ನಗರಗಳು ಬೆಳೆಯುತ್ತಾ ಹೋದಂತೆ, ಪಟ್ಟಣಗಳು ಮತ್ತು ದೇಶಗಳು ರೂಪುಗೊಳ್ಳತೊಡಗಿದವು. ಒಂದೇ ದೇಶದಲ್ಲಿ ಹತ್ತಿರ ವಾಸಿಸುವ ಜನರು ಪರಸ್ಪರರನ್ನು ಹೆಚ್ಚು ಹೆಚ್ಚು ಅರ್ಥಮಾಡಿಕೊಳ್ಳತೊಡಗಿದರು. ಅವರು ತಮ್ಮಿಂದ ದೂರದಲ್ಲಿ ಬೇರೆ ದೇಶಗಳಲ್ಲಿ ವಾಸಿಸುವ ಜನರಿಗಿಂತ ತಾವೇ ಶ್ರೇಷ್ಟರು ಎಂದು ಯೋಚಿಸತೊಡಗಿದರು. ಅವರಿಗೆ ಅರ್ಥವಾಗದೇ ಇರುವುದೆಂದರೆ, ಅಷ್ಟೇಕೆ ಇಂದಿಗೂ ಜನರಿಗೆ ಅರ್ಥವಾಗದೇ ಉಳಿದಿರುವ ಸಂಗತಿಯೆಂದರೆ, ಒಬ್ಬರೊಡನೊಬ್ಬರು ಹೋರಾಡುವುದು ಮತ್ತು ಒಬ್ಬರನ್ನೊಬ್ಬರು ಕೊಲ್ಲುವುದು ಜನರು ಮಾಡಬಹುದಾದ ಮೂರ್ಖತನದ ನಡವಳಿಕೆ ಎಂಬುದು.
ಜವಾಹರಲಾಲ್‌ ನೆಹರೂ ತಮ್ಮ ಮಗಳು ಇಂದಿರಾಗಾಂಧಿಗೆ ಬರೆದಿದ್ದ ಪತ್ರಗಳನ್ನು ಸುಧಾ ಆಡುಕಳ ಕನ್ನಡಕ್ಕೆ ಅನುವಾದಿಸಿದ್ದು, ಮಕ್ಕಳ ದಿನಾಚರಣೆಯ ಈ ದಿನ ಅವುಗಳಲ್ಲಿನ ಮೂರು ಪತ್ರಗಳು ನಿಮ್ಮ ಓದಿಗೆ ಇಲ್ಲಿವೆ…

ಪ್ರಕೃತಿಯೆಂಬ ಪುಸ್ತಕ

ನಾವಿಬ್ಬರೂ ಒಟ್ಟಿಗೆ ಇರುವಾಗ ನೀನು ನನಗೆ ಅದೆಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದೆ! ನಾನು ಅವುಗಳಿಗೆಲ್ಲ ಉತ್ತರ ನೀಡಲು ಪ್ರಯತ್ನಿಸುತ್ತಿದ್ದೆ. ನೀನೀಗ ಮಸ್ಸೂರಿಯಲ್ಲಿರುವೆ ಮತ್ತು ನಾನು ಅಲಹಾಬಾದಿನಲ್ಲಿ. ಹಾಗಾಗಿ ನಮ್ಮ ಪ್ರಶ್ನೋತ್ತರವು ನಿಂತುಹೋಗಿದೆ. ನಿನಗೆ ನಾನೀಗ ಚಿಕ್ಕ ಮತ್ತು ದೊಡ್ಡ ದೇಶಗಳಾಗಿ ವಿಭಾಗಿಸಲ್ಪಟ್ಟಿರುವ ಈ ಭೂಮಿಯ ಕಥೆಯನ್ನು ಸಂಕ್ಷಿಪ್ತವಾಗಿ ಪತ್ರಗಳ ಮೂಲಕ ಹೇಳಲು ಪ್ರಯತ್ನಿಸುತ್ತೇನೆ. ನೀನೀಗಾಗಲೇ ಇಂಗ್ಲೆಂಡಿನ ಇತಿಹಾಸ ಮತ್ತು ಭಾರತದ ಇತಿಹಾಸದ ಬಗ್ಗೆ ಸ್ವಲ್ಪ ತಿಳಿದುಕೊಂಡಿರುವೆ. ಆದರೆ ಇಂಗ್ಲೆಂಡ್ ಎಂಬುದು ಒಂದು ಸಣ್ಣ ದ್ವೀಪ ಮತ್ತು ನಮ್ಮ ಭಾರತವು ಸುಮಾರಾಗಿ ದೊಡ್ಡ ದೇಶವೇ ಆಗಿದ್ದರೂ ಅದು ಭೂಮಿಯ ಮೇಲಿನ ಒಂದು ಚಿಕ್ಕ ಭೂಭಾಗವಷ್ಟೆ. ಹಾಗಾಗಿ ನಾವು ಈ ಜಗತ್ತಿನ ಇತಿಹಾಸವನ್ನು ತಿಳಿಯಬೇಕೆಂದರೆ ಅದರಲ್ಲಿರುವ ಎಲ್ಲ ದೇಶಗಳ ಬಗ್ಗೆ, ಅಲ್ಲಿ ವಾಸಿಸುತ್ತಿರುವ ಎಲ್ಲ ಜನರ ಬಗ್ಗೆಯೂ ತಿಳಿದುಕೊಳ್ಳಬೇಕು, ಕೇವಲ ನಮ್ಮ ತಾಯ್ನಾಡಿನ ಬಗ್ಗೆ ಮಾತ್ರವಲ್ಲ.

ಜಗತ್ತಿನ ಇತಿಹಾಸದ ಬಗ್ಗೆ ಎಲ್ಲವನ್ನೂ ಪತ್ರಗಳಲ್ಲಿ ಹೇಳಲಾಗದು ಎಂಬ ಅಳುಕು ನನಗಿದೆ. ಆದರೆ ನಾನು ಹೇಳುವ ಸ್ವಲ್ಪವೇ ವಿಷಯಗಳು ನಿನ್ನಲ್ಲಿ ಇನ್ನಷ್ಟು ತಿಳಿಯುವ ಆಸಕ್ತಿಯನ್ನು ಬೆಳೆಸಬಲ್ಲದು, ಜಗತ್ತನ್ನು ಇಡಿಯಾಗಿ ಗ್ರಹಿಸಲು ಸಹಕಾರಿಯಾಗಬಲ್ಲುದು ಮತ್ತು ಜಗತ್ತಿನಲ್ಲಿರುವ ಎಲ್ಲರನ್ನೂ ಸಹೋದರ ಭಾವದಿಂದ ನೋಡಲು ಸಹಾಯಕವಾಗಬಲ್ಲುದು ಎಂಬ ಭರವಸೆ ನನಗಿದೆ. ನೀನು ದೊಡ್ಡವಳಾದ ಮೇಲೆ ಭೂಮಿಯ ಇತಿಹಾಸದ ಬಗ್ಗೆ ದೊಡ್ಡ, ದೊಡ್ಡ ಪುಸ್ತಕಗಳನ್ನು ಓದಬಹುದು ಮತ್ತು ಆ ಪುಸ್ತಕಗಳು ನೀನು ಓದಿರುವ ಯಾವುದೇ ಕಾದಂಬರಿಗಳಿಗಿಂತ ಹೆಚ್ಚು ಆಸಕ್ತದಾಯಕವಾಗಿರುತ್ತವೆ.

