ಇಲ್ಲಿ, ಮಕ್ಕಳಿಗೆ ಕೂಡ ಬಾಲ್ಯದಿಂದಲೇ ಸಾರ್ವಜನಿಕ ಸಾರಿಗೆಯನ್ನು ಉಪಯೋಗಿಸುವಂತೆ ಶಾಲೆಗಳಲ್ಲಿ, ಮನೆಗಳಲ್ಲಿ ಪ್ರೋತ್ಸಾಹಿಸುತ್ತಿರುತ್ತಾರೆ. ಇದೇ ರೀತಿ ಸೈಕಲ್ ಉಪಯೋಗಿಸಲು ಕೂಡ ಮಗುವಿಗೆ ಒಂದೂವರೆ ವರ್ಷವಾಗಿರುವಾಗಲೇ ತರಬೇತಿ ಪ್ರಾರಂಭವಾಗುತ್ತದೆ. ನೀವು ಒಂದು ಸೈಕಲನ್ನು ಮಗುವಿಗೆ ಒಂದೂವರೆ-ಎರಡು ವರ್ಷವಾಗಿದ್ದಾಗ ಖರೀದಿಸಿದರೆ, ಅದರಲ್ಲಿರುವ ಬೇರೆ ಬೇರೆ ಭಾಗಗಳನ್ನು ಕ್ರಮೇಣವಾಗಿ ಉಪಯೋಗಿಸುತ್ತಾ ತುಂಬಾ ವರ್ಷ ಬಳಸಬಹುದು.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ಎಂಟನೆಯ ಬರಹ
ನೆದರ್‌ಲ್ಯಾಂಡ್ಸ್‌ನಲ್ಲಿ ಎಲ್ಲ ಕುಟುಂಬಗಳವರು ಕಾರು ಕೊಳ್ಳುವುದಿಲ್ಲ. ಕಾರಿನಲ್ಲಿ ಓಡಾಡಲು ಬಯಸುವುದೂ ಇಲ್ಲ. ಇಲ್ಲಿಗೆ ಬಂದ ಭಾರತೀಯರಲ್ಲೂ ಕೂಡ ಕೆಲವರು ಎಂಟು ಹತ್ತು ವರ್ಷಗಳ ವಾಸದ ನಂತರವೂ ಕಾರು ಕೊಳ್ಳುವುದಿಲ್ಲ. ಟ್ರಾಮ್, ರೈಲು, ಬೈಸಿಕಲ್‌ಗಳಲ್ಲೇ ಜೀವನ ಕಳೆಯುತ್ತಾರೆ.
ಹದಿನೇಳು ದಶಲಕ್ಷ ಜನಸಂಖ್ಯೆ ಇರುವ ಈ ದೇಶದಲ್ಲಿ ಇಪ್ಪತ್ತೆರಡು ದಶಲಕ್ಷ ಬೈಸಿಕಲ್‌ಗಳಿವೆ. ಮೂವತ್ತೆರಡು ಸಾವಿರ ಕಿಲೋಮೀಟರ್ ಸೈಕಲ್ ಸವಾರರಿಗೆ ಮೀಸಲಾದ ರಸ್ತೆಯ ಭಾಗವಿದೆ. ಒಂದೊಂದು ಮನೆಯಲ್ಲೂ ಮೂರು ನಾಲ್ಕು ಸೈಕಲ್‌ಗಳಿರುತ್ತವೆ. ಕೆಲಸ ಮಾಡಲು, ಪೇಟೆ ಬೀದಿಗೆ ಹೋಗಲು ಒಂದು ರೀತಿಯ ಸೈಕಲ್ ಇದ್ದರೆ, ಮೋಜು ಮಸ್ತಿ ಮಾಡಲು ಬೇರೊಂದು ರೀತಿಯ ಸೈಕಲ್ ಇರುತ್ತದೆ. ಯುರೋಪಿನ ಬಹುಪಾಲು ದೇಶಗಳು ಗುಣಮಟ್ಟದ ಕಾರುಗಳನ್ನು ತಯಾರಿಸುತ್ತಿದ್ದು, ಫ್ರಾನ್ಸ್, ಜರ್ಮನಿ, ಸ್ವಿಟ್‌ಜರ್‌ಲ್ಯಾಂಡ್ ದೇಶಗಳು ತಮ್ಮದೇ ಆದ ಜಗತ್‌ಪ್ರಸಿದ್ಧ ಬ್ರಾಂಡ್‌ಗಳನ್ನು ಹೊಂದಿವೆ. ನೆದರ್‌ಲ್ಯಾಂಡ್ಸ್‌ಗೆ ವಿಶಿಷ್ಟವಾದ ಯಾವ ಕಾರುಗಳ ಬ್ರಾಂಡೂ ಇಲ್ಲ. ನಾಗರಿಕರಲ್ಲಿ ಪ್ರತಿಶತ ಮೂವತ್ತಾರು ಮಂದಿ ಕಾರುಗಳನ್ನು, ನಲವತ್ತೈದು ಮಂದಿ ಬೈಸಿಕಲ್‌ಗಳನ್ನು, ಹದಿನೈದು ಮಂದಿ ರೈಲುಗಳನ್ನು ಬಳಸುತ್ತಾರೆ.
