ಚಳಿಗಾಲಕ್ಕೆಂದೆ ಅರಳುವ ಕೆಲವು ಕಾಡ ಹೂಗಳಿಗೆ ಹೆಸರಿಲ್ಲದಿದ್ದರೂ ಬಣ್ಣಗಳಿವೆ. ಈ ಬಣ್ಣದ ಹೂಗಳಿಗೆ ಹೆಸರಿಡುವ ಕೆಲಸವೂ ಅಣಶಿ ಮಕ್ಕಳಿಂದ ಸದ್ದಿಲ್ಲದೆ ನಡೆಯುತ್ತದೆ. ಕೊರೆವ ಚಳಿಯಲ್ಲೂ ಮಕ್ಕಳೆಲ್ಲ ಹಳ್ಳದ ಅಂಚಿರುವ ಕಾಡ ಮರದ ತುದಿಯನ್ನೇರಿ ಹಳ್ಳದ ನೀರಿಗೆ ಧುಮುಕಿ ಈಜುವ ಸಾಹಸದ ಕ್ರೀಡೆಯಲ್ಲಿ ತಲ್ಲೀನರಾಗಿದ್ದಾರೆ. ಶಿಶಿರನ ಹೆಸರು ಕೇಳತ್ತಿದ್ದಂತೆಯೆ ನದಿಯೂ ಕೂಡ ನಲುಮೆಯ ಮಾತಾಡಿದೆ. ಪ್ರತಿ ಚಳಿಗಾಲಕ್ಕೆ ಕಾಂದಾಬಜ್ಜಿ ಬಿಸಿ ಬಿಸಿ ತಯಾರಿಸಿ ಮಾರುವ ಅಜ್ಜನ‌ ಅಂಗಡಿ ಈ ಬಾರಿ ಬಾಗಿಲು ಜಡಿದುಕೊಂಡು ಕೂತಿದೆ.  ‘ಕಾಳಿಯಿಂದ ಕಡಲಿನವರೆಗೆ’ ಸರಣಿಯಲ್ಲಿ ಚಳಿರಾಯನ ಒಡ್ಡೋಲಗದ ಬಗ್ಗೆ ಬರೆದಿದ್ದಾರೆ ಅಕ್ಷತಾ ಕೃಷ್ಣಮೂರ್ತಿ 

 

ಕಾಳಿ ಕಣಿವೆಯಲ್ಲಿ ಈ ಬಾರಿ ಭರಪೂರ್ ಮಳೆಯಾಗಿ, ಪ್ರವಾಹವೂ ಆಗಿ ಸಮಸ್ಯೆಗಳು ಸಾಲು ಸಾಲಾಗಿ ನಿಂತು ಸುಧಾರಿಸಿಕೊಳ್ಳುವ ಹೊತ್ತಲ್ಲಿ ಚಳಿ ಬಾಗಿಲು ಕಿಟಕಿಗಳಿಂದ ಇಣುಕುತ್ತಾ, ಮುಗುಳು ನಗೆ ನಕ್ಕು ಪ್ರಧಾನ ಬಾಗಿಲು ದಾಟಿ ಬಂದು ನಿಂತಿದೆ. ಇಡಿ ಕಾಳಿ ನದಿಯ ಒಡಲು ಒಂದು ರೀತಿಯಲ್ಲಿ ತಣ್ಣಗಾದಂತೆ. ಅಣಶಿಯಲ್ಲೆಲ್ಲ ಚಳಿಗಾಲ ಬಂದರೆ ಕಾನನ ತಣ್ಣಗಾಗಿ ಹೊಸದಾಗಿ ಹೊಳೆಯುವ ಸರದಿ. ಪಾವುಸ್ ಯತ್ತಾ ಆಸಾ (ಮಳೆ ಬರುತ್ತಲೆ ಇದೆ) ಎನ್ನುತ್ತಲೆ ಮೊನ್ನೆ ಮೊನ್ನೆಯಷ್ಟೇ ಗದ್ದೆ ಕೊಯ್ದು, ಎಲ್ಲರ ಮನೆಯ ಕಣಜ ತುಂಬಿ ಹೊಸ ಕನಸು ಮೂಡಿದ ಹೊತ್ತು ಇದು. ಹೊಸ ಹುರುಪು ಹೊತ್ತ ಆಗಸದ ತುಂಬೆಲ್ಲ ಬಹುಮುಖಿಯ ಭರವಸೆಯ ಮೋಡಗಳು. ಆಗೊಮ್ಮೆ ಈಗೊಮ್ಮೆ ಇಣುಕಿ ನೋಡುವ ಆಳೆತ್ತರದ ಮರಗಳು. ಸುಡುವುದನ್ನೆ ಮರೆತ ಸೂರ್ಯನಿಗೆ ಕಣ್ಣು ಹೊಡೆದು ನಲುಮೆ ತೋರುವ ಹಸಿರೆಲೆಗಳು..

