ಸೃಷ್ಟಿ ಸ್ಥಿತಿ ಲಯ – ಕವಿತೆಯನ್ನು ಈ ಮೇಲಿನ ಗಿಳಿಮರ ಕವಿತೆಯ ಇನ್ನೊಂದು ಭಾಗವಾಗಿಯೂ ಓದಬಹುದು. ಆದರೂ ಇದರ ಅರ್ಥ ಹೊಳಹು ಬೇರೆಯೇ. ಇಲ್ಲಿನ ಹಕ್ಕಿದಂಡು, ಕಪ್ಪೆ, ಈಚಲು ಮರಗಳೆಲ್ಲ ಒಂದೊಂದೂ ಒಂದು ಜಗವೇ ಆಗಿಯೂ, ಒಂದೇ ಜಗವಾಗಿಯೂ ಕಂಡು ಬೆರಗಾಗುವ ಕವಿ ಮನಸ್ಸು ತುಂಬಿ ಉಮ್ಮಳಿಸುತ್ತದೆ. ಆ ಕಣ್ಣೀರಲ್ಲಿ ಆನಂದ ತುಳುಕಿದರೂ, ಲೋಕದ ಡೊಂಕ ನೆನೆದು ಕಳವಳಿಸುತ್ತದೆ. ಮರವನ್ನು ಶಿವನಾಗಿಸಿದ್ದು ಕವಿಗೇ ಅಚ್ಚರಿಯಾಗಿ ಶಿವಶಿವಾ… ಎಂದು ಉದ್ಗರಿಸಿದ್ದಾರೆ.
ಕವಯತ್ರಿ ಜ.ನಾ. ತೇಜಶ್ರೀ ಬರೆದ ‘ಯಕ್ಷಿಣಿ ಕನ್ನಡಿ’ ಕವನ ಸಂಕಲನದ ಕುರಿತು ನೂತನ ದೋಶೆಟ್ಟಿ ಬರಹ

 

ಅಡಿಗರಿಂದ ಲಂಕೇಶರಿಗೆ ಶೀರ್ಷಿಕೆಯ ಕವಿತೆಯನ್ನು, “ಸಾಲಿನೊಳಗಿನ ಅರ್ಥವನ್ನು ಬಿಗಿಯಾಗಿ ಕಟ್ಟಿ/ ಕುಶಲದಲಿ ಕುಸುರಿ ಮಾಡಿ/ ಒಮ್ಮೆಗೇ ಗುಟ್ಟು ಬಿಟ್ಟುಕೊಡದಂತೆ ಹೆಣೆದು/ ಮತ್ತೆ ಮತ್ತೆ ಮುಟ್ಟಿ ತಟ್ಟಿ ತಡವಿ/ ಪರಚಿ ತರಚಿ ತಿರುಚಿ ನೋಡಿದರಷ್ಟೇ ಚಿಪ್ಪೊಡೆವ….” ಎಂದು ಕಟ್ಟುವ ತೇಜಶ್ರೀಯವರ ಕವಿತೆಗಳೂ ಹೀಗೇ ಇವೆ. ಲಲಿತಾ ಸಿದ್ಧಬಸವಯ್ಯ ಅವರು ‘ಸ್ವಯಾರ್ಜಿತ ಅವಧಾನ ಬಲ’ ಎಂದು ಈ ಕವಿತೆಗಳನ್ನು ಕರೆದಿದ್ದರೆ, ‘ಮಾಗಿದ ಜಿಜ್ಞಾಸು ಪ್ರಜ್ಞೆ’ ಎಂದು ಡಾ. ರಾಜೇಂದ್ರ ಚೆನ್ನಿ ಅವರು ಹೇಳಿದ್ದಾರೆ. ಈ ಎರಡು ನೋಟಗಳನ್ನೂ ಸೋಕಿಸಿಕೊಳ್ಳದ ಒಬ್ಬ ಓದುಗಳಾಗಿ ಕವಿತೆಗಳನ್ನು ಗಮನಿಸಿ ಪಂಡಿತರಿಗೆ ಒದಗುವ ಕವಿತೆಗಳು ಪಾಮರರಿಗೂ ಅಷ್ಟಿಷ್ಟು ಒದಗಲಿ ಎಂಬ ಪುಟ್ಟ ಹಂಬಲದಿಂದ ಇವುಗಳನ್ನು ನೋಡಬಯಸಿದ್ದೇನೆ. ಒಂದೇ ಓದಿಗೆ ದಕ್ಕದ ಈ ಕವಿತೆಗಳು ಮರು ಓದನ್ನು ಬಯಸುತ್ತವೆ. ದಟ್ಟವಾದ ಅಭಿವ್ಯಕ್ತಿ, ಭಾಷಾ ಪ್ರಾವಿಣ್ಯತೆ, ನಿಪುಣ ನೇಯ್ಗೆಗಳ ಜೊತೆಗೆ ಬಾನವಿಸ್ತಾರದ ಅರ್ಥ ಹರಹನ್ನು ಹರಡಿಟ್ಟಂತೆ ಆಳ ಸಮುದ್ರದ ಕೌತುಕಗಳನ್ನೂ ಒಳಗಿಟ್ಟುಕೊಂಡಿವೆ. ಬಹುಶಃ ಆ ಕಾರಣದಿಂದಲೇ ಜಟಿಲವಾದಂತೆ ಕಾಣುವ ‘ಯಕ್ಷಿಣಿ ಕವಿತೆ’ ಗಳು ಇವು.

