ಜನಸಾಮಾನ್ಯರು ಇಂದಿಗೂ ನಿಗೂಢವೆಂದು ಭಾವಿಸುವ ಶಂಕರ್ ನಾಗ್ ಸಾವಿನ ಸುತ್ತ ಹುಟ್ಟಿಕೊಂಡ ಅನೂಹ್ಯ ಪ್ರಶ್ನೆಗಳಿಗೆ ವಿವಿಧ ದೃಷ್ಟಿಕೋನಗಳ ಮೂಲಕ ಉತ್ತರಿಸಲು ಪ್ರಯತ್ನಿಸಿದ್ದಾರೆ. ವರುಷಗಳಿಗನುಗುಣವಾಗಿ ಜೋಡಿಸಲ್ಪಟ್ಟ ಶಂಕರ್ ನಾಗ್ ಚಿತ್ರಗಳು, ಅವುಗಳ ಹಿಂದಿರುವ ಕಹಾನಿ, ಪ್ರಮುಖ ಹಾಡುಗಳು, ಅನಂತ್ ನಾಗ್, ರಮೇಶ್ ಭಟ್ ಆದಿಯಾಗಿ ವಿವಿಧ ನಟರೊಂದಿಗಿನ ಕೆಲಸಗಳು ಹಾಗೂ ಬಾಂಧವ್ಯ ಹೀಗೆ ಅನೇಕ ಮಾಹಿತಿಗಳು ದಾಖಲಾಗಿರುವ ಪರಿಯೇ ಈ ಪುಸ್ತಕದ ಹೈಲೈಟು.
ಸತೀಶ ಬಳೆಗಾರ ಬರೆದ ‘ಶಂಕರ ನಾಗ್ The Legend’ ಕೃತಿಯ ಕುರಿತು ರಾಮ್‌ ಪ್ರಕಾಶ್‌ ರೈ ಬರಹ

“ಸತ್ತ ಮೇಲೆ ಮಲಗೋದು ಇದ್ದೇ ಇದೆ, ಎದ್ದಿರುವಾಗ ಏನಾದರೂ ಸಾಧಿಸು” ಇದು ಖ್ಯಾತ ನಟ, ನಿರ್ದೇಶಕ, ಕರಾಟೆ ಕಿಂಗ್, ಅಭಿಮಾನಿಗಳ ಆಟೋರಾಜ ಶಂಕರ್ ನಾಗ್ ರವರ ಮಾತು. ಅಕ್ಷರಶಃ ತಾನು ನುಡಿದಂತೆ ನಡೆದವರು, ಸಾಹಸ, ಸಾಧನೆಗಳೆಂಬ ಶರಧಿಯನ್ನು ದಾಟಿದವರು ಶಂಕರ್ ನಾಗ್. ಪ್ರಾಯಶಃ ಅವರಿಗೆ ಅರಿವಿತ್ತೋ ಏನೋ, ತನ್ನ ಬದುಕಿನ ಪಯಣ ಕಿರು ಮೈಲಿಗಳದ್ದೆಂದು.‌ ಅದಕ್ಕೆಂದೇ, ಜಿದ್ದಿಗೆ ಬಿದ್ದವರಂತೆ ಅನಂತ ಅಸಾಧಾರಣ ಮೈಲಿಗಲ್ಲುಗಳನ್ನು ಪ್ರತಿಷ್ಟಾಪಿಸಿ ಹಾಗೆ ಸುಮ್ಮನೆ ಎದ್ದು ನಡೆದು ಹೋದರು. ಇಂತಹ ಒಂದು ಸ್ಫೂರ್ತಿಗಾಥೆಯ ಸಾರೋಟು ಹಿಡಿದು ಬಂದವರು ಲೇಖಕರಾದ ಸತೀಶ ಬಳೆಗಾರ ‘ಶಂಕರನಾಗ್ The Legend’ ಎನ್ನುವ ಪುಸ್ತಕದ ಮುಖಾಂತರ. ಮನೋಹರ ಮುಖಪುಟ, ಮುದ್ರಣವುಳ್ಳ ಈ ಪುಸ್ತಕವನ್ನು ‘ಸಾವಣ್ಣ ಪ್ರಕಾಶನ’ ಪ್ರಕಟಿಸಿದೆ.

