ಅದೇನು ಅದೃಷ್ಟವೋ ಕೂಡಲೇ ಉತ್ತರಿಸಿದ. ಬಾ ಅಂತ ಆಹ್ವಾನಿಸಿದ ಕೂಡ. ಪುಣ್ಯಕ್ಕೆ ಲ್ಯಾಂಡ್ ಲೈನ್‌ನಿಂದ ಕರೆ ಕೂಡ ಮಾಡಿದ. ಅವನ ಜೊತೆಗೆ ನಾನು ಬಹುಶಃ ಪ್ರಥಮ ಬಾರಿಗೆ ಮಾತಾಡಿದ್ದೆ! ನಾನು ಹುಟ್ಟುವುದಕ್ಕಿಂತ ಮೊದಲೆಯೇ ಅವನು ಭಾರತ ಬಿಟ್ಟು ಬಂದಿದ್ದ ಕಾರಣ ನಾನು ಅವನ ಜೊತೆಗೆ ಈಗಾಗಲೇ ಮಾತಾಡಬಹುದಾದ ಅವಕಾಶಗಳು ತೀರಾ ಕಡಿಮೆ ಇದ್ದವು. ಅವನು ಮಾತಾಡುವ ಶೈಲಿ ನನ್ನ ಅಪ್ಪನ ತರಹವೇ ಅನಿಸಿತು. ಬಹಳ ಖುಷಿ ಆಯ್ತು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಇಪ್ಪತ್ತೈದನೆಯ ಬರಹ
ಗದಗ ನನ್ನ ಹೃದಯಕ್ಕೆ ಬಹು ಹತ್ತಿರದ ಊರು. ಅಲ್ಲಿ ನಾನು ಹುಟ್ಟಿದ್ದು ಅಷ್ಟೇ ಆದರೂ ಅಲ್ಲಿ ಕಳೆದ ಕೆಲವೇ ಕೆಲವು ದಿನಗಳು ಕೂಡ ತುಂಬಾ ಅಚ್ಚಳಿಯದೆ ನೆನಪಿನಲ್ಲಿ ಇವೆ. ನನ್ನ ಅಪ್ಪ ಅಮ್ಮ ಅಜ್ಜ ಅಜ್ಜಿಯಂದಿರು ಎಲ್ಲರೂ ಅಲ್ಲಿಯೇ ಹುಟ್ಟಿ ಬೆಳೆದವರು. ಅಲ್ಲಿ ನಮ್ಮ ಹಳೆಯದಾದ ದೊಡ್ಡದೊಂದು ಮನೆ ಇತ್ತು. ಅದೊಂದು ಬಂಗಲೆ ಇದ್ದ ಹಾಗೆ ಇತ್ತು. ಅಲ್ಲಿ ನಮ್ಮ ಕೂಡು ಕುಟುಂಬದ ಸದಸ್ಯರೆಲ್ಲ ಬಹಳ ವರ್ಷದವರೆಗೆ ವಾಸವಾಗಿದ್ದರು. ಆಮೇಲಾಮೇಲೆ ಸ್ವತಂತ್ರ ನಂತರದ ಕಾಲಘಟ್ಟದಲ್ಲಿ ಸ್ವಂತದ ಕೃಷಿ ಭೂಮಿಯಿದ್ದರೂ ಕೂಡ ಅದನ್ನು ಮಾಡಲಾಗದೆ ಕಲಿಕೆಗೆ ಒತ್ತು ಕೊಟ್ಟು ಆಗ ಹೊಸದಾಗಿ ಸೃಷ್ಟಿಯಾಗಿದ್ದ ಕೆಲವು ಅವಕಾಶಗಳನ್ನು ಹುಡುಕಿಕೊಂಡು ಬೇರೆ ಬೇರೆ ಕಡೆಗೆ ಕೆಲಸ ಮಾಡಿಕೊಂಡು ವಾಸವಾದರು. ಕೃಷಿ ಭೂಮಿಗಳು ಕೂಡ ಕ್ರಮೇಣ ಕೈ ಜಾರಿ ಹೋದವು. ಹಾಗಾಗಿದ್ದಕ್ಕೆ ಯಾರೂ ಅಷ್ಟೆಲ್ಲ ತಲೆ ಕೆಡಿಸಿಕೊಳ್ಳಲೂ ಇಲ್ಲ. ಹಾಗೆ ಎಲ್ಲರೂ ದೇಶದ ಒಂದೊಂದು ಕಡೆ ಸೇರಿಕೊಂಡರು. ತಮ್ಮ ತಮ್ಮ ಜೀವನವನ್ನು ರೂಪಿಸುತ್ತ ಹೋದರು. ಅವರಲ್ಲಿ ನನ್ನ ದೊಡ್ಡಪ್ಪನ ಮಗ ಆಗಿನ ಕಾಲದಲ್ಲಿ ಐಐಟಿ ಮಾಡಿ ಒಂದಿಷ್ಟು ವರ್ಷಗಳು ಬೆಂಗಳೂರಿನಲ್ಲಿ ಕೆಲಸ ಮಾಡಿ ಮುಂದೊಮ್ಮೆ ಅಮೆರಿಕೆಗೆ ಹೋಗಿ ಅಲ್ಲಿಯೇ ತನ್ನ ಜೀವನವನ್ನು ರೂಪಿಸಿಕೊಂಡ.
ಗದಗಿನ ಮನೆ ಹಾಗೆಯೇ ಉಳಿಯಿತು. ಆ ಮನೆ ನನ್ನ ಅಪ್ಪ ಹಾಗೂ ಅವನ ಅಣ್ಣಂದಿರಿಗೆ ಸೇರಿದ ಆಸ್ತಿಯಾಗಿತ್ತು. ಒಂದು ಸಮಯದಲ್ಲಿ ಅದನ್ನು ಬೇರೆಯವರಿಗೆ ಮಾರಿಬಿಡೋಣ ಅಂತ ನಿರ್ಧಾರ ಮಾಡಿದರಾದರೂ, ನನ್ನ ಅಮ್ಮನಿಗೆ ಆ ಮನೆಯ ಮೇಲೆ ಇದ್ದ ವ್ಯಾಮೋಹದಿಂದ ನನ್ನ ಅಪ್ಪ ಅದನ್ನು ತಾನೇ ಖರೀದಿಸಿದರು. ಆದರೆ ಕಾರಣಾಂತರಗಳಿಂದ ಆ ಮನೆಯಲ್ಲಿ ವಾಸಮಾಡಬೇಕು ಎಂಬ ನನ್ನ ಅಮ್ಮನ ಕನಸು ಕನಸಾಗಿಯೇ ಉಳಿಯಿತು. ನಮ್ಮ ಹಳೆಯ ಮನೆ ಇನ್ನೂ ಹಳೆಯದಾಗಿತ್ತು! ಹಿರಿಯರಲ್ಲಿ ಹಲವರು ಕ್ರಮೇಣ ಕಾಲವಶವಾದರು. ಅಲ್ಲಿದ್ದ ಬಾಡಿಗೆದಾರರು ಮಾಡಿದ ಮೋಸದಿಂದ ಆ ಮನೆಯನ್ನೂ ಕೂಡ ತುಂಬಾ ಕಡಿಮೆ ಬೆಲೆಗೆ ಮಾರಬೇಕಾಯ್ತು.
