಾಯುತ್ತ ಒಂದು casino ಮುಂದೆ ಬೀಡುಬಿಟ್ಟೆವು. ಈ casino ಕಥೆ ಗೊತ್ತಾ ನಿಮಗೆ? ಥಾಯ್‌ಲ್ಯಾಂಡ್‌ನಲ್ಲಿ ಅದನ್ನು ಆಡುವ ಹಾಗಿಲ್ಲ. ಆದರೆ ಕಾಂಬೋಡಿಯಾದಲ್ಲಿ ಅದು legal. ಹಾಗಾಗಿ ಬಾರ್ಡರ್ ದಾಟಿದರೆ ಪಕ್ಕದಲ್ಲೇ ಒಂದು casino ಮತ್ತು ಅಲ್ಲಿ ಆಡುವವರು ಉಳಿದುಕೊಳ್ಳಲು ಹೋಟೆಲ್‌ಗಳು ಎಲ್ಲ ರೆಡಿ. ಥಾಯ್‌ಲ್ಯಾಂಡ್‌ನ ಜನ ದಿನದ, ವಾರದ ಪಾಸ್ ತೆಗೆದುಕೊಂಡು ಕಾಂಬೋಡಿಯಾಗೆ ಕಾಲಿಟ್ಟು ಚಪಲ ತೀರಿಸಿಕೊಂಡು ಮತ್ತೆ ತಮ್ಮ ಊರಿಗೆ ವಾಪಸ್! ಅವರು ಚಾಪೆಯ ಕೆಳಗೆ ನುಸುಳಿದರೆ ಇವರು ರಂಗೋಲಿಯ ಕೆಳಗೆ ನುಸುಳುತ್ತಾರೆ… ಅವರು ರಂಗೋಲಿಯ ಕೆಳಗೆ ನುಸುಳಿದರೆ ಇವರು ನೆಲದ ಒಳಗೇ ಸುರಂಗಮಾರ್ಗ ತೋಡುತ್ತಾರೆ! ಬದುಕಲೆಷ್ಟೊಂದು ಮಾರ್ಗಗಳು!

ಆ casino ಮುಂದೆ ನಿರಾಶ್ರಿತರ ಥರ ಬೀಡು ಬಿಟ್ಟೆವು. ಕೂತೂ ಕೂತೂ ತಾಳ್ಮೆ ತಪ್ಪುವ ಹಂತ ತಲುಪಿದಾಗ ಅಂತೂ ನಮ್ಮ ಪಾಸ್‌ಪೋರ್ಟ್ ನಮ್ಮೆದುರು ಪ್ರತ್ಯಕ್ಷವಾಯ್ತು… ಕಾಂಬೋಡಿಯಾ ವೀಸಾ ಸ್ಟ್ಯಾಂಪ್ ಆದ ಪಾಸ್‌ಪೋರ್ಟ್!! ನಾನು ಕಾಂಬೋಡಿಯಾ ದೇಶದ ಒಳಗೆ ಅಧಿಕೃತವಾಗಿ ಕಾಲಿಟ್ಟಿದ್ದೆ! ಹೆನ್ರಿ ಮೌಹಟ್‌ ಮೊದಲ ಸಲ ಕೊಂಬೆಗಳನ್ನು ಸರಿಸಿ ಕಾಡಿನ ನಡುವೆ ಕಾಲಿಟ್ಟು ಮೊದಲ ಸಲ ಅಂಗ್ಕೋರ್ ವಾಟ್ ದೇಗುಲ ನೋಡಿದಾಗ ಆದ ರೋಮಾಂಚನಕ್ಕೂ, ಈಗ ನನ್ನ ರೋಮಾಂಚನಕ್ಕೂ ಹೆಚ್ಚು ವ್ಯತ್ಯಾಸವಿರಲಿಲ್ಲ! ನಾನು ಕಾಂಬೋಡಿಯಾ ನೆಲದ ಮೇಲೆ ಕಾಲಿಟ್ಟಿದ್ದೆ …

ಈ ಹೆನ್ರಿ ಮೌಹಟ್ ಮೊದಲ ಸಲ ಅಂಗ್‌ಕೋರ್ ವಾಟ್ ದೇಗುಲ ಸಮೂಹ ಕಂಡಾಗ ಬೆರಗಾಗಿ ಹೋಗಿದ್ದನಂತೆ. ಆ ಅಗಾಧ ದೇಗುಲಗಳನ್ನು ಕಂಡು ಅದರ ಮೂಲ ಹುಡುಕಲು ಹೊರಟನಂತೆ. ಸ್ಥಳೀಯರನ್ನು ಭೇಟಿ ಮಾಡಿ ಈ ದೇಗುಲ ಇಲ್ಲಿ ಹೇಗೆ ಬಂತು? ಯಾರು ಕಟ್ಟಿದ್ದು? ಅಂದಾಗ ಗೊತ್ತಿಲ್ಲ, ರಾಕ್ಷಸರು ಅಥವಾ ದೈತ್ಯರು ಇದನ್ನು ಕಟ್ಟಿರಬೇಕು ಅಂದಿದ್ದರಂತೆ.. ಅಂತ ಅಗಾಧ ದೇವಸ್ಥಾನವಂತೆ. ಅಂತ ಅಗಾಧತೆ ಮನುಷ್ಯ ಮಾತ್ರರಿಂದ ಸಾಧ್ಯವಿಲ್ಲ ಅಂತ ಅನ್ನಬೇಕಾದರೆ ಅದಿನ್ನೆಂಥಾ ಅಗಾಧತೆ ಇರಬೇಕು!! ಆದರೆ ಈ ಹೆನ್ರಿ ಮೌಹಟ್‌ನ ಕಥೆಯನ್ನೂ ಅಲ್ಲಗಳೆಯುವವರು ತುಂಬ ಜನ ಇದ್ದಾರೆ. ಆತ ಮೊದಲಿಗೆ ಅಂಗ್‌ಕೋರ್ ದೇಗುಲವನ್ನು ‘ಕಂಡುಹಿಡಿದ’ ಅನ್ನುವುದನ್ನೇ ಹಾಸ್ಯಾಸ್ಪದ ಅನ್ನುವವರೂ ಇದ್ದಾರೆ. ಆ ದೇಗುಲ ಸಮೂಹ ಎಂದೂ ಕಾಡಿನಲ್ಲಿ ಕಣ್ಮರೆಯಾಗಿರಲೇ ಇಲ್ಲವೆಂತಲೂ, 15, 16 ಮತ್ತು 18 ನೆಯ ಶತಮಾನಗಳಲ್ಲಿ ಬೇರೆ ಬೇರೆ ದೇಶಗಳ ಯಾತ್ರಿಕರು ಅದಕ್ಕೆ ಭೇಟಿ ಕೊಟ್ಟ ಉದಾಹರಣೆಗಳಿವೆ ಎಂಬುದಕ್ಕೆ ಪುರಾವೆಯನ್ನು ಮುಖಕ್ಕೆ ಹಿಡಿಯುತ್ತಾರೆ. ಈ ಹೆನ್ರಿ ಮೌಹಟ್‌ ಇದನ್ನು ಕಂಡುಹಿಡಿದ ಅನ್ನುವ ಕಥೆ ಎಲ್ಲಿಂದ, ಯಾರಿಂದ, ಯಾಕಾಗಿ ಹುಟ್ಟಿತು ಮತ್ತೆ?! ಎಲ್ಲ ನಿಗೂಢ …

ಅದೆಲ್ಲ ಆ ಕಡೆ ಸರಿಸಿ ಕಾಂಬೋಡಿಯಾ ನೆಲಕ್ಕೆ ಕಾಲಿಟ್ಟ ರೋಮಾಂಚನವನ್ನು ನೀಳ ಉಸಿರೆಳೆದುಕೊಂಡು ಸ್ವಾಗತಿಸಿದೆ …

ಕಾಂಬೋಡಿಯಾದ ಪ್ರವಾಸ ಶುರುವಾದ ಹೊತ್ತು…

ಕಾಂಬೋಡಿಯಾದವರ ಸ್ವಾಗತದ procedure ಮುಗಿಸಿದಾಗ ಮಧ್ಯಾಹ್ನ 1.30 ಆಗಿ ಹೋಗಿತ್ತು! ಸುಮಾರು 3 ಘಂಟೆಗಳ ಕಾಲದ ಆ ಕಾಯುವಿಕೆ ನಮ್ಮನ್ನು ತುಂಬ ರೇಗಿಸಿತ್ತು. ಬಿಸಿಲಿನ ಝಳಕ್ಕೆ ಎಲ್ಲ ಸೋತು ಸೊಪ್ಪಾಗಿದ್ದೆವು. ನಮ್ಮ ಕಾಂಬೋಡಿಯನ್ ಗೈಡ್ ನಮ್ಮನ್ನು ಅವಸರಿಸಿದ. ಅಲ್ಲಿ ಆ ಲಗೇಜ್‌ಗಳನ್ನು ಮತ್ತಿಷ್ಟು ದೂರ ಸಾಗಿಸಿದ ಮೇಲೆ, ಕಾಯುತ್ತಿದ್ದ ಯಾವುದೋ ಲಟಾರಿ ಬಸ್‌ಗೆ ತುರುಕಲ್ಪಟ್ಟೆವು. ಅದೇ ಬಸ್ಸಿನಲ್ಲಿ ಸಿಯಮ್ ರೀಪ್ ತಲುಪಬೇಕೇನೋ ಅಂತ ನಾನು ಗಾಭರಿ ಬಿದ್ದೆ. ಅದರ ಸ್ಥಿತಿ ನೋಡಿದರೆ ಇನ್ನು ಆ 150 ಚಿಲ್ಲರೆ ಕಿಲೋಮೀಟರ್‌ಗಳ ದೂರಕ್ಕೆ ಸುಮಾರು 6-7 ಘಂಟೆಗಳ ಪ್ರಯಾಣ ಮಾಡಿಸಿಬಿಡುತ್ತದೇನೋ ಅಂತ ಆತಂಕವಾಯಿತು. ಆದರೆ ನಮ್ಮ ಅದೃಷ್ಟ ಅಷ್ಟೊಂದು ಕೆಟ್ಟದಿರಲಿಲ್ಲ. ಅದು ಬರಿಯ transit ಬಸ್ ಮಾತ್ರ ಆಗಿತ್ತು. ಅದು ನಮ್ಮನ್ನು ಮತ್ತೊಂದು ಸಣ್ಣ ಬಸ್ ಸ್ಟ್ಯಾಂಡಿಗೆ ತಂದು ಬಿಟ್ಟಿತು. ಅಲ್ಲಿ ಮತ್ತೊಂದು ಚೆಂದದ ಬಸ್ ಕಾಯುತ್ತಿತ್ತು. ಅದನ್ನು ನೋಡಿ ಸಂಭ್ರಮವಾಯ್ತು. ಬೆಳಿಗ್ಗೆ ತಿಂದ ಬ್ರೆಡ್, ಆ ನಂತರದ ಚೂರು ಪಾರು ತಿಂಡಿ ಕರಗಿ ಆವಿಯಾಗಿ ಹೋಗಿ ಯಾವುದೋ ಕಾಲವಾಗಿತ್ತು. ಆ ಬಸ್ ಹತ್ತಿದ ಮೇಲೆ ಪ್ಯಾಕ್ ಮಾಡಿಸಿ ತಂದ ಊಟ ಕೊಡುವೆನೆಂದು ಕಾಂಬೋಡಿಯನ್ ಗೈಡ್ ಹೇಳಿದಾಗ ಹೊಟ್ಟೆ ಹಸಿವು ಜಾಸ್ತಿಯಾದ ಹಾಗೆ ಅನ್ನಿಸಿತು. ಆದರೆ ಮುಂದೆ ಏನು ಕಾದಿದೆ ಅನ್ನುವುದು ನಮಗೆ ಗೊತ್ತೇ ಇರಲಿಲ್ಲ!

ಬಸ್‌ನಿಂದ ಎಲ್ಲ ಲಗೇಜ್ ಇಳಿಸಿದೆವು. ನಮ್ಮ ನಮ್ಮದನ್ನೆಲ್ಲ ಒಂದು ಕಡೆ ಗುಂಪು ಮಾಡಿ ಚೆಕ್ ಮಾಡಿಕೊಳ್ಳಿರಿ ಅಂತ ಗೈಡ್ ಹೇಳಿದ. ಆಗ ಗಮನಿಸಿದೆವು.. ನನ್ನ ಎಲ್ಲಾ ಬಟ್ಟೆಗಳಿದ್ದ ಸೂಟ್‌ಕೇಸ್ ಕಾಣೆಯಾಗಿಹೋಗಿತ್ತು!! ಮತ್ತೆ ಹತ್ತಬೇಕಿದ್ದ ಬಸ್‌ನ ಒಳಗೆ ಹೋಗಿದೆಯೇನೋ ಅಂತ ಅಲ್ಲಿ ಹತ್ತು ಸಲ ಚೆಕ್ ಮಾಡಿದ್ದಾಯ್ತು, ಇಲ್ಲಿ ಇಳಿದ ಬಸ್‌ನ ಒಳಗೆ ಉಳಿದುಬಿಟ್ಟಿದೆಯೇನೋ ಅಂತ ಇಪ್ಪತ್ತು ಸಲ ಚೆಕ್ ಮಾಡಿದ್ದಾಯ್ತು… ಉಹೂ, ಎಲ್ಲೂ ಇಲ್ಲ. ಇನ್ನು ಯಾರದ್ದಾದರೂ ಕಳೆದುಹೋಗಿದ್ದರೆ ಅಲ್ಲಿ ಸಿಗುವ ಚಡ್ಡಿಯೋ ಪಡ್ಡಿಯೋ ಹಾಕಿ ಕಾಲ ಕಳೆಯಬಹುದಿತ್ತು. ಬರಿಯ ಸಲ್ವಾರ್ ಮತ್ತು ಚೂಡಿದಾರ್ ಹಾಕುವ ನಾನು ಅದನ್ನು ಕಾಂಬೋಡಿಯಾದಲ್ಲಿ ಎಲ್ಲಿಂದ ತರಲಿ?! ತಲೆ ಕೆಟ್ಟು ಮೊಸರಾಗಿ ಹೋಯಿತು. ಅಷ್ಟರಲ್ಲಿ ಅಪ್ಪ-ಮಗನ ಗಲಾಟೆ ಶುರುವಾಯಿತು ‘ಆ ಸೂಟ್‌ಕೇಸ್ ನಿನ್ನ ಕೈಲಿತ್ತು’ ಅಂತ ಇವನು, ‘ಇಲ್ಲ ನಿನ್ನ ಕೈಲಿತ್ತು’ ಅಂತ ಅವನು… ಒಟ್ಟಿನಲ್ಲಿ ಇಬ್ಬರೂ ತಾವು ಅಪರಾಧಿಯಲ್ಲ ಅಂತ ಪ್ರೂವ್ ಮಾಡಲು ಹೊರಟರು. ನನ್ನ ಸಮಸ್ಯೆ ಯಾರು ಬಿಟ್ಟು ಬಂದರು ಅನ್ನುವುದಲ್ಲವಲ್ಲ! ಬಿಟ್ಟು ಬಂದ ನಂತರ ಹುಡುಕಬೇಕು, ಸಿಗದಿದ್ದರೆ ಮತ್ತೇನು ತೊಡಬೇಕು ಅನ್ನುವುದು ನನ್ನ ಈಗಿನ ಯೋಚನೆಯಾಗಿತ್ತು. ಹೊಟ್ಟೆಯ ಹಸಿವು ಮರೆತೇ ಹೋಯ್ತು. ಎಲ್ಲರೂ ಪಾಪ ಒಣಗಿದ ಮುಖದಲ್ಲಿ ನಮ್ಮನ್ನೇ ನೋಡುತ್ತಾ ಕೂತಿದ್ದರು ತಾವೂ ಊಟ ಮಾಡದೇ. ಕೊನೆಗೆ ಅಲ್ಲೇ ಒಡಾಡುತ್ತಿದ್ದ ಯಾವುದೋ ಬೈಕ್ ಟ್ಯಾಕ್ಸಿಯಲ್ಲಿ ಕೂತು ನನ್ನ ಗಂಡ ಅದೃಶ್ಯನಾದ. ನಾವು ಪ್ಯಾದೆ ಮುಖದಲ್ಲಿ ಕಾಯುತ್ತಾ ಕೂತೆವು …

15 ನಿಮಿಷ ಕಳೆದಿರಬೇಕು. ಅದೇ ಬೈಕ್ ಸವಾರನ ಹಿಂದೆ ಕೂತವನ ಕೈಲಿ ನನ್ನ ಸೂಟ್‌ಕೇಸ್ ಮತ್ತು ಮುಖದಲ್ಲಿ ದಿಗ್ವಿಜಯದ ನಗು! ವೀಸಾ ಆಫೀಸಿನಲ್ಲಿ ಸೂಟ್‌ಕೇಸ್ ಬಿಟ್ಟು ಇಬ್ಬರೂ ಕೈ ಬೀಸಿ ಬಂದುಬಿಟ್ಟಿದ್ದರಂತೆ. ಪುಣ್ಯಕ್ಕೆ ಅದನ್ನು ಯಾರೂ ಮುಟ್ಟಿರದೇ ಬಿಟ್ಟು ಬಂದ ಜಾಗದಲ್ಲೇ ದೇವರ ಹಾಗೆ ಕೂತಿತ್ತು. ನನಗೆ ಜೀವ ಬಂದ ಹಾಗಾಯಿತು. ಅಷ್ಟರಲ್ಲೇ ಮತ್ತೆ ಇಬ್ಬರಿಗೂ ಶುರು ‘ಅದು ನೀನು ಬಿಟ್ಟು ಬಂದಿದ್ದು, ನೀನು ಬಿಟ್ಟು ಬಂದಿದ್ದು. ನಾನು ಆ ಸಾಲಿನಲ್ಲಿ ನಿಂತಿದ್ದೆ, ನೀನು ನೋಡು ಈ ಸಾಲಿನಲ್ಲಿ ನಿಂತಿದ್ದು, ಅದು ನಿನ್ನ ಪಕ್ಕ ಇತ್ತು, ನನ್ನ ಪಕ್ಕವಲ್ಲ’ ಅಂತೆಲ್ಲ. ಅಯ್ಯೋ ಸಿಕ್ಕಿತಲ್ಲಾ ಈಗ ಸುಮ್ಮನಾಗಿ ಅಂತ ಅವರ ಬಾಯಿ ಮುಚ್ಚಿಸಿ, ಈಗ ನೆನಪಾದ ಹಸಿವನ್ನು ತಣಿಸಿಕೊಳ್ಳಲು ಬಸ್ ಏರಿದೆವು. ಊಟದ ಪ್ಯಾಕ್ ಎಲ್ಲರೆದುರು ಬಂದಿತು. ಆತುರಾತುರವಾಗಿ ತೆಗೆದರೆ ಒಳಗೆ ಮಸಾಲೆ ಅನ್ನ ಮತ್ತು ಮೀನಿನ ಸಾರು! ಸುಸ್ತಾಗಿ ಹೋಗಿದ್ದ ನಮಗೆ ಸಿಟ್ಟು ಮಾಡಿಕೊಳ್ಳಲೂ ತ್ರಾಣ ಉಳಿದಿರಲಿಲ್ಲ. ‘ವೆಜಿಟೇರಿಯನ್ ಅಂತ ಹೇಳಿದ್ವಲ್ಲಪ್ಪಾ’ ಅಂದರೆ ‘ಹೂ ಮೀನು ವೆಜಿಟೇರಿಯನ್ ತಾನೇ?’ ಅಂದವನ ಮಾತು ಕೇಳಿ ಅಳಲೂ ಶಕ್ತಿಯಿಲ್ಲದೇ ಕೂತೆವು. ಕಾಂಬೋಡಿಯಾ ಒಳಗೆ ಕಾಲಿಟ್ಟ ಘಳಿಗೆ ಸರಿ ಇಲ್ಲ ಅಂತ ಯಾರೋ ಪಾಪ ಆ ನಿಮಿಷದಲ್ಲೂ ಜೋಕ್ ಮಾಡಿದರು. ನಾವು ನಗಲಿಲ್ಲ ಅಷ್ಟೇ! ಸರಿ, ಆ ಪ್ಯಾಕೆಟ್‌ಗಳನ್ನೆಲ್ಲ ಹಾಗೇ ವಾಪಸ್ ಕಳಿಸಿ, ಯಾವುದೋ ಸೂಪರ್ ಮಾರ್ಕೆಟ್‌ಗೆ ಹೋಗಿ ಬ್ರೆಡ್ಡು, ಬನ್ನು ತಂದರು. ಒಣಗಿದ ಮುಖದ ನಾವು, ನಮಗಿಂತ ಒಣಗಿದ್ದ ಬನ್ನನ್ನು mourning musicನ ಜೊತೆ ತಿಂದೆವು.

ಎಲ್ಲ ಗೋಳು ಮುಗಿದು ನೆಮ್ಮದಿಯಾಗಿ ಕಾಲು ಚಾಚಿ ಹೊರಗಿನ ಪ್ರಪಂಚ ನೋಡೋಣ ಅಂತ ಕೂತೆ. ಎದುರಿಗೆ ಕಣ್ಣು ಹಾಯಿಸಿದರೆ ನಾವು ರಸ್ತೆಯ ಬಲಕ್ಕಿದ್ದುದು ಗಮನಕ್ಕೆ ಬಂತು. ಅಬ್ಬಾ! ಎಡಗಡೆಯಿಂದ ಎದುರು ವಾಹನಗಳು ಬರುತ್ತಿದ್ದರೆ, ಎಡದಿಂದ overtake ಮಾಡುತ್ತಿದ್ದರೆ ಮೊದಲಲ್ಲಿ ನನ್ನ ಮಿದುಳು ನಾನೇ ಡ್ರೈವ್ ಮಾಡುತ್ತಿದ್ದೀನೇನೋ ಅನ್ನುವ ಹಾಗೆ ಗಲಿಬಿಲಿಗೊಂಡು ಬಿಟ್ಟಿತು. ‘ಡಿಕ್ಕಿ ಹೊಡೀತಾನೆ ಕಣೋ ಅವನು.. ಈ ಕಡೆ, ಈ ಕಡೆ ಬಾ’ ಅಂತ ಕಿರುಚುವ ಹಾಗೆ ಅನ್ನಿಸುತ್ತಿತ್ತು. ಡ್ರೈವಿಂಗ್ ಬಾರದ ನನಗೆ ಯಾಕೆ ಬೇಕು ಈ ಉಸಾಬರಿಯೆಲ್ಲ ಹೇಳಿ! ಕೊನೆಗೆ ಡ್ರೈವರ್ ಅವನ ಕೆಲಸ ಅವನು ಮಾಡುತ್ತಾನೆ, ನೀನು ತೆಪ್ಪಗೆ ಸುತ್ತಮುತ್ತ ನೋಡು ಅಂತ ಹೇಳಿಕೊಂಡು ಕಾಂಬೋಡಿಯಾ ನೆಲದ ಕಡೆ ಕಣ್ಣು ಹಾಯಿಸಿದೆ. ನಾವು ಹಾದು ಹೋಗುತ್ತಿದ್ದ ದಾರಿಗುಂಟ ಎಲ್ಲ ತುಂಬ ಸಾಧಾರಣ ಮನೆಗಳು. ಎಲ್ಲೂ ಶ್ರೀಮಂತಿಕೆಯ ಸುಳಿವಿರಲಿಲ್ಲ. ನೆಲದಿಂದ ಸ್ವಲ್ಪ ಮೇಲಕ್ಕೆ ನಾಲ್ಕು ಕಂಬ ಹುಗಿದು ಅದರ ಮೇಲೆ ಕಟ್ಟಿದ್ದ ಮನೆಗಳು. ಪ್ರವಾಹದ ಭೀತಿಗೆ ಮತ್ತು ಹಾವುಗಳ ಭಯಕ್ಕೆ ಆ ರೀತಿಯ ಮನೆ ಕಟ್ಟುವ ಅಭ್ಯಾಸವಂತೆ. ಎಲ್ಲ ಮನೆಗಳೂ ಮರದಿಂದ ಕಟ್ಟಲ್ಪಟ್ಟವೇ. ನೋಡಲು ಚಂದ ಕಂಡವು. ಎಲ್ಲ ಮನೆಯ ಮುಂದೆಯೂ ನಮ್ಮ ದೇಶದಲ್ಲಿ ತುಳಸಿಕಟ್ಟೆ ಇಟ್ಟಿರುವ ರೀತಿ ಒಂದು ಬುದ್ಧನ ವಿಗ್ರಹ. ಮನೆಯ ಮುಂದೆಯೇ ಬಟ್ಟೆ ಒಗೆಯುತ್ತ, ಪಾತ್ರೆ ತೊಳೆಯುತ್ತ ಕೂತ ಹೆಂಗಸರು… ನೋಡುತ್ತಾ ಮುಂದೆ ಸಾಗಿದೆವು. ನಮ್ಮ ಟೂರ್ ಗೈಡ್ ಆ ದೇಶದ ಬಗ್ಗೆ ಸಣ್ಣ ಪುಟ್ಟ ಮಾಹಿತಿ ಕೊಡುತ್ತಾ ಹೋದ… 1863 ರಿಂದ 1953 ರವರೆಗೆ ಫ಼್ರೆಂಚರು ಆ ದೇಶವನ್ನು ಆಳುತ್ತಿದ್ದರಂತೆ. ಅಲ್ಲಿಯವರೆಗೆ ಕಾಂಬೋಡಿಯಾದಲ್ಲಿ ಬೀಡು ಬಿಟ್ಟಿದ್ದ ವಿಯೆಟ್ನಾಮ್ ಮತ್ತು ಥಾಯ್‌ಲ್ಯಾಂಡ್‌ನವರನ್ನು ಆಚೆ ಒದ್ದು ಓಡಿಸಿದರಂತೆ. ಹಾಗಾಗಿ ಕಾಂಬೋಡಿಯಾಗೆ ಇವೆರಡೂ ಶತ್ರು ದೇಶಗಳಾಗಿ ಬಿಟ್ಟಿವೆ ಇವತ್ತಿಗೂ… ನಮ್ಮ ದೇಶ ಹಾಗೂ ಪಾಕಿಸ್ತಾನದ ನಡುವಿನ ವೈಷಮ್ಯದ ಹಾಗೆ. ಅಂತೂ ಬಗೆ ಹರಿಯದ ನೆಲ-ಜಲ ವಿವಾದಗಳು ಎಲ್ಲ ದೇಶಗಳ ಮಧ್ಯೆ, ರಾಜ್ಯಗಳ ಮಧ್ಯೆ. ಕೊನೆಯೆಂದಿಗೋ ಇದಕ್ಕೆಲ್ಲಾ ಅನ್ನಿಸಿತು. 1953 ರಲ್ಲಿ ಕಂಬೋಡಿಯ ಸ್ವತಂತ್ರ ದೇಶವಾಯಿತಂತೆ. ಕಾಂಬೋಡಿಯಾದ ಮುಖ್ಯ ಬೆಳೆ ಭತ್ತವಂತೆ. ವರ್ಷಕ್ಕೆ ಮೂರು ಬೆಳೆ ತೆಗೆಯುತ್ತಾರಂತೆ. ಆದರೆ ಅವರ ದೇಶದಲ್ಲೂ ಮಳೆ ಮಾತ್ರ ಬೇಸಾಯಕ್ಕೆ ಆಧಾರ, ನಮ್ಮ ದೇಶದ ಹಾಗೆಯೇ… ಅಂತೆಲ್ಲ ಹೇಳಿದ್ದನ್ನು ತಲೆಯೊಳಗೆ ಇಳಿಸಿಕೊಳ್ಳುತ್ತಾ ಸಾಗುವಷ್ಟರಲ್ಲಿ ಇದ್ದಕ್ಕಿದ್ದ ಹಾಗೆ ಸಿನೆಮಾದ ಕ್ಲೈಮ್ಯಾಕ್ಸ್ ಸೀನಿನ ಹಾಗೆ ನಮ್ಮ ಟೂರ್ ಆಪರೇಟರ್ ಎದ್ದು ನಿಂತು ‘ಗಾಡಿ ನಿಲ್ಲಿಸಿ’ ಅಂತ ಕೂಗಿದರು. ನಾವೆಲ್ಲ ಯಾಕೆ, ಯಾಕೆ ಅಂತ ಅಂದುಕೊಳ್ಳುವಷ್ಟರಲ್ಲಿ ‘ನಮ್ಮ ಸಿದ್ದಪ್ಪಾರು ಬಸ್ಸಿನಲ್ಲಿ ಇಲ್ಲ’ ಅಂದರು!! ಅಲ್ಲಿಯವರೆಗೆ ನಮ್ಮ ಗಮನಕ್ಕೆ ಅದು ಬಂದಿರಲೇ ಇಲ್ಲ. ಎಲ್ಲಿ ಕಾಣೆಯಾದರು ಈತ ಅಂದುಕೊಳ್ಳುವಷ್ಟರಲ್ಲಿ ನೆನಪಾಯಿತು. ಬನ್ ತರಲು ನಿಲ್ಲಿಸಿದ್ದಾಗ environmental pollution- ಅದೇ ಸ್ವಾಮಿ, ಧೂಮಪಾನ ಮಾಡಲು ಇಳಿದಿದ್ದ ಅವರನ್ನು ಮರೆತುಬಿಟ್ಟು ನಾವೆಲ್ಲ ಹೊರಟುಬಂದು ಬಿಟ್ಟಿದ್ದೆವು. ಸುಮಾರು 30-40 ಕಿಲೋಮೀಟರ್ ದಾರಿ ಸವೆಸಿ ಆದಮೇಲೆ ಅವರ ನೆನಪಾಗಿದೆ ಈ ಪುಣ್ಯಾತ್ಮನಿಗೆ. ಕಾಣದ ದೇಶದಲ್ಲಿ ಆತನನ್ನು ಹುಡುಕಿಕೊಂಡು ಹೋಗುವ ನಿರ್ಧಾರಕ್ಕೆ ಬಂದು ಬಸ್ಸನು ಹಿಂತಿರುಗಿಸುವಂತೆ ಡ್ರೈವರ್‌ಗೆ ಹೇಳಿದ್ದಾಯ್ತು.

