“ನಿನಗೆ ನಿಜವಾಗಲೂ ಮದುವೆ, ಕುಟುಂಬ, ಗಂಡು, ಹೆಣ್ಣಿನ ಸಂಬಂಧದ ಪಾವಿತ್ರ್ಯ, ಇದರಲ್ಲೆಲ್ಲ ಇನ್ನೂ ನಂಬಿಕೆ ಉಳಿದಿದೆಯಾ? ನಂಬಿಕೆ ಇಲ್ಲದಿದ್ದರೂ, ಅಭ್ಯಾಸ ಬಲದಿಂದ, ಸನ್ನಿವೇಶದ ಒತ್ತಡಗಳಿಂದ ಇದನ್ನೆಲ್ಲ ಮಾಡಿದ್ದೀಯಾ?” ನನಗೆ ಪ್ರಶ್ನೆ, ಅದನ್ನು ಕೇಳಿದ ರೀತಿ, ಸಂದರ್ಭದಿಂದ ಶಾಕ್ ಆಯಿತು. ಇವೆಲ್ಲ ಸೆಮಿನಾರಿನಲ್ಲೋ, ಸಂಸ್ಕೃತಿ ಚಿಂತನೆಯ ಗೋಷ್ಠಿಯಲ್ಲೋ ಕೇಳುವ ಪ್ರಶ್ನೆಗಳು. ಪುಸ್ತಕದಲ್ಲಿ ಓದಿ-ಬರೆಯಬಹುದಾದ ಪ್ರಶ್ನೆಗಳು. ನೇರವಾಗಿ ನನಗೆ ಕೇಳುತ್ತಿದ್ದಾನೆ. ಅದೂ ಮಗನ ಮದುವೆಯ ನಿಶ್ಚಿತಾರ್ಥದ ದಿವಸ. ಎಲ್ಲ ಅತಿಥಿಗಳು ಊಟ ಮುಗಿಸಿ ಇನ್ನೂ ತಾಂಬೂಲ ಜಗಿಯುತ್ತಿರುವಾಗ.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”
ಮಗನಿಗೆ ಮದುವೆ ಗೊತ್ತಾಯಿತು. ಬೀಗರು ಕೂಡ ಬೆಂಗಳೂರಲ್ಲೇ ಇದ್ದುದರಿಂದ ಮನೆ ದೇವರ ದೇವಸ್ಥಾನಕ್ಕೆ ಹೋಗಿ ಫಲತಾಂಬೂಲವನ್ನು ಸಮರ್ಪಿಸಿ, ಪ್ರಾರ್ಥಿಸಿ, ಸನ್ನಿಧಿಯಲ್ಲಿ ಪ್ರಸಾದ ವಿನಿಮಯ ಮಾಡಿಕೊಂಡ ನಂತರ ಬಂಧು ಮಿತ್ರರಿಗೆಲ್ಲ ಸುದ್ದಿ ತಿಳಿಸಿದೆವು.
ಮದುವೆಯೇನೋ ಗೊತ್ತಾಯಿತು, ದೇವರ ಮುಂದೆ ಒಪ್ಪಂದವೂ ಆಯಿತು. ಆದರೆ ಸಂಬಂಧಿಕರ, ಹಿತೈಶಿಗಳ ಮುಂದೆ ನಿಶ್ಚಿತಾರ್ಥ ಆಗದೇ ಹೋದರೆ, ಒಪ್ಪಂದ-ಲಗ್ನ ಹೇಗೆ ಅಧಿಕೃತವಾಗುತ್ತದೆ ಎಂಬ ಪ್ರಶ್ನೆ, ಅನುಮಾನ ಕಾಡಿತು.
