ಇಲ್ಲಿ ದಡೂತೆಪ್ಪನ ಶೆಡ್ಡಿನ ಸಂಸಾರ ಮೂರ್ನಾಲ್ಕು ವರ್ಷ ನಿರಾಯಾಸವಾಗಿ ಸಾಗಿತು. ಕೂಡು ಸಂಸಾರದಿಂದ ಸಂಪಾದನೆಗೆ ಕುಂದೆಂದು ಭಾವಿಸಿದ್ದ ಚನ್ನಪ್ಪ ಪಕ್ಕದ ಬಡಾವಣೆಯಲ್ಲಿ ಬದುಕು ಕಟ್ಟಿಕೊಂಡಿದ್ದ. ವಾಚಮನ್ಕಿಯೊಂದಿಗೆ ಕಟ್ಟಡದ ಅನ್ಯ ಕೆಲಸಗಳಿಂದಲೂ ಗಳಿಕೆ ಹೆಚ್ಚಿಸಿಕೊಂಡಿದ್ದ. ಅವನಿಗೆ ಅಂಥ ಯಾವ ಚಟ ಇರಲಿಲ್ಲವೆಂದರೂ ರಾತ್ರಿ ಮಾತ್ರ ಅರವತ್ತು ಎಮ್ಮೆಲ್ ಬೇಕೇಬೇಕಿತ್ತು. ಆತನ ಅಕ್ಕ ಹನುಮವ್ವನೂ ಕಟ್ಟಡ ಕೆಲಸದಲ್ಲಿ ದುಡಿಯುತ್ತಿದ್ದಳು. ಹೆಂಡತಿ ಮಾಣಿಕ್ಯವ್ವನನ್ನು ಮಾತ್ರ ಯಾವುದೇ ಕೆಲಸಕ್ಕೆ ಹಚ್ಚಿರಲಿಲ್ಲ. ಆಕೆಗೆ ತನ್ನ ಮಗನನ್ನು ನೋಡಿಕೊಳ್ಳವುದೇ ಹೆಚ್ಚಿನದಾಗಿತ್ತು.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಡಾ. ದೇವದಾಸ ಕಳಸದ ಬರೆದ ಕತೆ ‘ಮುಕ್ತಾಯ ಬೇಡದ ಕತೆಗಳು!’ ನಿಮ್ಮ ಈ ಭಾನುವಾರದ ಓದಿಗೆ

ಮುಕ್ತಾಯ ಬೇಡದ ಕತೆಗಳು!

“ಮಾವಾ, ನಾವಿಲ್ಲೆ ಇದ್ರ ಹೊಟ್ಟಿಗೆ ಒಣಾ ಮಣ್ಣ ತಿನ್ನೂದಾಕೈತಿನ್ನ. ಆ ಕಡೀಮನಿ ನಿಂಗ್ಯಾ, ತಗ್ಗಿನೋಣಿ ದ್ಯಾಮಣಮೇಸ್ತ್ರೀ, ತರಗಾರ ತುಕ್ಯಾ… ಇನ್ನೂ ಜಗ್ಗ ಮಂದಿ ಬೆಂಗಳೂರಿಗೆ ಹೋಗಿ ಹ್ಯಾಂಗಾಗ್ಯಾರ ನೋಡೀದಿಲ್ಲ; ಮತ್ತೆ ನಿಮ್ಮ ತಮ್ಮ!… ಅಂದ್ರ… ನಮ್ಮ ದುರ್ಗಪ್ಮಾವನೂ ಅಲ್ಲೆ ಅದಾನಂತ ಕೇಳಿನಿ….”

“ಒಳೇ ತಂಪತ್ತಿನ್ಯಾಗ ಅವನ ಹೆಸರ ತಗದ್ಯಾ ಮಾರಾಯಾ. ಅವಾ ನಮ್ಮ ಕೂಡ ಜಗಳಾ ಮಾಡಿ ಮನಿ-ಮಾರ ಬಿಟ್ಟ ಹೋದಾಗಿನಿಂದ ಅವನ ಸುದ್ದಿಲ್ದ ಸನಸನಿಕ ಇಪ್ಪತ್ತ ವರ್ಷದ ಮ್ಯಾಲ್ಯಾತೀಗ. ನಮ್ಮ ಪಾಲಿಗೆ ಅವಾ ಸತ್ತ ಹೋಗ್ಯಾನ! ಅವನ್ನ ತೊಗೊಂಡ ಏನ ಮಾಡೂದೋ ಚನ್ನಪ್ಪ. ನಮ್ಮ ಹೆಸರ ಕೇಳಿದರ ಹಲ್ಲ ಕಡೀತಾನವಾ. ಇನ್ನ… ”
ಹಲ್ಲಿನ ಅಡಕೊತ್ತಿನಿಂದ ಇಡಿಯಾದ ಅಡಿಕೆಯನ್ನು ಕತ್ತರಿಸಿ… ಅಂಗಿಯ ಕಿಸೆಯಲ್ಲಿದ್ದ ಅರೆಹಸಿಯ ಎಲೆಯ ತುಂಡನ್ನು ಹೊರ ತೆಗೆದು ಅದಕ್ಕೆ ಸುಣ್ಣ ಒರೆಸುತ್ತ “ಏನ… ಆಗಲಿ ಮಾವಾ ಬೆಂಗಳೂರಿಗೆ ಹೋಗಿ ಜಗ್ಗ ಮಂದಿ ಜಗ್ಗಿ ತಡಜ ಆಗ್ಯಾರ! ಅದರಾಗ ಸ್ವಲ್ಪ ಮಂದಿ ಅಲ್ಲೇ ಖಾಯಂ ಆಗಿ ಮನಿ ಮಾಡಿಕೊಂಡ ಬಾಳೆದಾಗ ಇದ್ದವರೂ ಅದಾರ! ಅದಕ, ನಾವೂ ಅಲ್ಲಿಗೇ ಹೋಗಿ ಬಿಡೂನ್ನಡಿ ಅಂತ ನಾ ಎಷ್ಟ ಸಲಾ ಹೇಳಿದ್ರೂ ನೀ ಕಿವ್ಯಾಗ ಹಾಕ್ಯೋವಲ್ಲಿ ಮುಂದ ಹ್ಯಾಂಗಿನ್ನ?” ಮನದುಂಬಿದ್ದ ಬಹು ದಿನದ ಆಸೆ ಹೀಗೆ ಆಗಾಗ ತುಳುಕುತ್ತಲೆ ಇತ್ತು.

“ತಮ್ಮಾ ತಡಜ ಆಗೂದ ಬ್ಯಾಡಪಾ, ಚಂದಂಗ ಯಾಡ್ಡ್ ಹೊತ್ತು ಕೂಳಿಂದಷ್ಟ ವಿಚಾರ ಮಾಡೂನು ಹೆಚ್ಚಿಂದ ಬ್ಯಾಡ ನಮಗ…”

“ನಾನೂ ಅಷ್ಟ ಮಾಡಬೇಕಂತೀನಿ; ಆದ್ರಿಲ್ಲೆ ಅದಕ್ಕೂ ಗತಿ ಇಲ್ಲಲ್ಲ… ವಾರಕ್ಕ ಒಂದಿನ ಯಾಡ ದಿನಾ ಉಪಾಸ ಬೀಳೂದ ಆಗೇತಿ. ಅದಕ ಬೆಂಗ್ಳೂರಿಗೆ ಹೋಗೂದ ನೋಡು.” ಚನ್ನಪ್ಪನ ಮಾತಿನಲ್ಲಿ ನಿರ್ಧಾರದ ಧ್ವನಿ ಇತ್ತು.

“ಅಲ್ಲೋ… ತಮ್ಮಾ. ಹೆಂಡ್ರು ಮಕ್ಕಳ ಗತಿ ಏನಾದೀತಂತ ವಿಚಾರ ಮಾಡೀಯೆನು? ಇಲ್ಲೆ ಮರ್ವಾದೀಲೆ ಬಾಳೇದಾಗದೀವಿ. ಅಲ್ಲಿ ಹ್ವಾದರ ಮಾನ-ಮರ್ವಾದಿ ಎರಡೂ ದುಡ್ಡಿಗೆ ಸೇರಿನಂಗ ಮಾರಿ ಹೋದಗೀದಾವೋ ತಮ್ಮಾ! ಬ್ಯಾಡಾ; ನನ್ಮಾತ ಕೇಳು. ದೂರದಾಕಾಸ ಕಣ್ಣಿಗೆ ಚಂದ; ಮುಟ್ಟಿ ನೋಡೇನಂದ್ರ ಕೈಗೆ ನಿಲುಕೂದಲ್ಲದು. ಅದರಿಂದ ಮೈಗೂ-ಮನಸಿಗೂ ಬೇಸ್ಯಾಗೂದೂಯಿಲ್ಲಾ!.

“ಅದೇನ… ಇರ್ಲಿ. ಇದೊಂದ ಮುರಕಲ ಮನಿ, ದೀಡೆಕರೆ ಒಣಾ ಬೂಮಿ ಇಟಗೊಂಡ ಏನ್ಮಾಡೂದೈತಿ ವರ್ಸಾನೊರ್ಸಾ ಬೆಳಿಸಾಲಕ ಬಡ್ಡಿ ತುಂಬೂದ ಆಗೇತಿ ನಂಬಾಳೆ. ಎಲ್ಲಿದ್ರೂ ದುಡತ್ತಿನ್ನೂದಂತೂ ತಪ್ಪಿದ್ದಲ್ಲ. ಅದಕ, ಈ ಹಾಳ ಕೊಂಪ್ಯಾಗಿರಾಕ ನನಗಂತೂ ಮನಸಿಲ್ಲ ನೋಡ. ನೀ ಒಲ್ಲಿಕ್ರ ಬಿಡು ನಾ ಮಾತ್ರ ಹೋಗಾವನ” ಕಡ್ಡಿ ಮುರಿದು ಹೇಳಿದ್ದ ಚನ್ನಪ್ಪ.

“ಅಲ್ಲಿ ಹೋಗಿ ಏನ್ಮಾಡ್ತೀಯೋ ಚನ್ನಪ್ಪಾ… ದೊಡ್ಡ ಶ್ಹಾರಾ! ಗುರ್ತಿಲ್ಲ ಕೂನಿಲ್ಲಾ… ವರ್ಸದ ಕೂಸೊಂದೈತಿ; ಅದನ್ನ ಕಟಿಗೊಂಡ ಎಲ್ಲಿ ಹೋಗಾವ… ಏನ್ಮಾಡಾವ? ಹುಟ್ಸಿದ್ದೇವ್ರು ಹುಲ್ಲು ಮೇಯ್ಸೂದಿಲ್ಲ… ಅವರವರ ಕೂಳ್ನ ಅವರವರ ಬೆನ್ನಿಗೆ ಕಟ್ಟೇ ಕಳಿಸಿರತಾನ. ಈ ಯಲಬುರ್ಗಿ ಬಿಟ್ಟು ಇಲ್ಲೆ ಇರಕಲ್ಕಡೆನರ ಹೊಗೂನ್ನಡೀ. ಹಾಸಿಗ್ಗಲ್ಲರ ಎಬಸಾಕಾದೀತು. ವಾರಾ ಅಟಟ ವರ್ತಿನೀರಿನಂಗ ನಾಕ್ದುಡ್ಡ ಬರ್ತೈತಿ. ಅತ್ತಿಂದ… ಬಾಳೆನೂ ದುಂಡಗಾದೀತು” ತುಟಿಗೆರಡು ಬೆರಳಿಟ್ಟು ತಂಬಾಕಿನ ರಸವನ್ನಾಚೆ ಜಿಗಿಸಿದ.

“ಏ ಹೇ! ನನಕಂಡಿಂದ ಆಗುದಿಲ್ಲ ಬಿಡೊ ಮಾವಾ. ನಾ ಮಾತ್ರ ನನ್ಹೇಣತಿ, ಮಗನ್ನ ಕರಕೊಂಡ ಬೆಂಗಳೂರಿಗೆ ಹೋಗಾವನ. ನಮ್ಮಕ್ಕ ಹನುಮವ್ವನೂ ಬರ್ತಾಳಂತ. ಪಾ…ಪ! ಅಕ್ಯೂ ಗಂಡ ಸತ್ತಾಕಿ. ಅಕಿಗೂ ಒಂದ ಹಾದ್ಯಾಕೈತಿ. ಅಲ್ಲೆ ದ್ಯಾಮಣಮೇಸ್ತ್ರಿ ವಾಚಮನ್‍ಕೀ ದಗದಾ ಹಚ್ಚಿಕೊಡತಾನಂತ. ವಾರಕ್ಕ ಯಾಡ್ಸಾವಿರಂತೋ ಮಾವಾ!” ಜೊಲ್ಲು ಸುರಿಸಿ ಜಾಗ ಖಾಲಿ ಮಾಡಿದ್ದ ಚನ್ನಪ್ಪ.

