ಶಿವರುದ್ರಯ್ಯ ಸದಾಶಿವಯ್ಯ ಹಿರೇಮಠ. ಹಾಗೆಂದರೆ ಯಾರಿಗೂ ಗೊತ್ತಾಗುವುದಿಲ್ಲ. ಕಾರಣ ಅವರು ಎಸ್.ಎಸ್. ಹಿರೇಮಠ ಎಂದೇ ಹೆಸರಾದವರು. ಕನ್ನಡದ ಸಂಸ್ಕೃತಿ ಚಿಂತಕರೂ ಹಿರಿಯ ವಿದ್ವಾಂಸರೂ ಜನಪ್ರಿಯ ಪ್ರಾಧ್ಯಾಪಕರೂ ಆಗಿದ್ದ ಪ್ರೊ. ಹಿರೇಮಠರು (೧೯೫೦-೨೦೦೯) ಈಚೆಗೆ ತೀರಿಕೊಂಡರು. ಕಳೆದೆರಡು ವರುಷಗಳಿಂದ ಅವರು ಕ್ಯಾನ್ಸರ್‌ನಿಂದ ನವೆಯುತ್ತಿದ್ದರು.   ಕೊಟ್ಟೂರಿನ ಕಾಲೇಜಿನಿಂದ ನಿವೃತ್ತರಾದ ಬಳಿಕ ಅವರು, ಪ್ರಾಣವನ್ನು ಹುಟ್ಟೂರಿನಲ್ಲೇ ಬಿಡಲು ನಿರ್ಧರಿಸಿದವರಂತೆ, ಇದ್ದಕ್ಕಿದ್ದಂತೆ ಬೆಳಗಾವಿ ಜಿಲ್ಲೆಯ ಸಾಣಿಕೊಪ್ಪಕ್ಕೆ ಹೋಗಿಬಿಟ್ಟರು. ಒಂದು ದಿನ ಬೆಳಿಗ್ಗೆ ಅವರ ಸಾವಿನ ಸುದ್ದಿ ಬಂತು. ರೋಗಗ್ರಸ್ತ ದೇಹವು ಕೊಡುತ್ತಿದ್ದ ಯಾತನೆಯಿಂದಲೂ ಹಣಕಾಸಿನ ಕಷ್ಟದಿಂದಲೂ ಅನಿರೀಕ್ಷಿತವಾಗಿ ಕಣ್ಮರೆಯಾದ ಮಗನ ಅಗಲಿಕೆಯಿಂದಲೂ ಒದ್ದಾಡುತ್ತ, ‘ಉಸಿರಿಗೆ ಒಮ್ಮೆ ಜನನಾ ಮರಣಾ’ ಮಾಡುತ್ತಿದ್ದ ಅವರಿಗೆ, ಸಾವು ಬಹುಶಃ ಪರಿಹಾರವಾಗಿತ್ತೇನೊ? ಪರಿಸ್ಥಿತಿ ಅಷ್ಟು ದಾರುಣವಾಗಿತ್ತು.

ನರಳಿಕೆ ಪರಿತಾಪ ನೋವುಗಳಿಂದ ಬದುಕನ್ನು ಕೊನೆಗಾಣಿಸಿದ ಹಿರೇಮಠರ ಜೀವನ ಮಾತ್ರ, ಓದು ಬರೆಹ ಹೋರಾಟ ತಿರುಗಾಟ ಚರ್ಚೆ ಹಾಗೂ ತಾತ್ವಿಕ ಜಗಳಗಳಿಂದ ಕೂಡಿ ವರ್ಣರಂಜಿತವಾಗಿತ್ತು. ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ ನಾನು ಅವರ ಹೆಸರನ್ನು ಕೇಳಿದ್ದೆ. ಸಭೆಗಳಲ್ಲಿ  ನೋಡಿ ಕೂಡ ಇದ್ದೆ. ಆದರೆ ಅವರ ಸ್ನೇಹವಾಗಿರಲಿಲ್ಲ. ಅವರ ವ್ಯಕಿತ್ವದ ನಿಜವಾದ ಪರಿಚಯವಾಗಿದ್ದು ಕನ್ನಡ ವಿಶ್ವವಿದ್ಯಾಲಯಕ್ಕೆಂದು ಹಂಪಿಗೆ ಹೋದಾಗಲೇ (೧೯೯೨). ಆ ಹೊತ್ತಿಗಾಗಲೇ ಬಳ್ಳಾರಿ ಜಿಲ್ಲೆಯಲ್ಲಿ ಅವರ ಬಗ್ಗೆ ಅನೇಕ ದಂತಕತೆಗಳು ಹಬ್ಬಿದ್ದವು. ಸರ್ಕಾರಿ ಕಾರ್ಯಕ್ರಮಗಳಿಗೆ ಹೋದಾಗ, ಪ್ರಥಮದರ್ಜೆ ರೈಲ್ವೆ ಪ್ರಯಾಣದ ಹಣವನ್ನು ಸ್ವೀಕರಿಸಲು ನಿರಾಕರಿಸಿ, ಬಸ್‌ಛಾರ್ಜನ್ನಷ್ಟೇ ಸ್ವೀಕರಿಸಿ ಬರುತ್ತಾರೆ; ವಿದ್ಯಾರ್ಥಿಗಳನ್ನು ಕೂಡಿಸಿಕೊಂಡು ಅನ್ಯಾಯಗಳ ವಿರುದ್ಧ ಚಳುವಳಿ ಮಾಡಿಸುತ್ತಾರೆ; ಬಳ್ಳಾರಿಯಲ್ಲಿರುವ ಎಡಪಂಥೀಯ ಚಳುವಳಿಗೆ ತಮ್ಮ ಜೀವನವನ್ನೇ ತ್ಯಾಗಮಾಡಿದ್ದಾರೆ ಇತ್ಯಾದಿ. ತಾವು ಹೋದೆಡೆಯಲ್ಲೆಲ್ಲ ತಮ್ಮ ಮಾರ್ಕ್ಸ್‌ವಾದಿ ಚಿಂತನೆಯಿಂದ ವಿದ್ಯಾರ್ಥಿಗಳ ಲೋಕದೃಷ್ಟಿಯನ್ನೇ ಬದಲಿಸುತ್ತಿದ್ದ ಹಿರೇಮಠರು ಜಿಲ್ಲೆಯ ತುಂಬ ಶಿಷ್ಯರನ್ನು ಹೊಂದಿದ್ದರು. ಕರ್ನಾಟಕದ ಅನೇಕ ಕಮ್ಯುನಿಸ್ಟ್ ನಾಯಕರು, ಈ ಭಾಗದ ಬಹುತೇಕ ಸಿಪಿಎಂ ಕಾರ್ಯಕರ್ತರು ಅವರ ಗರಡಿಯಲ್ಲಿ ಪಳಗಿದವರು. ಜತೆಗೆ ಚಿಂತಕ ಕೆ. ಫಣಿರಾಜ್, ಪತ್ರಕರ್ತ ಗುಡಿಹಳ್ಳಿ ನಾಗರಾಜ, ಕವಿಗಳಾದ ಪರಶುರಾಮ ಕಲಾಲ್, ನಿಂಗಪ್ಪ ಮುದೇನೂರು, ಬಿ.ಪೀರಬಾಶಾ-  ಹೀಗೆ ಅವರ ಶಿಷ್ಯ ಬಳಗ ಅನೇಕ ಕ್ಷೇತ್ರಗಳಲ್ಲಿದೆ. ಹಲವಾರು ವಿದ್ಯಾರ್ಥಿಗಳಿಗೆ ಹಣ ಕಳಿಸಿ ಓದಿಸುತ್ತಿದ್ದ ಹಿರೇಮಠರ ಮನೆ ಒಂದು ಬಗೆಯ ವಿದ್ಯಾರ್ಥಿ ನಿಲಯದಂತಿತ್ತು. ಶಿಷ್ಯರನ್ನು ತಾಯಂತೆ ಪ್ರೀತಿಸುತ್ತಿದ್ದ ಅವರು ಶಿಷ್ಯರ ಕವನಗಳನ್ನು ಸ್ವತಃ ಪ್ರಕಟಿಸುತ್ತಿದ್ದರು. ಅವರ ಜತೆಗೂಡಿ ತಿರುಗುತ್ತಿದ್ದರು. ತಮ್ಮ ಪುಸ್ತಕಗಳಿಗೆ ಅವರಿಂದ ಮುನ್ನುಡಿ ಬರೆಯಿಸುತ್ತಿದ್ದರು. ಒಬ್ಬ ಗುರುವೊಬ್ಬ ತನ್ನ ಅಧ್ಯಾಪನ ಕರ್ತವ್ಯದ ಜತೆಗೆ ಸಮಾಜವನ್ನು ಕಟ್ಟಲು ಹೇಗೆ ಯುವ ಮನಸ್ಸುಗಳನ್ನು ಸಿದ್ಧಗೊಳಿಸಬಹುದು ಎಂಬುದಕ್ಕೆ ಅವರೊಬ್ಬ ಅಪೂರ್ವ ಸಾಕ್ಷಿಯಂತಿದ್ದರು.