ನೆದರ್‌ಲ್ಯಾಂಡ್ಸ್ ಬದುಕಿನಲ್ಲಿ ಬೈಸಿಕಲ್ ಮುಂಚೂಣಿಗೆ ಬಂದದ್ದು ಕಳೆದ ನೂರು ವರ್ಷಗಳಲ್ಲೇ. ಇಂಧನದ ಬಳಕೆ ಕಡಿಮೆ ಮಾಡಲು, ಅಪಘಾತಗಳ ಸಂಖ್ಯೆ ಕಡಿಮೆ ಮಾಡಲು ಸೈಕಲ್ ಬಳಕೆಯನ್ನು ಸರ್ಕಾರ, ಸಮಾಜ ಪ್ರೋತ್ಸಾಹಿಸುತ್ತವೆ. ಸರ್ಕಾರದ ಒತ್ತಾಸೆ, ಹಲವು ರೀತಿಗಳಲ್ಲಿ ಪ್ರಕಟವಾಗುತ್ತದೆ. ಸೈಕಲ್ ಸವಾರರಿಗೆ ಪ್ರತ್ಯೇಕವಾದ ಮಾರ್ಗವಿದೆ. ಸಿಗ್ನಲ್ ಬಿಂದುವಿನಲ್ಲಿ ವಾಹನ ಚಲಿಸಲು ಅನುಮತಿ ನೀಡುವಾಗ ಮೊದಲ ಆದ್ಯತೆ ಸೈಕಲ್ ಸವಾರರಿಗೇ. ಒಂದು ಬೆಳಿಗ್ಗೆ ನಾವು ಸಿಗ್ನಲ್ ಬಿಂದುವಿನಲ್ಲಿ ಹಸಿರು ಚಿಹ್ನೆಗೆ ಕಾಯುತ್ತಾ ನಿಂತಿದ್ದೆವು. ಅದು ಸ್ಕೂಲಿಗೆ ಹೋಗುವ ಸಮಯ. ಎಲ್ಲರಿಗೂ ಆತುರ. ಎಂಟು ಹತ್ತು ಸಲ ಹಸಿರು ದೀಪದ ಚಿಹ್ನೆ ಮೂಡಿ ಬಂತು. ಆದರೆ ಅದು ಸೈಕಲ್ ಸವಾರರಿಗೆ ಮಾತ್ರ. ಉಳಿದ ಎಲ್ಲ ವಾಹನಗಳವರು ಕಾಯುತ್ತಾ ನಿಂತಿರಬೇಕು. ಸೈಕಲ್ ಸವಾರರಿಗೆ ಸರ್ಕಾರದ ಈ ಆದ್ಯತೆ ಚೆನ್ನಾಗಿ ಗೊತ್ತಿದೆ. ರಸ್ತೆಯ ಮೇಲೆ ತಮ್ಮದೇ ಪ್ರಥಮ ಹಕ್ಕು ಎಂಬ ಅಹಂಕಾರದಿಂದಲೇ ವರ್ತಿಸುತ್ತಾರೆ. ಆಕಸ್ಮಿಕವಾಗಿ ನೀವು ಸೈಕಲ್ ಲೇನ್‌ನಲ್ಲಿ ಓಡಾಡುತ್ತಿದ್ದರೆ, ಬಿರುಸಿನಿಂದ ಹೋಗುತ್ತಾರೆ, ಕಿರುಚಾಡುತ್ತಾರೆ. ಅಪಘಾತದ ವಿಚಾರಣೆ ನಡೆಸುವಾಗ ನ್ಯಾಯಾಲಯಗಳು, ವಿಮಾ ಕಂಪನಿಗಳು ಕೂಡ ಸೈಕಲ್ ಸವಾರರ ಪರವಾಗಿಯೇ ಇರುತ್ತವೆ. ಸರ್ಕಾರದ ಸಾಗಣೆ ನೀತಿಯಲ್ಲೂ ಕೂಡ ಬೈಸಿಕಲ್ ಸವಾರರ, ಅವರ ಅವಶ್ಯಕತೆಗಳ ಕಡೆಯೇ ಗಮನ. ಹೆಚ್ಚು ಸೈಕಲ್‌ಗಳನ್ನು ಇನ್ನೂ ಹೇಗೆ ಆಕರ್ಷಕವಾಗಿ ಉತ್ಪಾದಿಸಬಹುದು, ರಸ್ತೆಯಲ್ಲಿ ಇನ್ನೂ ಹೆಚ್ಚಿನ ಭಾಗವನ್ನು ಸೈಕಲ್ ಸವಾರರಿಗೆ ಹೇಗೆ ಮೀಸಲಿಡಬಹುದು, ಈ ರೀತಿಯ ಆಲೋಚನೆಗಳೇ. ಪ್ರಕೃತಿ, ಹವಾಮಾನ ಕೂಡ ಸೈಕಲ್ ಸವಾರರ ಪರವಾಗಿಯೇ ಇದೆ. ಎಷ್ಟೇ ವೇಗವಾಗಿ, ಎಷ್ಟು ಹೊತ್ತು ನೀವು ಸೈಕಲ್ ಓಡಿಸಿದರೂ ಇಲ್ಲಿಯ ಶೀತದ ವಾತಾವರಣದಲ್ಲಿ, ಸಮತಟ್ಟಾದ ರಸ್ತೆಗಳಲ್ಲಿ ನಿಮಗೆ ದಣಿವಾಗುವುದಿಲ್ಲ, ಬೆವರು ಮೂಡುವುದಿಲ್ಲ.