ಆತ ನಾವು ಬಿಟ್ಟು ಬಂದಲ್ಲೇ ಇದ್ದರೆ ಸರಿ. ಇಲ್ಲವಾದರೆ ಎಲ್ಲಿ ಅಂತ ಹುಡುಕುವುದು ಅನ್ನುವ ಚಿಂತೆಗೆ ಬಿದ್ದೆವು. ನಿಜಕ್ಕೂ ಕಾಂಬೋಡಿಯಾಗೆ ಕಾಲಿಟ್ಟ ನಿಮಿಷದಿಂದ ಬರೀ ತೊಂದರೆಗಳೇ. ಬಸ್ಸಿನಲ್ಲಿ ತಲೆಗೊಂದೊಂದು ಕಾಮೆಂಟ್ ಶುರುವಾಯ್ತು. ಒಂದಿಷ್ಟು ಜನ ಟೂರ್ ಆಪರೇಟರ್‌ನ ಬೇಜವಾಬ್ದಾರಿತನವನ್ನು ಟೀಕಿಸಿದರೆ, ಮತ್ತೆ ಒಂದಿಷ್ಟು ಜನ ಸಿದ್ದಪ್ಪನವರ ಅಜಾಗರೂಕತೆಯನ್ನು ಟೀಕಿಸಲು ಶುರು ಮಾಡಿದರು. ಒಟ್ಟಿನಲ್ಲಿ ನಮ್ಮ ಬಸ್ಸು ವಿಧಾನಸಭೆಯ ಅಧಿವೇಶನವನ್ನು ನೆನಪಿಸುವ ರೀತಿ ಆಗಿಹೋಯಿತು. ಬರೀ ಮಾತು, ಮಾತು, ದೂಷಣೆ, ಆರೋಪ. ಪರಿಹಾರ?! ಯಾರಿಗೆ ಗೊತ್ತು!!!

ಬಸ್ಸು ರಿವರ್ಸ್ ತೆಗೆದುಕೊಂಡು ಹಿಂತಿರುಗಿ ನೋಡಿದರೆ ಹಿಂದೆ ನಿಂತಿದ್ದ ಬೈಕ್‌ನಿಂದ ಕೆಳಗಿಳಿದು ನಮ್ಮ ಕಡೆ ಓಡಿ ಬರುತ್ತಿದ್ದ ಸಿದ್ದಪ್ಪ ಕಂಡರು… ಥೇಟ್ ಸಿನೆಮಾದ ಕ್ಲೈಮ್ಯಾಕ್ಸ್ ಸೀನ್‌! ‘ಥೂ ಏನ್ ಮಾರಾಯ್ರೇ ಅಲ್ಲೇ ನಿಂತಿದ್ದೀನಿ. ನೀವು ಹೊರಟೇಬಿಟ್ಟಾಗ ಬಸ್ಸಿನ ಕಡೆಗೆ ಒಂದು ಕಲ್ಲು ಎಸೆದೆ ಕೂಡಾ. ಒಬ್ಬರಾದ್ರೂ ನೋಡಬ್ಯಾಡ್ವಾ? ಯಾವುದೋ ಸಿಕ್ಕಿದ ಕಾರಿನಲ್ಲಿ ಒಂದಿಷ್ಟು ದೂರ ಬಂದೆ. ಅವನ ಗಾಡಿ ನಿಂತುಹೋಯ್ತು. ಮತ್ತೆ ಅಲ್ಲೇ ಹೋಗ್ತಿದ್ದ ಈ ಬೈಕ್‌ನವನ ಹಿಂದೆ ಕೂತು ಬರ್ತಾ ಇದೀನಿ. ಒಬ್ಬಾರಾದರೂ ಹಿಂದೆ ತಿರುಗಿ ನೋಡಿಯೂ ನೋಡಲಿಲ್ಲ. ಎಂಥ ಬೇಜವಾಬ್ದಾರಿ ಮನುಷ್ಯ ನೀನು’ ಅಂತ ಟೂರ್ ಆಪರೇಟರ್‌ನನ್ನು ಬಯ್ಯಲು ಶುರು ಮಾಡಿದರು. ಆತ ಕೂಡಾ ಸಿಟ್ಟಿಗೆದ್ದು ‘ಇಳಿಯುವಾಗಲೇ ಹೇಳಿ ಹೋಗಿರಲಿಲ್ವಾ ಯಾರೂ ಇಳಿಬೇಡಿ, ಬಸ್ಸಲ್ಲೇ ಕೂತಿರಿ ಅಂತ. ನೀವು ಯಾಕ್ರೀ ಯಾರಿಗೂ ಹೇಳದೇ ಕೆಳಗೆ ಇಳಿದ್ರಿ? ನಿಮ್ಮ ಸಿಗರೆಟ್ ಚಟದಿಂದ ನಾವೆಲ್ಲ ಅನುಭವಿಸಬೇಕು. ಅವನು ಯಾವನೋ ಒಳ್ಳೆಯವನಿದ್ದ ಸರಿ ಹೋಯ್ತು. ಇನ್ನು ಯಾವನೋ ದುಡ್ಡಿನ ಆಸೆಗೆ ನಿಮ್ಮನ್ನ ಎಲ್ಲಾದ್ರೂ ಎಳ್ಕೊಂಡು ಹೋಗಿ ಚಾಕು ಹಾಕಿದ್ರೆ ಏನ್ರೀ ಮಾಡ್ಬೇಕಿತ್ತು ನಾನು’ ಅಂತ ಕೂಗಾಡಲು ಶುರು ಮಾಡಿದರು. ಒಂದು ಹತ್ತು ನಿಮಿಷದ ಕೂಗಾಟದ ನಂತರ ಕಾವಿಳಿದ ಮೇಲೆ ಆತ ನಮ್ಮ ಹಿಂದೆ ಬೈಕ್‌ನಲ್ಲಿ ನಮ್ಮನ್ನು ಕೂಗುತ್ತಾ ಹಿಂಬಾಲಿಸುವ ಸೀನ್ ಮನಸ್ಸಿನಲ್ಲಿ ರೀ ಪ್ಲೇ ಆಗಿದ್ದೇ ತಡ ಯಾರೋ ಒಬ್ಬರು ಕಿಸಕ್ಕನೇ ನಕ್ಕರು. ಮತ್ತೆ ಆ ನಗು ಇಡೀ ಬಸ್ಸಿನಲ್ಲಿ ಸಾಂಕ್ರಾಮಿಕವಾಗಿ ಹರಡಿ, ಎಲ್ಲರೂ ನಗುತ್ತಾ ನಮ್ಮ ಪ್ರಯಾಣ ಮುಂದುವರೆಸಿದೆವು…

ದಾರಿಯಲ್ಲೇ Sopheak Monkoc ಎನ್ನುವ ಹೆಸರಿನ ಪಗೋಡಾಗೆ ಕರೆದುಕೊಂಡು ಹೋದರು. ಅಲ್ಲಿ ಪೋಲ್ಪಾಟ್‌ನಿಂದ ದುರಂತ ಸಾವನ್ನಪ್ಪಿದವರ ತಲೆಬುರುಡೆ ಮತ್ತು ಮೂಳೆಗಳನ್ನು ಇಟ್ಟಿದ್ದಾರೆ ಅಂತ ಆ ಜಾಗದ ‘ಸ್ಥಳಮಹಾತ್ಮೆ’ಯನ್ನು ನಮ್ಮ ಟೂರ್ ಗೈಡ್ ಹೇಳುತ್ತಿದ್ದರೆ ಎದೆ ನಡುಗಿದ ಹಾಗಾಯ್ತು. ಪೋಲ್ಪಾಟ್ ಕಾಂಬೋಡಿಯಾದ ಪ್ರಧಾನ ಮಂತ್ರಿಯಾಗಿದ್ದವನು. ಈ ಪೋಲ್ಪಾಟನದ್ದು ಒಂಥರಾ ಹುಚ್ಚು ಹುಚ್ಚು ವಿಧಾನಗಳು. ಆತ ಕಾಂಬೋಡಿಯಾದ ಸರ್ವಾಧಿಕಾರಿಯಾಗಿದ್ದನಲ್ಲ, ಹಾಗಾಗಿ ಈ ರೀತಿ ಹುಚ್ಚು ಐಡಿಯಗಳಿದ್ದರೆ ಮಾತ್ರ ಆ ಪಟ್ಟಕ್ಕೆ ಶೋಭೆ ಅಂತ ಎಣಿಸಿದ್ದನೋ ಏನೋ! ಪಟ್ಟಣದ ಜನರನ್ನೆಲ್ಲ ಹಳ್ಳಿಗಳಿಗೆ ರವಾನಿಸಿ ಅಲ್ಲಿ ಎಲ್ಲರೂ ಒಟ್ಟಾಗಿ ಬೇಸಾಯ ನಡೆಸುವ ಪ್ಲ್ಯಾನ್ ಈತನದ್ದು. ಹಾಗೆ ಬೆಳೆಸಿದ್ದ ಭತ್ತವನ್ನೆಲ್ಲ ಆತ ಚೀನಾಗೆ ಕಳಿಸಿ, ಬೆಳೆದವರಿಗೆ ದಿನಕ್ಕೆರಡು ಸಣ್ಣ ಬಟ್ಟಲು ಅನ್ನ ಮಾತ್ರ ಕೊಡುತ್ತಿದ್ದನಂತೆ. ತರಕಾರಿಗಳನ್ನು ಕೂಡಾ ಸ್ವಂತಕ್ಕೆ ಯಾರೂ ಬೆಳೆದುಕೊಳ್ಳುವ ಹಾಗಿಲ್ಲದ ಸ್ಥಿತಿ ಮತ್ತು ಮನೆಯಲ್ಲಿ ಅಡುಗೆ ಮಾಡುವ ಹಾಗೂ ಇರಲಿಲ್ಲವಂತೆ. ಎಲ್ಲ ಸಾಮೂಹಿಕ ಊಟದ ಪದ್ಧತಿ. ಅದೂ ಬೇಕಿದ್ದಷ್ಟು ಮತ್ತು ಹೊಟ್ಟೆ ತುಂಬುವಷ್ಟೂ ಅಲ್ಲ. ಹಾಗಾಗಿ ಅರೆಹೊಟ್ಟೆ ಮತ್ತು ಅಭ್ಯಾಸವಿಲ್ಲದ ಕೆಲಸ ಮಾಡಿದ ಜನರು ಮಿಲಿಯನ್‌ಗಟ್ಟಲೆ ಲೆಕ್ಕದಲ್ಲಿ ಸತ್ತುಹೋದರಂತೆ. ಹೆಚ್ಚು ಕಡಿಮೆ ಕಾಂಬೋಡಿಯಾದ ಕಾಲು ಭಾಗದಷ್ಟು ಜನರಂತೆ ಆ ಕಾಲಘಟ್ಟದಲ್ಲಿ ಸತ್ತಿದ್ದು! ಆ ದೇಹಗಳನ್ನು ಕೂಡಾ ಒಂದು ದೊಡ್ಡ ಗುಣಿ ತೋಡಿ ಸಾಮೂಹಿಕವಾಗಿ ಹೂತಿದ್ದಂತೆ. ಆ ಗುಣಿಯನ್ನು ಕೂಡಾ ಸಾಯುವ ಮುಂಚೆ ಆ ಜನರ ಕೈಲೇ ತೋಡಿಸಿದ್ದಂತೆ… ಕೇಳುತ್ತಾ ಸಂಕಟವೆನ್ನಿಸಿತು. ಆ ದುರಂತಕ್ಕೀಡಾದವರ ಮೂಳೆಗಳ ಸಂಗ್ರಹವಿದೆಯಂತೆ ಈಗ ನಾವು ಹೋದ ಪಗೋಡಾದಲ್ಲಿ. ನನಗೆ ನಿಜಕ್ಕೂ ಅದನ್ನು ಕಾಣಬೇಕು ಅನ್ನಿಸಲೇ ಇಲ್ಲ. ಆದರೂ ಸುಮ್ಮನೆ ಇಳಿದು ಹೋದೆ. ಪುಣ್ಯಕ್ಕೆ ಬಾಗಿಲು ತೆಗೆದಿರಲಿಲ್ಲ. ಒಳ್ಳೆಯದಾಯ್ತು ಅನ್ನಿಸಿತು. ಆ ಕಥೆಯನ್ನೆಲ್ಲ ಕೇಳಿದ ಮೇಲೆ ಆ ಮೂಳೆಗಳಿಂದ ಕೂಡಾ ನನಗೆ ಆಕ್ರಂದನ ಕೇಳಿ ಬರುತ್ತಿತ್ತೇನೋ …

ಸಂಜೆ ಸಿಯಮ್ ರೀಪ್ ತಲುಪಿದಾಗ ಐದೂವರೆಯಾಗಿತ್ತು. ಸೂರ್ಯ ಮುಳುಗುತ್ತಿದ್ದ. ನನ್ನ ಅಂಗ್‌ಕೋರ್ ವಾಟ್ ಇರುವ ಕಾಂಬೋಡಿಯಾದ ಸೂರ್ಯಾಸ್ತ ಕೂಡಾ ಯಾಕೋ ಜಾಸ್ತಿ ಮೋಹಕ ಅನ್ನಿಸಿತು. ಬೆಳಗ್ಗಿನಿಂದ ಹೊಟ್ಟೆಗೆ ಏನೇನೂ ಇರಲಿಲ್ಲವಾದ್ದರಿಂದ ಸ್ನಾನ ಮಾಡಿ ಊಟಕ್ಕೆ ಹೊರಡುವುದೆಂದಾಯಿತು. ಕಾಂಬೋಡಿಯಾದ ಬೀದಿಗಳೆಲ್ಲ ತುಂಬ ಪರಿಚಿತವೆನ್ನಿಸುವ ಹಾಗೆ ಕಾಣುತ್ತದಲ್ಲ, ಅದು ನಿಜವೋ ಅಥವಾ ನನ್ನ ಭ್ರಮೆಯೋ ಅಂದುಕೊಂಡೆ ಊಟದ ಹೋಟೆಲ್ ಕಡೆ ಸಾಗುವಾಗ. ಕಾಂಬೋಡಿಯಾದಲ್ಲಿ ಇಂಡಿಯನ್ ರೆಸ್ಟೊರೆಂಟ್‌ಗಳ ರಾಶಿ ರಾಶಿ ಇದೆ. ಇಡೀ ಒಂದು ಮುಖ್ಯ ಬೀದಿಯ ತುಂಬ ಬರೀ ನಮ್ಮ ದೇಶದ ಸುಮಾರು ಹೋಟೆಲ್‌ಗಳು ಎದುರಾದವು. ಒಬ್ಬೊಬ್ಬರೂ ರಾಕ್ಷಸರ ಹಾಗೆ ಊಟ ಮಾಡಿದೆವು. ಒಂದೇ ಒಂದು ಸಹಾಯಕನ ಜೊತೆ ಆ ಹೋಟೆಲ್‌ನ ಮಾಲೀಕ ಬೆವರು ಸುರಿಸಿಕೊಳ್ಳುತ್ತಾ ನಮ್ಮ ರಾಕ್ಷಸ ಹಸಿವನ್ನು ತಣಿಸಿದ ಪಾಪ. ಅಲ್ಲಿನ ಎಲ್ಲ ಹೋಟೆಲ್‌ಗಳಲ್ಲೂ ಅಷ್ಟೇ.. ಮುಖ್ಯ ವ್ಯಕ್ತಿಯ ಜೊತೆ ಒಬ್ಬನೇ ಒಬ್ಬ ಸಹಾಯಕ. ನಮ್ಮೂರಿನ ಹಾಗೆ ಹಿಂಡುಗಟ್ಟಳೆ ಸರ್ವರ್‌ಗಳು ಮತ್ತು ಕ್ಲೀನರ್‌ಗಳಿಲ್ಲ. ಅವರೇ all in one! ಊಟ ಮುಗಿಸಿ ಬಂದು ರಾತ್ರಿ ಹಾಸಿಗೆಯ ಮೇಲೆ ಬಿದ್ದು, ಮಸಾಜ್ ಮಾಡುವವರ ಕೈಗೆ ದೇಹ ಒಪ್ಪಿಸಿ ಮರುದಿನ ಅಂಗ್‌ಕೋರ್ ವಾಟ್ ನೋಡುವ ಕನಸು ಕಾಣುತ್ತಾ ನಿದ್ರೆಗೆ ಜಾರಿದೆ…

ಗುಡಿ, ಗೈಡು ಮತ್ತು ಬೈಕ್ ರಿಕ್ಷಾ ರೈಡು…

ಮಾರನೆಯ ದಿನ ಬೆಳಿಗ್ಗೆ ಎಂಟಕ್ಕೆ ಬಸ್ಸಿನಲ್ಲಿರಬೇಕು ಅನ್ನುವ ಕಂಡೀಷನ್ ಹಾಕಿಯಾಗಿತ್ತು ನಮ್ಮ ಟೂರ್ ಆಪರೇಟರ್. ಏಳಕ್ಕೇ ರೆಡಿಯಾಗಿ ಹೋಟೆಲ್ಲಿನಲ್ಲಿ buffet breakfast ಕಡೆ ಹೆಜ್ಜೆ ಹಾಕಿದೆವು. ಯಥಾಪ್ರಕಾರ ಬರೀ ನಾನ್ ವೆಜ್ ಐಟಮ್‌ಗಳ ಸಾಲು ಸಾಲು. ಒಂದು ಮೂಲೆಯಲ್ಲಿ ನಮ್ಮಂತ ನತದೃಷ್ಟ ಹುಲುಮಾನವರಿಗಾಗಿ ಬ್ರೆಡ್ಡು, ಜ್ಯಾಮ್ ಮತ್ತು ಬೆಣ್ಣೆಯ ಬಟ್ಟಲು, ಮತ್ತೆ ಜೊತೆಗೆ ಒಂದಿಷ್ಟು ಕಲ್ಲಂಗಡಿ ಹಣ್ಣು. ಮೊದಲಿಗೆ ಮಾವಿನ ಹಣ್ಣಿನ ಜ್ಯೂಸ್ ಕಂಡಿತು. ಖುಷಿಯಾಗಿ ಇದೊಂದಿದ್ದರೆ ಸಾಕಪ್ಪಾ ಅನ್ನುತ್ತಾ ಅದನ್ನು ಬಾಯಿಗಿಟ್ಟರೆ ಅಂತ ರುಚಿ ಹೀನ ಮಾವಿನ ಜ್ಯೂಸನ್ನು ಇಡೀ ಜನ್ಮದಲ್ಲೇ ಕುಡಿದಿಲ್ಲ ಅನ್ನುವಷ್ಟು ಕೆಟ್ಟದಾಗಿತ್ತು. ಒಂದೇ ಒಂದು ಗುಟುಕಿಗಿಂತ ಮುಂದಿನದ್ದು ಒಳಗೆ ಇಳಿಯಲೇ ಇಲ್ಲ. ಆಮೇಲೆ ಆ ಬ್ರೆಡ್ಡನ್ನು ಟೋಸ್ಟ್ ಮಾಡಿಕೊಳ್ಳುವಾ ಅಂತ ನಿಂತರೆ ಒಂದು ಸಲಕ್ಕೆ ಒಂದು ಸ್ಲೈಸ್ ಬ್ರೆಡ್ಡನ್ನು ಮಾತ್ರ ಟೋಸ್ಟ್ ಮಾಡಬಹುದಾದಂತ ಪುಟ್ಟ ಟೋಸ್ಟರ್ ಒಂದು ಕಂಡಿತು. ಮನೆಯಲ್ಲಿ ಮೂರು ಜನವಿದ್ದರೂ ಸಾಲದಂಥ ಪುಟುಗೋಸಿ ಟೋಸ್ಟರ್ ಇಡೀ ಒಂದು ಹೋಟೆಲ್ಲಿನ ರಾಶಿ ರಾಶಿ ಜನಕ್ಕೆ! ನಾನಂತೂ ಆ ಟೋಸ್ಟರ್‌ನ ಪಕ್ಕವೇ ಪ್ರತಿಷ್ಟಾಪನೆಯಾದೆ! ಮನೆಯ ನಾಲ್ಕೂ ಜನರಿಗೆ ಒಂದೊಂದೇ ಬ್ರೆಡ್ ಟೋಸ್ಟ್ ಮಾಡುತ್ತಾ ಇರುವ ರೇಟ್ ನೋಡಿದರೆ ನಾನು ಕಾಂಬೋಡಿಯಾಗೆ ಬಂದಿರುವುದೇ ಆ ಕೆಲಸ ಮಾಡಲೇನೋ ಅನ್ನಿಸುವಷ್ಟು ಇರಿಟೇಟ್ ಆಗಿ ಹೋಯ್ತು. ಕಣ್ಣೆದುರು ಎಲ್ಲರೂ ತಟ್ಟೆ ಭರ್ತಿ ಬಗೆಬಗೆಯ ತಿಂಡಿಗಳನ್ನು ಹಾಕಿಕೊಂಡು ಹೋಗುತ್ತಿದ್ದರೆ ನಾನು ಮಾತ್ರ ಅಬ್ಬೇಪಾರಿಯಂತೆ ನಿಂತಲ್ಲೇ ನಿಂತಿದ್ದೆ. ಕೊನೆಗೊಮ್ಮೆ ಮೂರು ಸ್ಲೈಸ್ ಬ್ರೆಡ್ ಸಂಪಾದಿಸಿ, ತಿಂದು ಹೋಟೆಲ್ ಬಿಟ್ಟು ಹೊರಟಿದ್ದಾಯ್ತು.

ದಾರಿಯಲ್ಲಿ ಬೈಕ್ ರಿಕ್ಷಾಗಳದ್ದೇ ಮೇಲುಗೈ. ಎಲ್ಲ ರಿಕ್ಷಾ ಡ್ರೈವರ್‌ಗಳ ಕೋಟಿನ ಹಿಂಭಾಗದಲ್ಲೂ ಒಂದು ನಂಬರ್ ಇತ್ತು. ಪರವಾಗಿಲ್ಲ, ಸಾಕಷ್ಟು ವ್ಯವಸ್ಥಿತ ದೇಶ ಅಂದುಕೊಂಡೆ. ನಮ್ಮ ದೇಶಕ್ಕಿಂತ ತುಂಬ ಚೆಂದವೇ ಇದ್ದ ರಸ್ತೆಗಳಲ್ಲಿ ನಮ್ಮ ಬಸ್ಸು ಸಾಗಿತು. ಮೊದಲಿಗೆ ಅಂಗ್‌ಕೋರ್ ವಾಟ್‌ನ ಪಾಸ್ ಮಾಡಿಸುವ ಕೆಲಸ. ಒಂದು ದಿನದ ಪಾಸಿಗೆ 20 ಅಮೆರಿಕನ್ ಡಾಲರ್‌ಗಳು. ಮೂರು ದಿನಕ್ಕೆ 40 ಮತ್ತು ಒಂದು ವಾರದ ಪಾಸಿಗೆ ಬರಿಯ 60 ಡಾಲರ್. ಆ ಮೂರು ದಿನದ ಪಾಸಿಗೆ ಒಟ್ಟಿಗೇ ಮೂರುದಿನ ಹೋಗಬೇಕೆನ್ನುವ ರೂಲ್ಸ್ ಏನೂ ಇಲ್ಲ. ಒಂದಿಡೀ ವಾರದಲ್ಲಿ ಮೂರು ದಿನ ಹೋಗಬಹುದು. ವಾರದ ಪಾಸಿನ validity ಒಂದು ತಿಂಗಳು ಅಂತ ನೆನಪು. ಅದಕ್ಕೆ ಹೋಗಿ ಕ್ಯೂ ನಿಂತು ನಮ್ಮ ಫೋಟೋ ಪ್ರಿಂಟ್ ಆಗಿರುವ ಪಾಸ್ ಮೊದಲು ಪಡೆಯಬೇಕು. ಹಾಗೆ ಪಾಸ್ ಮಾಡಿಸಲು ಹೋಗುವ ದಾರಿಯಲ್ಲಿ ನಮ್ಮ ಗೈಡ್ ಪಕ್ಕದಲ್ಲಿ ನೋಡಿ. ಅದೇ ಅಂಗ್‌ಕೋರ್ ವಾಟ್ ದೇಗುಲ ಅಂದಾಗ ಕಿಟಕಿಯಿಂದ ಆಚೆ ನೋಡಿದೆ… ಅಗಾಧ ದೇಗುಲವೊಂದು ನನ್ನೆದುರು ಕಂಡಿತು! ಇಳಿದು ಒಳಗೆ ಓಡಿಬಿಡಲಾ ಅನ್ನುವಷ್ಟು ತೀವ್ರ ತುಡಿತ ಮನಸ್ಸಿನಲ್ಲಿ. ಪಾಸ್ ಇಲ್ಲದೇ ಹೋಗುವುದು ಅಸಾಧ್ಯವಾದ್ದರಿಂದ ಇರಿ ಇರಿ ಈಗ ಬರುತ್ತೇನೆ ನಿಮ್ಮನ್ನು ಕಾಣಲು ಅಂತ ಆಶ್ವಾಸನೆ ಕೊಟ್ಟು ಮುಂದೆ ಸಾಗಿದೆ. ಟಿಕೆಟ್ ಕೊಡುವ ಜಾಗದಲ್ಲಿ 8-10 ಕ್ಯೂಗಳು. ಒಂದೊಂದರ ಮುಂದೆಯೂ ರಾಶಿ ರಾಶಿ ಜನರಿದ್ದ ಕ್ಯೂ ಎಷ್ಟು ಬೇಗ ಬೇಗ ಕರಗುತ್ತಿತ್ತು! ಅಗಾಧ ಚುರುಕಿದ್ದ ಕೌಂಟರ್ ಒಳಗಿನ ಸಿಬ್ಬಂದಿ ವರ್ಗ ತುಂಬ ಬೇಗ ನಮ್ಮನ್ನು ಪಾಸಿನ ಜೊತೆ ಕಳಿಸಿಕೊಟ್ಟರು. ನನ್ನ ಕೈಲಿದ್ದ ಅಂಗ್‌ಕೋರ್ ವಾಟ್ ಪಾಸನ್ನು ಪ್ರೀತಿಯಿಂದ ನೇವರಿಸಿದೆ… ಬದುಕಿದ್ದೂ ಸಾರ್ಥವಾಯ್ತು ಬಿಡು ಭಾರತಿ ಅಂತ ನನಗೆ ನಾನೇ ಹೇಳಿಕೊಂಡೆ. ಅತೀ ಸಂತೋಷಕ್ಕೆ ಕಣ್ಣಂಚಿನಲ್ಲಿ ಸಣ್ಣ ನೀರು… ನನ್ನ ಈ ಅತೀ ಭಾವುಕತೆ ನಿಮಗೆ ಅಸಹಜ ಅನ್ನಿಸಿದರೆ ಅದಕ್ಕೆ ನೀವೇ ಹೊಣೆಗಾರರು!

