ಉಡುಪಿಯ ಸಾಂತ್ಯಾರು ವೆಂಕಟರಾಜರು ಪತ್ರಿಕೆಗಳಲ್ಲಿ 1930 ರಿಂದ (ತಮ್ಮ 17 ನೆಯ ವರ್ಷದಿಂದ) ನಿರಂತರವಾಗಿ ಕವಿತೆಗಳನ್ನು ಪ್ರಕಟಿಸುತ್ತಾ ಬಂದಿದ್ದರು. ಅವರ ಕಾವ್ಯದಲ್ಲಿ ಅವರ ಬದುಕಿನ ನಾಲ್ಕು ಕಾಲಘಟ್ಟದಲ್ಲಿ ನಾಲ್ಕು ಬಗೆಯ ವಸ್ತುಗಳಿಗೆ ಪ್ರಾಮುಖ್ಯ ಸಿಕ್ಕಿರುವುದನ್ನು ಅಥವಾ ವಸ್ತುವಿನ ಪರಿಶೀಲನೆಯ ಕ್ರಮದಲ್ಲಿ ಆಗಿರುವ ಬದಲಾವಣೆಯನ್ನು ಕಾಣಬಹುದು. ನವೋದಯದ ರಮ್ಯಪಂಥ, ಪ್ರೇಮದ ಅಂತರ್ಮುಖತೆ, ಸಮಾಜ ವಿಮರ್ಶೆ, ಜೀವನ ತತ್ವಗಳ ಶೋಧನೆ. ಕರಾವಳಿ ಕವಿರಾಜಮಾರ್ಗ ಸರಣಿಯಲ್ಲಿ ಡಾ.ಬಿ. ಜನಾರ್ದನ ಭಟ್ ನವೋದಯದ ಕವಿರಾಜಹಂಸ ಸಾಂತ್ಯಾರು ವೆಂಕಟರಾಜರ ಕುರಿತು ಬರೆದಿದ್ದಾರೆ.
ಉಡುಪಿಯ ಎಸ್. (ಸಾಂತ್ಯಾರು) ವೆಂಕಟರಾಜ (1913 – 1988) ಕನ್ನಡ ನಾಡು ನುಡಿಗಾಗಿ ದುಡಿದ ಒಬ್ಬ ಬಹುಮುಖ್ಯ ಸಾಹಿತಿ ಮತ್ತು ಪತ್ರಕರ್ತ. ವೆಂಕಟರಾಜರು ತಮ್ಮನ್ನು ಮುಖ್ಯವಾಗಿ ಒಬ್ಬ ಕವಿ ಎಂದು ಕರೆದುಕೊಂಡಿದ್ದರೂ ಕಾದಂಬರಿ, ಸಣ್ಣಕತೆ, ನಾಟಕ, ವಿಮರ್ಶೆ, ವೈಚಾರಿಕ ಲೇಖನ ಹಾಗೂ ವಿಡಂಬನಾತ್ಮಕ ಚೌಪದಿ ಮುಂತಾಗಿ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಮೇಲ್ಮಟ್ಟದ ಕೃತಿಗಳನ್ನು ರಚಿಸಿ ನವೋದಯದ ಒಬ್ಬ ಮೇರು ಸಾಹಿತಿಯಾಗಿ ನಿಂತವರು.
ಏಳು ಪ್ರಕಟಿತ ಮತ್ತು ಎರಡು ಅಪ್ರಕಟಿತ ಕವನ ಸಂಕಲನಗಳು; ಮೂರು ಕಾದಂಬರಿಗಳು; ಎಂಟು ಪ್ರಕಟಿತ ಮತ್ತು ಎರಡು ಅಪ್ರಕಟಿತ ನಾಟಕಗಳು; ನಾಲ್ಕು ಪ್ರಕಟಿತ ಮತ್ತು ಎರಡು ಅಪ್ರಕಟಿತ ಕಥಾಸಂಕಲನಗಳು; 19 ಅನುವಾದಿತ ಕತೆಗಳುಳ್ಳ ಅಪ್ರಕಟಿತ ಅನುವಾದಿತ ಕತೆಗಳ ಸಂಕಲನ; ಎರಡು ಅಪ್ರಕಟಿತ ಲಘು ಬರಹಗಳ ಸಂಕಲನಗಳು; ಎರಡು ಅಂಕಣ ಬರಹಗಳ ಮಾಲಿಕೆ; ಸಾಕಷ್ಟು ಸಂಖ್ಯೆಯ ಸಾಹಿತ್ಯ ಮತ್ತು ಸಂಸ್ಕೃತಿ ವಿಮರ್ಶೆಯ ಲೇಖನಗಳು; ಅವರ ‘ವೀರಭೂಮಿ’ ಪತ್ರಿಕೆಯ ಸಂಪಾದಕೀಯ ಬರಹಗಳು; ಹಲವು ವೈಜ್ಞಾನಿಕ ಮತ್ತು ಪ್ರಪಂಚಜ್ಞಾನದ ಲೇಖನಗಳು – ಇವು ವೆಂಕಟರಾಜರ ಸಾಹಿತ್ಯ ಸೃಷ್ಟಿಯ ಆಳ ಹರಹುಗಳನ್ನು ಸೂಚಿಸುತ್ತವೆ.
ವೆಂಕಟರಾಜರು ಉಡುಪಿಯ ಗಾಂಧಿ ಎಂದು ಪ್ರಸಿದ್ಧರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಸಾಂತ್ಯಾರು ಅನಂತ ಪದ್ಮನಾಭ ಭಟ್ಟರ ಪುತ್ರ. ಅವರು ಮೂರು ಗ್ರಾಮಗಳ (ಬೆಳ್ಳರ್ಪಾಡಿ, ಬೈರಂಪಳ್ಳಿ ಮತ್ತು ಸಾಂತ್ಯಾರು) ಆನುವಂಶಿಕ ಪಟೇಲರಾಗಿದ್ದರು. ವೆಂಕಟರಾಜರ ತಂದೆ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ನೀಡಿ ಆ ಹುದ್ದೆಯನ್ನು ತೊರೆದಿದ್ದರು, ಒಮ್ಮೆ ಕಾಂಗ್ರೆಸ್ ಆಳ್ವಿಕೆ ಬಂದ ಕಾರಣ ಆ ಹುದ್ದೆಯನ್ನು ಅವರಿಗೆ ಮರಳಿ ಒಪ್ಪಿಸಲಾಗಿತ್ತು. ನಂತರವೂ ಅವರು ಸ್ವಾತಂತ್ರ್ಯ ಹೋರಾಟವನ್ನು ಬಿಡದ ಕಾರಣ ಅವರ ಪಟೇಲಿಕೆ ರದ್ದಾಗಿತ್ತು. ಸ್ವಾತಂತ್ರ್ಯ ಬಂದ ನಂತರ ನಮ್ಮ ಸರಕಾರ ಆ ಹುದ್ದೆಯನ್ನು ಮರಳಿ ನೀಡಿತ್ತು.
ಬಾಕ್ಸ್ ಐಟಮ್
ಉಡುಪಿಯ ಗಾಂಧಿ: ಸಾಂತ್ಯಾರು ಅನಂತಪದ್ಮನಾಭ ಭಟ್ಟರು
ಕವಿ ಎಸ್. ವೆಂಕಟರಾಜರ ತಂದೆ ‘ಉಡುಪಿಯ ಗಾಂಧಿ’ ಎಂದೇ ಖ್ಯಾತರಾಗಿದ್ದ ಸಾಂತ್ಯಾರು ಅನಂತ ಪದ್ಮನಾಭ ಭಟ್ಟರು (30.01.0884 – 13.05.1948) ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಉಡುಪಿ ಕೇಂದ್ರದ ಬಹಳ ಮುಖ್ಯ ಮುಖಂಡರಾಗಿದ್ದರು. ಮಂಗಳೂರಿನಲ್ಲಿ ಕಾರ್ನಾಡ್ ಸದಾಶಿವರಾಯರಿದ್ದಂತೆ ಉಡುಪಿಯಲ್ಲಿ ಅನಂತಪದ್ಮನಾಭ ಭಟ್ಟರ ಮಾತಿನಂತೆ ಉಳಿದ ಸ್ವಾತಂತ್ರ್ಯ ಹೋರಾಟಗಾರರು ನಡೆದುಕೊಳ್ಳುತ್ತಿದ್ದರು. ಅವರು ಕೂಡ ಕಾರ್ನಾಡರಂತೆ ಆಗರ್ಭ ಶ್ರೀಮಂತರಾಗಿದ್ದುದರಿಂದ ತಮ್ಮ ಸ್ವಂತ ಹಣವನ್ನು ವ್ಯಯ ಮಾಡಿ ಸ್ವಾತಂತ್ರ್ಯ ಹೋರಾಟಕ್ಕೆ ಆರ್ಥಿಕ ಭದ್ರತೆ ಒದಗಿಸಿದ್ದರು.
ಉಡುಪಿ ಜಿಲ್ಲೆಯಲ್ಲಿ ಮೂರು ರಾಷ್ಟ್ರೀಯ ಶಾಲೆಗಳನ್ನು ಇಪ್ಪತ್ತೈದು ವರ್ಷಗಳ ಕಾಲ ನಡೆಸಿದ ಅವರ ಸಾಧನೆ ಕಡಿಮೆಯದಲ್ಲ. (ಕಾರ್ನಾಡ್ ಸದಾಶಿವರಾಯರು ಸ್ಥಾಪಿಸಿದ್ದ ರಾಷ್ಟ್ರೀಯ ಶಾಲೆ 1925 ರಲ್ಲಿಯೇ ಮುಚ್ಚಿಹೋಗಿತ್ತು. ಭಟ್ಟರ ಮೂರು ಶಾಲೆಗಳು 1945 ರಲ್ಲಿಯೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದವು). ಅಲ್ಲಿ ದಲಿತ ಹೆಣ್ಣುಮಕ್ಕಳಿಗೆ ಆಶ್ರಮದಂತಹ ಸನಿವಾಸ ಶಿಕ್ಷಣಕ್ಕೆ ಅವರು ವ್ಯವಸ್ಥೆ ಮಾಡಿದ್ದರು. ಅದರ ಬಗ್ಗೆ ಸಾಕಷ್ಟು ಅಧ್ಯಯನ ನಡೆಯದೆ ಇರುವುದೇ ಆಶ್ಚರ್ಯಕರ. ಸ್ವಾತಂತ್ರ್ಯ ಹೋರಾಟಗಾರ ಪತ್ರಕರ್ತ-ಸಾಹಿತಿಗಳಾದ ಕೆ.ಕೆ. ಶೆಟ್ಟಿಯವರು ಮತ್ತು ಕೆ. ಹೊನ್ನಯ್ಯ ಶೆಟ್ಟಿಯವರು ಸಾಂತ್ಯಾರು ಭಟ್ಟರ ರಾಷ್ಟ್ರೀಯ ಶಾಲೆಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದ್ದರು.
ಆನುವಂಶಿಕ ಪಟೇಲರಾಗಿದ್ದ ಅವರು ಗಾಂಧೀಜಿಯವರ ಕರೆಗೆ ಓಗೊಟ್ಟು ಒಮ್ಮೆ ಅದನ್ನು ತೊರೆದಿದ್ದರು; 1939 ರಲ್ಲಿ ಕಾಂಗ್ರೆಸ್ ಆಡಳಿತ ಬಂದಾಗ ಅವರನ್ನು ಮತ್ತೆ ಪಟೇಲರಾಗಿ ನೇಮಿಸಿತು. ಆದರೆ ಅವರ ಬ್ರಿಟಿಷ್ ವಿರೋಧೀ ನಿಲುವಿಗಾಗಿ ಬ್ರಿಟಿಷ್ ಸರಕಾರ ಆಮೇಲೆ ಅವರನ್ನು ಕೆಲಸದಿಂದ ವಜಾಗೊಳಿಸಿತ್ತು. ಈ ಕೆಲಸ ಸ್ವಾತಂತ್ರ್ಯ ಬಂದನಂತರ ವೆಂಕಟರಾಜರಿಗೆ ಸಿಕ್ಕಿತು.
ಅನಂತಪದ್ಮನಾಭ ಭಟ್ಟರಿಗೆ ಎರಡು ಬಾರಿ ಜೈಲುಶಿಕ್ಷೆಯಾಗಿತ್ತು. ಉಡುಪಿಯಲ್ಲಿ ಯಾರು ಉಪ್ಪಿನ ಸತ್ಯಾಗ್ರಹ ಇತ್ಯಾದಿಗಳಲ್ಲಿ ಭಾಗವಹಿಸಬೇಕು; ಯಾರು ಹಿಂದೆ ಉಳಿದು ಸಂಘಟನೆಯಲ್ಲಿ ತೊಡಗಬೇಕು ಎನ್ನುವುದನ್ನೆಲ್ಲ ಅವರು ನಿಶ್ಚಯಿಸುತ್ತಿದ್ದುದಕ್ಕೆ ದಾಖಲೆಗಳಿವೆ. ಅವರು ನೇರವಾಗಿ ಗಾಂಧೀಜಿ ಮತ್ತು ರಾಜಾಜಿಯವರಿಂದ ಸೂಚನೆಗಳನ್ನು ಪಡೆದು ಕಾರ್ಯನಿರ್ವಹಿಸುತ್ತಿದ್ದರು.
ಅನಂತ ಪದ್ಮನಾಭ ಭಟ್ಟರು ತೀರಿಕೊಂಡಾಗ `ಅಂತರಂಗ’ ಪತ್ರಿಕೆಯಲ್ಲಿ ಪ್ರಕಟವಾದ ವರದಿ ರೂಪದ ಶ್ರದ್ಧಾಂಜಲಿ (ಉಡುಪಿ ಗಾಂಧಿ ಇನ್ನಿಲ್ಲ!) ಅವರ ಬದುಕನ್ನು ಹೀಗೆ ಕ್ರೋಢೀಕರಿಸಿದೆ:
“ಇದೇ ತಾ. 13-05-1948ನೇ ಗುರುವಾರ ಶ್ರೀ ಸಾಂತ್ಯಾರು ಅನಂತ ಪದ್ಮನಾಭ ಭಟ್ಟರು ಕಾಯಬಿಟ್ಟರು. ಸುಮಾರು ನಾಲ್ಕೂವರೆ ತಿಂಗಳ ಅಂತರವಿರುವುದರೆಂದಾಗಲಿಲ್ಲ – ಇಲ್ಲವಾದರೆ ಗುರುವನ್ನಗಲಿ ಬದುಕಿರಲಾರದೆ ಈ ಶಿಷ್ಯ ಮಹಾತ್ಮಾಜೀಯ ಬೆನ್ನು ಹಿಡಿದರೆಂದೇ ಜನ ನಂಬುತ್ತಿತ್ತು. ಶ್ರೀಯುತ ಭಟ್ಟರಿಗಿಂತ ಹೆಚ್ಚಾಗಿ ಪ್ರದರ್ಶನ ರಂಗಗಳಲ್ಲಿ ಕಾಣಿಸುತ್ತಿರುವ ನಮ್ಮಲ್ಲಿಯ ಕೆಲವು ಧುರೀಣರು ಒಂದೊಮ್ಮೆಗೆ ಕಳೆದ ಜನವರಿ ತಾ. 30ನೇ ಶುಕ್ರವಾರ ಅಪರಾಹ್ನ ಗಂಟೆ 6 ಕ್ಕೆ (ಆ ಮುಹೂರ್ತ ಕಳೆದಿರುವುದನ್ನೂ – ಈ ಧುರೀಣರುಳಿದಿರುವುದನ್ನೂ ಕಾಣುತ್ತಿರುವುದರಿಂದಲೇ ಈ ಧೈರ್ಯದ ಮಾತು!) ಫಕ್ಕನೇ ಹೃದಯಸ್ತಂಭನಗೊಂಡು ಹೊರಟು ಹೋಗುತ್ತಿದ್ದರೂ, ಗಾಂಧೀಜಿಯ ಮರಣಕ್ಕಾಗಿ ಸತ್ತರೆಂದು ನಂಬುವವರಿರುತ್ತಿರಲಿಲ್ಲ -ಪ್ರತಿಯೊಬ್ಬನೂ ಆ ಮರಣದ ಹೇತು ಶೋಧಿಸುವ ಡಾಕ್ಟರನೇ ಆಗುತ್ತಿದ್ದ! ಆದರೆ “ಉಡುಪಿ ಗಾಂಧಿ” ಶ್ರೀ ಸಾಂತ್ಯಾರು ಅನಂತ ಪದ್ಮನಾಭ ಭಟ್ಟರು ನಾಲ್ಕೂವರೆ ತಿಂಗಳ ನಂತರ ಹೊರಟರೂ ಆಗಿನಿಂದಲೇ ಈ ಪ್ರಯಾಣ ಸಿದ್ಧತೆ ನಡೆದಿರಬಹುದೇ, ಎಂಬ ಅನುಮಾನ ಬರುತ್ತಿದೆ.
ಭಟ್ಟರದು ಸಾಂತ್ಯಾರಿನ ದೊಡ್ಡ ವರ್ಗದಾರ ಮನೆತನ. ಆಸುಪಾಸಿನಲ್ಲೆಲ್ಲಾ ವಿಶೇಷ ಗೌರವ, ಪ್ರತಿಷ್ಠೆಗಳಿಸಿದ್ದ ಕುಲ; ಊರ ಪಟೇಲಿಕೆಯೂ ಇದ್ದಿತು. ಇವರ ತಂದೆ ಶ್ರೀಮಂತಿಕೆಗೂ, ಘನತೆ ಗಾಂಭೀರ್ಯಗಳಿಗೂ ಪ್ರಸಿದ್ಧರಿದ್ದು ಉಡುಪಿಯ ಅಷ್ಟಮಠಗಳಲ್ಲೊಂದರ ಏಜಂಟರಾಗಿದ್ದರು. ಇವರೊಬ್ಬನೇ ಮಗ ತಾರುಣ್ಯದಲ್ಲಿ ಆಡಂಬರದ ಜೀವನ ನಡೆಸುತ್ತಿದ್ದರೆಂದು ಕೇಳುತ್ತೇವೆ. ಮಹಾತ್ಮಾಜೀಯ ಪ್ರಥಮ ಸ್ವಾತಂತ್ರ್ಯ ಸಮರ- ಅಸಹಕಾರ ಚಳುವಳಿ – ಆರಂಭವಾದೊಡನೆಯೇ ಎಲ್ಲವನ್ನೂ ಬಿಟ್ಟುಕೊಟ್ಟು ಅದರಲ್ಲಿ ಸೇರಿಕೊಂಡರು. ಅಲ್ಲಿ ಬಹಳ ಮಂದಿ ಸೇರಿಕೊಂಡದ್ದರಾದ್ದರಿಂದ ಇವರೂ ಅಷ್ಟೇ ಅಲ್ಲ – ತನ್ನನ್ನೇ ಅದಕ್ಕರ್ಪಿಸಿಕೊಂಡರು. ಅಂದಿನಿಂದ ಸಾಯುವವರೆಗೂ ಇವರು `ಸಾಂತ್ಯಾರು ಭಟ್ಟ’ರೂ ಅಲ್ಲ `ಸಾಂತ್ಯಾರು ಪಟೇಲ’ರೂ ಅಲ್ಲ `ಗಾಂಧೀ ಭಟ್ಟರು’! ದೇಶಸೇವೆಗಾಗಿ ಇವರು ತನ್ನ ಪಟೇಲಿಕೆ ಬಿಟ್ಟದ್ದಿದೆ; ಮತ್ತೊಮ್ಮೆ ಸರಕಾರದಿಂದ ಇವರ ಪಟೇಲಿಕೆ ರದ್ದಾಗಿದ್ದಿತು. ಜೈಲು ವಾಸವನ್ನನುಭವಿಸಿದ್ದರು. ಮಿಕ್ಕೆಲ್ಲಾ ಕಡೆಗಳಲ್ಲಿ ಇಂತಹ ಶಾಲೆಗಳು ಮಾಯವಾದ ಮೇಲೂ ಉಳಿದಿದ್ದ ರಾಷ್ಟ್ರೀಯ ಶಾಲೆಗಳೆಂದರೆ ಶ್ರೀ ಸಾಂತ್ಯಾರು ಅನಂತ ಪದ್ಮನಾಭ ಭಟ್ಟರು ಸ್ಥಾಪಿಸಿ, ನಡೆಯಿಸಿಕೊಂಡು ಬಂದವುಗಳೇ. ತನ್ನ ಊರಲ್ಲಿ ಆಶ್ರಮದಂತಹ ಆಶ್ರಂಯ ಸ್ಥಾನಕೊಟ್ಟು ಹರಿಜನ ಹುಡುಗಿಯರನ್ನೂ ಸಾಕಿದ್ದರು. ಖಾದೀ ತಯಾರೀ ಮಗ್ಗಗಳನ್ನಿಟ್ಟಿದ್ದರು. ಕಾಂಗ್ರೆಸಿನ ಸ್ವಾತಂತ್ರ್ಯ ಚಳುವಳಿಗಳ ವೇಳೆ ಉಡುಪಿ ತಾಲೂಕಿನಲ್ಲಿ ಅವುಗಳ ಬೆಂಗೋಲಾಗಿ ದುಡಿದಿದ್ದವರು ಶ್ರೀಯುತ ಭಟ್ಟರು.
ಹೆಚ್ಚೇನು, ಕೆಲವೇ ಮಂದಿ ಅಗ್ರಗಣ್ಯ ರಾಷ್ಟ್ರ ಪ್ರಮುಖರ ಯಥಾಪ್ರತಿ ಸ್ಥಳೀಯ ಬಿಂಬವಾಗಿದ್ದರೆನ್ನಬೇಕು – ನಮ್ಮೀ ಭಟ್ಟರು. ಶ್ರೀಮಂತಿಕೆಯ ಸುಖವಿಲಾಸಗಳನ್ನೂ ಸೂರೆ ಸುಲಿಗೆ ಬುದ್ಧಿಯನ್ನೂ ತ್ಯಜಿಸಿ, ಸಾದಾ ಜೀವನಕ್ಕಿಳಿದು ನೆಹರು, ವಲ್ಲಭಾಯಿ, ರಾಜೇಂದ್ರರಂಥವರು ರಾಷ್ಟ್ರಮುಖಂಡರಾದುದು – ಇವರೂ ಅದೇ ಪ್ರತಿ. ಹೀಗೆ ಆ ರಾಜಕೀಯ ಪ್ರಮುಖರ ವರ್ಗದೊಂದು ಜನ ನಮ್ಮಲ್ಲಿಯೂ ಇದೆ ಎಂದು ತೋರಿಸಲಾಗುವಂತೆಯೇ ವಿನೋಭಾಭಾವೆಯಂತಹ “ಗಾಂಧೀ ಶಿಷ್ಯ”ರ ವರ್ಗದೊಂದು ಜನವೂ ನಮ್ಮಲ್ಲಿದೆ ಎನ್ನಲಾಗುವಂತೆ ಇಡೀ ಜಿಲ್ಲೆಯಲ್ಲಿ ಮೊದಲ ಮನುಷ್ಯನಾಗಿದ್ದುದೆಂದರೆ ಈ `ಸಾಂತ್ಯಾರು ಭಟ್ಟ’ರೇ! ತಕ್ಲಿಯು ಅವರ ಕೈಯ ಆರನೇ ಬೆರಳಾಗಿಯೆ ನೇತಾಡಿಕೊಂಡಿತ್ತು. ಸ್ವತಃ ತಾನು ನೂತ ನೂಲಿನ ಖಾದಿಯನ್ನಲ್ಲದೆ ಬೇರಾವುದನ್ನೂ – ಚರಕ ಸಂಘದ ಸರ್ಟಿಫಿಕೇಟು ಪಡೆದು ಬಂದ ವಸ್ತ್ರವನ್ನು ಕೂಡಾ – ಅವರು ಉಡುತ್ತಿರಲಿಲ್ಲ. ಗಾಂಧೀ ಭಕ್ತರಾದ ಮೇಲೆ ಸ್ವಂತ ಕೈಪಾಕದ್ದೇ ಊಟ – ಅದೂ ಕೆಲವು ನಿಯಮ ನಿರ್ಬಂಧಗಳನ್ನು ಹಾಕಿಕೊಂಡ ಫಲಹಾರ. ಅಂತೂ ಶ್ರೀ ಭಟ್ಟರು ಗಾಂಧೀ ಚಳುವಳಿಗಳಲ್ಲಿ ಸೇರಿಕೊಂಡವರು ಮಾತ್ರವಲ್ಲ – ಅದರಲ್ಲೇ ಲೀನವಾದವರು. ಗಾಂಧೀತತ್ವಗಳನ್ನು ಎತ್ತಿಹಿಡಿದವರಷ್ಟೇ ಅಲ್ಲ – ಅವನ್ನು ಜೀರ್ಣಿಸಿಕೊಂಡು ತನ್ನ ಜೀವನದ ತತ್ವಗಳನ್ನಾಗಿ ಮಾಡಿಕೊಂಡವರು.
ಮೊಣಕಾಲ ಮೇಲಿನ ಮಡೀ ಬೈರಾಸು, ಬಿಳೀ ಖಾದಿ ಜುಬ್ಬ, ತಲೆಯಲ್ಲೊಂದು ಬಿಳೀ ಟೋಪಿ – ಒಮ್ಮೊಮ್ಮೆ ಕಂಠದ ಸುತ್ತ ಬಿಳೀ ಬೈರಾಸು – ಕೈಯಲ್ಲೊಂದು ತಕಲಿ – ಮಳೆಗಾಲದಲ್ಲಿ ಓಲೇ ಕೊಡೆ – ಈ ವೇಷವಿನ್ನು ದಕ್ಷಿಣ ಕನ್ನಡದಲ್ಲಿ (ಪ್ರಾಯಶಃ ಮಿಕ್ಕಕಡೆಗಳವರೂ `ನಮ್ಮಲ್ಲಿ ಕೂಡಾ’ ಎಂದಿದಕ್ಕೆ ದನಿಗೂಡಿಸಬಹುದು) ಕಾಣಸಿಗುವಂತಿಲ್ಲ. ಗಾಂಧೀ ತತ್ವಗಳ ಕಡೆಗೆ ಹೃದಯವನ್ನು ಮಾರ್ಪಡಿಸುವುದಕ್ಕಾಗಿ ಯಾವ ಹಿರಿಯ ವ್ಯತ್ಯಾಸವನ್ನೂ ನೋಡದೆ, ಊಟದ ಹೊತ್ತು ಮೀರಿ ಜೀರ್ಣವಾಗುವ ಹೊತ್ತಿನವರೆಗೂ ಹಸನ್ಮುಖದಿಂದ ಶಾಂತ ಗಂಭೀರ ಸ್ವರದಿಂದ ಮುಖಾಮುಖಿ ಮಾತನಾಡುತ್ತಾ ಕುಳಿತುಕೊಳ್ಳಬಲ್ಲ ಮಹಾನುಭಾವರು ಇನ್ನು ದೊರೆಯುವಂತಿಲ್ಲ. ಕಾರಣ “ಉಡುಪಿ ಗಾಂಧಿ” – ಶ್ರೀ ಸಾಂತ್ಯಾರು ಅನಂತ ಪದ್ಮನಾಭ ಭಟ್ಟರು – ಇನ್ನಿಲ್ಲ!” (`ಅಂತರಂಗ’ – 18- 05- 1948).
ಅನಂತ ಪದ್ಮನಾಭ ಭಟ್ಟರು ಪೆರ್ಡೂರ ಸಮೀಪದ ಸಾಂತ್ಯಾರು, ಬೈರಂಪಳ್ಳಿ ಹಾಗೂ ಬೆಳ್ಳರ್ಪಾಡಿ ಗ್ರಾಮಗಳ ಆನುವಂಶಿಕ ಪಟೇಲರಾಗಿದ್ದರು. 1921ರಲ್ಲಿ ಅವರು ಪಟೇಲಿಕೆಯನ್ನು ತೊರೆದು ಗಾಂಧೀಜಿಯವರ ರಾಷ್ಟ್ರೀಯ ಆಂದೋಲನಕ್ಕೆ ಧುಮುಕಿದರು ಮತ್ತು ಅಸಹಕಾರ ಹಾಗೂ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದರು. `ತಿಲಕ್ ಸ್ವರಾಜ್ ಫಂಡ್’ ಎಂಬ ನಿಧಿಗೆ ಹಣ ಸಂಗ್ರಹಿಸಿದರು. ಉಪ್ಪಿನ ಸತ್ಯಾಗ್ರಹದ ಕಾಲದಲ್ಲಿ ಭಟ್ಟರು ರೂ. 500/- ದಂಡ ಪಡೆದಿದ್ದರು. ಅದನ್ನವರು ಪಾವತಿಸಲು ನಿರಾಕರಿಸಿ 6 ವಾರಗಳ ಸಜೆಯನ್ನು ಅನುಭವಿಸಿದ್ದರು. ಅಸಹಕಾರ ಚಳುವಳಿಗಾಗಿ 1933ರಲ್ಲಿ ಮತ್ತೊಮ್ಮೆ ಮೂರು ತಿಂಗಳ ಶಿಕ್ಷೆ ಅನುಭವಿಸಿ ದಂಡದ ಹಣವಾದ ರೂ. 500/- ಕಟ್ಟಲು ನಿರಾಕರಿಸಿದ ಕಾರಣ ಅವರ ಆಸ್ತಿಯ ಭಾಗವನ್ನು ಹರಾಜು ಹಾಕಲಾಗಿತ್ತು. ಅನಂತ ಪದ್ಮನಾಭ ಭಟ್ಟರು ತಮ್ಮ 1933ರಲ್ಲಿ ಜೈಲುವಾಸದ ಸಂದರ್ಭದಲ್ಲಿ ಅದೇ ಜೈಲಿನಲ್ಲಿದ್ದ ರಾಜಾಜಿಯವರಿಗೆ ಆತ್ಮೀಯರಾಗಿದ್ದರು. 1939ರಲ್ಲಿ ಕಾಂಗ್ರೆಸ್ ಸರಕಾರ ಆರಿಸಿ ಬಂದ ನಂತರ ಅವರ ಪಟೇಲಿಕೆ ಅವರಿಗೆ ಮರಳಿಸಿಕ್ಕಿತು. ಬ್ರಿಟಿಷ್ ವಿರೋಧಿ ನಿಲುವಿಗಾಗಿ 1942ರಲ್ಲಿ ಮತ್ತೆ ಕೆಲಸ ಕಳೆದುಕೊಂಡರು. ಸ್ವಾತಂತ್ರ್ಯಾನಂತರ ಈ ಕೆಲಸ ಸಾಂತ್ಯಾರು ವೆಂಕಟರಾಜರಿಗೆ ಸಿಕ್ಕಿತು.
ಶ್ರೀ ಸಾಂತ್ಯಾರು ಅನಂತ ಪದ್ಮನಾಭ ಭಟ್ಟರು ತಮ್ಮ ಸ್ವಂತ ಖರ್ಚಿನಲ್ಲಿ ಮೂರು ರಾಷ್ಟ್ರೀಯ ಶಾಲೆಗಳನ್ನು ನಡೆಸುತ್ತಿದ್ದರು. ಸಾಂತ್ಯಾರಿನಲ್ಲಿ ತಿಲಕಾಶ್ರಮ ಎಂಬ ಆಶ್ರಮವನ್ನು ನಡೆಸುತ್ತಿದ್ದರು. 1945ರಲ್ಲಿ ಕಸ್ತೂರ್ಬಾ ಸ್ಮಾರಕ ಸಮಿತಿಯ ವತಿಯಿಂದ ಎಚ್. ನಾರಾಯಣ ರಾವ್ ಎಂಬವರು ಬಂದು ಈ ಸಂಸ್ಥೆಗಳಿಗೆ ಭೇಟಿ ನೀಡಿ ತಿಲಕಾಶ್ರಮವನ್ನು ಸಮಿತಿಯ ಶೈಕ್ಷಣಿಕ ಮತ್ತು ಆರೋಗ್ಯ ಕೇಂದ್ರವನ್ನಾಗಿ ಪರಿಗಣಿಸಲು ಶಿಫಾರಸು ಮಾಡಿದ್ದರು. ಈ ವರದಿಯಲ್ಲಿ ಅವರು, 1921ರಲ್ಲಿ ಜಿಲ್ಲೆಯಲ್ಲಿ ಸ್ಥಾಪಿಸಲಾಗಿದ್ದ ರಾಷ್ಟ್ರೀಯ ಶಾಲೆಗಳೆಲ್ಲ ಮುಚ್ಚಿದ್ದರೂ ಶ್ರೀ ಸಾಂತ್ಯಾರು ಅನಂತ ಪದ್ಮನಾಭ ಭಟ್ಟರು ಮೂರು ಶಾಲೆಗಳನ್ನು ಅತ್ಯುತ್ತಮವಾಗಿ ನಡೆಸಿಕೊಂಡು ಬರುತ್ತಿದ್ದುದನ್ನು ಶ್ಲಾಘಿಸಿದ್ದಾರೆ (H. Narayana Rao’s Report. 7.12.1945). ಸಾಂತ್ಯಾರಿನ ತಿಲಕಾಶ್ರಮದಲ್ಲಿ ಒಂದು, ದೊಂಡೇರಂಗಡಿ ಮತ್ತು ಬೆಳ್ಳರ್ಪಾಡಿಗಳಲ್ಲಿ ಒಂದೊಂದು ಪ್ರಾಥಮಿಕ ಶಾಲೆಗಳನ್ನು ಭಟ್ಟರು ನಡೆಸುತ್ತಿದ್ದು ಅವು ಗಾಂಧೀ ಸಿದ್ಧಾಂತದ ರಾಷ್ಟ್ರೀಯ ಶಿಕ್ಷಣವನ್ನು ನೀಡುತ್ತಿದ್ದವು. ಶಾಲೆಗಳಲ್ಲಿ ಹತ್ತಿ ಬೆಳೆಯುವುದು, ಜೇನು ಸಾಕಣೆ, ತಕಲಿ ಮತ್ತು ಚರಕಗಳಿಂದ ನೂಲುವುದು ಮುಂತಾದ ಚಟುವಟಿಕೆಗಳು ನಡೆಯುತ್ತಿದ್ದವು. ಭಟ್ಟರ ಮನೆಯಲ್ಲಿ ಕೈಮಗ್ಗವಿದ್ದು ಅದರಿಂದ ಬಟ್ಟೆ ತಯಾರಿಸಲಾಗುತ್ತಿತ್ತು. ಭಟ್ಟರು ಊರಿನಲ್ಲಿ ಸಹಕಾರ ಸಂಘವನ್ನು ಸ್ಥಾಪಿಸಿದ್ದರು. ಅವರು ಕೆಲಸಗಾರರಿಗಾಗಿ ಕೊಠಡಿಗಳನ್ನು ಕಟ್ಟಿಸಿಕೊಟ್ಟಿದ್ದರು.