(ಸತೀಶ ಬಳೆಗಾರ)

ಶಂಕರ್ ನಾಗ್ ಎಂದರೆ ಪ್ರಥಮತಃ ನೆನಪಾಗುವುದು ಅವರ ವೇಗೋತ್ಕರ್ಷ, ಕ್ರಿಯಾಶೀಲತೆ, ತಾಜಾತನ, ಸಮಯ ನಿಷ್ಟೆ ಮತ್ತು ಸರಳತೆ. ನಿಲುಗಡೆ ಇಲ್ಲದ ಮಳೆಯಂತೆ, ಎಲ್ಲೂ ನಿಲ್ಲಿಸದ Non Stop ಬಸ್ಸುಗಳಂತೆ ಅವರ ವೇಗ. ಕೇವಲ 13 ವರುಷಗಳ ಅವಧಿಯಲ್ಲಿ ಅವರು ಕೆಲಸ ಮಾಡಿದ್ದು ಬರೋಬ್ಬರಿ 96 ಸಿನೆಮಾಗಳಲ್ಲಿ ಎನ್ನುವುದೇ ಅವರ ವೇಗಕ್ಕೆ ಹಿಡಿದ ಕೈಗನ್ನಡಿ. ತಾಂತ್ರಿಕತೆ ಉತ್ತುಂಗದ ಶಿಖರದಲ್ಲಿರುವ ಈ ಕಾಲಘಟ್ಟದಲ್ಲಿಯೂ ಒಂದು ಸಂವತ್ಸರದಲ್ಲಿ, ಒಂದು ಸಿನಿಮಾ ಮಾಡಲು ಕಷ್ಟವೆನ್ನುವ ಅಭಿಪ್ರಾಯಗಳನ್ನು ಕೇಳಿದಾಗ ಶಂಕರ್ ನಾಗ್‌ಅವರಿಗೆ 24 ಗಂಟೆಗಳನ್ನು ಮೀರಿದ ಸಮಯವಿತ್ತೇ ಎಂದು ಅಚ್ಚರಿಯಾಗುತ್ತದೆ. ಸಿನಿಮಾದ ದೃಶ್ಯವೊಂದರ ಚಿತ್ರೀಕರಣ ಮುಗಿದ ತಕ್ಷಣ ಕಾಡುಹರಟೆಗಳಿಗೆ ಕಾಲಿಡದೆ, ತನ್ನ ಮೆಟಾಡೋರಿನಲ್ಲಿ ಕುಳಿತು ಓದು ಬರಹಗಳಲ್ಲಿ, ನವೀನ ವಿಚಾರಗಳು, ಸಮಾಜದ ಕುರಿತಾದ ಚಿಂತನೆಗಳಲ್ಲಿ ಮಗ್ನರಾಗುತ್ತಿದ್ದ ಶಂಕರನಾಗ್, ಅರೆನಿಮಿಷವೂ ಅಸಮಾಧಾನಗೊಳ್ಳದಂತೆ ಬದುಕಿದವರು. ಬಹುಶಃ ಸಮಯವೇನಾದರೂ ವ್ಯಕ್ತಿಯಾಗಿದ್ದರೆ, ಅವರ ವ್ಯಕ್ತಿತ್ವಕ್ಕೊಂದು ಸಾವಿರ ಸಲಾಮನ್ನು ಸಲ್ಲಿಸುತ್ತಿತ್ತೋ ಏನೋ.