ವೀರಶೈವ ವಿದ್ಯಾವರ್ಧಕ ಸಂಘವು ಬಳ್ಳಾರಿ ಜಿಲ್ಲೆಯ ಸಣ್ಣ ಪಟ್ಟಣ ಕೇಂದ್ರಗಳಲ್ಲಿ ನಡೆಸುತ್ತಿದ್ದ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಹಿರೇಮಠರು, ಕನ್ನಡ ವಿವಿಗೆ ಬಂದರು. ಬರುವ ಮೊದಲೇ ಕರ್ನಾಟಕ ಸಂಸ್ಕೃತಿಯ ಅಧ್ಯಯನಕ್ಕಾಗಿ ಅದು ಏನೆಲ್ಲ ಮಾಡಬೇಕು ಎಂದು ಪ್ರಣಾಳಿಕೆ ರೂಪದ ಪುಸ್ತಿಕೆ ಪ್ರಕಟಿಸಿದ್ದರು. ಸದಾ ಓದುಬರೆಹ ಚಿಂತನೆ ಮಾಡುತ್ತಿದ್ದ ಅವರಿಗೆ ಬಳ್ಳಾರಿ ಜಿಲ್ಲೆಗೆ ಸಂಶೋಧನ ವಿಶ್ವವಿದ್ಯಾಲಯವೊಂದು ಬಂದಿದ್ದು, ‘ಅರಲುಗೊಂಡ ಗಿಡಕೆ ತೊರೆಬಂದು ಹೊಯ್ದಂತೆ’ ಆಗಿತ್ತು. ಅವು ಕನ್ನಡ ವಿವಿಯ ಮೊದಲ ದಿನಗಳು. ಆಗ ನಮಗೆ ಸ್ವಂತ ಕಟ್ಟಡವಿರಲಿಲ್ಲ. ಮೇಜುಕುರ್ಚಿ ಕೂಡ ಸರಿಯಾಗಿ ಇರಲಿಲ್ಲ. ಕೆಲವರು ಹಂಪಿಯ ಪುರಾತತ್ವ ಇಲಾಖೆಯ ಮಂಟಪಗಳಿಲ್ಲಿದ್ದರೆ, ನಾನು, ಪುರುಷೋತ್ತಮ ಬಿಳಿಮಲೆ, ಹಿರೇಮಠ ಮುಂತಾದವರು ಕಾಮಲಾಪುರದ ಪಿಡಬ್ಲುಡಿ ಪ್ರವಾಸಿ ಮಂದಿರದ ಒಂದು ಭಾಗದಲ್ಲಿದ್ದುಕೊಂಡು ಕೆಲಸ ಮಾಡುತ್ತಿದ್ದೆವು. ವಿಶ್ವವಿದ್ಯಾಲಯವು ಕೊಟ್ಟ ಎಲ್ಲ ಕೆಲಸಗಳಲ್ಲಿ ತೊಡಗಿಕೊಂಡು ಹಿರೇಮಠರು ಶ್ರದ್ಧೆಯಿಂದ ದುಡಿಯಲಾರಂಭಿಸಿದರು. ಮೊದಲಿಗೆ ಅವರಿಗೆ ಗ್ರಾಮದೇವತೆಗಳ ದಾಖಲಾತಿಗಳನ್ನು ಆಧರಿಸಿ ವಿಶ್ವಕೋಶವೊಂದಕ್ಕೆ ಟಿಪ್ಪಣಿಗಳನ್ನು ಸಿದ್ಧಪಡಿಸುವ ಕೆಲಸ ವಹಿಸಲಾಗಿತ್ತು. ಅವರು ಅದನ್ನು ಬರೆಯುತ್ತ ಕೈನೋವಾದಾಗ ಪೆನ್ನಿಗೆ ಕರ್ಚೀಫು ಕಟ್ಟಿ ಅದನ್ನು ದಪ್ಪಮಾಡಿ ಕಂಠಪತ್ರದಂತೆ ಹಿಡಿದು ಕೆಲಸ ಮಾಡುತ್ತಿದ್ದರು. ಹಳೆಯ ವೈಷ್ಣವಗುಡಿಯನ್ನೇ ಪ್ರವಾಸಿ ಮಂದಿರ ಮಾಡಿದ್ದರಿಂದ, ಅದರ ಕಂಬಕ್ಕೆ ಒರಗಿ ಸೆಖೆಗೆ ಶರಟನ್ನು ತೆಗೆದಿಟ್ಟು ಬರೆಯುತ್ತಿದ್ದ ಅವರು, ಪ್ರಾಚೀನ ಕವಿಗಳ ಕಥೆಗಳನ್ನು ನೆನಪಿಸುತ್ತಿದ್ದರು.

ಕೊಪ್ಪಳದ ಅಶೋಕನ ಶಾಸನವಿರುವ ಬಂಡೆಯ ಮುಂದೆ ಲೇಖಕರ ಜೊತೆ ಹಿರೇಮಠರು (ಬಲದ ಕೊನೆಯಲ್ಲಿರುವವರು)ಅವರು ಹೊಸಪೇಟೆಯಲ್ಲಿ ನನ್ನ ಮನೆಗೆ ಸಮೀಪದಲ್ಲೇ ಮನೆ ಹಿಡಿದರು. ಅವರ ಸ್ವಂತ ಗ್ರಂಥಸಂಗ್ರಹ ಕಂಡು ನನಗೆ ಬೆರಗಾಗಿತ್ತು. ನಾನು ಕಂಡಂತೆ ಹೀಗೆ ದೊಡ್ಡ ಸ್ವಂತ ಗ್ರಂಥಾಲಯ ಹೊಂದಿರುವ ವಿದ್ವಾಂಸರೆಂದರೆ ಪುಣೆಯ ರಾಚಿಂಢೇರೆ. ಹಿರೇಮಠರು ಯಾವಾಗ ಮನೆಗೆ ಹೋದರೂ ದಪ್ಪಕಟ್ಟಿನ ಕನ್ನಡಕ ಹಾಕಿಕೊಂಡು, ಕುರ್ಚಿಯ ಕೈಗಳ ಮೇಲೆ ಅಡ್ಡಹಲಗೆ ಇಟ್ಟುಕೊಂಡು, ನಲವತ್ತು ಕ್ಯಾಂಡಲ್ ಬಲ್ಬಿನ ಮಿಣಿಮಿಣಿ ಬೆಳಕಿನಲ್ಲಿ ಏನಾದರೂ ಓದು ಬರವಣಿಗೆಯಲ್ಲಿ ತೊಡಗಿರುತ್ತಿದ್ದರು. ಅವರಿಗೆ ಪುಸ್ತಕಗಳ ಮೈತುಂಬ ಬರೆಯುವ ಚಾಳಿಯಿತ್ತು. ಎರೇಹುಳುಗಳು ನಿಂತು ಕುಣಿಯುತ್ತಿರುವಂತಹ ಅಕ್ಷರಗಳಲ್ಲಿ ಪುಸ್ತಕಗಳ ಮಾರ್ಜಿನಿನ ಉದ್ದಕ್ಕೂ ಟಿಪ್ಪಣಿಗಳು. ಅವರು ವಿದ್ವತ್ತಿನ ವಿಷಯದಲ್ಲಿ ತಮ್ಮ ಬೆಳಗಾವಿ ಸೀಮೆಯ ಶಂಬಾ ಪರಂಪರೆಯ ಉತ್ತರಾಧಿಕಾರಿಯಂತಿದ್ದರು. ಮಹಾ ಅಧ್ಯಯನಶೀಲರಾದ ಅವರು ಶಂಬಾರಂತೆಯೇ ಸಂವಹನದ ವಿಷಯದಲ್ಲಿ ಹೆಚ್ಚು ತಲೆಕೆಡಿಸಿಕೊಳ್ಳದೇ ಬರೆಯುತ್ತಿದ್ದರು. ಅವರಂತೆಯೇ ನಾಡಿನ ದಮನಿತ ಸಮುದಾಯಗಳ ಸಾಂಸ್ಕೃತಿಕ ಅಧ್ಯಯನ ಮಾಡುತ್ತಿದ್ದರು. ವ್ಯತ್ಯಾಸವೆಂದರೆ, ಶಂಬಾರ ಬರೆಹಕ್ಕೆ ಇಲ್ಲದ ರಾಜಕೀಯ ಕ್ರಿಯಾಶೀಲತೆ ಮತ್ತು ವರ್ತಮಾನದ ಪ್ರಜ್ಞೆ ಹಿರೇಮಠರಿಗಿತ್ತು.

ಶಂಬಾ ಬಿಟ್ಟರೆ ಹಿರೇಮಠರ ಮೇಲೆ ಬಹಳ ಪ್ರಭಾವ ಬೀರಿದ ವಿದ್ವಾಂಸರೆಂದರೆ, ದೇವಿಪ್ರಸಾದ್ ಚಟ್ಟೋಪಾಧ್ಯಾಯ. ದೇವಿಪ್ರಸಾದರ ‘ಲೋಕಾಯತ’ವು ಅವರ ಪಾಲಿಗೆ ಭಕ್ತನೊಬ್ಬನ ಧಾರ್ಮಿಕ ಗ್ರಂಥದ ಪಠಣದಂತಿತ್ತು. ಈ ಕಾರಣಕ್ಕೆ ಅವರನ್ನು ಕನ್ನಡದ ದೇವಿಪ್ರಸಾದರೆಂದೂ ಕರೆಯಬಹುದು. ಭಾರತದ ಜನಪರ ಸಮಾಜವಾದಿ ದರ್ಶನಗಳು ಸಮುದಾಯಗಳ ಬದುಕಿನಲ್ಲಿ ರೂಪಾಂತರಗೊಂಡು ಸುಪ್ತವಾಗಿರುವ ಬಗೆಯ ಹುಡುಕಾಟವನ್ನು ಅವರು ಮಾಡುತ್ತಿದ್ದರು. ಈ ಹುಟುಕಾಟದ ಫಲವೇ ಅವರು ತಮ್ಮ ಬದುಕಿನ ಕೊನೆಗೆ ಪ್ರಕಟಿಸಿದ ಪಾಶುಪತ, ಸಾಂಖ್ಯ, ಕಾಳಾಮುಖ, ಲೋಕಾಯತ, ಲಾಕುಳ ದರ್ಶನಗಳ ಮೇಲಿನ ಪುಸ್ತಕಗಳು. ಯೋಗ ಮತ್ತು ತಂತ್ರದರ್ಶನದ ಬಗ್ಗೆ ಅವರು ಪುಸ್ತಕ ಸಿದ್ಧಮಾಡುತ್ತಿದ್ದರು. ಈ ಪುಸ್ತಕಗಳ ಮೇಲೆ ಕನ್ನಡದ ವಿದ್ವತ್‌ಲೋಕ ಇನ್ನೂ ಚರ್ಚೆಯನ್ನೇ ಮಾಡಿರಲಿಲ್ಲ. ಅಷ್ಟರಲ್ಲೇ ಸಾವು ‘ಬರೆದದ್ದು ಸಾಕು ಬಾ’ ಎಂದು ಅವರನ್ನು ಕರೆದುಕೊಂಡು ಹೋಗಿಬಿಟ್ಟಿತು.

ಹಿರೇಮಠರಿಗಿದ್ದ ಜನಪರ ಕಾಳಜಿ, ಅಧ್ಯಯನ ಮತ್ತು ಶ್ರಮಗಳಿಗೆ ತಕ್ಕ ಅಚ್ಚುಕಟ್ಟುತನ ಅವರ ಬರವಣಿಗೆಯಲ್ಲಿ ಇರಲಿಲ್ಲ ಎಂದು; ತಮ್ಮ ಅಪಾರ ಅಧ್ಯಯನದ ಬಲದಿಂದಲೇ ತರ್ಕಬದ್ಧವೂ ವ್ಯವಸ್ಥಿತವೂ ಆದ ಸಿದ್ಧಾಂತ ಕಟ್ಟಲು ಬೇಕಾದ ಕುಶಲತೆ ಅವರಿಗಿರಲಿಲ್ಲ ಎಂದು; ಅವರ ಚಿಂತನೆ ಕೆಲಮಟ್ಟಿಗೆ ಅಸ್ತವ್ಯಸ್ತ ಅಥವಾ ಇನ್ನೂ ಅದು ಹರಳುಗಟ್ಟುವ ಮೊದಲೇ ಅವನ್ನು ತೆಗೆದುಕೊಡುತ್ತಿದ್ದರು. ತಾವು ಆರಂಭಿಸಿದ ಪಯಣವನ್ನು ಮತ್ತೊಬ್ಬರು ಮುಂದುವರೆಸಬೇಕು ಎಂಬಂತೆ ಅವರು ಅರೆಸಾಧಿತ ಟಿಪ್ಪಣಿಗಳನ್ನು ಬರೆಯುತ್ತಿದ್ದರು. ಪುಸ್ತಕ ಪ್ರಕಟಣೆಯಲ್ಲಿ ಕೂಡ ಅಂತಹ ಸೌಂದರ್ಯವಿರಲಿಲ್ಲ. ಕೈಗೆಸಿಕ್ಕ ಪೇಪರ್ ಬಳಸಿ ಕಣ್ಣಿಗೆ ಕಂಡ ಪ್ರೆಸ್ಸಿನಲ್ಲಿ ಪ್ರಕಟವಾದ ಪುಸ್ತಕಗಳು. ಅವರ ಹಬ್ಬಗಳನ್ನು ಕುರಿತ ಅಮೂಲ್ಯ ಪುಸ್ತಕವು ನ್ಯೂಸ್‌ಪ್ರಿಂಟಿನಲ್ಲಿ ಪ್ರಕಟವಾಗಿದೆ. ಕೆಲಸವನ್ನು ಮುಗಿಸುವ ಅವಸರವಿದ್ದ ಅವರಿಗೆ ಫಿನಿಶಿಂಗ್ ಟಚ್ ಕೊಡುವುದು ಸಾಧ್ಯವಾಗುತ್ತಿರಲಿಲ್ಲ. ಅವರ ಪುಸ್ತಕ ಮತ್ತು ಲೇಖನಗಳು ಕೆಲವೊಮ್ಮೆ ತಟ್ಟನೆ ಮುಗಿಯುತ್ತವೆ. ಈ ಪ್ರವೃತ್ತಿಯನ್ನು ಅವರು ತಮ್ಮ ಕುಟುಂಬ ಹಾಗೂ ಆರೋಗ್ಯದ ವಿಷಯದಲ್ಲೂ ತೋರಿದರೋ ಏನೋ?

ಕರ್ನಾಟಕ ವಿವಿಯಿಂದ ಚಿನ್ನದ ಪದಕ ಪಡೆದು ಹೊರಬಂದ ಹಿರೇಮಠರು ಬರಹ ಆರಂಭಿಸಿದ್ದು ಕವಿತೆಯಿಂದ. ಅವರು ತಮ್ಮ ಮತ್ತು ಶಿಷ್ಯರ ಕವಿತೆಗಳನ್ನು ಸ್ವಂತ ಪ್ರಕಾಶನದಿಂದ ಪ್ರಕಟಿಸುತ್ತಿದ್ದರು. ಅವರ ಪ್ರಕಾಶನದ ಹೆಸರು ಸಮತಾ. (ತಮ್ಮ ಮಕ್ಕಳಿಗೆ ಸಂಘರ್ಷ ,ಸಂಗ್ರಾಮ ಎಂಬ ವರ್ಗಹೋರಾಟಕ್ಕೆ ಸಮೀಪದ ಹೆಸರುಗಳನ್ನು ಇಟ್ಟಿದ್ದರು.) ಈ ಪ್ರಕಾಶನವು ಕೊಟ್ಟೂರು, ಹೊಸಪೇಟೆ, ಹರಪನಹಳ್ಳಿ, ಹಡಗಲಿ- ಹೀಗೆ ಅವರು ವರ್ಗವಾಗಿ ಹೋಗುತ್ತಿದ್ದ ಎಲ್ಲ ಊರುಗಳ ಹೆಸರಲ್ಲಿದೆ. ಕರ್ನಾಟಕದಲ್ಲಿ ಮೂರು ವರ್ಷಕ್ಕೊಮ್ಮೆ ತನ್ನ ಸ್ಥಳ ಬದಲಿಸಿದ ಪ್ರಕಾಶನ ಇದೇ ಇರಬೇಕು. ಅವರ ಮೊದಲ ಸಂಕಲನ ‘ಕೆಂಪುಕವನಗಳು; ಎರಡನೆಯದು ‘ಮನುಷ್ಯನೆಲ್ಲಿ?’. ಹೆಸರೇ ಸೂಚಿಸುವಂತೆ ಅವರು ಎಡಪಂಥೀಯ ನಿಲುವಿನಲ್ಲಿ ಮನುಷ್ಯತ್ವದ ಹುಡುಕಾಟ ಮಾಡುತ್ತಿದ್ದರು.