ಶಾಂತಿನಿಕೇತನದಲ್ಲಿ ಶಿಕ್ಷಣ ಪಡೆದ ಕಾಂಗ್ರೆಸಿಗ ಕೆ.ಕೆ. ಶೆಟ್ಟಿ ಮತ್ತು ನವಯುಗದ ಹೊನ್ನಯ್ಯಶೆಟ್ಟರು ತಿಲಕಾಶ್ರಮದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.
ಒಟ್ಟಿನಲ್ಲಿ ಶ್ರೀ ಸಾಂತ್ಯಾರು ಅನಂತ ಪದ್ಮನಾಭ ಭಟ್ಟರು ಒಬ್ಬರು ಶ್ರೇಷ್ಠ ಗಾಂಧೀವಾದಿ ಸಮಾಜ ಸೇವಕರಾಗಿದ್ದರು. ಇವರ ಪತ್ನಿ ಗೌರಮ್ಮನವರು ಗಂಡನ ಜತೆಗೆ ಬೆಳಗಾಂ ಮತ್ತು ಕಾಕಿನಾಡ ಕಾಂಗ್ರೆಸ್ ಅಧಿವೇಶನಗಳಿಗೆ ಹೋಗಿ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ತಮ್ಮ ಆಭರಣಗಳನ್ನು ಗಾಂಧಿ ಫಂಡಿಗೆ ಅರ್ಪಿಸಿದ್ದರು.
ವೆಂಕಟರಾಜರ ಮೇಲೆ ಅವರ ತಂದೆ ಅನಂತ ಪದ್ಮನಾಭ ಭಟ್ಟರ ಪ್ರಭಾವ ಬಹಳವಾಗಿತ್ತು.
ಅನಂತಪದ್ಮನಾಭ ಭಟ್ಟರ ತಂದೆ (ಸಾಂತ್ಯಾರು ವೆಂಕಟಸುಬ್ಬಾಭಟ್ಟರು ಅಥವಾ ಸಾಂತ್ಯಾರು ಭಟ್ಟರು) ಮಗನ ಜತೆಗೆ ನೇರವಾಗಿ ಮಾತನಾಡುತ್ತಿರಲಿಲ್ಲ. ಆದರೆ ಅವರಿಗೆ ಮಗನ ಮೇಲೆ ಅಭಿಮಾನವಿತ್ತಂತೆ. ಅವರು ಪತ್ನಿಗೆ ಒಂದು ಖಾಯಂ ಸೂಚನೆ ಕೊಟ್ಟಿದ್ದರಂತೆ, “ಅನಂತನಿಗೆ ನನ್ನ ಬಳಿ ಹಣ ಕೇಳಲು ಸಂಕೋಚವಾಗಬಹುದು. ಅವನಿಗೆ ಹಣ ಬೇಕಾದಾಗ ನೀನೇ ಕೊಟ್ಟುಬಿಡು. ನನ್ನನ್ನು ಕೇಳಬೇಕಾಗಿಲ್ಲ. ಹಾಗೆಯೇ ಅವನಾಗಲಿ, ಅವನ ಗೆಳೆಯರಾಗಲಿ ಮನೆಗೆ ಬಂದಾಗ ಊಟೋಪಚಾರ ಮಾಡಬೇಕು”, ಎಂದು. ಹಿಂದಿನ ಕಾಲದ ಜನರಲ್ಲಿ ಈ ರೀತಿಯ ಬಿಗುವಿನ ವರ್ತನೆ ಮತ್ತು ಪ್ರೀತಿಯನ್ನು ನೇರವಾಗಿ ವ್ಯಕ್ತಪಡಿಸದಿರುವುದು ಸಾಮಾನ್ಯವಾಗಿತ್ತು.
ಸಾಂತ್ಯಾರು ಭಟ್ಟರು ಅಂತರಂಗದಲ್ಲಿ ಬಹಳ ಮಾನವೀಯ ಕಾಳಜಿಗಳಿದ್ದ ವ್ಯಕ್ತಿ. ತಾವು ಮಾಡಿದ ದಾನ ಧರ್ಮಗಳು ಹೊರಗಿನ ಜನರಿಗೆ ತಿಳಿಯದಂತೆ ಕಾಂಗ್ರೆಸ್ ಚಳುವಳಿಗೆ (ಅಂದರೆ ಸ್ವಾತಂತ್ರ್ಯ ಹೋರಾಟಕ್ಕೆ) ಗುಪ್ತವಾಗಿ ಧನ ಸಹಾಯ ಮಾಡುತ್ತಿದ್ದರು. ಪಟೇಲರಾಗಿದ್ದ ಅವರು ವ್ಯಕ್ತವಾಗಿ ಅಂತಹ ಸಹಾಯ ಮಾಡುವುದು ಸಾಧ್ಯವಿರಲಿಲ್ಲ. ಅವರು ಉಡುಪಿಯಲ್ಲಿ ಕೃಷ್ಣಮಠದ ಸಮೀಪ ಬಂದು ನೆಲಸಿದ ಮೇಲೆ ಆನುವಂಶಿಕ ಹುದ್ದೆಯಾಗಿದ್ದ ಪಟೇಲಿಕೆಯನ್ನು ಮಗನಿಗೆ ಬಿಟ್ಟುಕೊಟ್ಟಿದ್ದರು. ಸಾಂತ್ಯಾರು ಭಟ್ಟರಿಗೆ ಒಂದು ಕುದುರೆ ಸಾರೋಟು ಮತ್ತು ಫ್ರಾನ್ಸಿನಿಂದ ಹಡಗಿನ ಮೂಲಕ ತರಿಸಿದ ಫೋರ್ಡ್ ಕಾರು ಇತ್ತು.
ಇವರ ಬಗ್ಗೆ ಒಂದು ಸ್ವಾರಸ್ಯಕರ ಘಟನೆಯಿದೆ: ಸ್ವಾತಂತ್ರ್ಯ ಹೋರಾಟವನ್ನು ಪ್ರೇರೇಪಿಸುವ ಒಂದು ಮೆರವಣಿಗೆಯನ್ನು ಉಡುಪಿಯಲ್ಲಿ ಉಡುಪಿಯ ಕಾಂಗ್ರೆಸ್ ಮುಂದಾಳುಗಳು ಏರ್ಪಡಿಸಿದ್ದರು. ಅದರ ನೇತೃತ್ವ ವಹಿಸಿದ್ದವರು ಅನಂತ ಪದ್ಮನಾಭ ಭಟ್ಟರು. ಕಲ್ಕತ್ತಾದಿಂದ ಬಂದಿದ್ದ ಇಬ್ಬರು ನಾಯಕರು ಮೆರವಣಿಗೆಯ ಮುಂಚೂಣಿಯಲ್ಲಿ ಅನಂತ ಪದ್ಮನಾಭ ಭಟ್ಟರೊಂದಿಗೆ ಸಾಗುತ್ತಿದ್ದರು. ರಥಬೀದಿಯಲ್ಲಿ ತಮ್ಮ ಮನೆಯ ಮುಂದೆ ಮೆರವಣಿಗೆ ಸಾಗುತ್ತಿರಲು ಇದೇನು ಗದ್ದಲ ಎಂದು ನೋಡಲು ಸಾಂತ್ಯಾರು ಭಟ್ಟರು ಹೊರಗೆ ಬಂದರು. ಆಗ ಮೆರವಣಿಗೆಯಲ್ಲಿ ಘೋಷಣೆ ಕೂಗುತ್ತಿದ್ದ ಸ್ಥಳೀಯರೆಲ್ಲ ಒಬ್ಬೊಬ್ಬರಾಗಿ ಅಂಗಡಿ ಮುಂಗಟ್ಟೆಗಳ ಮರೆಗೆ ಸರಿದು ನಿಂತುಕೊಂಡರು. ಕಾಂಗ್ರೆಸ್ ಮುಖಂಡರು ಹಿಂದೆ ನೋಡಿದರೆ ಜನರೆಲ್ಲ ಮಾಯವಾಗುತ್ತಿದ್ದಾರೆ. ಕಲ್ಕತ್ತದಿಂದ ಬಂದವರು ಪರಿಸ್ಥಿತಿಯನ್ನು ಗ್ರಹಿಸಿ ತಮ್ಮ ಬೆಂಬಲಿಗರಿಗೆ ಧೈರ್ಯ ಹೇಳಿದರು : “ಇಂಥ ಶ್ರೀಮಂತರಿಗೆ ಹೆದರಲೇ ಬಾರದು. ಇಂಥವರಿಂದಲೇ ನಮ್ಮ ದೇಶ ಹಾಳಾಗಿರುವುದು. ಬನ್ನಿ … ಬನ್ನಿ…”
ಆಗ ಅವರ ಪಕ್ಕದಲ್ಲಿದ್ದ ಉಡುಪಿಯ ಒಬ್ಬ ಮುಖಂಡರು ಅವರ ಕಿವಿಯಲ್ಲಿ ಉಸುರಿದರು : “ಸುಮ್ಮನಿರಿ. ಅವರು ನಮ್ಮ ಅನಂತಪದ್ಮನಾಭ ಭಟ್ಟರ ತಂದೆಯವರು. ನಿಮ್ಮನ್ನು ಕಲ್ಕತ್ತದಿಂದ ಕರೆಸಿಕೊಳ್ಳಲು ಹಣಕೊಟ್ಟವರು ಅವರೇ. ಈ ಮೆರವಣಿಗೆ ಮುಗಿದ ಮೇಲೆ ನಿಮ್ಮ ಊಟ ಅವರ ಮನೆಯಲ್ಲಿಯೇ!”
ಕಲ್ಕತ್ತದ ನಾಯಕರು ಪೆಚ್ಚಾದರು. ಸಾಂತ್ಯಾರು ಭಟ್ಟರು ಒಳಗೆ ಹೋದ ಮೇಲೆ ಮೆರವಣಿಗೆ ಮುಂದುವರಿಯಿತು. ಮೆರವಣಿಗೆ ಮುಗಿದ ಮೇಲೆ ಅನಂತಪದ್ಮನಾಭ ಭಟ್ಟರೊಡನೆ ಕಲ್ಕತ್ತದವರೂ ಅವರ ಮನೆಗೆ ಹೋಗಿ ಊಟ ಮಾಡಿ ವಿಶ್ರಾಂತಿ ತೆಗೆದುಕೊಂಡರು. ಸಾಂತ್ಯಾರು ಭಟ್ಟರು ಬಂದವರಿಗೆ ಸಂಕೋಚವಾಗದಂತೆ ತಮ್ಮಷ್ಟಕ್ಕೆ ತಾವು ಇದ್ದು, ಹೊರಗೆ ಹೋಗುವಾಗ ಪತ್ನಿಯನ್ನು ಕರೆದು ಮಗನಿಗೆ ಹಣವೇನಾದರೂ ಬೇಕಾದರೆ ಕೊಡುವಂತೆ ಸೂಚಿಸಿ ಹೋದರಂತೆ.
ತಂದೆಯ ಪಟೇಲ ಹುದ್ದೆ 1948 ರಲ್ಲಿ ಅವರು ನಿಧನರಾದ ಕಾರಣ ವೆಂಕಟರಾಜರಿಗೆ ಸಿಕ್ಕಿತು. ಅವರು ರಾಜ್ಯದಲ್ಲಿ ಈ ಹುದ್ದೆಯನ್ನು (ಆನುವಂಶಿಕ ಪಟೇಲಿಕೆಯನ್ನು) ಸರ್ಕಾರ ರದ್ದು ಮಾಡುವವರೆಗೆ, ಅಂದರೆ 1970 ರವರೆಗೆ ಮೂರು ಗ್ರಾಮಗಳ (ಬೆಳ್ಳರ್ಪಾಡಿ, ಬೈರಂಪಳ್ಳಿ ಮತ್ತು ಸಾಂತ್ಯಾರು) ಪಟೇಲರಾಗಿ ಕೆಲಸ ಮಾಡಿ ಗ್ರಾಮಾಭಿವೃದ್ಧಿಯಲ್ಲಿ ನೇರ ಪಾತ್ರ ವಹಿಸಿದ್ದರು. ವೆಂಕಟರಾಜರು 1963 ರಿಂದ 1970 ರವರೆಗೆ ಏಳು ವರ್ಷಗಳ ಕಾಲ ಉಡುಪಿಯಿಂದ ‘ವೀರಭೂಮಿ’ ಮಾಸಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ಈ ಪತ್ರಿಕೆಗಾಗಿ ಬರೆದ ಸಂಪಾದಕೀಯಗಳು ಈ ಕಾಲದ ರಾಜಕೀಯ ಮತ್ತು ದೇಶ ವಿದೇಶಗಳ ಆಗುಹೋಗುಗಳ ಸೂಕ್ಷ್ಮ ಅವಲೋಕನ ಮತ್ತು ನಿಷ್ಪಕ್ಷಪಾತದ ವಿಶ್ಲೇಷಣೆಯಿಂದ ಆ ಕಾಲದ ಒಂದು ಮುಖ್ಯ ದಾಖಲೆಯೆಂದು ಪರಿಗಣಿಸಬಹುದಾದಷ್ಟು ಮುಖ್ಯವಾಗಿವೆ.
ಬಹುಮುಖೀ ಆಸಕ್ತಿಗಳು
ವೆಂಕಟರಾಜರು ತಮ್ಮ ಪ್ರಾರಂಭದ ವಿದ್ಯಾಭ್ಯಾಸವನ್ನು ತಮ್ಮ ತಂದೆ ಸಾಂತ್ಯಾರಿನಲ್ಲಿ (ಉಡುಪಿ ಜಿಲ್ಲೆಯ ಪೆರಡೂರಿನ ಸಮೀಪದ ಊರು) ಪ್ರಾರಂಭಿಸಿದ್ದ ತಿಲಕಾಶ್ರಮ ರಾಷ್ಟ್ರೀಯ ಶಾಲೆಯಲ್ಲಿಯೇ ಪಡೆದರು. ನಂತರ ಉಡುಪಿಯಲ್ಲಿ ವಾಸಿಸುತ್ತಿದ್ದ ಅಜ್ಜನ ಮನೆಯಲ್ಲಿ ಉಳಿದುಕೊಂಡು ಸಂಸ್ಕೃತ ಕಾಲೇಜಿನಲ್ಲಿ ಅಭ್ಯಾಸಮಾಡಿ, ಸಂಸ್ಕೃತ ಶಿರೋಮಣಿ ಪದವಿಯನ್ನು ಪಡೆದಿದ್ದರು; ಜತೆಗೆ ಖಾಸಗಿಯಾಗಿ ಮೆಟ್ರಿಕ್ಯುಲೇಶನ್ ಮಾಡಿಕೊಂಡಿದ್ದರು. ವಾಸುದೇವರಾವ್ ಎಂಬವರಿಂದ ಕನ್ನಡ ಮತ್ತು ಸಾಲೀಸಯ್ಯ ಎಂಬವರಿಂದ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯಗಳನ್ನು ಖಾಸಗಿಯಾಗಿ ಅಭ್ಯಾಸ ಮಾಡಿದ್ದರು. ಕನ್ನಡದಷ್ಟೇ ಸಲೀಸಾಗಿ ಅವರು ಸಂಸ್ಕೃತದಲ್ಲಿಯೂ ಕಾವ್ಯರಚನೆ ಮಾಡುತ್ತಿದ್ದರು. ತುಳು ಭಾಷೆಯಲ್ಲಿಯೂ ಕವಿತೆಗಳನ್ನು ಬರೆದಿದ್ದರೆಂದು ಅವರ ಪತ್ನಿ ಮಾಹಿತಿ ನೀಡಿದ್ದರು. ಆದರೆ ಅವು ಲಭ್ಯವಿಲ್ಲ. ಅವರಲ್ಲಿ ದೊಡ್ಡ ಖಾಸಗಿ ಗ್ರಂಥ ಸಂಗ್ರಹವಿತ್ತು. ಅದರಲ್ಲಿ ಸಂಸ್ಕೃತ, ಕನ್ನಡ ಮತ್ತು ಇಂಗ್ಲಿಷ್ ಮೂರು ಭಾಷೆಗಳ ಪುಸ್ತಕಗಳಿದ್ದವು. ಕೆಲವು ಕತೆ, ಕವಿತೆ, ಲೇಖನಗಳಲ್ಲಿ ಅವರು ಕೀಟ್ಸ್, ಬೈಬಲ್ ಮುಂತಾದ ಮೂಲಗಳಿಂದ ಇಂಗ್ಲಿಷ್ ವಾಕ್ಯಗಳನ್ನು ಉಲ್ಲೇಖಿಸಿರುವುದನ್ನು ನೋಡಿದರೆ ಅವರ ಓದಿನ ವ್ಯಾಪ್ತಿ ವಿಶಾಲವಾಗಿತ್ತು ಎಂದು ತಿಳಿಯುತ್ತದೆ. ಇಪ್ಪತ್ತು ಇಂಗ್ಲಿಷ್ ಕತೆಗಳನ್ನು ಅವರು ಅನುವಾದಿಸಿ ತಮ್ಮ ಪತ್ರಿಕೆ ‘ವೀರಭೂಮಿ’ಯಲ್ಲಿ ಪ್ರಕಟಿಸಿದ್ದಾರೆ. ಅದರಲ್ಲಿ ಅವರು ವಿಜ್ಞಾನ, ಕೃಷಿ ಇತ್ಯಾದಿ ಜನೋಪಯೋಗಿ ವಿಷಯಗಳ ಕುರಿತು ಬರೆಯುತ್ತಿದ್ದರು.
ಎಸ್. ವೆಂಕಟರಾಜರು ಸಂಗೀತ ವಿದ್ವಾಂಸರೂ ಆಗಿದ್ದರು. ಅವರ ಗುರು ಮಂಜುನಾಥಯ್ಯ ಉಡುಪಿಯಲ್ಲಿ ಶಾಸ್ತ್ರೀಯ ಸಂಗೀತದ ಆದ್ಯ ಗುರು ಎಂದು ಖ್ಯಾತರು. ವೆಂಕಟರಾಜರು ಹಾಡುಗಾರಿಕೆ, ಕೊಳಲುವಾದನ, ವೀಣೆ, ಹಾರ್ಮೋನಿಯಮ್ ಮತ್ತು ವಯಲಿನ್‌ಗಳನ್ನು ಅವರಿಂದ ಕಲಿತರು. (ಅವರ ಪತ್ನಿ ಮನೋರಮಾ ವೀಣಾವಿದುಷಿಯಾಗಿದ್ದರು). ವೆಂಕಟರಾಜರಿಗೆ ಹಲವು ವಿಷಯಗಳಲ್ಲಿ ಆಸಕ್ತಿಯಿತ್ತು. ಜ್ಯೋತಿಷ್ಯ, ರತ್ನಪರೀಕ್ಷೆ, ಗರಡಿಯಲ್ಲಿ ಅಂಗಸಾಧನೆ ಇತ್ಯಾದಿಗಳಲ್ಲಿ ಪರಿಶ್ರಮ ಇತ್ತು. ಎಲ್ಲದಕ್ಕಿಂತ ಕುತೂಹಲಕರ ಅಂದರೆ ಅವರಿಗೆ ಬೇಟೆಯಲ್ಲಿದ್ದ ಆಸಕ್ತಿ. ಜನರಿಗೆ ತೊಂದರೆ ನೀಡುವ ಹುಲಿ, ಚಿರತೆ, ಕಾಡುಹಂದಿ ಇತ್ಯಾದಿ ಕ್ರೂರ ಪ್ರಾಣಿಗಳ ಬೇಟೆ ಅವರ ಹವ್ಯಾಸವಾಗಿತ್ತು (ಆಗ ಆ ಪ್ರಾಣಿಗಳ ಬೇಟೆಗೆ ನಿಷೇಧ ಇರಲಿಲ್ಲ). ಬ್ರಿಟಿಷ್ ಸರಕಾರ ಏರ್ಪಡಿಸಿದ್ದ ಒಂದು ನರಭಕ್ಷಕ ಹುಲಿಯ ಬೇಟೆಯಲ್ಲಿ ಕೂಡ ಅವರು ಭಾಗವಹಿಸಿದ್ದರು.
ಗುಂಡ್ಮಿ ಚಂದ್ರಶೇಖರ ಐತಾಳರು ತಮ್ಮ `ಸಾಂತ್ಯಾರು ವೆಂಕಟರಾಜ’ (1971) ಪುಸ್ತಕದಲ್ಲಿ, “ನಮ್ಮ ವಿಶ್ವವಿದ್ಯಾನಿಲಯಗಳಾಗಲೀ, ಪ್ರಕಾಶಕರಾಗಲೀ ಅವರಿಂದ ಬೇಟೆಯನ್ನು ಕುರಿತು ಅನುಭವಪೂರ್ಣವಾದ, ಅಧ್ಯಯನ ಪೂರ್ಣವಾದ ಗ್ರಂಥಗಳನ್ನು ಬರೆಸಿದರೆ ಅವು ಕನ್ನಡ ಸಾಹಿತ್ಯದಲ್ಲಿ ವಿರಳವಾದ ಆ ಸಾಹಿತ್ಯ ಪ್ರಕಾರದಲ್ಲಿ ಶ್ರೇಷ್ಠ ಕೃತಿಗಳಾಗಬಲ್ಲವು ಎಂದು ನನಗನಿಸಿತು” ಎಂದು ಹೇಳಿದ್ದಾರೆ.
ವೆಂಕಟರಾಜರು ತಮ್ಮ ಬೇಟೆಯ ಅನುಭವಗಳನ್ನು ನೇರವಾಗಿ ಬರೆದಿಟ್ಟಿಲ್ಲವಾದರೂ, ಕೆಲವು ಕತೆಗಳಲ್ಲಿ ಬಳಸಿಕೊಂಡಿದ್ದಾರೆ. ‘ಜೋಡು ಹುಲಿ’, ‘ಬೇಟೆ’ ಎಂಬ ಕತೆಗಳಲ್ಲಿ ಮತ್ತು ‘ವರಾಹ ಪುರಾಣ’ ಎಂಬ ಲೇಖನದಲ್ಲಿ ವೆಂಕಟರಾಜರು ಹುಲಿ ಮತ್ತು ಹಂದಿಗಳ ವರ್ತನೆ ಮತ್ತು ಬೇಟೆಯ ಅನುಭವಗಳನ್ನು ಹೇಳಿದ್ದಾರೆ.
“ಕಸ್ತೂರಿ” ಪತ್ರಿಕೆಯ ಸಂಪಾದಕರಾಗಿದ್ದ ಪಾ. ವೆಂ. ಆಚಾರ್ಯರು ಮತ್ತು ಅವರ ಮನೆಯಲ್ಲಿ ಒಮ್ಮೆ ಉಳಿದುಕೊಂಡಿದ್ದ ಜಿ. ಎಸ್. ಶಿವರುದ್ರಪ್ಪನವರು ಅವರಿಗೆ ತಮ್ಮ ಬೇಟೆಯ ಅನುಭವಗಳನ್ನು ಬರೆದು ಕನ್ನಡದ ಮೃಗಯಾ ಸಾಹಿತ್ಯವನ್ನು ಶ್ರೀಮಂತಗೊಳಿಸಬೇಕೆಂದು ಒತ್ತಾಯಿಸಿದ್ದರು. ಅವರು ವೆಂಕಟರಾಜರಿಗೆ ಹೀಗೆ ಬರೆದಿದ್ದರು : “ನೀವು ಆ ರಾತ್ರಿ ಹೇಳಿದಿರಲ್ಲ, ನಿಮ್ಮ ಹುಲಿ ಶಿಕಾರಿಯ ವಿವರ – ಅಂಥ ಹಲವು ಅನುಭವಗಳನ್ನು ನೀವು ಗದ್ಯ ಚಿತ್ರಗಳಾಗಿ ಏಕೆ ಬರೆಯಬಾರದು? ಅಂತ ಅನುಭವವಿರುವವರು ಬರೆದರೆ ಅದಕ್ಕೆ ಮಹತ್ವ ಬರುವುದಲ್ಲವೆ?” (ಪತ್ರ 22.1.1967)
ವೆಂಕಟರಾಜರ ಗೆಳೆಯ, ಪಾ. ವೆಂ. ಒಂದು ಪತ್ರದಲ್ಲಿ ಹೀಗೆ ಬರೆದಿದ್ದಾರೆ : “ಹಿಂದೊಮ್ಮೆ ನಾವು ಮಾತಾಡುತ್ತಿದ್ದಾಗ್ಗೆ ನಿಮ್ಮ ಬೇಟೆಯ ಅನುಭವಗಳನ್ನು ಹೇಳಿದಿರಿ. Corbett ನ ಪುಸ್ತಕಗಳ ಪರಿಚಯವೂ ನಿಮಗಿದೆ. ಆ ಮಾದರಿಯಲ್ಲೆ ನಿಮ್ಮ ಅನುಭವಗಳಲ್ಲಿ ಉತ್ತಮವಾದ ಒಂದನ್ನು ನಮಗೆ ಬರೆದು ಕಳಿಸುವಿರಾ? ಮಿತಿ 2000 ಶಬ್ದಗಳೊಳಗೆ ಇದ್ದರೆ ಸಾಕು. ನಿಮ್ಮ ಪರಿಶ್ರಮಕ್ಕೆ ತಕ್ಕ ಹಾಗಲ್ಲದಿದ್ದರೂ ಯಥಾಶಕ್ತಿಯೆಂದು ರೂ. 25 ಪಾರಿಶ್ರಮಿಕ ಕೊಡುತ್ತೇವೆ. ಆದಷ್ಟು ಬೇಗ ಲೇಖನ ಕಳಿಸುವಿರಾಗಿ ನಂಬಿದ್ದೇನೆ. ನಿಮ್ಮ ಉತ್ತರಕ್ಕಾಗಿ ಒಂದು ಕಾರ್ಡು ಇದೆ.” (ಪತ್ರ 8.6.1965).
ಉಡುಪಿಗೆ ಬರುತ್ತಿದ್ದ ಸಾಹಿತಿಗಳನ್ನೆಲ್ಲ ಅವರು ತಮ್ಮ ಮನೆಯಲ್ಲಿಯೇ ಉಳಿಸಿಕೊಂಡು ಆತಿಥ್ಯ ನೀಡುತ್ತಿದ್ದರು. ಒಮ್ಮೆ ಕೊಡಗಿನ ಖ್ಯಾತ ಕಾದಂಬರಿಕಾರರು ಯಾವುದೋ ಕಾರ್ಯಾರ್ಥವಾಗಿ ಅವರ ಮನೆಗೆ ಬಂದು ಉಳಿದುಕೊಂಡಿದ್ದರು. ಬಂದ ಉದ್ದೇಶವನ್ನು ವೆಂಕಟರಾಜರು ಕೇಳಿರಲಿಲ್ಲ. ಅವರು ಎಲ್ಲಿಗೋ ಹೋಗಿ ಸಂಜೆ ಹಿಂದಿರುಗಿದಾಗ ಅವರ ಮುಖದಲ್ಲಿ ಹತಾಶ ಮನೋಭಾವವಿದ್ದುದನ್ನು ಕಂಡು ವೆಂಕಟರಾಜರು ಮೆಲು ಮಾತಿನಲ್ಲಿ, ‘ನನ್ನಿಂದ ಏನಾದರೂ ಸಹಾಯ ಬೇಕಿದ್ದರೆ ಹೇಳಿʼ ಎಂದರು. ಆಗ ಅತಿಥಿಗಳು ತಾವು ಮಣಿಪಾಲಕ್ಕೆ ಹೋಗಿ ಕೆ.ಕೆ. ಪೈಗಳನ್ನು ಯಾವುದೋ ಕೆಲಸಕ್ಕಾಗಿ ಭೇಟಿಯಾಗಬೇಕಿತ್ತು, ಆದರೆ ಕೆಲಸ ಕೈಗೂಡಲಿಲ್ಲ ಎಂದರು. ವೆಂಕಟರಾಜರು, “ಅಯ್ಯೋ, ಅದನ್ನು ನನಗೆ ಮೊದಲೇ ಹೇಳಿದ್ದರೆ ನಾನು ಸಹಾಯ ಮಾಡುತ್ತಿದ್ದೆನಲ್ಲ! ನಾಳೆ ಪೈಯವರಿಗೆ ನಾನೊಂದು ಪತ್ರ ಕೊಡುತ್ತೇನೆ. ನಿಮ್ಮ ಕೆಲಸ ಆಗುತ್ತದೆ” ಎಂದರು. ಅದರಂತೆ ಅವರು ಕೊಟ್ಟ ಪತ್ರದಿಂದ ಅವರ ಕಾರ್ಯ ಸಾಧಿತವಾಯಿತು.
ಎಸ್. ವೆಂಕಟರಾಜರಿಗೆ ಸಾಂತ್ಯಾರಿನಲ್ಲಿ ನೂರಾರು ಎಕರೆ ಕೃಷಿ ಭೂಮಿಯೂ, ಅರಮನೆಯಂತಹ ಮನೆಯೂ ಇತ್ತು. ಅವರ ಅಣ್ಣ ಕೃಷ್ಣರಾಜರು ಇಂಜಿನಿಯರಿಂಗ್ ಕಲಿತು ಮಿಲಿಟರಿಗೆ ಸೇರಿದ್ದ ಕಾರಣ ವೆಂಕಟರಾಜರೇ ಕೃಷಿಯನ್ನು ನೋಡಿಕೊಳ್ಳಬೇಕಾಗಿತ್ತು. ಅವರ ತಂದೆ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದುದರಿಂದ ಕೃಷಿಯಲ್ಲಿ ಆಸಕ್ತರಾಗಿರಲಿಲ್ಲ.
ಸಾಂತ್ಯಾರಿನ ದೊಡ್ಡ ಹಿಡುವಳಿ ಅವರ ಕುಟುಂಬಕ್ಕೆ ಬಾರಕೂರಿನ ರಾಜಪ್ರತಿನಿಧಿಯು ಇನಾಮು ಕೊಟ್ಟದ್ದಾಗಿತ್ತು. ಕ್ಷಾತ್ರ ಗುಣದ ಬ್ರಾಹ್ಮಣರಾದ ಇವರ ಪೂರ್ವಜರು ಒಮ್ಮೆ ಶತ್ರು ದಾಳಿಯ ಸಂದರ್ಭದಲ್ಲಿ ರಾಜಪರಿವಾರದ ಹೆಣ್ಣುಮಕ್ಕಳನ್ನು ಮನೆಯ ಒಳಗೆ ರಕ್ಷಿಸಿ, ಶತ್ರುಗಳು ಮನೆಯೊಳಗೆ ಹುಡುಕಾಟ ನಡೆಸಲು ಮುಂದಾದಾಗ ಖಡ್ಗ ಹಿರಿದು ಅಡ್ಡ ನಿಂತು. ತಮ್ಮ ಮನೆಗೆ ಹೋಗುವವರು ತಮ್ಮನ್ನು ಕೊಂದು ಹೋಗಬೇಕೆಂದು ಹೇಳಿ ಹೆಂಗಸರನ್ನು ರಕ್ಷಿಸಿದ್ದರಂತೆ. ನಂತರ ಆ ರಾಜ್ಯಪಾಲ ಶತ್ರುಗಳನ್ನು ಸೋಲಿಸಿ ಆಡಳಿತವನ್ನು ಹಿಡಿದಾಗ ಈ ಕುಟುಂಬಕ್ಕೆ ಒಂದು ಸಾವಿರ ಮುಡಿ ಆಸ್ತಿಯನ್ನು ಉತ್ತಾರ ಬಿಟ್ಟನಂತೆ.