ಕಣಿವೆ ತುಂಬ ಈ ಚಳಿಗಾಲ ಸಂಭ್ರಮವೊ ಸಂಭ್ರಮ. ಪುಟ್ಟ ಪುಟ್ಟ ತೊರೆಗಳ ನೀರು ಇನ್ನೂ ಆರಿಲ್ಲ. ನವಂಬರ್ ತಿಂಗಳಿನಲ್ಲಿ ಮಾಯವಾಗುತ್ತಿದ್ದ ಝರಿ ನೀರಿನ ಸೆಲೆಗಳಲ್ಲಿ ದಾಹ ತಣಿಸುವ ಉತ್ಸಾಹ ಇನ್ನೂ ಇದೆ. ಹೀಗಾಗಿ ಕಣಿವೆ ತುಂಬೆಲ್ಲ ಹಸಿರೆ ಹಸಿರು. ಕಣಿವೆ ಪೂರ್ತಿ ಹೂ ಮಿಡಿ ಹೀಚು ಕಾಯಿಗಳ ಸಂಭ್ರಮವದು. ಮಳೆಗಾಲದಲ್ಲಿ ಕಂಡ ಕಾಡು ಈಗಿಲ್ಲ. ಎಲ್ಲ ಅದಲು ಬದಲು…. ಒಂದೊಂದು ಗಿಡ ಮರಕೆ ಒಂದೊಂದು ನಮೂನೆಯ ಅಂಗಿ. ಸಣ್ಣ ಎಲೆ ದೊಡ್ಡ ಎಲೆ ಚೂಪು ಎಲೆ ಚಿಗುರೆಲೆ ಗೋಲದೆಲೆ, ಹೃದಯದಾಕಾರದ ಎಲೆ. ಮುಳ್ಳೆಲೆ, ಉದ್ದ ಎಲೆ… ಎಲೆಗಳನ್ನು ನೋಡುವುದೆ ಒಂದು ಬಗೆಯ ಹಬ್ಬ.

