ಗಾಂಧಿ…. ಮನುಷ್ಯ ಹುಟ್ಟು ಹಾಕಿದ ದಬ್ಬಾಳಿಕೆಯ ಹಮ್ಮಿಗೆ ನಮ್ರತೆಯ ಉತ್ತರ! ಬೆಟ್ಟದ ಶಿಖರಗಳಲ್ಲಿ ದೇವರನ್ನು ಇಟ್ಟು ಪೂಜಿಸುವ ನಮ್ಮ ಹಳಬರ ಉದ್ದೇಶ ಸ್ಪಷ್ಟ.
ಎತ್ತರೆತ್ತರಕ್ಕೆ ಹೋದಂತೆಲ್ಲ ನಾವು, ನಮ್ಮ ಊರು ಕೇರಿಗಳು, ಜೀವಜಾಲದಲ್ಲಿ ಸಿಲುಕಿರುವ ಒಂದು ಧೂಳಿನ ಕಣದಂತೆ ನಮಗೆ ಕಾಣಿಸುತ್ತದೆ. ನಮ್ಮ ನೆಲೆ ಎಲ್ಲಿದೆಯೆಂದು ಹುಡುಕಿಕೊಳ್ಳಬೇಕಾಗುತ್ತದೆ.

ಹೆಚ್. ಆರ್. ಸುಜಾತಾ ತಿರುಗಾಟ ಕಥನ

 

ಹರಿಹರ ದಾಟಿ ತಿಳುವಳ್ಳಿಯ ದಾರಿ ಹಿಡಿದೆವು. ಇದೊಂದು ಸಣ್ಣ ಪೇಟೆ. ಗಾಂಧಿಯ ಅನುಯಾಯಿಗಳಾದ ನಾ. ಸು. ಹರ್ಡೀಕರ್ ರವರ ಕುಟುಂಬ ಇರುವ ಜಾಗವಿದು. ಇವರು ಗಾಂಧಿಯ ಅನುಯಾಯಿ ಆಗಿ ಸುತ್ತಲೂ ಕೈಮಗ್ಗ, ಸೇವಾದಳ ಹಾಗೂ ಸಮಾಜಸೇವೆಯ ಕೆಲಸಗಳನ್ನು ವಿಸ್ತರಿಸಿದವರು. ಈಗಲೂ ಅವರ ಕುಟುಂಬದಿಂದ ಏನಾದರೂ ಸಮಾಜಮುಖಿ ಕೆಲಸಗಳು ನಡೆಯುತ್ತಲಿವೆ.

ತಿಳುವಳ್ಳಿಯ ಹೆಸರಿನ ಸುತ್ತ….

ನಾಟಿ ವೈದ್ಯಕ್ಕೆ ಹೆಸರಾಗಿದೆಯೆಂದು ಹೇಳುವ ತಿಳುವಳ್ಳಿಯ ಹೆಸರು ಕೇಳಿದೊಡನೆ ಅದರ ಸುತ್ತಲೇ ಮನಸ್ಸು ಗುಂಗಾಡತೊಡಗಿತು. ಅದರಲ್ಲೂ ಹರಿಯನ್ನೂ ಹರನನ್ನೂ (ಹರಿಹರ) ದಾಟಿ ತಿಳಿವಿನ ಹಳ್ಳಿಯ (ತಿಳುವಳ್ಳಿ) ದಾರಿ ಸಿಕ್ಕಿದ್ದು. ಈ ಗುರುತನ್ನೂ ಹೆಸರನ್ನು ಎಲ್ಲೋ ಕೇಳಿದ ಹಾಗೆ…. ನಮ್ಮ ತಿಳಿವಿಗೆ ಎಂಥದ್ದೋ ಅರಿವಾಗತೊಡಗಿತು.

ಹಾದಿ ಸಾಗುವಾಗಲೇ ಆ ಊರಿನ ದೊಡ್ಡ ದೇವಸ್ಥಾನ ಕಂಡಿತು. ಅದರ ಮೇಲೆ ಸರ್ವಜ್ಞನ ಚಿತ್ರವೊಂದು ಗೋಡೆಯ ಮೇಲಿತ್ತು. ವಿಚಾರಿಸಲಾಗಿ ಅದು ಶಾಂತೇಶ್ವರ ದೇವಸ್ಥಾನವೆಂದೂ, ‘ಹಾನಗಲ್ ಕದಂಬರು’ ಆಳ್ವಿಕೆಯ ಕಾಲದ ತಾರಕೇಶ್ವರ ಎಂಬ ಇಂಥದ್ದೇ ದೊಡ್ಡ ದೇವಸ್ಥಾನ ಹಾನಗಲ್ ನಲ್ಲೂ ಇದೆಯೆಂದು ಹೇಳಿದರು.