ಹಾಗೆ ನಲವತ್ತು ವರ್ಷಗಳ ಹಿಂದೆಯೇ ಅಮೇರಿಕೆ ಸೇರಿಕೊಂಡ ನನ್ನ ಅಣ್ಣ ನನಗಿಂತ ತುಂಬಾ ದೊಡ್ಡವನು. ಅವನಿಗೂ ನಮಗೂ ಸಂಪರ್ಕ ತಪ್ಪಿ ಹೋಗಿತ್ತು. ಈಗ ಅವನನ್ನು ಭೇಟಿ ಮಾಡುವ ಒಂದು ಅವಕಾಶ ಇತ್ತು. ಯಾಕೆಂದರೆ ನಾನೂ ಅಮೇರಿಕೆಯಲ್ಲೇ ಇದ್ದೆನಲ್ಲ! ಅವನೊಬ್ಬ ವಿಶಿಷ್ಟ ವ್ಯಕ್ತಿ. ತುಂಬಾ ಜಾಣ. ಎಷ್ಟೆಂದರೂ ನನ್ನ ಅಣ್ಣನಲ್ಲವೇ ಅಂತ ಹೆಂಡತಿ ಎದುರು ಜಂಭ ಕೊಚ್ಚಿಕೊಂಡು ತಮಾಷೆ ಮಾಡುತ್ತಿದ್ದೆ! ಆದರೆ ಅವನು ಒಂದು ಮೊಬೈಲ್ ಕೂಡ ಇಟ್ಟುಕೊಂಡಿರಲಿಲ್ಲ. ಅದು ತನಗೆ ಅವಶ್ಯಕ ಅಲ್ಲ ಅಂತಲೇ ಅವನು ಹೇಳುತ್ತಿದ್ದ ಅಂತ ಅವನ ತಂಗಿ ವಿದ್ಯಾಳಿಂದ ತಿಳಿಯಿತು. ಹೀಗಾಗಿ ಅವನ ಜೊತೆಗೆ ಮಾತಾಡಬೇಕು ಅಂತ ಕ್ಯಾಲಿಫೋರ್ನಿಯದಲ್ಲಿ ಇದ್ದ ಅವನ ತಂಗಿ ವಿದ್ಯಾ ಹತ್ತಿರ ಹೇಳಿಸುವುದರ ಜೊತೆಗೆ, ನಾನು ನಿನ್ನ ಭೇಟಿಗೆ ಬರಬೇಕು ಅಂತಿದ್ದೇನೆ ಅಂತ ಅವನಿಗೊಂದು ಇಮೇಲ್ ಬರೆದೆ. ಅದನ್ನು ನೋಡಿ ಅವನು ಉತ್ತರಿಸುವವರೆಗೆ ಕಾಯಬೇಕು. ಹೀಗಿತ್ತು ಪರಿಸ್ಥಿತಿ! ಅದೇನು ಅದೃಷ್ಟವೋ ಕೂಡಲೇ ಉತ್ತರಿಸಿದ. ಬಾ ಅಂತ ಆಹ್ವಾನಿಸಿದ ಕೂಡ. ಪುಣ್ಯಕ್ಕೆ ಲ್ಯಾಂಡ್ ಲೈನ್‌ನಿಂದ ಕರೆ ಕೂಡ ಮಾಡಿದ. ಅವನ ಜೊತೆಗೆ ನಾನು ಬಹುಶಃ ಪ್ರಥಮ ಬಾರಿಗೆ ಮಾತಾಡಿದ್ದೆ! ನಾನು ಹುಟ್ಟುವುದಕ್ಕಿಂತ ಮೊದಲೆಯೇ ಅವನು ಭಾರತ ಬಿಟ್ಟು ಬಂದಿದ್ದ ಕಾರಣ ನಾನು ಅವನ ಜೊತೆಗೆ ಈಗಾಗಲೇ ಮಾತಾಡಬಹುದಾದ ಅವಕಾಶಗಳು ತೀರಾ ಕಡಿಮೆ ಇದ್ದವು. ಅವನು ಮಾತಾಡುವ ಶೈಲಿ ನನ್ನ ಅಪ್ಪನ ತರಹವೇ ಅನಿಸಿತು. ಬಹಳ ಖುಷಿ ಆಯ್ತು. ಬೆಂಗಳೂರಿನಲ್ಲಿದ್ದ ಅಪ್ಪನಿಗೂ ಕೂಡ ಕರೆ ಮಾಡಿ ಅವನ ಭೇಟಿಗೆ ಹೋಗುತ್ತಿದ್ದೇನೆ ಅಂತ ಹೇಳಿದೆ. ಅಪ್ಪನೂ ಕೇಳಿ ಬಹಳ ಸಂತೋಷ ಪಟ್ಟ.
