ರಾಮಸ್ವಾಮಯ್ಯನವರು ಪಾಲಹಳ್ಳಿಯಲ್ಲಿ ಹುಟ್ಟಿದ್ದಿರಬಹುದು. ಆದರೆ ಅವರಿಗೆ ಅಲ್ಲಿ ಏನಾದರೂ ಜಮೀನು ಇತ್ತೋ ಇಲ್ಲವೋ ತಿಳಿಯದು. ಅಂತೂ ಅವರು ಮೈಸೂರಿನ ಮರದ ವ್ಯಾಪಾರಿಯೊಬ್ಬರ ಬಳಿ ಕೆಲಸ ಮಾಡುತ್ತಿದ್ದರ೦ತೆ. ರಾಮಯ್ಯನವರು ಹಲವಾರು ಬಾರಿ ಅವರ ಬಡತನದ ಬಗ್ಗೆ ಹೇಳುತ್ತಾರೆ; ಆದ್ದರಿಂದ ರಾಮಸ್ವಾಮಯ್ಯನವರು ಸ್ಥಿತಿವಂತರಾಗಿದ್ದ ಹಾಗೆ ಕಾಣಿಸುವುದಿಲ್ಲ. ಅವರ ಫೋಟೋ ಎಲ್ಲೂ ಇಲ್ಲ. ಕ್ಯಾಮೆರಾ, ಸ್ಟುಡಿಯೊಗಳ ಅಭಾವವಿರಬಹುದು ಅಥವಾ ಹಿಂದಿನ ಕಾಲದಲ್ಲಿ ಫೋಟೊ ತೆಗೆಸಿಕೊಳ್ಳುವುದು ಅಶುಭ ಎಂಬ ನಂಬಿಕೆ ಇತ್ತೆಂದೂ ಎಲ್ಲೋ ಕೇಳಿದ್ದೆ.
ಪಾಲಹಳ್ಳಿ ವಿಶ್ವನಾಥ್ ಬರೆದ ಹೀಗೊಂದು ಕುಟುಂಬದ ಕಥೆ ಪುಸ್ತಕ ಒಂದು ಅಧ್ಯಾಯ ನಿಮ್ಮ ಓದಿಗೆ
ರಾಮಸ್ವಾಮಯ್ಯನವರು ೧೮೭೦ – ೧೮೭೫ ರಲ್ಲಿ ಜನ್ಮ ತಾಳಿರಬೇಕು. ಅಂದರೆ ಗಾಂಧೀಜಿಯವರು ಹುಟ್ಟಿದ ಕೆಲವು ವರ್ಷಗಳ ನಂತರ! ಆಗಿನ ಪದ್ಢತಿಗಳ ಪ್ರಕಾರ ರಾಮಸ್ವಾಮಯ್ಯನವರಿಗೆ ೧೮-೨೦ ವರ್ಷಗಳಿದ್ದಾಗ ಮದುವೆಯಾಗಿರಬೇಕು. ವಧು ಶ್ರೀರಂಗಪಟ್ಟಣದ ೧೦-೧೨ ವಯಸ್ಸಿನ ಸುಬ್ಬಲಕ್ಷ್ಮಿ(ಸೀತಮ್ಮ?). ಅವರ ಬಗ್ಗೆ ಬ್ರಹ್ಮಾನಂದ (ಅವರ ಮೊಮ್ಮಗ) ಈ ಮಾಹಿತಿ ಕೊಟ್ಟಿದ್ದಾರೆ. “ಸುಬ್ಬಲಕ್ಷ್ಮಿ ಅವರು ಕೌ೦ಡಿನ್ಯ ಗೋತ್ರದವರಾಗಿದ್ದು ವೆಂಕಟಸುಬ್ಬಯ್ಯ ಮತ್ತು ಕಾಮಾಕ್ಷಮ್ಮ ಎನ್ನುವವರ ಮಗಳಾಗಿದ್ದರು, ವೆ೦ಕಟಸುಬ್ಬಯ್ಯನವರು ಬ್ರಹ್ಮೀಭೂತರೆ೦ದು ಖ್ಯಾತಿ ಗಳಿಸಿದ್ದರು. ಅ೦ದರೆ ಬ್ರಹ್ಮಜ್ಞಾನಿ. ನಮಗೆ ಅವರ ವಿಷಯ ತಿಳಿದಿರುವುದು ಇಷ್ಟೇ!.”
