ಈ ಮದ್ದು ತೆಗೆಯುವುದು ಎಂದರೆ ಸಂತೆಯಲ್ಲಿ, ಜಾತ್ರೆಯಲ್ಲಿ, ಕಿವಿ, ಕಣ್ಣಿನಿಂದ ಕಲ್ಲು ತೆಗೆದಂತೆ. ತಮ್ಮ ಕೈಚಳಕದಿಂದ ತಾವೇ ಹಾಕಿದ್ದನ್ನು ರಾಶಿಗಟ್ಟಲೆ ತೆಗೆದು ತೋರುವವರಂತೆ ಇದು ಒಂದು ವೃತ್ತಿ. ಆದರೆ ಕೆಲವೊಮ್ಮೆ ಈ ರೀತಿಯ ಪ್ರಕ್ರಿಯೆಯ ನಂತರ ರೋಗ ಗುಣ ಆಗುವುದೂ ಉಂಟು. ಶರೀರಕ್ಕೆ ಬರುವ ಅನೇಕ ರೋಗಗಳು ಮನಸ್ಸಿಗೆ ಸಂಬಂಧಿಸಿದ್ದು. ಅದರಿಂದ ಅನೇಕ ಬಗೆಯ ಚಿಹ್ನೆಗಳು ಕಂಡು ಬರಬಹುದು. ಹೀಗಿರುವಾಗ ತನ್ನಲ್ಲಿದ್ದ “ಮದ್ದು” ಹೊರಬಿತ್ತು ಎಂಬ ನಂಬಿಕೆಯೂ ಅವರನ್ನು ಗುಣಪಡಿಸಲು ಸಾಕು. ಹೀಗೆ ಎಲ್ಲಾ ವಿಷಯಗಳನ್ನು ಗ್ರಹಿಸಿದ ನಾನು ರೋಗಿಯತ್ತ ತೀವ್ರ ಗಮನವನ್ನು ಹರಿಸಿದ್ದೆ.
ಡಾ. ಕೆ.ಬಿ. ಸೂರ್ಯಕುಮಾರ್ ಬರೆಯುವ ‘ನೆನಪುಗಳ ಮೆರವಣಿಗೆ’

 

ಆಗೆಲ್ಲಾ, ಸರಕಾರಿ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಚಿಕಿತ್ಸೆಗೆ ಬರುವುದು ಸರ್ವೇಸಾಮಾನ್ಯ ಆಗಿತ್ತು. ಜಿಲ್ಲೆಯಲ್ಲಿ ಖಾಸಗೀ ಆಸ್ಪತ್ರೆಗಳು ಇದ್ದದ್ದೂ ಒಂದೋ ಎರಡೋ. ಹಾಗಾಗಿ ಇಲ್ಲಿ ಕೆಲಸ ಮಾಡುವ ವೈದ್ಯರು, ದಾದಿಯರಿಂದ ಹಿಡಿದು ಆಯಾಗಳಿಗೂ ಸದಾ ಕೈ ತುಂಬಾ ಕೆಲಸ ಇರುತ್ತಿತ್ತು. ತೋಟದ ಕೆಲಸಕ್ಕೆ ವಿರಾಮದ ಸೋಮವಾರ, ಹಾಗೂ ಸಂತೆಯ ದಿನವಾದ ಶುಕ್ರವಾರದಂದು ಹಿಂದಿನ ಕಾಲದಿಂದಲೂ ಬಿಜ಼ಿ.

ಆ ದಿನ, ಆಸ್ಪತ್ರೆಯ ಹೊರರೋಗಿ ವಿಭಾಗ ಬೆಳಗಿನಿಂದಲೇ ಜನರಿಂದ ತುಂಬಿ ಗಿಜಿಗುಟ್ಟುತ್ತಿತ್ತು. ಚೀಟಿ ಬರೆಸಲು ನಿಂತವರ ಸಾಲು ಬೆಳಿಗ್ಗೆ ಒಂಬತ್ತು ಗಂಟೆಗೇ ಹನುಮಂತನ ಬಾಲದಂತೆ ಬೆಳೆದು ನಿಂತಿತ್ತು. ನಮ್ಮ ಆಸ್ಪತ್ರೆಯ ಕರ್ತವ್ಯದ ಸಮಯಾರಂಭ ಒಂಬತ್ತು ಗಂಟೆಗೆ. ಆದರೂ ಎಂಟು ಗಂಟೆಗೇ ಹೊತ್ತಾಯಿತು ಎಂದು ಮನೆಯಲ್ಲಿ ಸಿಡಿಮಿಡಿಗುಟ್ಟಿ, ಯಾವುದೊ ಸಣ್ಣ ವಿಷಯಕ್ಕೆ ಹೆಂಡತಿಯ ಮೇಲೆ ಹರಿಹಾಯ್ದು ಆಸ್ಪತ್ರೆಗೆ ಬಂದಿದ್ದೆ. ವಾರ್ಡಿನಲ್ಲಿ ದಾಖಲಾದ ರೋಗಿಗಳನ್ನು ಪರೀಕ್ಷೆ ಮಾಡಿ, ರೌಂಡ್ಸ್ ಮುಗಿಸಿ, ಹೊರ ರೋಗಿ ಕೋಣೆಗೆ ಬಂದಾಗ ಮೇಜಿನ ಮೇಲೆ ಚೀಟಿಗಳನ್ನು ಒಂದಷ್ಟು ಎತ್ತರಕ್ಕೆ ಆಗಲೇ ಅಟ್ಟಲಾಗಿತ್ತು. ಅದರಲ್ಲಿ ಕೆಲವೊಂದು ಚೀಟಿಗಳು ಕಡತವಾಗಿ, ಅವರು ಆಸ್ಪತ್ರೆಗೆ ಆಗಾಗ್ಯೆ ಬರುವವರು ಎಂಬ ಸೂಚನೆ ಕೊಡುತ್ತಿತ್ತು. ನಾನು ಹೋಗಿ ಕುಳಿತು, ಒಬ್ಬೊಬ್ಬರನ್ನೇ ಕರೆದು ತಪಾಸಣೆ ಮಾಡಿ ಔಷಧಿ ಬರೆದು ಕಳುಹಿಸುತ್ತಿದ್ದೆ. ಆದರೆ, ಬಗ್ಗಿಸಿದ ತಲೆಯನ್ನು ಎತ್ತದೆ ಚೀಟಿ ಮತ್ತು ಪಕ್ಕದಲ್ಲಿದ್ದ ರೋಗಿಯನ್ನು ಮಾತ್ರ ನೋಡುತ್ತಾ ಕುಳಿತು ವಿಚಾರಿಸುವ ನನ್ನನ್ನು ಕಂಡು, ಹೊರಗೆ ನಿಂತ ರೋಗಿಗಳಿಗೆ ಒಂದು ಬಗೆಯ ಕಸಿವಿಸಿ. ತಮ್ಮ ಚೀಟಿ ಮೇಜಿನಲ್ಲಿ ಸರದಿಯಂತೆ ಕೆಳಗೆ ಹೋಗಿದೆ ಎಂಬುದು ಅವರಿಗೆ ಗೊತ್ತಿರುತ್ತದೆ. ಅಕಸ್ಮಾತ್ ನಾನು ತಲೆ ಎತ್ತಿ ಅವರ ಕಡೆ ನೋಡಿದರೆ ಸಾಕು, ಪರಿಚಯವಿರುವ ತಾವು ಮುಗುಳ್ನಕ್ಕು ಕೂಡಲೇ ಒಳಗೆ ಹೋಗಬಹುದು ಎಂಬ ಬಯಕೆ ಅವರದು. ಪಾಪ ಅವರಿಗೇನು ಗೊತ್ತು… ತಮ್ಮ ಪಕ್ಕದಲ್ಲಿ ಇರುವವರದೂ ಇದೇ ರೀತಿಯ ಭ್ರಮೆ ಎಂದು!