ಪಾಸ್ ಸಿಕ್ಕ ಕೂಡಲೇ ನಾವು ಅಂಗ್‌ಕೋರ್ ವಾಟ್ ದೇಗುಲದ ಕಡೆ ಹಾರಿ ಹೋಗಿಬಿಡುತ್ತೇವೆ ಅಂದುಕೊಂಡಿದ್ದೆ. ಆದರೆ ನಾವು ಮತ್ತೆ ಅದರ ಮುಂದೆಯೇ ಹಾದು ಸಾಗಿದೆವು ಬಾಂತೇಸ್ರಿ ಅನ್ನುವ ದೇಗುಲದ ಕಡೆಗೆ. ನನಗೆ ಕೈಗೆಟಕುವ ಅಳತೆಯಲ್ಲಿದ್ದೂ ಕೈಗಿನ್ನೂ ಸಿಗದ ಅಂಗ್‌ಕೋರ್ ವಾಟ್‌ನ ಕಡೆಯೇ ಎಲ್ಲ ಗಮನ ಇದ್ದಿದ್ದರಿಂದ ಸುಮ್ಮನೆ ನನ್ನ ಪಾಡಿಗೆ ನನ್ನ ಬಿಟ್ಟು ಬಿಡ್ರಪ್ಪಾ, ನಾನು ಅಲ್ಲಿಗೆ ಓಡುತ್ತೇನೆ ಅಂತ ಬೇಡಿಕೊಳ್ಳುವ ಮನಃಸ್ಥಿತಿಯಾಗಿ ಹೋಯ್ತು. ಆದರೆ ನಮ್ಮ ಟೂರ್ ಗೈಡ್ ಹಾಕಿದ್ದ ಪ್ಲ್ಯಾನ್ ಪ್ರಕಾರವೇ ಎಲ್ಲ ನಡೆಯಬೇಕಿತ್ತಲ್ಲ .. ಹಾಗಾಗಿ ದೇವರು ಕೊಟ್ಟ ವರವನ್ನು ಈ ಪೂಜಾರಿ ತನ್ನ ಕೈಲಿ ಹಿಡಿದು ನನ್ನ ಆಟವಾಡಿಸುತ್ತಿದ್ದಾನೆ ಅನ್ನಿಸೋದಿಕ್ಕೆ ಶುರುವಾಯ್ತು. ಆದರೆ ಗೊತ್ತಿಲ್ಲದ ದೇಶವಾದ್ದರಿಂದ ನನಗೆ ಒಬ್ಬಳೇ ಹೋಗುವ ಧೈರ್ಯವಿರಲಿಲ್ಲ. ಕಾಂಬೋಡಿಯಾಗೆ ಕಾಲಿಡುವ ಮುನ್ನ ನಮ್ಮ ಟೂರ್ ಗೈಡ್ ಅಲ್ಲಿ ಒಬ್ಬೊಬ್ಬರೇ ಓಡಾಡುವ ಹಾಗಿಲ್ಲ, ಬಡತನದ ದೇಶವಾದ್ದರಿಂದ ಕಳ್ಳತನ ಮತ್ತು ಅಡ್ಡಗಟ್ಟಿ ಹಣ ಕಸಿಯುವ ಗ್ಯಾಂಗ್‌ಗಳು ತುಂಬ ಇರುತ್ತವೆ. ರಾತ್ರಿಯಾದ ಮೇಲಂತೂ ರೂಮು ಬಿಟ್ಟು ಆಚೆ ಬರಬೇಡಿ ಅಂತೆಲ್ಲ ಹೆದರಿಸಿ ಬಿಟ್ಟಿದ್ದ. ಆ ಥರದ ಚಿತ್ರಣ ಕೊಟ್ಟ ದೇಶದಲ್ಲಿ ಒಬ್ಬಳೇ ಹೋಗುವುದಕ್ಕೆ ಹೆದರಿ ತೆಪ್ಪಗೆ ಕೂತೆ.

ಕಾಂಬೋಡಿಯಾದಲ್ಲಿ ಸುಮಾರು 3000 ದೇಗುಲಗಳಿವೆ, ಸಣ್ಣದು ಪುಟ್ಟದು ಎಲ್ಲ ಸೇರಿ. ಅಲ್ಲಿನ ರಾಜರು ಪೈಪೋಟಿಯ ಮೇಲೆ ಒಂದಾದ ಮೇಲೊಂದು ದೇಗುಲ ನಿರ್ಮಾಣ ಮಾಡುತ್ತಾ ಹೋದದ್ದರ ಫಲ ಇದು. ಈಗ ಮೊದಲಿಗೆ ಹೊರಟ ಬಾಂತೇಸ್ರಿ ಅನ್ನುವ ದೇವಸ್ಥಾನಕ್ಕೆ ಹೊರಟೆವು. ಬಾಂತೇಸ್ರಿ ಅಂದರೆ ಸೌಂದರ್ಯದ ಕೋಟೆ ಅಥವಾ ಸ್ತ್ರೀಯರ ಕೋಟೆ ಅಂತ ಅರ್ಥವಂತೆ. ಸ್ತ್ರೀ ಅಂದರೆ ಸೌಂದರ್ಯ ಅಂತ ಅನ್ವರ್ಥವೇ?! ಏನೋ ಗೊತ್ತಿಲ್ಲಪ್ಪ ! ಅದು ಸಿಯಮ್ ರೀಪ್‌ನಿಂದ 35 ಕಿಲೋಮೀಟರ್ ದೂರದಲ್ಲಿದೆ. ಅಲ್ಲಿನ ದೇಗುಲ ತ್ರಿಭುವನ ಮಹೇಶ್ವರ ದೇಗುಲ ಅನ್ನುತ್ತಾರೆ. ನಾವಲ್ಲಿಗೆ ಹೋದರೆ ಸೂರಿಲ್ಲದ ಒಂದಿಡೀ ವಿಶಾಲ ದೇಗುಲ ಎದುರಾಯ್ತು. ಎಲ್ಲ ಪಾಳು ಪಾಳು ಬಿದ್ದ ದೇಗುಲ. ಆದರೆ ಎಲ್ಲ ಬಾಗಿಲಿಗೂ ಇದ್ದ ಕಲ್ಲಿನ ಫ಼್ರೇಮ್ ಮೇಲಿನ ಕೆತ್ತನೆ ಮಾತ್ರ ತುಂಬ ಮುದ್ದಾಗಿತ್ತು. ಹಿಂದು ಸಂಸ್ಕೃತಿಯ ಸುಮಾರು ಕೆತ್ತನೆಗಳು ಇಲ್ಲಿವೆ. ಹಿರಣ್ಯಕಶಿಪು-ಪ್ರಹ್ಲಾದನ ಕಥೆ, ಖಾಂಡವ ವನ ದಹನವಾದ ಕಥೆ, ರಾಮಾಯಣದ ಮುಖ್ಯ ಘಟನೆಗಳ ಕೆತ್ತನೆಗಳು ಎಲ್ಲವನ್ನೂ ನೋಡುತ್ತಾ ಸಾಗಿದೆವು. ಕಾಂಬೋಡಿಯಾದ ಪುರಾಣ ಕಥೆಗಳು ನಮ್ಮ ಇಲ್ಲಿನ ಕಥೆಗಳಂತೆಯೇ ಇರುತ್ತದೆ ಹೆಚ್ಚು ಕಡಿಮೆ. ಅಲ್ಲೂ ಸ್ವರ್ಗದ ಅಧಿಪತಿ ಇಂದ್ರನೇ, ಅವನ ವಾಹನದ ಹೆಸರೂ ಐರಾವತವೇ. ಸ್ವರ್ಗವನ್ನು ಕಾಯುವ ಕೆಲಸ ನಾಗದೇವರದ್ದು. ಹಾಗಾಗಿ ಎಲ್ಲ ಕಡೆ ಹಾವಿನ ಕೆತ್ತನೆ ಹೇರಳವಾಗಿ ಕಾಣಬರುತ್ತದೆ. ಬಾಂತೇಸ್ರಿ ದೇವಸ್ಥಾನದಲ್ಲಿ ಶಿವನ ಪೀಠದಲ್ಲಿ ವಿಗ್ರಹವಿರಲಿಲ್ಲ… ಖಾಲಿ ಪೀಠ ಮಾತ್ರ ಇತ್ತು. ನಂದಿಯ ಮೇಲ್ಭಾಗ ಪೂರ್ತಿ ಇರಲೇ ಇಲ್ಲ. ಬರಿಯ ಕಾಲುಗಳು ಮತ್ತು ಮೂತಿ ಮಾತ್ರ ಕಂಡಿತಷ್ಟೇ. ಗೈಡ್ ಹೇಳುತ್ತಿದ್ದ ಸುಮಾರು ಜನ ಅಲ್ಲಿನ ವಿಗ್ರಹಗಳನ್ನೆಲ್ಲ ಕದ್ದು ಸಾಗಿಸುತ್ತಿದ್ದುದನ್ನು ಕಂಡು, ಅವುಗಳನ್ನೆಲ್ಲ ಬೇರೆಲ್ಲೋ ಜೋಪಾನವಾಗಿಡಲು ಸಾಗಿಸಿ, ಆ ಜಾಗದಲ್ಲಿ ಸಿಮೆಂಟಿನ ಮೂರ್ತಿಗಳನ್ನು ಇಡುವ ಹುಚ್ಚು ಆಲೋಚನೆ ಕೂಡಾ ಮಾಡಿತಂತೆ ಅಲ್ಲಿನ ಸರ್ಕಾರ! ಅಂತೂ ಈ ಅಧಿಕಾರದಲ್ಲಿರುವವರಿಗೆ ಈ ಥರದ ಅರೆಪೈತ್ಯದ ಐಡಿಯಾಗಳು ಅದೆಲ್ಲೆಲ್ಲಿಂದ ಹುಟ್ಟುತ್ತವೋ! ಇಡೀ ಆವರಣದ ತುಂಬ ನಮ್ಮಲ್ಲಿನ ಥರವೇ ಸೂರ್ಯ, ಚಂದ್ರ, ಅಗ್ನಿ, ವಾಯು, ವರುಣ ಅಂತ ಎಲ್ಲಕ್ಕೂ ದೇವರುಗಳು ಮತ್ತು ಅವರ ಕೆತ್ತನೆಯಿದೆ. ಅಲ್ಲಿ ಬಂದ ವಿದೇಶಿ ಪ್ರವಾಸಿಗರಿಗೆ ಅಲ್ಲಿನ ಟೂರ್ ಗೈಡ್‌ಗಳು ನಮ್ಮ ದೇವತೆಗಳ ಹೆಸರನ್ನು ಹೇಳುತ್ತಾ ಹೋದ ಹಾಗೆ ಒಬ್ಬರ ಮುಖದಲ್ಲೂ ಒಂದು ಹೆಸರೂ register ಆಗದ ಮುಖಭಾವ! ಕೆಲವು ಹೆಸರುಗಳನ್ನು ಉಚ್ಛರಿಸಲಾಗದೇ ನಗುತ್ತಾ, ತೊದಲುತ್ತಾ ಅವುಗಳನ್ನು ಹೇಳಲು ಪ್ರಯತ್ನಿಸಿ ಸೋತು ನಗುತ್ತಿದ್ದರು. ನಮ್ಮ ಕಥೆಗಳನ್ನು ಹೇಳುತ್ತಿದ್ದರೆ ಅವರ ಮುಖದಲ್ಲಿ ಈಗ ನಾನೆಲ್ಲಿದ್ದೀನಿ!! ಅನ್ನುವಂಥ ಮುಖಭಾವ! ಸಧ್ಯ ಪುಣ್ಯಕ್ಕೆ ಭಾರತವರಾದ್ದರಿಂದ ನಮ್ಮ ಬದುಕು ತುಂಬ ಸುಲಭವಾಯ್ತು ಅಲ್ಲಿ. ಸೀಈಈಈವ? ಹೀಈಈಈರನ್ಯಕಸಿಪ್? ಅಂತೆಲ್ಲ ತೊದಲುತ್ತಿದ್ದ ಅವರ ಕಷ್ಟ ನಮಗೂ ನಗು ತರಿಸುತ್ತಿತ್ತು. ಆದರೂ ನಗುವುದು ಸೌಜನ್ಯವಲ್ಲವೆಂದು ಎಣಿಸಿ ಅವರಿಗೆ ಕಾಣದ ಹಾಗೆ ಒಳಗೊಳಗೆ ನಕ್ಕೆವು. ದ್ವಾರಪಾಲಕರಾಗಿ ಕೋತಿಗಳನ್ನು ಕೂರಿಸಿದ್ದು ಕಂಡು ನಗು ಬಂದಿತು. ಅದೇ ಹೇಳಿ ಕೇಳಿ ಕೋತಿ .. ಅದಿನ್ನೇನು ಕಾಯುತ್ತೆ ಅಂತ ಕೂರಿಸಿದ್ರೋ ಅಂದುಕೊಂಡೆ. ಅಲ್ಲಿ ಹೆಣ್ಣು ದೇವತೆಗಾಗಿ ಏಕೈಕ ದೇವಸ್ಥಾನವೊಂದಿದೆ ಅಂದ ನಮ್ಮ ಗೈಡ್. ಪಾರ್ವತಿಯದ್ದು ಅಂದ. ಅದೆಲ್ಲಿದೆ ಅಂತ ಕೇಳಿದರೆ ಆತನಿಗೆ ಕೊನೆಗೂ ಅದನ್ನು ಗುರುತಿಸಲು ಸಾಧ್ಯವೇ ಆಗಲಿಲ್ಲ. ಪಕ್ಕ ಪಕ್ಕದಲ್ಲಿ ಸಾಲಾಗಿ ಕಟ್ಟಿದ್ದ ಮೂರು ದೇಗುಲಗಳು ಶಿವ, ವಿಷ್ಣು ಮತ್ತು ಬ್ರಹ್ಮರಿಗೆ ಸೇರಿದ್ದು ಅಂದ. ಆದರೆ ಅದರ ಪುನರ್ನಿರ್ಮಾಣ ಕೆಲಸ ಇನ್ನೂ ನಡೆಯುತ್ತಿರುವುದರಿಂದ ಸುಮಾರು ಸ್ಥಳಗಳನ್ನು ಬ್ಯಾರಿಕೇಡ್ ಮಾಡಿಡಲಾಗಿತ್ತು. ಹಾಗಾಗಿ ನಾವು ಅದರ ಬಳಿ ಸುಳಿಯುವ ಹಾಗಿರಲಿಲ್ಲವಾದ್ದರಿಂದ ಕಂಡಷ್ಟನ್ನು ಮಾತ್ರ ನೋಡಿ ವಾಪಾಸಾಗಲೇ ಬೇಕಾದ ಅನಿವಾರ್ಯತೆಯಿತ್ತು…

ವಾಪಸ್ ಬರುವಾಗ ಮತ್ತೊಂದು ಸಲ ಅಂಗ್‌ಕೋರ್ ವಾಟ್ ಎದುರೇ ಬಂದೆವು. ಊಟ ಮುಗಿಸಿ ಆಮೇಲೆ ಅಲ್ಲಿಗೆ ಹೋಗೋಣ ಅಂದ ನಮ್ಮ ಗೈಡ್. ನಾನಂತೂ ಸಿನೆಮಾಗಳಲ್ಲಿ ಪ್ರೇಮಿಯಿಂದ ಬೇರ್ಪಡಿಸಿ ಅಪ್ಪ ಎಳೆದುಕೊಂಡು ಹೋಗುವಾಗ ಮತ್ತೆ ಮತ್ತೆ ಹಿಂತಿರುಗಿ ನೋಡುತ್ತಾ ಸಾಗುವ ಹೀರೋಯಿನ್ ಥರ ಅಂಗ್‌ಕೋರ್ ವಾಟ್ ದೇಗುಲವನ್ನೇ ನಿರಾಸೆಯಿಂದ ಮತ್ತೆ ಮತ್ತೆ ನೋಡಿದೆ. ಯಾಕೋ ಈ ಗೈಡ್ ನನ್ನ ತಾಳ್ಮೆ ಪರೀಕ್ಷೆಗಿಟ್ಟಿದ್ದ! ಮಧ್ಯಾಹ್ನ ಮಸ್ತಾಗಿರೋ ಊಟ ಹಾಕಿಸಿದ. ಚೆಂದಕ್ಕೆ ಉಂಡಿದ್ದಾಯ್ತು. ಇನ್ನು ಅಂಗ್‌ಕೋರ್ ವಾಟ್ ಹತ್ತಿರ ಹೊರಟೆ ಅನ್ನುವಷ್ಟರಲ್ಲಿ ನಮ್ಮ ಗೈಡ್ ಹೊಸತೊಂದು ಪ್ಲ್ಯಾನ್ ಎತ್ತಿದ. ಮೊದಲು ಬಯಾನ್ ದೇಗುಲ ನೋಡಿ ಆ ನಂತರ ಅಲ್ಲಿಗೆ ಹೋಗೋಣ ಅಂದುಬಿಟ್ಟ. ನನ್ನ ತಾಳ್ಮೆ ಪೂರ್ತಿ ಮುಗಿದುಹೋಗಿತ್ತು. ಸಿಕ್ಕಾಪಟ್ಟೆ ಅಸಹನೆ ಶುರುವಾಯ್ತು. ಗೊಣಗಾಡಲು ಶುರು ಮಾಡಿದೆ. ಆದರೆ ಏನು ಮಾಡುವ ಹಾಗಿದ್ದೆ? ಹೊಸ ದೇಶ… ಭಾಷೆ ಬಾರದ ಜನರು. ನಮ್ಮ ದೇಶವಾಗಿದ್ದರೆ ನಿಜಕ್ಕೂ ಅರೆ ಕ್ಷಣವೂ ಅಲ್ಲಿ ನಿಲ್ಲದೇ ನನ್ನ ದಾರಿ ಹಿಡಿದು ಹೊರಟು ಬಿಡುತ್ತಿದ್ದೆ. ಭಾಷೆ ಒಂದು ಗೊತ್ತಿದ್ದರೂ ವಾಸಿಯಿತ್ತು, ಹೇಗೋ manage ಮಾಡಬಹುದಿತ್ತು ಅಂತೆಲ್ಲ ಹಳಹಳಿಸುತ್ತಾ ಬಯಾನ್ ಕಡೆ ಹೊರಟೆ. ಅಂದ ಹಾಗೆ ಕಾಂಬೋಡಿಯಾದಲ್ಲಿ ಬಯಾನ್ ದೇಗುಲ ಅಂದರೆ ಫಕ್ಕನೆ ಯಾರಿಗೂ ಗೊತ್ತಾಗುವುದೇ ಇಲ್ಲ. ಬಯಾನ್ ಅನ್ನುವುದನ್ನು ಒತ್ತಿ ಒತ್ತಿ ಬಯ್ಯಾಯ್ಯಾಯ್ಯಾಯ್ಯಾಯ್ಯಾಯ್ಯಾನ್ ಅಂದರೆ ಮಾತ್ರ ಅವರಿಗೆ ಅರ್ಥವಾಗುವ ಸಾಧ್ಯತೆ ಇದೆ. ಇಡೀ ಕಾಂಬೋಡಿಯಾದಲ್ಲಿ ಎಲ್ಲವನ್ನೂ ಹಾಗೆಯೇ ಹೇಳಿದರೆ ಸುಲಭಕ್ಕೆ ಅರ್ಥವಾಗುತ್ತದೆ. ನಾವಿದ್ದ ಹೋಟೆಲ್ ಪ್ರಮ್ ಬಯಾನ್ ಅನ್ನು ಪ್ರರ್ ರ್ ರ್ ರ್ ರ್ ರ್ ರ್ ರಮ್ ಬಯ್ಯಾಯ್ಯಾಯ್ಯಾಯ್ಯಾಯ್ಯಾಯ್ಯಾಯ್ಯಾನ್ ಅಂದರೆ ಮಾತ್ರ ಅಲ್ಲಿನವರಿಗೆ ಅರ್ಥವಾಗುತ್ತಿತ್ತು !

ಈ ಬಯಾನ್ ದೇಗುಲ ಅಂಗ್‌ಕೋರ್ ಥೋಮ್ ದೇಗುಲ ಸಂಕೀರ್ಣದಲ್ಲಿರುವ ಒಂದು ದೇಗುಲ. ಇದನ್ನು ಕಟ್ಟಿದ್ದು 12ನೆಯ ಶತಮಾನದಲ್ಲಂತೆ. ಬಸ್ಸು ನಿಲ್ಲಿಸಿದ ಜಾಗ ಪೂರಾ ಖಾಲಿಯಿತ್ತು. ಹಾಗಾಗಿ ಇಳಿದ ಕೂಡಲೇ ಎದುರಿನ ದೇವಸ್ಥಾನ ಇಡಿಯಾಗಿ ಒಂದು ನೋಟಕ್ಕೆ ಸಿಕ್ಕಿತು. ಎಂಥ ಅದ್ಭುತ ನೋಟವದು! ಅಂಗ್‌ಕೋರ್ ವಾಟ್ ತಪ್ಪಿಸಿ ಇಲ್ಲಿಗೆ ಕರೆದುಕೊಂಡು ಬಂದ ಗೈಡನ್ನು ಉದಾರ ಹೃದಯದಿಂದ ಕ್ಷಮಿಸಿದೆ! ಎದುರಾದ ಎತ್ತರೆತ್ತರದ ಗೋಪುರಗಳ ನಾಲ್ಕೂ ಬದಿಗೂ ನಗುವ ಮುಖಗಳು. ಒಂದೊಂದು ಮುಖದ ನಗುವೂ ತಂಪು ತಂಪೆನಿಸುವಷ್ಟು ತಣ್ಣಗಿನ, ಪ್ರಶಾಂತ ನಗು. ದೇಗುಲದಲ್ಲಿ ಐವತ್ತೊಂದೋ, ಐವತ್ನಾಲ್ಕೋ ದೇಗುಲಗಳಿವೆಯಂತೆ. ಕೆಲವು ಬಿದ್ದುಹೋಗಿದೆ ಈಗ 48 ಮಾತ್ರ ಇದೆ ಅಂದರು ಯಾರೋ. ಒಂದೊಂದಕ್ಕೂ ನಾಲ್ಕು ನಾಲ್ಕು ಮುಖಗಳು ಅಂದರೆ ಇನ್ನೂರಕ್ಕೂ ಹೆಚ್ಚು ಮುಖಗಳು ಎಲ್ಲ ದಿಕ್ಕಿನಿಂದಲೂ ನಮ್ಮನ್ನು ಸ್ವಾಗತಿಸುತ್ತವೆ. ಅಲ್ಲಿನ ಆವರಣದ ತುಂಬ ಬಿಡಿ ಬಿಡಿ ಕಲ್ಲುಗಳ ರಾಶಿ ರಾಶಿ. ಇಡೀ ಅಂಗ್‌ಕೋರ್ ವಾಟ್ ಮತ್ತು ಅಂಗ್‌ಕೋರ್ ಥೋಮ್ ಸಂಕೀರ್ಣದ ತುಂಬ ಎಲ್ಲ ಕಡೆಯೂ ಕಿತ್ತು ಬಿಸಾಡಿದ ರಾಶಿ ರಾಶಿ ಕಲ್ಲುಗಳು… ಅವುಗಳಿಗೆ ಮಾತು ಬಂದಿದ್ದರೆ ಎಷ್ಟೆಷ್ಟು ಕಥೆಗಳನ್ನು ಹೇಳುತ್ತಿದ್ದವೋ ಏನೋ! ಈ ದೇಗುಲ ಮುಂಚೆ ಶಿವನ ದೇಗುಲವಾಗಿತ್ತಂತೆ. ಅಲ್ಲಿರುವುದೆಲ್ಲ ಶಿವನ ಮುಖಗಳೇ ಅಂದ ನಮ್ಮ ಗೈಡ್ ಮೊದಲಿಗೆ. ಆಮೇಲೆ ಅವೆಲ್ಲ ಬುದ್ಧನ ವಿಗ್ರಹಗಳು ಅಂದ. ಆಮೇಲೆ ಆ ಮುಖಗಳು ರಾಜಾ ಜಯವರ್ಮನನ್ನು ಹೋಲುವ ಮುಖಗಳು ಅಂದ. ಒಟ್ಟಿನಲ್ಲಿ ನಮ್ಮನ್ನು ಸಾಕಷ್ಟು ಕನ್ಫ಼್ಯೂಸ್ ಮಾಡಿಸುವಲ್ಲಿ ಆತ ಸಫಲನಾದ ಅಂತಲೇ ಹೇಳಬೇಕು. ಆದರೆ ದೇಗುಲ ಒಂಥರಾ ಕಚ ಪಚ ಅನ್ನಿಸುವಂತೆ ಇತ್ತು. ಎಲ್ಲೂ ಒಂಥರಾ ನಿಂತು ನೋಡಬಹುದಾದಂತ, ಕೂತು ಖುಷಿ ಪಡುವಂಥ ಜಾಗಗಳೇ ಕಡಿಮೆ. ಅಲ್ಲಲ್ಲೇ ಡಿಕ್ಕಿ ಹೊಡೆಯುವ ಗೋಪುರಗಳು ಮತ್ತು ಅದರ ಮೇಲಿನ ಮುಖಗಳು. ಯಾಕೋ ಈ ದೇಗುಲ ತುಂಬ ಉಸಿರು ಕಟ್ಟಿಸಿದ ಭಾವನೆ ತಂದುಬಿಟ್ಟಿತು. ಆದರೂ ಎಲ್ಲವನ್ನೂ ನೋಡುತ್ತಾ ನಡೆದೆ. ದೇಗುಲಕ್ಕೆ ನಾಲ್ಕು ದಿಕ್ಕಿನಲ್ಲೂ ನಾಲ್ಕು ಹೊರಕ್ಕೆ ಇಳಿಯುವ ಮೆಟ್ಟಿಲುಗಳು. ಆ ಮೆಟ್ಟಿಲು ಇಳಿಯುವ ಜಾಗದಲ್ಲೂ ಒಂಥರಾ ಇಕ್ಕಟ್ಟಿನ feeling. ನಮ್ಮ ಗೈಡ್ ಉತ್ತರ ದಿಕ್ಕಿನ ಬಾಗಿಲ ಕಡೆಯಿಂದ ಇಳಿದು ಬನ್ನಿ ಅಂತ ಹೇಳಿ ಹೊರಟುಹೋಗಿದ್ದ. ಅಲ್ಲಿನ ಎಲ್ಲ ದೇವಸ್ಥಾನಗಳಲ್ಲೂ ಈ ರೀತಿಯಾಗಿ ಒಂದು pre planned meeting point ಇಟ್ಟುಕೊಳ್ಳದಿದ್ದರೆ ದೇವರೇ ಕಾಪಾಡಬೇಕು. ಎಂಥ ಅಗಾಧ ಆಕಾರದ ದೇಗುಲಗಳಲ್ಲಿ ಒಬ್ಬರನ್ನೊಬ್ಬರು ಹುಡುಕಲು ಹೊರೆಟೆವೆಂದರೆ ಒಂದೊಂದು ದೇಗುಲದಲ್ಲೂ ಘಂಟೆಗಟ್ಟಳೆ ಹುಡುಕಾಟದಲ್ಲೇ ಕಳೆಯಬೇಕಾಗುತ್ತದೆ. ಹಾಗಾಗಿ ಪೂರ್ವ ನಿರ್ಧಾರಿತದಂತೆ ಉತ್ತರ ದಿಕ್ಕಿನ ಬಾಗಿಲ ಕಡೆ ಹೊರಟೆವು.