ಅಲ್ಲಿಂದ ಕೇವಲ ಹದಿನೈದು ಮೈಲಿಯಲ್ಲಿ ಸರ್ವಜ್ಞ ಹುಟ್ಟಿದನೆಂಬ ‘ಅಬಲೂರು’ ಇದೆ. ಮೂವತ್ತೈದು ಕಿ. ಮೀ ನಲ್ಲಿಕನಕರ ಹುಟ್ಟೂರು ‘ಬಾಡ’ವಿದೆ. ಕೇವಲ ಇಪ್ಪತ್ತೈದು ಕಿ. ಮೀ. ನಲ್ಲಿ ‘ಕಾಗಿನೆಲೆ’ಯಿದೆ. ನಲವತ್ತೈದು ಕಿ.ಮೀ ದೂರದಲ್ಲಿ ಶಿಶುನಾಳ ಶರೀಫರ ಶಿಶುವಿನಾಳವಿದೆ. ಹಾವೇರಿಯ ಸುತ್ತ ಸುತ್ತಿಕೊಂಡು ಕಾಲಿಗೆ ತೊಡರುವ ಬಳ್ಳಿಯಂತೆ… ಈ ಸಂತರು ಹುಟ್ಟಿದ್ದು, ಬಾಳಿ ಬದುಕಿದ್ದು ಕಾಣುತ್ತದೆ. ಸಂಗೀತ ದಿಗ್ಗಜರಾದ ಗಂಗೂಬಾಯಿಯವರ ಹಾನಗಲ್ಲ ಹದಿನೈದು ಮೈಲಿಯಲ್ಲಿದ್ದರೆ ಪಂಚಾಕ್ಷರಿ ಗವಾಯಿಯವರ ಕಾಡುಶೆಟ್ಟಿ ಹಳ್ಳಿಯ ಮೂಲವೂ ಇಲ್ಲಿದೆ.

ಹೆಸರಿಗೂ ಹಸುರಿಗೂ ಉಸುರಿಗೂ ಇರುವ ದೊಡ್ಡ ಹೆಜ್ಜೆಗಳ ನಂಟಿದು. ಸಂತರ ಕಲಾಕಾರರ ಕಾಲುದಾರಿಗಳ
ನೆಪ್ಪಿನಲಿ ಮತ್ತೆ ಮತ್ತೆ ಮತ್ತೇನೋ ಇಲ್ಲಿ ಹುಟ್ಟುತ್ತಲೇ ಇರುವಂತೆ. ದಾರಿಯಲ್ಲಿ ಹಚ್ಚಿಟ್ಟ ಬೆಳಕು ನಡೆವವರ ಕಾಲಿಗೆ ದಾರಿ ತೋರದೆ ಸುಮ್ಮನಿದ್ದೀತೆ? ಇದನ್ನು ಅರಿತ ಮೇಲೆ ತಿಳುವಳ್ಳಿಯ ಗುಂಗು ಬಿಟ್ಟುಹೋಗಿ ಸಮಾಧಾನ ಸಿಕ್ಕಂತಾಯಿತು. ಇಂಥ ಗಾಂಧಿಯ ನಡೆಯೊಂದು ನಡಿಗೆಗೆ ಸಜ್ಜಾದದ್ದು, ಇದರ ಮಡಿಲಲ್ಲೇ ಅರಳಿಕೊಂಡ ಶೇಷಗಿರಿಯೆಂಬ ಪಕ್ಕದ ಹಳ್ಳಿಯಲ್ಲಿ.

ಶೇಷಗಿರಿ ಎಂಬ ಗಾಂಧಿಗ್ರಾಮ

ತಿಳುವಳ್ಳಿಯ ದಾರಿಯಲ್ಲಿ ಬಂದು ತಿರುವಿನಲ್ಲಿ ತಿರುಗಿ ವರದಾ ನದಿಯ ಸಣ್ಣ ಅಡ್ಡಕಟ್ಟೆ ದಾಟಿ ನಿಂತ ನೀರಿನ ಪ್ರತಿಬಿಂಬದಂತೆ ಅರಳಿದ್ದ ಹಸಿರು ಜೋಳ ಹಾಗೂ ಭತ್ತದ ಬಯಲ ಅಂಚಿಗೆ ಬಿಳೀ ಬಣ್ಣ ಬಳಿದುಕೊಂಡು ಯೂನಿಫಾರ್ಮ್ ಹಾಕಿದಂತೆ ಕಾಣುವ ಅಡಿಕೆ ತೆಂಗು ತೋಟ ದಾಟಿ…. ಬ್ಯಾರೇಜ್ ನೀರ ಸೆರಗಲ್ಲಿ ಬೀಡುಬಿಟ್ಟ ಮೀನು ಪಂಜರಗಳನ್ನು ದಾಟಿ ನಡೆದರೆ ಶೇಷಗಿರಿಯ ‘ಶಿವಭಾರ’ದ ಕಲ್ಲಿನ ಚೌಕಟ್ಟು ಊರ ಬಾಗಿಲಿಗೆ ತೆರೆದುಕೊಳ್ಳುತ್ತದೆ.

ಊರ ಮುಂದಿರುವ ‘ಶಿವಭಾರ’ ವೆಂಬ ಮೈಲಾರಲಿಂಗನ ಕಲ್ಲಿನ ಈ ಚೌಕಟ್ಟು ಮುಚ್ಚಿದ ಗೋಡೆಗಳಿಲ್ಲದೆ ಬಯಲಿಗೆ ತೆರೆದಿರುವುದೇ ಹಳೆಯ ಕಾಲದವರಿಗಿದ್ದ “ದೇವರು ಹೇಗಿರಬೇಕು?” ಎಂಬ ಒಂದು ಸಾಂಕೇತಿಕ ತಿಳಿವನ್ನು ನೀಡುತ್ತದೆ. ಮುಚ್ಚುಮರೆಯಿಲ್ಲದೆಯೇ…. ಪ್ರಕೃತಿಗೆ ತೆರೆದುಕೊಂಡಂತೆ….ಗ್ರಾಮದೇವ ಕಲ್ಪನೆ.

