Advertisement
ಕುಡುಗೊಕ್ಕು ಹರಟೆಮಲ್ಲ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಕುಡುಗೊಕ್ಕು ಹರಟೆಮಲ್ಲ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಇವು 22 ಸೆಂಮೀಟರ್ ಗಾತ್ರದ ಹಕ್ಕಿಗಳು. ಕಡುಗಂದು ಬಣ್ಣದ ದೇಹ; ಮುಖದಲ್ಲಿ ಎದ್ದು ಕಾಣುವ ಬಿಳಿ ಹುಬ್ಬು, ಬಿಳಿ ಬಣ್ಣದ ಗಲ್ಲ ಮತ್ತು ಎದೆ; ಕುಡುಗೋಲಿನಂತೆ ಬಾಗಿದ, ಹಳದಿ ಬಣ್ಣದ ಗಟ್ಟಿಮುಟ್ಟಾದ ಕೊಕ್ಕು, ಅಷ್ಟೇ ಬಲಿಷ್ಟವಾದ ಕಾಲು ಮತ್ತು ಪಾದಗಳು; ಬಹುದೂರ ಹಾರಲಾಗದ, ಸಣ್ಣ-ಗುಂಡಾದ ರೆಕ್ಕೆಗಳು. ಸಡಿಲವಾಗಿ ಅಂಟಿಸಿರುವಂತೆ ಕಾಣುವ ಬಾಲ. ಸಾಧಾರಣವಾಗಿ ಆರರಿಂದ ಏಳು ಪಕ್ಷಿಗಳು ಒಟ್ಟಾಗಿ ವಾಸಮಾಡುತ್ತವೆ. ನೆಲದ ಮೇಲೆ, ಪೊದೆಗಳಲ್ಲಿ ಕುಪ್ಪಳಿಸಿಕೊಂಡು, ಬಾಲವನ್ನು ಅಡ್ಡಡ್ಡಲಾಗಿ ಆಡಿಸಿಕೊಂಡು ನಡೆಯುವ ಮತ್ತು ಹಾರುವಾಗ ಒಟ್ಟಾಗಿ, ಒಂದರ ಹಿಂದೆ ಒಂದು, ಹಾರುವ ಸ್ವಭಾವ ಇವುಗಳದ್ದು.
ಡಾ.
ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಕುಡುಗೊಕ್ಕು ಹರಟೆಮಲ್ಲ ಹಕ್ಕಿಯ ಕುರಿತ ಬರಹ ಇಲ್ಲಿದೆ

ಶ್ರೋತೃಗಳೆ, ನಿಸರ್ಗದಲ್ಲಿ ಕೆಲವು ವಿಶಿಷ್ಟ ಸಂಗತಿಗಳು ನಮ್ಮನ್ನು ಆಶ್ಚರ್ಯ ಚಕಿತಗೊಳಿಸುತ್ತವೆ. ಸಂಘ ಜೀವನದಲ್ಲಿ ದೊರಕುವ ಆತ್ಮಬಲ, ಶತ್ರುಗಳಿಂದ ರಕ್ಷಣೆ ಮುಂತಾದ ಲಾಭಗಳನ್ನು ಅನೇಕ ಹಕ್ಕಿಗಳು ವಿಕಾಸ ಹೊಂದುತ್ತಾ ಕಲಿತಿವೆ. ನಾವು ಈವತ್ತು ತಿಳಿದುಕೊಳ್ಳ ಹೊರಟಿರುವುದು ಅಂತಹ ಒಂದು ಪಕ್ಷಿಯ ವಿಚಾರ.

ಟಿಮಾಲೈಡೆ ಕುಟುಂಬಕ್ಕೆ ಸೇರಿದ ಒಂದು ಪ್ರಭೇದದ ಹಕ್ಕಿಯೇ ಕುಡುಗೊಕ್ಕು ಹರಟೆಮಲ್ಲ. ಇಂಗ್ಲೀಷಿನಲ್ಲಿ  Indian Scimitar Babbler, ಇಂಡಿಯನ್ ಸಿಮಿಟಾರ್ ಬ್ಯಾಬ್ಲರ್ ಹಾಗೂ ಅದರ ವೈಜ್ಞಾನಿಕ ಹೆಸರು, ಪೊಮೆಟೋರ‍್ರಿನಸ್ ಹೋರ್ಸ್‌ಫೈಲ್ಡೈ.

