ನಾವು ಗದ್ದೆ ಕೆಲಸ ಮಾಡುತ್ತ ಹೋದಂತೆಲ್ಲಾ ಬಿಸಿಲು ಮತ್ತಷ್ಟು ಸುರಿಯುತ್ತಲೇ ಇತ್ತು. ಕೆಸರಿನ ಪರಿಮಳದಲ್ಲಿ ಪೇಟೆಯ ವಾಸನೆ ಮರೆತುಹೋಯ್ತು. ಬದುಕು ಎಷ್ಟು ಬೋರು, ಎಂದು ಬೇಜಾರು ಮಾಡಿಕೊಂಡಿದ್ದು, ಬದುಕಲ್ಲಿ ಹೊಸತನವೇ ಇಲ್ಲ ಅಂತ ನೊಂದುಕೊಂಡಿದ್ದು, ಟೆಕ್ನಾಲಜಿಗಳು ಅದೆಷ್ಟು ಸುಖಕೊಟ್ಟರೂ ಕೊನೆಗದು ಮೂಡಿಸುವ ಅಶಾಂತಿಗೆ ಬೆಂದು ತತ್ತರಿಸಿದ್ದು, ಇವೆಲ್ಲಾ ಸಂಕಟಗಳು ಆ ಕೆಸರಿನಲ್ಲಿ ಹೂತು ಹೋಯ್ತು. ನಾವು ಆ ಕ್ಷಣ ಆಧುನೀಕತೆಯ ಸಂಬಂಧವನ್ನೇ ಕಡಿದುಕೊಂಡು ಅದೆಷ್ಟು ಖುಷಿಯಾಗಿದ್ದೆವೆಂದರೆ ಮೈಗೆಲ್ಲಾ ಕೆಸರು, ಹಣೆಗೆಲ್ಲಾ ಬೆವರು ಮೂಡಿದಾಗ ಸಿಗುವ ಆನಂದ ಬೇರೆ ಯಾವ ಲೋಕದಲ್ಲಿಯೂ ಸಿಗುವುದಿಲ್ಲ ಅನ್ನಿಸುತ್ತಿತ್ತು.
ಪ್ರಸಾದ್ ಶೆಣೈ ಬರೆಯುವ ಮಾಳ ಕಥಾನಕದ ಹದಿನಾಲ್ಕನೆಯ ಕಂತು.

 

“ಇಲ್ಲಿ ಮಳೆ ಬಂದರೆ ನಾವು ಮನೆಯಿಂದ ಹೊರಗೆ ಬರಲು ಸಾಧ್ಯವೇ ಇಲ್ಲ,ಬೆಟ್ಟ ಭಯಂಕರವಾಗಿ ಕಾಣುತ್ತದೆ, ನಮ್ಮ ತೋಟವೆಲ್ಲಾ ಮುಳುಗಿಯೇ ಹೋಗುವಂತೆ ಕಾಣುತ್ತದೆ. ಆದರೆ ಯಾವತ್ತೂ ಮುಳುಗಿ ಹೋಗಿಲ್ಲ, ಆ ದೊಡ್ಡ ಬೆಟ್ಟವೇ ನಮಗೆ ರಕ್ಷೆಯಾಗಿದೆ. ನೋಡಿ, ಅಲ್ಲಿ ದೂರದಲ್ಲಿ ನೋಡಿ, ಅಲ್ಲೊಂದು ಸಪೂರದ ಕಾಲುವೆಯಂತೆ ಕಾಣ್ತಿದೆ. ಅಲ್ಲಿಂದ ನೀರು ಬೀಳೋದು ನೋಡುತ್ತಿದ್ದರೆ, ಯಾರಿಗಾದ್ರೂ ಒಮ್ಮೆ ಭಯವಾಗ್ತದೆ, ಮಳೆಗಾಲದಲ್ಲಿ ಒಮ್ಮೆ ಬಂದು ನೋಡಿ”.

ನಿಭಿಡ ಕಾಡಿನಲ್ಲಿದ್ದ ಪುಟ್ಟ ಮನೆಯ ಆನಂದ ಗೌಡರು ಬೆಟ್ಟವನ್ನೇ ನೋಡುತ್ತಾ ಕೊನೆಗೆ ಮೌನವಾಗಿ ನಮ್ಮ ಮುಖವನ್ನೇ ನೋಡತೊಡಗಿದರು. ಆ ಭಾರೀ ದೊಡ್ಡ ಬೆಟ್ಟವೂ, ಅದರ ಕೆಳಗೆ ಒತ್ತೊತ್ತಾಗಿ ತುಂಬಿಕೊಂಡ ದೊಡ್ಡ ಕಾಡೂ ನಮ್ಮನ್ನೇ ದುರುಗುಟ್ಟಿ ನೋಡುತ್ತಿದ್ದವು. ಆ ಬೆಳಗ್ಗಷ್ಟೇ ಎಷ್ಟೋ ಮೈಲು ಮಣ್ಣಿನ ರಸ್ತೆಯನ್ನೂ, ಕುರುಚಲು ಕಾಡುಗಳನ್ನೂ ದಾಟಿ, ಏರು ಏರಾಗಿದ್ದ ದಾರಿಯನ್ನು ಹುಚ್ಚರಂತೆ ಕ್ರಮಿಸುತ್ತಾ, ನಮ್ಮ ಲಾಟ್ ಪೂಟ್ ಬೈಕ್ ಅನ್ನು ಆ ದಾರಿಯ ದೊಡ್ಡ ಬಂಡೆಯ ಕಲ್ಲುಗಳಿಗೂ, ಹುಲ್ಲಿನ ಕುಂಡೆಗಳಿಗೂ ತಾಗಿಸುತ್ತಾ, ಅಯ್ಯಬ್ಬಾ ಇಂತಹ ಹಾಳಾದ ದಾರಿಗೆ ಬೈಕೇರಿ ಬಂದೆವಲ್ಲಾ ನಮ್ಮಂತ ಅಂಡೆದುರ್ಸುಗಳು ಬೇರೆ ಯಾರಾದರೂ ಇದ್ದಾರಾ ಅಂತ ನಮಗೆ ನಾವೇ ಶಪಿಸುವ ಹೊತ್ತಿಗೆ, ಏರಿನ ಕಲ್ಲೊಂದು ನರಪೇತಲ ನಾರಾಯಣನಂತಿದ್ದ ನನ್ನ ಬೈಕ್ ಗೆ ತಾಗಿ ಬೈಕ್ ಸಹಿತ ಬಿದ್ದುಬಿಟ್ಟೆ. ಅಷ್ಟೊತ್ತಿಗೆ ಆ ಊರಿನ ಕೊನೆಯ ಮನೆಯ ಹುಡುಗ ಪ್ರವೀಣ ಬಂದು ನಮ್ಮ ಬೈಕ್ ಗಳನ್ನು ಹೇಗೋ ಏರು ದಾಟಿಸಿ ಆನಂದ ಗೌಡರ ಮನೆಯ ಅಂಗಳಕ್ಕೆ ಮುಟ್ಟಿಸಿದ್ದ. ಆ ಮನೆಯ ಅಂಗಳಕ್ಕೆ ಬಂದದ್ದೇ, ಬೈಕ್ ನಲ್ಲಿ ಬಿದ್ದಿದ್ದು, ಕಾಲಿಗೆ ಗಾಯವಾಗಿದ್ದು, ದಾರಿಗೆ ಬೈದಿದ್ದು ಎಲ್ಲವೂ ಆ ಪುಟ್ಟ ಮನೆಯ ಮೋಹಕತೆಯ ನಡುವೆ, ಅಲ್ಲೇ ಆಕಾಶದ ತುಟಿಗೆ ಇನ್ನೇನು ಮುತ್ತು ಕೊಟ್ಟೇ ಬಿಡ್ತೀನಿ ಎನ್ನುವಂತೆ ನಾಚಿ ನಾಚಿ ಮತ್ತೂ ಹಸುರಾಗಿದ್ದ ಬಲ್ಲಾಳರಾಯನ ದುರ್ಗದ ಚಂದದ ನಡುವೆ ಮರೆತೇ ಹೋಯ್ತು.

