ಸರ್ವಶಕ್ತನ ಹೆಂಡತಿಯನ್ನು ದೇವಿ, ಭವಾನಿ, ಕಾಳಿ- ಹೀಗೆ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಅವಳು ಒಂದು ಬೊಂಬೆಯನ್ನು ಮಾಡಿದಳು. ಅದಕ್ಕೆ ಜೀವಶಕ್ತಿ ತುಂಬಿದಳು. ಅದು ಜೀವ ತುಂಬಿಕೊಂಡ ಕೂಡಲೇ, ತನ್ನ ಬಹಳ ಮಂದಿ ಭಕ್ತರನ್ನು ಕೂಡಿಸಿದಳು. ಅವಳು ಅವರಿಗೆ ಠಕ್ಕರು ಎಂದು ಹೆಸರಿಟ್ಟಳು. ಅವರಿಗೆಲ್ಲಾ ಠಕ್ಕ ವೃತ್ತಿಯನ್ನು ಅದರ ಚಮತ್ಕಾರಗಳನ್ನು ಕಲಿಸಿದಳು. ಅದರ ಗುಟ್ಟುಗಳನ್ನು ಅವರೆಲ್ಲಾ ಸರಿಯಾಗಿ ಅರಿತುಕೊಳ್ಳುವಂತೆ ಮಾಡಲು, ತಾನು ರೂಪಿಸಿ ಜೀವ ನೀಡಿದ್ದ ಬೊಂಬೆಯನ್ನು ತನ್ನ ಕೈಯಾರೆ ನಾಶ ಮಾಡಿದಳು. ಅವಳು ಠಕ್ಕರಿಗೆ ಒಳ್ಳೆಯ ಬುದ್ಧಿಶಕ್ತಿಯನ್ನೂ, ನಯವಂಚಕ ಶಕ್ತಿಯನ್ನೂ ಕರುಣಿಸಿದಳು.
ಅರುಣ್ ಜೋಳದ ಕೂಡ್ಲಿಗಿ ಬರೆಯುವ ಗಂಟಿಚೋರರ ಕಥನದ ಎರಡನೇ ಕಂತು ಇಲ್ಲಿದೆ. 

 

ಭಾರತದ ಇತಿಹಾಸದಲ್ಲಿ ಠಕ್ಕರ ಹಾವಳಿ ಕುರಿತ ಚರ್ಚೆ ಸಂವಾದಗಳು ಒಂದು ಭಯಾನಕ ಅಧ್ಯಾಯದಂತೆ ಅತಿರಂಜಿತವಾದ ಮಾಹಿತಿಗಳಿಂದ ಕೂಡಿದೆ. ವಸಾಹತುಶಾಹಿಗಳಂತೂ ತಾವು ಎದುರಿಸಬೇಕಾದ ನೂರಾರು ಸಮುದಾಯಗಳನ್ನು ಠಕ್ಕತನದ ಹಣೆಪಟ್ಟಿ ಕಟ್ಟಿ ನಿಯಂತ್ರಿಸಲು ಪ್ರಯತ್ನಿಸಿದರು. ಈ ಠಕ್ಕರ ಹಾವಳಿಯು 18 ನೇ ಶತಮಾನದ ಉತ್ಪನ್ನದಂತೆ ಕಾಣುತ್ತದೆ. ಹೀಗೆ ಠಕ್ಕರು ಹುಟ್ಟಿಕೊಳ್ಳಲು ಚಾರಿತ್ರಿಕ ಕಾರಣಗಳೂ ಇಲ್ಲದಿಲ್ಲ. ಮೊಘಲ್ ಸಂತತಿಯ ಕೊನೆಯ ಸಾಮ್ರಾಟ ಔರಂಗಜೇಬನು 1707ರಲ್ಲಿ ನಿಧನನಾದ. ನಂತರದ 150 ವರ್ಷಗಳ ಕಾಲ ಭಾರತದ ರಾಜಕೀಯ ರಂಗದಲ್ಲಿ ಒಂದು ಬಗೆಯ ಅರಾಜಕತೆ ನೆಲೆಸಿತ್ತು. ಈ ಸಂದರ್ಭದಲ್ಲಿ ರಾಜಕೀಯ ಮೇಲಾಟಗಳು, ಹೋರಾಟ, ಆಕ್ರಮಣಗಳು ನಿರಂತರ ಜರುಗಿ ಒಂದು ರೀತಿಯಲ್ಲಿ ವಾತಾವರಣವೇ ಪ್ರಕ್ಷುಬ್ಧವಾಗಿತ್ತು.

