ಕೈ ಬೊಗಸೆಯಲ್ಲಿ ನೀರು ಹಿಡಿದು ಬಂದಾಗ ನನ್ನ ಕೈ ಮೇಲೆ ಎಗರಿ ಬಂದು ಕುಳಿತು, ನೀರನ್ನು ಗುಟುಕು ಗುಟುಕಾಗಿ ಕುಡಿದು ನನ್ನ ಮುಖ ನೋಡಿದ ಗುಬ್ಬಕ್ಕ “ನಮ್ಮ ಪೂರ್ವಜರು, ನಿಮ್ಮ ತರಹ ಸಹಾಯ ಮಾಡಿದವನ್ನೆಲ್ಲ ಹುಡುಕಿ ನಮ್ಮೆಲ್ಲರ ಪರವಾಗಿ ಕೃತಜ್ಞತೆ ಹೇಳಲು ಆಜ್ಞೆ ಮಾಡಿದ್ದರು. ನಿಮ್ಮ ಪೂರ್ವಜರಿಗೆಲ್ಲರಿಗೂ, ನಿನ್ನ ಮೂಲಕ ನಮ್ಮೆಲ್ಲರ ನಮಸ್ಕಾರಗಳು. ಈ ಸಣ್ಣ ಪ್ರಯತ್ನದಿಂದ ನಮ್ಮೆಲ್ಲ ಬಂಧುಗಳಿಗೆ ಶಾಂತಿ ದೊರೆಯುತ್ತದೆ.
ಬೆಂಗಳೂರಿನಂಥ ಮಹಾನಗರಗಳನ್ನು ತೊರೆದುಹೋದ ಗುಬ್ಬಚ್ಚಿಗಳ ಕುರಿತು ಬರೆದಿದ್ದಾರೆ ವಾಸುದೇವ ಕೃಷ್ಣಮೂರ್ತಿ

ಸಂಜೆ ಹಾಗೆ ಬಾಲ್ಕನಿಯಲ್ಲಿ ಕೂತು ಕಾಫಿ ಸವಿಯುತ್ತ ಕಣ್ಣಾಡಿಸಿದಾಗ ತುಳಸಿ ಗಿಡದ ಸಮೀಪ ಏನೋ ಅಲುಗಿದಂತಾಯಿತು. ಹತ್ತಿರ ಹೋದಾಗ ನಾನು ಚಿಕ್ಕವನಾಗಿದ್ದಾಗ ದಿನವಿಡೀ ಕಾಣಿಸುತ್ತಿದ್ದ ಗುಬ್ಬಕ್ಕ ಅಂದರೆ ಗುಬ್ಬಚ್ಚಿ ಕಂಡಿತು. ಬಹಳ ದಿನಗಳಾಗಿತ್ತು ಆ ರೀತಿಯ ಸ್ನೇಹಮಯ ಗುಬ್ಬಕ್ಕನನ್ನು ಮನೆಯಲ್ಲಿ ನೋಡಿ.

1970-80 ದಶಕಗಳಲ್ಲಿ ಎಲ್ಲೆಲ್ಲೂ ಕಾಣಸಿಗುತ್ತಿದ್ದದ್ದು ಗುಬ್ಬಕ್ಕ ಮತ್ತೆ ಕಾಗಕ್ಕ. ಹೆಂಚಿನ ಮನೆಗಳು ಎಲ್ಲಾ ಬಡಾವಣೆಗಳಲ್ಲಿ ಇದ್ದವು. ಎಲ್ಲರ ಮನೆ ಮುಂದೆ ಯಾವುದೊ ಒಂದು ಮರ ಅಥವಾ ಸಣ್ಣ ಗಿಡವಾದರೂ ಇರುತ್ತಿತ್ತು. ಅಲ್ಲೇ ಎಲ್ಲೋ ಒಂದು ಸಣ್ಣ ಸಂದಿಯಲ್ಲಿ ಹತ್ತಿ, ಹುಲ್ಲು ಮತ್ತು ಕಡ್ಡಿಗಳಿಂದ ತನ್ನ ಗೂಡು ಕಟ್ಟಿಕೊಂಡು ಗುಬ್ಬಚ್ಚಿಗಳು ಬೆಚ್ಚಗೆ ತಮ್ಮ ಸಂಸಾರ ನಡೆಸುತಿದ್ದವು.