ನಾನು ಅದೇ ಊರಿನವನಾದದ್ದರಿಂದ ಅಲ್ಲಿ ಇರುವ ಹೆಚ್ಚಿನವರು ನನಗೆ ತಿಳಿದವರು, ಸ್ನೇಹಿತರು, ಸಹಪಾಠಿಗಳು, ಊರು ಕೇರಿ ಬೀದಿಯವರು, ಅಥವಾ ನನ್ನ ದೂರದ ಸಂಬಂಧಿಕರು. ನಾನು ಮುಗುಳ್ನಕ್ಕರೆ ಸಾಕು ಒಮ್ಮೆಗೇ ಎಲ್ಲರೂ ಮುಗಿ ಬಿದ್ದು ಒಳಗೆ ನುಗ್ಗಿ ಬರುವರೆಂಬ ಮರ್ಮ ತಿಳಿದೇ ನಾನು ತಲೆ ಮೇಲೆ ಎತ್ತುತ್ತಿರಲಿಲ್ಲ. ಹೀಗೆ ಒಬ್ಬೊಬ್ಬರೂ ತಮ್ಮದೇ ಆದ ಚಿಂತನೆಯಲ್ಲಿ ತೊಡಗಿ ಇಣುಕು ಹಾಕುತ್ತಿದ್ದಾಗ, “ದಾರಿ ಬಿಡಿ, ದಾರಿ ಬಿಡಿ” ಎನ್ನುವ ಗಡಸು ದನಿಗೆ ಜನ ತಿರುಗಿ ನೋಡಿದ್ದರು. ನಮ್ಮವಾರ್ಡ್‌ ಬಾಯ್ ಉತ್ತಯ್ಯ ಗಾಲಿಕುರ್ಚಿಯಲ್ಲಿ ಒಬ್ಬಾಕೆಯನ್ನು ತಳ್ಳಿಕೊಂಡು ಒಳ ಬಂದಿದ್ದರು. ನನಗೆ ಆ ರೋಗಿಯ ಸ್ಥಿತಿಯನ್ನು ಕಂಡು ಗಾಬರಿ ಆಗಿತ್ತು. ಜೊತೆಯಲ್ಲಿ ಇದ್ದ ತಾಯಿ ಹೇಳಿದ ಪ್ರಕಾರ ಆಕೆಯ ಹೆಸರು ಹರಿಣಿ, ವಯಸ್ಸು ಹದಿನಾರು. ಒಂದು ತಿಂಗಳಿಂದ ವಾಂತಿ. ಏನನ್ನೂ ಸೇವಿಸಲಾಗದೆ ಎರಡು ದಿನಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಳು.

ಹದಿನಾರು ವರ್ಷದವಳು ಎಂಬುದನ್ನು ನಂಬಲು ಕೂಡಾ ಆಗದಷ್ಟು ತೆಳ್ಳಗಾಗಿ ಮೂಳೆ, ಚರ್ಮವಾಗಿದ್ದ ಆ ಹುಡುಗಿಯನ್ನು ನನಗೆ ಪರೀಕ್ಷಿಸುವುದೇ ಒಂದು ಪ್ರಯಾಸವಾಗಿತ್ತು. ಹೊರನೋಟದ ಪರೀಕ್ಷೆಗೆ ಕಾಯಿಲೆಗೆ ಕಾರಣ ಏನಿರಬಹುದು ಎಂದು ಪತ್ತೆ ಹಚ್ಚಲು ಕಷ್ಟವಾದಾಗ, “ಏನಮ್ಮ ಕಾಯಿಲೆ ಇಷ್ಟು ಜಾಸ್ತಿ ಆಗುವವರೆಗೆ ನಿದ್ರೆ ಮಾಡುತ್ತ ಇದ್ದಿದ್ದಾ? ಇನ್ನೇನು ಉಸಿರು ಈಗಲೋ ಆಗಲೋ ಹೋಗುತ್ತೆ ಎನ್ನುವ ಪರಿಸ್ಥಿತಿಯಲ್ಲಿ ಇರುವಾಗ ಇಲ್ಲಿಗೆ ಕರೆದುಕೊಂಡು ಬಂದಿದ್ದೀರಲ್ಲಾ?” ಎಂದು ಗದರಿದೆ. ಆಗ, ತಾಯಿ ಕೊಟ್ಟ ಉತ್ತರ,
“ಇಲ್ಲಾ ಡಾಕ್ಟ್ರೇ. ನಾವು ಬೇಕಾದಷ್ಟು ಪ್ರಯತ್ನ ಮಾಡಿದ್ದೇವೆ. ಆದರೆ ಯಾವುದೂ ಪ್ರಯೋಜನ ಆಗ್ಲಿಲ್ಲ, ಗುಣವಾಗಲೇ ಇಲ್ಲ. ನಮಗೆ ಆಗದಿರುವ ಯಾರೋ ಅವಳಿಗೆ ಕೈಮದ್ದು ಹಾಕಿದ್ದಾರೆ. ಇಲ್ಲಿ ಸುತ್ತ ಮುತ್ತಲು ಇದ್ದ ಕೆಲವು ಕೈ ವಿಷ ತೆಗೆಯುವವರು ವಾಂತಿ ಮಾಡಿಸಿ ಅದನ್ನು ತೆಗೆದರೂ, ಸ್ವಲ್ಪ ಉಳಿದುಕೊಂಡಿತ್ತು. ಹಾಗಾಗಿ ಕೇರಳದ ಇರಟ್ಟಿಯಲ್ಲಿ ಬಹಳ ಪ್ರಸಿದ್ಧವಾದ ಒಬ್ಬ ಮಾಂತ್ರಿಕನ ಬಳಿ ಕೂಡಾ ಹೋಗಿ ಆಯ್ತು. ಇನ್ನೂ ಸ್ವಲ್ಪ ಉಳಿದಿರಬೇಕು. ಹಾಗಾಗಿ ವಾಂತಿ ನಿಲ್ಲುತ್ತಾ ಇಲ್ಲ. ಅದಕ್ಕೇ ಹೀಗೆ ಆಗಿದ್ದಾಳೆ” ಎಂಬ ಸಮಜಾಯಿಷಿಕೆ ಬಂತು. ಸಿಟ್ಟು ನೆತ್ತಿಗೇರಿ ನನ್ನ ತಾಳ್ಮೆಯ ಕಟ್ಟೆ ಒಡೆದಿತ್ತು.