ಇದರಲ್ಲಿ ಬ್ರಿಟಿಷರು, ಮರಾಠರು ಮತ್ತು ಸ್ವತಂತ್ರ ಅಸ್ತಿತ್ವ ಗಳಿಸಲು ಹವಣಿಸುತ್ತಿದ್ದ ಮೊಘಲರ ಮಾಜಿ ಸುಭೇದಾರರು, ನವಾಬರೂ ಇದ್ದರು. ಇನ್ನು ಚಿಕ್ಕ ಪುಟ್ಟ ಆಸ್ಥಾನಗಳ ಸೈನಿಕ ಪಡೆಗಳು ಒಂದರ್ಥದಲ್ಲಿ ಸ್ವತಂತ್ರವಾದವು. ಅಂತೆಯೇ ಸ್ವತಃ ತಾವೇ ಒಂದೊಂದು ಶಕ್ತಿಯಾಗಿ ಪರಿವರ್ತನೆ ಹೊಂದಿದವು. ಇಂತಹ ಸಂದರ್ಭದಲ್ಲಿ ಸಣ್ಣ ಸಣ್ಣ ಗುಂಪುಗಳನ್ನು ಕಟ್ಟಿಕೊಂಡು ಅದಕ್ಕೊಬ್ಬರು ನಾಯಕರಾಗಿ ಶಸ್ತ್ರಸಜ್ಜಿತರಾಗಿ ಹೊರಟವರಲ್ಲಿ ಕೆಲವರು ಚಿಕ್ಕಪುಟ್ಟ ಪಟ್ಟಣ ಪಾಳೆ ಸಂಸ್ಥಾನಗಳ ನಾಯಕರಂತೆ ಬಿಂಬಿಸಿಕೊಂಡರು. ಮತ್ತೆ ಕೆಲವು ಸೈನಿಕ ಗುಂಪುಗಳು ವ್ಯಾಪಾರಿಗಳನ್ನು, ಸ್ಥಳೀಯ ಶ್ರೀಮಂತ ಜಮೀನ್ದಾರರನ್ನೂ ಲೂಟಿ ಮಾಡಿ ಕೊಲೆ ಸುಲಿಗೆ ಮಾಡಲಾರಂಭಿಸಿದರು. ಒಂದರ್ಥದಲ್ಲಿ ಸೈನಿಕರು ತಾವು ರಾಜನೊಬ್ಬನ ಆಸ್ಥಾನದಲ್ಲಿದ್ದು ಮಾಡುತ್ತಿದ್ದ ಲೂಟಿ ಸುಲಿಗೆಗಳು ಯುದ್ಧ, ಸೋಲು, ಗೆಲುವು, ಆಕ್ರಮಣ, ಬಲಾಢ್ಯರ ಶಕ್ತಿ ಪ್ರದರ್ಶನ ಮುಂತಾದ ಪರಿಭಾಷೆಯಲ್ಲಿ ಮುಚ್ಚಿ ಹೋಗುತ್ತಿದ್ದವು.

ಆದರೆ ರಾಜನಿಲ್ಲದ ಕೇವಲ ಸೈನಿಕ ಗುಂಪುಗಳ ಸುಲಿಗೆ, ಹತ್ಯೆಗಳು ಬೇರೆಯದೇ ಅರ್ಥಗಳನ್ನು ಪಡೆದುಕೊಂಡವು. ಇದು ಕ್ರಮೇಣ ಠಕ್ಕರ ಹಾವಳಿಯ ಜತೆ ಸಮೀಕರಣ ಹೊಂದಿದೆ. ಸ್ವತಂತ್ರವಾದ ಎಲ್ಲಾ ಸೈನಿಕರ ದಾರಿಯೂ ಇದೊಂದೇ ಆಗಿರಲಿಲ್ಲ. ಬೇರೆ ಬೇರೆ ವೃತ್ತಿಗಳಿಗೂ ಹೊಂದಿಕೊಂಡರು. ಆದರೆ ಬಹುಪಾಲು ಸೈನ್ಯದ ಗುಂಪುಗಳು ಲೂಟಿಗೆ ನಿಂತವು. ಅಂತೆಯೇ ಅದಾಗಲೇ ಅಸಮಾನತೆಯ ಉತ್ಪನ್ನವೆಂಬಂತೆ ಸಮಾಜದಲ್ಲಿ ನೆಲೆಗೊಂಡಿದ್ದ ಠಕ್ಕರ ಜತೆಗೆ ಇವರೂ ಸೇರ್ಪಡೆಯಾದರು. ಕಾರಣ ಬಲಾಢ್ಯ ಜಮೀನ್ದಾರರು, ಶಾನುಭೋಗರು, ವ್ಯಾಪಾರಿಗಳು ಸಂಪತ್ತಿನ ಕೇಂದ್ರಗಳಾಗಿ ಸಾಮಾಜಿಕ ಏರುಪೇರಿಗೆ ಕಾರಣವಾಗಿದ್ದರು. ಇಂತವರನ್ನು ಲೂಟಿ ಮಾಡುವುದನ್ನು ಆಗ ತಪ್ಪೆಂದು ಭಾವಿಸದೆ, ಯುದ್ಧಾಕ್ರಮಣದಂತೆಯೇ ಭಾವಿಸಲಾಗಿತ್ತು.

ಕನ್‌ಫೆಷನ್ ಆಪ್ ಥಗ್ ಕೃತಿಯಲ್ಲಿ ಠಕ್ಕ ಅಮೀರ್ ಹೇಳುವ ಈ ವಿವರಗಳನ್ನು ಇಲ್ಲಿ ಗಮನಿಸಬಹುದು.  ‘ಆ ವರ್ಷಗಳಲ್ಲಿ ದೇಶದಲ್ಲಿ ಎಲ್ಲೆಲ್ಲೂ ಯುದ್ಧಗಳ ಸುದ್ದಿಯೇ ಹರಡಿತ್ತು. ಯಾವನಾದರೂ ಸಮರ್ಥ ಗೌರವಸ್ಥನ ಹಾಗೆ ಕಾಣುವವನು ಕೆಲವು ತರುಣರನ್ನು ಕೂಡಿಸಿಕೊಂಡು ಹೊರಟರೆ ಹಿಂದೂಸ್ಥಾನದಲ್ಲಾಗಲಿ, ದಖನ್ನಿನಲ್ಲಾಗಲಿ ಯಾವ ರಾಜನ ಹತ್ತಿರವಾದರೂ ಸೈನಿಕನಾಗಬಹುದಿತ್ತು. ಸಿಂಧ್ಯ, ಹೋಳ್ಕರ್, ಪೇಶ್ವೆ, ನಿಜಾಮ ಎಲ್ಲರ ಹತ್ತಿರವೂ ದೊಡ್ಡ ಸೈನ್ಯ ಇತ್ತು. ಸಂಬಳಗಳೂ ಸುಮಾರಾಗಿ ಸಿಗುತ್ತಿತ್ತು. ಬೇರೆ ಯಾವ ನೌಕರಿಗಿಂತ ಯಾರ ಸೈನ್ಯದಲ್ಲಿಯಾದರೂ ಸಿಪಾಯಿ ಆಗುವುದು ಮೇಲಾಗಿತ್ತು. ಅಂತಹ ಹಲವಾರು ತಂಡಗಳನ್ನು ನಾವು ಪ್ರಯಾಣದಲ್ಲಿ ಕಂಡೆವು. ಅಪ್ಪ ಅಂತಹ ಸೇನಾ ತಂಡಗಳ ಮುಂದಾಳಿನಂತೆ ಕಾಣುತ್ತಿದ್ದ. ಉಡುಗೆ ತೊಡುಗೆ ಆಯುಧಗಳು ಸವಾರಿ ಮಾಡುವ ಕುದುರೆಯೂ ಸದಾ ಪರಿವಾರದಂತೆ ಇರುತ್ತಿದ್ದ ಇತರ ಠಕ್ಕರು ಎಲ್ಲಾ ಆ ಸ್ಥಾನಕ್ಕೆ ಒಪ್ಪುವಂತಿತ್ತು’   –  ಈ ಮಾತುಗಳು 18ನೇ ಶತಮಾನದ ಸೈನಿಕ ಮತ್ತು ಯುದ್ಧದ ಸ್ಥಿತಿಯ ವರ್ಣನೆಯನ್ನು ಮಾಡುತ್ತದೆ. ಅಂತೆಯೇ ಅದು ಸೈನಿಕರು ಠಕ್ಕರ ನಡುವಿನ ಒಂದು ತೆಳುವಾದ ಗೆರೆಯನ್ನು ಕಾಣಿಸುತ್ತದೆ.