ರಾಜ್ಯವ್ಯಾಪಿ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ರಂಗದ ಎಲ್ಲೆಲ್ಲೂ ನ್ಯಾಯ-ನೀತಿ-ನಿಯತ್ತುಗಳ ಬರದಿಂದ ಭ್ರಷ್ಟಾಚಾರವೇ ತಾಂಡವವಾಡುತ್ತಿದ್ದರೆ ಕೊಪ್ಪಳ, ಯಲಬುರ್ಗಾ ಮತ್ತಿತರ ಭಾಗಗಳಿಗೆ ಮತ್ತೊಂದು ಹೆಚ್ಚಿನದೆನ್ನುವ ರೀತಿಯಲ್ಲಿ ಭೌಗೋಳಿಕ ವೈಪರೀತ್ಯದ ಪರಿಣಾಮ ಸಕಾಲಕ್ಕೆ ಮಳೆಯಾಗದೇ ಸುತ್ತಲಿನ ಪ್ರದೇಶಗಳು ಅಕಾಲಕ್ಕೆ ತುತ್ತಾಗಿದ್ದವು. ಕೌಟುಂಬಿಕ ನೆಮ್ಮದಿ ನಿತ್ರಾಣಿಸಿತ್ತು. ಹಲಕೆಲವು ಯುವಕರನ್ನಂತೂ ದುಶ್ಚಟಗಳು ಮುರಿದು ಹಾಕಿದ್ದವು. ಮುಗಿಲೇ ಮುಗ್ಗರಿಸಿದಂತಾಗಿ ಬಹುತೇಕ ಕುಟುಂಬಗಳು ಹತಾಶವಾಗಿದ್ದವು. ಅಂಥದರಲ್ಲಿಯೆ ‘ಹುಟ್ಟಿಸಿದ ದೇವರು ಹುಲ್ಲು ಮೇಯಿಸ’ ಎಂದುಕೊಂಡು ಪರಿಸ್ಥಿತಿಯನ್ನು ಎದುರಿಸುವ ಮನಸ್ಥಿತಿಯವರೂ ಇದ್ದರು; ಕಳಪೆ ಆಸೆಗಳಿಗೆ ಮನಸೋತು ನಗರ ವಲಸಿಗರಾಗಿ ಹೋದವರೂ ಇದ್ದರು. ಅಂಥವರ ಜೀವನವಂತೂ ಬಹುತೇಕ ದೊಂಬರಾಟವೆಂಬ ಅರಿವಿನಲ್ಲೂ ಬೆಂಗಳೂರು, ಮಂಗಳೂರು, ಮಹಾರಾಷ್ಟ್ರ, ಗೋವಾ ಎಂದುಕೊಂಡ ಹಲಕೆಲವರಂತೂ ಗುಳೆ ಹೋಗುತ್ತಲೇ ಇದ್ದರು. ಆ ಸಂದರ್ಭದ ದಿನಗಳಲ್ಲಿ ಚನ್ನಪ್ಪನದೂ ಅದೇ ತರಾತುರಿ! ಅನಿವಾರ್ಯವಾಗಿ ದಡೂತೆಪ್ಪನೂ ಅಳಿಯನ ಬೆನ್ನಿಗೆ ಬೀಳಲೇ ಬೇಕಾಗಿ ಬಂತು…

*****

ಅಳಿಯ ಚನ್ನಪ್ಪ ಹಾಗೂ ಹಿರಿಯ ಮಗಳು ಮಾಣಿಕ್ಯವ್ವನ ಮಾತಿಗೆ ಕಟ್ಟುಬಿದ್ದು ಒಲ್ಲದ ಮನಸ್ಸಿನಿಂದ ದಡೂತೆಪ್ಪನ ಪರಿವಾರವೂ ಬೆಂಗಳೂರಿಗೆ ಬಂದಿದ್ದಾಗಿತ್ತು. ಅದೇ ತಾನೆ ಗೌಡರ ಮನೆಯ ಜೀತ ಮುಗಿಸಿ ಕೈತೊಳೆದಿದ್ದ ಹಿರಿಯಮಗ ಮಾದೇಶ, ಗೌಂಡಿ ಕೆಲಸದ ಭರಮೇಶ ಹಾಗೂ ದಲಿತ ಪರಸರದ ಕಾಲ್ತೊಡಕಿಗೆ ಸಿಕ್ಕು ಏಳನೇ ಇಯತ್ತೆಯಿಂದಲೆ ವಂಚಿತಳಾಗಿ ಮನೆಯಲ್ಲುಳಿದಿದ್ದ ಗೌರಿಯೂ ಸೇರಿದಂತೆ; ಮೂವರೂ ತಂದೆಯ ಬೆನ್ನಿಗೆ ಬಿದ್ದಿದ್ದರು. ಗೌರಿ ಮೈನೆರೆದೂ ಆಗಿತ್ತು. ಮೂರು ವರ್ಷ ಟೈಲರಿಂಗೂ ಕಲಿತಿದ್ದಾಗಿತ್ತು. ಇನ್ನೇನು, ಮಶಿನ್ ಖರೀದಿಸಿ ಪುಡಿಗಾಸು ಮಾಡಿ ಕೊಳ್ಳಬೇಕೆಂದಿದ್ದ ಅವಳಾಸೆಗೂ ಕಲ್ಲುಬಿದ್ದು ಬೆಂಗಳೂರು ಸೇರಿದ್ದಾಗಿತ್ತು.

ಇಲ್ಲಿ ದಡೂತೆಪ್ಪನ ಶೆಡ್ಡಿನ ಸಂಸಾರ ಮೂರ್ನಾಲ್ಕು ವರ್ಷ ನಿರಾಯಾಸವಾಗಿ ಸಾಗಿತು. ಕೂಡು ಸಂಸಾರದಿಂದ ಸಂಪಾದನೆಗೆ ಕುಂದೆಂದು ಭಾವಿಸಿದ್ದ ಚನ್ನಪ್ಪ ಪಕ್ಕದ ಬಡಾವಣೆಯಲ್ಲಿ ಬದುಕು ಕಟ್ಟಿಕೊಂಡಿದ್ದ. ವಾಚಮನ್ಕಿಯೊಂದಿಗೆ ಕಟ್ಟಡದ ಅನ್ಯ ಕೆಲಸಗಳಿಂದಲೂ ಗಳಿಕೆ ಹೆಚ್ಚಿಸಿಕೊಂಡಿದ್ದ. ಅವನಿಗೆ ಅಂಥ ಯಾವ ಚಟ ಇರಲಿಲ್ಲವೆಂದರೂ ರಾತ್ರಿ ಮಾತ್ರ ಅರವತ್ತು ಎಮ್ಮೆಲ್ ಬೇಕೇಬೇಕಿತ್ತು. ಆತನ ಅಕ್ಕ ಹನುಮವ್ವನೂ ಕಟ್ಟಡ ಕೆಲಸದಲ್ಲಿ ದುಡಿಯುತ್ತಿದ್ದಳು. ಹೆಂಡತಿ ಮಾಣಿಕ್ಯವ್ವನನ್ನು ಮಾತ್ರ ಯಾವುದೇ ಕೆಲಸಕ್ಕೆ ಹಚ್ಚಿರಲಿಲ್ಲ. ಆಕೆಗೆ ತನ್ನ ಮಗನನ್ನು ನೋಡಿಕೊಳ್ಳವುದೇ ಹೆಚ್ಚಿನದಾಗಿತ್ತು.

ಹಿರಿಯ ಮಗ ಮಾದೇಶನಿಗೆ ಮದುವೆಯ ವಯಸ್ಸು ಮೀರುವ ಸ್ಥಿತಿಯಲ್ಲಿದ್ದರೆ ಮಗಳು ಗೌರಿಯ ವಯಸ್ಸು ಲಗ್ನದ ಓಲಗ ಊದಿಸುವ ತರಾತುರಿಯಲ್ಲಿತ್ತು. ಆದರೆ, ಕಾಲಕೂಡಿಬರಬೇಕಲ್ಲ? ಏನೇ ಆಗಲಿ, ಬೆಂಗಳೂರಿಗೆ ಬಂದ ಮೇಲೆ ಅಳಿಯ-ಮಾವನ ಜಿಡ್ಡು ಹಿಡಿದ ಸಂಸಾರಗಳಿಗೆ ಒಂದು ಕಳೆ ಬಂದಂತಿತ್ತು. ದಡೂತೆಪ್ಪನ ಮಕ್ಕಳೂ ಸೆಂಟ್ರಿಂಗ ಮತ್ತು ಗೌಂಡಿ ಕೆಲಸದಲ್ಲಿ ಜೀವತೇಯ್ದು ನಾಲ್ಕು ದುಡ್ಡೂ ಮಾಡಿದ್ದರು. ಇನ್ನೇನು ಮಗಳ ಮದುವೆಗೆ ಒಂದು ಗತಿ ಸಿಕ್ಕಿತು ಎಂದು ನಿರುಂಬಳನಾಗಿದ್ದ ದಡೂತೆಪ್ಪ. ಭೀಮವ್ವನೂ ನಿರಾಳವಾಗಿದ್ದಳು.

ಒಂದು ದಿನ… ಬೆಳಗಿನ ಆರು ಘಂಟೆ. ಹೆಂಡತಿ-ಮಕ್ಕಳು ಇನ್ನೂ ನಿದ್ರಾವಸ್ಥೆಯಲ್ಲಿದ್ದರು. ನಿರ್ಮಾಣ ಹಂತದಲ್ಲಿದ್ದ ಎರಡಂತಸ್ತಿನ ಕಟ್ಟಡಕ್ಕೆ ನೀರುಣಿಸಿ ಕ್ಯೂರಿಂಗ್ ಮಾಡುವ ದಿನಚರಿಯಂತೆ ದಡೂತೆಪ್ಪ ಎದ್ದು ಹೊರಬಂದ. ಮೈಮೇಲಿನ ಕಂಬಳಿಯನ್ನಾಚೆ ತೆಗೆದೊಗೆದು ತಲೆಗೆ ಟವೆಲ್ ಸುತ್ತಿದ. ಶೆಡ್ಡಿನ ಬಾಗಿಲನ್ನು ನಿದಾನ ಮುಚ್ಚಿಕೊಂಡು ಬಿಲ್ಡಿಂಗಿನತ್ತ ಧಾವಿಸಿದ. ಅಲ್ಲಿಯೇ ಇದ್ದ ಇಟ್ಟಿಗೆಯ ನಿಟ್ಟಿನಮೇಲೆ ಕುಳಿತ. ತೊಟ್ಟ ಕ್ರಾಸ್ ಬನಿಯನ್ನಿನ ಕಿಸೆಯೊಳಗಿದ್ದ ಸಿನ್ನರ ಕಟ್ಟು, ಕಡ್ಡಿ ಪೆಟ್ಟಿಗೆ ಹೊರತೆಗೆದು ಬೀಡಿಯೊಂದನ್ನು ಹೊತ್ತಿಸಿ ಗುಸುಗುಸು ಕೆಮ್ಮಿನೊಂದಿಗೆ ಎಳೆದೇ ಎಳೆದ. ಅದು ತನ್ನ ತಾ ಸುಟ್ಟುಕೊಂಡು ಅವನ ತುಟಿ ಸುಡುವ ಹಂತಕ್ಕೆ ಬಂದರೂ ಅದನ್ನು ತುಟಿಯಲ್ಲೇ ಕಚ್ಚಿ ಹಿಡಿದು ಅಲ್ಲಿಯೆ ಇದ್ದ ನೀರಿನ ಪೈಪಿಗೆ ಹಗ್ಗಕಟ್ಟಿ ಕಟ್ಟಡದ ಮೊದಲ ಅಂತಸ್ತಿಗೆ ಎಸೆದ. ಈಗ ಮತ್ತೊಂದು ಜೂರಿ ಜಗ್ಗಿ ಆಚೆ ಒಗೆದ. ಉಟ್ಟ ಧೋತರದಲ್ಲಿ ಏರುಗಚ್ಚೆ ಹಾಕಿ ವಿದ್ಯುತ್ ಗುಂಡಿಯನ್ನೊತ್ತಿದ. ಬೋರವೆಲ್ ಸ್ಟಾರ್ಟ ಆಯಿತು.

