Advertisement
ಗರತಿಗಂಗಮ್ಮ ಮತ್ತು ಡಿಸ್ಕೋ ಲೈಟು!: ಸುಕನ್ಯಾ ಕನಾರಳ್ಳಿ ಅಂಕಣ

ಗರತಿಗಂಗಮ್ಮ ಮತ್ತು ಡಿಸ್ಕೋ ಲೈಟು!: ಸುಕನ್ಯಾ ಕನಾರಳ್ಳಿ ಅಂಕಣ

ಸಮಂಜಸತೆ ಮತ್ತು ಸಾವಯವತೆ ದೃಶ್ಯಸಂಸ್ಕೃತಿಯ ಅನಿವಾರ್ಯ ಭಾಗ ಎನ್ನುವುದನ್ನು ನಾವು ಸಾರಾಸಗಟಾಗಿ ಮರೆತಿದ್ದೇವೆ ಅಂತನ್ನಿಸುತ್ತದೆ. ಸನ್ಯಾಸಿಯೊಬ್ಬರು ಧೀಮಂತ ಭಂಗಿಯಲ್ಲಿ ನಿಂತಿರುವ ರಸ್ತೆಯುದ್ದಕ್ಕೂ ಲಲನೆಯರು ಚಿನ್ನ ವಜ್ರಗಳನ್ನು ಹೊತ್ತು ನಿಂತ ಬ್ಯಾನರುಗಳು ಕಣ್ಣಿಗೆ ಹೊಡೆಯುತ್ತವೆ. ಕಳೆದವಾರ ಶ್ರೀರಾಮಕೃಷ್ಣರ ವೃತ್ತವನ್ನೂ ಕಚ್ಚಿಕೊಂಡಂತೆ ಸುತ್ತ ಮುತ್ತಲೆಲ್ಲ ಯಾವುದೋ ಕಾರ್ಪೊರೇಟರನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುವ ಫ್ಲೆಕ್ಸ್ ಬ್ಯಾನರುಗಳು ಹಲ್ಲು ಕಿರಿದಿದ್ದೇ ಕಿರಿದಿದ್ದು. ಇದೆಲ್ಲದರ ನಡುವೆ ಪರಮಹಂಸರು ಪೆಚ್ಚಾಗಿ ಕೂತಂತಿತ್ತು!
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ನಲವತ್ತೆರಡನೆಯ ಬರಹ

ಮಾಧುರಿ ದೀಕ್ಷಿತಳ ‘ಖಳ್ ನಾಯಕ್’ ಚಿತ್ರ ಬಿಡುಗಡೆಯಾಗಿ ಜಯಭೇರಿ ಭಾರಿಸಿದ್ದ ತೊಂಬತ್ತರ ದಶಕವದು. ನಟ ಅನಂತನಾಗ್ ಯಾವುದೋ ಶಾಲೆಯ ವಾರ್ಷಿಕ ದಿನಕ್ಕೆ ಮುಖ್ಯ ಅತಿಥಿಯಾಗಿ ಹೋಗಿದ್ದರು. ಚಿಕ್ಕ ಮಕ್ಕಳು ಹೊಕ್ಕಳು ತೋರಿಸುವ ಲಂಗ ತೊಟ್ಟು ‘ಚೋಲಿ ಕೆ ಪೀಚೆ ಕ್ಯಾ ಹೈ…’ ಎಂದು ನರ್ತಿಸಿದ್ದರಂತೆ. ಅನಂತನಾಗ್ ತಮ್ಮ ಭಾಷಣದಲ್ಲಿ ಮಕ್ಕಳ ಅಪ್ಪಾಮ್ಮ, ಟೀಚರು, ಹೆಡ್ ಮಾಸ್ಟರಿನಿ ಎಲ್ಲರನ್ನೂ ಸೇರಿಸಿಕೊಂಡು ಸೌಜನ್ಯದ ಮಾತುಗಳಲ್ಲೇ ಛೀಮಾರಿ ಹಾಕಿದ್ದರಂತೆ. ಇದು ನನ್ನ ಸಹ-ಉದ್ಯೋಗಿನಿ ಹೇಳಿದ ಕಥೆ.

ಸಮಂಜಸತೆ ಅಥವಾ ಸಾವಯವತೆಯ ಪರಿಕಲ್ಪನೆ ನಮ್ಮ ಸುಷುಪ್ತಿಯಿಂದಲೂ ಮಾಯವಾದಂತಿದೆ. ಮೊನ್ನೆ ನನ್ನ ಸ್ಕೂಲಿನ ಸಹಪಾಠಿ ಗ್ರೂಪಿನಲ್ಲಿ ಒಬ್ಬಾಕೆ ಒಂದು ವಿಡಿಯೋ ಹಾಕಿದ್ದಳು. ಅವಳೇ ಕೊರಿಯೋಗ್ರಾಫಿಸಿದ ಒಂದು ನೃತ್ಯದಲ್ಲಿ ಸುಮಾರು ಹತ್ತು ಮಂದಿ ಸಾಂಪ್ರದಾಯಿಕ ವೇಷದಲ್ಲಿ ಮುಗಿದ ಕೈಯೊಂದಿಗೆ ರಂಗಕ್ಕೆ ಬಂದು ನಿಂತ ಮೇಲೆ ಪ್ರಾರಂಭವಾದ ನೃತ್ಯ, ‘ಶ್ರೀರಾಮಚಂದ್ರ ಕೃಪಾಲು ಭಜಮನ…’