ಗುಬ್ಬಿಗಳ ಊಟಕ್ಕೆ ಯಾವುದೇ ತೊಂದರೆಯಾಗುತ್ತಿರಲಿಲ್ಲ. ಪ್ರತೀ ಮನೆಗಳಲ್ಲಿ ಸರ್ವೇಸಾಮಾನ್ಯ ಅಡುಗೆ ಮಾಡುವ ಮುಂಚೆ ಅಕ್ಕಿ, ರಾಗಿ ಮತ್ತೆ ಬೆಳೆಗಳನ್ನು ಬಿದುರಿನ ಮರದಲ್ಲಿ ಹಾಕಿ ಕ್ಲೀನ್ ಮಾಡುವುದು ಅತ್ಯವಶ್ಯಕ ಕಾರ್ಯವಾಗಿತ್ತು. ಆ ವೇಳೆಗೆ ಸರಿಯಾಗಿ ನಮ್ಮ ಗುಬ್ಬಕ್ಕ ತಮ್ಮ ಸಂಸಾರ ಸಮೇತ ಬಂದು, ಆಗ ಸಿಗುವ ಚಿಕ್ಕ ಹುಳಗಳು, ಕಾಳುಗಳನ್ನು ತಿಂದು ಸಂತಸದಿಂದ ಎಲ್ಲಕಡೆ ಓಡಾಡಿ ಚಿಲಿಪಿಲಿ ಹಾಡುಗಳನ್ನು ಹಾಡಿ ಹೋಗುತ್ತಿದ್ದವು.