(ಜ.ನಾ. ತೇಜಶ್ರೀ)

ಗಿಳಿಮರ, ಕವಿತೆಯಲ್ಲಿ ಮರ, ಗಿಳಿ ಇತ್ಯಾದಿಗಳು ಹಿರಿದಾದ ಜೀವನೇಯ್ಗೆಗೆ ಪ್ರತಿನಿಧಿಗಳಾಗಿ ನಿಲ್ಲುತ್ತವೆ. ಇಲ್ಲಿನ ಪುರಾತನ ಮರ, ಚಿಗುರೆಸಳ ತುಳುಕಿಸುತ್ತ/…. ಬೆಟ್ಟದ ಬುಡದಲ್ಲಿ ನೆಟ್ಟಗೆ ನಿಂತಿದೆ.. ಆ ಮರಕ್ಕೆ ಗಿಳಿಯಂತೆ…. ತಾನೂ ಹಸಿರು ಆಗುವ.. ಬಯಕೆ ಇದೆ. ಇದು ಅನೇಕ ಜೀವಜಂತುಗಳಿಗೆ ಆಸರೆಯಾಗಿದೆ. ಅಬ್ಬರದ ಮಳೆಯಲ್ಲಿ ಆಸರೆ ಪಡೆದ ಜೀವಿಗಳೆಲ್ಲ ಕಣ್ಮರೆಯಾದರೂ ಮರಕ್ಕೆ ಸದಾ ಹಸಿರ ಧ್ಯಾನವೇ. ಕೊನೆಗೆ ಆ ಮರದ ಎದೆಯಲ್ಲಿ ಮೆಲ್ಲಗೆ ಮರಿಹುಳುಗಳು ಮಾತಾಡುತ್ತವೆ. ಇಲ್ಲಿನ ಮರ, ಅದರ ಸುತ್ತಲೇ ಇರುವ ಜೀವಜಾಲ, ಒಂದು ಮನೆಯ ಕಥೆಯೂ, ಒಂದು ಪರಿಸರದ ಕಥಾನಕವೂ, ಒಂದು ಭೂಮಿಯ ಆಶಯವೂ ಏಕಕಾಲಕ್ಕೆ ಆಗಬಲ್ಲುದೇ ಈ ಕವಿತೆಯ ಸೊಗಸು. ಬಹು ಸಂಕೀರ್ಣವಾಗಿರುವ ಈ ರಚನೆಯ ಪದಪದದಲ್ಲೂ ಅಂತಃಸ್ಫುರಣವಿದೆ.