ನಿನಗೆ ಈಗಾಗಲೇ ತಿಳಿದಿರುವಂತೆ ಈ ನಮ್ಮ ಭೂಮಿ ಬಹಳ ಹಳೆಯದು, ಅಂದರೆ ಮಿಲಿಯನ್‌ಗಟ್ಟಲೇ ವರ್ಷಗಳಷ್ಟು ಹಳೆಯದು. ಬಹಳ ಹಿಂದೆ ಭೂಮಿಯಲ್ಲಿ ಮನುಷ್ಯರೇ ಇರಲಿಲ್ಲ. ಮನುಷ್ಯರು ಬರುವ ಮೊದಲು ಕೇವಲ ಪ್ರಾಣಿಗಳಿದ್ದವು ಮತ್ತು ಅದಕ್ಕಿಂತ ಮೊದಲು ಜೀವರಾಶಿಯೇ ಇಲ್ಲಿ ಇರಲಿಲ್ಲ. ಮನುಷ್ಯರು ಮತ್ತು ಪ್ರಾಣಿಗಳೇ ಇಲ್ಲದ ಭೂಮಿಯನ್ನು ಈಗ ಊಹಿಸಿಕೊಳ್ಳಲು ಕಷ್ಟವೆನಿಸುತ್ತದೆ. ಆದರೆ ಭೂಮಿಯ ಇತಿಹಾಸದ ಬಗ್ಗೆ ಅಧ್ಯಯನವನ್ನು ಮಾಡಿದ ವಿಜ್ಞಾನಿಗಳ ಪ್ರಕಾರ ಬಹಳ ವರ್ಷಗಳ ಹಿಂದೆ ಭೂಮಿಯು ಯಾವುದೇ ಜೀವರಾಶಿಯು ಜೀವಿಸಲಾರದಷ್ಟು ಬಿಸಿಯಾಗಿತ್ತು. ನಮಗೆ ಈಗ ಸಿಗುವ ಪಳೆಯುಳಿಕೆಗಳು ಮತು ಬಂಡೆಗಳ ಅಧ್ಯಯನದಿಂದ ಮತ್ತು ಸಂಶೋಧಕರ ಬರಹಗಳಿಂದ ಅವರು ಹೇಳಿದ್ದರಲ್ಲಿ ಸತ್ಯವಿದೆಯೆಂದು ಅರಿವಾಗುತ್ತದೆ.

ನೀನು ಇತಿಹಾಸವನ್ನು ಈಗ ಪುಸ್ತಕಗಳಲ್ಲಿ ಓದುವೆ. ಆದರೆ ಬಹಳ ಹಿಂದೆ ಮನುಷ್ಯರೇ ಇಲ್ಲದಿದ್ದ ಕಾಲದಲ್ಲಿ ಯಾವ ಪುಸ್ತಕಗಳನ್ನೂ ಬರೆದಿಡಲು ಸಾಧ್ಯವಿಲ್ಲ. ಆಗ ಏನಾಗಿದೆಯೆಂದು ತಿಳಿಯುವುದಾದರೂ ಹೇಗೆ? ನಾವು ಸುಮ್ಮನೆ ಕುಳಿತು ಎಲ್ಲವನ್ನೂ ಊಹಿಸಿ ಹೇಳಲು ಸಾಧ್ಯವಿಲ್ಲ. ಹಾಗೆ ಕುಳಿತು ನಮಗೆ ಹೊಳೆದಂತೆ ಚಂದದ ಕಿನ್ನರ ಕಥೆಗಳನ್ನು ಕಟ್ಟಬಹುದಾದರೂ ಅವುಗಳೆಲ್ಲ ಸತ್ಯವಾಗಿರಲು ಸಾಧ್ಯವಿಲ್ಲ. ಯಾಕೆಂದರೆ ಅವುಗಳೆಲ್ಲ ನಾವು ನೋಡಿದ ಘಟನೆಗಳನ್ನು ಆಧರಿಸಿ ಇರುವುದಿಲ್ಲ. ಆ ಕಾಲದಲ್ಲಿ ಪುಸ್ತಕಗಳೇ ಇಲ್ಲವಾದರೂ ನಮ್ಮ ಅದೃಷ್ಟಕ್ಕೆ ಪುಸ್ತಕಗಳಂತೆ ಮಾಹಿತಿಗಳನ್ನು ನೀಡಬಲ್ಲ ಕೆಲವು ಆಧಾರಗಳಿವೆ. ಬಂಡೆಗಳು, ಪರ್ವತಗಳು, ಸಮುದ್ರ, ನಕ್ಷತ್ರಗಳು, ನದಿಗಳು, ಮರಳುಗಾಡುಗಳು, ಹಳೆಯ ಪ್ರಾಣಿಗಳ ಅವಶೇಷಗಳು ಇವೆಲ್ಲವೂ ಪುಸ್ತಕಗಳಂತೆ ಆ ಕಾಲದ ಕಥೆಗಳನ್ನು ಹೇಳುತ್ತವೆ. ಇವೆಲ್ಲವೂ ಭೂಮಿಯ ಇತಿಹಾಸವನ್ನು ಸಾರುವ ಪುಸ್ತಕಗಳೇ ಆಗಿವೆ. ಆದ್ದರಿಂದ ಭೂಮಿಯ ಇತಿಹಾಸವನ್ನು ತಿಳಿಯುವುದೆಂದರೆ ಕೇವಲ ಕಾಗದದ ಪುಸ್ತಕಗಳನ್ನು ಮಾತ್ರ ಓದುವುದಲ್ಲ; ಪ್ರಕೃತಿಯೆಂಬ ಭವ್ಯವಾದ ಪುಸ್ತಕವನ್ನೂ ನಾವು ಓದಬೇಕು. ಬಂಡೆಗಳು ಮತ್ತು ಪರ್ವತಗಳ ಪುಟಗಳನ್ನು ಹೇಗೆ ಓದಬಹುದೆಂಬುದನ್ನು ನೀನು ಬಹಳ ಬೇಗ ಕಲಿತುಕೊಳ್ಳುವೆಯೆಂಬ ಭರವಸೆ ನನಗಿದೆ. ಎಂಥ ರೋಮಾಂಚಕಾರಿಯಾದ ಓದು ಇದು! ರಸ್ತೆಯಲ್ಲಿ ಅಥವಾ ಪರ್ವತಗಳ ಕೆಳಗೆ ಬಿದ್ದಿರುವ ಒಂದು ಚಿಕ್ಕ ಕಲ್ಲು ಕೂಡ ಭೂಮಿಯ ಇತಿಹಾಸದ ಒಂದು ಪುಟವೇ ಆಗಿದೆ. ಹಿಂದಿ, ಉರ್ದು ಅಥವಾ ಇಂಗ್ಲಿಷ್ ಯಾವುದೇ ಭಾಷೆಯಿರಲಿ, ಓದುವ ಮೊದಲು ನೀನು ಆ ಭಾಷೆಯ ಅಕ್ಷರಗಳನ್ನು ಕಲಿಯುವಿಯಲ್ಲವೆ? ಹಾಗೆಯೆ ಭೂಮಿಯ ಕಥೆಯನ್ನು ಓದಲು ನೀನು ಪ್ರಕೃತಿಯ ಅಕ್ಷರಮಾಲೆಯನ್ನು ಕಲಿಯಬೇಕು. ಈಗಾಗಲೇ ನೀನು ಪ್ರಕೃತಿಯ ಭಾಷೆಯ ಕೆಲವು ಪದಗಳನ್ನು ಓದಲು ಕಲಿತಿರುವೆ ಎಂದು ನನಗೆ ತಿಳಿದಿದೆ.