ಬಲ್ಲಾಳರಾಯನ ದುರ್ಗದ ಕೆಳಗೆ ತಣ್ಣಗೇ ಪವಡಿಸಿರುವ ಕೊನೆಯ ಊರು ಪರ್ಲ. ನೋಡಲು ನಮ್ಮ ಮಾಳ ಕಾಡಿನಂತೆಯೇ ರಮ್ಯವಾಗಿದ್ದರೂ, ಒಮ್ಮೆ ಇಲ್ಲಿ ನಿಂತು ಸುತ್ತಲೂ ನೋಡಿದರೆ, ಆಗಷ್ಟೇ ಆಕೆಯ ಗುಳಿಕೆನ್ನೆಯಲ್ಲಿ ಆತ ಕೊಟ್ಟ ಚೊಚ್ಚಲ ಮುತ್ತಿನ ಅಚ್ಚಿನಂತೆ ಕಾಣುತ್ತಿರುವ ಊರಿದು. ಅಮ್ಮನ ಹೆಗಲಿನಲ್ಲಿ ಕೂತು ಹಗಲನ್ನೇ ಬೆರಗಿನಿಂದ ನೋಡುವ ಎಳೆ ಪುಟ್ಟನ ಕಣ್ಣಿನ ಬೆಳಕಿನಂತ ಊರಿದು. ಎತ್ತರದಲ್ಲಿ ಒಂದೆರಡು ಹಂಚಿನ ಮನೆ, ತುಸು ತಗ್ಗಿನಲ್ಲಿ ದೊಡ್ಡ ದೊಡ್ಡ ಪೈರು ತುಂಬಿಕೊಂಡ ಗದ್ದೆ, ಅಡಿಕೆ ತೋಟ, ಆ ತೋಟದಲ್ಲೇ ನಿಂತು ನೋಡಿದರೆ ಇನ್ನೂ ಎತ್ತರೆತ್ತರಕ್ಕೆ, ಬಿಮ್ಮೆಂದು ನಿಂತಿರುವ ಬಲ್ಲಾಳ ರಾಯನ ದುರ್ಗದ ಹಸಿರು ಕಲ್ಲುಗಳು, ಬೆಳಗಿನ ಎಳೆ ಬಿಸಿಲಿಗೆ ಆಗ ತಾನೇ ಜಾತ್ರೆಯಲ್ಲಿ ಕೊಂಡು ಮೂಗಿಗೆ ಚುಚ್ಚಿಸಿಕೊಂಡ ಮೂಗುತಿಯಂತೆ ಕಾಣುತ್ತಿರುವ ನಿಭಿಡ ಕಾಡಿನ ಬೃಹತ್ ಮರಗಳು, ಅಲ್ಲೇ ದೂರದಲ್ಲಿ, ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ ಎನ್ನುವ ಭಾವದಲ್ಲಿ ಕಳೆದೇ ಹೋಗಿ, ತಾನು ಹಾಡುವುದು ಎಷ್ಟೋ ಕಿವಿಗಳಿಗೆ ಕೇಳಿಸುತ್ತಿದೆ ಎನ್ನುವ ಸತ್ಯ ಗೊತ್ತಾಗದೇ ಸುರಿಯುತ್ತಿರುವ ಜಲಪಾತದ ಹಾಡು, ಅಬ್ಬಾ ಆವತ್ತೇ ಒಮ್ಮೆ ಹೇಳಿದೆ ಅಲ್ವಾ? ಕಾಡನ್ನು, ಅಲ್ಲಿನ ಚೆಂದವನ್ನು ಕಟ್ಟಿಕೊಡೋಕೆ ಸಾವಿರ ಪದಗಳು, ಪದ್ಯಗಳು, ಚಿತ್ರಗಳೂ ಎಲ್ಲವೂ ಸೋಲುತ್ತದೆ ಅಂತ. ಈಗಲೂ ಅಷ್ಟೇ, ಬಲ್ಲಾಳರಾಯನ ದುರ್ಗದ ಕೆಳಗಿರುವ ಈ ಊರಿನ ಕುರಿತು ವರ್ಣಿಸಲು ಸಾಧ್ಯವೇ ಇಲ್ಲ.

ಆನಂದ ಗೌಡರು, ನಾವು ಅಂಗಳದಲ್ಲಿ ಕೂತ ಕೂಡಲೇ ದುರ್ಗದ ವರ್ಣನೆ ಏನೋ ಶುರುಮಾಡಿಬಿಟ್ಟರು, ಆದರೆ ಆ ದುರ್ಗದ ಅಗಾಧತೆಯಲ್ಲಿಯೇ ಅಚ್ಚರಿಯಾಗಿದ್ದ ನನಗೆ, ಆನಂದ ಗೌಡರ ಮಾತುಗಳ ಬಳಿ ಹೋಗಲು ತುಂಬಾ ಹೊತ್ತು ಬೇಕಾಯಿತು. ದಟ್ಟ ಕಾಡಲ್ಲಿ ಬಿಸಿ ಬಿಸಿ ದೋಸೆಯ ಮೇಲೆ ಬಿದ್ದ ಬೆಣ್ಣೆ ಮುದ್ದೆಯಂತೆ ಕಾಣುತ್ತಿತ್ತು ಆನಂದ ಗೌಡರ ಪುಟ್ಟ ಮನೆ, ಅಂಗಳದ ನೆಲಕ್ಕೆ ಸೆಗಣಿ ಸಾರಿಸಿ ಅಂಗಳಕ್ಕೆ ವಿಚಿತ್ರ ಪರಿಮಳ ಒದಗಿತ್ತು. ಅಲ್ಲೇ ರಾಶಿ ಬಿದ್ದು ಒಣಗಿಕೊಳ್ಳುತ್ತಿದ್ದ ಅಡಿಕೆ ರಾಶಿಯ ನಡುವೆ ಬೆಳಗ್ಗೆ ಸುರಿದಿದ್ದ ಇಬ್ಬನಿಯೊಂದು ಬಿಸಿಲಿಗೆ ನಾಚಿ ನೀರಾಗಿ ಹೋಗುತ್ತಿತ್ತು. ಸುಮಾರು ೪೫ ವಯಸ್ಸಿನ ಆನಂದ ಗೌಡರು, ಅವರ ಹೆಂಡತಿ ಹಾಗೂ ಪಕ್ಕದದ ಮನೆಯ ಹುಡುಗ ಪ್ರವೀಣ, ನಾವು ಸುತ್ತಲೂ ಕಾಡು ನೋಡುತ್ತಿರುವುದನ್ನೂ, ನಮ್ಮ ಕಣ್ಣು ವಿಸ್ಮಯದಿಂದ ಹೊಳೆಯುತ್ತಿರುವುದನ್ನು ಸಂಭ್ರಮದಿಂದ ನೋಡುತ್ತಿದ್ದರು. ಅಷ್ಟೊತ್ತಿಗೆ ಆನಂದ ಗೌಡರ ಹೆಂಡತಿ ಒಂದು ತಂಬಿಗೆ ನೀರು ಕೊಟ್ಟರು, ಬೆಟ್ಟದಿಂದ ಹರಿದು ಬಂದ ಆ ತಣ್ಣಗಿನ ಸಿಹಿ ನೀರು ಕುಡಿದದ್ದೇ, ಇಡೀ ಕಾಡಿನ ಜೀವವೆಲ್ಲಾ ನಮ್ಮ ಜೀವದೊಳಗೆ ಹರಿದಂತಾಯಿತು.

“ನೋಡಿ ಆ ಬೆಟ್ಟ ಇಲ್ಲಿಂದ ನಿಮಗೆ ತುಂಬಾ ಹತ್ತಿರ ಕಾಣಬಹುದು, ಆದರೆ ಅದು ಇಲ್ಲಿಂದ ತುಂಬಾ ದೂರ ಇದೆ. ಈಗ ಬೆಳಗ್ಗಿನ ಮಂಜು ಇನ್ನೂ ಮಾಯವಾಗಿಲ್ಲ, ಹಾಗಾಗಿ ಬೆಟ್ಟ ಸರಿಯಾಗಿ ಕಾಣ್ತಿಲ್ಲ, ಆಮೇಲೆ ನೋಡಿ, ಬಿಸಿಲು ಬೀಳಲಿ ಎಷ್ಟು ಚಂದ ಕಾಣ್ತದೆ ನೋಡಿ” ಎನ್ನುತ್ತಾ ಗೌಡರು ಬಲ್ಲಾಳರಾಯನ ದುರ್ಗದ ಇನ್ನೊಂದು ತುದಿಯತ್ತ ಕೈ ತೋರಿಸಿದರು. ಅಲ್ಲಿ ಆಗ ತಾನೇ ಬೆಳಗಾಗುತ್ತಿದ್ದಂತೆ ಹಗುರನೇ ಸೂರ್ಯ ಮೂಡಿ ಬೆಟ್ಟದ ಹಸುರು ಚೂರೇ ಚೂರೇ ಕಾಣಿಸುತ್ತಿತ್ತು. ದುರ್ಗದ ದೊಡ್ಡ ದೊಡ್ಡ ಬಂಡೆಕಲ್ಲುಗಳು ಮಳೆಗಾಲದ ಪಾಚಿಗಳನ್ನೂ ಇನ್ನೂ ತಬ್ಬಿಕೊಂಡಿದ್ದವು. ನಾವು ನೋಡುತ್ತಲೇ ಇದ್ದಂತೆ, ಒಮ್ಮೆ ಜೋರಾದ ಗಾಳಿ ಬೀಸಿ, ಗಟ್ಟಿ ಹಂಡೆ ಸ್ನಾನ ಮಾಡಿ ಬಂದಾಗ ಮೈ ಯಿಂದ ಸಣ್ಣಗಿನ ಹೊಗೆ ಮೂಡುತ್ತದಲ್ಲಾ, ಅದೇ ರೀತಿ ದುರ್ಗದ ಅಲ್ಲಲ್ಲಿ ಬರುತ್ತಿದ್ದ ಮಂಜಿನ ಹೊಗೆ ಚೂರು ಚೂರು ಕರಗುತ್ತಾ ಕರಗುತ್ತಾ ಕೊನೆಗೆ ಬೆಟ್ಟ, ಮಂಜಿನ ಕೋಟೆಯಿಂದ ಆಗತಾನೇ ಬಿಡುಗಡೆಗೊಂಡು ಸ್ವಚ್ಛಂದ ಹಕ್ಕಿಯಂತಾಯಿತು. ಇನ್ನೂ ಹಾಗೇ ನೋಡುತ್ತಿರಬೇಕಾದರೆ ಆನಂದ ಗೌಡರ ಹೆಂಡತಿ, ತಿಂಡಿ ತಿನ್ನಿರೆಂದು, ಆಮೇಲೆ ಬೇಕಾದರೆ ಸುತ್ತಾಡಲು ಹೋಗಬಹುದೆಂದು ಮನೆಯ ಒಳ ಕರೆದರು.