ಇಲ್ಲಿ ಹಲವು ವರ್ಷಗಳಿಂದ ರಂಗಚಟುವಟಿಕೆಗಳು ಸಾಗಿವೆ. ಇಲ್ಲಿ ಸಣ್ಣ ಸಣ್ಣ ತಂಡಗಳು ಕಾಸಿಲ್ಲದೆ ಖರ್ಚಿಲ್ಲದೆ ಬಂದು ಉಳಿದು ಇಂದು ತಮ್ಮ ಪ್ರಯೋಗ ಸಿದ್ಧತೆ ಮಾಡಿಕೊಂಡು ಹೋಗುತ್ತಿದ್ದಾರೆ. ಅಲ್ಲಿನ ‘ಪೋಸ್ಟ್ ಮಾಸ್ಟರ್ ಪ್ರಭು’ ಹಾಗೂ ಊರ ಜನರ ಆಸಕ್ತಿಯಿಂದ ಇದು ಸಾಧ್ಯವಾಗಿದೆ. ಈ ರಂಗಾಸಕ್ತಿಯನ್ನು ಈ ಊರಲ್ಲಿ ಹುಟ್ಟು ಹಾಕಿದವರು ಇಲ್ಲಿ ಅಧ್ಯಾಪಕರಾಗಿ ಹಲವು ವರ್ಷ ದುಡಿದ ಶ್ರೀಪಾದ್ ಭಟ್ಟರು. ಅವರು ಆ ಊರಿನವರೇ ಆಗಿ ಹೋಗಿದ್ದಾರೆ.

ಇದಕ್ಕೆ ಆ ಕ್ಷೇತ್ರದ ಹಿರಿಯ ರಾಜಕಾರಣಿ ಉದಾಸಿಯವರ ಹಾಗೂ ನಾ. ಸು. ಹರ್ಡೀಕರ್ ಕುಟುಂಬದವರ ಪ್ರೋತ್ಸಾಹ ಹಾಗೂ ಇನ್ನೂ ಅನೇಕ ಆಸಕ್ತರ ಒತ್ತಾಸೆಯಿದೆ. ಆ ಊರಿನ ಜನರು ನಾಟಕ ಪ್ರದರ್ಶನಕ್ಕೆ ಬಂದವರ ಊಟ ಉಪಚಾರ ನಿರ್ವಹಿಸಿ ತಮ್ಮ ಮನೆಗೆ ಹೋಗಿ ಊಟ ಮಾಡುವಷ್ಟು ಸಭ್ಯರು. ನಟನೆಯಲ್ಲಿ ತೊಡಗಿಕೊಳ್ಳುವ ಹಾಗೂ ಆ ರಂಗಮಂದಿರವನ್ನು ಸ್ವಚ್ಚವಾಗಿಟ್ಟುಕೊಳ್ಳುವ ಎಚ್ಚರವನ್ನು ತಾವೇ ಕಾಯ್ದುಕೊಂಡವರು.

‘ಧರ್ಮ ಅಂದ್ರೆ ಕರುಣಾ…, ಕರುಣಾ ಅಂದ್ರೆ ಕರುಣೆಯಲ್ಲ. ನೆರೆಹೊರೆಯೊಂದಿಗೆ ಬದುಕುವ ಕ್ರಮ. ಒಂದರ ಮೇಲೆ ಇರುವ ಇನ್ನೊಂದರ ಅವಲಂಬನೆ. ಮುಸ್ಲಿಂ, ಲಿಂಗಾಯತ, ಕುರುಬ, ಬೆಸ್ತ, ಹರಿಜನರೆಲ್ಲರೂ ಯಾವುದೇ ಗೊಂದಲವಿಲ್ಲದೆ ಒಗ್ಗಟ್ಟಿನ ಒಡನಾಟದಲ್ಲಿದ್ದು ವಿಧ್ಯಾಭ್ಯಾಸದ ಜೊತೆಗೆ ಕಲೆಯನ್ನು ಕೊಂಡು ಹೋಗುತ್ತಿರುವ ಗಾಂಧಿಯ ಕನಸಿನ ಗ್ರಾಮದಂತೆ ಇಲ್ಲಿ ಇದು ಕಾಣುತ್ತದೆ.

ಹಿಂದೆ ಇಲ್ಲಿ ವ್ಯವಸಾಯವನ್ನು ಒಂದು ಕಲಿಕೆಯ ಭಾಗವನ್ನಾಗೇ ಮಕ್ಕಳಿಂದ ಮಾಡಿಸುತ್ತಿದ್ದ ಪರಿಕಲ್ಪನೆಯೊಂದಿತ್ತು. ಸ್ಕೂಲಿನ ಮುಂದೆಯೇ ಇರುವ ಎರಡುವರೆ ಎಕರೆ ಭೂಮಿಯಲ್ಲಿ ಮಕ್ಕಳು ಭತ್ತ ಬೆಳೆದು ಅದರ ಲಾಭವನ್ನು ಶಾಲೆಗೆ ಬಳಸಲಾಗುತಿತ್ತು. ಇದೀಗ ಶಾಲೆಯ ಜಮೀನನ್ನು ಪಾಲಿಗೆ ಕೊಡಲಾಗಿದೆ. ಇಲ್ಲಿರುವ ಸ್ಕೂಲಿನಲ್ಲಿ ಇಂದಿಗೂ ಅನೇಕ ಉಪಯುಕ್ತ ಪ್ರಯೋಗಗಳಾಗುತ್ತಿವೆ.