(ಮೆಡೋಸ್ ಟೇಲರ್‌)

ಹೀಗೆ ಭಾರತದ ಚರಿತ್ರೆಯಲ್ಲಿ ಒಂದು ಹಂತದಲ್ಲಿ ಸೈನಿಕರೇ ಠಕ್ಕರಾದ, ಠಕ್ಕರೇ ಸೈನಿಕರಾದ ಈ ಚಾರಿತ್ರಿಕ ರೂಪಾಂತರ ಕುತೂಹಲಕಾರಿಯಾಗಿದೆ. ಹೀಗೆ ಠಕ್ಕರ ಹಾವಳಿ 19ನೇ ಶತಮಾನದ ಆರಂಭದಲ್ಲಿ ಮತ್ತಷ್ಟು ಪ್ರಬಲವಾಯಿತು. ಈ ಸಂದರ್ಭದಲ್ಲಿ ಭಾರತದಲ್ಲಿ ತಮ್ಮ ಪ್ರಭುತ್ವವನ್ನು ಬಿಗಿಗೊಳಿಸುತ್ತಿದ್ದ ಬ್ರಿಟಿಷರು ಈ ಠಕ್ಕರ ನಿರ್ಮೂಲನೆ ಮಾಡುವ ಕಾರ್ಯಾಚರಣೆಯನ್ನು ಕೈಗೊಂಡರು. ಈ ಠಕ್ಕರನ್ನು ಸಂಪೂರ್ಣ ಮಟ್ಟಹಾಕದೆ ಭಾರತದಲ್ಲಿ ಆಡಳಿತ ನಡೆಸುವುದು ಅಷ್ಟು ಸುರಕ್ಷಿತವಾಗಿರಲಿಲ್ಲ. ಯಾಕೆಂದರೆ ದೇಶಭಕ್ತರ ಜತೆ ಈ ಠಕ್ಕರು ಸೇರಿ ಸ್ಥಳೀಯರ ಲೂಟಿ ಆಕ್ರಮಣಗಳ ಜತೆಗೆ ಬ್ರಿಟಿಷರ ಸಂಪತ್ತಿನ ಲೂಟಿ, ಬ್ರಿಟಿಷರ ಮೇಲಿನ ಆಕ್ರಮಣಗಳನ್ನು ಆರಂಭಿಸಿದರು. ಬ್ರಿಟಿಷರ ಸಂಪತ್ತಿನ ಲೂಟಿ ಎಂಬುದು, ‘ಕಳ್ಳತನ’ವಾಗದೆ ಅದು ದೇಶಪ್ರೇಮದ ಸಂಗತಿಯಾಗಿತ್ತು. ಈ ಕಾರಣದಿಂದ ಬ್ರಿಟಿಷ್ ಸರಕಾರಕ್ಕೆ ಠಕ್ಕರ ಹಾವಳಿಯನ್ನು ಹತ್ತಿಕ್ಕುವ ಅನಿವಾರ್ಯತೆ ಇತ್ತು. ಇಂತಹ ಸಂದರ್ಭದಲ್ಲಿ ಬ್ರಿಟಿಷ್ ಅಧಿಕಾರಿ ಗವರ್ನರ್ ಜನರಲ್ ವಿಲಿಯಂ ಬೆಂಟಿಕ್, ಠಕ್ಕರು ಮತ್ತು ಡಕಾಯಿತರನ್ನು ಅಡಗಿಸಲು ‘ಥಗ್ಗೀ ಆ್ಯಂಡ್ ಡಕಾಯಿತ್ ಡಿಪಾರ್ಟಮೆಂಟ್’ ಒಂದನ್ನು 1830ರಲ್ಲಿ ಸ್ಥಾಪಿಸಿದನು. ಇದಕ್ಕೆ ಮೊದಲ ಅಧಿಕಾರಿಯಾಗಿ ವಿಲಿಯಂ ಸ್ಲೀಮನ್ ಅವರನ್ನು ನೇಮಿಸಿದನು. ಮೊದಲ ಕಾಲಂ ನಲ್ಲಿ ಚರ್ಚಿಸಿದಂತೆ ಇದು ಮುಂದೆ 1871ರಲ್ಲಿ ‘ಕ್ರಿಮಿನಲ್ ಟ್ರೈಬ್ಸ್ ಆಕ್ಟ್’ ಜಾರಿಯಾಗಲು ವೇದಿಕೆಯಾಯಿತು.

ಠಕ್ಕರ ಸೃಷ್ಟಿ ಕತೆ

ಯಾವುದೇ ಬುಡಕಟ್ಟು ಅದರದ್ದೇ ಆದ ಒಂದು ಸೃಷ್ಟಿ ಕತೆಯೊಂದನ್ನು ಹೊಂದಿರುತ್ತದೆ. ಆ ಕಥೆಯ ಮೂಲಕ ಈ ಲೋಕಕ್ಕೆ ನಮ್ಮ ಸಮುದಾಯ ಹೇಗೆ ಬಂತು, ಸಮುದಾಯದ ವೃತ್ತಿ ಹೇಗೆ ಆರಂಭವಾಯಿತು ಮುಂತಾದ ಸಂಗತಿಗಳ ಹುಟ್ಟನ್ನು ಹೇಳುತ್ತವೆ. ಕೊನೆಗೆ ಈ ಲೋಕವೇ ನಮ್ಮ ಸಮುದಾಯ ಮೂಲ ಪುರುಷನಿಂದ ಸೃಷ್ಟಿಯಾಗಿದೆ ಎನ್ನುವಲ್ಲಿಗೆ ಮುಟ್ಟುತ್ತದೆ. ಇವುಗಳ ಸತ್ಯಾಸತ್ಯತೆಗಿಂತಲೂ ಒಂದು ಸಮುದಾಯವು ಕಟ್ಟಿಕೊಂಡ ಲೋಕದೃಷ್ಟಿಯಾಗಿ ಇದನ್ನು ನೋಡಬೇಕಾಗುತ್ತದೆ. ಈ ಅಧ್ಯಯನಕ್ಕಾಗಿ ಗಂಟಿಚೋರ್ ಸಮುದಾಯದ ಹಿರಿಯರ ಜತೆ ಮಾತುಕತೆ ಮಾಡಿದಾಗ ಇಂತದ್ದೊಂದು ಸೃಷ್ಟಿಕತೆ ಸಿಗಲಿಲ್ಲ. ಹಾಗಾಗಿ ಈ ಸಮುದಾಯ ತೀರಾ ಆಧುನಿಕ ಕಾಲದ ಸ್ಥಿತ್ಯಂತರಗಳಲ್ಲಿ ಹುಟ್ಟಿಕೊಂಡಿರಬೇಕೆಂಬ ತೀರ್ಮಾನಕ್ಕೆ ಬಂದೆ. ಆದರೆ ಮೆಡೋಸ್ ಟೇಲರ್‌ನ ‘ಕನ್‌ಫೆಷನ್ ಆಫ್ ಥಗ್’ ಕೃತಿಯನ್ನು ಗಮನಿಸಿದಾಗ, ಅದರಲ್ಲಿ ಠಕ್ಕ ಅಮೀರ್ ಹೇಳುವ ಕತೆಯಲ್ಲಿ ಸೃಷ್ಟಿ ಕತೆಯೊಂದನ್ನು ಹೇಳುತ್ತಾನೆ. ಈ ಕತೆಯನ್ನು ನೇರವಾಗಿ ಗಂಟಿಚೋರ್ ಸಮುದಾಯದ ಮೂಲಕ್ಕೆ ಲಗತ್ತು ಮಾಡಲಾಗದಿದ್ದರೂ, ಚಾರಿತ್ರಿಕ ಕಾರಣಗಳಿಗಾಗಿ ಈ ಕತೆ ಮುಖ್ಯವಾಗುತ್ತದೆ.

ಸಣ್ಣ ಸಣ್ಣ ಗುಂಪುಗಳನ್ನು ಕಟ್ಟಿಕೊಂಡು ಅದಕ್ಕೊಬ್ಬರು ನಾಯಕರಾಗಿ ಶಸ್ತ್ರಸಜ್ಜಿತವಾಗಿ ಹೊರಟವರಲ್ಲಿ ಕೆಲವರು ಚಿಕ್ಕಪುಟ್ಟ ಪಟ್ಟಣ ಪಾಳೆ ಸಂಸ್ಥಾನಗಳ ನಾಯಕರಂತೆ ಬಿಂಬಿಸಿಕೊಂಡರು. ಮತ್ತೆ ಕೆಲವು ಸೈನಿಕ ಗುಂಪುಗಳು ವ್ಯಾಪಾರಿಗಳನ್ನು, ಸ್ಥಳೀಯ ಶ್ರೀಮಂತ ಜಮೀನ್ದಾರರನ್ನೂ ಲೂಟಿ ಮಾಡಿ ಕೊಲೆ ಸುಲಿಗೆ ಮಾಡಲಾರಂಭಿಸಿದರು.

ಈ ಜಗತ್ತು ಸೃಷ್ಟಿಯಾದಾಗ, ಆ ಜಗನ್ನಿಯಾಮಕ ಸರ್ವಶಕ್ತನ ಎರಡು ರೂಪಗಳು ಹುಟ್ಟಿದವು. ಒಂದು ಸೃಷ್ಟಿ ಶಕ್ತಿ, ಇನ್ನೊಂದು ವಿನಾಶ ಶಕ್ತಿ. ಅದರ ಪರಿಣಾಮವಾಗಿ ಅವೆರಡೂ ಶಕ್ತಿಗಳು ಒಂದಕ್ಕೊಂದು ಪರಮ ಹಾಗೂ ನಿರಂತರ ಶತ್ರು. ಸೃಷ್ಟಿ ಶಕ್ತಿ ಈ ಭೂಮಿಯ ಮೇಲೆ ಎಷ್ಟು ವೇಗವಾಗಿ ತನ್ನ ಕಾರ್ಯ ನಡೆಸಿತು ಎಂದರೆ, ವಿನಾಶ ಶಕ್ತಿ ಅದಕ್ಕೆ ಸರಿಗಟ್ಟಿ ನಿಲ್ಲುವುದಕ್ಕೆ ಆಗಲೇ ಇಲ್ಲ. ಸರ್ವಶಕ್ತ ಅದಕ್ಕೆ ಅಂತಹ ಬಲ ಕೊಡಲೂ ಇಲ್ಲ. ಆದರೆ ಅದು ತನ್ನ ಗುರಿ ಸಾಧನೆ ಮಾಡುವುದಕ್ಕೆ ಯಾವ ಮಾರ್ಗ ಅನುಸರಿಸುವುದಕ್ಕಾದರೂ ಅನುಮತಿ ದೊರೆಯಿತು. ಅದರ ಪ್ರಕಾರ ಹಲವು ಮಾರ್ಗಗಳು ರೂಪುಗೊಂಡವು. ಅವುಗಳಲ್ಲಿ ಒಂದು ಇದು.