ಒಂದು ನಯವಾದ ಬೆಣಚುಕಲ್ಲನ್ನು ನೀನು ನೋಡುವೆ ಎಂದಿಟ್ಟುಕೊಳ್ಳೋಣ. ಅದು ನಿನಗೆ ಸುಮಾರು ಕಥೆಯನ್ನು ಹೇಳುವುದಿಲ್ಲವೇನು? ಅದು ತನ್ನ ಚೂಪು ಮತ್ತು ಒರಟುತನವನ್ನು ಕಳೆದುಕೊಂಡು ಅಷ್ಟು ನುಣುಪಾದದ್ದಾದರೂ ಹೇಗೆ? ಬಂಡೆಯನ್ನು ಚೂರು ಮಾಡಿದಾಗ ಸಿಗುವ ಕಲ್ಲಿನಲ್ಲಿ ಎಷ್ಟೊಂದು ಮೂಲೆಗಳಿರುತ್ತವೆ ಮತ್ತು ಅದು ಎಷ್ಟು ಒರಟಾಗಿರುತ್ತದೆಯಲ್ಲವೆ? ಆದರೆ ಈ ಬೆಣಚುಗಲ್ಲು ಗಾಜಿನಷ್ಟು ನುಣುಪಾಗಿದೆ. ಅಷ್ಟೊಂದು ನುಣುಪು, ಹೊಳಪು ಮತ್ತು ಗುಂಡಗಿನ ಆಕಾರವನ್ನು ಬೆಣಚುಗಲ್ಲು ಪಡೆದುದಾದರೂ ಹೇಗೆ? ನಿನಗೆ ನೋಡುವ ಕಣ್ಣಿದ್ದರೆ ಮತ್ತು ಕೇಳುವ ಕಿವಿಯಿದ್ದರೆ ಬೆಣಚುಗಲ್ಲು ತನ್ನ ಕಥೆಯನ್ನು ನಿನ್ನೊಡನೆ ಹೇಳಬಲ್ಲುದು. ಅದು ಹೇಳುತ್ತದೆ, ಬಹಳ ಕಾಲದ ಹಿಂದೆ ಅದು ಕೂಡ ಒಂದು ಬಂಡೆಯ ಚೂರೇ ಆಗಿತ್ತು. ತನ್ನ ಒರಟಾದ ಮೇಲ್ಮೈ ಮತ್ತು ಮೂಲೆಗಳೊಂದಿಗೆ ಅದು ಪರ್ವತದ ಬುಡದಲ್ಲೆಲ್ಲೋ ಬಿದ್ದಿತ್ತು. ಜೋರಾಗಿ ಸುರಿದ ಮಳೆ ಅದನ್ನು ಪರ್ವತದ ಕಣಿವೆಯೊಳಗೆ ಜಾರುವಂತೆ ಮಾಡಿತು. ಹರಿವ ತೊರೆಯೊಂದಿಗೆ ಉರುಳುತ್ತಾ ಅದು ಒಂದು ಸಣ್ಣ ನದಿಯನ್ನು ಸೇರಿತು. ಸಣ್ಣ ನದಿಯ ತಳದಲ್ಲಿ ಉರುಳುತ್ತಾ ದೊಡ್ಡ ನದಿಯ ಒಡಲನ್ನು ಅದು ಸೇರಿತು. ನದಿಯ ತಳದಲ್ಲಿ ವೇಗವಾಗಿ ಉರುಳುತ್ತಾ ಹೋದಂತೆ ಮೇಲ್ಮೈ ಘರ್ಷಣೆಯಿಂದ ಅದು ನಯವಾಗುತ್ತಾ, ಗುಂಡಗಾಗುತ್ತಾ, ಹೊಳಪು ಪಡೆಯುತ್ತಾ ಹೋಯಿತು. ಅನೇಕ ವರ್ಷಗಳ ನಂತರ ಅದು ನೀನೀಗ ಕಾಣುವ ರೂಪವನ್ನು ಪಡೆದುಕೊಂಡಿತು. ನದಿಯು ಎಲ್ಲೋ ಅದನ್ನು ದಡಕ್ಕೆ ದೂಡಿದ್ದರಿಂದ ಅದು ಕಲ್ಲಿನ ರೂಪದಲ್ಲೇ ಉಳಿದಿದೆ. ಇಲ್ಲವಾದರೆ ನದಿಯ ಹೊಡೆತಕ್ಕೆ ಸಿಕ್ಕಿ ಇನ್ನಷ್ಟು ಚೂರಾಗಿ ಒಡೆದು ಕಡಲನ್ನು ಸೇರಿ, ದಂಡೆಯ ಮರಳಿನ ಕಣವಾಗಿ ಬದಲಾಗುತ್ತಿತ್ತು. ಆ ಮರಳಿನ ದಂಡೆಯಲ್ಲಿ ಕುಳಿತು ನಿನ್ನಂತಹ ಮಕ್ಕಳು ಮರಳಿನ ಮನೆಯನ್ನು ಕಟ್ಟುತ್ತಿದ್ದರು!

ಇಷ್ಟು ಚಿಕ್ಕ ಬೆಣಚು ಕಲ್ಲೊಂದು ಇಷ್ಟೆಲ್ಲಾ ಕಥೆಯನ್ನು ಹೇಳುತ್ತದೆ ಎಂದಾದರೆ, ಇನ್ನು ದೊಡ್ಡ ದೊಡ್ಡ ಬಂಡೆಗಳು, ಪರ್ವತಗಳು ಮತ್ತು ನಾವು ಪ್ರಕೃತಿಯಲ್ಲಿ ದಿನನಿತ್ಯ ನೋಡುವ ಇತರ ವಸ್ತುಗಳಿಂದ ಎಷ್ಟೊಂದನ್ನು ಕಲಿಯಬಹುದಲ್ಲವೆ?

ಇತಿಹಾಸವು ಹೇಗೆ ಬರೆಯಲ್ಪಟ್ಟಿದೆ?

ನಿನ್ನೆಯ ನನ್ನ ಪತ್ರದಲ್ಲಿ, ಪ್ರಕೃತಿಯ ಪುಸ್ತಕವನ್ನು ಓದುವುದರ ಮೂಲಕ ಹೇಗೆ ಜಗತ್ತಿನ ಇತಿಹಾಸವನ್ನು ತಿಳಿಯಬಹುದೆಂಬುದನ್ನು ನಿನಗೆ ಹೇಳಿರುವೆ. ಪ್ರಕೃತಿಯೆಂಬ ಪುಸ್ತಕದಲ್ಲಿ ನೀನು ದಿನನಿತ್ಯವೂ ನೋಡುವ ಕಣಿವೆ, ಪರ್ವತ, ನದಿಗಳು, ಸಮುದ್ರಗಳು ಮತ್ತು ಜ್ವಾಲಾಮುಖಿಗಳು ಎಲ್ಲವೂ ಇವೆ. ಈ ಪುಸ್ತಕವು ನಮ್ಮೆದುರು ಸದಾ ತೆರೆದೇ ಇರುತ್ತದೆ, ಆದರೆ ಕೆಲವರು ಮಾತ್ರವೇ ಅದನ್ನು ಗಮನಿಸುತ್ತಾರೆ ಮತ್ತು ಓದಲು ಪ್ರಯತ್ನಿಸುತ್ತಾರೆ! ನಾವು ಈ ಪುಸ್ತಕವನ್ನು ಓದಲು ಕಲಿತರೆ, ಅರ್ಥಮಾಡಿಕೊಳ್ಳಲು ಕಲಿತರೆ, ಎಷ್ಟೆಲ್ಲ ಆಸಕ್ತಿಕರವಾದ ಕಥೆಗಳನ್ನು ಅವು ಹೇಳಬಲ್ಲವು! ನಿಜಕ್ಕೂ ಕಲ್ಲಿನ ಪುಟಗಳು ಹೇಳುವ ಕಥೆಗಳು ಕಿನ್ನರಿಯ ಕಥೆಗಳಿಗಿಂತಲು ಆಸಕ್ತಿಕರವಾಗಿರುತ್ತವೆ.