ಸಾಧಾರಣವಾಗಿ 6-8 ಕುಡುಗೊಕ್ಕು ಹರಟೆಮಲ್ಲಗಳು ಒಟ್ಟಿಗೇ ವಾಸಮಾಡುತ್ತವೆ. ಹಿಂದಿ ಭಾಷೆಯಲ್ಲಿ ಈ ಹಕ್ಕಿಗಳನ್ನು ಸಾಥ್‌ಭಾಯ್ ಎಂದು ಕರೆಯುತ್ತಾರೆ. ಹೆಸರಿಗೆ ತಕ್ಕಂತೆ, ಈ ಹಕ್ಕಿಗಳು ಸದಾ ಕಾಲ ಒಂದರೊಡನೆ ಮತ್ತೊಂದು ಸಂಪರ್ಕದಲ್ಲಿ ಇದ್ದುಕೊಂಡು ಕಚಪಿಚ ಹರಟೆ ಹೊಡೆಯುವಂತೆ ತೋರುತ್ತವೆ.

ಹೆಸರಿಗೆ ಹರಟೆಮಲ್ಲರಾದರೂ, ಬಹು ಸಂಕೋಚ ಸ್ವಭಾವ. ಆಗುಂತಕರನ್ನು ಕಂಡರೆ, ತಕ್ಷಣ ಮೌನಕ್ಕೆ ಶರಣಾಗುತ್ತವೆ! ಹೆಚ್ಚಾಗಿ ಬಿದಿರು ಮೆಳೆಗಳಲ್ಲಿ, ಒತ್ತಾದ ಹಾವಸೆಯಿಂದಾವೃತವಾದ ಮರಗಳಲ್ಲಿ, ಬೇಲಿ, ದಟ್ಟಪೊದೆ, ಕುರುಚಲು, ಗಿಡಗಂಟಿಗಳಲ್ಲಿ ಗುಂಪಾಗಿ ವಾಸಿಸುತ್ತವೆ.

ಇವು 22 ಸೆಂಮೀಟರ್ ಗಾತ್ರದ ಹಕ್ಕಿಗಳು. ಕಡುಗಂದು ಬಣ್ಣದ ದೇಹ; ಮುಖದಲ್ಲಿ ಎದ್ದು ಕಾಣುವ ಬಿಳಿ ಹುಬ್ಬು, ಬಿಳಿ ಬಣ್ಣದ ಗಲ್ಲ ಮತ್ತು ಎದೆ; ಕುಡುಗೋಲಿನಂತೆ ಬಾಗಿದ, ಹಳದಿ ಬಣ್ಣದ ಗಟ್ಟಿಮುಟ್ಟಾದ ಕೊಕ್ಕು, ಅಷ್ಟೇ ಬಲಿಷ್ಟವಾದ ಕಾಲು ಮತ್ತು ಪಾದಗಳು; ಬಹುದೂರ ಹಾರಲಾಗದ, ಸಣ್ಣ-ಗುಂಡಾದ ರೆಕ್ಕೆಗಳು. ಸಡಿಲವಾಗಿ ಅಂಟಿಸಿರುವಂತೆ ಕಾಣುವ ಬಾಲ. ಸಾಧಾರಣವಾಗಿ ಆರರಿಂದ ಏಳು ಪಕ್ಷಿಗಳು ಒಟ್ಟಾಗಿ ವಾಸಮಾಡುತ್ತವೆ. ನೆಲದ ಮೇಲೆ, ಪೊದೆಗಳಲ್ಲಿ ಕುಪ್ಪಳಿಸಿಕೊಂಡು, ಬಾಲವನ್ನು ಅಡ್ಡಡ್ಡಲಾಗಿ ಆಡಿಸಿಕೊಂಡು ನಡೆಯುವ ಮತ್ತು ಹಾರುವಾಗ ಒಟ್ಟಾಗಿ, ಒಂದರ ಹಿಂದೆ ಒಂದು, ಹಾರುವ ಸ್ವಭಾವ ಇವುಗಳದ್ದು.

ಸಾಮಾನ್ಯವಾಗಿ ಜೋಡಿಯಾಗಿ, ಒತ್ತಾದ ಪೊದೆಗಳಿರುವೆಡೆ ಮತ್ತು ನೆಲದ ಮೇಲೆ, ಕ್ರಿಮಿ-ಕೀಟಗಳನ್ನರಸುತ್ತವೆ. ಕೀಟಗಳು, ಸಣ್ಣ ಜೀವಿಗಳು, ಹಣ್ಣುಗಳು, ಹಾಗೂ ಮಕರಂದವೇ ಅವುಗಳ ಆಹಾರ.