೧೮೯೪ರ ಸೆಪ್ಟೆ೦ಬರ್ ೧೦ರ೦ದು ರಾಮಯ್ಯನವರು(ಅವರ ಮಗ) ಶ್ರೀರ೦ಗಪಟ್ಟಣದಲ್ಲಿ ಹುಟ್ಟಿದರು. ರಾಮಯ್ಯನವರನ್ನು ಚಿಕ್ಕಂದಿನಿಂದ ಬಲ್ಲವರು ಶಾಮ ಎಂದು ಕರೆಯುತ್ತಿದ್ದರು; ಅದನ್ನೂ ನಾನು ನೋಡಿದ್ದೇನೆ, ಕೇಳಿದ್ದೇನೆ. ಈ ಶಾಮ ರಾಮಯ್ಯನವರಾಗಿ ಪರಿವರ್ತನೆ ಹೊಂದುವುದು ಮುಂದೆ. ಅಲ್ಲಿಯ ತನಕ ನಾವು ಆಗಾಗ ಅವರನ್ನು ಶಾಮ ಎಂದೇ ಕರೆಯೋಣ . ಅವರ ತಾಯಿ ಸುಬ್ಬಲಕ್ಷ್ಮಿ ಅನಂತರ ರ೦ಗನಾಯಕಿ (~೧೯೦೦) ಎಂಬ ಹೆಣ್ಣು ಮಗುವಿಗೆ ಜನ್ಮಕೊಟ್ಟು ಆ ಸಮಯದಲ್ಲಿಯೇ ಅಸುನೀಗಿರಬೆಕು. ಶಾಮನಿಗೆ (ಇಳಿ ವಯಸ್ಸಿನಲ್ಲಿ ಅವರು ಗಾಯತ್ರಿಗೆ ಹೇಳಿದ್ದು) ಆ ನೆನಪು ಬರೇ ಮಸುಕು. “ಆ ಸಮಯದಲ್ಲಿ ಬೆ೦ಗಳೂರು ಕೋಟೆಯ ಬಳಿ ಬೆಲ್ಲ ಕೊಟ್ಟು ಕೂರಿಸಿದ್ದರು ನನ್ನನ್ನು. ದೂರದಲ್ಲಿ ಒ೦ದು ಕೆರೆ ಇತ್ತು ಎ೦ಬ ನೆನಪು”. ಅವರು ಬಲಿಪಾಡ್ಯಮಿಯ ದಿನ ತೀರಿ ಹೋಗಿರಬೆಕು. ಏಕೆ೦ದರೆ ಆ ದಿನ ನಮ್ಮತ೦ದೆ ಅವರ ತಿಥಿ ಮಾಡುತ್ತಿದ್ದ ನೆನಪು ಹಸಿರಾಗಿದೆ. ಈಗಿನ ಕಲಾಸಿಪಾಳ್ಯದ ಬಳಿ ಒಂದು ಕೆರೆ ಇತ್ತು ಎಂದು ಇತ್ತೀಚೆಗೆ ಓದಿದ್ದೆ.
ನಮ್ಮ ಮನೆಯ ಹಲವಾರು ಹಿರಿಯರಿಗೆ ಇಬ್ಬರು ಹೆಂಡತಿಯರಿದ್ದರು. ಪ್ರಾಯಶಃ ಮೊದಲನೆಯ ಹೆಂಡತಿ ಮಗು ಹುಟ್ಟುವ ಸಮಯದಲ್ಲೋ ಅಥವಾ ಸ್ವಲ್ಪ ನಂತರವೋ ತೀರಿಕೊಳ್ಳುತ್ತಿದ್ದದ್ದು ಆಕಾಲದಲ್ಲಿ ಸಾಮಾನ್ಯವಾಗಿತ್ತೋ ಏನೋ! ಶ್ರೀಕಂಠಯ್ಯ ಮತ್ತು ನಂಜುಂಡಯ್ಯ(ರಾಮಯ್ಯನವರ ಸೋದರ ಸಂಬಂಧಿಗಳು), ರಾಮಸ್ವಾಮಯ್ಯ, ರಾಮಯ್ಯ (ನಮ್ಮ ತ೦ದೆ) ನವರೆಲ್ಲರಿಗೂ ಇಬ್ಬರು ಹೆ೦ಡತಿಯರು. ಮೊದಲನೆಯ ಹೆಂಡತಿ ಸುಬ್ಬಲಕ್ಷಮ್ಮ ತೀರಿಕೊ೦ಡ ನಂತರ ಆನಂತರ ರಾಮಸ್ವಾಮಯ್ಯನವರು ಅನಂತಲಕ್ಷ್ಮಿ (ನ೦ಜನಗೂಡು ಕಡೆಯವರು ಎಂದು ಕೇಳಿದ್ದೇನೆ) ಎನ್ನುವವರನ್ನು ವಿವಾಹವಾದರು. ಯಾವಾಗ ಎಂದು ಖಚಿತವಾಗಿ ತಿಳಿದಿಲ್ಲ; ಪ್ರಾಯಶಃ ೧೯೧೩ರಲ್ಲಿ ಮಗಳು ರ೦ಗನಾಯಕಿಯ ಮದುವೆಯ ನ೦ತರ ಮದುವೆಯಾಗಿರಬೇಕು. ಅನ೦ತಲಕ್ಷಮ್ಮನವರು ನಮಗೆ ಮು೦ದೆ ಮೈಸೂರು ಪಾಟಿ ಎ೦ದು ಗೊತ್ತಾಗುತ್ತಾರೆ.. ಬಿಳಿ ಬಣ್ಣದ ಹೆಚ್ಚೇನೂ ಎತ್ತರವಿಲ್ಲದ ಮಹಿಳೆ; ಅವರ ಚಿತ್ರಗಳು ನಮ್ಮಲ್ಲಿ ಇವೆ. ಹಿರಿಯ ಮಗ ಶಾಮನಿಗಿಂತ ಸ್ವಲ್ಪ ಚಿಕ್ಕವರು, ೧೯೧೪ ರಲ್ಲಿ ಅವರ ಮೊದಲನೆಯ ಮಗ ನಾರಾಯಣ ಹುಟ್ಟುತ್ತಾನೆ. ಅಂದರೆ ಅವರಿಗೆ ಆಗ ೧೬ ವಯಸ್ಸು ಇರಬಹುದು. ಆದ್ದರಿಂದ ಅವರ ಜನ್ಮ ೧೮೯೮ ರಲ್ಲಿ ಆಗಿರಬಹುದು. ನಾವೆಲ್ಲಾ ಹುಟ್ಟುವ ಹೊತ್ತಿಗೆ ಅವರು ಅಂದಿನ ಕ್ರೂರ ಪದ್ಢತಿಯ೦ತೆ ತಲೆಯನ್ನು ಬೋಡುಮಾಡಿಕೊ೦ಡು ಸೀರೆಯಿ೦ದ ತಲೆಯನ್ನು ಮುಚ್ಚಿಕೊಳ್ಳುತ್ತಿದ್ದರು. ಜಾಸ್ತಿ ಕೆ೦ಪು ಸೀರೆ, ಕೆಲವು ಬಾರಿ ಕ್ರೀಮ್ ಬಣ್ಣ (ಇ೦ತಹವರನ್ನು ಮಕ್ಕಳು ಕ್ರೂರವಾಗಿ ಜರ್ಮನ್ ಸೋಲ್ಜರ್ ಎ೦ದು ಕರೆಯುತ್ತಿದ್ದರು. ಯಾವ ಸಂಬಂಧವೋ ಗೊತ್ತಿಲ್ಲ) ಅವರಿಗೆ ನಾಲ್ಕು ಮಕ್ಕಳು – ಎರಡೆರಡು ವರ್ಷಗಳ ಅ೦ತರದಲ್ಲಿ – ನಾಲ್ಕು ಮಕ್ಕಳು, ನಾರಾಯಣ, ವೆಂಕಟೇಶ, ಶ್ರೀನಿವಾಸ, ಗೋವಿಂದ. ಅನಂತಲಕ್ಷಮ್ಮನವರು ೧೯೭೦ ಇಸವಿಯ ತನಕ ಬದುಕಿದ್ದರು. ಮೊದಲನೆಯ ಮಗ ರಾಮಯ್ಯನವರನ್ನೂ ಸೇರಿಸಿದರೆ ಎಲ್ಲಾ ವಿಷ್ಣುವಿನ ಹೆಸರುಗಳು. ನಾರಾಯಣ, ತಾತನವರ ಎರಡನೆಯ ಮಗ ಹುಟ್ಟಿದಾಗ ಶಾಮನಿಗೆ ೧೯ ವರ್ಷ. ರಾಮಸ್ವಾಮಯ್ಯನವರ 45ನೆಯ ವಯಸ್ಸಿನಲ್ಲಿ ಕಡೆಯ ಮಗ ಗೋವಿ೦ದ ಹುಟ್ಟಿರಬೇಕು.
ರಾಮಸ್ವಾಮಯ್ಯನವರು ಪಾಲಹಳ್ಳಿಯಲ್ಲಿ ಹುಟ್ಟಿದ್ದಿರಬಹುದು. ಆದರೆ ಅವರಿಗೆ ಅಲ್ಲಿ ಏನಾದರೂ ಜಮೀನು ಇತ್ತೋ ಇಲ್ಲವೋ ತಿಳಿಯದು. ಅಂತೂ ಅವರು ಮೈಸೂರಿನ ಮರದ ವ್ಯಾಪಾರಿ (ಟಿ೦ಬರ್ ವರ್ತಕ)ಯೊಬ್ಬರ ಬಳಿ ಕೆಲಸ ಮಾಡುತ್ತಿದ್ದರ೦ತೆ. ರಾಮಯ್ಯನವರು ಹಲವಾರು ಬಾರಿ ಅವರ ಬಡತನದ ಬಗ್ಗೆ ಹೇಳುತ್ತಾರೆ; ಆದ್ದರಿಂದ ರಾಮಸ್ವಾಮಯ್ಯನವರು ಸ್ಥಿತಿವಂತರಾಗಿದ್ದ ಹಾಗೆ ಕಾಣಿಸುವುದಿಲ್ಲ. ಅವರ ಫೋಟೋ ಎಲ್ಲೂ ಇಲ್ಲ. ಕ್ಯಾಮೆರಾ, ಸ್ಟುಡಿಯೊಗಳ ಅಭಾವವಿರಬಹುದು ಅಥವಾ ಹಿಂದಿನ ಕಾಲದಲ್ಲಿ ಫೋಟೊ ತೆಗೆಸಿಕೊಳ್ಳುವುದು ಅಶುಭ ಎಂಬ ನಂಬಿಕೆ ಇತ್ತೆಂದೂ ಎಲ್ಲೋ ಕೇಳಿದ್ದೆ. ಕಾರಣವೇನೇ ಇರಲಿ, ಅವರ ಫೋಟೋ ಇಲ್ಲ. ಹಾಗೂ ಅವರ ಒಂದು ಹಳೆಯ ಪುಸ್ತಕ ಸಿಕ್ಕಿ ಅದರಲ್ಲಿ ಅವರ ಹಸ್ತಾಕ್ಷರ ಇದ್ದಿತು. ಇಂಗ್ಲಿಷಿನಲ್ಲಿ ಪಿ. ರಾಮಸ್ವಾಮಯ್ಯ ಎಂದು ಬರೆದಿತ್ತು. ತೆಲುಗು ಪುಸ್ತಕ (ಮನೆಯಲ್ಲಿ ಹಲವಾರು ಹಳೆಯ ಪುಸ್ತಕಗಳು ಸಿಕ್ಕಿದ್ದು ಅವೆಲ್ಲ ತೆಲುಗು ಭಾಷೆಯಲ್ಲೇ ಇದ್ದವು). ಪುಸ್ತಕದ ಹೆಸರು ಆದಿ ಶ೦ಕರರ ಸೌ೦ದರ್ಯ ಲಹರಿ. ಫೋಟೋ ಇಲ್ಲದಿರುವುದರಿ೦ದ ರಾಮಸ್ವಾಮಯ್ಯನವರು ಇದ್ದರು ಎನ್ನುವುದಕ್ಕೆ ಈ ಹಸ್ತಾಕ್ಷರವೇ ಸಾಕ್ಷಿ ಎಂದು ನನಗೆ ಅದನ್ನು ಮೊದಲ ಬಾರಿ ನೋಡಿದಾಗ ಅನ್ನಿಸಿತು.. ಮುಂದಿನ ಪ್ರಶ್ನೆ ಅವರು ಹೇಗಿದ್ದಿರಬಹುದು? ಅದರಲ್ಲೂ ಕಡೆಯ ಮಗ ಗೋವಿಂದನಿಗೆ ಬಿಳಿ-ಕೆ೦ಪು ಬಣ್ಣವಿತ್ತು. ರಾಮಸ್ವಾಮಯ್ಯನವರ ಮೊಮ್ಮಗಳು ಸುಬ್ಬಮ್ಮ (೧೯೨೦ರಲ್ಲಿ ಹುಟ್ಟಿದವರು; ಆಗ ಚಿಕ್ಕ ಹುಡುಗಿ; ‘ಕಿತ್ತೂರು ಕನೆಕ್ಷನ್’ ನೋಡಿ) “ಅವರು ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡುತ್ತಿದ್ದರು. ಮೈಎಲ್ಲ ಕೆಂಪಗಿರುತ್ತಿತ್ತು) ಎ೦ದು ನೆನಪು ಮಾಡಿಕೊಳ್ಳುತ್ತಿದ್ದರು. ಅಂತೂ ನಮ್ಮ ಮೊದಲ ಚಿಕ್ಕಪ್ಪ ನಾರಾಯಣರ ತರಹ ಇದ್ದರು ಎಂದೂ ಕೇಳಿದ್ದೇನೆ. ಅವರಿಗೂ ಪಾಲಹಳ್ಳಿಗೂ ಸ೦ಬಧ ಏನು ಎ೦ಬುದು ಸರಿಯಾಗಿ ತಿಳಿದಿಲ್ಲ.