ಅವರೆಲ್ಲ ಬಂದು ನಿಲ್ಲುವ ತನಕ ಒಂದಿಷ್ಟಾದರೂ ಕುತೂಹಲವಿತ್ತು. ಮರುನಿಮಿಷದಲ್ಲಿ ಪ್ರಾರಂಭವಾದ ಬಣ್ಣ ಬಣ್ಣದ ಥಳಾರ್ ಫಳಾರ್ ಬೆಳಕು ಮಾತ್ರ ಬೆಚ್ಚಿ ಬೀಳಿಸಿದ್ದು ನಿಜವೇ. ಅಲ್ಲಿ ವಾಕ್-ದೃಶ್ಯ ಸಾವಯವ ಎನ್ನುವುದು  ಅಪ್ಪರಾಣೆಗೂ ಇರಲಿಲ್ಲ.  ಶ್ರೀರಾಮಚಂದ್ರನ ಭಜನೆಗೆ ಡಿಸ್ಕೋ ಲೈಟೆ? ಇದು ಭಕ್ತಿಯೆ? ನನ್ನಲ್ಲಿ ಇನ್ನಷ್ಟು ವಿಷಾದ ಹುಟ್ಟಿಸಿದ ಸಂಗತಿಯೆಂದರೆ ಇತರ ಮಾಜಿ ಸಹಪಾಠಿಗಳು ‘ಸೂಪರ್! ಏನು ಅದ್ಭುತ ಕೊರಿಯೋಗ್ರಫಿ! …’ ಅಂತೆಲ್ಲ ಪ್ರಶಂಸಿಸಿದ ರೀತಿ!

ಸಮಂಜಸತೆ ಮತ್ತು ಸಾವಯವತೆ ದೃಶ್ಯಸಂಸ್ಕೃತಿಯ ಅನಿವಾರ್ಯ ಭಾಗ ಎನ್ನುವುದನ್ನು ನಾವು ಸಾರಾಸಗಟಾಗಿ ಮರೆತಿದ್ದೇವೆ ಅಂತನ್ನಿಸುತ್ತದೆ. ಸನ್ಯಾಸಿಯೊಬ್ಬರು ಧೀಮಂತ ಭಂಗಿಯಲ್ಲಿ ನಿಂತಿರುವ ರಸ್ತೆಯುದ್ದಕ್ಕೂ ಲಲನೆಯರು ಚಿನ್ನ ವಜ್ರಗಳನ್ನು ಹೊತ್ತು ನಿಂತ ಬ್ಯಾನರುಗಳು ಕಣ್ಣಿಗೆ ಹೊಡೆಯುತ್ತವೆ. ಕಳೆದವಾರ ಶ್ರೀರಾಮಕೃಷ್ಣರ ವೃತ್ತವನ್ನೂ ಕಚ್ಚಿಕೊಂಡಂತೆ ಸುತ್ತ ಮುತ್ತಲೆಲ್ಲ ಯಾವುದೋ ಕಾರ್ಪೊರೇಟರನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುವ ಫ್ಲೆಕ್ಸ್ ಬ್ಯಾನರುಗಳು ಹಲ್ಲು ಕಿರಿದಿದ್ದೇ ಕಿರಿದಿದ್ದು. ಇದೆಲ್ಲದರ ನಡುವೆ ಪರಮಹಂಸರು ಪೆಚ್ಚಾಗಿ ಕೂತಂತಿತ್ತು!

