ಸುಮಾರು 48 ಸೆಂಟಿಮೀಟರ್ ಗಾತ್ರದ ಗರುಡ ಹಕ್ಕಿಗೆ ಕೆಂಗಂದು ದೇಹದಲ್ಲಿ ಎದ್ದು ಕಾಣುವ ಅಚ್ಚ ಬಿಳಿ ತಲೆ, ಕತ್ತು ಮತ್ತು ಎದೆ, ಈ ಗುರುತುಗಳಿಂದ ಗರುಡನನ್ನು ಸುಲಭವಾಗಿ ಗುರುತಿಸಬಹುದು. ಸತ್ತ ಪ್ರಾಣಿಯಾಗಲೀ ಅಥವಾ ತಾನೇ ಹಿಡಿದು ಕೊಂದ ಪ್ರಾಣಿಯಾಗಲೀ, ಅದರ ಮಾಂಸವನ್ನು ಕಿತ್ತು ತಿನ್ನಲು ಬಲಿಷ್ಠವಾದ ಮತ್ತು ತುದಿಯಲ್ಲಿ ಕೊಕ್ಕೆಯಂತೆ ಬಾಗಿರುವ ಕೊಕ್ಕು ಮತ್ತು ಗರಿಗಳಿಂದ ಆವೃತವಾದ ಹಳದಿ ಕಾಲುಗಳಲ್ಲಿಯೂ ಕೊಕ್ಕೆಯಂತೆ ಬಾಗಿರುವ ಕಾಲ್ಬೆರಳ ಉಗುರುಗಳು; ಎತ್ತರದಲ್ಲಿ ಹಾರಾಡಲು ತಕ್ಕುದಾದ ಪ್ರಬಲ ರೆಕ್ಕೆಗಳು ಅಂಚಿನಲ್ಲಿ ಕಪ್ಪು ಬಣ್ಣ ಹೊಂದಿರುತ್ತವೆ.
ಡಾ. ಎಸ್.ವಿ. ನರಸಿಂಹನ್ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ “ಗರುಡ” ಹಕ್ಕಿಯ ಕುರಿತ ಬರಹ ಇಲ್ಲಿದೆ
ಓದುಗರೇ, ನಾವು ಇಂದು ಗರುಡ ಪಕ್ಷಿಯ ಬಗೆಗೆ ತಿಳಿದುಕೊಳ್ಳೋಣ. ಗರುಡ ಎನ್ನುವುದು ನಮ್ಮ ಭಾರತೀಯ ಇತಿಹಾಸ-ಪುರಾಣಗಳಲ್ಲಿ ಅಲ್ಲದೆ ಬೌದ್ಧ ಧರ್ಮದಲ್ಲಿಯೂ ಪ್ರಸಿದ್ಧವಾದ ಹಕ್ಕಿ ಮತ್ತು ಇಂಡೋನೇಶಿಯಾ ದೇಶದ ರಾಷ್ಟ್ರ ಲಾಂಛನ! ಶಕ್ತಿ, ಶೌರ್ಯ, ವೈಭವಗಳ ಪ್ರತೀಕವಾದ ಈ ಹಕ್ಕಿ, ಸುಪರ್ಣ, ಗುರುತ್ಮಂತ, ವೈನತೇಯ ಮುಂತಾದ ಒಂಬತ್ತು ಹೆಸರುಗಳಿರುವ ಗರುಡ ವಿಷ್ಣುವಿನ ವಾಹನ.
ಆಕ್ಸಿಪಿಟ್ರಿಡೆ Accipitridae ಎಂಬ ಕುಟುಂಬಕ್ಕೆ ಸೇರಿದ ಈ ಹಕ್ಕಿಯನ್ನು ಇಂಗ್ಲೀಷಿನಲ್ಲಿ ಬ್ರಾಹ್ಮಿನಿ ಕೈಟ್ (Brahminy Kite) ಎಂದು ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು ಹ್ಯಾಲಿಯಾಸ್ಟರ್ ಇಂಡಸ್ Haliastur indus. ಹಗಲಿನ ವೇಳೆಯಲ್ಲಿ ಬೇಟೆಯಾಡುವ ಹಕ್ಕಿಗಳಾದ ಹದ್ದು, ಗಿಡುಗ, ಡೇಗೆ, ರಣಹದ್ದು, ಮುಂತಾದ ಹಕ್ಕಿಗಳ ಗುಂಪಿಗೆ ಸೇರಿದೆ. ಭಾರತ ದೇಶದ ಅಕ್ಕಪಕ್ಕದ ರಾಷ್ಟ್ರಗಳಾದ ಶ್ರೀಲಂಕಾ, ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ, ಇರಾನ್, ಆಗ್ನೇಯ ಏಶಿಯಾಗಳಲ್ಲದೆ, ಭಾರತದ ಎಲ್ಲೆಡೆ ಹಾಗೂ ಹಿಮಾಲಯದ ತಪ್ಪಲು ಪ್ರದೇಶಗಳಲ್ಲಿ ವಾಸ ಮಾಡುತ್ತವೆ.
