ಝುಹೆಬಾನ್ ಎಂಬ ಮಧ್ಯವಯಸ್ಕನೊಬ್ಬರನ್ನು ಮಾತಿಗೆಳೆದಾಗ ಅವರು ದರ್ಗಾಹದ ಇತಿಹಾಸವನ್ನು ಬಿಚ್ಚಿಡುತ್ತಾ ಹೋದರು. ಸುಮಾರು ಎರಡುನೂರ ಎಪ್ಪತ್ತೈದು ವರ್ಷಗಳ ಹಿಂದೆ ಟಿಪ್ಪು ಮಸ್ತಾನ್, ಮಾಣಿಕ್ ಮಸ್ತಾನ್ ಮತ್ತು ತವಕ್ಕಲ್ ಮಸ್ತಾನ್ ಎಂಬ ಮೂವರು, ನವಾಬ್ ಹೈದರ್ ಆಲಿ ಕಟ್ಟಿಸುತ್ತಿದ್ದ ಕಲ್ಲಿನರಮನೆಯ ಕೆಲಸಕ್ಕೆಂದು ಬಂದರು. ಧರ್ಮನಿಷ್ಠರಿದ್ದ ಆ ಮೂವರೂ ಕೆಲಸವೇ ದೇವರೆಂದು ದುಡಿಯುತ್ತಿದ್ದರೂ ಪಗಾರದ ದಿನ ಮಾತ್ರ ಕಾಣೆಯಾಗಿಬಿಡುತ್ತಿದ್ದರಂತೆ! ಇದನ್ನು ಗಮನಿಸಿದ ಹೈದರ್ ಆಲಿ ಮಂತ್ರಿಗಳ ಮೂಲಕ ವಿಚಾರಿಸಲಾಗಿ ಅವರು ಸಂತರೆಂದು ತಿಳಿದು ಅವರಿಗಾಗಿ ಇಲ್ಲೊಂದು ದರ್ಗಾಹ್ ಕಟ್ಟಿಸಲಾಯಿತೆಂದು ವಿವರಿಸಿದರು.
ದಾದಾಪೀರ್‌ ಜೈಮನ್‌ ಬರೆಯುವ ‘ಜಂಕ್ಷನ್‌ ಪಾಯಿಂಟ್‌’ ಅಂಕಣ

ಬೆಂಗಳೂರಿನ ಕಾಟನ್ ಪೇಟೆ, ಅಕ್ಕಿ ಪೇಟೆಗಳ ಬಹುಸಂಖ್ಯಾತ ಮಾರ್ವಾಡಿಗಳೇ ತುಂಬಿರುವ ಕಿಕ್ಕಿರಿದ ಒಳರಸ್ತೆಗಳಲ್ಲಿ ನಡೆದು ಕೆಂಪೇಗೌಡ ಮೆಟ್ರೋ ನಿಲ್ದಾಣಕ್ಕಿಂತ ಮುಂಚಿನ ರಸ್ತೆಯ ಎಡಕ್ಕೆ ತಿರುಗಿದರೆ ಒಂದು ಪುಟ್ಟ ಹೊಸ ಲೋಕ ತೆರೆದುಕೊಳ್ಳುತ್ತದೆ. ಆ ಬೀದಿಯ ಎರಡೂ ಬದಿಗಳಲ್ಲೂ ಮಲ್ಲಿಗೆ, ಗುಲಾಬಿ, ಫಾತೇಹಗಾಗಿ ಬೋಂದಿ ಲಾಡು, ಊದಿನಕಡ್ಡಿ, ಚಾದರು, ಅತ್ತರುಗಳಿರುವ ಸಾಲು ಸಾಲು ಅಂಗಡಿಗಳ ನಡುವೆ ಹಸಿರು ಮತ್ತು ಬಿಳಿ ಬಣ್ಣಗಳನ್ನು ಹೊದ್ದ ಹಜ್ರತ್ ತವಕ್ಕಲ್ ಮಸ್ತಾನ್ ಷಾ ದರ್ಗಾಹ್ ಸಿಗುತ್ತದೆ. ಒಳಗಡೆ ಕಾಲಿಡುತ್ತಿದ್ದಂತೆಯೇ ಊದಿನಕಡ್ಡಿಯ, ಅತ್ತರಿನ, ಮಲ್ಲಿಗೆ ಮತ್ತು ಗುಲಾಬಿ ಮಿಶ್ರಿತ ದಿವ್ಯ ಸುಗಂಧ ನಮ್ಮನ್ನು ಭಕ್ತಿಯ ಭಾವ ಲೋಕಕ್ಕೆ ಒಯ್ಯುತ್ತದೆ. ನೀಲಿ ಆಗಸದಲ್ಲಿ ಹಾರಾಡುವ ಪಾರಿವಾಳಗಳು ಶಾಂತಿಯ ದ್ಯೋತಕದಂತೆ ಸಂಚರಿಸುತ್ತವೆ. ದರ್ಗಾಹದ ಒಳ ಆವರಣದ ಮಧ್ಯಭಾಗದಲ್ಲಿ ಹಜ್ರತ್ ತವಕ್ಕಲ್ ಮಸ್ತಾನರ ಸಮಾಧಿ, ಹೊಸದಾಗಿ ನಿರ್ಮಿಸಲಾಗಿರುವ ಭವ್ಯವಾದ ಮಸೀದಿ ಮತ್ತು ಬಲಪಕ್ಕದಲ್ಲಿ ದರ್ಗಾಹದ ಟ್ರಸ್ಟಿನವರೇ ನಡೆಸುವ ಹೆಚ್. ಟಿ. ಎಂ. ಶಾಲೆ ಕಾಣಸಿಗುತ್ತದೆ. ನಾನು ಕೈಯಲ್ಲೊಂದಿಷ್ಟು ಗುಲಾಬಿ ಹೂಗಳ ಹಿಡಿದು ಒಳಪ್ರವೇಶಿಸಿದಾಗ ಒಳಾವರಣದ ಮುಖ್ಯದ್ವಾರದಲ್ಲಿ ಹಿರಿಯ ಮುಜಾವರರು ನಂಬಿ ಬಂದವರಿಗೆ ನವಿಲುಗರಿಯ ಮಾಂತ್ರಿಕ ಸ್ಪರ್ಶದಿಂದ ಹರಸುತ್ತಿರುವುದು ಕಾಣಿಸಿತು. ಅಲ್ಲಲ್ಲಿ ಮಹಿಳೆಯರು ಪ್ರಾರ್ಥಿಸುತ್ತಿದ್ದರು. ದರ್ಗಾಹದ ತೀರಾ ಒಳಗೆ ಪುರುಷರು ಪ್ರಾರ್ಥಿಸುತ್ತಿದ್ದರು. ನಾನು ಸೀದಾ ಒಳಗೆ ಹೋಗಿ ಹೂಗಳನ್ನು ಅರ್ಪಿಸಿ, ಪ್ರಾರ್ಥಿಸಿ ಹೊರಬಂದು ಮುಜಾವರರನ್ನು ಮಾತಿಗೆಳೆದಾಗ ಒಂದು ಕಾರ್ಡು ಕೊಟ್ಟು ಅದರಲ್ಲಿದ್ದ www.htmdargah.com ವೆಬ್ ವಿಳಾಸ ತೋರಿಸಿ ಇದರಲ್ಲಿ ನಿಮಗೆ ಬೇಕಾದ ಸಂಪೂರ್ಣ ಮಾಹಿತಿ ಸಿಗುತ್ತದೆ ಎಂದು ನಮ್ಮ ಹಿಂದೆ ಸರತಿ ಸಾಲಿನಲ್ಲಿದ್ದವರನ್ನು ಕರೆದರು.

