ದೀವಳಿಗೆಯ ಸುಖ ಸಮೃದ್ಧಿಯನ್ನು ಬೇಡುವ ಪರಿ ದಿಲ್ಲಿಯನ್ನು ಸೇರಿದರೂ ನಿಲ್ಲದ ಆಚರಣೆಯಾಗಿ ಮುಂದುವರೆದ ಬಗೆಯನ್ನು ಯೋಚಿಸುತ್ತ ವಾಪಾಸಾದೆವು. ರಾಜಧಾನಿಯ ಮರದ ಕತ್ತಲ ನೆರಳಲ್ಲಿ ಬೆಳಗುವ ಹಣತೆ ಹಾಗೂ ಸಗಣಿಯಲ್ಲಿ ಮಾಡಿದ ಬಲಿದೇವನ ಕಾಲುಗಳು ಹಳ್ಳಿ ನೆಲದಿಂದ ನಡೆದುಬಂದು… ಸಾಂಕೇತಿಕವಾಗಿ ರೈತನ ಗುಡಿಸಿಲಿನ ಸರಳತೆ ಹಾಗೂ ನಿರುಮ್ಮಳತೆಯನ್ನು ಹೊತ್ತು ತಂದು…. ನಗರದ ರಾಜಬೀದಿಯನ್ನು ಹಾದು…. ಆ ಗಜಿಬಿಜಿಯ ಗಲ್ಲಿಯಲ್ಲಿ ನಿಂದು…. ದುಡಿದುಣ್ಣುವ ಜನರ ಮಹತ್ವವನ್ನು ಸಾರುತ್ತ ನಿಂತಿದ್ದವು.
ಸುಜಾತಾ ಎಚ್.ಆರ್. ಬರೆಯುವ ತಿರುಗಾಟ ಕಥಾನಕದ ಏಳನೆಯ ಕಂತು.

 

ರಾಜ್ಯೋತ್ಸವ ಹಾಗೂ ದೀಪಾವಳಿಯ ಸಂಭ್ರಮ ನಡೆಯುತ್ತಿದೆ. ಆಗಾಗ ದೆಹಲಿಯ ಓಡಾಟವಿದ್ದರೂ ಒಮ್ಮೆ ಕೆಲವು ವರುಷಗಳ ಹಿಂದೆ ಈ ಸಮಯದಲ್ಲಿ ಒಂದಿಪ್ಪತ್ತು ದಿನಗಳ ಕಾಲ ದೆಹಲಿಯಲ್ಲಿದ್ದೆ. ಆ ಸಮಯದಲ್ಲಿ ಉಳಿದು ಹೋದ ಒಂದೆರಡು ನೆನಪುಗಳು ಇಂದು ನಿಮ್ಮ ಮುಂದಿವೆ. ಭಾಷೆಯೆಂದರೆ ಲಿಪಿಯೇ? ದೇಶವೆಂದರೆ ಭೂಗೋಳದ ಗೆರೆಯೊಳಗಿನ ಚಿತ್ರವೇ?

ಅದು ಹೀಗಿರಬಹುದೆನ್ನಿಸುತ್ತದೆ: ನೆಲ, ಜಲ, ಜನತೆಯ ಭಿತ್ತಿಚಿತ್ರ. ಬದುಕಿನ ಪತ್ರ. ನಾನು ನನ್ನದೆನ್ನುವ ನಂಬಿಕೆ. ಅವರು ಇವರು ನಮ್ಮವರಾಗುವ ಬಯಕೆ. ನಾ ನೀನಾಗುವ ನೀ ನಾನಾಗುವ ಚೆಲುವು. ಭಾಷೆಯೆಂದರೆ ಅರಿವು.
ದೇಶವೆಂದರೆ ತಿಳಿವು. ಹೀಗೆ ನಮ್ಮೊಳಗಿದು ಒಂದು ಮುಗಿಯಲಾರದ ಪಯಣ.

