ಸಾಮಾಜಿಕ ಶಕ್ತಿಗಳು, ಅದರಲ್ಲೂ ವಿಶೇಷವಾಗಿ ಧರ್ಮಗಳು, ಸ್ತ್ರೀಶೋಷಣೆ ಸಂಪ್ರದಾಯದಲ್ಲೇನೂ ಇರಲಿಲ್ಲ, ಅಂದೂ ಸಹ ಸ್ತ್ರೀಸ್ವಾತಂತ್ರ್ಯವಿತ್ತು, ನಮ್ಮ ಗಾರ್ಗಿ ಮೈತ್ರೇಯಿಯರ ಉದಾಹರಣೆಯನ್ನು ನೋಡಿದರೆ ಸಾಕಲ್ಲ ಎನ್ನುತ್ತಾ ‘ಸುವರ್ಣ ಯುಗ’ವೊಂದನ್ನು ಕಟ್ಟಿ ಹಾದಿ ತಪ್ಪಿಸಲು ಪ್ರಯತ್ನಿಸುತ್ತವೆ. ಹಾಗಿದ್ದರಿಂದಲೇ ಸಂಪ್ರದಾಯವೆನ್ನುವುದು ಆಧುನಿಕದ ಜೊತೆಗೆ ಸುಲಲಿತವಾಗಿ ಬೆರೆತು ಹರಿಯಿತು ಎಂದು ಸಂಪ್ರದಾಯದ ಗೋಡೆಯಲ್ಲಿ ಇರುವ ಘೋರ ಅರೆಕೊರೆಗಳನ್ನು ಮುಚ್ಚಿ ಸುಣ್ಣ ಬಳಿಯುವ ಪ್ರಯತ್ನ ಅದು. ಒಂದಾನೊಂದು ಕಾಲದಲ್ಲಿ ಸಹ ಎಲ್ಲವೂ ಚೆನ್ನಿತ್ತು, ಆ ಚೆನ್ನ ಚೆಲುವು ಇಂದು ಆಧುನಿಕದಲ್ಲಿ ಇನ್ನೊಂದು ರೂಪವನ್ನು ತಳೆದು ನಿಂತಿದೆ ಎಂದು ತಲೆ ಸವರುವ ಹುನ್ನಾರವೇ ಅದು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ನಲವತ್ಮೂರನೆಯ ಬರಹ
ಪುಟ್ಟಣ್ಣ ಕಣಗಾಲರು ‘ಮಲ್ಲಮ್ಮನ ಪವಾಡ’ ಎಂಬ ಚಿತ್ರವೊಂದನ್ನು 1969ರಲ್ಲಿ ತೆರೆಗೆ ತಂದಿದ್ದರು. ಮಲ್ಲಮ್ಮ (ಸರೋಜಾದೇವಿ) ಬಿ ಎ ಓದಿದ ಬುದ್ಧಿವಂತೆ. ಮಹಾ ಸಂಪ್ರದಾಯಸ್ಥೆ ಸಹ. ವಿಭೂತಿಪಟ್ಟೆಯ ನಡುವೆ ಕುಂಕುಮವಿಟ್ಟು, ಸದಾ ಸೆರಗು ಹೊದ್ದ ಈಕೆ ಹುಚ್ಚ ಗಂಡನನ್ನು ಪ್ರೀತಿಯ ಶಕ್ತಿಯಿಂದ ಸರಿ ಮಾಡುತ್ತಾಳೆ; ರೌಡಿ ಮೈದುನನಿಗೆ ಸರಿಯಾದ ಬುದ್ಧಿ ಕಲಿಸುತ್ತಾಳೆ; ಮಾವನ ಕಣ್ಮಣಿಯಾಗಿ ಊರೆಲ್ಲ ಹೊಗಳಲ್ಪಡುತ್ತಾಳೆ. ಇದ್ದರೆ ಹೆಣ್ಮಕ್ಕಳು ಮಲ್ಲಮ್ಮನ ತರವೇ ಇರಬೇಕು ಎನ್ನುವುದು ಚಿತ್ರದ ನೀತಿಪಾಠ. ಆದರೆ ಅದಕ್ಕೆ ಇನ್ನೊಂದು ಮಗ್ಗುಲು ಸಹ ಇತ್ತು. ಹೆಣ್ಮಕ್ಕಳನ್ನು ಓದಲು ಕಳುಹಿಸಿದರೆ ಕೆಟ್ಟು ಕುಲಾಂತರವೆದ್ದು ಹೋಗುತ್ತಾರೆ ಎಂಬ ಆ ಕಾಲದ ಸಂಪ್ರದಾಯಸ್ಥರ ಭಯವನ್ನು ಈ ಚಿತ್ರ ಸ್ವಲ್ಪ ಮಟ್ಟಿಗೆ ಬದಲಾಯಿಸಿದ್ದು ಸಹ ಅಷ್ಟೇ ನಿಜ.
