ರಂಗದ ಕಾಯಕ ಅಂದರೆ ಮೊದಲು ನಮ್ಮ ಮನೋಧರ್ಮ ಗುರುತಿಸಿಕೊಂಡು ನಾಟಕ ಕಟ್ಟಿ ಅದು ಪ್ರೇಕ್ಷಕರ ಕಣ್ಣುಗಳ ಫ್ರೇಮಿನಲ್ಲಿ ಸರಿಯಾಗಿ ಫಿಟ್ಟಾಗುತ್ತದೆಯೇ ಎಂದು ಅಂದಾಜು ಮಾಡಿಕೊಳ್ಳಬೇಕು. ನಂತರ ಜನರಿಗೆ ಕಾಯಬೇಕು. ಪಾರ್ಕಿಂಗ್ ಕಡೆ ಕಣ್ಣು ಹಾಯಿಸುತ್ತಿರಬೇಕು. ಇಷ್ಟಾದ ಮೇಲೆ ಭರ್ಜಿಯ ಮೊನೆಗಳಿಗೆ ಮೈ ಒಡ್ಡಿ ನಿಲ್ಲಬೇಕು ಮತ್ತು ನೋವಿನಲ್ಲೂ ನಗಬೇಕು. ನಗಲು ಸಾಧ್ಯವಾಗದಿದ್ದರೆ ಮನಸ್ಸಿನ ಹದ ಕೆಡುತ್ತದೆ. ಮನಸ್ಸು ಕೆಟ್ಟರೆ ಬದುಕಿನ ನೋಟಕ್ರಮದ ಜಾಡು ತಪ್ಪುತ್ತದೆ. ಒಟ್ಟು ಚಿತ್ರವೇ ಕಲಕಿಹೋಗುತ್ತದೆ.
‘ರಂಗ ವಠಾರ’ ಅಂಕಣದಲ್ಲಿ ಮತ್ತೆ ಗರಿಗೆದರುತ್ತಿರುವ ರಂಗಭೂಮಿಯ ಚಟುವಟಿಕೆಗಳ ಕುರಿತು ಬರೆದಿದ್ದಾರೆ ಎನ್.ಸಿ. ಮಹೇಶ್

 

ಕೋವಿಡ್‌ಗೂ ವರ್ಷಗಳು ತುಂಬುತ್ತಿವೆ. ಅದರ ಮದುವೆ ಬಗ್ಗೆ ನೋ ಇನ್ಫರ್ಮೇಷನ್. ಆದರೂ ಅದು ಪ್ರಸವ ವೇದನೆ ಅನುಭವಿಸಿ ರೂಪಾಂತರಿಗಳನ್ನ ಹೇಗೆ ಹೆರುತ್ತಿದೆ.. ಅದೂ ಗೊತ್ತಿಲ್ಲ. ರೂಪಾಂತರಿಗಳಿಗೆ ನಾಮಕರಣವಂತೂ ನಡೆಯುತ್ತಿದೆ. ಇದು ಸದ್ಯದ ಪರಿಸ್ಥಿತಿ. ಮುಂದೆ ಮತ್ತೊಂದು ಭಯಾನಕ ರೂಪಾಂತರಿ ರೂಪುತಳೆಯಲಿದೆ, ಅದು ಮೂವರಲ್ಲಿ ಒಬ್ಬರನ್ನ ಬಲಿ ತೆಗೆದುಕೊಳ್ಳಲಿದೆ ಎಂದು ಏನೆಲ್ಲ ಸುದ್ದಿ ಹರಡುತ್ತಿದ್ದರೂ ಕೋವಿಡ್ ಪ್ರಸವವೇದನೆ ಆರಂಭಗೊಳ್ಳುವವರೆಗೂ ನಿರಾಳವಾಗಿರೋಣ ಎನ್ನುವ ರೀತಿಯಲ್ಲಿ ಬದುಕು ಸಜ್ಜಾಗುತ್ತಿದೆ. ತಲ್ಲಣಗಳ ನಡುವೆ ಬದುಕುವುದು ರೂಢಿಯಾಗುತ್ತಿದೆ. ಜೊತೆಗೆ ಅದರ ಲಯ ಕಂಡುಕೊಳ್ಳುತ್ತಿದೆ. ಈ ಲಯ ದಿಟ್ಟತನ, ಸ್ಫೂರ್ತಿ ಮತ್ತು ಒಂದು ಬಗೆಯ ‘ಡೋಂಟ್ ಕೇರ್’ ಆ್ಯಟಿಟ್ಯೂಡನ್ನೂ ಕೂಡ ರೂಢಿಸಿಕೊಂಡು ಪೈಪೋಟಿಗೆ ಇಳಿದಂತೆ ತೋರುತ್ತಿದೆ.

ಇದೆಲ್ಲ ಕೇವಲ ಊಹೆಯಲ್ಲ. ಕಣ್ಮುಂದೆ ಕದಲಿದ ನಿಜದ ಚಿತ್ರಗಳು. ಮೊನ್ನೆ ಬೆಂಗಳೂರಿನ ಮಲ್ಲತ್ತಹಳ್ಳಿಯಲ್ಲಿರುವ ಕಲಾಗ್ರಾಮದಲ್ಲಿ ‘ನಾಟಕ ಬೆಂಗಳೂರು’ ಉತ್ಸವ ಆರಂಭ ಆಗಿಯೇಬಿಟ್ಟಿತು. ಒಮಿಕ್ರಾನ್ ಮತ್ತು ಭವಿಷ್ಯದಲ್ಲಿ ರೂಪುತಳೆಯಲಿರುವ ಕೂಸು ನಿಯೋಕ್ರಾನ್ ಬಗೆಗೆ ಯಾವ ನೆದರೂ ಇರಿಸಿಕೊಳ್ಳದಂತೆ ಹಿರಿಯ ರಂಗಕಲಾವಿದರು ಜೊತೆಗೂಡಿ ತ್ವರಿತಗತಿಯಲ್ಲಿ ಉತ್ಸವ ಆಯೋಜಿಸಿಯೇಬಿಟ್ಟರು. ಮೊದಲು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಈ ಉತ್ಸವ ನಡೆಸಬೇಕು ಎಂದು ಮುಂದಾದಾಗ ಅಲ್ಲಿ ಒಪ್ಪಿಗೆ ಸಿಗಲಿಲ್ಲ. ಆದರೂ ಹಿರಿಯರು ಹಟ ಬಿಡಲಿಲ್ಲ. ಅದೇ ಹೊತ್ತಿಗೆ ಕಲಾಗ್ರಾಮ ಅಣಿಯಾಗಿತ್ತು. ಕಲಾ‘ಕ್ಷೇತ್ರ’ವೋ ಕಲಾ’ಗ್ರಾಮ’ವೋ ಒಟ್ಟಿನಲ್ಲಿ ಕಲೆ ಚಾಲನೆ ಪಡೆದುಕೊಳ್ಳಬೇಕು ಎನ್ನುವ ಉತ್ಕಟ ಇಚ್ಛೆಯಿಂದ ಉತ್ಸವ ಆರಂಭಿಸಿದರು. ರಂಗತಂಡಗಳು ಸ್ಲಾಟ್ ಪಡೆದುಕೊಂಡು ತಾಲೀಮು ಆರಂಭಿಸಿ ರಂಗದ ಮೇಲೆ ತಮ್ಮ ನಡೆ ಆರಂಭಿಸಿದವು.