ದೆಹಲಿಯ ದೀಪಾವಳಿ

ದೀಪಾವಳಿಯ ದಿನದಂದು ದೆಹಲಿ ಬಹಳ ಸುಂದರವಾಗಿರುತ್ತದೆ. ಒಂದು ಸುತ್ತು ಹೋಗಿ ಬನ್ನಿ ಎಂದು ದೆಹಲಿಯ ನಮ್ಮ ಸ್ನೇಹಿತರು ಹೇಳಿದರು. ಸರಿ ಹೊರಟೆವು. ದೆಹಲಿಯ ಬೀದಿಬೀದಿ ಸುತ್ತು ಹಾಕಿ ಬಂದಾಗ ಕಂಡಿದ್ದು. ಮನೆಮನೆಯಲ್ಲಿ ಅಲಂಕರಿಸಿದ್ದ ದೀಪಾಲಂಕಾರ. ಕಣ್ಣಿಗೆ ಮಳ್ಳು ಹಿಡಿಸುವ ಸಣ್ಣ ಸೀರಿಯಲ್ ಸೆಟ್ಟಿನ ದೀಪಾಲಂಕಾರದಲ್ಲಿ ಎಲ್ಲರ ಮನೆಗಳು ಕಂಗೊಳಿಸುತ್ತಿದ್ದವು. ಪಣಕ್ ಪಣಕ್ ಅಂತ ಕಣ್ಣುಮುಚ್ಚಿ ಕಣ್ಣುಬಿಟ್ಟು ಕರೆಯುತ್ತಿದ್ದ ವಿದ್ಯುತ್ ದೀಪಾಲಂಕಾರದಲ್ಲಿ ನವೆಂಬರ್ ನ ಹದಬೆರೆತ ರಾತ್ರಿಯ ವಾತಾವರಣದಲ್ಲಿ ಅಮಾವಾಸ್ಯೆಯ ಕತ್ತಲು ಕಣ್ಕಣ್ಬಿಡುತಿತ್ತು.

ರಾಜದಾರಿಗಳನ್ನು ಬಿಟ್ಟು ನಾವು ಹಳೆಯ ಬಡಾವಣೆಯ ಕೆಳವರ್ಗದ ಬೀದಿಗಳಿಗೆ ಕಾಲಿಟ್ಟೆವು. ಅಲ್ಲಿ ರಸ್ತೆ ಆಜುಬಾಜಿನಲ್ಲಿ ಒರಗಿಸಿಟ್ಟಿದ್ದ ಹಗ್ಗದ ಮಂಚಗಳು ಅವರ ಇಕ್ಕಟ್ಟಿನ ಮನೆಯ ಅಂಗಳದಲ್ಲಿ ಅಂದರೆ ರಸ್ತೆಯ ಕಾಲುದಾರಿಯ ನೆಲದ ಮೇಲೆ ನಾಕೂ ಕಾಲನ್ನೂರಿ ಕಾರ್ಮಿಕ ಬಂಧುಗಳ ನಿದ್ದೆಗೆ ಅಣಿಯಾಗುತಿದ್ದವು.

ಬಿಚ್ಚಿದ್ದ ರಜಾಯಿಗಳ ಒಳಗೆ ತಂದೆಯ ತೋಳುಗಳಲ್ಲಿ ಮಕ್ಕಳು ಅಪ್ಪಂದಿರನ್ನು ಲಲ್ಲೆಗರೆಯುತ್ತಿದ್ದವು. ತಾಯಂದಿರು ಮಾಡುತ್ತಿರುವ ಕೆಲಸಗಳು ನಾಲ್ಕೂ ಚೌಕಟ್ಟಿನ ಕೋಣೆಗೆ ಇರುವ ಒಂದೇ ಒಂದು ಬಾಗಿಲ ಮೂಲಕ ಹೊರರಸ್ತೆಗೆ ಹಾರುಹೊಡೆದಂತೆ ತೆರೆದುಕೊಂಡು ಕಾಣಿಸುತ್ತಿದ್ದವು. “ಬಯಲು ಆಲಯದೊಳಗೋ… ಆಲಯವು ಬಯಲೊಳಗೋ…..” ಕನಕದಾಸರ ವಾಣಿ ಕಿವಿಯಲ್ಲಿ ನಾದದಂತೆ ತುಂಬಿಕೊಂಡಿತು.

ಆ ಸಣ್ಣ ಮನೆಗಳ ಹೆಂಗಸರು ಉರಿಸುತ್ತಿದ್ದ ಒಲೆ, ದೇವರ ದೀಪಗಳು ಮನೆಯ ಒಳಗನ್ನು ತೆರೆದಿಟ್ಟಂತೆ ಕಾಣುತ್ತಿದ್ದವು. ದಿವ್ಯಜ್ಯೋತಿಯಂತೆ ಬೆಳಕು ಚೆಲ್ಲುತ್ತ…. ಜಗತ್ತಿನ ಗೋಳುಕಥೆಗಳ ಧಾರಾವಾಹಿಗಳನ್ನು ನೇಯುತ್ತಿರುವ ಟಿ.ವಿ.ಗಳನ್ನು ನೋಡುತ್ತ ಕುಳಿತ ಮಕ್ಕಳು ಮುದುಕರು….. ಅಲ್ಲೇ ಪರಾಠ ಹೊಸೆದು ಸುಡುವ ಮನೆ ಹೆಂಗಸರ ಲೈವ್ ದೃಶ್ಯಗಳು ರಸ್ತೆಯಲ್ಲಿ ನಡೆಯುವವರ ಕಣ್ಣಿಗೆ ಕಾಣಿಸುತ್ತಿದ್ದವು. ಹೊರಗೆ ಮಾಗಿದ ಗಂಡಸರ ಗುಂಪು… ಬಿದ್ದ ತರಗು ಪೇಪರ್ ಗಳನ್ನು ಕಡ್ಡಿಯಲ್ಲಿ ಎಳೆದು ಗುಡ್ಡೆಮಾಡಿ ಬೆಂಕಿ ಕಾಯಿಸುತ್ತಾ ಮಾತಿಗೆ ಕುಂತಿತ್ತು.