ವಿದ್ಯಾಭ್ಯಾಸ ಮುಗಿದ ಮೇಲೆ ವೆಂಕಟರಾಜರು ಹಳ್ಳಿಗೆ ಹಿಂದಿರುಗಿ ಕೃಷಿ ಮಾಡಿಸುತ್ತಾ, ಉಡುಪಿಯಲ್ಲಿ ಒಂದು ಅಕ್ಕಿ ಮಂಡಿಯನ್ನು ಪ್ರಾರಂಭಿಸಿದರು. ವ್ಯವಹಾರ ನಿಮಿತ್ತವಾಗಿ ಜಿಲ್ಲೆಯಾದ್ಯಂತ ಓಡಾಡುತ್ತಿದ್ದರು.
ವಿವಾಹ – ಸಂಸಾರ
ವೆಂಕಟರಾಜರು 1943 ರಲ್ಲಿ ಮಂಗಳೂರು ಮೂಲದ, ಆಗ ಎರ್ನಾಕುಲಂನಲ್ಲಿದ್ದ ಬ್ರಿಟಿಷ್ ಮಿಲಿಟರಿಯ ವೈದ್ಯಾಧಿಕಾರಿ ಡಾ. ಬಾಳೆಬೈಲು ಗೋಪಾಲಕೃಷ್ಣ ಆಚಾರ್ಯರ ಮಗಳು ಮನೋರಮಾ ಅವರನ್ನು ಮದುವೆಯಾದರು. ಪೇಜಾವರ ಸದಾಶಿವರಾಯರಿಗೆ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಸಹಾಯ ಮಾಡಿದ್ದ ಮತ್ತು ಎಲ್ಲಾ ಕನ್ನಡಿಗರಿಗೆ ಸಹಾಯ ಮಾಡುತ್ತಿದ್ದ, ಕಾಶಿಯ ಕನ್ನಡ ಸಂಘವನ್ನು ಕಟ್ಟಿದ್ದ ವಿಶ್ವವಿಖ್ಯಾತ ಭೌತಶಾಸ್ತ್ರ ಪ್ರೊಫೆಸರ್ ಡಾ. ಬಾಳೆಬೈಲು ದಾಸಣ್ಣಾಚಾರ್ಯರು ಮನೋರಮಾ ಅವರ ಚಿಕ್ಕಪ್ಪ. ದಾಸಣ್ಣಾಚಾರ್ಯರು ಇಂಗ್ಲೆಂಡ್, ಜರ್ಮನಿ, ಅಮೇರಿಕಾ ಮುಂತಾದೆಡೆಗಳಲ್ಲಿ ನೋಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿಗಳೊಡನೆ ಕೆಲಸ ಮಾಡಿದವರು ಮತ್ತು ಮ್ಯೂನಿಕ್ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ. ಮಾಡಿದವರು. ವೆಂಕಟರಾಜರ ಅಣ್ಣ ಕೃಷ್ಣರಾಜರಿಗೆ ಕೂಡ ಬನಾರಸಿನಲ್ಲಿ ಇಂಜಿನಿಯರಿಂಗ್ ಕಲಿಯಲು ದಾಸಣ್ಣಾಚಾರ್ಯರು ಸಹಾಯ ಮಾಡಿದ್ದರು.
ಈ ದಂಪತಿಗಳಿಗೆ ಐವರು ಮಕ್ಕಳು: ಜಯಂತರಾಜ (ಬ್ಯಾಂಕ್ ಅಧಿಕಾರಿಯಾಗಿದ್ದರು; ಎಂ.ಜಿ.ಎಂ. ಕಾಲೇಜಿನಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿ ನಿವೃತ್ತರಾಗಿರುವ ಪ್ರೊ. ಪುಷ್ಪಲತಾ ಸಾಂತ್ಯಾರ್ ಇವರ ಪತ್ನಿ), ವಸಂತರಾಜ (ಇಂಜಿನಿಯರ್ ಆಗಿದ್ದರು, ನಿವೃತ್ತರಾಗಿ ಮೈಸೂರಿನಲ್ಲಿ ನೆಲೆಸಿದ್ದಾರೆ), ಮಧುರಂಜಿನಿ (ಈಗ ಅಮೇರಿಕದಲ್ಲಿದ್ದಾರೆ), ಪದ್ಮಿನಿ (ಈಗ ಕೆನಡದಲ್ಲಿದ್ದಾರೆ), ಮತ್ತು ಹೇಮನಳಿನಿ (ಈಗ ಅಮೇರಿಕದಲ್ಲಿದ್ದಾರೆ). ವೆಂಕಟರಾಜರು 1988 ರಲ್ಲಿ ನಿಧನರಾದರೆ, ಮನೋರಮಾ ಅವರು 2017 ರಲ್ಲಿ ನಿಧನರಾದರು.
ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವೆಂಕಟರಾಜರು ಉಡುಪಿಯ ರಾಜಬೀದಿಯಲ್ಲಿ 1953 ರಲ್ಲಿ ದೊಡ್ಡಮನೆಯನ್ನು ಖರೀದಿಸಿ ಅಲ್ಲಿ ನೆಲೆಸಿದ್ದರು. ಹಲವು ವರ್ಷಗಳ ಕಾಲ ಉಡುಪಿಗೆ ಬರುವ ಸಾಹಿತಿಗಳಿಗೆಲ್ಲ ಅವರು ವಿಶಾಲವಾಗಿದ್ದ ಈ ಮನೆಯಲ್ಲಿ ಆತಿಥ್ಯವನ್ನು ನೀಡುತ್ತಿದ್ದರು. ಅವರಿಗಿಂತ ಮುಂಚೆ ಈ ಜವಾಬ್ದಾರಿಯನ್ನು ಕಡೆಕಾರು ರಾಜಗೋಪಾಲಕೃಷ್ಣರಾಯರು ನಿರ್ವಹಿಸಿದರೆ, ಅವರ ನಂತರ ಕು.ಶಿ. ಹರಿದಾಸ ಭಟ್ಟರು ನಿರ್ವಹಿಸಿದ್ದರು.
ವೆಂಕಟರಾಜರು ನಿಧನರಾಗಿ, ಮಕ್ಕಳೆಲ್ಲ ವಿವಾಹ, ಉದ್ಯೋಗ ಎಂದು ಪರವೂರುಗಳಿಗೆ ಹೋದ ಕಾರಣ ಮನೋರಮಾ ಅವರು ದೊಡ್ಡ ಮನೆಯನ್ನು ಮಾರಿ, ಎಂ.ಜಿ.ಎಂ. ಕಾಲೇಜಿನ ಸಮೀಪ ಪಣಿಯಾಡಿಯಲ್ಲಿ ಒಂದು ಸಣ್ಣ ಮನೆಯನ್ನು ಖರೀದಿಸಿ ಅಲ್ಲಿ ವಾಸವಾಗಿದ್ದರು.
ವೆಂಕಟರಾಜರ ಕಾವ್ಯ
ವೆಂಕಟರಾಜರು ಪತ್ರಿಕೆಗಳಲ್ಲಿ 1930 ರಿಂದ (ತಮ್ಮ 17 ನೆಯ ವರ್ಷದಿಂದ) ನಿರಂತರವಾಗಿ ಕವಿತೆಗಳನ್ನು ಪ್ರಕಟಿಸುತ್ತಾ ಬಂದಿದ್ದರು. ಅವರ ಕಾವ್ಯದಲ್ಲಿ ಅವರ ಬದುಕಿನ ನಾಲ್ಕು ಕಾಲಘಟ್ಟದಲ್ಲಿ ನಾಲ್ಕು ಬಗೆಯ ವಸ್ತುಗಳಿಗೆ ಪ್ರಾಮುಖ್ಯ ಸಿಕ್ಕಿರುವುದನ್ನು ಅಥವಾ ವಸ್ತುವಿನ ಪರಿಶೀಲನೆಯ ಕ್ರಮದಲ್ಲಿ ಆಗಿರುವ ಬದಲಾವಣೆಯನ್ನು ಕಾಣಬಹುದು.
ಒಂದು: ಅವರ ಕವಿತೆಗಳ ಮೊದಲನೆಯ ಸಂಕಲನ 1947 ರಷ್ಟು ತಡವಾಗಿ ಬಂತು. ‘ಕವಿತಾ ಕಾಮಿನಿ – ಭಾಗ 1’ ಎಂಬ ಈ ಸಂಕಲನದಲ್ಲಿ 75 ಕವನಗಳಿವೆ ಎಂದರೆ ಇದರ ಗಾತ್ರವನ್ನು ಊಹಿಸಬಹುದು. ಇದು ನವೋದಯದ ರಮ್ಯ ಅಥವಾ ರೋಮ್ಯಾಂಟಿಕ್ ಮಾದರಿಯ ಕವಿತೆಗಳ ಸಂಕಲನ. ಪ್ರಕೃತಿ, ಗ್ರಾಮಜೀವನದ ಸೊಗಸು, ಹಲವು ಬಗೆಯ ಸರಳ ಜೀವನದ ಉದಾರ ಮಾನವತಾವಾದಿ ಆದರ್ಶಗಳು ಅದರಲ್ಲಿವೆ.
ಆ ಬಗೆಯ ಇನ್ನೂ ಹಲವು ಕವನಗಳನ್ನು ಆ ವೇಳೆಗಾಗಲೇ ವೆಂಕಟರಾಜರು ಬರೆದಿದ್ದು, ಅವೆಲ್ಲವನ್ನೂ ಮೊದಲ ಸಂಕಲನದಲ್ಲಿ ಸೇರಿಸಲಾಗದೆ, ‘ಕವಿತಾ ಕಾಮಿನಿ: ಭಾಗ 2’ ರಲ್ಲಿ ಮುದ್ರಿಸುವುದೆಂದು ತೀರ್ಮಾನಿಸಲಾಗಿತ್ತು. ಅದನ್ನು ಮುದ್ರಿಸುವುದು ಆಗಲೇ ಖಚಿತವಾಗಿದ್ದುದರಿಂದ 1947 ರ ಪುಸ್ತಕಕ್ಕೆ ‘ಭಾಗ: 1’ ಅಂತ ಸೂಚಿಸಲಾಗಿತ್ತು. ಎರಡನೆಯ ಪುಸ್ತಕ ಹತ್ತು ವರ್ಷ ತಡೆದು 1957ರಲ್ಲಿ ಹೊರಬಂತು.
ಎರಡು: ಈ ನಡುವೆ ಅವರ ಕಾವ್ಯದ ಎರಡನೆಯ ಘಟ್ಟ, ಅಂದರೆ ಭಾವುಕ ಆದರ್ಶದ ಘಟ್ಟ ಮುಗಿದು ಗಂಡು ಹೆಣ್ಣಿನ ಸಂಬಂಧ, ಅದರ ಶೃಂಗಾರ ಮತ್ತು ತಾತ್ತ್ವಿಕ ನೆಲೆಗಳನ್ನು ಅನ್ವೇಷಿಸಲು ಅವರು ತೊಡಗಿದ್ದರು. ಈ ಘಟ್ಟ, ಅವರ ವಿವಾಹದ ನಂತರ ಮತ್ತು ಪಟೇಲರಾಗಿ ಕಾರ್ಯ ನಿರ್ವಹಿಸಲಾರಂಭಿಸಿದ ಪ್ರಾರಂಭದ ಘಟ್ಟ. ಸುಮಾರು 1940 ರಿಂದ 1960 ರವರೆಗಿನ ಎರಡು ದಶಕಗಳು ವೆಂಕಟರಾಜರ ನವೋದಯ ಕಾವ್ಯದ ಎರಡನೆಯ ಘಟ್ಟ ಎಂದು ಗುರುತಿಸಬಹುದು. ಹಾಗಾಗಿ ‘ಕವಿತಾ ಕಾಮಿನಿ : ಭಾಗ 2’ರಲ್ಲಿ ಮೊದಲನೆಯ ಹಾಗೂ ಎರಡನೆಯ ಘಟ್ಟದ ಕವಿತೆಗಳು ಸೇರಿವೆ. ಎರಡನೆಯ ಘಟ್ಟದ ಕವಿತೆಗಳಲ್ಲಿ ಉಳಿದವು ಮುಂದಿನ ಸಂಕಲನದಲ್ಲಿ ಸೇರಿವೆ.
ಈ ಎರಡು ಕವನ ಸಂಕಲನಗಳು ನವೋದಯದ ಎರಡು ಮುಖ್ಯ ಕವನ ಸಂಕಲನಗಳು. ಇವುಗಳಲ್ಲಿ ನವೋದಯದ ಎಲ್ಲ ವೈಶಿಷ್ಟ್ಯಗಳನ್ನು ಕಾಣಬಹುದು. ಕವಿಯ ಸ್ವಂತಿಕೆ ಎಂದರೆ ಪ್ರೇಮವನ್ನು ಭಕ್ತಿಯಂತಹ ಒಂದು ಆತ್ಮಶಕ್ತಿಯ ತುಡಿತವನ್ನಾಗಿ ಕಂಡು ಬದುಕಿನಲ್ಲಿ ಅದರ ಮಹತ್ವವನ್ನು ಅನ್ವೇಷಿಸಿರುವುದು.
ಮೂರು: ಅವರು 1960 ರ ನಂತರ, ಪಟೇಲರಾಗಿ ಒಂದು ದಶಕದ ಸೇವೆ ಸಲ್ಲಿಸಿದ ನಂತರ ಪ್ರಬುದ್ಧ ಗ್ರಾಮಾಧಿಕಾರಿಯಾಗಿ; ರಾಜಕೀಯ ಮತ್ತು ನೌಕರಶಾಹಿಯ ಜತೆಗಿನ ಕಹಿ ಅನುಭವಗಳಿಂದ ಸಾಮಾಜಿಕ ನೆಲೆಯಲ್ಲಿ ಅನ್ಯಾಯಗಳನ್ನು ಖಂಡಿಸುತ್ತ ಸಮಾಜಪರವಾದ ಕವಿತೆಗಳನ್ನು ಬರೆದರು. ಜತೆಗೆ ಸಮಾಜ ಶಿಕ್ಷಣಕ್ಕಾಗಿ 1963 ರಲ್ಲಿ ತಾವೇ ಸಂಪಾದಕ, ಪ್ರಕಾಶಕನಾಗಿ ‘ವೀರಭೂಮಿ’ ಮಾಸಿಕವನ್ನು ಪ್ರಾರಂಭಿಸಿದರು. ಹೀಗಾಗಿ ಕವಿ ಈಗ ಮೂರು ಗ್ರಾಮಗಳ ಪಟೇಲರಾಗಿ ಗ್ರಾಮಾಭಿವೃದ್ಧಿಯಲ್ಲಿ ತೊಡಗಿಸಿಕೊಂಡ ಅರೆಸರಕಾರಿ ಗ್ರಾಮಾಧಿಕಾರಿಯಾಗಿದ್ದರು. ದೇಶದ ಆಗುಹೋಗುಗಳನ್ನು ಗಮನಿಸುತ್ತ ವ್ಯಾಖ್ಯಾನಿಸಿ ಜನಶಿಕ್ಷಣ ನೀಡುತ್ತಿದ್ದ ಪತ್ರಿಕಾಸಂಪಾದಕರಾಗಿದ್ದರು.
ಆಗ ಅವರು ಬರೆದ ಕವಿತೆಗಳು ಮೂರು ಸಂಕಲನಗಳಲ್ಲಿ ಸೇರಿವೆ. ಅವು, ‘ಮಾನಸಗಂಗೆ’ (1960), ‘ಪದ್ಮಸರೋವರ’ (1967) ಮತ್ತು ‘ಮಾನಸಪುಷ್ಪ’ (1967). ಇವುಗಳಲ್ಲಿ ‘ಮಾನಸಗಂಗೆ’ (1960) ಕವನಸಂಕಲನಕ್ಕೆ ರಾಜ್ಯಪ್ರಶಸ್ತಿ ಸಿಕ್ಕಿತ್ತು. ಅನುಭವ ಪಕ್ವತೆಯಿಂದ ಹೊಸ ಸಂವೇದನೆಯಿಂದ, ಅಂದರೆ ರಾಜಕೀಯ ಪ್ರಜ್ಞೆಯಿಂದ ಸಮಾಜವನ್ನು ಗಮನಿಸಿ ಕವಿತೆಗಳನ್ನು ಬರೆದರು.
ಅವರ ಕಾವ್ಯದ ಈ ಜನಪರ ಬದಲಾವಣೆ ಗುರುತಿಸುವಂತಿತ್ತು. ಅವರ ಮಿತ್ರ ಪಾ.ವೆಂ. ಆಚಾರ್ಯರು 3.1.1968 ರಲ್ಲಿ ಅವರಿಗೆ ಬರೆದ ಪತ್ರದಲ್ಲಿ, “ನೀವು ನನ್ನ ಹಾಗೆ angry young (or old) man ಆಗುತ್ತಿದ್ದೀರಲ್ಲಾ!” ಎಂದು ಕಿಚಾಯಿಸಿದ್ದರು.
ಅವರ ವಿಡಂಬನಾತ್ಮಕ ಚೌಪದಿಗಳು ಅವರ ಪತ್ರಿಕೋದ್ಯಮದ (1963-70) ಮನೋಭಾವಕ್ಕೆ ಸಹಸ್ಪಂದಿಯಾಗಿ ಹುಟ್ಟಿಕೊಂಡವುಗಳು. ಹಾಗೂ ‘ವೀರಭೂಮಿ’ ಪತ್ರಿಕೆಯಲ್ಲಿ ಗ್ಯಾಪ್ ಫಿಲ್ಲರ್‌ಗಳಾಗಿ ಬಳಕೆಯಾಗುತ್ತಿದ್ದವುಗಳು. 1979 ರಲ್ಲಿ ‘ಚಿಂತಾಮಣಿ’ ಎಂಬ ಪುಸ್ತಕದಲ್ಲಿ ಅವುಗಳನ್ನು ಪ್ರಕಟಿಸಿದ್ದಾರೆ. ಆದರೆ ಅವುಗಳ ರಚನೆಯಾದುದು 1970 ರ ಮೊದಲು; ಹಾಗಾಗಿ ಇದೇ ಕಾಲಘಟ್ಟಕ್ಕೆ ಸೇರಿಸಬಹುದು.
ನಾಲ್ಕು: 1970 ರಲ್ಲಿ ಅವರ ನಿವೃತ್ತಿ ಮತ್ತು ಪತ್ರಿಕೆಯನ್ನು ನಿಲ್ಲಿಸಿದ ನಂತರ ಅವರ ನಾಲ್ಕನೆಯ ಘಟ್ಟದ ಕಾವ್ಯ ರಚನೆ ಬಂದಿದೆ. ಈ ಕಾಲದಲ್ಲಿ ಅವರು ಪಟೇಲಿಕೆಯ ಅಧಿಕಾರವಿಲ್ಲದೆ ಕೃಷಿಕ – ಜಮೀನುದಾರರಾಗಿ ಸಾಮಾನ್ಯ ಜನರ ನಡುವೆ ಜನಸಾಮಾನ್ಯನಂತೆ ಬದುಕಿದ್ದರು. ಅವರ ಬದುಕಿನಲ್ಲಿ ಈ ಕಾಲಘಟ್ಟದಲ್ಲಿ ನಡೆದ ಒಂದು ಉಲ್ಲೇಖಾರ್ಹ ಘಟನೆ ಎಂದರೆ ಅವರ ಪೂರ್ವಾಶ್ರಮದ ಸಂಬಂಧಿಕರಾಗಿದ್ದ ಉಡುಪಿಯ ಕೃಷ್ಣಾಪುರ ಮಠದ ಸ್ವಾಮೀಜಿಯವರು ತಮ್ಮ ಪರ್ಯಾಯದ ಅವಧಿಯಲ್ಲಿ (1974-76) ಅವರನ್ನು ಶ್ರೀಕೃಷ್ಣ ಮಠದ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುವಂತೆ ಕೇಳಿಕೊಂಡದ್ದು. ಅವರು ಯಾವುದೇ ಸಂಭಾವನೆ ಪಡೆಯದೆ ಉಚಿತವಾಗಿ ಸೇವೆ ಸಲ್ಲಿಸಿದರು ಮತ್ತು ಈ ಕಾಲಾವಧಿಯಲ್ಲಿ ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು.
ಈಗ ಅವರು ಸ್ವಾರ್ಥ ರಾಜಕೀಯವನ್ನು ಮತ್ತು ಭ್ರಷ್ಟಾಚಾರವನ್ನು ಸಿಟ್ಟಿಲ್ಲದೆ, ಲಘುತ್ವದಿಂದ ಟೀಕಿಸುತ್ತ ನೋಡತೊಡಗಿದರು. ‘ಕೆಂಪು ಟೊಪ್ಪಿಯವರು’ ಮುಂತಾದ ಕಥಾಪ್ರಸಂಗಗಳಲ್ಲಿ ಈ ಹಾಸ್ಯಪ್ರಜ್ಞೆಯ ಟೀಕೆ ಸ್ಪಷ್ಟವಾಗಿ ಗೋಚರವಾಗುತ್ತದೆ. ಜತೆಗೆ ಸಮಾಜಕ್ಕೆ ಮಾದರಿಯನ್ನು ಕೊಡುವ ಮೂಲಕ ದೌಷ್ಟ್ಯವನ್ನು ಹಿನ್ನೆಲೆಗೆ ತಳ್ಳುವ ಕ್ರಮವನ್ನು ಅವರು ಅನುಸರಿಸಿದರು. ಬುದ್ಧ ಮುಂತಾದ ಧರ್ಮಬೋಧಕರು, ಕವಿಗಳು, ನಿಸ್ವಾರ್ಥ ಮುಂದಾಳುಗಳ ಬಗ್ಗೆ ಕವಿತೆಗಳನ್ನು ಬರೆದರು. ಪ್ರಕೃತಿ, ಸಮಾಜ ಮತ್ತು ಸ್ವಲ್ಪ ಮಟ್ಟಿಗೆ ದೈವಿಕ ಶಕ್ತಿ ಇವುಗಳು ಮನುಷ್ಯನ ಬದುಕನ್ನು ಕಟ್ಟುವ ಪರಿಯನ್ನು ಅವರು ಸೂಕ್ಷ್ಮವಾಗಿ ಅವಲೋಕಿಸಿ ಕವಿತೆಗಳನ್ನು ಕಟ್ಟಿದರು. ಈ ಕಾಲಘಟ್ಟದಲ್ಲಿ ಮತ್ತೆ ಹೊಸ ಬಗೆಯ ಭಾವಗೀತೆಗಳನ್ನು ಬರೆದರು. ಅವುಗಳು ಪತ್ರಿಕೆಗಳಲ್ಲಿ ಪ್ರಕಟಿತವಾಗಿವೆ; ಅವುಗಳನ್ನು ಎರಡು ಸಂಕಲನಗಳಲ್ಲಿ ಮುದ್ರಿಸಲು ಶೀರ್ಷಿಕೆ ಸಹಿತ ಹಸ್ತಪ್ರತಿಗಳನ್ನು ಅವರು ಸಿದ್ಧಪಡಿಸಿಟ್ಟಿದ್ದರು (ಅವುಗಳ ಜೆರಾಕ್ಸ್ ಪ್ರತಿಗಳು ಈ ಲೇಖಕನ ಬಳಿ ಇವೆ).
ವೆಂಕಟರಾಜರು 320 ರಷ್ಟು ಬಿಡಿ ಕವಿತೆಗಳನ್ನು, ಕಾವ್ಯಮನೋರಮಾ ಎಂಬ ಉಭಯಭಾಷಾ ಶೃಂಗಾರ ಶತಕಗಳನ್ನು (101+101), ‘ಚಿಂತಾಮಣಿ’ಯಲ್ಲಿ 202 ಚೌಪದಿಗಳನ್ನು ಬರೆದಿದ್ದಾರೆ.
ವೆಂಕಟರಾಜರ ಕಾವ್ಯ ಕೃತಿಗಳನ್ನು ಮೇಲೆ ವಿವರಿಸಿದಂತೆ ನಾಲ್ಕು ಕಾಲಘಟ್ಟಗಳಾಗಿ ವಿಭಾಗಿಸಿ ಪರಿಚಯಿಸಿಕೊಳ್ಳೋಣ:
ಮೊದಲನೆಯ ಘಟ್ಟ: ನವೋದಯದ ರಮ್ಯಪಂಥ
1.ಕವಿತಾ ಕಾಮಿನಿ [ಭಾಗ : 1] ಕಿರಿಯರ ಪ್ರಪಂಚ ಉಡುಪಿ : 1947
ಹದಿನಾರು – ಹದಿನೇಳರ ಹರೆಯದಲ್ಲಿ ಕವಿತೆಗಳನ್ನು ಬರೆಯಲು ಪ್ರಾರಂಭಿಸಿದ ವೆಂಕಟರಾಜರು ಪ್ರಾರಂಭದಲ್ಲಿ ನವೋದಯದ ರಮ್ಯ ಪಂಥದ ಕವಿಯಾಗಿದ್ದರು. ಹಕ್ಕಿ, ಹೂವು, ಮುಗುದೆ, ಗೊಲ್ಲ, ಹಳ್ಳಿಗ ಮುಂತಾದವರನ್ನು ಉದ್ದೇಶಿಸಿ, ಅವರ ಜೀವನದ ಸೊಗಸನ್ನು ವರ್ಣಿಸುವ ಹಲವು ಕವನಗಳನ್ನು ಈ ಸಂಕಲನದಲ್ಲಿ ನೀಡಿದ್ದಾರೆ. ಅವರಿಗೆ ಮಾದರಿಯಾಗಿದ್ದುದು ಇಂಗ್ಲಿಷ್ ರಮ್ಯ ಪಂಥದ ವರ್ಡ್ಸ್‌ವರ್ಥ್, ಶೆಲ್ಲಿ ಮತ್ತು ಕೀಟ್ಸ್ ಎಂದು ಊಹಿಸಬಹುದು. ಈ ಕವಿಗಳ ಕವಿತೆಗಳಿಗೂ ವೆಂಕಟರಾಜರ ಈ ಸಂಕಲನದ ಹಲವು ಕವಿತೆಗಳಿಗೂ ವಸ್ತು ಸಾಮ್ಯತೆ ಮತ್ತು ಮನೋಭಾವ ಸಾಮ್ಯತೆಗಳಿವೆ. ವೆಂಕಟರಾಜರ ರಮ್ಯ ಪಂಥದ ಕವಿತೆಗಳೆಂದು ಗುರುತಿಸಬಹುದಾದ ಕೆಲವು ಕವಿತೆಗಳೆಂದರೆ, ‘ಹಕ್ಕಿ’, ‘ಗೊಲ್ಲರ ಹಾಡು’, ‘ಹಳ್ಳಿಗನ ಹಾಡು’, ‘ಅವನಾರೆ ಸಖಿ’, ‘ವಿರಹ’, ‘ಭಿಕ್ಷುಕ’, ‘ಮರಿದುಂಬಿಗೆ’, ‘ಕೋಗಿಲೆ’, ‘ಪಶ್ಚಾತಾಪ’, ‘ಸಮಾಗಮ’, ‘ತೀರದಾಸೆ’, ‘ಜೀವನ ಸಂಗೀತ’ ಇತ್ಯಾದಿ. ‘ಹಕ್ಕಿಗೆ’ ಕವನದ ಶೀರ್ಷಿಕೆಯಲ್ಲದೆ ಭಾವೋತ್ಕರ್ಷವೂ ಕೂಡ ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳ ಮಾದರಿಯಲ್ಲಿದೆ [ಉದಾ To a Skylark – ಶೆಲ್ಲಿ ; To the skylark – ವರ್ಡ್ಸ್‌ವರ್ಥ್].
ಧರೆಯ ಪಾಪದಿರವನರಿದು
ಗಗನಕೇರುತದನು ತೊರೆದು
ಕಿರಿಯ ಚಂಚು ಪುಟವನೆತ್ತಿ
ಹಾಡುತಿರಲು ಸುತ್ತಿ ಸುತ್ತಿ
……
ಗಾನದಿಂದೆ ತಿರೆಯನಿಂದು ಮರುಳುಗೊಳಿಸುವೆ !
ಬೇನೆಗೊಂಡು ಕೊರಗುವೆದೆಯನೈದೆ ತಣಿಸುವೆ !
‘ಕವಿತಾ ಕಾಮಿನಿ’ಯ ಕವಿತೆಗಳಲ್ಲಿ ಕವಿಯ ಭಾವ ಶ್ರೀಮಂತಿಕೆ, ಕಲ್ಪನಾ ಸಾಮರ್ಥ್ಯ, ರೂಪಕ ಶಕ್ತಿ ಮತ್ತು ಶಬ್ದ ಶ್ರೀಮಂತಿಕೆಗಳು ಕಂಡುಬರುತ್ತವೆ. ಪ್ರಾರಂಭದ ಕವಿತೆಗಳು ಹಳೆಗನ್ನಡದ ಛಾಯೆಯಲ್ಲಿವೆ; ಸಂಸ್ಕೃತ ಭೂಯಿಷ್ಟವಾಗಿವೆ. ಅವರ ಪ್ರಾರಂಭಿಕ ರಚನೆಗಳಲ್ಲಿ ಒಂದಾದ ‘ಅಂಜಲಿ’ಯ ಸಾಲುಗಳಿವು:
1
ತಳೆದು ನೀರನು ತನ್ನ ತೆರೆಗೈಗಳಿಂದಲಾ
ಪೊಳೆಗಳೆರೆಯನು ನಿನ್ನ ಪಾದ ತಳಮಂ
ತೊಳೆಯುತತಿ ಭಕ್ತಿಯಿಂದನುದಿನಂ ಸೀಕರಂ
ಗಳನು ಸಿರದೊಳು ತಾಳ್ದು ಮೆರೆಯುತಿರಲು
3
ತುಂಬಿಗಳ ಕುಲಮಲರ ಮಧುವನುಂಡು ಪರಾಗ
ಮೆಂಬ ಪೊಂಬಟ್ಟೆಯಂ ಧರಿಸಿ ನಲವಿಂ
ಕಂಬು ಕಂದರೆ ! ನಿನ್ನ ವಿಭವಮಂ ಮಾಗಧರ
ಬಂಬಲೆನೆ ನಲಿನಲಿದು ಪಾಡುತಿರಲು. [ಅಂಜಲಿ : 16. 6. 30]
1931 ರ ನಂತರ ವೆಂಕಟರಾಜರ ಸಾಹಿತ್ಯ ಚಿಂತನೆ, ವಿಮರ್ಶೆ ಮತ್ತು ಕವಿತೆಗಳಿಗೆ ‘ರಾಷ್ಟ್ರಬಂಧು’ವಿನಲ್ಲಿ ವೇದಿಕೆ ಕಲ್ಪಿಸಿ ಪ್ರೋತ್ಸಾಹ ಕೊಟ್ಟವರು ಕಡೆಂಗೋಡ್ಲು. ವೆಂಕಟರಾಜರು ಕಡೆಂಗೋಡ್ಲು ಅವರ ಬಗ್ಗೆ ‘ದೊಡ್ಡಣ್ಣ’ ಎಂಬ ಕವಿತೆಯನ್ನು ಬರೆದಿದ್ದಾರೆ. ಉಡುಪಿಯ ‘ರಾಯಭಾರಿ’, ‘ಧುರೀಣ’, ‘ಅಂತರಂಗ’, ‘ನವಯುಗ’ ಪತ್ರಿಕೆಗಳೂ ಅವರ ಕವಿತೆಗಳನ್ನು ಪ್ರಕಟಿಸುತ್ತಿದ್ದವು. ವೆಂಕಟರಾಜರ ಹೆಚ್ಚಿನ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದವರು ‘ನವಯುಗ’ದ ಪ್ರಕಾಶಕ-ಸಂಪಾದಕ ಮತ್ತು ‘ಶ್ರೀಕೃಷ್ಣ ಪ್ರಕಾಶನ’ದ ಕೆ. ಹೊನ್ನಯ್ಯ ಶೆಟ್ಟಿಯವರು. ಅವರು ವೆಂಕಟರಾಜರ ತಂದೆಯವರ ಸಾಂತ್ಯಾರು ತಿಲಕಾಶ್ರಮ ರಾಷ್ಟ್ರೀಯ ಶಾಲೆಯಲ್ಲಿ 1925 ರಿಂದ 1927 ರವರೆಗೆ ಅಧ್ಯಾಪಕರಾಗಿದ್ದವರು. ಹಾಗಾಗಿ ವೆಂಕಟರಾಜರ ಆತ್ಮೀಯರಾಗಿದ್ದರು.