ಅಲ್ಲಿಂದ ಒಂದು ಸ್ವಲ್ಪ ದೂರ ನಡೆದರೆ ಬಪ್ಪೌನ್ ದೇವಸ್ಥಾನ. ಎಲ್ಲರೂ ಆ ಕಡೆ ಹೊರಟೆವು. ನೆತ್ತಿಯ ಮೇಲೆ ಸೂರ್ಯ ಉರಿಯುತ್ತಿದ್ದ. ಅಬ್ಬಾ ಎಂಥ ಅಸಾಧ್ಯ ರಣ ಸೆಖೆ ಎಂದರೆ ಮೈ ಎಲ್ಲ ಬೆವರಿನಿಂದ ಒದ್ದೆಯಾಗಿಹೋಗಿತ್ತು. ದೇಹದಲ್ಲಿನ ಶಕ್ತಿಯ ಮಟ್ಟ ಅರ್ಧಕ್ಕರ್ಧ ಇಳಿದುಹೋಗಿತ್ತು. ಕಾಲೆಳೆದುಕೊಂಡು ಬಪ್ಪೌನ್ ದೇಗುಲ ತಲುಪಿದೆವು. ಅಷ್ಟರಲ್ಲಿ ನಮ್ಮ ಟೂರ್ ಗೈಡ್ ತಲೆ ಎಣಿಸಿದಾಗ ಗೊತ್ತಾಯ್ತು ಮತ್ತೆ ನಮ್ಮ ಸಿದ್ದಪ್ಪಾರು missing! ನಮ್ಮ ಟೂರ್ ಗೈಡ್‌ಗೆ ತಲೆ ಕೆಟ್ಟುಹೋಯ್ತು. ಎಲ್ಲಿ ಹೋದ್ರು ಈ ಮನುಷ್ಯ? ಬರೀ ಇದೇ ಆಗೋಯ್ತು ಅಂತ ಹಾರಾಡಲು ಶುರು ಮಾಡಿದ. ಯಾರೋ ಹೇಳಿದರು ಆತ ಬಯಾನ್ ದೇವಸ್ಥಾನದಲ್ಲೇ ಉಳಿದುಹೋಗಿರಬೇಕು ಎಂದು. ನಮ್ಮ ಟೂರ್ ಗೈಡ್‌ಗೂ ಸಿಕ್ಕಾಪಟ್ಟೆ ಸುಸ್ತಾಗಿ ಹೋಗಿದ್ದರಿಂದ ಆತ ಗೊಣಗಿಕೊಳ್ಳುತ್ತಾ, ಬಯ್ದುಕೊಳ್ಳುತ್ತಾ ಸಿದ್ದಪ್ಪಾರನ್ನು ಹುಡುಕಲು ಬಯಾನ್ ಕಡೆ ಹೊರಟ. ನಾವೆಲ್ಲ ಬಪ್ಪೌನ್ ಕಡೆ ಹೊರಟೆವು. ಸುಮಾರು ಉದ್ದದ ಕಲ್ಲಿನ ಸೇತುವೆ ದಾಟಿದ ಮೇಲಿನ ಬಪ್ಪೌನ್ ದೇಗುಲದ ವಿಸ್ತೀರ್ಣ ತುಂಬ ಹೆಚ್ಚೇ ಇದೆ. ಆ ಸೇತುವೆಯೇ ತುಂಬ ಉದ್ದ ಇರುವುದರಿಂದ ಬಾಟಲ್‌ಗಟ್ಟಲೆ ನೀರು ಬಸಿದುಕೊಳ್ಳುತ್ತಾ ನಡೆಯುವಷ್ಟರಲ್ಲಿ ಎದುರಿಗೆ ಜೇಬಲ್ಲಿ ಕೈಯಿಟ್ಟು ಲಗುಬಗೆಯಿಂದ ಬರುತ್ತಿದ್ದ ಸಿದ್ದಪ್ಪಾರು ಕಾಣಿಸಿದರು! ನಾವೆಲ್ಲ ಅವರನ್ನು ಕಂಡು ಸುಸ್ತಾದೆವು. ಇಲ್ಯಾವಾಗ ಬಂದ್ರಿ ಅಂತ ಬಾಯಿ ಬಾಯಿ ಬಿಡುತ್ತಾ ಕೇಳಿದರೆ ಆಆಆಅಗ್ಲೇ ಬಂದೆನಲ್ಲ ಅಂತ ಆರಾಮವಾಗಿ ಉತ್ತರ ಕೊಟ್ಟರು! ನಿಜಕ್ಕೂ ಹೇಳುತ್ತೇನೆ ನಮ್ಮ ಇಡೀ ಕಾಂಬೋಡಿಯಾ ಟ್ರಿಪ್‌ನಲ್ಲಿ ಸಿದ್ದಪ್ಪ ತುಂಬ comic relief ಕೊಟ್ಟರು. ಸುಸ್ತಾಗಿ ಹೋಗುತ್ತಿರುವಾಗ ಇವರ ಸಿಗರೇಟಿನ ಚಟದ ಪರಿಣಾಮವಾಗಿ ಎತ್ತೆತ್ತಲೋ ಹೋಗಿ ತಪ್ಪಿಸಿಕೊಂಡು, ನಮ್ಮ ಟೂರ್ ಗೈಡ್ ಹುಡುಕಿ ಹುಡುಕಿ ಕೊನೆಗೆ ಸಿಡುಕಿ ಪರದಾಡುವ ಸೀನ್ ಆ ಉರಿಬಿಸಿಲಿನಲ್ಲಿ ನಿಜಕ್ಕೂ ಚೇತನ ತಂದುಕೊಡುತ್ತಿತ್ತು! ಈಗ ಎದುರಾದ ನಮ್ಮ ಸಿದ್ದಪ್ಪಾರನ್ನ ನೀವು ಉತ್ತರ ಬಾಗಿಲಿನಿಂದ ಇಳಿದು ಬರಲಿಲ್ವಾ ಅಂತ ಕೇಳಿದರೆ ‘ಅಯ್ಯೋ! ಹೌದಾ!!! ಹಾಗಂತ ಹೇಳಿದ್ರಾ ಅವ್ರು? ನಾನು ಯಾವ ಬಾಗ್ಲಲ್ಲಿ ಇಳಿದುಬಂದೆ?’ ಅಂತ ನೆನಪಿಸಿಕೊಳ್ಳಲು ಪ್ರಯತ್ನಿಸುತ್ತಾ ಕೂತರು! ಅಂಥ ಕೂಲ್ ಮನುಷ್ಯನನ್ನು ನೋಡಿದರೆ ನಿಜಕ್ಕೂ ಬದುಕು ಹೀಗೂ ಇರಬಹುದಾ ಅಂತ ಖುಷಿಯಾಗುವಂತಿತ್ತು. ಅವರ ಈ ಸ್ವಭಾವದಿಂದ ತೊಂದರೆಗೀಡಾದವನು ನಮ್ಮ ಟೂರ್ ಆಪರೇಟರ್ ಮಾತ್ರ. ಕೊನೆಗೂ ಆತನಿಗೆ ಯಾವ ಬಾಗಿಲಿನಿಂದ ಇಳಿದೆ ಅನ್ನುವುದು ನೆನಪಾಗದೇ ಕೊನೆಗೆ ‘ಅದೇನೋಪ್ಪಾ ನೆನಪಾಗ್ತಿಲ್ಲ. ಒಟ್ನಲ್ಲಿ ಬಾಗ್ಲು ಕಾಣ್ತು. ಇಳಿದು ಬಂದೆ. ಬಿಡಿ ಎಲ್ಲ ಸಿಕ್ಕಿದ್ರಲ್ಲಾ’ ಅಂದರು. ಆಗ ನಾವೆಲ್ಲ ನಗುತ್ತಾ ಟೂರ್ ಆಪರೇಟರ್ ಅವರನ್ನು ಹುಡುಕಲು ಹೊರಟದ್ದನ್ನು ಹೇಳಿದೆವು. ಆಗ ಆತ ಒಂದು ಚೂರೇ ಚೂರು ಪಶ್ಚಾತ್ತಾಪದ ಮುಖದಲ್ಲಿ ‘ಅವರನ್ನ ಹುಡುಕಿ ಬರ್ತೀನಿ’ ಅಂತ ಹೇಳಿ ಪುಟು ಪುಟು ನಡೆದು ಹೊರಟೇ ಹೋದರು. ನಾವೆಲ್ಲ ಮನಸಾರೆ ನಗುತ್ತಾ ಬಪ್ಪೌನ್ ಕಡೆ ನಡೆದೆವು.

ಬಪ್ಪೌನ್ ದೇಗುಲದ ಎತ್ತರೆತ್ತರದ ಮೆಟ್ಟಿಲನ್ನು ಒಂದಿಷ್ಟು ಹತ್ತುವಷ್ಟರಲ್ಲಿ ನಾನು ಪೂರ್ತಿ ಸುಸ್ತಾಗಿ ಹೋದೆ. ಉಹ್ಞೂ, ಇನ್ನು ಸಾಧ್ಯವೇ ಇಲ್ಲ ಅನ್ನಿಸಿ ನಾನು ಕೆಳಗಿಳಿದು ಬಿಟ್ಟೆ. ಅಲ್ಲೇ ದೇಗುಲವನ್ನು ಸುತ್ತು ಹಾಕುತ್ತಾ ನಡೆದೆ. ವಿಶಾಲ ದೇಗುಲದ ಸುತ್ತಲಿನ ಕಾಲುದಾರಿಯಲ್ಲಿ ನಡೆಯುವಾಗ ಗಮನಿಸಿದೆ, ಅಲ್ಲಿ ಎಲ್ಲ ದೇಗುಲಗಳ ಹತ್ತಿರಕ್ಕಿಂತ ಹೆಚ್ಚು ಶಾಂತಿಯಿತ್ತು. ಜನ ಕೂಡ ತುಂಬ ಕಡಿಮೆಯಿದ್ದರು. ಅಷ್ಟರಲ್ಲಿ ಒಬ್ಬರು ಹಿಸ್ಟರಿ ಪ್ರೊಫ಼ೆಸರ್ ಸಿಕ್ಕರು. ಆ ದೇಗುಲದ ಪುನರ್ನಿರ್ಮಾಣದ ಅವಾಂತರದಲ್ಲಿ ಅಲ್ಲಿ ಕಾಲು ಚಾಚಿ ತಲೆಯ ಕೆಳಗೆ ಕೈ ಆಸರೆಯಾಗಿಟ್ಟು ಮಲಗಿದ್ದ ಬುದ್ಧ ಕಾಣೆಯಾಗಿ ಹೋದ ಕಥೆ ಹೇಳಿದರು. ಈ ದೇಗುಲವನ್ನು ಕಟ್ಟಿದ್ದು 11ನೆಯ ಶತಮಾನದಲ್ಲಂತೆ. ಕಟ್ಟಿಸಿದವನು ಎರಡನೆಯ ಉದಯಾದಿತ್ಯ ವರ್ಮ ಅನ್ನುವ ರಾಜ. ಅದು ಕಟ್ಟಿದಾಗ ತಪ್ರೋಮ್ ಕೂಡಾ ಕಟ್ಟಿರಲಿಲ್ಲವಾಗಿ ಆಗ ಕಟ್ಟಿದ ದೇಗುಲಗಳಲ್ಲೇ ಇದು ಅಗಾಧ ದೇಗುಲ ಅಂತ ಹೆಸರಾಗಿತ್ತಂತೆ. ಆದರೆ ಅದರ ಅಗಾಧತೆಯೇ ಅದಕ್ಕೆ ಮುಳುವಾಯಿತು. ಅದರ ಭಾರಕ್ಕೆ ಅದೇ ಕುಸಿದುಹೋಗಿ ಇತ್ತೀಚೆಗಿನ ವರ್ಷಗಳಲ್ಲಿ ಅದನ್ನು ಪುನರ್ನಿರ್ಮಾಣ ಮಾಡುವಷ್ಟರಲ್ಲಿ ಅದು ತುಂಬ ಕುಸಿದುಹೋಗಿತ್ತಂತೆ. 70ರ ದಶಕದಲ್ಲಿ ಈ ದೇಗುಲದ ಪುನರ್ನಿರ್ಮಾಣ ಕೆಲಸ ಶುರುವಾಯಿತಂತೆ. ಕಲ್ಲುಗಳನ್ನೆಲ್ಲ ತೆಗೆದು ಇಡುವಷ್ಟರಲ್ಲಿ ಯುದ್ಧ ಶುರುವಾಗಿ ಹೋಯಿತಂತೆ. ಹಾಗಾಗಿ ಈ ಕೆಲಸವೂ ಅರ್ಧದಲ್ಲೇ ನಿಂತುಹೋಗಿ ಮತ್ತೆ ಯುದ್ಧ ಮುಗಿದು ಪುನರ್ನಿರ್ಮಾಣದ ಕೆಲಸ ಶುರುವಾಗುವಷ್ಟರಲ್ಲಿ ಆ ದೇಗುಲದ ನೀಲ ನಕ್ಷೆ ಕಳೆದುಹೋಗಿ ಯಾವ ಕಲ್ಲು ಎಲ್ಲಿಡಬೇಕು ಅಂತ ತಿಳಿಯದ ಸ್ಥಿತಿ! ಕೊನೆಗೆ ಅವರವರದ್ದೇ ಆದ ಪ್ಲ್ಯಾನ್ ಮತ್ತು ಊಹೆಗಳ ಪ್ರಕಾರ ಈ ದೇಗುಲಕ್ಕೆ ಅದು ಹೇಗೋ ಒಂದು ರೂಪ ಅಂತ ತರಿಸಿದ್ದಾಯ್ತಂತೆ. ಆದರೆ ಈ ಗಲಾಟೆಯಲ್ಲಿ ಮಲಗಿದ್ದ ಬುದ್ಧ ಎಲ್ಲೋ ಕಾಣೆಯಾಗಿಹೋಗಿದ್ದನಂತೆ. ಹೇಳುತ್ತಾ ಹೋದ ಅವರ ದನಿಯಲ್ಲಿ ವಿಷಾದವಿತ್ತು. ಪಶ್ಚಿಮ ದಿಕ್ಕಿಗೆ ಕರೆದುಕೊಂಡು ಹೋಗಿ ‘ಬುದ್ದ ಅಲ್ಲಿದ್ದ’ ಅಂತ ಕೈ ಚಾಚಿದ ಕಡೆ ಕಣ್ಣು ಹಾಯಿಸಿದರೆ ಬುದ್ಧ ಕಾಣೆಯಾಗಿದ್ದ! ಬರೀ ಓರೆ ಕೋರೆ ಪೇರಿಸಿದ್ದ ಕಲ್ಲುಗಳ ರಾಶಿಯಲ್ಲಿ ಬುದ್ಧನನ್ನು ಹುಡುಕುವ ವ್ಯರ್ಥ ಪ್ರಯತ್ನ ಮಾಡಿದೆ. ಅವನು ಸಿಗಲೇ ಇಲ್ಲ …

ಅವರಿಗೆ ವಂದಿಸಿ ಹೊರಡುವಷ್ಟರಲ್ಲಿ ನಮ್ಮ ಟೂರ್ ಆಪರೇಟರ್ ಮತ್ತು ಸಿದ್ದಪ್ಪಾರ re-union ಆಗಿತ್ತು! ಅಂತೂ ಅದೆಲ್ಲೋ ಒಬ್ಬರನ್ನೊಬ್ಬರು ಶಂಕರ್-ಗುರು ಸಿನೆಮಾದ ರೀತಿ ಹುಡುಕಿಕೊಂಡು, ಯಥಾಪ್ರಕಾರ ಒಬ್ಬರನ್ನೊಬ್ಬರು ಬಯ್ದುಕೊಳ್ಳುತ್ತಾ ಬರುತ್ತಿದ್ದ ಇಬ್ಬರನ್ನು ನೋಡಿ ನಮಗೆ ಮತ್ತೊಂದಿಷ್ಟು comic relief. ‘ಸಾರ್ ಇನ್ನು ನಮ್ಮ ಜೊತೆನೇ ಇರಿ, ನನ್ಗೆ ನಿಮ್ಮನ್ನು ಹುಡುಕೋ ತಾಳ್ಮೆ ಪೂರ್ತಿ ಮುಗ್ದು ಹೋಗಿದೆ. ಇನ್ನು ಅಂಗ್‌ಕೋರ್ ವಾಟ್ ಇನ್ನೂ ದೊಡ್ಡ ದೇವಸ್ಥಾನ. ಅಲ್ಲಿ ನೀವೇನಾದ್ರೂ ತಪ್ಪಿಸಿಕೊಂಡ್ರೆ ನಿಮ್ಮನ್ನು ಹುಡುಕಕ್ಕೆ ನಾನೇ ಇರ್ತೀನೋ ಇಲ್ವೋ…’ ಹೇಳುತ್ತಾ ಹೋದ ಟೂರ್ ಆಪರೇಟರ್‌ನ ಹಿಂದೆ ಸಿದ್ದಪ್ಪಾರು ತಲೆಯಾಡಿಸುತ್ತ ಮುಗ್ಧ ಬಾಲಕನ ಹಾಗೆ ಹೆಜ್ಜೆ ಹಾಕುತ್ತಿದ್ದುದನ್ನು ಕಂಡ ನಾವು ‘ಮುಂದಿನ ಸಿಗರೇಟಿನ ಚಡಪಡಿಕೆ ಶುರುವಾಗುವವರೆಗೆ ಸಿದ್ದಪ್ಪಾರು ತಪ್ಪಿಸಿಕೊಳ್ಳಲ್ಲ’ ಅಂತ ನಗೆಯಾಡುತ್ತ ನಡೆದೆವು.

ಅಂತೂ ಇಂತೂ ಕೊನೆಗೂ ಅಂಗ್‌ಕೋರ್ ವಾಟ್ ಒಳಗೆ ಕಾಲಿಡುವ ಮುಹೂರ್ತ ಕೂಡಿಬಂದಿತ್ತು …!

ಅಂಗ್ಕೋರ್ ವಾಟ್ ಮತ್ತು ಅದರ ಸುತ್ತಣ ಸುತ್ತಾಟ….

ಅಂಗ್‌ಕೋರ್ ವಾಟ್ ಎದುರು ಬಸ್ ನಿಂತಾಗ ನಾನು ಅದರ ವಿಸ್ತಾರವನ್ನೇ ಬಾಯಿ ಬಿಟ್ಟುಕೊಂಡು ನೋಡಿದೆ. ಎದುರಿನ ವಿಶಾಲವಾದ ಜಾಗದಲ್ಲಿ ತಿಂಡಿ-ತಿನಿಸುಗಳ ಅಂಗಡಿಗಳ ಸಾಲು ಸಾಲು. ಬ್ಯಾಗ್, ನೀರಿನ ಬಾಟಲ್, ಜ್ಯೂಸ್, ಬಳೆ. ಕೀ ಚೈನ್ ಮತ್ತಿತರ ವಸ್ತುಗಳ ಮಾರಾಟಕ್ಕೆ ನಿಂತ ಅಸಂಖ್ಯಾತ ಜನ ಜಂಗುಳಿ ಅಲ್ಲಿ. ಜೊತೆಗೆ ಭಿಕ್ಷೆ ಬೇಡುವ ಮಕ್ಕಳ ಗುಂಪು ಗುಂಪು. ಈ ಕಾಂಬೋಡಿಯಾ ಒಂದು ಥರದ identity ಯೇ ಇಲ್ಲದ ದೇಶ. ಅಲ್ಲಿನ currency ರಿಯಲ್ ಆದರೂ ಅಲ್ಲಿ ಓಡುವುದು ಡಾಲರ್ ಮತ್ತು ಥಾಯ್‌ಲ್ಯಾಂಡಿನ ಬಹ್ತ್. ನಮ್ಮ ದೇಶದ ಒಂದು ರೂಪಾಯಿ ಕೊಟ್ಟರೆ ಕಾಂಬೋಡಿಯಾದ 80 ರಿಯಲ್‌ಗಳನ್ನು ಕೊಡುತ್ತಾರೆ ! ಆದರೆ ಅಲ್ಲಿ ರಿಯಲ್‌ನಲ್ಲಿ ವ್ಯವಹಾರ ಮಾಡಬೇಕಾದ ಪ್ರಮೇಯವೇ ಇಲ್ಲ. ಡಾಲರ್ ಒಂದಿದ್ದರೆ ಸಾಕು. ಹಾಗಾಗಿ ಇಲ್ಲಿ ವ್ಯಾಪಾರಕ್ಕೆ ನಿಂತ ಸಮಸ್ತರೂ ಎಲ್ಲದರ ಬೆಲೆ ಹೇಳುವುದು ಡಾಲರ್‌ನಲ್ಲೇ. ಅದು ಹಾಳಾಗಿ ಹೋಗಲಿ, ಭಿಕ್ಷೆ ಬೇಡುವುದು ಕೂಡಾ ಡಾಲರ್‌ನಲ್ಲೇ! ಇಳಿದು ಅಂಗ್‌ಕೋರ್ ವಾಟನ್ನು ಎದೆಯಲ್ಲಿ, ಕಣ್ಣಲ್ಲಿ ತುಂಬಿಕೊಳ್ಳಲೂ ಸಮಯ ಕೊಡದೇ, ನಾವು ಬಂದಿರುವುದೇ ಅ ಬಳೆ, ಬ್ಯಾಗು ಕೊಂಡು, ಆ ಮಕ್ಕಳಿಗೆ ಭಿಕ್ಷೆ ನೀಡಲಿಕ್ಕೇನೋ ಅನ್ನುವಂತೆ ಪ್ರಾಣ ತಿಂದುಬಿಡುತ್ತಾರೆ. ಡಾಲರ್ ಲೆಕ್ಕಕ್ಕೆ ತೆಗೆದುಕೊಂಡರೆ ನಾವೇ ಒಂದೊಂದು ಕೆಟ್ಟ ಮುಖದ ಕಾಫಿಗೆ 2-3 ಡಾಲರ್ ಒಂಟಿಕಣ್ಣಲ್ಲಿ ಅಳುತ್ತಾ ಕೊಡಬೇಕಾದರೆ ಅಮ್ಮಾ ಒಂದ್ ಡಾಲರ್ ಭಿಕ್ಷೆ ಕೊಡೀಮ್ಮಾ ಅಂದರೆ ಮೈ ಉರಿಯುವುದಿಲ್ಲವಾ? ಹೋಗ್ರೋ ಅತ್ಲಾಗೆ ಅಂತ ಅವರನ್ನೆಲ್ಲ ಸರಿಸಿ ನನ್ನ ಅಂಗ್‌ಕೋರ್ ವಾಟ್ ಕಡೆ ಹೊರಟೆ.

ದೇಗುಲ ಎದುರಿಗೇ ಕಂಡ ಹಾಗೆ ಅನ್ನಿಸಿತ್ತು ಬಸ್ಸಿನಲ್ಲಿ ಹೋಗುವಾಗ. ಆದರೆ ಇಲ್ಲಿ ಇಳಿದ ಮೇಲೆ ಅದರ ವಿಸ್ತಾರ ಅರ್ಥವಾಗಿದ್ದು. ಹೆನ್ರಿ ಮೌಹಟ್ ಸ್ಥಳೀಯರನ್ನು ಕೇಳಿದಾಗ ಅದನ್ನು ಯಾರೋ ದೇವತೆಗಳೋ, ರಾಕ್ಷಸರೋ ನಿರ್ಮಿಸಿರಬೇಕು ಅಂತ ಯಾಕೆ ಅಂದರು ಅಂತ ನೀವು ಅದರ ಎದುರೇ ನಿಂತು ಪ್ರಶ್ನಿಸಿಕೊಳ್ಳಬೇಕು… ಕೂಡಲೇ ಉತ್ತರ ಸಿಕ್ಕುತ್ತದೆ. ಅಲ್ಲಿರುವ ಯಾವುದೂ ಮನುಷ್ಯ ಕಲ್ಪನೆಯ ನಿಲುಕಿಗೆ ಎಟಕುವಂಥದ್ದಲ್ಲವೇ ಅಲ್ಲ. ಅಗಾಧ ಅನ್ನುವುದರ ಅನ್ವರ್ಥ ಎದುರಿಗಿತ್ತು. ರೋಮಾಂಚನಗೊಂಡ ನನ್ನನ್ನು ಮೊದಲು ಸ್ವಾಗತಿಸಿದ್ದು 9 ತಲೆಯ ಸರ್ಪಗಳು. ಕಾಂಬೋಡಿಯಾದ ಚರಿತ್ರೆಯಲ್ಲೆಲ್ಲ ಸ್ವರ್ಗ ಲೋಕವನ್ನು ಕಾಯುವವನು ನಾಗ ಅನ್ನುವ ನಂಬಿಕೆ. ಅಂಗ್‌ಕೋರ್ ವಾಟ್ ದೇಗುಲವನ್ನು ಅವರು ಸ್ವರ್ಗವಂತ ಸೃಷ್ಟಿಸಿದ್ದಿರಬೇಕು. ನಮ್ಮಲ್ಲೆಲ್ಲ ಏಳು ಹೆಡೆಯ ಸರ್ಪದ್ದೇ ಕಾರುಬಾರಾದರೆ ಕಾಂಬೋಡಿಯಾದಲ್ಲಿ ಎಲ್ಲೆಲ್ಲೂ ಒಂಭತ್ತು ತಲೆಯ ಸರ್ಪವೇ. ಸರ್ಪಗಳ ಮಧ್ಯದ ಸೇತುವೆಗೆ ಹೋಗಿ ನಿಂತೆ. ಇಕ್ಕೆಲದಲ್ಲೂ ಹರಿವ ಮೋಟ್ ನದಿಯ ಮೇಲಿನ ತಣ್ಣನೆಯ ಗಾಳಿ ಮೈ ಸೋಕಿದಂತಾಯ್ತು. ಅಲ್ಲಿಂದ ಶುರುವಾಯ್ತು ಭೂಮಿಯ ತುತ್ತ ತುದಿಗೆ ಹೋಗುವಂತ ಅನಂತ ನಡಿಗೆ. ಆ ಸೇತುವೆಯ ಎರಡೂ ಬದಿಯಲ್ಲಿ palm juice ಅಂತ ಬೋರ್ಡ್ ನೇತು ಹಾಕಿ ನಿಂತ ವ್ಯಾಪಾರಿಗಳು ಮರದ ಬುಡ್ಡಿಯಂತದ್ದರಲ್ಲಿ ಏನೋ ಹೀರಲು ಕೊಡುತ್ತಿದ್ದರು. ನನ್ನ ಆರೋಗ್ಯದ ಹಿನ್ನೆಲೆ ಮನಸಲ್ಲಿ ಇದ್ದುದರಿಂದ ನಾನು ಅದನ್ನು ಕುಡಿಯುವ ಸಾಹಸಕ್ಕೆ ಕೈ ಹಾಕದೇ ಮುಂದೆ ನಡೆದೆ. ಎದುರಿಗೆ ಕಂಡಂತ ದೇವಸ್ಥಾನದ ಬಾಗಿಲು ಮುಟ್ಟಲು ನಡೆದೇ ನಡೆದೆ ಬರೀ ನೀರು ಹೀರುತ್ತಾ. ಕೈಯಲ್ಲಿ ನೀರು ಇಲ್ಲದೆ ಅಂಗ್‌ಕೋರ್ ವಾಟ್ ಒಳಗೆ ಕಾಲಿಡುವ ಸಾಹಸ ಮಾಡಲೇಬಾರದು. ಅಲ್ಲಿನ ಬಿಸಿಲಿಗೆ ಕ್ಷಣ ಕ್ಷಣಕ್ಕೂ ನಾಲಿಗೆ ಥಾರ್ ಮರುಭೂಮಿಯ ಹಾಗೆ ಒಣ ಒಣ.

