ಹತ್ತುವರ್ಷಗಳ ಕಾಲ ಕೆಲಸ ಮಾಡುವ ಕರಾರು ಮುಕ್ತಾಯವಾಗುತ್ತಲೇ ಗಣಿಯಿಂದ ಒಬ್ಬೊಬ್ಬರೇ ಹೊರಡತೊಡಗಿದರು. ಇದಿನಬ್ಬ ಕೂಡ, ಸಂಬಳ ಕೊಡುವ ಕಂಪೆನಿಯ ಮ್ಯಾನೇಜರ್ ಬಳಿ ಬಂದು ವಿನಮ್ರನಾಗಿ ನಿಂತು,’ಸರ್, ನಾನು ಊರಿಗೆ ಹೋಗುತ್ತೇನೆ’ ಎಂದ. ಹೋಗಬಹುದು ಎಂದು ಮ್ಯಾನೇಜರ್ ಒಪ್ಪಿದ. ನನ್ನ ಸಂಬಳ ಕೊಟ್ಟುಬಿಡಿ ಎಂದು ಮನವಿ ಮಾಡಿದಾಗ, ಅಧಿಕಾರಿ ಅಚ್ಚರಿಯಿಂದ, ‘ಯಾವ ಸಂಬಳ ? ಅದನ್ನು ಸಿಲೋನಿನಲ್ಲೇ ಕೊಟ್ಟಾಗಿದೆಯಲ್ಲಾ..’ ಎಂದು ಹೇಳಿದ. ಈ ಮಾತು ಕೇಳಿದ ಇದಿನಬ್ಬ ಕುಸಿದು ಕುಳಿತುಬಿಟ್ಟ. ಮುನವ್ವರ್ ಜೋಗಿಬೆಟ್ಟು ಬರೆಯುವ ಡರ್ಬನ್ ಇದಿನಬ್ಬ ಕಿರುಕಾದಂಬರಿಯ ಹತ್ತನೇ ಕಂತು.

ಅಲ್ಲಿಂದ ಚಿನ್ನದ ಅದಿರು ತೆಗೆಯುವ ಕೆಲಸ ಶುರುವಾಯಿತು. ಸುರಂಗದೊಳಗೆ ಅದ್ಭುತ ಪ್ರಪಂಚ. ಅಲ್ಲಲ್ಲಿ ದೊಡ್ಡ ಗಾತ್ರದ ಚಿಮಿಣಿಯಂತಹ ದೀಪಗಳನ್ನು ಬೆಳಗಿಸಲಾಗಿದೆ. ಒಳಗೆ ಮಣ್ಣು ಕೊರೆಯುವುದು, ಹಳದಿ ಮಿಶ್ರಿತ ಅದಿರುಗಳಿರುವ ಮಣ್ಣನ್ನು ಪ್ರತ್ಯೇಕಿಸುವುದು ಹೊರ ದಾರಿಯಲ್ಲಿ ಟ್ರಕ್ಕುಗಳಿಗೆ ಸುರಿಯುವುದು. ಕೆಲಸ ಒಂದರ್ಧ ನಿಮಿಷವೂ ನಿಲ್ಲಿಸುವಷ್ಟು ಬಿಡುವಿಲ್ಲ ಅಲ್ಲಿ. ಮಧ್ಯಾಹ್ನದ ಊಟ ದಿನವೂ ಬರುತ್ತಿತ್ತು. ರಾತ್ರಿ ಬಾರ್ಲಿ ಗಂಜಿ ನೀರನ್ನು ಟೆಂಟಿನ ಹೆಂಗಸರು ಮಾಡಿಕೊಡುತ್ತಿದ್ದರು. ಬೆಳಗ್ಗೆ ಕೆಲಸವಿದ್ದವರಿಗೆ ರಾತ್ರಿ ಕೆಲಸವಿಲ್ಲ. ಅತೀವ ಕಷ್ಟದ ಕೆಲಸವಾಗಿದ್ದರಿಂದ ಬಂದ ತಕ್ಷಣ ಕೆಲಸಗಾಗರರೆಲ್ಲಾ ನಿದ್ರೆಗೆ ಜಾರುತ್ತಿದ್ದರು. ಕೆಲಸ ನಿದ್ದೆ , ಕೆಲಸ ನಿದ್ದೆ ಸುಮಾರು ಆರು ತಿಂಗಳುಗಳ ಕಾಲ ದಿನಚರಿಯಾದವು. ಆ ಹೊತ್ತಿಗೆ ಇದಿನಬ್ಬ ಸರಿಯಾಗಿ ಶಿಳ್ಳೆ ಭಾಷೆ ಕಲಿತಾಗಿತ್ತು.

ಕೆಲಸಗಾರರೆಲ್ಲರೂ ಆಫ್ರಿಕಾದವರಲ್ಲ, ಶ್ರೀಲಂಕಾ, ಚೀನಾ ದೇಶಗಳ ಹಲವಾರು ಮಂದಿಯೂ ಇದ್ದರು. ಚೀನಾದವರನ್ನು ಕಂಡರೆ ಆಫ್ರಿಕಾದ ಸ್ಥಳೀಯ ನಿವಾಸಿಗಳಿಗೆ ಆಗುತ್ತಿರಲಿಲ್ಲ. ಅವರು ಬಿಳಿಯರೆಂಬ ತಾತ್ಸಾರ ಮತ್ತು ಸೇಡು. ಆಗಾಗ ತೀರಿಸಲು ಪ್ರಯತ್ನಿಸುತ್ತಲೇ ಇದ್ದರು. ಒಂದು ವರ್ಷ ಕಳೆಯಿತು. ಕೆಲಸ ಮಾಡುವ ಸ್ಥಳದ ಬದಲಾವಣೆಯಾಯಿತು. ಅದಿರುಗಳ ಬಗ್ಗೆ ಸ್ವಲ್ಪ ತಿಳಿವಳಿಕೆಯಿದ್ದದ್ದರಿಂದ, ಅವನನ್ನು ಅದಿರು ಚಿನ್ನವಾಗಿ ಮಾರ್ಪಾಡಾಗುವ ಕಾರ್ಖಾನೆಗೆ ಬದಲಾಯಿಸಿದರು. ಹಿಂದಿನಂತೆ ಸ್ವಾತಂತ್ರ ರಹಿತ ಪ್ರದೇಶವಲ್ಲವದು. ಒಂದು ದೈತ್ಯಾಕಾರದ ಕಟ್ಟಡ, ಅಲ್ಲಿ ಕೆಲಸಗಾರರಿಗೆ ದಿಗ್ಬಂಧನವಿರಲಿಲ್ಲ. ಆದರೆ ಕೆಲಸ ಮುಗಿದು ಹೊರ ಹೋಗಬೇಕಾದರೆ ಇಡೀ ದೇಹ ಪೂರ್ತಿ ತಪಾಸಣೆ ಮಾಡಲಾಗುತ್ತಿತ್ತು.

ವರ್ಷಗಳು ಕಳೆದವು. ಒಂದು ದಿನ ಎಂದಿನಂತೆ ಎಲ್ಲರೂ ಕೆಲಸಕ್ಕೆ ಬಂದಿದ್ದರು. ಇದ್ದಕ್ಕಿದ್ದಂತೆ ಕಾರ್ಖಾನೆಯ ಬಾಗಿಲು ಮುಚ್ಚಲ್ಪಟ್ಟಿತು. ಎಲ್ಲ ಕೆಲಸಗಾರರು ಸ್ತಬ್ಧರಾದರು. ಬಿಳಿಯ ಅಧಿಕಾರಿಯೊಬ್ಬ ಕೆಂಡದುಂಡೆಯಂತಹ ಕಣ್ಣಿನಲ್ಲಿ ವಾಚಾ ಮಗೋಚರವಾಗಿ ಬೈಯ್ಯುತ್ತಾ ಬಂದ. ಸೂಜಿ ಬಿದ್ದರೂ ಕೇಳಿಸುವಷ್ಟು ಮೌನ ಅಲ್ಲಿ!