ಇನ್ನು ಸಿನಿಮಾ ಜಗತ್ತಿನತ್ತ ದಿಟ್ಟಿ ಹಾಯಿಸಿದರೆ, ಚಿತ್ರರಂಗಕ್ಕೆ ಹೊಸತನದ ಹಾದಿ ತೋರಿದವರು ಶಂಕರನಾಗ್. ಅವರ ನಿರ್ದೇಶನದ ‘ಆಕ್ಸಿಡೆಂಟ್’ ಎನ್ನುವ ಚಿತ್ರವೇ ಸಾಕು, ಯಾಕೆ ಶಂಕರನಾಗ್ ‘ahead of the times’ ವ್ಯಕ್ತಿ ಎನ್ನಲು. ಸಿರಿವಂತಿಕೆಯ ಅಮಲಿನಲ್ಲಿ ತೇಲುತ್ತಿದ್ದ ರಾಜಕೀಯ ಪುಢಾರಿಯ ಮಗನೊಬ್ಬ ಫುಟ್‌ಪಾತ್‌ನಲ್ಲಿ ಮಲಗಿರುವವರ ಮೇಲೆ ಕಾರು ಹಾಯಿಸಿ, ಮಾರಣ ಹೋಮ ಮಾಡಿ, ಕೊನೆಗೆ ತಾನೇ ಅಪಘಾತದಲ್ಲಿ ಸಾಯುವ ಆ ಕಥಾನಕದ ಚಿತ್ರಣವೇ, ಮನವನ್ನು ಅರೆಕ್ಷಣ ಮೌನಕ್ಕೆ ದೂಡುವಂಥದ್ದು. ಇಂದು ಸಮಾಜದಲ್ಲಿ ಆಗುತ್ತಿರುವ, ಆಗಿ ಹೋಗಿರುವ ಸಿರಿವಂತರ ದರ್ಪ ದಬ್ಬಾಳಿಕೆ, ಫುಪ್‌ಪಾತ್‌ ಇತ್ಯಾದಿ ಹಿಟ್ ಅಂಡ್ ರನ್ ಕೇಸುಗಳು, ಶ್ರೀಸಾಮಾನ್ಯನಿಗಾಗುವ ಅನ್ಯಾಯ ಇವೆಲ್ಲಾ ಅನಾಮತ್ತು 38 ವರ್ಷಗಳ ಹಿಂದೆಯೇ ರಿಯಲಿಸ್ಟಿಕ್ ಆಗಿ ತೆರೆಯ ಮೇಲೆ ಮೂಡಿಬಂದಿತ್ತು. ಹಾಡುಗಳೇ ಇಲ್ಲದ ಈ ಸಿನಿಮಾದಲ್ಲಿ ಇಳಯರಾಜರ ನೈಜ ಹಿನ್ನೆಲೆ ಸಂಗೀತ ಮಿನುಗುವ ತಾರೆಗೆ ಹೊಳಪಿನ ಸಂಕಲನ ಎಂದೇ ಹೇಳಬೇಕು. ಇನ್ನು ಮಧ್ಯಮ ವರ್ಗದ ಬದುಕು-ಬವಣೆಗಳನ್ನು ಹಾಸ್ಯರಸದೊಂದಿಗೆ ಬೆರೆಸಿ ಉಣಬಡಿಸಿದ ‘ನೋಡಿ ಸ್ವಾಮಿ ನಾವಿರೋದೇ ಹೀಗೆ’, ಆರ್ ಕೆ ನಾರಾಯಣ್ ವಿರಚಿತ ‘ಮಾಲ್ಗುಡಿ ಡೇಸ್’ ಸರಣಿ, ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಂಡರ್ ವಾಟರ್ ಶೂಟಿಂಗ್ ಮಾಡಿದ ನಟಸಾರ್ವಭೌಮ ಡಾ|ರಾಜಕುಮಾರ್ ಅಭಿನಯದ ‘ಒಂದು ಮುತ್ತಿನ ಕಥೆ’ ಅವರ ನಿರ್ದೇಶನದ ‘ಮಿಂಚಿನ ಓಟ’ಕ್ಕೆ ಸಾಕ್ಷಿ. ಅಭಿನಯದ ವಿಚಾರಕ್ಕೆ ಬಂದರೆ, ವೈಯಕ್ತಿಕವಾಗಿ ಒಂದಾನೊಂದು ಕಾಲದಲ್ಲಿ, S P ಸಾಂಗ್ಲಿಯಾನ, CBI ಶಂಕರ್, ಆಟೋ ರಾಜ, ಗೀತಾ, ನಿಗೂಢ ರಹಸ್ಯ ಇವೆಲ್ಲವೂ ಬಹುಬಾರಿ ಮರಳಿ ವೀಕ್ಷಿಸಿದ ಚಿತ್ರಗಳು. ಅವರ ಆಂಗಿಕ ಅಭಿನಯ, ಆಕ್ಷನ್ ಸೀಕ್ವೆನ್ಸುಗಳು ನಮ್ಮ ಬಾಲ್ಯದ ದಿನಗಳಿಗೆ ರಂಗು ತುಂಬಿದುದನ್ನು ಮರೆಯುವಂತಿಲ್ಲ. ಹಾಡುಗಳೂ ಅಷ್ಟೇ. ಭಾವತೀರದಲ್ಲಿ ವಿಹರಿಸಿದ ಅನುಭವವನ್ನು ನೀಡುವಂತಹದ್ದು. ಬೇಸರದ ಭಾವಕ್ಕೆ ‘ನಗುವ ಗುಲಾಬಿ ಹೂವೇ‘, ಪ್ರೇಮ ಪರವಶರಾದವರಿಗೆ ಗೀತಾಂಜಲಿ, ಜೊತೆಯಲಿ ಜೊತೆ ಜೊತೆಯಲಿ, ಹೆಜ್ಜೆ ಹಾಕಲು ‘ಸಂತೋಷಕ್ಕೆ ಹಾಡು ಸಂತೋಷಕ್ಕೆ’, ‘ನೋಡಿ ಸ್ವಾಮಿ ನಾವಿರೋದೇ ಹೀಗೆ’, ರಾಗರಸಧಾರೆಯಲ್ಲಿ ಮಿಂದೇಳಲು ‘ಭಾಗ್ಯದ ಲಕ್ಷ್ಮಿ ಬಾರಮ್ಮ’, ಇಹದ ಇರುವಿಕೆಯ ಮರೆಸಲು ‘ಅನಾಥ ಮಗುವಾದೆ ನಾನು’ ಹೀಗೆ ಪಟ್ಟಿ ಪೂರ್ಣ ವಿರಾಮವಿಲ್ಲದೆ ಬೆಳೆಯುತ್ತಲೇ ಹೋಗುತ್ತದೆ.

ಇದೆಲ್ಲಕ್ಕಿಂತ ಶಂಕರ್ ನಾಗ್ ಇಂದಿಗೆ ಅತ್ಯಂತ ಪ್ರಸ್ತುತ ಎನ್ನಿಸುವುದು ಅವರ ಚಿಂತನೆಗಳ ಮುಖಾಂತರ. ಬೆರಳೆಣಿಕೆಯ ಬಸ್ಸು, ಕಾರು, ಆಟೋರಿಕ್ಷಾಗಳಿದ್ದ ಕಾಲದಲ್ಲಿ ಮೆಟ್ರೋ ರೈಲಿನ ಬಗೆಗಿನ ಯೋಚನೆ- ಯೋಜನೆ, ನಂದಿ ಬೆಟ್ಟಕ್ಕೆ ರೋಪ್ ವೇ, ಕಡಿಮೆ ಖರ್ಚಿನ ಮನೆ ನಿರ್ಮಾಣ ಇತ್ಯಾದಿ ಆ ಕಾಲಕ್ಕೆ advanced ಅನ್ನಿಸುವಂತಹ ವಿಷಯಗಳ ಕುರಿತು ಅವರು ಕಂಡ ಕನಸುಗಳು ಇಂದಿನ ಆಡಳಿತಗಾರರಿಗೆ ಮಾದರಿ. ಅಷ್ಟೇ ಅಲ್ಲ, ತಾಂತ್ರಿಕ ಕೆಲಸಗಳಿಗೆ ಮದ್ರಾಸಿನ ಮರ್ಜಿಯಲ್ಲಿರಬೇಕಾಗಿದ್ದ ಕನ್ನಡ ಚಿತ್ರರಂಗಕ್ಕೆ ಬದಲಾವಣೆಯ ಇಶಾರೆಯಾಗಿ ನೀಡಿದ ‘ಸಂಕೇತ್ ಸ್ಟುಡಿಯೋ’ ಕೂಡ ಅವರ ಅನನ್ಯ ಆಲೋಚನೆಗೆ ಸಾಕ್ಷಿಯಾಗಿದೆ.