ಹೀಗೆ ಪ್ರಕೃತಿಯೆಂಬ ಪುಸ್ತಕವು ಹೇಳುವ ಕಥೆಗಳ ಮೂಲಕವೇ, ಮನುಷ್ಯರಿನ್ನೂ ಹುಟ್ಟಿರದ ಬಹಳ ಹಿಂದಿನ ಕಾಲದ ನಮ್ಮ ಭೂಮಿಯ ಸಂಗತಿಗಳನ್ನು ನಾವು ಕಲಿಯಬಹುದು. ಹಾಗೇ ಓದುತ್ತಾ ಹೋದಂತೆ, ಮೊದಲ ಜೀವಿ ಭೂಮಿಯ ಮೇಲೆ ಬಂದಿದ್ದು ಮತ್ತು ನಂತರ ಅನೇಕ ಪ್ರಾಣಿಗಳು ಹುಟ್ಟಿದ್ದು ಎಲ್ಲವೂ ತಿಳಿಯುತ್ತಾ ಹೋಗುತ್ತದೆ. ಆನಂತರ ಗಂಡಸರು ಮತ್ತು ಹೆಂಗಸರು ಭೂಮಿಯಲ್ಲಿ ಹುಟ್ಟಿದರು, ಆದರೆ ಅವರಿಬ್ಬರೂ ಈಗಿರುವುದಕ್ಕಿಂತ ಸಂಪೂರ್ಣ ಬೇರೆಯೇ ಆಗಿದ್ದರು. ಅವರು ಇತರ ಪ್ರಾಣಿಗಳಿಗಿಂತ ತೀರ ಭಿನ್ನವಾಗಿಯೇನೂ ಇರಲಿಲ್ಲ. ನಿಧಾನವಾಗಿ ಅವರು ಅನುಭವಿಗಳಾದರು ಮತ್ತು ಯೋಚನಾಶಕ್ತಿಯನ್ನು ಬೆಳೆಸಿಕೊಂಡರು. ಯೋಚಿಸುವ ಶಕ್ತಿಯೇ ಅವರನ್ನು ಇತರ ಪ್ರಾಣಿಗಳಿಗಿಂತ ಬೇರೆಯಾಗಿಸಿತು. ಅದೇ ಶಕ್ತಿಯು ಅವರನ್ನು ದೊಡ್ಡ ಮತ್ತು ಕ್ರೂರ ಪ್ರಾಣಿಗಳಿಗಿಂತಲೂ ಬಲಶಾಲಿಯಾಗಿಸಿತು. ಇಂದು ಅತಿದೊಡ್ಡ ಪ್ರಾಣಿಯಾದ ಆನೆಯ ಮೇಲೆ ಮನುಷ್ಯನೊಬ್ಬ ಕುಳಿತು ತಾನು ಹೇಳಿದಂತೆ ಕೇಳಿಸುವ ದೃಶ್ಯವನ್ನು ನೀನು ನೋಡಬಹುದು. ಆನೆ ದೊಡ್ಡದು ಹಾಗೂ ಬಲಶಾಲಿಯಾಗಿದ್ದು ತನ್ನ ಬೆನ್ನಿನ ಮೇಲೆ ಕುಳಿತುಕೊಳ್ಳುವ ಮಾವುತನಿಗಿಂತ ತೀರ ಶಕ್ತಿಯುತ ಪ್ರಾಣಿ. ಆದರೆ ಮಾವುತನಿಗೆ ಯೋಚನಾಶಕ್ತಿಯಿದೆ ಮತ್ತು ಯೋಚಿಸುವ ಕಾರಣದಿಂದಲೇ ಅವನು ಮಾಲೀಕನಾಗುತ್ತಾನೆ ಮತ್ತು ಆನೆಯನ್ನು ತನ್ನ ಸೇವಕನನ್ನಾಗಿ ಮಾಡಿಕೊಳ್ಳುತ್ತಾನೆ. ಹೀಗೆ, ಯೋಚನಾಶಕ್ತಿ ಬೆಳೆಯುತ್ತಾ ಹೋದಂತೆ ಮನುಷ್ಯ ಬೆಂಕಿಯನ್ನು ಹೇಗೆ ಮಾಡುವುದು, ಭೂಮಿಯನ್ನು ಹೇಗೆ ಹದಗೊಳಿಸುವುದು, ಬೆಳೆಯನ್ನು ಹೇಗೆ ಬೆಳೆಯುವುದು, ಬಟ್ಟೆಯನ್ನು ಹೇಗೆ ತಯಾರಿಸುವುದು ಮತ್ತು ಮನೆಯನ್ನು ಹೇಗೆ ಕಟ್ಟುವುದು ಎಂಬುದನ್ನೆಲ್ಲ ಕಂಡುಹಿಡಿದ. ಅನೇಕ ಜನರು ಒಟ್ಟಿಗೆ ವಾಸಿಸತೊಡಗಿದರು ಮತ್ತು ಹಾಗೆ ಮೊದಲ ಪಟ್ಟಣವೊಂದು ಹುಟ್ಟಿಕೊಂಡಿತು. ನಗರಗಳು ಹುಟ್ಟಿಕೊಳ್ಳುವ ಮೊದಲು ಮನುಷ್ಯ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಲಸೆ ಹೋಗುತ್ತಿದ್ದ ಮತ್ತು ಬಹುಶಃ ಸಣ್ಣ ಗುಡಿಸಲುಗಳಲ್ಲಿ ವಾಸಿಸುತ್ತಿದ್ದ. ಈ ಹಂತದಲ್ಲಿ ಮನುಷ್ಯರಿಗೆ ಬೆಳೆಯನ್ನು ಬೆಳೆಯುವುದು ಹೇಗೆಂದು ತಿಳಿದಿರಲಿಲ್ಲ. ಹಾಗಾಗಿ ಅವರಲ್ಲಿ ರೊಟ್ಟಿಯನ್ನು ತಯಾರಿಸಲು ಬೇಕಾದ ಅಕ್ಕಿಯಾಗಲೀ, ಗೋದಿಯಾಗಲೀ ಇರಲಿಲ್ಲ. ತರಕಾರಿಗಳ ಪರಿಚಯ ಇರಲಿಲ್ಲ ಮತ್ತು ಇಂದು ತಿನ್ನುವ ಅನೇಕ ಆಹಾರ ಧಾನ್ಯಗಳ ಪರಿಚಯವೂ ಇರಲಿಲ್ಲ. ಕೆಲವು ಗಡ್ಡೆ ಗೆಣಸುಗಳು ಮತ್ತು ಹಣ್ಣುಗಳನ್ನಷ್ಟೇ ಅವರು ತಿನ್ನುತ್ತಿದ್ದಿರಬೇಕು, ಉಳಿದಂತೆ ಪ್ರಾಣಿಗಳನ್ನು ಬೇಟೆಯಾಡಿ ತಿಂದು ಅವರು ಜೀವಿಸುತ್ತಿದ್ದರು.

