ಅದೃಷ್ಟದ ಪೆನ್ನು ಎಂದು ತಮ್ಮ ಪೆನ್ನಿನ ಬಗ್ಗೆ ಬಹಳ ಮುತುವರ್ಜಿವಹಿಸುವುದೂ ಇದೆ. ಅದೇನಾದರೂ ಕಳೆದುಹೋಯಿತು ಅಂದ್ರೆ ಆಗ ನೋಡಬೇಕು ಭೂಮಿ ಆಕಾಶ ಒಂದು ಮಾಡುವ ಥರಾ ಕೂಗಾಡುವುದನ್ನು. ಸಿಗಲಿಲ್ಲ ಅಂದರೆ ಮನೆಮಂದಿಗೆಲ್ಲ ಮಂತ್ರಾಕ್ಷತೆ ಬೇರೆ. ಅವರ ಅವತಾರ ನೋಡಿದ್ರೆ ಏನೋ ಆಗಬಾರದ್ದು ಆಗಿದೆ ಅನ್ನುವ ರೀತಿ ನಡವಳಿಕೆ. ಪೆನ್ನು ಕೈಗೆ ಬಂತು ಅಂದರೆ ಎಲ್ಲವೂ ತಣ್ಣಗೆ. ಕೆಲವರ ಸಹಿಯನ್ನಂತೂ ಯಾರಿಗೂ ನಕಲು ಮಾಡಲು ಆಗದಂತಹುದು.
ಡಾ. ಚಂದ್ರಮತಿ ಸೋಂದಾ ಬರೆಯುವ ಹಳೆ ಕಾಲದ ನೆನಪುಗಳ ಸರಣಿ “ಮಾತು ಮಂದಲಿಗೆ” ಇಂದಿನಿಂದ ಮೂರುವಾರಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ

ಎಲ್ಲಿ ಹೋಯ್ತು ಪೆನ್ನು?

ನಾವು ಚಿಕ್ಕವರಿರುವಾಗ ಮಕ್ಕಳೇನಾದರೂ ದೊಡ್ಡವರ ಪೆನ್ನನ್ನು ಮುಟ್ಟಿದರೆ ʻಇಲ್ಲಿಟ್ಟಿದ್ದ ನನ್ನ ಪೆನ್ನು ಎಲ್ಲಿ ಹೋಯ್ತು?ʼ ಅಂತ ಮನೆಯಲ್ಲಿ ಗಲಾಟೆ ಆಗುವುದಿತ್ತು. ಅಣ್ಣನೋ, ಅಕ್ಕನೋ ಬರೆಯುತ್ತಿದ್ದ ಪೆನ್ನನ್ನು ತಮ್ಮಂದಿರು ಅಥವಾ ತಂಗಿಯರು ತೆಗೆದುಕೊಂಡು ಬರೆದು ಮತ್ತೆಲ್ಲಿಯೋ ಇಟ್ಟಿರುತ್ತಿದ್ದರು. ಅಪ್ಪಿ ತಪ್ಪಿ ʻನಾನು ತಗಂಡಿದ್ದೆ. ಅಲ್ಲಿಯೇ ಇಟ್ಟಿದೇನೆʼ ಅಂದರೆ ಸಾಕು. ʻನಿಂಗೆ ನನ್ನ್‌ ಪೆನ್ನು ಮುಟ್ಟಕ್ಕೆ ಹೇಳ್ದೋರು ಯಾರು? ಯಾಕೆ ಮುಟ್ದೆ?ʼ ಅಂತ ಇನ್ನಷ್ಟು ವಿಚಾರಣೆ ಶುರುವಾಗುತ್ತಿತ್ತು. ಯಾಕಾದರೂ ಇವರ ಪೆನ್ನು ಮುಟ್ಟಿದೆವು ಅನ್ನಿಸುತ್ತಿತ್ತು. ಆದರೆ ಅದು ತಾತ್ಕಾಲಿಕ ಅಷ್ಟೆ. ನಾವೆಲ್ಲ ಪ್ರಾಥಮಿಕ ಶಾಲೆಯಲ್ಲಿ ಕಲಿಯುವಾಗ ಬರಿತಾ ಇದ್ದಿದ್ದು ಪಾಟಿಯ ಮೇಲೆ ಬಳಪದಿಂದ. ಅದರ ಮುಂದುವರಿದ ಭಾಗ ಪೆನ್ಸಿಲ್ಲಿನ ಬಳಕೆ. ಆಮೇಲೆ ಪೆನ್ನು. ಆದರೂ ಕುತೂಹಲದಿಂದ ದೊಡ್ಡವರ ಪೆನ್ನನ್ನು ಅವರಿಗೆ ಗೊತ್ತಿಲ್ಲದಂತೆ ತೊಗೊಂಡು ಪೆನ್ನಲ್ಲಿ ಬರೆಯೋದು ಒಂಥರಾ ಮಜಾ ಇರ್ತಿತ್ತು. ಇದು ಐವತ್ತು ವರ್ಷದ ಹಿಂದಿನ ಮಾತು. ಆಗ ಇದ್ದದ್ದು ಇಂಕು ಹಾಕಿ ಬರೆಯುತಿದ್ದ ಪೆನ್ನು. ಆಮೇಲೆ ಬಗೆಬಗೆಯ ಪೆನ್ನು ಮಾರುಕಟ್ಟೆಗೆ ಬಂತು.