ಆ ಕಾಡ ಮನೆಯ ಒಳಗಡೆ ಹಿತವಾದ ಮೌನವಿತ್ತು. ಕಾಡಿನ ಯಾವುದೋ ಮರದಿಂದಲೇ ಕಟ್ಟಿದ್ದ ಮನೆಯ ಮಾಡು, ಮಣ್ಣ ಗೋಡೆಯಲ್ಲಿ ಚೆಲ್ಲಿದ್ದ ಎಷ್ಟೋ ಕಾಲದ ಕಲೆಗಳು, ಅಸ್ತವ್ಯಸ್ತತೆಯಲ್ಲೂ ಹುದುಗಿಕೊಂಡಂತಿದ್ದ ಒಂಥರಾ ಶಿಸ್ತು, ಬಡತನದಲ್ಲಿಯೂ ಕಾಣುತ್ತಿದ್ದ ಮನೆಯ ಸಿರಿತನ, ಮನೆಯ ಗೋಡೆ, ಬಾಗಿಲು, ಜಂತಿ, ಕಿಟಕಿ ನೋಡಿದರೆ ಸಾಕು, ಮನೆಮಂದಿಗಳ ತ್ರಾಸದ ಜೀವನ, ಶ್ರಮದಿಂದ ಹರಿಯುವ ಅವರ ಬೆವರ ಹನಿಗಳು ಎಲ್ಲವೂ ಕಣ್ಣ ಮುಂದೆ ಬಂದು ನಿಲ್ಲುತ್ತಿತ್ತು. ಈಗ ಮನೆಗೆ ಇಬ್ಬರು ಅತಿಥಿಗಳು ಬಂದಿದ್ದಾರೆ, ಅವರನ್ನು ಸತ್ಕರಿಸಬೇಕು ಎನ್ನುವ ಸಂಭ್ರಮದಿಂದ ಕಾಣಿಸುತ್ತಿದ್ದ ಗಂಡ-ಹೆಂಡತಿಯ ಮುಖ, ನಮಗೆ ಸ್ವಾದಿಷ್ಟವಾದ ನೀರು ದೋಸೆ, ಚಹಾ ಕೊಟ್ಟ ಕೂಡಲೇ ಇನ್ನಷ್ಟು ಹೊಳೆಯಿತು. ಹಾಲು ಬೆರೆಸದಿದ್ದ ಕಪ್ಪಗಿನ ಟೀ ಕುಡಿದದ್ದೇ, ನೀರು ದೋಸೆಯನ್ನು ಚಟ್ನಿಗೆ ಅದ್ದಿ ತಿಂದದ್ದೇ, ಶ್ರಮದ ಕೈಗಳು ಮಾಡಿದ್ದ ಆ ತಿಂಡಿಗೆ ಹೊಟ್ಟೆ ಸಂತುಷ್ಟವಾಯಿತು. ನಾವು ತಿಂಡಿ ತಿಂದು ಮುಗಿಸಿ ಮತ್ತೆ ಅಂಗಳಕ್ಕೆ ಬಂದು, ಎರಡನೆಯ ಸುತ್ತು ಬಲ್ಲಾಳರಾಯನ ದುರ್ಗದ ಕಡೆ ನೋಡಿದೆವು. ಯಾರ ಗೋಜೂ ಬೇಡವೆಂದು ಗವ್ವೆಂದು ನಿಂತ ಆ ಹಸಿರು ಬೆಟ್ಟ, ಅಲ್ಲಲ್ಲಿ ಪುಟ್ಟ ಪುಟ್ಟ ಮರಗಳು, ದೂರದಲ್ಲೊಂದು ಚಿಟ್ಟೆಯಂತೆ ಹಾರುತ್ತಿರುವ ಹದ್ದು, ಒಮ್ಮೆಲೇ ಆ ಬೆಳಗಿನ ಮೌನದಲ್ಲಿ ಕೆಕ್ ಕೆಕ್ ಅಂತ ಹಕ್ಕಿಯೊಂದು ಎಷ್ಟೋ ಮೈಲು ದೂರದಿಂದ ಕೂಗಿದ ಸದ್ದು, ಗಾಳಿ ದೂರದಿಂದ ಹಾರುತ್ತ ಹಾರುತ್ತ ಈ ಪುಟ್ಟ ಊರಿಗೆ ಬರುತ್ತಿರುವ ಸದ್ದು, ಆ ಬೆಟ್ಟ ನೋಡುತ್ತಿದ್ದಂತೆಯೇ ಕಾಡು ಅನ್ನೋದು ಎಷ್ಟೊಂದು ಜೀವಂತವಾದ ಜಗತ್ತು, ಕಿವಿಕೊಟ್ಟರೆ ಕೇಳಿಸುವ ಸದ್ದುಗಳು ಎಷ್ಟೊಂದು ರೋಚಕ ಅನ್ನಿಸಲು ಶುರುವಾಯ್ತು.

ನೋಡಲು ನಮ್ಮ ಮಾಳ ಕಾಡಿನಂತೆಯೇ ರಮ್ಯವಾಗಿದ್ದರೂ, ಒಮ್ಮೆ ಇಲ್ಲಿ ನಿಂತು ಸುತ್ತಲೂ ನೋಡಿದರೆ, ಆಗಷ್ಟೇ ಆಕೆಯ ಗುಳಿಕೆನ್ನೆಯಲ್ಲಿ ಆತ ಕೊಟ್ಟ ಚೊಚ್ಚಲ ಮುತ್ತಿನ ಅಚ್ಚಿನಂತೆ ಕಾಣುತ್ತಿರುವ ಊರಿದು. ಅಮ್ಮನ ಹೆಗಲಿನಲ್ಲಿ ಕೂತು ಹಗಲನ್ನೇ ಬೆರಗಿನಿಂದ ನೋಡುವ ಎಳೆ ಪುಟ್ಟನ ಕಣ್ಣಿನ ಬೆಳಕಿನಂತ ಊರಿದು.