ಬಿಸಿ ಬಿಸಿ ರಾಜಧಾನಿಯ ಬ್ರೇಕಿಂಗ್ ನ್ಯೂಸ್ ಗಳು ಅವರ ಗಟ್ಟಿದನಿಯ ಮಾತಿನ ವಿಷಯವಾಗಿದ್ದವು. ವಾದವಿವಾದಗಳು ಹಾದು ಹೋಗುವವರ ಕಿವಿಗೆ ಜೋರಾಗಿ ಬಿರುಸಾಗಿ ಕೇಳಿಸುತ್ತಿದ್ದವು. ಕ್ರೇಝಿವಾಲ ಬಡವರ ಪರ ಮಾಡಿದ ಕೆಲಸಗಳು ಅವರ ಚರ್ಚೆಯ ವಿಚಾರವಾಗಿತ್ತು. ಕ್ರೇಝಿವಾಲ ಬಡವರ ಪರ ಹಾಗೂ ವಿರೋಧ ಇದ್ದಾನೆ ಎಂಬುದನ್ನು ತಮ್ಮ ನಿದರ್ಶನಗಳ ಮೂಲಕ ದೊಡ್ಡ ಗಂಟಲಲ್ಲಿ ಪ್ರಜಾಪ್ರಭುತ್ವ ಸಾರುತಿತ್ತು.

ಯಾವ ರಾಜ ಬಂದ್ರೂ ರಾಗಿ ಬೀಸೋದು ನಮಗೆ ತಪ್ಪಿಲ್ಲ ಅನ್ನುವ ಸ್ಥಿತಪ್ರಜ್ಞೆಯಲ್ಲಿ ಹತ್ತಿರವಿದ್ದ ಮರದ ಕರಿಯಿರುಳ ನೆರಳಲ್ಲೇನೋ ನಡೆಯುತಿತ್ತು. ಬಳಿ ಹೋದ ನಮ್ಮ ಕಾಲುಗಳು ಕೆಲ ಸಮಯ ಅಲ್ಲೇ ತಡೆದು ನಿಂತವು.

ಬಿಚ್ಚಿದ್ದ ರಜಾಯಿಗಳ ಒಳಗೆ ತಂದೆಯ ತೋಳುಗಳಲ್ಲಿ ಮಕ್ಕಳು ಅಪ್ಪಂದಿರನ್ನು ಲಲ್ಲೆಗರೆಯುತ್ತಿದ್ದವು. ತಾಯಂದಿರು ಮಾಡುತ್ತಿರುವ ಕೆಲಸಗಳು ನಾಲ್ಕೂ ಚೌಕಟ್ಟಿನ ಕೋಣೆಗೆ ಇರುವ ಒಂದೇ ಒಂದು ಬಾಗಿಲ ಮೂಲಕ ಹೊರರಸ್ತೆಗೆ ಹಾರುಹೊಡೆದಂತೆ ತೆರೆದುಕೊಂಡು ಕಾಣಿಸುತ್ತಿದ್ದವು.

ಆ ಹಳೆಯ ದೊಡ್ಡ ಮರದ ಕೆಳಗೆ ಕಣ್ಣಿಗೆ ತಂಪನ್ನೀಯುತ್ತಾ ಒಂದು ಎಣ್ಣೆಯ ಮಣ್ಣಿನ ದೀಪ ಉರಿಯುತಿತ್ತು. ಅದರ ಮುಂದೆ ಬಣ್ಣಬಣ್ಣದ ನಿರಿಗೆಯ ಲಂಗ ತೊಟ್ಟು, ಎದೆಮೇಲಿಂದ ಓಡ್ನಿಯನ್ನು ತಂದು ತಲೆಮುಸುಕು ಹೊದ್ದಿದ್ದ ವಯಸ್ಸಾದ ದಪ್ಪನೆಯ ಹೆಂಗಸೊಬ್ಬರು ಪೂಜಾ ಸಾಮಾಗ್ರಿಯ ತಟ್ಟೆ ಹಿಡಿದು ನಿಂತ ತನ್ನ ಮೊಮ್ಮಗಳ ಪಕ್ಕದಲ್ಲಿ ಬಗ್ಗಿ ಏನನ್ನೋ ಮಾಡುತ್ತಿದ್ದರು. ಅದೇನೆಂದು ನಾವೂ ಅಲ್ಲಿ ಇಣುಕಿ ನೋಡಿದೆವು.