ಮಹತ್ವದ ಸಂಗತಿಯೆಂದರೆ ಕಲಾಕ್ಷೇತ್ರದಲ್ಲಿ ಉತ್ಸವಕ್ಕೆ ಅವಕಾಶ ಸಿಗದಿದ್ದಾಗ ಕಲಾಗ್ರಾಮ ದೊರೆತಿದ್ದು. ಹಾಗೆ ನೋಡಿದರೆ ಕಲಾಗ್ರಾಮ 2018ರಲ್ಲಿ ಬೆಂಕಿಗೆ ಆಹುತಿಯಾಗಿ ಅದು ಮತ್ತೆ ಮೊದಲಿನ ಸ್ಥಿತಿಗೆ ಮರಳಲು ವರ್ಷಗಳು ಸಾಲದು ಎಂಬ ಚಿತ್ರ ಕಟ್ಟಿಕೊಡುತ್ತಲೇ ಇದ್ದಾಗ ಅದನ್ನು ಮರೆವಿಗೆ ಸರಿಸಿ ಬಹುತೇಕರು ಸುಮ್ಮನಾಗಿದ್ದರು. ಸರ್ಕಾರದ ಮೇಲೆ ಒತ್ತಡ ಹೇರುವಷ್ಟರಲ್ಲಿ ಕೋವಿಡ್ ಆರಂಭ. ಕಲಾಗ್ರಾಮದ ಹಾಗೇ ಬದುಕು ಹತ್ತಿಉರಿಯಲು ಆರಂಭಿಸಿದಾಗ ರಂಗಮಂದಿರದ ನೆನಪು ಬೂದಿಯಾಗಿತ್ತು. ಸರ್ಕಾರ ಅದನ್ನು ಗಣನೆಗೆ ತೆಗೆದುಕೊಂಡು ಮತ್ತೆ ಅದು ಯಥಾಸ್ಥಿತಿಗೆ ಮರಳಬೇಕಾದರೆ ಎಷ್ಟು ಸಂವತ್ಸವರಗಳು, ತಲೆಮಾರುಗಳು ಕಳೆದುಹೋಗುತ್ತವೆಯೋ ಅಂದುಕೊಂಡು ಅದು ಮರೆವಿಗೇ ಸಂದಿತ್ತು.

ಆದರೆ ನಾವು ನಿರೀಕ್ಷಿಸಿದ್ದು ಕೈಗೂಡದಿದ್ದಾಗ ನಿರೀಕ್ಷಿಸದೇ ಇರುವುದನ್ನು ನಮ್ಮ ಮುಂದಿರಿಸುವುದು ಬದುಕು ಸೃಷ್ಟಿಸುವ ಮಾಯೆಗಳಲ್ಲಿ ಒಂದು. ಮೊನ್ನೆ ಇಂಥದ್ದೇ ಮಾಯೆಯ ಝಲಕಿನಂತೆ ‘ನಾಟಕ ಬೆಂಗಳೂರು’ ಉತ್ಸವ ಆರಂಭವಾಯಿತು. ಜೊತೆಗೆ ನಮ್ಮ ತಂಡಕ್ಕೂ ಒಂದು ಸ್ಲಾಟ್ ಸಿಕ್ಕು ತಾಲೀಮು ಆರಂಭಿಸಿದೆವು. ಸಾಮಾಜಿಕ ಅಂತರ, ಮಾಸ್ಕು, ಭಯ ಎಲ್ಲದರ ಅರಿವಿದ್ದರೂ ತಾಲೀಮಿನಲ್ಲಿ ಇವುಗಳ ಹಂಗು ಇಲ್ಲ. ಗಂಭೀರ ದೃಶ್ಯಗಳನ್ನೂ ನಕ್ಕು ಅಭಿನಯಿಸುತ್ತ, ಮಾತುಗಳನ್ನು ಮರೆಯುತ್ತ, ನೆನಪಿಸಿಕೊಳ್ಳುತ್ತ, ನಗುತ್ತ ಕಾಲ ಕಳೆವ ಆ ಘಟ್ಟ ನಾಟಕಕ್ಕಿಂತ ಚೆಂದ. ರಂಗದ ಮೇಲಿನ ನಾಟಕ ಶೃತಿಗೆ ಅಣಿಗೊಳಿಸಿದ ವೀಣೆಯಂಥದ್ದು. ತಾಲೀಮು ಎನ್ನುವುದು ಶೃತಿ ಕೂಡಿಸಲಿಕ್ಕೆ ನಡೆಸುವ ಕಸರತ್ತು ಅಷ್ಟೆ.

ಒಂದು ಕಡೆ ಕಲಾಗ್ರಾಮ ಬೆಂಕಿಗೆ ಆಹುತಿಯಾಗಿಯೂ ಫೀನಿಕ್ಸಿನಂತೆ ಮತ್ತೆ ಎದ್ದು ರಕ್ಕೆ ಕದಲಿಸಲು ಅಣಿಯಾದ ಚಿತ್ರ ಕಣ್ಣಲ್ಲಿ. ಮತ್ತೊಂದೆಡೆ ನಾನು ನಮ್ಮ ತಂಡದ ಜೊತೆ ಕಲಾಗ್ರಾಮಕ್ಕೆ ಹೋಗಿ ನಾಟಕಕ್ಕೆ ಅಣಿಯಾಗುವುದೆಂದರೆ ಭಗ್ನ ಅವಶೇಷಗಳನ್ನು ಒಳಗೊಂಡ ಪುರಾತನ ಸ್ಥಳವೊಂದು ಜೀರ್ಣೋದ್ಧಾರವಾಗಿ ತಲೆಎತ್ತಿರುವ ಕಡೆ ಹೆಜ್ಜೆ ಕದಲಿಸುತ್ತಿರುವ ಅನುಭವ ಆಗತೊಡಗಿತು. ಆದರೂ ಒಂದು ಸಣ್ಣ ಅನುಮಾನ ಮನಸ್ಸಿನಲ್ಲಿ ಮತ್ತೆಮತ್ತೆ ಸುಳಿಯುತ್ತಲೇ ಇತ್ತು. ರಂಗಮಂದಿರವೇನೊ ಸಜ್ಜಾಗಿದೆ; ಉತ್ಸವವೂ ಆರಂಭವಾಗಿದೆ. ಆದರೆ ಜನ ಬರುತ್ತಾರೆಯೇ? ಇದು ದೊಡ್ಡ ಪ್ರಶ್ನೆ. ರಂಗಕಲಾವಿದರು ಕೋವಿಡ್ ಭೀತಿ ದಾಟಿ ಮುನ್ನಡೆಯುತ್ತಿರಬಹುದು. ಜನರ ಮನಸ್ಸಿನಲ್ಲಿ ಕದಲುತ್ತಿರುವ ಚಿತ್ರ ಎಂಥದ್ದು? ಅವರು ಬರದೆ ಬರೀ ಖಾಲಿ ಕುರ್ಚಿಗಳಿಗೆ ನಾಟಕ ಕಾಣಿಸುವುದು ಹೇಗೆ? ಮನಸ್ಸಿನಲ್ಲಿ ಏನೇನೋ ಸುಳಿಗಳು.