“ವೇರ್ ಈಸ್ ಚಾರ್ಲ್ಸ್?”
ನಾಲ್ಕು ಜನ ಆಫ್ರಿಕನ್ ಜನರು ಮತ್ತು ಒಬ್ಬ ತಮಿಳ ಅವನ ಮುಂದೆ ನಿಂತರು. ” ನಾಟ್ ಯೂ ” ಅನ್ನುತ್ತಾ ಒಬ್ಬೊಬ್ಬರನ್ನು ಹಿಂದೆ ಕಳಿಸಿದ, ತಮಿಳನ್ನು ಹೊರತು ಪಡಿಸಿ. ವಿಚಾರಣೆ ಶುರುವಾಯಿತು.
“ಎಲ್ಲಿಟ್ಟಿದ್ದೀಯಾ ಚಿನ್ನ ”
“ಇಲ್ಲ ಸರ್, ನನಗೇನು ಗೊತ್ತಿಲ್ಲ”

ತಮಿಳು ಯುವಕ ಚಾರ್ಲ್ಸ್ ಗೋಗರೆಯತೊಡಗಿದ. ಅದಿರು ಕರಗಿಸುವ ಯಂತ್ರದಲ್ಲಿ ಬೆಂಕಿ ಉರಿಸಲು ಬಳಸುವ ಕಬ್ಬಿಣದ ಸಲಾಕೆಯೊಂದನ್ನು ಬೆಂಕಿ ಮಧ್ಯೆ ಇರಿಸಿ ಕೆಂಬಣ್ಣಕ್ಕೆ ತಿರುಗವಷ್ಟು ಕಾಯುತ್ತಾ ವಿಚಾರಣೆ ನಡೆಸುತ್ತಿದ್ದ ಆ ಅಧಿಕಾರಿ. ತಕ್ಷಣ ಚಾರ್ಲ್ಸ್ ನ ಬಟ್ಟೆ ತೆಗೆದು ವಿವಸ್ತ್ರ ಗೊಳಿಸುವಂತೆ ಆಜ್ಞೆ ಇತ್ತ. ಚಾರ್ಲ್ಸ್ ಬೆತ್ತಲೆಯಾದಂತೆ ಸುಡು ಸಲಾಕೆಯನ್ನು ಗುದಕ್ಕೆ ತುರುಕಿದ.

“ಬೊಗಳು,….ಸನ್ ಆಫ್ ಬಿಚ್ ”
ಚಾರ್ಲ್ಸ್ ಜೀವ ಹೋದಂತೆ ಬೊಬ್ಬೆ ಹೊಡೆಯತೊಡಗಿದ.

“ಸರ್, ನಿಜ ಹೇಳ್ತೀನಿ. ನಾನು ಮತ್ತು ಲಾರಿ ಡ್ರೈವರ್ ಡೇವಿಡ್ ಇಬ್ಬರೂ ಸೇರಿ ಸ್ವಲ್ಪ ಚಿನ್ನ ಕದಿಯಲು ಯತ್ನಿಸಿದೆವು ”
ಚಾರ್ಲ್ಸ್ ನೋವು ತಾಳಲಾರದೆ ಬಾಯಿ ಬಿಟ್ಟ.

ಅಧಿಕಾರಿ ಇಬ್ಬರಿಗೆ ಸಂಜ್ಞೆ ಮಾಡಿದ. ಕೂಡಲೇ ಇಬ್ಬರು ಕೆಲಸಗಾರರು ಬಂದು ಆತನ ಕೈಗಳನ್ನು ಕಟ್ಟಿದರು. ಆಗ ಜನರ ಗುಂಪಿನಲ್ಲಿದ್ದ ಡೇವಿಡ್ ಬೆವರತೊಡಗಿದ. ಡೇವಿಡ್ ಆಫ್ರಿಕಾದ ಪ್ರಜೆ, ಇಬ್ಬರೂ ಜೊತೆ ಸೇರಿ ಈ ಕಳ್ಳತನ ಮಾಡುತ್ತಿದ್ದರು. ಕದ್ದ ಚಿನ್ನವನ್ನು ಲಾರಿ ಬರುವಾಗ ಚಕ್ರದ ಮಧ್ಯೆ ಮೆಲ್ಲಗೆ ಒಂದು ತುಂಡು ಬಚ್ಚಿಡುತ್ತಿದ್ದರು. ಡೇವಿಡ್ ಅದನ್ನು ತಪಾಸಣೆ ಮುಗಿಯುವವರೆಗೂ ಪೇಟೆಯಲ್ಲಿ ಒಳ್ಳೆಯ ಬೆಲೆಗೆ ಕಾದು ಗುಟ್ಟಾಗಿ ಮಾರುತ್ತಿದ್ದ. ಬಂದ ಲಾಭವನ್ನು ಇಬ್ಬರೂ ಹಂಚುತ್ತಿದ್ದರು. ಆ ದಿನ ಚೀನಿಯೊಬ್ಬನಿಗೆ ಇವರ ಈ ಕಳ್ಳತನದ ವಿಚಾರ ತಿಳಿಯಿತು. ಹಿಂದೆ ಚೀನೀಯರ ಮತ್ತು ಆಫ್ರಿಕಾದ ಸ್ಥಳೀಯರ ನಡುವಿನ ಗಲಾಟೆಯಲ್ಲಿ ಆತನಿಗೆ, ಡೇವಿಡ್ ಹೊಡೆದಿದ್ದ. ಅದರ ಮುಯ್ಯಿ ತೀರಿಸಲು ಚಾಡಿ ಹೇಳಿದ್ದ. ಇಬ್ಬರನ್ನೂ ವಿವಸ್ತ್ರಗೊಳಿಸಿ ಕಾರ್ಖಾನೆಯ ಯಂತ್ರಕ್ಕೆ ನೇಣು ಹಾಕಿ ಚಿತ್ರಹಿಂಸೆ ನೀಡಿ ಎಲ್ಲರ ಎದುರಲ್ಲೇ ಭಯಾನಕವಾಗಿ ಕೊಲ್ಲಲಾಯಿತು.

ತಮಿಳು ಯುವಕ ಚಾರ್ಲ್ಸ್ ಗೋಗರೆಯತೊಡಗಿದ. ಅದಿರು ಕರಗಿಸುವ ಯಂತ್ರದಲ್ಲಿ ಬೆಂಕಿ ಉರಿಸಲು ಬಳಸುವ ಕಬ್ಬಿಣದ ಸಲಾಕೆಯೊಂದನ್ನು ಬೆಂಕಿ ಮಧ್ಯೆ ಇರಿಸಿ ಕೆಂಬಣ್ಣಕ್ಕೆ ತಿರುಗವಷ್ಟು ಕಾಯುತ್ತಾ ವಿಚಾರಣೆ ನಡೆಸುತ್ತಿದ್ದ ಆ ಅಧಿಕಾರಿ. ತಕ್ಷಣ ಚಾರ್ಲ್ಸ್ ನ ಬಟ್ಟೆ ತೆಗೆದು ವಿವಸ್ತ್ರ ಗೊಳಿಸುವಂತೆ ಆಜ್ಞೆ ಇತ್ತ.