ಆನಂದ ಗೌಡರು ಹೋದ ವಾರ ತಾನೇ ಗದ್ದೆಯ ತುಂಬಾ ನೇಜಿ ನೆಟ್ಟಿದ್ದರು. ಈಗ ಅವರ ಗದ್ದೆಯಲ್ಲಿ ನೀರು ನಿಂತು ಆಕಾಶದ ನೀಲಿಯೆಲ್ಲಾ ಆ ಗದ್ದೆಗೆ ಬಿದ್ದು ಸೊಗಸಾಗಿ ಕಾಣಿಸುತ್ತಿತ್ತು. ನಾವು ಗದ್ದೆ ಕೆಲಸ ಏನಾದರೂ ಇದ್ದರೆ ಮಾಡೋಣ, ನಾವೂ ಜೊತೆಯಾಗ್ತೇವೆ ಅಂದಿದ್ದರಿಂದ, ಗೌಡರು ಬಹಳ ಹುಮ್ಮಸ್ಸಿನಿಂದ ಹಾರೆ ಹಾಗೂ ತಮ್ಮ ಕೃಷಿ ಪರಿಕರಗಳನ್ನೆಲ್ಲಾ ಹಿಡಿದು, ನಮಗೂ ಮೈಗೆ ಸುತ್ತಲು ಬೈರಾಸು ಕೊಟ್ಟು ಹೊರಡೋಣ ಗದ್ದೆಯ ಕಡೆ ಎಂದು ನಮಗೆ ದಾರಿಯಾದರು. ಉದ್ದ ಹಾವಿನಂತಿರುವ ಸಪೂರದ ಹಾದಿಯಲ್ಲಿ ಸಾಗಿ ಗದ್ದೆಯ ಬದುಗೆ ಬಂದೆವು. ಹೊಲದ ತುಂಬಾ ತುಸು ಬೂದು ಬಣ್ಣದ ಕೊಕ್ಕರೆಗಳು ಗಬಕ್ ಗಬಕ್ ಅಂತ ಕೊಕ್ಕನ್ನು ಗದ್ದೆ ನೀರಲ್ಲಿ ಮುಳುಗಿಸಿ ನ್ಯೂಡಲ್ಸ್ ನಂತಿರುವ ಎರೆಹುಳುಗಳನ್ನು ಕೊಕ್ಕಿಗೆ ಸಿಕ್ಕಿಸಿ ಸುಯ್ ಅಂತ ಅದನ್ನು ಬಾಯಿಗೆಳೆಯುತ್ತಿದ್ದುದು ಮಜವಾಗಿ ಕಾಣುತ್ತಿತ್ತು. ಕೆಸರಲ್ಲಿ ಹುಲ್ಲು ತುಂಬಿದ್ದ ಗದ್ದೆಯನ್ನು ನೇಜಿ ಕಾರ್ಯಕ್ಕೆ ಸಿದ್ಧಗೊಳಿಸಲು ನಾವೆಲ್ಲ ಗದ್ದೆ ಕೆಸರಿಗಿಳಿದೆವು. ಕ್ರಮೇಣ ಹೂತು ಹೋಗಿದ್ದ ಹುಲ್ಲುಗಳನ್ನು ಕಿತ್ತು, ಇಡೀ ಗದ್ದೆಯನ್ನು ನೇಜಿಗೆ ಅನುಕೂಲವಾಗುವಂತೆ ಮಾಡಿದೆವು. ಆನಂದ ಗೌಡರು ಹೀಗೆ ಮಾಡಿ, ಹಾಗೆ ಮಾಡಿ ಅಂತೆಲ್ಲಾ ಮಾರ್ಗದರ್ಶನ ನೀಡುತ್ತ, ನಮ್ಮ ಮುಖದಲ್ಲಿ ಕೆಲಸ ಮಾಡುತ್ತ ಮಾಡುತ್ತ ಮೂಡಿದ್ದ ಸಂತೃಪ್ತಿ ಹಾಗೂ ಖುಷಿಯ ನಗುವನ್ನು ಸೂಕ್ಷ್ಮವಾಗಿ ನೋಡುತ್ತ, ತಾವೂ ಗದ್ದೆ ಕೆಲಸದಲ್ಲಿ ಲೀನವಾದರು.

ನಾವಾದರೂ ಬರೀ ಒಂದು ದಿನ ಕಾಡು, ಹಸಿರು, ಬೆಟ್ಟ, ಗದ್ದೆ ಅಂತೆಲ್ಲಾ ಸುತ್ತಲು ಬರುತ್ತೇವೆ. ಆದರೆ ಕ್ಷಣ ಕ್ಷಣವೂ ಆ ಕೆಸರಲ್ಲೇ ಕಳೆದು ಹೋಗುತ್ತ, ಸಹಜವಾಗಿ ಎಲ್ಲವನ್ನೂ ನೋಡುತ್ತ, ಹೆಂಡತಿಯ ಅಡುಗೆಯನ್ನು ಪ್ರೀತಿಯಿಂದ ಚಪ್ಪರಿಸುತ್ತಾ, ಮತ್ತೆ ಗದ್ದೆಗೆ ಹೋಗಿ ಕೆಲಸದಲ್ಲೇ ಕಳೆದುಹೋಗುವ ಆನಂದಗೌಡರ ಮೇಲೆ ಈಗ ಮತ್ತಷ್ಟು ಗೌರವ ಬಂತು. ನಾವು ಗದ್ದೆ ಕೆಲಸ ಮಾಡುತ್ತ ಹೋದಂತೆಲ್ಲಾ ಬಿಸಿಲು ಮತ್ತಷ್ಟು ಸುರಿಯುತ್ತಲೇ ಇತ್ತು. ಕೆಸರಿನ ಪರಿಮಳದಲ್ಲಿ ಪೇಟೆಯ ವಾಸನೆ ಮರೆತುಹೋಯ್ತು. ಬದುಕು ಎಷ್ಟು ಬೋರು, ಎಂದು ಬೇಜಾರು ಮಾಡಿಕೊಂಡಿದ್ದು, ಬದುಕಲ್ಲಿ ಹೊಸತನವೇ ಇಲ್ಲ ಅಂತ ನೊಂದುಕೊಂಡಿದ್ದು, ಟೆಕ್ನಾಲಜಿಗಳು ಅದೆಷ್ಟು ಸುಖಕೊಟ್ಟರೂ ಕೊನೆಗದು ಮೂಡಿಸುವ ಅಶಾಂತಿಗೆ ಬೆಂದು ತತ್ತರಿಸಿದ್ದು, ಇವೆಲ್ಲಾ ಸಂಕಟಗಳು ಆ ಕೆಸರಿನಲ್ಲಿ ಹೂತು ಹೋಯ್ತು. ನಾವು ಆ ಕ್ಷಣ ಆಧುನೀಕತೆಯ ಸಂಬಂಧವನ್ನೇ ಕಡಿದುಕೊಂಡು ಅದೆಷ್ಟು ಖುಷಿಯಾಗಿದ್ದೆವೆಂದರೆ ಮೈಗೆಲ್ಲಾ ಕೆಸರು, ಹಣೆಗೆಲ್ಲಾ ಬೆವರು ಮೂಡಿದಾಗ ಸಿಗುವ ಆನಂದ ಬೇರೆ ಯಾವ ಲೋಕದಲ್ಲಿಯೂ ಸಿಗುವುದಿಲ್ಲ ಅನ್ನಿಸುತ್ತಿತ್ತು. ನಾವು ಗದ್ದೆ ಕೆಲಸ ಮಾಡುತ್ತಿದ್ದಾಗ ಆಗಾಗ “ಇವರೇನು ಮಾಡುತ್ತಿದ್ದಾರೆ” ಅಂತ ನಮ್ಮನ್ನೇ ಅಳುಕಿನಿಂದ ನೋಡುತ್ತಿರುವ ಬಲ್ಲಾಳರಾಯನ ದುರ್ಗದ ಇಷ್ಟಿಷ್ಟೇ ಅಂಚುಗಳು ಕಾಣಿಸುತ್ತಿದ್ದವು. ಕೊನೆಗೆ ನಾವು ಗದ್ದೆ ಕೆಲಸ ಎಲ್ಲಾ ಮುಗಿಸಿ ಮತ್ತೆ ಅದೇ ಬೆಟ್ಟದತ್ತ ನೋಡಿದಾಗ, ಬೆಳಗ್ಗೆ ಗಾಢ ಹಸಿರಿನಿಂದ ಕಾಣುತ್ತಿದ್ದ ಅದು ಈಗ ಆಕಾಶದ ನೀಲಿಯಲ್ಲಿ ಅದ್ದಿ ತೆಗೆದಂತೆ ಕಂಡು ನೀಲಿ ನೀಲಿಯಾಗುತ್ತ ಹೋಗುತ್ತಿತ್ತು. “ಬನ್ನಿ ಇಲ್ಲೇ ಒಂದು ಜಲಪಾತವಿದೆ ಅಲ್ಲೇ ಹೋಗಿ ಸ್ನಾನ ಮಾಡೋಣ” ಎಂದ ಹುಡುಗ ಪ್ರವೀಣ, ಗದ್ದೆ ದಾಟಿಸಿ ಕಾಡಿಗೆ ಕರೆದುಕೊಂಡು ಹೋದ, ಮಟ ಮಟ ಮಧ್ಯಾಹ್ನದ ಬಿಸಿಲು ಚೆಲ್ಲಿ ಇಡೀ ಕಾಡಿಗೆ ಸೂರ್ಯನೂ ಚಾರಣ ಮಾಡಲು ಇಳಿದು ಬಂದನೇನೋ ಅನ್ನಿಸುತ್ತಿತ್ತು. ನಮ್ಮ ಚಪ್ಪಲಿ ಇಲ್ಲದ ಕಾಲುಗಳು ಪೊದೆಗಳನ್ನು ದಾಟುತ್ತಲೇ ಜಲಪಾತದ ಕಡೆ ಹೋಯಿತು.