ಉತ್ಸವ ಆರಂಭವಾದ ಮೂರನೇ ದಿನ ನಮ್ಮ ತಂಡಕ್ಕೆ ಸ್ಲಾಟ್ ಸಿಕ್ಕಿತ್ತು. ನಟ ನಟಿಯರು ರಂಗದ  ಮೇಲೆ ಒಂದು ರನ್‌ಥ್ರೂ ಆರಂಭಿಸಿದರು. ಅವರಿಗೆ ಮಾತು ಮರೆತು ಹೋದರೆ ಎಂಬ ಸಣ್ಣ ಅಳುಕು. ಅದಕ್ಕೆ ಪೂರ್ವ ತಯ್ಯಾರಿ ಅದು. ಜನ ಬರುವುದು ಬಿಡುವುದು ಸೆಕೆಂಡರಿ. ನಾಟಕ ಕಟ್ಟಿರುವ ನನಗೆ ನಾಟಕದ ಬಗೆಗೆ ವಿಶ್ವಾಸ ಇದ್ದೇ ಇತ್ತು. ಆದರೆ ಜನರ ಹಾಜರಾತಿ ಬಗ್ಗೆಯೇ ನನಗೆ ಯೋಚನೆ. ಹೀಗೇ ಹೊರಗೆ ಹೆಜ್ಜೆ ಕದಲಿಸಿ ಅಲ್ಲಿ ಕಂಡ ಸೆಕ್ಯೂರಿಟಿಯನ್ನು ‘ನಿನ್ನೆ ಮೊನ್ನೆ ಜನ ಬಂದ್ರಾ ಹೇಗೆ?’ ಎಂದು ಕೇಳಿದೆ. ‘ಪರವಾಗಿಲ್ಲ ಸರ್ ಬಂದಿದ್ರು..’ ಅಂದರು ಸೆಕ್ಯೂರಿಟಿ. ‘ಅಂದರೆ ಅಂದಾಜಿನಲ್ಲಿ ಎಷ್ಟು ಜನ ಬಂದಿರಬಹುದು.?’ ಅಂತ ಮರುಪ್ರಶ್ನೆ ಹಾಕಿದೆ. ‘ಎರಡೂ ದಿನ ಎಂಬತ್ತು ಎಂಬತ್ತು ಬಂದಿರಬಹುದು ಸರ್’ ಎನ್ನುವ ಉತ್ತರ ಬಂತು.

ಎಂಬತ್ತು ಎಂದು ಆತ ಹೇಳುತ್ತಿದ್ದಂತೆ ನನಗೆ ರಂಗಮಂದಿರದ ಒಳಾಂಗಣ ಎಷ್ಟು ತುಂಬುತ್ತದೆ ಮತ್ತು ಎಷ್ಟು ಖಾಲಿಖಾಲಿಯಾಗಿ ಉಳಿಯುತ್ತದೆ ಎನ್ನುವ ಚಿತ್ರ ಕಣ್ಮುಂದೆ ತಂದುಕೊಂಡೆ. ಇನ್ನೂರ ಇಪ್ಪತ್ತು ಸೀಟುಗಳ ರಂಗಮಂದಿರ; ಎಂಬತ್ತು ಜನರಾದರೂ ಬರುತ್ತಿದ್ದಾರೆ ಎಂದು ಸಮಾಧಾನಗೊಳ್ಳಬೇಕೋ ಅಥವಾ ಹಲ್ಲಿಯಂತೆ ಲೊಚಗುಡಬೇಕೋ ತಿಳಿಯಲಿಲ್ಲ. ಅದೂ ಅಲ್ಲದೆ ಈ ಬಾರಿ ನಾಟಕ ಪ್ರದರ್ಶನಕ್ಕೆ ಸಮಿತಿ ಆದೇಶದ ಅನುಸಾರ ಟಿಕೆಟ್ ದರ ಎಪ್ಪತ್ತು ರೂಪಾಯಿ ನಿಗದಿ ಮಾಡಿದ್ದೆವು. ಇದು ತೀರಾ ಕಡಿಮೆ ಮೊತ್ತ ಎಂದು ಗೊತ್ತಿತ್ತು. ಯಾಕೆ ಹೀಗೆ ಎಂದು ವಿಚಾರಿಸಿದ ಹೊತ್ತು ಮತ್ತೆ ಎದುರಾದದ್ದು ಜನ ಬರುತ್ತಾರೋ ಇಲ್ಲವೋ ಎಂಬ ಪ್ರಶ್ನೆ. ಬರುವ ಮನಸ್ಸು ಮಾಡಿದರೂ ಈ ಕೋವಿಡ್ ಮತ್ತು ಅದರ ರೂಪಾಂತರಿಗಳ ಕಾಲದಲ್ಲಿ ನೂರು ರೂ. ದಾಟಿದ ಮೊತ್ತ ಹೊರೆ ಅನಿಸಬಹುದೆ ಎಂದು ಏನೇನೋ ಯೋಚಿಸಿ ಹಿರಿಯರು ದರವನ್ನು ಎಪ್ಪತ್ತಕ್ಕೆ ಇಳಿಸಿದ್ದರು. ಮಿಗಿಲಾಗಿ ಕಲಾಗ್ರಾಮದಲ್ಲಿ ಮತ್ತೆ ನಾಟಕಗಳು ಆರಂಭ ಆಗುತ್ತಿವೆ ಹಾಗೂ ಉತ್ಸವ ನಡೆಯುತ್ತಿವೆ ಎಂಬ ಮಾಹಿತಿ ಎಷ್ಟು ಜನಕ್ಕೆ ತಲುಪಿದೆ? ಪತ್ರಿಕೆಗಳು ಈ ಬಗ್ಗೆ ಮಾಹಿತಿ ಕೊಟ್ಟಿಲ್ಲ. ಇದು ಫೇಸ್ಬುಕ್ ಮತ್ತು ವಾಟ್ಸ್‌ಆಪ್‌ಗಳ ಕಾಲ ನಿಜ; ಆದರೆ ಇದರ ಆಚೆಗಿನ ಜಗತ್ತಿನವರೂ ಪೇಪರ್ ಹಿಡಿದೇ ಕೂರುತ್ತಾರೆ. ಅವರಿಗೆ ಅಲ್ಲಿ ಸುದ್ದಿ ಬಂದರೆ ರಂಗಮಂದಿರದ ಕಡೆ ತಿರುಗಿ ನೋಡುತ್ತಾರೆ. ಇಲ್ಲದಿದ್ದರೆ ಇಲ್ಲ.