ಈ ವಯಸ್ಸಾದವರು ಹೀಗೆ ಸಾರ್ವಜನಿಕ ಸ್ಥಳಗಳನ್ನು ಆಕ್ರಮಿಸಿಕೊಂಡು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ ಎನ್ನುವುದೇ ನಮ್ಮ ಸಭ್ಯತೆ ಎತ್ತ ಸಾಗಿದೆ ಎನ್ನುವುದಕ್ಕೆ ಸಾಕ್ಷಿ. ಹುಟ್ಟುಹಬ್ಬದ ಸಂಭ್ರಮ ಮಕ್ಕಳಿಗೆ ಮಾತ್ರ ಅಂತ ನಾವಂದುಕೊಂಡಿದ್ದೆವಲ್ಲ! ಆವತ್ತಿನ ದಿನ ಯೂನಿಫಾರಮ್ಮಿನ ಬದಲು ಕಲರ್ ಡ್ರೆಸ್ ಹಾಕಿಕೊಂಡು ಒಂದು ಟಿನ್ನಿನ ಬಾಕ್ಸಿನಲ್ಲಿ ಐದು ಪೈಸೆಯ ಪ್ಯಾರಿಸ್ ಚಾಕಲೇಟುಗಳನ್ನು ಇರಿಸಿಕೊಂಡು ಬಿಂಕದಿಂದ ಹೋಗಿ, ‘ಇವತ್ತು ನನ್ನ ಹ್ಯಾಪಿ ಬರ್ತಡೇ ಮಿಸ್,’ ಅಂತ ಹೇಳಿ ಅವರು ಎಲ್ಲರನ್ನೂ ನಿಲ್ಲಿಸಿ ಶುಭಾಶಯ ಹೇಳಿಸಿದರೆ ಹುಟ್ಟಿದ್ದಕ್ಕೂ ಸಾರ್ಥಕ ಅಂತ ಅನ್ನಿಸುತ್ತಿತ್ತು. ಆಮೇಲೆ ಬರ್ತಡೇ ಪಾರ್ಟಿಗಳು ಬಂದವು. ಅವರು ಕೊಟ್ಟ ಉಡುಗೊರೆಯನ್ನು ಲೇಬಲ್ ಕಿತ್ತು ಶುದ್ಧ ಮಾಡಿ ಇಟ್ಟರೆ ಇನ್ಯಾವುದೋ ಬರ್ತಡೆಯ ಇವರಿಗೆ ಅದನ್ನೇ ರಿಸೈಕಲ್ ಮಾಡಬಹುದು. ಇದು ನನ್ನ ಮುಂದಿನ ಪೀಳಿಗೆಯವರು ಮಾಡುತ್ತಿದ್ದ ಕಸರತ್ತು!

ಇವತ್ತಿಗೂ ಸಾಮಾನ್ಯವಾಗಿ ಮನೆಗಳಲ್ಲಿ ದೊಡ್ಡವರು ಅವರಿವರನ್ನು ಕರೆದು ಕೇಕು ಕತ್ತರಿಸಿ  ಹುಟ್ಟುಹಬ್ಬವನ್ನು ಮಾಡಿಕೊಳ್ಳುವುದಿಲ್ಲ ಅಂತಂದುಕೊಂಡಿದ್ದೇನೆ.  ಆದರೆ ಈ ಪುಡಾರಿಗಳು ಮತ್ತು  ಧರ್ಮದರ್ಶಿಗಳ ಹತ್ತಿರ  ತಮ್ಮ ಬೇಳೆ ಬೇಯಿಸಿಕೊಳ್ಳುವ ಇರಾದೆ ಇರುವವರು ತಮ್ಮ ನಾಯಕರಷ್ಟೇ ಉದ್ದದ ಕೇಕ್ ತಯಾರಿಸಿ ಸಂಭ್ರಮಿಸುತ್ತಾರೆ. ತಾನು ಹುಟ್ಟಿದ್ದೇ ಎಲ್ಲರ ಪುಣ್ಯ ಎಂಬಂತೆ ಫಳ್ಳನೆ ನಗು ಬೀರುತ್ತಿರುವ ಮುಖ ಊರ ತುಂಬ ರಾರಾಜಿಸುತ್ತದೆ. ಆತ ದೇವರಂತೆ ಉದ್ಭವಿಸಿ ಫ್ಲೆಕ್ಸಿನ ಉದ್ದಗಲಕ್ಕೆ ಹಬ್ಬಿದ್ದರೆ ಕೆಳಗೆ ಸಾಲಾಗಿ ಚೇಲಾ-ಚಟಾಕು ಮೂತಿಗಳು ಹಲ್ಕಿರಿಯುತ್ತವೆ.

ಫ್ಲೆಕ್ಸ್ ಎಂಬ ತಂತ್ರಜ್ಞಾನ ಬಂದಿದ್ದೇ ಬಂದಿದ್ದು, ಎಲ್ಲೆಂದರಲ್ಲಿ ‘ಭಾವಪೂರ್ಣ ಶೃದ್ಧಾಂಜಲಿ’ಯ ಹೆಸರಿನಲ್ಲಿ  ಅವರಿವರ ಮುಖಗಳೆಲ್ಲ ನಡುಬೀದಿಗೆ ಬಂದು ನಿಲ್ಲಹತ್ತಿವೆ. ಮಂದಿ ಹುಟ್ಟಿದ್ದಕ್ಕೆ ಮತ್ತು ಸತ್ತಿದ್ದಕ್ಕೆ ಎರಡಕ್ಕೂ ಫ್ಲೆಕ್ಸ್! ಹಾದಿಯಲ್ಲಿ ಸಾಗುವ ನನ್ನಂತ ಸಾಮಾನ್ಯರಿಗೆ ಮಾತ್ರ ಕಣ್ತುಂಬ ಕಿರಿಕಿರಿ. ಯಾರೋ ಸತ್ತರೆ ‘ಅವನು ಫ್ಲೆಕ್ಸ್ ಆಗ್ಬಿಟ್ಟ ಗುರೂ!’ ಅಂತ ಸಹ ಹೇಳುವುದು ಚಾಲ್ತಿಯಲ್ಲಿದೆ ಅಂತ ಕೇಳಿದ್ದೇನೆ.