ನೀವು ಕಾಡಿನಲ್ಲಿ ಮಧ್ಯಾಹ್ನ ಕಳೆದಿದ್ದೀರೋ ಇಲ್ಲವೋ, ಗೊತ್ತಿಲ್ಲ. ಕಳೆದಿದ್ದರೂ ಚಪ್ಪಲಿ ಹಾಕದೇ ಕಾಡಲ್ಲಿ ನಡೆದಿದ್ದೀರೋ ಇಲ್ಲವೋ? ಆದರೆ ದಟ್ಟ ಕಾಡಲ್ಲಿ ಚಪ್ಪಲಿ ಹಾಕದೇ ಸುಮ್ಮನೇ ನಡೆದುಬಿಡಬೇಕು, ಅದೂ ಚಳಿಗಾಲದಲ್ಲೇ ಆದರೆ ಮತ್ತಷ್ಟು ಚೆಂದ, ಚಳಿಗಾಲದ ಮಧ್ಯಾಹ್ನದಲ್ಲಿಯೂ ಕಾಡ ಹುಲ್ಲಿನ ಮೇಲೆ ಇಬ್ಬನಿಗಳು ಮೈ ತೆರೆದುಕೊಂಡು ಮಲಗಿರುತ್ತದೆ. ನಮ್ಮ ಚಪ್ಪಲಿ ಇಲ್ಲದ ಕಾಲುಗಳು, ಆ ಇಬ್ಬನಿ ಮೇಲೆಲ್ಲಾ ನಡೆದಾಗ ಬರೀ ಕಾಲಿಗಷ್ಟೇ ಅಲ್ಲ, ಇಡೀ ಮೈಯೊಳಗೆ ಎಷ್ಟೊಂದು ತಂಪಾಗುತ್ತದೆ ಅಂತ ವರ್ಣಿಸಲು ಸಾಧ್ಯವೇ ಇಲ್ಲ. ನಾವು ನಡೆದಂತೆಲ್ಲಾ ಕಾಲು ಇಬ್ಬನಿಯ ತಂಪಿಗೆ ಪುಲಕಗೊಳ್ಳುತ್ತಿತ್ತು. ಕೊಂಚ ದೂರ ನಡೆದ ಮೇಲೆ, ದೂರದಲ್ಲಿ ಕೇಳುತ್ತಿದ್ದ ಜಲಪಾತದ ಮೊರೆತ ಒಮ್ಮೆಗೇ ಹತ್ತಿರಾಯಿತು. ಸುತ್ತಲೂ ವಿಚಿತ್ರವಾದ ತಂಪು ಆವರಿಸಿಕೊಂಡಿತು.

ಕಾಡಿನಲ್ಲಿ ಜಲಪಾತ ಹತ್ತಿರಾದಾಗ ಮೈಗೆ ಸಣ್ಣಗಿನ ಇರುವೆ ಬಿದ್ದಂತೆ ತಂಪು ತಂಪು ಇಷ್ಟೇ ಇಷ್ಟು ಸಣ್ಣ ಹನಿಗಳು ಬೀಳುತ್ತದೆ. ನಾವು ಹೋ ಮೈ ಎಲ್ಲಾ ಪಸೆಯಾಗಿದೆ ಅಂತ ಮುಟ್ಟಿದರೆ ಮೈಗೆ ಹತ್ತಿದ್ದ ಆ ಪುಟ್ಟ ಹನಿ ಆಗಲೇ ಕರಗಿ ಹೋಗಿ, ಅದರ ಸ್ಪರ್ಶವೂ ನಮಗೆ ಸಿಗದೇ ಹೋಗುತ್ತದೆ. ನಮಗೀಗ ಹಾಗೇ ಆಯಿತು. ಮುಂದೆ ನಡೆಯುತ್ತಿದ್ದ ಪ್ರವೀಣ “ನೋಡಿ ಇದೇ ಜಲಪಾತ” ಎಂದು ಕೈ ತೋರಿಸಿದ. ಭಾರೀ ಎತ್ತರದಿಂದ ಬೀಳುತ್ತಿದ್ದ ಜಲಪಾತ ನೋಡುತ್ತಲೇ, ಇಷ್ಟು ಚಂದದ ಜಲಪಾತದಲ್ಲಿ ಮೀಯುವ ಸುಖವೇ ಬೇರೆ ಅನ್ನಿಸಿ ನೀರಿಗಳಿದೆವು.

ಪ್ರವಾಸಿಗರೇ ಗಿಜಿಗುಡುವ ದೊಡ್ಡ ದೊಡ್ಡ ಜಲಪಾತಗಳು ನಾಗರೀಕತೆಯ ವಾಸನೆಗೆ, ವಾವ್ ಬ್ಯೂಟಿಫುಲ್ ಎನ್ನುವ ಉದ್ಗಾರಗಳಿಗೆ, ಹಾಳಾದ ಸೆಲ್ಫಿಗಳ ಮೋಹಜಾಲಕ್ಕೆ, ಗುಂಡುಗಲಿಗಳ ಹೆಂಡದ ಕಮಟು ವಾಸನೆಗೆ, ಪ್ಲಾಸ್ಟಿಕ್ಕು ಬಾಟಲಿಗಳ ದುರ್ಗಂಧದಿಂದ ತನ್ನ ಸಹಜತೆಯನ್ನೇ ಕಳೆದುಕೊಂಡತಿರುತ್ತದೆ. ಆದರೆ ಇವ್ಯಾವುದರ ಹಂಗೇ ಇಲ್ಲದೇ ಮಂಜುಗಡ್ಡೆಯ ನೀರಿನಂತೆ, ಆಗ ತಾನೇ ಕಂಡ ಕನಸಿನಂತೆ ಉಕ್ಕಿ ನೇತ್ರಾವತಿಗೆ ಸೇರುವ ಈ ಜಲಪಾತದ ನೀರು ಅದೆಷ್ಟು ಶುದ್ಧ ಹಾಗೂ ರುಚಿ ಇತ್ತೆಂದರೆ ಅದರ ಸ್ಪರ್ಶ ಸಿಕ್ಕಿದ ನನ್ನೊಳಗೆ ವಿಚಿತ್ರವಾದ ಯಾವುದೋ ಸೆಲೆಯೊಂದು ಉಕ್ಕಲು ಶುರುವಾಯ್ತು. ಆ ಸ್ವರ್ಗದಂತಿರುವ ನೀರಿನಲ್ಲಿ ಕೊಂಚ ಸ್ನಾನ ಮಾಡಿ ಬಂಡೆಗಲ್ಲ ಮೇಲೆ ಕೂತಾಗ ತೀರ್ಥ ಸ್ನಾನ ಅಂತೆಲ್ಲಾ ಮಾಡಲು ದೂರದ ಗಂಗೆ ಹತ್ತಿರ ಹೋಗಬೇಕಿಲ್ಲ. ಕಾಡಿನಲ್ಲೇ ಹರಿಯುವ ಇಂತಹ ಸಣ್ಣ ಪುಟ್ಟ ಧಾರೆಗೆ ಮೈ ಕೊಟ್ಟರೆ ಸಾಕು ಅನ್ನಿಸಿತು. ಪ್ರಕೃತಿಯನ್ನು ನಾವು ಶುದ್ಧವಾಗಿಟ್ಟರೆ, ಪ್ರಕೃತಿಯೂ ನಮನ್ನು ಎಷ್ಟೊಂದು ಜೀವಂತವಾಗಿಡುತ್ತದಲ್ಲಾ? ಅಂತ ಬೆರಗುಗೊಂಡೆ.