ಬಹುಷಃ ತಂತ್ರಜ್ಞಾನವೆಂಬುದು ಗುಡಿ-ಚರ್ಚು ಮಸೀದಿಗಳನ್ನು ಒಳಗೊಂಡಿದ್ದು ನೆನಪಾಗಿ ಖುಷಿ ಮತ್ತು ಕಸಿವಿಸಿ ಎರಡೂ ಆಯಿತು. ಅಲ್ಲಿಂದ ಎದ್ದು ಒಂದಿಷ್ಟು ಫೋಟೋ ಕ್ಲಿಕ್ಕಿಸಿ ಅಲ್ಲಿಯೇ ನಿಂತಿದ್ದ ಇಸ್ಮಾಯಿಲ್ ಎಂಬ ಹದಿನೆಂಟು ವರ್ಷದ ಕನಸುಗಣ್ಣಿನ ಪೋರನನ್ನು ಮಾತಿಗೆಳೆದೆ ; ‘ಈ ದರ್ಗಾಕ್ಕೆ ನಾನು ಐದು ವರ್ಷದವನಿದ್ದಾಗಿಂದಲೂ ಬರುತ್ತಿರುವೆ. ಈ ದರ್ಗಾಹ್ ಸುಮಾರು ಎರಡು ನೂರು ವರ್ಷ ಹಳೆಯದು ಅಂತ ಅಮ್ಮಿ ಹೇಳ್ತಿರ್ತಾಳೆ. ಇಲ್ಲಿ ಎಲ್ಲಾ ಧರ್ಮದವರೂ ಬರುತ್ತಾರೆ. ಇಲ್ಲಿ ಯಾವುದೇ ಭೇದ ಭಾವ ಎಂಬುದು ಇಲ್ಲ’ ಎಂದ. ಅವನು ಹೇಳಿದ್ದು ಸರಿ ಎನ್ನುವಂತೆ ಕೆಲವು ಹಿಂದೂಗಳು, ಮಾರ್ವಾಡಿಗಳು ಅಲ್ಲಿಯೇ ಕೂತಿದ್ದ ಹಿರಿಯ ಮುಜಾವರರ ಬಳಿ ತಮ್ಮ ಇಷ್ಟಾರ್ಥ ಹೇಳಿಕೊಂಡು, ತಲೆಯ ಮೇಲೆ ನವಿಲುಗರಿಯಿಂದ ಬಡಿಸಿಕೊಳ್ಳುತ್ತಿದ್ದುದು ಕಾಣಿಸಿತು. ಅದೇ ಹುಡುಗ ಸ್ವಲ್ಪ ಮುಂದುವರಿದು ‘ಮಹಿಳೆಯರಿಗೆ ತೀರಾ ಒಳಗಡೆ ಪ್ರವೇಶವಿಲ್ಲ. ಪುರುಷರಿಗೆ ಮಾತ್ರ ಪ್ರವೇಶ ‘ ಎಂದು ಸಹಜವಾಗಿ ಎಂಬಂತೆ ಹೇಳಿದ. ಅಲ್ಲಿಯೇ ಸ್ವಲ್ಪ ಪಕ್ಕದಲ್ಲಿ ಬುರ್ಖಾ ಹೊದ್ದ ಮಹಿಳೆಯರು ಪುಟ್ಟ ಪುಸ್ತಕ ಹಿಡಿದು ಪ್ರಾರ್ಥಿಸುತ್ತಿದ್ದರು. ಒಳಗಡೆ ಪುರುಷರು ಫಾತೇಹ್ ಮಾಡಿಸುತ್ತಿದ್ದರು.

ನಾನು ಕೈಯಲ್ಲೊಂದಿಷ್ಟು ಗುಲಾಬಿ ಹೂಗಳ ಹಿಡಿದು ಒಳಪ್ರವೇಶಿಸಿದಾಗ ಒಳಾವರಣದ ಮುಖ್ಯದ್ವಾರದಲ್ಲಿ ಹಿರಿಯ ಮುಜಾವರರು ನಂಬಿ ಬಂದವರಿಗೆ ನವಿಲುಗರಿಯ ಮಾಂತ್ರಿಕ ಸ್ಪರ್ಶದಿಂದ ಹರಸುತ್ತಿರುವುದು ಕಾಣಿಸಿತು. ಅಲ್ಲಲ್ಲಿ ಮಹಿಳೆಯರು ಪ್ರಾರ್ಥಿಸುತ್ತಿದ್ದರು. ದರ್ಗಾಹದ ತೀರಾ ಒಳಗೆ ಪುರುಷರು ಪ್ರಾರ್ಥಿಸುತ್ತಿದ್ದರು.