ನಾನಂತೂ ಮೂಢ ನಂಬಿಕೆಗಳ ಕಟ್ಟಾವಿರೋಧಿ. ಈಗಿನ ವೈಜ್ಞಾನಿಕ ಯುಗದಲ್ಲಿಯೂ ಜನ ಹೀಗೂ ಇರುವರೇ ಎಂದು ಯೋಚಿಸಿ ಬೆವರತೊಡಗಿದ್ದೆ. ಇವರೊಂದಿಗೆ ಹೆಚ್ಚು ಮಾತನಾಡಿದರೆ ಸಮಯ ವ್ಯರ್ಥ ಎನ್ನುತ್ತಾ ವಾರ್ಡಿಗೆ ದಾಖಲು ಮಾಡಿ, ಚಿಕಿತ್ಸೆಯಲ್ಲಿ ತೊಡಗಿದ್ದೆ. ಹಗಲು ಕಳೆದು ಸೂರ್ಯ ಮುಳುಗಿ, ರಾತ್ರಿಯ ಚಂದ್ರ ಬಂದು ಹೋಗಿ, ಮರುದಿನ ಊರಿನ ಕತ್ತಲು ಹರಿದರೂ ಹರಿಣಿಯ ಪರಿಸ್ಥಿತಿಯಲ್ಲಿ ಯಾವುದೇ ಬೆಳಕು ಕಾಣಲಿಲ್ಲ. ಪ್ರಜ್ಞೆ ಇಲ್ಲದ ಹುಡುಗಿ, ಮಲ ಮೂತ್ರವನ್ನು ಕೂಡ ಹಾಸಿಗೆಯಲ್ಲೇ ಮಾಡುತ್ತಿರುವುದನ್ನು ನೋಡಿ ಪಕ್ಕದ ಹಾಸಿಗೆಯ ರೋಗಿಗಳು ಅಸಹ್ಯ ಪಡಬಾರದು ಎಂಬ ಕಾರಣಕ್ಕೆ ಮೂತ್ರಕ್ಕೆ ಒಂದು, ಬಾಯಿಗೆ ಒಂದು, ಗ್ಲೂಕೋಸಿಗೆ ಇನ್ನೊಂದು, ಹೀಗೆ ನಳಿಕೆಗಳನ್ನು ಹಾಕಿದಾಗ, ಹರಿಣಿ ಆಗಿದ್ದಳು “ನಳಿನಿ”! ಹೀಗೆ ಎರಡು ಮೂರು ದಿನವೂ ರೋಗದ ಪತ್ತೆ ಹಚ್ಚುವುದರಲ್ಲಿ ಸಮಯ ಕಳೆದು ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಿದರೂ ಕಾರಣ ತಿಳಿಯದೆ ನಾನು ಚಿಂತೆಯಲ್ಲಿ ಮುಳುಗಿದ್ದೆ. ದಿನಕಳೆದಂತೆ ಅವರು ಹೇಳಿದ ಕೈ ವಿಷ ನಿಜವಿರಬಹುದೇ ಎಂಬ ದೂರದ ಸಂಶಯ ಪಿಶಾಚಿಯ ಹಿಂದೆ ಹೊರಟ ನಾನು, ಇದರ ಬಗ್ಗೆ ಮಾಹಿತಿ ಸಂಗ್ರಹಿಸ ತೊಡಗಿದ್ದೆ. ಈ ವಿಜ್ಞಾನ ಯುಗದಲ್ಲಿಯು ನಡೆಯುವ ಇವುಗಳ ಬಗ್ಗೆ ಕೆಲವೊಂದು ಮಾಹಿತಿಗಳು, ವಿಚಿತ್ರವಾದ ವಿಷಯಗಳನ್ನು ಓದಿ ತಿಳಿದುಕೊಂಡೆ. ಇವುಗಳು ಒಮ್ಮೆ ಅಸಹ್ಯವಾಗಿ, ಮತ್ತೊಮ್ಮೆ ಭೀಭತ್ಸವಾಗಿ ಕಾಣುತಿದ್ದವು.

ಕೈ ವಿಷವನ್ನು ಸಾಧಾರಣವಾಗಿ ವಿಧವೆಯರು ಅಥವಾ ಇದನ್ನೇ ಕಲಿತ ಕೆಲವು ಮಾಂತ್ರಿಕರು ಹಾಕುತ್ತಾರೆ ಎಂಬ ನಂಬಿಕೆ ಇದೆ. ವಿಧವೆಯರ ಜೀವನದಲ್ಲಿ ಅವರಿಗಾದ ನಿರಾಶೆಯ ಪ್ರತಿಯಾಗಿ ಅಥವಾ ಬೇರೆಯವರ ಏಳಿಗೆಯನ್ನು ಸಹಿಸದೆ ಇರುವಾಗ ಅವರ ಮಕ್ಕಳು ತಿನ್ನುವ ತಿಂಡಿ ತಿನಿಸುಗಳಲ್ಲಿ ಬೆರೆಸಿ ಕೊಡುವುದು ಅಥವಾ ಇನ್ನೊಬ್ಬರನ್ನು ಹಾಳು ಮಾಡಲು ಹಣ ತೆಗೆದುಕೊಂಡು ಈ ಕೆಲಸವನ್ನು ಮಾಡಲೆಂದೇ ಕೆಲವು ಜನ ಇರುತ್ತಾರೆ ಎಂಬ ಇನ್ನೊಂದು ಹೇಳಿಕೆ ಇದೆ. ಅಷ್ಟೇ ಅಲ್ಲದೆ, ಒಮ್ಮೆ ಕಲಿತ ವಿದ್ಯೆಯನ್ನು ತಿಂಗಳಿಗೊಮ್ಮೆ ಉಪಯೋಗಿಸದಿದ್ದರೆ ಅವರಿಗೇ ತೊಂದರೆಯಾಗಿ ನರಳುವರು ಎನ್ನುವುದು ಮತ್ತೊಂದು ಪ್ರತೀತಿ. ಇದನ್ನು ತಯಾರಿಸುವ ವಿಧಾನವನ್ನು ಖ್ಯಾತ ಮನೋವೈದ್ಯ ಡಾಕ್ಟರ್ ಸಿ ಆರ್ ಚಂದ್ರಶೇಖರ್ ಒಂದು ಪುಸ್ತಕದಲ್ಲಿ ಅಂತೆ-ಕಂತೆ ಎಂಬಂತೆ ಹೀಗೆ ಹೇಳುತ್ತಾರೆ.