ಇಂಥ ಇಕ್ಕಟ್ಟಿನ ಕಾಲದಲ್ಲಿ ಉತ್ಸವ ಆರಂಭಿಸುವುದು ಉತ್ಸಾಹದಾಯಕವೇನೋ ಹೌದು. ಆದರೆ ಖಾಲಿ ಕುರ್ಚಿಗಳಿಗೆ ನಾಟಕಗಳನ್ನು ಕಾಣಿಸುವುದು ಹೇಗೆ ಎಂದು ಯೋಚಿಸುತ್ತ ರಂಗಮಂದಿರದ ಬಾಲ್ಕನಿಯಲ್ಲಿ ಹಾಗೇ ಸಂಜೆಯ ರಂಗು ಕಣ್ಣುತುಂಬಿಕೊಳ್ಳಲು ಆರಂಭಿಸಿದರೂ ನನ್ನ ಕಣ್ಣುಗಳು ಆಗಾಗ ಗಾಡಿ ಪಾರ್ಕಿಂಗ್ ಕಡೆ ಹಾಯುತ್ತಲೇ ಇದ್ದವು. ಜನ ಬರುತ್ತ ಗಾಡಿಗಳ ಸಾಲು ಹೆಚ್ಚಿದಂತೆ ಮನಸ್ಸಿನಲ್ಲಿ ಕೊಂಚ ಸಮಾಧಾನ. ಸಂಜೆಯ ತೆಳುಕತ್ತಲನ್ನು ಬೆಳಕಿನ ತಮ್ಮ ಕಣ್ಣುಗಳಿಂದ ಸೀಳಿಕೊಂಡು ಬರುವ ಗಾಡಿಗಳು ಬರುವುದು ಕಡಿಮೆಯಾದರೆ ಮತ್ತೆ ನಿರಾಶೆಯ ಪರದೆ ಕಣ್ಣಮುಂದೆ. ನಾಟಕ ಸಂಜೆ ಏಳು ಗಂಟೆಗೆ ಅಂದರೆ ಆರೂ ಮುಕ್ಕಾಲಿನಿಂದ ಒಂದು ರಭಸ ಆರಂಭವಾಗುತ್ತದೆ- ಅದೂ ನಾಟಕ ಚೆನ್ನಾಗಿದ್ದರೆ. ಚೆನ್ನಾಗಿ ಅನ್ನುವುದು ಇಲ್ಲಿ ಅವರವರ ಭಾವಕ್ಕೆ ಬಿಟ್ಟುಬಿಡುತ್ತೇನೆ. ರಂಗಕರ್ಮಿಗಳ, ಸಿದ್ಧಾಂತಿಗಳ ನಾಟಕಗಳು ಬೇರೆ. ಅವರ ನಿರೀಕ್ಷೆಗಳು ಬೇರೆ. ಅವರಿಗೆ ಅನುಗುಣವಾಗಿ ನಾಟಕ ಮಾಡಿದರೆ ರಂಗಮಂದಿರ ಭಣಭಣ. ಜನ ಬರದಿದ್ದರೂ ನಾಟಕಗಳನ್ನು ಸರಿದೂಗಿಸಿಕೊಂಡು ಹೋಗುವ ಸ್ತರಕ್ಕೆ ನಾವು ತಲುಪಿದ್ದೇವೆಯೇ ಎಂದು ಮೊದಲು ನಮ್ಮನ್ನು ಚೆಕ್ ಮಾಡಿಕೊಳ್ಳಬೇಕು. ನಾವು ಆ ಸ್ತರ ತಲುಪಿಲ್ಲ ಅನಿಸಿದಾಗ ಪ್ರೇಕ್ಷಕವರ್ಗದ ಬಗೆಗೆ ನಮ್ಮ ಭೌದ್ಧಿಕತೆ ಪಕ್ಕಕ್ಕಿರಿಸಿ ಯೋಚಿಸುವುದನ್ನು ಕಲಿಯಬೇಕು. ಆದರೆ ಇದಕ್ಕೆ ಹಲವರ ತೀಕ್ಷ್ಣ ಓದಿನ ಸುಪ್ತ ಅಹಂ, ಅವರ ಸಿದ್ಧಾಂತಗಳು ಮತ್ತು ಕಣ್ಣುಗಳಲ್ಲಿ ಜಾಗ ಕಲ್ಪಿಸಿರುವ ಒಂದು ಜಾಡಿನ ನಾಟಕಗಳ ಚಿತ್ರಗಳು ಬಿಡುವುದಿಲ್ಲ. ಅವರು ಜನಬರಲಿ ಬಿಡಲಿ ವಾದ ಮಂಡಿಸುತ್ತಲೇ ಇರುತ್ತಾರೆ. ಇದು ಸರಿಯೋ ತಪ್ಪೋ ಅದು ನಂತರದ ಸಂಗತಿ. ಇದು ಕೇಳಿ ತಿಳಿದುಕೊಂಡು ಅರ್ಥೈಸಿಕೊಳ್ಳುವ ಸಂಗತಿಯಲ್ಲ. ಪ್ರಾಕ್ಟಿಕಲ್ ಆಗಿ ರಂಗದ ಜೊತೆ ನಿರಂತರ ಒಡನಾಡುವ ಅರ್ಥೈಸಿಕೊಳ್ಳಬೇಕಿರುವ ಪಾಠ. ಈ ಪಾಠ ಅರ್ಥವಾದವರು ನಿಜಕ್ಕೂ ಆತ್ಮಾವಲೋಕನಕ್ಕೆ ತೊಡಗುತ್ತಾರೆ.

ಗಂಭೀರ ದೃಶ್ಯಗಳನ್ನೂ ನಕ್ಕು ಅಭಿನಯಿಸುತ್ತ, ಮಾತುಗಳನ್ನು ಮರೆಯುತ್ತ, ನೆನಪಿಸಿಕೊಳ್ಳುತ್ತ, ನಗುತ್ತ ಕಾಲ ಕಳೆವ ಆ ಘಟ್ಟ ನಾಟಕಕ್ಕಿಂತ ಚೆಂದ. ರಂಗದ ಮೇಲಿನ ನಾಟಕ ಶೃತಿಗೆ ಅಣಿಗೊಳಿಸಿದ ವೀಣೆಯಂಥದ್ದು. ತಾಲೀಮು ಎನ್ನುವುದು ಶೃತಿ ಕೂಡಿಸಲಿಕ್ಕೆ ನಡೆಸುವ ಕಸರತ್ತು ಅಷ್ಟೆ.