ಹಿರೇಮಠರು ಬರೆದ ಪುಸ್ತಕಸಾಮಾಜಿಕವಾಗಿ ಉಚ್ಚವೆನ್ನಲಾಗುವ ಜಾತಿಯಲ್ಲಿ ಹುಟ್ಟಿದ ಅವರು ಜೀವನವಿಡೀ ಮಿಡಿದಿದ್ದು ಮಾತ್ರ ಬಡವರಿಗೆ ಮತ್ತು ದಲಿತರಿಗೆ. ಅವರಲ್ಲಿದ್ದ ಬದ್ಧತೆ ಅವರ ದೇಹವನ್ನು ದಣಿವಿಲ್ಲದ ದುಡಿಮೆಗಳಿಗೆ ದೂಡುತ್ತಿತ್ತು. ಒಮ್ಮೆ ಬಂಡಾಯ ಸಾಹಿತ್ಯ ಸಂಘಟನೆ ಅವರಿಗೆ ಪುಸ್ತಕ ಜಾಥಾ ನಡೆಸಿಕೊಡುವ ಹೊಣೆ ಹೊರಿಸಿತು. ಅದು ಕತ್ತೆಕೆಲಸ. ಹಡಗಲಿಯಿಂದ ಹೊರಟು ಇಡೀ ಕರ್ನಾಟಕವನ್ನು ಪುಸ್ತಕದ ಬಂಡಲುಗಳೊಂದಿಗೆ ಹಿರೇಮಠರು ಸುತ್ತುಹಾಕಿದರು. ನಾನು ಶಿವಮೊಗ್ಗೆಯಲ್ಲಿದ್ದಾಗ ಅವರ ಜಾಥಾ ಬಂದಿತ್ತು. ನಾನೂ ಗೆಳೆಯರೂ ರಾತ್ರಿಯೆಲ್ಲ ಪುಸ್ತಕ ಯಾತ್ರೆಯ ಪೋಸ್ಟರುಗಳನ್ನು ಅಂಟಿಸಿ ಅವರ ಜತೆ ಪುಸ್ತಕದ ಬಂಡಲುಗಳ ನಡುವೆ ಮಲಗಿ, ರಾತ್ರಿಯೆಲ್ಲ ಚರ್ಚಿಸಿದ್ದು ನೆನಪಿದೆ. ಯಾವುದೇ ಕೆಲಸವನ್ನು ಮೇಲುಕೀಳೆನ್ನದೆ ಮಾಡುತ್ತಿದ್ದ ಹಿರೇಮಠರು ಪುಸ್ತಕದ ಬಂಡಲುಗಳನ್ನು ಹೆಗಲಲ್ಲಿ ಹೊತ್ತು ಕಾರ್ಯಕ್ರಮದ ಜಾಗಕ್ಕೆ ಹೋಗುತ್ತಿದ್ದರು. ಮೂಲತಃ ಚಳುವಳಿಗಾರರಾಗಿದ್ದ ಅವರು ಬಳ್ಳಾರಿ ಜಿಲ್ಲೆಯಲ್ಲಿದ್ದಾಗ ಅನೇಕ ಹೋರಾಟಗಳನ್ನು  ರೂಪಿಸುತ್ತಿದ್ದರು. ಒಮ್ಮೆ ಕನ್ನಡ ವಿವಿಯ ಸೆಮಿನಾರಿಗೆಂದು ಬಂದವರು, ಅಲ್ಲಿನ ನೌಕರರು ಮುಷ್ಕರಕ್ಕೆ ಕುಳಿತಿದ್ದಾರೆ ಎಂದು ಕೇಳಿದವರೇ, ಸೆಮಿನಾರು ಬಿಟ್ಟು ಅವರ ಜತೆ ಹೋಗಿ ಕೂತುಬಿಟ್ಟಿದ್ದರು. ಬೀದಿಯಲ್ಲಿ ಕೊಲೆಯಾದ ಸಫ್ದರ್ ಹಶ್ಮಿಯ ಮೇಲೆ ಅವರು ನಾಟಕ ಬರೆದಿದ್ದು ಕೂಡ ತಮ್ಮ ಇಂತಹ ಕಮಿಟ್‌ಮೆಂಟಿನ ಭಾಗವಾಗಿಯೇ. ವಿದ್ವಾಂಸರಾದ ಅವರು ಓದುವ ಕೋಣೆಗಿಂತ ಹೆಚ್ಚು ಸಮಯವನ್ನು ಬೀದಿಯಲ್ಲೇ ಕಳೆದುಬಿಟ್ಟರು.

ಸಂಕೋಚದ ಸ್ವಭಾವದ ಮೆದುಮಾತಿನ ಹಿರೇಮಠ ಅವರು ಸೈದ್ಧಾಂತಿಕ ಚರ್ಚೆ ಬಂದಾಗ ಮಾತ್ರ, ಅದು ಭಾಷಣವಿರಲಿ ಬರವಣಿಗೆಯಿರಲಿ ಕ್ರಿಯೆಯಿರಲಿ, ಮಹಾನಿಷ್ಠುರ. ಚಾಟಿಯಲ್ಲಿ ಹೊಡೆದಂತೆ ಮಾತಾಡುತ್ತಿದ್ದರು. ಹಿಪಾಕ್ರಸಿಯಿಲ್ಲದ ಅವರ ವ್ಯಕ್ತಿತ್ವ ಪಾರದರ್ಶಕವಾಗಿತ್ತು. ವೈಯಕ್ತಿಕವಾಗಿ ನನ್ನನ್ನು ಪ್ರೀತಿಸುತ್ತಿದ್ದ ಅವರು ನನ್ನೆಲ್ಲ ಪುಸ್ತಕಗಳನ್ನು ಗಂಭೀರವಾಗಿ ಓದಿ ವಿಮರ್ಶಿಸುತ್ತಿದ್ದರು. ‘ನಿಮ್ಮ ಭಾಷೆ ಆಕರ್ಷಕವಾಗಿದೆ. ಆದರೆ ಅದರೊಳಗೆ ಮೈಮರೆತು ವಿಚಾರಕ್ಕೆ ಅಪಚಾರ ಮಾಡುತ್ತಿದ್ದೀರಿ. ತಮಾಶೆಯ ಮಾತಾಡಿ ಗಂಭೀರ ವಾಗ್ವಾದದಿಂದ ತಪ್ಪಿಸಿಕೊಳ್ಳುತ್ತೀರಿ’ ಎಂದು ಹರಿಹಾಯುತ್ತಿದ್ದರು. ಇದನ್ನು ಕೇಳಿಕೇಳಿ ಒಮ್ಮೆ ನಾನು ಅವರ ಪ್ರಶ್ನೆಗಳನ್ನು ಮುಖಾಮುಖಿ ಮಾಡಲೆಂದೇ ಹರಪನಹಳ್ಳಿಯ ಅವರ ಮನೆಗೆ ಹೋಗಿದ್ದೆ. ಅವರು ಊಟ ಕೊಟ್ಟು, ನನ್ನ ಬರಹದ ಬಗ್ಗೆ ಅವರಿಗಿದ್ದ ಅನುಮಾನಗಳನ್ನು ಹೇಳಿ, ನಂತರ ಸಮೀಪದಲ್ಲಿದ್ದ ಬೆಟ್ಟಕ್ಕೆ ಅಲ್ಲಿರುವ ಭೈರವನ ಗುಹೆಯನ್ನು ತೋರಿಸಲು ಕರೆದುಕೊಂಡು ಹೋಗಿದ್ದರು.