ಝುಹೆಬಾನ್ ಎಂಬ ಮಧ್ಯವಯಸ್ಕನೊಬ್ಬರನ್ನು ಮಾತಿಗೆಳೆದಾಗ ಅವರು ದರ್ಗಾಹದ ಇತಿಹಾಸವನ್ನು ಬಿಚ್ಚಿಡುತ್ತಾ ಹೋದರು. ಸುಮಾರು ಎರಡುನೂರ ಎಪ್ಪತ್ತೈದು ವರ್ಷಗಳ ಹಿಂದೆ ಟಿಪ್ಪು ಮಸ್ತಾನ್, ಮಾಣಿಕ್ ಮಸ್ತಾನ್ ಮತ್ತು ತವಕ್ಕಲ್ ಮಸ್ತಾನ್ ಎಂಬ ಮೂವರು, ನವಾಬ್ ಹೈದರ್ ಆಲಿ ಕಟ್ಟಿಸುತ್ತಿದ್ದ ಕಲ್ಲಿನರಮನೆಯ ಕೆಲಸಕ್ಕೆಂದು ಬಂದರು. ಧರ್ಮನಿಷ್ಠರಿದ್ದ ಆ ಮೂವರೂ ಕೆಲಸವೇ ದೇವರೆಂದು ದುಡಿಯುತ್ತಿದ್ದರೂ ಪಗಾರದ ದಿನ ಮಾತ್ರ ಕಾಣೆಯಾಗಿಬಿಡುತ್ತಿದ್ದರಂತೆ! ಇದನ್ನು ಗಮನಿಸಿದ ಹೈದರ್ ಆಲಿ ಮಂತ್ರಿಗಳ ಮೂಲಕ ವಿಚಾರಿಸಲಾಗಿ ಅವರು ಸಂತರೆಂದು ತಿಳಿದು ಅವರಿಗಾಗಿ ಇಲ್ಲೊಂದು ದರ್ಗಾಹ್ ಕಟ್ಟಿಸಲಾಯಿತೆಂದು ವಿವರಿಸಿದರು. ಹೈದರ್ ಅಲಿ ಕಾಲದಲ್ಲಿ ಶುರುವಾದ ದರ್ಗಾಹದ ನಿರ್ಮಾಣ ಸುಮಾರು ೧೭೮೩ ರಲ್ಲಿ ನವಾಬ್ ಟಿಪ್ಪು ಸುಲ್ತಾನರ ಕಾಲದಲ್ಲಿ ಪೂರ್ಣಗೊಂಡಿತು. ಪ್ರತಿ ವರ್ಷ ಇಲ್ಲಿ ಮೊಹರಂ ಹಬ್ಬ ಆದ ನಲವತ್ತು ದಿನಗಳ ನಂತರ ಮೂರು ದಿನ ನಡೆಯುವ ನಡೆಯುವ ಉರುಸ್ ನೋಡಲು ನಾನಾ ಭಾಗಗಳಿಂದ ಜನ ಬರುತ್ತಾರೆಂದು ಹೇಳಲಾಗುತ್ತದೆ. ಸೂಫಿ ಸಂತ ತವಕ್ಕಲ್ ಮಸ್ತಾನ್ ಶಾಹರಿಗೆ ಗಂಧಾಭಿಷೇಕ, ಫಾತೇಹ್, ಜಾತ್ರೆ ನಡೆಯುತ್ತವೆ. ಈ ಮಸೀದಿ ಈಗಿನ ಐದು ವರ್ಷಗಳ ಹಿಂದಷ್ಟೇ ಕಟ್ಟಲಾಗಿದೆ ಎಂಬ ವಿವರಗಳು ಗೂಗಲಿಗೆ ತಾಳೆಯಾಗುತ್ತವೆ ಕೂಡ.