ಮಗ-ಭಾವಿ ಸೊಸೆ ನಮ್ಮ ಅನುಮಾನವನ್ನು ಗೇಲಿ ಮಾಡಿದರು. ಒಮ್ಮೆ ಒಪ್ಪಿದ ಮೇಲೆ ಆಯಿತು. ನಿಶ್ಚಿತಾರ್ಥ ಅನಗತ್ಯ ಎಂದು. ಎರಡು ಮೂರು ವರ್ಷದ ನಂತರ ಮದುವೆ ಆಗ್ತೀನಿ. ಸದ್ಯಕ್ಕೆ ಹಾಯಾಗಿರಲು ಬಿಡಿ ಎಂದು ನಗೆಸಾರ ಮಾಡಿದರು.
ಈಗಿನ ಕಾಲದ ಮಕ್ಕಳು ಅಂದರೇ ಭಯ. ವಿದ್ಯಾಭ್ಯಾಸ, ಮದುವೆ, ಮದುವೆ ಆಗುವ ರೀತಿ, ಮದುವೆ ಆದರೂ ಮಕ್ಕಳನ್ನು ಮಾಡಿಕೊಳ್ಳದಿರುವುದು, ಒಂದು ಮಗುವಿಗೂ ಇನ್ನೊಂದು ಮಗುವಿಗೂ ನಡುವೆ ದಶಕಗಳ ಅಂತರ, ಲಗ್ನಪತ್ರಿಕೆ ಆದ ಕೆಲವೇ ತಿಂಗಳುಗಳಲ್ಲಿ breakup ಆಗುವುದು, ಇದನ್ನೆಲ್ಲ ಕಂಡಿದ್ದ, ಕಾಣುತ್ತಿದ್ದ ನಮಗೆ ಭಯ. ನಮಗೂ ಮಕ್ಕಳಿಗೂ ತಾಳೆಯಾಗಲಿಲ್ಲ. ಮತ್ತೆ ಮತ್ತೆ ಚರ್ಚೆ, ಮನಕ್ಲೇಶ.
ಮಗ-ಸೊಸೆಗೆ ಭಾರತಕ್ಕೆ ಬರುವ ಅನುಕೂಲವಿರಲಿಲ್ಲ. ರಜಾ ಇಲ್ಲ. ವೀಸಾ ತೊಂದರೆ. ಉದ್ಯೋಗದ ಭದ್ರತೆಯ ಸಮಸ್ಯೆ. ನಾನಾ ರೀತಿಯ ಸವಾಲುಗಳು. ಬೀಗರಿಗೆ ಅಮೆರಿಕದಲ್ಲಿ ಬಂಧುಗಳಿದ್ದರು, ವ್ಯವಹಾರವೂ ಇತ್ತು. ನಮಗೂ ಕೂಡ ಒಂದಷ್ಟು ಸ್ನೇಹಿತರು, ಬಂಧುಗಳು. ಹಾಗಾಗಿ ನಿಶ್ಚಿತಾರ್ಥ ಸಮಾರಂಭವನ್ನು ಅಮೆರಿಕದಲ್ಲೇ ಮಾಡಬೇಕೆಂದು ನಿರ್ಧರಿಸಿಯೂ ಆಯಿತು.
ಸಮಾರಂಭ ನಿಗದಿ ಆಯಿತು. ಬೀಗರ ಬಂಧುಗಳ ಮನೆ ತುಂಬಾ ದೊಡ್ಡದಾಗಿತ್ತು. ಬೀಗರು ಮತ್ತು ಅವರ ಬಂಧು, ಜಂಟಿಯಾಗಿ ಕಟ್ಟಿದ್ದ ಮನೆ ಅದೆಂದು ತಿಳಿಯಿತು. ಮನೆಯಲ್ಲೇ ಸಮಾರಂಭ ನಡೆಯಿತು. ಸಾಕಷ್ಟು ಜನ ಅತಿಥಿಗಳು ಬಂದಿದ್ದರು. ಆಧುನಿಕತೆ, ಸಂಪ್ರದಾಯ ಎರಡೂ ಹದವಾಗಿ ಬೆರೆತ ಲಯದಲ್ಲಿ ನಿಶ್ಚಿತಾರ್ಥವಾಯಿತು. ಅಮೆರಿಕನ್ ಮಹಿಳಾ ಅಡುಗೆ ಕಂಟ್ರಾಕ್ಟರ್ ಒಬ್ಬಳು ಅಪ್ಪಟ ಮತ್ತು ರುಚಿಯಾದ ದಕ್ಷಿಣ ಭಾರತೀಯ ಅಡುಗೆ ಮಾಡಿಸಿ, ಬಡಿಸಿದ್ದು ಒಂದು ವಿಶೇಷ. ಅವಳ ಸಿಬ್ಬಂದಿಯೆಲ್ಲ ಕೊರಿಯಾ ಮೂಲದವರು.