ನನ್ನ ಮಗಳ ಮನೆಯಲ್ಲಿ ಇರುವ ನಾಲ್ಕು ಜನಕ್ಕೆ ಒಂದೊಂದು ಸೈಕಲ್ ಇದೆ. ಜೊತೆಗೆ ಭಾರತೀಯ ಮಧ್ಯಮ ವರ್ಗದ ಅಭ್ಯಾಸದಂತೆ ಒಂದು ಕಾರೂ ಇದೆ. ಹೆಚ್ಚು ಬಳಸುವುದು ಸೈಕಲನ್ನೇ. ಕಾರು ಸರಾಸರಿ ದಿನವೊಂದಕ್ಕೆ ನಾಲ್ಕೈದು ಮೈಲಿಗಳು ಮಾತ್ರ ಓಡಬಹುದು. ನಂತರ ಬಳಸುವುದು ಟ್ರಾಮನ್ನೇ. ಇದು ಅನಿವಾರ್ಯ ಮತ್ತು ಉಪಯುಕ್ತ. ಅನಿವಾರ್ಯಕ್ಕಿಂತ ಮುಖ್ಯ ಕಾರಣ, ಟ್ರಾಮ್ ನಿಲ್ದಾಣ ಮನೆಯಿಂದ ಇನ್ನೂರು ಮೀಟರ್ ದೂರದಲ್ಲೇ ಇರುವುದು. ಇನ್ನೊಂದು ನೂರೆಪ್ಪತ್ತೈದು ಮೀಟರ್ ಮುಂದೆ ಹೋದರೆ ಮುಖ್ಯ ರೈಲ್ವೆ ನಿಲ್ದಾಣ. ಟ್ರಾಮ್ ನಗರದೊಳಗೆ ಓಡಾಡಲು. ಮುಖ್ಯ ರೈಲ್ವೆ ನಿಲ್ದಾಣದಿಂದ ಬೇರೆ ನಗರಗಳಿಗೆ, ದೇಶಗಳಿಗೆ ಹೋಗಬಹುದು. ನನಗೆ ಎರಡು ಸ್ಟೇಶನ್‌ಗಳು ತುಂಬಾ ಇಷ್ಟವಾದವು. ಟ್ರಾಮ್ ನಿಲ್ದಾಣದಲ್ಲಿ ಎರಡು ಪುಟ್ಟ ಬೆಂಚುಗಳು, ಒಂದು ಚಿಕ್ಕ ಫ್ಲಾಟ್‌ಫಾರಂ ಇದೆ. ಸಣ್ಣದೊಂದು ನೋಟೀಸ್ ಬೋರ್ಡ್. ಒಂದು ಎಂಟು ಹತ್ತು ಮಂದಿ ಪ್ರಯಾಣಿಕರು. ಅವರು ಕೂಡ ಒಬ್ಬರಿಂದ ಒಬ್ಬರು ದೂರದಲ್ಲಿ ನಿಂತಿರುತ್ತಾರೆ. ನಮ್ಮ ಹಳ್ಳಿಯ ಬಸ್ ನಿಲ್ದಾಣವನ್ನು ನೆನಪಿಗೆ ತರುತ್ತದೆ. ಕೊಪ್ಪದ ಬಸ್ ನಿಲ್ದಾಣ ನೆನಪಿಗೆ ಬಂತು. ಅಲ್ಲಿ ಬಸ್ ನಿಲ್ದಾಣದಲ್ಲಿ ಬಸ್‌ಗೆ ಕಾಯುತ್ತಿರುವವರು, ಬಸ್‌ನಿಂದ ಇಳಿಯುವವರು, ಅವರ ಪ್ರಯಾಣದ ಕಾರಣ, ಎಲ್ಲವೂ ಎಲ್ಲರಿಗೂ ಗೊತ್ತಿರುತ್ತದೆ. ಇಲ್ಲೂ ಕೂಡ ಪ್ರಯಾಣಿಕರ ಮುಖ ಬಳಕೆಯಾಗುತ್ತದೆ. ಆದರೆ ಇಲ್ಲಿ ಶಿಷ್ಟಾಚಾರವೇ ಆತ್ಮೀಯತೆಗಿಂತ ಪ್ರಧಾನವಾದ್ದರಿಂದ, ಯಾರೂ ಒಬ್ಬರೊಡನೆ ಒಬ್ಬರು ಮಾತನಾಡುವುದಿಲ್ಲ. ಏಳು ನೂರು-ಎಂಟು ನೂರು ಮೀಟರ್‌ಗಳಿಗೆ ಒಂದು ಟ್ರಾಮ್ ಸ್ಟೇಶನ್ ಇರುತ್ತದೆ. ಜೊತೆಗೆ ಟ್ರಾಫಿಕ್ ಸಿಗ್ನಲ್ ಬಂದಾಗಲೂ ಟ್ರಾಮ್ ನಿಲ್ಲುತ್ತದೆ. ನಗರದಲ್ಲಿ ಸುಮಾರು ಇಪ್ಪತು ಸ್ಟೇಶನ್‌ಗಳನ್ನು ತಲುಪಿ ಮತ್ತೆ ಹೋದ ದಾರಿಯಲ್ಲೇ ವಾಪಸ್ ಬರುತ್ತದೆ. ಹಾಗಾಗಿ ವೇಗವೇನಿರುವುದಿಲ್ಲ. ದಾರಿಯುದ್ದಕ್ಕೂ ನಿಮಗೆ ಮನೆಗಳು ಕಾಣುತ್ತವೆ. ಬಾಲ್ಕನಿಯಲ್ಲಿ ಕುಳಿತವರು, ಬಟ್ಟೆ ಒಣಗಿ ಹಾಕುವವರು, ಬಿಸಿಲು ಕಾಯಿಸಿಕೊಳ್ಳುತ್ತಿರುವವರು, ಅಂಗಡಿಗಳಿಂದ ನಿಧಾನವಾಗಿ ಹಿಂತಿರುಗುತ್ತಿರುವವರು, ಒಂದು ಚಿತ್ರದ ಚುಕ್ಕೆಗಳಂತೆ ಕಾಣುತ್ತಾರೆ. ನಗರದ ಒಂದು ಬಡಾವಣೆಯಿಂದ ಇನ್ನೊಂದು ಬಡಾವಣೆಗೆ, ಬಡಾವಣೆಯ ಒಂದು ಬೀದಿಯಿಂದ ಇನ್ನೊಂದು ಬೀದಿಗೆ ಹೋಗಲು ಬಳಸುವ ಟ್ರಾಮ್‌ನಲ್ಲಿ ಸೈಕಲ್‌ಗಳಿಗೆ, ನಾಯಿಗಳಿಗೆ, ಮಕ್ಕಳನ್ನು ಕೂರಿಸಿಕೊಂಡು ಹೋಗುವ ಕೈಗಾಡಿಗಳಿಗೆ ಪ್ರತ್ಯೇಕ ವ್ಯವಸ್ಥೆಯಿರುತ್ತದೆ. ನಗರದೊಳಗೆ, ಬಡಾವಣೆಗಳ ನಡುವೆ ಓಡಾಡುವ ಟ್ರಾಮ್ ಎಂದು ಯಾವ ರೀತಿಯ ಉಪೇಕ್ಷೆಗೂ ಒಳಗಾಗುವುದಿಲ್ಲ. ಸೀಟು, ಹವಾನಿಯಂತ್ರಿತ ವ್ಯವಸ್ಥೆ, ಇವೆಲ್ಲ ಅಂತರರಾಷ್ಟ್ರೀಯ ರೈಲುಗಳ ರೀತಿಯಲ್ಲೇ ಇರುತ್ತದೆ. ಟಿಕೆಟ್ ಕೊಳ್ಳುವುದು, ಹಣ ಪಾವತಿ ಮಾಡುವುದು, ಎಲ್ಲವೂ ಯಂತ್ರಚಾಲಿತ. ಮಕ್ಕಳಿಗೆ ವಾರಾಂತ್ಯದ ಪ್ರಯಾಣ ಉಚಿತ. ನಿತ್ಯ ಪ್ರಯಾಣದಲ್ಲೂ ರಿಯಾಯತಿ ಉಂಟು. ಜನ ಎಷ್ಟು ನೆಮ್ಮದಿಯಿಂದ, ಗಡಿಬಿಡಿಯಿಲ್ಲದೆ ಓಡಾಡುತ್ತಾರೆ, ಟ್ರಾಮ್‌ನೊಳಗೆ ಯಾವುದೇ ಆತಂಕವಿಲ್ಲದೆ ಕೂತಿರುತ್ತಾರೆಂದರೆ, ನಿಮಗೆ ನೋಡಿದರೇ ಅಸೂಯೆಯಾಗುತ್ತದೆ. ಈ ಕುರಿತು ನನ್ನಲ್ಲಿ ಮೂಡುತ್ತಿದ್ದ ಅಸೂಯೆ, ಅಸಹನೆಯ ಬಗ್ಗೆ ನಾನು ಪ್ರತ್ಯೇಕವಾಗಿ ಬರೆದಿದ್ದೇನೆ.
ಮನೆ ಕಟ್ಟಿಕೊಳ್ಳಲು ನೀವು ಪುರಸಭೆಗೆ ಅರ್ಜಿ ಹಾಕಿದರೆ, ಗುತ್ತಿಗೆದಾರರು ಅಪಾರ್ಟ್ಮೆಂಟ್‌ಗಳನ್ನು ಕಟ್ಟಲು ಪರವಾನಗಿ ಬೇಡಿದರೆ, ಒಂದಂಶವನ್ನು ಕಡ್ಡಾಯವಾಗಿ ಪರಿಶೀಲಿಸುತ್ತಾರೆ. ನಿವೇಶನವು ಟ್ರಾಮ್ ಮತ್ತು ಬಸ್ ನಿಲ್ದಾಣಕ್ಕೆ ಹತ್ತಿರವಿದ್ದರೆ ಮಾತ್ರ ಅನುಮತಿ. ಹೆಚ್ಚು ಹೆಚ್ಚು ನಾಗರಿಕರು, ಹೆಚ್ಚು ಹೆಚ್ಚು ಸಾರ್ವಜನಿಕ ಸಾರಿಗೆ ಬಳಸಬೇಕು, ಖಾಸಗಿ ವಾಹನ ಕೊಳ್ಳಬಾರದು ಎಂಬ ನೀತಿಯನ್ನು ಪ್ರೋತ್ಸಾಹಿಸಲು ಈ ಕ್ರಮ.
