Advertisement
ಚೈತ್ರಾ ಶಿವಯೋಗಿಮಠ ಅನುವಾದಿಸಿದ ಹಿಂದಿ ಭಾಷಾ ಕವಿ ಅನಾಮಿಕ ಅನು ಎಂಟು ಕವಿತೆಗಳು

ಚೈತ್ರಾ ಶಿವಯೋಗಿಮಠ ಅನುವಾದಿಸಿದ ಹಿಂದಿ ಭಾಷಾ ಕವಿ ಅನಾಮಿಕ ಅನು ಎಂಟು ಕವಿತೆಗಳು

೧. ಸಾವನ್ನು ಖತರ್ನಾಕ್ ಕವಿತೆಯಂತೆ ಜೀವಿಸುವವ

ಹಸಿವು ಖಾಲಿತನ ಕೊಲ್ಲದಿರಲೆಂದು
ಧೂಳು ಅಂಗಾರವನ್ನು ಸುಮ್ಮನೆ ನುಂಗುವನು
ನೈಟ್ರೋಜನ್ ಡೈಯಾಕ್ಸೈಡ್ ಉಸಿರಾಡುವನು
ನೀವೇನೋ ವಸಂತ, ಸುವಾಸನೆ, ಸುಗಂಧಗಳ ಮಾತಾಡುವಿರಿ
ಆತನೋ ಧಗಧಗಿಸುವ ನೆಲ, ಹೊಗೆ, ಕೆಮ್ಮು, ಸಾವನ್ನು
ಒಂದು ಖತರ್ನಾಕ್ ಕವಿತೆಯಂತೆ ಜೀವಿಸುವನು

೨. ನೀರುಂಡ ನೆಲ ಮಿದುವಾಗುವುದು ಸಾವಕಾಶ

ಹಿಂಡು ಹಂಸಗಳ ಜೊಂಡಂತೆ ಬರುವುದು
ನಿನ್ನ ನೆನಪು ಒಂದೊಂದಾಗಿ
ನೀರುಂಡ ನೆಲ ಮಿದುವಾಗುವುದು ಸಾವಕಾಶ
ನಾನೀಗ ನೆಲದ ಮೇಲೊರಗಿದ ದಣಿದ ರೈತ
ಹರಗಿದ ಹೊಲದಂಥ ಆಕಾಶದಲ್ಲಿ
ಹೊತ್ತು ಕಂತುವಾಗ
ಮೊಳೆಯುವುದು ನಿನ್ನ ಮುಖ

೩. ಎಲ್ಲವನ್ನೂ ಮರೆತಿರುವನು

ಎಲ್ಲಾ ಎಲ್ಲವನ್ನೂ ಮರೆತಿರುವನು
ಅವನಿಗೀಗ ನೆನಪಿಲ್ಲ
ವಿರಹದ ಚಳಿಗಾಲ
ಮುತ್ತಿನ ಮಹಾಮನೆ
ಸ್ಪರ್ಶದ ಭಾಷೆ
ಮಿಲನದ ಖುಷಿ
ವಿದಾಯದ ಗುಣಿ
ದುಃಖದ ಒರತೆ
ಮತ್ತು ಸುಖದ ಚಿಟಗುಬ್ಬಿ

೪. ನೀನೊಂದು ಸ್ವಯಂಭೂ

ಪ್ರತಿ ಗಾಯವೂ ಒಂದು ಬಾಗಿಲು
ಪ್ರತಿ ತರಚೂ ಒಂದು ಕಿಟಕಿ
ನಿನ್ನ ಮುಖವೆಂಬ ಸಂಪನ್ನ ಲೋಕದಲ್ಲಿ
ಬಿಡುಗಡೆಯ ಬಾಗಿಲು
ಬೆಳಕಿನ ಕಿಟಕಿಗಳಿವೆ
ನೀನೊಂದು ಸ್ವಯಂಭೂ