ಸತ್ತ ಹಲ್ಲಿ, ಅರಣೆ, ಊಸರವಳ್ಳಿ, ಓತಿಕ್ಯಾತ, ಉಡ ಇವುಗಳನ್ನು ಕೊಂದು, ನೇತುಹಾಕಿ ಕೊಳೆಯುವ ದೇಹದಿಂದ ಬೀಳುವ ರಸವನ್ನು ಕೆಲವು ಬೇರು, ನಾರಿನ ಪುಡಿ ಸೇರಿಸಿ, ಹೆಂಗಸಿನ ಋತುಸ್ರಾವದೊಂದಿಗೆ ಬೆರೆಸಿ ಸಣ್ಣ ಗುಳಿಗೆಯ ರೂಪದಲ್ಲಿ ತಿನ್ನುವ ಆಹಾರದಲ್ಲಿ ಹಾಕುವುದು “ಮದ್ದು”. ಇದು ಚಿಕ್ಕದಿದ್ದು ಹೊಟ್ಟೆಗೆ ಸೇರಿ ಅಲ್ಲಿಯೇ ಉಳಿಯುತ್ತದಂತೆ. ತಿಂಗಳಾದರೂ ಅದು ಅಲ್ಲಿಯೇ ಉಳಿದು ಆ ವ್ಯಕ್ತಿಯ ಹಸಿವು ಇಂಗಿ ಹೋಗಿ, ಅಜೀರ್ಣವಾಗಿ, ಹೊಟ್ಟೆ ಉಬ್ಬರ, ತೇಗು, ವಾಕರಿಕೆ ಬಂದು, ನಿದ್ದೆ ಇಲ್ಲದೆ ಸುಸ್ತು ಸಂಕಟಕ್ಕೆ ಗುರಿಯಾಗಿ, ನಿಧಾನಕ್ಕೆ ಶರೀರ ಸೊರಗಿ ಮೇಲುಬ್ಬಸ ಬಂದು, ಬುದ್ಧಿ ಭ್ರಮಣೆ ಆಗುವ ಸಂಭವ ಇದೆ ಅಂತೆ. ಕೊನೆಗೆ ಸಾಯಲೂ ಬಹುದಂತೆ. ಇದೆಲ್ಲಾ ಅಂತೆ ಕಂತೆಗಳ ಜೊತೆ, ಇದನ್ನು ತೆಗೆಯಲು ಕೂಡ ಕೆಲವು “ಸ್ಪೆಷಲಿಸ್ಟ್” ಗಳು ಇದ್ದಾರಂತೆ. ಅವರೇ, ರೋಗಿಗೆ ವಾಂತಿ ಮಾಡಲು ಕೆಲವು ವಿಶೇಷ ಔಷಧಿ ಕೊಟ್ಟು ವಾಂತಿ ಮಾಡಿಸಿದಾಗ, ಮದ್ದು ಹೊರಗೆ ಬಿದ್ದು ಅದನ್ನು ಮನೆಯವರಿಗೆ ತೋರಿಸಿ ದೊಡ್ಡ ಮೊತ್ತದ ಹಣ ಗಳಿಸುವ ವೈದ್ಯ ಮಹಾಶಯರು. ಒಂದು ವೇಳೆ ಕಡಿಮೆಯಾಗದಿದ್ದರೆ, ಮರಳಿ ಯತ್ನವ ಮಾಡು ಎಂಬಂತೆ ಇನ್ನೊಬ್ಬ “ತಜ್ಞರ’ ಬಳಿ ನಡೆಯುವುದು ಇಂತವರ ಮಾಮೂಲು ‘ದಂಡ’ ಯಾತ್ರೆ. ಕೊನೆಗೆ ಯಾವುದಕ್ಕೂ ಸರಿ ಹೋಗದಿದ್ದಾಗ ಒಂದೋ ಡಾಕ್ಟರಲ್ಲಿಗೆ, ಬರುತ್ತಾರೆ… ಇಲ್ಲಾ, ನಾಲ್ಕು ಜನರ ಹೆಗಲ ಮೇಲೆ ಮಸಣಕ್ಕೆ ಸವಾರಿ!

ಇಷ್ಟೊಂದು ವಿಷಯವನ್ನು ಸಂಗ್ರಹಿಸಿದ ನನಗೆ, ನನ್ನ ಈ ರೀತಿಯ ಸಂಶಯ, ಸಿನೆಮಾಗಳಲ್ಲಿ ತೋರಿಸುವ ಪಿಶಾಚಿಗಳ ಹಾಗೆ ಎಂಬುದರ ಅರಿವೂ ಆಯಿತು. ಯಾಕೆಂದರೆ ಯಾವುದೇ ಎಚ್ಚರವಿರುವ ಮನುಷ್ಯನ ಜಠರದಲ್ಲಿ ಆಹಾರ ನಾಲ್ಕರಿಂದ ಐದು ಗಂಟೆ ಮಾತ್ರ ಉಳಿಯುತ್ತದೆ. ನಿದ್ರಿಸುವ ಅಥವಾ ಪ್ರಜ್ಞೆ ಇಲ್ಲದವರಲ್ಲಿ ಸ್ವಲ್ಪ ಹೆಚ್ಚು ಸಮಯ ಇರಬಹುದಾದರೂ, ದಿನಗಟ್ಟಲೆ ಅಂತೂ ಅಲ್ಲ. ಸಾಧಾರಣ ಎಲ್ಲಾ ಆಹಾರವು ಜಠರದಲ್ಲಿ ಕರಗುತ್ತದೆ. ಕರಗದೇ ಇರುವ ಆಹಾರ ಸಣ್ಣ ಕರುಳಿಗೆ ಹೋಗಿ, ದೊಡ್ದ ಕರುಳಿನಲ್ಲಿ ಶೇಖರವಾಗುತ್ತದೆ. ಜಠರದಲ್ಲೇ ಉಳಿಯಬೇಕಾದರೆ ಅಲ್ಲಿ ಯಾವುದಾದರೂ ಹುಟ್ಟು ನ್ಯೂನತೆಯ ಚೀಲಗಳು ಇರಬೇಕು. ಇಲ್ಲವಾದರೆ ಜಠರದ ಕೆಳಗಿನ ಬಾಯಿ ಮುಚ್ಚಿರಬೇಕು. ಹಾಗಿದ್ದಿದ್ದರೆ ಆ ವ್ಯಕ್ತಿಗೆ ವಾಂತಿ ಜೋರಾಗಿ ಅದು ಖಂಡಿತ ನಿಲ್ಲದೆ ವೈದ್ಯರ ಬಳಿ ಎಂದೋ ತಲುಪಿರುತ್ತಾರೆ..

ಇವರೊಂದಿಗೆ ಹೆಚ್ಚು ಮಾತನಾಡಿದರೆ ಸಮಯ ವ್ಯರ್ಥ ಎನ್ನುತ್ತಾ ವಾರ್ಡಿಗೆ ದಾಖಲು ಮಾಡಿ, ಚಿಕಿತ್ಸೆಯಲ್ಲಿ ತೊಡಗಿದ್ದೆ. ಹಗಲು ಕಳೆದು ಸೂರ್ಯ ಮುಳುಗಿ, ರಾತ್ರಿಯ ಚಂದ್ರ ಬಂದು ಹೋಗಿ, ಮರುದಿನ ಊರಿನ ಕತ್ತಲು ಹರಿದರೂ ಹರಿಣಿಯ ಪರಿಸ್ಥಿತಿಯಲ್ಲಿ ಯಾವುದೇ ಬೆಳಕು ಕಾಣಲಿಲ್ಲ.

ಇನ್ನು ಈ ಮದ್ದು ತೆಗೆಯುವುದು ಸಂತೆಯಲ್ಲಿ, ಜಾತ್ರೆಯಲ್ಲಿ, ಕಿವಿ, ಕಣ್ಣಿನಿಂದ ಕಲ್ಲು ತೆಗೆದಂತೆ. ತಮ್ಮ ಕೈಚಳಕದಿಂದ ತಾವೇ ಹಾಕಿದ್ದನ್ನು ರಾಶಿಗಟ್ಟಲೆ ತೆಗೆದು ತೋರುವವರಂತೆ ಇದು ಒಂದು ವೃತ್ತಿ. ಆದರೆ ಕೆಲವೊಮ್ಮೆ ಈ ರೀತಿಯ ಪ್ರಕ್ರಿಯೆಯ ನಂತರ ರೋಗ ಗುಣ ಆಗುವುದೂ ಉಂಟು. ಶರೀರಕ್ಕೆ ಬರುವ ಅನೇಕ ರೋಗಗಳು ಮನಸ್ಸಿಗೆ ಸಂಬಂಧಿಸಿದ್ದು. ಅದರಿಂದ ಅನೇಕ ಬಗೆಯ ಚಿನ್ಹೆಗಳು ಕಂಡು ಬರಬಹುದು. ಹೀಗಿರುವಾಗ ತನ್ನಲ್ಲಿದ್ದ “ಮದ್ದು” ಹೊರಬಿತ್ತು ಎಂಬ ನಂಬಿಕೆಯೂ ಅವರನ್ನು ಗುಣಪಡಿಸಲು ಸಾಕು. ಹೀಗೆ ಎಲ್ಲಾ ವಿಷಯಗಳನ್ನು ಗ್ರಹಿಸಿದ ನಾನು ರೋಗಿಯತ್ತ ತೀವ್ರ ಗಮನವನ್ನು ಹರಿಸಿದ್ದೆ.

