ನಗರ ಜಾಗರಣೆ
ನಗರ ಬೆಳೆಯುತಲಿದೆ
ಉಕ್ಕಿ ಹರಿದ ಮೋರಿಯಂತೆ,
ಸಿಕ್ಕ ಸಂದುಗಳಲಿ ಜಾರುತಾ
ದುರ್ನಾತದೊಂದಿಗೆ
ಜಾಗರಣೆ ಖಾತ್ರಿಯಾಗಿ!
ಮುಚ್ಚದ ಕಣ್ಣುಗಳೆದುರು
ಮೆಚ್ಚುಗೆಯಾಗದ ಮುಖಗಳು;
ಮನದ ಖಗ-ಮಿಗಗಳು
ಮಾಯಾಮೃಗಗಳಂತೆ
ಮರೆಯಾಗುತಿವೆ.
ಕಾಲು ಚಾಚಿ
ಬಿದ್ದಿಹ ರಸ್ತೆಗಳಿಗೆ
ತಡೆಒಡ್ಡುವ ಗೋಡೆಗಳು,
ಬಣ್ಣ ಮಾಸುತಾ
ಅಪರಿಚಿತವಾಗುತಿವೆ.
ಇಕ್ಕೆಲದ ಅಂಗಡಿಗಳ
ಎಗ್ಗಿಲ್ಲದ ವ್ಯಾಪಾರ,
ಕುರುಡನ ತಟ್ಟೆಯ
ಮೂರು ಕಾಸುಗಳನ್ನು
ಅಣಕಿಸುತಿದೆ!
ನಿರಂಜನ ಕೇಶವ ನಾಯಕ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಗಡೆ ಗ್ರಾಮದವರು. ಪ್ರಸ್ತುತ ಮಂಗಳೂರಿನಲ್ಲಿ ವಾಸ.
ಸರ್ಕಾರಿ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಕ್ಕಳ ಕಥೆಗಳು ಅವ್ವ ಪುಸ್ತಕಾಲಯ ಹಾಗೂ ಕರ್ನಾಟಕ ರಾಜ್ಯ ಮಕ್ಕಳು ಸಾಹಿತ್ಯ ಪರಿಷತ್ತು ಶಿವಮೊಗ್ಗ ಇವರ ಸಂಪಾದಿತ ಪುಸ್ತಕಗಳಲ್ಲಿ ಪ್ರಕಟಗೊಂಡಿವೆ ಹಾಗೂ ಕೆಲವು ಕವನಗಳು ಅನೇಕ ಆನ್ಲೈನ್ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