ನಗರಗಳು ಬೆಳೆದಂತೆ ಜನರು ಅನೇಕ ಸೃಜನಶೀಲ ಕಲೆಗಳನ್ನು ಕಲಿತರು. ಅವರು ಬರೆಯುವುದನ್ನೂ ಕೂಡ ಕಲಿತರು. ಆದರೆ ಅನೇಕ ವರ್ಷಗಳ ಕಾಲ ಬರೆಯಲು ಕಾಗದವೇ ಇರಲಿಲ್ಲ, ಆಗ ಜನರು ಭೋಜಪತ್ರವೆಂಬ ಎಲೆಯ ಮೇಲೆ ಬರೆಯುತ್ತಿದ್ದರು, ಅಥವಾ ತಾಳೆಗರಿಗಳ ಮೇಲೆ ಬರೆಯುತ್ತಿದ್ದರು. ಈಗಲೂ ಕೂಡ ಕೆಲವು ಲೈಬ್ರರಿಗಳಲ್ಲಿ ತಾಳೆಗರಿಗಳಲ್ಲಿಯೇ ಪೂರ್ಣವಾಗಿ ಬರೆದಿರುವ ಗ್ರಂಥಗಳನ್ನು ಕಾಣಬಹುದಾಗಿದೆ. ಅದಾದ ನಂತರ ಜನರು ಕಾಗದ ತಯಾರಿಸುವುದನ್ನು ಕಲಿತರು ಮತ್ತು ಬರೆಯುವುದು ಅತ್ಯಂತ ಸುಲಭವಾಯಿತು. ಆದರೆ ಮುದ್ರಣ ಮಾಡುವ ವ್ಯವಸ್ಥೆ ಆಗ ಇರಲಿಲ್ಲ, ಹಾಗಾಗಿ ಈಗಿನಂತೆ ಸಾವಿರಾರು ಪುಸ್ತಕಗಳನ್ನು ಮುದ್ರಿಸಲು ಸಾಧ್ಯವಿರಲಿಲ್ಲ. ಒಂದು ಪುಸ್ತಕವನ್ನು ಒಮ್ಮೆ ಪೂರ್ಣವಾಗಿ ಬರೆದ ನಂತರ ಅದನ್ನು ಬಹಳ ಪ್ರಯಾಸದಿಂದ ನಕಲು ಪ್ರತಿಯನ್ನು ಮಾಡಿ ಬೇರೆ ಪುಸ್ತಕವನ್ನು ತಯಾರಿಸುತ್ತಿದ್ದರು. ಹಾಗಾಗಿ ಪುಸ್ತಕಗಳು ಕೂಡ ಹೆಚ್ಚಿಗೆ ಇರುತ್ತಿರಲಿಲ್ಲ. ಆಗಿನ ಕಾಲದಲ್ಲಿ ಈಗಿನಂತೆ ಪುಸ್ತಕದ ಅಂಗಡಿಗೆ ಸೀದಾ ಹೋಗಿ ಪುಸ್ತಕವನ್ನು ಖರೀದಿಸಿ ತರಲಾಗುತ್ತಿರಲಿಲ್ಲ. ಬೇರೆ ಯಾರಾದರೂ ಅದನ್ನು ನಕಲು ಮಾಡಿಯೇ ಇನ್ನೊಂದು ಪುಸ್ತಕವನ್ನು ತಯಾರಿಸಬೇಕಿತ್ತು, ಮತ್ತದಕ್ಕೆ ಬಹಳ ಸಮಯ ಹಿಡಿಯುತ್ತಿತ್ತು. ಆದರೆ ಆಗಿನ ಜನರು ಬಹಳ ಸುಂದರವಾಗಿ ಬರೆಯುತ್ತಿದ್ದರು ಮತ್ತು ಇಂದಿಗೂ ಕೂಡ ಅವರು ಬರೆದ ಸುಂದರ ಕೈಬರಹದ ಅನೇಕ ಪುಸ್ತಕಗಳನ್ನು ಗ್ರಂಥಾಲಯಗಳಲ್ಲಿ ಕಾಣಬಹುದಾಗಿದೆ. ನಮ್ಮ ದೇಶದಲ್ಲಿ ವಿಶೇಷವಾಗಿ ಸಂಸ್ಕೃತ, ಉರ್ದು ಮತ್ತು ಪರ್ಶಿಯನ್ ಭಾಷೆಯ ಪುಸಕಗಳಿದ್ದವು. ಪುಸ್ತಕವನ್ನು ನಕಲು ಮಾಡುವವರು ಸಾಮಾನ್ಯವಾಗಿ ಅಂಚುಗಳಲ್ಲಿ ಚಂದದ ಹೂವು ಮತ್ತು ಚಿತ್ರಗಳನ್ನು ಕೂಡ ಬಿಡಿಸುತ್ತಿದ್ದರು.

ನಗರಗಳು ಬೆಳೆಯುತ್ತಾ ಹೋದಂತೆ, ಪಟ್ಟಣಗಳು ಮತ್ತು ದೇಶಗಳು ರೂಪುಗೊಳ್ಳತೊಡಗಿದವು. ಒಂದೇ ದೇಶದಲ್ಲಿ ಹತ್ತಿರ ವಾಸಿಸುವ ಜನರು ಪರಸ್ಪರರನ್ನು ಹೆಚ್ಚು ಹೆಚ್ಚು ಅರ್ಥಮಾಡಿಕೊಳ್ಳತೊಡಗಿದರು. ಅವರು ತಮ್ಮಿಂದ ದೂರದಲ್ಲಿ ಬೇರೆ ದೇಶಗಳಲ್ಲಿ ವಾಸಿಸುವ ಜನರಿಗಿಂತ ತಾವೇ ಶ್ರೇಷ್ಟರು ಎಂದು ಯೋಚಿಸತೊಡಗಿದರು ಮತ್ತು ಕೆಲವೊಮ್ಮೆ ಮೂರ್ಖತನದಿಂದ ಅವರೊಂದಿಗೆ ಯುದ್ಧವನ್ನು ಮಾಡತೊಡಗಿದರು. ಅವರಿಗೆ ಅರ್ಥವಾಗದೇ ಇರುವುದೆಂದರೆ, ಅಷ್ಟೇಕೆ ಇಂದಿಗೂ ಜನರಿಗೆ ಅರ್ಥವಾಗದೇ ಉಳಿದಿರುವ ಸಂಗತಿಯೆಂದರೆ, ಒಬ್ಬರೊಡನೊಬ್ಬರು ಹೋರಾಡುವುದು ಮತ್ತು ಒಬ್ಬರನ್ನೊಬ್ಬರು ಕೊಲ್ಲುವುದು ಜನರು ಮಾಡಬಹುದಾದ ಮೂರ್ಖತನದ ನಡವಳಿಕೆ ಎಂಬುದು. ಯುದ್ಧ ಯಾರಿಗೂ ಒಳಿತನ್ನು ಮಾಡುವುದಿಲ್ಲ.

ನಗರಗಳು ಮತ್ತು ದೇಶಗಳು ಹುಟ್ಟಿದ ಹಿಂದಿನ ಕಾಲದ ಕಥೆಯನ್ನು ತಿಳಿದುಕೊಳ್ಳಲು ಕೆಲವು ಹಳೆಯ ಪುಸ್ತಕಗಳು ಸಹಾಯಕವಾಗಿವೆ. ಆದರೆ ಹೆಚ್ಚು ಪುಸ್ತಕಗಳೇನೂ ಲಭ್ಯವಿಲ್ಲ. ಇವುಗಳ ಬಗ್ಗೆ ತಿಳುವಳಿಕೆ ನೀಡಬಲ್ಲ ಅನೇಕ ಇತರ ವಿಷಯಗಳಿವೆ. ಹಿಂದಿನ ಕಾಲದ ಚಕ್ರವರ್ತಿಗಳು ಮತ್ತು ರಾಜ ಮಹಾರಾಜರು ಕಲ್ಲು ಮತ್ತು ಕಂಬಗಳ ಮೇಲೆ ಅನೇಕ ಶಾಸನಗಳನ್ನು ಬರೆಸಿದ್ದಾರೆ. ಪುಸ್ತಕಗಳು ಬಹಳ ಕಾಲ ಉಳಿಯಲಾರವು. ಅವುಗಳ ಕಾಗದಗಳು ಮಾಸಲಾಗುತ್ತವೆ ಮತ್ತು ಕೀಟಗಳಿಗೆ ಆಹಾರವಾಗುತ್ತವೆ. ಆದರೆ ಕಲ್ಲಿನಲ್ಲಿ ಬರೆದ ಬರಹಗಳು ಬಹಳ ಕಾಲ ಉಳಿಯುತ್ತವೆ. ಅಲಹಾಬಾದಿನಲ್ಲಿ ಅಶೋಕ ಸ್ತಂಭವನ್ನು ನೋಡಿದ ನೆನಪು ನಿನಗಿರಬಹುದು ಎಂದುಕೊಳ್ಳುವೆ. ಈ ಕಂಬದ ಮೇಲೆ ಸಾವಿರಾರು ವರ್ಷಗಳ ಹಿಂದೆ ಭಾರತದ ಪ್ರಸಿದ್ಧ ದೊರೆಯಾದ ಅಶೋಕನ ಲಾಂಛನವನ್ನು ಕೆತ್ತಲಾಗಿದೆ. ನೀನು ಲಖ್ನೋ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದರೆ, ಅಲ್ಲಿ ಕಲ್ಲಿನಲ್ಲಿ ಕೆತ್ತಿದ ಅನೇಕ ಶಾಸನಗಳನ್ನು ನೋಡಬಹುದಾಗಿದೆ.