ಗುಂಪಾಗಿ, ಸಣ್ಣ ಸ್ವರದಲ್ಲಿ ಗದ್ದಲ ಮಾಡುವವು; ಕೆಲವಕ್ಕೆ ಸುಶ್ರಾವ್ಯ ಕಂಠ. ಪ್ರಜನನ ಋತುವಿನಲ್ಲಿ ಗಂಡುಹಕ್ಕಿಯ ವಿಶಿಷ್ಟವಾದ 4-ಸ್ವರದ, ಗಂಭೀರವಾದ ಕೊಳಲಿನ, ಹು.ಹು.ಹು.ಹು. ಕರೆಗೆ, ಹೆಣ್ಣಿನ ಟ್ರೀನ್.ಟ್ರಿ! ಮರುತ್ತರ. ನೀವೇನಾದರೂ ಮೊದಲ ಬಾರಿಗೆ ಇದನ್ನು ಕೇಳಿದರೆ, ಹು.ಹು.ಹು.ಹು. ಮತ್ತು ಟ್ರೀನ್.ಟ್ರಿ ಎರಡನ್ನೂ ಒಟ್ಟಿಗೆ ಒಂದೇ ಹಕ್ಕಿ ಕೂಗಿತೇನೋ ಎಂದು ಅನ್ನಿಸುತ್ತದೆ!

ಪೊದೆಗಳಲ್ಲಿ, ಒತ್ತಾದ ಮರಗಳಲ್ಲಿ, ಬಟ್ಟಲು ಆಕಾರದ ಗೂಡು. ಕೋಗಿಲೆ ಕುಟುಂಬದ ಹಕ್ಕಿಗಳ ಮೊಟ್ಟೆ-ಮರಿಗಳಿಗೆ ಆಶ್ರಯ ಮತ್ತು ಪೋಷಣೆ.

About The Author

ಡಾ. ಎಸ್‌. ವಿ. ನರಸಿಂಹನ್

ಡಾ. ಎಸ್‌.ವಿ. ನರಸಿಂಹನ್ ವೈದ್ಯರು. ಕೊಡಗಿನ ವಿರಾಜಪೇಟೆಯಲ್ಲಿ ನೆಲೆಸಿದ್ದಾರೆ. ಆರೋಗ್ಯ ರಕ್ಷಣೆಯೊಂದಿಗೆ ಪರಿಸರ ರಕ್ಷಣೆಯ ಬಗೆಗೂ ಅಪಾರ ಕಾಳಜಿ ಹೊಂದಿದ್ದಾರೆ. ಕಳೆದ ನಲವತ್ತೊಂದು ವರ್ಷಗಳಿಂದ ಡಾ. ನರಸಿಂಹನ್‌ರವರು ಕೈಯಿಂದ ಕುಂಚಿಸಿದ ಸುಮಾರು ಎಂಭತ್ತೆರಡು  ಸಾವಿರ ‘ವನ್ಯಜೀವಿ ಸಂದೇಶ ಪತ್ರ’ಗಳು ಪ್ರಪಂಚದಾದ್ಯಂತ ತಲುಪಿವೆ. ಇದೊಂದು ಲಿಮ್ಕಾ ದಾಖಲೆ. ವಿಜ್ಞಾನ ಬರವಣಿಗೆಯಲ್ಲೂ ಆಸಕ್ತಿ ಹೊಂದಿರುವ ಇವರು, ಕನ್ನಡ ಭಾಷೆ, ಸಂಗೀತ-ಸಾಹಿತ್ಯ, ಖಗೋಳ, ಪರಿಸರ ಮುಂತಾದ ವಿಷಯಗಳಲ್ಲಿ ಶಾಲಾ-ಕಾಲೇಜುಗಳಲ್ಲಿ, ರೇಡಿಯೋ, ಟಿವಿ ಮತ್ತು ಪತ್ರಿಕಾ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸಿದ್ದಾರೆ. ಕೊಡಗಿನ ಸಂಪೂರ್ಣ ಪಕ್ಷಿಸಂಕುಲದ ನಿಖರ ಮಾಹಿತಿಯುಳ್ಳ ‘ಕೊಡಗಿನ ಖಗರತ್ನಗಳು’ ಪುಸ್ತಕದಲ್ಲಿ ತಾವೇ ಎಲ್ಲ ಹಕ್ಕಿಗಳ ಚಿತ್ರಗಳನ್ನೂ ಬರೆದದ್ದು ಮತ್ತೊಂದು ಲಿಮ್ಕಾ ದಾಖಲೆ.  ‘2013ರ ಕೊಡಗಿನ ವರ್ಷದ ವ್ಯಕ್ತಿ’ಪುರಸ್ಕೃತರು

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ನಿಮ್ಮೂರಿಗೆ ಮಾನ್ಸೂನ್....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