ಲಗುಬಗೆಯಿಂದ ಮೆಟ್ಟಿಲು ಹತ್ತಿ ಒಗೆದ ಹಗ್ಗವನ್ನು ಎಳೆದುಕೊಂಡ. ಹಗ್ಗದೊಂದಿಗೆ ಪೈಪು ನೀರು ಕಾರುತ್ತ ಮೇಲೇರಿತು. ಅದನ್ನೆತ್ತಿಕೊಂಡು ಕೈಗೆ, ಕಣ್ಣಿಗೆ ನಿಲುಕುವಷ್ಟು ಭಾಗಕ್ಕೆ ನೀರುಣಿಸಿದ. ಆಮೇಲೆ ಒಂದು ಕಾಲನ್ನು ಪಾವಟಣಿಗೆಯ ಮೇಲಿಟ್ಟು, ಮತ್ತೊಂದನ್ನು ಕಿಟಕಿಯ ಕೆನಾಪಿ ಮೇಲಿರಿಸಿ ದೂರದ ಗೋಡೆಗೆ ನೀರು ಚಿಮ್ಮಿಸಿದ. ಆ ಭಾಗವೆಲ್ಲ ಸರಿಯಾಗಿ ನೀರುಂಡ ಬಗ್ಗೆ ಖಾತ್ರಿಸಿಕೊಂಡ. ನಂತರ ನಿದಾನಕ್ಕೆ ಹಿಂದೆ ಸ…ರಿ…ಯು…ತ್ತಿ…ದ್ದಾ…ಗ… ಉಟ್ಟ ಧೋತರದ ಅಂಚು ತೆರೆದ ಕಬ್ಬಿಣದ ಬಾರಿಗೆ ಸಿಲುಕಿ… ಆ…ಯ…ತ…ಪ್ಪಿ ಕೆ…ಳ…ಗೆ ಬಿದ್ದುಬಿಟ್ಟ! ಪುಣ್ಯಕ್ಕೆ… ಸೆಪ್ಟಿಕ್ ಟ್ಯಾಂಕಿನ ಪಡದೆ ಕಟ್ಟಿಸಿಕೊಳ್ಳಲು ಲಂಭವಾಗಿ ನಿಂತ ಗೇಣಂತರದ ಟ್ವೆಲ್ವ್ ಎಮ್ಮೆಮ್ ಸಾಲು ಕಬ್ಬಿಣ ಬಾರುಗಳ ನೆತ್ತಿಯ ಮೇಲೆ ಬೀಳಲಿಲ್ಲ ಅಷ್ಟೆ!!

ಆ ಸಂದರ್ಭದಲ್ಲಿ ದಡೂತೆಪ್ಪನ ಮೌನ ಆಕ್ರಂದನ ಯಾರಿಗೆ ತಾನೇ ಕೇಳೀತು?! ಇನ್ನು… ಅನುಕಂಪಿಸುವ ಪ್ರಮೇಯವಾದರೂ ಹೇಗೆ ಬಂದೀತು? ನಸುಕು ಹರಿದು ಬೆಳ್ಳಂಬೆಳಕು ಮೂಡಿತ್ತು; ಶೆಡ್ಡು… ಬೆಳಗಿನ ಸುಖ ನಿದ್ರೆಯಲ್ಲಿ ಪವಡಿಸಿತ್ತು!

ದಡೂತೆಪ್ಪ ಹೆಸರಿಗೆ ತಕ್ಕಂತೆ ದೊಡ್ಡ ಆಳು! ಬಲಗಾಲಿಗೆ ಪೆಟ್ಟು ಬಿದ್ದು ರಕ್ತಸ್ರಾವವಾದರೂ ಸ್ವಯಂ ಸಂಭಾಳಿಸಿಕೊಂಡು ಅದೆಷ್ಟು ಗಟ್ಟಿಮನಸ್ಸಿನಿಂದ ತಡೆದುಕೊಂಡನೋ ಏನೋ… ಆ ಸಂಕಟವನ್ನು ದಿನವಿಡೀ ಮನೆಯಲ್ಲಿ ಯಾರಿಗೂ ಹೇಳಿಕೊಂಡಿರಲಿಲ್ಲ; ಅಂದ ಮಾತ್ರಕ್ಕೆ… ಅದು ಗೊತ್ತಾಗದೇ ಇದ್ದೀತೆ? ಆತನ ಅಸಹಜ ನಡೆ-ನುಡಿಗಳೇ ಪ್ರಕರಣಕ್ಕೆ ಸಾಕ್ಷಿಯಾದವು. ಸಂಬಂಧಿಕರೂ ಬಂದು ನೋಡಿಕೊಂಡು ಹೋಗಿದ್ದಾಯಿತು. ಹೆಂಡತಿ ಭೀಮವ್ವ ಸದಾ ದುಃಖದಲ್ಲುಳಿದಳು. ಮಗಳೂ ದಿಙ್ಮೂಢಳಾಗಿದ್ದಳು. ಖಾಸಗಿ, ಗಾವುಟೀ ಆಸ್ಪತ್ರೆಯೆಂದು ಎಲ್ಲೆಡೆ ವ್ಯರ್ಥ ಅಲೆದಾಡಿದ್ದಾಯಿತು. ಕೊನೆಗೆ, ಸರಕಾರೀ ಆಸ್ಪತ್ರೆಗೆ ಸೇರಿಸಿ ಸುಶ್ರೂಷೆ ಮಾಡಿಸಿದರು.

ದಡೂತೆಪ್ಪನಿಗೆ ಮುಂಚಿನಿಂದಲೂ ಅಧಿಕ ರಕ್ತದೊತ್ತಡ, ಮಧುಮೇಹ ಇತ್ತೆಂಬುದು ಆವಾಗಲೇ ಗೊತ್ತಾದದ್ದು! ಆದರೆ, ದೈಹಿಕವಾಗಿ ಯಾವುದೇ ಏರುಪೇರಾಗಿರಲಿಲ್ಲ. ಏನೋ ಕೊಂಚ ವ್ಯತ್ಯಾಸವಾಗುತ್ತಿದೆ ಎಂದುಕೊಂಡಿದ್ದರೂ ತನ್ನ ಶಾರೀರಿಕ ಸಂಪತ್ತಿನ ಅಹಮ್ಮಿನಿಂದ ಅದನ್ನು ಯಾರೊಂದಿಗೂ ಹಂಚಿಕೊಂಡಿರಲಿಲ್ಲ; ಕಾಲಿನ ಬೇನೆ ಬೇಗ ಗುಣವಾಗದೇ ತಿಂಗಳುಗಳೇ ಉರುಳಿದವು. ಗಾಯ ಹೋಗಿ ಹುಣ್ಣಾಯಿತು. ಹುಣ್ಣು ಹೋಗಿ ಗ್ಯಾಂಗ್ರಿನ್‍ಗೆ ಕಾರಣವಾಯಿತು! ಅನಿವಾರ್ಯವಾಗಿ ಕಾಲನ್ನು ಕಟ್‍ಮಾಡಿ ತೆಗದುಹಾಕುವ ಘೋರ ಪ್ರಸಂಗವೂ ನಡೆದುಹೋದದ್ದು ದಡೂತೆಪ್ಪನ ದೌರ್ಭಾಗ್ಯವೇ ಸರಿ! ಆ ಸಂದರ್ಭದಲ್ಲಿ ಕಟ್ಟಡದ ಮಾಲೀಕರಿಂದಲೂ ಅಷ್ಟಾಗಿ ಯಾವುದೇ ಸಹಾಯ ದೊರೆಯಲಿಲ್ಲ! ಮಗಳ ಮದುವೆಗಾಗಿ ಕೂಡಿಟ್ಟ ಅಲ್ಪಸ್ವಲ್ಪ ಹಣ-ವಸ್ತು-ಒಡವೆ ಎಲ್ಲವೂ ಕರಗಿ ಹೋಯಿತು.

ಒಟ್ಟಾರೆ ಕುಟುಂಬದ ಜಂಘಾಬಲವೇ ಉಡುಗಿ ವರ್ಷ ಕಳೆಯಿತು. ನೆಮ್ಮದಿ ನಿರ್ನಾಮವಾಗಿತ್ತು. ಆದಷ್ಟು ಬೇಗ ಆ ಜಾಗ ಖಾಲಿಮಾಡಿ ಮತ್ತೊಂದು ಬಿಲ್ಡಿಂಗ್ ಹುಡುಕಾಡುವ ಉದ್ದೇಶ ಪ್ರಬಲವಾಗಿತ್ತು. ಅದೇ ಬಡಾವಣೆಯಲ್ಲಿ ವಾಚಮನ್‍ಕಿ ಕೆಲಸಗಳಿದ್ದರೂ ಅವೆಲ್ಲ ದಡೂತೆಪ್ಪನಿಗೆ ಅಪಥ್ಯವೆನಿಸಿದವು.

ಒಕ್ಕಾಲಿನ ಬಂಟ ದಡೂತೆಪ್ಪ ಬಲಕಂಕುಳಲ್ಲಿ ಊರುಗೋಲಿಟ್ಟುಕೊಂಡು, ತಲೆಯ ಮೇಲೆ ಕುಟುಂಬದ ಹೊರೆ ಹೊತ್ತಿದ್ದಾನೆ. ಕಳೆದುದನ್ನೆಲ್ಲ ಗಳಿಸುವಾಸೆಯಿಂದ ತನ್ನೆತ್ತರಕ್ಕೆ ಬೆಳೆದ ಮಾದೇಶ-ಭರಮೇಶರ ಮೇಲೆ ಭರವಸೆಯಿಟ್ಟು ಈಗ ಮತ್ತೊಬ್ಬ ಗೌಂಡಿಮೇಸ್ತ್ರಿಯ ಸಹಾಯದಿಂದ ಹೊಸ ಪ್ರದೇಶಕ್ಕೆ ಕಾಲಿಟ್ಟಿದ್ದಾನೆ… ಅಲ್ಲಿ ಮೂರು ಬೃಹತ್ ಕಟ್ಟಡಗಳ ಉಸ್ತುವಾರಿಕೆ ಆತನ ಮೇಲೆ!.

ಸರಕಾರಿ ಜಾಗೆಯಲ್ಲಿದ್ದ ಆ ಇಪ್ಪತ್ತೆಂಟು ಎಕರೆ ಗೋಮಾಳದ ಈಶಾನ್ಯಕ್ಕೆ ತ್ರಿಕೋನಾಕಾರದಲ್ಲಿ ಒತ್ತಿ ಬಂದ ಸುಮಾರು ಏಳು ಎಕರೆ ಜಮೀನನ್ನು ಕಾಲುದಾರಿಯೊಂದು ಬೇರ್ಪಡಿಸಿಯಾಗಿತ್ತು. ಅಭಿವೃದ್ಧಿಪೂರಕವೂ, ವಾಸ್ತುಶುದ್ಧವೂ ಆಗಿದ್ದ ಆ ಜಮೀನನ್ನು ಆ ಭಾಗದ ಎಮ್ಮೆಲ್ಲೆ, ಕಾರ್ಪೋರೇಟರ್ ಹಾಗೂ ಒಬ್ಬ ಪಿಎಸ್ಸೈ ಈ ಮೂವರ ದೃಷ್ಟಿ ಮುಂಚಿನಿಂದಲೂ ಹೊಂಚಿಸಿತ್ತೆಂಬುದು ಗುಸುಮುಸಿ.

ದನಕರುಗಳ ಬದುಕಿಗಾಗಿ ಮೀಸಲಿದ್ದ ಗೋಮಾಳಾಂಶದ ಮೇಲೆ ಆ ಮೂವರಿಂದ ನಡೆಯುತ್ತಿದ್ದ ಆಕ್ರಮವೆನ್ನಬೇಕೋ… ಶೋಷಣೆಯೆನ್ನಬೇಕೋ ಅಥವಾ ಒಂದರ್ಥದಲ್ಲಿ ನಡೆದ ಸಾಮೂಹಿಕ ಅತ್ಯಾಚಾರವೆನ್ನಬೇಕೋ… ಬಗೆಹರಿಯದ್ದಾಗಿತ್ತು. ಹಳ್ಳಿಗರ ಭಾಷೆಯಲ್ಲಿ ಅದು ನಿಜಕ್ಕೂ ಗೋಮಾಳಮ್ಮನ ಮೇಲಾದ ಅತ್ಯಾಚಾರವೇ ಸರಿ! ಆದರೆ ‘ಅತ್ಯಾಚಾರ’ ಎಂಬ ಮಾತಿಗೆ ಅವರ ಶಬ್ದಪ್ರಯೋಗ ಮಾತ್ರ ಭಿನ್ನವಾಗಿತ್ತು ಆ ಮಾತು ಬೇರೆ.