ವೆಂಕಟರಾಜರು 1931 ರಿಂದ ವಿವಿಧ ಛಂದಸ್ಸುಗಳನ್ನು ಆಧರಿಸಿ ಹೊಸಹೊಸ ಪ್ರಯೋಗಗಳನ್ನು ಮಾಡತೊಡಗಿದರು. ಹಳೆಯ ಯಕ್ಷಗಾನ ಪದಗಳು, ದಾಸರ ಹಾಡುಗಳು, ರಗಳೆ ಮುಂತಾದ ಹಿಂದಿನ ಮಟ್ಟುಗಳನ್ನು ಆಧರಿಸಿದ್ದ ಹೊಸಗನ್ನಡದ ಸರಳ, ಸುಂದರ ಮಟ್ಟುಗಳನ್ನು ಮತ್ತು ಸರಳ ಶಬ್ದಗಳನ್ನು ಉಪಯೋಗಿಸಲು ಪ್ರಾರಂಭಿಸಿದರು. ಉದಾಹರಣೆಗೆ, ಉತ್ಸಾಹ ರಗಳೆಯಲ್ಲಿರುವ (ಮೂರು ಮಾತ್ರೆಯ ನಾಲ್ಕು ಗಣಗಳು) ‘ಹಕ್ಕಿಗೆ’ ಕವಿತೆಯ ಸಾಲುಗಳಿವು:
ರವಿಯ ಮಂದಹಾಸದಿರವು
ಜಗವನೆಲ್ಲ ಬೆಳಗುತಿರಲು
ಮಧುವನೆಳಸಿ ತುಂಬಿವಿಂಡು
ಸುಳಿಯುತಿರಲು ಮೋದಗೊಂಡು
ಪ್ರೇಮಕೀಟ ನಿನ್ನ ಹೃದಯ
ತಳವ ಸೇರಿ ಕೊರೆಯುತಿರಲು [ಹಕ್ಕಿಗೆ : 18. 8. 31]
-ಎನ್ನುವ ಸಾಲುಗಳನ್ನು ನೋಡಿ. ಇದರಲ್ಲಿರುವ ರಮ್ಯ ಭಾವನೆ ಇಂಗ್ಲಿಷ್ ರಮ್ಯ ಕವಿಗಳಿಂದ ಪಡೆದದ್ದು, ಛಂದಸ್ಸು ಕನ್ನಡದ್ದು. ಇದು ಹದಿನೆಂಟರ ಹರೆಯದ ತರುಣ ಕವಿಯ ರಚನೆ.
ಕನ್ನಡದ ಮೊದಲನೆಯ ನವ್ಯ ಕವಿತೆಯಾದ ‘ನಾಟ್ಯೋತ್ಸವ’ವನ್ನು ಪೇಜಾವರ ಸದಾಶಿವರಾಯರು ಬರೆದದ್ದು 1936-1939 ರ ನಡುವಿನ ಅವಧಿಯಲ್ಲಿ, ಅವರು ಮಿಲಾನಿನಲ್ಲಿದ್ದಾಗ. ‘ವರುಣ’ ಅದೇ ಸಮಯದ ಇನ್ನೊಂದು ಕವಿತೆ. ಈ ಕವಿತೆಗಳು ಕೂಡ ಉತ್ಸಾಹ ರಗಳೆಯ ಮಟ್ಟಿನಲ್ಲಿವೆ ಎನ್ನುವುದು ಕುತೂಹಲಕರ. ಉದಾಹರಣೆಗೆ:
ಕಿರುನೆನಪಿನ ಕೀಟ ಮಾತ್ರ
ನಲ್ಗನಸಿನೀ ಚೆಲ್ವನಳಿಸೆ
ಸೂಜಿಮುಖದ ಮುಳ್ಳಿನಿಂದ
ಮೆಲ್ಲನೆನ್ನ ಕೀರುತಿಹುದು. (ವರುಣ)
ಅವಳನೆಣಿಸಿ ಇವಳ ಕುಣಿಸಿ
ಮುಗುಳುನಗುತ ಮೆಲ್ಲನೀಸಿ (ನಾಟ್ಯೋತ್ಸವ)
‘ನಾಟ್ಯೋತ್ಸವ’ದ ಕೊನೆಯ ಭಾಗದಲ್ಲಿ ಪೇಜಾವರ ಅವರು ಉತ್ಸಾಹ ರಗಳೆಯ ವೇಗವರ್ಧನೆಗೆ ಮಾಡಿರುವ ಒಂದು ತಂತ್ರವನ್ನು ಮುಂದಿನ ಬರಹದಲ್ಲಿ ನೋಡಬಹುದು. ದಕ್ಷಿಣ ಕನ್ನಡದ ಕವಿಗಳ ಪ್ರಯೋಗಶೀಲತೆಗೆ ಇವೆಲ್ಲ ಉದಾಹರಣೆಗಳಾಗಿವೆ.
ರಮ್ಯ ಪಂಥಕ್ಕೂ ಪ್ಯಾಸ್ಟೊರಲ್ ಮನೋಭಾವಕ್ಕೂ ಸಂಬಂಧವಿದೆ. ಬದುಕು ಉಧ್ವಸ್ಥಗೊಂಡಾಗ ಇಡೀ ಸಮಾಜ ಶಾಂತಿಯ ನೆಲೆಗಳನ್ನು ಅರಸುತ್ತದೆ. ಹಳ್ಳಿಯ [ಪ್ಯಾಸ್ಟೊರಲ್] ಬದುಕು ಅಂಥದೊಂದು ಶಾಂತಿಯ ನೆಲೆ. ಹಳ್ಳಿಯ ಬದುಕಿನ ಬಗ್ಗೆ ಯಾಕೆ ಒಂದು ಹಳಹಳಿಕೆಯ ಆಸೆ ಇರುತ್ತದೆಂದರೆ ಅಲ್ಲಿ ಸಮಾಜದ ಹಿಂದಿನ ಮೌಲ್ಯಗಳು ಉಳಿದಿರುತ್ತವೆ ಎನ್ನುವ ನಂಬಿಕೆಯಿಂದಾಗಿ ಮತ್ತು ಮನುಷ್ಯ ಮನುಷ್ಯರ ನಡುವೆ ಆತ್ಮೀಯ ಸಂಬಂಧಗಳಿಗೆ ಸಣ್ಣ ಘಟಕವಾದ ಹಳ್ಳಿಯಲ್ಲಿ ಹೆಚ್ಚಿನ ಅವಕಾಶ ಇದೆ ಎನ್ನುವ ಕಾರಣಕ್ಕಾಗಿ. ವೆಂಕಟರಾಜರ ನವೋದಯ (ಇಂಗ್ಲಿಷಿನ ‘ರೊಮ್ಯಾಂಟಿಕ್’) ಮಾದರಿಯ ಕವಿತೆಗಳಲ್ಲಿ ಕಾಣಿಸಿಕೊಳ್ಳುವ ಒಂದು ನಂಬಿಕೆ ಇದು. (ಮುಂದೆ ಅವರ ಸಮಾಜ ವಿಮರ್ಶೆಯ ಕಾವ್ಯ ಘಟ್ಟದಲ್ಲಿ ಈ ನಂಬಿಕೆಯನ್ನೂ ಅವರು ಮರು ಪರಿಶೀಲಿಸಿ ಹಳ್ಳಿಯ ಜನರು ತಮ್ಮದೇ ಆದ ರೀತಿಯಲ್ಲಿ ಭ್ರಷ್ಟರಾಗುತ್ತಿರುವುದನ್ನು ಕಾಣಿಸಿದ್ದಾರೆ). ಆದರೆ ಪ್ರಾರಂಭದ ಘಟ್ಟದ ಕವಿತೆಗಳಲ್ಲಿ, ಹಳ್ಳಿಯ ಬಡವನ ಮನೆಯಲ್ಲಿ ಬಡತನವಿದ್ದರೂ ಅವನ ಬದುಕಿನಲ್ಲಿ ಸುಖವಿದೆ – ಶ್ರೀಮಂತರು ಇಷ್ಟು ಸುಖವಾಗಿರಲಾರರು ಎನ್ನುವ ಯೋಚನೆಯಿಂದ ಮೂಡಿದ ಕವಿತೆಗಳಿಗೆ ‘ಹಳ್ಳಿಗನ ಹಾಡು’ ಎಂಬ ಕವನ ಉತ್ತಮ ಉದಾಹರಣೆಯಾಗಿದೆ. ಮಳೆಗಾಲದಲ್ಲಿ ಹಳ್ಳಿಯವನೊಬ್ಬ ತನ್ನ ಗುಡಿಸಲಿನಲ್ಲಿ ಹಾಡುತ್ತಿರುವ ದೃಶ್ಯವನ್ನು ಕವಿ ವರ್ಣಿಸುತ್ತಾರೆ. ಅವನ ನಾಯಿ ಕೂಡಾ “ನೀಡಿ ಮುಂಗಾಲ್ಗಳನು ಕಿವಿಗೊಟ್ಟು ಕೇಳುತೊಲೆ/ದಾಡುತಿಹ ಬಾಲದಿಂ ತಾಳಗುಟ್ಟುತಲಿಹುದು.” ಹಳ್ಳಿಗನ ಬದುಕು ಸುಖದುಃಖಗಳಿಗೆ ಅಳುಕದೆಯೆ ಪ್ರಶಾಂತವಾಗಿ ಸಾಗುತ್ತಿದೆ ಎನ್ನುವ ಚಿತ್ರಣವನ್ನು ಇಲ್ಲಿ ಕಾಣಬಹುದು.
ಹಳ್ಳಿಯ ಸಂತೋಷವನ್ನು ಒಟ್ಟಾಗಿ ವರ್ಣಿಸುವುದು. ಸುಗ್ಗಿ, ಕೋಲಾಟ, ಕುಣಿತ ಇಂತಹ ವಸ್ತುಗಳನ್ನಿಟ್ಟುಕೊಂಡು ಬರೆಯುವ ಕವನಗಳ ಹಿಂದೆಯೂ ಪ್ಯಾಸ್ಟೊರಲ್ ತುಡಿತಗಳಿರುತ್ತವೆ. ವೆಂಕಟರಾಜರು ಸುಗ್ಗಿಯ ಬಗ್ಗೆ ‘ಮಾದಿರ’ ಎನ್ನುವ ಕವನವನ್ನು ಬರೆದಿದ್ದಾರೆ. ಇದು ಅಚ್ಚ ತುಳುವಿನ ಶಬ್ದ. ನಲಿಕೆ ವರ್ಗದ ಹೆಂಗಸರು ತೆಂಬರೆ ಎಂಬ ಚರ್ಮವಾದ್ಯವನ್ನು ಬಡಿದುಕೊಂಡು, ಹಾಡು ಹಾಡುತ್ತಾ ಮಾಡುವ ಒಂದು ಕುಣಿತಕ್ಕೆ ಮಾದಿರ ಎಂದು ಹೆಸರು. ಈ ಕವನ ಮಾದಿರ ಕುಣಿತಕ್ಕೂ ಒಗ್ಗುವಂತಿದೆ; ಇದರ ಪದ್ಯಗಳ ನಡೆಯನ್ನು ನೋಡುವಾಗ ಅದರ [ಅಂದರೆ ಕುಣಿತದ] ಕಲ್ಪನೆ ಓದುಗರಿಗೆ ಉಂಟಾಗುತ್ತದೆ:
ಮಾದಿರ
1
ಏಳಿರೇಳಿರಿ ಬಾಳ ಹಿಗ್ಗಿನ
ಸೊಗದ ಸುಗ್ಗಿಯ ತಾಣಕೆ !
ಮೇಳಗೂಡಿದೆ ಮಾರನೈಸಿರಿ
ಪೂರ್ಣ ಕಾಮದ ಪಯಣಕೆ !
ಜೀವಕೊಂದೇ ಸಿಂಗರ – ಅದೆ
ಸತ್ಯಸಂಗಮದಾಸರ !
2
ನಸುಕುಬಾನಿನ ಹಾಸು ಹೊಕ್ಕಿನ
ನೆರೆದ ಗಿಳಿಗಳ ತೋರಣ !
ಕುಸುಮ ಬಂಧುರ ಚೂತ ಸಿಂಧುರ
ಮಿಡಿದ ಚಾಮರದೋರಣ !
ಭವ್ಯ ಭೋಗದ ಸಂಕುಲ – ಭವ
ಭೃಂಗ ತೂರ್ಯದ ಕಲಕಲ !
3
ಅಳುಕಲೇತಕೆ ? ಬಳುಕಲೇತಕೆ
ಕಾಮಕರ್ಮದ ಮೊನೆಯಲಿ ?
ಜೀವಸಾರಥಿಗಾವನಾಣತಿ
ಗಳಿಗೆ ಗೊತ್ತಿನ ಮನೆಯಲಿ ?
ಮಮತೆಯೊಂದೇ ಸಾಲದೆ – ನವ
ಶಕ್ತಿ ಮುಕ್ತಿಯನಾಳದೆ ?
4
ಮುಗುದಗರುಳಿನ ನಲುಮೆಯರಳಿನ
ಕುಸುರು ಸೇಸೆಯು ನೆರೆದಿದೆ !
ಮಿಲನಕಿಂದೆ ಮುಹೂರ್ತವೆಂದೇ
ಮುತ್ತಿನಾರತಿ ಮೆರೆದಿದೆ !
ತೋಳ ತಳ್ಕೆಯ ತೆರೆಯಲಿ – ರತಿ
ರಂಗಧಾಮದ ಕಾಕಲಿ !
5
ಹಾಡಿ ಕುಣಿಯುವ ಕುಣಿದು ಕೂಡುವ
ನರ್ಮ ನಾಟ್ಯದ ವೈಭವ !
ಜೋಡು ಬದುಕಿನ ಗಾಡಿಯರಿಸುವ
ಮೌನ ಮೃತ್ಯು ಪರಾಭವ !
ಅಮಿತ ರಾಗ ರಸಾಗಮ – ಯುವ
ಜೀವ ಜೀವ ಸಮಾಗಮ
6
ಪ್ರೇಮ ಯಾತ್ರೆಯ ನೇಮಕೊದಗಿದೆ
ಮಧುರ ಮಂಗಳ ಮಾದಿರ !
ಮತ್ತ ಮಧುಪನ ಹೃತ್ತರಂಗದ
ಹರ್ಷ ಮಹತಿಯ ಮಾದಿರ !
ಅದುವೆ ಜೀವನಕೊಲಿಯಲಿ ! – ತುಳು
ನಾಡ ನೂಪುರವಲುಗಲಿ !
(1. 04. 1936)
‘ಕರ್ಮವೀರ’ದ ವಿಮರ್ಶೆಯಲ್ಲಿ ಈ ಸಂಕಲನವನ್ನು ಒಂದು ಶ್ರೇಷ್ಠ ಸಂಕಲನವೆಂದು ಶ್ಲಾಘಿಸಲಾಗಿದೆ : “ಕವಿತಾ ಕಾಮಿನಿಯು ನಿಜವಾಗಿಯೂ ಸುಂದರಿಯಾಗಿದ್ದಾಳೆ…. ಪದ ಮೈತ್ರಿ, ಪದಶಯ್ಯಾ ಮಾರ್ದವ ಇವೆಲ್ಲ ರಸಾನುಗುಣವಿರುವುದು ಶ್ಲಾಘ್ಯವಿದೆ……. ಕವಿಯ ಪದ ಪಾಂಡಿತ್ಯ, ಅರ್ಥ ಗಾಂಭೀರ್ಯ, ಭಾವ ಮಾಧುರ್ಯಗಳು ಹಲವಾರು ಕಡೆ ಹೃದಯಂಗಮವಾಗಿವೆ. Best words in the best order – ಉತ್ತಮ ಪದಗಳು ಉತ್ತಮ ಕ್ರಮದಲ್ಲಿ ಕೂಡಿರುವುದು – ಎಂಬ ಕಾವ್ಯಲಕ್ಷಣಕ್ಕೆ ಕವಿತಾ ಕಾಮಿನಿಯೊಂದು ಯುಕ್ತವಾದ ನಿದರ್ಶನವಾಗಿದೆ. ಇಂತಹ ಕವಿಯ ಉತ್ಸಾಹ ಕುಗ್ಗದಂತೆ ನೋಡಿಕೊಂಡು, ಕನ್ನಡ ಕಾವ್ಯ ಕನ್ನಿಕೆಯ ಕಮ್ಮೆದೆಯ ಸೊಬಗನ್ನು ಕಂಡು ಕಾಣಿಸಲು ಹೆಚ್ಚು ಹೆಚ್ಚು ಪ್ರಯತ್ನಿಸಲು ಹುರುಪುಕೊಟ್ಟು ನಡೆಸಿಕೊಡುವುದು ಕನ್ನಡಿಗರ ಕರ್ತವ್ಯ, ನಾಗರಿಕತೆಯ ಅವಶ್ಯಕತೆ ಎಂದು ಇಲ್ಲಿ ಹೇಳದಿರಲಾಗದು.”
‘ಇಂಡಿಯನ್ ಎಕ್ಸ್‌ಪ್ರೆಸ್’ನಲ್ಲಿ ಆರ್. ನಾಗರಾಜ ಶರ್ಮರು ಇದನ್ನು ವಿಮರ್ಶಿಸುತ್ತ ಹೀಗಂದಿದ್ದಾರೆ: “That Mr. Venkataraaja has successfully wooed and won over the affections of the “Kannada Muse” is what must be apparent to readers of “Kavitaa Kamini” [Part – 1] …. the subject matter covering the widest possible range. It is no exaggeration to say that the poet manages to encompass the whole world. Mr. Venkataraaja has something striking to say on the “vanity of human life” , on the endless attraction of “nature”, and on the voice of God.” [2. 2. 1948]
ಎರಡನೆಯ ಘಟ್ಟ: ಪ್ರೇಮದ ಅಂತರ್ಮುಖತೆ
2.ಕವಿತಾ ಕಾಮಿನಿ [ಭಾಗ : 2] ಶ್ರೀ ಕೃಷ್ಣ ಪ್ರಕಾಶನ, ಉಡುಪಿ : 1957
3.ಕಾವ್ಯ ಮನೋರಮಾ: ಶ್ರೀ ಕೃಷ್ಣ ಪ್ರಕಾಶನ, ಉಡುಪಿ : 1961
ವೆಂಕಟರಾಜರ ಎರಡನೆಯ ಸಂಕಲನ ಶೃಂಗಾರ ಪ್ರಧಾನವಾಗಿದೆ. ಇದನ್ನು ಸಮೀಕ್ಷಿಸುತ್ತಾ ಕಯ್ಯಾರ ಕಿಂಞಣ್ಣ ರೈಗಳು ಹೇಳುವ ಈ ಮಾತುಗಳು ವೆಂಕಟರಾಜರ ಮೊದಲ ಘಟ್ಟದ ಕಾವ್ಯದ ವೈಶಿಷ್ಟ್ಯವನ್ನು ಹೇಳುವಂತಿವೆ: “ಇದರಲ್ಲಿನ ಕವನಗಳಲ್ಲಿ ಹೆಚ್ಚಿನವು ಶೃಂಗಾರ ರಸರಂಜಿತವಾದುವು. “ಶೃಂಗಾರವೊಂದೇ ರಸ”ವೆಂಬ ಕೆಲ ಲಾಕ್ಷಣಿಕರ ಮತದಂತೆ, ಇಲ್ಲಿ ಕವಿಯು ಜೀವನದ ನಾನಾ ಅನುಭವಗಳನ್ನು ಸುಖದಿಂದಲೂ ದುಃಖದಿಂದಲೂ ಪೂರ್ಣವಾದ ಅನೇಕ ಭಾವನೋದ್ವೇಗಗಳನ್ನು ಶೃಂಗಾರದ ಹಿನ್ನೆಲೆಯಲ್ಲಿ ಹಾಡಿದ್ದಾರೆ. ಕೆಲವು ಕವನಗಳಲ್ಲಿ ಆ ಶೃಂಗಾರ ಭಾವನೆಯು ರಾಧಾಕೃಷ್ಣ ಪ್ರೇಮರೂಪದ ಪ್ರಣಯ ಭಕ್ತಿಯ ಕಡೆಗೆ ಹರಿದಂತಿದೆ. ಉಮರ್ ಖಯಮ್, ಜಯದೇವ ಕೃತಿಗಳು ಈ ದಿಸೆಯಲ್ಲಿ ವಿಶ್ವದ ಅಮರ ಕೃತಿಗಳಾಗಿ ಮೆರೆದಿವೆ. ಕನ್ನಡದಲ್ಲಿ ಇಂತಹ ಕೃತಿಗಳು ತೀರಾ ಅಪರೂಪ ; ಕವಿ ಶ್ರೀ ಕೆ. ಎಸ್. ನ. ರವರು “ಮೈಸೂರು ಮಲ್ಲಿಗೆ” ಯಲ್ಲಿ ಶೃಂಗಾರದ ಸುಂದರ ಬಹಿರ್ಮುಖತೆಯನ್ನು ಚಿತ್ರಿಸಿದರು; ಕವಿ ಶ್ರೀ ವೆಂಕಟರಾಜರು ಇನ್ನಷ್ಟು ಸಾಧನೆಗೈದರೆ ಅದರ ಅಂತರ್ಮುಖತೆಯನ್ನು ರಮ್ಯವಾಗಿ ಚಿತ್ರಿಸಲು ಸಮರ್ಥರಾಗಬಹುದೆಂದು ನಮಗನಿಸುತ್ತದೆ.” [ರಾಯಭಾರಿ : 5. 2. 1958].
ಈ ಘಟ್ಟದಲ್ಲಿ ವೆಂಕಟರಾಜರು ಸ್ತ್ರೀ ಎನ್ನುವ ತತ್ತ್ವವನ್ನು ಕುರಿತು ಧ್ಯಾನಿಸಿ ಕವಿತೆಗಳನ್ನು ರಚಿಸಿದ್ದಾರೆ. ಅದು ಭಕ್ತಿಯ ಇನ್ನೊಂದು ಆಯಾಮ ಎನ್ನುವಂತಹ ಉನ್ನತ ಸ್ಥಾನವನ್ನು ವೆಂಕಟರಾಜರು ಪ್ರೇಮಕ್ಕೆ ಕೊಡುತ್ತಾರೆ. ಈ ಬಗೆಯ ಹಲವು ಕವಿತೆಗಳಿವೆ; ಪ್ರಾತಿನಿಧಿಕವಾಗಿ ಮೂರು ಕವಿತೆಗಳನ್ನು ಇಲ್ಲಿ ಕೊಡಲಾಗಿದೆ. ಅವು, ‘ಬೆಳದಿಂಗಳಿನಲಿ’, ‘ಮಾಯಾಮೃಗ’ ಮತ್ತು ‘ಸ್ತ್ರೀಸೂಕ್ತ’.
ವೆಂಕಟರಾಜರ ಪ್ರಸಿದ್ಧ ಶೃಂಗಾರ ಭಾವಗೀತೆ ‘ಬೆಳದಿಂಗಳಿನಲಿ’. ಈ ಕವನ ‘ಜ್ಯೋತ್ಸ್ನಾಮೆ’ ಎನ್ನುವ ಶೀರ್ಷಿಕೆಯಡಿಯಲ್ಲಿ ಹಿಂದಿಗೆ ಅನುವಾದಗೊಂಡು ಕೇಂದ್ರ ಸಾಹಿತ್ಯ ಅಕಾಡೆಮಿ 1956 ರಲ್ಲಿ ಪ್ರಕಟಿಸಿದ ‘ಭಾರತೀಯ ಕವಿತಾ’ ಎಂಬ ಆಂಥಾಲಜಿಯಲ್ಲಿ ಸೇರಿದೆ. ಪ್ರೇಮ ಅನ್ನುವುದು ಸೃಷ್ಟಿಯ ರಮ್ಯವಾದ ತತ್ತ್ವಗಳ ಒಂದು ಲೌಕಿಕ ಅಭಿವ್ಯಕ್ತಿಯಾಗಿದೆ. ಈ ಅಭಿವ್ಯಕ್ತಿ ಪರಿಶುದ್ಧವಾದ ಸ್ತ್ರೀ ಪುರುಷ ತತ್ತ್ವಗಳ ಸಂಯೋಗದ ಔನ್ನತ್ಯವನ್ನು ಪಡೆದಾಗ ಪ್ರಕೃತಿಯ ತತ್ತ್ವಗಳು ಅದರ ಜತೆಗೆ ಸ್ಪಂದಿಸುತ್ತವೆ – ಇದು ಈ ಕವಿತೆಯ ಆಶಯ.
ಬೆಳದಿಂಗಳಿನಲಿ
1
ಮುಗ್ಧಮನಃ ಪ್ರಣಯದ ಮೇಲ್ಸೆರಗನು
ಹೊದ್ದಂತಿಹುದೀ ರಾತ್ರಿ
ಸ್ನಿಗ್ಧ ಶರತ್ಕಾಲದ ರಸಗಂಗೆಯೊ
ಳದ್ದಿದೆ ಪುಣ್ಯಧರಿತ್ರಿ !
ಆ ಕಡೆ ಬೆಳ್ಮೋಡದ ಬಾಣಂತಿ
ಬಯಕೆಯಲೇನೋ ಬರೆದ ಕಸೂತಿ
ನೀಲಾಕಾಶದ ತೆಳುಸೀರೆಯಲಿ
ಕಂಡಂತಿದೆ ಸೆಳೆಮಿಂಚಿನ ರೀತಿ
ಶೃಂಗಾರದ ಹೂಹುಡಿಗಳ ಚೆಲ್ಲಿ
ಪನ್ನೀರನು ಸೂಸಿದೆ ತಂಗಾಳಿ
ಸಂಗೀತದ ಸಮಯೋಚಿತ ಸೇವೆಯ
ಲೋಲೈಸಿದೆ ಮಹನೀಯ ಮದಾಳಿ
ಓ ಚೆಲುಗಂಗಳ ಸೊಬಗಿನೆ ಜಿಂಕೆ
ಬಾ ಬೆಳದಿಂಗಳಿನುಪವನಕೆ !
2
ತೊರೆಗಳಲೆಲ್ಲಾ ಹರಿದಿದೆ ಜೇನ್ ನವಿ
ರೆದ್ದಿದೆ ಪರ್ವತ ಸಾನು
ತನತನಗೇ ಬ್ರಹ್ಮಾಂಡದ ಭಾಂಡಕೆ
ಹಾಲ್ಸುರಿಸಿದೆ ಸುರಧೇನು !
ಪಿಸುಪಿಸು ಮಾತಿನ ಮಮತೆಯ ಮಾಟಕೆ
ಆಕಾಶವೆ ಕಿವಿಗೊಟ್ಟಿದೆ ಬಾಗಿ
ಗುಸುಗುಸು ಗೈಮೆಯ ಹೃದಯೋನ್ಮಾದಕೆ
ನಾಲ್ದೆಸೆ ನಗೆಯೈಸಿದೆ ತಲೆದೂಗಿ !
ಹೊಸತೇನೋ ಹೊಂಗನಸಿನ ಬಯಕೆ
ಹೊಸೆದಿದೆ ಯೌವನದನುಗಮಕೆ
ಬಿಸಿರಕುತದ ಭಾವನೆಗಳನೆಲ್ಲಾ
ಉಸಿರೆರೆದಿದೆ ತವ ಮೃದುಪದಕೆ !
ಓ ಚೆಂದುಟಿಗಳ ಚೆಲುವಿಕೆಯಾಕೆ
ಬಾ ಬೆಳದಿಂಗಳ ಬಿನ್ನಣಕೆ !
3
ಹಸಿದಿದೆ ಹರಣ. ಎಸರಿಟ್ಟಿದೆ ಮನ
ಕುದಿಕುದಿದಿಹುದೀ ಹೃದಯ
ಒಣವೇದಾಂತದ ಜೀವನ ಮರಣ
ಬರಿ ತಲೆಸುತ್ತುವ ವಿಷಯ !
ಮಾಯಾ ಬಂಧನದ ಮಧುರ ಸಮೀಕ್ಷೆಗೆ
ಸಿಡಿದೆದ್ದಿದೆ ಸಂತೋಷದ ಲಹರಿ
ಕಾಯದ ರಸಕಲ್ಲೋಲದ ಕದನಕೆ
ಹೊಡೆದಿದೆ ಚಿರಕಲ್ಯಾಣದ ಭೇರಿ !
ಮೌನದ ಬಯಕೆ – ತಾವೇ ಕೂಡುವ
ಕಾಮನೆಗಳ ಸುಖ ಸಾಫಲ್ಯ
ಮಾಣದ ಮಿಡಿತಕೆ ಮೈಮನಸೊಪ್ಪಿಸಿ
ಮಣಿಯುವ ಮೆಚ್ಚಿನ ಕೈವಲ್ಯ !
ಓ ನಳಿದೋಳ್ಗಳ ನಚ್ಚಿನ ಬೆಳಕೆ
ಬಾ ಬೆಳದಿಂಗಳ ಮಂಟಪಕೆ !
ಪ್ರೇಮ ಪರಿಶುದ್ಧವಾಗದೆ ವಿಕೃತಿಯಾದಾಗ ವೇಶ್ಯಾ ವೃತ್ತಿ – ಸ್ವೇಚ್ಛಾ ಪ್ರವೃತ್ತಿಗಳು ತಲೆಯೆತ್ತುತ್ತವೆ. ಇದು ಕೂಡ ಅತ್ಯಾಕರ್ಷಕವಾಗಿರುತ್ತದೆ; ಆದರೆ ವ್ಯಕ್ತಿಯನ್ನು ದಾರಿತಪ್ಪಿಸುತ್ತದೆ. ‘ಮಾಯಾಮೃಗ’ ಕವಿತೆಯ ನಾದಮಾಧುರ್ಯ ಮತ್ತು ಗಾಂಭೀರ್ಯ, ಬಳಸಿರುವ ಶಬ್ದಗಳ ಓಜೋಗುಣ ಅತ್ಯಪೂರ್ವವಾಗಿದೆ. ಕನ್ನಡದ ಮಹತ್ವದ ಕವಿತೆಗಳಲ್ಲಿ ಇದೂ ಒಂದು ಎಂದು ಗುರುತಿಸಲ್ಪಡಬೇಕಾದ ಯೋಗ್ಯತೆಯುಳ್ಳದ್ದು.
ಅವರಿಗೆ ಕಾಮವನ್ನು ಪ್ರಯೋಗಿಸಿ ಸ್ತ್ರೀಪುರುಷ ಸಂಬಂಧವನ್ನು ವ್ಯಭಿಚಾರದ ಮಟ್ಟಕ್ಕೆ ಇಳಿಸುವ ವೇಶ್ಯೆ ‘ಮಾಯಾಮೃಗ’ ಎಂದು ಕಾಣುತ್ತದೆ. “ಇವಳ ಬಗೆ ಬಾನಿನಲಿ ನಗೆಯು ಸುರಲೋಕದಲಿ / ಬಯಕೆ ಕಡಲಾಳದಲಿ ಮಾತು ತೆಂಗಾಳಿಯಲಿ / ಪ್ರೀತಿ ಪಾತಾಳದಲಿ ಹುದುಗಿರುವುದು” ಎನ್ನುತ್ತಾರೆ. ಇದೊಂದು ಅದ್ಭುತ ಕಲ್ಪನೆ. ಪ್ರೇಮದ ಈ ಆಯಾಮವು ಮಾಯೆಯ ಆಟ ಎನ್ನುವ ಸೂಚನೆಯೂ ಈ ಕವಿತೆಯಲ್ಲಿದೆ.