ಸರ್ವಶಕ್ತನ ಹೆಂಡತಿಯನ್ನು ದೇವಿ, ಭವಾನಿ, ಕಾಳಿ- ಹೀಗೆ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಅವಳು ಒಂದು ಬೊಂಬೆಯನ್ನು ಮಾಡಿದಳು. ಅದಕ್ಕೆ ಜೀವಶಕ್ತಿ ತುಂಬಿದಳು. ಅದು ಜೀವ ತುಂಬಿಕೊಂಡ ಕೂಡಲೇ, ತನ್ನ ಬಹಳ ಮಂದಿ ಭಕ್ತರನ್ನು ಕೂಡಿಸಿದಳು. ಅವಳು ಅವರಿಗೆ ಠಕ್ಕರು ಎಂದು ಹೆಸರಿಟ್ಟಳು. ಅವರಿಗೆಲ್ಲಾ ಠಕ್ಕ ವೃತ್ತಿಯನ್ನು ಅದರ ಚಮತ್ಕಾರಗಳನ್ನು ಕಲಿಸಿದಳು. ಅದರ ಗುಟ್ಟುಗಳನ್ನು ಅವರೆಲ್ಲಾ ಸರಿಯಾಗಿ ಅರಿತುಕೊಳ್ಳುವಂತೆ ಮಾಡಲು, ತಾನು ರೂಪಿಸಿ ಜೀವ ನೀಡಿದ್ದ ಬೊಂಬೆಯನ್ನು ತನ್ನ ಕೈಯಾರೆ ನಾಶ ಮಾಡಿದಳು. ಅವಳು ಠಕ್ಕರಿಗೆ ಒಳ್ಳೆಯ ಬುದ್ಧಿಶಕ್ತಿಯನ್ನೂ, ನಯವಂಚಕ ಶಕ್ತಿಯನ್ನೂ ಕರುಣಿಸಿದಳು. ಮನುಷ್ಯರು ತಂತಮ್ಮ ಸಾವಿನ ಬಲೆಗೆ ತಾವೇ ಸಿಕ್ಕಿಬೀಳುವಂತೆ ಮಾಡುವುದಕ್ಕಾಗಿ ತನ್ನ ಭಕ್ತರನ್ನು ಭೂಮಿಗೆ ಕಳಿಸಿದಳು. ಅವರ ಶ್ರಮಕ್ಕೆ ಪ್ರತಿಫಲವಾಗಿ ತಾವು ಸಾಯಿಸಿದವರ ಬಳಿ ದೊರೆಯುವ ಒಡವೆ, ವಸ್ತು, ಹಣವನ್ನು ತೆಗೆದುಕೊಳ್ಳುವಂತೆಯೂ, ಶವದ ಉಸಾಬರಿ ಅವರಿಗೆ ಬೇಡವೆಂದೂ, ತಾನೇ ಅವುಗಳನ್ನು ತನ್ನಲ್ಲಿಗೆ ಬರಮಾಡಿಕೊಳ್ಳುವೆನೆಂದೂ ಹೇಳಿದಳು. ಇದು ಆ ತಾಯಿಯ ಕಟ್ಟಪ್ಪಣೆ.

ಎಷ್ಟೋ ಕಾಲ ಅವಳ ಅನುಯಾಯಿಗಳಾದ ಠಕ್ಕರು ಹಾಗೆ ನಡೆದುಕೊಂಡರು. ಅವಳೂ ಅವರನ್ನು ಕಾಪಾಡಿಕೊಂಡು ಬಂದಳು. ಎಲ್ಲರಲ್ಲಿಯೂ ನಿಷ್ಠೆ ಬಲವಾಗಿತ್ತು. ಆದರೆ ಕಾಲ ಬದಲಾದಂತೆ ಅವಳ ಅನುಯಾಯಿಗಳ ನಿಷ್ಠೆಯೂ ಬದಲಾಯಿತು. ಒಮ್ಮೆ ದೈವವನ್ನು ಪರೀಕ್ಷಿಸುವ ಕುತೂಹಲಕ್ಕೆ ಬಿದ್ದರು. ಒಬ್ಬ ಪ್ರಯಾಣಿಕನನ್ನು ಕೊಂದು ದೇವಿಯ ಅಪ್ಪಣೆಯಂತೆ ಅಲ್ಲಿಯೇ ಬಿಟ್ಟು ಅವರು ರಸ್ತೆ ಬದಿಯಲ್ಲಿ ಅವಿತುಕೊಂಡು ಏನಾಗುತ್ತದೆ ಎಂದು ನೋಡತೊಡಗಿದರು. ಎಂದಿನಂತೆ ಶವದ ಬಳಿಗೆ ಬಂದ ದೇವಿ ಅಡಗಿ ಕೂತ ಅವರನ್ನು ಕಂಡುಕೊಂಡಳು. ತನ್ನ ಬಳಿಗೆ ಅವರನ್ನು ಕರೆದಳು. ಅವಳ ಭವ್ಯ ಭಯಂಕರ ರೂಪವನ್ನು ಕಂಡ ಅವರು ಅವಳ ಆಕ್ರೋಶಕ್ಕೆ ಹೆದರಿ ಓಡತೊಡಗಿದರು. ದೇವಿ ತನ್ನ ಶಕ್ತಿಯಿಂದ ಅವರನ್ನು ಹಿಡಿದು ಅವರ ವಿಶ್ವಾಸಘಾತಕ ಕಾರ್ಯಕ್ಕಾಗಿ ಅವರನ್ನು ಮೂದಲಿಸಿದಳು.