ತಂತ್ರಜ್ಞಾನವನ್ನು ಸಾಂಪ್ರದಾಯಿಕ ಸಮಾಜ ಬಳಸಿಕೊಳ್ಳುವ ರೀತಿಗಳು ಮಹಾ ವಿಚಿತ್ರವೇ. ವರ್ಷಕ್ಕೆರಡು ಬಾರಿ ಜಾತಕ ನೋಡಲೆಂದೇ ನಮ್ಮ ಬಸಪ್ಪ ಮೇಷ್ಟರು ಮನೆಗೆ ಬರುತ್ತಿದ್ದರು. ನಮ್ಮೆಲ್ಲರ ಜಾತಕ ಬರೆದವರು ಅವರೇ. ಎದುರಿಗೆ ಹರಡಿಕೊಂಡು ಅದೇನೇನೋ ಚಿತ್ರ ಬರೆದು ಬೆರಳಿನ ಮೇಲೆ ಗುಣಿಸಿ ಭಾಗಿಸಿ ಸದ್ಯದಲ್ಲಿ ಏನೇನಾಗಬಹುದು ಎಂದು ಹೇಳುತ್ತಿದ್ದರು. ನ್ಯೂಜರ್ಸಿಯಲ್ಲಿ ಒಬ್ಬ ಜ್ಯೋತಿಷಿ ಆಪಲ್ ಕಂಪ್ಯೂಟರಿನ ಸಹಾಯದಿಂದ ಜಾತಕ ಹೇಳುತ್ತಿದ್ದದ್ದು ನೋಡಿದಾಗ ನನ್ನ ತಲೆ ಸ್ವಲ್ಪ ಗಿರಕಿ ಹೊಡೆದಂತಿತ್ತು. ನಮ್ಮ ಮಟ್ಟಿಗೆ ಆಧುನಿಕವೆಂದರೆ ಇಷ್ಟೇ ಏನೋ ಅಂತನ್ನಿಸಿತ್ತು.

*****

ಸಿನಿಮಾ ಎಂಬ ಆಧುನಿಕ ತಂತ್ರಜ್ಞಾನಕ್ಕೆ ನಾವು ಎದುರಾದ ಪರಿ ಯಾವುದು? ನಮ್ಮ ಪುರಾಣಗಳಿಗೆ ಅಲ್ಲಿ ಮೊದಲ ಪ್ರಶಸ್ತಿ. ಹೆಣ್ಣಿನ ಮಟ್ಟಿಗಂತೂ ಅವಳ ಸತೀಕರಣ ಸಮರ್ಥವಾಗಿ ಹರಡಿದ್ದು ಸಿನೆಮಾ ಎಂಬ ಸಮೂಹ ಮಾಧ್ಯಮದಿಂದಲೇ ಅಂತನ್ನಿಸುತ್ತೆ.

ಕನ್ನಡದ ಟಾಕಿ ಸಿನಿಮಾ ಹುಟ್ಟಿದ್ದೇ ಸತಿಯಿಂದ. 1934 ರಲ್ಲಿ ತೆರೆ ಕಂಡ ‘ಸತಿ ಸುಲೋಚನ’ ದ ನಂತರ ಉದ್ದಕ್ಕೂ ಸತಿ ಚಿತ್ರಗಳು ಬಂದವು. ‘ಸತಿ ತುಳಸಿ’ (1949); ‘ಆದರ್ಶ ಸತಿ’ (1955); ‘ಸತಿ ನಳಾಯಿನಿ’ (1957); ‘ಸತಿಶಕ್ತಿ’ (1963); ‘ಮಹಾಸತಿ ಅನಸೂಯ’ (1965); ‘ಸತಿ ಸಾವಿತ್ರಿ’ (1965); ‘ಸತಿ ಸುಕನ್ಯಾ’ (1967); ‘ಮಹಾಸತಿ ಅರುಂಧತಿ’ (1968); ‘ಸತಿ ಸಕ್ಕುಬಾಯಿ’ (1985), ಹೀಗೆ ಮೂವತ್ತರ ದಶಕದಿಂದ ಪ್ರಾರಂಭವಾಗಿ ಎಂಭತ್ತರ ದಶಕಕ್ಕೂ ಮುಂದುವರೆದಿದ್ದು ಗಮನಕ್ಕೆ ಬರುತ್ತದೆ.