“ನೋಡಿ ಇಂತಹ ಶುದ್ಧ ನೀರನ್ನೇ ಪ್ರಕೃತಿ ನಮಗೆ ಕೊಟ್ಟಿದೆ. ಇದು ಪಶ್ಚಿಮಘಟ್ಟದ ಅತ್ಯಂತ ಸೂಕ್ಷ್ಮವಾದ ಜಲಪಾತ. ಆದರೆ ಪ್ರಕೃತಿಗೆ ನಾವು ಕೊಟ್ಟಿದ್ದು ನೇತ್ರಾವತಿ ಯೋಜನೆ, ಹಾಳಾದದ್ದು, ಆ ಯೋಜನೆ ಪೂರ್ತಿ ಜಾರಿಯಾದ ಮೇಲೆ ಇಂತಹ ಜಲಪಾತಗಳ ಒಡಲಿಗೆ ಏನೇನಾಗಲಿದೆಯೋ? ಹಾಳಾದ ರಾಜಕಾರಣಿಗಳಿಗೆ ಪ್ರಕೃತಿಯೇ ಪಾಠ ಕಲಿಸಬೇಕು” ಅಂತ ಅಲ್ಲೇ ಕೂತಿದ್ದ ಆನಂದ ಗೌಡರು ಸಿಟ್ಟಾದರು. ನಾವು ಮತ್ತೆ ಸಣ್ಣ ಕಾಲುವೆ ನೀರ ಹಾದಿಯನ್ನು ದಾಟಿ, ಆನಂದ ಗೌಡರ ಮನೆಗೆ ಹೋದಾಗ ಅವರ ಹೆಂಡತಿ, ರುಚಿ ರುಚಿಯಾದ ಅಡುಗೆ ಮಾಡಿ ನಮಗಾಗಿ ಕಾಯುತ್ತಿದ್ದರು. ಅಂಗಳದಲ್ಲೇ ಕೂತು ಊಟ ಮಾಡಿದೆವು. ಪ್ರತಿಯೊಂದು ಪಲ್ಯದಲ್ಲಿಯೂ ಕಾಡಿನ ಪರಿಮಳವಿತ್ತು, ಅನ್ನದಲ್ಲಿ ತ್ರಾಸ ಪಟ್ಟು ದುಡಿದ ಸಂತೃಪ್ತಿಯ ರುಚಿಯಿತ್ತು, ಆ ರುಚಿ ಯಾವ ದೊಡ್ಡ ದೊಡ್ಡ ಮಾಳಿಗೆಯ ಹೊಟೇಲುಗಳಲ್ಲಿಯೂ ಸಿಗಲು ಸಾಧ್ಯವೇ ಇಲ್ಲ.

ಕೊನೆಗೆ ಊಟ ಮುಗಿಸಿ ಮತ್ತೆ ಅಂಗಳದಲ್ಲಿ ಪಟ್ಟಾಂಗ ಹೊಡೆಯಲು ಕೂತೆವು. ಬೆಳಗ್ಗೆ ಸೌಮ್ಯವಾಗಿ ಕಾಣುತ್ತಿದ್ದ ಬಲ್ಲಾಳರಾಯನ ದುರ್ಗ, ಈಗ ಒಮ್ಮೆ ಭಯಾನಕವಾಗಿ ಕಾಣಿಸುತ್ತಿತ್ತು. ಇಂತಹ ಭಯಾನಕ ಬೆಟ್ಟದಿಂದ ಬೋ ಬೋ.. ಅಂತ ಬೊಬ್ಬೆ ಹೊಡೆಯುತ್ತ, ಸಿಡಿಲು-ಮಿಂಚು ಕಿರುಚುತ್ತಾ, ಗಾಳಿ ರೌದ್ರವಾಗಿ ಬೀಸುತ್ತ ಈ ಪುಟ್ಟ ಊರಿಗೆ ಹೊಡೆಯುವ ಮಳೆಗಾಲದ ದಿನಗಳನ್ನು ಕಲ್ಪನೆಯಲ್ಲಿ ನೆನದಾಗ ಮೈ ಜುಮ್ ಎನ್ನಿಸಿತು.

“ನೋಡಿ ಆ ದುರ್ಗ ಏನೂ ಸಾಮಾನ್ಯವಲ್ಲ, ಅದೊಂದು ವಿಚಿತ್ರ ಬೆಟ್ಟ, ಆ ಕಾಡಲ್ಲಿ ದಾರಿ ತಪ್ಪಿಸುವ ಬಳ್ಳಿಗಳಿವೆ, ವಾಂತಿ ಕಾರಿಸುವ ಬಳ್ಳಿಗಳೂ ಇವೆಯಂತೆ, ಚಾರಣ ಚಾರಣ ಅಂತ ಬರುವ ಕೆಲ ದೂರದ ಊರಿನ ಮಂದಿ ಅಲ್ಲಿ ಹೇಗೋ ಹೋಗಿ ಕುಡಿದ ಮತ್ತಲ್ಲಿ ಬೊಬ್ಬೆ ಹಾಕಿದ್ದು ರಾತ್ರಿ ನಮಗೆ ಮಲಗುವಾಗ ಕೇಳಿಸುತ್ತದೆ, ಅವರ ಆರ್ಭಟ ಜೋರಿರುತ್ತದೆ” ಎಂದರು ಆನಂದ ಗೌಡರು.

ಅಲ್ಲೇ ಇದ್ದ ಹುಡುಗ ಪ್ರವೀಣ ‘ಕೆಲವೊಮ್ಮೆ ರಾತ್ರಿ ದೊಡ್ಡ ಸ್ಪೀಕರ್ ಹಾಕಿ ಡ್ಯಾನ್ಸ್ ಮಾಡಿ ಬೊಬ್ಬೆ ಹೊಡೆಯುತ್ತಾರೆ ಅವರು, ರಾತ್ರಿ ಬೆಟ್ಟದಿಂದ ತಪ್ಪಿ ಕೆಳಗೆ ಬಿದ್ದರೆ ದೇವರೇಗತಿ” ಎಂದ. ರಾತ್ರಿ ಹೀಗೆಲ್ಲಾ ಕಾಡಲ್ಲಿ ಕುಡಿದು, ಮಜಾ ಉಡಾಯಿಸುವವರು, ಪ್ರಕೃತಿಯನ್ನು ಹಾಳು ಮಾಡುತ್ತ, ರಾತ್ರಿ ಕಾಡಲ್ಲಿ ಬೇಟೆಯಾಡುತ್ತ ಗಮ್ಮತ್ತು ಮಾಡುವವರು ಕೆಳಗೆ ಬಿದ್ದರೂ ತೊಂದರೆ ಇಲ್ಲ” ಅನ್ನಿಸಿತು ನನಗೆ. ನಾವು ಮಾತಾಡುತ್ತ ಮಾತಾಡುತ್ತ ಸಂಜೆಯಾಗುತ್ತಿತ್ತು. ಒಂದಷ್ಟು ಇಲ್ಲೇ ಸುತ್ತಿ ಬರೋಣವೆಂದೂ, ಈ ರಾತ್ರಿ ಇಲ್ಲೇ ಉಳಿಯಿರಿ ಎಂದೂ ಪ್ರವೀಣ ಒತ್ತಾಯ ಮಾಡಿದ. ನಾವು ಬೇಡವೆನ್ನಲ್ಲಿಲ್ಲ.

ಇರುಳಾಗುವ ಮೊದಲು ಅಲ್ಲೇ ಇರುವ ಅಡಿಕೆ ತೋಟಗಳನ್ನೆಲ್ಲಾ ಸುತ್ತಿದೆವು. ಅಡಿಕೆ ಮರವೊಂದರ ತುದಿಯಲ್ಲಿ ನಾಲ್ಕೈದು ಚಿಟ್ಟು ಗಿಳಿಗಳು ಒಂದೇ ಸಮನೆ ಕೂಗುತ್ತಿದ್ದವು, ಬಲ್ಲಾಳರಾಯನ ದುರ್ಗದ ಕಡೆಯಿಂದ ಸಿಳ್ಳೆ ಹಕ್ಕಿ ಬಿಟ್ಟೂ ಬಿಡದೇ ಸಿಳ್ಳೆ ಹಾಕುತ್ತಿತ್ತು, ಮತ್ತೆಲ್ಲೋ ಮೈಲು ದೂರದಿಂದ ಗೂಬೆಗಳು ಕಿರುಚಿದವು, ಮತ್ತೆಲ್ಲೋ ಗೆಲ್ಲುಬಿದ್ದಿತು, ಸಾಯಂಕಾಲದ ಆ ಕಾಡಲ್ಲಿ ದಿನದ ಕೊನೆಯ ಚಟುವಟಿಕೆಗಳು ಕಣ್ಣು ಮುಚ್ಚಿ ಬಿಟ್ಟಷ್ಟೇ ವೇಗವಾಗಿ ನಡೆಯುತ್ತಿತ್ತು. ಕೊಂಚ ಇರುಳಾದ ಮೇಲೆ ಮತ್ತೊಂದು ಕಾಡ ದಾರಿಗೆ ಹೋಗಿ ಕೂತುಬಿಟ್ಟೆವು.

ಆ ಸ್ವರ್ಗದಂತಿರುವ ನೀರಿನಲ್ಲಿ ಕೊಂಚ ಸ್ನಾನ ಮಾಡಿ ಬಂಡೆಗಲ್ಲ ಮೇಲೆ ಕೂತಾಗ ತೀರ್ಥ ಸ್ನಾನ ಅಂತೆಲ್ಲಾ ಮಾಡಲು ದೂರದ ಗಂಗೆ ಹತ್ತಿರ ಹೋಗಬೇಕಿಲ್ಲ. ಕಾಡಿನಲ್ಲೇ ಹರಿಯುವ ಇಂತಹ ಸಣ್ಣ ಪುಟ್ಟ ಧಾರೆಗೆ ಮೈ ಕೊಟ್ಟರೆ ಸಾಕು ಅನ್ನಿಸಿತು. ಪ್ರಕೃತಿಯನ್ನು ನಾವು ಶುದ್ಧವಾಗಿಟ್ಟರೆ, ಪ್ರಕೃತಿಯೂ ನಮನ್ನು ಎಷ್ಟೊಂದು ಜೀವಂತವಾಗಿಡುತ್ತದಲ್ಲಾ? ಅಂತ ಬೆರಗುಗೊಂಡೆ.