ಮರದ ಬುಡದಲ್ಲಿ ಸೆಗಣಿಯ ಎರಡು ದಪ್ಪ ಪಾದಗಳು ಇದ್ದವು. ಅದನ್ನು ಬಳಿಯುತ್ತಾ…. ಆ ಹೆಂಗಸು ಪಾದಗಳಿಗೆ ಕೊನೆಯದಾಗಿ ತನ್ನ ಬೆರಳಲ್ಲಿ ಸೆಗಣಿಯ ಪಾದದ ಬೆರಳುಗಳನ್ನು ತಿದ್ದಿ ತೀಡಿ ನಯಗೊಳಿಸುವ ತಲ್ಲೀನತೆಯಲ್ಲಿ ಮುಳುಗಿ ಹೋಗಿದ್ದರು. ದೂರದೂರಿನ ರಿವಾಜಾಗಿದ್ದರಿಂದ ಅವರ ಆಚರಣೆಯೇನೆಂದು ನಾವು ನಿಂತು ನೋಡೇ ನೋಡಿದೆವು. ಪೂಜೆ ತಟ್ಟೆಯನ್ನು ಹಿಡಿದ ಹುಡುಗಿಯ ಕೈಲಿ ಚೆಂಡು ಹೂ…. ಅರಿಶಿನ-ಕುಂಕುಮ….. ಊದುಬತ್ತಿ ಕರ್ಪೂರಗಳಿದ್ದವು. ಬಾಳೆಹಣ್ಣು ಚಿಪ್ಪಲ್ಲಿತ್ತು.

ನಮ್ಮೂರಿನ ದನದ ಕೊಟ್ಟಿಗೆಯ ತಯ್ಯಾರಿ, ದೀಪಾವಳಿಗೆಂದೇ ಹೂ ಬಿಟ್ಟಿರುತ್ತಿದ್ದ ಚೆಂಡುಹೂವಿನ ಹಿತ್ತಿಲು, ಸಾರಿಸಿದ ತಿಪ್ಪೆ, ಕೊಟ್ಟಿಗೆಯ ಮಣೆ ಮೇಲೆ ಚೆಂಡು ಹೂವಿನ ತೇರಾಗಿ ಕುಳಿತಿರುತ್ತಿದ್ದ ತಿಪ್ಪಮ್ಮನ ಮೂರುತಿಗಳು, ಎಡೆ ಇಡಲು ಓಡಾಡುತ್ತಿದ್ದ ನಮ್ಮ ಅಜ್ಜಮ್ಮ, ಹಬ್ಬದಡುಗೆಯಲ್ಲಿ ಬೇಯುತ್ತಿದ್ದ ನಮ್ಮ ಅಡುಗೆ ಕೋಣೆ, ಕೊಂಬಿಗೆ ಬಣ್ಣ ಬಳಿದುಕೊಂಡು ಮಡಿಮಡಿಯಾಗಿ ಹೊಳೆಯುತ್ತಿದ್ದ ದನದ ಹಿಂಡು ಎಲ್ಲವೂ ಸಾಲುಗಟ್ಟಿ ದನಕಾಯುವ ದೊಡ್ಡನ ಕರೆಗೆ ಓಡೋಡಿ ಬರುವ ದನಕರುಗಳಂತೆ….

ಈ ಸಗಣಿಯ ಪಾದವನ್ನು ಬೆಳಗುತ್ತ….. ಅದರ ಮುಂದೆ ಹಚ್ಚಿಟ್ಟ ದೀಪದಣತೆಯ ಬೆಳಕಲ್ಲಿ ಬಂದು ನಿಂತವು. ದೆಹಲಿಯ ಮಾಗಿದ ಮೈಯ ಆ ತಾಯಿ ಆ ಪಾದಗಳಿಗೆ ಹೂ ಮುಡಿಸಿ ಆರತಿ ಎತ್ತುವವರೆಗೂ ನಿಂತು ನೋಡಿದೆವು. ಅವರು ನಗುನಗುತ್ತಾ ಕೊಟ್ಟ ಬತ್ತದರಳಿನ ಚರ್ಪನ್ನು ಕೈಲಿ ತೆಗೆದುಕೊಂಡು ಬಾಯಿಗೆ ಹಾಕಿಕೊಂಡೆವು.