ಬರಬರುತ್ತಾ ಈ ಸಂಪ್ರದಾಯ-ಆಧುನಿಕಗಳ ಅನುಕೂಲಿ ಬೆರಕೆ ಒಂದು ಸ್ತ್ರೀಮೌಲ್ಯವೇ ಆಗಿಹೋಯಿತು. ಪತ್ರಿಕೆಗಳ ಮದುವೆ ಜಾಹೀರಾತುಗಳಲ್ಲಿ ಸಹ ‘ಸಂಪ್ರದಾಯಸ್ಥ ಕುಟುಂಬದ ವಿದ್ಯಾವಂತ ವಧು ಬೇಕಾಗಿದ್ದಾಳೆ’ ಎಂಬ ಬೇಡಿಕೆ ಹೆಚ್ಚುತ್ತಾ ಹೋಯಿತು (ಇಂಗ್ಲಿಷ್ ಪತ್ರಿಕೆಗಳಲ್ಲಿ ಅದು, ‘convent-educated, yet tradition-loving’). ಮತ್ತೆ ನೌಕರಿ? ಮಾಡುತ್ತಿದ್ದರೆ ಒಳ್ಳೆಯದು, ಆದಾಯ ಬರುತ್ತೆ, ಗಂಡನ ಹೊರೆ ಕಮ್ಮಿಯಾಗುತ್ತೆ, ನೋಡಿ!
ಅವಳ ಹೊರೆ ಏನಾದರೂ ಕಮ್ಮಿಯಾಯಿತಾ? ಹೆಚ್ಚಿನಂಶ ದುಪ್ಪಟ್ಟಾಯಿತು ಅಷ್ಟೆ. ಯಾಕೆಂದರೆ ನೌಕರಿ ಮಾಡುವ ಜೊತೆಜೊತೆಗೆ ಅಡಿಗೆ ಮಾಡು, ಗೃಹಕೃತ್ಯ ನಿರ್ವಹಿಸು, ಮನೆಮಂದಿಯನ್ನು ನೋಡಿಕೋ, ರಂಗೋಲಿ ಹಾಕು, ಹೂ ಕಟ್ಟು, ಹಬ್ಬಹರಿ ಆಚರಿಸು, ನೇಮನಿಷ್ಠೆ ಪಾಲಿಸು ಇತ್ಯಾದಿಗಳನ್ನು ಮಾಡಬೇಕು ಎನ್ನುವುದು ಆ ‘ಸಂಪ್ರದಾಯಸ್ಥ’ ಎನ್ನುವ ಪದದ ಗೂಡಾರ್ಥ. ಅಂದರೆ ಅವಳು ಒಳಗೆ ಮತ್ತು ಹೊರಗೆ ದುಡಿದು ನಿಭಾಯಿಸಬಲ್ಲ superwoman ಆಗಿರಬೇಕು! ದುಡಿದು ಸಂಬಳವನ್ನು ಗಂಡನಿಗೋ ಮಾವನಿಗೋ ಅರ್ಪಿಸುವ ಅಸಹಾಯಕ ಮಹಿಳಾಮಣಿಗಳ ಸಂಖ್ಯೆ ಇವತ್ತಿಗೂ ಏನು ಕಮ್ಮಿಯೇ?