ನಮ್ಮ ಸೋದರ ಮಾವ ಲೇಖನಿಯಿಂದ ಬರೆಯುತ್ತಿದ್ದರು. ಅದರ ವಿನ್ಯಾಸವೇ ಬೇರೆ. ನನಗೆ ಅದನ್ನ ನೋಡಿ ವಿಚಿತ್ರ ಅನಿಸಿತ್ತು. ನನಗಾಗ ಐದೋ ಆರೋ ವರ್ಷಗಳು. ಅವರಿಗೆ ಹಾಡು ಬರೆಯುವ ಹವ್ಯಾಸ. ಒಂದು ಕಾಲುಮಣೆಯ ಮೇಲೆ ಬರೆಯೋ ಪಟ್ಟಿ, ಪಕ್ಕದಲ್ಲಿ ಒಂದು ಮಸಿಕುಡಿಕೆ. ಅದಕ್ಕೆ ದೌತಿ ಅಂತ ಕೂಡ ಕರೆಯುತ್ತಿದ್ದರು. ಉದ್ದವಾಗಿರೋ ಕಡ್ಡಿ ಒಂದರ ತುದಿಯಲ್ಲಿ ಒಂದು ನಾಲಿಗೆ ರೀತಿಯ ನಿಬ್ಬು. ಉದ್ದವಾಗಿರೊ ಆ ಕಡ್ಡಿ ವಿವಿಧ ವಿನ್ಯಾಸಗಳಲ್ಲಿ ಇರುತ್ತಿದ್ದವು. ತುದಿಭಾಗದಲ್ಲಿ ಚೌಕಾಕಾರದಲ್ಲಿ, ಹಕ್ಕಿಪುಕ್ಕದ ರೀತಿ, ಕೆಲವೊಮ್ಮೆ ಬಾಗಿದರೀತಿ. ಲೇಖನಿಯ ನಿಬ್ಬನ್ನು ಶಾಹಿ ಬಾಟಲಲ್ಲಿ ಅದ್ದಿ ಬರಿಯಬೇಕಿತ್ತು. ತೆಳುವಾದ ಶಾಹಿ ಆಗಿದ್ರಿಂದ ಅದು ಬಸಿದುಹೋಗ್ತಿತ್ತು. ಹಾಗಾಗಿ ಸ್ವಲ್ಪ ಅದ್ದಿ ಅದನ್ನು ಬಾಟಲಿ ತುದಿಯಲ್ಲಿ ತುಸು ಒರೆಸಿಕೊಂಡು ಆಮೇಲೆ ಬರೆದರೆ ಮಾತ್ರ ಪುಸ್ತಕದಲ್ಲಿ ಅಕ್ಷರ ಸರಿಯಾಗಿ ಮೂಡುತ್ತಿತ್ತು. ಇಲ್ದಿದ್ರೆ ರಾಡಿ. ಬರೆಯುತ್ತಿರುವಾಗ ಮಧ್ಯದಲ್ಲಿ ನಿಲ್ಲಿಸುವ ಸನ್ನಿವೇಶ ಬಂದರೆ ಲೇಖನಿಯನ್ನು ಇಡಲಿಕ್ಕೆ ಒಂದು ಹೀರುಕಾಗದವನ್ನು ಬಳಸುತ್ತಿದ್ದರು. ಏನಾದ್ರೂ ಅವ್ಸರದಲ್ಲಿ ಬರೆದು ಪುಸ್ತಕ ಮುಚ್ಚಿದ್ರೆ ತಿರುಗಿ ಪುಸ್ತಕ ಬಿಡಿಸಿ ನೋಡಿದ್ರೆ ಎಲ್ಲವೂ ಒಂದೇ ಗೆರೆ. ಒಂಚೂರು ಹೆಚ್ಚು ಕಡ್ಮೆ ಆದ್ರೆ ಮೈಗೆ ಬಟ್ಟೆಗೆ ಶಾಹಿ ಗುರುತು. ಆಗಿನ ಶಾಹಿ ಬೇಗ ಹೋಗ್ತಾನು ಇರ್ಲಿಲ್ಲ. ನಾವೇನಾದ್ರು ಕದ್ದು ಬರೆಯಕ್ಕೆ ನೋಡಿದ್ರೆ ಅದರ ಮಹಿಮೆ ಕೈಯಲ್ಲಿ ಮೂಡುತ್ತಿತ್ತು. ಮಂತ್ರಾಕ್ಷತೆ ಗ್ಯಾರಂಟಿ.