ಒಂದು ವಾರ ಹೀಗೆ ಕಳೆಯಿತು. ಒಂದು ದಿನ ಬೆಳಿಗ್ಗೆ ವಾರ್ಡ್‌ನಲ್ಲಿ ಹರಿಣಿಯ ಶರೀರದಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆ ಕಂಡು ಬಂದಾಗ ಆಕೆಗೆ ಲಕ್ವ ಹೊಡೆದಿಲ್ಲ ಎಂಬುದು ಸಾಬೀತಾಗಿತ್ತು. ಆ ದಿನ ಆಹಾರದಲ್ಲಿ ಪುಷ್ಟಿಕರವಾದ ಪ್ರೋಟೀನ್, ಹಾಲು ಮತ್ತು ಇತರ ಅಂಶಗಳನ್ನು ಸೇರಿಸಿ ಕೊಟ್ಟ ನನಗೆ ಮರುದಿನ ಆಶ್ಚರ್ಯ ಕಾದಿತ್ತು. ಒಂದು ವಾರದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ, ಮಗಳ ಪಕ್ಕದಲ್ಲೇ ಸದಾ ಕುಳಿತು ಆರೈಕೆ ಮಾಡುತ್ತಿದ್ದ ತಾಯಿ, ಅದರ ಹಿಂದಿನ ದಿನ ಊರಿಗೆ ಹೋಗಿದ್ದು, ರಾತ್ರಿ ನಿದ್ರೆಯಲ್ಲಿ ಹರಿಣಿ ಕೆಲವು ಶಬ್ದಗಳನ್ನು ಅಸ್ಪಷ್ಟವಾಗಿ ಉಚ್ಚರಿಸಿದ್ದನ್ನು ಪಕ್ಕದ ಹಾಸಿಗೆಯಲ್ಲಿ ಜ್ವರವೆಂದು ಅಡ್ಮಿಟ್ ಆಗಿದ್ದ ಟೀಚರ್ ಒಬ್ಬರು ಕೇಳಿಸಿಕೊಂಡಿದ್ದರು. ಹಾಗೆ ಹೇಳಿದ ಶಬ್ದಗಳ ಜೋಡಣೆ ಮಾಡಿದಾಗ ಬಂದಂತಹ ವಾಕ್ಯ ಹೀಗಿತ್ತು.

“ನೀ ನು ಟೀ ಚ ರ್ ಅ ಲ್ಲಾ, ನೀ ನು ಕೊ ಲೆ ಗಾ ರ್ತಿ , ಮಾ ಟ ಗಾ
ತಿ, ನ ನ್ನ ನ್ನೂ ಸಾ ಯಿ ಸ ಬೇ ಡ ”

ಇದನ್ನು ಕೇಳಿದ ನನಗೆ ವಿಚಿತ್ರ ಅನಿಸಿ, ಪಕ್ಕದಲ್ಲೇ ಇದ್ದ ಟೀಚರ್ ಅನ್ನು ಯಾಕೆ ಇವಳು ಕೊಲೆಗಾತಿ ಎಂದು ಕರೆಯುತ್ತಾಳೆ, ಅವರು ಏನಾದರೂ ಈಕೆಗೆ ಮಾಡಿದ್ದಾರಾ ಎಂದು ಕುಳಿತು ವಿಶ್ಲೇಷಿಸ ತೊಡಗಿದಾಗ ನನಗೆ ಹೊಳೆದದ್ದು, ಬಹುಶಃ ಆ ವಾಕ್ಯ ಅವಳ ತಾಯಿಯನ್ನು ಕುರಿತಾಗಿ ಇರಬಹುದು ಎಂದು.

ಒಂದು ವಾರದ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದ ಆಕೆ ಹೇಳಿದ ಕೆಲವೇ ಶಬ್ದಗಳು ನನಗೆ ಒಂದು ಹೊಸ ಬೆಳಕನ್ನು ನೀಡಿ ದಾರಿ ತೋರಿತ್ತು. ತಂದೆ-ತಾಯಿ ಇಬ್ಬರೂ ನನ್ನ ಕೊಠಡಿಗೆ ಬರಬೇಕೆಂದು ತಾಕೀತು ಮಾಡಿದೆ. ಅಂದಿನ ಸಂಜೆ ಕುಳಿತು ಅವರ ಜೀವನದ ವಿವರಗಳನ್ನು ಕೇಳಿದಾಗ, ತಿಳಿದದ್ದು ಬಹು ಸೋಜಿಗದ ವಿಚಾರಗಳು……

ವಿವರಗಳನ್ನು ಕೇಳಿ ದೃಢ ಮನಸ್ಸಿನಿಂದ ಮರುದಿನ ವಾರ್ಡಲ್ಲಿ ಹರಿಣಿಯ ಬಳಿ ಬಂದು ಅವಳನ್ನು ನೋಡಿ, ವಾರ್ಡಿನ ಸಿಸ್ಟರ್ ರಿಗೆ ಒಂದು ಆದೇಶ ನೀಡಿದೆ.

“ರೋಗಿಯನ್ನು ಇವರ ಕಡೆಯವರು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಇಂದಿನಿಂದ ಈಕೆಯ ತಾಯಿಯಾಗಲಿ, ಮನೆಯವರಾಗಲಿ ಯಾರೂ ಇತ್ತ ಸುಳಿಯಕೂಡದು. ಏನಿದ್ದರೂ ನಾವೇ ಆಸ್ಪತ್ರೆಯವರು ಇವಳನ್ನು ನೋಡಿಕೊಳ್ಳಬೇಕು” ಎನ್ನುತ್ತಾ ಎಲ್ಲರ ಎದುರು ಅವಳ ತಾಯಿಯನ್ನು ತರಾಟೆಗೆ ತೆಗೆದುಕೊಂಡು,
“ನಾಳೆಯಿಂದ ನಿಮ್ಮ ಮುಖವನ್ನು ಕೂಡ ನನಗೆ ತೋರಿಸಬಾರದು. ನೀವು ಸರಿಯಾಗಿ ಆಕೆಯನ್ನು ನೋಡಿಕೊಳ್ಳದೆ ಆಕೆಗೆ ಈ ಸ್ಥಿತಿ ಬಂದಿದೆ” ಎಂದು ರೇಗಾಡಿದೆ. ದುಖಿಃತರಾದ ತಾಯಿ ಅಲ್ಲಿಂದ ಅಳುತ್ತಾ ಕಾಲ್ಕಿತ್ತಿದ್ದರು. ಆಸ್ಪತ್ರೆಯವರ ಮೇಲ್ವಿಚಾರಣೆಯಲ್ಲಿ ಹರಿಣಿಯ ಚಿಕಿತ್ಸೆ ಮುಂದುವರಿಯಿತು.