ಅಂತೂ ಇಂಥವರ ಏನೆಲ್ಲ ಅಪರಾಧಗಳನ್ನು ಸಹಿಸುತ್ತಲೇ ನಡೆದಿರುವ ಭೂಮಾತೆಯಲ್ಲಿದ್ದುದು ವಿಧಿ ಬರಹದ ವಿಚಿತ್ರ ತಾಳ್ಮೆ! ಸಾಮಾನ್ಯ ಮಾತೆಯರಿಗೆ ಒಗ್ಗಿಸಿಕೊಳ್ಳಲಾದೀತೆ? ಅದೂ ಭವಿಷ್ಯದಲ್ಲಿ ಬಾಳಿ ಬದುಕುವ ಮುಗ್ಧ ಯುವತಿಯರಿಂದಂತೂ ಸಹಿಸಲಸಾಧ್ಯ!

ಸಮಯ ಸಾಧಿತಗೊಂಡು ಆ ಜಾಗಕ್ಕೆ ಸುತ್ತಲೂ ಬೇಲಿ ಬಿತ್ತು. ಅದು ಸಾರ್ವಜನಿಕರ ಗಮನಕ್ಕೆ ಬಂದರೂ ಧ್ವನಿಯೆದ್ದಿರಲಿಲ್ಲ. ಸರಕಾರದ್ದಂತೂ ಈ ನಿಟ್ಟಿನಲ್ಲಿ ಮಂದ ದೃಷ್ಟಿ. ನಂತರ, ಆರಂಗುಲದ ಬೋರವೆಲ್ ನೀರು ಕೂಡ ನೆಗೆಯಿತು. ಕಟ್ಟಡಕ್ಕೆ ಬೇಕಾದ ಏನೆಲ್ಲ ಸರಕು ಸಂಗ್ರಹವಾಯಿತು… ಜೊತೆಗೆ ವಾಚಮನ್ ದಡೂತೆಪ್ಪನ ಕುಟುಂಬಕ್ಕೆ ಶೆಡ್ಡೂ ತಯಾರಾಯಿತು. ದಡೂತೆಪ್ಪನ ಕೈಯಲ್ಲಿ ನೋಡಿದರೆ ಪುಡಿಗಾಸೂ ಇಲ್ಲ. ಇದ್ದಬಿದ್ದುದೆಲ್ಲ ತನ್ನ ಆರೋಗ್ಯ-ಆರೈಕೆಗಾಗಿಯೇ ಖರ್ಚಾಗಿ ಹೋಗಿದೆ. ಮುಂಗಡಕ್ಕಾಗಿ ಮಾಲೀಕತ್ರಯರಲ್ಲಿ ಕೈಜೋಡುಸುತ್ತಿದ್ದ ಆತ ಅಲ್ಲಿ… ಹೇಗೆ ಹೇಗೊ ಬದುಕು ನೂಕಹತ್ತಿದ್ದ.

ಕಟ್ಟಡ ಕೆಲಸ ಶುರುವಾಗಿ ವರ್ಷಕಳೆದಿತ್ತು. ಸುತ್ತಲೂ ಏಳೆಂಟು ಕಿಲೋಮೀಟರ್ ಅಂತರದಲ್ಲಿ ಯಾವುದೇ ಬಡಾವಣೆಗಳಿದ್ದಿಲ್ಲ. ಅಂಥ ನಿರ್ಜನ ಪರಿಸರದ ಗೋಮಾಳದಲ್ಲಿ ಆ ಮೂರೂ ಕಟ್ಟಡಗಳು ತಲೆಯೆತ್ತಿ ನಿಲ್ಲಲು ಇನ್ನೂ ವರ್ಷೊಪ್ಪತ್ತು ಬಾಕಿ ಇತ್ತು. ಆ ಕಟ್ಟಡಗಳಿಗೆ ‘ರೆಸಾಟ್ರ್ಸ’ ಎಂಬ ತಾತ್ಕಾಲಿಕ ನಾಮಫಲಕವೂ ನೆಲೆಯೂರಿತು. ಆಗ ಅದು ವಿರೋಧ ಪಕ್ಷದವರ ಕಣ್ಣು ಕುಕ್ಕಿಸಿದ ಕಾರಣ ನಿರ್ಮಾಣ ಕಾರ್ಯ ಸ್ಥಗಿತವಾಯಿತು. ‘ನಡೆವ ಆನೆಗೆ ನೂರೆಂಟು ಶುನಕಗಳ ವ್ಯರ್ಥ ಬೊಗಳಿಕೆ’ ಎಂದೆಣಿಕೆಯ ಆ ಸಂದರ್ಭಕ್ಕೆ ವಿಧಿ ಮತ್ತೆ ನಾಲ್ಕಾರು ತಿಂಗಳಲ್ಲಿ ಕಟ್ಟಡ ಕೆಲಸಗಳನ್ನು ಪುನಃ ಶುರುವಾಗಿಸಿತು. ಮಾಲೀಕರಾದ ತ್ರಿಮೂರ್ತಿಗಳು ಮತ್ತೆ ಅಳುಕಿಲ್ಲದವರಂತಾದರು.

ಪಿಎಸ್ಸೈ ಅವರ ಮಗ ಸುಹಾಸ ಹೆಚ್ಚಿನ ಶಿಕ್ಷಣಕ್ಕಾಗಿ ಅಮೇರಿಕಾಕ್ಕೆ ಹೋಗಿದ್ದರೆ ಎಮ್ಮೆಲ್ಲೆ ಮಗ ಭಜನ್, ಕಾರ್ಪೊರೇಟರ್ ಮಗ ಸುಜನ್ ಈರ್ವರೇ ರೆಸಾರ್ಟ ಕಟ್ಟಡವನ್ನು ಆಗಾಗ್ಗೆ ಬಂದು ನೋಡಿಕೊಂಡು ಹೋಗುತ್ತಿದ್ದರು. ಡ್ರೈವರ್ ದುರ್ಗೇಶ ಎಂಬಾತನೋರ್ವ ಇವರ ಬಲಗೈ ಬಂಟ. ಅವರು ಬಂದಾಗ್ಗೊಮ್ಮೆ ದಡೂತೆಪ್ಪ, ಹನುಮವ್ವ ಯಾರೇ ಇದ್ದರೂ ಕೂಡ ಅವರಿಗೆ ‘ಸಾಹೇಬರ… ಸಾಹೇಬರ’ ಎನ್ನುತ್ತ ಗೌರವದಿಂದ ನೀರು-ನಿಡಿ ಕೊಟ್ಟು ಉಪಚರಿಸುತ್ತಿದ್ದರು. ಗೌರಿ ಮಾತ್ರ ಮೂವರಿಗೂ ‘ಕಾಕಾ’ ಎನ್ನುವುದನ್ನೇ ರೂಢಿಸಿಕೊಂಡಿದ್ದಳು.

‘ಡ್ರೈವರ್ ದುರ್ಗೇಶ’ ಬೇರೆ ಯಾರೂ ಆಗಿರಲಿಲ್ಲ. ಆತನೇ ಧಡೂತೆಪ್ಪನ ತಮ್ಮ ದುರ್ಗಪ್ಪ ಎಂಬುದು ದ್ಯಾಮಣ್ಣ ಮೇಸ್ತ್ರಿಯಿಂದ ತಡವಾಗಿ ತಿಳಿದು ಬಂತು. ಅಣ್ಣನೊಂದಿಗೆ ಜಗಳ ಮಾಡಿ ಸಂಬಂಧವನ್ನೇ ಕಡಿದುಕೊಂಡು ಬಂದ ಹದಿವಯದ ದುರ್ಗಪ್ಪ ಬೆಂಗಳೂರಿಗೆ ಬಂದು ಸುಮಾರು ವರ್ಷ ಕಳೆದಾಗಿತ್ತು. ಅಷ್ಟು ದೀರ್ಘಾವಧಿಯಿಂದ ಬೆಳೆದು ನಿಂತಿದ್ದ ತನ್ನ ಗಡ್ಡ ಮೀಸೆಗಳಿಗೆ ಬ್ಲೇಡಿನ ಕರಾಮತ್ತನ್ನೂ ತೋರಿಸದಷ್ಟು ಮುಗ್ಧನಂತಿದ್ದ ದುರ್ಗಪ್ಪ ಅಣ್ಣ ದಡೂತೆಪ್ಪನ ಕಡೆಯವರೆಲ್ಲರಿಗೂ ಅಪರಿಚಿತನಂತಿದ್ದ.
ಕರುಳು ಕೇಳೀತೆ? ಧಡೂತೆಪ್ಪನಿಗೆ ಏನೋ ಆಸೆ! ತನ್ನ ತಮ್ಮ ದುರ್ಗಪ್ಪನಿಂದ ‘ಅಣ್ಣಾ’ ಎಂಬ ಕರೆಯನ್ನು ಮತ್ತೆ ಕೇಳೇನಲ್ಲಾ ಎಂಬ ಹಂಬಲ ಒಳಗೊಳಗೇ ತುಡಿಯುತ್ತಿತ್ತು… ಅಷ್ಟೇ ಅಲ್ಲ ಧಡೂತೆಪ್ಪ ತನ್ನ ಕುಟುಂಬ ಸಂರಕ್ಷಣೆಗೆ ಆನೆಯ ಬಲ ತಂದು ಕೊಂಡ! ದುರ್ಗಪ್ಪ ಮನೆ ಬಿಟ್ಟು ಹೋದಾಗ ಗೌರಿ ಒಂದು ವರ್ಷದ ಕೂಸಿತ್ತು ಅಷ್ಟೆ. ದುರ್ಗಪ್ಪ ಎಂಬಾತನೊಬ್ಬ ತನ್ನ ಖಾಸಾ ಚಿಕ್ಕಪ್ಪನಿದ್ದ ಎಂಬ ಸಂಗತಿ ಸುಮಾರು ದೀಡೆರಡು ವರ್ಷಗಳ ಹಿಂದಿನಿಂದಷ್ಟೇ ಅವಳ ಮನೆಯವರಿಂದ ಆಕಸ್ಮಿಕವಾಗಿ ತಿಳಿದಿತ್ತು. ಅದುವರೆಗೂ ಮರೆತೇ ಹೋಗಿದ್ದ ತನ್ನ ಕಾಕಾ ದುರ್ಗಪ್ಪನನ್ನು ಅವಳೂ ಕೂಡ ಮತ್ತೆ ಮತ್ತೆ ಜ್ಞಾಪಿಸಿಕೊಂಡು ಸಂಭ್ರಮಿಸಿದ್ದಳು. ಆದರೆ ದುರ್ಗಪ್ಪ ಮಾತ್ರ ಗಂಭೀರ ಸಹಜ ನಡವಳಿಕೆಯಲ್ಲಿ ತಾನೇನೋ ತನ್ನ ಕೆಲಸವೇನೋ ಎಂದುಕೊಂಡವರಂತಿದ್ದರೂ ತನ್ನ ಅಣ್ಣನ ಮಗಳು ಗೌರಿಯ ಬಗೆಗಿನ ಶೈಶವ, ಯೌವನಗಳ ಕನಸಿನ ಅರಿವನ್ನೂ ಮೆಲಕು ಹಾಕಿದ್ದ.

ಈಗ, ತನ್ನ ಸಹೋದರನ ಆಪ್ತ ಸಂಬಂಧದ ಆ ಕಟ್ಟಡಗಳಿಗೆ ಕಾಲಕಾಲಕ್ಕೆ ನೀರುಣಿಸಿ ರಕ್ಷಿಸುವ ಜವಾಬ್ದಾರಿಯನ್ನು ದಡೂತೆಪ್ಪ ಅಭಿಮಾನಪೂರ್ವಕವಾಗಿ ತನ್ನ ಕುಟುಂಬದ ಮೇಲೆ ಬಲವಾಗಿ ಕೇಂದ್ರೀಕರಿಸಿಕೊಂಡ.

ಸುತ್ತು ಟೀಶರ್ಟ ಕಚ್ಚಿ ಜೋತು ಬಿದ್ದ ಸೊಂಟದ ಕೆಳಗಿನ ಜೀನ್ಸ್ ಪ್ಯಾಂಟ್… ಬಿಸಿಲು, ಮಳೆ, ಗಾಳಿ, ಚಳಿಗೆ ಬೆದರದೆ ತಲೆಗಂಟಿದ ಜೀನ್ಸ್ ಮಂಕೀ ಕ್ಯಾಪ್! ಜೊತೆಗೆ… ಕತ್ತು ಸುತ್ತುವರೆದ ಕೆಂಪು ಕರವಸ್ತ್ರ… ಇವುಗಳೊಟ್ಟಿಗೆ ಕೈಬಳೆ ಸದ್ದಿನ ರಂಗು-ರಂಗೀಲಿ ಚಲುವನ್ನು ಕದ್ದು ನೋಡಿ ಬಾಯಿ ಚಪ್ಪರಿಸುವ ಅವನ ಮಾಮೂಲಿ ಚಟಕ್ಕೆ ಕಣ್ಣಿನ ಮೇಲಿನ ಕಪ್ಪು ಕನ್ನಡಕ ಸದಾಕಾಲ ಸಹಕರಿಸುವಂತಿತ್ತು. ಹೆಸರು ಮದನರಾಜ. ಹೆಣ್ಬಾಕು ಮನುಷ್ಯ. ಈತ ಆ ರೆಸಾರ್ಟ ಕಟ್ಟಡಗಳ ಮೇಲುಸ್ತುವಾರಿ; ಮುಖ್ಯ ಎಂಜಿನಿಯರ್ ಸಹಾಯಕ. ಹೀಗಾಗಿ ಕಟ್ಟಡ, ಶೆಡ್ಡು ಹಾಗೂ ಹೆಣ್ಣಾಳುಗಳ ಕಿಲಕಿಲ ನಾದದೊಂದಿಗೆ ಅವನ ಒಡನಾಟ ಎಡೆಬಿಡದೇ ನಡೆದಿತ್ತು.

