ಯುಗಾದಿ ಮತ್ತು ಅವ್ವನ ನೆನಪು

ಪ್ರತೀ ಯುಗಾದಿ ಹಬ್ಬದಂದು ನನ್ನವ್ವ
ಅಂಗಾಲಿನಿಂದ ಹಿಡಿದು ಮೈಕೈ ನೆತ್ತಿಯವರೆಗೂ
ಬೇವಿನೆಲೆಯ ಕಾದ ಕಂಪು ಕೊಬ್ರೆಣ್ಣಿಯ ಹಚ್ಚಿ ಬರೀ ಮೈಯಲ್ಲೇ ಅಂಗಳದ ಬಿಸಿಲಿಗೆ ಓಡಿಸುತ್ತಿದ್ದಳು!

ದೇಹ ಮನಸ್ಸೆಲ್ಲಾ ಎಣ್ಣೆ ಹಿಂಗಿ
ಬಿಸಿಲು ಬೆವರು ಕೂಡಿ ನಲಿದ ಮೇಲೆ
ಅವ್ವ, ಬೇವಿನ ಎಲೆ ಬಿಸಿನೀರ ಸಾಂಗತ್ಯದಲಿ
ಸೋಪಿಲ್ಲದೆ ಸ್ನಾನಮಾಡಿಸಿ
ಹಳೆಯದೋ ಹೊಸದೋ ಬಟ್ಟೆತೊಡಿಸಿ
ಮಕ್ಕಳಿಗೆ ಹಬ್ಬವಾಗುತ್ತಿದ್ದಳು

ಈಗ ಆ ಅವ್ವನ ಸುಖವೆಲ್ಲಿ!?

ಅವ್ವನ ಯುಗಾದಿ ಎಂದರೆ_
ಬಸಿದ ಹೊಸ ಶ್ಯಾವಿಗೆ
ಬೆಲ್ಲ ಹಾಲು ತುಪ್ಪ
ಮರುದಿನ ಹೋಳಿಗೆ, ನವಣೆ ಕಿಚಡಿ
ಕಟ್ಸಾರು
ನೆಂಜಿಕೊಳ್ಳಲು ಹೋಳು ಬದನೆ ಪಲ್ಯೆ

ಮಾಳಿಗೆ ಮ್ಯಾಲೆ ಹಾಕಿದ
ಪಂಜೆ, ಸೀರೆಗಂಟಿದ ಶೆಂಡಿಗೆ
ಕರಿದ ಹಪ್ಪಳ
ಸಣ್ಣ ಜಾಡಿಯ
ಕಳಿತ ಕಂಪು ಮಾವಿನ
ಉಪ್ಪಿನ ಕಾಯಿ
ಅವ್ವನ ಯುಗಾದಿಯೆಂಬೋ
ಯುಗಾದಿ!

ಬಾಯೆಲ್ಲಾ ಬರೀ ಸಿಹಿಯಿದ್ದಾಗ
ಯುಗಾದಿ ಕಳೆದು ಕರಿಯ ಆರಂಭ
ಅಲ್ಲಿಯೂ ಅವಳದೇ ಪಾತ್ರ
ಪುಟ್ಟ ಪಾಲು ಹಾಕಿದ ಆಡು, ಕುರಿ, ಓತ, ಟಗರಿನದೋ
ಮಾಂಸ ತಂದು
ಒಣ ಕೊಬ್ಬರಿ, ಯಾಲಕ್ಕಿ, ಚೆಕ್ಕಿ, ಶುಂಠಿ, ಅವಿಜಗಳ
ಒಣಖಾರಾ, ಬೆಳ್ಳುಳ್ಳಿ, ಕರಿದ ಈರುಳ್ಳಿ
ರುಚಿ ಉಪ್ಪುಬೆರೆತ ಒರಳಲ್ಲಿ ರುಬ್ಬಿದ ಗುಂಡು ಮಸಾಲೆ
ಎಲ್ಲವೂ ಅವಳ ಕೈಮನವ ಸುಗಂಧವಾಗಿಸಿ
ಅಲ್ಪಪ್ರಾಣದೆಣ್ಣೆಯಲಿ ಒಂದೇ ಸವನೆ ಬೇಯುತ್ತಿದ್ದರೆ
ಮನೆ ಅಂಗಳ ಓಣಿಯೆಲ್ಲಾ ಕಂಪೋ
ಕಂಪು!

ಇಲ್ಲಿ ಕುರಿ, ಅಲ್ಲಿ ಕೋಳಿ
ಇನ್ನೆಲ್ಲೋ ಕೆರೆಯ ಮುಳ್ಳುಮೀನು
ಊರಿಗೆ ಊರೇ ಹಬ್ಬ
ಈ ಭಾಗ್ಯವಿಲ್ಲದವರಿಗೆ
ಹೋಳಿಗೆ ಹೂರಣವೇ ಸೌಭಾಗ್ಯ!!

ಚೆಂಡಾಟ, ಚಿಣ್ಣಿಕೋಲು, ಬಗರೆಯಾಟ
ಮರಕೋತಿ, ಕಪ್ಪೆ, ಲಿಂಬೆಹಣ್ಣು, ವಟ್ಟಪ್ಪಿನಾಟ
ದುಂಡುಗಲ್ಲಿನ ಪೌರುಷ, ಹೆಣ್ಣುಮಕ್ಕಳ ಕೊಬ್ರಿ ಆಟ,
ಕುಂಟಾಬಿಲ್ಲೆ
ಬಳೆಚೂರು ಕೂಡಿದ ಚಾವಿಮನೆ, ದಾಳವಾದ ಕವಡೆ- ಹುಣುಸೇ ಬೀಜ
ಓಣಿತುಂಬೆಲ್ಲಾ ಗೋಲಿಯಾಟ
ಇನ್ನೆಲ್ಲೋ ಭಜನೆ ಕೋಲಾಟ
ಸಣ್ಣಾಟ

ಬದುಕೆಂದರೆ ಹೀಗೇ ಒಟ್ಟುಗೂಡಿ ಹಬ್ಬವಾಗುವುದು
ಅವ್ವ ಬಿಟ್ಟುಹೋದ ನೆನಪಲ್ಲೇ
ನಾನು-
ನಮ್ಮಂಥವರು
ಅವ್ವ ಅಪ್ಪನ ಜೊತೆಗಿದ್ದವರು
ತೇರಾಗುವುದು
ಮಣ್ಣ ಮಮತೆಯ ಬೇರಾಗುವುದು.