ಹಳೆಯ ಇತಿಹಾಸವನ್ನು ಓದುತ್ತಾ ಹೋದ ಹಾಗೆ ನಮಗೆ ಯುರೋಪಿನಲ್ಲಿ ನಾಗರಿಕತೆ ಕಣ್ತೆರೆಯುವ ಮುನ್ನವೇ ಚೀನಾ ಮತ್ತು ಈಜಿಪ್ತ ದೇಶಗಳು ಅನೇಕ ಸಂಶೋಧನೆಗಳನ್ನು ಮಾಡಿದ್ದವು ಎಂಬ ವಿಷಯವು ತಿಳಿಯುತ್ತದೆ. ರಾಮಾಯಣ ಮತ್ತು ಮಹಾಭಾರತದಂತಹ ಮಹತ್ವದ ಕೃತಿಗಳನ್ನು ಬರೆದ ಭಾರತವೂ ಶ್ರೀಮಂತ ಮತ್ತು ಶಕ್ತಿಶಾಲಿಯಾದ ರಾಷ್ಟçವಾಗಿತ್ತು. ಇಂದು ನಮ್ಮ ದೇಶವು ಬಹಳ ಬಡ ದೇಶವಾಗಿದೆ ಮತ್ತು ಪಾಶ್ಚಾತ್ಯ ರಾಷ್ಟ್ರವು ನಮ್ಮನ್ನು ಆಳುತ್ತಿದೆ. ನಮ್ಮ ದೇಶದಲ್ಲೇ ನಾವು ಸ್ವತಂತ್ರರಾಗಿಲ್ಲ ಮತ್ತು ನಮಗೆ ಬೇಕಾದ್ದನ್ನು ನಾವಿಲ್ಲಿ ಮಾಡುವಂತಿಲ್ಲ. ಆದರೆ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ನಾವು ಪರಿಶ್ರಮಪಟ್ಟರೆ ಇದು ಬಹಳ ಕಾಲ ಮುಂದುವರೆಯಲಾರದು ಮತ್ತು ನಾವು ಸ್ವತಂತ್ರಗೊಂಡು ನಮ್ಮ ದೇಶದಲ್ಲಿರುವ ಬಡವರ ಉದ್ದಾರವನ್ನು ಮಾಡಬಹುದು. ಆಗ ಯುರೋಪಿನ ಅನೇಕ ದೇಶಗಳಂತೆ ನಮ್ಮ ದೇಶವೂ ಜನರು ನೆಮ್ಮದಿಯಿಂದ ಉಳಿಯುವ ತಾಣವಾಗಬಹುದು. ನನ್ನ ಮುಂದಿನ ಪತ್ರದಲ್ಲಿ ನಾನು ನಿನಗೆ ನಮ್ಮ ಭೂಮಿಯು ಹುಟ್ಟಿದ ಕಥೆಯನ್ನು ಹೇಳುವೆ.

ನದಿಯು ಎಲ್ಲೋ ಅದನ್ನು ದಡಕ್ಕೆ ದೂಡಿದ್ದರಿಂದ ಅದು ಕಲ್ಲಿನ ರೂಪದಲ್ಲೇ ಉಳಿದಿದೆ. ಇಲ್ಲವಾದರೆ ನದಿಯ ಹೊಡೆತಕ್ಕೆ ಸಿಕ್ಕಿ ಇನ್ನಷ್ಟು ಚೂರಾಗಿ ಒಡೆದು ಕಡಲನ್ನು ಸೇರಿ, ದಂಡೆಯ ಮರಳಿನ ಕಣವಾಗಿ ಬದಲಾಗುತ್ತಿತ್ತು. ಆ ಮರಳಿನ ದಂಡೆಯಲ್ಲಿ ಕುಳಿತು ನಿನ್ನಂತಹ ಮಕ್ಕಳು ಮರಳಿನ ಮನೆಯನ್ನು ಕಟ್ಟುತ್ತಿದ್ದರು!

ಭೂಮಿ ಹುಟ್ಟಿದ್ದು ಹೀಗೆ

ನಿನಗೀಗಾಗಲೇ ತಿಳಿದಿರುವಂತೆ ಭೂಮಿಯು ಸೂರ್ಯನ ಸುತ್ತಲೂ ಚಲಿಸುತ್ತದೆ ಮತ್ತು ಚಂದ್ರ ಭೂಮಿಯ ಸುತ್ತಲೂ ಚಲಿಸುತ್ತಾನೆ. ಭೂಮಿಯಂತೆ ಸೂರ್ಯನನ್ನು ಸುತ್ತುವ ಇತರ ಕಾಯಗಳೂ ಇವೆಯೆಂದು ನಿನಗೆ ತಿಳಿದಿರಬೇಕಲ್ಲವೆ? ಭೂಮಿಯನ್ನು ಒಳಗೊಂಡಂತೆ ಇವೆಲ್ಲವನ್ನೂ ಸೇರಿಸಿ ‘ಸೂರ್ಯನ ಪರಿವಾರʼ ಎಂದು ಕರೆಯುತ್ತೇವೆ. ಚಂದ್ರನನ್ನು ಭೂಮಿಯ ಉಪಗ್ರಹವೆಂದು ಕರೆಯುತ್ತೇವೆ, ಏಕೆಂದರೆ ಇದು ಭೂಮಿಯ ಗುರುತ್ವಾಕರ್ಷಣ ಬಲಕ್ಕೆ ಒಳಪಟ್ಟಿದೆ. ಭೂಮಿಯಂತೆಯೇ ಇತರ ಗ್ರಹಗಳಿಗೂ ಅನೇಕ ಉಪಗ್ರಹಗಳಿವೆ. ಸೂರ್ಯ ಮತ್ತು ಗ್ರಹಗಳು ಹಾಗೂ ಅವುಗಳ ಉಪಗ್ರಹಗಳೆಲ್ಲವೂ ಸೂರ್ಯನ ಪರಿವಾರಕ್ಕೆ ಸೇರಿವೆ. ಸೂರ್ಯನ ಈ ಪರಿವಾರವನ್ನು ಸೌರವ್ಯೂಹವೆಂದು ಕರೆಯುತ್ತೇವೆ. ಸೌರ ಎಂದರೆ ಸೂರ್ಯನಿಗೆ ಸಂಬಂಧಿಸಿದ ಎಂದರ್ಥ, ಸೂರ್ಯನು ಈ ಪರಿವಾರದ ಮುಖ್ಯಸ್ಥನಾಗಿರುವುದರಿಂದ ಇದಕ್ಕೆ ‘ಸೌರವ್ಯೂಹ’ ಎಂದು ಕರೆಯುತ್ತೇವೆ.