ಮೂಲಭೂತವಾಗಿ ರಂಗಭೂಮಿ ಯಾರಿಗೆ ಮತ್ತು ಇಂದಿನ ಸಂವೇದನೆಗಳು ಎಂಥದ್ದು, ಏನೇನು ಬದಲಾಗಿವೆ ಎಂದು ಕೇಳಿಕೊಳ್ಳುತ್ತಾರೆ. ಇದು ಅರ್ಥವಾದರೆ ಅದಕ್ಕೆ ಕನೆಕ್ಟ್ ಆಗುವುದು ಹೇಗೆ ಎಂದು ಹೊಳೆಯುತ್ತದೆ. ಅಥವಾ ಹೊಳೆಯಬಹುದು. ನಾವು ಅವರಿಗೆ ಕನೆಕ್ಟ್ ಆಗುವುದು ಬೇಡ.. ನಮಗೇ ಅವರು ಕನೆಕ್ಟ್ ಆಗಬೇಕು ಎಂದು ಕೂತರೆ ಚಿತ್ರ ಬದಲಾಗುತ್ತದೆ. ಇನ್ನೂರಿಪ್ಪತ್ತು ಸೀಟುಗಳ ರಂಗಮಂದಿರದಲ್ಲಿ ಎಂಬತ್ತು ಮಂದಿ ಕಾಣಸಿಗಲು ಆರಂಭಿಸುತ್ತಾರೆ. ಅವರು ಅಷ್ಟಕ್ಕೇ ತೃಪ್ತರಾದರೆ ನನ್ನ ಅಡ್ಡಿಯೇನೂ ಇಲ್ಲ. ಅವರು ಕ್ವಾಲಿಟೇಟಿವ್ ಆಡಿಯನ್ಸ್ ಎಂದು ಹೇಳಿದವರ ಮಾತನ್ನೂ ಕೇಳಿಸಿಕೊಂಡಿದ್ದೇನೆ. ಅವರಿಗೆ ಕಾಣದಂತೆ ನಕ್ಕಿದ್ದೇನೆ. ಕಾಣದಂತೆ ಯಾಕೆ ಅಂದರೆ ನಗು ಕಾಣಿಸಿದರೆ ಎದುರಿನವರು ಕ್ರುದ್ಧರಾಗುತ್ತಾರೆ. ಅವರ ಹೃದಯ ರಕ್ತವನ್ನು ರಭಸದಲ್ಲಿ ಹೆಚ್ಚು ಪಂಪ್ ಮಾಡುವಂತೆ ಮಾಡುವುದು ಯಾಕೆ? ಹಾಗಾಗಿ ಕಾಣದಂತೆ ನಗುವುದನ್ನು ರೂಢಿಸಿಕೊಂಡಿದ್ದೇನೆ. ಯಾಕೆಂದರೆ ನಾನು ಈ ಸಂಗತಿಯನ್ನು ಇಷ್ಟು ವರ್ಷಗಳಲ್ಲಿ ಚೆನ್ನಾಗಿ ಅರ್ಥೈಸಿಕೊಂಡಿದ್ದೇನೆ. ಏನೆಂದರೆ ಇವರಿಗೆ ಕಾಮಿಡಿ ನಾಟಕಗಳೆಂದರೆ ಒಂದು ಬಗೆಯ ಅಸಡ್ಡೆ. ಅದರಲ್ಲೂ ಜನ ಬರುವ ಕಾಮಿಡಿ ನಾಟಕಗಳೆಂದರೆ ಮತ್ತೂ ಅಸಡ್ಡೆ.

ಬೇಕೋ ಬೇಡವೋ ನಮ್ಮ ತಂಡ ಬ್ರ್ಯಾಂಡೆಡ್ ಆಗಿಹೋಗಿದೆ. ನಮ್ಮ ತಂಡ ಎಂದರೆ ಕಾಮಿಡಿ ನಾಟಕಗಳನ್ನ ಮಾಡುವವರು ಎಂದಾಗಿದೆ. ಆಗಲಿ ಏನೀಗ ಎನ್ನುವ ಘಟ್ಟಕ್ಕೆ ನಾನು ಬರಬೇಕಾದರೆ ಬಹಳಷ್ಟು ವರ್ಷಗಳೇ ಬೇಕಾಯಿತು. ರಂಗಭೂಮಿ ಒಂದು ವಿಚಿತ್ರ ಲೋಕ. ಅಲ್ಲಿ ನಮಗೆ ಏನನಿಸುತ್ತದೆ ಮತ್ತು ನಮಗೆ ಆಗುವ ದರ್ಶನಗಳು ಏನು ಎನ್ನುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಅದನ್ನು ಪ್ರೇಕ್ಷಕರಿಗೆ ದಾಟಿಸುವುದು. ಈ ದಾಟಿಸುವ ಕೆಲಸವನ್ನು ಯಾಂತ್ರಿಕವಾಗಿಸಿಕೊಳ್ಳಬಾರದು. ಯಾಕೆಂದರೆ ನಾಟಕ ಬರೆಯುವವರಿಗೆ ಬದುಕನ್ನು ನೋಡುವ ನಿರ್ದಿಷ್ಟ ಕ್ರಮ ಇರುತ್ತದೆ. ಅದು ಇನ್‌ಫ್ಲೂಯೆನ್ಸ್‌ನಿಂದ ಒಡಮೂಡುವಂಥದ್ದಲ್ಲ. ಹಾಗೆ ಮೂಡಿದ್ದರಲ್ಲಿ ಆ ವ್ಯಕ್ತಿ ಜಗತ್ತನ್ನು ಕಾಣುವ ಅನನ್ಯತೆ ಮತ್ತು ನೋಟಕ್ರಮದ ತಾಜಾತನ ಇರುವುದಿಲ್ಲ. ನಿರ್ದೇಶಕನಿಗೂ ಹಾಗೇ. ಕೆಲವರು ಗಂಭೀರ ನಾಟಕಗಳನ್ನು ಕಟ್ಟಲು ಸಾಧ್ಯವಾಗುತ್ತದೆ. ಯಾಕೆಂದರೆ ಅದು ಅವರ ಮನೋಧರ್ಮವನ್ನು ಆಧರಿಸಿರುತ್ತದೆ. ಹಾಗೆಯೇ ಕಾಮಿಡಿ ನಾಟಕಗಳನ್ನು ಕಟ್ಟುವವರ ಮನೋಧರ್ಮದಲ್ಲಿ ಹಾಸ್ಯದ ಲೇಪನ ಮತ್ತು ಹಿಡಿತ ಅಡಕವಾಗೇ ಇರುತ್ತದೆ. ಇಲ್ಲಿ ಯಾರು ಯಾರನ್ನೂ ದೂಷಿಸುವ ಮತ್ತು ಆರೋಪಿಸುವ ಅಗತ್ಯವಿಲ್ಲ. ಇದು ಅರ್ಥವಾಗದವರು ಸದಾ ವಿಚಿತ್ರವಾಗಿ ತಮ್ಮ ಇಸಂಗಳಲ್ಲಿ ಮಿಡುಕು ಭರ್ಜಿಗಳನ್ನು ಹಿಡಿದು ನಮ್ಮನ್ನು ಸುತ್ತುವರೆಯುತ್ತಲೇ ಇರುತ್ತಾರೆ. ಮತ್ತು ಭರ್ಜಿಗಳ ಮೊನೆ ಎಷ್ಟು ಚೂಪಾಗಿದೆ ಎನ್ನುವುದನ್ನು ಲಗುವಾಗಿ ತಿವಿಯುತ್ತ ಕಾಣಿಸುತ್ತಿರುತ್ತಾರೆ.