ಅತಿ ಆದರ್ಶಗಳಿಂದಲೂ ಒಂದು ಬಗೆಯ ಮುಗ್ಧತೆಯಿಂದಲೂ ತುಂಬಿದ್ದ ಹಿರೇಮಠರಿಗೆ ಸ್ವಂತಕ್ಕೆ ಬದುಕುವ ಜಾಣ್ಮೆ ಮತ್ತು ವ್ಯವಹಾರ ಪ್ರಜ್ಞೆ ಕಡಿಮೆಯಿತ್ತು. ಎಂದೂ ಒಳಉಪಾಯಗಳನ್ನು ಅನುಸರಿಸದ ಅವರು ತಮ್ಮ ನೇರಮಾತುಗಳಿಂದ ದೊಡ್ಡವರನ್ನು ಎದುರು ಹಾಕಿಕೊಳ್ಳುತ್ತಿದ್ದರು. ಅವರೊಮ್ಮೆ ಕೊಪ್ಪಳದ ಒಂದು ಸಭೆಯಲ್ಲಿ ಬರಗೂರು, ಚಂಪಾ ಅವರ ಎದುರಿಗೆ, ‘ನೀವು ಸಂಘಟನೆಯ ನಾಯಕರು ದಾರಿತಪ್ಪುತ್ತಿದ್ದೀರಿ. ನಿಮಗೆ ಕಿರಿಯರಾಗಿ ನಾವು ದಾರಿತೋರಿಸಬೇಕಾದ ಅಗತ್ಯವಿದೆ’ ಎಂದು ತೀಕ್ಷ್ಣವಾಗಿ ಮಾತಾಡಿಬಿಟ್ಟರು. ಹೂವಿನ ಹಡಗಲಿಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅಪಮಾನವಾದ ಸಂದರ್ಭದಲ್ಲಿ ದಲಿತ ಸಂಗಾತಿಗಳ ಜತೆ ಕೂಡಿ ದೊಡ್ಡ ಹೋರಾಟವನ್ನೇ ಮಾಡಿದರು. ಅದು ಎಂ.ಪಿ.ಪ್ರಕಾಶರ ರಾಜಕೀಯ ಬದುಕಿನಲ್ಲಿ ದುರಂತ ತಿರುವನ್ನು ತರಬಹುದಾಗಿದ್ದ ಪ್ರಕರಣವಾಗಿತ್ತು. ಇದು ಮುಂದೆ ಕನ್ನಡ ವಿವಿಯಲ್ಲಿ ಉಳಿಯುವ ಅವರ ಮಹದಾಸೆ ಕೈಗೂಡದಿರಲೂ ಕಾರಣವಾಯಿತು. ಪ್ರಕಾಶ್ ತಮ್ಮ ರಾಜಕೀಯ ಜೀವನಕ್ಕೆ ಹಿರೇಮಠರ ಚಳುವಳಿಗಾರತನವು ಅಪಾಯಕರ ಎಂದು ಭಾವಿಸಿದರೇ? ಮಾರ್ಕ್ಸ್‌ವಾದದ ಬಗ್ಗೆ ಲೋಹಿಯಾವಾದಿಗಳಿಗೆ ಸಹಜವಾಗಿಯೇ ಇರುವ ವಿರೋಧವು ಇಲ್ಲಿ ಕೆಲಸ ಮಾಡಿತೇ? ತಿಳಿಯದು.

ಹಿರೇಮಠರು ಒಬ್ಬ ಸಂಶೋಧಕರಾಗಿ ಹೊಸಹೊಸ ಚಿಂತನೆಗಳನ್ನು ಮಂಡಿಸುತ್ತಿದ್ದರು; ತಂತ್ರಪಂಥವನ್ನು ಅರಿತರೆ ಕರ್ನಾಟಕ ಸಂಸ್ಕೃತಿಯ ಗೂಢವನ್ನೇ ಅರಿತಂತೆ ಎಂದು ಹೇಳುತ್ತಿದ್ದರು. ದಲಿತ ಸಂಸ್ಕೃತಿಯಲ್ಲಿ ಇದರ ಮೂಲವಿದೆಯೆಂದು ನಂಬಿದ್ದರು. ಇದಕ್ಕಾಗಿ ಅವರು ಇಡೀ ದಲಿತ ಸಂಸ್ಕೃತಿಯನ್ನು ಅದರ ಜಾತ್ರೆ ಹಬ್ಬ ಕಸುಬು ಕೃಷಿ ಭಾಷೆಗಳನ್ನು ಅಧ್ಯಯನ ಮಾಡುತ್ತಿದ್ದರು. ಕರ್ನಾಟಕದಲ್ಲಿ ದರ್ಶನಗಳ ಚರಿತ್ರೆಯನ್ನು ಕಟ್ಟಿಕೊಳ್ಳುವುದು ಎಲ್ಲ ಬಗೆಯ ಹೋರಾಟಗಳಿಗೆ ಬುನಾದಿ ಎಂದು ಹೇಳುತ್ತಿದ್ದರು; ನಾಶವಾಗಬೇಕಾದ್ದು ದುಡಿಯುವ ಜನರ ಸಾಂಸ್ಕೃತಿಕ ಲೋಕಗಳಿರುವ ಕುಲಗಳಲ್ಲ, ಉಳ್ಳವರ ಪರವಾದ ಚಿಂತನೆ ಇರುವ ಧರ್ಮಗಳು ಎಂದು ಹೇಳುತ್ತಿದ್ದರು. ಅವರು ಹೊಸ ಸಾಂಸ್ಕೃತಿಕ ಪರ್ಯಾಯದ ಚಿಂತನೆಗಳನ್ನು ಮಂಡಿಸತೊಡಗಿದರು. ‘ಕರ್ನಾಟಕ ಸಂಸ್ಕೃತಿ ಪರಂಪರೆ: ಹಬ್ಬಗಳು’ , ‘ಕರ್ನಾಟಕ ದಲಿತ ಸಂಸ್ಕೃತಿ ಪರಂಪರೆ: ಜಾತ್ರೆಗಳು’ ‘ಮಾದಾರ ಚನ್ನಯ್ಯನ ನಾಡಿನಲ್ಲಿ’ ‘ದಲಿತ ಸಂಸ್ಕೃತಿ ‘ಮಾನವಪದ ಶಾಸ್ತ್ರ’ ಮುಂತಾದ ಕೃತಿಗಳಲ್ಲಿ ಅವರ ಹೊಸ ಹೊಸ ಚಿಂತನೆಗಳಿವೆ. ಈ ಮೂಲಕ ಹಿರೇಮಠರ ವಿದ್ವತ್ತು ಮತ್ತು ಆಕ್ಟವಿಸಂ ಹೊಸ ತಿರುವನ್ನು ಪಡೆದುಕೊಳ್ಳುತ್ತಿತ್ತು. ಹಾಗೆ ಕಂಡರೆ ಕೊಂಚ ಸಾಂಪ್ರದಾಯಕ ಎನ್ನಬಹುದಾದ ಅವರ ಮಾರ್ಕ್ಸ್‌ವಾದಿ ನಿಷ್ಠೆಗೆ ಇದು ಅವರೇ ಜೋಡಿಸಿಕೊಳ್ಳುತ್ತಿದ್ದ ಹೊಸ ಅರ್ಥಪೂರ್ಣ ವಿಸ್ತರಣೆಯಾಗಿತ್ತು. ಹಿರೇಮಠರ ದಲಿತ ಸಂಸ್ಕೃತಿಯ ಶೋಧವನ್ನು ದಲಿತ ಸಂಘಟನೆಗಳು ಮತ್ತು ಚಿಂತಕರು ಆಸಕ್ತಿಯಿಂದ ಸ್ವಾಗತಿಸಿದರು. ಆದರೆ ಪಾರ್ಟಿ ಮಾರ್ಕ್ಸಿಸ್ಟರು ಇದನ್ನು ಅರ್ಥಮಾಡಿಕೊಳ್ಳಲಿಲ್ಲ. ಮಾತ್ರವಲ್ಲ ಇದನ್ನು ಅವರು ಪಕ್ಷಸಿದ್ಧಾಂತಕ್ಕೆ ಮಾಡಿದ ದ್ರೋಹವೆಂಬಂತೆ ನೋಡಿದರು. ಹಿರೇಮಠರಿಂದ ಕಲಿತು ಬೆಳೆದ ಶಿಷ್ಯರೇ ಅವರನ್ನು ‘ದಾರಿ ತಪ್ಪಿದ ಕಾಮ್ರೇಡ್’ ಎಂದು ಅಸ್ಪೃಶ್ಯವಾಗಿಸಿದರು. ಕಾಲುಶತಮಾನ ಕಾಲ ತಮ್ಮಿಡೀ ಬದುಕನ್ನು ಎಡಚಳುವಳಿಗಾಗಿ ತೇದ ಹಿರೇಮಠರಿಗೂ ಪಕ್ಷ ರಾಜಕಾರಣದಲ್ಲಿ ನಂಬಿಕೆ ಹೋಗಿಬಿಟ್ಟಿತ್ತು. ನಿಜವಾದ ಇಂಟಲೆಕ್ಚುವಲ್ ಹಾಗೆ ರಾಜಕೀಯ ಪಕ್ಷಗಳ ಜತೆಗೆ ನಿರುಮ್ಮಳವಾಗಿ ಇರುವುದೂ ಸಾಧ್ಯವಿಲ್ಲವಷ್ಟೆ. ಪ್ರಶ್ನೆಯೆಂದರೆ, ಹಿರೇಮಠರು ತಮ್ಮ ಸಿದ್ಧಾಂತಾಂತರದಿಂದ ವರ್ಗಕಲ್ಪನೆಯನ್ನು ಬಿಟ್ಟುಕೊಟ್ಟರೇ? ಅವರ ಪ್ರಿಯ ಚಿಂತಕರಾಗಿದ್ದ ದೇವಿಪ್ರಸಾದ ಚಟ್ಟೋಪಾಧ್ಯಾಯರೇ ಅವರ ಹುಡುಕಾಟಕ್ಕೆ ಮಿತಿಯಾದರೇ? ಅವರ ದಲಿತ ಸಂಸ್ಕೃತಿಯ ಶೋಧದಿಂದ ಕರ್ನಾಟಕದ ರಾಜಕಾರಣಕ್ಕೆ ಹೊಸ ಆಯಾಮ ಸಿಗುವ ಬಗೆ ಯಾವುದು? ಈ ಬಗ್ಗೆ ಸರಿಯಾದ ಸೈದ್ಧಾಂತಿಕವಾದ ಚರ್ಚೆಯೇ ಏರ್ಪಡಲಿಲ್ಲ. ಇದಕ್ಕೆ ಹಿರೇಮಠರು ಮಾತ್ರ ಕಾರಣರಲ್ಲ.