ನಮ್ಮ ಕಾಲ್ದಲ್ಲಿ ಇಂಕು ತುಂಬಿ ಬರೆಯುವ ಪೆನ್ನು ಬಳಕೆಗೆ ಬಂದಿತ್ತು. ಕೆಲವೊಮ್ಮೆ ಪೆನ್ನಿಂದ ಇಂಕು ಬಸಿಯುವುದಿತ್ತು. ಆಗ ನಮ್ಮ ಪುಸ್ತಕದಚೀಲ, ನಮ್ಮ್‌ ಬಟ್ಟೆ ಎಲ್ಲಕಡೆ ಇಂಕಿನ ಕಲೆ. ಪೆನ್ನಿಗೆ ಇಂಕು ತುಂಬೋದು ಬಹಳ ಘನಂದಾರಿ ಕೆಲಸ. ಚಿಕ್ಕವರಿಗೆ ಇಂಕಿನ ಬಾಟಲಿ ಮುಟ್ಟಲು ಕೊಡ್ತಿರಲಿಲ್ಲ. ʻಕೊಡಿಲ್ಲಿ ನಿನ್ನ್‌ ಪೆನ್ನು. ಇಂಕು ಹಾಕಿ ಕೊಡ್ತೇನೆʼ ಅಂತ ಅಣ್ಣನೋ, ಅಕ್ಕನೋ ಹೇಳುತ್ತಿದ್ದರು. ಅದರಿಂದ ಉಪಯೋಗವೂ ಇತ್ತು. ಪೆನ್ನು ಲೀಕ್‌ ಆಗುತ್ತೋ ಇಲ್ವೋ ಅಂತ ಗೊತ್ತಾಗುತ್ತಿತ್ತು. ಒಮ್ಮೆ ಪೆನ್ನು ಸರಿ ಇಲ್ದಿದ್ರೆ ಬೈಗುಳ ಸಿಕ್ರೂ ಪೆನ್ನಿನ ರಿಪೇರಿಯಂತೂ ಆಗ್ತಿತ್ತು. ಹಾಗಾಗಿ, ನಾವು ಚಿಕ್ಕವರು ಸುಮ್ಮನೆ ದೊಡ್ಡೋರ ಹತ್ರ ಇಂಕು ಹಾಕಿಸ್ಕೊಳ್ಳುತ್ತಿದ್ದೆವು. ʻನಿನ್‌ ಪೆನ್ನು ಡಬ್ಬ, ಇಂಕು ಲೀಕಾಗುತ್ತೆʼ ಅಂತ ಶಾಲೆಯಲ್ಲಿ ಸ್ನೇಹಿತರ ಹತ್ರ ಅನ್ನಿಸಿಕೊಳ್ಳುವುದು ತಪ್ಪುತ್ತಿತ್ತು. ಆ ಕಾಲಕ್ಕೆ ಹಿರೋಪೆನ್ನು ಅಂತ ಇತ್ತು. ಅದು ಬಾರಿ ದುಬಾರಿಯ ಪೆನ್ನು. ಯಾರಾದರೂ ಪರೀಕ್ಷೆಯಲಿ ಹೆಚ್ಚು ಅಂಕ ಗಳಿಸಿದರೆ, ಯಾವುದಾದರೂ ಸ್ಪರ್ಧೆಯಲ್ಲಿ ಗೆದ್ದರೆ ಹೀರೊ ಪೆನ್ನು ಬಹುಮಾನವಾಗಿ ಕೊಡುವುದಿತ್ತು. ಹೀಗೇನಾದರೂ ಹೀರೋ ಪೆನ್ನು ಸಿಕ್ಕಿದರೆ ರಾಜ್ಯವನ್ನು ಗೆದ್ದಷ್ಟು ಸಂಭ್ರಮ. ʻನಿನ್‌ ಪೆನ್ನ ಒಂದು ಸರಿ ಕೊಡು, ನಾನು ನೋಡ್ಬೇಕುʼ ಅಂತ ಶಾಲೆಯಲ್ಲಿ ಅಥವಾ ಕಾಲೇಜಿನಲ್ಲಿ ಓದುವಾಗ ಹೀರೋಪೆನ್ನು ಪಡೆದವರನ್ನು ಕೇಳಿದರೆ ʻಊಂಹೂಂ ಕೊಡಲ್ಲ. ನನಗೆ ಪ್ರೈಜ್‌ ಬಂದಿದ್ದು ಗೊತ್ತಾ? ಮನೆಲ್ಲಿ ತಗಂಡು ಹೋಗ್ಬೇಡ ಅಂದ್ರು ಹಟಮಾಡಿ ತಂದಿದೇನೆ. ನೀವೆಲ್ಲ ತಗಂಡು ಹಾಳ್ಮಾಡಿದ್ರೆ ಹೊಡ್ತ ತಿನ್ಬೇಕಾಗುತ್ತೆʼ ಅಂತ ವೈಯಾರ ಮಾಡುತ್ತಿದ್ದರು. ಪಾರ್ಕರ್‌ ಪೆನ್ನು ಅಂದ್ರೂ ಅಷ್ಟೆ, ಒಂದು ಸಂಭ್ರಮ. ಅದನ್ನು ಇಟ್ಟುಕೊಳ್ಳುವುದೇ ದೊಡ್ಡಸ್ತಿಕೆಯ ಲಕ್ಷಣ.