ನಿಶ್ಚಿತಾರ್ಥಕ್ಕೆ ನಾನು ಆಹ್ವಾನಿಸಿದ್ದವರಲ್ಲಿ ಹಿರಿಯ ಮಿತ್ರ ನಾಗರಾಜ್ ಕೂಡ ಒಬ್ಬರು. ಬೆಂಗಳೂರಿನ ತುಂಬಾ ಬಂಧುಗಳಿದ್ದವರು. ಅಮೆರಿಕದಲ್ಲೂ ನಾಲ್ಕು ದಶಕಗಳಿಂದ ಇದ್ದು, ಉನ್ನತ ತಾಂತ್ರಿಕ ಹುದ್ದೆಯಲ್ಲಿದ್ದರು. ಅವರ ತಂದೆ, ಕನ್ನಡದ ಹಿರಿಯ ಪತ್ರಕರ್ತರಾಗಿದ್ದು, ಸಾಹಿತ್ಯ-ಸಂಸ್ಕೃತಿ ವಲಯದ ಒಡನಾಟ ಚೆನ್ನಾಗಿತ್ತು. ನಿಯಮಿತವಾಗಿ ಪುಸ್ತಕ-ಲೇಖನಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದೆವು. ನಾಗರಾಜ್ ಪತ್ನಿ ಕೂಡ ಸ್ನೇಹಶೀಲೆ.
ನಾವು ಹಿಂದೆ ಅಮೆರಿಕೆಗೆ ಹೋದಾಗಲೆಲ್ಲ ಅವರ ಮನೆಗೆ ಹೋಗುತ್ತಿದ್ದೆವು, ಇಲ್ಲ, ಅವರು ನಮ್ಮ ಮಗನ ಮನೆಗೆ ಬರುತ್ತಿದ್ದರು. ಅವರ ಮನೆಯಲ್ಲಿ ಒಂದು ಸಲ ನನ್ನ ಕಥಾ ವಾಚನವೂ ಆಯಿತು.
ನಿಶ್ಚಿತಾರ್ಥದ ಸಮಾರಂಭವೆಲ್ಲ ಮುಗಿಯಿತು. ನಾಗರಾಜ್ ನನ್ನನ್ನು ಒಂದು ಪಕ್ಕಕ್ಕೆ ಕರೆದು ಮನೆಯಿಂದ ಹೊರಗಡೆ ಕರೆದುಕೊಂಡು ಬಂದರು. ಪ್ರಖರ ಬಿಸಿಲಿಗೆ ಲಾನ್ ಹಸಿರು ಮಿಂಚುತ್ತಿತ್ತು. ಬೀಗರ ಬಂಧುಗಳ ಮನೆಯ ಎರಡು ದೊಡ್ಡ ನಾಯಿಗಳು ಲಾನ್ನಲ್ಲಿ ಮೆರೆದಾಡುತ್ತಾ ಜಂಗೀ ಕುಸ್ತಿ ನಡೆಸಿದ್ದವು.