ಇಲ್ಲಿ, ಮಕ್ಕಳಿಗೆ ಕೂಡ ಬಾಲ್ಯದಿಂದಲೇ ಸಾರ್ವಜನಿಕ ಸಾರಿಗೆಯನ್ನು ಉಪಯೋಗಿಸುವಂತೆ ಶಾಲೆಗಳಲ್ಲಿ, ಮನೆಗಳಲ್ಲಿ ಪ್ರೋತ್ಸಾಹಿಸುತ್ತಿರುತ್ತಾರೆ. ಇದೇ ರೀತಿ ಸೈಕಲ್ ಉಪಯೋಗಿಸಲು ಕೂಡ ಮಗುವಿಗೆ ಒಂದೂವರೆ ವರ್ಷವಾಗಿರುವಾಗಲೇ ತರಬೇತಿ ಪ್ರಾರಂಭವಾಗುತ್ತದೆ. ನೀವು ಒಂದು ಸೈಕಲನ್ನು ಮಗುವಿಗೆ ಒಂದೂವರೆ-ಎರಡು ವರ್ಷವಾಗಿದ್ದಾಗ ಖರೀದಿಸಿದರೆ, ಅದರಲ್ಲಿರುವ ಬೇರೆ ಬೇರೆ ಭಾಗಗಳನ್ನು ಕ್ರಮೇಣವಾಗಿ ಉಪಯೋಗಿಸುತ್ತಾ ತುಂಬಾ ವರ್ಷ ಬಳಸಬಹುದು.
ಟ್ರಾಮ್ ನಿಲ್ದಾಣ ನನಗಂತೂ ಮನೆಯ ಭಾಗವೇ ಆಗಿಬಿಟ್ಟಿತ್ತು. ಬೇಸರವಾದಾಗ, ಮನಸ್ಸಿಗೆ ದಣಿವಾದಾಗ ಮನೆಯಿಂದ ಹೊರಬಂದು ಟ್ರಾಮ್ ನಿಲ್ದಾಣದಲ್ಲಿರುವ ಬೆಂಚಿನ ಮೇಲೆ ಕುಳಿತುಕೊಳ್ಳುತ್ತಿದ್ದೆ. ಕೊಪ್ಪದ ಮನೆಯ ಮುಂದಿನ ಬಸ್ ನಿಲ್ದಾಣ, ಹಾಗೂ ನಾನು ಇಷ್ಟಪಡುವ ರೈಲು ನಿಲ್ದಾಣಗಳೆಲ್ಲ ನೆನಪಿಗೆ ಬರುತ್ತಿದ್ದವು. ಮಂಡ್ಯ, ಮದ್ದೂರು, ಹನಕೆರೆ, ಶಿವಪುರ, ಶ್ರೀರಂಗಪಟ್ಟಣದ ಸ್ಟೇಶನ್‌ಗಳು ನೆನಪಿಗೆ ಬರುತ್ತಿದ್ದವು. ನಾವು ಮೊದಲು ನೋಡಿದಾಗ ಬೆಂಗಳೂರು, ಮೈಸೂರು ರೈಲು ನಿಲ್ದಾಣಗಳು ಕೂಡ ಚಿಕ್ಕ ಪಟ್ಟಣಗಳ ರೈಲು ನಿಲ್ದಾಣಗಳಂತೆಯೇ ಇದ್ದವು.
ಈಗಲೂ ನನಗೆ ಬೆಂಗಳೂರಿನ ರೈಲು ನಿಲ್ದಾಣದಲ್ಲಿ ಇಷ್ಟವಾದ ಭಾಗವೆಂದರೆ, ಮಲ್ಲೇಶ್ವರದ ಕಡೆಯ ಪ್ಲಾಟ್‌ಫಾರಂ.
ಟ್ರಾಮ್ ನಿಲ್ದಾಣದ ಪಕ್ಕದಲ್ಲಿರುವ ಸ್ವಲ್ಪ ದೊಡ್ಡ ಸ್ಟೇಶನ್‌ಗಳಲ್ಲಿ ಮೂರು ವಿಭಾಗಗಳಿವೆ. ಬೇರೆ ನಗರಗಳಿಗೆ ಹೋಗುವ ರೈಲುಗಳು, ಮೆಟ್ರೋ ವಿಭಾಗ, ಟ್ರಾಮ್ ವಿಭಾಗ. ಎಲ್ಲದಕ್ಕೂ ಬೇರೆ ಬೇರೆ ಪ್ಲಾಟ್‌ಫಾರಂಗಳು. ಬೇರೆ ನಗರಗಳಿಗೆ, ದೇಶಗಳಿಗೆ ಹೋಗುವ ರೈಲು ಬರುವ ಫ್ಲಾಟ್‌ಪಾರಂನಲ್ಲಿ ಮಾತ್ರ ವಿಶೇಷವಾದ ಜನಸಂದಣಿ. ನನ್ನ ಮಗಳು ವಾರದಲ್ಲಿ ಎರಡು ಮೂರು ದಿವಸ ಆಮ್‌ಸ್ಟರ್‌ಡ್ಯಾಮ್‌ನ ಕಛೇರಿಗೆ ಕೆಲಸಕ್ಕೆ ಹೋಗುತ್ತಿದ್ದಳು. ಪ್ರತಿ ಸಲವೂ ನಾನು ಅವಳನ್ನು ಸ್ಟೇಶನ್‌ಗೆ ಬಿಡಲು ಹೋಗುತ್ತಿದ್ದೆ. ಆ ಎಂಟು ಹತ್ತು ನಿಮಿಷಗಳಲ್ಲಿ ನಾವು ಕಛೇರಿಯ ವಿಷಯ, ಕುಟುಂಬದ ಸಂಗತಿಗಳು, ಎರಡು ದೇಶಗಳಲ್ಲೂ ಬದುಕು ದಿನವೂ ಬದಲಾಯಿಸುತ್ತಿರುವ ರೀತಿ, ಇವನ್ನು ಕುರಿತು ಮಾತನಾಡುತ್ತಿದ್ದೆವು. ಮಗಳನ್ನು ರೈಲಿನಲ್ಲಿ ಕೂರಿಸಿ ಟಾಟಾ ಹೇಳುವುದು ನನಗೂ ಖುಷಿ. ಶಾಲಾಬಾಲಕಿಯಂತೆ ನಾನು ಅವಳನ್ನು ಪರಿಗಣಿಸುತ್ತಿದ್ದನ್ನು ಕಂಡು ಅವಳಿಗೆ ಹುಸಿ ಮುನಿಸು ಬರುತ್ತಿತ್ತು.