ಕುತೂಹಲದಿಂದ ಕೇಳಿದೆ. “ಇಧರ್ ಗಾಯೇ ಹೈ….”
“ನ ಬಾಬಾ…. ಹಮ್ ರೆಹನೆಕೋ… ಖೋಲಿ ಮೆ ಜಗಹ್ ನಹೀ ಹೈ ತೋ ಗಾಯೇ ಕಿಧರ್ ರೆಹ್ ಸಕತೇ”
“ತೋ….”
“ಹಮಾರ ಗಾವ್ ಮೇ ಥೆ. ಖೇತೇ….ವಾತಿ, ಗಾಯೇ…. ಗಾಡೀ….ಸಬ್ ಚಲತೇ ಥೆ…. ಹಮ್ ಖಾಯಾಸ್ತಾ ಲೋಗ ಹೈನ. ದೀಪಾವಲಿ ಮೆ ಯೆ ಪೂಜಾ ಬಹುತ್ ಧ್ಯಾನ್ ಸೆ ಕರಹೀ ಸಕತೆ ಹೈ! ಹಮ್ ಲೋಗ್. ಅಭೀ ಬಿ ಯೇ ರಿವಾಝ್ ಕರನೇ ಮೇ ಹಮಾರಾ ಮನ್ ಪ್ರಶಾಂತ ಹೋತೆ ಹೈ. …. ಬಚ್ಪನ್ ಕಾ ಯಾದ್…ಹೇ ಭಗವಾನ್! ಕಹಾ ಗಯೇ ವೊ ದಿನ್? ಆಜ್ ಹಮಾರಾ ಬಚ್ಚೆ ಲೋಗೋ ಕೊ ಅಚ್ಚೆ ಹೋನಾ ಹೈನಾ….ಉನಕೋ, ಖಾನಾಪೀನಾ ಪೇಟ್ ಬರ್, ಆಂಖೇ ಬರ್ ನೀಂದ್ ಮಿಲನೆ ತೋ ಬಸ್! ಹಮಾರಾ ಭಗವಾನ್ ಕ ಪೂಜಾ ಫಲ್ ಮಿಲ್ ಸಕ್ತಾ… ಹೈ ನಾ? ”

ಬೇಸಾಯ ಮನೆಯೊಂದರ ನೆನಪು, ದೀವಳಿಗೆಯ ಸುಖ ಸಮೃದ್ಧಿಯನ್ನು ಇಂದೂ ಬೇಡುವ ಪರಿ ದಿಲ್ಲಿಯನ್ನು ಸೇರಿದರೂ ನಿಲ್ಲದ ಆಚರಣೆಯಾಗಿ ಮುಂದುವರೆದ ಬಗೆಯನ್ನು ಯೋಚಿಸುತ್ತ ವಾಪಾಸಾದೆವು. ರಾಜಧಾನಿಯ ಮರದ ಕತ್ತಲ ನೆರಳಲ್ಲಿ ಬೆಳಗುವ ಹಣತೆ ಹಾಗೂ ಸಗಣಿಯಲ್ಲಿ ಮಾಡಿದ ಬಲಿದೇವನ ಕಾಲುಗಳು ಹಳ್ಳಿ ನೆಲದಿಂದ ನಡೆದುಬಂದು… ಸಾಂಕೇತಿಕವಾಗಿ ರೈತನ ಗುಡಿಸಿಲಿನ ಸರಳತೆ ಹಾಗೂ ನಿರುಮ್ಮಳತೆಯನ್ನು ಹೊತ್ತು ತಂದು…. ನಗರದ ರಾಜಬೀದಿಯನ್ನು ಹಾದು…. ಆ ಗಜಿಬಿಜಿಯ ಗಲ್ಲಿಯಲ್ಲಿ ನಿಂದು…. ದುಡಿದುಣ್ಣುವ ಜನರ ಮಹತ್ವವನ್ನು ಸಾರುತ್ತ ನಿಂತಿದ್ದವು.

ದಿಲ್ಲಿಯ ನೆಲದಲ್ಲಿ ಒಂದು ಹಳ್ಳಿ ಬಂದು ಕೂತ ಬಗೆಯನ್ನು ಅದು ಹೇಳುತಿತ್ತು. ಭಾರತ ಹಳ್ಳಿಗಳ ದೇಶ ಎಂದು ಚಿಕ್ಕವರಿದ್ದಾಗ ಸಮಾಜ ಪುಸ್ತಕದ ಮೊದಲ ವಾಕ್ಯ ನೆನಪಾಯಿತು. ಹಳ್ಳಿಯ ನೆಮ್ಮದಿಯನ್ನು ಕನವರಿಸುವ ಅರೆಬಟ್ಟೆ ತೊಟ್ಟ ಗಾಂಧಿಯ ಚಿತ್ರ ಗಲ್ಲಿಯಿಂದ ರಾಜಾ ರಸ್ತೆಗೆ ನಮ್ಮನ್ನು ಪ್ರಗತಿಯ ನಡಿಗೆಯ ಕಡೆಗೆ ಎಳೆತಂದು ಕಾಲ್ನಡಿಗೆಯ ದಣಿವನ್ನು ಮರೆಸಿ ಚಿತ್ರವೊಂದನ್ನು ನೆನಪಿನ ಕೋಶದಲ್ಲಿ ಕೆತ್ತಿತ್ತು.