ರಂಗದ ಕಾಯಕ ಅಂದರೆ ಮೊದಲು ನಮ್ಮ ಮನೋಧರ್ಮ ಗುರುತಿಸಿಕೊಂಡು ನಾಟಕ ಕಟ್ಟಿ ಅದು ಪ್ರೇಕ್ಷಕರ ಕಣ್ಣುಗಳ ಫ್ರೇಮಿನಲ್ಲಿ ಸರಿಯಾಗಿ ಫಿಟ್ಟಾಗುತ್ತದೆಯೇ ಎಂದು ಅಂದಾಜು ಮಾಡಿಕೊಳ್ಳಬೇಕು. ನಂತರ ಜನರಿಗೆ ಕಾಯಬೇಕು. ಪಾರ್ಕಿಂಗ್ ಕಡೆ ಕಣ್ಣು ಹಾಯಿಸುತ್ತಿರಬೇಕು. ಇಷ್ಟಾದ ಮೇಲೆ ಭರ್ಜಿಯ ಮೊನೆಗಳಿಗೆ ಮೈ ಒಡ್ಡಿ ನಿಲ್ಲಬೇಕು ಮತ್ತು ನೋವಿನಲ್ಲೂ ನಗಬೇಕು. ನಗಲು ಸಾಧ್ಯವಾಗದಿದ್ದರೆ ಮನಸ್ಸಿನ ಹದ ಕೆಡುತ್ತದೆ. ಮನಸ್ಸು ಕೆಟ್ಟರೆ ಬದುಕಿನ ನೋಟಕ್ರಮದ ಜಾಡು ತಪ್ಪುತ್ತದೆ. ಒಟ್ಟು ಚಿತ್ರವೇ ಕಲಕಿಹೋಗುತ್ತದೆ.

ಮೊನ್ನೆ ನಡೆದ ಉತ್ಸವದಲ್ಲಿ ನಮ್ಮ ತಂಡದ ನಾಟಕಕ್ಕೆ ಜನ ಸಾಲುಸಾಲಾಗಿ ಬಂದರು. ಪಾರ್ಕಿಂಗ್ ತುಂಬಿತು. ರಂಗಮಂದಿರ ಆಲ್ ಮೋಸ್ಟ್ ಫುಲ್. ಕೆಲವರಿಗೆ ಅಚ್ಚರಿ. ಇವರ ತಂಡದ ನಾಟಕಕ್ಕೆ ಅದು ಹೇಗೆ ಜನ ಬರುತ್ತಾರೆ? ಕೆಲವರ ಅನಲೈಸೇಷನ್‌ಗಳ ಪ್ರಕಾರ ನಮ್ಮ ತಂಡದ ನಾಟಕಗಳು ಬಹುತೇಕ ಬೀಚಿ ಅವರ ಸಾಹಿತ್ಯವನ್ನು ಆಧರಿಸಿರುತ್ತವೆ. ಸೋ ಬೀಚಿ ಅವರು ಟ್ರಂಪ್ ಕಾರ್ಡ್ ಇದ್ದಂತೆ. ಹಾಗಾಗಿ ಕ್ಲಿಕ್ ಆಗುತ್ತಿವೆ. ಇದು ಕೆಲವರ ಅಂಬೋಣ.

ಮತ್ತೆ ಕೆಲವು ಸಿನಿಕರು ಇದ್ದಾರೆ. ಅವರು ನಾಟಕದ ಹೂರಣ ಹೇಗಿದೆ ಎಂದು ಪರೀಕ್ಷಿಸುವುದಿಲ್ಲ. ಅವರಿಗೆ ಡಿಸೈನ್ ಮುಖ್ಯ. ಡಿಸೈನ್ ಇದ್ದು ಜನರಿಗೆ ನಾಟಕ ಕನೆಕ್ಟ್ ಆಗದಿದ್ದರೆ ಅದು ಆಮೇಲಿನ ಸಂಗತಿ. ಮೊದಲು ಡಿಸೈನ್ ಇರಬೇಕು. ನಾಟಕದ ಕಂಟೆಂಟನ್ನು ಇಂದಿಗೆ ಹೇಗೆ ವರ್ಗಾಯಿಸುತ್ತಿದ್ದಾರೆ ಎನ್ನುವುದರ ಮೇಲೆ ನಿರ್ದೇಶಕನ ಕೌಶಲ ಅಳೆಯುವುದಿಲ್ಲ. ಬದಲಿಗೆ ವಿನ್ಯಾಸ ಹೇಗಿದೆ ಎಂದು ಮಾತಾಡುವ ಚಾಳಿ ಆರಂಭವಾಗಿದೆ. ವಿನ್ಯಾಸವೇ ಮುಖ್ಯವಾಗುತ್ತಿರುವ ಕಾಲದಲ್ಲಿ ನಾಟಕದ ವಸ್ತು ಇಂದಿಗೆ ಹೇಗೆ ಸಲ್ಲುತ್ತಿದೆ ಎಂದು ನೋಡುವ ವ್ಯವಧಾನ ಇಲ್ಲ. ಇಂಥವರನ್ನು ನೋಡಿ ನೋಡಿಯೇ ನನ್ನ ಮನೋಧರ್ಮ ಮತ್ತು ನೋಟಕ್ರಮವನ್ನು ಸ್ಪಷ್ಟ ಮಾಡಿಕೊಂಡವನು ನಾನು.