ಹಜ್ರತ್ ತವಕ್ಕಲ್ ಮಸ್ತಾನ್ ದರ್ಗಾಹ್ ಟ್ರಸ್ಟ್ ವತಿಯಿಂದ ದರ್ಗಾಹದ ಪಕ್ಕದಲ್ಲಿಯೇ ನಡೆಸುತ್ತಿರುವ ಹೆಚ್.ಟಿ.ಎಂ ಶಾಲೆಯ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ನಳಿನಿಯವರನ್ನು ಮಾತನಾಡಿಸಿದಾಗ ‘ಈ ಶಾಲೆಯನ್ನು ಟ್ರಸ್ಟಿನವರೇ ನಡೆಸುತ್ತಾರೆ. ನಾನಿಲ್ಲಿ ಇಪ್ಪತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. ಕಳೆದ ಹತ್ತು ವರ್ಷಗಳಿಂದ ಮುಖ್ಯೋಪಾಧ್ಯಾಯಿನಿಯಾಗಿದ್ದೇನೆ. ಈ ಶಾಲೆಯಲ್ಲಿ ಈಗ ಎಲ್ಲಾ ಜಾತಿ ಧರ್ಮದ ಮಕ್ಕಳಿದ್ದಾರೆ. ಬಡ ಮಕ್ಕಳಿಗೆ ಅರ್ಧ ಶುಲ್ಕ. ಶಾಲೆಯ ಆಡಳಿತದಲ್ಲಿ ಟ್ರಸ್ಟು ಹೆಚ್ಚು ಮೂಗು ತೂರಿಸುವುದಿಲ್ಲ ಎಂಬುದಕ್ಕೆ ಒಬ್ಬ ಹಿಂದೂ ಮಹಿಳೆಯಾದ ನಾನು ಹತ್ತು ವರ್ಷಗಳ ಕಾಲ ನಿರಾತಂಕವಾಗಿ ಸೇವೆ ಸಲ್ಲಿಸುತ್ತಿರುವುದೇ ಸಾಕ್ಷಿ. ಉರ್ದು ಭಾಷೆ ಕೇವಲ ಒಂದು ಭಾಷೆ ಇದ್ದರೂ ಕನ್ನಡವನ್ನೇ ಇಲ್ಲಿ ಪ್ರಥಮ ಭಾಷೆಯಾಗಿ ಕಲಿಸಲಾಗುತ್ತದೆ. ಶಾಲಾ ಮಕ್ಕಳ ಪ್ರಾರ್ಥನೆಯಲ್ಲಿ ಧರ್ಮವನ್ನು ಹೇರಲಾಗುವುದಿಲ್ಲ’ ಎಂದು ಆತ್ಮೀಯವಾಗಿ ಹೇಳಿಕೊಂಡ ಅವರು ದರ್ಗಾಹದ ಬಗ್ಗೆ ಹೇಳಿಕೊಳ್ಳತೊಡಗಿದರು. ಇಲ್ಲಿ ಎಲ್ಲಾ ಧರ್ಮದವರು ಬರುತ್ತಾರಂತೆ ಹೌದಾ ಎಂಬ ನಮ್ಮ ಪ್ರಶ್ನೆಗೆ ಅವರು ಬಹಳ ತಾತ್ವಿಕವಾಗಿ ಉತ್ತರಿಸಿದರು. ‘ನೋಡಿ… ಮನುಷ್ಯನ ಜೀವನ ನಿಂತಿರುವುದು ನಂಬಿಕೆಯ ಮೇಲೆ!!! ಇಲ್ಲಿ ಬರುವ ಜನರು ಇಲ್ಲಿಗೆ ಬಂದು ಪ್ರಾರ್ಥಿಸಿದರೆ ಅವರಿಗೆ ಒಳ್ಳೆಯದಾಗುತ್ತದೆ ಮತ್ತು ಅವರ ಇಷ್ಟಾರ್ಥಗಳು ನೆರವೇರುತ್ತವೆ ಎಂಬುದನ್ನು ನಂಬುತ್ತಾರೆ. ಅವು ನೆರವೇರುತ್ತವೆ ಕೂಡ! ಇಲ್ಲಿ ಸತ್ಯ, ನ್ಯಾಯ, ನಿಷ್ಠೆ ಮತ್ತು ಭಕ್ತಿ ಮಾತ್ರ ನಡೆಯುತ್ತವೆ. ಬೇರೆ ಯಾವುದಕ್ಕೂ ಇಲ್ಲಿ ಜಾಗವಿಲ್ಲ. ಅಲ್ಲಿರುವ ಆ ಸೂಫಿ ಸಂತ ಹಜ್ರತ್ ತವಕ್ಕಲ್ ಮಸ್ತಾನ್ ಎಲ್ಲವನ್ನು ನೋಡುತ್ತಲಿದ್ದಾರೆ. ನಂಬಿಕೆ ಮಾತ್ರ ಮನುಷ್ಯನನ್ನ ನಡೆಸುತ್ತದೆ. ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಮನುಷ್ಯನನ್ನು ಧರ್ಮಾತೀತವಾಗಿಸಿಬಿಡುತ್ತದೆ’ ಎಂದು ಕಣ್ಣರಳಿಸುತ್ತಾರೆ.