೫. ಕೌದಿ

ಕೌದಿ ಹೆಣೆಯುತ್ತಾ ಹೆಣೆಯುತ್ತಾ
ಶರತ್ಕಾಲದ
ಎಳೆಬಿಸಿಲಿಗೆ ಮೈಯ್ಯೊಡ್ಡುವ
ಹೆಂಗಳೆಯರ ಮೈಮೇಲೆ ಬಿಸಿಲಿನ
ಮರಿಗರಿಕೆ ಚಿಗುರೊಡೆದಿದೆ
ಕೆನ್ನೆ ಮೇಲೆ ಗಾಜಿನ ದುಂಡು ದುಂಡು ಹೂಗಳರಳಿವೆ
ಚಿಂದಿಬಟ್ಟೆ ಜೋಡಿಸಿ ಕೌದಿ ಹೊಲೆವ ಹೆಂಗಸರಿಗೆ
ತಮ್ಮ ಹರಿದ ಬದುಕಿಗೆ ಟಾಕಿ ಹಾಕಲಾಗದ ನೋವು
ಹೊಲಿಗೆ ಹಾಕುವ ಹೊತ್ತಿಗೆ ಹೊಂಡುವ ಕಜರಿ* ಪದ
ಕರಗುವುದು ಹೆಪ್ಪುಗಟ್ಟಿದ ನೋವು
ಇಷ್ಟು ಕಲಾತ್ಮಕವಾಗಿ ನೋವು ಹೊಲಿಯುವುದು
ಒಂದೋ ಭೂಮಿ
ಇಲ್ಲವೇ ಕವಿತೆ

೬. ಮನೆಯೇ ಇಲ್ಲ ನನಗೆ

ನನ್ನನ್ನು ಇಷ್ಟಪಡದಿರಲು
ನಡೆವ ಎಲ್ಲಾ ಸಂಚುಗಳಿಗೆ
ನನ್ನ ಹುಟ್ಟು ಒಂದು ಪ್ರತಿರೋಧ

ದೇವರು ಹೆದರಿದ್ದಾನೆ
ಸರ್ವಾಂತರ್ಯಾಮಿಯಾದವನು
ನನ್ನೆದುರು ಸಹ ಬರಲಾರನು

ನನ್ನ ಮೈಯಿಗೆ ಮನೆ ತಲುಪುವ
ಎಲ್ಲಾ ಹಾದಿಗಳು ಗೊತ್ತು
ಆದರೂ
ನನಗೆ ಯಾವ ಮನೆಯೂ ಇಲ್ಲ
ಹೌದು, ಅವನಿಗಿದು ತಿಳಿದಿದೆಯೇ?

೭. ಈಗ ಹೊಸ ನೆಲವನ್ನು ಕಂಡುಕೊಂಡಿವೆ ಮೀನು

ಜಲದೇವತೆಯ ವಿರುದ್ಧ ಬಂಡೆದ್ದಿವೆ ಮೀನು
ಕಿತ್ತೊಗೆದಿವೆ ಜೋಡಿ ಕಿವಿರನ್ನು
ಪುಪ್ಪುಸ ತಿದಿಯೊತ್ತಿಕೊಂಡಿವೆ

ಯಾರ ನೀರ ಹಂಗೂ ಇಲ್ಲದೆ
ಯಾರ ಬಲೆಯ ಭಯವೂ ಇಲ್ಲದೆ
ಬಲಿಷ್ಠವಾಗಿವೆ ಬಾಹುಗಳು
ಪೆನ್ನು ಪಂಜು ಹಿಡಿದಿವೆ ಕೈಗಳೀಗ
ಬಾವಿ, ಕೊಳದ ಕಪ್ಪೆಗಳ ಒಟಗುಡುವಿಕೆ
ಇದ್ದಕ್ಕಿದ್ದಂತೆ ಹೆಚ್ಚಾಗಿದೆ
ಈಗ ಹೊಸ ನೆಲವನ್ನು ಕಂಡುಕೊಂಡಿವೆ ಮೀನು