ಇದನ್ನು ಎರಡನೆಯ ಸೂರ್ಯವರ್ಮ 12ನೆಯ ಶತಮಾನದಲ್ಲಿ ಕಟ್ಟಿಸಿದನಂತೆ. ಈ ಅಂಗ್‌ಕೋರ್ ದೇವಸ್ಥಾನವನ್ನು ಮೇರು ಪರ್ವತದ ಕಲ್ಪನೆಯಲ್ಲಿ ಕಟ್ಟಿದ್ದಂತೆ. ದೇವತೆಗಳ ವಾಸಸ್ಥಾನ ಅನ್ನುವ ರೀತಿಯ ಕಲ್ಪನೆ. ಇಲ್ಲಿನ ಮುಖ್ಯ ದೇವರು ವಿಷ್ಣು. ಆ ದೇವಸ್ಥಾನಕ್ಕೆ ಮೂರು ಹಂತಗಳಿವೆ. ಇಡೀ ದೇವಸ್ತಾನದ ವಿಸ್ತೀರ್ಣ ಸುಮಾರು ಒಂದು ಕಿಲೋಮೀಟರ್‌ನಷ್ಟು ಉದ್ದ ಮತ್ತು ಮುಕ್ಕಾಲು ಕಿಲೋಮೀಟರ್‌ನಷ್ಟು ಅಗಲ! ಮೊದಲಿನ ಬಾಗಿಲಿನ ಹತ್ತಿರಕ್ಕೆ ಹೋಗಬೇಕಾದರೇನೇ ಸುಮಾರು 300 ಮೀಟರ್‌ನಷ್ಟು ನಡೆಯಬೇಕು.. ಅಥವಾ ಅದಕ್ಕಿಂತಲೂ ಹೆಚ್ಚೇ ಇತ್ತೋ ನನಗೆ ನೆನಪಾಗುತ್ತಿಲ್ಲ. ಸಾಮಾನ್ಯವಾಗಿ ದೇವಸ್ಥಾನಗಳ ಬಾಗಿಲು ಪೂರ್ವಕ್ಕೆ ಇದ್ದರೆ ಅಂಗ್‌ಕೋರ್ ವಾಟ್‌ನ ಬಾಗಿಲು ಪಶ್ಚಿಮಕ್ಕಿದೆ. ಅಂತೂ ಜನಸಮುದ್ರದ ಮಧ್ಯೆ ನಡೆಯುತ್ತಲೇ ಇದ್ದೆ ನೀರಿನಲ್ಲಿ ಕಾಣುವ ಅಂಗ್‌ಕೋರ್ ದೇಗುಲದ ಪ್ರತಿಬಿಂಬವನ್ನೇ ನೋಡುತ್ತಾ. ಕೊನೆಗೊಂದು ಸಲ ಅಂತೂ ಬಾಗಿಲು ಎದುರಾದಾಗ ಹರ್ಷದ ನಿಟ್ಟುಸಿರು ನನ್ನಿಂದ ಹೊರಬಿತ್ತು. ದೇಗುಲದ ಎರಡೂ ಕಡೆ ಉದ್ದನೆಯ ಕಂಬಗಳ ಗ್ಯಾಲರಿ ಕಂಡಿತು. ಆ ಆವರಣದಲ್ಲಿ ಅಲ್ಲಲ್ಲಿ ತಲೆಯಿಲ್ಲದ ಬುದ್ದನ ವಿಗ್ರಹ, ಎಂಟು ಕೈಗಳ ಬುದ್ಧ, ತಲೆ ಕತ್ತರಿಸಿ ಹೋದ ಬುದ್ದ ಎಲ್ಲರೂ ಕಂಡರು. ಎಲ್ಲ ಬುದ್ಧರಿಗೂ ಕೇಸರೀಕರಣ ನಡೆದಿತ್ತು. ಫಳ ಫಳ ಹೊಳೆಯುವ ಕೇಸರಿ ಬಟ್ಟೆ ಸುತ್ತಿಟ್ಟಿದ್ದರು. ಹಿಂದು ಧರ್ಮದಲ್ಲಿ ಊನಗೊಂಡ ವಿಗ್ರಹಗಳಿಗೆ ಪೂಜೆ ಮಾಡುವುದಿಲ್ಲ. ಆದರೆ ಇಲ್ಲಂತೂ ಕಂಡ ಕಂಡ ವಿರೂಪಗೊಂಡ ಎಲ್ಲ ವಿಗ್ರಹಗಳಿಗೂ ಪೂಜೆಯೋ ಪೂಜೆ! ಸುಮ್ಮನೇ ಪಿಳಿ ಪಿಳಿ ಸಾಗುತ್ತ ಬರುವ ಟೂರಿಸ್ಟ್‌ಗಳ ಕೈಲಿ ಹಚ್ಚಿದ್ದ ಎರಡು ಗಂಧದ ಕಡ್ಡಿ ತುರುಕಲು ಬರುತ್ತಾರೆ. ಅದನ್ನು ಕೈಗೆ ತೆಗೆದುಕೊಂಡಿರೋ ಅವನಿಗೆ 5 ಡಾಲರ್ ಲಾಭ! ನಮ್ಮೂರಲ್ಲಿ ಪುಡಿಗಾಸನ್ನು ಮಂಗಳಾರತಿ ತಟ್ಟೆಗೆ ಹಾಕುವುದು ಕಂಡಿದ್ದವಳಿಗೆ ಡಾಲರ್ ಲೆಕ್ಕದಲ್ಲಿ ದಕ್ಷಿಣೆ ಯಾಕೆ ಕೊಟ್ಟೇನು ಹೇಳಿ? ಇಲ್ಲಿ ನಮ್ಮೂರಲ್ಲೇ ನಮ್ಮ ದೇವರುಗಳಿಗೇ ಯಾವತ್ತೂ ಗಂಧದ ಕಡ್ಡಿ ಹಚ್ಚದ ನಾನು ಇನ್ನು ಅಲ್ಲಿ ಇಂಥ ದುಬಾರಿ ಪೂಜೆ ಮಾಡುವುದು ಸಾಧ್ಯವಾ?! ಹಾಗಾಗಿ ಅವರ ಗಂಧದ ಕಡ್ಡಿಗಳು ಅವರಲ್ಲೇ ಉಳಿದವು ಮತ್ತು ನನ್ನ ಡಾಲರ್‌ಗಳು ನನ್ನಲ್ಲೇ. ಕೆಲವು ತಲೆ ಮುರಿದು ಬಿದ್ದ ಬುದ್ಧನ ವಿಗ್ರಹ ಕಂಡಾಗ ನನ್ನ ಅಪ್ಪ ‘ಇದು ಯಾಕೆ ಹೀಗಾಗಿದೆ’ ಅಂತ ಕುತೂಹಲದಿಂದ ಪ್ರಶ್ನೆ ಹಾಕಿದರು. ಆ ನಮ್ಮ ಗೈಡ್ ಕೂಲಾಗಿ ‘ಹಿಂದೂಗಳು ಎಲ್ಲವನ್ನೂ ನಾಶಮಾಡಿದವರು. ಮೊದಲಿಗೆ ವಿಷ್ಣುವಿನ ದೇವಸ್ಥಾನವಿದ್ದುದು ಆ ನಂತರ ಏಳನೆಯ ಜಯವರ್ಮನ ಕಾಲದಲ್ಲಿ ಬುದ್ಧನ ದೇಗುಲವಾಯಿತಂತೆ. ಆ ನಂತರ ರಾಜ್ಯವಾಳಿದ ಎಂಟನೆಯ ಜಯವರ್ಮ ಮತ್ತೆ ಹಿಂದು ಧರ್ಮದ ಅನುಯಾಯಿಯಾದನಂತೆ. ಆಗ ಅವನು ಅಲ್ಲಿದ್ದ ಬುದ್ಧ ವಿಗ್ರಹಗಳನ್ನೆಲ್ಲ ಹಾಳುಗೆಡವಿದ’ ಅಂತ ಹೇಳಿದಾಗ ನಮ್ಮ ದೇಶದಲ್ಲಿ ಎಲ್ಲ ಸಣ್ಣ ದೇವಸ್ಥಾನದಲ್ಲೂ ಕಾಲದ ಹೊಡೆತಕ್ಕೇ ಊನಗೊಂಡ ವಿಗ್ರಹಗಳಿದ್ದರೂ ಮುಸ್ಲಿಮರ ಧಾಳಿಯಲ್ಲಿ ಅದೆಲ್ಲ ನಾಶವಾಯಿತು ಅಂತ ಕೇಳಿ ಕೇಳಿ ಅಭ್ಯಾಸವಾದ ಕಿವಿಗಳಿಗೆ ಕಾಂಬೋಡಿಯಾದ ಗೈಡ್ ಹಿಂದುಗಳನ್ನು ದೂರುತ್ತಿದ್ದುದು ಕಂಡು ನಗುವೋ ನಗು. ಸಧ್ಯ ಇದು ನಮ್ಮ ದೇಶದಲ್ಲಿಲ್ಲ! ಇದ್ದಿದ್ದರೆ ಇಲ್ಲಿ ಅದೇ ವಿಷಯಕ್ಕೇನೇ ಮಾರಾಮಾರಿ ಜಗಳಗಳು, ಕದನಗಳು ಆಗಿ ಹೋಗಿರುತ್ತಿದ್ದವು ಅಂತ ನಮ್ಮಲ್ಲೇ ನಕ್ಕೆವು.

ಆ ಆವರಣವನ್ನು ನೋಡಿ ಮುಗಿಸಿ ಎದುರಾದ ಬಾಗಿಲಿನಿಂದ ಆಚೆ ಬಂದವಳು ದಂಗುಬಡೆದು ನಿಂತೆ. ಹೊರಗಿನಿಂದ ಕಂಡರೆ ಒಂದೇ ಆವರಣದಲ್ಲಿರುವಂತೆ ಕಾಣುತ್ತಿದ್ದ ಅಂಗ್‌ಕೋರ್ ವಾಟ್‌ನ ಮುಂದಿನ ಹಂತದ ದೇಗುಲಕ್ಕೆ ಮತ್ತೆ ಅಗಾಧ ದೂರ. ಇಲ್ಲಿನ ದೂರದ ಅಳತೆಯನ್ನು ಹೇಳುವುದು ಮತ್ತು ವರ್ಣಿಸುವುದು ತುಂಬ ಕಷ್ಟದ ಕೆಲಸ. ಮತ್ತೆ ಮುಂದಿನ ಹಂತಕ್ಕೆ ಹೋಗಬೇಕಾದರೆ ಸುಡುಬಿಸಿಲಿನಲ್ಲಿ ನೋಯುತ್ತಿರುವ ಪಾದಕ್ಕೆ ತುಂಬ ನೈಸ್ ಹಚ್ಚಿದರಷ್ಟೇ ಸಾಧ್ಯ! ನಡೆಯುವಾಗ ಎರಡೂ ಕಡೆ ಇದ್ದ ಕಟ್ಟಡಗಳು ಸಾಮಾನ್ಯ ಲೆಕ್ಕದಲ್ಲಿ ತೆಗೆದುಕೊಂಡರೆ ಸಾಕಷ್ಟು ದೊಡ್ಡದೇ. ಆದರೆ ಅಂಗ್ ಕೋರ್ ವಾಟ್ ಮುಖ್ಯ ದೇಗುಲದ ಎದುರು ಇದು ಪುಟ್ಟದಾಗಿ ಕಂಡಿತು. ದೇಗುಲದ ಎದುರು ಒಂದು ಪುಟ್ಟ ಕೊಳ… ಅದರ ತುಂಬ ತಾವರೆ ಹೂಗಳು. ಆ ನೀರಿನಲ್ಲಿ ದೇಗುಲದ ಪ್ರತಿಫಲನ ತುಂಬ ಚೆಂದಕ್ಕಿತ್ತು. ಹಾಗೇ ತುಂಬ ಹೊತ್ತು ನಡೆದ ಮೇಲೆ ಮುಖ್ಯ ಬಾಗಿಲು ಎದುರಾಯ್ತು. ಅದಕ್ಕೆ ಸುತ್ತ scaffolding ಮತ್ತು ಹಸಿರು ಶೀಟ್ ಹೊದಿಸಲಾಗಿತ್ತು. ದೇಗುಲದ ಪುನರ್ನಿರ್ಮಾಣ ಕಾರ್ಯ ಮುಗಿದೇ ಇಲ್ಲ. (ಎಂದಾದರೂ ಮುಗಿಯುತ್ತದಾ…?) ನಾನು ಆ ರಿಪೇರಿ ಕೆಲಸವನ್ನು ನೋಡಿಯೂ ಮೂರ್ಖಳ ಹಾಗೆ ಆ ಉರಿಬಿಸಿಲಿನಲ್ಲಿ ಅಷ್ಟಷ್ಟೆತ್ತರದ ಮೆಟ್ಟಿಲನ್ನು ಹತ್ತಿ ದೇಗುಲದ ಬಾಗಿಲ ಹತ್ತಿರ ನಿಂತ ಮೇಲೆ ಆ ದ್ವಾರ ಮುಚ್ಚಿದೆಯೆಂತಲೂ, ಪಕ್ಕದಲ್ಲಿ ಕಾಣುವ ಮತ್ತೊಂದು ದ್ವಾರದ ಮೂಲಕ ಒಳಗೆ ಹೋಗಬೇಕೆಂಬ ಬೋರ್ಡು ಕಂಡಾಗ ನಿಜಕ್ಕೂ ಸತ್ತುಹೋಗುವಷ್ಟು ಸುಸ್ತಾಗಿ ಹೋಯ್ತು. ಹಿಡಿ ಶಾಪ ಹಾಕುತ್ತಾ ಮತ್ತೆ ಆ ಮೆಟ್ಟಿಲುಗಳನ್ನು ಇಳಿದು ಬಂದು ಪಕ್ಕದ ಬಾಗಿಲಿನ ಕಡೆ ಹೊರಡುವಾಗ ಕಂಡಿತು ಮುಖ್ಯ ಬಾಗಿಲು ಮುಚ್ಚಿದೆ, ಪಕ್ಕಕ್ಕೆ ಹೋಗಿ ಅನ್ನುವ ಆ ಬೋರ್ಡ್! ಪಾಪ ಅವರು ಎಲ್ಲ instructions ಕೊಟ್ಟಿದ್ದರೂ ನೋಡದೇ ಹೋಗಿ ಮತ್ತೆ ಅವರನ್ನೇ ಬಯ್ದೆನಲ್ಲಾ ಅಂತ ಪಶ್ಚಾತ್ತಾಪ ಪಟ್ಟೆ. ಈ ದೇವಸ್ಥಾನದ ಅಗಲವೂ ಕಿಲೋಮೀಟರ್‌ನಷ್ಟು! ಎರಡೂ ಕಡೆಯ ಗ್ಯಾಲರಿಗಳಲ್ಲೂ ರಾಮಾಯಣ ಮತ್ತು ಮಹಾಭಾರತದ ಕೆತ್ತನೆಗಳ ಸಾಲು ಸಾಲು. ಸಮುದ್ರ ಮಂಥನದ ಕೆತ್ತನೆಯಂತೂ ಅದೆಷ್ಟು ಉದ್ದ! ಎಲ್ಲೆಲ್ಲೂ ನಗುಮೊಗದ ಅಪ್ಸರೆಯರ ಕೆತ್ತನೆ. ತಲೆಯ ಮೇಲೆ ಮತ್ತು ಸುತ್ತ ಮುತ್ತ ಎಂತೆಂತದ್ದೋ ಹೂಗಳು ಮತ್ತು ಬಳ್ಳಿಗಳ ಕೆತ್ತನೆ. ಇಡೀ ಕಾಂಬೋಡಿಯಾದಲ್ಲಿ ಎಲ್ಲ ದೇಗುಲಗಳಲ್ಲೂ ಬದಲೇ ಆಗದ ಒಂದು ಅಂಶ ಅಂದರೆ ಅಲ್ಲಿನ ಕಿಟಕಿಗಳು. ಎಲ್ಲ ಕಿಟಕಿಗಳಿಗೂ ಕಲ್ಲಿನ ಕಂಬಗಳು ಒಂದೇ ಡಿಸೈನಿನವು. ಸುಮಾರು ಕಂಬಗಳು ಬಿದ್ದುಹೋಗಿದ್ದವು. (ನಾವು ಹಾಗೆಂದುಕೊಂಡೆವು. ಆ ಗೈಡನ್ನು ಕೇಳಿದ್ದರೆ ಹಿಂದೂಗಳು ಹಾಳು ಮಾಡಿದರು ಅನ್ನುತ್ತಿದ್ದನೋ ಏನೋ!!) ಅಲ್ಲಿನ ಪ್ಯಾಸೇಜ್ ಸುತ್ತ ನಡೆದುಹೋಗಬೇಕಾದರೆ ಮಧ್ಯೆ ಮಧ್ಯೆ ಎಷ್ಟು ಮೆಟ್ಟಿಲುಗಳಿದ್ದವು ಅಂತ ಎಣಿಸಲೇ ಅಸಾಧ್ಯ. ಎರಡೆರಡು, ಮೂರು ಮೂರು ಮೆಟ್ಟಿಲುಗಳೇ ಆದರೂ ಸಿಕ್ಕಾಪಟ್ಟೆ ಎತ್ತರದವು. ಹಾಗಾಗಿ ಆ ಮೆಟ್ಟಿಲುಗಳ ಮೇಲೆ ಮರದ ಹಲಗೆಗಳ ಮೆಟ್ಟಿಲುಗಳನ್ನು ನಿರ್ಮಿಸಿದ್ದಾರೆ. ಅದಿರಲಿಲ್ಲವಾದರೆ ನಿಜಕ್ಕೂ ಆ ಎತ್ತರದ ಮೆಟ್ಟಿಲುಗಳನ್ನು ಹತ್ತಿ, ಇಳಿದು ಕಾಲು ಮುರಿದು ಬೀಳುವುದೇ ಸರಿ. ಆ ಚೌಕ ಪೂರ್ತಿ ಮುಗಿಸಿ ಮುಂದಿನ ಹಂತಕ್ಕೆ ಹೆಜ್ಜೆ ಹಾಕಿದೆ.

ಅಲ್ಲಿಂದ ಮುಂದೆ ಸಿಗುವ ದೇವಸ್ಥಾನದ ಎತ್ತರದ ಅಟ್ಟಣಿಗೆಯ ಆವರಣಕ್ಕೆ ಬಂದೆ. ಅದೆಷ್ಟೊಂದು ದೊಡ್ಡ ಜಾಗ ಮಾರಾಯರೇ! ಅದರ ತುದಿ ನೋಡಬೇಕಾದರೆ ತಲೆಯನ್ನು ಪೂರ್ತಿ ಎತ್ತಬೇಕು ಆಕಾಶದ ನೋಡುತ್ತೀವಲ್ಲ ಆ ಥರ. ಅಬ್ಬಾಆಆಆಆಆಅ! ಅದೆಷ್ಟು ಎತ್ತರ!! ಕತ್ತು ಕೆಳಗಿಳಿಸಿ ನೋಡಿದರೆ ಎಷ್ಟು ವಿಶಾಲವಾದ ಪ್ರಾಂಗಣ. ಎಲ್ಲ ಎಲ್ಲವೂ ರಾಕ್ಷಸಾಕಾರದವು… ಡೈನೊಸಾರ್‌ಗಳಂತೆ. ಅಲ್ಲಿ ದೇಗುಲ ಪುನರ್ನಿರ್ಮಾಣವಾದ ನಂತರವೂ ಎಲ್ಲೂ ಫಿಟ್ ಆಗದೇ ಉಳಿದ ಕಲ್ಲುಗಳ ರಾಶಿ ರಾಶಿ. ಅದನ್ನು ನೋಡಿ ನನಗೆ ಪೂರ್ಣಚಂದ್ರ ತೇಜಸ್ವಿ ಮತ್ತು ಅವರ ತಮ್ಮನ ಸ್ಕೂಟರ್ ರಿಪೇರಿ ನೆನಪಾಯ್ತು. ಇಬ್ಬರೂ ಸೇರಿ ಬಹಳ ಗಮನವಿಟ್ಟು ಎಲ್ಲ ಪಾರ್ಟ್‌ಗಳನ್ನು ಬಿಚ್ಚಿ ಮತ್ತೆ ಯಾವುದನ್ನು ಎಲ್ಲಿ ಹಾಕಬೇಕು ಅಂತ ನೋಡಿಕೊಂಡಿದ್ದರೂ ಪ್ರತೀಸಲವೂ ಹಿಡಿಯಷ್ಟು ನಟ್ಟು-ಬೋಲ್ಟುಗಳು ಎಲ್ಲಿ ಹಾಕಬೇಕು ಅಂತ ತಿಳಿಯದೇ ಹಾಗೇ ಉಳಿಯುತ್ತಿದ್ದವಂತೆ… ಅಂಗ್‌ಕೋರ್ ವಾಟ್‌‌ನ ಕಥೆಯೂ ಅದೇ ಇರಬೇಕು ಅಂದುಕೊಂಡೆ !!

ಆ ಆವರಣವನ್ನೆಲ್ಲಾ ಸುತ್ತು ಹಾಕಲೇ ಸುಮಾರು ಸಮಯ ಬೇಕು. ನಡೆದಾಡುವ ಹಾದಿಯ ಪಕ್ಕದಲ್ಲೆಲ್ಲಾ ಜೋಡಿಸಿಟ್ಟ ಭಗ್ನಗೊಂಡ ಮೂರ್ತಿಗಳ ಸಾಲು ಸಾಲು. ಅವುಗಳನ್ನೆಲ್ಲಾ ನೋಡುತ್ತಾ ಸಾಗಿದರೆ ಅಲ್ಲಲ್ಲೇ ಇದ್ದ ಭಗ್ನಗೊಂಡ, ಮತ್ತೂ ಕೆಲವು ತಕ್ಕಮಟ್ಟಿಗೆ ನೆಟ್ಟಗಿರುವ ಬುದ್ದನ ಮೂರ್ತಿಗಳಿಗೆ ಎಂತೆಂತದ್ದೋ ಪೂಜೆಗಳ ಸಂಭ್ರಮ. ಯಾವಾತನೋ ಒಬ್ಬ ತಲೆಯ ಮೇಲೆ ತಾಳೆಗರಿಯಂಥದ್ದನ್ನೇನೋ ಇಟ್ಟುಕೊಂಡು ಕೂತಿದ್ದ. ಅವನೆದುರು ಮತ್ತೊಬ್ಬ ಅದೇನೋ ಮಂತ್ರದಂತದ್ದು ಹೇಳುತ್ತಾ ಕೂತಿದ್ದ. ಮತ್ತೊಂದು ಪಕ್ಕದಲ್ಲಿ ನೋಡಿದರೆ ನಮ್ಮ ಮಲೆನಾಡಿನ ತೊಟ್ಟಿ ಮನೆಗಳಂಥ ದೊಡ್ಡ ತೊಟ್ಟಿಗಳು…

ಸುಮಾರು ಜಾಗಗಳಲ್ಲಿ ರಿಪೇರಿ ಕೆಲಸ ಇನ್ನೂ ಸಾಗುತ್ತಲೇ ಇರುವುದರಿಂದ ಅಲ್ಲಿಗೆಲ್ಲ barricade ಮಾಡಿಬಿಟ್ಟಿದ್ದಾರೆ. ಹಾಗಾಗಿ ಅಲ್ಲಿಗೆಲ್ಲ ಕಾಲಿಡುವಂತಿಲ್ಲ. ಆ ಮೇರುಪರ್ವತದ ಕೊನೆಯ ಹಂತಕ್ಕೆ ಹತ್ತಲು ನಾಲ್ಕೂ ದಿಕ್ಕಿನಲ್ಲಿ ಮೆಟ್ಟಿಲುಗಳಿದ್ದವು. ಅದರಲ್ಲಿ ಮೂರು ಭಾಗದ ಮೆಟ್ಟಿಲುಗಳು ರಿಪೇರಿ ಕೆಲಸಕ್ಕೆಂದು ಮುಚ್ಚಲ್ಪಟ್ಟಿತ್ತು. ಪೂರ್ವ ದಿಕ್ಕಿನ ಮೆಟ್ಟಿಲಿನಿಂದ ಮಾತ್ರ ನಾವು ಹತ್ತಬಹುದಿತ್ತು. ಮೆಟ್ಟಿಲಿನ ಬುಡಕ್ಕೆ ಹೋಗಿ ನಿಂತ ಕೂಡಲೇ ನೀಳ ಉಸಿರೆಳೆದುಕೊಂಡೆ… ಆಕಾಶಕ್ಕೆ ನೇರಕ್ಕೆ ಏಣಿ ಹಾಕಿದಾರೇನೋ ಅನ್ನುವಂತ ಮೆಟ್ಟಿಲುಗಳು ಅವು! ಹೆಚ್ಚು ಕಡಿಮೆ vertical ಅನ್ನಬಹುದಾದಂಥದ್ದು. ಈ ಕಾಂಬೋಡಿಯಾದ ಮುಂಚಿನ ನಿವಾಸಿಗಳು ಅದ್ಯಾವ ಆಕಾರ, ಎತ್ತರ, ಗಾತ್ರಕ್ಕಿದ್ದರೋ ನನಗೆ ಗೊತ್ತಿಲ್ಲ – ಅಲ್ಲಿನ ಮೆಟ್ಟಿಲುಗಳನ್ನು ಮಾತ್ರ ನೋಡಿದರೆ ಅವರು ಸಾಧಾರಣ ಆಕಾರದವರು ಅನ್ನುವುದು ಅಸಾಧ್ಯ. ಮೆಟ್ಟಿಲುಗಳ ನಡುವಿನ ಅಂತರ ಒಂದೊಂದೂವರೆ ಅಡಿಗಿಂತ ಹೆಚ್ಚು ಮತ್ತು ಪಾದ ಊರಲು ಬೇಕಿರುವ ಮೆಟ್ಟಿಲುಗಳ ಅಗಲ ತುಂಬ ಚಿಕ್ಕದು .. ಒಂದೆಂಟು ಇಂಚು ಇದ್ದಿರಬಹುದು ಅಷ್ಟೇ. ನನ್ನ ಪಾದವನ್ನಂತೂ ನೇರವಾಗಿ ಇಟ್ಟು ಯಾವ ಮೆಟ್ಟಿಲನ್ನೂ ನಾನು ಇಡೀ ಕಾಂಬೋಡಿಯಾದ ಯಾವ ದೇವಸ್ಥಾನದಲ್ಲೂ ಹತ್ತಲೇ ಇಲ್ಲ. ಎಲ್ಲೇ ಹೋದರೂ ಪಾದಗಳು ಅಡ್ಡಡ್ಡಲಾಗಿ ಇದ್ದರಷ್ಟೇ ಹತ್ತಲು ಸಾಧ್ಯ. ಇಲ್ಲಿ ಕೂಡಾ ಹಾಗೆಯೇ ಇದ್ದವು ಆ ಮೆಟ್ಟಿಲುಗಳು. ಆದರೆ ಅದರ ಪಕ್ಕದಲ್ಲೇ ಮರದ ಮೆಟ್ಟಿಲುಗಳನ್ನು ಕೃತಕವಾಗಿ ನಿರ್ಮಿಸಿರುವುದರಿಂದ ಆರಾಮವಾಗಿ ಹತ್ತಬಹುದು.