ಆ ಒಡನಾಟದಲ್ಲಿ ಹರೆಯದ ಗೌರಿಯನ್ನೂ ಸಿಲುಕಿಸಿಕೊಳ್ಳುವ ಪ್ರಯತ್ನ ನಿರಂತರವಾಗಿತ್ತು. ಇದನ್ನರಿತು ಅಂಜಿ ಹರಿಣಿಯಾದ ಗೌರಿಯೆ ತನ್ನ ಚಿಕ್ಕಪ್ಪ ದುರ್ಗಪ್ಪನ ಮುಂದೆ ಬಾಯಿ ಕೂಡಾ ಬಿಟ್ಟಿದ್ದಳು. ದುರ್ಗಪ್ಪ ಹಲ್ಲು ಕಟಗರಿಸಿ ಮದನರಾಜನ ಮೇಲೆ ಒಂದು ಕಣ್ಣಿರಿಸಿದ್ದ. ಮದನರಾಜನಿಗೆ ಇದೇನೂ ಹೊಸದಲ್ಲ. ಇಂಥ ನಾಲ್ಕಾರು ಗೌರಿಯರ ರುಚಿ ನೋಡಿದ ಆತನ ನಾಲಿಗೆ ಹೊಸ ರುಚಿಗಾಗಿ ಮತ್ತೆ ಎಗ್ಗುಸಗ್ಗಿಲ್ಲದೆ ತಡಕಾಡಿತ್ತು. ಅದರ ಪರಿಣಾಮ… ಆಚೆ ಬಡಾವಣೆಯ ಎಂಟು ವರ್ಷದ ಮುಗ್ಧ ಬಾಲಿಕೆಯ ಪಾಲಕರಿಂದ ಮೊನ್ನೆ ಮೊನ್ನೆ ತಾನೆ ಚಪ್ಪಲಿ ಸೇವೆ ಮಾಡಿಸಿಕೊಂಡಿದ್ದೂ ಮಾಸದ ಇತಿಹಾಸ!

******

ಆವೊಳಗಾಗಿಯೇ ಸಿಕ್ಕ ಹೊಸ ಗೆಳತಿಯೋರ್ವಳಿಂದ ಗೌರಿಗೆ ಟೈಲರಿಂಗ ಕೆಲಸಕ್ಕೆ ಹೋಗುವ ಯೋಚನೆ ಬಂತು. ಊರಲ್ಲಿ ಕಲಿತದ್ದನ್ನು ಇಲ್ಲಿಯಾದರೂ ಉಪಯೋಗಿಸಿಕೊಂಡು ನಾಲ್ಕುದುಡ್ಡು ಮಾಡುವಾಸೆಯಿಂದ ಮನೆಯವರನ್ನು ಒಪ್ಪಿಸಿ ಆ ಗೆಳತಿಯ ಸಹಾಯದಿಂದ ಗಾರ್ಮೆಂಟ್ ಫ್ಯಾಕ್ಟರಿಯೊಂದಕ್ಕೆ ಹೋಗಹತ್ತಿ ಮೂರು ತಿಂಗಳಾಗಿತ್ತಷ್ಟೆ. ಸದ್ಯದ ಬಡಾವಣೆಯಿಂದ ಜಾಲಹಳ್ಳಿ ಕ್ರಾಸ್ ಹದಿನೈದು ಕಿಲೋಮೀಟರ್. ಅಲ್ಲಿಂದ ಮತ್ತೇಳು ಕಿಲೋಮೀಟರ್ ದೂರದಲ್ಲಿ ಫ್ಯಾಕ್ಟರಿ. ಅಲ್ಲಿಗೆ ನಿತ್ಯ ಎರಡೆರಡು ಬಸ್ ಹಿಡಿದೇ ಹೋಗಬೇಕಿತ್ತು. ತಾಯಿಗೆ ಮಗಳನ್ನು ಹೊರಗೆ ಕಳಿಸಲು ಮನಸ್ಸಿರಲಿಲ್ಲ ಆದರೂ ಅನಿವಾರ್ಯವೆಂದರಿತು ಸುಮ್ಮನಾಗಿದ್ದಳು. ಮೊದಲೇ ಗಂಡನ ವಿಕಲಾಂಗತೆಯ ಚಿಂತೆಯಲ್ಲಿ ಬಳಲಿದ ಭೀಮವ್ವ ಈಗ ಹದಿವಯದ ಮುಗ್ಧಚಲುವೆ ಗೌರಿಯ ಬಗ್ಗೆಯೂ ಅಷ್ಟೇ ಯೋಚಿಸಹತ್ತಿದಳು.

ಗೌರಿ ಟೈಲರಿಂಗ ಕೆಲಸದಲ್ಲಿ ಬಲು ಜಾಣೆ. ಅದರಲ್ಲೂ ಬಾಲಿಕೆಯರ ಫ್ರಾಕ್, ಮಿನಿಸ್ಕರ್ಟ ಹೊಲಿಯುವದರಲ್ಲಂತೂ ಎತ್ತಿದ ಕೈ! ಕೆಲಸಕ್ಕೆ ಸೇರಿದ ಒಂದೆರಡು ತಿಂಗಳಲ್ಲೆ ಆಕೆ ಮೇಸ್ತ್ರಿ ಹಾಗೂ ಮ್ಯಾನೇಜರನ ಪ್ರೀತಿ ಗಳಿಸಿದ್ದಳು. ಗಳಿಸಿದ ಪ್ರೀತಿಗೆ ಪ್ರತಿಯಾಗಿ ಹೇಗಿರಬೇಕೆಂಬುದನ್ನೂ ಕೂಡ ಚನ್ನಾಗಿ ಅರಿತಿದ್ದ ಗೌರಿ ಸೂಕ್ಷ್ಮ ಹಾಗೂ ತೀಕ್ಷ್ಣಮತಿಯವಳಾಗಿದ್ದಳು. ಎಲ್ಲರೊಂದಿಗೆ ಸದಾ ಲವಲವಿಕೆಯಿಂದ ಇರುತ್ತಿದ್ದಳು. ನಿತ್ಯ ಫ್ಯಾಕ್ಟರಿಗೆ ಹೋಗಿ ಬರುವಲ್ಲಿ ಕೊಂಚ ಆಯಾಸವೆನಿಸುತ್ತಿದ್ದರೂ ಹರೆಯದ ವಯಸ್ಸಿನ ಪರಿಣಾಮದಿಂದ ಅದು ಅಷ್ಟಾಗಿ ಕಂಡು ಬರುತ್ತಿರಲಿಲ್ಲ.

ಫ್ಯಾಕ್ಟ್ರಿ ಕೆಲಸ ಮುಗಿಸಿದ ಗೌರಿ ನಿತ್ಯ ಸಂಜೆ ಏಳರ ಬಸ್ಸಿಗೆಂದರೆ ಮನೆಯಲ್ಲಿರುತ್ತಿದ್ದಳು. ಅಂದು ರಾತ್ರಿ ಎಂಟಾಯಿತು… ಒಂಭತ್ತಾಯಿತು… ಕೊನೆಯ ಬಸ್ಸೂ ದಾಟಿ ಹತ್ತಾಯಿತು! ಅಲ್ಲಿಯವರೆಗೂ ಅವಳ ಹಾದಿ ಕಾದುಕಾದು ಮನೆಯವರೆಲ್ಲರೂ ಸುಸ್ತಾಗಿ ಹೋಗಿದ್ದರು. ಆಕೆಯ ಗೆಳತಿಯಿಂದಲೂ ಯಾವುದೆ ಸುಳಿವು ಸಿಗಲಿಲ್ಲ. ಕೆಲಸದ ಫ್ಯಾಕ್ಟ್ರಿವರೆಗಾದರೂ ಹೋಗಿ ಬರಬೇಕೆಂದರೆ ಸೈಕಲ್ ಹೊರತು ಬೇರೆ ವಾಹನಗಳೂ ಇಲ್ಲ. ಬಸ್ಸೂ ಇಲ್ಲ. ಫೋನ್ ಕೂಡ ಎರಡೂ ಮನೆಗಳಿಗೆ ಸೇರಿ ಚನ್ನಪ್ಪನ ಒಂದೇ ಫೋನು!
ಪದವೀಧರನಾಗಿದ್ದರೂ ಗಾರೆ ಕೆಲಸದಲ್ಲಿ ನಿಷ್ಣಾತನಾಗಿ ಪ್ರಾಮಾಣಿಕ ‘ಮೇಸ್ತ್ರಿ’ ಎನ್ನಿಸಿಕೊಂಡು ಬೆಂಗಳೂರಲ್ಲೇ ತಂಗಿದ್ದ ತನ್ನ ಗೆಳೆಯ ದ್ಯಾಮಣಮೇಸ್ತ್ರಿಯ ಜೊತೆ ಚನ್ನಪ್ಪ ಫೋನಿನಲ್ಲಿ ಮಾತಾಡಿ ವಿಷಯವನ್ನೆಲ್ಲ ತಿಳಿಸಿದ. ದ್ಯಾಮಣಮೇಸ್ತ್ರಿಯೂ ತುರ್ತಾಗಿ ಬರುವುದಾಗಿ ಹೇಳಿದ್ದ. ಆದರೆ ಇಬ್ಬರು ಹೆಂಡಿರ ನಡುವೆ ಸಿಕ್ಕು ಒದ್ದಾಡುತ್ತಿದ್ದ ಆತನಿಗೆ ಚನ್ನಪ್ಪನ ಫೋನಿನ ವಿಷಯಕ್ಕೆ ತಕ್ಷಣ ಸ್ಪಂದಿಸಲು ಸಾಧ್ಯವಾಗಲೇ ಇಲ್ಲ. ಭರಮೇಶನೂ ಮಾವನ ಫೋನಿನಿಂದ ಫ್ಯಾಕ್ಟ್ರಿಯ ಮ್ಯಾನೇಜರಗೆ ಫೋನಾಯಿಸಿ ಮತ್ತೆ ಮತ್ತೆ ವಿಚಾರಿಸಿದಾಗ ಅವಳು ಐದು ಗಂಟೆಗೇ ಫ್ಯಾಕ್ಟ್ರಿ ತೊರೆದ ಸಂಗತಿ ಮಾತ್ರ ಸಿಗುತ್ತಿತ್ತು. ಫ್ಯಾಕ್ಟ್ರಿಯ ಮೇಸ್ತ್ರಿ ಬಗ್ಗೆ ಕೇಳಿದರೆ… ಆತ ಮೂರು ದಿನದಿಂದ ರಜೆಯ ಮೇಲಿದ್ದದ್ದು ತಿಳಿದು ಬಂತು!

ದುರ್ಗಪ್ಪ ಮಾತ್ರ ತಕ್ಷಣ ಹೊರಟು ಬರುವುದಾಗಿ ತಿಳಿಸಿದಾತ… ಒಂದು ಗಂಟೆಯ ನಂತರ ಮಾರ್ಗ ಮಧ್ಯೆ ತನ್ನ ಜೀಪಿಗೂ ಏನೋ ಯಡವಟ್ಟಾಗಿ ಬರಲು ತಡವಾಗುತ್ತದೆ ಎಂದು ಹೇಳಿದ್ದ. ಅಷ್ಟೇ ಅಲ್ಲ; ಮದನರಾಜ ಎಲ್ಲಿದ್ದಾನೆ ಮೊದಲು ಅವನನ್ನು ಪತ್ತೆ ಹಚ್ಚಿರಿ ನನಗೆ ಸಿಕ್ಕರೆ ಅವನನ್ನು ಎಳೆದುಕೊಂಡೇ ಬರುವೆ ಅದೇ ಪ್ರಯತ್ನದಲ್ಲಿದ್ದೇನೆ ಭಯ ಪಡಬೇಡಿ ಎಂದು ಹೇಳಿದ ಆತನ ಸುಳಿವೂ ಇಲ್ಲ. ಮದನರಾಜನಿಗೂ ಫೋನ್ ಹಚ್ಚಲಾಗಿ… ಆ ಕಡೆಯಿಂದ ತಾಸ್ಹೊತ್ತಿನಿಂದಲೂ ಸ್ವಿಚ್ಡ್ ಆಫ್ ಎಂತಲೇ ಬರುತ್ತಿದೆ. ರಾತ್ರಿ ಹನ್ನೊಂದಾಯಿತು! ತಾಯಿ ಭೀಮವ್ವನಿಗೋ… ತಲೆಯಲ್ಲಿ ಹತ್ತಾರು ಯೋಚನೆಗಳು ಮುತ್ತಿದವು. ದಡೂತೆಪ್ಪನಂತೂ ಪಾನಮತ್ತ ಯೋಚನಾಮುಕ್ತನಾಗಿದ್ದ.