ಗಾಂಧಿ ಮತ್ತೊಮ್ಮೆ ಹುಟ್ಟಿದ್ದು ಬೆಳೆದಿದ್ದು… ಉಳಿದದ್ದು ಶೇಷಗಿರಿಯಲ್ಲೂ

ಗಾಂಧಿ ಎಲ್ಲಿ ಹುಟ್ಟಿದರು? ತಾಯ ಹುಟ್ಟು ಪೋರಬಂದರಿನಲ್ಲಿ… ಅವರನ್ನು ಓದಿ ಅರಗಿಸಿಕೊಂಡ ಜನ ಹೇಳುತ್ತಾರೆ…. ಮಹಾತ್ಮಾ ಗಾಂಧಿ ಹುಟ್ಟಿದ್ದು… ಡರ್ಬಾನಿನ ಕೊರೆಯುವ ಛಳಿಯಲ್ಲಿ…. ನಿರ್ಜನ ಪ್ರದೇಶಕ್ಕೆ ತಳ್ಳಿದ ಕ್ರೌರ್ಯದಲ್ಲಿ… ಅಸಹಾಯಕತೆಯಲ್ಲಿ…..
ಹೋರಾಟಗಳ ನಡುವೆ ಒಬ್ಬ ನಾಯಕ ಹುಟ್ಟು ಪಡೆಯುವುದು ದಬ್ಬಾಳಿಕೆಯ… ಆಳ್ವಿಕೆಯ ಅವಮಾನದಲ್ಲಿ…. ಆದರೆ ಅದು ತನ್ನನ್ನು ಗುರುತಿಸಿಕೊಳ್ಳುವುದಕ್ಕಾಗಿಯೇ ಆಗಿರುತ್ತದೆ, ಕೊನೆಗದು ಇತಿಹಾಸವಾಗುತ್ತದೆ, ಇತಿಹಾಸ ಮರುಹುಟ್ಟು ಪಡೆಯುತ್ತದೆ…. ವರ್ತಮಾನದ ತಿಳುವಳಿಕೆಯೂ ಆಗುತ್ತದೆ.

ಆ ನಂತರ ಅದು ಕಲಾಪ್ರತಿಮೆಯಾಗಿ ಜಗತ್ತನ್ನು ಲಾಲಿಸುವುದು, ಅರಿಯದೆ ನಮ್ಮೊಳಗೆ ಅದು ಒಂದು ಪ್ರಜ್ಞೆಯನ್ನು ತಂದು ಹಾಕುವುದು, ಹಕ್ಕಿ ಹಣ್ಣನ್ನು ತಿಂದು ಬೀಜವನ್ನು ಹೇತು… ಮತ್ತೆಲ್ಲೋ ….ಬಿದ್ದ ನೆಲದಲ್ಲಿ ಬೇರೂಡಿ… ಹೆಮ್ಮರವಾಗಿ ಹರಡಿ… ಮುಂದಿನ ಹಕ್ಕಿಗಳ ತಾಣವಾಗುವುದು.

ಹೀಗೆ ಈ ಅನುಭಾವದ ಪಯಣವೂ ಸಂತರಿಂದ ಸಂತರಿಗೆ, ಕಾಲಕಾಲಕ್ಕೂ ನಡೆಯುತ್ತ, ಪ್ರಪಂಚದ ಎಲ್ಲ ಸಮಸ್ಯೆಗಳಿಗೆ ಸಾಂತ್ವನವಾಗುವತ್ತಲೇ ಬಂದಿದೆ. ಇದೊಂದು ನಿಲ್ಲದ ಪಯಣ. ಒಂದು ಹೊಸ ಹುಟ್ಟಿನ ಜೊತೆಯಲ್ಲೇ ಸಾವು ಮರೆಯದೆ ನಿರಂತರವಾಗಿ ಪಯಣಿಸುವಂತೆ….

ಗಾಂಧಿ ಮಾಡಿದ ಅರಿವಿನ ಕ್ರಾಂತಿ ದೇವರನ್ನರಿವ ಸತ್ಯ. ನಮ್ಮೊಳಗೆ ಇದ್ದು ನಡೆದು ಹೋದ ಜೀವದ ಹುಡುಕಾಟ, ಹಂಬಲಿಕೆ. ದೇವರು ಎಲ್ಲಿದ್ದಾನೆ? ಎನ್ನುವುದಕ್ಕೆ ಕನಕರು ತೋರಿಕೊಟ್ಟ ಧ್ಯಾನ. ಹನುಮನು ಎದೆ ಬಗೆದು ತೋರಿದ ಪ್ರಾಣ. ಜಗತ್ತಿನ ಒಳಿತನ್ನು ನಮ್ಮೆಡೆಗೆ ತಿರುಗಿಸಿಕೊಂಡು ಆ ಕನ್ನಡಿಯಲ್ಲಿ ನಮ್ಮ ಅರಿವನ್ನು ಕಾಣಲು ಅದಕ್ಕೊಂದು ಧ್ಯಾನದ ಅಗತ್ಯವಿದೆ. ನಮ್ಮನ್ನು ನಾವು ಕಾಲದ ಮುಗಿಯದ ಹೊಡೆತಕ್ಕೆ ಒಡ್ಡಿಕೊಳ್ಳಬೇಕಾಗುತ್ತದೆ.