ಮಾಯಾಮೃಗ
ಬಾನಕಡೆಯುಳ್ಕರಿಸಿ ಮುಂಬೆಳಕು ತೋರಿತ್ತು
ತಂಗಾಳಿ ಮೆಲ್ಮೆಲನೆ ತೀಡಿತ್ತು. ತಳು ತಳುಹಿ
ಆವಳೋ ನಸುನಗುತ ನಡೆದಿರುವಳು
ಬೆಳಗಿನಾ ಗಾಳಿಯಲಿ ಮೇಲ್ಸೆರಗ ಮುಸುಕಿಕ್ಕಿ
ಗುಣುಗುಣಿಪ ಮೆಲುದನಿಯ ಗಾನದಲಿ ಹಮ್ಮೈಸಿ
ಆವಳೋ ತಲೆಬಾಗಿ ಬರುತಿಹಳು ||1||
ಇವಳಾವಳೋ ಕಾಣೆ ಬಿನ್ನಣದ ಬಲುಜಾಣೆ
ಬಿಗಿದತುಟಿಯಕ್ಕರೆಯಿನಿಗುವ ಪುಣ್ಯೋದಕದ
ಕಿರುನಗೆಯ ಸೇಸೆಯಲಿ ಬರುತಿರುವಳು
ಇವಳಾವಳೋ ಕಾಣೆ ಮಧುನೃಪನ ಮದ್ದಾನೆ
ಅಳುತ ಬಳುಕುತಲಿಡುವ ಹೆಜ್ಜೆಗಳ ಹೆಮ್ಮೆಯಲಿ
ತೂಗುತೊಯ್ಯೊಯ್ಯನೇ ಬರುತಿರುವಳು ||2||
ಇವಳಾವಳೋ ರಮಣಿ ಕಳೆದಿರುಳ ಚೆಲುರಾಣಿ
ರಸದ ಸೇಚನೆಗೊಂಡು ತುಸುಮುಗಿದ ಕಂಗಳಲಿ
ಮಮತೆಯನೆ ಮೇಳೈಸಿ ಬರುತಿರುವಳು
ಇವಳಾವಳೋ ತರುಣಿ ಬಯಕೆ ತೂರಿದ ದೋಣಿ
ಸುಖದುಃಖಗಳ ತೆರೆಯ ತುಮುಲಿನಲಿ ತತ್ತರಿಸಿ
ಹಾಯೊದಗಿದಂತೆ ಅದೊ ಬರುತಿರುವಳು ||3||
ಇವಳಾವಳೋ ಬೆಡಗುಗಾತಿ ಸಂಗದ ಗೆಳತಿ
ನವವಸಂತಾಗಮದ ಪದಪಿನಲಿ ದಿಗ್ವಿಜಯ
ಕೆಂದು ನಿಂದಿರುವ ಮನ್ಮಥನಿಯೋಗ
ಇವಳಾವಳೋ ನಾರಿ ಯುವಹೃದಯ ಸಂಚಾರಿ
ಕಾಡಿನಲಿ ಕಮರಿಯಲಿ ಬೆಟ್ಟದಲಿ ಬಯಲಿನಲಿ
ಹೊಳಹಿನಲಿ ಸುಳಿಸುಳಿವ ಮಾಯಾಮೃಗ ! ||4||
ಮಾತು ಮಂತ್ರಣವಲ್ಲ ಪ್ರೀತಿ ವಾತ್ಸಲ್ಯವಿದಲ್ಲ
ನೀತಿನಡೆಗಳ ಬಟ್ಟೆಯಿವಳಡಿಗೆ ಸಾಲದಿದೆ
ಪ್ರೀತ ಪುರುಷರ ಕಾಮಧೇನುವಿವಳು
ದಾರಿಯಲಿನಿಂದು ಮತ್ತಾರಿಗೂ ನಿಲುಕದಿರು
ವೇರಿಕೆಯ ತುತ್ತತುದಿ ಬೆಲೆಯ ನಿಚ್ಚಣಿಕೆ ಮೇ
ಲೇರಿ ಕೊಯ್ಯುವ ಕಲ್ಪವೃಕ್ಷವಿವಳು ||5||
ಇವಳ ಬಗೆ ಬಾನಿನಲಿ ನಗೆಯು ಸುರಲೋಕದಲಿ
ಬಯಕೆ ಕಡಲಾಳದಲಿ ಮಾತು ತೆಂಗಾಳಿಯಲಿ
ಪ್ರೀತಿ ಪಾತಾಳದಲಿ ಹುದುಗಿರುವುದು
ಇವಳ ಮೌನವೆ ಮಾತು ಮಾತೆ ಹೊಂಚುವ ಮಮತೆ
ಮಮತೆ ಕಣ್ಣೀರಿನಲಿ ತೋಯ್ದು ಸೋರುವ ರಸವು
ರಸವು ಬೇಸಗೆಯಾಗಿ ಬತ್ತಿರುವುದು ||6||
ಇವಳು ಹೊಸ ಬೇಟೆಯಲಿ ತೋಳ ಬಲೆಯನು ಬೀಸಿ
ಕಣ್ಣಕೊನೆಯಲಿ ತಿವಿದು ನಿಟ್ಟುಸಿರ ಸೇದೆಯಲಿ
ಸುಡುವ ಸಖ್ಯದ ಸಾವು ಸುತ್ತಿರುವಳು
ಇವಳು ಸೆರಗಿನಲಿ ಹಲವು ಜೀವಿಗಳ ಬಿಗಿಬಿಗಿದು
ಬಯಕೆಯಲಿ ಕಾವನಿಟ್ಟೆದೆಯ ಮೂಸೆಗೆ ಹೊಯ್ದು
ಹೊಡೆದಂತು ಹೊಸಮಿಸುನಿ ಕಂಡಿರುವಳು ||7||
ಇವಳು ಸತ್ಯಕೆ ಕೊಟ್ಟ ಶಾಪ – ಸುಳ್ಳಿನ ರೂಪ
ಇವಳು ವಿಶ್ವದ ಸೊಗಸು ಕೊನರು ಕೊಂಡಿಹ ಪಾಪ
ರಸರತಿಯ ನಿಟ್ಟುಸಿರ ವಿರಹತಾಪ
ಇವಳು ಕರ್ಮದ ಕೂಪಕೊಲಿದ ಕಾಮ ನಿರೂಪ
ಇವಳು ಕಾರಿರುಳ ಕಳ್ತಲೆ ಸೆಳೆದ ಸುರಚಾಪ
ಸುಖದ ಕುಣಿತಕೆ ಸಂದ ಮಧುಮಂಟಪ ||8||
ಇವಳಿಗೆದೆಯಿಲ್ಲ ಮೊಗವೊಂದು ನಾಲಗೆಯೆರಡು
ಮುಕ್ಕಣ್ಣು ನಾಲ್ಕು ಕಾಲೈಮೂಗು, ಬಾಯಾರು
ಏಳು ಕಿವಿಯೆಂಟು ದೆಸೆಗೈಗಳುಂಟು
ಇವಳ ರೂಪವು ಕಂಡಕಂಡವರ ಕಂಗಳಿಗೆ
ಹೊಸತಾಗಿ ಸೆರೆಗೊಂಡು ಸೆಳೆಯುತಿದೆ ಮಾಯೆಯಲಿ
ಮುಚ್ಚಿಟ್ಟ ಮುಪ್ಪುರಿಯಹೊಸೆದಗಂಟು ||9||
ಇವಳು ಕತ್ತಿಯ ಮಸೆಯಲಿಲ್ಲ ಕೊರಳನು ಹಿಸುಕ
ಲಿಲ್ಲ ನುಡಿಗುಂಡುಗಳನೆಸೆದಿಲ್ಲ. ನಿತ್ಯವೂ
ಮೌನದಲಿ ಗೆಲುಗೊಂಡ ಹದನವೇನು !
ಇವಳ ಬಾಯನು ಬಿಗಿದು ಕಣ್ಣಕೊನೆ ಕುಣಿಕುಣಿದು
ಸರಸದೇಕಾಂತದಲಿ ಸುರಿದ ಕಂಬನಿಯದೇ
ಸೊಗಸು ಮುತ್ತಾಗಿ ಮನೆ ತುಂಬಿತೇನು ! ||10||
ಇವಳ ಮನೆಯಲಿ ತೈಲವಿನಿತಿಲ್ಲ. ಭೋಗಗಳ
ಬರಿದು ಭಾಂಡಾಗಾರ! ದಿನದಿನವು ಕಣ್ಕುಕ್ಕಿ
ಬೆಳಕು ಪಜ್ಜಳವಾಗುತಿರುವುದಂತೆ!
ಆರೊ ಸಂಸಾರಿಗರು ಮೂರು ಸಂಜೆಯ ಹೊತ್ತು
ಈ ಪುಣ್ಯ ಪೀಠಿಕೆಯ ಬಾಗಿಲೆಡೆಗೈತಂದು
ಸುರಿದ ಸಿರಿಹಂತ ನಿಚ್ಚಟದ ಸಂತೆ! ||11||
ಇವಳ ಗೆಳೆತನಗೊಂಡು ಬಾಳಿದವರಿನ್ನುಂಟು
ಹಗೆತನದ ಹಾದಿಯಲಿ ನಡೆಯದಿರು. ಹೆಡೆ ಜಡೆಯ
ನುತ್ಕರಿಸಿ ಕಾಳಾಹಿ ಕಾದಿರುವುದು !
ಇವಳ ಮೈಯೊಪ್ಪದಲಿ ಬಂಗಾರ ಬಳಲುತಿದೆ
ಬೆಳ್ಳಿ ಬೆಂಡಾಗುತಿದೆ. ಹೃದಯದಾವರ್ತದಲಿ
ಕಬ್ಬಿಣದ ಕಾವಲಿಯೆ ಕುದಿದಿರುವುದು ! ||12||
ಇದು ಬೀಣೆಯಲ್ಲ ಕೈಬಿಡದಿರುವ ತಂಬೂರಿ
ಇದು ಗಾನವಲ್ಲ ಬಗೆಬಯಕೆಗಳಲೆದೆಯಾರಿ
ಬಾಯ್ಬಿಡುವ ಬದುಕುಗಳ ಕರುಳಕೂಗು
ಇದು ನಾಟ್ಯವಲ್ಲ ಕೊಲೆಕವರುಗಳ ಕುಣಿಕುಣಿತ
ವಿದು ಮೋಹವಲ್ಲ ಹೃದ್ದಾಹಗಳ ದಳ್ಳುರಿಯ
ಕೆಂಪು ಕಾದಲ್ಮೆಗಳ ಕರೆಯ ಸೋಗು ||13||
ಇದು ಸೊಗಸಿನೇಕಾಂತ ಗೈಮೆಗೊದಗಿದ ಗುಟ್ಟು
ಹರಯ ಹುಚ್ಚಿನಗೋಪ್ಯ ರತಿಸುಖದ ನೇಪಥ್ಯ
ಕವಡು ಕೈಬಿಗಿದ ಕಣ್ಮುಚ್ಚಲಾಟ !
ಇದು ಕಲೆಯ ತಲೆಮುಸುಕು ಕಾಮನೆಗಳಂತವುರ
ಕೂರ್ಮೆಗಳ ಕಗ್ಗವಿ ವಿಲಾಸಗಳ ಮುಚ್ಚುಮರೆ
ಮಾನಾಪಮಾನಗಳ ಮೊದಲ ಪಾಠ ! ||14||
ಇದು ನಿತ್ಯದನುಭಾವ ಭವಯಂತ್ರದಾವೇಗ
ಸೋತವರು ಗೆಲ್ದವರು ಕೂಡಿಕೊಂಡಾಟದಲಿ
ಕುಡಿದು ತಣಿಯದಶೇಷ ಸೋಮ ಪಾನ !
ಈ ಸುಖದ ನೇಮದಲಿ ಸ್ವರ್ಗದಾರಾಮದಲಿ
ಕ್ಷಣಿಕವಿಶ್ವವ ಮರೆತು ಕಾಮಿತದ ಕೈಮೀರಿ
ತಮ್ಮನೇ ತಾವರಿವ ಮಧುರ ಮೌನ ! ||15||
ಮುಂದೆ ನಿಂದವನ ನೋಡಿ ಕೆಲಬಲದೆ ಕಣ್
ಮಾಡಿ ಪೆರತುಂಬರಿದು ಮಾತಾಡಿ ಮೋಹದಲಿ
ಕೂಡಿ ಕಾಮನೆಗೊಳುವ ದಿವ್ಯದೃಷ್ಟಿ
ಒಬ್ಬ ಬಂದಿಹನಲ್ಲಿ ಮತ್ತೊಬ್ಬ ಕಾದಿಹನು
ಹಿತ್ತಲಲಿ ನಿಂದಿಹನು ಮಗದೊಬ್ಬನೊಳಗಿಹನು
ಇನಿಬರನು ಮೆಚ್ಚಿಸುವಸುಖದ ಸೃಷ್ಟಿ ||16||
ನಿನ್ನೆಯನುಗಮದ ಕಾಮನೆಯೊಳು ತಪಂಬಡೆದು
ಇಂದಿನೊಲುಮೆಯ ಪೂಜೆ ಪಾರಣೆಯ ಪುಣ್ಯದಲಿ
ನಾಳೆಯನು ಬಿಗಿದಿಡುವ ಚದುರೆಯಿವಳು
ನಿನ್ನೆಯೆಂಬುದು ಸುಳ್ಳು ನಾಳೆಯೆಂಬುದು ಸಲ್ಲ
ದಿಂದೆ ಕಲ್ಪನೆಯ ಚೆಂಗುಡಿಗೆ ದೋಹಳವಿತ್ತು
ಹೂತು ಹಣ್ಗೊಳುವ ಹೊಂಬಾಳೆಯಿವಳು ||17||
ಮಾತಿನಲಿ ಮಧು ಸುರಿಸಿ ಗೀತೆಯಲಿ ಬಗೆಯರಿಸಿ
ರೀತಿ ರೀತಿಯ ಕಣ್ಣ ಸನ್ನೆಯಲಿ ಸೂಳರಿಸಿ
ಮಾತು ಬಗೆಗೊದಗದಿಹ ನಿತ್ಯ ಸುಭಗೆ !
ಓತು ಸಂಜೆಯ ತನಕ ಸುಳಿಸುಳಿದು ಸೊರಗಿ ಕೈ
ಸೋತು ನೆಮ್ಮದಿಗಾಗಿ ಬರುವ ಮೇಳಂಬಗಳ
ಕಾತರಕೆ ಕಣ್ಮಸೆವ ಸಿರಿಸಂಪಗೆ ! ||18||
ಸೊಬಗಿನಿತ್ತಡಿಗಳಲಿ ಲಾವಣ್ಯ ಪೂರದಲಿ
ಮುಳುಗಿ ಮಿಂದೆದ್ದವನು ಕಿತ್ತಡಿಯೊ ಕಾಮುಕನೊ
ಏನೊ ಪೂಜೆಗೆ ಬಂದ ಪುಣ್ಯವಂತ !
ಈ ಕಡೆಯ ತೀರದಲಿ ತೆರೆಗಳೋಕುಳಿಯಾಡಿ
ಈ ಕೂಲ ತಲ್ಪದಲಿ ತೆರವು ತೆಪ್ಪವನಾಡಿ
ಆವನೋ ನೀರಡಿಕೆಗೊಲಿದ ಪಾಂಥ ! ||19||
ಇಲ್ಲಿ ಕಾಣುವ ಬೆಳಕು ಬೇರೆ ಗಾಳಿಯು ಬೇರೆ
ಇಲ್ಲಿ ಸೇರುವ ಸುಗ್ಗಿ ಸಿಂಗಾರವಲ್ಲ ವ –
ರ್ಷಾಗಮದ ಪೂರ್ವಿಕೆಯ ತಣ್ಪಿನೊಸಗೆ
ಇಲ್ಲಿ ತೋರುವ ಮಿಂಚು ಗುಡುಗು ಸಿಡಿಲಿನ ಸಂಚು
ಸಣ್ಣ ಹನಿ ಸೋರುಮಳೆ ಹಿಂಗಾರು ಮುಂಗಾರು
ನಡುವ ನೆಮ್ಮದಿಗಲ್ಲ – ಸೂರೆ ಸುಲಿಗೆ ! ||20||
ಇಲ್ಲಿ ಮತಾಡಿದರೆ ಕಿವುಡೆನಿಸಿ ಮುಂದೆ ನಡೆ
ಇಲ್ಲಿ ಕಣ್ಗೂಡಿದರೆ ಕುರುಡೆಂದು ಹಿಂದೆ ನಿಲು
ಇಲ್ಲಿ ಸೋಲ್ಗೆಲವುಗಳ ಕಂತೆ ಬೇಡ
ಇಲ್ಲಿ ಹೊಗಳುವ ಮಾತಿಗಾಗಿ ಹೆಚ್ಚಳಿಸದಿರು
ತೆಗಳು ತಳತಂತ್ರದಲಿ ಸಿಲುಕದಿರು, ಕಾದಿರುವ
ಬಿಡುಗಣ್ಣರಿವರು ಬಾಯ್ದೆರೆಯ ಬೇಡ ! ||21||
ಇವಳತ್ತ ನೋಡದಿರು, ನೋಡಿದರೆ ಸೋಲದಿರು
ಸೋತು ಬಳಿಸಾರದಿರು, ಸಾರಿ ಸುಖಕೆಳಸದಿರು
ಬದುಕಿದರೆ ನೀನೆ ಹೂಗಣೆಯನಯ್ಯ !
ಮಾತು ಜೇನಿನ ಮುದ್ದು ಮಮತೆ ಮಯಣದ ಗೂಡು
ಪ್ರೀತಿ ಪರಮೆಯ ರೀತಿ ಕುಡಿಕುಡಿದು ತಣಿಯದಿದೆ
ತಣಿದಾಗ ಹೂವು ನಿಸ್ಸಾರವಯ್ಯ ! ||22||
ಅದೊ ನೋಡು ! ಮುಗಿಲೊಂದು ಮೇಲಮೇಲಕೆ ಸಂದು
ಕಡಲಿನಾಳವನಳೆದು ಬೆಟ್ಟದುದಿಗಳನೇರಿ
ತುಂಬು ನೀರಬ್ಬರದೆ ಮೆರೆದುದೇನು !
ಅದು ಬದುಕು ಹೊತ್ತಿಗೆಯನುರಿಸಿ ತೀರಿದ ಮೇಲೆ
ಜೀವನಂಬರಿದೆನಿಸಿ ಮತ್ತೆ ಬಾನತ್ತ ಕಡೆ
ಬೆಳ್ಳನ್ನ ತೇಲಿ ಬೆಂಡಾದುದೇನು ! ||23||
ಬಾನಕಡೆಯಳ್ಕರಿಸಿ ಹೊಸ ಬೆಳಕು ಮೂಡಿತ್ತು
ಬಿಸಿಗಾಳಿ ಮೆಲ್ಮೆಲನೆ ತೀಡಿತ್ತು, ದಡದಡಿಸಿ
ಆವಳೋ ಮೈದೂಗಿ ನಡೆದಿರುವಳು !
ಬೆಳಗಿನಾ ಬಿಸಿಲಿನಲಿ ಮೇಲ್ಸೆರಗ ಮುಸುಕಿಕ್ಕಿ
ಹೊಸತು ಹೂದೋಟದಲಿ ತಣಿದ ತುಂಬಿಯ ರೀತಿ
ಹೃದಯದಾನಂದದಲಿ ನಡೆದಿರುವಳು ! ||24||
ವೇಶ್ಯಾವೃತ್ತಿ ತಾತ್ತ್ವಿಕವಾಗಿ ವೆಂಕಟರಾಜರಿಗೆ ತಿರಸ್ಕಾರಾರ್ಹವಾದದ್ದು. ಯಾಕೆಂದರೆ ಅದು ಪರಿಶುದ್ಧವಾದ ಪ್ರೇಮ ಮತ್ತು ಶೃಂಗಾರಗಳಿಗೆ ವಿರುದ್ಧವಾದದ್ದು. ಇಲ್ಲಿ ಉಲ್ಲೇಖಿಸಲೇಬೇಕಾದ ಸಂಗತಿಯೊಂದಿದೆ. ಅದೇನೆಂದರೆ ವೆಂಕಟರಾಜರು ಪ್ರಗತಿಶೀಲ ಪಂಥದ ಕುರಿತು ಒಲವಿರಿಸಿಕೊಂಡವರು. ಅವರ ಕತೆ ಮತ್ತು ಕಾದಂಬರಿಗಳಲ್ಲಿ ಪ್ರಗತಿಶೀಲ ಆಶಯಗಳಿವೆ. ಇತರ ಪ್ರಗತಿಶೀಲರಂತೆ ವೆಂಕಟರಾಜರು ವೇಶ್ಯಾಸಮಸ್ಯೆಯನ್ನು ಬಡವರ ಶೋಷಣೆಯಾಗಿ ಕಾಣುತ್ತಾರೆ. ಅಂದರೆ ವೇಶ್ಯಾಪದ್ಧತಿಯನ್ನು ಅವರು ದ್ವೇಷಿಸುತ್ತಿದ್ದರು; ಆದರೆ ವೇಶ್ಯೆಯರ ಬಗ್ಗೆ ಅವರಿಗೆ ಅನುಕಂಪವಿತ್ತು. ಅವರ ಕತೆ ಕಾದಂಬರಿಗಳಲ್ಲಿ ವೇಶ್ಯೆಯರ ಬಗ್ಗೆ ಅಪಾರ ಅನುಕಂಪ ವ್ಯಕ್ತವಾಗಿದೆ. ಅವರ ‘ಅಂಬುಜಾಕ್ಷಿ’ ಎನ್ನುವ ಕಾದಂಬರಿಯಲ್ಲಿಯೂ ವೇಶ್ಯಾಸಮಸ್ಯೆಯೇ ಪ್ರಧಾನವಾಗಿದೆ.
ಈ ವಸ್ತುವಿಗೆ ಸಂಬಂಧಿಸಿದ ಮೂರನೆಯ ಪ್ರಾತಿನಿಧಿಕ ಕವಿತೆ ‘ಸ್ತ್ರೀಸೂಕ್ತ’. ಇದರಲ್ಲಿ ಸ್ತ್ರೀ ತತ್ತ್ವವನ್ನು ಕುರಿತು, ಮಂತ್ರದಂತಹ ಲಯದಲ್ಲಿ ನಡೆಸಿದ ಚಿಂತನೆಯಿದೆ.
ಸ್ತ್ರೀ ಸೂಕ್ತ
1
ಈ ಜಡತಂತಿಯ ಮೇಲೆ
ಚೈತನ್ಯದ ಬೆರಳಿರಿಸಿ
ಈ ಬಿದಿರಿನ ಕೊಳವೆಯಲಿ
ಗಾನಾಮೃತವನು ಸುರಿಸಿ
ಈ ಕಾಲ್ದೀವಿಗೆಯಲ್ಲಿ
ಹೊಸ ನೇಹವನಳವಡಿಸಿ
ಈ ಕತ್ತಲ ಪದರಿನಲಿ
ಕ್ಷಣ ರೋಚಿಯನಾವರಿಸಿ –
ಈ ಕಲ್ ಕಟ್ಟಡವಿಯಲಿ
ತಿಳಿ ಬುಗ್ಗೆಯನನುವರಿಸಿ
ಈ ನೀಳ್ಮರದುದಿಯಲ್ಲಿ
ಸುಮಸಂಚಯವನು ಸಲಿಸಿ
ಈ ಬದುಕಿನ ಬಯಲಲ್ಲಿ
ಹಚ್ಚನೆ ಹಸಿರನು ಹಾಸಿ
ಈ ಬೆಟ್ಟದ ತೆರಪಿನಲಿ
ತೆಳು ತಂಗಾಳಿಯಬೀಸಿ –
ಈ ನೀರಸಹೃತ್ಪಟಕೆ
ಬಾ ಸ್ವರ್ಗದ ಸೆಲೆಯಾಗಿ !
2
ಈ ಬರಿದೇಗುಲದಲ್ಲಿ
ನಲ್ಮೆಯ ಮೂರ್ತಿಯನಿರಿಸಿ
ಈ ರಣ ರೌರವದಲ್ಲಿ
ಸುಖ ಶಾಂತಿಯನೋಲೈಸಿ
ಈ ಮಯಣದ ಗೂಡಿನಲಿ
ಸವಿಜೇನನು ಸಂಚಯಿಸಿ
ಈ ಮಾಗಿಯ ಮಬ್ಬಿನಲಿ
ಹೊಸ ಸುಗ್ಗಿಯ ಸಿಂಗರಿಸಿ
ಈ ರಾಗದ ರಸನೆಯಲಿ
ನಿರ್ಮಲದಭಿರುಚಿಯೆನಿಸಿ
ಈ ಯಾಗದ ವೇದಿಯಲಿ
ಕಲ್ಪನೆಗಳ ಕಿಚ್ಚುರಿಸಿ
ಈ ಮೋಹ ಸುಷುಪ್ತಿಯಲಿ
ಕರಣಂಗಳನೆಳ್ಚರಿಸಿ
ಈ ಮಾಯಯ ಮೂಸೆಯಲಿ
ಬಂಗಾರದ ಮಳೆ ಸೂಸಿ
ಈ ರೂಕ್ಷ ಚಿದಂಬರಕೆ
ಬಾ ಸ್ವರ್ಗದ ಸೊಲ್ಲಾಗಿ !
3
ಈ ಕರ್ಮ ಕದಂಬದಲಿ
ಮಮಯ ಮಲ್ಲಳಿಯಾಗಿ
ಈ ನರ್ಮ ನಿರೂಪದಲಿ
ಮಾತಾಡುವ ಗಿಳಿಯಾಗಿ
ಈ ಜಗದೇಕಾಂತದಲಿ
ಕೂಗುವ ಕಲೆ ಕುಕಿಲಾಗಿ
ಈ ಮೌನ ದಿಗಂತದಲಿ
ಕುಣಿಕುಣಿವ ನವಿಲಾಗಿ –
ಈ ಹೃದಯ ವಿಚಾರದಲಿ
ಹರಯದ ಹುಮ್ಮಸವಾಗಿ
ಈ ದೈನ್ಯ ವಿಕಾರದಲಿ
ಬೆಮರಿನ ಬೇವಸವಾಗಿ
ಈ ಬದುಕಿನ ಬೇಟದಲಿ
ನಿಡು ಸೇದೆಯ ಸೆದೆಯಾಗಿ
ಈ ನಲುಮೆಯ ನೋಟದಲಿ
ನನೆಯುವ ಮೈನವಿರಾಗಿ –
ಈ ಶೂನ್ಯದ ಸಂಪುಟಕೆ
ಬಾ ಸ್ವರ್ಗದ ಬೆಳಕಾಗಿ !
4
ದಿವದಿವಸದ ಹಾಸದಲಿ
ನಿನ್ನಾಸೆಯ ದನಿವೆರಸಿ
ನವ ಚೇತೋಲ್ಲಾಸದಲಿ
ಕಾಲಂದುಗೆ ಗುಣುಗುಣಿಸಿ
ಸುಖ ದುಃಖ ವಿಕಾಸದಲಿ
ಸಹ ಸಹನೆಯನನುವರಿಸಿ
ಅನುರಾಗ ರಹಸ್ಯದಲಿ
ಪಿಸು ಮಾತಿನಲಿ ಸಂತೈಸಿ –
ಈ ರುದ್ರ ಸಮುದ್ರದಲಿ
ರಸ ಲಹರಿಯನುಚ್ಚಳಿಸಿ
ಚಿರ ವಿರಹದಾಕಾಶದಲಿ
ಧ್ರುವ ತಾರೆಯ ಪಜ್ಜಳಿಸಿ
ಈ ಪುಣ್ಯ ಪರಾಂತದಲಿ
ನಿಸ್ಪೃಹತೆಯ ಸಖಿಯೆನಿಸಿ
ಅನುಮತ ಸಂಸಾರದಲಿ
ಶಿವ ಸುಂದರತೆಯನೊಲಿಸಿ –
ಈ ಭವದ ಭುಜಾಂತರಕೆ
ಬಾ ಭಾಗ್ಯದ ಬದುಕಾಗಿ !
ವೆಂಕಟರಾಜರು ಶೃಂಗಾರ ಕವನಗಳನ್ನು ಬಹುಸಂಖ್ಯೆಯಲ್ಲಿ ಬರೆದಿದ್ದಾರೆ. ಶೃಂಗಾರದ ಹಲವು ಸಂಚಾರೀ ಭಾವಗಳನ್ನು ಅವರು ಅತ್ಯಂತ ಮೃದುಮಧುರ ಪದಗಳಿಂದ ವರ್ಣಿಸುತ್ತಾರೆ. ಈ ಸಂಕಲನದ ಹೆಚ್ಚಿನ ಕವನಗಳು ಶೃಂಗಾರ ಕವನಗಳೇ. ಕೆಲವನ್ನು ಉದಾಹರಿಸುವುದಾದರೆ, ಸಮಾಗಮ, ಪ್ರತೀಕ್ಷೆ, ಬಯಲಾಸೆ, ಬರುವೆನಿದೋ, ಪಿಪಾಸೆ, ನಾನು ನೀನು, ಹಾಡುವ ಬಾ, ಪ್ರಣಯ ಪ್ರಪಂಚ, ಹರಯದ ಹಂಬಲ, ಕೊನೆಯ ಹಾಡು ಇವೆಲ್ಲ ಶೃಂಗಾರದ ವೈವಿಧ್ಯವನ್ನೂ ವೈಭವವನ್ನೂ ಹೇಳುವ ಕವಿತೆಗಳು. ವೆಂಕಟರಾಜರಿಗೆ ಶೃಂಗಾರ ಬರೇ ಹೆಣ್ಣು ಗಂಡಿನ ಆಕರ್ಷಣೆಯಲ್ಲ; ಬದುಕನ್ನು ಅರಿಯುವ ಸ್ಥಾಯೀ ಭಾವ. ಉದಾಹರಣೆಗೆ, ‘ಕೊನೆಯ ಹಾಡು’ ಕವಿತೆಯಲ್ಲಿ ಕವಿ ಹೇಳುತ್ತಾನೆ :
ನಲ್ಲೆಯವಳ ಸೆರಗನೊಂದೆ
ಜೀವಗತಿಗೆ ಹಾಯನೆಸಗಿ
ಭವದ ಬವಣೆಗಳನು ಮೀರಿ
ಸೊಗವನರಸುತಿದ್ದೆನು.
ಕಾವ್ಯ ಮನೋರಮಾ (1961) : ಈ ಕೃತಿಯು ಕಾವ್ಯ ಸಾಧನೆಯ ದೃಷ್ಟಿಯಿಂದ ವೆಂಕಟರಾಜರ ಶ್ರೇಷ್ಠ ಕವನ ಸಂಕಲನವಾಗಿದೆ. ಸ್ವತಃ ವೆಂಕಟರಾಜರಿಗೆ ಈ ಕೃತಿ ತಮ್ಮ ಶ್ರೇಷ್ಠ ಕೃತಿ ಅನ್ನುವ ನಂಬಿಕೆಯಿತ್ತು. ಗುಂಡ್ಮಿ ಚಂದ್ರಶೇಖರ ಐತಾಳರು ಕೂಡ ಅದನ್ನು ಒಪ್ಪಿದ್ದಾರೆ.
‘ಕೆಂಪು ಟೊಪ್ಪಿಯವರು’ ಮುಂತಾದ ಕಥಾಪ್ರಸಂಗಗಳಲ್ಲಿ ಈ ಹಾಸ್ಯಪ್ರಜ್ಞೆಯ ಟೀಕೆ ಸ್ಪಷ್ಟವಾಗಿ ಗೋಚರವಾಗುತ್ತದೆ. ಜತೆಗೆ ಸಮಾಜಕ್ಕೆ ಮಾದರಿಯನ್ನು ಕೊಡುವ ಮೂಲಕ ದೌಷ್ಟ್ಯವನ್ನು ಹಿನ್ನೆಲೆಗೆ ತಳ್ಳುವ ಕ್ರಮವನ್ನು ಅವರು ಅನುಸರಿಸಿದರು.
ಇದೊಂದು ಶೃಂಗಾರ ಕಾವ್ಯ ಅಥವಾ ಶೃಂಗಾರ ಶತಕ. ಇದರ ಎರಡನೆಯ ಭಾಗದಲ್ಲಿ ಶೃಂಗಾರಭಾವದ ಧಾರ್ಮಿಕ ಕಾವ್ಯ ‘ಅಂಬಾಸ್ತವನ’ ಇದೆ. ಈ ಪುಸ್ತಕದ ವೈಶಿಷ್ಟ್ಯ ಎಂದರೆ ವೆಂಕಟರಾಜರು ಸಂಸ್ಕೃತದಲ್ಲಿ ಬರೆದ ವಿವಿಧ ವೃತ್ತಗಳಲ್ಲಿರುವ ನೂರೊಂದು ಚೌಪದಿಗಳನ್ನು ಪುಸ್ತಕದ ಬಲಪುಟಗಳಲ್ಲಿ ಕೊಟ್ಟು ಅದರ ಎದುರಿನ ಪುಟಗಳಲ್ಲಿ ಅದರ ಕನ್ನಡ ಅನುವಾದವನ್ನು ಕೊಟ್ಟಿದ್ದಾರೆ.