ಮಾಣಿಕ್ಯವ್ವನೂ ತನಗೆ ತಿಳಿದಂತೆ ‘ಪೊಲೀಸರು, ಮನೆಮಾಲೀಕರು, ಅದು-ಇದು’ ಅಂತಾ ಮಾತಾಡಿ ಸುಮ್ಮನಾಗಿದ್ದಳು. ಭೀಮವ್ವನ ಕಣ್ಣಂತೂ ಅತ್ತತ್ತು ಊದಿಕೊಂಡಿದ್ದವು. ಏನನ್ನಾದರೂ ತಿನ್ನುವುದು ಹೋಗಲಿ… ಯಾರೊಬ್ಬರೂ ಹನಿ ನೀರನ್ನೂ ಬಾಯಿಗೆ ಹಾಕಿರಲಿಲ್ಲ. ಆ ಸಂದರ್ಭಕ್ಕೆ ವಿದ್ಯುತ್ತೂ ಕೈಕೊಟ್ಟು ಅರ್ಧಘಂಟೆಯಾಗಿತ್ತು. ಅಮವಾಸ್ಸೆ ಬೇರೆ; ಕತ್ತಲೋ ಕತ್ತಲು.

ತಡ ರಾತ್ರಿ ಹನ್ನೊಂದೂ ಕಾಲು ಗಂಟೆಯ ಸುಮಾರಿಗೆ ಅಪರೂಪಕ್ಕೊಂದು ಅಟೋ ಶಬ್ದ ಕೇಳಿಬಂತು. ಅದು ರೆಸಾಟ್ರ್ಸಿನ ಸಂಪರ್ಕ ರಸ್ತೆ ದಾಟಿ ಸ್ವಲ್ಪ ಮುಂದೆ ಹೋದಂತಾಯಿತು. ಹೆಡ್‍ಲೈಟಿನ ಮಂದ ಬೆಳಕಿನೊಂದಿಗೆ ಜೋಲಿ ಹೊಡೆಯುತ್ತ, ಅಮಲಿನುಸಿರು ಬಿಡುತ್ತ.. ರಸ್ತೆ ಪಕ್ಕದ ಮರಕ್ಕೆ ಡಿಕ್ಕಿಹೊಡೆದಂತಾಯಿತು… ಆದರೂ ಸಾವರಿಸಿಕೊಂಡಂತಿತ್ತು! ಅದರಿಂದ ಒಂದಿಬ್ಬರು ಕೆಳಗಿಳಿದಂತಾಯಿತು… ಇಳಿದವರಲ್ಲಿ ದ್ಯಾಮಣ್ಣಮೇಸ್ತ್ರಿ ಮತ್ತು ಗೌರಿ ಇರಬಹುದೆಂಬ ಎಲ್ಲರ ಊ…ಹೆ… ತಲೆಕೆಳಗಾಗಿತ್ತು.
ಇಳಿದ ಒಬ್ಬ ಅಟೋದಿಂದ ಏನನ್ನೋ ಜಗ್ಗಿ ಕೆಳಗೆ ಹಾಕಿದಂತಾಯಿತು. ಅದುವರೆಗೂ ಗುರ್ಗುಡುತ್ತಲೇ ಇದ್ದ ಅಟೋ… ಕೆಳಗಿಳಿದ ಆ ಒಬ್ಬನನ್ನು ಮತ್ತೆ ಹತ್ತಿಸಿಕೊಂಡು ಶೀಘ್ರ ಮರೆಯಾಯಿತು!

ಉದ್ವೇಗ, ದುಗುಡ, ಕುತೂಹಲಗಳ ಮುಪ್ಪುರಿಯಲ್ಲಿ ಎಲ್ಲರೂ ಅತ್ತ ಧಾವಿಸಿ ನೋಡುತ್ತಾರೆ… ಅಲ್ಲಿ… ವ್ಯಕ್ತಿಯೊಂದು ಬಿ…ದ್ದಂ…ತೆ… ತೋ…ರಿ…ತು. ಮೋಡ ಮುಸುಕಿನಾಟದ ನಕ್ಷತ್ರಗಳ ಬೆಳಕಿನಲ್ಲಿ ಯಾವುದೂ ಸ್ಪಷ್ಟವಾಗಿ ಕಾಣಲಿಲ್ಲ. ಆದರೆ… “ಹ್ಞಾ…..! ಅಕಿ ನಮ್ಗೌರೀನ! ಹೌದು! ಗೌರೀ…ಗೌರವ್ವಾ…” ಭೀಮವ್ವನ ಕರುಳು ಗೋಗರೆಯಿತು. ಒಂದು ಕ್ಷಣದ ನೀರವ ಉಳಿದವರೆದೆಯನ್ನು ನೀರಾಗಿಸಿತು! ಚನ್ನಪ್ಪ, ಮಾದೇಶ ಗೌರಿಯ ಸಮೀಪಕ್ಕೆ ಹೋದರು… ಸೂಕ್ಷ್ಮ ನರಳಿಕೆಯಿತ್ತು… ಎತ್ತಿಕೊಂಡು ಶೆಡ್ಡಿನ ಮುಂಭಾಗಕ್ಕೆ ತಂದರು.

ಆನುವಂಶಿಕ ಗಳಿಕೆಗಳಾದ ದಲಿತ ಸಂಸ್ಕಾರ, ಸಂಸ್ಕೃತಿ, ದಾರಿದ್ರ್ಯ, ಅನಕ್ಷರತೆಗಳನ್ನು ಕುಡಿತದ ಅಮಲಿನಲ್ಲಿ ತನ್ನ ಬದುಕಿನೊಂದಿಗೆ ತಾಳೆಹಾಕುತ್ತ… ಅದುವರೆಗೂ ಶೆಡ್ಡಿನಲ್ಲಿ ಕುಳಿತಿದ್ದ ದಡೂತೆಪ್ಪ ಗಡಬಡಿಸಿ ಗೌರಿಯತ್ತ ಸಾಗುತ್ತಿದ್ದ ವೇಳೆ ಊರುಗೋಲಿನ ಜೋಲಿ ತಪ್ಪಿ ಬೀಳುತ್ತಿದ್ದವನನ್ನು ಭರಮೇಶ ತಬ್ಬಿ ಹಿಡಿಯುವಷ್ಟರಲ್ಲೇ ದಡೂತೆಪ್ಪನನ್ನು ಪಾಶ್ರ್ವವಾಯು ತನ್ನ ತೆಕ್ಕೆಗೆ ತೆ…ಗೆ…ದು…ಕೊಂ…ಡು ಬಿಟ್ಟಿತು!!

ವಿದ್ಯುತ್ತೂ ಬಂತು. ಪಾ…ಪ, ತಂದೆ-ಮಗಳ ದಾರುಣ ಸ್ಥಿತಿಯಿಂದ ಖಿನ್ನವಾದ ಶೆಡ್ಡಿನ ಟ್ಯೂಬ್‍ಲೈಟ ಕೂಡ ಫಕಪಕ ರೆಪ್ಪೆ ಬಡಿಯುತ್ತ ಕೊನೆಗೂ ಧೈರ್ಯೆತಾಳಿ ಈರ್ವರನ್ನೂ ಕೋಲುಗಣ್ಣಿಂದ ದಿಟ್ಟಿಸಿತ್ತು. ಅತ್ತ,… ಹಡೆದ ಕರುಳು ಕತ್ತರಿಸಿ ಹೋಗುವ, ಇತ್ತ,… ಪಡೆದ ಮಾಂಗಲ್ಯ ಉದುರಿ ಬೀಳುವ ಭಯ ಎದುರಾದಂತಾಗಿತ್ತು ಭೀಮವ್ವನಿಗೆ! ಚನ್ನಪ್ಪನೂ ತಲೆಯಮೇಲೆ ಕೈಹೊತ್ತು ಕುಳಿತಿದ್ದ. ಅಷ್ಟರಲ್ಲಿ ಒಂದು ಜೀಪು ಬಂತು. ಅದರಲ್ಲಿಂದ ಪೋಲೀಸ ಸಮೇತ ದ್ಯಾಮಣ್ಣಮೇಸ್ತ್ರಿ ಕೆಳಗಿಳಿದು ಬಂದ. ತಲೆಗಷ್ಟಿಷ್ಟರಂತೆ ಕಳಕಳಿಯ ಪ್ರಶ್ನೆಗಳು ಆ ನಿರುತ್ತರಮುಖಿಯನ್ನು ಮುತ್ತಿದವು. ಆಗಂತುಕರಿಬ್ಬರು ಗೌರಿಯತ್ತ ಟಾರ್ಚಬೆಳಕು ಚಿಮ್ಮಿಸಿದರು.

ನೀಳ-ಸಪೂರ ಕಾಯದ ಚದುರೆ ಗೌರಿಯ ಎದೆಯಗಲಕ್ಕೆ ತೆರೆದುಕೊಂಡ… ಹರಿದ ರವಿಕೆಯ ಒಳದಿರಸು ಅಲ್ಲಲ್ಲಿ ಮೈಮೇಲೆದ್ದ ಉಗುರುಪರಚಿನ ನೆತ್ತರುಭರಿತ ಗೀರುಗಳನ್ನು ಪ್ರದರ್ಶಿಸಿತ್ತು. ಸೊಂಟಕ್ಕೆ ಸುತ್ತುಬಳಸಿದ ಬಿಳಿಲಂಗ ರಕ್ತದೋಕುಳಿಯಲ್ಲಿ ಒದ್ದೆಯಾದಂತಿತ್ತು. ಉಟ್ಟ ಪತ್ತಲ, ಮೆಟ್ಟ ಮೆಟ್ಟು ಮಾಯವಾಗಿದ್ದವು! ಎಣ್ಣೆಗೆಂಪು ದೇಹದ ಹೊಳಪಿನ ಮೇಲ್ಚರ್ಮ, ಮೈಮೇಲಿನ ಅರೆಬರೆ ಬಟ್ಟೆ ಎಲ್ಲವೂ ವiದ್ಯ-ಮಾಂಸ-ಸಿಗರೇಟು ವಾಸನೆಯಿಂದ ಗಬ್ಬಿಟ್ಟಂತಿದ್ದವು. ಕೆದರಿ ತುಂಡರಿಸಿದ ಆರೇಳು ತಲೆಗೂದಲು ಬೆವೆತಮುಖದ ಅಲ್ಲಲ್ಲಿ ಮೆತ್ತಿಕೊಂಡಿದ್ದವು. ಮುದ್ದಾದ ಕೋಲು ಮೊಗದ ಕಳೆಯನ್ನೆಲ್ಲ ಹೀರಿ ತೆಗೆದು ಒಗೆದಂತಿತ್ತು.

ಬಳೆಗಳ ಮುರಿತದಿಂದ ಕೈ ರಕ್ತವಾಡಿದ್ದವು. ಶೀಲರಕ್ಷಣೆಯ ಭರವಸೆಯಲ್ಲಿ ಧರಿಸಿದ್ದ ಕರಿಮಣಿಯ ಕೊರಳಸರ ಹರಿದು ಕೈಕೊಟ್ಟಿತ್ತು. ಬರಿಗೊರಳು ಊದಿಕೊಂಡಿತ್ತು. ಅರೆಗಣ್ಣ ಅಂಚುಗಳಲ್ಲಿ ನೀರ ಹನಿ ಬತ್ತಿ ತ್ವಚೆಯ ಕಾಂತಿ ಶೂನ್ಯವಾಗಿತ್ತು. ಹಣೆ ಮಧ್ಯೆದ ಟಿಕಳಿ ಎಡಹುಬ್ಬಿನತ್ತ ಸ್ಥಾನಪಲ್ಲಟಿಸಿತ್ತು. ಒಟ್ಟಾರೆ, ರಕ್ತಸಿಕ್ತ ತುಟಿ-ಗಲ್ಲಗಳಿಂದ ಕೂಡಿದ ಗೌರಿಯ ಆಕಾರ ಭಯ ಹುಟ್ಟಿಸುವಂತಿತ್ತು. ಏನನ್ನೋ ಹೇಳಬೇಕೆಂದರೂ ಸಾಧ್ಯವಾಗದ ಆ ದುರಾದೃಷ್ಟೆ ಕೊನೆಯುಸಿರ ಅಂಚಿನಲ್ಲಿದ್ದು ಕಾ… ಕಾ… ಎಂದುಸುರುತ್ತ ಮೂ…ರು… ಬೆ…ರ…ಳು ತೋರಿಸಿ… ತೇಲುಗಣ್ಣಿನೊಂದಿಗೆ…. ಗೋಣು ಚ…ಲ್ಲಿ…ದ…ಳು!!