ಇದಾಗಿ ಎಷ್ಟೋ ರಾತ್ರಿಗಳಲ್ಲಿ ಕೂಲಿಯಾಳುಗಳು ಯಾರೂ ಸರಿಯಾಗಿ ನಿದ್ರೆ ಮಾಡಲಿಲ್ಲ. ಅವರ ಮನಸ್ಸಿನಿಂದ ಆ ಬರ್ಬರ ದೃಶ್ಯಗಳು ಮಾಸುತ್ತಲೇ ಇರಲಿಲ್ಲ. ಇದಿನಬ್ಬನಿಗೂ ಮನಸ್ಸಿನಲ್ಲಿ ಭಾರವಾದ ಕಲ್ಲು ಹೊತ್ತ ಅನುಭವ. ಇದೆಲ್ಲದರ ನಡುವೆ ದಿನಗಳು ಸದ್ದಿಲ್ಲದೆ ಕರಗುತ್ತಿದ್ದವು. ಆಫ್ರಿಕಾದಲ್ಲಿ ಬರೋಬ್ಬರಿ ಹತ್ತು ವರ್ಷಗಳು ಕಳೆದವು. ಕೂಲಿಗಳ ವಾಯಿದೆ ಮುಗಿಯುತ್ತ ಬಂತು. ಎಲ್ಲರೂ ಅವರವರ ಪಾಲಿನ ಸಂಬಳವನ್ನು ಪಡೆದು ಊರಿಗೆ ಗಂಟು ಮೂಟೆ ಕಟ್ಟುವ ತರಾತುರಿಯಲ್ಲಿದ್ದರು. ಊರು ಬಿಟ್ಟು ಬಹಳವೇ ವರ್ಷಗಳ ನಂತರ ತನ್ನ ಊರಿಗೆ ಹೋಗುವ ಕನಸು ಇದಿನಬ್ಬನ ಮನದಲ್ಲೂ ಗರಿಗೆದರಿತು. ಕೆಲಸ ಮಾಡಿದ ಸಂಬಳವಾಗಿ ಚಿನ್ನ ಪಡೆಯಲು ಇದಿನಬ್ಬನೂ ತಯ್ಯಾರಾದ. ಆದರೆ ಯಾರು ಊರಿಗೆ ಹೋಗುವುದಿದ್ದರೂ ಒಂದೆರಡು ದಿನ ಬ್ರಿಟಿಷರ ಬಂಧನದಲ್ಲಿ ಇರಬೇಕಾಗಿತ್ತು .ಅಲ್ಲಿಂದ ಅವರನ್ನು ಸಂಪೂರ್ಣ ತಪಾಸಣೆ ಮಾಡಿ, ಅವರ ಮಲಗಳನ್ನು ಪರೀಕ್ಷಿಸಿ ಚಿನ್ನವೇನಾದಾರೂ ಕದ್ದು ಒಯ್ಯುತ್ತಿದ್ದಾರೆಯೇ ಎಂದು ಖಾತ್ರಿ ಪಡಿಸಿ ಕಳಿಸಲಾಗುತ್ತಿತ್ತು. ಹಾಗೆಯೇ ಇದಿನಬ್ಬನ ಸರದಿಯೂ ಬಂತು. ಹತ್ತನೇ ವರ್ಷವೂ ಮುಗಿಯಿತು.ಇದಿನಬ್ಬ ಸಂಬಳ ಕೊಡುವ ಕಂಪೆನಿಯ ಮ್ಯಾನೇಜರ್ ಬಳಿ ಬಂದು ವಿನಮ್ರನಾಗಿ ನಿಂತ.

” ಸರ್, ನಾನು ಊರಿಗೆ ಹೋಗುತ್ತೇನೆ ”
” ಹೋ ಅದಕ್ಕೇನಂತೆ ”
” ಸರ್ ನನ್ನ ಸಂಬಳ ಕೊಟ್ಟು ಬಿಡಿ ”
” ಅರೆ! ನಿನಗ್ಯಾವ ಸಂಬಳ. ನಿನ್ನ ಸಂಬಳವೆಲ್ಲಾ ಸಿಲೋನಿನವನಲ್ಲಿ ಕೊಡಲಾಗಿದೆ. ನಿನಗೆ ಇನ್ನೂ ಸಂಬಳ ಬೇಕಿದ್ದರೆ ನೀನು ಮತ್ತೆ ಹತ್ತು ವರ್ಷ ದುಡಿಯಬೇಕು.ಕನಿಷ್ಠ ಏಳು ವರ್ಷವಾದರೂ ಬೇಕು. ಒಂದೊಂದು ವರ್ಷಕ್ಕೆ ಲೆಕ್ಕ ಮಾಡಿ ಒಂದೊಂದು ಪವನ್ ಚಿನ್ನ ಕೊಡುತ್ತೇವೆ ”

ಇದಿನಬ್ಬನಿಗೆ ನಿಂತ ನೆಲವೇ ಕುಸಿದಂತಾಯಿತು. ಇಷ್ಟು ದಿನ ತಾನು ಅನುಭವಿಸಿದ ತೊಂದರೆ, ಸಹಿಸಿದ ತ್ಯಾಗ ಮತ್ತು ಅಷ್ಟೇ ದುರಂತಮಯ ದಿನಗಳನ್ನು ಇನ್ನೂ ಕಳೆಯಬೇಕಾದ ದುರದೃಷ್ಟವನ್ನು ನೆನೆದು ಇದಿನಬ್ಬ ಗದ್ಗದಿತನಾದ. ಈ ಹತ್ತು ವರ್ಷಗಳಲ್ಲಿ ಮಾಡಿದ ಕೆಲಸದ ಬೆಲೆ ನೀರಲ್ಲಿ ಹೋಮವಾಗಿ ಹೋಯಿತೇ ಎಂದು ನೋವಿನಿಂದ ಕನಲಿದ.

” ಸರಿ ಇನ್ನು ಏಳು ವರ್ಷ ಕರಾರು ಬರೆಯಿರಿ ” ಎಂದು ನೋವಿನಿಂದಲೇ ಹೇಳುತ್ತ ಹೆಬ್ಬೆಟ್ಟು ಒತ್ತಿದ. ಮತ್ತೆ ಮೂರು ವರ್ಷ ತಡವಾಗಿ ಮನೆಗೆ ಹೋಗುವುದನ್ನು ನೆನೆದುಕೊಳ್ಳುವಾಗಲೆಲ್ಲಾ ಕಣ್ಣುಗಳು ಆರ್ದ್ರವಾಗುತ್ತಿದ್ದವು. ತನ್ನ ಜೊತೆಗಿದ್ದವರೆಲ್ಲಾ ಬೀಳ್ಕೊಟ್ಟು ಹೊರಡತೊಡಗಿದರು. ಇದಿನಬ್ಬನ ಕಣ್ಣುಗಳು ಮತ್ತೆ ಹನಿಯುತ್ತಲೇ ಇದ್ದವು. ಇತ್ತೀಚಿನ ಕೆಲವು ದಿನಗಳಲ್ಲಿ ಮನೆಯವರು ತುಂಬಾ ನೆನಪಾಗಿದ್ದರು.