ಕಣಿವೆಯಲ್ಲೀಗ ಸಂಜೆ ಐದಾಗುತ್ತಿದ್ದಂತೆ ನದಿಯಂಚಿನ ಚೂಪು ಎಲೆಯ ಮರದ ಕೆಂಪನೆಯ ಹೂವು ಮಲ್ಲಿಗೆಯಂತಹ ಪರಿಮಳ ಸೂಸಿ ಇಡೀ ಕಣಿವೆಯೆ ಅತ್ತರು ಬಳಿದುಕೊಂಡ ಹಾಗೆ ಪರಿಮಳ. ಬೆಳಗಾದರೆ ಚಳಿಯ ಸಂಧಿಸಲು ಸೀಟಿ ಹಾಕುತ್ತ ಬರುವ ನೀಲಿ ಸಿಳ್ಳಾರ ಹಕ್ಕಿಯ ಸಡಗರ. ಸಡಗೋ ವೇಳಿಪ ಕಾಡೆಲ್ಲ‌ ದಿನವಿಡಿ ಅಲೆದರೂ ಒಂದು ಹತ್ತು ರಾಮಪತ್ರೆ ಸಿಗದಷ್ಟು ದಣಿವು. ಹಾರ್ನಬಿಲ್ ಹಕ್ಕಿ ಎಲ್ಲ ತಿಂದು ಹೋದವು ಎಂದು ಹಳಹಳಿಸುತ್ತ ಅವನ ಚಳಿ ಕಳೆಯುವ ಹೊತ್ತು ಇದು. ಕೊರೆವ ಚಳಿಯಲ್ಲಿ ಎಂದಿನಂತೆ ಐದಕ್ಕೆ ಎದ್ದು ತಯಾರಾಗಿ ನಡೆಯಲಾರಂಭಿಸುವ ಶಾಲೆಯ ಮಕ್ಕಳ ನಡಿಗೆ ಎದುರು ಚಳಿ ಸೋಲುತ್ತದೆ. ಸ್ವೇಟರ್ ಇಲ್ಲದ ಅಪ್ಪಟ ಓಡಾಡುವ ಮರದಂತೆ ಇರುವ ನಮ್ಮ ಮಕ್ಕಳಿಗೆ ಸ್ವೇಟರ್ ಎಂಬುದು ಕನಸಿನ ಅಂಗಿ. ಮರ ಗಿಡ ಬಳ್ಳಿಗಳೆಲ್ಲ ಎಲೆ ತುಂಬಿಕೊಂಡು, ಶಾಲೆಗೆ ಹೋಗಿ ಬರುವ ದಾರಿಯಲ್ಲೆಲ್ಲ‌ ಕಣ್ಣು ಮಿಟುಕಿಸಿ ದಾರಿಹೋಕರ ಕೂದಲಿನ ನಡುವೆ ತಮ್ಮ‌ಎಲೆಗಳ ಸಿಕ್ಕಿಸಿ ಖುಷಿ ಪಡುವ ಕಾಲ ಮರಗಿಡಗಳದ್ದು.

ಚಳಿಗಾಲಕ್ಕೆಂದೆ ಅರಳುವ ಕೆಲವು ಕಾಡ ಹೂಗಳಿಗೆ ಹೆಸರಿಲ್ಲದಿದ್ದರೂ ಬಣ್ಣಗಳಿವೆ. ಈ ಬಣ್ಣದ ಹೂಗಳಿಗೆ ಹೆಸರಿಡುವ ಕೆಲಸವೂ ಅಣಶಿ ಮಕ್ಕಳಿಂದ ಸದ್ದಿಲ್ಲದೆ ನಡೆಯುತ್ತದೆ. ಕೊರೆವ ಚಳಿಯಲ್ಲೂ ಮಕ್ಕಳೆಲ್ಲ ಹಳ್ಳದ ಅಂಚಿರುವ ಕಾಡ ಮರದ ತುದಿಯನ್ನೇರಿ ಹಳ್ಳದ ನೀರಿಗೆ ಧುಮುಕಿ ಈಜುವ ಸಾಹಸದ ಕ್ರೀಡೆಯಲ್ಲಿ ತಲ್ಲೀನರಾಗಿದ್ದಾರೆ. ಶಿಶಿರನ ಹೆಸರು ಕೇಳತ್ತಿದ್ದಂತೆಯೆ ನದಿಯೂ ಕೂಡ ನಲುಮೆಯ ಮಾತಾಡಿದೆ. ಪ್ರತಿ ಚಳಿಗಾಲಕ್ಕೆ ಕಾಂದಾಬಜ್ಜಿ ಬಿಸಿ ಬಿಸಿ ತಯಾರಿಸಿ ಮಾರುವ ಅಜ್ಜನ‌ ಅಂಗಡಿ ಈ ಬಾರಿ ಬಾಗಿಲು ಜಡಿದುಕೊಂಡು ಕೂತಿದೆ. ವಯಸ್ಸಿನ ಭಾರದಿಂದ ಅಜ್ಜ ನಿರ್ಲಿಪ್ತನಾಗಿ ಕುಳಿತುಬಿಟ್ಟಿದ್ದಾನೆ. “ಹುಷಾರು ತಪ್ಪಿದರೆ ನಿನಗೆ ಆಸ್ಪತ್ರೆಗೆ ಒಯ್ಯಲಾಗದು. ಸ್ವಲ್ಪ ಜ್ವರ ಬಂದ್ರು ಕೊರೋನಾ ಆಗಿ ತಾಪತ್ರಯ ಉಂಟಾಗುವುದು. ಬಜ್ಜಿ ಮಾಡೋದು ಮರೆತುಬಿಡು” ಎಂದು ಸೊಸೆ ಎಚ್ಚರಿಕೆ ನೀಡಿದ್ದಾಳೆ. ಬಜ್ಜಿ ಮಾರುತ್ತ ಅವರಿವರ ಮಾತು ಕೇಳುತ್ತಾ ದಿನ ಕಳೆಯುತ್ತಿದ್ದ ಅಜ್ಜನಿಗೆ ಕೊರೋನಾ ಕಾಲ ಮುಗಿಯಿತು ಎಂಬ ಸಮಾಧಾನ ಸಿಗುವುದೇ ಇಲ್ಲ. ಹೀಗಾಗಿ ಕೊರೋನಾ ಅವನ ಪುಟ್ಟ ಪ್ರಪಂಚವನ್ನು ನಾಶಮಾಡಿದೆ. ಅವನ ಸಣ್ಣ ಚಾದಂಗಡಿ ಒಂಚೂರು ಬಾಡಿಯೆ ಬಿದ್ದಂತಿದೆ.

ನವಂಬರ್ ತಿಂಗಳಿನಲ್ಲಿ ಮಾಯವಾಗುತ್ತಿದ್ದ ಝರಿ ನೀರಿನ ಸೆಲೆಗಳಲ್ಲಿ ದಾಹ ತಣಿಸುವ ಉತ್ಸಾಹ ಇನ್ನೂ ಇದೆ. ಹೀಗಾಗಿ ಕಣಿವೆ ತುಂಬೆಲ್ಲ ಹಸಿರೆ ಹಸಿರು. ಕಣಿವೆ ಪೂರ್ತಿ ಹೂ ಮಿಡಿ ಹೀಚು ಕಾಯಿಗಳ ಸಂಭ್ರಮವದು. ಮಳೆಗಾಲದಲ್ಲಿ ಕಂಡ ಕಾಡು ಈಗಿಲ್ಲ. ಎಲ್ಲ ಅದಲು ಬದಲು…. ಒಂದೊಂದು ಗಿಡ ಮರಕೆ ಒಂದೊಂದು ನಮೂನೆಯ ಅಂಗಿ. ಸಣ್ಣ ಎಲೆ ದೊಡ್ಡ ಎಲೆ ಚೂಪು ಎಲೆ ಚಿಗುರೆಲೆ ಗೋಲದೆಲೆ, ಹೃದಯದಾಕಾರದ ಎಲೆ.