ಗಾಂಧಿ…. ಮನುಷ್ಯ ಹುಟ್ಟು ಹಾಕಿದ ದಬ್ಬಾಳಿಕೆಯ ಹಮ್ಮಿಗೆ ನಮ್ರತೆಯ ಉತ್ತರ! ಬೆಟ್ಟದ ಶಿಖರಗಳಲ್ಲಿ ದೇವರನ್ನು ಇಟ್ಟು ಪೂಜಿಸುವ ನಮ್ಮ ಹಳಬರ ಉದ್ದೇಶ ಸ್ಪಷ್ಟ. ಎತ್ತರೆತ್ತರಕ್ಕೆ ಹೋದಂತೆಲ್ಲ ನಾವು, ನಮ್ಮ ಊರು ಕೇರಿಗಳು, ಜೀವಜಾಲದಲ್ಲಿ ಸಿಲುಕಿರುವ ಒಂದು ಧೂಳಿನ ಕಣದಂತೆ ನಮಗೆ ಕಾಣಿಸುತ್ತದೆ. ನಮ್ಮ ನೆಲೆ ಎಲ್ಲಿದೆಯೆಂದು ಹುಡುಕಿಕೊಳ್ಳಬೇಕಾಗುತ್ತದೆ.

ಅದಕ್ಕಾಗಿಯೇ ಆ ಅಗಾಧ ನೋಟದಲ್ಲಿ ನಿಂತು… ಅಲ್ಲೊಂದು ಅವರ ಮನೋಕಲ್ಪಿತ ದೇವರನ್ನಿಟ್ಟು ನಮ್ಮವರು ತಮ್ಮ ಅರಿವನ್ನು ವಿಸ್ತರಿಸಿಕೊಳ್ಳಲು ದಾರಿ ಮಾಡಿಕೊಳ್ಳುತ್ತಿದ್ದರೇನೋ…. ಬೆಟ್ಟದ ತಪ್ಪಲ ಬಯಲಲ್ಲಿ ಇರುವ ಜನರು ಬೆಟ್ಟದ ಜಾತ್ರೆಗಳನ್ನು ನೋಡಲು ಜನಜಂಗುಳಿಯೊಡನೆ ಹೋಗಿ, ಬೆಟ್ಟದ ಮೇಲೆ ನಿಂತು, ಹಕ್ಕಿ ನೋಟದಲ್ಲಿ ಪ್ರಪಂಚದ ವಿಸ್ತಾರ ನೋಡಿಕೊಂಡು ಬಂದು ತಮ್ಮ ಕಾಯಕದಲ್ಲಿ ಮುಳುಗಿ ಸರಳ ಬದುಕನ್ನು ಕಾಯಕದ ತಿಳಿವಲ್ಲಿ, ತಮ್ಮ ಸರಳ ಜೀವನಕ್ರಮಕ್ಕೆ ಒಗ್ಗಿಸಿಬಿಡುತ್ತಿದ್ದರು.

ಗೋಖಲೆಯವರು ಹೇಳಿದಂತೆ ಗಾಂಧೀಜಿ ಜನ ಸಾಮಾನ್ಯರೊಡನೆ ನಡೆಯುತ್ತಾ, ನಡೆಯುತ್ತ, ಅನುಭವದ ಅನುಭೂತಿಯಲ್ಲಿ ಮೀಯುತ್ತ, ಅನುಭಾವಿಯಾಗಿ, ಅವರ ಒಂದು ಜೀವನಾವಧಿಯನ್ನೇ ಗಂಧದ ಕೊರಡಂತೆ ತೇದುಕೊಂಡವರು. ಗಂಧ ಹುಟ್ಟುವ ಗಳಿಗೆಯನ್ನು, ಅರ್ಥವನ್ನು ಕಂಡು ಹಿಡಿದವರು.

ಗಾಂಧಿಯ ಸರಳ ಕೃತಿಯೊಂದು ಬೋಳುವಾರರದ್ದು, ಹೀಗೆ ಶ್ರೀಪಾದ ಭಟ್ಟರ ಸರಳ ನಿರ್ದೇಶನದಲ್ಲಿ ಈ ಗಾಂಧೀ ಕನಸಿನ ಹಳ್ಳಿಯಲ್ಲಿ ಒಂದು ವರ್ಷದ ಹಿಂದೆ ಹೆಚ್ಚು ಅಬ್ಬರವಿಲ್ಲದೆ ತರಬೇತಿ ಪಡೆಯಿತು. ದಿಕ್ಕುದಿಕ್ಕಿಗೂ ಹೊರಟ ಈ ಉತ್ಸಾಹಿ ಯುವ ತಂಡ ‘ಪಾಪು ಗಾಂಧಿ ಬಾಪು ಗಾಂಧಿ’ ಯ ಕಥೆಯನ್ನು ಮಕ್ಕಳಿಗೆ, ಸಾರ್ವಜನಕರಿಗೆ, ಜೈಲು ವಾಸಿಗಳಿಗೂ ತಲುಪಿಸಲು ಹೊರಟರು.

ಇಲ್ಲಿ ವ್ಯವಸಾಯವನ್ನು ಒಂದು ಕಲಿಕೆಯ ಭಾಗವನ್ನಾಗೇ ಮಕ್ಕಳಿಂದ ಮಾಡಿಸುತ್ತಿದ್ದ ಪರಿಕಲ್ಪನೆಯೊಂದಿತ್ತು. ಸ್ಕೂಲಿನ ಮುಂದೆಯೇ ಇರುವ ಎರಡುವರೆ ಎಕರೆ ಭೂಮಿಯಲ್ಲಿ ಮಕ್ಕಳು ಭತ್ತ ಬೆಳೆದು ಅದರ ಲಾಭವನ್ನು ಶಾಲೆಗೆ ಬಳಸಲಾಗುತಿತ್ತು. ಇದೀಗ ಶಾಲೆಯ ಜಮೀನನ್ನು ಪಾಲಿಗೆ ಕೊಡಲಾಗಿದೆ.