ಅಣ್ಣ ಇದ್ದಿದ್ದು ಅಮೆರಿಕೆಯ ಓಹಾಯೋ ರಾಜ್ಯದಲ್ಲಿ. ಅದೇ ಹೆಸರಿನ ನದಿಯಿಂದ ಆ ರಾಜ್ಯಕ್ಕೆ ಆ ಹೆಸರು ಬಂತಂತೆ. ಅವನು ಹೇಳಿದ್ದ ಅವನ ಮನೆಗೆ ಹತ್ತಿರದ ಕ್ಲೀವ್ ಲ್ಯಾಂಡ್ ವಿಮಾನ ನಿಲ್ದಾಣಕ್ಕೆ ಟಿಕೆಟ್ ಮಾಡಿಸಿದ್ದೆ. ನಾವು ವಿಮಾನದಿಂದ ಇಳಿದು ಹೊರಗೆ ಬರುವಷ್ಟರಲ್ಲಿ ತಾನೇ ಖುದ್ದಾಗಿ ನಮ್ಮನ್ನು ಕರೆತರಲು ತನ್ನ ಕಾರಿನಲ್ಲಿ ಅಣ್ಣ ಬಂದಿದ್ದ. ಅವನನ್ನು ಫೋಟೋದಲ್ಲಿ ನೋಡಿದ್ದೆನಾದರೂ ಪ್ರತ್ಯಕ್ಷ ಕಂಡಾಗ ಆದ ಖುಷಿಯೇ ಬೇರೆ. ನೋಡಲು ನನ್ನ ಅಪ್ಪನ ಹಾಗೆಯೇ ಕಾಣುತ್ತಿದ್ದ. ಅವನ ಮನೆಗೆ ಹೋದಾಗ ನನಗೆ ರೋಮಾಂಚನ ಆಯಿತು. ದಟ್ಟ ಕಾಡಿನ ಮಧ್ಯದಲ್ಲಿ ಇದ್ದ ಆ ಮನೆ ನೋಡಿದಾಗ ಗದಗಿನ ನಮ್ಮ ಪುರಾತನ ಮನೆ ನೆನಪಾಗಿತ್ತು. ಅಲ್ಲಿಯೂ ಕೂಡ ಚಳಿಗಾಲದಲ್ಲಿ ಹೆಚ್ಚು ಹಿಮ ಬೀಳುವ ಕಾರಣ ಕಟ್ಟಿಗೆಯನ್ನೇ ಬಳಸಿ ಕಟ್ಟಿದ ಬೆಚ್ಚಗಿನ ಮನೆ ಅದು. ಅವನ ಪೂರ್ತಿ ಸೈಟ್ ಅರ್ಧ ಎಕರೆ ಅಷ್ಟಿತ್ತು! ಅಲ್ಲಿನ ನಿಯಮದ ಪ್ರಕಾರ ಮನೆ ಕಟ್ಟಲು ಜಾಗ ಕೊಳ್ಳಬೇಕು ಅಂದರೆ ಕನಿಷ್ಠ ಅರ್ಧ ಎಕರೆ ಕೊಳ್ಳಲೇಬೇಕಂತೆ! ಜನಸಂಖ್ಯೆ ಕಡಿಮೆ ಹಾಗೂ ಸಿಕ್ಕಾಪಟ್ಟೆ ಜಾಗ ಇದ್ದಾಗ ಇಂತಹ ನಿಯಮಗಳನ್ನು ಮಾಡಬಹುದೇನೊ!