ಭೀಮವ್ವನ ಹೃದಯದಲ್ಲಿ ದುಃಖದ ಕಟ್ಟೆಯೊಡೆಯಿತು… “ಅಯ್ಯೋ…..ನನಮ..ಗ..ಳ…..! ಬೆಂಗ್ಳೂರ್ಬೆಂಗ್ಳೂರಂತ ಬಂದು ಬೆಂಗ್ಳೂರಿಗೆ ಹಾರಾ… ಕೊಟ್ಟಂಗಾತಲ್ಲೋ…ಚನ್ನಪ್ಪಾ….ನಿನಸೊಸೀನ್ನ…! ಏನಾತೋ.. ನನಮಗಳಿಗೇ… ಗೌರೂ……ಚಲುವೀ…..ಕಣ್ತಗಿಯ ಎವ್ವಾ….. ನಮ್ಮವ್ವಾ…..! ಯಾರೇನ್ಮಾಮಾಡಿದ್ರ್ಯೋ ನನಕೂಸಿಗೆ… ಅವರ್ವಂಸ ನಿರ್ವಂಸಾಗಲಿ… ಅವರ್ಮನಿ ಕಸಾಗುಡಿಸಿ ಹಾಳಾಗಿ ಹೋಗಲಿ!” ಎಂದು ಲಟಿಕೆ ಮುರಿಮುರಿದ ತಾಯಿ ಭೀಮವ್ವ… ಹಾಡಿ ಬೋರಾಡಿ ಅಳಹತ್ತಿದಳು. ಹನಮವ್ವನಂತೂ ಎದೆಯೆದೆ ಬಡಿದುಕೊಂಡಿದ್ದಳು.

ಮುಗಿಲು ಮುಟ್ಟಿದ ಆಕ್ರಂದನಕ್ಕೆ ಸ್ಪಂದಿಸಿದ ಕಾರ್ಮೋಡಗಳು… ಅಶ್ರುತರ್ಪಣ ಗೈಯಹತ್ತಿದವು. ನಕ್ಷತ್ರಗಳೂ ಮರುಗಿ ಮಂಕಾಗಿದ್ದವು. ರೆಸಾಟ್ರ್ಸಿನ ಬೆತ್ತಲೆ ಕಟ್ಟಡಗಳು ಮಾತ್ರ ನೆರೆದವರ ರೋಧನಕ್ಕೆ ಪ್ರತಿಯಾಗಿ ಅಟ್ಟಹಾಸಗೈದಂತಿದ್ದವು! ಹಣಬಲ ಹುಚ್ಚೆದ್ದು ಕುಣಿದಂತಿತ್ತು!

ಉದುರುದುರು ಹನಿಗಳಿಂದ ತೋ…ಯಿ…ಸಿ…ಕೊಂ…ಡೇ… ನಿಂತಿದ್ದ ಪೊಲೀಸರಿಂದ ಪ್ರಾ…ಮಾ…ಣಿ…ಕ ತ…ನಿ…ಖೆ… ಆಗ ಪ್ರಾರಂಭವಾಯಿತು…!!

*****

‘ಇದೊಂದು ನೈಜ ಘಟನಾಧಾರಿತ ಕತೆ; ಇದಕ್ಕೆ ದಯವಿಟ್ಟು ಮುಕ್ತಾಯ ಸೂಚಿಸಲಾದೀತೆ… ನನಗಂತೂ ಸಾಧ್ಯವಾಗುತ್ತಿಲ್ಲ… ಸೂಕ್ತ ತಲೆಬರಹವೂ ಹೊಳೆಯುತ್ತಿಲ್ಲ… ಪ್ಲೀಜ’ ಎಂದು ಅವುಗಳ ಬಗ್ಗೆ ಮೂರು ಗಂಟೆ ಕಾಲ ಮಾತಾಡಿ ಲಕೋಟಿಯೊಂದನ್ನು ತನ್ನ ಆತ್ಮೀಯ ವಿಮರ್ಶಕ ಮಿತ್ರನಿಗೆ ಕೊಟ್ಟು ಹೋಗಿದ್ದ ಕತೆಗಾರ ಪೊಲೀಸಪೇದೆ ಗೋವಿಂದರಾಜ. ಆ ಒಂದು ಕತೆಯನ್ನು ಕಥಾ ವಿಮರ್ಶಕ ಅದೆಷ್ಟು ರಾತ್ರಿ ಹೀಗೆಯೆ ಓದಿ ಓದಿ ನಿದ್ದೆಗೆಟ್ಟಿದ್ದನೋ ಏನೊ!

ಮುಂದೆ; ಆ ಪೇದೆ ಮಾತ್ರ ತನ್ನ ಕತೆಗೆ ಸಂಬಂಧಿಸಿ ವಿಮರ್ಶಕನಿಂದ ಯಾವುದೇ ರೀತಿಯ ಅಭಿಪ್ರಾಯಕ್ಕೂ ಕಾಯದೆ ಕೆಲವೆ ದಿನಗಳಲ್ಲಿ… ಕರ್ತವ್ಯ ನಿವೃತ್ತಿ ಪೂರ್ವ ಹೃದಯಾಘಾತದ ಪರಿಣಾಮ ಸಂಸಾರದಿಂದ… ಶಾಶ್ವತವಾಗಿ ನಿವೃತ್ತಿ ಹೊಂದಿದ್ದ.

ಬೆಳಗಿನ ಏಳೂವರೆ. ಅದೆ ತಾನೆ ವಾಕಿಂಗ್ ಮುಗಿಸಿ ಬಂದ ವಿಮರ್ಶಕ ಮೆಟ್ಟಲೇರಿ ಪಡಸಾಲೆಯ ಆರಾಮಾಸನದಲ್ಲಿ ಒರಗಿದ. ಕಣ್ಮುಚ್ಚಿ ಎಳೆದ ಉಸಿರು ಬಿಟ್ಟು ಕತ್ತಲ್ಲಾಡಿಸಿದ. ಮತ್ತೆ ನಿ…ದಾ…ನ ಕಣ್ಬಿಟ್ಟ. ಅದೇ ರೂಢಿಗತ ನಿಶ್ಯಬ್ದ ಬೀಭತ್ಸ ಪರಿಸರ. ಅದರಲ್ಲೊಂದು ಮರ. ಅದರ ಬುಡದಲ್ಲಿ ಕಸದ ತೊಟ್ಟಿ. ಅದರೊಟ್ಟಿಗಿನ ಕೊಳಚೆಯಲ್ಲಿ ಓಡಾಡಿಕೊಂಡಿದ್ದ ಮಾಮೂಲಿ ಹಂದಿಗಳು. ಕಪ್ಪು-ಕಂದಿನದು ‘ತಾಯಿಹಂದಿ’, ಕಪ್ಪು-ಬಿಳುಪಿನದು ‘ತಂದೆಹಂದಿ’. ಉಳಿದ ಏಳೂ ಮಕ್ಕಳೆ! ಅವುಗಳ ಮೈಮೇಲೂ ಅಂಗೈಯಗಲದ ಕರಿ-ಬಿಳಿ-ಕಂದು ಮಚ್ಚೆ.

‘ತಂದೆಹಂದಿ’ ತನ್ನದೇ ‘ಮಗಳುಹಂದಿ’ಯ ಜೊತೆ ಅದರ ಉಪೇಕ್ಷೆಗೂ ಮೀರಿ ಮಿಡುಕಾಟದಲ್ಲಿತ್ತು. ಆದರೆ ಅದು ‘ಕಿರ್ರ್‍ಪರ್ರ್… ಚಿರ್ರ್…ಪರ್ರ್…’ ಚಿರಾಡಿಸುತ್ತ ಓಡಾಡುತ್ತಲಿತ್ತು. ಅತ್ತ, ಮತ್ತೊಂದು ಅಪ್ರಾಪ್ತ ಹೆಣ್ಣುಹಂದಿ ಬಹುತೇಕ ಇನ್ನೊಂದು ‘ಅಣ್ಣಹಂದಿ’ಯ ಜೊತೆ ಅನುಭವಿಸುತ್ತಿದ್ದುದೂ ಅದನ್ನೇ!
ಯಾವುದು ಏನಾದರೇನು?… ತನ್ನದೇ ಬದುಕಿಗಾಗಿ ಕಿತ್ತಾಡುತ್ತ ಮೂಸಾಟದಲ್ಲಿತ್ತು… ‘ತಾಯಿಹಂದಿ’

ಇತ್ತ, ರೆಕ್ಕೆ ಮುರಿದ ಹಕ್ಕಿಯಂತೆ ಡೋಲಾಯಮಾನವಾಗಿ ತೂರಿಬಂದ ದಿನಪತ್ರಿಕೆ ಆತನ ಪಾದಗಳನ್ನವುಚಿ; ಕೈ ಸೇರಿತು. ಕನ್ನಡಕ ಕಣ್ಣಿಗೇರಿ ವೃತ್ತಾಂತಗಳನ್ನು ಇಮ್ಮಡಿಸಿತು…. ಮಖ ಪುಟದ ಬಾಟಮ್ ಸ್ಪ್ರೆಡ್‍ನಲ್ಲಿಯ ‘ತಂದೆಯಿಂದಲೇ ಮಗಳಮೇಲೆ ಅತ್ಯಾಚಾರ’ ಎಂಬ ಕಹಿಸುದ್ದಿ ಆತನ ಮುಖ ಕಿವುಚಿಸಿತು.

ಆ ಅಪೂರ್ಣ ಕತೆಯನ್ನು ಮುಂದುವರೆಸಲು ಹೋಗಿ… ಮತ್ತೆ ಬೇಡವೆನಿಸಿ… ಕೊನೆಗೂ ಏನನ್ನೊ ಬರೆದಾದ ಮೇಲೆ ಚನ್ನಾಗಿ ಹೊಡೆದು ಹಾಕಲ್ಪಟ್ಟಿದ್ದ ಗೋವಿಂದರಾಜನ ಬರಹವನ್ನು ಸಂಶೋಧನಾತ್ಮಕ ರೀತಿಯಲ್ಲಿ ವಿಮರ್ಶಕ ಕಷ್ಟಪಟ್ಟು ಓದಿದ್ದ ಆ ಏಳೆಂಟು ಸಾಲು……

‘ಪ್ರಸ್ತುತ ಪ್ರಕರಣದ ತನಿಖೆಯಲ್ಲಿ ನಾನು ಕೊನೆಯವರೆಗೂ ಕುರುಡಾಗಿ, ಕಿವುಡಾಗಿ ಇದ್ದೂ ಸತ್ತಂತಿದ್ದುದು ಅನಿವಾರ್ಯವಾಗಿತ್ತು. ಎಮ್ಮೆಲ್ಲೆ, ಕಾರ್ಪೊರೇಟರ್ ಅವರ ತಲಾ ಕುಲಪುತ್ರರು ಹಾಗೂ ದಡೂತೆಪ್ಪನ ಕಿರಿಯ ಸೋದರ ಅಂದರೆ… ಗೌರಿಯ ಚಿಕ್ಕಪ್ಪ ದುರ್ಗೇಶ (ದುರ್ಗಪ್ಪ)ನೂ ಸೇರಿದಂತೆ ಮೂವರೂ ಗೌರಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ನಿಜಾಂಶವನ್ನು ರಾಜಕೀಯ ಪ್ರಭಾವದಲ್ಲಿ ಅಡಗಿಸಿರದಿದ್ದರೆ, ಪ್ರಸ್ತುತ ಕೇಸಿಗೆ ಸಂಬಂಧಪಟ್ಟ ಎಸ್ಪೀ ಸಾಹೇಬರು ಈ ಲೋಕದಿಂದಲೇ ಎತ್ತಂಗಡಿಯಾಗಿ ಬಿಡುತ್ತಿದ್ದರು! ಒಟ್ಟಾರೆ, ಇಂಥ ಅಧಿಕಾರಿ ವರ್ಗ ಮತ್ತು ಸರಕಾರ ಸಮಬಲವಾಗುತ್ತ ನಡೆದರೆ ಪ್ರಜಾಪ್ರಭುತ್ವ ಗೋ..ೀ..ೀ..ವಿಂದ!’ ಎಂಬ ಸಂಗತಿ ವಿಮರ್ಶಕನ ಹೃದಯ ಹಿಂಡಿತು!