ಹೀಗೆ ಸಮಾಜ, ಚಿತ್ರರಂಗಕ್ಕೆ ಅಸಂಖ್ಯ ಉಡುಗೊರೆಗಳನ್ನು ನೀಡಿದ ಶಂಕರನಾಗ್ ದೈಹಿಕವಾಗಿ ಬದುಕಿದ್ದು ಕೇವಲ 36 ವರ್ಷ. ಇಂತಹ ಶ್ರೇಷ್ಟ ಬಾಳುವಿಕೆಯನ್ನು ಸಂಕ್ಷಿಪ್ತವೂ, ಅತಿ ವಿವರವೂ ಅಲ್ಲದಂತೆ, ಹಿತ ಮಿತವಾಗಿ ಬಳೆಗಾರರು ‘ಶಂಕರ್ ನಾಗ್ The Legened’ ಪುಸ್ತಕದಲ್ಲಿ ಸೆರೆಹಿಡಿದಿದ್ದಾರೆ. ಶಂಕರ್ ನಾಗ್ ಕುರಿತಾಗಿ ಬಂದಂತಹ ಮೂರನೇ ಪುಸ್ತಕವಿದು.(ಅನಂತ್ ನಾಗ್ ರವರ ‘ನನ್ನ ತಮ್ಮ ಶಂಕರ’, ಗಣೇಶ್ ಕಾಸರಗೋಡುರವರ ‘ನೆನಪಿನಂಗಳದಲ್ಲಿ ಶಂಕರನಾಗ್’ ಉಳಿದೆರಡು ಪುಸ್ತಕಗಳು)ಇಲ್ಲಿ ಶಂಕರನಾಗ್ ರವರ ಜನನದಿಂದ ಮರಣದವರೆಗಿನ ವೈಯಕ್ತಿಕ ಬದುಕು, ಸಿನಿಮಾ, ಸಾಮಾಜಿಕ ಕಾರ್ಯಗಳು ಇತ್ಯಾದಿಗಳೆಲ್ಲವನ್ನೂ ಅಚ್ಚು ಕಟ್ಟಾಗಿ, ಕ್ರಮಬದ್ಧವಾಗಿ ಜೋಡಿಸಿದ್ದಾರೆ ಲೇಖಕರು.

ಜನಸಾಮಾನ್ಯರು ಇಂದಿಗೂ ನಿಗೂಢವೆಂದು ಭಾವಿಸುವ ಶಂಕರ್ ನಾಗ್ ಸಾವಿನ ಸುತ್ತ ಹುಟ್ಟಿಕೊಂಡ ಅನೂಹ್ಯ ಪ್ರಶ್ನೆಗಳಿಗೆ ವಿವಿಧ ದೃಷ್ಟಿಕೋನಗಳ ಮೂಲಕ ಉತ್ತರಿಸಲು ಪ್ರಯತ್ನಿಸಿದ್ದಾರೆ. ವರುಷಗಳಿಗನುಗುಣವಾಗಿ ಜೋಡಿಸಲ್ಪಟ್ಟ ಶಂಕರ್ ನಾಗ್ ಚಿತ್ರಗಳು, ಅವುಗಳ ಹಿಂದಿರುವ ಕಹಾನಿ, ಪ್ರಮುಖ ಹಾಡುಗಳು, ಅನಂತ್ ನಾಗ್, ರಮೇಶ್ ಭಟ್ ಆದಿಯಾಗಿ ವಿವಿಧ ನಟರೊಂದಿಗಿನ ಕೆಲಸಗಳು ಹಾಗೂ ಬಾಂಧವ್ಯ ಹೀಗೆ ಅನೇಕ ಮಾಹಿತಿಗಳು ದಾಖಲಾಗಿರುವ ಪರಿಯೇ ಈ ಪುಸ್ತಕದ ಹೈಲೈಟು. ಒಟ್ಟಾರೆಯಾಗಿ ಹೇಳಬೇಕೆಂದರೆ, ಹೊಸ ವಿಚಾರಗಳನ್ನು ತಿಳಿಯಲು ಅಂತರ್ಜಾಲವನ್ನು ಹೇಗೆ ನಾವು ಅವಲಂಬಿಸುತ್ತೇವೆಯೋ, ಹಾಗೆಯೇ ಶಂಕರನಾಗ್ ಅವರ ಅನುಕರಣೀಯ ಬದುಕನ್ನು ಅಭ್ಯಸಿಸಲು ಸತೀಶ ಬಳೆಗಾರರ ‘ಶಂಕರ ನಾಗ್ The Legend’ ಪುಸ್ತಕವನ್ನು ಆಶ್ರಯಿಸಬಹುದು.