ಪೆನ್ನು ಬಹುಮುಖೀ ಉಪಯೋಗಿ. ಮನೆಯ ಖರ್ಚು, ಆದಾಯಗಳ ಲೆಕ್ಕ ಇಡುವುದರಿಂದ ಹಿಡಿದು ಮಹಾಕಾವ್ಯ ಬರೆಯುವವರೆಗೆ. ಅಧ್ಯಾಪಕರಿಗಂತೂ ಅದು ಆಸ್ತಿ ಇದ್ದಹಾಗೆ. ಪ್ರತಿದಿನದ ತಮ್ಮ ಹಾಗೂ ವಿದ್ಯಾರ್ಥಿಗಳ ಹಾಜರಾತಿಯಿಂದ ಹಿಡಿದು ವಿದ್ಯಾರ್ಥಿಗಳ ಮೌಲ್ಯಮಾಪನದವರೆಗೆ. ಸಾಮಾನ್ಯರಿಗೂ ಪೆನ್ನಿನ ಅಗತ್ಯವಿತ್ತು. ಪತ್ರ ವ್ಯವಹಾರಕ್ಕೆ ಬಹಳ ಆದ್ಯತೆ. ಕ್ಷೇಮಸಮಾಚಾರದ ಪತ್ರದಷ್ಟೆ ಪ್ರಾಧಾನ್ಯ ಪ್ರೇಮಪತ್ರಕ್ಕೂ ಇತ್ತು. ಒಂದೂರಿನಿಂದ ಇನ್ನೊಂದು ಊರಿನಲ್ಲಿರುವ ಪ್ರೇಮಿಗೆ ಪತ್ರ ಬರೆಯುವುದೆಂದರೆ ಒಂದು ರಮ್ಯ ಕಲ್ಪನೆ ಬೇಕಿತ್ತು. ಎರಡು ತಲೆಮಾರಿನ ಹಿಂದಿನ ಕವಿಗಳ ಕಾವ್ಯಗಳಲ್ಲಿ ಇದನ್ನು ಕಾಣಬಹುದು. ಹಳೆಯ ಸಿನಿಮಾಗಳಲ್ಲಂತೂ ಪ್ರೇಮಪತ್ರದ ಭರಾಟೆ ಜೋರಾಗಿಯೇ ಇತ್ತು.

ಲೇಖನಿ ಹೋಗಿ ಇಂಕು ಪೆನ್ನು ಬಂತಾದರೂ ಒಂದೇ ಬಣ್ಣದ ಇಂಕನ್ನು ಬಳಸುತ್ತಿರಲಿಲ್ಲ. ಮೂರು ಬಣ್ಣದ ಇಂಕು ಇರಬೇಕಿತ್ತು. ಮೌಲ್ಯಮಾಪನ ಅಂದರೆ ಕೆಂಪು ಇಂಕಿನಲ್ಲಿ. ಉತ್ತರ ಸರಿ ಇರಲಿ, ತಪ್ಪಿರಲಿ ಗುರುತು ಹಾಕುವುದು ಮಾತ್ರ ಕೆಂಪು ಇಂಕಿನ ಪೆನ್ನಿಂದಲೇ. ಕೆಂಪು ಅಪಾಯ ಎನ್ನುತ್ತೇವೆ. ಆದರೆ ಅಲ್ಲಿ ಮಾತ್ರ ಕೆಂಪಿನ ಗುರುತೇ ಇರಬೇಕು. ಅದೇ ಷರಾ ಬರೆಯುವುದಾದರೆ ಹಸಿರು ಇಂಕಿನ ಪೆನ್ನನ್ನೇ ಬಳಸಬೇಕು. ಅಧಿಕಾರದ ನೆಲೆಯಲ್ಲಿರುವವರಿಗೆ ಇದೆಲ್ಲಾ ಅಗತ್ಯ. ಅಷ್ಟೆ ಅಲ್ಲ. ವಿದ್ಯಾರ್ಥಿಗಳ ಅಕ್ಷರ ಸುಧಾರಿಸಲು ಮತ್ತೆ ಮತ್ತೆ ಬರೆಯುವಂತೆ ಹೇಳುತ್ತಿದ್ದರು. ನಾವೆಲ್ಲ ಬರೆದು ಬರೆದು ನಮ್ಮ ಅಕ್ಷರಗಳು ಕಾಗೆಕಾಲು ಗುಬ್ಬಿಕಾಲು ಆಗದಂತೆ ನೋಡಿಕೊಂಡಿದ್ದೆವು. ಪ್ರಾಥಮಿಕ ಶಾಲೆಯಲ್ಲಿ ಪೆನ್ಸಿಲ್ಲಿನಿಂದ ಕಾಪಿ ಪುಸ್ತಕದಲ್ಲಿ ಬರೆದಿದ್ದರೂ ಪೆನ್ನಿನ ಬರವಣಿಗೆಯನ್ನು ರೂಢಿ ಮಾಡಿಕೊಂಡು ಸುಧಾರಿಸಿಕೊಳ್ಳಲು ಇದು ಸಹಕಾರಿಯಾಗಿತ್ತು.