ದೆಹಲಿಯ ಕನ್ನಡ ಶಾಲೆ

ದೆಹಲಿಯಲ್ಲಿ ಒಂದು ಕನ್ನಡ ಸಂಘವಿದೆ. ಅದು ನಡೆಸುವ ಒಂದು ಕನ್ನಡ ಶಾಲೆ, ೧,೨, ೩ ಎಂಬ ಮೂರು ಕರ್ನಾಟಕ ಭವನಗಳು, ಅದಕ್ಕೊಂದು ಕಾರ್ಯಾಲಯ, ವಾರ್ತಾ ಇಲಾಖೆಯ ಒಂದು ಆಫೀಸ್, ಜೆ. ಎನ್. ಯು ದಲ್ಲಿ ಇರುವ ಕನ್ನಡ ವಿಭಾಗ, ಕರ್ನಾಟಕದಿಂದ ಕಾರ್ಯ ನಿಮಿತ್ತ ಹೋಗುವ ಕನ್ನಡಿಗರಿಗೆ ಅವು ಉಳಿಯುವ ತಾಣಗಳೂ ಆಗಿರುತ್ತವೆ. ಇಲ್ಲಿಂದ ಹೋದ ಮಾಧ್ಯಮ ಮಿತ್ರರಿಗೆ, ರಾಜಕಾರಣಿಗಳಿಗೆ, ಆಫೀಸರುಗಳಿಗೆ, ಸಾಹಿತ್ಯವಲಯದವರಿಗೆ ಇಂಥ ಕಡೆ ಊಟ ಹಾಗೂ ಉಳಿಯುವ ವ್ಯವಸ್ಥೆ ಕಡಿಮೆ ವೆಚ್ಚದಲ್ಲಿ ದೊರಕುವುದೂ ಅಲ್ಲದೆ ದೂರದೂರಿನ ಪರ ಭಾವನೆಯನ್ನು ಇವು ದೂರವಿಡುತ್ತವೆ.

ನಮ್ಮೂರಿನ ದನದ ಕೊಟ್ಟಿಗೆಯ ತಯ್ಯಾರಿ, ದೀಪಾವಳಿಗೆಂದೇ ಹೂ ಬಿಟ್ಟಿರುತ್ತಿದ್ದ ಚೆಂಡುಹೂವಿನ ಹಿತ್ತಿಲು, ಸಾರಿಸಿದ ತಿಪ್ಪೆ, ಕೊಟ್ಟಿಗೆಯ ಮಣೆ ಮೇಲೆ ಚೆಂಡು ಹೂವಿನ ತೇರಾಗಿ ಕುಳಿತಿರುತ್ತಿದ್ದ ತಿಪ್ಪಮ್ಮನ ಮೂರುತಿಗಳು, ಎಡೆ ಇಡಲು ಓಡಾಡುತ್ತಿದ್ದ ನಮ್ಮ ಅಜ್ಜಮ್ಮ, ಹಬ್ಬದಡುಗೆಯಲ್ಲಿ ಬೇಯುತ್ತಿದ್ದ ನಮ್ಮ ಅಡುಗೆ ಕೋಣೆ, ಕೊಂಬಿಗೆ ಬಣ್ಣ ಬಳಿದುಕೊಂಡು ಮಡಿಮಡಿಯಾಗಿ ಹೊಳೆಯುತ್ತಿದ್ದ ದನದ ಹಿಂಡು ಎಲ್ಲವೂ ಸಾಲುಗಟ್ಟಿ ದನಕಾಯುವ ದೊಡ್ಡನ ಕರೆಗೆ ಓಡೋಡಿ ಬರುವ ದನಕರುಗಳಂತೆ….