ಸುಮಾರು 48 ಸೆಂಟಿಮೀಟರ್ ಗಾತ್ರದ ಗರುಡ ಹಕ್ಕಿಗೆ ಕೆಂಗಂದು ದೇಹದಲ್ಲಿ ಎದ್ದು ಕಾಣುವ ಅಚ್ಚ ಬಿಳಿ ತಲೆ, ಕತ್ತು ಮತ್ತು ಎದೆ, ಈ ಗುರುತುಗಳಿಂದ ಗರುಡನನ್ನು ಸುಲಭವಾಗಿ ಗುರುತಿಸಬಹುದು. ಸತ್ತ ಪ್ರಾಣಿಯಾಗಲೀ ಅಥವಾ ತಾನೇ ಹಿಡಿದು ಕೊಂದ ಪ್ರಾಣಿಯಾಗಲೀ, ಅದರ ಮಾಂಸವನ್ನು ಕಿತ್ತು ತಿನ್ನಲು ಬಲಿಷ್ಠವಾದ ಮತ್ತು ತುದಿಯಲ್ಲಿ ಕೊಕ್ಕೆಯಂತೆ ಬಾಗಿರುವ ಕೊಕ್ಕು ಮತ್ತು ಗರಿಗಳಿಂದ ಆವೃತವಾದ ಹಳದಿ ಕಾಲುಗಳಲ್ಲಿಯೂ ಕೊಕ್ಕೆಯಂತೆ ಬಾಗಿರುವ ಕಾಲ್ಬೆರಳ ಉಗುರುಗಳು; ಎತ್ತರದಲ್ಲಿ ಹಾರಾಡಲು ತಕ್ಕುದಾದ ಪ್ರಬಲ ರೆಕ್ಕೆಗಳು ಅಂಚಿನಲ್ಲಿ ಕಪ್ಪು ಬಣ್ಣ ಹೊಂದಿರುತ್ತವೆ. ಹಾಗೂ ದುಂಡಾದ ತುದಿಯುಳ್ಳ ಬಾಲ. ಗರುಡಹಕ್ಕಿಯ ದೃಷ್ಟಿ ಅತಿ ತೀಕ್ಷ್ಣ. ಅಲ್ಲದೆ ನೆಲದಿಂದ ಏಳುವ ಬಿಸಿಗಾಳಿಯ ಕೆಳಒತ್ತಡದ ಸಹಾಯದಿಂದ, ಇವು ರೆಕ್ಕೆ ಬಡಿಯದೆ ಆಕಾಶದಲ್ಲಿ ಸಾಕಷ್ಟು ಎತ್ತರದಲ್ಲಿ ಸುತ್ತು ಹೊಡೆಯುವುದನ್ನು ನೀವು ಕಾಣಬಹುದು. ಎಳೆಯ ವಯಸ್ಸಿನ ಗರುಡಗಳು ಚಾಕೊಲೇಟ್ ಬಣ್ಣದಿಂದ ಕೂಡಿರುತ್ತವೆ.
ಒಂಟಿಯಾಗಿ, ಕೃಷಿಭೂಮಿ, ಗದ್ದೆ, ತೋಟ ಮತ್ತು ಜನವಸತಿಯಲ್ಲಿ ನೀರಿರುವೆಡೆಯಲ್ಲಿ ಎತ್ತರದ ಸ್ಥಳದಲ್ಲಿ ಕುಳಿತು ಬೇಟೆ ಹುಡುಕುತ್ತದೆ. ಮೀನು, ಕಪ್ಪೆ, ಏಡಿ, ಕೀಟ, ಹಲ್ಲಿ, ಇಲಿ, ಹೆಗ್ಗಣ, ಹಾವು, ಬಾವಲಿ ಮತ್ತು ಮಳೆಕೀಟಗಳೇ ಗರುಡ ಹಕ್ಕಿಯ ಆಹಾರ. ಆಕಾಶದಲ್ಲಿ ಹಾರುವಾಗ ಗೊಗ್ಗರು ಗಂಟಲಿನಲ್ಲಿ ತೀಕ್ಷ್ಣವಾದ ಸಿಳ್ಳು ಹಾಕುತ್ತವೆ.