ನಾಗರಾಜ್ ನನ್ನ ಬೆನ್ನು ತಟ್ಟಿ, ಕೈ ಕುಲುಕಿ, ನಿನಗೆ, ಕುಟುಂಬಕ್ಕೆ ಅಭಿನಂದನೆಗಳು. ಒಂದೆರಡು ಪ್ರಶ್ನೆ ಕೇಳಬಹುದಾ ಎಂದು ನನ್ನ ಕಣ್ಣಲ್ಲಿ ಕಣ್ಣಿಟ್ಟು ಕೇಳಿದ.
ಇಷ್ಟು ವರ್ಷಗಳ ಒಡನಾಟದಲ್ಲಿ ಯಾವತ್ತೂ ಹೀಗೆ ಪೀಠಿಕೆ ಹಾಕಿರಲಿಲ್ಲ. ಧ್ವನಿಯಲ್ಲಿ ಕೂಡ ಹಿಂದಿನ, ಎಂದಿನ ಸಲಿಗೆಯಿರಲಿಲ್ಲ. ನಾನು ಉತ್ತರ ಹೇಳುವ ಮೊದಲೇ ನಾಗರಾಜನೇ:
“ನಿನಗೆ ನಿಜವಾಗಲೂ ಮದುವೆ, ಕುಟುಂಬ, ಗಂಡು, ಹೆಣ್ಣಿನ ಸಂಬಂಧದ ಪಾವಿತ್ರ್ಯ, ಇದರಲ್ಲೆಲ್ಲ ಇನ್ನೂ ನಂಬಿಕೆ ಉಳಿದಿದೆಯಾ? ನಂಬಿಕೆ ಇಲ್ಲದಿದ್ದರೂ, ಅಭ್ಯಾಸ ಬಲದಿಂದ, ಸನ್ನಿವೇಶದ ಒತ್ತಡಗಳಿಂದ ಇದನ್ನೆಲ್ಲ ಮಾಡಿದ್ದೀಯಾ?”

ನನಗೆ ಪ್ರಶ್ನೆ, ಅದನ್ನು ಕೇಳಿದ ರೀತಿ, ಸಂದರ್ಭದಿಂದ ಶಾಕ್ ಆಯಿತು. ಇವೆಲ್ಲ ಸೆಮಿನಾರಿನಲ್ಲೋ, ಸಂಸ್ಕೃತಿ ಚಿಂತನೆಯ ಗೋಷ್ಠಿಯಲ್ಲೋ ಕೇಳುವ ಪ್ರಶ್ನೆಗಳು. ಪುಸ್ತಕದಲ್ಲಿ ಓದಿ-ಬರೆಯಬಹುದಾದ ಪ್ರಶ್ನೆಗಳು. ನೇರವಾಗಿ ನನಗೆ ಕೇಳುತ್ತಿದ್ದಾನೆ. ಅದೂ ಮಗನ ಮದುವೆಯ ನಿಶ್ಚಿತಾರ್ಥದ ದಿವಸ. ಎಲ್ಲ ಅತಿಥಿಗಳು ಊಟ ಮುಗಿಸಿ ಇನ್ನೂ ತಾಂಬೂಲ ಜಗಿಯುತ್ತಿರುವಾಗ.