‘ಇಂದು ನೀವು ನನ್ನನ್ನು ನೋಡಿದಿರಿ. ನನ್ನ ರೂಪವನ್ನು ಕಣ್ಣಾರೆ ಕಂಡ ಯಾವ ಪ್ರಾಣಿಯಾದರೂ ಆಗಿಂದಾಗಲೇ ನಾಶವಾಗುತ್ತದೆ. ನಾನು ನಿಮ್ಮನ್ನು ಆ ಗತಿಗೆ ತರುವುದಿಲ್ಲ. ಆದರೆ ಇದುವರೆಗೆ ನಿಮ್ಮನ್ನು ಮನುಷ್ಯರ ಕಾಯ್ದೆ-ಕಾನೂನುಗಳಿಂದ ರಕ್ಷಿಸಿದಂತೆ ಇನ್ನು ಮುಂದೆ ನಾನು ನಿಮ್ಮನ್ನು ರಕ್ಷಿಸುವುದಿಲ್ಲ. ನೀವು ಕೊಂದ ಶವಗಳನ್ನು ನಾನು ಒಯ್ಯುವುದಿಲ್ಲ, ಬದಲಾಗಿ ನೀವೇ ಆ ಶವಗಳನ್ನು ಹೂತುಹಾಕಬೇಕು. ಇನ್ನುಮುಂದೆ ನಿಮ್ಮ ಕೆಲಸ ಯಾವಾಗಲೂ ಫಲಕಾರಿಯಾಗಿರುವುದಿಲ್ಲ, ಆಗಿಂದಾಗ್ಗೆ ಮನುಷ್ಯರ ಕಟ್ಟಳೆಗಳಿಗೆ ನೀವು ಸಿಕ್ಕಿಬೀಳುತ್ತೀರಿ. ಆಗ ನಿಮಗೆ ಸಿಗುವ ಶಿಕ್ಷೆಯೇ ದೈವಿಕ ಅಪರಾಧಕ್ಕಾಗಿ ನಾನು ನಿಮಗೆ ಕೊಡುವ ಶಿಕ್ಷೆಯಾಗಿರುತ್ತೆ. ನಾನು ನಿಮಗೆ ಕೊಟ್ಟ ಕೌಶಲ್ಯ, ಬುದ್ಧಿಶಕ್ತಿ, ನಯವಂಚಕ ಪ್ರವೃತ್ತಿ ನಿಮ್ಮಲ್ಲಿಯೇ ಇರುತ್ತವೆ. ಇನ್ನು ಮುಂದೆ ನಾನು ನಿಮಗೆ ಆಗಾಗ ಶಕುನಗಳನ್ನು ಕೊಡುತ್ತೇನೆ. ಆ ಶಕುನಗಳನ್ನು ಪಾಲಿಸುತ್ತಾ ಲೂಟಿ ಕೊಲೆ ಸುಲಿಗೆ ಮಾಡಿ. ಆದಾಗ್ಯೂ ಒಮ್ಮೊಮ್ಮೆ ನನ್ನ ಶುಭಸೂಚನೆಗಳೇ ನಿಮಗೆ ಶಾಪವಾಗಿಯೂ ಪರಿಣಮಿಸುತ್ತವೆ’ ಎಂದು ದೇವಿ ಮಾಯವಾಗುತ್ತಾಳೆ.

ಈ ಸೃಷ್ಟಿ ಕತೆಯನ್ನು ಮೆಡೋಸ್ ಟೇಲರ್‌ನ ‘ಕನ್‌ಫೆಷನ್ ಆಫ್ ಥಗ್’ ಕೃತಿಯಲ್ಲಿ ಠಕ್ಕ ಅಮೀರನ ಸಾಕು ತಂದೆ ಹೇಳುತ್ತಾನೆ. ಈ ಕತೆಯು ಠಕ್ಕರನ್ನು ಶಕ್ತಿದೇವತೆಯ ಜತೆ ಸಮೀಕರಿಸುತ್ತದೆ. ಅಂತೆಯೇ ಠಕ್ಕರು ಈ ಕಥನವನ್ನು ತನ್ನ ಸಮರ್ಥನೆಗಾಗಿಯೂ ಕಟ್ಟಿಕೊಂಡಿರುವ ಸಾಧ್ಯತೆ ಇರಬಹುದು. ಆದರೆ ಇದು ಕಳ್ಳತನ ಎನ್ನುವುದನ್ನು ಆಧ್ಯಾತ್ಮಿಕ ನೆಲೆಯಲ್ಲಿ ದೈವೀಕರಿಸಿ ಮೌಲ್ಯೀಕರಣ ಮಾಡಿಕೊಂಡಿರುವ ಸಮುದಾಯವೊಂದರ ಚಾರಿತ್ರಿಕ ಅಗತ್ಯವೂ ಇದ್ದಂತೆ ಕಾಣುತ್ತದೆ.