ಮಹದಾಶ್ಚರ್ಯ ಎಂಬಂತೆ ಮುಂದಿನ ಒಂದೆರಡು ದಿನಗಳಲ್ಲೇ ಹರಿಣಿ, ಆಹಾರ ಸೇವಿಸಿ, ಮಲ ಮೂತ್ರಕ್ಕೆ ಟಾಯ್ಲೆಟ್ ಗೆ ಕಷ್ಟಪಟ್ಟು ಹೋಗಲು ತೊಡಗಿದವಳು, ಕೆಲವೇ ದಿನಗಳಲ್ಲಿ ಸುಮಾರಾಗಿ ಸುಧಾರಿಸಿದರೂ, ಒಂದು ತಿಂಗಳಿಂದ ಅನ್ನಾಹಾರ ಸರಿಯಾಗಿ ಇಲ್ಲದೆ ಇದ್ದುದರಿಂದ ಸುಸ್ತು ಮಾತ್ರ ತುಂಬಾ ಇತ್ತು. ಅದು ಕೂಡ ಕೆಲವು ದಿನಗಳಲ್ಲಿ ಕಡಿಮೆಯಾಗಿ ತನ್ನ ಊಟವನ್ನು ತಾನೇ ಮಾಡುತ್ತಾ, ನಾಲ್ವರ ಹೆಗಲೇರಲು ತಯಾರಾಗಿ ಗಾಲಿಯ ಕುರ್ಚಿಯಲ್ಲಿ ಬಂದಿದ್ದ ಹರಿಣಿ, ಚಿಗರೆಯಂತೆ ಜಿಗಿಯುತ್ತ ತನ್ನ ಮನೆ ಸೇರಿದ್ದಳು.

ಈಗ ಆ ಹುಡುಗಿಗೆ ಏನಾಗಿತ್ತು, ಹೇಗೆ ಸರಿಯಾದಳು ಎನ್ನುವ ಕುತೂಹಲ ಎಲ್ಲರಿಗೂ ಇರುವುದು ಸಹಜ. ನನಗೆ ತಿಳಿದಂತೆ ಅದರ ಒಳಗುಟ್ಟು ಇಲ್ಲಿದೆ, ಕೇಳಿ.

ಹರಿಣಿಯ ತಾಯಿ ಕಾವೇರಮ್ಮ ಕೊಡಗಿನವರೇ ಆದರೂ, ಕೋಲಾರದ ಪಕ್ಕದ ಒಂದು ಹಳ್ಳಿಯಲ್ಲಿ ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದು, ಆ ಊರಿನ ಪಟೇಲರ ಮಗ ಚಂದ್ರಪ್ಪನನ್ನು ಅವರ ತಂದೆ ತಾಯಿಯರ ಇಷ್ಟದ ವಿರುದ್ಧವಾಗಿ ಮದುವೆ ಆಗಿದ್ದರು. ಕೊಡಗಿನ ಬೆಡಗಿಗೆ ಕೋಲಾರದ ಬಿಸಿಲಿಗೆ ಹೊಂದಿಕೊಳ್ಳಲು ಕಷ್ಟವಾದರೂ, ಆ ಜೋಡಿ ಹಕ್ಕಿಗಳ ಜೀವನ ನೌಕೆ ಹಾಗೂ ಹೀಗೂ ತೇಲುತ್ತಾ ಸಾಗಿತ್ತು. ಅದೇ ಊರಿನಲ್ಲಿ ಬೇರೆಯೇ ಮನೆಮಾಡಿ ಜೀವಿಸುತ್ತಿದ್ದ ಅವರಿಗೆ ಕಾವೇರಮ್ಮ ಗರ್ಭಿಣಿ ಆದಾಗ ಆದ ಸಂತೋಷ ಹೇಳ ತೀರದು. ಆದರೆ ವಿಧಿಯು ಇವರ ಸಂತೋಷಕ್ಕೆ ಕಲ್ಲು ಹಾಕಲು ಮೊದಲೇ ನಿಶ್ಚಯಿಸಿತ್ತು. ಸಣ್ಣದೊಂದು ಹೃದಯದ ತೊಂದರೆ ಇದ್ದ ಚಂದ್ರಪ್ಪ, ಅದನ್ನು ತನ್ನ ಹೆಂಡತಿಯ ಹೊರತು ಬೇರೆ ಯಾರಿಗೂ ಹೇಳದೆ ಮುಚ್ಚಿಟ್ಟಿದ್ದ. ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿ ಮನೆಗೆ ಬಂದ ಆತ, ಎದೆ ನೋವೆಂದು ಮಲಗಿದವನು ಮಾರನೆಯ ಬೆಳಗ್ಗೆ ಏಳಲೇ ಇಲ್ಲ. ತುಂಬು ಗರ್ಭಿಣಿ ಕಾವೇರಿಗೆ ಆಕಾಶ ಕೆಳಗೆ ಕಳಚಿ ಬಿದ್ದಂತಾಗಿತ್ತು. ಚಂದ್ರಪ್ಪನ ಮನೆಯವರು ಬಂದು ಆಕೆಯನ್ನೇ ಒಂದಷ್ಟು ದೂಷಿಸಿ ಹೋಗಿದ್ದರು. ಆಗ, ಆಕೆಯ ತಾಯಿ ಬಂದು ಅವಳನ್ನು ತಮ್ಮ ಊರು, ಕೊಡಗಿಗೆ ಕರೆದುಕೊಂಡು ಹೋಗಿದ್ದರು. ಅಲ್ಲಿಯೇ ನಮ್ಮ ಕಥಾನಾಯಕಿ ಜನ್ಮ ತಳೆದಿದ್ದಳು.

ಟೀಚರ್ ಕೆಲಸ ಒಂದು ಕೈಯಲ್ಲಿದ್ದುದರಿಂದ ಹಾಗೂ-ಹೀಗೂ ಮಗುವನ್ನು ಸಾಕುತ್ತಾ ಕಾವೇರಿ ದಿನ ಕಳೆದಿದ್ದಳು. ವಯಸ್ಸಾದ ತಂದೆ-ತಾಯಿ, ತಮಗೆ ಇವರ ಜವಾಬ್ದಾರಿಯನ್ನು ಹೊರುವುದು ಕಷ್ಟವೆಂದು ತೋರಿ, ಕಾವೇರಮ್ಮನ ಕೂಡಾವಳಿಯನ್ನು ಪಕ್ಕದ ಗ್ರಾಮದ ಬೆಳ್ಳಿಯಪ್ಪನ ಜೊತೆಗೆ ಮಾಡಿದ್ದರು. ಮುಂಬೈಯಲ್ಲಿ ಸೆಕ್ಯೂರಿಟಿ ಕೆಲಸದಲ್ಲಿ ಇದ್ದ ಬೆಳ್ಳಿಯಪ್ಪ, ವರ್ಷಕ್ಕೆ ಒಂದೆರೆಡು ಬಾರಿ ಮಾತ್ರ ಮನೆಗೆ ಬರುತ್ತಿದ್ದ. ಹೆಂಡತಿಗೆ, ಹನ್ನೆರಡು ವರ್ಷದ ಮಗಳು ಇದ್ದರೂ ಬೇಸರಿಸದೆ ರಜೆಯಲ್ಲಿ ಬರುವಾಗ ಹರಿಣಿಗೆ ತಂದ ಉಡುಗೊರೆಗಳು ಅನೇಕ. ಆದರೂ ತನ್ನ ಮಲ ತಂದೆಯನ್ನು ಮಲತಂದೆ ಎಂಬ ದೃಷ್ಟಿಯಿಂದಲೇ ನೋಡುತ್ತಿದ್ದ ಹರಿಣಿಗೆ, ಮುಂದಿನ ವರ್ಷ ತಾಯಿ ತನಗೊಬ್ಬ ತಮ್ಮನನ್ನು ಹೆತ್ತದ್ದು ಬಹಳ ಕಸಿವಿಸಿ ಉಂಟು ಮಾಡಿತ್ತು. ತಾಯಿಯ ಜೊತೆಯಲ್ಲಿ ಮಲಗಲು ಹಟ ಹಿಡಿಯುತ್ತಿದ್ದ ಆಕೆಗೆ, ಮಲ ತಂದೆ
ಒಬ್ಬ ಪ್ರತಿಸ್ಪರ್ಧಿಯಂತೆ ಕಾಣುತ್ತಿದ್ದಾಗ, ಮತ್ತೊಬ್ಬ ಪ್ರತಿಸ್ಪರ್ಧಿ ಬಂದದ್ದು ಸಹಿಸಲು ಅಸಾಧ್ಯವಾಗಿತ್ತು. ಅದೇ ಭಾವನೆಗಳನ್ನು ಮನಸ್ಸಿನಲ್ಲಿ ಹೊತ್ತು ಬೆಳೆದು ಕೌಮಾರ್ಯಾವಸ್ಥೆಯನ್ನು ತಲುಪಿದ್ದಳು ಹರಿಣಿ.