ಅವರ ಮನೆಯಲ್ಲಿ ತುಂಬಾ ಪ್ರೀತಿಯಿಂದ ನೋಡಿಕೊಂಡರು. ಅತ್ತಿಗೆಯನ್ನು ಕೂಡ ಮೊದಲ ಬಾರಿಗೆ ನಾವೆಲ್ಲ ಭೇಟಿಯಾಗಿದ್ದರೂ ಅವರು ಎಷ್ಟೋ ವರ್ಷಗಳಿಂದ ನಮ್ಮ ಪರಿಚಯ ಇದೆ ಅನ್ನುವಂತೆಯೇ ಆತ್ಮೀಯವಾಗಿ ಮಾತಾಡಿಸಿ ಹಲವು ಬಗೆಯ ಭಕ್ಷ್ಯಗಳನ್ನು ಮಾಡಿ ಉಣಬಡಿಸಿದರು. ಅಮೆರಿಕೆಗೆ ಹೋದವರು ಎಲ್ಲವನ್ನೂ ಮರೆತುಬಿಡುತ್ತಾರೆ ಎಂಬ ಕೆಲವು ತಪ್ಪು ಕಲ್ಪನೆಗಳನ್ನು ತೊಡೆದುಕಾಕಲು ಈ ಭೇಟಿ ನನಗೆ ಮತ್ತೆ ಸಹಾಯ ಮಾಡಿತು. ಅಣ್ಣ ಅದೇ ವರ್ಷ ಕೆಲಸದಿಂದ ನಿವೃತ್ತನಾಗಿದ್ದ. ಹೀಗಾಗಿ ನಮ್ಮ ಜೊತೆಗೆ ಸಮಯ ಕಳೆಯಲು ಅವನಿಗೂ ಪುರುಸೊತ್ತು ಇತ್ತು. ಆದರೆ ನಿವೃತ್ತನಾದೆ ಎಂಬ ಹುರುಪಿನಲ್ಲಿ ಮೊಮ್ಮಕ್ಕಳ ಜೊತೆಗೆ ಸೇರಿ ವಾಲಿಬಾಲ್ ಅಂತದೇನೋ ಆಡಲು ಹೋಗಿ ಆಗ ತಾನೇ ತನ್ನ ಮೊಳಕಾಲಿಗೆ ಪೆಟ್ಟು ಮಾಡಿಕೊಂಡಿದ್ದ. ಆದರೂ ನಮ್ಮ ಜೊತೆಗೆ ತನ್ನದೇ ಕಾರಿನಲ್ಲಿ ಅಲ್ಲಿಲ್ಲಿ ಅಡ್ಡಾಡಿಸುತ್ತಿದ್ದ. ನಾನು ಕಾರ್ ಓಡಿಸುವೆ ಕೊಡು ಅಂದರೆ ಬೇಡಾ ಅಂತಿದ್ದ. ನಾನೀಗಾಗಲೇ ಒಂದು ವರ್ಷದಿಂದ ಅಮೆರಿಕೆಯಲ್ಲಿ ಇದ್ದೇನಾದ್ದರಿಂದ ಅಲ್ಲಿ ಕಾರ್ ಓಡಿಸುವ ಸಾಮರ್ಥ್ಯ ನನಗೆ ಇತ್ತಾದರೂ ಅವನಿಗೆ ಏನೋ ಹಿಂಜರಿಕೆ.