ಕೆಲವು ದಿನಗಳ ನಂತರ ಒಂದರಿಂದ ನಾಕು ತಂಡಗಳಾಗಿ ಪ್ರತಿ ಜಿಲ್ಲೆಗೂ ತಮ್ಮನ್ನು ವಿಸ್ತರಿಸಿಕೊಳ್ಳುತ್ತಾ ನಡೆದ ತಂಡಗಳು 1065 ಪ್ರದರ್ಶನ ಮುಗಿಸಿಯೇ ಬಿಟ್ಟಿತು. ಈಗ ಅದು ವಾಪಾಸ್ ಬಂದಿವೆ. ಅಂದು ವಾರ್ತಾ ಪ್ರಚಾರ ಇಲಾಖೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದ ಎನ್.ಆರ್. ವಿಶುಕುಮಾರ್ ರವರ ಕನಸಿನ ಕೂಸಿದು. ಇಂದಿನ ಹದಿಹರೆಯದ ಹಾಗೂ ಸಾಮಾನ್ಯ ಜನರಲ್ಲಿಗೆ ಗಾಂಧಿಯನ್ನೇ ಕೊಂಡೊಯ್ಯುವುದು.

ಇದು ಮತ್ತೆ ಹತ್ತು ತಂಡಗಳನ್ನು ವಿಸ್ತರಿಸಿಕೊಂಡು ಪ್ರತಿ ತಾಲ್ಲೂಕಿಗೆ ತಲುಪಲು ಇನ್ನು ಮೂರು ತಿಂಗಳಲ್ಲಿ ಸಜ್ಜಾಗಲಿದೆ. ಹತ್ತು ಸಾವಿರ ಪ್ರದರ್ಶನದ ಆಶಯ ಹದಿಹರೆಯದ ಮಕ್ಕಳ ಶಾಲೆಗೆ ತಲುಪಬೇಕು ಎನ್ನುವ ಉತ್ಸಾಹ ಕಲಾವಿದರಿಗೂ ಇದೆ. ಇದಕ್ಕೆ ವಾರ್ತಾ ಇಲಾಖೆಯ ಮುಂದಿನ ಅಧಿಕಾರಿಗಳು ಕೈ ಜೋಡಿಸುತ್ತಾರೆ ಎನ್ನುವ ಆಶಾಭಾವನೆ ಈ ತಂಡಕ್ಕಿದೆ.

1065 ನೇ ಪ್ರದರ್ಶನ ಮಾಡಿ ವಿರಮಿಸಲು ಹೊರಟ ಕೊನೆಯ ದಿನದಲ್ಲಿ ಈ ತಂಡದೊಂದಿಗೆ ನಾವೂ ಶೇಷಗಿರಿಯಲ್ಲಿ ಬೆರೆತಾಗ ಕಂಡ ಕೆಲವು ವಿಶೇಷತೆಯನ್ನು ನಿಮ್ಮೊಡನೆ ಹೇಳಲೇಬೇಕು.

ಯಾವುದೇ ಒಂದು ಪ್ರಯಾಣ ಕೇವಲ ನೋಟ ಕಟ್ಟುವುದಲ್ಲ. ಅದು ನಮ್ಮ ಕೈಕಾಲುಗಳನ್ನು ಸಂಚಾರಕ್ಕೆ ಒಡ್ಡುತ್ತದೆ. ಹಾಗೆಯೇ ಮನಸ್ಸಿನೊಳಗನ್ನು ಎಲ್ಲ ಕಡೆಗೂ ಹೊತ್ತೊಯ್ಯುತ್ತದೆ. ಅಂದು ಗಾಂಧಿಯಂತೆಯೇ ಜನರೊಡನೆ ಬೆರೆತು ಜಗತ್ತಿನ ಉದ್ದಗಲಕ್ಕೂ ಸಂಚರಿಸುತ್ತ ಹೇಳಿದ್ದು…. ‘ಸರಳ ಚೆಲುವು ಇರುವುದು ಸಣ್ಣ ಸಣ್ಣ ಸಂಗತಿಗಳಲ್ಲಿ… ಸಣ್ಣ ಹಳ್ಳಿಗಳಲ್ಲಿ…. ಸಣ್ಣ ಸಮುದಾಯಗಳಲ್ಲಿ…. ಇದರಲ್ಲೇ ಇರುವುದು ಪ್ರಪಂಚದ ನಡಿಗೆ ‘ ಈ ಹೊಳವನ್ನು ಅವರು ಕಂಡುಕೊಂಡಿದ್ದರು. ಅದರ ಒಳಿತಿಗೆ ಹಾಗೂ ಸಣ್ಣದರ ಬಲಕ್ಕಾಗಿಯೇ ಅವರು ಕೊನೆಯವರೆಗೂ ದುಡಿದವರು.