ಹಿರೇಮಠರು ಬರೆದ ಪುಸ್ತಕಹಿರೇಮಠರ ಕೊನೆಯ ದಿನಗಳು ದುಗುಡದಾಯಕವಾಗಿದ್ದವು. ಕೊನೆಯ ದಿನಗಳಲ್ಲಿ ಅವರು ರಾಜಕೀಯ ವಶೀಲಿ ಮಾಡಿದರು. ಪ್ರಿನ್ಸಿಪಾಲರಾಗಲು ಹಿಂದೆ ತಾವೇ ತಾತ್ವಿಕವಾಗಿ ವಿರೋಧಿಸಿದ ರಾಜಕಾರಣಿಗಳ ಮೂಲಕವೇ ಒಂದು ಮಾತು ಹೇಳಿಸಿದರು ಎಂದೆಲ್ಲ ಸುದ್ದಿಗಳನ್ನು ಕೇಳಿದೆ. ನಿಜವೆಷ್ಟೊ ತಿಳಿಯದು. ತಮ್ಮ ಪುಸ್ತಕಕ್ಕೆ ಬಂದ ಅಕಾಡೆಮಿ ಪ್ರಶಸ್ತಿಯನ್ನೇ ಬೇಡವೆಂದಿದ್ದ  ಅವರಂತಹ ವಿದ್ವಾಂಸರು ಪ್ರಿನ್ಸಿಪಾಲಗಿರಿಯನ್ನು ಒಪ್ಪಿಕೊಂಡಿದ್ದು ನನಗಂತೂ ಸೋಜಿಗ ತಂದಿತ್ತು. ಕೊನೆಯ ದಿನಗಳಲ್ಲಿ ಮೇಷ್ಟರು ತಮ್ಮ ಕೌಟುಂಬಿಕ, ಮತ್ತು ತಾತ್ವಿಕ ತಾಕಲಾಟಗಳಿಂದ ಕಂಗೆಟ್ಟು ಕೆಲವು ರಾಜಿಗಳಿಗೆ ಒಳಗಾದರೇ? ಅವರ ಇಬ್ಬರು ಗಂಡುಮಕ್ಕಳಲ್ಲಿ ಒಬ್ಬ -ಸಂಗ್ರಾಮ-ಮಾನಸಿಕವಾಗಿ ಅದೃಢ; ಮತ್ತೊಬ್ಬ ಮಗ ಸಂಘರ್ಷ, ಅವರಂತೆಯೇ ಸುಂದರವಾಗಿದ್ದ ತರುಣ, ಕನ್ನಡ ವಿಶ್ವವಿದ್ಯಾಲಯದಲ್ಲಿ ಉದ್ಯೋಗಿಯಾಗಿ ಬಂದ. ಬಂದ ಕೆಲವು ದಿನಗಳ ಬಳಿಕ ತನ್ನ ಇದ್ದಕ್ಕಿದ್ದಂತೆ ಕಣ್ಮರೆಯಾಗಿಬಿಟ್ಟ. ನಾಸ್ತಿಕ ಮಾನವತಾವಾದಿಯಾಗಿದ್ದ ಹಿರೇಮಠರ ಮಗನಾಗಿ ಅವನು ದೊಡ್ಡದಾಗಿ ಕುಂಕುಮ ಇಟ್ಟುಕೊಂಡು ಬರುತ್ತಿದ್ದ. ಇದು ಸಮಾಜವನ್ನು ಬದಲಿಸುವ ಭರದಲ್ಲಿ ತಮ್ಮ ಬದುಕಿನ ಬಗ್ಗೆ ನಿಗಾವಹಿಸದ ಅಪ್ಪನ ವಿರುದ್ಧವಾಗಿ ವಿಚಿತ್ರ ಸೇಡು ತೀರಿಸಿಕೊಳ್ಳಲೋ ಎಂಬಂತೆ ಕಾಣುತ್ತಿತ್ತು. ಹಿರೇಮಠರು ಸಾಮಾಜಿಕ ರಾಜಕೀಯ ಜೀವನದಲ್ಲಿ ಎದುರಿಸಿದ ಸಂಗ್ರಾಮ, ಸಂಘರ್ಷಗಳಿಗಿಂತ, ಮಕ್ಕಳ ವಿಷಯದಲ್ಲಿ ಎದುರಿಸಿದ ಕಷ್ಟಗಳೇ ಅವರನ್ನು ಮೆತ್ತಗಾಗಿಸಿದವು. ಎಲ್ಲ ಸಾರ್ವಜನಿಕ ವ್ಯಕ್ತಿಗಳಂತೆ ಕುಟುಂಬದ ಕಡೆ ಹೆಚ್ಚು ಗಮನ ಕೊಡಲು ಅವರಿಗೆ ಸಾಧ್ಯವಾಗಲಿಲ್ಲ; ತಮ್ಮ ವಿದ್ವತ್ತು ಚಳುವಳಿ ಹೋರಾಟದಂತಹ ಕೆಲಸಗಳಲ್ಲಿ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳದ ಅಪ್ಪಂದಿರ ಸಾಲಿಗೆ ಅವರೂ ಸೇರಿಬಿಟ್ಟಿದ್ದರು. ಅವರಿಗೆ ಈ ವಿಷಯದಲ್ಲಿ ಉಂಟಾದ ಪರಿತಾಪವು ಕೊನೆಯ ದಿನಗಳಲ್ಲಿ ಕಾಡುತ್ತಿತ್ತೇ? ಕಳೆದುಕೊಂಡ ಮಗನನ್ನು ಹುಡುಕಲು ಮಾಡುತ್ತಿದ್ದ ಅವರ ಯತ್ನಗಳು ದಾರುಣವಾಗಿದ್ದವು. ನಾನು ಆ ಈ ಪಂಥಗಳ ಅಧ್ಯಯನಕ್ಕಾಗಿ ಬೆಟ್ಟಗುಡ್ಡ ಅಲೆಯುತ್ತೇನೆಂದು ಭಾವಿಸಿ ಅಲ್ಲೆಲ್ಲಿಯಾದರೂ ಅವನು ಸನ್ಯಾಸಿಯಾಗಿ ಸೇರಿಕೊಂಡಿದ್ದಾನೆಯೇ ನೋಡಿರಿ ಎಂದು ಕೇಳುತ್ತಿದ್ದರು. ಅವರೀಗ ಸಮಾಜವನ್ನು ಕ್ರಾಂತಿಕಾರಕವಾಗಿ ಬದಲಿಸುವ ಹಠವಾದಿ ಚಳುವಳಿಗಾರನ ಪಾತ್ರದಿಂದ ಅಸಹಾಯಕ ಅಪ್ಪನಾಗಿ ಬದಲಾಗಿದ್ದರು. ಕಷ್ಟವನ್ನು ಯಾರಲ್ಲೂ ಹೇಳಿಕೊಳ್ಳದೆ ನುಂಗುತ್ತಿದ್ದ ಅವರು ಮಗನನ್ನು ಹುಡುಕಿ ಕೊಡುವಂತೆ ಸಿಕ್ಕಸಿಕ್ಕವರೆಲ್ಲೆಲ್ಲ ದೀನರಾಗಿ ಬೇಡುತ್ತಿದ್ದರು. ಕಡೆಗೂ ತಂದೆ ಮಕ್ಕಳ ಮಿಲನವಾಗಲಿಲ್ಲ. ಆ ಮಗನಾದರೂ ಈ ಲೋಕದಲ್ಲಿ ಇದ್ದಾನೊ ಇಲ್ಲವೊ?