ಈ ಚೌಪದಿಗಳು ಮೂಲ ಸಂಸ್ಕೃತದಲ್ಲಿ ವಿವಿಧ ವೃತ್ತಗಳಲ್ಲಿವೆ. ವೆಂಕಟರಾಜರು ಆ ವೃತ್ತಗಳ ಹೆಸರುಗಳನ್ನು ಕೊಟ್ಟಿದ್ದಾರೆ. ಅವುಗಳೆಂದರೆ : ದ್ರುತವಿಲಂಬಿತಮ್, ಪ್ರಹರ್ಷಣೀಯಮ್, ವಸಂತ ತಿಲಕಾ, ಮಾಲಿನೀ ವೃತ್ತಮ್, ಮಂದಾಕ್ರಾಂತಾ, ಹರಿಣೀ ವೃತ್ತಮ್, ಶಿಖರಿಣೀ, ಸ್ರಗ್ಧರಾ, ಶಾರ್ದೂಲ ವಿಕ್ರೀಡಿತಮ್ ಇತ್ಯಾದಿ. ಮೂಲ ಪದ್ಯ ಮತ್ತು ಅನುವಾದದ ಒಂದು ಉದಾಹರಣೆ ಕೆಳಗಿದೆ (ವೆಂಕಟರಾಜರು ದೇವನಾಗರೀ ಲಿಪಿಯಲ್ಲಿಯೇ ಮೂಲವನ್ನು ಕೊಟ್ಟಿದ್ದಾರೆ ; ಇಲ್ಲಿ ಕನ್ನಡ ಲಿಪಿಯಲ್ಲಿ ಕೊಡಲಾಗಿದೆ):
ವಸಂತ ತಿಲಕಾ
ಮೂಲ: ಮಾನೋದ್ಧತಾ ಮಧುರ ಮಂಗಲ ಮಂಡನಾನಿ
ತ್ಯಕ್ತ್ವಾ ಮುಧಾ ತರುಣಚಿತ್ತವಿಲೋಭನೀಯಾಮ್
ನ ಪ್ರಾರ್ಥಿತಾಪಿ ಮುಮುಚೇ ಪರಿಬದ್ಧನೀವೀಂ
ಸಾ ತಾಮ್ರಚೂಡ ವಿರುತೈಃ ಶಿಥಿಲೀ ಚಕಾರ
ಅನುವಾದ : ಮಾನವತಿ ತೊರೆದು ಮಧು ಭೂಷಣಂಗಳನೆಲ್ಲ
ಏನೊ ಮುನಿಸಿನಲಿ ಮಲಗಿ ಮೈಸೆರಗು ಮುಚ್ಚಿ
ನಾನೆನಿತು ಕರೆದರೂ ಬಿಚ್ಚಲೊಲ್ಲದ ಕಟ್ಟು
ತಾನೆ ಸಡಿಲಿತು ಕೋಳಿ ಕೂಗುತಿರೆ ಬೆಚ್ಚಿ !
‘ಅಂಬಾಸ್ತವನ’ದಲ್ಲಿ 26 ಸಂಸ್ಕೃತ ಚೌಪದಿಗಳು ಮತ್ತು ಅವುಗಳ ಕನ್ನಡ ಅನುವಾದವಾದ 26 ಚೌಪದಿಗಳು ಎದುರು ಬದುರು ಪುಟದಲ್ಲಿವೆ. ಒಂದು ಚೌಪದಿ ಹೀಗಿದೆ:
ಜಳ್ಳು ಕಬ್ಬಿನ ಬಿಲ್ಲನೆತ್ತಿ ಪರಶಿವನೊಡನೆ
ಸಲ್ಲದಿಹ ಕಾದಾಟದಪಯಶಸಿಗಾಗಿ
ಮೆಲ್ಲಮೆಲ್ಲನೆ ಬಂದು ನಿನ್ನ ಮಧ್ಯವ ಹಿಡಿದು
ಗೆಲ್ಲಲೆಂದೇ ಕಾದು ನಿಂತಿಹನು ತಿರುಗಿ
ಮೂರನೆಯ ಘಟ್ಟ: ಸಮಾಜ ವಿಮರ್ಶೆ
4. ಮಾನಸಗಂಗೆ , ಶ್ರೀ ಕೃಷ್ಣ ಪ್ರಕಾಶನ, ಉಡುಪಿ : 1960
5. ಪದ್ಮಸರೋವರ , ಶ್ರೀ ಕೃಷ್ಣ ಪ್ರಕಾಶನ, ಉಡುಪಿ : 1967
6. ಮಾನಸಪುಷ್ಪ , ಶ್ರೀ ಕೃಷ್ಣ ಪ್ರಕಾಶನ, ಉಡುಪಿ : 1967
7. ಚಿಂತಾಮಣಿ , ಶ್ರೀ ಕೃಷ್ಣ ಪ್ರಕಾಶನ, ಉಡುಪಿ : 1979
ಎರಡನೆಯ ಘಟ್ಟದಲ್ಲಿ ವಾಸ್ತವದ ಸ್ಪರ್ಶ ಪಡೆದ ಕವಿತೆಗಳನ್ನು ಬರೆಯಲಾರಂಭಿಸಿದ ವೆಂಕಟರಾಜರ ಕವಿತೆಗಳಲ್ಲಿ ಮೂರನೆಯ ಘಟ್ಟದಲ್ಲಿ ಸ್ಪಷ್ಟವಾದ ಬೆಳವಣಿಗೆ ಕಾಣುತ್ತದೆ. ಅವರು ತಮ್ಮ ಸಾಹಿತ್ಯ ಮೀಮಾಂಸೆಯ ಲೇಖನವೊಂದರಲ್ಲಿ ‘ಸಾಹಿತ್ಯ ಆಹಾರದಂತಿರಬೇಕು; ಕೆಲವೊಮ್ಮೆ ಸಾಹಿತ್ಯ ಮದ್ದು ಕೂಡಾ ಆಗಿರುತ್ತದೆ. ಸಮಾಜದಲ್ಲಿ ದೋಷಗಳು ಇದ್ದಾಗ ಸಾಹಿತ್ಯ ಕೃತಿಗಳು ಶಾಶ್ವತ ಮೌಲ್ಯದ್ದಲ್ಲವಾದರೂ ಪರವಾಗಿಲ್ಲ; ಆದರೆ ತಕ್ಷಣದ ಸಮಸ್ಯೆಗಳನ್ನು ನಿವಾರಿಸಲು ಜನಶಿಕ್ಷಣ ನೀಡುವಂತಿರಬೇಕು’ ಎಂದು ಹೇಳಿರುವುದು ಗಮನಾರ್ಹ. ಅವರು ಈ ಬದಲಾವಣೆಯನ್ನು ಉದ್ದೇಶಪೂರ್ವಕವಾಗಿ ಮಾಡಿಕೊಂಡಿರುವುದಕ್ಕೆ ಇದು ಸಾಕ್ಷಿಯಾಗಿದೆ.
ಈ ಘಟ್ಟದ ಮೊದಲನೆಯ ಕವನಸಂಕಲನ ‘ಮಾನಸಗಂಗೆ’ಗೆ (1960) ವೆಂಕಟರಾಜರು ರಾಜ್ಯ ಸರಕಾರದ ಬಹುಮಾನವನ್ನು ಪಡೆದಿದ್ದಾರೆ. ಈ ಸಂಕಲನದಲ್ಲಿ ಅವರ ನವೋದಯ ಮಾದರಿಯ ಸುಂದರ ಭಾವಗೀತೆಗಳೂ ಇವೆ. ಮುಖ್ಯವಾದ ಬದಲಾವಣೆ ಎಂದರೆ ಅವರು ಈ ಘಟ್ಟದಲ್ಲಿ ಛಂದಸ್ಸಿನಲ್ಲಿ ವೈವಿಧ್ಯವನ್ನು ಪ್ರಯೋಗಿಸದೆ, ಚೌಪದಿಯೊಂದನ್ನೇ ಇಟ್ಟುಕೊಂಡು ವಿವಿಧ ಸಮಕಾಲೀನ ವಸ್ತುಗಳನ್ನು ನಿರ್ವಹಿಸಿದ್ದಾರೆ. ಅವರ ‘ಚಿಂತಾಮಣಿ’ ಎಂಬ ಸಂಕಲನದಲ್ಲಿ ವಿಡಂಬನಾತ್ಮಕ ಮತ್ತು ಜೀವನಾನುಭವದ ಬಿಡಿ ಚೌಪದಿಗಳಿವೆ.
ವೆಂಕಟರಾಜರ ದೃಷ್ಟಿಕೋನದಲ್ಲಿ ಆದ ಬದಲಾವಣೆಯನ್ನು ಅವರು ಒಂದೇ ವಸ್ತುವನ್ನು (ಹಳ್ಳಿ) ಎರಡು ವಿಭಿನ್ನ ರೀತಿಗಳಲ್ಲಿ ನಿಭಾಯಿಸಿರುವುದನ್ನು ಅಧ್ಯಯನಮಾಡಿದಾಗ ತಿಳಿಯಬಹುದು. ನವೋದಯದ ರಮ್ಯ ಮನೋಭಾವದಿಂದ (ಪ್ಯಾಸ್ಟೋರಲ್) ಮನೋಭಾವದಿಂದ ಅವರು ಹಳ್ಳಿಯನ್ನು ಕಂಡು ಬರೆದ, ‘ಹಳ್ಳಿಯ ಹಾಡು’ ಕವನದ ಸಾಲುಗಳು ಹೀಗಿವೆ:
ಅಲ್ಲಲ್ಲಿಯೆ ಕೈಚೆಲ್ಲಿದ ನೆರಳು
ಮೆಲ್ಮೆಲ್ಲನೆ ಮೆಲುಕಾಡುವ ಬಿಸಿಲು
ಮಲ್ಲಳಿಗೊದಗುವ ನಗೆ ಮುದ್ದರಳು
ಎಲ್ಲೆಲ್ಲಿಯು ಗೆಲು ತುಂಬಿದ ಬಾಳು
ಆ ಕಡೆ ಕಾಣುವ ಬಿಂಕದ ನವಿಲು
ಈ ಕಡೆ ಕೇಳುವ ಹರುಷದ ಕುಕಿಲು
ನಾಕದ ಪುಣ್ಯದ ಸಾವಿರಪಾಲು
ಬೇಕೆಂಬರ ಬಾಯ್ಗೊದಗುವ ಹಾಲು
ವಾಸ್ತವದ ಅರಿವಿನ ಸಮಾಜ ವಿಮರ್ಶೆಯ ಘಟ್ಟದಲ್ಲಿ ಹಳ್ಳಿಯನ್ನು ಕವಿ ಕಂಡಾಗ ಅವರಿಗೆ ಹಳ್ಳಿಯ ವಾಸ್ತವ ದರ್ಶನವಾಗುತ್ತದೆ. ‘ನನ್ನದೊಂದೂರು’ ಕವನದಲ್ಲಿರುವ ಹಳ್ಳಿಯ ಚಿತ್ರ ಇದು:
ಹೆಜ್ಜೆ ಹೆಜ್ಜೆಗೆ ಕಾಲಿಗೆಡಹುತಿಹ ಕಲ್ಲು
ಅಜ್ಜಿಯರಿವೆಯನೆತ್ತಿ ಕಟ್ಟಿರುವ ಕೋಲು
ದಾರಿಯಲಿ ಬಿಸುಟಿರುವ ಹಣ್ಣುಗಳ ಸಿಪ್ಪೆ
ಜಾರಿಬಿದ್ದರೆ ಜನರು ನಗುತಿಹುದು ತಪ್ಪೆ ?
*****
ಅಲ್ಲೆ ನಿಂತಿರಬೇಕು ಬರುವನಂತೋಣಿ
ಸಿಳ್ಳು ಹೊಡದರೆ ಸಾಕು – ಅವನಮೃತ ಪಾಣಿ
ಕಳ್ಳಲ್ಲ – ಶುದ್ಧ ಕಾಂಗ್ರೆಸ್ಸಿನ ಕಷಾಯ
ಹಳ್ಳಿಯಲಿ ದೊಡ್ಡವರ ಸಣ್ಣ ವ್ಯವಸಾಯ !
*****
ನಮ್ಮೂರಿಗೊದಗಿರುವ ಹೊಸ ಶಾನುಭಾಗ
ಅವರಿವರ ಸೇವೆ ಕೈಗೊಂಬ ಹೆಡೆನಾಗ
ಹಾವು ಹುತ್ತವನುಳಿದು ಹೊಲಕೆ ಬಂದಾಗ
ಊರರೈತನಿಗೆ ತಗಲುವುದು ಹೃದ್ರೋಗ !
– ಹೀಗೆ ಹಳ್ಳಿಯು ಭ್ರಷ್ಟವಾಗುತ್ತಿರುವುದನ್ನು ವೆಂಕಟರಾಜರು ಕಾಣಿಸುತ್ತಾರೆ. ಹಳ್ಳಿಗಳಲ್ಲಿ ಮರಿ ಪುಡಾರಿಗಳು, ಭ್ರಷ್ಟಾಚಾರಿಗಳು ಹುಟ್ಟಿಕೊಂಡುದನ್ನು ಅವರು ತಮ್ಮ ಆ ಕಾಲದ ಕತೆ, ಹಾಸ್ಯಬರಹಗಳಲ್ಲಿಯೂ ಚಿತ್ರಿಸಿದ್ದಾರೆ.
ಕವಿಯಲ್ಲಿ ಆಗಿರುವ ಇನ್ನೊಂದು ಬದಲಾವಣೆ ಎಂದರೆ ವ್ಯಂಗ್ಯ ಮತ್ತು ಹಾಸ್ಯ ದೃಷ್ಟಿಕೋನ. ಭ್ರಷ್ಟಾಚಾರ ಮತ್ತು ಪ್ರಗತಿವಿರೋಧಿ ವಿಷಯಗಳ ಟೀಕೆಗೆ ಈ ದೃಷ್ಟಿಕೋನವನ್ನು ಅವರು ಬಳಸಿಕೊಳ್ಳುತ್ತಾರೆ. ‘ಮಾನಸಗಂಗೆ’ ಸಂಕಲನದ ಕೆಲವು ಕವಿತೆಗಳಲ್ಲಿ ನಾಯಿಯೊಂದನ್ನು ಪಾತ್ರವಾಗಿ ತಂದು ಅದರ ಮೂಲಕ ತಿರಸ್ಕಾರ ವ್ಯಕ್ತಪಡಿಸುವ ತಂತ್ರವೊಂದನ್ನು ಅವರು ಬಳಸಿದ್ದಾರೆ. ಈ ಬಗೆಯ ಒಂದು ಮುಖ್ಯವಾದ ಕವನ ‘ನಾಯ ನರಕ’. (ಹಳ್ಳಿಯ ಚಿತ್ರಣಗಳಲ್ಲಿ ನಾಯಿಯನ್ನು ಒಂದು ಸಂಕೇತವಾಗಿ ಅವರು ಬಳಸಿರುವುದೂ ಇದೆ).
ನಾಯಿಯೊಂದು ನರಕದಿಂದ
ಬಂದು ಸ್ವರ್ಗವಿಣಿಕಿತು
ಬಾಯತೆರೆದು ಜೊಲ್ಲು ಸುರಿಸಿ
ಕಣ್ಣು ಕಣ್ಣು ಬಿಟ್ಟಿತು !
– ಅಲ್ಲಿರುವವರು ಪುರಾಣ ಪ್ರಸಿದ್ಧ ವ್ಯಕ್ತಿಗಳು. ಅವರ ಅವಸ್ಥೆ ಮಾತ್ರ ಹಾಸ್ಯಾಸ್ಪದ.
ಬೊಜ್ಜು ಬೆಳೆದ ಸುರೆಯ ಗುಂಗಿ
ನೆನಿತೊ ದೇವ ದೇವರು
ಲಜ್ಜೆಯುಳಿದ ಸೂಳೆಯರು ಸ
ಮೃದ್ಧ ಸುಖವನೀವರು !
ನೂರು ಕುದುರೆ ಕೊಂದು ಸಗ್ಗ
ವೇರಿ ಕುಳಿತ ರಾಜರು
ಯಾರ ಮನೆಯನೇನೊ ಸುಟ್ಟು
ಶೂರರೆನಿಸಿದೋಜರು !
ಕೊನೆಗೆ –
ನಾಯಿಯೊಂದು ನರಕದಿಂದ
ಒಂದು ಮೆಲ್ಲನಿಣಿಕಿತು
ಸಾಯಲಿ ನನಗದೇ ಸಾಕು –
ಎಂದು ಹಿಂದಕೋಡಿತು !
‘ಪ್ರಜಾವಾಣಿ’ ಯಲ್ಲಿ ಕೆ. ಎಸ್. ನರಸಿಂಹಸ್ವಾಮಿಯವರು ‘ಮಾನಸಗಂಗೆ’ ಕವನಸಂಕಲನವನ್ನು ವಿಮರ್ಶಿಸುತ್ತಾ ಹೀಗೆ ಹೇಳಿದ್ದಾರೆ : “ಪಡುವಣ ಕರಾವಳಿಯ ಶ್ರೀ ವೆಂಕಟರಾಜರು ಕನ್ನಡಿಗರು ಬಲ್ಲ ಹೆಸರಾಗಿದ್ದಾರೆ. ಮಾನಸಗಂಗೆಯ 59 ಕವನಗಳು ಅವರ ಆರೇಳು ವರುಷದ ಕೃಷಿಯ ಫಲ. ಇಲ್ಲಿನ ಕವನಗಳೆಲ್ಲ ಸಾಮಾನ್ಯವಾಗಿ ಹಿತಮಿತ ಸ್ವಭಾವದವು. ‘ಗೌರವಾರ್ಪಣೆ’ ‘ಪದ್ಧತಿಯ ಪುಣ್ಯಾತ್ಮರು’ ಮುಂತಾದ ಕೆಲವು ಕವನಗಳ ವ್ಯಂಗ್ಯವೂ ಆ ಮಿತಿಯಲ್ಲೇ ಇದೆ.
ಬಾಳ ಬತ್ತಳಿಕೆ ಬರಿದಾಗಿಹುದು ; ಸೋತು
ಬಿಲ್ಲು ಬಿದ್ದಿಹುದು ; ಮುಂಗಾಣದಿಹ ಹದನ :
ಅಲ್ಲಿ ಹೂತಿದೆ ರಥದ ಗಾಲಿ ; ಕುಟುಂಬದ ಕುದುರೆ.
ಎಲ್ಲಿರುವೆ ನೀನು ? ಕೈ ಮೀರುತಿದೆ ಕದನ
– ಎನ್ನುವ ಘಟ್ಟದಲ್ಲಿ ಮಾತು ಖಚಿತವಾಗಿ ಸಚಿತ್ರವಾಗಿದೆ.” (29. 5. 1961)
ವೆಂಕಟರಾಜರು ‘ಮಾನಸಗಂಗೆ’ ಸಂಕಲನದಲ್ಲಿ ತೊಡಗಿದ ಸಮಾಜ ವಿಮರ್ಶೆಯನ್ನು ‘ಪದ್ಮ ಸರೋವರ’ ಮತ್ತು ‘ಮಾನಸ ಪುಷ್ಪ’ ಸಂಕಲನಗಳಲ್ಲಿ ಮುಂದುವರಿಸಿದ್ದಾರೆ.
ದೇಶದ ಆಗುಹೋಗುಗಳನ್ನು ವ್ಯಂಗ್ಯವಾಗಿ ನೋಡುವ ದೃಷ್ಟಿಕೋನ ವೆಂಕಟರಾಜರಿಗೆ ಈ ಕಾಲದಲ್ಲಿ (ಬಹುಶಃ ತಮ್ಮ ಪತ್ರಿಕೋದ್ಯಮದಿಂದಾಗಿ) ಪ್ರಾಪ್ತವಾಗಿತ್ತು. ಈ ದೃಷ್ಟಿಕೋನದಿಂದ ಅವರು ಕವನಗಳನ್ನು ಮತ್ತು ಚೌಪದಿಗಳನ್ನು ಬರೆದು ತಮ್ಮ ಪತ್ರಿಕೆಯಲ್ಲಿ ನಿಯಮಿತವಾಗಿ ಪ್ರಕಟಿಸುತ್ತಿದ್ದರು. ಚೌಪದಿಗಳನ್ನು ಅವರು ‘ಚಿಂತಾಮಣಿ’ ಸಂಗ್ರಹದಲ್ಲಿ ಸೇರಿಸಿದರು. ಕವನಗಳು ‘ಪದ್ಮಸರೋವರ’ ಮತ್ತು ‘ಮಾನಸಪುಷ್ಪ’ ಸಂಕಲನಗಳಲ್ಲಿ ಸೇರಿವೆ. ಇಂತಹ ಕವನಗಳೆಂದರೆ, ‘ಪತ್ರಿಕಾ ಪ್ರಪಂಚ’, ‘ಸತ್ಯಾಗ್ರಹ’, ‘ಬೀದಿ ಭಾಷಣ’ ಮತ್ತು ‘ಸಹಕಾರ’. ‘ಪರಸ್ಪರ’ ಕವನದಲ್ಲಿ ಒಂದು ಕಥನದ ಮೂಲಕ ಇಂದಿನ ಪೀಡಕ ರಾಜಕಾರಣಿಗಳು ಅಂದಿನ ರಾಕ್ಷಸರು ಎಂದು ತೋರಿಸಿದ್ದಾರೆ. ಪಾತಾಳ ಲೋಕದ ಅಹಿರಾವಣ ಮತ್ತು ಮಹಿರಾವಣ ಎಂಬ ರಾಕ್ಷಸರು ಪರಸ್ಪರ ಸಹಕಾರದಿಂದ ಭೂಮಿಯ ಮೇಲೆ ರಾಜಕಾರಣಿಗಳಾಗುತ್ತಾರೆ. ಅವರ ಸಹಕಾರ ಹೀಗೆ :
ನಾನು ಕಣ್ಣುಕ್ಕಿದರೆ ನೀನಂಗ ವಸ್ತ್ರದಲಿ
ಸುರಿಯುತಿಹ ಕಣ್ಣೀರನೊರಸು
ನಾನು ತಲೆ ಮೆಟ್ಟಿದರೆ ನೀನು ಕಾಲನು ಹಿಡಿದು
ಸಂತೈಸಿ ಅಡಿನೆಲವ ಸರಿಸು
ನಮ್ಮದಿದು ಸಮಪಾಲು – ನಮ್ಮ ನೀರಿಗೆ ಹೆರರ
ಹಾಲು ಸೇರಿಸುವ ವ್ಯಾಪಾರ
ನಮಗು ನಮ್ಮವರಿಗೂ ಹೊಟ್ಟೆ ತುಂಬಿದ ಮೇಲೆ
ಮತ್ತೆಲ್ಲ ಲೋಕದುದ್ಧಾರ !
‘ಸತ್ಯಾಗ್ರಹ’ ಕವನದಲ್ಲಿ ಪಕ್ಷದವನೇ ಒಬ್ಬ (ಧರ್ಮರಾಯನ ಮರಿಮಗ!) ಧರಣಿ ಮುಷ್ಕರ ಮಾಡುತ್ತಾನೆ. ಅವನಿಗೆ ವರಿಷ್ಠರು ಬದುಕುವ ದಾರಿ ಹೇಳಿಕೊಡುತ್ತಾರೆ :
ಎಂದ ಮಾತನು ಕೇಳಿ ಜನಮೇ
ಜಯನ ಗರ್ವವು ಹೋಯಿತು
ಖಾದಿ ಬೋರ್ಡಿನ ಬ್ರಹ್ಮ ಪಟ್ಟಕೆ
ಅವನ ನೇಮಕವಾಯಿತು !
‘ಹುಲಿಯಾಳು’ ಎಂಬ ಕವನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹುಲಿವೇಷವನ್ನು ವರ್ಣಿಸುತ್ತಾ ಅದನ್ನು ರಾಜಕಾರಣಿಗಳಿಗೆ ಅನ್ವಯಿಸಿದ್ದಾರೆ :
ಅಷ್ಟಮಿಯೆಂದರೆ ಅಷ್ಟಮಿಯೆನುವ
ಮೊಹರಂ ಬಂದರೆ ಅದಕೂ ಸಲುವ
ನವರಾತ್ರಿಯೊಳೊಂಬತ್ತರ ಚೆಲುವ
ಹುಲಿಗಳು ಹೊರಟಿವೆ ಜಾಗ್ರತೆ !
ಈಗ ಪ್ರಕಟವಾದರೂ ಇಂತಹ ಕವಿತೆಗಳು ವರ್ತಮಾನದ ವಾಸ್ತವ ಎನಿಸುವುದು ವಿಶೇಷ!
‘ಉತ್ತಿಷ್ಠತ ಜಾಗೃತ’ ಕವನದಲ್ಲಿ ಸಾಹಿತಿ ತನ್ನ ಬಡತನದ ಚಿಂತೆಯಲ್ಲಿರುತ್ತ ಅವರಿವರ ಮಾನ ಸನ್ಮಾನಗಳ ನಿರೀಕ್ಷೆಯಲ್ಲಿರುತ್ತ ಕುಗ್ಗಿ ಹೋಗದೆ ತ್ರಿವಿಕ್ರಮನಾಗಿ ಬೆಳೆಯಬೇಕು, ಪಾಂಚಜನ್ಯವನ್ನು ಊದಬೇಕು, ಅನ್ಯಾಯವನ್ನು ಖಂಡಿಸಲು ಕವಿ ನಾಯಕತ್ವವನ್ನು ವಹಿಸಿಕೊಳ್ಳಬೇಕು ಎಂದು ವೆಂಕಟರಾಜರು ಈ ಕವನದಲ್ಲಿ ಹೇಳುತ್ತಾರೆ :
ರಕ್ತದಿಂದದ್ದಿ ಹೊರಬರಲಿ ಸಾಹಿತ್ಯ
ಲೇಖನಿಯಿದಲ್ಲ ಕತ್ತಿಯ ಮೊನೆಯ ಹರಿತ !
ಸತ್ತರೂ ನೀ ಸಾಯದವನು
ಇವರ ದಬ್ಬಾಳಿಕೆಯು ನಿನ್ನ ಮುಂದೇನು ?
ಸಾಹಿತ್ಯದ ಶಾಶ್ವತ ಮೌಲ್ಯಗಳ ಕುರಿತು ‘ಕವಿಯ ಗೌರವ’ ಕವಿತೆಯಲ್ಲಿ ಅವರು ಹೀಗೆ ಬರೆದಿದ್ದಾರೆ :
ಕವಿಯೆ! ನಿನ್ನನುಭವಗಳ
ಹೊರೆಯ ಹೊತ್ತು ಬಂದೆಯ?
ಸಿಹಿನುಡಿಗಳ ಸಕ್ಕರೆಯಲಿ
ಕಹಿಯನದ್ದಿ ತಂದೆಯ?
– ಎಂದು ಪ್ರಾರಂಭವಾಗುವ ಕವನದಲ್ಲಿ ಕಾವ್ಯ ಕರ್ಮದ ಹಲವು ನೆಲೆಗಳನ್ನು ಪ್ರಸ್ತಾಪಿಸುತ್ತಾ :
ಮುಂದೆ ಮುಂದೆ ನಡೆವ ದಾರಿ
ಅದರ ಬೀಗ ತೆರೆದೆಯ?
ಮಂದಿ ಮಂದಿ ಬವಣೆಗಾಗಿ
ಕಣ್ಣ ನೀರು ಸುರಿದೆಯ?
ನಗೆಯ ಬಾಳು ಹಗೆಯ ಗೋಳು
ಅದನು ತೂಗಿ ಬರೆದೆಯ?
ಜಗದ ಹಾಸು ಹೊಕ್ಕುಗಳಲಿ
ಬಣ್ಣವಾಗಿ ಬೆರೆದೆಯ?
– ಎಂದು ಕೇಳುತ್ತಾರೆ. ಇದು ಅವರ ಕಾವ್ಯದ ಮ್ಯಾನಿಫೆಸ್ಟೋ ಕವಿತೆ.
ಚುಟುಕುಗಳು ಅಥವಾ ಚೌಪದಿಗಳು: ವೆಂಕಟರಾಜರು ತಮ್ಮ ‘ವೀರಭೂಮಿ’ ಪತ್ರಿಕೆಗಾಗಿ ರಾಜಕೀಯ ಮತ್ತು ಸಮಾಜ ವಿಡಂಬನೆಯ ಚೌಪದಿಗಳನ್ನು ಬರೆಯುತ್ತಿದ್ದರು. ಇವುಗಳನ್ನೆಲ್ಲ ಸಂಕಲಿಸಿ, ಲೋಕಾನುಭವದ ಚೌಪದಿಗಳನ್ನು ಕೂಡ ಈ ಸಂಗ್ರಹಕ್ಕೆ ಸೇರಿಸಿ ಅವರು ‘ಚಿಂತಾಮಣಿ’ ಎಂಬ ಸಂಕಲನವನ್ನು ಪ್ರಕಟಿಸಿದರು. ಈ ಚೌಪದಿಗಳ ಮಾದರಿಯನ್ನು ಕೆಳಗೆ ಕೊಡಲಾಗಿದೆ:
ಹೋರಿ ಬಂದರೆ ಮೂರು ಹೆಜ್ಜೆ ಹಿಂಜರಿಯೋಣ
ಕಾರು ಬಂದರೆ ಮೂರು ಮಾರು ಸರಿಯಣ್ಣ
ದಾರಿಯನೆ ಬಿಡಬೇಕು ಬಸ್ಸು ಬಂದಾಕ್ಷಣ
ಲೋರಿ ಬಂದರೆ ಕೇರಿ ಬಿಡುವವನೆ ಜಾಣ !
ಕೇಳಿದಿರ ನೀವಿರಾನಿನ ಕತೆಯನದ –
ಕಾವನೊಬ್ಬನು ಸುರಿಸಲಿಲ್ಲ ಕಣ್ಣೀರ
ಎಲ್ಲ ಸಂಭಾವಿತರ ಕಣ್ಣೀರಿಗಿಂತಲೂ
ಅಲ್ಲಿ ಸಿಗುವಂತ ತೈಲವೆ ಹೆಚ್ಚು ಭಾರ
ನಾರದ ಉವಾಚ – ಈ ಕಲಿಯುಗದ ಕೊನೆಯಲ್ಲಿ
ದುಡ್ಡು ಮಾಡಲಿಕಿಹುದು – ಮಾರ್ಗ ಮೂರು
ಕಾಫಿ ಹೋಟೆಲಿಡು – ಕಳ್ಳಿನಂಗಡಿ ಮಾಡು
ಕ್ಷೀರ ಕೇಂದ್ರವ ತೆರೆದು ನೀರು ಮಾರು !
ಹೋಗದೂರಿಗೆ ದಾರಿ ಕೇಳಿ ಫಲವೇನಯ್ಯ ?
ಹೋಗುವಲ್ಲಿಗೆ ಹೋಗಲಿಕೆ ಸಮಯವಿಲ್ಲ
ಆ ಬೆಟ್ಟ ಆ ಬಯಲು ಆ ಕಣಿವೆಗಳ ಸಾಲು
ಆ ಕರಾವಳಿ ಕಡಲುಗಳನೆ ಕಂಡಿಲ್ಲ
ನಾಲ್ಕನೆಯ ಘಟ್ಟ: ಜೀವನ ತತ್ವಗಳ ಶೋಧನೆ.
ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಆದರೆ ಸಂಕಲನವಾಗಿ ಪ್ರಕಟವಾಗದೆ ಹಸ್ತಪ್ರತಿಯಲ್ಲಿ ಉಳಿದಿರುವ ಕವಿತೆಗಳು ಈ ಘಟ್ಟಕ್ಕೆ ಸೇರುತ್ತವೆ. ಅವುಗಳನ್ನು ಮೂರು ಅಪ್ರಕಟಿತ ಕೃತಿಗಳೆಂದು ಪರಿಗಣಿಸಬಹುದು.
1. ರಂಗವಲ್ಲಿ [ 26 ಕವನಗಳ ಹಸ್ತಪ್ರತಿ ಸಂಕಲನ]
2. ಶ್ರಾವಣದ ಮೊದಲ ದಿನ [25 ಕವನಗಳ ಹಸ್ತಪ್ರತಿ]
3. ಚಿರಂಜೀವಿ [ಅಪ್ರಕಟಿತ ಕಥನ ಕವನ]
‘ರಂಗವಲ್ಲಿ’ ಸಂಕಲನದಲ್ಲಿ 38 ಕವನಗಳಿವೆ. ಇದರಲ್ಲಿ 1965 ರಿಂದ 1973 ರವರೆಗೆ ಬರೆದ ಕವನಗಳಿವೆ. ಕೆಲವು ಕವಿತೆಗಳು ಸಮಾಜ ವಿಮರ್ಶೆಯ ಕವಿತೆಗಳಾಗಿ ಎರಡನೆಯ ಘಟ್ಟಕೆ ಸೇರುವಂತಹವೂ ಇವೆ. ಈ ಸಂಕಲನದಲ್ಲಿ ವೆಂಕಟರಾಜರು ಮತ್ತೆ ಛಂದೋವೈವಿಧ್ಯವನ್ನು ತಂದಿದ್ದಾರೆ, ಸಾರ್ವಕಾಲಿಕವಾದ ವಸ್ತುಗಳನ್ನು ಕುರಿತು ಬರೆಯಲು ತೊಡಗಿದ್ದಾರೆ. ಆದರೆ ಸಕಾಲಿಕವಾದ ಸಮಾಜಮುಖಿಯಾದ ಚಿಂತನೆ – ವಿಡಂಬನೆಗಳನ್ನು ಮುಂದುವರಿಸಿದ್ದಾರೆ. ಈ ಸಂಕಲನದಲ್ಲಿ ರಾಜಕಾರಣಿಗಳ ಭ್ರಷ್ಟಾಚಾರ, ಜಾತೀಯತೆ ಮತ್ತು ದರ್ಪದ ನಡವಳಿಕೆಗಳನ್ನು ವ್ಯಂಗ್ಯವಾಗಿ ಟೀಕಿಸಿದ್ದಾರೆ.