ಅವನ ಮನೆಯಿಂದ ಹೆಚ್ಚು ಕಡಿಮೆ ಮೂರುವರೆ ಗಂಟೆಗಳ ಅಂತರದಲ್ಲಿ ನಯಾಗರ ಜಲಪಾತ ಇತ್ತಾದ್ದರಿಂದ ಅಲ್ಲಿಗೇ ಮೊದಲು ಹೋಗಿ ಬರೋಣ ಅಂತ ಅಣ್ಣನಿಗೆ ಹೇಳಿದ್ದೆ. ಆದರೆ ಅಲ್ಲಿಗೆ ಹೋಗಲು ನಾನೇ ಕಾರ್ ಬಾಡಿಗೆಗೆ ತೆಗೆದುಕೊಳ್ಳುವೆ, ಅದರಲ್ಲಿಯೇ ಹೋಗೋಣ ಅಂತ ಅಂದೆ. ಆಗಲಾದರೂ ನಾನು ಡ್ರೈವ್ ಮಾಡಬಹುದು, ಅವನು ಡ್ರೈವ್ ಮಾಡೋದನ್ನ ತಪ್ಪಿಸಬಹುದು ಎಂಬುದು ನನ್ನ ಯೋಜನೆ ಆಗಿತ್ತು. ಮೂರು ಗಂಟೆಗಳಷ್ಟು ಕಾರ್ ಓಡಿಸಿದರೆ ಅವನ ಕಾಲಿಗೆ ಇನ್ನೂ ಕಷ್ಟ ಆಗೋದು ಬೇಡ ಅನ್ನುವುದು ನನ್ನ ಯೋಚನೆಯ ಹಿಂದಿರುವ ಉದ್ದೇಶ ಆಗಿತ್ತು. ಆದರೆ ಅಣ್ಣ ಕೇಳಬೇಕಲ್ಲ. ಉಹೂಂ ತಾನೇ ಓಡಿಸುವೆ ಅಂತ ಅಂದ. ಅಣ್ಣಂದಿರು ಅಪ್ಪಂದಿರಿಗೆ ಹೆಚ್ಚು ವ್ಯತ್ಯಾಸ ಇರೋದಿಲ್ಲ. ಎಷ್ಟೇ ದೊಡ್ಡವರಾದರು, ಚಿಕ್ಕವರಿಗೆ ಏನೂ ಬರೋದಿಲ್ಲ, ಅವರಿಗೆ ಜವಾಬ್ದಾರಿ ಕೊಟ್ಟರೆ ಏನು ಮಾಡಿಬಿಡುತ್ತಾರೋ, ಎಲ್ಲಿ ಎಡುವುತ್ತಾರೋ ಏನೋ ಎಂಬಂತಹ ಕಾಳಜಿಯ ಹಾಗೆ ತೋರುವ ಭಯಗಳು ಅವರಿಗೆ ಯಾವಾಗಲೂ ಇದ್ದೆ ಇರುತ್ತವೆ. ನಾನೂ ನನಗಿಂತ ಕಿರಿಯರ ಜೊತೆಗೆ ಹಾಗೆಯೇ ಮಾಡುತ್ತಿದ್ದೆನಲ್ಲ!
ಆದರೂ ಅವನ ಗಟ್ಟಿತನ ಮೆಚ್ಚಿದೆ. ತನ್ನ ಮೊಳಕಾಲಿನ ನೋವನ್ನು ಸಹಿಸಿ ಮೂರು ಗಂಟೆ ಕಾರ್ ಓಡಿಸಿದ್ದು ನೋಡಿ ನಮಗೆ ಅಚ್ಚರಿ. ಮಧ್ಯದಲ್ಲಿ ಒಂದು ಹೋಟೆಲ್ ಬಳಿ ನಿಂತೆವು. ಅಲ್ಲಿ ಏನಾದರೂ ತಿಂದುಕೊಂಡು ಹೋಗೋಣ ಅನ್ನುವುದರ ಜೊತೆಗೆ ಟಾಯ್ಲೆಟ್ ಗೆ ಹೋದರಾಯ್ತು ಅಂತಲೇ ಹೋದೆವು. ಬಹುಷಃ ಹತ್ತಿರದಲ್ಲಿ ಇನ್ಯಾವುದೇ ಹೋಟೆಲ್ ಇರಲಿಲ್ಲ ಅಂತಲೋ ಏನೋ ಸಿಕ್ಕಾಪಟ್ಟೆ ಗದ್ದಲ ಅಲ್ಲಿತ್ತು. ಹೆಚ್ಚುಕಡಿಮೆ ನಮ್ಮ ಬಸ್ ನಿಲ್ದಾಣಗಳಲ್ಲಿ ಇರುವ ಹೋಟೆಲ್ ಗಳಷ್ಟೇ ಗದ್ದಲ. ಅಲ್ಲಿನ ರೆಸ್ಟ್ ರೂಮ್ ಗೆ ಕೂಡ ತುಂಬಾ ಜನರು ಕಾಯುತ್ತಿದ್ದರು. ಅದ್ಯಾಕೆ ಟಾಯ್ಲೆಟ್ ಗೆ ರೆಸ್ಟ್ ರೂಮ್ ಅಂತಾರೋ ನಾ ಕಾಣೆ. ನಾವು ಕೂಡ ಅಲ್ಲಿದ್ದಾಗ ಹಾಗೆಯೇ ಹೇಳುತ್ತಿದ್ದೆವು. ಅಮೆರಿಕನ್ನರಿಗೆ ಅವರಿಗೆ ರೂಢಿಗತ ಆಗಿರುವ ಶಬ್ದಗಳನ್ನು ಬಿಟ್ಟು ಬೇರೆ ಏನಾದರೂ ಹೇಳಿದರೆ ಅರ್ಥವೇ ಆಗೊಲ್ಲ. ಅಷ್ಟು ದಡ್ಡರು ಅವರು! ನಾವು ಎಲ್ಲಿ ಹೋದರೂ ನಮ್ಮದನ್ನು ಬಿಟ್ಟು ಅಲ್ಲಿಯದನ್ನು ರೂಢಿಸಿಕೊಳ್ಳುವ ಜಾಣರು!
ಕೊನೆಗೂ ಮೂತ್ರ ವಿಸರ್ಜನೆಗೆ ಅವಕಾಶ ಸಿಕ್ಕಿತು. ಅದೂ ಕೂಡ ನಮ್ಮ ಬಸ್ ನಿಲ್ದಾಣದ ಟಾಯ್ಲೆಟ್ ಹಾಗೆಯೇ ಸಹಿಸಲಸಾಧ್ಯವಾದ ದುರ್ವಾಸನೆಯಿಂದ ಕೂಡಿತ್ತು. ಅದಕ್ಕೆ ಆ ಹೊಟೇಲಿನಲ್ಲಿದ್ದ ಜನಸಂಖೆಯೇ ಕಾರಣ ಅನಿಸ್ತು. ತುಂಬಾ ಜನದಟ್ಟಣೆ ಇರುವಾಗ ಎಲ್ಲೆಡೆಯೂ ಇದೆ ಕತೆ, ನಮ್ಮ ದೇಶದಲ್ಲೂ ಹಾಗೆಯೇ ಆಗಿದೆ ಎಂಬ ವಿಕೃತ ಆನಂದವನ್ನು ಅನುಭವಿಸಿದೆನಾದರೂ, ಸ್ವಚ್ಛತೆಯ ವಿಷಯದಲ್ಲಿ ನಾವು ಭಾರತೀಯರು ತುಂಬಾ ಸುಧಾರಿಸಬೇಕು ಎಂಬುದೂ ಅಷ್ಟೇ ದಿಟ ಅನ್ನಿ.