ಮತ್ತೆ ದೃಷ್ಟಿ ಅತ್ತ ಹರಿಯಿತು… ಅದೇ ‘ತಂದೆಹಂದಿ’ ‘ಮಗಳುಹಂದಿ’ಯ ಮೇಲೆ ಲೈಂಗಿಕ ಗೆಲುವಿನ ಉನ್ಮಾದದಲ್ಲಿದ್ದಂತೆ ತೋರಿತು. ಅದು; ಅದಕ್ಕೆ ಪ್ರಕೃತಿದತ್ತ! ಹಾಗಾದರೆ… ಇದು?? ‘ಇವನೂ ಹಾಗೆಯೇ ಭಾವಿಸಿರಬಹುದೇ!?’

ತನಗರಿಯದಂತೆ ತೋರು ಬೆರಳು ಆ ಸುದ್ದಿಯ ಅಚ್ಚಿನ ಭಾಗವನ್ನು ಪದೇಪದೇ ಕುಕ್ಕಿತು. ಆ ನಿಕೃಷ್ಟ ಸಾಮಾಜಿಕನ ಬಗ್ಗೆ ರೋಷ ಉಕ್ಕಿತ್ತು. ಹೀಗೆಯೇ, ಇದೇ ‘ಇವನು’ಗಳ ಬಹೂದ್ಭವವಾಗುತ್ತಾ ನಡೆದರೆ… ಅವುಗಳಿಗೂ ‘ಇವನು’ಗಳಿಗೂ ಇರುವ ವ್ಯತ್ಯಾಸ??? ವಿಮರ್ಶಕನ ತಲೆ ಗಿರ್ರೆಂದಿತ್ತು. ತಲೆತಲಾಂತರದ ಸಾಮಾಜಿಕ ವ್ಯವಸ್ಥೆ ತಳಮಳಿಸಿತ್ತು.
ಆತನ ಗಮನ ಮಾತ್ರ ಆ ಪರಿಸರದಿಂದಾಚೆ ಸರಿದಿರಲಿಲ್ಲ… ಅದೇ ಕ್ಷಣ! ಎತ್ತಿಂದಲೋ ಓಡಿ ಬಂದ ಮೂರು ನಾಯಿಗಳು ಇನ್ನೊಂದರ ಮೇಲೆ ಕಾಮಾತುರದಿಂದ ಆಕ್ರಮಿಸಲೆತ್ನಿಸುತ್ತಿರುವ ದೃಶ್ಯ ‘ಸ್ಸೀ’ ಎನಿಸಿ ಗೌರಿಯ ಮೇಲಾದ ದೌರ್ಜನ್ಯ ಕುರಿತಾದ ಮನಸ್ಸಿನ ಚಿಂತೆಯ ಚಿತೆಗೆ ಕುಮ್ಮಕ್ಕು ಎನ್ನುವಂತಿತ್ತು!

ಗೋವಿಂದರಾಜ ತನ್ನ ಕತೆಯ ಜೊತೆಗೇ ಇರಿಸಿದ್ದ ನ್ಯೂಜ ಪೇಪರ್ ಕಟಿಂಗಿನ ನೆನಪಾಗಿ ಅದನ್ನೂ ತೆರೆದೊಮ್ಮೆ ನೋಡಿದ… ‘ಯುವತಿಯ ಮೇಲೆ ಗೂಳಿಯ ದಾಳಿ: ಸಾವು… ಓರ್ವ ಕಟ್ಟಡ ವಾಚಮನ್ನನ ಮಗಳಾದ ಗೌರಿ(22) ಎಂಬಾಕೆ ನಗರದ ಗಾರ್ಮೆಂಟ್ ಫ್ಯಾಕ್ಟರಿಯೊಂದರಲ್ಲಿ ಕೆಲಸಕ್ಕಿದ್ದು; ಆಕೆ ತಡರಾತ್ರಿ ನಿರ್ಜನ ಪ್ರದೇಶ ಗೋಮಾಳ ಮಾರ್ಗವಾಗಿ ಶೆಡ್ಡಿಗೆ ನಡೆದುಕೊಂಡೇ ಹೋಗುತ್ತಿದ್ದಾಗ ಗೂಳಿಯೊಂದರ ಆಕಸ್ಮಿಕ ದಾಳಿಗೆ ಸಿಲುಕಿ ಅಸುನೀಗಿದ್ದಾಳೆಂಬುದು ತನಿಖೆಯಿಂದ ತಿಳಿದುಬಂದಿದೆ’ ಎಂಬ ಸಂಗತಿಯಿಂದ ಮತ್ತೆಮತ್ತೆ ಗರ ಬಡಿದಂತಾಗಿ ಇಂಥ ಎಷ್ಟೋ ಅಪೂರ್ಣ ಕತೆಗಳಿಗೆ ಮುಕ್ತಾಯ ಒದಗಿಸುವಲ್ಲಿ ಮುಂದಣ ಅದೆಷ್ಟೋ ಶತಮಾನಗಳು ಕಳೆದರೂ ಸಾಧ್ಯವಾದೀತೆ?! ಎಂದುಕೊಂಡ ವಿಮರ್ಶಕ.

ಡಾ. ದೇವದಾಸ ಕಳಸದ:
ಇಪ್ಪತ್ತೊಂದು ವರ್ಷಗಳ ಸುಮಾರಿಗೆ ಧಾರವಾಡದಲ್ಲಿ ನಮ್ಮ ಮನೆ ತಯಾರಾಗುತ್ತಿರುವ ಸಂದರ್ಭದಲ್ಲಿ ದ್ಯಾಮಣ್ಣ ಎಂಬ ಗೌಂಡಿ ಮೇಸ್ತ್ರಿ ಹೇಳಿದ ಹೃದಯ ವಿದ್ರಾವಕ ವಾಸ್ತವ ಘಟನೆಯನ್ನಾಧರಿಸಿ ಪ್ರಸ್ತುತ ಕಥೆಯನ್ನು ರಚಿಸಲಾಗಿದೆ. “ನಮ್ಮ ಹಳ್ಳಿ ಊರು ನಮಗ ಪಾಡ… ಯಾತಕ್ಕವ್ವ ಹುಬ್ಬಳ್ಳಿ ಶಹರ… (ಬೆಂಗಳೂರು ಶಹರ)” ಗೀತೆಯಂತೆ ಜನಪದರ ನಂಬಿಕೆಯನ್ನು ಧಿಕ್ಕರಿಸಿ ಬೆಂಗಳೂರಿನ ಥಳಕು-ಬೆಳಕಿಗೆ ಮಾರು ಹೋಗಿ ಇಡೀ ಜೀವನವನ್ನೆ ಸರ್ವನಾಶಮಾಡಿಕೊಂಡ ಒಂದು ಕುಟುಂಬದ ಚಿತ್ರಣವನ್ನು ಕತೆ ಹೊತ್ತು ನಿಂತಿದೆ. ದೇವರು ಕೊಟ್ಟಷ್ಟರಲ್ಲೆ ಖುಶಿಯಿಂದ ಬದುಕುವುದೆ ಜೀವನ; ಅದು ಬಿಟ್ಟು ಹೆಚ್ಚಿನದಕ್ಕೆ ಆಸೆ ಮಾಡಿದರೆ ಪರಿಣಾಮ ವಿಪರೀತಿಸದೆ ಬಿಡದು ಎಂಬ ಸಾರ್ವಕಾಲಿಕ ಸತ್ಯ ಸಂದೇಶವನ್ನು ಕತೆ ಹಲವಾರು ನಿದರ್ಶನಗಳ ಮೂಲಕ ಬಿಂಬಿಸುವುದರಿಂದ ಇದು ನನ್ನ ನೆಚ್ಚಿನ ಕತೆಯಾಗಿದೆ.
ಜೀವನದ ಸರ್ವತೋಮುಖ ಅಭಿವೃದ್ಧಿಗೆ ಪ್ರಯತ್ನ ಕೂಡದು ಎಂದು ಹೇಳುತ್ತಿಲ್ಲ… ಆದರೆ ಅದಕ್ಕೆ ಮುಖ್ಯವಾಗಿ ಉತ್ತಮ ಸಂಸ್ಕಾರ, ಶಿಕ್ಷಣ, ಮಾವನವೀಯತೆ, ಜೀವನ ಶೈಲಿ, ಪ್ರಾಮಾಣಿಕ ಕರ್ತವ್ಯ ಪ್ರಜ್ಞೆ, ನಿಸ್ವಾರ್ಥ ಸೇವಾ ಭಾವ ಜೊತೆಗೆ ದೈವಬಲವನ್ನೂ ರೂಢಿಸಿಕೊಳ್ಳುವುದು ಅಗತ್ಯ ಎಂಬ ಸಂದೇಶವನ್ನೂ ಪರ್ಯಾಯವಾಗಿ ಸೂಚಿಸುವಲ್ಲಿ ಕತೆ ಪ್ರಯತ್ನಿಸಿದೆ ಎಂದು ಹೇಳಬಹುದು.
ಓರ್ವ ಕಥಾ ವಿಮರ್ಶಕ ತನ್ನ ಕತೆಗಾರ ಮಿತ್ರ ಪೊಲೀಸ ಪೇದೆ ಗೋವಿಂದರಾಜ ಬರೆದ ಆ ಒಂದು ಅಪೂರ್ಣ ಕತೆಯನ್ನು ಓದುವುದರ ಮೂಲಕ ಹಾಗೂ ತನಗಾದ ನಿದರ್ಶನ ಪರ ಅನುಭವಗಳನ್ನು ಕಥಾ ವಸ್ತುವಿಗೆ ತಾಳೆ ಹಾಕಿ ಕೊಡುವ ತಂತ್ರ ನನ್ನ ಕಲ್ಪನೆಯ ಹೆಮ್ಮೆಯೆಂದೆ ಹೇಳಬಹುದು. ಕಥೆಯ ಸರ್ವಾಂಗೀಣ ಯಶಸ್ಸಿಗೆ ಕೌಟುಂಬಿಕ, ಸಾಮಾಜಿಕ ಹಾಗೂ ರಾಜಕೀಯ ಕೆಲವು ಸಾರ್ವಕಾಲಿಕವೆನ್ನಲಾದ ಆಕ್ರಮಗಳನ್ನು ಹೊರಹಾಕುವ ಮೂಲಕ ಬಳಸಿಕೊಳ್ಳಲಾದ ಕ್ರಮಗಳು ಕತೆಗೆ ಪುಷ್ಠಿದಾಯಕ ಎನ್ನುವಲ್ಲಿ ನನಗೆ ಸಮಾಧಾನದ ಸಂಗತಿ.
ಪ್ರಸ್ತುತ ಕತೆಯಲ್ಲಿ ಕಾಮ ಪಿಪಾಸು ದುರ್ಗಪ್ಪ ಎಂಬ ಅಮಾನುಷ ತನ್ನಿಬ್ಬರು ಸಹವರ್ತಿಗಳೊಂದಿಗೆ ತನ್ನ ಅಣ್ಣನ ಮಗಳು ಗೌರಿಯ ಮೇಲೆಯೆ ಸಾಮೂಹಿಕ ಅತ್ಯಾಚಾರವೆಸಗಿ ಅವಳ ಸಾವಿಗೂ ಕಾರಣವಾಗುವುದು ಸಾಮಾಜಿಕ ಪಿಡುಗಿನ ಬಹು ದೊಡ್ಡ ಪಾಶವೀಯ ಅಂಶ. ಆದರೂ ಆ ಮೂವರು ಯಾವದೇ ಕಾನೂನು ಬಾಧಕರಾಗದೆ ಉಳಿಯುವದೇ ಕಥಾವಿಸ್ಮಯ! ಈ ರೀತಿಯ ಅದೆಷ್ಟೋ ಜೀವಂತ ಪ್ರಕರಣಗಳಿಗೆ ಪರಿಹಾರ ಹುಡುಕಿದಷ್ಟೂ ರಕ್ತ ಬೀಜಾಸುರರಂತೆ ಬೆಳೆಯುತ್ತಲೇ ಇರುವ ಘಟನೆಗಳ ಮಧ್ಯೆ ಹುಟ್ಟಿಕೊಂಡ ಕತೆ “ಮುಕ್ತಾಯ ಬೇಡದ ಕತೆಗಳು”.