‘ಜಾರುಬಂಡಿ’ [25. 11. 1970] ಎಂಬ ಕವನದಲ್ಲಿ ಸಾಹಿತ್ಯ ಲೋಕದಲ್ಲಿ ಆಗುತ್ತಿದ್ದ ಬದಲಾವಣೆಗಳನ್ನು ಒಂದು ಒಂದು ಸಣ್ಣ ಕಥನಕವನದಂತೆ ಹೇಳಿದ್ದಾರೆ. ನವ್ಯ ಸಾಹಿತಿಗಳನ್ನು ವಿಡಂಬಿಸುವ ಈ ಕವನದಲ್ಲಿ ನವ್ಯ ಸಾಹಿತಿಯೊಬ್ಬ ತುಂಡುಲಂಗದ ಸರಸ್ವತಿಯೊಂದಿಗೆ ಅಲೆಯುತ್ತಿರುತ್ತಾನೆ. ಜನ ಅವನನ್ನು ಕುತೂಹಲದಿಂದ ಇಣಕಿ ನೋಡುತ್ತಾರೆ. ನವ್ಯ ಸಾಹಿತಿಯ ಬಗ್ಗೆ, “ಫಿಟ್ಟು ಪೇಂಟಿನ ಹಿಪ್ಪಿಗೂದಲಿನ ಕೋತಿ / ಆದರೀ ಪೀಳಿಗೆಯಲವನದೇ ಖ್ಯಾತಿ !” ಎಂದು ವ್ಯಂಗ್ಯವಾಡಿದ್ದಾರೆ. ಮುಂಡಾಸುಧಾರಿಗಳ ಮಡಿವರ್ಗ ಬರೆದ ಸಾಹಿತ್ಯ ಬದಲಾಗಬೇಕು ; ಬಡವರನ್ನು ಅರಿಯುವುದೆ ಮುಖ್ಯ ಎಂದು ನವ್ಯ ಸಾಹಿತಿ ಬಡವರ ಕೇರಿಗೆ ಹೋಗುತ್ತಾನೆ. ಆಗ :
ಯಾರು ಕೇಳಲೆಯಿಲ್ಲ ಸರಸತಿಯ ಮಾತ
ನವ್ಯ ಸಾಹಿತಿಗಾಯ್ತು ಹೃದಯದಾಘಾತ
ಆ ದರಿದ್ರರ ಮನೆಯ ಚಾವಡಿಯ ಹತ್ತಿ
ತಳವೂರಿ ಕುಳಿತಿದ್ದನು ದಲಿತ ಸಾಹಿತಿ !
ಈ ಕಾಲಘಟ್ಟದ ಎರಡು ಪ್ರಾತಿನಿಧಿಕ ಕವಿತೆಗಳನ್ನು ಇಲ್ಲಿ ಕೊಡಲಾಗಿದೆ. ಅವು: 1. ಸಂಪ್ರದಾಯ. 2. ಶ್ರಾವಣದ ಮೊದಲ ದಿನ.
‘ಸಂಪ್ರದಾಯ’ ಅನ್ನುವುದು ‘ರಂಗವಲ್ಲಿ’ ಸಂಕಲನದಲ್ಲಿದೆ. ‘ಸಂಪ್ರದಾಯ’ ಕವಿತೆಯಲ್ಲಿ ಸಮಾಜ ವಿಡಂಬನೆ ಇದ್ದರೂ, ಅದನ್ನು ಧ್ವನಿಪೂರ್ಣವಾಗಿ ಹೇಳಿರುವುದು ಈ ಕವಿತೆಯನ್ನು ಮೂರನೆಯ ಘಟ್ಟದಿಂದ ಭಿನ್ನವಾಗಿ ನಿಲ್ಲಿಸುತ್ತದೆ. ಹಾಗಾಗಿ ಇದನ್ನು ನಾಲ್ಕನೆಯ ಘಟ್ಟಕ್ಕೆ ಸೇರಿಸಿರುವುದು ಸಮರ್ಥನೀಯವಾಗಿದೆ.
ಸಂಪ್ರದಾಯ
1
ನಾನಂತೂ ಗತಕಾಲದ ಗೂಗೆ
ಈ ಪ್ರಪಂಚದಾದಿಯಲ್ಲಿ
ನಾನು ಹುಟ್ಟಿದಮೃತಗಳಿಗೆ
ಅದೇ ಚಿರಂಜೀವ ಪಟ್ಟ ನನಗೆ !
ಮುಗುದತನದ ಭೂಮಿ ಕನ್ಯೆ
ಬಸುರಿಯಾಗಿ ಹೊಟ್ಟೆ ಬೇನೆ
ತೊಡಗಿದಾಗ ನನ್ನದೇನೆ
ಗುಟ್ಟಿನಲ್ಲಿ ಮೊತ್ತಮೊದಲ ಹೆರುಗೆ !
2
ಕತ್ತಲ ಕರಿಚಾಪೆಯಲ್ಲಿ
ನಕ್ಷತ್ರದ ದೂಪೆಯಲ್ಲಿ
ಜಗದ ದೀರ್ಘ ನಿದ್ರೆಯಲ್ಲಿ
ಜೋಗುಳಪದ ಹಾಡಿದವನು ನಾನೆ !
ಅಂದಿನಿಂದ ಇಂದಿನನಕ
ಹಸಿಹಸಿವಿನ ಹೊಟ್ಟೆಬಾಕ
ಸಕಲದೈತ್ಯ ಪ್ರಾಣಿಲೋಕ –
ಕೆಲ್ಲ ಬುದ್ಧಿ ಹೇಳಿದವನು ನಾನೆ !
3
ಸ್ಥಗಿತ ಕಲ್ಪಕಂದರದಲಿ
ಪರ್ವತಗಳ ಹಂದರದಲಿ
ಜನಪದಗಳ ಮಂದಿರದಲಿ
ಭದ್ರಪೀಠವೇರಿದವನು ನಾನೆ !
ಮುಖಕೆ ಕಪ್ಪು ಮಸಿಯ ಹಚ್ಚಿ
ಬೆದರಿಕೆಗಳ ರೆಕ್ಕೆ ಬಿಚ್ಚಿ
ಮೂಲೆಮೂಲೆಗಳಲಿ ಬಿಚ್ಚಿ
ಕುಳಿತು ಮೇಲೆ ಹಾರಿದವನು ನಾನೆ !
4
ಆ ಅನಂತ ಕಾಲದಿಂದ
ಈ ತನಕವು ಬೆಳೆದು ಬಂದ
ಯುಗಾಂತರದ ಚಿಪ್ಪಿನಿಂದ
ಹೊರಹೊರಡದ ಆದಿಕೂರ್ಮ ನಾನೆ !
ನಂಬಿಕೆಗಳ ಮುಸುಕನಿಟ್ಟು
ಭಯ ಭಕ್ತಿಯ ಮಡಿಯನುಟ್ಟು
ಜಾತಿನೀತಿ ಮತದ ಕಟ್ಟು
ಕತೆಗಳನ್ನು ಹೇಳಿದವನು ನಾನೆ !
5
ಹೊಸಗಾಳಿಗೆ ಹೊಸಬೆಳಕಿಗೆ
ಹೊಸಬಾಳಿಗೆ ಹೊಸಸೂಳಿಗೆ
ಹೊಸಸೃಷ್ಟಿಯ ಹೊಸಕುದುರೆಗೆ
ಕಡಿವಾಣವ ಕಟ್ಟಿದವನು ನಾನೆ !
ಹೇಳಬಹುದು ಹದಗುಟ್ಟುವ
ಹಳೆಯತ್ತೆಯ ಜೋಡಿಯೆಂದು
ಆದರೇನು ? ನೀವು ಬಂದು –
ದಂತೂ ಬರೇ ನಿನ್ನೆ ಮೊನ್ನೆ ತಾನೆ !
6
ಜಗದಾದಿಯ ಬತ್ತಲೆಯಲಿ
ಶತಮಾನದ ಕತ್ತಲೆಯಲಿ
ಅಜ್ಞಾನದ ಸಂಕಲೆಯಲಿ
ರಾಜ್ಯಭಾರ ಮಾಡಿದವನು ನಾನು
ಹಳೆಪಳಕೆಯ ಈ ಮುಖದಲಿ
ಅನುಭವಗಳ ಸಮ್ಮುಖದಲಿ
ಎಲೆಮಾನವ – ಹಗಲಿನಲೂ
ತಡವರಿಸುವ ಹಾಲ್‌ಹಸುಳೆ ನೀನು !
‘ಶ್ರಾವಣದ ಮೊದಲದಿನ’ ನವೋದಯದ ಕವಿತೆಯೆಂದೇ ಅನಿಸಿದರೂ ಪ್ರಕೃತಿಯ ಸೌಂದರ್ಯ, ನಿಗೂಢತೆ, ಮನುಷ್ಯ ಪ್ರಯತ್ನ, ಮತ್ತು ದೈವನಿರ್ಣಯ ಅಥವಾ ವಿಧಿ – ಇವೆಲ್ಲವನ್ನೂ ತುಳುನಾಡಿನ ಒಂದು ಪ್ರಾದೇಶಿಕ ಸನ್ನಿವೇಶದಲ್ಲಿ, ಒಂದು ಋತುವರ್ಣನೆಯೊಂದಿಗೆ, ಸರಳ – ಸುಂದರವಾದ ಭಾಷೆಯಲ್ಲಿ ಹೇಳಿರುವುದು ಕವಿಯ ಮಾಗಿದ ಕವಿತ್ವಕ್ಕೆ ಮತ್ತು ಜೀವನಾನುಭವ ಪಕ್ವತೆಗೆ ಸಾಕ್ಷಿಯಾಗಿದೆ.
ಈ ಕಾಲಘಟ್ಟದಲ್ಲಿ ಧನಾತ್ಮಕ ಮೌಲ್ಯಗಳನ್ನು ಸಮಾಜದ ಪ್ರಜ್ಞೆಯಲ್ಲಿ ಬಿತ್ತಬೇಕೆಂಬ ಉದ್ದೇಶದಿಂದ ವೆಂಕಟರಾಜರು ಕೆಲವು ಮಾದರಿಗಳಾಗಿ ಆದರ್ಶ ಪುರುಷರ ಬಗ್ಗೆ ಕವಿತೆಗಳನ್ನು ಬರೆದಿದ್ದಾರೆ. ಅಂತಹ ಕವಿತೆಗಳು: ‘ಬರಬೇಡ ತಾತ’ (ಗಾಂಧೀಜಿಯ ಬಗ್ಗೆ), ಮಹೇಂದ್ರನಾಥ ಮುಲ್ಲ (ವೀರಯೋಧನೊಬ್ಬನ ಬಗ್ಗೆ), ಧೀರ ಲಾಲಬಹದ್ದೂರ, ಪಂಜೆ, ಎಲ್ಲರಿಗೂ ದೊಡ್ಡಣ್ಣ (ಕಡೆಂಗೋಡ್ಲು ಶಂಕರ ಭಟ್ಟರ ಬಗ್ಗೆ), ಕಪ್ಪು ರಕ್ತ (ಏಸುಕ್ರಿಸ್ತನ ಬಗ್ಗೆ), ಮಟ್ಟಿಗುಳ್ಳ (ಸೋದೆ ವಾದಿರಾಜ ಸ್ವಾಮಿಗಳ ಸಾಮಾಜಿಕ ಸುಧಾರಣೆಯ ಬಗ್ಗೆ), ಕಡೆದ ಕಲ್ಲಿನ ಕಾವ್ಯ (ಬಾಹುಬಲಿ ಸ್ವಾಮಿಯ ಬಗ್ಗೆ – ಗೋಮಟನ ಮಸ್ತಕಾಭಿಷೇಕದ ಸಂದರ್ಭದಲ್ಲಿ ಬರೆದ ದೀರ್ಘ ಕವಿತೆ), ಡಿ. ವಿ. ಜಿ., ಶ್ರೀ ಗೋವಿಂದ ಪೈ , ನಮ್ಮ ಹರಕೆ (ಗೋವಿಂದ ಪೈಗಳ ಬಗ್ಗೆ ಮತ್ತೊಂದು ಕವನ), ನಾ ಋಷಿಃ ಕುರುತೇ ಕಾವ್ಯಂ (ರವೀಂದ್ರನಾಥ ಠಾಕೂರರ ಬಗ್ಗೆ) ‘ರಜತ ಪೀಠ ಪುರಂಗರೀಯಃ’ ಮತ್ತು ‘ಕೈಮುಗಿವೆನು’ (ಶ್ರೀ ಕೃಷ್ಣನ ಬಗ್ಗೆ).
‘ಶ್ರಾವಣದ ಮೊದಲದಿನ’ ಅಪ್ರಕಟಿತ ಸಂಕಲನದಲ್ಲಿ ವೆಂಕಟರಾಜರು ಬದುಕಿನ ಅರ್ಥವನ್ನು ಗಂಭೀರವಾಗಿ ಚಿಂತಿಸಿ ಬರೆದ ಕೆಲವು ಕವನಗಳು ಈ ಸಂಕಲನದಲ್ಲಿ ಸೇರಿವೆ. ಅವು: ‘ಮಣ್ಣಿನೆರೆಹುಳುವಾಗಿ’, ‘ಶ್ರಾವಣದ ಮೊದಲದಿನ’, ‘ಜ್ಯೋತಿರ್ಗಮಯ’, ‘ಎಂದಾದರೊಂದು ದಿನ’ ಮತ್ತು ‘ವಿಶ್ರಾಂತಿ’. ವೆಂಕಟರಾಜರ ರೂಪಕ ಶಕ್ತಿ ಅನುಭವದಲ್ಲಿ ಮಾಗಿ ಕೆಲವು ಮಹತ್ವದ ಕವನಗಳನ್ನು ಈ ಘಟ್ಟದಲ್ಲಿ ಸೃಷ್ಟಿಸಿದೆ. ಉದಾಹರಣೆಗೆ ‘ಶ್ರಾವಣದ ಮೊದಲ ದಿನ’ ಕವನವನ್ನು ನೋಡೋಣ:
ಶ್ರಾವಣದ ಮೊದಲದಿನ
1
ಕಾಲಮಾನದ ಕೋಲನೂರಿ ಸಂಜೆಯ ಹೊತ್ತು
ಮೆಲ್ಲಮೆಲ್ಲನೆ ಮುದುಕನಂತೆ ನಡೆದಿತ್ತು
ಶ್ರಾವಣದ ಮೊದಲದಿನ ಮೈತೊಳೆದ ತಿರೆವಣ್ಣು
ತಲೆಗೆದರಿ ಕುಳಿತಂತೆ ಹನಿಯೊಸರುತಿತ್ತು
ಮುಗಿಲಮಂಚದ ಮೇಲೆ ಮಲಗಿದಳು ಮುಚ್ಚಂಜೆ
ಬಾನೆಲ್ಲ ಬಿದ್ದಿಹುದು ಬೆಳ್ಳಿಗೆಜ್ಜೆ
ಮುಂಜಾವದ ತನಕವೂ ಮನದಾಣ್ಮನನು ಕಾದು
ಕಾದು ಕರಿಕಪ್ಪಾಯ್ತು ಮಲರಸಜ್ಜೆ
ತಿಂಗಳನು ಬರುವನೆಂದಂಗಳದ ಕಸಗುಡಿಸಿ
ರಂಗವಲ್ಲಿಯ ಹಾಕಿ ಕಾದಿದ್ದಳವಳು
ಸಿಂಗಾರದೂರಿನಲಿ ಬಂಗಾರ ನವಿಲಾಗಿ
ಕಂಗೊಳಿಸುತಿತ್ತು ಕೋಲ್ಮಿಂಚುಗಳ ಸೂಳು
ಅಂಗಾಂಗಗಳಲೆಲ್ಲ ತುಂಬಿತುಳುಕಿದ ಹುಮ್ಮು
ಹಿಂಗಿಹೋಯಿತು ತನಗೆ ತಾನೆ ಕರಕರಗಿ
ತುಂಗ ಕುಚಗಳ ದಿಟ್ಟ ಬೆಟ್ಟಗಳ ಮುಗಿಲ್ಸೆರಗು
ತಂಗಾಳಿಯಲಿ ತೇಲುತಿತ್ತು ಹಾಯಾಗಿ !
2
ಕಪ್ಪೆಗಳು ಕಪ್ಪೆಗಳು ಕುಪ್ಪಳಿಸಿ ಹಾರಿದುವು
ಏನೆಂದು ತಲೆಯೆತ್ತಿ ನೋಡುತಿದೆ ಕೇರೆ
ಗಂಟೆಗಟ್ಟಲೆಯೊಂಟಿಕಾಲೂರಿ ಕಾವಲಿನ
ಬಂಟನೆಂಬಂತೆ ನಿಂತಿತ್ತು ಬಿಳಿಕೊಕ್ಕರೆ !
ಬಾನಿನಲಿ ಬರಸಿಡಿಲ್ ಮಿಂಚುದೀವಿಗೆ ಹಿಡಿದು
ತೊಡಗಿತ್ತು ಕಾರ್ಗಾಲದಿರುಳ ಸಂಚಾರ
ಭುವಿಯಲ್ಲಿ ಬೊಬ್ಬಿಟ್ಟು ಸೋಗೆಸೊಡರನು ಬೀಸಿ
ಹೊಡೆದು ಡೋಲನು ಮಾರಿಯಟ್ಟಿದರು ದೂರ
ತನ್ನ ನೆರಳಿಗೆ ತಾನೆ ಹೆದರಿ ಬಾನತ್ತಕಡೆ
ಮೊಗವೆತ್ತಿ ಕೂಗುತಿದೆ ನಾಯಿಯ ಮರಿ
ಆಟಿತಿಂಗಳ ದೆವ್ವ ದಾಟುತಿಹ ಹಾದಿಯಲಿ
ಜುಮ್ಮೆಂದು ಬೆದರಿದನು ಮೋನುಪೂಜಾರಿ !
ಮಳೆಗಾಳಿಯಲಿ ಸಿಕ್ಕಿ ಸೋತಿರುವ ಹಕ್ಕಿಗಳು
ಇಕ್ಕಳದೆ ಸಿಕ್ಕಿದಂತಿದ್ದವೀತನಕ
ಇಳೆಯಕೊಳೆ ಕಳೆದಾಗ ಮಳೆಯು ಹಗುರಾದಾಗ
ಗರಿಗೆದರಿ ಕಾಲ್ಚಾಚಿ ಕುಣಿವುದೇನು ಸುಖ !
3
ಒಪ್ಪೊತ್ತಿನೂಟಕೂ ಗತಿಯಿಲ್ಲದೀಜನರು
ಬೇಳೆ ಬೇಯಿಸಿ ತಿಂದು ಬದುಕುವರು ಪಾಪ
ಆದರೂ ಮೊಗದಲ್ಲಿ ಸುಳಿಯುತಿದೆ ಸಂತೋಷ
ಸವರಿದಂತಿದೆ ಕಬ್ಬಿಣಕೆ ಸುನೇರಿಲೇಪ !
ಹಗಲೆಲ್ಲ ನೀರಿನಲಿ ತೊಯ್ದಾಡಿ ಹೊಲದಲ್ಲಿ
ಹೊಯ್ದಾಡಿ ಮುಗಿದಿಹುದು ಜನರ ಬೇಸಾಯ
ಆಗುಹೋಗುಗಳೆಲ್ಲ ದೈವದಿಚ್ಛೆಯ ಮೇಲೆ
ನಾವು ಮಾಡಿದ್ದೆಲ್ಲ ಹರಕೆ ಸಂದಾಯ
ಮಳೆಯು ಸರಿಬರಬೇಕು ಹುಳ ಬೀಳದಿರಬೇಕು
ತೆನೆತುಂಬಿಬರುವನಕ ಹಲವಾರು ಭೀತಿ
ಆದರೂ ನಂಬುಗೆಯು ಕೈನೀಡಿ ಕಾಯುತಿದೆ
ಆ ಮಹಾಲಿಂಗನಿಗೆ ನಿತ್ಯ ಸೋಣದಾರತಿ !
ಆ ಶ್ರಾವಣದ ರಾತ್ರಿ ಧಾತ್ರಿ ತೂಕಡಿಸಿತ್ತು
ಹೊಟ್ಟೆಯಲಿ ಹೊತ್ತ ಹೆರುಗೆಯ ವೇದನೆ
ಮಣ್ಣು ಮಣ್ಣಿನ ಮೇಲೆ ಮೈಯ ಬೆವರನು ಬಿತ್ತಿ
ಹೊಸ ಸೃಷ್ಟಿಗಾಗಿ ರೈತನ ಸಾಧನೆ !
(5. 8. 1980)
ಕಾಲಮಾನದ ಕೋಲನೂರಿ ಸಂಜೆಯ ಹೊತ್ತು
ಮೆಲ್ಲಮೆಲ್ಲನೆ ಮುದುಕನಂತೆ ನಡೆದಿತ್ತು
ಶ್ರಾವಣದ ಮೊದಲ ದಿನ ಮೈತೊಳೆದ ತಿರೆವೆಣ್ಣು
ತಲೆಗೆದರಿ ಕುಳಿತಂತೆ ಹನಿಯೊಸರುತಿತ್ತು.
– ತಲೆಗೆ ಸ್ನಾನ ಮಾಡಿ ತಲೆಯಿಂದ ನೀರು ಹನಿಯುತ್ತಿರುವಾಗ ತಲೆಗೂದಲನ್ನು ಒಣಗಿಸಿಕೊಳ್ಳಲು ಕುಳಿತ ಹಳ್ಳಿಯ ಹೆಣ್ಣಿನಂತೆ ಭೂಮಿ ಇತ್ತು ಅನ್ನುವುದೊಂದು ಅದ್ಭುತವಾದ ರೂಪಕವಾಗಿದೆ. ಆಷಾಡದಲ್ಲಿ ಜಡಿದ ಮಳೆ ಶ್ರಾವಣದಲ್ಲಿ ಕರಾವಳಿಯಲ್ಲಿ ಹಿಂದೆ ಸರಿಯುತ್ತಾ ಇರುವ ವಾತಾವರಣವನ್ನು ಈ ರೂಪಕ ಖಚಿತವಾಗಿ ನಮ್ಮ ಅನುಭವಕ್ಕೆ ತಂದುಕೊಡುತ್ತದೆ. ಆ ಸಂದರ್ಭದ ಕೆಲವು ಚಿತ್ರಗಳನ್ನು ಕವಿ ಕಟ್ಟಿಕೊಟ್ಟಿದ್ದಾರೆ :
ಭುವಿಯಲ್ಲಿ ಬೊಬ್ಬಿಟ್ಟು ಸೋಗೆ ಸೊಡರನು ಬೀಸಿ
ಹೊಡೆದು ಡೋಲನು ಮಾರಿಯಟ್ಟಿದರು ದೂರ
– ಎನ್ನುವುದು ಇಂತಹ ಒಂದು ಚಿತ್ರ (ದಕ್ಷಿಣ ಕನ್ನಡಕ್ಕೆ ವಿಶಿಷ್ಟವಾದ ಮಾರಿ ಓಡಿಸುವ ಸಂಪ್ರದಾಯವನ್ನು ಇಲ್ಲಿ ಕವಿ ಹೇಳಿದ್ದಾರೆ). ರೈತರ ಬದುಕಿನ ಕೆಲವು ಆತ್ಮೀಯ ಚಿತ್ರಗಳನ್ನು ಇಲ್ಲಿ ಕವಿ ಕೊಟ್ಟಿದ್ದಾರೆ.
ಆಗು ಹೋಗುಗಳೆಲ್ಲ ದೈವದಿಚ್ಛೆಯ ಮೇಲೆ
ನಾವು ಮಾಡಿದ್ದೆಲ್ಲ ಹರಕೆ ಸಂದಾಯ
– ಹಳ್ಳಿಯ ರೈತರ ಕರ್ಮಯೋಗವನ್ನು ವೆಂಕಟರಾಜರಂಥ ಹಳ್ಳಿಯ ಹಿನ್ನೆಲೆ ಇರುವ ಕವಿಗಳು ಮಾತ್ರ ಹೀಗೆ ವರ್ಣಿಸಬಲ್ಲರು. ‘ಹರಕೆ ಸಂದಾಯ’ ಅನ್ನುವ ಪದಪ್ರಯೋಗ, ಆಮೇಲೆ ಮಹಾಲಿಂಗೇಶ್ವರನಿಗೆ ‘ಸೋಣಾರತಿ’ ಹರಕೆ ಅರ್ಪಿಸುವ ಉಲ್ಲೇಖದೊಂದಿಗೆ ಮತ್ತೆ ಓದುಗನನ್ನು ಹಿಂದಕ್ಕೆ ಸೆಳೆದು ಹೊಸ ಅರ್ಥವನ್ನು ಕೊಡುತ್ತದೆ. ಹೀಗೆ ‘ಧ್ವನಿ’ ಶಕ್ತಿಯುಳ್ಳ ಪದಪ್ರಯೋಗಗಳು ಇಲ್ಲಿವೆ. ರೈತರ ಜೀವನ ದೈವ ನಂಬಿಕೆಯಡಿಯಲ್ಲಿ ನಡೆಯುತ್ತದೆ. ಯಾಕೆಂದರೆ, ಅವರು ದುಡಿದ ಮೇಲೂ ಪರಿಸ್ಥಿತಿ ಅವರ ಕೈಯಲ್ಲಿಲ್ಲ:
ಮಳೆಯು ಸರಿ ಬರಬೇಕು ಹುಳ ಬೀಳದಿರಬೇಕು
ತೆನೆ ತುಂಬಿ ಬರುವನಕ ಹಲವಾರು ಭೀತಿ
ಆದರೂ ನಂಬುಗೆಯ ಕೈನೀಡಿ ಕಾಯುತಿದೆ
ಆ ಮಹಾಲಿಂಗನಿಗೆ ನಿತ್ಯ ಸೋಣಾರತಿ
(ಸೋಣ ಅಂದರೆ ಶ್ರಾವಣದ ತುಳು ರೂಪ).
‘ಕರಾವಳಿಯ ಹೆಣ್ಣು’ ಎಂಬ ಕಥನಕವನ ಹಾಸ್ಯ ಧಾಟಿಯಲ್ಲಿದ್ದರೂ ಬದುಕಿನ ಅನುಭವದಿಂದ ಹುಟ್ಟಿದ ಕವನವಾಗಿದೆ. ತಿಮ್ಮೇಗೌಡನ ಮಗ ಚೆಲುವಯ್ಯ ಕರಾವಳಿಯ ಹೆಣ್ಣನ್ನು ಮದುವೆಯಾಗುತ್ತಾನೆ. ಅವಳು ಫ್ಯಾಶನಿನ ಹುಡುಗಿ. ಅವಳ ಹಾರಾಟ ಹೆಚ್ಚಾದಾಗ ತಿಮ್ಮೇಗೌಡ ಮಗನನ್ನು ಕರೆದು ಹೆಂಗಸರನ್ನು ಸ್ವಲ್ಪ ಹತೋಟಿಯಲ್ಲಿಟ್ಟುಕೊಳ್ಳಬೇಕೆಂದು ಬುದ್ಧಿ ಹೇಳುತ್ತಾನೆ :
ಶಂಖವೂದಿದನದನೆ ಚೆಲುವಯ್ಯ ಧೈರ್ಯದಲಿ
ಹೆಂಡತಿಯ ಮುಂದೆ ಆ ಮಧ್ಯರಾತ್ರಿ
ಗುಡುಗಿಲ್ಲ ಮಿಂಚಿಲ್ಲ ಮಳೆಯಿಲ್ಲಯೇನಿಲ್ಲ
ಎಲ್ಲವೂ ನಿಶ್ಶಬ್ದ ಸ್ತಬ್ಧ ಧಾತ್ರಿ !
ಬೆಳಗಾತ ನೋಡಿದರೆ ಹಳೆಹಳ್ಳಿ ಹಾದಿಯಲಿ
ನಡೆದಿದ್ದರೊಯ್ಯೊಯ್ಯನೆರಡು ಮಂದಿ
ಸ್ವರ್ಗಕ್ಕೆ ನರಕಕ್ಕೆ ನಡೆವದಾರಿಯದೊಂದೆ
ಧೈರ್ಯವಂತರಿಗಿರುವುದಿದೇ ಸುಸಂಧಿ !
– ಹೀಗೆ ಧ್ವನಿಪೂರ್ಣವಾಗಿ ಕರಾವಳಿಯ ಹೆಣ್ಣಿನ ಚಿತಾವಣೆಯನ್ನು ವೆಂಕಟರಾಜರು ಚಿತ್ರಿಸಿದ್ದಾರೆ. ಅವರು ಮನೆ ಬಿಟ್ಟು ಹೋಗಿ ಮನೆಗೆ ಪತ್ರ ಬರೆಯುತ್ತಾರೆ.
ಐದಾರು ತಿಂಗಳಲ್ಲಿ ಯಾರೊ ಹೇಳಿದ ಸುದ್ದಿ
ಚೆಲುವಮ್ಮ ಸುತ್ತುವಳು ಗಣೇಶ ಬೀಡಿ
ಚೆಲುವಯ್ಯ ಪೈಜಾಮ ಹಾಕಿ ಪೈರನ್ ತೊಟ್ಟು
ಪೇಟೆಯಲಿ ಬಿಡುತಿಹನು ರಿಕ್ಷಾ ಗಾಡಿ !
ಕವಿಯ ಪಕ್ವ ಮನಸ್ಥಿತಿಯನ್ನು ಸೂಚಿಸುವ ಒಂದು ಕವಿತೆ ‘ಮಣ್ಣಿನೆರೆಹುಳುವಾಗಿ’ –
ಮಣ್ಣಿನೆರೆಹುಳುವಾಗಿ ಬದುಕಬೇಕೆಂಬಾಸೆ
ನನಗುಂಟು
ನನ್ನತನವನು ನಾನು ಪೂರ ಮರೆತು
ಮಣ್ಣಿನಡಿಯಲಿ ಹೂತು ಹಾಯಾಗಿ ಕೂತು
*****
ನಮ್ಮ ಆವರ್ತನೆಯಿಂದಿಳೆಯು ಫಲವತ್ತಾಗುತಿದೆ
*****
ಅಂದಿನಾ ಪೆಡಂಭೂತಗಳ ಹೆಸರಿಲ್ಲ
ದೈತ್ಯ ಸಾಮ್ರಾಜ್ಯಗಳ ನೆನಪಿಲ್ಲ
ಮಣ್ಣಿನಲಿ ಹೂತು ನಮಗಾಯ್ತು ನಿಲ್ದಾಣ
ಇಲ್ಲಿ ವೆಂಕಟರಾಜರ ಕಾವ್ಯದ ಬೆಳವಣಿಗೆ ಒಂದು ಪರಿಪೂರ್ಣತೆಯನ್ನು ಪಡೆದಿದೆ. ತಮ್ಮ ಮೊದಲನೆಯ ಸಂಕಲನದ ಕವನಗಳಲ್ಲಿ ಭೂಮಿಯ ಬೇಗೆಗಳಿಂದ ತಪ್ಪಿಸಿಕೊಳ್ಳಲು ಬಾನಾಡಿಯಾಗಬೇಕೆಂದು ಹಂಬಲಿಸುತ್ತಿದ್ದ ಕವಿಯು ಈಗ ಎರೆಹುಳುವಾಗಿ ಮಣ್ಣಿನಲ್ಲಿ ಅಡಗಿಕೊಂಡು ಮಣ್ಣನ್ನು ಫಲವತ್ತಾಗಿ ಮಾಡಲು ಬಯಸುತ್ತಾನೆ.
ವೆಂಕಟರಾಜರು ತಮ್ಮ ‘ಚಿಂತಾಮಣಿ’ ಕವನದ ಮೊದಲಿಗೆ ಕೊಟ್ಟಿರುವ ಈ ಸಾಲುಗಳಲ್ಲಿ ಅವರು ಎಷ್ಟರ ಮಟ್ಟಿಗೆ ಈ ನೆಲದ ಕವಿಯಾಗಿದ್ದಾರೆ ಎನ್ನುವುದು ತಿಳಿಯುತ್ತದೆ :
ಈ ಊರು ಈ ಹವೆ ಈ ಗಗನ ತಾರೆ
ಈ ಮಂದಿಗಳ ಮಮತೆ ಮನೆಯಮೃತ ಧಾರೆ
ಈ ದಾರಿ ಈ ಕೇರಿ ಈ ನೆಲದ ಸೊಗಸು
ಇನ್ನೆಲ್ಲಿ ಕಾಣಲಿದೆ ? ಇದೆ ನನ್ನ ಕನಸು !