ಎಪ್ಪತ್ತರ ದಶಕದಲ್ಲಿ ಪರ್ಯಾಯ ಸಿನಿಮಾ ಕಾಣಿಸಿಕೊಳ್ಳುವ ತನಕವೂ ಸತಿ ಎಂಬ ಹೆಸರು ಹೊತ್ತಿಲ್ಲದ ಪೌರಾಣಿಕ, ಭಕ್ತಿಪ್ರಧಾನ, ಐತಿಹಾಸಕ, ಸಾಮಾಜಿಕಗಳ ಪ್ರಧಾನ ಹೆಂಗಸು ಪಾತ್ರಗಳೆಲ್ಲವೂ ಅರ್ಥಾತ್ ಸತಿಯರೇ. ‘ಸುಭದ್ರಾ’ (1941); ವಸಂತ ಸೇನಾ (1941); ‘ಹೇಮರೆಡ್ಡಿ ಮಲ್ಲಮ್ಮ’ (1945); ‘ಗುಣಸಾಗರಿ’ (1953); ‘ನಂಬೆಕ್ಕ’ (1955); ‘ಸ್ತ್ರೀರತ್ನ’ (1955); ‘ಮನೆಗೆ ಬಂದ ಮಹಾಲಕ್ಷ್ಮಿ’ (1959); ‘ಪತಿಯೇ ದೈವ’ (1964); ‘ಪತಿವ್ರತಾ’ (1965); ‘ಮಲ್ಲಮ್ಮನ ಪವಾಡ’ (1969); ‘ಗೃಹಲಕ್ಷ್ಮಿ’ (1969)…   ಹೀಗೆ ಬೆಳೆಯುತ್ತಾ ಹೋಗುವ  ಪಟ್ಟಿಯನ್ನು ನೋಡಿದರೆ ಸಾಕು. ಸತೀತ್ವವೇ ಹೆಣ್ಣಿನ ಚಹರೆ, ಚಿಹ್ನೆ, ಸಂಕೇತ ಎಲ್ಲವೂ ಆಗಿತ್ತು.

ಇಷ್ಟಾದರೂ ಸಿನಿಮಾ ಎಂಬ ತಂತ್ರಜ್ಞಾನ ಕಥೆಯ ಹಂಗಿಗೆ ಬಿದ್ದಿರುತ್ತದೆ. ಕಥಾನಕ ಎಂಬ ರಚನೆಗೆ ತನ್ನದೇ ಆದ ಕೆಲವು ನಿಯಮಗಳು ಇರುತ್ತವಲ್ಲ? ಹೀರೋ ಇದ್ದರೆ ಅವನ ಕಾರಿಗೆ ಸಿಕ್ಕಿ ಸಾಯುವ ಒಬ್ಬ ಸೈಡ್ ಕಿಕ್ ಬೇಕೇ ಬೇಕು. ಹೊಸದಾಗಿ ಅಸ್ತಿತ್ವಕ್ಕೆ ಬಂದ ರಾಷ್ಟ್ರವೊಂದು ತನ್ನ ಅನನ್ಯತೆಯನ್ನು ರೂಪಿಸಿಕೊಳ್ಳುವ ಪ್ರಯತ್ನದಲ್ಲಿ ತನಗೆ ಬೇಕಾದ ಆದರ್ಶ ಹೆಣ್ಣು-ಪ್ರಜೆಯನ್ನು ರೂಪಿಸುವತ್ತ ವೇದ, ಶಾಸ್ತ್ರ, ಮಹಾಗಾಥೆ, ಪುರಾಣಗಳ ಹೆಣ್ಣನ್ನು ಮಾದರಿಯಾಗಿಸಿಕೊಂಡು ಸಿನಿಮಾತ್ಮಕವಾಗಿ ಪುನರ್ರಚಿಸಿತು ನಿಜ. ಆ ಪ್ರಯತ್ನದಲ್ಲಿ ಆ ಸತಿಗೆ ಹೊಂದದ ಎಲ್ಲ ‘ಅನ್ಯ’ ಗುಣಗಳನ್ನು ಹೊರಗಿರಿಸಲಾಯಿತು. ಬೇರೆ ಜಾತಿ, ಬೇರೆ ವರ್ಗ, ಬೇರೆ ಧರ್ಮ, ಬೇರೆ ಮನೋವೃತ್ತಿ  ಮುಂತಾದ ‘ಬೇರೆ’ಗಳೆಲ್ಲವನ್ನು ಕಥಾನಕದ ಸಮತೋಲನದ ಕಾರಣಕ್ಕೆ ಇನ್ನೊಂದು ಪಾತ್ರಕ್ಕೆ ಆರೋಪಿಸುವ ಅವಶ್ಯಕತೆಯಿತ್ತು. ‘ಸ್ವ’ ಎನ್ನುವುದು ಸಮರ್ಥವಾಗಿ ಹೊಮ್ಮಬೇಕಾದರೆ ‘ಅನ್ಯ’ವನ್ನು ರೂಪಿಸುವ ಅಗತ್ಯವೂ ಇತ್ತು.

ಪುರಾಣ ಮತ್ತು ಶೃಂಗಾರವನ್ನು ತನಗೆ ಬೇಕಾದ ಹದದಲ್ಲಿ ಬೆರೆಸಿ ಹೆಣ್ಣಿನ ದೇಹವನ್ನು ಶೃಂಗಾರೀಕರಿಸುವ ಸಾಂಸ್ಕೃತಿಕ  ಪರವಾನಗಿ ರವಿವರ್ಮನಂತಹ ಕಲಾವಿದನಿಗೆ ಇದ್ದಿರಬಹುದು. ಆದರೆ ಸತಿಯ ತತ್ವದಲ್ಲಿ ಸಿಕ್ಕುಬಿದ್ದ ಹೆಣ್ಣುದೇಹಕ್ಕೆ ಅಂದಿನ ಸಿನಿಮಾದ ಕಾಲಧರ್ಮದಲ್ಲಿ ಶೃಂಗಾರ ಹತ್ತಿರವೂ ಸುಳಿಯುವ ಹಾಗಿರಲಿಲ್ಲ.