ರಾಮಯ್ಯನವರನ್ನು ಚಿಕ್ಕಂದಿನಿಂದ ಬಲ್ಲವರು ಶಾಮ ಎಂದು ಕರೆಯುತ್ತಿದ್ದರು; ಅದನ್ನೂ ನಾನು ನೋಡಿದ್ದೇನೆ, ಕೇಳಿದ್ದೇನೆ. ಈ ಶಾಮ ರಾಮಯ್ಯನವರಾಗಿ ಪರಿವರ್ತನೆ ಹೊಂದುವುದು ಮುಂದೆ. ಅಲ್ಲಿಯ ತನಕ ನಾವು ಆಗಾಗ ಅವರನ್ನು ಶಾಮ ಎಂದೇ ಕರೆಯೋಣ.
ಮತ್ತೊಂದು ಸ್ವಾರಸ್ಯಕರ ವಿಷಯ. ಅವರು ಎಲ್ಲೋ ಸುಮಾರಾಗಿಯಾದರೂ ಇ೦ಗ್ಲಿಷ್ ಕಲಿತಿರಬೇಕು. ಅವರ ಸಹಿ ಇ೦ಗ್ಲಿಷಿನಲ್ಲಿದೆ ಎ೦ಬುದರಿಂದ ಹೇಳುತ್ತಿಲ್ಲ; ಎಷ್ಟೋ ಜನ ಬರೇ ಸಹಿ ಮಾಡಲು ಕಲಿತಿರುತ್ತಾರೆ. ನಮಗೆ ಸಿಕ್ಕಿರುವ ಅವರ ಮಗ ರಾಮಯ್ಯನವರ ದೀರ್ಘ ಪತ್ರಗಳಲ್ಲಿ ಕೆಲವು ಪೂರ್ತಿ ಇ೦ಗ್ಲಿಷಿನಲ್ಲಿವೆ. ಅದೂ ಶುದ್ಧ ಇ೦ಗ್ಲಿಷ್. ಇದನ್ನು ಓದಿ ಅರ್ಥ ಮಾಡಿಕೊಳ್ಳುತ್ತಿದ್ದರಿಂದ ಅವರ ಭಾಷಾ ಜ್ಞಾನ ಹೆಚ್ಚೆ ಇದ್ದಿರಬೇಕು. ಡಿಗ್ರಿ ಮಾಡಿದ ಹಾಗ ಕಾಣುವುದಿಲ್ಲ. ಹಾಗಿದ್ದಲ್ಲಿ ಅವರು ಆಗಿನ ಪದ್ಢತಿಯಂತೆ ಬಿ.ಎ. ಅಥವಾ ಬಿ.ಎಸ್ಸಿ. ಸೇರಿಸಿಕೊಳ್ಳುತ್ತಿದ್ದರು. ಮತ್ತೊಂದು ಮುಖ್ಯ ವಿಷಯ. ಅವರಿಗೆ ಎಲ್ಲೋ ಐತಿಹಾಸಿಕ ಪ್ರಜ್ಞೆ ಇದ್ದಿರಬೇಕು! ಏಕೆ೦ದರೆ ಮಗ ಬೈದಿದ್ದರೂ ಅವನ ಕಾಗದಗಳನ್ನು ಜೋಪಾನವಾಗಿ ಇಟ್ಟುಕೊಂಡಿದ್ದರಲ್ಲವೆ!