ತಕ್ಷಣ ಏನೂ ಹೇಳಲು ತೋಚದೆ, ನಾನು ನಾಗರಾಜ್ ಮುಖ ನೋಡಿದೆ. ಕುಹಕವಿಲ್ಲ. ಅಷ್ಟೊಂದು ವರ್ಷಗಳಿಂದ ಗೊತ್ತಿರುವ ಆತ್ಮೀಯವಾಗಿರುವ ಮುಖ. ಮೂರು ನಾಲ್ಕು ಕಡೆ ಬೊಕ್ಕೆಗಳಿರುವ ಮುಖ. ಅದೇ ಸಣ್ಣ ತುಟಿ. ನುಣುಪಾಗಿ ಕತ್ತರಿಸಿದ ಮೀಸೆ. ಎಂದಿನಂತೆ ಡಿಸೈನರ್ ಟೀ ಷರ್ಟ್ ಹಾಕಿಕೊಂಡು, ಇನ್ಷರ್ಟ್ ಮಾಡಿದ್ದ. ಅಂಗೈಯಗಲದ ಕಂದು ಬಣ್ಣದ ಬೆಲ್ಟ್. ಸ್ನೇಹಿತ ಯಾವುದೋ ಚಿಂತೆಯಲ್ಲಿರುವಂತೆ ಕಂಡಿತು. ಬೇರೇನೋ ಹೇಳಲು ಈ ಪ್ರಶ್ನೆಗಳ ಪೀಠಿಕೆಯೇ? ಒಂದು ಕ್ಷಣ ಅಯ್ಯೋ ಪಾಪ ಎನ್ನಿಸಿತು.
ನಾಗರಾಜನೇ ಮುಂದುವರೆಸಿದ:
ನಿನಗೇ ಗೊತ್ತು. ನನಗೆ ಇಬ್ಬರು ಹೆಣ್ಣುಮಕ್ಕಳು. ಒಬ್ಬ ಮಗಳಿಗೆ ಓದು ಮುಗಿದು ನಮ್ಮೂರಲ್ಲೇ ಕೆಲಸ ಆಗಿದೆ. ನಮ್ಮ ಮನೆಯಲ್ಲೇ ಆರೇಳು ರೂಮುಗಳಿವೆ. ಎಲ್ಲ ಅನುಕೂಲ ಇದೆ. ಆದರೂ ಬೇರೆ ಮನೆ ಮಾಡಿಕೊಂಡಿದ್ದಾಳೆ. ಟ್ರಿನಿಡಾಡ್ನವನ ಜೊತೆ ಸಂಬಂಧವಿದೆ. ಒಟ್ಟಿಗೇ ಇದ್ದಾರೆ. ಪ್ರವಾಸ ಮಾಡ್ತಾರೆ. ವೃತ್ತಿಯಲ್ಲಿ ಬೆಳವಣಿಗೆಯೂ ಚೆನ್ನಾಗಿದೆ. ನಮಗೇ ಹೆದರಿಕೆ. ಸೂಚ್ಯವಾಗಿ, ಸೂಕ್ಷ್ಮವಾಗಿ ಲಗ್ನದ ಪ್ರಸ್ತಾಪ ಮಾಡಿದರೆ, ರೇಗುವುದಿಲ್ಲ, ಸಮಾಧಾನವಾಗಿಯೇ ಹೇಳುತ್ತಾಳೆ:
ಡ್ಯಾಡಿ, ಈಗ ಮದುವೆ, ಕುಟುಂಬವೆಲ್ಲ redundant, superfluous ಅಲ್ಲವಾ. ನಿನ್ನನ್ನು, ಮಮ್ಮಿಯನ್ನು ನೋಡಿ. ಒಂದೇ ಸೂರಿನಡಿಯಲ್ಲಿ ಇದ್ದೀರಿ ಅನ್ನುವುದನ್ನು ಬಿಟ್ಟರೆ, as good as separated and going far away.
ನಾನು ಅವಳ ಪ್ರಶ್ನೆಗಳಿಗೆ, ವಿಚಾರಗಳಿಗೆ ಪ್ರತಿಭಟಿಸಲಿಲ್ಲ. ತಲೆಮಾರುಗಳ ಅನುಭವದ ಮಾತು ಹೇಳಿದೆ:
ನೀನು ಹೇಳುವುದನ್ನೆಲ್ಲ ಒಪ್ಪುತ್ತೇನೆ ಮಗಳೇ. ಆದರೆ ಹೆಂಗಸರ ದೇಹ, ಆರೋಗ್ಯಕ್ಕೆ ಒಂದು ಗತಿ ಇದೆ, ಒಂದು ಚಕ್ರವಿದೆ. ಒಂದು ಹಂತದ ನಂತರ, ಮಕ್ಕಳಾಗುವುದು ಕಷ್ಟ. ಮಕ್ಕಳಾದರೂ ತಾಯಿಗೂ ಒಳ್ಳೆಯದಲ್ಲ, ಮಕ್ಕಳಿಗೂ ತುಂಬಾ risk.