*

ಕೆಲಸ ಮತ್ತೆ ಆರಂಭವಾಯಿತು. ಈ ಬಾರಿ ತನಗಾಗಿ ದುಡಿಯುವುದೆಂಬ ಆಸಕ್ತಿ. ಇದಿನಬ್ಬ ಮತ್ತು ಇತರ ಕೆಲಸದವರು ಕೇರಿಯೊಂದರಲ್ಲಿ ವಾಸ ಹೂಡಿದ್ದರು. ಈ ಬಾರಿಯ ಕೆಲಸದ ಅಡ್ಡೆ ಅಚ್ಚುಕಟ್ಟಾಗಿತ್ತು. ಅನುಭವಿಗಳಾದ ಕೂಲಿಯಾಳುಗಳಿಗೆ ಅಲ್ಪ ಮರ್ಯಾದೆ ಕೊಡುತ್ತಿದ್ದರು. ಬಿಳಿಯ ಅಧಿಕಾರಿಗಳ ಕಣ್ತಪ್ಪಿಸಿ ಚಿನ್ನ ಕಳ್ಳ ಸಾಗಾಣಿಕೆ ನಡೆದರೆ ಮಾತ್ರ ಉಗ್ರ ಶಿಕ್ಷೆ ನೀಡಲಾಗುತ್ತಿತ್ತು. ಉಳಿದಂತೆ ಹಿಂದೆ ಇದ್ದ ತ್ರಾಸದಾಯಕ ಕೆಲಸಗಳೊಂದೂ ಈಗ ಇರಲಿಲ್ಲ. ಇದಿನಬ್ಬ ಹಿಂದೆಂದೂ ಅನುಭವಿಸಿರದ ಸ್ವಾತಂತ್ರ್ಯ ಸುಖವನ್ನು ಅನುಭವಿಸುತ್ತಿದ್ದ. ಹಿಂದಿನ ಅಧಿಕಾರಿಗಳ ಜಾಗದಲ್ಲಿ ಹೊಸಬರು ಬಂದಿದ್ದರು. ಹೊಸ ಕಾನೂನುಗಳು ಬಂದಿದ್ದವು. ಜಗತ್ತಿನಾದ್ಯಂತ ಗುಲಾಮಗಿರಿಯ ವಿರುದ್ಧ, ಜೀತ ಪದ್ಧತಿಯ ವಿರುದ್ಧದ ಹೋರಾಟಗಳು ವ್ಯಾಪಕಗೊಂಡು ಸಾಮಾಜಿಕ ಕ್ರಾಂತಿ ನಡೆದಿತ್ತು. ಆ ಹೊತ್ತಿಗೆ ಗುಲಾಮಗಿರಿ ವಿರೋಧಿ ಚಳುವಳಿಗಳು ಜಗತ್ತಿನಾದ್ಯಂತ ಆರಂಭಗೊಳ್ಳತೊಡಗಿದವು.

ಕಥೆ ಹೇಳುತ್ತಿದ್ದ ಅಜ್ಜ ” ನಾಳೆ ಮುಂದುವರಿಸೋಣವೇ?” ಎಂದು ಕೇಳಿದರು. ” ನಾಳೆನಾ? ಇವತ್ತೇ ಮುಗಿಸುವಾ” ಎಲ್ಲರದ್ದೂ ಒಕ್ಕೊರೊಲಿನ ಆಗ್ರಹ.

” ಸರಿ ನನ್ಗೆ ಸ್ವಲ್ಪ ಚಹಾ ಬೇಕು” ಅಜ್ಜ ಕೇಳಿ ಪಡೆದರು. ಆ ಮಧ್ಯೆ ಚಿಕ್ಕಪ್ಪ ” ಬಹುಶಃ ಆ ಕಾಲದಲ್ಲಿ ಕಾರ್ಲ್ ಮಾರ್ಕ್ಸ್ ವಾದವು ದಕ್ಷಿಣ ಆಫ್ರಿಕಾದಲ್ಲೂ ಭಾರತದಲ್ಲೂ ಪ್ರಭಾವ ಬೀರಿತ್ತು ಅನಿಸುತ್ತದೆ. ಗಾಂಧೀಜಿ, ನೆಲ್ಸನ್ ಮಂಡೇಲಾ, ಲೋಹಿಯಾ ಮೊದಲಾದವರು ಮುಂದಾಳತ್ವ ವಹಿಸಿಕೊಂಡ ಹೋರಾಟಗಳು ಜಗತ್ತಿನ ಚಿತ್ರಣವನ್ನೇ ಬದಲಾಯಿಸಿದ್ದರು. ಕ್ರಮೇಣ ಬ್ರಿಟಿಷ್ ಸರಕಾರ ಕೂಡಾ ಈ ತೀವ್ರ ಹೋರಾಟಕ್ಕೆ ಮಣಿಯಲೇ ಬೇಕಾಗಿತ್ತು. ಪರಿಣಾಮ ಭಾರತದಲ್ಲಿ ಗುಲಾಮ ಪದ್ಧತಿಯನ್ನು ನಿರ್ಮೂಲನೆ ಮಾಡುವ ಕಾಯಿದೆಯನ್ನು ಬ್ರಿಟಿಷ್ ಸರಕಾರ ಸಂಸತ್ತಿನಲ್ಲಿ ಮಂಡಿಸಬೇಕಾಯಿತು. ಅದಕ್ಕಾಗಿಯೇ ನೋಡಿ, ಈ ಬ್ರಿಟಿಷರು ತಮ್ಮ ವಸಹಾತುಗಳಿಗೆ ಕೂಲಿ ಕೆಲಸಗಾರರನ್ನು ನೇಮಿಸಲು ಹೊಸ ಕಾನೂನೊಂದು ಜಾರಿಗೆ ತಂದಿದ್ದು. ” ಗುಲಾಮ ಗಿರಿ” ಯನ್ನು ತೊಡೆದು ಹಾಕಿ ” ಕಾಂಟ್ರಾಕ್ಟ್ ಲೇಬರ್ ” ಎಂಬ ಹಳೆ ಮದ್ಯವನ್ನು ಹೊಸ ಪರಿಷ್ಕೃತ ಶೀಷೆಯಲ್ಲಿ ಬಡಿಸಿದ್ದು. ಗುಲಾಮರ ಬದಲು ಜನರನ್ನು ಕೂಲಿಯಾಳಾಗಿ ನೇಮಿಸಿ ಆತನಿಗೆ ವರ್ಷಕ್ಕಿಂತಿಷ್ಟು ಮಜೂರಿ ಎಂಬಂತೆ ನಿರ್ಧರಿಸಲಾಗುತ್ತಿತ್ತು. ಬಹುಶಃ ಇದಿನಬ್ಬನೂ ಇಂತದ್ದೇ ವ್ಯವಸ್ಥೆಯ ಬಲಿಪಶು”.