ಅವರ ಜೀವನದ ಬಗ್ಗೆ ಹೆಚ್ಚು ಮಾಹಿತಿ ಸಿಗದಿದ್ದರೂ ಅವರ ನಿಧನದ ಬಗ್ಗೆ ನಮಗೆ ರಾಮಯ್ಯನವರ ದಿನಚರಿಯಿಂದ (ಬ್ರಹ್ಮಾನಂದ ಕೂಡ ಇದನ್ನು ಬರೆದಿದ್ದಾರೆ ): ರಾಮಸ್ವಾಮಯ್ಯನವರು ಜಂಪನಹಳ್ಳಿಯಲ್ಲಿ ಕೆಲಸಕ್ಕೋಸ್ಕರ ಸ್ವಲ್ಪ ದಿನಗಳು ಇರುತ್ತಿದ್ದರಂತೆ. ಅವರು ಗಾಡಿಯಲ್ಲಿ ಮರವನ್ನು ಸಾಗಿಸುತ್ತಿದ್ದಾಗ ಗಾಡಿ ಬಿದ್ದು ಅವರಿಗೆ ಬಹಳ ಪೆಟ್ಟಾಯಿತಂತೆ. ವಾಪಸ್ಸು ಬಂದು ಮೈಸೂರಿನಲ್ಲಿ ಕೆಲವು ದಿನಗಳ ನಂತರ ಅವರಿಗೆ ಡಬಲ್ ನ್ಯುಮೋನಿಯಾ ಆಯಿತಂತೆ. ರಾಮಯ್ಯನವರು ೨೭ ಮಾರ್ಚ್ ೧೯೨೮ ರಂದು ಯಾವುದೋ ಕೆಲಸದ ಮೇಲೆ ಬೆಂಗಳೂರಿಗೆ ಹೋಗಿದ್ದರಂತೆ. ಅವರಿಗೆ ತಂದೆಯವರಿಗೆ ಸೀರಿಯಸ್ ಮತ್ತು ಬೇಗನೆ ಬರುವ ಹಾಗೆ ಟೆಲೆಗ್ರಾಮ ಹೋಯಿತಂತೆ. ಅವರ ದಿನಚರಿಯ ಪ್ರಕಾರ “ಬೆಳಿಗ್ಗೆ ಎಲ್ಲಾ ಕೈ ಅದುರುತ್ತಿತ್ತು ಮತ್ತು ಸರಿಯಾಗಿ ಬರೆಯಲು ಆಗುತ್ತಿರಲಿಲ್ಲ. ಸುಮಾರು ಎರಡು ಗಂಟೆ ಹೊತ್ತಿಗೆ ನನಗೆ ಬಹಳ ಬೇಜಾರಾಯಿತು” ಎಂದು ಬರೆದಿದ್ದಾರೆ. ೬ ಗಂಟೆಗೆ ಮೈಸೂರು ನಿಲ್ದಾಣವನ್ನು ಸೇರಿದರು. ಅವರ ತಂದೆ ಸುಮಾರು ಎರಡು ಗಂಟೆಗೆ ನಿಧನರಾಗಿರಬೇಕು. ಅವರ ಇತರ ಮಕ್ಕಳನ್ನೆಲ್ಲಾ ಮೈಸೂರಿಗೆ ಕರೆಸಿದ್ದರು. ಆಗ ರಂಗ ಐಯರ್ ಎಂಬುವವರ ಬಳಿ ರಾಮಯ್ಯನವರು ಸಂಸ್ಕಾರ ಕಾರ್ಯಗಳಿಗೋಸ್ಕರ ೨೦೦ ರೂಪಾಯಿಯನ್ನು (೧೨ % ಬಡ್ದಿಗೆ) ತೆಗೆದುಕೊಳ್ಳಬೇಕಾಯಿತು.. (ರಾಮಯ್ಯನವರು ತೀರಿಹೋದಾಗ ಜರ್ಮನಿಯಲ್ಲಿದ್ದ ಅವರ ಮೊದಲ ಮಗ ಬ್ರಹ್ಮಾನಂದ ಕೂಡಾ ಇದೆ ತರಹದ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಇಂಗ್ಲೀಷಿನಲ್ಲಿ ಇದಕ್ಕೆ ‘ಟೆಲೆಪತಿ ಎನ್ನುತ್ತಾರೆ. ಇದನ್ನು ಇಂದಿನ ಬಹಳ ಜನ ಒಪ್ಪುವುದಿಲ್ಲ. ಕೋಯಿನ್ಸಿಡೆನ್ಸ್ ಅಂದರೆ ಕಾಕತಾಳಿಯ ಎನ್ನುತ್ತಾರೆ!) ಆ ಕಾಲದಲ್ಲಿ ಮೈಸೂರಿನಿಂದ ತುರ್ತು ಸಮಾಚಾರ ಕಳಿಸಬೇಕಾದರೆ ಟೆಲೆಗ್ರಾಮನ್ನು ಅವಲಂಬಿಸಿದ್ದರು. ಟೆಲೆಫೋನ್ ಸಂಪರ್ಕವೂ ಬಹಳ ಕಡಿಮೆ ಇದ್ದಿರಬೇಕು ಅವರ ತಂದೆ ತೀರಿಹೋದಾಗ ರಾಮಯ್ಯನವರ ಕುಟುಂಬ ಹೀಗಿತ್ತು: ಇಬ್ಬರು ಪತ್ನಿಯರು (೧೯ ಮತ್ತು?), ಒಬ್ಬ ಮಗ (೨ ವರ್ಷ), ನಾಲ್ಕು ತಮ್ಮಂದಿರು (ವಯಸ್ಸು ೧೩,೧೧,೯,೭). ರಾಮಯ್ಯನವರಿಗೆ ಆಗ ೩೩ ವರ್ಷ. ರಾಮಯ್ಯನವರು ಮತ್ತೊಂದು ಕಡೆ ಹೀಗೆ ಬರೆದುಕೊಳ್ಳುತ್ತಾರೆ: “27 ಮಾರ್ಚ್ 1928 ತಂದೆ ತೀರಿಹೋದರು. ಅವರಿಗೂ ನನಗೂ ಸಂತೋಷಕರ ಸಂಬಂಧವಿರಲಿಲ್ಲ.”
ಬಡತನವಿದ್ದೂ ಮೈಸೂರಿನ ಹಳೆಯ ಅಗ್ರಹಾರದಲ್ಲಿ ಒ೦ದು ಅ೦ತಸ್ತಿನ ಮಹಡಿ ಮನೆಯನ್ನು ನಮ್ಮ ತಾತ ಕಟ್ಟುವ ಸಾಹಸ ಏಕೆ ಮಾಡುತ್ತಾರೋ ತಿಳಿಯದು! ಅದಕ್ಕೋಸ್ಕರ ಗರ್ಗೆಶ್ವರಿಯ(ಮೈಸೂರಿಗೆ ೫೦ ಕಿಮೀ) ಸಾಹೇಬರೊಬ್ಬರ ಹತ್ತಿರ ಬಹಳ ಸಾಲ ಮಾಡಿದರ೦ತೆ. ಮುಮ್ಮಡಿ ಕೃಷ್ಣರಾಜರ ಕಾಲದಿಂದಲೂ ಹಳೆಯ ಅಗ್ರಹಾರದಲ್ಲಿ ಬ್ರಾಹ್ಮಣ ಕುಟುಂಬಗಳು ವಾಸಿಸುತ್ತಿದ್ದವಂತೆ; ವಿಶೇಷವಾಗಿ ಶ್ರೀರಂಗಪಟ್ಟಣದವರು ಇಲ್ಲಿ ಇರುತ್ತಿದ್ದರಂತೆ!