ಅಣಶಿಯ ಹಿರಿಜೀವ ತೊಂಬತ್ತೈದರ ರಾಣೆ ಅಜ್ಜ ಅದ್ಯಾವುದೋ ಕಾರವಾರದ ಬಸ್ ಹತ್ತಿ ಹೋದವನು ಎರಡು ದಿನ ನಾಪತ್ತೆಯಾಗಿದ್ದಾನೆ. ಮನೆಯ ಹಾದಿಯನ್ನು ಮರೆತ ಅಜ್ಜ ಕಾರವಾರದ ರೈಲು ನಿಲ್ದಾಣದ ಬಳಿ ಎರಡು ದಿನದ ನಂತರ ಸಿಕ್ಕಿದ್ದಾನೆ. ಸುರಿವ ಚಳಿಯಲ್ಲಿ ಮನೆಯ ವಿಳಾಸ ಮರೆತ ರಾಣೆ ಅಜ್ಜ ಚಳಿ ಹಾಗೂ ಹಸಿವೆಯಿಂದ ನರಳುತ್ತಾ ಅಲೆದಾಡುತ್ತಿರುವಾಗ ಅವನ‌ ಪಾವ್ಣೆಯವರ ನಜರಿಗೆ ಬಿದ್ದು, ಚಳಿಯ ಗುರುತು ಹಿಡಿದುಕೊಂಡೆ ಮನೆ ತಲುಪಿದ್ದಾನೆ. ಕೊಯ್ಲಿಗೆ ಬಂದ ತೆನೆಗಳೆಲ್ಲ‌ ಚಳಿಗೆ ಹೆದರಿ ಕಟಾವು ಮಾಡಿಸಿಕೊಂಡು ಗೋಣಿ ಚೀಲ ಹೊಕ್ಕಿ ಕೂತಿದೆ‌. ಅಣಶಿ ಜಲಪಾತಗಳೆಲ್ಲ‌ ಚಳಿಗೆ ಸ್ವಲ್ಪ ಸೊರಗಿದಂತಾದರೂ ಅನೇಕರ ಸೆಲ್ಪಗೆ ಇನ್ನೂ ಉಸಿರು ಹಿಡಿದು ನಿಂತಿವೆ. ಕಾಡಿನ ಅಂಚಿನ ಕಾಜುಗಾರ ಮನೆಯಿಂದ ಎದ್ದ ಹೊಗೆ ಸುರುಳಿ ಸುರುಳಿಯಾಗಿ ಮೇಲೆರುತ್ತಿದೆ. ಇಡಿ ಮನೆಗೆ ಬಿಸಿ ಕಾವು ತಾಗಿ ಎಲ್ಲ ಚುರುಕಾಗಿ ಎದ್ದು, ದಿನದ ಕೆಲಸಗಳು ಓಡಾಡತೊಡಗುತ್ತದೆ. ಕೊಟ್ಟಿಗೆಯ ದನಗಳನ್ನು ಬಿಟ್ಟ ಅರ್ಜುನ್ ಕಾಜುಗಾರ ‘ಗರವಾ ಕಡೆ ಒಚೂನ್ ಎತ್ತಾ’ ಎನ್ನುತ್ತ, ದನ‌ಕಾಯಲು ಹೋಗುತ್ತಿದ್ದಾನೆ. ದನಗಳು ಅಷ್ಟೆ, ಚಿರತೆ ಹಾದುಹೋದ ದಾರಿಯ ಗುರುತು ಅವಕ್ಕೆ ಬಹುಬೇಗ ಸಿಗುತ್ತದೆ. ಹೀಗಾಗಿ ಸೇಫ್ ಜೋನ್ ನಲ್ಲಿ ನಡೆದು ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಅವು ಕಾಡಿನ ದಾರಿ ಹಿಡಿಯದಂತೆ ರಕ್ಷಿಸಲು ದನಗಾಯಿಯೊಬ್ಬ ಈಗಲೂ ಅಣಶಿ ಕಡೆ ಇದ್ದಾನೆ. ಒಂದಿಷ್ಟು ರೊಟ್ಟಿಯ ಬುತ್ತಿ ಕಟ್ಟಿಕೊಂಡು ಉದ್ದ ಕೋಲೊಂದನ್ನು ಹಿಡಿದು ಸಾಗುವ ಇವರನ್ನು ಮಂಜು ಮುಸುಕಿದ ಚಳಿಯಲ್ಲಿ ನೋಡಿದರೆ ಒಂದು ನಮೂನಿ ದ್ವಾಪರ ಯುಗದ ದರ್ಶನವಾದಂತೆ.