ಆ ಮೆಟ್ಟಿಲುಗಳನ್ನು ಹತ್ತಿದರೆ ನೇರ ಸ್ವರ್ಗವನ್ನೇ ತಲುಪುತ್ತೇವೇನೋ ಅನ್ನುವ ಭಾವನೆ ಬಂದಿತು. ಪಾಸ್‌ಪೋರ್ಟ್, ಡಾಲರ್‌ಗಳು, ಪಾಸ್‌ಗಳು ಎಲ್ಲ ತುಂಬಿದ್ದ ಬ್ಯಾಗ್‌, ಹೆಗಲ ಮೇಲೊಂದು ಬೆವರು ಒರೆಸಿಕೊಳ್ಳಲು ಟವಲ್ (ಕಾಂಬೋಡಿಯಾದಲ್ಲಿ ಬೆವರು ಒರೆಸಿಕೊಳ್ಳಲು ಕರ್ಚೀಫ್ ಸಾಕಾಗುವುದಿಲ್ಲ!), ಜೊತೆಗೆ ಕೈಲೊಂದು ನೀರಿನ ಬಾಟಲ್ ಹಿಡಿದು ಪರ್ವತಾರೋಹಣ ಮಾಡುತ್ತಿದ್ದೀನೇನೋ ಅನ್ನುವ ಹಾಗೆ ಹತ್ತಲು ಶುರು ಮಾಡಿದೆ. ಒಂದೊಂದೇ ಮೆಟ್ಟಿಲು ಏರಿದಾಗಲೂ ಆ ಎತ್ತರಕ್ಕೆ ಹೊಟ್ಟೆ ತೊಳೆಸಿದ ಅನುಭವ. ದೇಹ ಮುಂದಕ್ಕೆ ಬಾಗದೇ ನೇರವಾಗೇ ಇರುವುದರಿಂದ ಹಿಂದಕ್ಕೆ ಬಿದ್ದುಬಿಡುತ್ತೀನೇನೋ ಅನ್ನುವ ರೀತಿ ಆಗುತ್ತಿತ್ತು. ಕೊನೆಕೊನೆಗೆ ಮಂಗನ ಹಾಗೆ ಎರಡು ಕಾಲಿನ ಜೊತೆಗೆ ಎರಡು ಕೈಗಳನ್ನೂ ಆಧಾರ ಮಾಡಿಕೊಂಡು ಹತ್ತಲು ಶುರು ಮಾಡಿದ ಮೇಲೆ ಸ್ವಲ್ಪ ವಾಸಿ ಅನ್ನಿಸಿತು. ಅಂತೂ ಕೊನೆಗೊಮ್ಮೆ ಮೇಲೇರಿ ಸ್ವಲ್ಪ ಹೊತ್ತು ಅಲ್ಲೇ ಕೂತುಬಿಟ್ಟೆ. ಎದ್ದು ಒಳಗೆ ಹೋಗಲೂ ಆಗದಷ್ಟು ತಲೆ ಧಿಮ್ ಅನ್ನುತ್ತಿತ್ತು. ಬಾಟಲ್‌ಗಟ್ಟಳೆ ನೀರು ಬಸಿದುಕೊಂಡ ಮೇಲೆ ಎದ್ದು ಒಳಹೋಗುವಷ್ಟು ಶಕ್ತಿ ಬಂತು.

ಹಿಂದಿನ ಕಾಲದ ಸಿನೆಮಾಗಳಲ್ಲಿ ರಾಣಿಯರು ಕೂತು ಕಲಾಪವನ್ನೆಲ್ಲ ನೋಡುವ ಉಪ್ಪರಿಗೆಯಿರುತ್ತಿತ್ತಲ್ಲ, ಆ ಥರದ ಉಪ್ಪರಿಗೆ ನಾಲ್ಕೂ ದಿಕ್ಕಿನಲ್ಲೂ. ಆ ಉಪ್ಪರಿಗೆಯನ್ನು ಒಂದು ಸುತ್ತು ಹಾಕಲು ಮತ್ತೆ ಅಲ್ಲಲ್ಲಿ ಮರದ ಮೂರು ಮೂರು ಮೆಟ್ಟಿಲುಗಳು. ಹತ್ತುವುದು-ಇಳಿಯುವುದು-ಹತ್ತುವುದು-ಇಳಿಯುವುದು… ಆ ವಿಶಾಲ ಸ್ಥಳದ ಒಂದು ಸುತ್ತು ಬರಬೇಕಾದರೆ ಕುರಿಕೋಣ ಬಿದ್ದುಹೋಯಿತು. ಅಲ್ಲಲ್ಲಿ ಬಾಲ್ಕನಿಯ ಥರ ಇದ್ದ ಜಾಗಗಳಲ್ಲಿ ನಿಂತು ಬಗ್ಗಿ ನೋಡಿದರೆ ಕೆಳಗಿನ ಹಂತದಲ್ಲಿದ್ದ ಮನುಷ್ಯರು ಬೊಂಬೆಗಳ ಹಾಗೆ ಕಾಣುತ್ತಿದ್ದರು! ಅಲ್ಲೂ ಗೋಡೆಗಳ ಮೇಲೆಲ್ಲ ದೇವತೆಗಳ, ಅಪ್ಸರೆಯರ, ಹೂ-ಬಳ್ಳಿಗಳ ರಾಶಿ ರಾಶಿ ಕೆತ್ತನೆಗಳು. ಆ ಎತ್ತರವನ್ನು ಬಿಟ್ಟರೆ ಆ ಜಾಗದಲ್ಲಿ exclusive ಅನ್ನುವಂಥದ್ದು ನನಗೆ ಏನೂ ಕಾಣಿಸಲಿಲ್ಲ. ಆ ಜಾಗವನ್ನೆಲ್ಲ ಸುತ್ತು ಹಾಕಿ ಕೆಳಗಿಳಿಯುವ ಘಳಿಗೆ ಬಂತು. ನಾನಂತೂ ಆ ಎತ್ತರ ಕಂಡು ಬೆಚ್ಚಿಬಿದ್ದೆ. ಮೆಟ್ಟಿಲಿನ ಮೇಲೆ ಹತ್ತು ನಿಮಿಷ ಕೂತರೂ ಇಳಿಯಲು ಆಗುತ್ತಲೇ ಇಲ್ಲ. ಕೊನೆಗೆ ನಿಂತು ಇಳಿಯುವುದು ಅಸಾಧ್ಯ ಅನ್ನಿಸಿ ಕೂತು ಇಳಿಯಲು ಶುರು ಮಾಡಿದೆ. ಇಳಿಯುವಷ್ಟೂ ಹೊತ್ತು ನನ್ನನ್ನು ನಾನೇ ಶಪಿಸಿಕೊಂಡೆ… ಇದೆಂತಾ ಪುಕ್ಕಲಿ ನೀನು ಭಾರತಿ… ಒಂದಿಷ್ಟು ಮೆಟ್ಟಿಲಿಳಿಯುವ ಯೋಗ್ಯತೆ ಇಲ್ಲ ನಿನಗೆ ಅಂತ. ಅಂತೂ ಕೊನೆಗೊಂದು ಸಲ ನೆಲ ಮುಟ್ಟಿದಾಗ ಹಿಮಾಲಯ ಪರ್ವತ ಹತ್ತಿ ಇಳಿದೆನೇನೋ ಅನ್ನುವಷ್ಟು ಹರ್ಷವಾಗಿ ಹೋಯ್ತು. ಆಮೇಲೆ ಸುಧಾರಿಸಿಕೊಳ್ಳಲು ಅಲ್ಲಿದ್ದ ಕಲ್ಲುಗಳ ಮೇಲೆ ಕೂತೆ. ಎದುರಿಗೆ ಪುರಾಣ ಪಾತ್ರಧಾರಿಗಳ ಹಾಗೆ ವೇಷಭೂಷಣ ಧರಿಸಿದ ಮಕ್ಕಳ ಸಾಲು. ಮೊದಲಿಗೆ ನಾನು ಅದ್ಯಾವುದೋ ಕಲ್ಚರಲ್ ಶೋ ಇರಬೇಕು ಅಂದುಕೊಂಡೆ. ಆಮೇಲೆ ಗೊತ್ತಾಯಿತು ಅದೂ ಒಂಥರಾ ಭಿಕ್ಷೆ ಬೇಡುವ ವಿಧಾನ ಎಂದು. ನಾನು ಡಾಲರ್ ಇದ್ದ ಬ್ಯಾಗನ್ನು ಇನ್ನಿಷ್ಟು ಭದ್ರಪಡಿಸಿದೆ ಒಳಗಿನ ಡಾಲರ್ ಹೊರಗೆ ಬಾರದಂತೆ. ಆ ನಂತರ ಮೆಟ್ಟಿಲಿಳಿಯುತ್ತಿದ್ದ ಜನರನ್ನು ನೋಡುತ್ತಾ ಕೂತೆ. ಆ ವಿಶಾಲ ಜಾಗದಲ್ಲಿ ಎಷ್ಟೊಂದು ಜನರು ಇದ್ದರು ಅಂತ ಆಗ ಗೊತ್ತಾಯಿತು! ಅಲ್ಲಲ್ಲಿ ಹರಡಿ ಚದುರಿಹೋದ ಜನರ ಮಧ್ಯೆ ಓಡಾಡುವಾಗ ಅಷ್ಟೊಂದು ಜನ ಅಲ್ಲಿ ಇದ್ದಿರಬಹುದು ಅನ್ನುವ ಕಲ್ಪನೆಯೂ ಬಂದಿರಲಿಲ್ಲ. 5.30 ಕ್ಕೆ ದೇಗುಲ ಮುಚ್ಚುವುದರಿಂದ ಸೆಕ್ಯುರಿಟಿಯವರು ಎಲ್ಲ ಜಾಗದಲ್ಲೂ ತಡಕಾಡಿ ನಾಲ್ಕೂವರೆ, ನಾಲ್ಕೂ ಮುಕ್ಕಾಲಿಗೆ ಎಲ್ಲರನ್ನೂ ಇಳಿಯಲು ಬಲವಂತ ಪಡಿಸುತ್ತಾ ಹೊರಡುತ್ತಾರೆ. ಎಲ್ಲ ಜನ ಕೆಳಗಿಳಿಯಲು ಅದೆಷ್ಟು ಹೊತ್ತು ಬೇಕೋ ಅಂದುಕೊಂಡು ನೋಡುತ್ತಾ ಕೂತರೆ ಉಲ್ಟಾ ತಿರುಗಿ ಮೆಟ್ಟಿಲಿಳಿಯುತ್ತಿದ್ದವರು, ಕೂತು ಮೆಟ್ಟಿಲಿಳಿಯುತ್ತಿದ್ದವರು, ಪೆದ್ದು ನಗೆ ನಗುತ್ತಾ ಇಳಿಯುತ್ತಿದವರು ಎಲ್ಲರೂ ಕಂಡರು. ಅದನ್ನು ನೋಡಿ ‘ಭಾರತಿ ನಿನ್ನ ಸಂಕುಲ ತುಂಬ ದೊಡ್ಡದಾಗಿದೆ’ ಅಂತ ನನಗೆ ನಾನೇ ಸಮಾಧಾನ ಪಡಿಸಿಕೊಂಡೆ!

ತ ಪ್ರೋಮ್, ಫ್ಲೋಟಿಂಗ್ ಮಾರ್ಕೆಟ್ ಮತ್ತು ಕಾಂಬೋಡಿಯಾದ ಹಳ್ಳಿಗಳು…

ಅಲ್ಲಿ ನಮ್ಮ ಗೈಡ್ ತ ಪ್ರೋಮ್ ದೇಗುಲ ಮುಚ್ಚಿ ಬಿಡುವುದರಿಂದ ಅಲ್ಲಿಗೆ ಹೋಗಬೇಕೆಂದು ಅವಸರಿಸಲು ಶುರು ಮಾಡಿದ. ನನಗಂತೂ ಅಂಗ್ ಕೋರ್ ವಾಟ್ ನೋಡಿದ ಸಮಾಧಾನ ಆಗಿರಲೇ ಇಲ್ಲ. ಮತ್ತೆ ಬರುವ ಪ್ರೋಗ್ರಾಮ್ ಇದ್ದಿದ್ದರಿಂದ ಸಧ್ಯಕ್ಕೆ ಅದಕ್ಕೆ ಗುಡ್ ಬೈ ಹೇಳಿ ತ ಪ್ರೋಮ್ ಕಡೆ ಹೊರಟೆವು. ನಮ್ಮ ಗೈಡ್ ಅವಸರಿಸುತ್ತಾ ಯಾವುದೋ ಬಾಗಿಲಿನಿಂದ ಒಳ ಸೇರಿಸಿದ ನಮ್ಮನ್ನು. ಅದು ಹಿಂದಿನ ಬಾಗಿಲೆಂದೂ, ಹೇಗೋ ಮಾಡಿ ನಮ್ಮನ್ನು ಒಳ ನುಗ್ಗಿಸಿದೆ ಅಂತಲೂ ಪಾಪ ಒಂದಿಷ್ಟು ಸ್ಕೋಪ್ ತೆಗೆದುಕೊಂಡ (ಮತ್ತೊಂದು ದಿನ ಹೋದಾಗ ಗೊತ್ತಾಯಿತು… ಆ ದೇಗುಲಕ್ಕೆ ಪೂರ್ವ ಮತ್ತು ಪಶ್ಚಿಮ ಎರಡೂ ದಿಕ್ಕಿನಲ್ಲೂ ಬಾಗಿಲುಗಳಿವೆ ಎಂದು!) ನಾವು ಆಹಾ! ನಿಮ್ಮದು ಎಂಥಾ ಸಮಯ ಪ್ರಜ್ಞೆ ಅಂತ ಹೊಗಳುತ್ತಾ ತ ಪ್ರೋಮ್ ಆವರಣದೊಳಗೆ ಕಾಲಿಟ್ಟೆವು. ಈ ತ ಪ್ರೋಮ್ ದೇಗುಲವನ್ನೇ ನಾನು ಪೂರ್ಣಚಂದ್ರ ತೇಜಸ್ವಿಯವರ ಲೇಖನದಲ್ಲಿ ನೋಡಿ ಮೆಚ್ಚಿ ಮರುಳಾಗಿದ್ದು. ಪ್ರಿಯತಮ-ಪ್ರಿಯತಮೆಯರಂತೆ ಆವರಿಸುತ್ತಾ, ಆಧರಿಸಿಕೊಳ್ಳುತ್ತ ನಿಂತ ಈ ದೇವಸ್ಥಾನವನ್ನು ಕಾಣಬೇಕೆಂಬ ಕನಸು ನನಸಾದ ಪುಳಕ.

ಈ ದೇಗುಲವನ್ನು ಏಳನೆಯ ಜಯವರ್ಮ ತನ್ನ ತಾಯಿಗಾಗಿ ಕಟ್ಟಿಸಿದ್ದಂತೆ. ಈಗಿನ ಕಾಲದಲ್ಲಿ ತಾಯಿಗಿರಲಿ, ತಮಗಾಗಿ ಒಂದು ಪುಟ್ಟ ಮನೆ ಕಟ್ಟಿಕೊಳ್ಳುವುದೂ ಅಸಾಧ್ಯ. ಆಗ ಅದು ಹೇಗೆ ಇಂಥ ಬೃಹತ್ ಯೋಜನೆಗಳು ಅವರ ತಲೆಯಲ್ಲಿ ಮೂಡುತ್ತಿದ್ದವೋ ಅನ್ನಿಸಿತು. Ta Prohm ಅಂದರೆ ವಿಧಾತ ಬ್ರಹ್ಮದೇವ ಅಂತ ಅರ್ಥವಂತೆ. ಈ ದೇಗುಲವನ್ನು ರಾಜರು ಅವರ ವಿಹಾರಕ್ಕಾಗಿ ಕಟ್ಟಿಸಿಕೊಂಡಿದ್ದಂತೆ. ಇಂಥ ಅಗಾಧ ಆಸೆ, ತಾಳ್ಮೆ, ಸಮಯ, ಹಣ, man power ಎಲ್ಲ ಅವರಿಗೆ ಅದೆಲ್ಲಿಂದ ಒದಗುತ್ತಿತ್ತೋ ದೇವರಿಗೇ ಗೊತ್ತು. ಆ ದೇಗುಲದ ಆವರಣದಲ್ಲಿ ಆಗಿನ ಕಾಲದಲ್ಲಿ ಹೇರಳ ಆಸ್ತಿ, ವಜ್ರ, ಚಿನ್ನ ಇತ್ತು ಅಂತ ಲಿಪಿಯಲ್ಲಿದೆ. ಅಗಾಧ ಸಂಖ್ಯೆಯಲ್ಲಿ ನರ್ತಕಿಯರು ಮತ್ತು ಈ ಸ್ಥಳವನ್ನು ನೋಡಿಕೊಳ್ಳಲು ಸಾವಿರಗಟ್ಟಳೆ ಸಂಖ್ಯೆಯಲ್ಲಿ ಜನರಿದ್ದರಂತೆ. ಹೀಗೆ ಹೇಳುತ್ತಾ ಹೊರಟ ನಮ್ಮ ಗೈಡ್ ಸಮಯ ಮುಗಿಯುತ್ತಾ ಬಂದಿರುವುದರಿಂದ ಬೇಗ ಬೇಗ ನೋಡಿ ಮುಗಿಸಿ ಅಂತ ಅವಸರಿಸಲು ಶುರು ಮಾಡಿದ. ಇದನ್ನು ನೋಡಬೇಕು ಅಂತಲೇ ಇಷ್ಟೆಲ್ಲ ಆಸೆ ಪಟ್ಟು ಈಗ ಒಂದು ಘಂಟೆ ಸಮಯದಲ್ಲಿ ಅದನ್ನು ಹೇಗೆ ನೋಡಿ ಮುಗಿಸಲು ಸಾಧ್ಯ ನೀವೇ ಹೇಳಿ. ಅದರ ವಿಸ್ತೀರ್ಣ ಕೂಡ ಅಗಾಧ. ಆ ಮೂಲೆಯಿಂದ ಈ ಮೂಲೆಗೆ ಒಂದು ಸಲ ಸುಮ್ಮನೇ ನಡೆಯುವುದಕ್ಕೇ ಒಂದು ಘಂಟೆಗಿಂತ ಹೆಚ್ಚು ಸಮಯ ಬೇಕಿರುವಂತ ಈ ಜಾಗವನ್ನು ನಾನು ಒಂದು ಘಂಟೆಯಲ್ಲಿ ಹೇಗೆ ನೋಡಿ ಮುಗಿಸಲಿ ಅಂತ ಸಿಟ್ಟು ಬರಲು ಶುರುವಾಯ್ತು. ಅಲ್ಲೆಲ್ಲಾ ಅಗಾಧ ಮರಗಳು ಇದ್ದಿದ್ದರಿಂದ ಅಷ್ಟು ಹೊತ್ತಿಗಾಗಲೇ ಕತ್ತಲು ಬೇರೆ ಆವರಿಸಲು ಶುರುವಾಗಿತ್ತು. ಹಾಗಾಗಿ ನಾನು ಅವತ್ತು ಅಲ್ಲಿ ಯಾವುದನ್ನೂ ನೋಡುವ ಆಸೆಯನ್ನೇ ಬಿಟ್ಟು ಅಲ್ಲಿ ಉಳಿಯುವ ಎರಡು ದಿನಗಳಲ್ಲಿ ಒಂದು ದಿನ ಪೂರ್ತಿ ಈ ದೇಗುಲವನ್ನೇ ನೋಡಬೇಕು ಅಂತ ತೀರ್ಮಾನಿಸಿ ಏನನ್ನೂ ನೋಡದೇ ಸುಮ್ಮನೇ ಪೂರ್ವ ದಿಕ್ಕಿನ ಬಾಗಿಲಿನ ಕಡೆ ಹೆಜ್ಜೆ ಹಾಕಲು ಶುರು ಮಾಡಿದೆ. ಆ ದಾರಿಯಲ್ಲಿ ಮರಗಳಿಂದಾವೃತ್ತವಾದ ದೇಗುಲಗಳು ಕಂಡವು. ಅಲ್ಲಿ ನಿಲ್ಲಿಸಿ ಕಾಟಾಚಾರಕ್ಕೆ ಎರಡು ಫೊಟೋ ತೆಗೆಸಿಕೊಂಡರು ಎಲ್ಲರೂ. ನಾ ಬಂದೆ, ನಾ ನೋಡಿದೆ ಅಂತ ಅಂದುಕೊಳ್ಳುವಷ್ಟರಲ್ಲಿ ಈ ಪಕ್ಕ ಬಗ್ಗಿ, ಆ ಪಕ್ಕ ಬಗ್ಗಿ, ಇಲ್ಲಿ ತಲೆ ಎತ್ತಿ, ಇಲ್ಲಿ ನೋಡಿ ಅಂತ ಅವಸರಿಸಿದ ನಮ್ಮ ಗೈಡ್‌ನ ಮಾರ್ಗದರ್ಶನದಲ್ಲಿ ಅದನ್ನು ನೋಡುತ್ತಾ ಸಾಗಿದ್ದು ಸಿನೆಮಾವನ್ನು fast forward modeನಲ್ಲಿ ನೋಡಿದ ಹಾಗೆ ಇತ್ತು!

ಅವತ್ತೆಲ್ಲ ಯಾಕೋ ಮನಸ್ಸಿಗೆ ಹಳಹಳಿ… ಇದನ್ನು ನೋಡಬೇಕಂತಲೇ ಅಷ್ಟು ದೂರದಿಂದ ಹೊರಟು ಬಂದು ದಾರಿಯಲ್ಲಿ ಬೇಕಿಲ್ಲದ ಬ್ಯಾಂಕಾಕ್, ಪಟ್ಟಾಯ ಎಲ್ಲವನ್ನೂ ಅಷ್ಟು ಡೀಟೈಲಾಗಿ ನೋಡಿ, ಬೇಕಿರುವ ಜಾಗವನ್ನು ನೋಡಲು ಸಮಯವಾಗದೇ ಇದ್ದಿದ್ದು ನನ್ನಲ್ಲಿ ಯಾಕೋ ತುಂಬ ನಿರಾಸೆ ಮೂಡಿಸಿತ್ತು…

ನಿಮ್ಮಲ್ಲಿ ಯಾರಿಗಾದರೂ ಕಾಂಬೋಡಿಯಾ ಬಗ್ಗೆ ತುಂಬ passion ಇದ್ದರೆ ಅಂಥವರಿಗೆ ನನ್ನದೊಂದು ಕಿವಿಮಾತು. ಹೇಗೂ ಥಾಯ್‌ಲ್ಯಾಂಡ್ ಮೂಲಕ ಹೋಗುತ್ತೇವಲ್ಲ ಅನ್ನುವ ಚಿಲ್ಲರೆ ಲೆಕ್ಕಾಚಾರ ಹಾಕಿ ದಯವಿಟ್ಟು ಆ ದೇಶಗಳನ್ನೆಲ್ಲ ನೋಡಲು ಹೋಗಲೇಬೇಡಿ. ನೇರವಾಗಿ ಕಾಂಬೋಡಿಯಾ ಕಡೆಗೆ ಸಾಗಿಬಿಡಿ. ಬ್ಯಾಂಕಾಕ್ ಮತ್ತು ಪಟ್ಟಾಯಾದ ಮೂಡೇ ಬೇರೆ… ಕಾಂಬೋಡಿಯಾದ ಮೂಡೇ ಬೇರೆ. ಎರಡೂ ಎಲ್ಲೂ ತಾಳೆಯಾಗುವುದಿಲ್ಲ. ಜೊತೆಗೆ ಕಾಂಬೋಡಿಯಾದಲ್ಲಿ ಕಿಲೋಮೀಟರ್‌ಗಟ್ಟಳೆ ನಡೆಯುವುದಿರುತ್ತದೆ. ಹಾಗಾಗಿ ಮುಂಚೆಯೇ ನಮ್ಮ ಶಕ್ತಿಯನ್ನು ಈ ಬೇಡದ ಸ್ಥಳಗಳಿಗೆಲ್ಲ ವ್ಯಯಿಸಿ ಬಿಟ್ಟರೆ ಕಾಂಬೋಡಿಯಾದಲ್ಲಿ ವ್ಯಯಿಸಲು ಶಕ್ತಿಯೇ ಉಳಿದಿರುವುದಿಲ್ಲ. ಹಾಗಾಗಿ ಆ ದೇಶದ ಬಗ್ಗೆ ತುಂಬ passion ಇದ್ದರೆ ಬ್ಯಾಂಕಾಕ್‌ನಲ್ಲಿ ಇಳಿದವರು ಮುಂದಿನ ವಿಮಾನ ಹತ್ತಿ ಸಿಯಮ್ ರೀಪ್ ತಲುಪಿಬಿಡಿ. ಕಾಂಬೋಡಿಯಾದ ಅಗಾಧತೆ ಕಣ್ತುಂಬಿಕೊಳ್ಳಲು ಪುಡಿ ಪುಡಿ ಘಂಟೆಗಳು ಯಾತಕ್ಕೂ ಸಾಲುವುದಿಲ್ಲ… ತಿಂಗಳುಗಟ್ಟಳೆ ಸಮಯ ಬೇಕಿರುವಂಥ ಜಾಗಕ್ಕೆ at least ತಿಂಗಳುಗಟ್ಟಳೆ ಸಮಯ ಕೊಡುವುದು ಅಸಾಧ್ಯವಾದರೆ ದಿನಗಟ್ಟಳೆ ಲೆಕ್ಕದಲ್ಲಾದರೂ ಸಮಯ ಕೊಡಿ…