ನಾನು ಪದವಿ ಓದುತ್ತಿರುವ ಹೊತ್ತಿಗೆ ಬಾಲ್‌ ಪೆನ್ನು ಬಂದಿತ್ತು. ಆದರೆ ಪರೀಕ್ಷೆಗೆ ಬಳಸಲಿಕ್ಕೆ ಅನುಮತಿ ಇರಲಿಲ್ಲ. ಪದವಿ ಮುಗಿಸುವ ಹೊತ್ತಿಗೆ ಅದನ್ನು ಬಳಸಕ್ಕೆ ಶುರುಮಾಡುವಂತಾಗಿತ್ತು. ಪೆನ್ನಿಗೂ ಪರೀಕ್ಷೆಗೂ ಬಹಳ ನಂಟು. ನಮ್ಮ ಹತ್ರ ಇರ್ತಿದ್ದಿದ್ದು ಒಂದೇ ಪೆನ್ನು. ಪರೀಕ್ಷೆ ಅಂದರೆ ಎರಡು ಪೆನ್ನು ತೆಗೆದುಕೊಂಡು ಹೋಗಬಹುದಿತ್ತು. ಒಂದು ಕೈಕೊಟ್ಟರೆ ಇನ್ನೊಂದು ಇರ್ಲಿ ಅಂತ. ಎರಡನೆಯ ವರ್ಷದ ಪಿಯುಸಿ ಪರೀಕ್ಷೆಯಲ್ಲಿ ಇನ್ನು ಎರಡು ಟಿಪ್ಪಣಿ ಬರೆದರೆ ಅವತ್ತಿನ ಪರೀಕ್ಷೆ ಮುಗಿಯುತ್ತಿತ್ತು. ಅಷ್ಟರಲ್ಲಿ ನನ್ನ ಪೆನ್ನಿಗೆ ಲಕ್ವ ಹೊಡೆದಿತ್ತು. ಏನು ಮಾಡಿದ್ರೂ ಮಾತೇ ಆಡ್ತಿರಲಿಲ್ಲ. ನಮ್ಮ ಕೊಠಡಿ ಮೇಲ್ವಿಚಾರಕರಾಗಿದ್ದ ಕನ್ನಡ ಮೇಡಂ ʻಏನಾಯ್ತು?ʼ ಅಂತ ವಿಚಾರಿಸಿದ್ದರು. ಅವರೊಮ್ಮೆ ಪೆನ್ನನ್ನು ಕುಡುಗಿ, ಉಜ್ಜಿ ನೋಡಿದರು. ಏನಾದ್ರೂ ಅದು ತನ್ನ ಜಾಡು ಬದಲಿಸಲಿಲ್ಲ. ನನ್ನ ಬಳಿ ಇನ್ನೊಂದು ಪೆನ್ನು ಇರಲಿಲ್ಲ. ʻಯಾರ ಹತ್ತಿರವಾದರೂ ಎರಡು ಪೆನ್ನು ಇದೆಯಾ?ʼ ಅಂತ ಕೇಳಿದರೆ ಯಾರೂ ಉತ್ತರಿಸಲಿಲ್ಲ. ಅವಧಿ ಮುಗಿಯಲು ಇಪ್ಪತ್ತೇ ನಿಮಿಷ ಬಾಕಿ ಇತ್ತು. ಎಲ್ಲರಿಗೂ ಬರೆದು ಮುಗಿಸುವ ಅವಸರ. ಇನ್ಯಾರೂ ಅಡಿಷನಲ್‌ ಪೇಪರ್‌ ಕೇಳಲಾರರು ಎಂದುಕೊಂಡು ಮೇಡಂ ತಮ್ಮ ಪೆನ್ನನ್ನೇ ಕೊಟ್ಟಿದ್ದರು. ಬರೆದು ಮುಗಿಸುತ್ತಲೇ ನನ್ನ ಬಳಿಬಂದು ತಮ್ಮ ಪೆನ್ನನ್ನು ವಾಪಸ್ಸು ಪಡೆದಿದ್ದರು.