ಮೊನ್ನೆ ನಾಟಕ ಮುಗಿದಾಗ ಒಬ್ಬಾತ ಬಂದ. ಇನ್ನೂ ಎಳೆಯ ವಯಸ್ಸು. ನಾಟಕ ಲೋಕದ ಬಗೆಗೆ ತುಂಬು ಉತ್ಸಾಹ ಇರಿಸಿಕೊಂಡಿರುವವನು. ಪರಿಚಯ ಇದ್ದವ. ಹಾಗೆಯೇ ಅವನ ತಲೆಯಲ್ಲಿ ಕದಲುವ ವಿಚಾರಗಳು ಮತ್ತು ಚಿತ್ರಗಳ ಬಗೆಗೆ ನನ್ನಲ್ಲಿ ಮೊದಲೇ ಮಾಹಿತಿ ಇತ್ತು. ಉತ್ಸವದಲ್ಲಿನ ಅಷ್ಟೂ ನಾಟಕಗಳಿಗೆ ಇವರು ವಿಮರ್ಶೆಗಳನ್ನು ಬರೆಯುತ್ತಾರೆ ಎಂದು ಆತನನ್ನ ನನಗೆ ಒಬ್ಬರು ಪರಿಚಯಿಸಲು ಬಂದರು. ನನಗೆ ಆತ ಗೊತ್ತಿದ್ದ ಹುಡುಗ ಎಂದು ಅವರಿಗೆ ಮಾಹಿತಿ ಇದ್ದಂತೆ ಇರಲಿಲ್ಲ.

ವಿಮರ್ಶೆ ಬರೆಯಲು ಪೂರಕ ಮಾಹಿತಿ ಬೇಕು ಅನಿಸಿ ನನ್ನ ಬಳಿ ಬಂದ. ನಾವು ಪ್ರದರ್ಶಿಸಿದ ನಾಟಕದಲ್ಲಿ ಬೀಚಿ ಅವರ ಸಾಹಿತ್ಯದ ಪಾಲು ಎಷ್ಟು ಮತ್ತು ನಿಮ್ಮ ಅಡಿಷನ್ಸ್ ಎಷ್ಟು ಎಂದು ಕೇಳಿದ. ನಾನು ವಿವರಿಸಿದೆ. ‘ಮಿಡ್ ಸಮ್ಮರ್ ನೈಟ್ ಡ್ರೀಮ್ಸ್’ ನಾಟಕದ ಪ್ರಭಾವವೇನಾದರೂ ಈ ನಾಟಕದ ಮೇಲೆ ಆಗಿದೆಯೇ ಎಂದು ಕೇಳಿದ. ಆತ ಯಾಕೆ ಹಾಗೆ ಕೇಳಿದ ಎಂದು ನನಗೆ ಗೊತ್ತಾಯಿತು. ಯಾಕೆಂದರೆ ನಾಟಕದೊಳಗೊಂದು ನಾಟಕ ಕಟ್ಟುವ ದೃಶ್ಯಗಳು, ಪ್ಲಾಟ್‌ಗಳು ಒಂದಕ್ಕೊಂದು ಅಂತರ್‍ಸಂಬಂಧ ಕಲ್ಪಿಸಿಕೊಳ್ಳುವುದು, ಪ್ರೇಮ ಪ್ರಕರಣಗಳು ಮಿಡ್ ಸಮ್ಮರ್ ನೈಟ್ ಡ್ರೀಮ್ಸ್ ನಾಟಕದಲ್ಲಿ ಇವೆ.

ಆದರೆ ನಾನು ನಾಟಕ ಬರೆಯುವಾಗ ನಾನು ನಾಟಕಗಳನ್ನು ಓದಿರುವ ಹಿನ್ನೆಲೆಯಲ್ಲಿ ಯಾವ ಒಂದು ಡ್ರಮಾಟಿಕ್ ಟೆಕ್ನಿಕ್ ಆಗಲಿ ಅಥವಾ ಪಾತ್ರಪೋಷಣೆಯಾಗಲಿ ಮನಸ್ಸಿನಲ್ಲಿ ಸುಳಿಯಲು ಅವಕಾಶ ಕಲ್ಪಿಸುವುದಿಲ್ಲ. ಹಾಗೆ ಸುಳಿದರೂ ಅದನ್ನು ಪಕ್ಕಕ್ಕೆ ಸರಿಸಿ ಕೂರುತ್ತೇನೆ. ನಾನು ಬರೆಯಬೇಕೆಂದು ಆರಿಸಿಕೊಂಡಿರುವ ವಸ್ತುವಿನ ಗತಿ ಹೇಗೆ ಸಾಗಬೇಕು ಎಂದು ನಕ್ಷೆ ಹಾಕಿಕೊಂಡಿರುತ್ತೇನೋ ಅದರ ಅನುಸಾರ ನಾಟಕ ರೂಪು ಪಡೆದುಕೊಳ್ಳಬೇಕು ಎನ್ನುವುದು ನನ್ನ ಆಶಯ. ಅದರಲ್ಲಿ ಬೇರೊಬ್ಬರ ನಾಟಕದ ಪ್ರಭಾವ ಕಂಡಿದ್ದರೆ ಅದು ಆಕಸ್ಮಿಕವೇ ಹೊರತು ಪ್ರಭಾವ ಅಲ್ಲ ಎಂದು ಒಂದಷ್ಟು ಹೇಳಿದೆ.

ಇದೆಲ್ಲ ಟಿಪಿಕಲ್ ಇಂಟರ್‌ವ್ಯೂ ಆಗಿಹೋಯಿತು. ನಾನು ಇಷ್ಟು ಹೇಳಿ ಸುಮ್ಮನಾಗಿದ್ದರೆ ಸಾಕಿತ್ತು. ನಾನು ಆತನನ್ನ ಇಂಟರ್‌ವ್ಯೂ ಮಾಡಲು ಹೋಗಬಾರದಿತ್ತು. ಆತ ನಾಟಕ ನೋಡುವ ಕ್ರಮ ಎಂಥದ್ದು ಎಂದು ತಿಳಿದೂ ‘ಹೇಗಿತ್ರಿ ನಾಟಕ?’ ಎಂದು ಕೇಳಿದೆ. ಆತನ ಉತ್ತರ ಮಜವಾಗಿತ್ತು. ‘ನಾಟಕ ಓಕೆ. ವೀಕೆಂಡ್‌ನಲ್ಲಿ ರಿಲ್ಯಾಕ್ಸ್ ಆಗುವವರಿಗೆ ಇದು ಲೈಟ್ ಕಾಮಿಡಿ. ಜನ ಬಂದು ನಗ್ತಾರೆ…’ ಅಂದ.

ನಾನು ಎಂದಿನಂತೆ ಆತನಿಗೂ ಕಾಣದಂತೆ ಒಳಗೇ ನಕ್ಕು ಸರಿ ಎಂಬಂತೆ ತಲೆ ಆಡಿಸಿದೆ. ನನಗೆ ಆತನ ಟೋನ್ ಅರ್ಥವಾಗಿತ್ತು. ಅದಕ್ಕೆ ಪ್ರತಿಸ್ಪಂದನ ಯಾಕೆ? ವಾದ ಮಂಡನೆ ಯಾಕೆ? ರಂಗಭೂಮಿ ನನಗೆ ಕಲಿಸಿರುವ ಪ್ರಾಕ್ಟಿಕಾಲಿಟಿ ಬೇರೆ. ಆತ ಕಲಿಯುತ್ತಿರುವ ರೀತಿ ಬೇರೆ ಇರಬಹುದು ಅನಿಸಿ ಸುಮ್ಮನಾದಾಗ ನಾನು ಋಷಿಯೇನಾದರೂ ಆಗಿಹೋಗಿರಬಹುದೆ ಎಂದು ನನ್ನ ಬಗೆಗೆ ಚಿತ್ರಿಸಿಕೊಂಡು ಮತ್ತೆ ಕಾಣದಂತೆ ನಕ್ಕೆ.