ಠಕ್ಕದೀಕ್ಷೆ

ದಸರೆಯ ದಿನ ಠಕ್ಕದೀಕ್ಷೆ ಕೊಡಲಾಗುತ್ತಿತ್ತು. ದೀಕ್ಷೆ ಪಡೆವವರನ್ನು ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿ ಗುರುವಾದವರು ಆತನನ್ನು ಕೈಹಿಡಿದು ಸಮಾರಂಭ ನಡೆಯುವಲ್ಲಿಗೆ ಕರೆದುಕೊಂಡು ಹೋಗುತ್ತಾರೆ. ಆ ದೀಕ್ಷಾ ಕೋಣೆಯಲ್ಲಿ ಎಲ್ಲಾ ಠಕ್ಕರ ಮುಖಂಡರೂ ಸೇರಿರುತ್ತಾರೆ. ಅವರೆಲ್ಲಾ ಕೋಣೆಯಲ್ಲಿ ಬಿಚ್ಚಿ ಹಾಸಿದ ಶುಭ್ರವಾದ ಬಿಳಿ ಬಟ್ಟೆಯ ಮೇಲೆ ಕೂತಿರುತ್ತಾರೆ. ದೀಕ್ಷೆ ಪಡೆಯಲಿರುವ ಠಕ್ಕನನ್ನು ಅವರ ಎದುರು ಕೂರಿಸಿ, ಈತ ಠಕ್ಕನಾಗುವುದಕ್ಕೆ ಎಲ್ಲರ ಒಪ್ಪಿಗೆ ಇದೆಯಾ ಎಂದು ಕೇಳುತ್ತಾರೆ. ಆಗ ಎಲ್ಲರೂ ‘ಸಿದ್ಧ, ಒಪ್ಪಿದ್ದೇವೆ’ ಎಂದು ಹೇಳಬೇಕು. ಆಗ ದೀಕ್ಷೆಗೆ ಒಳಗಾದವರನ್ನು ಹೊರಗೆ ಕರೆದುಕೊಂಡು ಬಂದು ಆಕಾಶವನ್ನು ನೋಡುತ್ತಾ ‘ಹೇ ಭವಾನಿ, ಜಗನ್ಮಾತೆ ನಿನ್ನ ಭಕ್ತರಾದ ನಾವು ಈ ನಿನ್ನ ಹೊಸ ಸೇವಕನನ್ನು ಸ್ವೀಕರಿಸು’ ಎಂದು ಬೇಡಿಕೊಳ್ಳುವಂತೆ ಹೇಳಲಾಗುತ್ತದೆ. ಹೀಗೆ ಬೇಡಿಕೊಂಡಾದ ನಂತರ ಗುರುವಾದವರು , ‘ಅವನನ್ನು ಸದಾ ರಕ್ಷಿಸು. ನಿನ್ನ ಒಪ್ಪಿಗೆ ಸೂಚಿಸಲು ಒಂದು ಶುಭ ಶಕುನ ದಯಪಾಲಿಸು’ ಎಂದು ಬೇಡುತ್ತಾರೆ. ಶುಭ ಶಕುನವಾಗಿ ಯಾವುದಾದರೂ ಹಕ್ಕಿ, ಪ್ರಾಣಿ ಮುಂತಾದವುಗಳ ಕೂಗನ್ನು ಕಾಯುತ್ತಾರೆ. ಕಾಗೆ ಕೂಗಿದರೆ ಅಶುಭವೆಂತಲೂ, ಗೂಬೆ ಕೂಗಿದರೆ ಶುಭವೆಂತಲೂ ಹೀಗೆ ನಾನಾ ನಂಬಿಕೆಗಳಿವೆ.

ಹೀಗೆ ಶಕುನವಾದ ನಂತರ ದೀಕ್ಷೆ ಪಡೆದವರನ್ನು ಕೋಣೆಗೆ ಕರೆದೊಯ್ದು ಠಕ್ಕರ ವೃತ್ತಿ ಲಾಂಛನವಾದ ‘ಪಿಕಾಸಿ’ಯನ್ನು ಆತನ ಕೈಗೆ ಕೊಡುತ್ತಾರೆ. ಅದನ್ನು ಒಂದು ಬಿಳಿಯ ಕರವಸ್ತ್ರದಲ್ಲಿ ಹಿಡಿಯಬೇಕಾಗುತ್ತದೆ. ಇದನ್ನು ಎದೆಮಟ್ಟಕ್ಕೆ ಎತ್ತಿಹಿಡಿದು ‘ದೇವಿ ನಾನು ನಿನ್ನ ಸೇವೆಗೆ ನನ್ನನ್ನು ಮುಡುಪಾಗಿಸಿಕೊಂಡಿದ್ದೇನೆ, ಎಂತಹ ಸಂದರ್ಭ ಬಂದರೂ ನಿನ್ನ ಶಕುನ ಮತ್ತು ಆಜ್ಞೆಗಳನ್ನು ಮೀರಿ ನಡೆಯುವುದಿಲ್ಲ’ ಎಂದು ಪ್ರತಿಜ್ಞೆ ಮಾಡಿಸುತ್ತಾರೆ. ಇದನ್ನು ಮುಸ್ಲಿಂ ಧರ್ಮಾನುಸಾರ ಕುರಾನಿನ ಮೇಲೆ ಕೈಯಿಟ್ಟು ಕೂಡ ಪ್ರತಿಜ್ಞೆ ಮಾಡಿಸುತ್ತಾರೆ. ನಂತರ ಒಂದು ಅಚ್ಚು ಬೆಲ್ಲವನ್ನು ತಿನ್ನಲು ಕೊಡುತ್ತಾರೆ. ಇಲ್ಲಿಗೆ ದೀಕ್ಷಾ ಸಮಾರಂಭ ಮುಗಿಯುತ್ತದೆ.