ಹಾಗಾಗಿ ಪ್ರಧಾನವಾದ ‘ಸತಿ-ತಾಯಿ’ ತತ್ವಕ್ಕೆ ತದ್ವಿರುದ್ಧವಾದ ‘ಕುಲಟೆ’ ಪಾತ್ರವನ್ನು ಸೃಷ್ಟಿಸಿ ಇವಳ ಎದುರು ಅವಳನ್ನು ನಿಲ್ಲಿಸಿ ಸತಿಯನ್ನು ವಿಜೃಂಭಿಸಲಾಯಿತು. ಇಲ್ಲದಿದ್ದರೆ ಹಾಸ್ಯಮಯ ಪಾತ್ರವನ್ನೋ ಸನ್ನಿವೇಶವನ್ನೋ ನಡುವೆ ತಂದು ಘನಗಂಭೀರದ ಓಟಕ್ಕೆ ಮತ್ತು ದಣಿದಿರಬಹುದಾದ ಪ್ರೇಕ್ಷಕರಿಗೂ ಸ್ವಲ್ಪ ಹಾಸ್ಯ ವಿರಾಮವನ್ನು ಒದಗಿಸಲಾಯಿತು. ಈಗಲೂ ಅಷ್ಟೇ. ಬಾಲಿವುಡ್ ನಾಯಕಿ ಗರತಿ ಗೌರಮ್ಮನಂತಹ ಪಾತ್ರವಾಗಿದ್ದರೆ ಹೀರೋ ಕನಸಿನಲ್ಲಿ ಮೂಡುವಂತೆ ಒಂದು ಐಟಂ ಸಾಂಗ್ ಇರಬೇಕು. ಅದರಲ್ಲಿ ಅವಳು ಎಲ್ಲರ ಕಣ್ಮನ ತಣಿಸುವ ವೇಷ ತೊಟ್ಟು ನರ್ತಿಸಬೇಕು. ಚಿತ್ರಕ್ಕೆ ರತಿಮೌಲ್ಯ ದಕ್ಕದಿದ್ದರೆ ಹೂಡಿದ ಬಂಡವಾಳ ಎಷ್ಟೋ ಪಟ್ಟಾಗಿ ದಕ್ಕಲು ಸಾಧ್ಯವೇ?

ಇರಲಿ, ಅಂದಿನ ಇಂದಿನ ನಾಯಕರಿಗೆ ಸಹ ‘ಅನ್ಯ’ ಎಂಬುದರ ಅಗತ್ಯವಿರುತ್ತದೆ. ಆದರೆ ಅಂದಿನ ನಾಯಕನ ಅನ್ಯಕ್ಕೂ (ಸಾಮಾನ್ಯವಾಗಿ ರಾಜಕುಮಾರ್ ನಾಯಕನಾದರೆ, ನರಸಿಂಹರಾಜು ‘ಅನ್ಯ’) ನಾಯಕಿಯ ಅನ್ಯೆಗೂ  ವ್ಯತ್ಯಾಸಗಳಿವೆ. ನಾಯಕ ಇನ್ನಷ್ಟು ಹೊಳೆಯಲೆಂದೇ ರೂಪಿಸಲ್ಪಟ್ಟ ಈ ಅನ್ಯ ಒಬ್ಬ ಸುರೂಪಿಯಲ್ಲದ ಪೆದ್ದ. ನಾಯಕ ಹೋದಲೆಲ್ಲಾ ಹಿಂಬಾಲಿಸುವ ಮಹಾ ‘ಅಭಿಮಾನಿ’.

ನಾಯಕಿಯ ಅನ್ಯೆ ಮಾತ್ರ ಹಾಗಲ್ಲ. ತನ್ನದೇ ವ್ಯಕ್ತಿತ್ವವನ್ನು, ಅಭಿಪ್ರಾಯಗಳನ್ನು ಹೊಂದಿದ ಈಕೆ ಆಧುನಿಕದ ಸಾಧ್ಯತೆಗಳನ್ನು ತನ್ನಲ್ಲಿ ಹುದುಗಿಸಿಕೊಂಡಿರುವ ಜಾಣೆ. ಆದರೆ ಕಥಾನಕದ ಸಮತೋಲನಕ್ಕೆ ಒದಗಿಬಂದ ಈ ಜಾಣೆ, ಸ್ವತಂತ್ರೆ, ಅನ್ಯೆ ಒಟ್ಟು ಚಿತ್ರದ ಮಧ್ಯದಲ್ಲೇ ತನ್ನ ಕೆಲಸ ಮುಗಿಯಿತೋ ಎಂಬಂತೆ ಥಟ್ಟನೆ ಮಾಯವಾಗುವುದೂ ಉಂಟು.  ಬಹುಶಃ ನಾಯಕಿ-ಸತಿಗೆ ವಿರುದ್ಧದಂತೆ ತೋರುವ ಈ ಧೈರ್ಯವಂತೆಗೆ ಹೇಗೆ ಉಪಸಂಹಾರ ಒದಗಿಸಬೇಕೋ ಎನ್ನುವುದು ಕಥಾನಕದ ಓಟಕ್ಕೆ ತಿಳಿಯದೋ ಏನೋ. ಸಮಾಜದ ಮತ್ತು ಕಥನಕ್ರಮದ ನಡುವೆ ಒಂದು ಒಪ್ಪಂದ ಇರುತ್ತದಲ್ಲ?