ಸೃಷ್ಟಿ ಸ್ಥಿತಿ ಲಯ – ಕವಿತೆಯನ್ನು ಈ ಮೇಲಿನ ಗಿಳಿಮರ ಕವಿತೆಯ ಇನ್ನೊಂದು ಭಾಗವಾಗಿಯೂ ಓದಬಹುದು. ಆದರೂ ಇದರ ಅರ್ಥ ಹೊಳಹು ಬೇರೆಯೇ. ಇಲ್ಲಿನ ಹಕ್ಕಿದಂಡು, ಕಪ್ಪೆ, ಈಚಲು ಮರಗಳೆಲ್ಲ ಒಂದೊಂದೂ ಒಂದು ಜಗವೇ ಆಗಿಯೂ, ಒಂದೇ ಜಗವಾಗಿಯೂ ಕಂಡು ಬೆರಗಾಗುವ ಕವಿ ಮನಸ್ಸು ತುಂಬಿ ಉಮ್ಮಳಿಸುತ್ತದೆ. ಆ ಕಣ್ಣೀರಲ್ಲಿ ಆನಂದ ತುಳುಕಿದರೂ, ಲೋಕದ ಡೊಂಕ ನೆನೆದು ಕಳವಳಿಸುತ್ತದೆ. ಮರವನ್ನು ಶಿವನಾಗಿಸಿದ್ದು ಕವಿಗೇ ಅಚ್ಚರಿಯಾಗಿ ಶಿವಶಿವಾ… ಎಂದು ಉದ್ಗರಿಸಿದ್ದಾರೆ.

ಎಲ್ಲ ಒಂದು ಸ್ಪರ್ಶಕ್ಕಾಗಿ – ಕವಿತೆಯಲ್ಲೂ ಕವಿ ಕನವರಿಸುವುದು ಜೀವ ಸಂಚಾರವನ್ನು. ಇಲ್ಲಿಯ ಅಹಲ್ಯೆಗೆ ಹೊಚ್ಚ ಹೊಸ ನೋಟವನ್ನೇ ಕವಿ ನೀಡಿದ್ದಾರೆ. ರಾಮನ ಬಯಕೆ ಹಾದಿಯಲ್ಲಿ ಅಹಲ್ಯೆಯಿದ್ದಳೋ/ ಅಹಲ್ಯೆ ನೆಟ್ಟಿದ್ದ ತಾಣವೇ ರಾಮನ ಮಾರ್ಗವಾಯಿತೋ / ಯಾರಿಗೆ ಗೊತ್ತು?”
ಎಂಬ ಸಾಲುಗಳು ರೋಮಾಂಚನಗೊಳಿಸುತ್ತವೆ. ಇದುವರೆಗೆ ಜಗತ್ತು, ಅಹಲ್ಯೆ ಕಾದಿದ್ದ ಸ್ಪರ್ಶವನ್ನು ಕಂಡ ಬಗೆಯೇ ಬೇರೆ. ಕವಿ, ಅಹಲ್ಯೆಯ ಮೂಲಕ ರಾಮನ ಹಾದಿಯನ್ನು ಸೃಷ್ಟಿಸುವ ಬಗೆಯೇ ಬೇರೆ. ಇದುವರೆಗೆ ಯಾರೂ ಕಾಣದ್ದು ಕವಿಗೆ ಕಂಡಿರುವುದರಿಂದಲೇ ಅಹಲ್ಯೆಯೆಂಬ ತವನಿಧಿಯ ತೆಕ್ಕೆಯೊಳಗೆ ನಿತ್ಯೋತ್ಸವ ನಡೆಯುತ್ತದೆ.

ಒಂದೇ ಓದಿಗೆ ದಕ್ಕದ ಈ ಕವಿತೆಗಳು ಮರು ಓದನ್ನು ಬಯಸುತ್ತವೆ. ದಟ್ಟವಾದ ಅಭಿವ್ಯಕ್ತಿ, ಭಾಷಾ ಪ್ರಾವಿಣ್ಯತೆ, ನಿಪುಣ ನೇಯ್ಗೆಗಳ ಜೊತೆಗೆ ಬಾನವಿಸ್ತಾರದ ಅರ್ಥ ಹರಹನ್ನು ಹರಡಿಟ್ಟಂತೆ ಆಳ ಸಮುದ್ರದ ಕೌತುಕಗಳನ್ನೂ ಒಳಗಿಟ್ಟುಕೊಂಡಿವೆ. ಬಹುಶಃ ಆ ಕಾರಣದಿಂದಲೇ ಜಟಿಲವಾದಂತೆ ಕಾಣುವ ‘ಯಕ್ಷಿಣಿ ಕವಿತೆ’ ಗಳು ಇವು.