ಗಾಂಧಿ ಇಂದು ಕಣ್ಮರೆಯಾಗಿ ಎಪ್ಪತ್ತು ವರ್ಷವಾದರೂ ಅವರ ಹೊಳವುಗಳು ಮತ್ತೆ ಮತ್ತೆ ಹೊಸ ಹುಟ್ಟು ಪಡೆದು, ಪುಸ್ತಕ ರೂಪವಾಗಿ… ಸಿನಿಮಾ ಪ್ರದರ್ಶನವಾಗಿ…. ನಾಟಕವಾಗಿ… ಇಂದಿಗೂ ಪ್ರಪಂಚದ ಅಚ್ಚರಿಯಾಗಿಯೇ ಉಳಿಯುತ್ತಿವೆ. ಸಣ್ಣದರ ಒಳಿತಲ್ಲೇ ಹಿರಿದಾದ ಸತ್ಯವಿದೆ. ಅಹಿಂಸೆಯು ಸತ್ಯದರ್ಶನದ ಬೆನ್ನೆಲುಬು ಎಂದ ಗಾಂಧಿಯ ಸಣ್ಣ ದರ್ಶನವೊಂದನ್ನು ರಂಗಪ್ರಯೋಗಕ್ಕಿಳಿಸಿದ್ದು ಹಾಗೂ ಅದನ್ನು ಜನಮನಕ್ಕೆ ಯಶಸ್ವಿಯಾಗಿ ತಲುಪಿಸಿದ್ದು… ವಾರ್ತಾ ಪ್ರಚಾರ ಇಲಾಖೆಯ ಹೆಮ್ಮೆಯ ವಿಚಾರವಾಗಿದೆ.

ಈ ಮಹಾತ್ಮನನ್ನು ಅವನ ದೊಣ್ಣೆ ಹಿಡಿದು ನಾಡಿನುದ್ದ ಕರೆದೊಯ್ದವರು ಅರವತ್ತೈದು ಜನ ಉತ್ಸಾಹಿ ಯುವ ನಟರಾದ ಗಾಂಧಿಗಳು. ಏಕೆಂದರೆ ಒಂದು ವರುಷಕ್ಕೆ ಸರಿಯಾಗಿ ಹಿಂದೆ ಗಾಂಧಿಯನ್ನು ಓದಿಕೊಳ್ಳುತ್ತ ಅವರಿವರ ಮಾತನ್ನು ತಲೆಗೆ ಹಾಕಿಕೊಳ್ಳುತ್ತ…. ಶ್ರೀಪಾದ ಭಟ್ಟರ ಹೊಣೆಗಾರಿಕೆಯಲ್ಲಿ…. ಮೊದಲನೆ ಪ್ರದರ್ಶನ ಮುಗಿಸಿದ್ದ ಈ ನಟರು, ಇಂದು, ವರುಷ ಕಳೆದು ಅವರು ಹಿಂತಿರುಗಿ ಬರುವುದರಲ್ಲಿ… ಒಂದರ ಪಕ್ಕದಲ್ಲಿ ಮೂರು ಸೊನ್ನೆ ಹಾಕಿಕೊಂಡು ೧೦೦೦ ಪ್ರದರ್ಶನ ದಾಟಿ ಬಂದಿದ್ದಾರೆ. ಇನ್ನೂ ಎರಡು ಸೊನ್ನೆಗಳನ್ನು ಮುಂದಕ್ಕೆ ಸೇರಿಸಿಕೊಳ್ಳುವ ನಡಿಗೆಗೆ ಸಜ್ಜಾಗುತ್ತ, ಸಧ್ಯಕ್ಕೆ ಸಣ್ಣ ಬ್ರೇಕ್ ತೆಗೆದುಕೊಂಡಿದ್ದಾರೆ.

ರಾಜ್ಯಾದ್ಯಂತ ಪ್ರಯಾಣಿಸುತ್ತ… ದಿನಕ್ಕೆ ಎರಡು ಬಾರಿ ಪ್ರದರ್ಶನ ನೀಡುತ್ತಿದ್ದ ಈ ನಟರು … ಕೇವಲ ಅರ್ಧ ಗಂಟೆಯಲ್ಲಿ ಅಂಗಳ ಗುಡಿಸುವುದರಿಂದ ಹಿಡಿದು ಸಣ್ಣ ರಂಗಸಜ್ಜಿಕೆಯನ್ನೂ ಮಾಡಿಕೊಂಡು, ಮರದ ನೆರಳೋ…. ಶಾಲಾ ಕೊಠಡಿಯೋ…. ಜೈಲೋ.. ದೊಡ್ಡ ವೇದಿಕೆಯೋ… ಅದನ್ನೇ ಗಾಂಧಿ ನಡೆದಾಡುವ ಸರಳ ದಾರಿಯನ್ನಾಗಿಸುತ್ತಿದ್ದುದು ಇವರ ವಿಶೇಷ. ಸರಳ ಸಜ್ಜಿಕೆಯನ್ನೇ ನಾಟಕರಂಗವನ್ನಾಗಿಸಿ, ನಾಟಕ ಮಾಡಿ ಅತ್ಯಂತ ಶಿಸ್ತುಬದ್ಧವಾಗಿ ನೋಡುವ ಕಣ್ಣಲ್ಲಿ ಗಾಂಧಿಯನ್ನು ಕೂರಿಸುವ ಆಶಯದಲ್ಲಿ ತೊಡಗಿಕೊಳ್ಳುವಾಗ ನಟರು ಗಾಂಧಿಯೇ ಆಗಿಹೋಗಿಬಿಡುವುದು ಪ್ರತಿಯೊಬ್ಬರಿಗೂ ಕರಗತವಾಗಿ ಹೋಗಿದೆ.