ಈ ವಿಚಾರಕ್ಕೂ ಮಗಳ ತರ್ಕಬದ್ಧ ಸಮಜಾಯಿಷಿ ಇತ್ತು.
ಎಲ್ಲ ಗಂಡು-ಹೆಣ್ಣು ಸಂಬಂಧಗಳಿಂದಲೂ ಹೆಂಗಸರಿಗೆ ಮಕ್ಕಳಾಗಲೇಬೇಕು ಅಂತ ನಿಯಮವೆಲ್ಲಿದೆ. ಪುರಾಣದ ಕಾಲದಲ್ಲೂ ಎಲ್ಲ ದಂಪತಿಗಳಿಗೂ ಮಕ್ಕಳಾಗುತ್ತಿರಲಿಲ್ಲ. ಅದೂ ಕೂಡ ಅವರಿಬ್ಬರ ದೇಹಗಳ ಪ್ರಕೃತಿ ನಿಯಮವಲ್ಲವೇ? ಆದರೆ ವಂಶಾವಳಿಯ ತುಡುಗತನ ಮುಂದುವರೆಸುವ ಮಹದಾಸೆ. ಋಷಿಗಳನ್ನು, ಸನ್ಯಾಸಿಗಳನ್ನು, ಕಾಡಿನಿಂದ ಕರೆಸಿ, ನಿಯೋಗ ಮಾಡಿಸುತ್ತಿದ್ದರು. In a way polyandry in action. ಮತ್ತೆ ನಾವು ಹಿಂದಿನ ಕಾಲಕ್ಕೇ ಹಿಂತಿರುಗಬೇಕೇ, ಹಿಂತಿರುಗಲು ಸಾಧ್ಯವೇ?
*****
ಪ್ರಶ್ನೆಗಳನ್ನು ಕೇಳಬೇಕು ಅನ್ನುವುದಕ್ಕಿಂತ ಹೆಚ್ಚಾಗಿ ಕೌಟುಂಬಿಕ ಪಡಿಪಾಟಲನ್ನು ತೋಡಿಕೊಳ್ಳಬೇಕೆಂಬ ಹಂಬಲವಿತ್ತು ನಾಗರಾಜ್ಗೆ. ಮಾತಾಡಿದ ಮೇಲೆ ಮುಖದಲ್ಲಿ ನಿರಾಳವಾದ ಭಾವ. ನನ್ನಿಂದ ಏನೂ ಪ್ರತಿಕ್ರಿಯೆ, ಸಮಾಧಾನ ಒತ್ತಾಯಿಸದ ಪ್ರಬುದ್ಧ ಗೆಳೆಯ ಅನಿಸಿತು. ಇನ್ನೊಬ್ಬ ಮಗಳ ವಿಷಯವನ್ನು ಹೆಳಲೇ ಇಲ್ಲವಲ್ಲ ಅಂದುಕೊಳ್ಳುವ ಹೊತ್ತಿಗೆ ಮತ್ತೆ ಅವನೇ ಮುಂದುವರೆಸಿದ. ಈಗ ಮಾತಿನಲ್ಲಿ ಒಂದು ರೀತಿಯ ಲೋಕಾಭಿರಾಮ.