ಮರು ದಿನ ಬೆಳಿಗ್ಗೆ ಕಾಂಬೋಡಿಯಾದ floating market ಗೆ ಭೇಟಿ ಅಂತ ನಮ್ಮ ಗೈಡ್ ಹೇಳಿದಾಗ ಬೆಳಿಗ್ಗೆಯೇ ಎದ್ದು ಸರ ಸರ ಸಿದ್ಧರಾದೆವು. ಬೋಟುಗಳಲ್ಲಿ ಬಣ್ಣ ಬಣ್ಣದ ಹೂವು, ಹಣ್ಣು, ತರಕಾರಿಗಳನ್ನು ಬೋಟಿನಲ್ಲಿ ತಂದು ಕೊಳ್ಳುವ, ಮಾರುವ ದೃಶ್ಯಗಳನ್ನು ನಾನು ಟಿ ವಿ ಯಲ್ಲಿ ನೋಡಿದ್ದೆ. ಹಾಗಾಗಿ ತುಂಬ ಸುಂದರ ಕಲ್ಪನೆಯ ಜೊತೆ ಅಲ್ಲಿಗೆ ಹೊರಟೆ. ತೀರಾ ಸಾಧಾರಣವಾಗಿದ್ದ ಬೋಟ್ ಒಂದರಲ್ಲಿ ನಾವೆಲ್ಲ ಕೂತು ಹೊರಟೆವು. ಅಲ್ಲಿಂದ ಮುಂದೆ ಕಂಡಿದ್ದು ಕಾಂಬೋಡಿಯಾದ ಬಡತನದ ದರ್ಶನದಂತಿತ್ತು. ಅಬ್ಬಾ! ಅದ್ಯಾವುದೋ ಕಾಲದಲ್ಲಿ ಇದು ಚೆಂದಕ್ಕಿತ್ತಂತೆ. ಈಗಲಂತೂ ಆ ಹರಕು-ಮುರುಕು ಬೋಟುಗಳು, ಆ ಚಿಂದಿ, ಆ ಕೊಳಕು, ಆ ಬಡತನ ನನ್ನಿಂದ ಸಹಿಸಲಾಗಲಿಲ್ಲ. ನಿಜಕ್ಕೂ ಅದರಲ್ಲಿ ನೋಡುವಂತದ್ದು ಏನೇನೂ ಇರಲಿಲ್ಲ. ಎತ್ತ ತಿರುಗಿದರೂ ಚಿಂದಿ ಚಿತ್ರಾನ್ನವಾದ ಬೋಟುಗಳು. ಅಲ್ಲಿಲ್ಲಿ ಸಂಸಾರ ಪೂರ್ತಿ ನಿಂತು ನೀರಿಗೆ ಬಲೆ ಎಸೆಯುತ್ತಿದ್ದರು. 15-20 ನಿಮಿಷದ ನಂತರ ನಮ್ಮನ್ನು ಒಂದು ವಿಶಾಲವಾದ ನಿಲ್ದಾಣಕ್ಕೆ ತಂದಿಳಿಸಿದರು. ಅದನ್ನು ನೋಡಿಯಂತೂ ನಾನು ಸುಸ್ತಾಗಿಹೋದೆ. ಹೆಗಲ ಸುತ್ತ ಹಾವನ್ನು ಸುತ್ತಿಕೊಂಡು ಆಟವಾಡುತ್ತಿದ್ದ ಮಕ್ಕಳು, ಕೂಲ್ ಡ್ರಿಂಕ್ಸ್ ಅಂಗಡಿಗಳು, ಅತೀ ಸಾಧಾರಣ ಬಟ್ಟೆಗಳ ಅಂಗಡಿಗಳು, ಒಂದು ಕೊಳಕು ಜಾಗದಲ್ಲಿ ಒಂದರ ಮೇಲೊಂದು ಬಿದ್ದುಕೊಂಡಿದ್ದ ಆಮೆಗಳು, ಹಾಲಿನ ಬದಲು ಮಿಲ್ಕ್ ಮೇಡ್ ಬೆರೆಸಿ ಮಾಡುವ ದರಿದ್ರ ಕಾಫಿ, ಜೊತೆಗೆ ಹಾಸಿ ಹೊದ್ದುಕೊಳ್ಳುವಂಥ ಬಡತನ… ಏನನ್ನು ನೋಡಲಿ ಅಲ್ಲಿ? ಆ ಹಾವಿನ ಜೊತೆ ಫೋಟೋ ತೆಗೆಸಿಕೊಳ್ಳಲೂ ಬಾಯಿಗೆ ಬಂದಷ್ಟು ದುಡ್ಡು, ಕಾಫಿಗೂ ಲೆಕ್ಕವಿಲ್ಲದಷ್ಟು ಹಣ, ಇನ್ನುಳಿದಂತೆ ಅಲ್ಲಿದ್ದ ಸಾಧಾರಣಾತಿಸಾಧಾರಣ ವಸ್ತುಗಳು… ಉಹ್ಞೂ, ಅಲ್ಲಿರುವ ಯಾವುದನ್ನೂ ನೋಡಲು ಯೋಗ್ಯವಾದದ್ದಿರಲಿಲ್ಲ. ಈ ಸ್ಥಳಗಳನ್ನು ಅದ್ಭುತ ಪ್ರೇಕ್ಷಣೀಯ ಸ್ಥಳಗಳೆಂಬಂತೆ ಬಿಂಬಿಸುವುದಕ್ಕೆ ನಿಜಕ್ಕೂ ಅವರಿಗೆ ನಾಚಿಕೆಯಾಗುವುದಿಲ್ಲವೇ? ಅನ್ನಿಸಿತು. ಬೇರೆ ದೇಶದಿಂದ ಇರುಕಿಸಿಕೊಳ್ಳುವಂತೆ ಪ್ರೋಗ್ರಾಮ್ ಹಾಕಿ ಹೋಗುವ ನಮ್ಮಂಥವರಿಗೆ ಈ ಸ್ಥಳ ನೋಡಲು ಹೋಗಿದ್ದು ಹಣದ ಮತ್ತು ಸಮಯದ ಘೋರ ವ್ಯರ್ಥ ಅನ್ನಿಸಿಬಿಟ್ಟಿತು. ನಮ್ಮನ್ನು ಇಳಿಸಿ ಹೋಗಿದ್ದ ಬೋಟ್ ಬರಲು ಇನ್ನೂ ಸಮಯವಿತ್ತು ಮತ್ತು ಅದು ನೀರಿನ ಮಧ್ಯವಾದ್ದರಿಂದ ನಡೆದು ವಾಪಸ್ ಬರಲು ಸಾಧ್ಯವಿಲ್ಲ ಅನ್ನುವ ಕಾರಣಕ್ಕೆ ಮಾತ್ರ ನಾನು ಅಲ್ಲಿ ಕೂತಿದ್ದೆ ಅನ್ನಬೇಕು! ಈಜು ಬಂದಿದ್ದರೆ ಈಜಿ ಈ ದಡ ಸೇರಿಬಿಡುವಷ್ಟು ಅಸಹನೆ ಉಂಟಾಗಿತ್ತು ನನ್ನಲ್ಲಿ. ಅಂತೂ ಕೊನೆಗೊಮ್ಮೆ ನಮ್ಮ ಬೋಟ್ ಬಂದು, ನಾವು ಅದರಲ್ಲಿ ವಾಪಸ್ ಹೊರಟೆವು. ದಾರಿಯುದ್ದಕ್ಕೂ ಎಲ್ಲ ಬೋಟ್‌ಗಳಲ್ಲೂ ಇದ್ದ ಪಾಪದ ಮಕ್ಕಳು, ಅಲ್ಲಿನ ಮನೆಗಳು, ಬೋಟ್‌ಗಳಿಗೆ ಇಂಧನ ತುಂಬಿಸುವ fuel station ಗಳನ್ನು ಕಂಡು ಎಲ್ಲ ನಾಮ್-ಕೆ-ವಾಸ್ತೆ ಅನ್ನಿಸಿಬಿಟ್ಟಿತು. ಯಾವ ಪುರುಷಾರ್ಥಕ್ಕಾಗಿ ಅದಕ್ಕೆ ಅಷ್ಟು hype ಕ್ರಿಯೇಟ್ ಮಾಡಿದ್ದಾರೋ ದೇವರಿಗೇ ಗೊತ್ತು.

ಮಧ್ಯಾಹ್ನ cambodian cultural villageಗೆ ಭೇಟಿ ಅಂದಾಗ ನಾನು ಖಡಾ ಖಂಡಿತವಾಗಿ ನಿರಾಕರಿಸಿದೆ. ಎಲ್ಲ ಸುಮ್ಮನೆ ನೀ ಸತ್ತಂಗ್ ಮಾಡು, ನಾ ಅತ್ತಂಗ್ ಮಾಡ್ತೀನಿ ಅನ್ನುವಂಥ ಜಾಗಗಳು. ಅಲ್ಲಿರುವ ಯಾವ ನೃತ್ಯವೂ ನೃತ್ಯವಲ್ಲ, ಯಾವ ಬಾಕ್ಸಿಂಗ್ ಶೋ ಕೂಡಾ ಬಾಕ್ಸಿಂಗ್ ಶೋ ಅಲ್ಲ, ಯಾವ ಮದುವೆಯೂ ಮದುವೆಯಲ್ಲ! ಎಲ್ಲ ಸುಮ್ಮನೇ ಶೋ… ಆ ಕಡೆಯಿಂದ ಯಾರೋ ಬರುವುದು, ಇನ್ಯಾರೋ ಈ ಕಡೆಯಿಂದ ಬರುವುದು, ಮೂರು ಹೊಡೆತದ ಶಾಸ್ತ್ರ, ಮತ್ತೆ ಎಲ್ಲರೂ ಕಾಣೆ. ಇಂಥ ಶೋಗಳ ಸಹವಾಸ ಸಾಕಾಗಿತ್ತು. ನಾವು ಅಲ್ಲಿಗೆ ಬರುವುದಿಲ್ಲವೆಂದು ಹೇಳಿ ಆ ಗುಂಪಿನಿಂದ ಬೇರ್ಪಟ್ಟು ಬಿಟ್ಟೆವು.

ನಾವು ಒಟ್ಟಿಗೇ ಮೂರು ದಿನಗಳ ಪಾಸ್ ತೆಗೆದುಕೊಂಡಿದ್ದರೆ 40 ಡಾಲರ್‌ಗಳಲ್ಲಿ ಮುಗಿಯುತ್ತಿತ್ತು. ಈಗ ಹಿಂದಿನ ದಿನ ಒಂದೇ ದಿನದ ಪಾಸ್ ತೆಗೆದುಕೊಂದಾಗಿ ಹೋಗಿತ್ತು. ಮರುದಿನವೂ ಆ ದೇಗುಲಗಳಿಗೆ ಮತ್ತೆ ಬರಬೇಕಾದ್ದರಿಂದ ನಾವು ಮತ್ತೆ ಮೂರು ದಿನದ ಪಾಸ್ ತೆಗೆದುಕೊಳ್ಳಲೇ ಬೇಕಿತ್ತು. ಹಾಗಾಗಿ ಅನಾವಶ್ಯಕವಾಗಿ 20 ಡಾಲರ್‌ಗಳನ್ನು ವೇಸ್ಟ್ ಮಾಡಿದೆವು. ಆದರೂ ಚಿಂತೆಯಿಲ್ಲ, ಇಲ್ಲಿಂದ ಹೋಗಿರುವುದೇ ಅವುಗಳನ್ನು ನೋಡಲು ಅಂತಾದಮೇಲೆ ಸಣ್ಣ ಪುಟ್ಟ ಮೂರ್ಖತನದಿಂದ ಇಂಥ additional ಖರ್ಚು ಎದುರಾದಾಗ ವಿಧಿಯಿಲ್ಲದೇ ಭರಿಸಲೇ ಬೇಕು. ಮತ್ತೆ ಪಾಸ್ ತೆಗೆದುಕೊಂಡು ರೊಲಸ್ ದೇಗುಲಗಳ ಕಡೆ ಹೊರಟೆವು. ರೋಲಸ್ ದೇಗುಲಗಳು ಮೂರು … ಬಾಕೋಂಗ್, ಲೋಲೈ ಮತ್ತು ಪ್ರೆ ಖೋ. ಮೂರೂ ದೇಗುಲಗಳು ಅಲ್ಲಿರುವ ದೇಗುಲಗಳಲ್ಲೆಲ್ಲ ಪುರಾತನವಾದವಂತೆ. ಐದು ಹಂತಗಳ ಬಾಕೋಂಗ್ ದೇಗುಲ ಯಥಾಪ್ರಕಾರ ಎತ್ತರೆತ್ತರದ ಮೆಟ್ಟಿಲುಗಳ ಸ್ಥಳ. ದೇಗುಲದ ನಾಲ್ಕೂ ಮೂಲೆಯಲ್ಲಿ ಇಟ್ಟಿರುವ ಆನೆಗಳ ವಿಗ್ರಹಗಳಲ್ಲಿ ಕೆಲವು ಸರಿಯಾಗಿವೆ, ಮತ್ತೆ ಕೆಲವು ಮುರುಕಲಾಗಿ ಕೆಳಗಿನ ಬೇಸ್ ಮಾತ್ರ ಉಳಿದು ಆಮೆಯ ವಿಗ್ರಹವೇನೋ ಅನ್ನುವ ಭ್ರಮೆ ತರಿಸುತ್ತದೆ. ಲೋಲೈ ದೇವಸ್ಥಾನವಂತೂ ತುಂಬ ಶಿಥಿಲ ಸ್ಥಿತಿಯಲ್ಲಿದೆ. ಇದನ್ನು ಸಂಪೂರ್ಣ ಇಟ್ಟಿಗೆಗಳಿಂಡಲೇ ಕಟ್ಟಿದ್ದಾರೆ. ಗೋಪುರಗಳ ತುದಿಯಲ್ಲೆಲ್ಲ ಹುಲ್ಲು, ಮತ್ತಿತರ ಗಿಡಗಳು ಬೆಳೆದು ಇಡೀ ದೇಗುಲವೇ ಪುರಾತನ ಕಾಲದ ಪಳೆಯುಳಿಕೆಯಂತೆ ಕಾಣುತ್ತದೆ. ಅದನ್ನು ಮತ್ತೆ ಸುಸ್ಥಿತಿಗೆ ತರಲು ಸುತ್ತಲೂ ಬೊಂಬು ಮತ್ತಿತರ ಮರದ ಗಳುಗಳನ್ನು ಕಟ್ಟಿದ್ದಾರಾದರೂ ಅಲ್ಲಿ ಯಾವ ಕೆಲಸ ಕಾರ್ಯವೂ ನಡೆಯುತ್ತಿರುವ ಲಕ್ಷಣ ಕಾಣಲಿಲ್ಲ. ಪ್ರೇ ಖೋ ದೇಗುಲದಲ್ಲಿ ಕೂಡಾ ಮೂರು ಗೋಪುರಗಳು ಮತ್ತು ಅದರ ಎದುರು ಇರುವ ಮೂರು ಬಸವಣ್ಣಗಳು ಎಲ್ಲವೊ ಶಿಥಿಲ ಸ್ಥಿತಿಯಲ್ಲಿದ್ದವು. ಆದರೆ ಕೆಲವೊಂದು ಗೋಡೆಯ ಮೇಲಿನ ಕೆತ್ತನೆಗಳು ಈಗಲೂ ಸುಸ್ಥಿತಿಯಲ್ಲಿಯೂ, ಸುಂದರವಾಗಿಯೂ ಇವೆ. ಎಲ್ಲ ದೇಗುಲಗಳ ಕಾಲಮಾನ 8 ಮತ್ತು 9 ನೆಯ ಶತಮಾನ. ಇವು ಮೂರೂ ದೇಗುಲಗಳನ್ನು ಹರಿಹರಾಲಯ ಅಂತ ಕರೆಯುತ್ತಾರಂತೆ. ವಿಚಿತ್ರವೆಂದರೆ ಅಂಗ್‌ಕೋರ್ ವಾಟ್‌ನ ಅಗಾಧತೆ ಈ ಮೂರೂ ದೇಗುಲಗಳಲ್ಲಿ ಕಾಣಲಿಲ್ಲ. ಮೂರೂ ಸಾಧಾರಣ ಮಟ್ಟದ, ಎತ್ತರದ ದೇಗುಲಗಳು. ತುಂಬ ಮೆಟ್ಟಿಲುಗಳು ಕೂಡಾ ಇರಲಿಲ್ಲ. ಅಗಾಧತೆಯ ಹುಚ್ಚು ಹಿಡಿದಿದ್ದು ನಂತರದ ಶತಮಾನಗಳಲ್ಲಿರಬೇಕು. ಈ ಸ್ಥಳಗಳಲ್ಲಿ ಪ್ರವಾಸಿಗರು ತುಂಬ ಕಡಿಮೆ. ಆಸಕ್ತಿ ಇರುವ ಕೆಲವರು ಮಾತ್ರ ಇಲ್ಲಿಗೆ ಬರುತ್ತಾರೆ. ಸಾಧಾರಣವಾಗಿ ಉಳಿದೆಲ್ಲರೂ ಮುಖ್ಯ ಸ್ಥಳಗಳನ್ನು ಮಾತ್ರ ನೋಡಿ ಜಾಗ ಖಾಲಿ ಮಾಡುತ್ತಾರೆ.

ಇಲ್ಲಿಂದ ಮುಂದೆ ನಾವು ಫಿಮೆನಕಾ ಅನ್ನುವ ಜಾಗಕ್ಕೆ ಹೋದೆವು. ಈ ಜಾಗದ ಸ್ಥಳ ಪುರಾಣ ಒಂದಿದೆ. ರಾಜ ಈ ಜಾಗದಲ್ಲಿ ರಾತ್ರಿಯಲ್ಲಿ ದಿನವೂ ಬಂದು ಹೆಣ್ಣು ವೇಷ ಧರಿಸಿದ ನಾಗದೇವತೆಗಳ ಜೊತೆ ಮಲಗ ಬೇಕಿತ್ತಂತೆ. ಆ ರೀತಿ ಮಲಗುವಾಗ ಆತನ ರಾಣಿಯಾಗಲಿ, ಮತ್ತೆ ಇನ್ಯಾರೇ ಆಗಲಿ ಅದನ್ನು ನೋಡುವಂತೆ ಇರಲಿಲ್ಲವಂತೆ. ಆ ರೀತಿ ಮಲಗದಿದ್ದರೆ ಇಡೀ ಸಾಮ್ರಾಜ್ಯವೇ ನಾಶವಾಗುತ್ತದೆ ಅನ್ನುವ ಶಾಪವೂ ಇತ್ತಂತೆ. ಹಾಗಾಗಿ ರಾಜ ಬಂದು ರಾತ್ರಿಯ ಮೊದಲ ಘಂಟೆಗಳನ್ನು ಆ ನಾಗಿಣಿಯರ ಜೊತೆ ಕಳೆದು ನಂತರ ತನ್ನ ಅರಮನೆಗೆ ವಾಪಸ್ಸಾಗುತ್ತಿದ್ದನಂತೆ. ನನಗಂತೂ ಈ ಕಥೆ ಕೇಳಿ ಭಯಂಕರ ಕಿಡಿಗೇಡಿ ಯೋಚನೆಗಳು ಬಂದುಬಿಟ್ಟವು! ಆ ರಾಜ ತಾನೇ ತನ್ನ ರಾತ್ರಿಗಳನ್ನು ವರ್ಣರಂಜಿತವಾಗಿ ಕಳೆಯಲು ಈ ರೀತಿಯ ಕಥೆಗಳನ್ನು ಹುಟ್ಟು ಹಾಕಿರಲಿಲ್ಲ ತಾನೇ?! ಅಂತ ಮನಸ್ಸಿನಲ್ಲಿ ಎದ್ದ ಪ್ರಶ್ನೆಯನ್ನು ಅಲ್ಲೇ ಒದ್ದು ಕೂರಿಸಿದೆ. ಜೋರಾಗಿ ಹೇಳಿದ್ದರೆ ಅಲ್ಲಿಯವರು ನನ್ನನ್ನು ಒದ್ದಿರುತ್ತಿದ್ದರು! ಈ ಫಿಮೆನಕಾದ ಗೋಪುರಕ್ಕೆ ಹತ್ತುವ ಮೂರು ಕಡೆಯ ಮೆಟ್ಟಿಲುಗಳು ಯಥಾಪ್ರಕಾರ ರಿಪೇರಿಗೆಂದು ಮುಚ್ಚಲ್ಪಟ್ಟಿದ್ದವು. ಒಂದು ಬದಿಯ ಮೆಟ್ಟಿಲು ಮಾತ್ರತೆರೆದಿತ್ತು. ಆ ಮೆಟ್ಟಿಲುಗಳು ಕೂಡಾ ತುಂಬ ಶಿಥಿಲವಾಗಿವೆ. ಹಾಗಾಗಿ ಅಲ್ಲಿಯೂ ಮರದ ಮೆಟ್ಟಿಲುಗಳನ್ನು ನಿರ್ಮಿಸಿದ್ದಾರೆ. ಆದರೆ ಆ ಮೆಟ್ಟಿಲುಗಳ ಅಗಲ ತುಂಬ ಕಿರಿದು. ಎದುರು ಬದುರು ಟ್ರಾಫಿಕ್ ಪ್ರಶ್ನೆಯೇ ಇಲ್ಲ! ಅದ್ಯಾಕೆ ಆ ಪರಿಯ ಜಿಪುಣತನ ತೋರಿಸಿದ್ದಾರೆ ಅಂತ ಗೊತ್ತಾಗಲೇ ಇಲ್ಲ. ಪಕ್ಕದಲ್ಲಿದ್ದ original ಮೆಟ್ಟಿಲುಗಳನ್ನು ನೋಡಿದರೆ ತುಂಬ ಎತ್ತರೆತ್ತರದವು. ಅಂಗ್‌ಕೋರ್ ವಾಟ್‌ನ ತುಟ್ಟತುದಿಗೆ ಹತ್ತುವ ಮೆಟ್ಟಿಲುಗಳಿಗಿಂತ ಕಡಿದು. ಈ ಮೆಟ್ಟಿಲುಗಳನ್ನು ರಾಜ ಓಡು ನಡಿಗೆಯಲ್ಲಿ ಉಸಿರು ಕಟ್ಟಿ ಹತ್ತುತ್ತಿದ್ದನಂತೆ! ಪಾಪ ಶಾಪದ ಭಯವಂತೆ ! ನನಗೆ ಮತ್ತೆ ಕೊಡಿಗೇಡಿ ಯೋಚನೆ… ಇಲ್ಲಿ ನಾಗ ಪ್ರೇಯಸಿರಲ್ಲದೇ ಹೆಂಡತಿಯೇ ಇದ್ದಿದ್ದರೆ ಈ ರಾಜ ಓಡು ನಡಿಗೆಯಲ್ಲಿ ಹತ್ತುವುದಿರಲಿ ‘ಏಯ್ ಹೋಗೇ! ಯಾವನು ಅಷ್ಟೆತ್ತರ ಮೆಟ್ಟಿಲು ಹತ್ಕೊಂಡು ನಿನ್ನ ನೋಡಕ್ಕೆ ಬರ್ತಾನೆ. ನನ್ನ ಕೈಲಾಗಲ್ಲ. ನೀನು ಬೇಕಿದ್ರೆ ಇಳ್ಕೊಂಡು ಬಾ, ಇಲ್ಲಾಂದ್ರೆ ಅಲ್ಲೇ ಇದ್ಕೋ ಹೋಗು’ ಅನ್ನುತ್ತಿದ್ದನಾ ಅಂತ…! ಆದರೆ ಯಾವ ನಾಗಿಣಿಯ ನಿರೀಕ್ಷೆಯೂ ಇಲ್ಲದ ನನ್ನ ಗಂಡ ಕೂಡಾ ಕುಣಿಕುಣಿದು ಹತ್ತುತ್ತಿದ್ದುದನ್ನು ಕಂಡು ನನ್ನ ತಲೆಯ ಮೆಲೆ ನಾನೇ ಮೊಟಕಿಕೊಂಡೆ…

ಫಿಮೆನಕಾಗೆ ಅಂಟಿಕೊಂಡಂತೆಯೇ ಇರುವ elephant’s terrace ಸುಮಾರು ಅರ್ಧ ಕಿಲೋಮೀಟರ್ ದೂರದ ಗೋಡೆ. ಆ ಗೋಡೆಯ ಮೇಲೆ ಪೂರಾ ಆನೆಗಳ ಕೆತ್ತನೆ ಇರುವುದರಿಂದ ಅದಕ್ಕೆ ಆ ಹೆಸರು. ಈ ಗೋಡೆಯ ಮೇಲಿನ ಕಟ್ಟಡವೆಲ್ಲಾ ಈಗ ಕಾಣೆಯಾಗಿ ಈಗ ಬರೀ ಗೋಡೆ ಮಾತ್ರ ಉಳಿದಿದೆ. ರಾಜ ಇಲ್ಲಿ ಕುಳಿತು ವಿಜಯಿಯಾಗಿ ಹಿಂತಿರುಗುವ ಸೈನ್ಯವನ್ನು ಸ್ವಾಗತಿಸುತ್ತಿದ್ದನಂತೆ. ಆ ಗೋಡೆಗಳ ಮೇಲಿನ ಬಳ್ಳಿ, ಆನೆಗಳ ಮುಖಗಳ ನಡುವೆ ಎಲ್ಲೆಲ್ಲೋ ಗಣೇಶನ ಕೆತ್ತನೆಯೂ ಕಂಡಂತೆ ಭಾಸವಾಗಿದ್ದು ನಿಜವೋ, ಭ್ರಮೆಯೋ?!