ಈಗ ಸಿಕ್ಕ ಗುಬ್ಬಕ್ಕ ಸುಮ್-ಸುಮ್ನೆ ನಕ್ಕಹಾಗೆ ಅನ್ನಿಸಿತು, ನಾನು ಮರುನಕ್ಕೆ. ಆಗ ಆ ಗುಬ್ಬಕ್ಕ “ಏನ್ ಸ್ವಾಮಿ ಚೆನ್ನಾಗಿದ್ದೀರಾ?” ಅಂತು! ಐತಲಗಾ ಏನಪ್ಪಾ ಈ ಕಾಲದಲ್ಲಿ ಪಕ್ಷಿಗಳು ಮಾತಾಡ್ತಾ ಇದೆಯಲ್ಲಪ್ಪ ಅಂತ ಪಿಳಿಪಿಳಿ ಅಂತ ಅದನ್ನೇ ನೋಡಿದೆ. “ಓ ಆಶ್ಚರ್ಯ ಆಯ್ತಾ? ಹೌದು ನಾನೆ ಗುಬ್ಬಕ್ಕನೇ ಮಾತಾಡ್ತಾ ಇರೋದು. ನೀನು ನನ್ನ ಸುಮಾರು ೧೫ನೆ ತಲೆಮಾರಿನ ಹಿಂದಿನವರನ್ನು ಇದೆ ಬೆಂಗಳೂರಲ್ಲಿ ನಿಮ್ಮ ಹಳೆಯ ಮನೆಯಲ್ಲಿ ನೋಡಿದ್ದೆ. ಆಗ ಬಹಳ ಕಡಿಮೆ ಟೀವಿಗಳಿದ್ದವು ಮತ್ತು ಮೊಬೈಲ್‌ಗಳಂತೂ ಇರಲೇ ಇಲ್ಲ. ಬೆಂಗಳೂರಲ್ಲಿ ಕಾಣಸಿಗುತ್ತಿದ್ದದ್ದು ಕೇವಲ ದೂರದರ್ಶನದ ಟೀವಿ ಟವರ್. ಬೇರೆ ಯಾವ ಟವರ್ರು ಇರಲೇ ಇಲ್ಲ, ಹಕ್ಕಿಗಳಿಗೆ ತಂತ್ರಜ್ಞಾನದಿಂದ ಯಾವ ತೊಂದರೆಯೂ ಇರಲಿಲ್ಲ. ನೀವುಗಳು ನಿಮ್ಮ ಅನುಕೂಲಕ್ಕಾಗಿ ತಂತ್ರಜ್ಞಾನ ತಂದು ಮತ್ತು ಎಲ್ಲ ಹಳೆಯ ಮನೆಗಳನ್ನು ಕೆಡವಿ, ನಿಮ್ಮ ಅನುಕೂಲಕ್ಕೆ ತಕ್ಕ ಮನೆಗಳನ್ನು ಕಟ್ಟಿಕೊಂಡು, ನಮ್ಮ ಹಿಂದಿನವರನ್ನೆಲ್ಲ ನಿಮ್ಮ ಊರಿನಿಂದ ಓಡಿಸಿದಿರಿ. ಅವರ ಕಾಲದಲ್ಲಿ ಇರಲೇ ಇಲ್ಲವಾಗಿದ್ದ ಪಾರಿವಾಳಗಳನ್ನು ತಂದು ಊರಲ್ಲೆಲ್ಲ ತುಂಬಿದಿರಿ. ನಾವುಗಳು ಹುಳ-ಹುಪ್ಪಟ್ಟೆ ತಿಂದುಕೊಂಡು ನಿಮ್ಮನ್ನು ಕಾಪಾಡುತಿದ್ದೆವು. ಆದರೆ ನಿಮ್ಮ ಪ್ರೀತಿಯ ಪಾರಿವಾಳಗಳು ನಿಮಗೆ ಯಾವುದೇ ಉಪಕಾರ ಮಾಡುತ್ತಿಲ್ಲದಿದ್ದರೂ, ನೀವುಗಳು ಪ್ರತಿದಿನ ಮೂಟೆ ಮೂಟೆ ಧಾನ್ಯಗಳನ್ನು ಅವುಗಳಿಗೆ ಸುರಿದು, ಅವುಗಳ ಸಂತತಿ ಬೆಳೆಯುವಂತೆ ಮಾಡಿದ್ದೀರ. ಪಾರಿವಾಳಗಳು ನಿಮ್ಮೆಲ್ಲ ಪರಿಸರ ಮತ್ತು ಮನೆಯ ಆವರಣದಲ್ಲಿ ತನ್ನ ಪಿಕ್ಕೆ ಹಾಕಿ ಗಬ್ಬು ಗಲೀಜು ಮಾಡಿ, ನಿಮ್ಮ ಆರೋಗ್ಯಕ್ಕೆ ತೊಂದರೆ ಕೊಡುತ್ತಿವೆ. ನಿಮಗೆ ಅದರ ಬಗ್ಗೆ ಸ್ವಲ್ಪ ಕೂಡ ಜ್ಞಾನವಿಲ್ಲ! ನಮ್ಮ ಪೂರ್ವಜರು ಮುಂದಿನ ಎಲ್ಲ ನಮ್ಮ ತಲೆಮಾರಿನವರಿಗೆ ಅವರು ಇದ್ದ ಮನೆಯವರನ್ನು ಭೇಟಿ ಮಾಡಲೇ ಬೇಕೆಂದು ಹೇಳುತ್ತಲೇ ಇದ್ದರು. ನಮಗೆ ನಿಮ್ಮನ್ನು ಹುಡುಕುವುದು ಸಾಹಸವೇ ಆಯಿತು. ನೀನು ಈಗ ಸಿಕ್ಕೆ, ನಿನಗೆ ನಮ್ಮ ಬವಣೆ ಮತ್ತೆ ಭಾವನೆ ತಿಳಿಸಲೇ ಬೇಕೆಂದು ನಿನ್ನನ್ನು ಹುಡುಕಿಕೊಂಡು ಬಂದೆ”.