ಲೇಖನಿಯ ನಿಬ್ಬನ್ನು ಶಾಹಿ ಬಾಟಲಲ್ಲಿ ಅದ್ದಿ ಬರಿಯಬೇಕಿತ್ತು. ತೆಳುವಾದ ಶಾಹಿ ಆಗಿದ್ರಿಂದ ಅದು ಬಸಿದುಹೋಗ್ತಿತ್ತು. ಹಾಗಾಗಿ ಸ್ವಲ್ಪ ಅದ್ದಿ ಅದನ್ನು ಬಾಟಲಿ ತುದಿಯಲ್ಲಿ ತುಸು ಒರೆಸಿಕೊಂಡು ಆಮೇಲೆ ಬರೆದರೆ ಮಾತ್ರ ಪುಸ್ತಕದಲ್ಲಿ ಅಕ್ಷರ ಸರಿಯಾಗಿ ಮೂಡುತ್ತಿತ್ತು. ಇಲ್ದಿದ್ರೆ ರಾಡಿ. ಬರೆಯುತ್ತಿರುವಾಗ ಮಧ್ಯದಲ್ಲಿ ನಿಲ್ಲಿಸುವ ಸನ್ನಿವೇಶ ಬಂದರೆ ಲೇಖನಿಯನ್ನು ಇಡಲಿಕ್ಕೆ ಒಂದು ಹೀರುಕಾಗದವನ್ನು ಬಳಸುತ್ತಿದ್ದರು. ಏನಾದ್ರೂ ಅವ್ಸರದಲ್ಲಿ ಬರೆದು ಪುಸ್ತಕ ಮುಚ್ಚಿದ್ರೆ ತಿರುಗಿ ಪುಸ್ತಕ ಬಿಡಿಸಿ ನೋಡಿದ್ರೆ ಎಲ್ಲವೂ ಒಂದೇ ಗೆರೆ.

ನಾನು ಎಂ.ಎ ಓದುವಾಗ ನಮ್ಮ ಪ್ರಾಧ್ಯಾಪಕರೊಬ್ಬರ ಅಂಗಿ ಜೇಬಿನಲ್ಲಿ ಎರಡೆರಡು ಪೆನ್ನು ಶೋಭಿಸುತ್ತಿದ್ದವು. ನಾವೆಲ್ಲ ಅವರನ್ನು ಆಡಿಕೊಂಡಿದ್ದೂ ಇದೆ. ಕೆಲವೊಮ್ಮೆ ಪೆನ್ನು ಕೈಕೊಟ್ಟಾಗ ಅವರು ಯಾಕೆ ಎರಡು ಪೆನ್ನು ಇಟ್ಟುಕೊಳ್ತಾರೆ ಅಂತ ನಮಗೆ ಅರ್ಥವಾಗಿತ್ತು.

ಬ್ಯಾಂಕಿಗೋ, ಅಂಚೆಕಚೇರಿಗೋ ಹೋದಾಗ ಪೆನ್ನು ಇಲ್ಲದೆ ಹೋದರೆ ಆಗುವ ಅನುಭವ ವಿಶೇಷದ್ದು; ʻನಿಮ್ಮ ಪೆನ್ನು ಕೊಡ್ತೀರಾʼ ಅಂತ ಕೇಳಿದರೆ ಕೈಯಲ್ಲಿ ಪೆನ್ನು ಹಿಡಿದಿರುವಾಗ ಇಲ್ಲ ಅನ್ನೋದು ಕಷ್ಟ. ಅದಕ್ಕೆ ಉಪಾಯ ಅಂದ್ರೆ ಪೆನ್ನಿನ ಕ್ಯಾಪನ್ನು ತಮ್ಮ ಬಳಿ ಇಟ್ಟುಕೊಂಡು ಪೆನ್ನನ್ನು ಮಾತ್ರ ಕೊಡೋದು, ಕೊಟ್ಟ ಪೆನ್ನು ವಾಪಸ್ಸು ಬರಬೇಕಲ್ಲ ಅದಕ್ಕೆ. ಪೆನ್ನು ಸ್ನೇಹಕ್ಕೂ ಜಗಳಕ್ಕೂ ಕಾರಣವಾಗುವುದೂ ಇದೆ. ʻನನ್ನ ಪೆನ್ನನ್ನು ಕದ್ದಿದ್ದಾರೆʼ ಎಂದು ದೂಷಿಸಿದರೆ ಜಗಳ ಆಗಬಹುದು. ಪತ್ರ ವ್ಯವಹಾರದ ಮೂಲಕ ಸ್ನೇಹ ಬೆಳೆದು ಪೆನ್‌ ಫ್ರೆಂಡ್‌ ಅಂತ ಎಲ್ಲಿಯೋ ಇರುವವರ ನಡುವೆ ಗೆಳೆತನವೂ ಬೆಳೆಯಬಹುದು. ಪೆನ್‌ನೇಮ್‌ ಅಂತ ಇಂಗ್ಲಿಷ್‌ನಲ್ಲಿ ಹೇಳುತ್ತಾರೆ. ಅಂದರೆ ಕತೆ, ಕವನ, ಕಾದಂಬರಿ ಇತ್ಯಾದಿ ಬರೆಯುವವರು ತಮ್ಮ ಹೆಸರಿಗೆ ಬದಲು ಬರವಣಿಗೆಗಾಗಿ ಮತ್ತೊಂದು ಹೆಸರನ್ನು ಇಟ್ಟುಕೊಳ್ಳುವುದು. ಕನ್ನಡದಲ್ಲಿ ಕಾವ್ಯನಾಮ ಅನ್ನುತ್ತೇವೆ. ದ.ರಾ.ಬೇಂದ್ರೆಯವರ ಕಾವ್ಯನಾಮ ಅಂಬಿಕಾತನಯದತ್ತ ಅಂತ. ಕುವೆಂಪು, ಕಾವ್ಯಾನಂದ, ಆನಂದಕಂದ ಎಲ್ಲವೂ ಕಾವ್ಯನಾಮವೇ. ಲೇಖಕರಿಗೆ ಪೆನ್ನಿನ ವ್ಯಾಮೋಹ ಜಾಸ್ತಿ. ಯಾಕೆಂದರೆ ಅವರ ಬರವಣಿಗೆಗೆ ಪೆನ್ನು ಬಹಳ ಮುಖ್ಯ ಅಲ್ವಾ? ಅದಕ್ಕೆ ಇರಬಹುದು.