ಈ ಫ್ಲಾಟ್‌ಪಾರಂನಲ್ಲೂ ಸ್ಥಳೀಯರು ಪರಸ್ಪರ ಮಾತನಾಡುವುದಿಲ್ಲ. ಅದೂ ಅಲ್ಲದೆ, ಬೆಳಿಗ್ಗೆ ಕೆಲಸಕ್ಕೆ ಹೊರಡುವ ಹೊತ್ತು. ಗಡಿಬಿಡಿ, ಆತುರ. ಕೆಲವರು ಇನ್ನೂ ತಲೆ ಬಾಚಿಕೊಳ್ಳುತ್ತಿರುತ್ತಾರೆ. ಇನ್ನು ಕೆಲವರು scarf ಕಟ್ಟಿಕೊಳ್ಳುತ್ತಿರುತ್ತಾರೆ. ಇನ್ನೂ ಕೆಲವರು ರೈಲಿನಲ್ಲಿ ಕೂರುವ ಮುನ್ನ ಇನ್ನೊಂದು ಸಲ ತುಟಿಗೆ ಲಿಪ್‌ಸ್ಟಿಕ್ ಸವರಿಕೊಳ್ಳುತ್ತಿರುತ್ತಾರೆ. ಕೈಯಲ್ಲಿರುವ ಬ್ಯಾಗಿನಲ್ಲಿರುವ ಸಾಮಾನುಗಳನ್ನೆಲ್ಲ ಪರಿಶೀಲಿಸುತ್ತಿರುತ್ತಾರೆ. ಯಾವುದೇ ಸಾಮಾನನ್ನು ಮರೆತಿಲ್ಲ ಎಂದು ಖಚಿತ ಪಡಿಸಿಕೊಂಡು ಸಮಾಧಾನದ ನಿಟ್ಟುಸಿರು ಬಿಡುತ್ತಾರೆ.
ಈ ನಿಲ್ದಾಣ ಎಷ್ಟು ಮುಖ್ಯವಾದದ್ದು ಎಂದು ನನಗೆ ಗೊತ್ತಾದದ್ದು ನಿಲ್ದಾಣದ ಆಚೆ ಬದಿಯಲ್ಲಿರುವ ಎರಡು ಕಟ್ಟಡಗಳ ಸಂಕೀರ್ಣದಿಂದ. ನಾಲ್ಕಾರು ಸಾವಿರ ಜನ ಈ ಸಂಕೀರ್ಣದಲ್ಲಿ ಕೆಲಸ ಮಾಡುತ್ತಾರೆ. ರೈಲಿನಿಂದ ಇಳಿದು ಸಾಲು ಸಾಲಾಗಿ ಶಿಸ್ತಿನಿಂದ ಬಂದು ಕಟ್ಟಡದೊಳಗೆ ಕರಗಿ ಹೋಗುತ್ತಾರೆ. ಸ್ವಲ್ಪ ಮುಂಚೆ ಬಂದವರು ಕಛೇರಿಯ ಒಳಗೆ ಹೋಗಿ, ಹಾಜರಿ ಪರೀಕ್ಷೆ ಮುಗಿಸಿ, ಚಹಾದ ಬಟ್ಟಲಿನೊಡನೆ ವಾಪಸ್ ಬಂದು ಮೆಟ್ಟಿಲುಗಳ ಮೇಲೆ ಕುಳಿತೋ, ಜಗುಲಿಯ ಮೇಲೆ ನಿಂತೋ ಸಿಗರೇಟ್ ಸೇದಿ, ಹರಟೆ ಹೊಡೆದು, ಮನಸ್ಸನ್ನು ಪ್ರಫುಲ್ಲಗೊಳಿಸಿಕೊಂಡು ಕೆಲಸಕ್ಕೆ ಹೊರಡುವ ಉತ್ಸಾಹ ತೋರುತ್ತಿದ್ದರೆ, ನೋಡುವವರಿಗೂ ಉತ್ಸಾಹ ಮೂಡುತ್ತದೆ. ನಾನು ಬೆಳಗಿನ ಪುಟ್ಟ ವಾಕಿಂಗ್ ಮುಗಿಸುವ ಹೊತ್ತಿಗೂ, ಇಲ್ಲಿಯ ನಾಗರಿಕರು ಹೀಗೆ ಸಂತೋಷದಿಂದ ದಿನದ ಕೆಲಸ ಪ್ರಾರಂಭಿಸುವ ಕ್ಷಣಕ್ಕೂ ಹೊಂದಿಕೆಯಾಗುತ್ತಿತ್ತು. ನಾನೂ ಕೂಡ ಚುರುಕುಗೊಳ್ಳುತ್ತಿದ್ದೆ. ಸುಪ್ರಭಾತ ಕೇಳಿಯೇ ಮನಸ್ಸು ಜಿಗಿಯಬೇಕಿಲ್ಲ. ಶ್ರಮದ ಲಯ ಪ್ರಾರಂಭವಾಗುವ ಮೊದಲ ಸಂತಸದ ಕ್ಷಣಗಳನ್ನು ನೋಡುವುದು ಕೂಡ ಸುಪ್ರಭಾತವೇ.