ಅದಕ್ಕೆ ನಾನು, “ಗುಬ್ಬಕ್ಕ, ನಿನ್ನನ್ನು ನೋಡಿ ಬಹಳ ಸಂತೋಷ ಆಯಿತು. ನಿನ್ನ ಪೂರ್ವಜರು, ನಾನು ಚಿಕ್ಕವನಾಗಿದ್ದಾಗ ನನ್ನ ಜೊತೆಯಲ್ಲಿ ಆಟ ಆಡುತ್ತಿದ್ದರು. ನೀವುಗಳು ಗೂಡುಕಟ್ಟುವದನ್ನು ನೋಡುವುದೇ ಆನಂದ. ಚಿಕ್ಕ ಚಿಕ್ಕ ಹುಲ್ಲು, ಕಡ್ಡಿ, ಪುಕ್ಕ, ಹತ್ತಿಯನ್ನೆಲ್ಲ ತಂದು ಅವುಗಳನ್ನು ಜೋಡಿಸಿ ಗೂಡು ಕಟ್ಟಿ, ಅದರಲ್ಲಿ ಮೊಟ್ಟೆ ಇಟ್ಟು, ಅದಕ್ಕೆ ಕಾವು ಕೊಟ್ಟು, ಕಾಪಾಡಿ, ಮೊಟ್ಟೆ ಒಡೆದು ಮರಿ ಆಚೆ ಬಂದಾಗ ನಿಮಗಿಂತ ನಮಗೆ ಆನಂದವಾಗುತಿತ್ತು. ಪ್ರತಿ ದಿನ ಬೆಳಿಗಿನ ಉಪಹಾರ ತಿನ್ನುವಾಗ ನಮ್ಮ ಮನೆಯಲ್ಲಿದ್ದ ಎಲ್ಲಾ ಗುಬ್ಬಿಗಳು ನಾವು ಕೊಡುತ್ತಿದ್ದ ಸಣ್ಣ ದೋಸೆ, ಇಡ್ಲಿ, ಬ್ರೆಡ್ ತುಂಡುಗಳು ಅಥವಾ ಅನ್ನದ ಅಗುಳು ನಮ್ಮ ಜೊತೆ ತಿನ್ನುತ್ತಾ, ಅವುಗಳೆಲ್ಲ ಕುಣಿದು ಹೋಗುತ್ತಿದ್ದದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಆ ದಿನಗಳು ಮತ್ತೆ ಬರುವುದೇ ಇಲ್ಲ. ಹೌದು, ನೀನು ನನ್ನನ್ನು ಹೇಗೆ ಗುರುತಿಸಿ ಇಲ್ಲಿಗೆ ಬಂದೆ?” ಎಂದು ಕೇಳಿದೆ.

ಗುಬ್ಬಕ್ಕ “ನಮ್ಮ ನೆಟ್-ವರ್ಕು ಸಕತ್ತಾಗಿದೆ. ನೀನು ಮಾರ್ಕೆಟ್‌ನಲ್ಲಿರುವ ತರಕಾರಿ ಅಂಗಡಿಗಳ ಮುಂದೆ ಬಂದಾಗ, ಯಾವುದಾದರೂ ಹಳ್ಳಿಗೆ ಬಂದಾಗ ಮತ್ತು ಬೆಂಗಳೂರಿನ ಏರ್ಪೋರ್ಟ್‌ನ ಒಳಗೆ ನಮ್ಮವರನ್ನು ಕಂಡಾಗ ನೀನು ಪ್ರೀತಿಯಿಂದ ನೋಡುತ್ತಿದ್ದ ಫೋಟೋಗಳು ನಮ್ಮ ಜಾಲತಾಣದಲ್ಲಿ (ಗುಬ್ಬಿಗಳ ಫೇಸ್ಬುಕ್!) ತುಂಬಾ ಲೈಕ್ಸ್ ಪಡೆದಿವೆ. ನಮ್ಮ ಜಾಲತಾಣದ ಅಡ್ಮಿನ್ನು, ನಿನ್ನನ್ನು ಭೇಟಿಮಾಡಲು ಆಜ್ಞೆ ಮಾಡಿದ. ಅದಕ್ಕೆ ನಾನು ನಿನ್ನನ್ನು ಗಾಂಧಿಬಜಾರ್ ತರಕಾರಿ ಅಂಗಡಿಯಿಂದ ಹಿಂಬಾಲಿಸಿ ನಿಮ್ಮ ಮನೆಗೆ ಪಾರಿವಾಳ ಇಲ್ಲದ ಸಮಯದಲ್ಲಿ ಬಂದಿದ್ದೇನೆ ಗೊತ್ತಾ?” ಅನ್ನೋದೇ?