ಹಿರಿಯ ಲೇಖಕರ ಪೆನ್ನನ್ನು ನೂರಾರು ಕಾಲ ಕಾಪಾಡುವ ರಿವಾಜಿದೆ. ಇದರಿಂದ ಯಾವ ಕಾಲಘಟ್ಟದಲ್ಲಿ ಯಾವ ರೀತಿಯ ಪೆನ್ನು ಬಳಕೆಯಲ್ಲಿತ್ತು ಎನ್ನುವ ಮಾಹಿತಿ ಸುಲಭವಾಗಿ ದೊರೆಯುತ್ತದೆ. ಹಿಂದಿನವರದು ಮೋಡಿ ಅಕ್ಷರ. ಅವರ ಸಹಿ ವಿಶೇಷವಾಗಿರುವುದೂ ಇತ್ತು. ಏನೇ ಹೇಳಿ ಇಂಕು ಪೆನ್ನಿನಿಂದ ಸಹಿ ಮಾಡಿದಂತೆ ಬಾಲ್‌ಪಾಯಿಂಟ್‌ ಪೆನ್ನಲ್ಲಿ ಸಹಿ ಮಾಡಕ್ಕಾಗಲ್ಲ ಎನ್ನುವುದು ಒಂದು ತಲೆಮಾರಿನವರ ಅಂಬೋಣ. ನಾಜೂಕಿನ ಸಹಿಗೆ ಮೊದಲನೆಯ ರೀತಿಯದೆ ಸರಿ. ಪಾಯಿಂಟ್‌ ಪೆನ್ನನ್ನು ಒತ್ತಿ ಬರೆಯಬೇಕು. ಇಂಕು ಪಸರಿಸುತ್ತೆ ಅನ್ನೋ ಭಯ ಇಲ್ಲದೆ ಆರಾಮವಾಗಿ ಇದನ್ನು ಎಲ್ಲಿ ಬೇಕಾದ್ರೂ ಕೊಂಡೊಯ್ಯಬಹುದು.

ಅದೃಷ್ಟದ ಪೆನ್ನು ಎಂದು ತಮ್ಮ ಪೆನ್ನಿನ ಬಗ್ಗೆ ಬಹಳ ಮುತುವರ್ಜಿವಹಿಸುವುದೂ ಇದೆ. ಅದೇನಾದರೂ ಕಳೆದುಹೋಯಿತು ಅಂದ್ರೆ ಆಗ ನೋಡಬೇಕು ಭೂಮಿ ಆಕಾಶ ಒಂದು ಮಾಡುವ ಥರಾ ಕೂಗಾಡುವುದನ್ನು. ಸಿಗಲಿಲ್ಲ ಅಂದರೆ ಮನೆಮಂದಿಗೆಲ್ಲ ಮಂತ್ರಾಕ್ಷತೆ ಬೇರೆ. ಅವರ ಅವತಾರ ನೋಡಿದ್ರೆ ಏನೋ ಆಗಬಾರದ್ದು ಆಗಿದೆ ಅನ್ನುವ ರೀತಿ ನಡವಳಿಕೆ. ಪೆನ್ನು ಕೈಗೆ ಬಂತು ಅಂದರೆ ಎಲ್ಲವೂ ತಣ್ಣಗೆ. ಕೆಲವರ ಸಹಿಯನ್ನಂತೂ ಯಾರಿಗೂ ನಕಲು ಮಾಡಲು ಆಗದಂತಹುದು. ಇಂಕು ಪೆನ್ನಿನ ಸಹಿಯನ್ನು ಅಳಿಸೋದು ಕಷ್ಟ. ಅದರಲ್ಲಿಯೂ ದಸ್ತವೇಜಿಗೋ, ಆಸ್ತಿಯ ಕ್ರಯಪತ್ರಕ್ಕೋ ಸಾಕ್ಷಿಯ ಸಹಿ ಬಹಳ ಮುಖ್ಯವೇ. ಯಾರಾದರೂ ಸುಳ್ಳುಸಾಕ್ಷಿ ಸೃಷ್ಟಿಸಿದರೆ ಯಾವ ಪೆನ್ನಿನಲ್ಲಿ ಸಹಿ ಮಾಡಲಾಗಿದೆ ಎನ್ನುವುದರಿಂದ ಸತ್ಯಾಸತ್ಯತೆಯನ್ನು ಕಂಡುಹಿಡಿಯುತ್ತಿದ್ದರು.