ಇಂತಿಪ್ಪ ದೆಹಲಿಯವರ ಬಾಯಲ್ಲಿ ಹೊರಬರುವ ಕನ್ನಡ್ ಶಾಲೆಯಲ್ಲಿ ಮಕ್ಕಳ ರಂಗಭೂಮಿಯ ತರಬೇತಿಗೆಂದು ನಾಕಾರು ಮಂದಿ ಒಟ್ಟಿಗೆ ಹೊಗಿದ್ದೆವು. ದೆಹಲಿಯಲ್ಲಿ ಒಂದು ಕನ್ನಡ ಶಾಲೆಯನ್ನು ನಡೆಸುವ ಆದ್ಯತೆ ಹಾಗೂ ಅದರ ವಿಸ್ತಾರವನ್ನು ನೋಡಿ ನಮ್ಮ ಕನ್ನಡದವರ ಆಸಕ್ತಿಯಿಂದ ಅದೂ ದೆಹಲಿಯ ಮಧ್ಯ ಭಾಗದಲ್ಲಿ ಶಾಲೆ ಇರುವುದನ್ನು ನೋಡಿ ನಾವಂತೂ ಉಬ್ಬಿಹೋದೆವು. ಅಲ್ಲಿ ೨೦ ದಿನದ ತರಬೇತಿ ಶಿಬಿರ ಶುರುವಾಯಿತು.

ಎಂದಿನಂತೆ ರಂಗಭೂಮಿಯ ಪಡಿಪಾಟಲು ಶುರುವಾಯಿತು. ಕಲಿಸುವವರ ಹಾಗೂ ಅಲ್ಲಿಯ ಅಧ್ಯಾಪಕರ ನೆರವಲ್ಲಿ ಆರಂಭವಾದ ತರಗತಿಗಳು, ಯಾವುದೇ ಮುಂದುವರಿಕೆಯಿಲ್ಲದೆ ಹಾಗೇ ನಿಂತುಹೋಗುವ ಮುನ್ಸೂಚನೆಗಳು ಕಂಡವು. ಯಾಕೆಂದರೆ ಕನ್ನಡ ಶಾಲೆಯ ಮಕ್ಕಳು ಲವಲವಿಕೆಯೇ ಇಲ್ಲದ ಮಕ್ಕಳಂತಿದ್ದರು. ನಮ್ಮ ಹಳ್ಳಿಯ ಸರ್ಕಾರಿ ಶಾಲೆಯ ಮಕ್ಕಳ ಚುರುಕುತನವೂ ಇಲ್ಲದಂಥ ಮಕ್ಕಳು ಕಲಿಕೆಯಲ್ಲಿ ಬಹಳವೇ ಹಿಂದಿದ್ದರು.

ಇಂದು ಬಂದ ಮಕ್ಕಳು ನಾಳೆ ಹಾಜರಿರುತ್ತಿರಲಿಲ್ಲ. ಕೊನೆಗೆ ನಾವೇ ಸೋತುಹೋಗಿ ಇಟ್ಟ ಹೆಜ್ಜೆಯನ್ನು ಹಿಂದಿಡಲಾರದೆ, ಅಲ್ಲಿಯ ಅಧಿಕಾರಿಗಳ ಮೂಲಕ ಸಂಜೆಯ ವೇಳೆಯಲ್ಲಿ ಕರ್ನಾಟಕ ಭವನದ ಕೆಲಸಗಾರರ ಮಕ್ಕಳನ್ನು ಅವರ ಸರ್ಕಾರಿ ವಸತಿಯಲ್ಲಿ ಒಗ್ಗೂಡಿಸಿ ತರಬೇತಿ ಮುಗಿಸಿದೆವು. ಕನ್ನಡ ರಾಜ್ಯೋತ್ಸವದ ದಿನ ಅದರ ಪ್ರದರ್ಶನವನ್ನೂ ಮಾಡಿ ಬಂದೆವು. ಆದರೆ ಆ ಶಾಲೆ ಇಂದಿಗೂ ನನ್ನ ನೆನಪಲ್ಲಿ ಹಾಗೇ ಉಳಿದಿದೆ. ಅದಕ್ಕೆ ಹಲವಾರು ಕಾರಣಗಳು ಕಾಣಿಸುತ್ತಿದ್ದವು.

ಕನ್ನಡ್ ಶಾಲೆಗೆ ಬರುವ ಎಲ್ಲ ಮಕ್ಕಳು ಗ್ರೂಪ್ ಡಿ ಹಾಗೂ ಕಾರ್ಮಿಕರ ಮಕ್ಕಳಾಗಿದ್ದರು. ಇಂಥ ದೊಡ್ಡ ಕಟ್ಟಡವಿದ್ದರೂ ಬಹುಶಃ ವರ್ತಮಾನದ ಸಮಸ್ಯೆಗೆ ಹಾಗೂ ಚಲನೆಯ ಆಲೋಚನೆಗೆ ತೆರೆದುಕೊಳ್ಳದಿರುವ ಕಾರಣ ಈ ಶಾಲೆ ಈ ಸ್ಥಿತಿಗೆ ತಲುಪಿರುವಂತೆ ಕಂಡಿತು. ಅಲ್ಲಿ ಓದುವ ಮಕ್ಕಳಿಗೆ ದೆಹಲಿಯ ವಾತಾವರಣದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವ ಗಟ್ಟಿತನದ ಭದ್ರಬುನಾದಿ ಇರುವಂಥ ಶಿಕ್ಷಣದ ಕೊರತೆಯಿಂದಾಗಿ ಮಕ್ಕಳು ಮಂಕಾಗಿದ್ದರು ಹಾಗೂ ಶಿಸ್ತಿನಿಂದ ದೂರವಿದ್ದರು ಎಂದೆನ್ನಿಸುತ್ತದೆ.