ಈ ಕೊಚ್ಚೆ ಈ ಕೆಸರು ಈ ಕೊಳೆಯ ಗಂಧ
ಈ ಹಳ್ಳಿಯಲಿ ನನ್ನ ಋಣಾನುಬಂಧ
ಈ ಮಣ್ಣಿನಲಿ ಬಿದ್ದು ದೂಳಿನಲಿ ಮಿಂದು
ನಾನೆ ನಾನಾಗಿಹೆನು – ಮರೆಯಲಾರೆನೆಂದು !
3. ಚಿರಂಜೀವಿ [ ಅಪ್ರಕಟಿತ ಕಥನಕವನ / ಹಸ್ತಪ್ರತಿ ] 204 ಸಾಲುಗಳ ನಾಲ್ಕು ಭಾಗಗಳ ಕಥನ ಕವನ ಚಿರಂಜೀವಿ ಅಪ್ರಕಟಿತವಾಗಿರಬೇಕು. ಇದರ ರಚನೆಯ ದಿನಾಂಕವನ್ನೂ ವೆಂಕಟರಾಜರು ದಾಖಲಿಸಿಲ್ಲ. ಆದರೆ ಅವರ ಅಪ್ರಕಟಿತ ಕವನ ಸಂಕಲನಗಳಿಗಿಂತ ನಂತರದ್ದು ಅನ್ನುವುದನ್ನು ಊಹಿಸಿ ಇದು 1986 ರ ಕೊನೆಯಲ್ಲಿ ಅಥವಾ 1987 ರಲ್ಲಿ ರಚಿತವಾದುದೆಂದು ಊಹಿಸಬಹುದು. ಈ ಕಥನ ಕವನದ ಕೇಂದ್ರ ಭಾಗದಲ್ಲಿರುವ ಕತೆ ವಾತಾಪಿ ಮತ್ತು ಇಲ್ವಲ ಎಂಬ ರಾಕ್ಷಸ ಸಹೋದರರು ಜನರನ್ನು ಕೊಂದು ತಿನ್ನುತ್ತಿದ್ದ ಪೌರಾಣಿಕ ಕತೆ. ಆ ಪರಂಪರೆ ಇಂದಿಗೂ ಮುಂದುವರಿದಿದೆ ಎಂದು ಕವಿ ವರ್ತಮಾನಕ್ಕೆ ಸ್ಪಂದಿಸುತ್ತಾರೆ. “ಆ ಭಿವಂಡಿ – ಥಾನಾ – ಅಮೃತಸರಗಳಲೆಲ್ಲ /ಅದೇ ದ್ವೇಷದ ಕೀಟ ಮೊಟ್ಟೆಯಿಡುತ್ತಿತ್ತು”. ಹೀಗೆ ವರ್ತಮಾನದ ಕೆಡುಕುಗಳನ್ನು ಕಂಡು ವೆಂಕಟರಾಜರ ಕವಿಜೀವ ನೊಂದು ಕಾವ್ಯ ರೂಪದಲ್ಲಿ ಸ್ಪಂದಿಸಿದೆ.
ಕವಿಯಾಗಿ ವೆಂಕಟರಾಜರು
ವೆಂಕಟರಾಜರು ಮುಖ್ಯವಾಗಿ ಕವಿಯಾಗಿದ್ದಾರೆ. ಕಾವ್ಯ ಮಾಧ್ಯಮದ ಮೇಲೆ ವೆಂಕಟರಾಜರಂತಹ ಹಿಡಿತ ಇದ್ದ ಬೇರೆ ಕವಿಗಳನ್ನು ಹೆಸರಿಸಲು ಪ್ರಯತ್ನಿಸಿದರೆ ಕು.ವೆಂ.ಪು., ಬೇಂದ್ರೆ, ಪು.ತಿ.ನ., ಅಡಿಗ, ಕಡೆಂಗೋಡ್ಲು ಶಂಕರ ಭಟ್ಟ, ಕಯ್ಯಾರ ಕಿಂಞಣ್ಣ ರೈ ಮುಂತಾದ ದೊಡ್ಡ ಕವಿಗಳ ಹೆಸರು ಮಾತ್ರ ನೆನಪಿಗೆ ಬರುತ್ತವೆ. ಕಯ್ಯಾರ ಕಿಂಞಣ್ಣ ರೈಗಳು ವೆಂಕಟರಾಜರಿಗೆ ಬರೆದ ಒಂದು ಪತ್ರದಲ್ಲಿ ಹೀಗೆ ಹೇಳಿದ್ದಾರೆ : “ಕನ್ನಡದ ಹೆಚ್ಚಿನ ಎಲ್ಲಾ ಹಿರಿಯ ಕವಿಗಳಂತೆ, ನೀವೂ ಏಕಾಂಗಿಯಾಗಿ ಈ ರೀತಿ ಕಾವ್ಯಕೃಷಿ ಮಾಡುತ್ತಾ ಬರುತ್ತಿರುವ ಬಗ್ಗೆ ನನಗೆ ಅಭಿಮಾನವಿದೆ.”
ವೆಂಕಟರಾಜರಿಗೆ ಕವಿಯಾಗಿ ಸಿಗಬೇಕಾದಷ್ಟು ಮನ್ನಣೆ ಸಿಗದಿದ್ದರೂ ಅವರು ಶ್ರೇಷ್ಠ ಕವಿ ಎನ್ನುವುದನ್ನು ಅಲ್ಲಲ್ಲಿ ಗುರುತಿಸಿರುವುದನ್ನು ಕಾಣಬಹುದು. ಕೆಲವು ಉದಾಹರಣೆಗಳು ಕೆಳಗಿನಂತಿವೆ:
1956 : `ಭಾರತೀಯ ಕವಿತಾ’ (ಪ್ರಕಾಶನ : ಕೇಂದ್ರ ಸಾಹಿತ್ಯ ಅಕಾಡಮಿ) ಸಂಪುಟದಲ್ಲಿ `ಬೆಳದಿಂಗಳಲ್ಲಿ’ ಕವಿತೆ ಹಿಂದಿಗೆ ಅನುವಾದಗೊಂಡು [ಜ್ಯೋತ್ಸ್ನಾಮೆ] ಸೇರ್ಪಡೆ.
1957 : ಸರಕಾರೀ ಪಠ್ಯಪುಸ್ತಕ `ಕಾವ್ಯ ಸಾಮ್ರಾಜ್ಯ’ (ತಮಿಳುನಾಡು ಸರಕಾರದ ಟಿ.ಎಸ್.ಎಲ್.ಸಿ. ಪರೀಕ್ಷೆಗಿದ್ದ) ಪುಸ್ತಕದಲ್ಲಿ `ಕೋಗಿಲೆ’ ಕವನದ ಸೇರ್ಪಡೆ.
1957 : `ದ ಸದರ್ನ್ ಲಾಂಗ್ವೇಜಸ್ ಬುಕ್ ಟ್ರಸ್ಟ್‍ನ `ಹೊಸಗನ್ನಡ ಕಾವ್ಯಶ್ರೀ’ಯಲ್ಲಿ `ಬೆಳದಿಂಗಳಲ್ಲಿ’ ಕವನ ಸಂಕಲನ ಸೇರ್ಪಡೆ.
1957 : ಕೇಂದ್ರ ಸಾಹಿತ್ಯ ಅಕಾಡಮಿಯ `ಹೂ ಇಸ್ ಹೂ ಎಮಂಗ್ ಇಂಡಿಯನ್ ರೈಟರ್ಸ್’ನಲ್ಲಿ ವೆಂಕಟರಾಜರ ಹೆಸರು ಮತ್ತು ಪರಿಚಯದ ಟಿಪ್ಪಣಿ ಸೇರ್ಪಡೆ.
1960 : (ಡಿಸೆಂಬರ್ 27) ಮಣಿಪಾಲದಲ್ಲಿ ಅ.ನ.ಕೃ. ಅವರ ಅಧ್ಯಕ್ಷತೆಯಲ್ಲಿ ನಡೆದ 42ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬೇಂದ್ರೆಯವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿಯಲ್ಲಿ ಕವನವಾಚನ.
1961 : `ಮಾನಸಗಂಗೆ’ ಕವನಸಂಕಲನಕ್ಕೆ ಮೈಸೂರು ರಾಜ್ಯಸರಕಾರದ ಬಹುಮಾನ.
(1960 ರ ಶ್ರೇಷ್ಠ ಪುಸ್ತಕವೆಂದು ಪರಿಗಣಿಸಿ ರೂ. 750ರ ನಗದು ಬಹುಮಾನ.)
1971 : ಕಾರ್ಕಳದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಉದ್ಘಾಟನೆ.
1974 : ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಿದ `ಸುವರ್ಣ ಸಂಪುಟ’ – ಆಧುನಿಕ ಕನ್ನಡ ಕವಿತೆಗಳ ಪ್ರಾತಿನಿಧಿಕ ಸಂಕಲನದಲ್ಲಿ `ಬೆಳಗಾಗಿ’ ಕವನ ಸೇರ್ಪಡೆ.
1974 : ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ವೆಂಕಟರಾಜರನ್ನು ಸಂದರ್ಶಿಸಿ ಅವರ ಸಂದರ್ಶನ ಮತ್ತು ಕಾವ್ಯವಾಚನವನ್ನು ಧ್ವನಿ ಮುದ್ರಣ ಮಾಡಿಕೊಂಡು ಪರಿಷತ್ತಿನ ಭಾಂಡಾರಕ್ಕೆ ಸೇರಿಸಲಾಯಿತು.
1985 : ಮಂಗಳೂರಿನಲ್ಲಿ ನಡೆದ ಎರಡನೆಯ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ – 13.1.1985
ವೆಂಕಟರಾಜರ ಇತರ ಸಾಹಿತ್ಯ
ನಾಟಕಕಾರ: ವೆಂಕಟರಾಜರು ನವೋದಯದ ಸಾಹಿತಿಗಳಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃತಿರಚನೆ ಮಾಡಿದವರು. ಅವರು ನಾಟಕ ಪ್ರಕಾರದ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿದ್ದರು. ಅವರು ಎಂಟು ನಾಟಕಗಳನ್ನು ಬರೆದಿದ್ದಾರೆ. ಅವರ ‘ರಂಗಭೂಮಿ’ ಎಂಬ ಪೂರ್ಣ ಪ್ರಮಾಣದ ನಾಟಕ ಉಡುಪಿ ಮತ್ತು ಮಂಗಳೂರುಗಳ ವೃತ್ತಿಪರ ಮತ್ತು ಹವ್ಯಾಸಿ ತಂಡಗಳಿಂದ 1940ರ ದಶಕದಲ್ಲಿ ನಿರಂತರವಾಗಿ ಪ್ರದರ್ಶಿಸಲ್ಪಡುತ್ತಿತ್ತು. ‘ರಂಗಭೂಮಿ’ ಆ ಕಾಲದ ವೃತ್ತಿಪರ ನಾಟಕ ತಂಡವೊಂದರ ಯಜಮಾನನ ದೌರ್ಬಲ್ಯಗಳ ಚಿತ್ರಣದ ಮೂಲಕ ಒಟ್ಟು ಮನುಷ್ಯನ ದೌರ್ಬಲ್ಯಗಳ ಬಗ್ಗೆ ಕೊಡುವ ಒಳನೋಟಗಳಿಂದಾಗಿ ಯಾವ ಕಾಲದಲ್ಲೂ ಯಶಸ್ವಿಯಾಗಬಲ್ಲ ನಾಟಕವಾಗಿದೆ. ಅವರ ಇತರ ದೊಡ್ಡ, ಸಣ್ಣ ನಾಟಕಗಳೂ ಪ್ರದರ್ಶನ ಯೋಗ್ಯವಾಗಿವೆ. ತಮ್ಮ ಕಾಲಕ್ಕೆ ಯೋಗ್ಯವಾದ, ಅಗತ್ಯವಾದ ಮತ್ತು ಪ್ರಸ್ತುತವಾದ ವಸ್ತುಗಳನ್ನು ಅವರು ಆರಿಸಿಕೊಳ್ಳುತ್ತಿದ್ದರು. ಅವರ ‘ಅಮೃತ ಲಹರಿ’ ಎಂಬ ಗೀತ ನಾಟಕಗಳ ಸಂಕಲನದ ನಾಟಕಗಳು ಸಾರ್ವಕಾಲಿಕವಾದ ಮೌಲ್ಯಗಳನ್ನು ಹೇಳುವ ನಾಟಕಗಳು. ಹಾಗಾಗಿ ಈ ನಾಟಕಗಳು ಯಾವ ಕಾಲಕ್ಕೂ ಪ್ರಸ್ತುತವಾಗಿಯೇ ಇರುವ ಸತ್ ಕೃತಿಗಳು.
ಕಾದಂಬರಿಕಾರ: ವೆಂಕಟರಾಜರು ‘ಅಂಬುಜಾಕ್ಷಿ’, ‘ಧರ್ಮಶಾಲೆ’ ಮತ್ತು ‘ತುಂಗಮ್ಮನ ತವರುಮನೆ’ ಎಂಬ ಕಾದಂಬರಿಗಳನ್ನು 50ರ ದಶಕದಲ್ಲಿ ಪ್ರಕಟಿಸಿದರು. ‘ಅಂಬುಜಾಕ್ಷಿ’ಯಲ್ಲಿ ವೇಶ್ಯಾ ಸಮಸ್ಯೆಯ ಚಿತ್ರಣವಿದ್ದರೆ; ‘ಧರ್ಮಶಾಲೆ’ಯಲ್ಲಿ ಸ್ವಾತಂತ್ರ್ಯ ಹೋರಾಟದ ಕಾಲದ ಚಿತ್ರಣದ ಜತೆಗೆ ಮಠದ ಸ್ವಾಮಿಗಳೊಬ್ಬರು ಯುವತಿಯೊಬ್ಬಳನ್ನು ವಶಪಡಿಸಿಕೊಳ್ಳಲು ನಡೆಸುವ ವಿಫಲ ಪ್ರಯತ್ನವೂ ಇದೆ. ‘ಅಂಬುಜಾಕ್ಷಿ’ ಮತ್ತು ‘ಧರ್ಮಶಾಲೆ’ ಇವು ಸುಧಾರಣಾವಾದೀ ಕಾದಂಬರಿಗಳು. ವೆಂಕಟರಾಜರ ‘ತುಂಗಮ್ಮನ ತವರುಮನೆ’ ಒಂದು ಪ್ಯಾಸ್ಟೊರಲ್ ಮಾದರಿಯ ಕಾದಂಬರಿಯಾಗಿದೆ. ವೆಂಕಟರಾಜರು ಪಟೇಲರಾಗಿದ್ದಾಗ ಗ್ರಾಮೀಣ ಕೃಷಿ ಕ್ಷೇತ್ರ ತರುಣರ ವಲಸೆಯಿಂದ ಪಾಳು ಬೀಳುತ್ತಿದ್ದುದನ್ನು ಕಂಡು ಯುವಕರಿಗೆ ಗ್ರಾಮ ಜೀವನದ ಆದರ್ಶ ಮತ್ತು ರೈತಾಪಿ ಬದುಕಿನ ನೆಮ್ಮದಿಗಳನ್ನು ತೋರಿಸಿ ಕೊಡಲು ಬರೆದ ಕೃತಿ ಇದು. ಗಾತ್ರದಲ್ಲಿ ಚಿಕ್ಕದಾದರೂ ಗ್ರಾಮೀಣ ಸಮಾಜದ ವಾಸ್ತವ ಚಿತ್ರಣದ ಮೂಲಕವೇ ಆದರ್ಶವನ್ನು ಕಟ್ಟಿ ಕೊಡುವ ಕಲೆಗಾರಿಕೆಯಲ್ಲಿ, ಜನರ ನಡೆನುಡಿಯನ್ನು ಸೂಕ್ಷ್ಮವಾಗಿ ಚಿತ್ರಿಸುವುದರಲ್ಲಿ, ಪಾತ್ರಗಳು ತೋರುವ ಭಾವನೋನ್ನತಿಯಲ್ಲಿ ಮಹಾಕವಿ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ಹೋಲುತ್ತದೆ.
ಕತೆಗಾರ: ಕತೆಗಾರರಾಗಿ ವೆಂಕಟರಾಜರ ಸಾಧನೆ ಮೇಲ್ಮಟ್ಟದ್ದು. ವೆಂಕಟರಾಜರು ಒಟ್ಟು 53 ಸ್ವತಂತ್ರ ಸಣ್ಣ ಕತೆಗಳನ್ನು ಬರೆದಿದ್ದಾರೆ. ವೆಂಕಟರಾಜರು ಕನ್ನಡದ ಒಬ್ಬ ಉತ್ತಮ ಕತೆಗಾರರು. ಅವರ ಕತೆಗಳಲ್ಲಿ ಸಮಾಜದ ಆದರ್ಶ ಮತ್ತು ವಾಸ್ತವಗಳ ಚಿತ್ರಣ, ಸಮಾಜದ ದೋಷಗಳ ವಿಮರ್ಶೆ ಮತ್ತು ಸಮಾಜಕ್ಕೆ ವಿವಿಧ ರೀತಿಯ ಮಾರ್ಗದರ್ಶನ ಇವೆಲ್ಲ ಇರುವ ಕಾರಣ ಅವರ ಕತೆಗಳು ಮಹತ್ವದ್ದಾಗಿವೆ. ಕತೆಗೆ ತಕ್ಕ ನಿರೂಪಣಾ ತಂತ್ರ, ಸನ್ನಿವೇಶಗಳನ್ನು ಖಚಿತವಾಗಿ ನಿರ್ಮಿಸಬಲ್ಲ ಮತ್ತು ವ್ಯಕ್ತಿತ್ವಗಳನ್ನು ಸ್ಪಷ್ಟವಾಗಿ ಕಡೆದು ನಿಲ್ಲಿಸುವ ರೂಪಕ ಮತ್ತು ವರ್ಣನೆಗಳಿಂದ ಅವರ ಕತೆಗಳು ಗಾಢವಾದ ಅನುಭವಗಳನ್ನು ನೀಡುತ್ತವೆ; ಆದುದರಿಂದ ಯಶಸ್ವಿಯಾಗುತ್ತವೆ. ಅವರ ಮುಖ್ಯ ಕತೆಗಳಾದ ಶೀಲಭಂಗ, ಸಾಬು, ಬರ್ಸಲೋರ್ ಬಾಬ್ರಾಯ, ಶಯನೇ ಪಾತು ಮಾಧವಃ, ಕುಸಿದ ಗೋಪುರ, ಮುತ್ತಿನ ಸರ, ಸ್ವಾನುಭವ, ಬೇಟೆ, ಜೋಡುಹುಲಿ, ಅನಾದರ ಪರಿಭವ ಮತ್ತು ಮರ ಬೀಳಲಿಲ್ಲ ಇವುಗಳು ಕನ್ನಡದ ಉತ್ತಮ ಕತೆಗಳ ಪಟ್ಟಿಗೆ ಸೇರಬೇಕಾದವುಗಳು. ಅವರ ಕತೆಗಳು ಕಳೆದ ಅರ್ಧ ಶತಮಾನದಲ್ಲಿ ಓದುಗರಿಗೆ ಪುಸ್ತಕ ರೂಪದಲ್ಲಿ ದೊರೆಯದೆ ಇರುವುದು ಅವರ ಕತೆಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆಯದೆ ಇರಲು ಕಾರಣವಾಗಿರಬಹುದು. ಅದೇನಿದ್ದರೂ ಅವರನ್ನು ಕನ್ನಡದ ಒಬ್ಬರು ಮುಖ್ಯ ಕತೆಗಾರರಾಗಿ ಗುರುತಿಸುವ ಮೂಲಕ ಅವರ ಸಾಧನೆಯನ್ನು ಕನ್ನಡ ನಾಡು ಗೌರವಿಸಬೇಕಾಗಿದೆ.
ಪತ್ರಿಕೋದ್ಯಮಿ-ಸಂಪಾದಕ: ವೆಂಕಟರಾಜರು ‘ವೀರಭೂಮಿ’ ಎಂಬ ಮಾಸಪತ್ರಿಕೆಯನ್ನು 1963 ರಿಂದ 1970ರ ವರೆಗೆ ಏಳು ವರ್ಷಗಳ ಕಾಲ ನಡೆಸಿ ಅದರಲ್ಲಿ ಮಹತ್ವದ ಸಮಾಜ ಚಿಂತನೆ; ರಾಜಕೀಯ ವಿಮರ್ಶೆ; ಲಘು ಬರಹಗಳು ಮತ್ತು ಅಂಕಣ ಬರಹಗಳನ್ನು ಬರೆದಿದ್ದಾರೆ. ಅವರ ಸಂಪಾದಕೀಯಗಳು, ಸಾಹಿತ್ಯ ಚಿಂತನೆ, ವಿಮರ್ಶೆ ಮತ್ತು ಪತ್ರಿಕಾ ಲೇಖನಗಳು ಕೂಡಾ ಅವರ ವಾಙ್ಮಯದಲ್ಲಿ ಮುಖ್ಯವಾದ ಒಂದು ಸ್ಥಾನವನ್ನು ಪಡೆಯುತ್ತವೆ. ಅಲ್ಲದೆ ಅವರ ಲಘು ಬರಹಗಳು, ಅಂಕಣ ಬರಹಗಳು ಮತ್ತು ಲಲಿತ ಪ್ರಬಂಧಗಳು ಕೂಡಾ ಉತ್ತಮ ಸಾಹಿತ್ಯ ಕೃತಿಗಳಾಗಿವೆ. ವೆಂಕಟರಾಜರ ಸಂಪಾದಕೀಯಗಳು ನಮ್ಮ ರಾಜ್ಯ, ದೇಶ ಮತ್ತು ಜಗತ್ತಿನ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸಿದ ಮತ್ತು ವಿಶ್ಲೇಷಿಸಿದ ಮಹತ್ವದ ಬರಹಗಳಾಗಿವೆ; ಆ ಕಾಲದ ಅಮೂಲ್ಯ ಸಮಕಾಲೀನ – ಇತಿಹಾಸ ಬರಹಗಳಾಗಿವೆ.
ಪತ್ರಿಕೆಯನ್ನು ನಿಲ್ಲಿಸಿದ ಮೇಲೂ ಸುಮಾರು 1987ರ ವರೆಗೆ – ಅಂದರೆ ತಮ್ಮ 74ನೆಯ ವರ್ಷದವರೆಗೆ ಅವರು ಕತೆ ಮತ್ತು ಕಾವ್ಯರಚನೆ ಮಾಡುತ್ತಲೇ ಇದ್ದರು. ಅವರ ‘ಬೇಟೆ’ ಅನ್ನುವ ಕತೆ 1984ರಲ್ಲಿ ‘ಸುಧಾ’ ಪತ್ರಿಕೆಯಲ್ಲಿ ಪ್ರಕಟವಾಗಿದೆ. ತನ್ನ ಇಡೀ ಜೀವನದಲ್ಲಿ ಸಮಾಜಮುಖಿಯಾದ ಸಾಹಿತ್ಯ ಕೃಷಿಯನ್ನು ಇಷ್ಟು ವ್ಯಾಪಕವಾಗಿ, ಇಷ್ಟು ನಿರಂತರವಾಗಿ ಮಾಡಿದ ಸಾಹಿತಿಗಳು ಹೆಚ್ಚಿಗೆ ಇರಲಾರರು.
ವೆಂಕಟರಾಜರ ಇತರ ಕೃತಿಗಳು
ಕಾದಂಬರಿಗಳು
1. ಅಂಬುಜಾಕ್ಷಿ , ಶ್ರೀ ಕೃಷ್ಣ ಪ್ರಕಾಶನ, ಉಡುಪಿ : 1955
2. ಧರ್ಮಶಾಲೆ , ಶ್ರೀ ಕೃಷ್ಣ ಪ್ರಕಾಶನ, ಉಡುಪಿ : 1956
3. ತುಂಗಮ್ಮನ ತವರುಮನೆ , ಶ್ರೀ ಕೃಷ್ಣ ಪ್ರಕಾಶನ, ಉಡುಪಿ : 1956
ನಾಟಕಗಳು
1. ರಂಗಭೂಮಿ , ಕಿರಿಯರ ಪ್ರಪಂಚ, ಉಡುಪಿ : 1941
2. ಎರಡು ಏಕಾಂಕ ನಾಟಕಗಳು, ಅಂತರಂಗ ಕಾರ್ಯಾಲಯ, ಉಡುಪಿ : ?
3 ಕೈಲಾಸದಲ್ಲಿ ಕಮ್ಯೂನಿಸ್ಟರು , ಶ್ರೀ ಕೃಷ್ಣ ಪ್ರಕಾಶನ, ಉಡುಪಿ : 1956
4. ಅಮೃತ ಲಹರಿ , ಶ್ರೀ ಕೃಷ್ಣ ಪ್ರಕಾಶನ, ಉಡುಪಿ : 1957
5. ಸಂಪೂರ್ಣ ರಾಮಾಯಣ , ವೀರಭೂಮಿ : 15.11.1963
6. ಸುಖೀ ಸಮಾಜ , ವೀರಭೂಮಿ : 15.4.1964
7. ಪ್ರತ್ಯಕ್ಷ ಭೂತ , ವೀರಭೂಮಿ : 15.11.1964
8. ಮಹಿಳಾಮಣಿ , ವೀರಭೂಮಿ : 15.6.1965
ಕಥಾಸಂಕಲನಗಳು
1.ವೀರಭೂಮಿ [ಕಿರುಹೊತ್ತಿಗೆ] ತುಳುನಾಡ್ ಛಾಪಖಾನೆ, ಉಡುಪಿ. 1931
2.ಆಕಾಶಗಂಗೆ [20 ಕತೆಗಳ ಸಂಕಲನ]. ಪ್ರಕಾಶಕರು : ಕಿರಿಯರ ಪ್ರಪಂಚ, ಉಡುಪಿ. 1945
3.ಸಪ್ತಸಾಗರ [7 ಕತೆಗಳ ಸಂಕಲನ] ಪ್ರಕಾಶಕರು : ಕಿರಿಯರ ಪ್ರಪಂಚ, ಉಡುಪಿ. 1947
ಇತರರು ಸಂಪಾದಿಸಿದ ಸಂಕಲನಗಳಲ್ಲಿರುವ ಕತೆಗಳು
1. ಹಣೆಬರಹ (ನಮ್ಮ ಕತೆಗಳು – 1932 – ಸಂಕಲನದಲ್ಲಿದೆ)
2. ಹಾಗಾದರೆ (ಮಧುವನ – 1935 – ಸಂಕಲನದಲ್ಲಿದೆ )
3. ತಪಸ್ಸಿದ್ಧಿ (ಅಂತರಂಗದ ಕಥೆಗಳು – 1940 – ಸಂಕಲನದಲ್ಲಿದೆ)
4. ಸೂಳೆಯ ಸಂಪತ್ತು (ಕಂಡೂ ಕಾಣದ ನೋಟಗಳು – 1941, ಸಂಕಲನದಲ್ಲಿದೆ)
ಅಪ್ರಕಟಿತ
ನಾಟಕಗಳು
1. ಕರುಳಿನ ಕೂಗು [ಹಸ್ತಪ್ರತಿ ದಿನಾಂಕ – 1.8.1935]
2. ಮಲ್ಲಿಯ ಮದುವೆ [ಹಸ್ತಪ್ರತಿ ದಿನಾಂಕ – 21.8.1960]
ಕಥಾಸಂಕಲನಗಳು
1. ಶೀಲಭಂಗ (12 ಕತೆಗಳು)
2.ಬರ್ಸಲೋರ್ ಬಾಬ್ರಾಯ (11 ಕತೆಗಳು)
3.ಹೃದಯದ ಹಾಡು (ಅನುವಾದ ಕತೆಗಳು –
ಇಂಗ್ಲಿಷಿನಿಂದ ಅನುವಾದಿಸಿದ 19 ಕತೆಗಳು)
ಲಘುಬರಹಗಳು
1.ಲೋಕಾಭಿರಾಮ (ಲಘು ಅಂಕಣಬರಹಗಳು)
2.ನರಕದ ನಾಯಿ (16 ಹಾಸ್ಯ ಬರಹಗಳು)
ವಿಚಾರ – ವಿಮರ್ಶೆ
1.ಸಾಹಿತ್ಯ ಮತ್ತು ಸಮಾಜ
(ಏಳು ವೈಚಾರಿಕ ಲೇಖನಗಳು ಮತ್ತು 11 ಸಾಹಿತ್ಯ ವಿಮರ್ಶೆಯ ಬರಹಗಳು)
2.ಮನೋರಮೆಯೊಡನೆ ಮಾತುಕತೆ’ (ಅಂಕಣ ಬರಹಗಳ ಸಂಕಲನ)
3. ವೀರಭೂಮಿ (ವೀರಭೂಮಿ ಪತ್ರಿಕೆಯ ಏಳು ವರ್ಷಗಳ ಸಂಪಾದಕೀಯಗಳು)
ದಕ್ಷಿಣ ಕನ್ನಡ ಜಿಲ್ಲೆಯ ಒಬ್ಬ ಪ್ರಮುಖ ನವೋದಯ ಸಾಹಿತಿಯಾದ ಅವರ ಸಮಗ್ರ ಕೃತಿಗಳ ಸಂಪುಟಗಳನ್ನು ಕನ್ನಡ – ಸಂಸ್ಕೃತಿ ಸಂವರ್ಧನೆಗಾಗಿ ಇರುವ ಸಂಸ್ಥೆಗಳು ಪ್ರಕಟಿಸುವ ಅಗತ್ಯವಿದೆ.
ವೆಂಕಟರಾಜರ ಬಗ್ಗೆ ಸಂಗ್ರಹವಾಗಿ ಹೇಳಬಹುದಾದ ಮಾತೆಂದರೆ, ಸಮಾಜವೇ ಮುಖ್ಯವೆಂದು ತಿಳಿದ ಶ್ರೇಷ್ಠ ಕವಿಯೊಬ್ಬ ತನ್ನ ಕಾಲದ ಬದುಕಿಗೆ ಸಾಹಿತ್ಯ ಸೃಷ್ಟಿಯ ಮೂಲಕವೇ ಸ್ಪಂದಿಸುತ್ತ, ಪ್ರಚಾರಕ್ಕೆ ವಿಮುಖರಾಗಿ, ನಿರಂತರವಾಗಿ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿರುವ ಉದಾಹರಣೆಗಳು ಸಾಹಿತ್ಯ ಲೋಕದಲ್ಲಿ ಹೆಚ್ಚು ಸಿಗಲಾರದು. ಇಂಥ ಅಪೂರ್ವ ಸಾಹಿತಿ ವೆಂಕಟರಾಜರು. ಉಡುಪಿಯಲ್ಲಿ ನಡೆದ ಸನ್ಮಾನ ಸಮಾರಂಭವೊಂದರಲ್ಲಿ ಅವರಿಗೆ ‘ಕವಿರಾಜ ಹಂಸ’ ಎಂಬ ಸಾರ್ಥಕ ಬಿರುದನ್ನು ನೀಡಲಾಗಿತ್ತು.
*****
ಗ್ರಂಥ ಋಣ:
1. ಸಾಂತ್ಯಾರು ವೆಂಕಟರಾಜ. ಗುಂಡ್ಮಿ ಚಂದ್ರಶೇಖರ ಐತಾಳ. ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜು, ಉಡುಪಿ. 1971.
2.ಕವಿರಾಜಹಂಸ ಸಾಂತ್ಯಾರು ವೆಂಕಟರಾಜ. ಲೇಖಕ: ಬಿ. ಜನಾರ್ದನ ಭಟ್. ಸ್ವಂತ ಪ್ರಕಾಶನ, ಬೆಳ್ಮಣ್ಣು. 2006
ಕೃತಜ್ಞತೆಗಳು:
1. ದಿ. ಮನೋರಮಾ ಸಾಂತ್ಯಾರ್ (ವೆಂಕಟರಾಜರ ಸಮಸ್ತ ಸಾಹಿತ್ಯ ಕೃತಿಗಳನ್ನು ಕೊಟ್ಟು ಅವರ ಬಗ್ಗೆ ಅಧ್ಯಯನ ನಡೆಸಲು ನೆರವಾಗಿರುವರು).
2. ಶ್ರೀ ವಸಂತರಾಜ (ಕವಿರಾಜ ಹಂಸ ಸಾಂತ್ಯಾರು ವೆಂಕಟರಾಜ ಕೃತಿ ಪ್ರಕಟಿಸಿದವರು).
ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82.