ಹೀಗೆ ಬಿಡುವಿನ ವೇಳೆಗಳಲ್ಲಿ ಚಿಕ್ಕಪ್ಪನ ಹಸ್ತಕ್ಷೇಪ ಶತಃ ಸಿದ್ಧವಾಗಿರುತ್ತಿತ್ತು. ಅಷ್ಟರಲ್ಲಿ ಕೂಡಿಕೊಂಡ ಅಬ್ಬ, “ಹೋ ಹಾಗಾದರೆ ಇದೇ ಸಮಕಾಲೀನ ಪರಿಸ್ಥಿತಿಯಲ್ಲಿ ಇದಿನಬ್ಬರೂ ಕೂಲಿಯಾಳಾಗಿ ವಿವಿಧ ದೆಶದಲ್ಲೆಲ್ಲ ದುಡಿದಿದ್ದರೆನ್ನಿ” ಎಂದರು. ಚಿಕ್ಕಪ್ಪ ‘ಹೌದೆಂದು’ ತಲೆಯಾಡಿಸುತ್ತಾ “ಹೆಸರು ಊರು ಗೊತ್ತಿಲ್ಲದೆ ತಿರುಗುತ್ತಿದ್ದವರು, ಊರಿನಿಂದ ಓಡಿ ಹೋಗಿ ದಿಕ್ಕು ತಪ್ಪಿದವರು, ದಾರಿ ಮರೆತ ಮಕ್ಕಳು ಈ ಜಾಲಗಳಿಗೆ ಬೇಗ ಬಲಿಯಾಗುತ್ತಿದ್ದರಂತೆ. ಕಡು ಕಷ್ಟದಿಂದ ಬೇಸತ್ತ ಬಡವರೂ ತಮ್ಮ ಮಕ್ಕಳನ್ನು ಈ ರೀತಿಯಾಗಿ ಬಳಸಿಕೊಳ್ಳತೊಡಗಿದ್ದರು. ಈ ಕೂಲಿ ಒಪ್ಪಂದದ ಪ್ರಕಾರ ಹಲವಷ್ಟು ಜನರು ವಿವಿಧ ದೇಶಗಳ ಪ್ರಜೆಗಳಾಗಿ ಮಾರ್ಪಟ್ಟಿದ್ದರು ಕೂಡಾ”.

ಹೊಸ ಹೊಸ ಮಾಹಿತಿಗಳು ಸಿಕ್ಕ ಕೂಡಲೇ ಅಜ್ಜ, ಚಿಕ್ಕಪ್ಪನ ಜ್ಞಾನಕ್ಕೆ ತಲೆದೂಗುತ್ತಿದ್ದರು. ಕೇಳಿಸಿಕೊಂಡು ಮತ್ತೆ ಕಥೆಯ ಹಳಿಗೆ ಮರಳುತ್ತಿದ್ದರು.

ಇದಿನಬ್ಬ ಕೆಲಸ ಮಾಡುತ್ತಿದ್ದ ಕಂಪೆನಿಯವರು ಮೊದಮೊದಲು ಕೂಲಿಯಾಳುಗಳನ್ನು ಗುಲಾಮರಂತೆ ದುಡಿಸುತ್ತಿದ್ದರು. ಪ್ರತಿಭಟಿಸಿದರೆ ಕೊಂದೇ ಬಿಡುತ್ತಿದ್ದರು. ಜೀವಕ್ಕೆ ಬೆಲೆಯೇ ಇರಲಿಲ್ಲ. ಕ್ರಮೇಣ ಈ ಕಠಿಣವಾದ ಶೈಲಿ ಮರೆಯಾಗಿ ಕೆಲಸಗಾರರಿಗೆ ಸರಿಯಾದ ವೇತನ ಕೊಡುವುದು, ಕೂಲಿಯಾಳುಗಳ ಯೋಗಕ್ಷೇಮವನ್ನು ನೋಡಿಕೊಳ್ಳುವುದು, ಕಾರ್ಮಿಕರ ಹಿತಾಸಕ್ತಿಗಳನ್ನು ಕಾಪಾಡುವುದು ಮುಂತಾದ ಉತ್ತಮ ಕಾರ್ಯಗಳತ್ತ ಕಂಪೆನಿ ಮನಸ್ಸು ಮಾಡತೊಡಗಿತು. ಈ ಬದಲಾವಣೆ ಒಮ್ಮಿಂದೊಮ್ಮೆಲೇ ನಡೆದದ್ದಲ್ಲ. ಆದರೂ ಕೆಲಸ ಮಾಡುವ ಗಣಿಯ ಅಧಿಕಾರಿಗಳು ಕೂಲಿಯಾಳುಗಳಿಗೆ ಸಂಪೂರ್ಣ ಸ್ವಾತಂತ್ರ್ಯ ಕಲ್ಪಿಸಿರಲಿಲ್ಲ. ಆಡಳಿತದಲ್ಲಿ ಕೊಂಚ ಸಡಿಲಿಕೆ ಮಾತ್ರವಾಗಿತ್ತು ಅದು. ಬಿಗುವಾಗಿದ್ದ ಆಡಳಿತ ಸಡಿಲುಗೊಂಡ ಮೇಲೆ ಕೆಲಸ ಲಘುವಾಯಿತು. ಬಹಳಷ್ಟು ಜನರು ಕೆಲಸಗಳಿಗೆ ತಿಲಾಂಜಲಿಯಿತ್ತು ಮನೆಗೆ ಮರಳಿದ್ದರು. ಇನ್ನು ಕೆಲವರು ತಪ್ಪಿಸಿಕೊಂಡು ಓಡಿ ಹೋಗಿದ್ದರು. ಮನೆಯ ದಾರಿ ಮರೆತ ಇದಿನಬ್ಬನಂತಹವರು ಅಲ್ಲೇ ಉಳಿದಿದ್ದರು. ಅವರೂ ಹಿಂದೆ ಅನುಭವಿಸಿದ ಯಾತನಾಮಯ ಸಂಕಷ್ಟಗಳಿಂದ ತತ್ತರಿಸಿ ಹೋಗಿದ್ದರು. ದೈಹಿಕವಾಗಿ ಮಾನಸಿಕವಾಗಿ ತ್ರಾಸದಾಯಕ ಕೆಲಸಗಳನ್ನು ಮಾಡಲು ಒಪ್ಪುತ್ತಿರಲಿಲ್ಲ. ಆಟ ವಿನೋದಗಳಲ್ಲೇ ಹೆಚ್ಚಿನ ದಿನಗಳನ್ನು ಕಳೆಯುತ್ತಿದ್ದರು.