ಹಿರೇಮಠ ಅವರು ಕ್ಯಾನ್ಸರ್‌ನಿಂದ ನರಳುತ್ತ ಇರುವ ಸುದ್ದಿ ತಿಳಿದು ನಾನು ಕಾಣಲು ಕೊಟ್ಟೂರಿಗೆ ಹೋದೆ. ಅದು ನನ್ನ ಅವರ ನನ್ನ ಕೊನೆಯ ಭೇಟಿ. ಜಿಟಿಜಿಟಿ ಮಳೆ. ಊರ ಹೊರಗೆ ಬಡಾವಣೆಯ ತುದಿಯಲ್ಲಿ ಅರೆಗತ್ತಲಿನಲ್ಲಿ ಅವರ ಮನೆ. ಕೇಳಿಕೊಂಡು ನೆನೆದು ತೊಪ್ಪೆಯಾಗಿ ಹೋಗಿ ಬೆಲ್ ಮಾಡಿದೆ. ಅವರ ಮಡದಿ ಯೋಗಿತಾ ಬಾಗಿಲು ತೆಗೆದು ನನ್ನನ್ನು ಕಂಡು ‘ಹ್ಞಾಂ! ತರಕೇರಿ? ಬರ್ರಿಬರ್ರೀ’ ಎಂದು ಉದ್ಗರಿಸಿದರು. ನನ್ನ ಹೆಸರು ಕೇಳಿದ ಕೂಡಲೆ ಒಂದು ಆಕೃತಿ ಒಳಗಿಂದ ದಡಕ್ಕನೆ ಮಂಚದಿಂದ ಎದ್ದು ಹಾಲಿಗೆ ಆಗಮಿಸಿತು. ಮೈಕೈಯೆಲ್ಲ ಒಣಗಿದ ಕಟ್ಟಿಗೆಯಂತಾಗಿದ್ದು ನಿಕ್ಕರಿನ ರೂಪದ ಅಂಡರವೇರೊಂದು ಬಿಟ್ಟು ಮೈಮೇಲೆ ಮತ್ತೇನೂ ಇರಲಿಲ್ಲ. ಬೆಳ್ಳಗಿದ್ದು ಕೆಂದುಟಿಯಿಂದ ಕೂಡಿ ಸುಂದರ ಪುರುಷರಾಗಿದ್ದ ಹಿರೇಮಠರಿಗೆ  ಡ್ರೆಸ್‌ಸೆನ್ಸೇ ಇಲ್ಲ ಎಂದು ನಾನು ಸದಾ ಅಂದುಕೊಳ್ಳುತ್ತಿದ್ದೆ; ಆದರೆ ಏನುಟ್ಟರೂ ಅವರು ಚೆಂದ ಕಾಣುತ್ತಿದ್ದರು. ಅವರಿಗೆ “ಯೌವನದಲ್ಲಿದ್ದಾಗ ಬಹಳ ಹುಡುಗಿಯರ ಕನಸಿಗೆ ಹೋಗಿ ನೀವು ಕಾಡಿದ್ದೀರಿ” ಎಂದು ತಮಾಶೆ ಮಾಡುತ್ತಿದ್ದೆ. ಈಗ ನೋಡಿದರೆ ಆ ಸ್ಫುರದ್ರೂಪವೆಲ್ಲ ಸುಟ್ಟು ಕರಕಲಾಗಿ ಹೋಗಿತ್ತು. ಏನೂ ತೋಚದೆ ತೋಳುಚಾಚಿ ಅಪ್ಪಿಕೊಂಡೆ. ಬಿಸುಪಿಲ್ಲದ ತಣ್ಣನೆಯ ಎಲುಬು ಚಕ್ಕಳದ ರೂಹನ್ನು ತಬ್ಬಿದಂತಾಯಿತು. ಅವರಿಗೆ ಆಗಾಗ್ಗೆ ಮೂತ್ರ ವಿಸರ್ಜನೆಯಾಗುವುದರಿಂದ ಬಚ್ಚಲು ಮನೆಗೆ ಸಮೀಪದಲ್ಲೇ ಮಂಚ ಹಾಕಲಾಗಿತ್ತು. ಐದೈದು ನಿಮಿಷಕ್ಕೆ ಒಂದು ಬಟ್ಟಲಿನಲ್ಲಿ ಲೋಳೆಯಂತಹ ಉಗುಳನ್ನು ಉಗಿಯುತ್ತ ಅದರ ಮೇಲೆ ಒಂದು ಚಿಕ್ಕರಟ್ಟನ್ನು ಮುಚ್ಚಿ ಹಾಸಿಗೆಯ ಪಕ್ಕ ಇಡುತ್ತಿದ್ದರು. ಇವು ಅವರ ಕೊನೆಯ ದಿನಗಳು ಎಂದು ನನಗೆ ಅನಿಸಿಬಿಟ್ಟಿತು. ನಾನು ಅವರ ಆರೋಗ್ಯದ ಬಗ್ಗೆ ಮಾತಾಡಲು ಯತ್ನಿಸಿದರೆ ಅವರು ತಾವು ಬರೆಯುತ್ತಿರುವ ಯೋಗದರ್ಶನದ ಮೇಲಿನ ಪುಸ್ತಕದ ಬಗ್ಗೆಯೇ ಮಾತಾಡಿದರು. ವಿಚಿತ್ರ ಹಠಯೋಗಿ. ಜಾಸ್ತಿ ಮಾತಾಡಿದರೆ ಸುಸ್ತಾಗುತ್ತಿತ್ತು. ಆದರೆ ತಮ್ಮ ಬಗ್ಗೆ ಯಾರೂ ಕರುಣೆ ತೋರುವುದು ಅವರಿಗೆ ಬೇಡವಾಗಿತ್ತು. ಪುಸ್ತಕಗಳನ್ನೆಲ್ಲ ಗಂಟುಕಟ್ಟಿ ಮೇಲಿಟ್ಟಿದ್ದರೂ ಯೋಗದರ್ಶನ ಕುರಿತ  ಪುಸ್ತಕವನ್ನು ಬರೆಯುವುದಕ್ಕೆ ಬೇಕಾದ ಸಾಮಗ್ರಿಗಳನ್ನು ಮಾತ್ರ ಕೆಳಗಿರಿಸಿಕೊಂಡಿದ್ದರು.