ಎಲ್ಲರ ಮನೆ ಮುಂದೆ ಯಾವುದೊ ಒಂದು ಮರ ಅಥವಾ ಸಣ್ಣ ಗಿಡವಾದರೂ ಇರುತ್ತಿತ್ತು. ಅಲ್ಲೇ ಎಲ್ಲೋ ಒಂದು ಸಣ್ಣ ಸಂದಿಯಲ್ಲಿ ಹತ್ತಿ, ಹುಲ್ಲು ಮತ್ತು ಕಡ್ಡಿಗಳಿಂದ ತನ್ನ ಗೂಡು ಕಟ್ಟಿಕೊಂಡು ಗುಬ್ಬಚ್ಚಿಗಳು ಬೆಚ್ಚಗೆ ತಮ್ಮ ಸಂಸಾರ ನಡೆಸುತಿದ್ದವು.

“ಹೌದು ಗುಬ್ಬಕ್ಕ ಬರೋದು ಬಂದಿದ್ದೀಯಾ, ಏನು ಬೇಕು ತಿನ್ನೋದಿಕ್ಕೆ?” ಅಂದಿದ್ದಕ್ಕೆ ಅವಳು, “ಹೊಟ್ಟೆ ತುಂಬ ಅವರೆಕಾಯಲ್ಲಿರೋ ಹುಳ ತಿಂದು ಬಂದಿದ್ದೇನೆ, ಸ್ವಲ್ಪ ಶುದ್ಧವಾದ ನೀರು ಕೊಡು ಸಾಕು” ಅಂದಳು.

ಕೈ ಬೊಗಸೆಯಲ್ಲಿ ನೀರು ಹಿಡಿದು ಬಂದಾಗ ನನ್ನ ಕೈ ಮೇಲೆ ಎಗರಿ ಬಂದು ಕುಳಿತು, ನೀರನ್ನು ಗುಟುಕು ಗುಟುಕಾಗಿ ಕುಡಿದು ನನ್ನ ಮುಖ ನೋಡಿದ ಗುಬ್ಬಕ್ಕ “ನಮ್ಮ ಪೂರ್ವಜರು, ನಿಮ್ಮ ತರಹ ಸಹಾಯ ಮಾಡಿದವನ್ನೆಲ್ಲ ಹುಡುಕಿ ನಮ್ಮೆಲ್ಲರ ಪರವಾಗಿ ಕೃತಜ್ಞತೆ ಹೇಳಲು ಆಜ್ಞೆ ಮಾಡಿದ್ದರು. ನಿಮ್ಮ ಪೂರ್ವಜರಿಗೆಲ್ಲರಿಗೂ, ನಿನ್ನ ಮೂಲಕ ನಮ್ಮೆಲ್ಲರ ನಮಸ್ಕಾರಗಳು. ಈ ಸಣ್ಣ ಪ್ರಯತ್ನದಿಂದ ನಮ್ಮೆಲ್ಲ ಬಂಧುಗಳಿಗೆ ಶಾಂತಿ ದೊರೆಯುತ್ತದೆ. ಮುಂದಿನ ನಮ್ಮ ಹಳೆಯ ಗೆಳೆಯರನ್ನು ಭೇಟಿ ಮಾಡಬೇಕು, ಹೊರಡಲೇ” ಅಂದು, ನನ್ನ ಕೆನ್ನೆಯ ಬಳಿ ಹಾರುತ್ತ ಬಂದು ಚಿಕ್ಕ ಮುತ್ತನಿಟ್ಟು ನಾಚಿ ಸುಮ್-ಸುಮ್ನೆ ನಕ್ಕ ಗುಬ್ಬಕ್ಕ, “ಟಾಟಾ” ಎಂದು ಜಿಗಿದು ಹಾರಿ ಹೋದಳು.