ಈ ನಿಶ್ಚಿತಾರ್ಥದ ಬಗ್ಗೆ ಕೂಡ ಅವಳಿಗೆ ಹೇಳಿದ್ದೀನಿ. ಆದರೆ ಬರ್ತೀನಿ, ತುಂಬಾ ಮೀಟಿಂಗ್ಗಳು ಅಂತಾ ಹೇಳುತ್ತಿದ್ದಳು ಎಂದು ವಾಕ್ಯ ಮುಗಿಸುವ ಮುನ್ನವೇ ಮಗಳು ಮಿಲನಾ ಮಾರ್ಷಲ್ ಕಾರಿನಲ್ಲಿ ಬಂದು ಎದುರಿಗೇ ಇಳಿದುಬಿಟ್ಟಳು. ಆಫೀಸಿನ ವೇಷಭೂಷಣ. ಅವಳು ಏನೋ ಮಾತನಾಡಬೇಕು ಎಂದು ಶುರುಮಾಡುವ ಹೊತ್ತಿಗೆ ಒಳಗಿನಿಂದ ಯಾರೋ ಕೂಗಿದರು. ನಾನು, ನಾಗರಾಜ್, ಮಿಲನಾ, ಮೂವರೂ ಎಲ್ಲರ ಜೊತೆ ಬೆರೆಯಬೇಕಾಯಿತು. ಜನಸಂದಣಿಯ ನಡುವೆ ಮಿಲನಳ ಎದುರಿಗೇ ಇನ್ನೊಬ್ಬ ಮಗಳು ಭಾವನಾಳ ಜೀವನದ ವಿವರಗಳನ್ನು ಕೂಡ ಕೆಲವೇ ವಾಕ್ಯಗಳಲ್ಲಿ ನಾಗರಾಜ್ ಹೇಳಿದ. ಹಾಗೆ ಹೇಳುವಾಗ ಅಪ್ಪ-ಮಗಳು ಇಬ್ಬರಿಗೂ ಯಾವ ರೀತಿಯ ಸಂಕೋಚವೂ ಇರಲಿಲ್ಲ. ವಿವರಗಳಲ್ಲಿ ಅಲ್ಲದಿದ್ದರೂ ಸಾರಾಂಶದಲ್ಲಿ ಭಾವನಾ ಜೀವನಗತಿ ಕೂಡ ಮಿಲನಳ ಜೀವನಗತಿಯ ರೀತಿಯಲ್ಲೇ ಇತ್ತು. ಭಾವನಾಳ ವಿವರಗಳನ್ನು ಹೇಳುವಾಗ ಮಾತ್ರ ನಾಗರಾಜ, ಅವನ ಬಲಗೈಯನ್ನು ನನ್ನ ಬಲ ಅಂಗೈ ಮೇಲಿಟ್ಟು ಮೃದುವಾಗಿ ನೇವರಿಸುತ್ತಿದ್ದ.
ನಾನೇನೂ ಈ ಪ್ರಶ್ನೆಗಳನ್ನು ಬೇರೆ ಯಾರಲ್ಲೂ ಹಂಚಿಕೊಳ್ಳಲು ಹೋಗಲಿಲ್ಲ. ಅವನ ಪ್ರಶ್ನೆಗಳು ಅನುಚಿತ ಎಂದು ಕೂಡ ಹೇಳುವುದಿಲ್ಲ. ನಿಶ್ಚಿತಾರ್ಥ ಸಮಾರಂಭಕ್ಕೆ ಅವನು ಆರುನೂರು ಮೈಲಿ ದೂರದಿಂದ non-stop ಡ್ರೈವ್ ಮಾಡಿಕೊಂಡು ಬಂದಿದ್ದ. ನನ್ನ ಮಗನ ಮದುವೆ ಆದ ನಂತರವೂ ಹತ್ತಾರು ಸಲ ಭೇಟಿ ಮಾಡಿದ್ದೇನೆ. ನೂರಾರು ಪುಸ್ತಕಗಳ ಬಗ್ಗೆ ಅಭಿಪ್ರಾಯ ಬದಲಾಯಿಸಿಕೊಂಡಿದ್ದೇವೆ. ಸಂಸ್ಕೃತಿ ಚಿಂತನೆ ಮುಂದುವರೆಸಿದ್ದೇವೆ. ಮತ್ತೆ ಈ, ಇಂತಹ ವಿಷಯಗಳನ್ನು ಪ್ರಸ್ತಾಪಿಸಿಲ್ಲ.