ಆದರೆ ಸರ್ಕಾರೀ ವಸತಿಯಲ್ಲಿ ವಾಸವಿದ್ದ ದೆಹಲಿಯ ಬೇರೆ ಶಾಲೆಗೆ ಹೋಗುವ ಮಕ್ಕಳು ಕನ್ನಡ, ಇಂಗ್ಲೀಷ್, ಹಿಂದಿ ಮೂರು ಭಾಷೆಯಲ್ಲೂ ಚುರುಕಾಗಿದ್ದೂ ಅಲ್ಲದೆ ಲವಲವಿಕೆಯಿಂದಿದ್ದರು. ಕನ್ನಡ ಶಾಲೆ ಎಂಬುದು ಮಾತ್ರ ಇತ್ತೀಚೆಗೆ ನಮ್ಮ ಪಾಳುಬೀಳುತ್ತಿರುವ ಸರಕಾರಿ ಶಾಲೆಯ ನೆರಳಂತಿತ್ತು. ಆದರೆ ಕರ್ನಾಟಕ ಸಂಘದ ಕಚೇರಿ ಚುರುಕಾಗಿ ಕಾರ್ಯಗತವಾಗಿದ್ದು ಕನ್ನಡ ಸಂಘದ ಕಟ್ಟಡ ಕೂಡ ವ್ಯವಸ್ಥಿತವಾಗಿತ್ತು. ಹಾಗೇ ಸರಕಾರದ ಸಹಯೋಗದಲ್ಲಿ ನಡೆದ ರಾಜ್ಯೋತ್ಸವದ ದಿನ ಕನ್ನಡದ ಪದಾಧಿಕಾರಿಗಳು ಅದರೊಳಗೆ ತಲ್ಲೀನರಾಗಿದ್ದರು. ಮೈಕ್ ಹಿಡಿದುಕೊಂಡ ನಮ್ಮ ಕನ್ನಡದ ನಾಗರೀಕರು ಕನ್ನಡ ಸಿನಿಮಾ ಗೀತೆಯನ್ನು ಹಾಡುವುದರಲ್ಲಿ ಅವರ ಪ್ರೀತಿಯನ್ನು ತೋರಿಸುತ್ತಿದ್ದರು.

“ಕನ್ನಡ ತಾಯಿಯ ಮಕ್ಕಳು ನಾವು…. ಸೋದರರಂತೆ ನಾವೆಲ್ಲ” ಎಂಬ ಹಾಡು ಕೇಳಿಸುವಾಗ ಮೂಲಭೂತವಾದ ಅಂತಃಸತ್ವವಾದ ಮಕ್ಕಳ ಭಾಷಾ ಪ್ರಜ್ಞೆ ಹಾಗೂ ಶಿಕ್ಷಣದ ಮಹತ್ವವನ್ನು ಮರೆತ ದೊಡ್ಡವರ ಆಡಳಿತ ಕೊರತೆ ಹಾಗೂ ಕನ್ನಡ ಶಾಲೆಯ ಮಂಕು ವಾತಾವರಣ ಮನಸ್ಸಲ್ಲಿ ಬಂದು ನಿಂತಿತು. ಉತ್ಸಾಹದಿಂದ ಹೋಗಿದ್ದ ರಂಗಾಸಕ್ತರು ಇದ್ದದ್ದರಲ್ಲಿ ಹೆಂಗೋ ಸಂತೆಗೆ ಮೂರುಮೊಳ ನೇದು ವಾಪಾಸ್ ಬರುವಂತಾಯಿತು. ದೆಹಲಿಯ ಶಾಲೆಯ ಕನ್ನಡಿಯಲ್ಲಿ ಇತ್ತೀಚಿನ ಕರ್ನಾಟಕದ ಹಳ್ಳಿಗಳ ಕನ್ನಡ ಶಾಲೆಯ ಮುಖವೂ ಕಾಣುತಿತ್ತು.

ಇದು ಹದಿನೈದು ವರುಷದ ಹಿಂದಿನ ಅನುಭವ. ಈಗ ಪರಿಸ್ಥಿತಿ ಸುಧಾರಿಸಿದೆಯೋ ಏನೋ ತಿಳಿದಿಲ್ಲ.