ನಾನು ಹೌಹಾರಿ ಎದ್ದೆ – ನೋಡಿದರೆ ನಾನು ಮಂಚದ ಮೇಲಿಂದ ನಿದ್ದೆಯಿಂದ ಎದ್ದಿದ್ದೆ! ಎಲ್ಲ ಕನಸು! ಯಾಕೋ ಬಹಳ ದಿನದಿಂದ ಗುಬ್ಬಿಗಳನ್ನು ನೋಡಬೇಕೆಂದು ಬಯಸುತ್ತಿದ್ದೆ. ಅದನ್ನು ತಿಳಿದ ಗುಬ್ಬಕ್ಕ ಕನಸಿನಲ್ಲಿ ಬಂದು ಹೋಗಿರಬಹುದೆನಿಸಿತು.

ಆಚೆಕಡೆ ಪಾರಿವಾಳಗಳ “ಹೂಂ ಹೂಂ ಹೂಂ” ಅನ್ನುವ ಸದ್ದು ಮತ್ತು ಪಕ್ಕದ ಮನೆಯಿಂದ ಮೊಬೈಲ್ ರಿಂಗಾಯಣದ ಸದ್ದು ನನ್ನನ್ನು ನಾನೇ ಅಪರಿಚಿತನಂತೆ ನೋಡುವಂತಾಯಿತು. ಕಿಟಕಿಯಿಂದ ನೋಡಿದಾಗ ಸುತ್ತಮುತ್ತಲಿದ್ದ ಮೊಬೈಲ್ ಟವರ್, ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್, ಹಾಗೆ ಪಕ್ಕದ ಅಪಾರ್ಟ್ಮೆಂಟಿನ ಗ್ಲಾಸ್ ಗೋಡೆಯಿಂದ ಸೂರ್ಯನ ಕಿರಣ ಪ್ರತಿಬಿಂಬಿಸಿ ಕಣ್ಣನ್ನು ಮುಚ್ಚುವಂತೆ ಮಾಡಿತು.

ಆಗಿನ ಬೆಂಗಳೂರು ಕೇವಲ ಕನಸು ಮಾತ್ರ. ಗುಬ್ಬಿ ಮತ್ತು ಅದೇರೀತಿಯ ಹಲವು ಪ್ರಾಣಿ, ಪಕ್ಷಿಗಳು ಬದುಕಿಬಾಳಲೆಬಾರದ ಸ್ಥಿತಿ ನಮ್ಮ ಊರಿಗೆ ತಂದಿದ್ದೇವೆ. ನಾವು ಸಹ ಒಂದು ದಿನ ಗುಬ್ಬಿಗಳ ಹಾಗೆಯೇ ಊರನ್ನು ಬಿಡುವ ಪರಿಸ್ಥಿತಿ ಬರಬಹುದು. ಈಗಾಗಲೇ ಶುದ್ಧವಾದ ನೀರು, ಗಾಳಿ ಮತ್ತು ಉತ್ತಮ ಊಟ ಸಿಗದೇ, ಸಮಸ್ಯೆ ದಿನೇದಿನೇ ಹೆಚ್ಚಾಗುತ್ತಲೇ ಇದೆ. “ಮಾಡಿದ್ದು ಉಣ್ಣೋ ಮಹರಾಯ” ಅಂದಹಾಗೆ ನಾವು ಮತ್ತು ನಮ್ಮ ಪೂರ್ವಜರು ಮಾಡಿದ ಕರ್ಮ ಅನುಭವಿಸಿಯೇ ತೀರಬೇಕು.