ಗರುಡ ಹಕ್ಕಿಯ ಪ್ರಜನನ ಸಮಯ ಡಿಸೆಂಬರ್ನಿಂದ ಏಪ್ರಿಲ್ವರೆಗೆ. ಎತ್ತರದ ಮರಗಳ ಮೇಲೆ, ರೆಂಬೆ-ಕೊಂಬೆ, ಒಣಕಡ್ಡಿಗಳಿಂದ ಬೋಗುಣಿಯಂತೆ ತಯಾರಾದ ಮತ್ತು ಅದರ ಮೇಲೆ ಮೃದು ಹುಲ್ಲು-ಎಲೆಗಳ ಹಾಸಿಗೆಯ ವಿಸ್ತಾರವಾದ ಅಟ್ಟಣಿಗೆ ಗೂಡನ್ನು ಕಟ್ಟುತ್ತವೆ. ಹೆಣ್ಣುಹಕ್ಕಿ ಸಾಮಾನ್ಯವಾಗಿ ಕೆಂಪು-ಕಂದು ಮಚ್ಚೆಗಳಿರುವ ಬೂದು ಬಣ್ಣದ ಎರಡು ಮೊಟ್ಟೆಗಳನ್ನಿಡುತ್ತದೆ. ಗೂಡು ಕಟ್ಟುವುದರಿಂದ ಹಿಡಿದು, ಮೊಟ್ಟೆಗಳಿಗೆ ಕಾವು ಕೊಡುವುದು, ಗುಟುಕು ನೀಡುವವರೆಗೆ ಗಂಡು-ಹೆಣ್ಣು ಹಕ್ಕಿಗಳು ಸೇರಿ ಕುಟುಂಬದ ಜವಾಬ್ದಾರಿಯನ್ನು ಹಂಚಿಕೊಳ್ಳುತ್ತವೆ. 26-27 ದಿನಗಳ ನಂತರ ಮೊಟ್ಟೆಯೊಡೆದು ಮರಿಗಳು ಹೊರಬರುತ್ತವೆ.

ಡಾ. ಎಸ್.ವಿ. ನರಸಿಂಹನ್ ವೈದ್ಯರು. ಕೊಡಗಿನ ವಿರಾಜಪೇಟೆಯಲ್ಲಿ ನೆಲೆಸಿದ್ದಾರೆ. ಆರೋಗ್ಯ ರಕ್ಷಣೆಯೊಂದಿಗೆ ಪರಿಸರ ರಕ್ಷಣೆಯ ಬಗೆಗೂ ಅಪಾರ ಕಾಳಜಿ ಹೊಂದಿದ್ದಾರೆ. ಕಳೆದ ನಲವತ್ತೊಂದು ವರ್ಷಗಳಿಂದ ಡಾ. ನರಸಿಂಹನ್ರವರು ಕೈಯಿಂದ ಕುಂಚಿಸಿದ ಸುಮಾರು ಎಂಭತ್ತೆರಡು ಸಾವಿರ ‘ವನ್ಯಜೀವಿ ಸಂದೇಶ ಪತ್ರ’ಗಳು ಪ್ರಪಂಚದಾದ್ಯಂತ ತಲುಪಿವೆ. ಇದೊಂದು ಲಿಮ್ಕಾ ದಾಖಲೆ. ವಿಜ್ಞಾನ ಬರವಣಿಗೆಯಲ್ಲೂ ಆಸಕ್ತಿ ಹೊಂದಿರುವ ಇವರು, ಕನ್ನಡ ಭಾಷೆ, ಸಂಗೀತ-ಸಾಹಿತ್ಯ, ಖಗೋಳ, ಪರಿಸರ ಮುಂತಾದ ವಿಷಯಗಳಲ್ಲಿ ಶಾಲಾ-ಕಾಲೇಜುಗಳಲ್ಲಿ, ರೇಡಿಯೋ, ಟಿವಿ ಮತ್ತು ಪತ್ರಿಕಾ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸಿದ್ದಾರೆ. ಕೊಡಗಿನ ಸಂಪೂರ್ಣ ಪಕ್ಷಿಸಂಕುಲದ ನಿಖರ ಮಾಹಿತಿಯುಳ್ಳ ‘ಕೊಡಗಿನ ಖಗರತ್ನಗಳು’ ಪುಸ್ತಕದಲ್ಲಿ ತಾವೇ ಎಲ್ಲ ಹಕ್ಕಿಗಳ ಚಿತ್ರಗಳನ್ನೂ ಬರೆದದ್ದು ಮತ್ತೊಂದು ಲಿಮ್ಕಾ ದಾಖಲೆ. ‘2013ರ ಕೊಡಗಿನ ವರ್ಷದ ವ್ಯಕ್ತಿ’ಪುರಸ್ಕೃತರು