ಅದರ ಪಕ್ಕದಲ್ಲೇ ಇರುವ leper’s terrace ಒಂಥರಾ ವಿಚಿತ್ರವಾಗಿದೆ. ಅಲ್ಲಿ ಇರುವ ವಿಗ್ರಹ ರಾಜ ಯಶೋವರ್ಮನದ್ದು ಅಂತ ನಂಬಿಕೆ. ಆ ವಿಗ್ರಹದ ಮೈ ಮೇಲೆ ಗಂಟುಗಳು ಇದ್ದಿದ್ದರಿಂದ ಮತ್ತು ಮುಖ ಉರುಟು ಉರುಟಾಗಿಯೂ ಇದ್ದುದರಿಂದ ಅದು ಕುಷ್ಠ ರೋಗ ಪೀಡಿತ ರಾಜನ ವಿಗ್ರಹ ಅಂತ ನಂಬುತ್ತಾರೆ. ಇನ್ನು ಕೆಲವರು ಆ ಜಾಗದಲ್ಲಿ ರಾಜವಂಶದ ಹೆಣಗಳನ್ನು ಹೂಳುವ ಜಾಗ ಅಂತಲೂ ನಂಬುತ್ತಾರಂತೆ. ಹಾಗಾಗಿ ಅಲ್ಲಿರುವ ಗಂಟುಮುಖದವ ಸಾವಿನ ಒಡೆಯ ಯಮರಾಜ ಅಂತಲೂ ಹೇಳುತ್ತಾರೆ. ಮೈಗೆ ಹಳದಿ ವಸ್ತ್ರವೊಂದನ್ನು ಸುತ್ತಿ ಅರ್ಧ ಪದ್ಮಾಸನದಲ್ಲಿ ಹಳೆಯ ಕಾಲದಲ್ಲಿ ಕಟ್ಟೆಯ ಮೇಲೆ ಹೂ ಬತ್ತಿ ಹೊಸೆಯುವ ನಮ್ಮ ಹೆಂಗಸರಂತೆ ಕೂತಿರುವ ಈ ವಿಗ್ರಹಕ್ಕೆ ಇಷ್ಟೆಲ್ಲಾ ಕಥೆಗಳು. ಯಾವುದು ಸತ್ಯವೋ, ಯಾವುದು ಸುಳ್ಳೋ! ಅದರ ಪಕ್ಕದಲ್ಲೇ ಇರುವ ಸಣ್ಣ ಓಣಿಯಾಕಾರದ ಪ್ಯಾಸೇಜ್‌ನಲ್ಲೂ ನಾಲ್ಕೂ ಬದಿಗೆ ಕೆತ್ತನೆಗಳು. ಅದು ಕೂಡಾ ರಾಜನದ್ದು ಅಂತ ನಂಬಿಕೆ. ದಪ್ಪ ತುಟಿಯ, ಉರುಟು ಆಕಾರದ ಆತನ ಮುಖದಲ್ಲಿ ಸ್ವಲ್ಪ ಕಾಠಿನ್ಯವೇ ತುಂಬಿದೆ. ಅವನ ಸುತ್ತ ತುಂಬ ಹೆಂಗೆಳೆಯರ ಮತ್ತು ನಾಗಸರ್ಪಗಳ ಕೆತ್ತನೆಗಳು. ಆದರೆ ನನಗೆ ಅರ್ಥವಾಗದ ವಿಷಯವೆಂದರೆ ಆ ಓಣಿಯಕಾರದಲ್ಲಿ ಅದನ್ನು ಯಾಕೆ ಕಟ್ಟಿದ್ದಾರೆ ಅನ್ನುವುದು. ಆ ಇಕ್ಕಟ್ಟಿನ ಜಾಗದಲ್ಲಿ ಇರುಕಿಸಿಕೊಂಡು ನೋಡುವಂತೆ ಅದು ಯಾಕಿದೆ ಅಂತ ಅರ್ಥವೇ ಆಗಲಿಲ್ಲ. ತಲೆ ಪೂರ್ತಿ ಎತ್ತಿ ನೋಡಲೂ ಆಸ್ಪದವಿಲ್ಲದಷ್ಟು ಕಿರಿದಾದ ಜಾಗ .. ಏನೋ ಯಾವುದಕ್ಕೂ ನೆಟ್ಟಗಿನ ವಿವರಣೆ ಸಿಗಲಿಲ್ಲ…

ಇನ್ನು ಮರುದಿನ ತ ಪ್ರೋಮ್ ಮತ್ತು ಅಂಗ್‌ಕೋರ್ ವಾಟ್ ದೇಗುಲಗಳನ್ನು ಕಡೆಯದಾಗಿ ನೋಡಿ ವಿದಾಯ ಹೇಳುವ ಕಾರ್ಯಕ್ರಮ ಮಾತ್ರ ಉಳಿದಿತ್ತು… dream journey ಯ ಕೊನೆಯ ದಿನ ಮಾತ್ರ ಬಾಕಿ ಉಳಿದಿದೆ ಅಂತ ನೆನೆಸಿಕೊಂಡೊಡನೆ ಏನೋ ಖಾಲಿ ಖಾಲಿ ಭಾವ …

ಕಾಂಬೋಡಿಯಾದಲ್ಲಿ ಟುಕ್ ಟುಕ್ ಅನ್ನುವ ಬೈಕ್ ಟ್ಯಾಕ್ಸಿ ಎಲ್ಲ ಕಡೆಯೂ ಇರುತ್ತದೆ. ನಮ್ಮ TVS ನಂತ ಸಣ್ಣ ಗಾಡಿಗೆ ಹಿಂದೆ ನಾಲ್ಕು ಜನ ಕೂಡುವಂಥ ಒಂದು attachment ಇರುತ್ತದೆ. ಅದರಲ್ಲಿ ಕೂತು ಇಡೀ ದಿನ ತಿರುಗಿದರೆ ದಿನಕ್ಕೆ 25-30 ಡಾಲರ್ ಬಾಡಿಗೆ. ನಾವೂ ಅಂಥ ಒಂದು ಟ್ಯಾಕ್ಸಿ ಹಿಡಿದು ಬೆಳಿಗ್ಗೆಯೇ ಹೊರಟೆವು. ಕಾಂಬೋಡಿಯಾದ ಎಲ್ಲ ಟ್ಯಾಕ್ಸಿ ಡೈವರ್‌ಗಳಿಗೂ ಒಂದು ಕೋಟ್ compulsory. ಅದರ ಹಿಂಬದಿಯಲ್ಲೊಂದು ನಂಬರ್ ಕೂಡಾ ಇರುತ್ತದೆ. ನಮ್ಮ ಟ್ಯಾಕ್ಸಿ ಡ್ರೈವರ್‌ ತುಂಬ ನಗುಮುಖದ ಜೀವಿ. ಒಂದು ಕ್ಷಣಕ್ಕೂ ಹುಬ್ಬು ಸಹ ಗಂಟಿಕ್ಕಲಿಲ್ಲ. ಒಂದೇ ತಾಪತ್ರಯವೆಂದರೆ ಭಾಷೆಯದ್ದು. ಹರಕು ಮುರುಕು ಇಂಗ್ಲೀಷ್‌ನಲ್ಲಿ ಒದ್ದಾಡಿಕೊಂಡು communicate ಮಾಡಬೇಕು. ಅದು ಬಿಟ್ಟರೆ ಉಳಿದದ್ದೆಲ್ಲ ಸುಸೂತ್ರ. ನಮ್ಮ ಜೊತೆ ಕೂತು ಕಾಫಿ ಕುಡಿಯುವಿಯಂತೆ ಬಾ ಅಂತ ಕರೆದಾಗಲೂ ತುಂಬ ಸಂಕೋಚದಿಂದ ನಮ್ಮ ಜೊತೆಗೂಡಿದಂಥ ನಾಚಿಕೆಯ ಮನುಷ್ಯ. ಇಡೀ ದಿನ ಅವನ ಜೊತೆ ಓಡಾಡಿದಾಗಲೂ ಒಂದೇ ಒಂದು ಜಗಳವಿಲ್ಲ. ಬೆಂಗಳೂರಿನ ಆಟೋದವರ ಜೊತೆ ಎಷ್ಟು ಚಂದಕ್ಕೆ ಜಗಳವಾಡುತ್ತಾ ಬದುಕುವ ನನಗೆ ಥೂ ಇದೆಂಥಾ ಜೀವನ! ಒಂದು ಜಗಳವಿಲ್ಲ, ಕದನವಿಲ್ಲ ಅನ್ನಿಸಿಬಿಟ್ಟಿತು! ಅದರಲ್ಲಿ ಕೂತು ಬೆಳಿಗ್ಗೆಯೇ ತ ಪ್ರೋಮ್ ನೋಡಲು ಹೊರಟೆವು. ಈ ಸಲ ನಾವು ಪೂರ್ವದ ಬಾಗಿಲಿನಿಂದ ಒಳ ಹೊಕ್ಕೆವು. ಎದುರಾದ ಕಲ್ಲಿನ ಗೋಡೆಗಳ ಮಧ್ಯೆ ಒಳ ಸಾಗಿದಾಗ ಜೊತೆಯಲ್ಲಿದ್ದ ಗೈಡ್ ಕಲ್ಲಿನಲ್ಲಿ ಜೋಡಿತವಾಗಿದ್ದ ಹದ್ದು ಈ ರಾಜಮನೆತನದ ಲಾಂಛನ ಅಂತ ಹೇಳಿ ಆ ಜಾಗ ತೋರಿಸಿದಾಗ ಕಾಂಬೋಡಿಯಾದ ಎಲ್ಲ ದೇಗುಲಗಳಲ್ಲೂ ಇದ್ದಂತೆ ಯಾವ ಯಾವುದೋ ಕಲ್ಲುಗಳನ್ನು ಎಲ್ಲೆಲ್ಲೋ ಜೋಡಿಸಿ ಹದ್ದು ಚೂರು ಚೂರಾಗಿತ್ತು! ಇಡೀ ಕಾಂಬೋಡಿಯಾದ ಎಲ್ಲ ದೇಗುಲಗಳಲ್ಲೂ ಈ ರೀತಿಯ ಪುನರ್ನಿರ್ಮಾಣದ ಅವಾಂತರಗಳೇ ಕಾಣುತ್ತವೆ… ಅದು ಅಜಾಗರೂಕತೆಯಿಂದ ಆಗಿದ್ದೋ ಅಥವಾ ಸಿಕ್ಕಾಪಟ್ಟೆ ಅಗಾಧ ಕಟ್ಟಡಗಳಾದ್ದರಿಂದ ಈ ರೀತಿಯ ಎಡವಟ್ಟುಗಳು ಆಗೇಬಿಡುತ್ತವೋ ಏನೋ ಗೊತ್ತಿಲ್ಲ.

ಈ ತ ಪ್ರೋಮನ್ನು ಬೆಳಗಿನ ಹೊತ್ತು ಆರಾಮದ ಮನಃಸ್ಥಿತಿಯಲ್ಲಿ ನೋಡಿ ಸುಸ್ತಾಗಿ ಹೋದೆ. ಸಿಕ್ಕಾಪಟ್ಟೆ ದೊಡ್ಡ ದೇವಸ್ಥಾನ. ಹಿಂದಿನ ದಿನ ಓಡು ನಡಿಗೆಯಲ್ಲಿ ನೋಡಿದಾಗ ಇಷ್ಟು ದೊಡ್ಡದಿದೆ ಅನ್ನಿಸಿರಲೇ ಇಲ್ಲ. ಮುಖ್ಯ ದೇಗುಲದ ಹತ್ತಿರ ಬರುವ ದಾರಿಯಲ್ಲಿ ಒಂದಿಷ್ಟು ಜನ ಕಣ್ಣಿಲ್ಲದವರು, ಕಾಲು-ಕೈಗಳನ್ನು ಕಳೆದುಕೊಂಡವರು ಸಂಗೀತ ಹಾಡುತ್ತ, ವಾದ್ಯ ನುಡಿಸುತ್ತ ಕೂತಿದ್ದರು. ಅವರ ಮುಂದೆ ಒಂದು ಬೋರ್ಡ್ ‘ನಾವು ಭಿಕ್ಷುಕರಲ್ಲ. ಲ್ಯಾಂಡ್ ಮೈನ್ explosion ಗೆ ತುತ್ತಾಗಿ ಈ ಸ್ಥಿತಿಗೆ ಬಂದಿದ್ದೇವೆ. ನಮ್ಮಿಂದ ಈಗ ಕೆಲಸ ಮಾಡಲಾಗದು. ನೀವು ಈಗ ಸಹಾಯ ಮಾಡಿ ನಮ್ಮ ಮಕ್ಕಳನ್ನು ಒಂದು ಸುಸ್ಥಿತಿಗೆ ತರಲು ಸಹಾಯ ಮಾಡಿದರೆ ಮುಂದಿನ ಪೀಳಿಗೆಯಿಂದ ನಾವು ನಮ್ಮ ಕಾಲ ಮೇಲೆ ನಿಲ್ಲುತ್ತೇವೆ. ಅಲ್ಲಿಯವರೆಗೆ ಸಹಾಯ ಮಾಡಿ’ ಎಂದಿತ್ತು. ಯಾಕೋ ಆ ಬೇಡಿಕೆಯಲ್ಲಿದ್ದ ಪ್ರಾಮಾಣಿಕತೆ ಇವತ್ತಿಗೂ ನೆನಪಾಗುತ್ತಿರುತ್ತದೆ.

ಆ ದೇಗುಲದ ಪುನರ್ನಿರ್ಮಾಣ ಕಾರ್ಯವನ್ನು ಭಾರತ ಮತ್ತು ಕಾಂಬೋಡಿಯ ಒಟ್ಟಾಗಿ ಸೇರಿ ನಡೆಸುತ್ತಿವೆ. ಆವರಣವೇ ವಿಶಾಲತೆಯ ಪ್ರತೀಕದಂತಿತ್ತು. ಆದರೆ ಎಲ್ಲೆಲ್ಲೂ ಕಿತ್ತು ಬಿಸುಟ ಕಲ್ಲುಗಳ ಒಂದೊಂದು ದೊಡ್ಡ ರಾಶಿ. ಸುಮಾರು ಕಲ್ಲುಗಳು ಶಿವಲಿಂಗದ ಪೀಠದಂತೆ ಕಂಡವು. ಮುಂಚೆ ಇದ್ದ ವಿಗ್ರಹಗಳು ಕಾಣೆಯಾಗಿ ಬರೀ ಪೀಠಗಳು ಉಳಿದಿವೆಯೋ ಏನೋ ಗೊತ್ತಾಗಲಿಲ್ಲ. ಇಡೀ ಆವರಣದ ತುಂಬ ಅಂದಾಜು ನನ್ನ ಇಪ್ಪತ್ತರಷ್ಟು ಎತ್ತರದ ದೂದಿ ಮರಗಳ ರಾಶಿ. ಅವುಗಳು ಇಲ್ಲಿನ ದೇವಸ್ಥಾನಗಳನ್ನು ಇಡಿ ಇಡಿಯಾಗಿ ಆವರಿಸಿ ಕೊಂಡಿರುವ ರೀತಿ ನಿಜಕ್ಕೂ ಮೋಹಕ.

ಇಡೀ ಕಾಂಬೋಡಿಯಾದಲ್ಲಿ ಮೊದಲಿಗೆ 3000 ದೇಗುಲಗಳಿದ್ದವಂತೆ. ಅವುಗಳೆಲ್ಲವೂ ಇದೇ ರೀತಿ ಕಾಡುಗಳ ಅಡಿಯಲ್ಲೇ ಸಿಲುಕಿದ್ದವಂತೆ. ಹೆನ್ರಿ ಮೌಹಟ ಅವುಗಳನ್ನು ಪ್ರಪಂಚಕ್ಕೆ ತೋರಿಸಿದ ನಂತರದ ವರ್ಷಗಳಲ್ಲಿ ಸುಮಾರು ದೇಗುಲಗಳನ್ನು ಆ ಮರಗಳ ತೆಕ್ಕೆಯಿಂದ ಬಿಡಿಸಿ ಮತ್ತೆ ಕಟ್ಟಿದ್ದಾರೆ. ಆದರೆ ತ ಪ್ರೋಮ್ ಒಂದು ಜಾಗದಲ್ಲಿ ಮಾತ್ರ ಅದು ಮೊದಲಿನಿಂದ ಹೇಗಿತ್ತೋ ಆ ಸ್ಥಿತಿಯಲ್ಲೇ ಬಿಟ್ಟಿದ್ದಾರೆ. ಹಾಗಾಗಿ ಎತ್ತೆತ್ತ ನೋಡಿದರೂ ಮನುಷ್ಯನ ನಿಲುಕಿಗೆ ಬಾರದಷ್ಟು ದಪ್ಪ ದಪ್ಪ ಬೇರುಗಳ ರಾಶಿ. ಅದು ದೇಗುಲಗಳ ಮೇಲೆಲ್ಲ ಹಾವಿನಂತೆ ಹರಿದು ನಿಂತಿದೆ. ಆ ಜಾಗವನ್ನು ಮಾತ್ರ ನೋಡಲು ಎರಡು ಕಣ್ಣು ಸಾಲದು. ಇಡೀ ಆವರಣದಲ್ಲಿ ಒಂದು ರೀತಿಯ mystic ವಾತಾವರಣವಿದೆ. ಆ ದೇಗುಲದ ಚಿತ್ರ ಬಿಡಿಸುತ್ತ ಕೂತ ಕಲಾವಿದ, ಬಳೆಗಳನ್ನು ಮಾರಿ ಸುಸ್ತಾಗಿ ಪಾಳು ಆವರಣದಲ್ಲಿ, ಆ ಜನಜಂಗುಳಿಯಲ್ಲಿ ಮೈ ಮರೆತು ಮಲಗಿದ್ದ ವ್ಯಾಪಾರಿ, ಆ ಪುರಾತನ ಪಳಿಯುಳಿಕೆಗಳ ವಿರುದ್ಧ ಮುಖವೆನ್ನುವಂತೆ ಅಲ್ಲಲ್ಲಿ ಓಡಾಡಿ ಭಿಕ್ಷೆ ಕೇಳುತ್ತಿದ್ದ ಮುದ್ದು ಮಕ್ಕಳು ಎಲ್ಲ ಆ ಜಾಗಕ್ಕೆ ಇನ್ನಿಷ್ಟು ನಿಗೂಢತೆ ತಂದಿಟ್ಟಿದ್ದವು. ಇಡೀ ಆವರಣ ಆರಾಮವಾಗಿ ನೋಡಬೇಕೆಂದರೆ ಮೂರು ದಿನವಾದರೂ ಬೇಕು ಅನ್ನಿಸುತ್ತದೆ. ನಮ್ಮದು ಅದೇ ಕೊನೆಯ ದಿನವಾದ್ದರಿಂದ ಮಧ್ಯಾಹ್ನದವರೆಗೂ ಅಲ್ಲೇ ಬೀಡು ಬಿಟ್ಟೆವು. ನಮ್ಮ ಟೂರ್ ಗೈಡ್ ಪಾಪ ಅದೆಷ್ಟು ಸಾವಿರ ಸಲ ಅದನ್ನೇ ನೋಡಿದ್ದನೋ… ನಾವು ಕೂತಲ್ಲೇ ಕೂತು, ನಿಂತಲ್ಲೇ ನಿಂತು ಸಾಗುವಾಗ ಸುಸ್ತಾಗಿ ಯಾವುದೋ ಕಲ್ಲಿನ ಮೇಲೆ ಬಸವಳಿದು ಕೂತಿರುತ್ತಿದ್ದ. ನಾವು ಆಯ್ತು ಎಂದ ಮೇಲೆ ಮತ್ತೆ ನಮ್ಮ ಹಿಂದೆ ಎದ್ದು ಬರುತ್ತಿದ್ದ. ದಿನವೂ ಎದುರಾಗುವ- ಜೊತೆಗೆ ಅದೇ ಅವನ ಕೆಲಸವೂ ಆಗಿಹೋಗಿರುವಂಥ ಜಾಗದಲ್ಲಿ ಅವನಿಗೆ ವಿಶೇಷ ಆಕರ್ಷಣೆ ಇರುವುದಾದರೂ ಹೇಗೆ? ತ ಪ್ರೋಮ್ ದೇಗುಲ ಅಂಗ್‌ಕೋರ್ ವಾಟ್‌ನ ಹಾಗೆ ಎತ್ತರದಲ್ಲಿ ಅಗಾಧವಾಗಿಲ್ಲ. ಅದರ ಅಗಾಧತೆ ವಿಸ್ತೀರ್ಣಕ್ಕೆ ಮಾತ್ರ ಸಂಬಂಧಿಸಿದ್ದು. ಎಲ್ಲ ಕಡೆ ಹರಡಿ ನಿಂತ ದೇಗುಲದ ಎತ್ತರ ಮಾತ್ರ ಮಾಮೂಲಿನಷ್ಟೇ. 12 ನೆಯ ಶತಮಾನದಲ್ಲಿ ಮೊದಲಿಗೆ ಈ ದೇವಸ್ಥಾನಗಳನ್ನು ಕಟ್ಟಲು ಶುರು ಮಾಡಿದಾಗ ಅಗಾಧತೆಯ ಹುಚ್ಚು ಇನ್ನೂ ಹತ್ತಿರಲಿಲ್ಲವೇನೋ ಅನಿಸಿತು. ಸಿಕ್ಕ ಸಿಕ್ಕ ಕಲ್ಲು ಮಣ್ಣನ್ನೂ ಸ್ಪರ್ಶಿಸಿ ಕೊನೆಗೊಮ್ಮೆ ವಿದಾಯ ಹೇಳುವ ಸಮಯ ಬಂದಾಗ ಇಷ್ಟು ವರ್ಷ ಇಂಥದ್ದೊಂದು ಕನಸು ಎದೆಯಲ್ಲಿ ಇತ್ತು. ಹಾಗಂತ ಬದುಕಿಗೆ ಅರ್ಥವಿತ್ತು. ಇನ್ನು ಮುಂದೆ ಈ ಕನಸು ಇಲ್ಲ ಅಂದಮೇಲೆ ಮತ್ತೆ ಯಾವುದಾದರೂ ಹೊಸ ಕನಸನ್ನು ಹುಟ್ಟು ಹಾಕಿಕೊಳ್ಳದಿದ್ದರೆ ಬದುಕು ನೀರಸವಾಗಿ ಬಿಡುತ್ತದೇನೋ ಅನ್ನಿಸಿತು…

***

ನೆನಪಾಗುವ ಇನ್ನೊಂದಿಷ್ಟು ವಿಷಯಗಳನ್ನು ಹೇಳಬೇಕು ಅನ್ನಿಸುತ್ತಿದೆ. ಮೊದಲನೆಯದಾಗಿ, ಅಂಗ್‌ಕೋರ್ ವಾಟ್‌ನ ಆವರಣದಲ್ಲಿ ಮೈನ ಆಕಾರದ ಮೂರರಷ್ಟು ದಪ್ಪ ತಲೆಯ ಮಕ್ಕಳಿಬ್ಬರನ್ನು ತೊಡೆಯ ಮೇಲೆ ಇಬ್ಬರು ತಾಯಂದಿರು ಮಲಗಿಸಿಕೊಂಡು ಭಿಕ್ಷಕ್ಕೆ ಇಳಿದಿದ್ದು. ಆ ಮಕ್ಕಳು ಎಚ್ಚರದ ಸ್ಥಿತಿಯಲ್ಲೂ ಇರದೇ ಯಾವುದೋ ಅರೆನಿದ್ರಾವಸ್ಥೆಯಲ್ಲಿ ಇದ್ದುದನ್ನು ಕಂಡು ಎದೆ ಝಲ್ಲೆಂದಿತು. ಕ್ರೌರ್ಯಕ್ಕೆ ತುಂಬ ಮುಖಗಳಿವೆ ಅನ್ನುವುದು ಮತ್ತೊಮ್ಮೆ ಅರ್ಥವಾದ ಘಳಿಗೆ ಅದು.

ಎರಡನೆಯ ವಿಷಯವೆಂದರೆ, ನಾವು ಕೊನೆಯ ಸಲ ಅಂಗ್‌ಕೋರ್ ವಾಟ್ ನೋಡುವ ಉದ್ದೇಶದಿಂದ ಅಲ್ಲಿಗೆ ಹೋದಾಗ ಗೋಪುರದ ಮೇಲೆ ಹತ್ತುವ ಸಮಯ ಮೀರಿ ಹೋಗಿತ್ತು. ಹಾಗಾಗಿ ನಮ್ಮನ್ನು ಹತ್ತಲು ಬಿಡಲಿಲ್ಲ. ನಿರಾಸೆಯಿಂದ ಅಲ್ಲೇ ಸುಮ್ಮನೆ ಕೂತಿದ್ದೆವು. ಸೂರ್ಯಾಸ್ತದ ಘಳಿಗೆಯಲ್ಲಿ ದೇಗುಲ ಹಳದಿ ಬಣ್ಣಕ್ಕೆ ತಿರುಗಿ ಫಳ ಫಳಿಸುವುದನ್ನು ನೋಡುತ್ತಾ. ಹಾಗಿರುವಾಗಲೇ ಯಾವುದೋ ದೇಶದ ಒಂದು ಜೋಡಿ ಅಲ್ಲಿ ಹತ್ತಲು ಹೋಯಿತು. ಆ ಸೆಕ್ಯುರಿಟಿ ಮನುಷ್ಯ ಒಬ್ಬೊಬ್ಬರನ್ನು ಒಳಬಿಡಲು ಹತ್ತು ಡಾಲರ್ ಕೇಳುತ್ತಿದ್ದ. ಅದಕ್ಕೆ ಅವರು ತುಂಬ ಜಾಸ್ತಿಯಾಯಿತು, 5 ಡಾಲರ್ ಕೊಡುವೆವು ಅಂದಾಗ ‘ನೋಡಿ ನಿಮ್ಮಿಷ್ಟ, ನಾಳೆ ಮತ್ತೆ ಬರಬೇಕೆಂದರೆ 40 ಡಾಲರ್ ಖರ್ಚಾಗುತ್ತದೆ. ಇವತ್ತಾದರೆ ಇಪ್ಪತ್ತೇ’ ಅಂತ ವ್ಯವಹಾರಕ್ಕಿಳಿದಿದ್ದ! ಮೂರನೆಯ ವಿಷಯವೆಂದರೆ, ವಾಪಸ್ ಬರುವಾಗ ಬಾರ್ಡರಿನಲ್ಲಿ ವೀಸಾ ಆಫೀಸಿನ ಎದುರು ಕ್ಯೂನಲ್ಲಿ ನಿಂತಾಗ ಫಾರ್ಮ್ ಕೊಡುವವನು ‘ಬೇಗ ಕೆಲಸ ಆಗಬೇಕೆಂದರೆ ಒಬ್ಬೊಬ್ಬರಿಗೆ 1000 ಬಹ್ತ್ ಕೊಡಿ’ ಅಂತ ಆರಾಮವಾಗಿ offer ಕೊಡುತ್ತಾ ಕೂತಿದ್ದು! ನಾವು ಪರವಾಗಿಲ್ಲ ಮಾರಾಯ, ನಮಗೇನೂ ಆತುರವಿಲ್ಲ ಅಂತ ಮಾಮೂಲಿ ಕ್ಯೂನಲ್ಲೇ ನಿಂತು ಕಾಂಬೋಡಿಯಾದಿಂದ ಆಚೆ ಬಿದ್ದಿದ್ದು. ನಮ್ಮ ಭವ್ಯ ಭಾರತದಲ್ಲೇ ಇದ್ದೀವೇನೋ ಅಂತ ಭ್ರಮೆ ಬಂದಿತ್ತು ಆ ಘಟನೆಗಳು ನಡೆಯುವಾಗ…

ಇಡೀ ಕಾಂಬೋಡಿಯಾದಲ್ಲಿ ಇದ್ದಿದ್ದು ಐದು ದಿನ. ಇರುವಷ್ಟು ದಿನವೂ ಒಂದು ನಿಮಿಷವೂ ಬಿಡದೇ ಓಡಾಡಿದ್ದೆವು. ಎಲ್ಲವನ್ನೂ ನೋಡಿದ್ದೆವು. ಆದರೆ, ಹಿಂತಿರುಗಿ ಬಂದ ನಂತರ ಈಗ ಅನ್ನಿಸುತ್ತದೆ, ನೋಡಿದ್ದು ಏನೇನೂ ಸಾಲಲಿಲ್ಲ ಎಂದು. ಭಗವಂತಾ! ನೀನು ಅದೇನೋ ಹಣೆಬರಹವನ್ನೆಲ್ಲ ನಾವು ಹುಟ್ಟಿದಾಗಲೇ ಬರೆದಿರುತ್ತೀಯಂತಲ್ಲ… ನನ್ನ ಹಣೆಯಲ್ಲಿ ಮತ್ತೊಂದು ಸಲ ಕಾಂಬೋಡಿಯಾ ನೋಡಲಿ ಅಂತ ಬರೆದಿರು ಅನ್ನುವ ಪ್ರಾರ್ಥನೆ ನನ್ನದು…