ರಾತ್ರಿಯಾಕಾಶದಲ್ಲಿ ನೀನು ಅನೇಕ ತಾರೆಗಳನ್ನು ನೋಡಬಹುದು. ಅವುಗಳಲ್ಲಿ ಕೆಲವು ಗ್ರಹಗಳಾಗಿರುತ್ತವೆ ಮತ್ತು ಅವು ನಕ್ಷತ್ರಗಳಲ್ಲ. ಹಾಗಾದರೆ ನಕ್ಷತ್ರಗಳು ಮತ್ತು ಗ್ರಹಗಳ ವ್ಯತ್ಯಾಸವನ್ನು ಗುರುತಿಸುವುದು ಹೇಗೆ? ನಕ್ಷತ್ರಗಳಿಗೆ ಹೋಲಿಸಿದರೆ ಗ್ರಹಗಳು ನಮ್ಮ ಭೂಮಿಯಂತೆ ಬಹಳ ಚಿಕ್ಕ ಆಕಾಶಕಾಯಗಳು, ಆದರೆ ಅವು ನಮಗೆ ಹತ್ತಿರವಿರುವುದರಿಂದ ದೊಡ್ಡದಾಗಿ ಕಾಣಿಸುತ್ತವೆ. ಚಂದ್ರನು ನಿಜಕ್ಕೂ ಅತಿ ಚಿಕ್ಕ ಆಕಾಶಕಾಯವಾಗಿದ್ದರೂ ನಮಗೆ ಅತೀ ಹತ್ತಿರವಿರುವುದರಿಂದ ದೊಡ್ಡದಾಗಿ ಕಾಣುತ್ತಾನೆ. ಆದರೆ ಆಕಾಶದಲ್ಲಿ ನಕ್ಷತ್ರ ಮತ್ತು ಗ್ರಹಗಳ ವ್ಯತ್ಯಾಸವನ್ನು ಗುರುತಿಸುವ ಮುಖ್ಯ ವಿಧಾನವೆಂದರೆ ಅವು ಮಿನುಗುತ್ತವೆಯೇ, ಇಲ್ಲವೇ ಎಂಬುದನ್ನು ವೀಕ್ಷಿಸುವುದಾಗಿದೆ. ನಕ್ಷತ್ರಗಳು ಮಿನುಗುತ್ತವೆ, ಗ್ರಹಗಳು ಮಿನುಗುವುದಿಲ್ಲ. ಗ್ರಹಗಳು ಕೇವಲ ಹೊಳೆಯುತ್ತವೆ, ಯಾಕೆಂದರೆ ಅವು ತಮ್ಮ ಮೇಲೆ ಬಿದ್ದ ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತವೆ. ಗ್ರಹಗಳು ಅಥವಾ ಚಂದ್ರನ ಮೇಲೆ ಬಿದ್ದ ಸೂರ್ಯನ ಬೆಳಕನ್ನು ಅವು ಪ್ರತಿಫಲಿಸುವುದರಿಂದ ನಮಗೆ ಹೊಳೆಯುತ್ತಿರುವಂತೆ ಕಾಣಿಸುತ್ತವೆ. ನಕ್ಷತ್ರಗಳು ನಮ್ಮ ಸೂರ್ಯನ ಹಾಗೆಯೇ ಇರುತ್ತವೆ. ಅವು ತೀರ ಬಿಸಿಯಾಗಿರುತ್ತವೆ ಮತ್ತು ಸದಾ ಉರಿಯುತ್ತಿರುವುದರಿಂದ ಶಾಖವನ್ನು ಉತ್ಪಾದಿಸುತ್ತವೆ, ಅದರಿಂದಾಗಿಯೇ ಮಿನುಗುತ್ತವೆ. ನಿಜವೆಂದರೆ, ನಮ್ಮ ಸೂರ್ಯನು ಸಾಧಾರಣ ಗಾತ್ರದ ನಕ್ಷತ್ರ. ಅವನು ನಮಗೆ ಅತಿ ಹತ್ತಿರವಿರುವುದರಿಂದ ಬೆಂಕಿಯ ಉಂಡೆಯಂತೆ ದೊಡ್ಡದಾಗಿ ಕಾಣುತ್ತಾನೆ.

ನಮ್ಮ ಭೂಮಿಯು ಸೌರವ್ಯೂಹಕ್ಕೆ ಸೇರಿದ ಒಂದು ಗ್ರಹವಾಗಿದೆ. ನಾವು ಭೂಮಿಯನ್ನು ಬಹಳ ದೊಡ್ಡದಿದೆಯೆಂದು ಭಾವಿಸುತ್ತೇವೆ, ಯಾಕೆಂದರೆ ನಾವು ನೋಡುವ ಅತಿದೊಡ್ಡ ಕಾಯ ಅದಾಗಿದೆ. ವೇಗವಾಗಿ ಚಲಿಸುವ ಹಡಗು ಅಥವಾ ರೈಲಿನಲ್ಲಿ ಹೋದರೂ ಭೂಮಿಯ ಒಂದು ಭಾಗದಿಂದ ಇನ್ನೊಂದು ಭಾಗವನ್ನು ತಲುಪಲು ಅನೇಕ ವಾರಗಳು ಮತ್ತು ತಿಂಗಳುಗಳೇ ಬೇಕಾಗುತ್ತವೆ. ಭೂಮಿ ಇಷ್ಟು ದೊಡ್ಡದಾಗಿದ್ದರೂ ವಿಶ್ವದಲ್ಲಿ ಅದೊಂದು ತೇಲಾಡುವ ಧೂಳಿನ ಕಣದಷ್ಟೇ ಚಿಕ್ಕದು. ಸೂರ್ಯನು ಭೂಮಿಯಿಂದ ಮಿಲಿಯನ್‌ಗಟ್ಟಲೇ ಮೈಲು ದೂರದಲ್ಲಿದ್ದಾನೆ ಮತ್ತು ಇತರ ನಕ್ಷತ್ರಗಳು ಇನ್ನೂ ದೂರದಲ್ಲಿವೆ.

ನಕ್ಷತ್ರಗಳ ಬಗ್ಗೆ ಅಧ್ಯಯನವನ್ನು ಮಾಡುವ ಖಗೋಲಶಾಸ್ತçಜ್ಞರು ಹೇಳುವ ಪ್ರಕಾರ ಬಹಳ ಕಾಲದ ಹಿಂದೆ ಭೂಮಿಯೂ ಸೇರಿದಂತೆ ಸೌರವ್ಯೂಹದ ಇತರ ಎಲ್ಲಾ ಗ್ರಹಗಳೂ ಸೂರ್ಯನ ಭಾಗವಾಗಿದ್ದವು. ಸೂರ್ಯನು ಆಗ ಈಗಿರುವಂತೆಯೇ ಬೆಳಕನ್ನು ಹೊರಚೆಲ್ಲುವ ಬಿಸಿಯಾದ ಗೋಲವಾಗಿದ್ದನು. ಹೀಗಿರುವಾಗ ಸೂರ್ಯನ ಹೊರಭಾಗವು ಛಿದ್ರಗೊಂಡು ಸುತ್ತಲೂ ಚೆದುರಿಕೊಂಡಿತು. ಆದರೆ ಅವೆಲ್ಲವೂ ಸೂರ್ಯನಿಂದ ಪೂರ್ಣವಾಗಿ ನಿಯಂತ್ರಣವನ್ನು ಕಳೆದುಕೊಳ್ಳಲಿಲ್ಲ. ಹಗ್ಗದಿಂದ ಕಟ್ಟಿ ಸೂರ್ಯನೇ ಅವುಗಳನ್ನು ತಿರುಗಿಸುತ್ತಿದ್ದಾನೋ ಎಂಬಂತೆ ಅವೆಲ್ಲವೂ ಸೂರ್ಯನ ಸುತ್ತಲು ಸುತ್ತತೊಡಗಿದವು. ನಾನು ಹಗ್ಗಕ್ಕೆ ಹೋಲಿಸಿದ್ದು ಒಂದು ವಿಶಿಷ್ಟವಾದ ಬಲವನ್ನು ಮತ್ತು ಅದು ವಿಶ್ವದ ಎಲ್ಲವನ್ನೂ ತನ್ನೆಡೆಗೆ ಸೆಳೆಯುತ್ತದೆ. ಆ ಬಲವು ವಸ್ತುವಿನ ದ್ರವ್ಯರಾಶಿಯ ಕಾರಣದಿಂದಾಗಿ ಉಂಟಾಗುತ್ತದೆ ಮತ್ತು ಅದನ್ನು ಗರುತ್ವಾಕರ್ಷಣ ಬಲವೆಂದು ಕರೆಯುತ್ತೇವೆ. ಭೂಮಿಯು ದೊಡ್ಡ ಕಾಯವಾದ್ದರಿಂದ ಅದು ತನ್ನ ಕೆಂದ್ರದ ಕಡೆಗೆ ಮೇಲ್ಮೈಯಲ್ಲಿರುವ ಎಲ್ಲವನ್ನೂ ಸೆಳೆದುಕೊಳ್ಳುತ್ತದೆ.