ವಾರಕ್ಕೊಮ್ಮೆ ಬಿಡುವು ಸಿಕ್ಕರೆ ಶಿಕಾರಿಗೆ ಹೋಗುವುದು ರೂಢಿಯಾಗಿತ್ತು. ಶಿಕಾರಿಯೆಂದರೆ ಇಷ್ಟವಿಲ್ಲದವರು ಯಾರು ಹೇಳಿ; ಸಾವಿನೊಂದಿಗೆ ಹೋರಾಡಿ ಬಂದವರಿಗೆ ಬೇಟೆಗೆ ಹೋದಾಗ ಎದುರಾಗುವ ಅಪಾಯಗಳು ಒಂದು ಲೆಕ್ಕವೆ? ಆಫ್ರಿಕಾದ ಕಾಡುಗಳಲ್ಲಿ ಸಣ್ಣ ಪುಟ್ಟ ಮೃಗಗಳಲ್ಲದೆ ಜಿಂಕೆ ಕಾಡೆಮ್ಮೆ ಹಂದಿಗಳೂ ಇದ್ದವು. ಸಿಂಹ ಮತ್ತು ಆನೆ ಆಫ್ರಿಕಾದ ವಿಶೇಷ. ಆನೆಯನ್ನು ಬೇಟೆಯಾಡಿ ಅದರ ಚರ್ಮ ಸುಲಿದು ತಿನ್ನುವ ಜನರೂ ಆಫ್ರಿಕಾದ ಕಾಡುಗಳಲ್ಲಿ ಈಗಲೂ ವಾಸವಿದ್ದಾರಂತೆ. ಅಲ್ಲಿನವರು ಹಾವನ್ನೂ ತಿನ್ನುತ್ತಿದ್ದರು. ಹಾವು ಹಂದಿ ಮುಂತಾಗಿ ತಾನು ತಿನ್ನಲು ಯೋಗ್ಯವಲ್ಲದ ಬೇಟೆ ಇದ್ದ ದಿನಗಳಲ್ಲಿ ಇದಿನಬ್ಬ ತರಕಾರಿ ಊಟ ಮಾಡಿ ಮಲಗುತ್ತಿದ್ದ. ಕ್ರಮೇಣ ಇದು ಅವನ ಜತೆಗಾರರಿಗೂ ಅರ್ಥವಾಗಿ ಕಾಡೆಮ್ಮೆ, ಜಿಂಕೆಗಳನ್ನೇ ಹಿಡಿದು ಇದಿನಬ್ಬನಲ್ಲಿ ದ್ಸಬಹ್ ( ಶಾಸ್ತ್ರೋಕ್ತವಾಗಿ ಕಸಾಯಿ ಮಾಡುವುದು ) ಮಾಡಲು ಹೇಳಿ ಸಾರು ಮಾಡಲಾರಂಭಿಸಿದರು. ವಾರಕ್ಕೊಮ್ಮೆ ಮೀನಿನ ಪದಾರ್ಥವಿರುತ್ತಿತ್ತು. ಒಮ್ಮೆ ಏನಾಯಿತೆಂದರೆ ಕೆಲಸಕ್ಕಿದ್ದ ಹೆಚ್ಚಿನವರೂ ಶಿಕಾರಿಗೆ ಹೋಗಿದ್ದರು. ಶಿಕಾರಿಯ ಗುಂಪಲ್ಲಿ ಸ್ರೀಕಸ್ ಅನ್ನುವವನಿದ್ದ. ಇದ್ದಕ್ಕಿದ್ದಂತೆ, ಇದಿನಬ್ಬನಲ್ಲಿ “ಅಡ್ಡಲಾಗಿ ನಿಲ್ಲು ನಿಲ್ಲು” ಎಂದು ಬೊಬ್ಬೆ ಹಾಕಿ ಹೇಳತೊಡಗಿದ. ಇದಿನಬ್ಬನಿಗೆ ದಿಗಿಲು. ಯಾವುದೇ ಶಿಕಾರಿಗೆ ಯೋಗ್ಯ ಪ್ರಾಣಿ ಇಲ್ಲ, ಮತ್ಯಾಕೆ ಅಡ್ಡಲಾಗಿ ಸ್ರೀಕಸ್ ನಿಲ್ಲಲು ಹೇಳಿದ ಎಂಬ ಸಂಶಯ ಇದಿನಬ್ಬನಲ್ಲಿ ಮೂಡಿತು. ಅಷ್ಟರಲ್ಲಿ ಗಿಡ ಗಂಟಿಗಳ ಮಧ್ಯೆ ಬರ ಬರನೆ ಸದ್ದು ಮಾಡುತ್ತಾ ಹಾವೊಂದು ಸರಿದು ಹೋಯಿತು.

ಇದಿನಬ್ಬ ಶಿಕಾರಿಯಿಂದ ಹಿಂತಿರುಗಿ ಬಂದ. ಅಂದು ಮೀನಿನ ಪದಾರ್ಥವೆಂಬುವುದು ಮೊದಲೇ ತೀರ್ಮಾನಿಸಿಸದ್ದರು. ಬೇಟೆ ದೊರಕದ ದಿನ ಮೀನೇ ಗತಿ. ಎಲ್ಲರೂ ಬಂದು ಸೇರಿದರು. ಇದಿನಬ್ಬ ಬೇಟೆಯ ಸುಸ್ತಿನಲ್ಲಿ ಮಲಗಿದ್ದವ ಎದ್ದು ಕೈ ಕಾಲು ತೊಳೆದು ಊಟಕ್ಕೆ ಕುಳಿತ. ಎಲ್ಲರೂ ಮೀನಿನೂಟ ಭರ್ಜರಿಯಾಗಿ ತಿನ್ನುತ್ತಿದ್ದರು. ಮೊದಲೇ ಬಸವಳಿದ ಶರೀರ, ಇದಿನಬ್ಬ ಭರ್ಜರಿಯಾಗಿ ಉಣ್ಣುತ್ತಿದ್ದ. ಅಲ್ಲಿಗೆ ಇದಿನಬ್ಬ ಸಾರು ಹಾಕಲೆಂದು ಪಾತ್ರೆಯ ಬಳಿ ಬಂದ. ಸಾರು ಬಡಿಸುತ್ತಿದ್ದ ಸ್ರೀಕಸ್ ಆ ಹೊತ್ತಿಗೆ ” ಆಗ ಅಡ್ಡ ನಿಲ್ಲಲು ಹೇಳಿದಕ್ಕೆ ಸರಿಯಾಗಿ ನಿಂತಿಲ್ಲ, ಈಗ ಸಾರು ಬೇಕಂತೆ ” ಎಂದು ಇದಿನಬ್ಬನನ್ನು ನೋಡಿ ಗೊಣಗಿದ. ಇದಿನಬ್ಬನಿಗೆ ಪರಿಸ್ಥಿತಿ ಮನದಟ್ಟಾಯಿತು. ತಟ್ಟೆಯಲ್ಲಿದ್ದ ತುಂಡು ಕುಟುಕಲು ಹೆಡೆಯೆತ್ತಿ ನಿಂತಂತೆ ಭಾಸವಾಯಿತು. ವ್ಯಾಕ್, ವ್ಯಾಕ್ ಎನ್ನುತ್ತಾ ಒಂದೇ ಸಮನೆ ವಾಂತಿ ಮಾಡಿಕೊಂಡ. ಅಂದಿಗೆ ಬೇಟೆಗೆ ಹೋಗುವುದಕ್ಕೂ ಬೇಟೆಯ ಊಟ ಮಾಡುವುದಕ್ಕೂ ಬ್ರೇಕ್ ಬಿತ್ತು. ಮತ್ತೆಂದೂ ಅವರ ಅಡುಗೆಗಳಿಗೆ ಇದಿನಬ್ಬ ಕಾಯುತ್ತಿರಲಿಲ್ಲ. ಇಂತಹ ಎಷ್ಟೋ ಘಟನೆಗಳು ನಿತ್ಯವೂ ನಡೆಯುತ್ತಿದ್ದವು.