“ಇದೇ ದಾರಿಯಾಗಿ ಆನೆ ಹಿಂಡು ಬರುತ್ತದೆ, ಆದರೆ ಈಗ ತುಂಬಾ ದಿನಗಳಿಂದ ಆನೆಗಳ ಸುದ್ದಿಯಿಲ್ಲ, ಇಲ್ಲೇ ಪಕ್ಕದ ಊರಿಗೆ ನಿನ್ನೆ ಬಂದಿತ್ತಂತೆ, ಆದರೆ ಆನೆ ಕೊಂಚ ದೂರದಲ್ಲಿ ಬರುತ್ತಿರುವಾಗಲೇ ನಮಗೆ ಗೊತ್ತಾಗುತ್ತದೆ. ಒಂಥರಾ ವಿಚಿತ್ರ ವಾಸನೆ ಬರಲು ಶುರುವಾಗುತ್ತದೆ” ಎಂದು ಕತ್ತಲಲ್ಲಿ ಹಗುರನೇ ಹೇಳಿದ ಪ್ರವೀಣ, ಆನೆ ಎಂದದ್ದೇ ನಾವು ಕಣ್ಣು ಕಣ್ಣು ಬಿಟ್ಟೆವು. ನಾವು ಆ ಕತ್ತಲಲ್ಲಿ ವಿಚಿತ್ರ ಉದ್ಗಾರ ತೆಗೆದಿದ್ದನ್ನು ಗ್ರಹಿಸಿದ ಪ್ರವೀಣ, “ಆನೆ ನಮಗೇನು ಮಾಡಿಲ್ಲ, ಮನೆ ಕಡೆ ಬರುವುದಿಲ್ಲ ಅದು. ಇಲ್ಲಿ ಬಂದು ಅದರ ಕೆಲಸ ಮಾಡಿ ಹೋಗುತ್ತದೆ ಅಷ್ಟೇ” ಎಂದು ಅಭಯವಿಟ್ಟ. ಸಾಲದ್ದಕ್ಕೆ ಅದರ ಬೆನ್ನಿಗೇ ಈ ಕಾಡಿನಲ್ಲಿ ಭೂತವಿದೆ ಎಂದೂ, ಅದು ತಪ್ಪು ಮಾಡಿದವರಿಗೆ ಶಿಕ್ಷಿಸದೇ ಇರುವುದಿಲ್ಲವೆಂದೂ ಮತ್ತಷ್ಟು ಹುಳಿಬಿಟ್ಟ. ಆದರೂ ಸ್ವಾರಸ್ಯಕರವಾಗಿದ್ದ ಭೂತದ ಪ್ರಸಂಗಕ್ಕೆ ನಾನೂ ಒಂದಷ್ಟು ಕತೆ ಸೇರಿಸಿ ವರ್ಣರಂಜಿತವಾಗಿ ಹೇಳಿದೆ. ಕೊನೆಗೆ ಎಲ್ಲರೂ ಮೌನವಾದೆವು.

ಆಕಾಶದಲ್ಲಿ ರಾಶಿ ರಾಶಿ ಚುಕ್ಕಿಗಳು, ಮೊದಲೇ ಕಪ್ಪಾಗಿದ್ದ ಕಾಡೀಗ ಪೂರ್ತಿ ಕಪ್ಪಾಗಿದ್ದರೂ ದೂರದಲ್ಲೆಲ್ಲೋ ಅಸ್ಪಷ್ಟವಾದ ದಾರಿಯ ಅಂಚು, ಅಕ್ಕ ಪಕ್ಕದಲ್ಲಿ ದೊಡ್ಡ ದೊಡ್ಡ ಭಯಂಕರ ಮರಗಳು ದಿಗಿಲು ಹುಟ್ಟಿಸುವಂತೆ ಕತ್ತಲಲ್ಲಿ ಉಸಿರುಬಿಡುತ್ತಿತ್ತು. ಅಲ್ಲೆಲ್ಲೋ ಕೊಂಬೆಯಿಂದ ಕೊಂಬೆಗೆ, ಕಾಡು ಬೆಕ್ಕಿರಬೇಕು, ಜಿಗಿದು ಎಲ್ಲಿಗೋ ಹೋಗಿಬಿಟ್ಟಿತು. ಕೊನೆಗೆಲ್ಲಾ ಮೌನವಾಗಿ ಈಗ ಬರೀ ಗಾಳಿಯ ಪಿಸುಮಾತು ಕೇಳಿ ನಮ್ಮೊಳಗೆ ವಿಚಿತ್ರವಾದ ಖುಷಿಯೂ, ರೋಚಕತೆಯೂ ಆಯಿತು.

ಮತ್ತೆ ಆನಂದ ಗೌಡರ ಮನೆಗೆ ಬಂದರೆ ಅಲ್ಲಿ, ಸರ್ಕಾರ ಕೊಟ್ಟ ಭಾಗ್ಯ ಜ್ಯೋತಿ ಯೋಜನೆಯ ಒಂದೇ ಒಂದು ಬಲ್ಬು ಉರಿಯುತ್ತಿತ್ತು. ಒಳಗೆ ಅಡಿಕೆಯ ಪರಿಮಳ ಉಕ್ಕುತ್ತಿತ್ತು. ಅಂಗಳದಲ್ಲಿ ರಾಶಿ ರಾಶಿ ಕೋಳಿಗಳು ಗೂಡು ಸೇರುತ್ತಿದ್ದವು, ಮನೆಯ ಬೇಟೆ ನಾಯಿ ಕಾಡಲ್ಲಿ ಏನೋ ಕಂಡಂತಾಗಿ ಎಲ್ಲಿಗೋ ಓಡಿ ಹೋಯಿತು. ಮನೆಯ ಬೆಕ್ಕು ಅಂಗಳದಲ್ಲಿ ಕೂತು ಹಲ್ಲಿಗೆ ಹೊಂಚು ಹಾಕುತ್ತಿತ್ತು. ಬೆಳಗ್ಗಿನಿಂದ ಆ ಮನೆಯಲ್ಲೇ ಇದ್ದು, ಆ ಮನೆ ಜೊತೆ, ಮನೆಯವರ ಜೊತೆ ಆತ್ಮೀಯತೆ ಮೂಡಿತ್ತು. ಆನಂದ ಗೌಡರ ಹೆಂಡತಿ ಮಕ್ಕಳಿಗೆ ಬಡಿಸುವಂತೆಯೇ ಹೊಟ್ಟೆ ತುಂಬಾ ದೋಸೆ, ಅನ್ನ, ಸಾರು ಎಲ್ಲಾ ಬಡಿಸಿ ನಾವೂ ಉಣ್ಣುವುದನ್ನೇ ಖುಷಿಯಿಂದ ನೋಡುತ್ತ ಬಳಿಕ ತಾವು ಊಟ ಮಾಡಿದರು.

ನಾವು ಊಟ ಮುಗಿಸಿ ಹಿಂಬಾಗಿಲಿನ ಹಂಡೆಯ ಹತ್ತಿರ ಬರುವಾಗ ಬಿಸಿ ಬಿಸಿ ನೀರು ಕುದಿಯುತ್ತಿತ್ತು. ಕಾಡಿನ ಘೋರ ಚಳಿಗೆ ನಾವು ಥತ್ತರ ನಡುಗುತ್ತಿದ್ದೆವು. ನಮ್ಮಂತೆ ನಡುಗುತ್ತಿದ್ದ ಬೆಕ್ಕು, ನಾಯಿ ಅಲ್ಲೇ ಹಂಡೆಯ ಪಕ್ಕದಲ್ಲೇ ಆಸೀನವಾಗಿ ಬೆಚ್ಚಗಿನ ಕಾವು ಪಡಕೊಂಡು ನಿದ್ದೆ ಜಾರಿತ್ತು. ದೂರದ ಬಲ್ಲಾಳರಾಯನ ದುರ್ಗ ಕಗ್ಗತ್ತಲ ಆಕಾಶದಂತೆಯೇ ಕಂಡು ಅದರ ಅಂಚಿಗೆ ರಾಶಿ ರಾಶಿ ನಕ್ಷತ್ರಗಳು ತುಂಬಿ, ಇಡೀ ಬೆಟ್ಟ ನಕ್ಷತ್ರ ಮಾಲೆಗಳಿಂದ ಸಿಂಗಾರಗೊಂಡಂತೆ ಕಾಣುತ್ತಿತ್ತು. ಹಗಲು ಕಾಣಿಸುವ ಬೆಟ್ಟಕ್ಕಿಂತಲೂ ರಾತ್ರಿ, ನಾವೇ ಕಣ್ಣಲ್ಲಿ ಅಂದಾಜು ಮಾಡಿಕೊಂಡು ಆ ಬೆಟ್ಟವನ್ನು ನಿಗೂಢವಾಗಿ ನೋಡುವ ಪ್ರಕ್ರಿಯೆಯೇ ಚೆಂದ ಅನ್ನಿಸಿತು.