ಪೌರಾಣಿಕದ ಸತಿಗೆ ‘ಅನ್ಯ’ವಾಗಿ ಒದಗಿಬಂದ ಹೆಣ್ಣುಪಾತ್ರ ಎಷ್ಟೋ ಬಾರಿ ‘ಸತಿ’ ಯನ್ನು ಭೇಟಿಯೇ ಆಗದಷ್ಟು ಆ ಎರಡು ಎಳೆಗಳು ಸಮನಾಂತರವಾಗಿರುತ್ತವೆ.  ಉದಾಹರಣೆಗೆ ‘ಮಹಾಸತಿ ಅನಸೂಯ’ (1965) ಚಿತ್ರದ ನಾಗೂ (ಅದವಾನಿ ಲಕ್ಷ್ಮೀದೇವಿ) ಮಹಾಸತಿಯನ್ನು ಮುಖಾಮುಖಿಯಾಗುವುದೇ ಇಲ್ಲ.

ನಾಗೂ ನೆಲ ನೋಯದಂತೆ ನಡೆಯುವ ಸತಿಯಲ್ಲ. ಅನಗತ್ಯ ನಾಚಿಕೆಯ ಮುದ್ದೆಯೂ ಅಲ್ಲ. ಬಿಡುಬೀಸಾಗಿ ನಡೆಯುತ್ತಾ ತರ್ಕಬದ್ಧ ಮಾತುಗಳ ಚಾಟಿಯೇಟು ಕೊಡುವ ನಾಗೂ ತನ್ನ ಲೈಂಗಿಕ ಹಕ್ಕುಗಳ ಬಗ್ಗೆ ಅರಿವನ್ನು ಉಳ್ಳವಳು. ಜೊತೆಗೆ ಲೈಂಗಿಕ ರೋಗಗಳ ಬಗ್ಗೆಯೂ ತಿಳಿದುಕೊಂಡವಳು. ರೇಗಿಸುವ, ಅಗತ್ಯ ಬಿದ್ದರೆ ಜೋರು ಮಾಡಿ ಬಾಯಿ ಮುಚ್ಚಿಸುವ ನಾಗೂ ಕಷ್ಟದಲ್ಲಿ ಸಹಾಯ ಮಾಡಲೂ ಮುನ್ನುಗ್ಗುವವಳು.

ಒಮ್ಮೆ ಹೀಗಾಯಿತು: ದೇವಿಶಕ್ತಿ, ಸತಿಯ ಪಾತಿವ್ರತ್ಯದ ಪರೀಕ್ಷೆ ಮಾಡಲು ಭೂಮಿಗೆ ಇಳಿದಿರುತ್ತಾಳೆ. ಕಬ್ಬಿಣದ  ಅಕ್ಕಿಕಾಳನ್ನು ಸತಿಯ ಕೈಗೆ ಕೊಟ್ಟು ಬೇಯಿಸಿ ಬಡಿಸಲು ಹೇಳುತ್ತಾಳೆ. ಸತಿಯೆದುರು ದೇವಿಶಕ್ತಿ ಸೋಲುವ ಈ ಪ್ರಸಂಗವನ್ನು ನಿರೂಪಿಸುತ್ತಾ  ಗಂಡ ನಾಗೂನ ಉದ್ದೇಶಿಸಿ ಪತಿವ್ರತೆಯಾಗಿದ್ದರೆ ನೀನೂ ಹಾಗೆ ಮಾಡು ನೋಡೋಣ ಎಂದು ಸವಾಲೆಸೆಯುತ್ತಾನೆ.

ಮಾರುತ್ತರ ಕೊಡದೆ ಒಳಗೆ ಮಡಕೆಯನ್ನು ಹೊತ್ತು ಹೋಗುವ ನಾಗೂ ಸ್ವಲ್ಪ ಹೊತ್ತಿನ ನಂತರ ಹೊರಗೆ ಬಂದು ಅಚ್ಚರಿಯಿಂದ ಸಂತೋಷದಿಂದ ಕಾಯುತ್ತಿರುವ ಗಂಡನ ಕುತ್ತಿಗೆಪಟ್ಟಿ ಹಿಡಿದು ನೀನು ನನಗೆ ನಿಯತ್ತಿನಿಂದ ಇದ್ದದ್ದೇ ಆದಲ್ಲಿ ಈ ಕಬ್ಬಿಣದ ಅಕ್ಕಿಕಾಳನ್ನು ತಿಂದು ಅರಗಿಸಿಕೋ ನೋಡೋಣ ಎಂದು  ಸವಾಲೆಸೆಯುತ್ತಾಳೆ. ಇನ್ನೊಮ್ಮೆ  ಗಂಡ ಮನೆ ಬಿಟ್ಟು ಹೋಗುತ್ತೇನೆಂದು ಬೆದರಿಸಿದಾಗ ‘ಹೋಗು, ಏನೀಗ? ಹಾಯಾಗಿ ಖುಷಿಯಾಗಿ ಬದುಕ್ತೀನಿ!’ ಎಂದು ಸಹ ತಣ್ಣಗೆ ಹೇಳಬಲ್ಲಳು.