ಹೆಣ್ಣು ಪ್ರತಿಮೆ – ಯಲ್ಲಿ ಬರುವ ಮಳೆಬಿದ್ದ ಕೊಳದೊಳಗೆ ಮಳೆಹನಿಗಳ ತಟ್ಟಾಟ/ ಹನಿಯು ಹನಿಯನ್ನು ಮುಟ್ಟಿ ಕೊಳದೊಳಗೆಲ್ಲ ಬಳೆಯ ಚಿತ್ರ/…. ಕೊಲ್ಲಿನೋಟದ ಹೆಣ್ಣು ಪ್ರತಿಮೆ/ ನೋಡುತ್ತ ತನ್ನನ್ನೇ ತಾನು ಕೊಳದ ನೀರಲ್ಲಿ / ತಳದ ಮೀನುಗಳಿಗೆ ಎಡ್ಡಂತಿಡ್ಡ ಪುಳಕ…. ಈ ಸಾಲುಗಳು ಸೃಷ್ಟಿಯ ಸಹಜತೆಯನ್ನು ಮೈತಳೆದಿವೆ.

ಹುಲಿಯೇ ನಿನ್ನ ಕಣ್ಣುಗಳಲ್ಲಿ… ಇಲ್ಲಿ ಬರುವ ಎರಡು ಹುಲಿಗಳಲ್ಲಿ ಒಂದು ತುಂಬಿದ ಹೊಟ್ಟೆಯನ್ನೂ ಇನ್ನೊಂದು ಹಸಿವನ್ನೂ ಪ್ರತಿನಿಧಿಸುವಂತಿದೆ. ಅವೇನು ಬಂಧಿಸಿಟ್ಟ ಹುಲಿಗಳಲ್ಲ. ಒಂದು ಅಟ್ಟಣಿಕೆಯ ಮೇಲೆ ಗಾಢ ನಿದ್ರೆಯಲ್ಲಿದ್ದರೆ ಇನ್ನೊಂದು ಅಸಹನೆಯನ್ನು ನಡಿಗೆಯಲ್ಲೂ, ಜ್ವಾಲಾಮುಖಿಯನ್ನು ಕಣ್ಣಲ್ಲೂ ತುಂಬಿಕೊಂಡು ಗಸ್ತು ತಿರುಗುತ್ತಿದೆ. ಆದರೂ ಹುಡುಕುತ್ತಿದೆ ನಿಟ್ಟುನಿಟ್ಟು/ ತಿಳಿಯಲಾರದೆ ತನ್ನ ಸೆರೆಗೆ ಕಾರಣವನ್ನು/ ಮಾನವ ಕುಲದ ಅರ್ಥವನ್ನು… ಅದರ ಕಣ್ಣುಗಳು ನೆಟ್ಟಿರುವುದು ಬೆನ್ನು ತಿರುಗಿಸಿ ನಿದ್ರಿಸಿದ ಹುಲಿಯತ್ತ. ಈ ಕಣ್ಣುಗಳು ಒಡೆದು ನಿಂತಿರುವ ಜಗದ ವ್ಯಾಪಾರದ ಶೋಧವನ್ನು ನಡೆಸಿರಬಹುದು. ಕವಿತೆಯ ಕ್ಲಿಷ್ಟತೆಗೆ, ಇನ್ನಷ್ಟು ಅರ್ಥಗಳು ಓದುಗರಿಗೆ ಹೊಳೆದಾವು.