ನನಗೆ ಮಾತ್ರವಲ್ಲ, ನಮ್ಮ ಕುಟುಂಬಕ್ಕೂ ಈ ಎರಡೂ ನಿಲ್ದಾಣಗಳೂ ಮನೆಯ ವಿಸ್ತರಣೆಯಂತೆಯೇ ಇದ್ದವು. ಮನೆಗೆ ಹೊಂದಿಕೊಂಡ ಆಟದ ಮೈದಾನದಂತೆಯೇ ಇತ್ತು. ಮೊಮ್ಮಗಳು ರಚ್ಚೆ ಹಿಡಿದಾಗ, ಇಲ್ಲ ಅವಳನ್ನು ಆಟ ಆಡಿಸಲು ಈ ನಿಲ್ದಾಣಗಳಿಗೆ ಕರೆದುಕೊಂಡು ಬರುತ್ತಿದ್ದೆವು. ತುಂಬಾ ರಚ್ಚೆ ಹಿಡಿದ ದಿನ, ರೈಲಿನೊಳಗೆ ಕೂರಿಸಿಕೊಂಡು ನಗರದ ಬೇರೆ ಭಾಗಗಳಿಗೆ ಕರೆದುಕೊಂಡು ಹೋಗುತ್ತಿದ್ದೆವು. ಮೊಮ್ಮಗಳ ಅಣ್ಣ ಧ್ರುವ, ಬಾಲ್ಯವನ್ನು ಬೆಂಗಳೂರಿನಲ್ಲಿ ನಮ್ಮ ಜೊತೆ ಕಳೆದವನು. ಅವನಿಗೂ ಮೆಟ್ರೋ ಹುಚ್ಚು. ಊಟ ತಿಂಡಿ ಕಟ್ಟಿಕೊಂಡು ನಾವಿಬ್ಬರೂ ಅವನ ಜೊತೆ ಬನಶಂಕರಿಯಿಂದ ನಾಗಸಂದ್ರದವರೆಗೆ ಹೋಗಿ, ನಾಗಸಂದ್ರದ ನಿಲ್ದಾಣದ ಮೂಲೆಯೊಂದರಲ್ಲಿ ಕುಳಿತು ಊಟ ಮಾಡಿಸಿ ಮತ್ತೆ ಬನಶಂಕರಿಗೆ ಕರೆದುಕೊಂಡು ಬರುತ್ತಿದ್ದೆವು. ಪ್ರತಿ ನಿಲ್ದಾಣದ ಹೆಸರು ಅವನಿಗೆ ಬಾಯಿಪಾಠವಾಗಿತ್ತು. ಕೆಲವರು ನಮ್ಮ ಈ ಸಾಹಸವನ್ನು ಕಂಡು ಮನಪೂರ್ವಕವಾಗಿ ನಗುತ್ತಿದ್ದರು.
ಮಗಳು ಅಳಿಯ, ಬೇರೆ ಊರಿನಿಂದಲೋ ಕೆಲಸದಿಂದಲೋ ಹಿಂತಿರುಗುವಾಗ, ಈ ಸಮಯ, ಈ ರೈಲಿನಲ್ಲಿ ಬರುತ್ತಿದ್ದೇವೆ ಎಂದು ತಿಳಿಸುತ್ತಿದ್ದರು. ಕುಟುಂಬದ ಎಲ್ಲ ಸದಸ್ಯರೂ ಮನೆಯಿಂದ ಒಟ್ಟಾಗಿ ಬಂದು ನಿಲ್ದಾಣದಲ್ಲಿ ಅವರಿಗೆ ಸುಖಾಗಮನ ಕೋರುತ್ತಿದ್ದೆವು.