ಠಕ್ಕರ ನಿಯಮಗಳು

ಪವಿತ್ರವಾದ ಕೆಲವರನ್ನು ಮುಟ್ಟುವಂತಿಲ್ಲ. ಇತರೆ ಠಕ್ಕರ ಗುಂಪುಗಳ ಮೇಲೆ ಅಧಿಕಾರವಿರುವುದಿಲ್ಲ. ಇಂತವರ ಬಲಿ ದೇವಿಗೆ ಒಪ್ಪಿಗೆ ಇಲ್ಲದ್ದು. ಅಗಸರು, ಭಟರು ಎಂಬ ಹಾಡುತ್ತ ತಿರುಪೆ ಎತ್ತುವವರು, ಸಿಕ್ಕರು, ನಾನಾಕಶಾಹಿಗಳು, ಮುದಾರಿ ಫಕೀರರು, ನರ್ತಕಿಯರು, ಹಾಡುತ್ತ ತಿರುಪೆ ಎತ್ತುವವರು, ಸಂಗೀತಗಾರರು, ಜಲಗಾರರು, ಗಾಣಿಗರು, ಕಮ್ಮಾರರು, ಬಡಗಿಗಳು ಮತ್ತು ಅಂಗವಿಕಲರು, ಕುಷ್ಠರೋಗಿಗಳು ಇವರು ಯಾರೂ ದೇವಿಗೆ ಬೇಕಾದವರಲ್ಲ. ಇವರನ್ನು ಲೂಟಿ ಮಾಡುವುದಾಗಲಿ, ಕೊಲ್ಲುವುದಾಗಲಿ ನಿಷಿದ್ಧ. ಉಳಿದ ಎಲ್ಲರನ್ನು ನೀನು ನಾಶ ಮಾಡಬಹುದು. ದೇವಿಯ ಶಕುನದ ಮಾರ್ಗದರ್ಶನ ಪಡೆದು ಎಲ್ಲಾ ಕೆಲಸಗಳನ್ನು ಮಾಡಬೇಕು. ಇಲ್ಲೊಂದು ಸೂಕ್ಷ್ಮವಿದೆ. ಯಾರು ಯಾರನ್ನು ಕೊಲೆಸುಲಿಗೆ ಮಾಡಬಾರದು ಎನ್ನುವ ಪಟ್ಟಿಯಲ್ಲಿ ಸಬಾಲ್ಟ್ರನ್ ಎಂದು ಕರೆಯಬಹುದಾದ ದಲಿತ-ದಮನಿತ-ಅಲೆಮಾರಿ-ಬುಡಕಟ್ಟು-ಹಿಂದುಳಿದ-ಆರ್ಥಿಕವಾಗಿ ದೀನ ಸ್ಥಿತಿಯಲ್ಲಿರುವ-ಅಶಕ್ತ ಸಮುದಾಯಗಳಿವೆ. ಅಂತೆಯೇ ದಾಳಿಗೆ ಒಳಗಾಗುವ ಕುಲಗಳಲ್ಲಿ ಬಲಿತ, ಶಕ್ತ, ಮೇಲ್ವರ್ಗದ, ಆಡಳಿತದ ರುವಾರಿಗಳು, ಜಮೀನ್ದಾರರು, ವ್ಯಾಪಾರಿಗಳು, ಶ್ರೀಮಂತರನ್ನು ಒಳಗೊಂಡಿದೆ. ಈ ವಿಭಾಗವೇ ಉಳ್ಳವರು-ಇಲ್ಲದವರ ನಡುವಿನ ಸಂಘರ್ಷದಂತೆ ಕಾಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಠಕ್ಕರನ್ನು ನೋಡಬೇಕಾಗಿದೆ.

ಹೀಗೆ ಮೆಡೋಸ್ ಟೇಲರ್‌ನ ‘ಕನ್‌ಫೆಷನ್ ಆಫ್ ಥಗ್’ ಕೃತಿಯನ್ನು ಓದುತ್ತಿದ್ದರೆ ಇಂತಹ ಠಕ್ಕರ ಆಚರಣಾಲೋಕದ ನೂರಾರು ಸಂಗತಿಗಳು ಸಿಗುತ್ತವೆ. ಅವರದೇ ಆದ ದೈವ, ನಂಬಿಕೆ, ಆಚರಣೆ, ನಿಷ್ಠೆಗಳು ಅವರಿಗೇ ಅನನ್ಯವಾದ ಸಂಗತಿಗಳನ್ನು ತೋರುತ್ತವೆ. ಅದು ಒಂದು ಆಂತರಿಕ ವ್ಯವಸ್ಥೆಯನ್ನು ಕಾಣಿಸುತ್ತದೆ. ಠಕ್ಕರ ಕುರಿತ ಅಧ್ಯಯನಗಳು ಇದನ್ನೊಂದು ಕಲ್ಟ್ ಆಗಿಯೂ, ಸಮುದಾಯವಾಗಿಯೂ ನೋಡುತ್ತಾರೆ. ವಾಸ್ತವವಾಗಿ ಹಾಗಿಲ್ಲ. ಅನೇಕ ಜಾತಿ ಧರ್ಮ ಸಮುದಾಯಗಳಿಗೆ ಸೇರಿದವರ ಗುಂಪುಗಳಿವು. ಹೀಗೆ ಠಕ್ಕರ ಗುಂಪಿಗೆ ಸೇರಿಯಾದ ಮೇಲೆ ಠಕ್ಕರ ರೂಢಿಗಳನ್ನು ಅಳವಡಿಸಿಕೊಳ್ಳುತ್ತಿದ್ದರು. ಹಾಗಾಗಿ ವ್ಯವಸ್ಥೆಯ ಒಳಗೇ ಆರ್ಥಿಕ ಅಸಮಾನತೆಯ ಪರಿಣಾಮದಿಂದಾಗಿಯೇ ಇಂತಹ ಠಕ್ಕರ ಗುಂಪುಗಳು ಉಂಟಾಗಿರಲಿಕ್ಕೆ ಸಾಧ್ಯವಿದೆ. ಹೀಗೆ ಠಕ್ಕರ ಚಾರಿತ್ರಿಕ ಬೆಳವಣಿಗೆಯನ್ನು ನೋಡುವಾಗ, ಇದರ ಒಂದು ಎಳೆಯಾಗಿ ಗಂಟಿಚೋರ್ ಸಮುದಾಯ ನಮಗೆ ಕಾಣುತ್ತದೆ.