ಹೀಗೆ ಭೂಮಿಯೂ ಸಹ ಸೂರ್ಯನಿಂದ ಸಿಡಿದು, ಆರಿದ ಒಂದು ಭಾಗವಾಗಿದೆ. ಆಗ ಭೂಮಿಯು ಬಿಸಿಯಾದ ಉಂಡೆಯಂತಿದ್ದು, ಅದರ ಸುತ್ತಲೂ ಬಿಸಿಯಾದ ಅನಿಲಗಳು ಸುತ್ತುವರೆದಿದ್ದವು. ಆದರೆ ಭೂಮಿಯು ಸೂರ್ಯನಿಗಿಂತ ಚಿಕ್ಕದಾದ್ದರಿಂದ ಬೇಗನೆ ತಣ್ಣಗಾಗಲು ಪ್ರಾರಂಭಿಸಿತು. ಸೂರ್ಯನೂ ಕೂಡ ಕಾಲಕ್ರಮೇಣ ತಣ್ಣಗಾಗುತ್ತ ಹೋಗುತ್ತಾನೆ, ಆದರೆ ಅದಕ್ಕೆ ಮಿಲಿಯನ್‌ಗಟ್ಟಲೆ ವರ್ಷಗಳು ಬೇಕು. ಭೂಮಿಯು ತಣ್ಣಗಾಗಲು ಸ್ವಲ್ಪ ಕಾಲ ಸಾಕಾಗುತ್ತದೆ. ಭೂಮಿ ಬೆಂಕಿಯುಂಡೆಯಾಗಿರುವಾಗ ಸಹಜವಾಗಿಯೇ ಭೂಮಿಯ ಮೇಲೆ ಯಾವ ಪ್ರಾಣಿಗಳು, ಸಸ್ಯಗಳು, ಗಿಡಮರಗಳು ಇರಲಿಲ್ಲ. ಇದ್ದರೂ ಆಗ ಬೆಂಕಿಯಲ್ಲಿ ಉರಿದು ಹೋಗುತ್ತಿತ್ತು.

ಹೇಗೆ ಸೂರ್ಯನಿಂದ ಸಿಡಿದ ತುಣುಕೊಂಡು ತಣ್ಣಗಾಗಿ ಭೂಮಿಯಾಯಿತೋ, ಹಾಗೆಯೇ ಭೂಮಿಯಿಂದ ಸಿಡಿದ ತುಂಡು ಚಂದ್ರನಾಗಿ ಬದಲಾಯಿತು. ಹಲವರು ಹೇಳುವ ಪ್ರಕಾರ ಚಂದ್ರನು ಅಮೇರಿಕಾ ಮತು ಜಪಾನಿನ ನಡುವೆ ಇರುವ ಫೆಸಿಫಿಕ್ ಸಾಗರದ ದೊಡ್ಡ ಕುಳಿಯಿಂದ ಸಿಡಿದ ಚೂರು. ಮುಂದೆ ಭೂಮಿಯು ತಣ್ಣಗಾಗಲು ಪ್ರಾರಂಭಿಸಿತು. ಹಾಗೆ ತಣ್ಣಗಾಗಲು ತುಂಬಾ ಸಮಯವನ್ನು ತೆಗೆದುಕೊಂಡಿತು. ಕಾಲ ಸರಿದಂತೆ ಭೂಮಿಯಾಳದಲ್ಲಿ ಬಿಸಿಯಿದ್ದರೂ ಭೂಮಿಯ ಹೊರಮೈ ತಣ್ಣಗಾಯಿತು. ಈಗಲೂ ಕಲ್ಲಿದ್ದಲು ಗಣಿಯಲ್ಲಿ ಆಳಕ್ಕೆ ಇಳಿಯುತ್ತಾ ಹೋದಂತೆ ಶಾಖ ಹೆಚ್ಚಾಗುವುದನ್ನು ನೀನು ಗಮನಿಸಬಹುದು. ಬಹುಶಃ ಭೂಮಿಯ ಗರ್ಭಕ್ಕೆ ಇಳಿದರೆ ಅಲ್ಲಿ ಬೆಂಕಿಯ ಉಂಡೆಯೇ ಇರಬಹುದು. ಚಂದ್ರನೂ ಕೂಡ ಭೂಮಿಗಿಂತಲೂ ವೇಗವಾಗಿಯೇ ತಣ್ಣಗಾಗತೊಡಗಿತು. ಯಾಕೆಂದರೆ ಚಂದ್ರನ ಗಾತ್ರ ಭೂಮಿಗಿಂತಲೂ ಕಡಿಮೆ. ಚಂದ್ರ ಬಹಳವೇ ಶೀತಲವಾಗಿ ಕಾಣುತ್ತಾನಲ್ಲವೆ? ಅದಕ್ಕಾಗಿಯೇ ಅವನನ್ನು ಶೀತಲ ಉಪಗ್ರಹವೆಂದು ಕರೆಯುತ್ತಾರೆ. ಬಹುಶಃ ಚಂದ್ರನಲ್ಲಿ ಹಿಮನದಿಗಳು ಮತ್ತು ಹಿಮಬಂಡೆಗಳೇ ತುಂಬಿರಬಹುದೇನೊ?

ಭೂಮಿಯು ತಣ್ಣಗಾದಾಗ ಗಾಳಿಯಲ್ಲಿರುವ ನೀರಿನ ಅಣುಗಳೆಲ್ಲ ಘನೀಭವಿಸಿ ಮೋಡಗಳಾಗಿ ಮಳೆಯಾಗಿ ಭೂಮಿಗೆ ಸುರಿದವು. ಹಾಗೆ ಬಹಳ ಕಾಲ ಝಡಿಮಳೆ ಸುರಿದಿರಬಹುದು. ಭೂಮಿಯಲ್ಲಿ ತಗ್ಗುಗಳಿರುವೆಡೆಯಲ್ಲೆಲ್ಲ ನೀರು ತುಂಬಿ ಸಾಗರಗಳು ಮತ್ತು ಸಮುದ್ರಗಳು ರೂಪುಗೊಂಡವು.

ಭೂಮಿಯು ತಣ್ಣಗಾದಂತೆ ಸಾಗರಗಳೂ ತಣ್ಣಗಾಗುತ್ತ ಬಂದವು ಮತ್ತು ಇದರಿಂದಾಗಿ ಭೂಮಿಯ ಮೇಲ್ಮೈಯಲ್ಲಿ ಮತ್ತು ಸಾಗರದ ಆಳದಲ್ಲಿ ಜೀವಿಗಳು ಬದುಕುವ ವಾತಾವರಣ ನಿರ್ಮಾಣವಾಯಿತು. ಭೂಮಿಯ ಮೇಲೆ ಜೀವರಾಶಿಗಳು ಬಂದ ಬಗ್ಗೆ ನಾನು ಮುಂದಿನ ಪತ್ರದಲ್ಲಿ ಬರೆಯುವೆ.