ಶಾಶ್ವತವೆಂಬುದು ಎಷ್ಟು ಕ್ಷಣಿಕ! – ಕವಿತೆಯ ಶೀರ್ಷಿಕೆಯೇ ಕಟ್ಟಿ, ಕ್ಷಣ ನಿಲ್ಲಿಸಿಬಿಡುತ್ತದೆ. ಮಳೆ, ಪ್ರವಾಹಗಳ ಅಪರಾವತಾರವನ್ನು ಬೆಚ್ಚಿನಿಂದ, ಸಂಕಟದಿಂದ, ದುಃಖದಿಂದ ಕವಿ ದಾಖಲಿಸಿದ್ದಾರೆ. ಅಂದು ಬಿದ್ದ ಮಳೆ, ಕುಸಿದ ಮಣ್ಣಿನೊಳಗೆ ಕುಸಿಯುತ್ತ ನಂಬಿಕೆಯು… ಅನ್ನುವಂತೆ ಸುರಿಯುತ್ತಿತ್ತು. ಬೆಟ್ಟದ ಮೇಲಣ ಮನೆಯೊಂದಿಗೆ ಕಟ್ಟಿದ ಕನಸುಗಳೆಲ್ಲ ಕೊಚ್ಚಿ ಹೋಗಿ ಆಘಾತಗೊಂಡು ಡವಗುಡುವೆದೆಗೆ ಒಂದೇ ಪ್ರಶ್ನೆ… ಎತ್ತಲಾಗಿ ನೋಡುವುದು ಇತಿವೃತ್ತವೇ? ಬಾನು, ನೆಲ, ನೆಲದಾಳ ಎಲ್ಲವೂ ಹೋರಾಟಕ್ಕೆ ನಿಂತು ಕಕಮಕನಾದ ಮನುಷ್ಯನ ಮೇಲೆ ಏಕಾಏಕಿ ಪ್ರಹಾರ ಮಾಡಿ ಇನ್ನಿಲ್ಲದಂತೆ ಮಾಯವಾಗಿಬಿಟ್ಟವು. ಆನಂತರ ಉಳಿದೇ ಉಳಿದ ಸಾವಿಗೆ ಅದೆಷ್ಟು ಒಳನೋಟಗಳು! ಆ ನೋಟಗಳಲ್ಲಿ ಕವಿಗೆ ಸೃಷ್ಟಿಯ ಮೊದಲ ನಿಯಮದ ಪ್ರಾಪ್ತಿ. ಇಲ್ಲಿ ಯಾವುದೂ ಶಾಶ್ವತವಲ್ಲ. ಮನುಷ್ಯ ನಿನಗೆಂಥ ಭ್ರಮೆಯೋ! ಕ್ಷಣಿಕವನ್ನು ಗುರುತಿಸುವುದೂ ನಿನಗೆ ಒಪ್ಪದು; ಶಾಶ್ವತವಲ್ಲವೆಂದು ನಂಬುವುದೂ ನಿನಗೆ ಅಸಾಧ್ಯವಾದದ್ದು. ಇಂಥ ನಿಬಿಡ ವೈಚಾರಿಕ ಸಾಲುಗಳೆಡೆಯಲ್ಲಿ ಬರೆಯುತ್ತಿದ್ದಾನೆ ಕಲಾವಿದ ತಾಳ್ಮೆಯ ಬೆರಳುಗಳಲ್ಲಿ/ ಹುಲ್ಲಿನೆಸಳು ಮಳೆ ಗಾಳಿಸಿಳ್ಳೆಯನ್ನು / ಕಂಪಿಸುವ ಅವನ ಕೈಗಳೊಳಗಿನ ಒಂಟಿತನವನ್ನು… ಎಂಬ ನವಿರು ಭಾವಗಳು ತೇಲಿ ಬರುತ್ತವೆ.

ಕವಿಯದು ನೇರ ನೋಟವಲ್ಲದ ಸೀಳು ನೋಟ. ಬಗೆಬಗೆದು ಶೋಧಿಸುವ ಆಟ, ಕೂಟ. ಹಾಗಾಗಿ ಕಾಗೆಯ ಕೊಕ್ಕಿನ ಚೂಪು, ಅದರಲ್ಲಿ ಹದಕಳಿತ ಹಣ್ಣು, ಆ ಹಣ್ಣ ತಿರುಳಲ್ಲಿ ಈಗಷ್ಟೇ ಜೀವ ಪಡೆಯುತ್ತಿರುವ ಹುಳ ಮಾತ್ರವಲ್ಲ, ಅದರ ನಗುವೂ ಕಾಣುತ್ತದೆ. ಇದು ಕಣ್ಣೋಟವೋ! ಅಲ್ಲವೇ ಅಲ್ಲ. ಇದು ಕೂದಲೆಳೆಯನ್ನು ಸೀಳುಸೀಳಾಗಿ ಕತ್ತರಿಸುವ ಮೊನಚು ಅಲಗು!