ಈ ದರ್ಗಾಹ್ ಉರುಸಿನಲ್ಲಿ ಹೇಗೆ ಝಗ ಮಗ ತಯಾರಾಗುತ್ತದೋ ಹಾಗೆಯೇ ಕರಗ ನಡೆಯುವಾಗಲೂ ಹಾಗೆಯೇ ತಯಾರಾಗುತ್ತದೆ. ಕರಗದ ದಿನ ಇಲ್ಲಿ ಒಳ್ಳೆ ಲೈಟಿಂಗು ಹಾಕಿರ್ತಾರೆ, ಹೂವಿನಿಂದ ಅಲಂಕಾರ ಮಾಡಿರ್ತಾರೆ. ಕರಗದ ಸವಾರಿ ಸೀದಾ ದರ್ಗಾಹದ ಒಳಗೆ ಬಂದು ಮೂರು ಸುತ್ತು ಹಾಕಿ ಹೋಗುತ್ತದೆ. ದ್ರೌಪದಮ್ಮನ ಅವತಾರವಾದ ಕರಗದ ದೇವರು ಹಜ್ರತ್ ತವಕ್ಕಲ್ ಮಸ್ತಾನ್ ಸಮಾಧಿಯ ಸುತ್ತ ಮೂರು ಸುತ್ತು ಹಾಕಿ ಹೋಗುವುದು ನಿಜಕ್ಕೂ ಬೆರಗು. ಕರಗವನ್ನು ಹೊರುವ ತಿಗಳ ಸಮುದಾಯದ ವ್ಯಕ್ತಿಯಿಂದ ನಿಂಬೆಹಣ್ಣನ್ನ ತೆಗೆದುಕೊಂಡರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿರುವುದರಿಂದ ದರ್ಗಾಹದವರು ನೂರು ಇನ್ನೂರರ ಬುಟ್ಟಿ ಬುಟ್ಟಿ ನಿಂಬೆ ಹಣ್ಣನ್ನ ತರಿಸಿಟ್ಟಿರುತ್ತಾರೆ. ದ್ರೌಪದಮ್ಮನನ್ನ ಒಳಗೆ ಬಿಟ್ಟುಕೊಳ್ಳುವ ಇಲ್ಲಿ ಮಹಿಳೆಯರಿಗೇಕೆ ತೀರಾ ಒಳಗೆ ಪ್ರವೇಶವಿಲ್ಲ ಎಂದು ಕೇಳಬೇಕೆನಿಸುವಾಗಲೇ ಅವರು ತಡವಾಯಿತು ನಾನು ಹೊರಡಬೇಕು ಎಂದು ಹೊರಟೇಬಿಟ್ಟರು…

ದರ್ಗಾಹ್, ಮಸೀದಿ ಮತ್ತು ಶಾಲೆ ಒಟ್ಟಿಗೆ ಅಕ್ಕ ಪಕ್ಕದಲ್ಲೇ ಉಚ್ವಾಸ ನಿಶ್ವಾಸ ತೆಗೆದುಕೊಂಡು ಜೀವಂತ ಸೆಲೆಯಾಗಿವೆ. ನಗರೀಕರಣ, ಜಾಗತೀಕರಣ ಮತ್ತು ತಂತ್ರಜ್ಞಾನದ ಬೆಳವಣಿಗೆಯ ಜೊತೆಜೊತೆಗೆ ನಡೆಯುತ್ತಿರುವ ಈ ಜಾಗೆ ಮತ್ತು ಇಲ್ಲಿನ ಜನರ ನಂಬಿಕೆ ಮತ್ತು ಪ್ರಾರ್ಥನೆ ನಿಜವಾಗುತ್ತದೆ, ನಂಬಿಕೆಯೇ ದೇವರು, ಶ್ರಮವೇ ದೇವರು ಎಂಬಂತೆ ಬದುಕುತ್ತಿರುವ ಈ ಬೀದಿಯ ನೋಡಿದರೆ ಅದು ಸಹಬಾಳ್ವೆಯ ದ್ಯೋತಕದಂತೆ ಕಾಣುತ್ತದೆ. ದರ್ಗಾಹದಿಂದ ಹೊರಬಂದು ತುಸು ದೂರ ನಡೆದು ತಿರುಗಿ ನೋಡಿದರೆ ‘ಸೂಫಿ ಸಂತ ಹಜ್ರತ್ ತವಕ್ಕಲ್ ಮಸ್ತಾನ್ ಶಾಹರು ಎಲ್ಲವನ್ನು ನೋಡುತ್ತಲಿದ್ದಾರೆ’ ಎಂದು ಶ್ರೀಮತಿ ನಳಿನಿಯವರು ಹೇಳಿದ್ದು ನಿಜವೆನಿಸದೆ ಇರಲಾರದು.