ವ್ಯಕ್ತಿಯೊಬ್ಬನ ಕೈಬರಹ ಆತನ/ಆಕೆಯ ಸ್ವಭಾವದ ಕೈಗನ್ನಡಿ ಎನ್ನುವ ಮಾತಿದೆ. ಕೈಬರಹಗಳ ಅಧ್ಯಯನ ಒಂದು ವೈಜ್ಞಾನಿಕ ಸಂಗತಿಯೂ ಹೌದು. ಇಂಥ ಪೆನ್ನಿಗೆ ಈಗ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ. ಇತ್ತೀಚೆಗೆ ಸಹಿ ಮಾಡುವ ರೂಢಿ ಕಡಿಮೆಯಾಗುತ್ತಿದೆ. ಹೆಚ್ಚಿನ ಕಡೆ ಮುಖಚಹರೆಯ ಅಥವಾ ಕೈಬೆರಳಿನ ಗುರುತಿನ ಮೂಲಕದ ಹಾಜರಾತಿ ಕಡ್ಡಾಯ. ಬರವಣಿಗೆ ಹೇಗೂ ಕಂಪ್ಯೂಟರ್‌ ಮೂಲಕ. ಇನ್ನು ಪತ್ರ ವ್ಯವಹಾರವಂತೂ ಇಲ್ಲವೇ ಇಲ್ಲ. ಅದೆಲ್ಲ ಓಬಿರಾಯನ ಕಾಲದ್ದು ತಾನೆ. ಈಗಂತೂ ವಾಟ್ಸಾಪ್‌ ಇದೆಯಲ್ಲ. ಬೇಕಿರಲಿ ಇಲ್ಲದಿರಲಿ ಅದರಲ್ಲಿ ಗೀಚಲು ಅಡ್ಡಿಯಿಲ್ಲ. ಆಗ ಹೇಳುವುದಿತ್ತು ನನಗೆ ಪತ್ರ ಬರೆಯಲು ಪುರುಸೊತ್ತೇ ಆಗಲಿಲ್ಲ ಅಂತ. ಈಗ ಮೊಬೈಲಿನಲ್ಲಿ ಗೀಚಲು ಸಮಯದ ನಿರ್ಬಂಧವಿಲ್ಲ. ಮನೆಗೆ ಬಂದವರನ್ನು ಮಾತನಾಡಿಸಲು ಮಕ್ಕಳ ಬಗೆಗೆ ಗಮನ ಕೊಡಲು ಪುರುಸೊತ್ತಿಲ್ಲ ಅಷ್ಟೆ.

ಈ ಆಧುನಿಕತೆಯ ನಡುವೆಯೂ ಕೆಲವು ವ್ಯವಹಾರದಲ್ಲಿ ಪೆನ್ನಿಗೆ ತಮ್ಮದೇ ಆದ ಪ್ರಾಧಾನ್ಯವಿದೆ. ಯಾರಾದರೂ ಪತ್ರ ಬರೆದರೆ ಅದನ್ನು ಕಾಪಾಡಿಕೊಳ್ಳುವುದು ಸುಲಭ. ಪ್ರೇಮಪತ್ರ, ವಿಮರ್ಶಾತ್ಮಕ ನುಡಿ, ಬಹಳ ಪ್ರತಿಷ್ಠಿತರ ಪತ್ರ ಹೀಗೆ ನೆನಪಿನಲ್ಲಿ ಇಡಬೇಕಿದ್ದ ಅಮೂಲ್ಯ ಸಂಗ್ರವಿದು. ಇಲ್ಲಿ ಪೆನ್ನಿನದೇ ಕಾರುಬಾರು. ಕೈಬರಹಗಳ ಸಂಗ್ರಹಾಲಯಗಳಿವೆ. ಆದಾಗ್ಯೂ, ಇಷ್ಟೊಂದು ವ್ಯಾಪಕವಾಗಿ, ನಮ್ಮ ಬದುಕಿನ ಭಾಗವಾಗಿಯೇ ಬೆಳೆದುಬಂದ ಪೆನ್ನು ಈಗ ಎಲ್ಲಿ ಹೋಯಿತು?