೮. ಬಯಕೆ

ಬೆಟ್ಟದ ಹೂವಾಗಲು ಬಯಸುವುದಿಲ್ಲ ಹೆಂಗಸರು
ಕುಟ್ಟಿ ಅರೆದು ಪೇಯವಾಗಿ
ಅಥವಾ ದೇವರಿಗರ್ಪಿತವಾಗಲೂ ಬಯಸುವುದಿಲ್ಲ

ಎಲೆಗಳಾಗಲು ಬಯಸುವರು
ಕಂಡು ಕೇಳರಿಯದ ಮರದ ಎಲೆಯಾಗಲು
ಜಾತಿ ಉಪಜಾತಿ ಹೆಸರಿನ ಗೊಡವೆ ಇರದ ಮರಗಳು
ಎಲ್ಲೆಂದರಲ್ಲಿ ಪುತಪುತನೆ ತಲೆಯೆತ್ತುವ ಮರಗಳು
ಕಸಕಡ್ಡಿ ಕಳೆಯ ಭಯವಿರದ ಮರಗಳು
ಯಾರೂ ಬೆಳೆಸಿ ರಕ್ಷಿಸದ ಮರಗಳು
ಪೂರ್ಣಾಯುಷ್ಯ ಕಳೆದು ಕೊನೆಗೆ
ಮಣ್ಣಲ್ಲಿ ಮಣ್ಣಾಗುವ ಮರಗಳು

*ಕಜರಿ (Kajari) ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಮಳೆಗಾಲದ (ಮುಖ್ಯವಾಗಿ ಶ್ರಾವಣ ಮಾಸ) ಸಂದರ್ಭದಲ್ಲಿ ಹಾಡಲಾಗುವ ಒಂದು ಪ್ರಸಿದ್ಧ ಜಾನಪದ ಹಾಡು ಮತ್ತು ನೃತ್ಯ ಪ್ರಕಾರವಾಗಿದೆ.

ಡಾ. ಅನಾಮಿಕ ಅನು: 1982ರ ಜನವರಿ 1ರಂದು ಮುಜಫ್ಫರ್‌ಪುರದಲ್ಲಿ ಜನಿಸಿ ಪ್ರಸ್ತುತ ಕೇರಳದಲ್ಲಿ ವಾಸವಾಗಿರುವ ಡಾ. ಅನಾಮಿಕಾ ಅನು ಪ್ರಮುಖ ಕವಯತ್ರಿ, ಕಥೆಗಾರ್ತಿ ಮತ್ತು ಅನುವಾದಕಿ. ಭಾರತ ಭೂಷಣ ಅಗ್ರವಾಲ್ ಪ್ರಶಸ್ತಿ, ರಝಾ ಫೆಲೋಶಿಪ್ ಸೇರಿದಂತೆ ಹಲವು ಗೌರವಗಳು ಸಂದಿವೆ. ‘ಇಂಜಿಕರಿ’, ‘ಮೈ ದೀವಾರೋ ಪರ್ ಖಿಡಕಿಯಾ ಲಿಖ್ ರಹಿ ಹೂಂ’ ಮತ್ತು ‘ಯೆನಪಕ್ ಕಥಾ’ ಅವರ ಪ್ರಮುಖ ಕೃತಿಗಳು. ಕೆ. ಸಚ್ಚಿದಾನಂದನ್ ಅವರ ಕವಿತೆಗಳ ಅನುವಾದ ಸೇರಿದಂತೆ ಹಲವು ಸಂಪಾದನಾ ಕೃತಿ ಮತ್ತು ಅನುವಾದಗಳನ್ನು ಮಾಡಿದ್ದಾರೆ. ಎಂಎಸ್‌ಸಿ ಚಿನ್ನದ ಪದಕ, ಜೊತೆಗೆ ಪಿಎಚ್‌ಡಿ ಪದವಿಯನ್ನು ಪಡೆದಿದ್ದಾರೆ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