ಇದೇ ಸಮಯಕ್ಕೆ ಕೋಲಾರದಿಂದ ಬಂದ ಒಂದು ಪತ್ರ, ಆಕೆಯ ಜೀವನಕ್ಕೇ ಮುಳ್ಳಾಗಿತ್ತು. ಚಂದ್ರಪ್ಪನ ತಂದೆ ಸಾಯುವ ಸ್ಥಿತಿಯಲ್ಲಿದ್ದು, ತನ್ನ ಕುಟುಂಬದ ಕುಡಿಯನ್ನು ಕೊನೆಯ ಬಾರಿಗೆ ನೋಡಬೇಕು ಎಂಬ ಆಸೆಯ ಸಂದೇಶವನ್ನು ಹೊತ್ತು ತಂದಿತ್ತು, ಆ ಪತ್ರ. ಹರಿಣಿ, ಚಿಕ್ಕಂದಿನಲ್ಲಿ ಎರಡು ಮೂರು ಬಾರಿ ಅಲ್ಲಿಗೆ ಹೋಗಿದ್ದರೂ, ಮಲ ತಂದೆ ಬಂದ ನಂತರ ಅಲ್ಲಿಗೆ ಹೋಗಿರಲಿಲ್ಲ. ಈ ಬಾರಿ ಮತ್ತೆ ಅಲ್ಲಿಗೆ ಹೋಗಲು ತಾಯಿಗೆ ರಜೆ ಇಲ್ಲದ ಕಾರಣ, ಚಿಕ್ಕಪ್ಪ ಅವಳನ್ನು ಕರೆದೊಯ್ದು ಬಿಟ್ಟು ಬಂದಾಗ, ಒಂದು ತಿಂಗಳ ಕಾಲ ಅಲ್ಲಿಯೇ ಉಳಿದಿದ್ದಳು. ಮೊಮ್ಮಗಳ ಒಡನಾಟದಲ್ಲಿ, ಅಜ್ಜನ ಕಾಯಿಲೆ ಗುಣವಾಗಿ, ಆತ ಬದುಕಿ ಉಳಿದಿದ್ದ. ಆದರೆ, ಆ ಸಮಯದಲ್ಲಿ ತನ್ನ ತಂದೆಯ ಬಗ್ಗೆ ಆಕೆಗೆ ತಿಳಿದಿರದ ಕೆಲವು ವಿಷಯಗಳು ಇವಳ ಕಿವಿಗೆ ಅವರಿವರ ಬಾಯಿಂದ ಬಿದ್ದಿತ್ತು. ಅವರು ಬಿತ್ತಿದ್ದ ಆ ಸಂಶಯದ ಬೀಜವನ್ನು ಹೊತ್ತುಕೊಂಡೇ ವಾಪಸು ಕೊಡಗಿಗೆ ಬಂದಿದ್ದಳು.

ಹರಿಣಿಗೆ ಅಲ್ಲಿ ಕೇಳ್ಪಟ್ಟ ವಿಷಯ ಇಷ್ಟು: ಆಕೆಯ ತಂದೆ ಹೃದ್ರೋಗದಿಂದ ಸಾಯಲಿಲ್ಲ, ಬದಲಿಗೆ ತಾಯಿಯೇ ವಿಷ ಹಾಕಿ ಸಾಯಿಸಿದ್ದು ಅಂತ. ಅದೇ ಸಂಶಯದಿಂದ ಚಂದ್ರಪ್ಪನ ಪಾಲಿನ ಯಾವುದೇ ಆಸ್ತಿಯೂ, ಅವನ ಹೆಂಡತಿಗೆ ಸಿಗದಂತೆ, ಅದನ್ನು ತನ್ನ ಮೊಮ್ಮಗಳ ಹೆಸರಿಗೆ ಬರೆದಿದ್ದ ಅವಳಜ್ಜ. ಮೊದಲೇ ಚಿಕ್ಕಪ್ಪ ಮತ್ತು ತಮ್ಮ ಬಂದಲ್ಲಿಂದ ತನ್ನ ತಾಯಿಯ ಮೇಲಿದ್ದ ಅಸಹನೀಯ ಭಾವನೆ, ಈಗಂತೂ ಅವರ ನೆರಳು ಕಂಡರೆ ದ್ವೇಷ, ಅನ್ನುವ ಮಟ್ಟಕ್ಕೆ ತಲುಪಿತ್ತು. ಒಮ್ಮೆಯೂ ಕಣ್ಣಲ್ಲಿ ಕಾಣದ ತಂದೆಯೇ ಆಕೆಗೆ ಈಗ ಹೀರೋ ಆಗಿ, ವಾತ್ಸಲ್ಯದಿಂದ ಬೆಳೆಸುತ್ತಾ ಬಂದ ತಾಯಿ, ಆಕೆಯ ಕಣ್ಣಿಗೆ ಶತ್ರುವಾಗಿ ಕಾಣುತ್ತಿದ್ದಳು. ಇದನ್ನು ಹೊರಗೆಡದೆ ಮನಸ್ಸಿನಲ್ಲೇ ಅದುಮಿಟ್ಟುದರ ಪರಿಣಾಮವಾಗಿ, ದಷ್ಟ ಪುಷ್ಟವಾಗಿ ಬೆಳೆದಿದ್ದ ಆಕೆಯ ದೇಹಕ್ಕೆ ಬಂದಂತಹ ರೋಗ, ಮಾನಸಿಕ ಖಿನ್ನತೆ ಮತ್ತು ”ಸ್ಟ್ರೆಸ್ ಇನ್ಡೂಸ್ಡ್ ಅನೋರೆಕ್ಸಿಯಾ ”