*****
ನಿಶ್ಚಿತಾರ್ಥಕ್ಕೆ ನನ್ನ ಹೆಂಡತಿಯ ದೊಡ್ಡಕ್ಕನ ಎರಡನೇ ಮಗಳು ಕೂಡ ಬಂದಿದ್ದಳು. ಈಗಾಗಲೇ ಅವಳು ಅಮೆರಿಕನ್ ಪ್ರಜೆಯನ್ನು ಮದುವೆಯಾಗಿ ಪೌರತ್ವ ಕೂಡ ಪಡೆದಿದ್ದಳು. ನಿಶ್ಚಿತಾರ್ಥ ಸಮಾರಂಭಕ್ಕೂ ಕೂಡ Executive ವೇಷದಲ್ಲೇ ಬಂದಿದ್ದಳು. ಕಡು ಕೆಂಪು ಬಣ್ಣದ neck tie ಅವಳ ಬಿಳಿ ಮುಖಕ್ಕೆ, ಬಾಬ್ ಕಟ್ಗೆ ಚೆನ್ನಾಗಿ ಹೊಂದಿಕೊಳ್ಳುತ್ತಿತ್ತು. ಬಾದಾಮಿ ಬಣ್ಣದ ತುಂಬು ತೋಳಿನ ಷರಟನ್ನು ಧರಿಸಿದ್ದ ಆಕೆ, ತೋಳುಗಳನ್ನು ಮೊಣಕೈ ತನಕ ನೀಟಾಗಿ, ಗೆರೆ ಕಾಣದಂತೆ ಮಡಿಸಿದ್ದಳು. ಇಂಗ್ಲಿಷ್ ಭಾಷಾ ಬಳಕೆ ಮಾತ್ರ ಅಪ್ಪಟ ಕನ್ನಡ ಹುಡುಗಿಯದೇ.
ಗೂಗಲ್ನಲ್ಲಿ ಎಲ್ಲ ನೋಡಿದೆ ಮಾವ, ನಿಮ್ಮ ಬೀಗರು ಮತ್ತು ಅವರ ಬಂಧು ಒಟ್ಟಿಗೇ ಸೇರಿ ಮನೆ ಕಟ್ಟಿಕೊಂಡ ಕಾಲಕ್ಕೂ, ಈವತ್ತಿಗೂ ಶೇಕಡ ಆರು ನೂರರಷ್ಟು ಬೆಲೆ ಜಾಸ್ತಿಯಾಗಿದೆ. Really deep appreciation. Many congratulations.
ಅವಳು ಹಾಗೆಂದಾಗ, ತಕ್ಷಣದಲ್ಲಿ ಎಲ್ಲ ಮರೆತು ನನಗೆ ಖುಷಿಯಾಯಿತು. ಎಲ್ಲರಿಗೂ ಕೇಳಿಸುವಂತೆ ಇನ್ನೊಂದು ಸಲಹೆ ನೀಡಿದಳು:
ನೀವು ಕೂಡ ನಿಮ್ಮ ಮಗನ ಮೂಲಕ property ಮಾಡಬೇಕು ಎಂದು ಹೇಳಿ, ನಮ್ಮ ಹತ್ತಿರ ಬಂದ ಮಗ-ಸೊಸೆ ಜೋಡಿಯನ್ನು ಒಟ್ಟಾಗಿ ಸೇರಿಸಿಕೊಂಡು ಆಲಂಗಿಸುತ್ತಾ ನನಗೆ ನೀಡುತ್ತಿದ್ದ ಸಲಹೆಯನ್ನು ಮುಂದುವರೆಸಿ:
“Any plans” ಎಂದು ಕೇಳಿದಳು.

ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.