ಗಾಂಧಿಯನ್ನು ಜಗತ್ತು ಯಾಕೆ ತಿರುಗಿ ನೋಡುತ್ತದೆ? ಎಂಬರಿವು ಇವರಿಗೆ ಈಗಾಗಲೇ ಆಗಿ ಹೋಗಿದೆ. ಹಾಗಾಗಿ ಇವರೊಳಗೆ ಒಂದು ಒಳಪಯಣವೇ ಶುರುವಾಗಿ, ಅವರೊಳಗನ್ನು ಅದು ಅಲ್ಲೋಲಕಲ್ಲೋಲ ಮಾಡುತ್ತಲಿದೆ. ಈ ನಟರಂಗದಲ್ಲಿ ದುಡಿದ ಪ್ರತಿಯೊಬ್ಬರೊಳಗೂ ಒಬ್ಬ ಗಾಂಧಿ ಹುಟ್ಟಿಕೊಂಡಿದ್ದಾನೆ. ಅವರೆದೆ ಗಾಂಧಿಯ ಕಣಜವಾಗಿದೆ. ಗಾಂಧಿಯ ಹಿಡಿತದಿಂದ ತಪ್ಪಿಸಿಕೊಳ್ಳುವುದು ಮನುಷ್ಯನಾದವನಿಗೆ ಅಷ್ಟು ಸುಲಭವಲ್ಲ. ನಟರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವಾಗ ಅವರಾಡುವ ಮಾತುಗಳು ಸತ್ಯದ ದಾರಿಯ ಕಡೆಗಿತ್ತು ಎಂಬುದಂತೂ ಸುಳ್ಳಲ್ಲ.

ಹಾಗೇ ಗಾಂಧಿಯನ್ನು ನೋಡಿದ ಐದು ಲಕ್ಷ ಮಕ್ಕಳಲ್ಲೂ ಗಾಂಧಿ ನೆಲೆಯೂರದೆ ಇರಲು ಸಾಧ್ಯವೇ? ನಾಟಕ ನೋಡುವಾಗ ಮಕ್ಕಳು, ಕೂತು, ನಿಂತು ಮಲಗಿ ನೋಡುವುದನ್ನು ನಾನು ನೋಡಿದೆನೆ ಹೊರತು ಮಕ್ಕಳು ಎದ್ದು ಹೋಗಿದ್ದನ್ನು ನಾನೆಂದು ನೋಡಲಿಲ್ಲ.

ಶೇಷಗಿರಿಯ ಆ ರಂಗಮಂದಿರದಲ್ಲಿ…. ನಟರು ತಮ್ಮ ದಿನನಿತ್ಯದ ಪ್ರಯಾಣದ ಅನುಭವವನ್ನು ಹಂಚಿಕೊಳ್ಳುವಾಗ ಮೇಲೆ ತೂಗುಬಿಟ್ಟ ಇಂದಿನ ಒಂದು ರಟ್ಟಿನ ಪೆಟ್ಟಿಗೆಯಲ್ಲಿ ಇವರ ಮಾತನ್ನು ನಂಬಿದಂತೆ ಗುಬ್ಬಿಗಳ ದಂಡು ಕಲರವವನ್ನು ಎಬ್ಬಿಸುತಿತ್ತು. ನಮ್ಮಿಂದ ನಶಿಸಿ ಹಾರಿಹೋಗಿದ್ದ ಗುಬ್ಬಿ ಸಂತತಿ ಇವರ ನೆರಳಿನಲ್ಲಿ ಚಿಲಿಪಿಲಿಗರೆಯುತ್ತಿದ್ದುದು ಜೀವಜಾಲವೇ ಬಂದು ನಮಗೆ ಉತ್ತರಿಸಿದಂತಿತ್ತು. ಅದೇ ಗಾಂಧಿಯ ನಿಯಮ.

ಹಿಂಸೆಯಿಲ್ಲದ, ರೆಕ್ಕೆ ಬಿಚ್ಚಿದ, ಸ್ವಚ್ಚಂದ ಪ್ರೇಮದರಿವು… ಎಲ್ಲರೊಳಗೊಂದಾಗಿ ಇರುವ ಸರಳ ಬದುಕು. ಗಾಂಧಿಯ ಎಳೆಯನ್ನು ತಲೆಗೆ ತುಂಬಿಕೊಂಡು,…. ಗಾಂಧಿಯನ್ನು ಎದುರಿರುವ ಕಣ್ಣಲ್ಲಿ ಕೂರಿಸುವಾಗ ಕಲಾವಿದರು, ಅವರೇ ಗಾಂಧಿಯ ವಿಸ್ತರಣೆಯಾಗಿ ಹೋಗಿರುವುದು, ಅವರ ಮಾತಿನ ಸತ್ಯದಂತೆ ನನಗೆ ತೋರುತಿತ್ತು.

ರಂಗಪ್ರಯೋಗಗಳು ಜನಸಾಮಾನ್ಯರನ್ನು ತಲುಪಿದಾಗ ಆದ ಅಚ್ಚರಿಗೆ ಈ ಕೆಳಗಿನ ಅಭಿಪ್ರಾಯ ಹಾಗೂ ವಿದ್ಯಮಾನಗಳು ಸತ್ಯವನ್ನು ಒಪ್ಪಿಕೊಳ್ಳುತ್ತವೆ ಎನ್ನುವುದನ್ನು ಹೇಳುತ್ತವೆ.