ನಯಾಗರ ಜಲಪಾತ ನೋಡಿದಾಗ ಅಷ್ಟೇನೂ ರೋಮಾಂಚನ ಅನಿಸಲೇ ಇಲ್ಲ. ಅದು ತುಂಬಾ ಕೃತ್ರಿಮ ಜಲಪಾತ ಅನಿಸಿತು. ಬಹುಶಃ ಕೆನಡಾ ಬಳಿಯ ಜಲಪಾತ ಇನ್ನೂ ರುದ್ರ ರಮಣೀಯ ಇರಬಹುದೇನೋ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅಷ್ಟೇ. ಆದರೆ ನನ್ನ ಅಣ್ಣ ಹಲವು ಬಾರಿ ನಯಾಗರದ ಆ ಕಡೆಯ ಜಲಪಾತ ನೋಡಿದ್ದೇನೆ, ಅದು ಇದಕ್ಕಿಂತ ಸುಂದರವಾಗಿದೆ ಅಂತ ಹೇಳಿದ. ಆದರೆ ಅಮೇರಿಕನ್ನರ ಮಾರ್ಕೆಟಿಂಗ್ ಕೌಶಲ್ಯಕ್ಕೆ ಮತ್ತೆ ಬೆರಗಾದೆ. ಜಲಪಾತದ ಹತ್ತಿರದ ಮಂಜಿನ ಸಿಂಪಡಣೆಯನ್ನು ಅನುಭವಿಸಲು ದೊಡ್ಡ ಹಡಗಿನಲ್ಲಿ ಕರೆದೊಯ್ಯುತ್ತಾರೆ. ಹಾಗೆ ಹೋಗುವುದಕ್ಕೆ ಎಷ್ಟೋ ಮೊತ್ತದ ಶುಲ್ಕ ಇದೆ. ಅದನ್ನು ಕಟ್ಟಿಸಿಕೊಂಡ ಮೇಲೆ ನಮಗೆ ನೀರಿನಿಂದ ತೊಯ್ಯದಂತಹ ಜಾಕೆಟ್ ಹಾಗೂ ಚಪ್ಪಲಿ ಕೊಡುತ್ತಾರೆ. ಅದರ ಮೇಲೆಲ್ಲಾ ನಯಾಗರ ಜಲಪಾತ ಅಂತ ಬರೆಸಿರುತ್ತಾರೆ. ಅಂತೂ ಇವೆಲ್ಲ ಧರಿಸಿ ನಯಾಗರ ಜಲಪಾತದ ಹತ್ತಿರಕ್ಕೆ ಹೋಗಿ ಅದರ ನೀರನ್ನು ಸಿಂಪಡಿಸಿಕೊಂಡು ಆನಂದ ಪಟ್ಟೆವು. ಒಟ್ಟಾರೆ ಅನುಭವ ಅಷ್ಟೇನೂ ಅದ್ಭುತ ಅಂತ ಇನ್ನೂ ಅನಿಸಿರಲೇ ಇಲ್ಲ. ಅಥವಾ ನಾನು ತುಂಬಾ ದೊಡ್ಡ ನಿರೀಕ್ಷೆ ಇಟ್ಟುಕೊಂಡು, ಅದ್ಹೇಗೆ ನಮ್ಮ ಜೋಗ ಜಲಪಾತಕ್ಕಿಂತ ಸುಂದರ ಇದ್ದೀತು ಎಂಬ ಪೂರ್ವಗ್ರಹದೊಂದಿಗೆ ನೋಡಿದ್ದಕ್ಕೆ ಹಾಗೆ ಅನಿಸಿತಾ? ಗೊತ್ತಿಲ್ಲ. ಅಲ್ಲಿನ ಗಾರ್ಡನ್‌ನಲ್ಲಿ ಅಡ್ಡಾಡಿಕೊಂಡು ಇನ್ನೇನು ಹೊರಗೆ ಹೋಗಬೇಕು ಅಷ್ಟರಲ್ಲೇ ಎದುರಿಗೆ ಕಂಡದ್ದನ್ನು ನೋಡಿ ಮಾತೇ ಹೊರಡದಂತೆ ಬೆರಗಾಗಿ ನಿಂತೆ…!
(ಮುಂದುವರಿಯುವುದು…)
(ಹಿಂದಿನ ಕಂತು: ಅಮೆರಿಕದ ಅಂಗಡಿಯಲ್ಲಿ ಗಣೇಶ ದರ್ಶನ!)
ಗುರುಪ್ರಸಾದ್ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿರೈತರು. “ಬೆಳೆಸಿರಿ” ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. “ಕೇಶಕ್ಷಾಮ” (ಹಾಸ್ಯ ಬರಹಗಳ ಸಂಕಲನ) ಸೇರಿ ಇವರ ಮೂರು ಕೃತಿಗಳು ಪ್ರಕಟಗೊಂಡಿವೆ.