ಇದರೊಂದಿಗೇ ಕತ್ತಲಿಗೆ ಏರು ಯೌವನದ ಹೊತ್ತು/ ಅಗೋ ಕತ್ತಲಿನ ಬಗಲಲ್ಲೇ ಬೆಳಗಿನ ಬೀಜಗಳು!/ ಅತ್ತ ಸೃಷ್ಟಿಯ ಜೊತೆ ಮಾತಿಗಿಳಿದ ನಿನ್ನವೇ ಕಣ್ಣುಗಳು/ ಎಂಬಂಥ ರಮ್ಯ ಸಾಲುಗಳು ಗಮನ ಸೆಳೆಯುತ್ತವೆ. ಇನ್ನೊಂದು ಖುಷಿಯೆಂದರೆ ಕವಿತೆಗಳಿಗೂ, ಕವಿಗೂ ಪ್ರೇಮವಾಗಿದೆ, ಕವಿತೆಗಳ ಕುರಿತೇ ಬರೆಯುವಷ್ಟು. 5-6 ಕವಿತೆಗಳು ಕವಿತೆಯ ಕುರಿತೇ ಇವೆ. ಮರ, ನೀರು, ಚಿಟ್ಟೆ, ಕೀಟ, ಗಿಡ, ಮಣ್ಣು, ಪ್ರತಿಮೆ, ಕಣ್ಣು, ಬೀಜ ಇವುಗಳ ಬಿಟ್ಟು ಕವಿತೆ ಬರೆಯಲಾರೆನೋ ಎಂಬಷ್ಟು ಈ ಪದಗಳು ಬೇರೆ ಬೇರೆ ರೂಪಕಗಳಾಗಿ ಬಹುತೇಕ ಕವಿತೆಗಳಲ್ಲಿ ಬರುತ್ತವೆ. ಸಂಕಲನದ ಓದು ಮುಗಿದಾಗ ದಟ್ಟ ಕಾನನದ ಒಳಹೊಕ್ಕು ಬಂದಂಥ ಅನುಭವದ ಜೊತೆಜೊತೆಗೆ ಬೆಟ್ಟದ ನೆತ್ತಿಯ ಮೇಲೆ ಕುಳಿತು ಧ್ಯಾನಿಸುವ ಸಂತನ ನೆನಪೂ ಆಗುತ್ತದೆ. ಭಾಷೆ, ಒಳನೋಟಗಳು, ನಿರೂಪಣಾ ಬಗೆಯಿಂದ ಕಾಡುವ ಕವಿತೆಗಳಾಗಿ ಗುಂಗಿ ಹುಳದಂತೆ ತಲೆಯೊಳಗೆ ಗುಂಯ್ಗುಡುತ್ತಲೇ ಇರುವುದೇ ಇವುಗಳ ಸೊಗಸು ಹಾಗೂ ಶಕ್ತಿ. ಏಳು ಕೋಟೆಯೊಳಗೊಂದು ಕೋಟೆ/ ಅದರೊಳಗೊಂದು ಬಾವಿ/ಬಾವಿಯ ಆಳದಲ್ಲಿ ತಣ್ಣನೆಯ ಸಿಹಿನೀರು… ಈ ಕವಿತೆಗಳು.

(ಕೃತಿ: ಯಕ್ಷಿಣಿ ಕನ್ನಡಿ (ಕವನ ಸಂಕಲನ), ಲೇಖಕರು: ಜ ನಾ ತೇಜಶ್ರೀ, ಪ್ರಕಾಶಕರು: ಪಲ್ಲವ ಪ್ರಕಾಶನ, ಬೆಲೆ: 80/-)