ಅಷ್ಟರಲ್ಲಾಗಲೇ ನಾಟಕ ಮುಗಿದು ಜನರ ಸ್ಪಂದನ ಏನು ಎಂದು ನನಗೆ ಅರ್ಥವಾಗಿತ್ತು. ಅದು ನನ್ನ ಮನೋಧರ್ಮಕ್ಕೆ ಅವರು ಸೂಚಿಸಿದ ಗೌರವದ ಹಾಗೆ ಕಂಡಿತು. ಅದನ್ನು ನಾನು ವಿನಮ್ರವಾಗಿ ಸ್ವೀಕರಿಸದಿದ್ದರೆ ಅಹಂಕಾರಿಯಾಗುತ್ತೇನೆ ಎನ್ನುವುದನ್ನು ಅರಿತುಕೊಂಡಿದ್ದೇನೆ. ವೀಕೆಂಡು ಮತ್ತು ಲೈಟ್ ಕಾಮಿಡಿ ಅಂದಾಗ ನಾನು ಹೆಚ್ಚು ಒತ್ತು ಕಲ್ಪಿಸಿದ್ದು ‘ಲೈಟ್’ ಎಂಬ ಪದದ ಬಗೆಗೆ. ಲೈಟ್ ಅಂದಾಗ ಅದು ಬೆಳಕೂ ಅಂತಲೂ ಆಗುತ್ತದೆ. ಹಾಗಾಗಿ ನಾನು ಅದನ್ನು ಬೆಳಕಿನ ಕಾಮಿಡಿ ಅಂತಲೂ ತೆಗೆದುಕೊಂಡೆ. ಆತ ಹೇಗೆ ತೆಗೆದುಕೊಂಡಿರಬಹುದು ಎನ್ನುವ ಗೊಡವೆ ನನಗೆ ಬೇಕಿರಲಿಲ್ಲ. ಜೊತೆಗೆ ಲೈಟ್ ಅಂದರೆ ಭಾರವಿಲ್ಲದ್ದು ಅಂತಲೂ ಅರ್ಥ ಇದೆ. ಇಷ್ಟಕ್ಕೂ ನಾನು ಭಾರ ಯಾಕೆ ಹೊರಿಸಬೇಕು? ಭಾರ ಇಳಿಸುವ ಕೆಲಸ ನನ್ನದು. ಅದನ್ನು ಮಾಡುತ್ತಿದ್ದೇನೆ. ಇದಕ್ಕೆ ಜನರ ಸ್ಪಂದನವಿದೆ. ಇದರ ಹೊರತಾಗಿ ನನಗೆ ಬೇರೇನು ಬೇಕು?

ಅದೇ ದಿನ ನಾಟಕ ನೋಡಿ ಮೆಚ್ಚಿ ಮನಸಾರೆ ನಕ್ಕು ನನ್ನ ಬಳಿ ಬಂದು ನನ್ನ ನಂಬರ್ ಪಡೆದುಕೊಂಡು ಹೋದವರೊಬ್ಬರು ತಡರಾತ್ರಿ ನನಗೊಂದು ವಾಟ್ಸಪ್ ಸಂದೇಶ ಕಳುಹಿಸಿದರು. ‘ಸರ್ ನಿನ್ನೆ ನಾಟಕದಲ್ಲಿ ನಾನು ಕೆಲವು ಅಂಶಗಳನ್ನು ಕಲಿತೆ..’ ಅಂದಿದ್ದರು. ‘ಏನು ಕಲಿತಿರಿ..?’ ಎಂದು ನಗುತ್ತಲೇ (ಎಮೋಜಿಯಲ್ಲಿ) ಕೇಳಿದೆ. ಅದಕ್ಕೆ ಅವರ ಉತ್ತರ – ‘ಸಮಾಜದ ವ್ಯವಸ್ಥೆ ಬಗ್ಗೆ ಹೇಳೋಕೆ ದೊಡ್ಡ ಉದಾಹರಣೆಗಳು ಬೇಕಿಲ್ಲ. ಹೂವು…. ಜೇನು ಇಂಥ ಸರಳ ಉದಾಹರಣೆಗಳು ಸಾಕು…’

ಇದನ್ನು ಓದಿದಾಗ ಖುಷಿಯಾಯಿತು. ಆಗ ಅಂದುಕೊಂಡೆ- ಸಮಾಜದ ವ್ಯವಸ್ಥೆ ಎಂಥದ್ದು ಎಂದು ಹೇಳಲು ಬೀಚಿ ಹೂವು ಮತ್ತು ಜೇನಿನ ಚಿತ್ರಗಳನ್ನು ಬಳಸಿಕೊಂಡಿದ್ದಾರೆ. ಹೂವು ಹಗುರವಾಗಿರಲೇಬೇಕು. ಲೈಟ್ ಆಗಿರುವುದೇ ಅದರ ಗುಣ. ಅದನ್ನು ಭಾರ ಮಾಡಲು ಹೋಗಬಾರದು. ಹೋದರೆ ಕೃತಕ. ಆಯಾ ವಸ್ತು ವಿಶೇಷದಲ್ಲಿನ ಅನನ್ಯತೆಯೇ ಅದರ ಜೀವಾಳ. ಇದು ಅರ್ಥವಾಗುತ್ತಲೇ ನಾನು ಮತ್ತಷ್ಟು ಹಗುರಗೊಂಡೆ. ನಾಟಕ ಬರೆಯುವಾತ, ನಿರ್ದೇಶಕ…. ಇವರಲ್ಲಿ ಇರುವ ಮನೋಧರ್ಮ ಎಲ್ಲ ಅರ್ಥವಾಗುವವರೆಗೆ ಮೌನ ವಹಿಸಬೇಕು… ಹೆಚ್ಚೆಂದರೆ ಯಾರಿಗೂ ಕಾಣದಂತೆ ಒಂದು ನಗು ತುಳುಕಿಸುತ್ತಿರಬೇಕು. ಯಾಕೆಂದರೆ ಮೌನ ಮತ್ತು ಯಾರಿಗೂ ಕಾಣದ ನಗು ನಮ್ಮ ನೆಲೆಯಲ್ಲಿ ನಾವು ಹೆಚ್ಚು ಕೆಲಸ ಮಾಡಲು ಪ್ರೇರೇಪಿಸುತ್ತಿರುತ್ತವೆ..