ಒಟ್ಟಿನಲ್ಲಿ ಸಾರಾಂಶ ಇಷ್ಟು. ಹರಿದು ಸಾಗುವ ಕಥೆ ಸಮತೋಲನವನ್ನು ಒಂದಲ್ಲ ಒಂದು ರೀತಿಯಲ್ಲಿ ಬೇಡುತ್ತದೆ. ಆದರೆ ಸ್ತಬ್ಧ ದೃಶ್ಯಗಳಿಗೆ, ನೃತ್ಯಗಳಿಗೆ  ಅದರ ಹಂಗಿಲ್ಲ. ರಸ್ತೆಯಲ್ಲೆಲ್ಲ ತುಂಬಿ ರಾರಾಜಿಸುವ ಆ ಕುರೂಪ ಎಲ್ಲೆ ಮೀರಿ ಹರಿದರೂ ಪರವಾಗಿಲ್ಲ. ಹಾಗೆಯೇ ಹಾಡು ನೃತ್ಯಗಳಲ್ಲಿ ನಮಗೆ ವಾಕ್-ದೃಶ್ಯಗಳ ನಡುವಿನ ಸಮಂಜಸತೆಯೂ ಬೇಕಿಲ್ಲ. ಆಧುನಿಕಕ್ಕೆ ಎದುರಾಗುವುದು ಎಂದರೆ ತಂತ್ರಜ್ಞಾನವನ್ನು ಎಗ್ಗಿಲ್ಲದೆ ಬಳಸಿಕೊಳ್ಳುವುದು ಅಷ್ಟೇ. ಆದ್ದರಿಂದಲೇ ಶ್ರೀರಾಮಚಂದ್ರನನ್ನ ಭಜಿಸಲು  ಸಹ ನಾವು  ಡಿಸ್ಕೋ ಲೈಟ್ ಬಳಸಿಕೊಳ್ಳುತ್ತೇವೆ. ನಾವು ಮಹಾನ್ ಬಳಕೆದಾರರು!

About The Author

ಸುಕನ್ಯಾ ಕನಾರಳ್ಳಿ

ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕಿ, ಲೇಖಕಿ, ಮತ್ತು ಭಾಷಾಂತರಕಾರ್ತಿ. ವೈದೇಹಿ (An Afternoon with Shakuntala and Other Stories) ಮತ್ತು ಅಗ್ರಹಾರ ಕೃಷ್ಣಮೂರ್ತಿಯವರ ಕೃತಿಗಳು (Love and Water Flow Together) [(ಕುವೆಂಪು ಭಾಷಾಭಾರತಿ ಪ್ರಶಸ್ತಿ  (2023) ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಅನುವಾದಿತ ಪುಸ್ತಕ ಪ್ರಶಸ್ತಿ (2023)] ಇಂಗ್ಲೀಷಿಗೆ ಅನುವಾದಿಸಲ್ಪಟ್ಟ ಕೃತಿಗಳು.  ‘ಹೇಳುತೇನೆ ಕೇಳು: ಮಹಿಳೆಯರ ಆತ್ಮಕಥೆಗಳು’; ‘ಕಥೆ ಹೇಳುವೆ’; ‘ಬರ್ತಿಯಾ?… ಎಷ್ಟು?…: ಭಾರತೀಯ ಸೂಳೆಲೋಕದಕಥೆಗಳು’; ನಯನತಾರ ಸೆಹಗಲ್ ಅವರ ‘ಚಿಟ್ಟೆಗಳ ಪಾಡು’ ಇತ್ಯಾದಿ ಅವರ ಕನ್ನಡ ಭಾಷಾಂತರ ಕೃತಿಗಳು. ಮೌಲಾನಾ ಜಲಾಲುದ್ದೀನ್ ರೂಮಿಯ ಕಾವ್ಯದ ಭಾಷಾಂತರ ಕೃತಿ ‘ದಿವ್ಯದಲ್ಲಿ ಹಿಸ್ಸೆಯಿಲ್ಲ: ಕಡುಪ್ರೇಮಿಯ ಎದೆಯ ಹಾಡು ಇತ್ತೀಚೆಗೆ ಬಿಡುಗಡೆಯಾದ ಕೃತಿ. 'ಕನ್ನಡ-ಕಾಸರವಳ್ಳಿಯವರ ಸಿನಿಮಾಗಳಲ್ಲಿ ರಾಷ್ಟ್ರ ಮತ್ತು ಹೆಣ್ಣು' ಎರಡು ಪುಸ್ತಕಗಳಾಗಿ ಸದ್ಯದಲ್ಲೇ ಬೆಳಕು ಕಾಣಲಿದೆ. 

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