ದೊಡ್ಡ ನಿಲ್ದಾಣಗಳಲ್ಲಿ ನನಗೆ ಇಷ್ಟವಾಗುವುದು ಉದ್ದನೆಯ ಫ್ಲಾಟ್‌ಫಾರಂ. ಫ್ಲಾಟ್‌ಫಾರಂ ತುದಿಗೆ ಹೋಗಿ, ನಾಲ್ಕಾರು ಹಳಿಗಳು ಕೊನೆಗೆ ಒಂದೋ ಎರಡೋ ಹಳಿಗಳಾಗುವುದನ್ನು ನೋಡಲು ನನಗೆ ಇಷ್ಟ. ಯಾವುದೇ ಊರಿನ ನಿಲ್ದಾಣಕ್ಕೆ ಹೋದಾಗಲೂ ಸಮಯವಿದ್ದರೆ ಈಗಲೂ ನಾನು ಫ್ಲಾಟ್‌ಫಾರಂ ತುದಿ ಹುಡುಕಿಕೊಂಡು ಹೊರಡುತ್ತೇನೆ. ಇಲ್ಲಂತೂ ಫ್ಲಾಟ್‌ಫಾರಂ ಕೊನೆಯಾದ ತಕ್ಷಣ ಗಿಡ, ಮರ, ಬಳ್ಳಿ, ಪೊದೆ, ಎತ್ತರದ ಮರಗಳು ಶುರುವಾಗಿ ಇನ್ನೊಂದು ಪ್ರಪಂಚವೇ ನಿರ್ಮಾಣವಾಗುತ್ತದೆ.
ಅದೇಕೋ ನಾನು ಕಂಡ ರೈಲು ನಿಲ್ದಾಣಗಳಲ್ಲೆಲ್ಲ ನನಗೆ ನಿಲ್ದಾಣದ ಹಳೆಯ, ಪುರಾತನ ಭಾಗವೇ ಹೆಚ್ಚು ಇಷ್ಟವಾಗುತ್ತದೆ. ಬ್ರಸಲ್ ನಗರದ ರೈಲು ನಿಲ್ದಾಣದ ಹಳೆಯ ಭಾಗ ಕೋಟೆಯೊಳಗಿನ ಒಂದು ಮೂಲೆಯಂತೆ ಕಾಣುತ್ತದೆ. ಇದು ಯುರೋಪಿನ ಒಂದು ಹಳೆಯ ನಿಲ್ದಾಣವಂತೆ. ಮದ್ರಾಸಿನಲ್ಲೂ ನನಗೆ ಎಗ್‌ಮೋರ್ ಮತ್ತು ಮಾಂಬಳಂ ನಿಲ್ದಾಣಗಳೇ ಇಷ್ಟವಾಗುತ್ತಿದ್ದವು, ಮೈಸೂರಿನಲ್ಲಿ ರಸ್ತೆ ಮಧ್ಯದಲ್ಲೇ ಇರುವ ಚಾಮರಾಜಪುರಂ ರೈಲು ನಿಲ್ದಾಣದ ಹಾಗೆ.
ಕಾಲ ಪ್ರವಾಹದಲ್ಲಿ ಕಳೆದುಹೋದ ಜೀವನಶೈಲಿ, ಬದುಕಿನ ವಾಸನೆ, ವಿವರಗಳನ್ನೆಲ್ಲ ನಮ್ಮ ನೆನಪಿನಲ್ಲಿ ನಿಲ್ದಾಣದ ಈ ಭಾಗಗಳು ಉದ್ದೀಪಿಸುತ್ತವೆ.
ನಾನು ನನಗೆ ಮತ್ತು ರೈಲು ನಿಲ್ದಾಣಗಳಿಗೆ ಇರುವ ಸಂಬಂಧ, ಒಡನಾಟವನ್ನು ಉತ್‌ಪ್ರೇಕ್ಷಿಸಿ ಹೇಳುತ್ತಿಲ್ಲ. ಹೇಗ್ ನಗರದ ಕೇಂದ್ರ ರೈಲ್ವೆ ನಿಲ್ದಾಣ ಬೃಹತ್ ಆದದ್ದು. ನೆಲಮಾಳಿಗೆ, ಸುರಂಗ ಕೂಡ ಇವೆ. ನಿಲ್ದಾಣದೊಳಗೇ ಸೂಪರ್ ಮಾರ್ಕೆಟ್, ಕಛೇರಿಗಳು ಕೂಡ ಇವೆ. ಈ ನಿಲ್ದಾಣದ ಎದುರಿಗೇ ಟ್ರಾಮ್ ಕೂಡ ಓಡಾಡುತ್ತಿರುತ್ತದೆ. ಜನ ಕೂಡ ಟ್ರಾಮ್ ಓಡಾಟದ ಮಧ್ಯೆಯೇ ಓಡಾಡುತ್ತಿರುತ್ತಾರೆ. ರಸ್ತೆ ಬದಿಯಲ್ಲಿರುವ ಹೋಟೆಲ್‌ಗಳ ಮುಂಭಾಗದಲ್ಲಿ ಕುಳಿತು, ಊಟ ತಿಂಡಿ ಮಾಡುತ್ತಲೋ ಕಾಫಿ ಕುಡಿಯುತ್ತಲೋ, ಮನೆಯ ಮುಂದಿನ ಅಂಗಳವನ್ನು ನೋಡುವಂತೆ ಟ್ರಾಮ್‌ನ ಓಡಾಟವನ್ನೂ, ಜನರ ಗಡಿಬಿಡಿಯನ್ನೂ ಕೂಡ ಗಮನಿಸಬಹುದು. ಯಾವುದು ನಿಲ್ದಾಣ, ಯಾವುದು ಹಳಿ, ಯಾವುದು ಮನೆ, ಯಾವುದು ಮನೆಯ ಮುಂದಿನ ಅಂಗಳ ಎಂದು ಹೇಳುವುದೇ ಕಷ್ಟ.
ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.