ನನ್ನ ಚಿಕ್ಕಂದಿನಲ್ಲಿ (1947/48) ನಾನು ಹಳೆಯ ಅಗ್ರಹಾರದ ಮನೆಯಲ್ಲಿ ಕೆಲವು ದಿನಗಳು ಇದ್ದ ನೆನಪು. ಪ್ರಾಯಶಃ ನಮ್ಮ ಚಿಕ್ಕಪ್ಪ ನಾರಾಯಣ ಅಲ್ಲಿ ವಾಸವಾಗಿದ್ದಿರಬಹುದು. ನನ್ನ ಜೊತೆ ಕಾಶಿ (ನಾರಾಯಣ ಅವರ ಮಗ, ನನಗಿಂತ ಸ್ವಲ್ಪ ಚಿಕ್ಕವನು) ಇದ್ದ ನೆನಪು ಕೂಡ. ರಸ್ತೆಯ ಕಡೆಯಲ್ಲಿ ಆನೆ ಕರೋಟಿ ಇದ್ದು ನಾವಿಬ್ಬರೂ ಆನೆಗಳನ್ನು ನೋಡಿಕೊಂಡು ಬರುತ್ತಿದ್ದ ನೆನಪು ಕೂಡ ಇದೆ. ಮನೆಯ ಎದಿರುಗಡೆ ಬೀಡಿ ಇತ್ಯಾದಿ ಮಾರುತ್ತಿದ್ದ ಒಬ್ಬ ಕಾಕಾ ಅಂಗಡಿ ಇದ್ದಿತು. 1950ರ ದಶಕದ ಮಧ್ಯ/ಕೊನೆಯಲ್ಲಿ ನಮ್ಮ ತಂದೆ ಮತ್ತು ಚಿಕ್ಕಪ್ಪಂದಿರು ಸೇರಿ ಆ ಮನೆಯನ್ನು ಮಾರಿದರು. ಅದಕ್ಕಾಗಿ ಮೈಸೂರಿನ ಮಾಡ್ರನ್ ಹಿಂದು ಹೊಟೇಲಿನಲ್ಲಿ ನಾವೆಲ್ಲ ಉಳಿದುಕೊಂಡ ಜ್ಞಾಪಕವೂ ಇದೆ. ಆ ಹಣವನ್ನು ಎಲ್ಲರಿಗೂ ಹಂಚಿದ್ದರು. ಹೇಗೆ ಎಂದು ಗೊತ್ತಿಲ್ಲ. ನನ್ನ ಹೆಸರಿನಲ್ಲೂ ಒಂದು ಸಾವಿರ ಬಂತಂತೆ! ಎಲ್ಲರಿಗೂ ಒಂದೇ ತರಹ ಹಂಚಿದ್ದರೆ, ನಾವು (ತಾತ ಅವರ 5 ಗಂಡು ಮಕ್ಕಳು + ಅವರುಗಳ ಎಲ್ಲ (ಗಂಡು + ಹೆಣ್ಣು) ಮಕ್ಕಳು 10 ( ಆ ಸಮಯದಲ್ಲಿ ). ಮನೆ 10-15 ಸಾವಿರಕ್ಕೆ ಹೋಗಿರಬಹುದು! ನಾವು 2014ರಲ್ಲಿ ಆ ರಸ್ತೆಗೆ ಹೋಗಿ ಆ ಮನೆಯನ್ನು ಹುಡುಕಿದೆವು.. ಆ ಹಳೆಯ ಮನೆಯನ್ನು ಪ್ರಾಯಶಃ ಕೆಡವಿದ್ದಿರಬಹುದು. ಹಾಗೇ ಇದ್ದಿದ್ದರೂ ನಮಗೆ ಅದರ ಗುರುತು ಇಲ್ಲವಾದ್ದರಿಂದ ಬರೇ ರಸ್ತೆ ನೋಡಿದ ಹಾಗೆ ಆಯಿತು. ಆನೆ ಕರೋಟಿಯೂ ಈಗ ಇಲ್ಲ ಎಂದೂ ಕೇಳಿದೆ.
ಬೆಂಗಳೂರಿನವರಾದ ಪಾಲಹಳ್ಳಿ ವಿಶ್ವನಾಥ್ ಭೌತಶಾಸ್ತ್ರ ಪ್ರಾಧ್ಯಾಪಕರು. ಕ್ಯಾಲಿಫೋರ್ನಿಯಾ, ಮೇರಿಲ್ಯಾಂಡ್ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಅಮೆರಿಕದ ಫರ್ಮಿಲ್ಯಾಬ್, ಲಾಸ್ ಅಲಮೋಸ್ ಲ್ಯಾಬ್ , ಗೊಡಾರ್ಡ್ ಸ್ಪೇಸ್ ಸೆಂಟರ್ ಗಳಲ್ಲಿ ಅವರು ಸಂಶೋಧನೆಗಳನ್ನು ಮಾಡಿದ್ದಾರೆ. ವಿಜ್ಞಾನ ಬರಹಗಾರರಾದ ಅವರ ಕೃತಿಗಳು, ಆಕಾಶದಲ್ಲೊಂದು ಮನೆ, ಕಣಕಣ ದೇವಕಣ, ಭೂಮಿಯಿಂದ ಬಾನಿನತ್ತ, ಪಾಪ ಪ್ಲೂಟೊ.