ಚಳಿ ಆರಂಭವಾದರೆ ಸಾಕು ಅಣಶಿವಾಡಾದ ಗಣಪತಿ ಒಂದಿಷ್ಟು ತರಗೆಲೆ ಸೇರಿಸಿ ಅಂಗಳದ ತುದಿಗೆ ಕುಕ್ಕರುಗಾಲಲ್ಲೆ ಎರಡು ಮೂರು ತಾಸು ಕುಳಿತು ಚಳಿ ಕಾಯಿಸುತ್ತಾನೆ. ಬೆಳಿಗ್ಗೆ ಐದಕ್ಕೆ ಬೆಂಕಿಯುಟ್ಟುವ ಅವನ ಸಾಹಸಕ್ಕೆ ಮಂಜಿನ ಹನಿಗಳು ಆಟ ಆಡಿಸಿದರೂ ಅವನಿಗೆ ಅದನ್ನೆಲ್ಲ ತಾಳ್ಮೆಯಿಂದ ನಿಭಾಯಿಸುವ ತಾಕತ್ತಿದೆ. ಸಿಮೆಂಟು ಚೀಲದಲ್ಲಿ ತುಂಬಿಟ್ಟ ಕಾಯಿಕತ್ತಾ ಒಂದೊಂದೆ ತೆಗೆದು ತರೆಗೆಲೆಗಳ ನಡುವೆ ಹುದುಗಿಸಿ ಬೆಂಕಿ ಆರದಂತೆ ನಿಗಾವಹಿಸುತ್ತಾನೆ. ಬೆಳಿಗ್ಗೆ ಆರರ ಹೊತ್ತಿಗೆ ಅಲ್ಲಿ ಅವನೊಬ್ಬನೆ ಕುಳಿತಿರುವುದಿಲ್ಲ. ಅವನ ಸುತ್ತ ಹತ್ತಾರು ದನಗಳು ನಿಂತು ಮೈ ಬೆಚ್ಚಗೆ ಮಾಡಿಕೊಳ್ಳುತ್ತದೆ. ನಡು ನಡುವೆ ಅವನು ಉದುರಿಸುವ ಕೊಂಕಣಿ ಮಾತುಗಳು ದನಗಳಿಗೂ ಅರ್ಥವಾಗಿ, ಕೊನೆಗೆ ಅವಕ್ಕೂ ಬೇಸರ ಬಂದು ಜಾಗ ಖಾಲಿ ಮಾಡಿದರೂ ಕುಕ್ಕರುಗಾಲಿನಲ್ಲಿ ಕುಳಿತ ಅಂವ, ಏಳು ಗಂಟೆಯಾದ ಮೇಲೆಯೆ ಏಳುವುದು. ನೀರು ಬಿಡುವ ಸುರೇಶ ಅಣಶಿಕರ, ಪಂಚಾಯತಿ ಮುಂದಿರುವ ನೀರಿನ ಟಾಕಿ ತುಂಬಲು ಬರುವ ಹೊತ್ತಿಗೆ ಇಂವ ಎದ್ದು ಬೇಲಿಯ ಬದಿಗೆ ಇರುವ ಗೋಟ್ಲ ಚಿಲ್ಲಿ ಎಲೆ ಮುರಿದು ಅದರಿಂದ ಹಲ್ಲು ಉಜ್ಜುವುದು ಇವನ ರೂಢಿ.