ಸಾಧಾಣವಾಗಿ ಹೆಚ್ಚಿನ ತೂಕವಿರುವ ಹೆಂಗಸರು ಶರೀರದ ಭಾರ ಇಳಿಸಲು, ಅತೀ ಪಥ್ಯ, ತನ್ನ ಶರೀರದ ರೂಪದ ಬಗ್ಗೆ ಅತಿಯಾದ ಕಾಳಜಿ ವಹಿಸುವವರಿಗೆ, ಕೌಮಾರ್ಯಾವಸ್ಥೆಯಲ್ಲಿ, ಇನ್ನೊಬ್ಬರ ಬಗ್ಗೆ ಅದರಲ್ಲೂ ತನ್ನ ಸ್ವಂತ ತಾಯಿ ಅಥವ ಕುಟುಂಬದ ಯಾವುದೇ ಸದಸ್ಯರ ಬಗ್ಗೆ ಇರುವಂತಹ, ಅಸಹನೆ, ದ್ವೇಷ ಈ ಸ್ಥಿತಿಗೆ ಎಡೆ ಮಾಡುತ್ತದೆ. ಈ ಕಾಯಿಲೆಯಲ್ಲಿ ರೋಗಿಯು ತಿನ್ನುವುದನ್ನು ತೊರೆದು, ದಿನದಿಂದ ದಿನಕ್ಕೆ ಕ್ಷೀಣಿಸುತ್ತಾ ಹೋಗುತ್ತಾಳೆ. ಇದು ಹೆಚ್ಚಾಗಿ ಹೆಂಗಸರಲ್ಲಿ ಕಾಣಿಸಿಕೊಳ್ಳುತ್ತದೆ. ಈ ರೋಗದ ಲಕ್ಷಣಗಳಲ್ಲಿ ನಿಧಾನವಾಗಿ ತೂಕದ ಇಳಿತ, ಛೋದನಿ (ಹಾರ್ಮೋನ್) ಗಳ ಕೊರತೆ, ಅತಿಯಾದ ಕೂದಲು ಬೆಳೆಯುವಿಕೆ, ರಕ್ತ ಹೀನತೆ, ವಿಟಮಿನ್ ಕೊರತೆ, ಸ್ವಯಂ ಪ್ರೇರಿತ ವಾಂತಿ ಸೇರಿರುತ್ತದೆ. ಕೊನೆಗೆ ಆಹಾರದ ಅಭಾವದಿಂದ ನಿಶ್ಯಕ್ತಿಯುಂಟಾಗಿ ಪ್ರಜ್ಞಾಹೀನ ಸ್ಥಿತಿಯನ್ನು ತಲುಪುವ ಸಂಭವವಿದೆ. ವಾಂತಿ ಆಗಿ, ಮಲಗಿದಲ್ಲಿಯೇ ಕ್ಷೀಣಗೊಂಡು ಅಲ್ಲಿಯೇ ಸಾವನ್ನಪ್ಪುವುದೂ ಉಂಟು.

ಇಲ್ಲಿ ಹರಿಣಿಗಾದದ್ದು ಅದೇ. ತನ್ನ ತಾಯಿಯ ಪ್ರೀತಿಯನ್ನು ಚಿಕ್ಕಪ್ಪ ಮತ್ತು ತಮ್ಮನೊಂದಿಗೆ ಹಂಚಿಕೊಳ್ಳಲು ಅವಳ ಮನಸ್ಸು ತಯಾರಿರಲಿಲ್ಲ. ಜೊತೆಗೆ, ಕೋಲಾರದಲ್ಲಿ ಕೇಳಿದ ಸುಳ್ಳು ವದಂತಿಯನ್ನು ನಂಬಿ, ತನ್ನ ತಾಯಿಯೇ ತಂದೆಯ ಕೊಲೆಗಾರ್ತಿ ಎಂದು ತೀರ್ಮಾನಿಸಿ ಬಿಟ್ಟಿದ್ದ ಅವಳಿಗೆ, ಅವಳ ಕೌಮಾರ್ಯಾವಸ್ಥೆ ಇದಕ್ಕೆ ಮತ್ತೂ ಇಂಬು ಕೊಟ್ಟಿತ್ತು. ಮಾನಸಿಕ ಖಿನ್ನತೆ ಆವರಿಸುತ್ತಾ ಹೋಯಿತು.

ಅತಿಯಾದ ವಾಂತಿ, ನಿಶ್ಶಕ್ತಿ, ತೂಕದ ಇಳಿತ, ಹಳ್ಳಿಯ ಜನರ ಕಣ್ಣಲ್ಲಿ ಕೈವಿಷದ ಕಡೆಗೆ ಬೊಟ್ಟು ಮಾಡಿ ತೋರಿಸಿತ್ತು.

ನಿಜ ಸ್ಥಿತಿಯನ್ನು ಗ್ರಹಿಸಿದ ನಾನು, ಅವಳ ತಾಯಿಯನ್ನು ಕೊಠಡಿಗೆ ಕರೆದಾಗ ಅವರನ್ನು ಎಲ್ಲರ ಎದುರು ಬಯ್ಯುವೇನೆಂದು ಹೇಳಿ, ಅವರೂ ನನ್ನೊಡನೆ ಸೇರಿ ನಾಟಕವಾಡಿ ವಾರ್ಡಿನಿಂದ ಹೊರಗೆ ಹೋಗಿದ್ದು, ಹರಿಣಿಗೆ ಗೊತ್ತಾಗದೆ, ಸಂತೋಷ ತರಿಸಿತ್ತು. ಅಲ್ಲಿಂದಾಚೆಗೆ, ನಾನು ದಿನವೂ ವಾರ್ಡಿಗೆ ಬಂದಾಗ, ಅವಳಿಗೆ ಮಾನಸಿಕ ಸಮಾಲೋಚನೆ (ಕೌನ್ಸೆಲಿಂಗ್) ಕೊಡುತ್ತಾ ಇದ್ದದ್ದು ಆಕೆಯನ್ನು ಗುಣಪಡಿಸಲು ಸಹಾಯ ಮಾಡಿತ್ತು.

ಆಕೆಗೆ ಗುಣವಾದ ನಂತರ, ಎಲ್ಲರೊಡನೆ ಕುಳಿತು ನಾನು ಈ ರೋಗದ, ಮತ್ತು ಆಕೆಯ ತಪ್ಪು ಕಲ್ಪನೆಗಳ ಬಗ್ಗೆ ವಿವರವಾಗಿ ಹರಿಣಿಗೆ ತಿಳಿಸಿ ಹೇಳಿದಾಗ, ಆಕೆಗೆ ತಾನು ಎಷ್ಟೊಂದು ದೊಡ್ಡ ತಪ್ಪು ಮಾಡಿದೆ ಎಂಬ ಅರಿವಾಗಿತ್ತು. ಹಾಗೆಯೇ ತನ್ನ ಮುಂದಿನ ಸುಖ ಜೀವನದತ್ತ ಪಯಣ ಬೆಳೆಸಿದ್ದಳು ಹರಿಣಿ.


ಕೊನೆಯ ಹನಿ……

ಕೆಲವು ಸಮಯದ ನಂತರ ನಾನು ಕೇಳಿದ ಸುದ್ದಿ ಎಂದರೆ, ಹರಿಣಿಯ ಮದುವೆ ನಿಶ್ಚಯವಾಗಿ, ಬಹಳ ಅದ್ಧೂರಿಯಾಗಿ ನಡೆಯಿತಂತೆ. ಆದರೆ ಸಾಯುತ್ತಾ ಸಾಗುತ್ತಿದ್ದ ಹರಿಣಿಯ ಜೀವವನ್ನು ಉಳಿಸಿದ ಆಸ್ಪತ್ರೆಯ ಯಾರಿಗೂ, ಒಂದು ಚಿಕ್ಕ ಪತ್ರವಾಗಲೀ, ಆಮಂತ್ರಣ ಪತ್ರಿಕೆಯನ್ನಾಗಲೀ ಕಳುಹಿಸುವ ಸೌಜನ್ಯ ಹರಿಣಿಯಾಗಲೀ, ಅವಳ ಪೋಷಕರಾಗಲಿ ತೋರಿರಲಿಲ್ಲ….

ಇದುವೇ ಜೀವನ, ವೈದ್ಯರು ಕಾಣುವ ಕಟು ಸತ್ಯ!