ಆದರೂ, ಗುಬ್ಬಕ್ಕ ಏಕೆ ಸುಮ್-ಸುಮ್ನೆ ನಕ್ಕಳು ಎಂದು ತಿಳಿಯುವ ಆಸೆಯಾಯಿತು. ಯೋಚಿಸಿದಾಗ ಅರಿವಾಯಿತು – ಗುಬ್ಬಕ್ಕ ಏನೋ ಊರನ್ನು ಬಿಟ್ಟು, ತನಗೆ ಸರಿಯೆನಿಸುವ ಜಾಗದಲ್ಲಿ ಸೆಟ್ಲ್ ಆದಳು. ಆದರೆ ನಮಗೆ ಹಾರಲು ರೆಕ್ಕೆ ಇಲ್ಲ, ನಮ್ಮ ಮನೆ ನಾವೇ ಕಟ್ಟಲು ಬರುವುದಿಲ್ಲ, ಹಣವಿಲ್ಲದೆ ಆಹಾರ ನಮಗೆ ಸಿಗುವುದೇ ಇಲ್ಲ ಮತ್ತು ಮನುಷ್ಯರನ್ನು ಯಾವ ಪ್ರಾಣಿಗಳೂ ನಂಬುವುದಿಲ್ಲ. ನಾವು ಅಷ್ಟು ಖತರ್ನಾಕ್! ಯಾವುದೇ ಪ್ರಾಣಿಯಾದರು, ತನ್ನ ಹೊಟ್ಟೆ ತುಂಬುವಷ್ಟು ತಿನ್ನುತ್ತವೆ. ಆದರೆ ಮನುಷ್ಯ, ತನ್ನ ಮುಂದಿನ ಸಾವಿರ ತಲೆಮಾರಿಗೆ ಬೇಕಾಗುವಷ್ಟು ಆಸ್ತಿ-ಅಂತಸ್ತು ಮಾಡಲು ಎಲ್ಲ ರೀತಿಯ ವಿದ್ಯೆಯನ್ನು ಬಳಸಿ ಸ್ವಾರ್ಥಿಯಾಗಿ ವರ್ತಿಸುತ್ತಾನೆ(ಳೆ)! ತನ್ನ ಕೊನೆಗಳಿಗೆಯಲ್ಲೂ, ಸ್ವಾರ್ಥ ಬಿಡುವುದಿಲ್ಲ. ದಾಸರೇನೋ “ಮಾನವ ಜನ್ಮ ದೊಡ್ಡದು” ಎಂದು ಹೇಳಿದರು. ಆದರೆ ಈಗ ಹೇಳಲೇ ಬೇಕಾದ್ದು, “ಮಾನವ ಜನ್ಮ ದಡ್ದರದ್ದು” ಅಂತ! ಆ ದೊಡ್ಡ ಮಾನವ ದಡ್ಡನಾಗಿ ಎಲ್ಲ ಪ್ರಾಣಿ, ಪಕ್ಷಿ, ಮರ-ಗಿಡ ಮತ್ತು ಭೂಮಿಯ ಮೇಲಿರುವ ಎಲ್ಲ ಸಂಪತ್ತನ್ನು ನಾಶ ಮಾಡಿ, ತನ್ನ ಸಂತತಿ ಮಾತ್ರ ಇರಬೇಕೆಂದು ರಾಕ್ಷಸ ಆಗಿದ್ದಾನೆ.

ಗುಬ್ಬಕ್ಕನ ಆ ಸುಮ್-ಸುಮ್ನೆಯ ನಗು ಪ್ರತಿದಿನ ಕಾಡುತ್ತಲೇ ಇದೆ! ನಿಮಗೆ ಆ ನಗು ಈಗ ಕಾಡಲು ಪ್ರಾರಂಭವಾಗಿರಬೇಕಲ್ಲವೇ?