ಒಂದು ದಿನ ಇದ್ದಕ್ಕಿದ್ದಂತೆ ಸಣ್ಣ ಬಾಲಕನೋರ್ವ ಬಹಿರ್ದೆಸೆಗೆ ಹೋದವನು ಹಾಗೆಯೇ ಎದ್ದು ಬೊಬ್ಬೆ ಹಾಕುತ್ತಾ ಓಡೋಡಿ ಬಂದ. “ಯಾಕೆ ಏನಾಯ್ತು?” ಎಂದು ಕೇಳುತ್ತಿದ್ದಂತೆ ಆತ ” ಹಾವು, ಹಾವು” ಎನ್ನುತ್ತಾ ಪ್ರಜ್ಞೆ ತಪ್ಪಿ ಬಿದ್ದ. ಶಿಕಾರಿಗೆ ಹೋಗುವಾಗ ಆ ಹುಡುಗ ನೋಡಿದ ಹಾವುಗಳಿಗೆ ಲೆಕ್ಕವಿಲ್ಲ. ಇದು ಯಾವ ನಮೂನೆಯ ಹಾವಾಗಿರಬಹುದು, ಇದಿನಬ್ಬನ ತಲೆಯಲ್ಲಿ ಪ್ರಶ್ನೆ ಕೊರೆಯಲಾರಂಭಿಸಿತು. ಹುಡುಗನ ಮುಖಕ್ಕೆ ನೀರು ಚುಮುಕಿಸಿ ಎಬ್ಬಿಸಿದರು. ಎದ್ದವನೇ ಮತ್ತೆ “ಹಾವು ಹಾವು” ಎನ್ನುತ್ತಾ ಬೆವರತೊಡಗಿದ್ದ. “ಅರೆ ಇವನು ಹಾವೇ ನೋಡಿಲ್ವಾ?… ಈಗ ಯಾಕೆ ಹೀಗೆ? ಇದಿನಬ್ಬನದೇ ಪ್ರಶ್ನೆ ಗುಂಪಿನಲ್ಲಿರುವ ಯಾರೋ ಕೇಳಿದರು. ಅವನು ಮತ್ತೆ ” ಹಾವು ಹಾವು” ಎಂದು ಉದ್ಗರಿಸಿದನಲ್ಲದೆ ಬೇರೆನೂ ಹೇಳಲಿಲ್ಲ. ಹುಡುಗನಿಗೆ ಜ್ವರ ಆವರಿಸಿ ಮೈಯಲ್ಲಾ ಕೆಂಡದಂತೆ ಸುಡುತ್ತಿತ್ತು. ಆಗಲೇ ಹುಡುಗನಿಗೆ ಗಿಡಮೂಲಿಕೆ ಅರೆದು ಸ್ಥಳೀಯನೊಬ್ಬ ಕುಡಿಸಿದ. ಹುಡುಗ ಚೇತರಿಸಿಕೊಂಡ ಬಳಿಕ ಅವನನ್ನು ಕುಳ್ಳಿರಿಸಿ ಹಿರಿಯರು ವಿಚಾರಣೆ ಶುರು ಮಾಡಿದರು.

ಭಯದಿಂದ ನಡುಗುತ್ತಿದ್ದ ಆತ ನಡೆದ ಕತೆ ಹೇಳಿದ. ಆತ ಬಹಿರ್ದೆಸೆಗೆ ಕುಳಿತುಕೊಂಡಿದ್ದನಂತೆ, ಸ್ಥಳ ಬದಲಿಸಿ ಮತ್ತೊಮ್ಮೆ ಕುಳಿತು ಕೊಳ್ಳುವಾಗ ಏನೋ ತಾಗಿದಂತಾಗಿ ನೋಡುವಾಗ ಭಯಂಕರ ಹಾವೊಂದರ ಬಾಲ ಹುಡುಗನ ಪಾದದಡಿಯಲ್ಲಿ ಸಿಲುಕಿತ್ತು. ಒಮ್ಮೆಲೆ ಹಾವು ಆತನ ಮೇಲೆರಗಿ ಭಯಂಕರವಾಗಿ ಫೂತ್ಕರಿಸಿತು. ಹೌಹಾರಿದ ಹುಡುಗ ಎದ್ದೆನೊ ಬಿದ್ದೆನೊ ಎಂದು ಅಲ್ಲಿಂದ ಪೇರಿ ಕಿತ್ತ. ಹಾವು ಬೆನ್ನಟ್ಟಿತು. ಹಾವು ಅಲ್ಲಿಂದ ತಪ್ಪಿಸಿಕೊಂಡು ಓಡಿತ್ತು; ಅದು ತನ್ನನ್ನು ಬೆನ್ನಟ್ಟುತ್ತಿದೆಯೆಂದು ಹುಡುಗ ಭ್ರಮಿಸಿಕೊಂಡಿದ್ದ. ಆ ಹಾವು ಸುಮಾರು ಉದ್ದ, ಭಯಂಕರ ದಪ್ಪ ಎಂದು ಹೇಳುತ್ತ ಮತ್ತೆ ಹೆದರಿ ನಡುಗತೊಡಗಿದ. “ಅಯ್ಯೋ ಮಗುವಿಗೆ ಹುಚ್ಚು ಹಿಡಿಯಿತೇ” ಎಂದು ಅವನ ಹೆತ್ತವರು ಗಾಬರಿ ಬಿದ್ದರು. ಅಲ್ಲಿದ್ದ ಕೆಲವರು “ಅದೆಂತಹ ಹಾವು ನೋಡೇ ಬಿಡೋಣ” ಎಂಬ ತೀರ್ಮಾನಕ್ಕೆ ಬಂದು ಅದನ್ನು ಹುಡುಕಲು ಹೊರಟರು. ಇದಿನಬ್ಬನೂ ಅವರ ಜೊತೆ ಕೂಡಿಕೊಂಡ. ಅವರು ನಾಲ್ಕು ಹೆಜ್ಜೆ ಇಟ್ಟಿರಬೇಕು; ಅಷ್ಟರಲ್ಲಿ ಹಿಸ್ಸೆಂದು ಭಯಂಕರವಾದ ಬುಸುಗುಡುವಿಕೆ ಕೇಳಿಸಿತು. ನೋಡುವುದೇನು, ಭಾರಿ ಗಾತ್ರದ ಕಾಳಿಂಗ ಸರ್ಪವೊಂದು ಹೆಡೆ ಬಿಚ್ಚಿ ದಾರಿಗಡ್ಡಲಾಗಿ ನಿಂತಿದೆ. ಹುಡುಗ ಭಯ ಬಿದ್ದ ಹಾಗೆ ಹಾವು ಅವನನ್ನು ಹುಡುಕುತ್ತ ಅದೇ ದಾರಿಯಲ್ಲಿ ಬರುತ್ತಿತ್ತು. ಗುಂಪಲ್ಲಿದ್ದವರೆಲ್ಲ ಒಮ್ಮೆ ಅಪ್ರತಿಭರಾದರು.

ಸುಮಾರು ೧೭-೧೮ ಅಡಿ ಉದ್ದವಿದ್ದ ತೆಂಗಿನ ಮರದಷ್ಟಗಲದ ಮಿರ ಮಿರ ಮಿಂಚುವ ಹೊಟ್ಟೆಯ ಅಡಿ ಭಾಗದ ಅಗಲವಾದ ಜಡೆಯ ಆ ಕಾಳಸರ್ಪವನ್ನು ನೋಡಿದವರು ಬೆಚ್ಚಿ ಬೀಳಲೇಬೇಕು. ಅನಿರೀಕ್ಷಿತವಾದ ಅಡಚಣೆಯಿಂದ ಅದು ಮತ್ತೆ ಮತ್ತೆ ಭಯಂಕರವಾಗಿ ಫೂತ್ಕರಿಸುತ್ತಿತ್ತು. ತನ್ನ ದಾರಿಗೆ ಅಡ್ಡವಾಗಿದ್ದರಿಂದ ಕಡು ಕೋಪದಿಂದ ರೌದ್ರಾವತಾರ ತಾಳಿ ಬಾಲದಲ್ಲಿ ಎದ್ದು ನಿಂತು ಬುಸುಗುಡುತ್ತಿದ್ದ ಅದರ ರೋಷಾವೇಶವನ್ನು ಕಂಡು ಎಲ್ಲರೂ ನಿಂತಲ್ಲಿಂದ ಮಾರು ದೂರ ಓಡಿದರು.