ಹಿರೇಮಠರು ಬರೆದ ಪುಸ್ತಕ

ಬದುಕು ತೆಗೆದುಕೊಳ್ಳುವ ವಿಚಿತ್ರ ತಿರುವು, ಸಾವು ಬಂದು ಆವರಿಸಿಕೊಳ್ಳುವ ಕಠೋರ ಬಗೆ ಕುರಿತು ಚಿಂತಿಸುತ್ತ ವಿಷಾದದಿಂದ ಮರಳಿ ಬಂದೆ. ಅವರು ಒಂದು ದಿನ ಕೊಟ್ಟೂರು ಬಿಟ್ಟು ತಮ್ಮೂರಿಗೆ ಇದ್ದಕ್ಕಿದ್ದಂತೆ ಹೊರಟುಹೋದರು ಎಂದು ತಿಳಿಯಿತು. ಅವರಿಗೆ ಜನ ಬಂದು ಕರುಣೆ ತೋರುವುದು ಬೇಡವಾಗಿತ್ತೊ ಏನೋ? ಹೋದ ಒಂದು ಮಾಸದ ಬಳಿಕ ಅವರು ನನ್ನ ಜತೆ ಫೋನಿನಲ್ಲಿ ಕ್ಷೀಣದನಿಯಲ್ಲಿ ಮಾತಾಡಿದರು. ಅದು ನನ್ನ ಅವರ ನಡುವೆ ನಡೆದ ಕೊನೆಯ ಮಾತುಕತೆ: “ಸಾರ್, ನಮಸ್ಕಾರ. ನಾನು ಹಿರೇಮಠ. ಆರಾಮದೀರಾ? ಈಗ ಹಳ್ಳಿಗೆ ಬಂದು ಕುರ್ಪಿ ಹಿಡಕೊಂಡು ಹೊಲದಾಗೆ ಕುಂತೀನಿ. ನನಗೆ ರೊಕ್ಕದ ಅಡಚಣಿ ಐತಿ. ನಿಮ್ಮದೊಂದು ಪುಸ್ತಕ ಹಾಕ್ತೀನಿ. ದಯವಿಟ್ಟು ಒಲ್ಲೆ ಅನಬ್ಯಾಡರಿ. ಹ್ಯಂಗಾದರೂ ಮಾರಿ ರೊಕ್ಕ  ಮುಟ್ಟಸತೀನಿ. ನಿಮ್ಮ ಹೊಸಾ ಪುಸ್ತಕ ‘ಧರ್ಮಪರೀಕ್ಷೆ’ ಓದ್ತೀದೀನಿ.” ಹುಡುಕಿಕೊಂಡು ಹೋದರೂ ಸಿಗದ ಹಳ್ಳಿಯಲ್ಲಿ ಕುಳಿತು ಇವರು ಪುಸ್ತಕ ಪ್ರಕಟಣೆ ಮಾಡುವುದುಂಟೇ? ನಾನು ನಂಬಲಿಲ್ಲ. ಅವರಿಗೆ ಬೇಸರವಾಗದಿರಲಿ ಎಂದು ‘ಆಗಲಿ’ ಎಂದೆ. ಕೊನೆಯ ಗಳಿಗೆಯಲ್ಲೂ ಬದುಕುವ ಆಸೆ ಮತ್ತು ಕೆಲಸ ಮಾಡುವ ಛಲ ಅವರ ದನಿಯಲ್ಲಿತ್ತು. ಆದರೆ ಸಮತಾ ಪ್ರಕಾಶನದಿಂದ ಪುಸ್ತಕ ಪ್ರಕಟಿಸುವ ಭಾಗ್ಯ ನನಗೆ ಒದಗಲಿಲ್ಲ.

ಹಿರೇಮಠರಿಗೆ ಪೆನ್‌ಶನ್ ಸೆಟಲ್ ಆಗದೆ ‘ತಬರನ ಕಥೆ’ ಆಗಿತ್ತು. ಹಣಕ್ಕಾಗಿ ಪರಿತಪಿಸುತ್ತಿದ್ದರು. ಸಾವಿರಾರು ಮಕ್ಕಳಿಗೆ ಅನ್ನ ಬಟ್ಟೆ ವಿದ್ಯೆ ವಿಚಾರ ಕೊಟ್ಟು ಸಾಕಿದ, ಕೆಲವೊಮ್ಮೆ ಲಗ್ನವನ್ನೂ ಮಾಡಿಸಿದ ಅವರು, ಕೊನೆಯ ದಿನಗಳಲ್ಲಿ ಕಷ್ಟಕ್ಕೆ ಸಿಲುಕಿ ಪರಿಚಿತರಲ್ಲಿ ಕೈಗಡ ಕೇಳುತ್ತಿದ್ದುದು ವಿಚಿತ್ರ ಎನಿಸುತ್ತಿತ್ತು. ಮೊದಲನೇ ದರ್ಜೆಯ ರೈಲು ಪ್ರಯಾಣದ ಹಣವನ್ನು ಪಡೆಯಲು ನಿರಾಕರಿಸುತ್ತಿದ್ದ ಅವರ ನೈತಿಕ ಸೊಕ್ಕನ್ನು ಅಣಕಿಸಲೆಂದೇ ಸಾವು ಈ ಕಷ್ಟವನ್ನು ಒಡ್ಡಿ ಪರೀಕ್ಷಿಸುತ್ತಿತ್ತೇ? ಅವರ ಮೇಲೊಂದು ಪುಸ್ತಕ ತರಬೇಕು, ಅವರ ಪುಸ್ತಕಗಳ ಮೇಲೆ ಚರ್ಚೆ ಏರ್ಪಡಿಸಬೇಕು, ಸಾಧ್ಯವಾದರೆ ಒಂದು ಹಮ್ಮಿಣಿ ಸೇರಿಸಿ ಕೊಡಬೇಕು ಎಂದೆಲ್ಲ ನಾವು ಮಾತಾಡಿಕೊಳ್ಳುತ್ತಿದ್ದೆವು. ಆದರೆ ಸಾವು ನಮ್ಮ ಸಣ್ಣ ನೆರವಿನ ಹಂಗಿನಿಂದಲೂ ಅವರನ್ನು ಪಾರುಮಾಡಿಬಿಟ್ಟಿತು.

**********

ಎಸ್.ಎಸ್. ಹಿರೇಮಠರ ಕೃತಿಗಳು

ಕಾವ್ಯ: ಕೆಂಪುಕವನಗಳು (೧೯೭೮), ಹಸಿರಿನುಸಿರು ಕವಿತೆಗಳು (೧೯೭೯), ಮನುಷ್ಯನೆಲ್ಲಿ ಕಾವ್ಯ (೧೯೮೦), ಚಂದ್ರನ ದಾರಿಗಳು (೧೯೮೦)
ನಾಟಕ: ಹಷ್ಮಿ ಅಮರ ಜೋಗತಿಕಲ್ಲು (೧೯೮೧)
ಸಂಸ್ಕೃತಿ ವಿಶ್ಲೇಷಣೆ: ಕರ್ನಾಟಕ ಸಂಸ್ಕೃತಿ ಪರಂಪರೆ ಭಾಗ ೧ ಹಬ್ಬಗಳು (೧೯೯೨), ಕರ್ನಾಟಕ ದಲಿತ ಸಂಸ್ಕೃತಿ ಪರಂಪರೆ ಭಾಗ ೨ ಜಾತ್ರೆಗಳು (೧೯೯೩),  ಬಂಡಾಯ ಸಾಹಿತ್ಯ (೧೯೯೪), ಮೈಲಾರನ ಜಾತ್ರೆ (೧೯೯೪), ಮಾದಾರ ಚನ್ನಯ್ಯನ ನಾಡಿನಲ್ಲಿ(೨೦೦೫), ಪಂಚಗಣಾಧೀಶ್ವರರು (೧೯೯೬?) ದಲಿತ ಸಂಸ್ಕೃತಿ ೨೦೦೬ ದರ್ಶನ ಸರಣಿ: ಲೋಕಾಯತ ದರ್ಶನ(೨೦೦೬), ಲಾಕುಳ ದರ್ಶನ (೨೦೦೬), ಕಾಳಾಮುಖ ದರ್ಶನ (೨೦೦೪), ಸಾಂಖ್ಯ ದರ್ಶನ(೨೦೦೩), ಪಾಶುಪತ ದರ್ಶನ(೨೦೦೩)
ಸಂಪಾದನೆ: ರಾಘವಾಂಕನ ವೀರೇಶಚರಿತೆ (೧೯೭೮), ಅಂಬವ್ವನ ಪದಗಳು (೧೯೭೮)
ಕಿರುಪುಸ್ತಿಕೆ: ಮನುಸ್ಮೃತಿಯಲ್ಲಿ ಜಾತಿ ಮತ್ತು ವರ್ಗ, ಬಂಡಾಯ ಮತ್ತು ಲೈಂಗಿಕ ಪ್ರಶ್ನೆ ಬಂಡಾಯ ಸಾಹಿತ್ಯ ಸಂಘಟನೆ (೧೯೮೮), ರಾಷ್ಟ್ರೀಯ ಭಾವೈಕ್ಯ ಮತ್ತು ಉಪಸಂಸ್ಕೃತಿಗಳು(೧೯೯೦), ಹಂಪಿ ಕನ್ನಡ ವಿವಿ ಮತ್ತು ಕನ್ನಡ ಸಂಸ್ಕೃತಿ(೧೯೯೧)