“ಈ ರಾತ್ರಿ ಅಲ್ಲಿ ಯಾರಾದರೂ ಬೇಟೆಯಾಡುತ್ತಿರುತ್ತಾರೆ, ಕಡವೆ ಮಾಂಸ, ಕಾಡುಕೋಣ ಮಾಂಸವನ್ನು ಸಾಗಿಸುವವರು ಅಲ್ಲಿದ್ದಾರೆ. ಒಂದಿನ ಸಂಜೆ ನಾವು ಆ ಬೆಟ್ಟದತ್ತ ನೋಡಿದಾಗ ಅಲ್ಲಿಂದ ನೆತ್ತರು ಕಡುಗೆಂಪು ಬಣ್ಣದಿಂದ ಬಿಸಿಲಿಗೆ ಹೊಳೆಯುತ್ತಿತ್ತು. ಅದು ಯಾರೋ ಮಾಡಿದ ಶಿಕಾರಿ ಅಂತ ತಿಳಿಯಲು ನಮಗೇನು ಹೊತ್ತಾಗಲಿಲ್ಲ. ಶಿಕಾರಿಕೋರರಿಂದಲೇ ಕಾಡು ಹಾಳಾಗಿದೆ” ಆನಂದ ಗೌಡರು ಕತ್ತಲಲ್ಲೇ ವಿಷಾದ ವ್ಯಕ್ತಪಡಿಸಿದಾಗ, ಅಲ್ಲೇ ಬೆಟ್ಟದ ತುದಿಗೆ ವಿಮಾನವೊಂದು ಹಾರುತ್ತ ಬಂತು. “ನೋಡಿ ಕೆಳಗೆ ಅಷ್ಟು ದೊಡ್ಡ ಬೆಟ್ಟ ಇರೋದು, ಆ ಬೆಟ್ಟದ ಅಗಾಧತೆ, ಭಯಾನಕತೆ, ಮೇಲೆ ವಿಮಾನದಲ್ಲಿ ಕೂತು ಯಾವುದೋ ದೇಶಕ್ಕೆ ಹೊರಟಿರುವವರಿಗೆ ಕಾಣುತ್ತಿರಬಹುದುದಾ? ಒಂದು ಚೂರು ಏರು ಪೇರಾದರೆ ಆ ವಿಮಾನ ಇದೇ ಕಾಡಿಗೆ ಬಿದ್ದುಬಿಡಬಹುದಾ? ಅಯ್ಯೋ ಹಾಗೋಗೋದು ಬೇಡ ಅಂತೆಲ್ಲಾ ನಾವು ಏನೇನೋ ಚಿಂತಿಸಿದೆವು. ನೋಡನೋಡುತ್ತಲೇ ವಿಮಾನ, ಕತ್ತಲೆಯ ಆಳದಲ್ಲಿ ಕರಗಿಹೋಯ್ತು.

ರಾಶಿ ರಾಶಿ ನಕ್ಷತ್ರಗಳನ್ನು ಆ ಕಾಡಿನ ಚಳಿಯಲ್ಲಿ ನೋಡುತ್ತ ಕೂತೆವು. ಗೂಬೆ, ನಾಯಿ, ತರಗಲೆ, ಜಲಪಾತ, ಕಪ್ಪೆ, ರಾತ್ರಿ ಮಿಡತೆ, ಕಾಡಬೆಕ್ಕು, ಜೀರುಂಡೆ, ಇನ್ಯಾವುದೋ ಕಾಡಲ್ಲಿ ಬೊಗಳುತ್ತಿರುವ ವಿಚಿತ್ರ ಜೀವಿಯ ಸದ್ದು, ಇವೆಲ್ಲ ಒಮ್ಮೆ ಒಟ್ಟಿಗೇ ಕೇಳಿ ಕೊನೆಗೆಲ್ಲವೂ ಮೌನವಾಯ್ತು. ಕಾಡಮನೆಯ ಬೆಚ್ಚಗಿನ ಚಾಪೆ, ಕಂಬಳಿ ಕಾಯುತ್ತಿತ್ತು. ಹೋಗಿ ಮಲಗಿದರೆ ಕತ್ತಲಲ್ಲಿಯೂ ಕಾಡಮನೆ, ಇಡೀ ಕಾನು ಬೆಳಕಿನಂತೆ ಕಾಣುತ್ತಿತ್ತು. ಹಂಚಿನ ಎಡೆಯಿಂದ ಚಂದ್ರ ಇಣುಕಿ “ತನಗೂ ಚಳಿಯಾಗುತ್ತಿದೆ ಒಳಗೆ ಬರಲಾ ಅಂತ ಕೇಳಿದಂತೆನ್ನಿಸಿತು. ಕಾಡಿನ ನಿದ್ರೆಯ ಕನಸಲ್ಲಿ ಕಾಡೇ ಬಂತು. ಮನೆ ಕೋಳಿ, ಕಾಡಿನಲ್ಲಿ ಚೂರು ಬೆಳಕಾದದ್ದೇ ಎಬ್ಬಿಸಿತು. ಹೊರಗೆ ಬಂದು ನೋಡಿದರೆ ಬಲ್ಲಾಳರಾಯನ ದುರ್ಗ, ಮಂಜಿನಲ್ಲಿ ಇನ್ನೂ ಎದ್ದಿರಲಿಲ್ಲ. ಬೆಳಗ್ಗಿನ ಕೆಲಸ ಎಲ್ಲಾ ಮುಗಿಸಿ ಒಳಗೆ ಬಂದಾಗ, ಕಾಡಿನ ಅಮ್ಮ ಮಾಡಿದ ಬಿಸಿ ಬಿಸಿ ಅಕ್ಕಿ ರೊಟ್ಟಿ, ಪಲ್ಯ ಕಾಯುತ್ತಿತ್ತು. ಆಹಾ ಎಂಥಾ ರುಚಿ ಇತ್ತು. ಬರೀ ರುಚಿ ಅಲ್ಲ, ಅವರ ಅಕ್ಕರೆಯ ರುಚಿ ಅದರಲ್ಲಿತ್ತು.


ನಿನ್ನೆ ಅಷ್ಟೇ ನಾವು ಅವರಿಗೆ ಪರಿಚಯವಾದರೂ ಎಷ್ಟೋ ಕಾಲದಿಂದ ನಾವು ಅವರ ಒಡಲಾಳದ ಬಂಧು ಎನ್ನುವಂತೆ ಅವರ ಮುಖಭಾವ ನೆಮ್ಮದಿಯಿಂದ ನೋಡುತ್ತಲೇ ಇತ್ತು ನಮ್ಮನ್ನು. ತಿಂಡಿ ತಿಂದು ನಾವು ಹೊರಡಲು ಅಣಿಯಾದೆವು. ನಾವು ಇನ್ನೊಮ್ಮೆ ಬಲ್ಲಾಳ ದುರ್ಗದಲ್ಲಿ ರಾತ್ರಿ ಕಳೆಯೋಣವೆಂದೂ, ಆದಷ್ಟು ಬೇಗ ಬನ್ನಿರೆಂದು ಆನಂದ ಗೌಡರು ಹೇಳಿದರು. ಒಂದೇ ದಿನದಲ್ಲಿ ಆಪ್ತರಾದ ಅವರಿಗೆ ಕೈ ಬೀಸುತ್ತಲೇ, ಪ್ರವೀಣನ ಸಹಾಯದಿಂದ ಆನೆ ನಡೆಯುವ ಕಾಡ ಹಾದಿಯಲ್ಲಿ ಬೈಕೇರಿಸಿದೆವು. ಈಗ ಬಲ್ಲಾಳರಾಯನ ದುರ್ಗ ಮಂಜಿನ ಹಾಸಿಗೆಯಿಂದ ಹಗೂರನೇ ಏಳುತ್ತಿತ್ತು. ಅದನ್ನು ನೋಡುತ್ತ ಖುಷಿಯಾದಂತೆ ಸಿಳ್ಳಾರ ಹಕ್ಕಿ ಉದ್ದಕ್ಕೆ ಸಿಳ್ಳೆ ಹಾಕತೊಡಗಿತು.