ಇಂತಹ ಚಳಿಯಲ್ಲಿ‌ ಬೆಳಿಗ್ಗೆದ್ದು ಸ್ನಾನ ಮಾಡುವ ಮಕ್ಕಳ ಎದೆಯಲ್ಲಿ ಸಣ್ಣ ನಡುಕವಿದೆ. ಸ್ವೆಟರು, ಶಾಲು ಕಾಣದ ಮೈಗೆ ಚಳಿಯ ಎದುರಿಸುವ ತಾಕತ್ತಿದೆ. ಶಾಲೆಯೇ ದೇಗುಲವೆಂದು ನಂಬಿದ ಬೆಟ್ಟ ಹತ್ತಿ ಇಳಿದು ಬರುವ ಮಕ್ಕಳ ಕಾಲ್ನಡಿಗೆಯ ಬಿರುಸಿಗೆ ಚಳಿಯೂ ಮಾಯವಾದಂತಿದೆ. ಮಂದ ದೀಪದಂತಾದ ಸೂರ್ಯನ‌ ವಿನೀತ ಭಾವ ಅಣಶಿಯ ಸೌಂದರ್ಯ ಇನ್ನೂ ಹೆಚ್ಚಿಸಿದೆ. ಸ್ವಲ್ಪ ಬಿಸಿಲು ಎದುರಾದರೆ ಸಾಕು ರಸ್ತೆಯ ಬದಿಗೆಲ್ಲ ಕಾಳಿಂಗಗಳ ಹರಿದಾಟ ಜೋರಾಗಲು ಶುರುವಾಗುತ್ತದೆ. ಯಾವುದಾದರೂ ವಾಹನ ಬಂದರೆ ಸಾಕು, ತಕ್ಷಣ ಸರಕ್ಕೆಂದು ಹುಲ್ಲಿನೊಳಗೆ ಹೊಕ್ಕಿವೆ. ಕಣಿವೆಯ ತಿರುಗು ಮುರುಗಾದ ರಸ್ತೆಯಲ್ಲಿ ಸ್ವಲ್ಪ ಜೋರಾಗಿಯೆ ಸಾಗುವ ವಿಜಯಪುರ ಬಸ್ ಡ್ರೈವರ್ ಸಡನ್ ಬ್ರೇಕ್ ಹಾಕಿ ಬಿಡುತ್ತಾನೆ. ಹಠಾತ್ತನೆ ಎದುರಾಗುವ ಹಾವು ಎಲ್ಲ ವೇಗವನ್ನು ಕಡಿಮೆ ಮಾಡಿಬಿಡುತ್ತದೆ.

ಇತ್ತ ಕಾಜುವಾಡಾದಲ್ಲಿ ಈ ಚಳಿಗಾಲ ಬೇರೊಂದು ರೀತಿಯ ಸಂಭ್ರಮ‌ ಮನೆ ಮಾಡಿದೆ. ಶರ್ವಾ ತಾಲೂಕದಾರ ಮನೆಯಲ್ಲಿ ದಿನವಿಡಿ ಪಾತ್ರೆಗಳ ಸದ್ದು ಕೇಳಿ ಬರುತ್ತಿದೆ. ಮದುವೆ ಮನೆಯ ಸಂಭ್ರಮ ಅಣಶಿ ಊರಿನ ಸುತ್ತ ಸುದ್ದಿಯಾಗಿದೆ. ಶರ್ವಾ ಕಾಜುಗಾರ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮದುವೆಯ ತಯಾರಿ ಎಲ್ಲರಲ್ಲೂ ಹೊಸ ಉತ್ಸಾಹ ತುಂಬಿದೆ. ಊರಿನ ಮಗನಾಗಿರುವ ಶರ್ವಾ ಮಾಸ್ತರರ ಮದುವೆ ದಿನ ಬೇಗ ಬರಲಿ ಎಂದೆ ಅವರ ಹಳೆಯ ವಿದ್ಯಾರ್ಥಿಗಳು ಬಯಸಿದ್ದಾರೆ. ಶರ್ವಾ ಮಾಸ್ತರರ ಮದುವೆ ದಿನದ ಊಟದ ಮೆನು ಬಗ್ಗೆ ವಿದ್ಯಾರ್ಥಿಗಳಿಗೆ ಒಂದು ರೀತಿಯ ಪ್ರೀತಿಯಿದೆ.