” ಏನು ಮಾಡುವುದು ”
” ಇವತ್ತು ಅದು ನಮ್ಮನ್ನು ಸುಮ್ಮನೆ ಬಿಡುವುದಿಲ್ಲ ”
” ಏನು ಮಾಡೋಣ ”
” ಹೊಡೆದು ಸಾಯಿಸೋಣ ”

ಇದಿನಬ್ಬನ ದಿಟ್ಟ ಉತ್ತರ ಕೇಳಿ ಉಳಿದವರು ಅವಾಕ್ಕಾದರು. ಗುಂಡು ಹಾರಿಸುವುದೆಂದರೆ ಬಂದೂಕಿಲ್ಲ. ಯಾವುದರಿಂದ ಹೊಡೆಯುವುದು ಎಂಬ ಪ್ರಶ್ನೆ ಅವರ ಮನದಲ್ಲಿ ಮೂಡುತ್ತಿರುವಾಗಲೇ ಇದಿನಬ್ಬ ಎರಡು ಗಟ್ಟಿಯಾದ ಕೋಲುಗಳನ್ನು ತಯಾರು ಮಾಡಿದ. ” ಯಾರು ನನ್ನ ಜೊತೆ ನಿಲ್ಲುತ್ತೀರಿ ” ಇದಿನಬ್ಬ ಘರ್ಜಿಸಿದ. ಆತನ ರೌದ್ರವಾತಾರಕ್ಕೆ ಇಡೀ ಕಾಡೇ ಕಂಪಿಸಿತು. ಎಲ್ಲರೂ ಹಿಂದೆ ಸರಿದರು. ” ಒಬ್ಬಂಟಿಯಾದರೆ ನಾನು ಸತ್ತರೂ ಸರಿ, ನಾನಿವತ್ತು ಅದನ್ನು ಕೊಲ್ಲದೆ ಬಿಡುವುದಿಲ್ಲ ” ಎಂದು ಶಪಥ ಮಾಡಿದಂತೆ ನಿಂತ. ಅಷ್ಟರಲ್ಲಿ ಒಂದೆರಡು ಬಡಿಗೆಗಳೊಂದಿಗೆ ‘ಅಲಸ್’ ಬಂದು ತಲುಪಿದ. ” ನಾನು ನಿಲ್ಲುತ್ತೇನೆ ನಿನ್ನ ಜೊತೆ ” ಎಂದು ಧೈರ್ಯ ತುಂಬಿದ. ಇದು ಕೇಳಿದ್ದೇ ತಡ ಇದಿನಬ್ಬನಿಗೆ ಆನೆ ಬಲ ಬಂದಂತಾಯ್ತು. ಇದಿನಬ್ಬ ಬಲಿಷ್ಟವಾದ ಒಂದು ಬಡಿಗೆಯನ್ನು ಹಿಡಿದು ನಾಲ್ಕೈದು ಬಾರಿ ಬೀಸಿ ತಾಲೀಮು ಮಾಡಿಕೊಂಡ. ಆ ಹೊತ್ತು ಅಲಸ್ ಮತ್ತು ಇದಿನಬ್ಬನ ಜೊತೆ ಇನ್ನೂ ಎಂಟು ಮಂದಿ ಸೇರಿಕೊಂಡರು. ಎಲ್ಲರನ್ನೂ ಒಂದೊಂದು ದಿಕ್ಕುಗಳಲ್ಲೂ ನಿಲ್ಲಲು ಇದಿನಬ್ಬ ಸಲಹೆಯಿತ್ತ. ” ಒಳ್ಳೆಯ ಮಾತಿನಿಂದ ಇಲ್ಲಿಂದ ಹೋಗು ” ಇದಿನಬ್ಬ ಗದರಿಸುತ್ತ ಹಾವಿಗೆ ಹತ್ತಿರವಾದ.

ತನಗೆ ಮತ್ತೆ ಅಪಾಯ ಎದುರಾಗಿದೆಯೆಂದು ಭಾವಿಸಿ ಹಾವು ಮತ್ತೆ ಕೋಪದಿಂದ ಇನ್ನಷ್ಟು ಭೀಕರವಾಗಿ ಬುಸುಗುಡಲಾರಂಭಿಸಿತು. ಇದಿನಬ್ಬನ ಕೋಪ ನೆತ್ತಿಗೇರಿತು. ಕಣ್ಣುಗಳು ಕೆಂಬಣ್ಣಕ್ಕೆ ತಿರುಗಿದ್ದವು. ಹಾವು ಹೆಡೆ ಮಡಚಿ ತಲೆ ನೆಲಕ್ಕೆ ಇಳಿ ಬಿಡಬೇಕೆನ್ನುವಷ್ಟರಲ್ಲಿ ಇದಿನಬ್ಬ ಬಡಿಗೆಯಿಂದ ಗುರಿ ನೋಡಿ ಒಂದೇಟು ಬಿಗಿದ. ಹೊಡೆತ ಸರಿಯಾಗಿ ತಲೆಯ ಮೇಲೆ ಬಿದ್ದಿತ್ತು. ಹಿಂದಿದ್ದ ಅಲಸ್ ಉಳಿದೆಲ್ಲರೂ ಬಡಿಗೆ ತುಂಡಾಗಿ ಹೋಗುವಷ್ಟೂ ಗಟ್ಟಿಯಾಗಿ ಹಾವಿನ ಮೇಲೆ ಹೊಡೆದರು. ಒಂದು ಹತ್ತು ಪೆಟ್ಟು ತಲೆಗೆ ಬೀಳುವಷ್ಟರಲ್ಲೇ ಆ ಭೀಕರ ಕಾಳಿಂಗ ಸರ್ಪದ ಹಲ್ಲುಗಳು ಬೇರ್ಪಟ್ಟಿತ್ತು, ಕಣ್ಣು ಗುಡ್ಡೆ ಕಿತ್ತು ಬಂದಿತ್ತು. ಇದಿನಬ್ಬ ” ನಿಲ್ಲಿಸಿ” ಎಂದು ಜೋರಾಗಿ ಹೇಳಿದ. ಆ ಹೊತ್ತಿಗೆ ಹಿಂದೆ ಸರಿದಿದ್ದ ಪುಕ್ಕಲರೂ ಕೂಡಾ ಬಾಲಕ್ಕೆ ಬಾರಿಸುತ್ತಲೇ ಇದ್ದರು. ನಿರ್ಜೀವವಾದ ಹಾವನ್ನು ಮಣ್ಣು ಮಾಡಿ ಎಲ್ಲರೂ ಬಿಡಾರಕ್ಕೆ ಮರಳಿದರು. ಅಂದು ಇಡೀ ದಿನ ಇದಿನಬ್ಬನದೇ ಮಾತು ಎಲ್ಲ ಬಿಡಾರಗಳಲ್ಲೂ. ಅವನ ಹಿರಿಮೆ ಮತ್ತು ಧೈರ್ಯದ ಬಗ್ಗೆ ರಂಜನೀಯವಾಗಿ ಹೇಳತೊಡಗಿದ್ದರು.

ಇದಾಗಿ ಮೂರನೇ ದಿನಕ್ಕೆ ಸರಿಯಾಗಿ ಇದಿನಬ್ಬ ಬಿಡಾರದಲ್ಲಿ ಮಲಗಿದ್ದ. ಯಾರೋ ” ಇದಿನಬ್ಬ, ಹಾವು ಹಾವು ” ಅನ್ನುವುದು ಕೇಳಿಸಿದೆ. ಹೊರಗೆ ಬಂದು ನೋಡುವುದೇನು, ಕೊಂದ ಹಾವಿಗಿಂತಲೂ ಎರಡು ಅಡಿ ಹೆಚ್ಚೇ ಉದ್ದವಿರ ಬಹುದಾದ ಕಾಳಿಂಗ ಸರ್ಪ ನಿಂತಿದೆ !

(ಈ ಕಿರುಕಾದಂಬರಿಯ ಮುಂದಿನ ಕಂತು ಮುಂದಿನ ಭಾನುವಾರ ಪ್ರಕಟವಾಗಲಿದೆ)