ತೊಂಬತ್ತರ ದಶಕದ ಮೊದಲಲ್ಲಿ ಆಗ ತಾನೇ ಭದ್ರವಾದ ನೌಕರಿ ಗಿಟ್ಟಿಸಿಕೊಂಡು ರಾಜಧಾನಿಗೆ ಬಂದು ಮೋಡಗಳ ನಡುವಲ್ಲೇ ನಡೆಯುತ್ತಿದ್ದೆ. ನಾನಿದ್ದ ಹೆಣ್ಮಕ್ಕಳ ವಸತಿಗೃಹದ ಇನ್ನೊಂದು ಬ್ಲಾಕಿನಲ್ಲಿ ಒಬ್ಬ ತುಂಬ ಚೆಂದದ ಇಂಜಿನಿಯರಿಂಗ್ ವಿದ್ಯಾರ್ಥಿ ಇದ್ದಳು. ಎತ್ತರದ ಆ ಕಡು ಬಣ್ಣದ ಚೆಲುವೆ ನಡೆದು ಬಂದರೆ ದೇವತೆಯೇ ಎದುರಿಗೆ ಕಂಡಂತೆ ಇರುತ್ತಿತ್ತು. ಸದಾ ಯಾವುದೋ ದ್ರಾಬೆ ಜೀನ್ಸ್ ಏರಿಸಿಕೊಂಡಿರುತ್ತಿದ್ದ ಅವಳ ಬುದ್ಧಿವಂತ ಪ್ರಖರ ಕಣ್ಣುಗಳನ್ನು ನೋಡಿದಾಗೆಲ್ಲ ಈಕೆಯನ್ನು ಮಾತಾಡಿಸಬೇಕು ಅಂತ ಶಪಥ ಮಾಡಿದ್ದಿದೆ. ಒಮ್ಮೆ ಸುಸಂಧಿ ಒದಗಿ ಬಂದಿತ್ತು.
ಆಕೆ ಚೆನ್ನೈನ ಬಂದರಿಗೆ ಡೆಪ್ಯೂಟಿ ಚೇರ್ಮನ್ನರಾಗಿದ್ದ ದೊಡ್ಡವರ ಮಗಳು. ಆ ಕಾಲದಲ್ಲೇ ಕಾರ್ ಡ್ರೈವ್ ಮಾಡುತ್ತಿದ್ದವಳು. ಆಗಿನ ರಾಜಧಾನಿಯ ಒಂದು ಪ್ರತಿಷ್ಠಿತ ಕಾಲೇಜಿನಲ್ಲಿ ಸುಮಾರು ಒಂದು ಲಕ್ಷದಷ್ಟು ಡೊನೇಶನ್ ಕೊಟ್ಟು ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದಾಕೆ. ಮಣಿರತ್ನಂ ಅವರ ‘ಗೀತಾಂಜಲಿ’ ಚಿತ್ರದ ತುಂಟತನವೇ ಮೈವೆತ್ತ ನಾಯಕಿ ಪಾತ್ರಕ್ಕೆ ಆಯ್ಕೆಯಾಗಿದ್ದು ಅಪ್ಪ, ‘ಸಾಧ್ಯವೇ ಇಲ್ಲ, ಇಂಜಿನಿಯರಿಂಗ್ ಮುಗಿಸಿ ವಿದ್ಯಾವಂತಳಾದ ಮೇಲೆ ಏನು ಬೇಕಿದ್ದರೂ ಮಾಡಿಕೋ,’ ಎಂದು ಖಡಾಖಂಡಿತವಾಗಿ ಹೇಳಿ ತೆಪ್ಪಗಾಗಿದ್ದಳು. ಸಂಗೀತದಂತೆ ಕೇಳಿಸುವ ಅವಳ ತಮಿಳು ಭಾಷೆ, ಸರಾಗವಾದ ಇಂಗ್ಲಿಷ್, ಹೊಸದಾಗಿ ಕಲಿತಿದ್ದ ಮುದ್ದು ಮುದ್ದಾದ ಕನ್ನಡ, ಸಂಗೀತ ಜ್ಞಾನ, ಮೇಲ್ವರ್ಗಕ್ಕೆ ವಿಶಿಷ್ಟವಾದ ಆತ್ಮವಿಶ್ವಾಸ, ತಣ್ಣಗಿನ ಧೈರ್ಯ ಎಲ್ಲವೂ ನನಗೆ ಆಪ್ತವೆನ್ನಿಸಿ ಸ್ನೇಹ ನಮ್ಮನ್ನು ಹಿತವಾಗಿ ಬಂಧಿಸಿತ್ತು.
ಅವಳನ್ನು ಆಗಾಗ್ಗೆ, ‘ಜೀನ್ಸ್ ಏರಿಸಿಕೊಂಡು, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಮಾಡುತ್ತಿದ್ದರೂ ಅದ್ಯಾಕೆ ಮಹಾ ಸಂಪ್ರದಾಯಸ್ಥೆಯಂತೆ ಪೋಸು ಕೊಡುತ್ತೀಯ ಮಾರಾಯ್ತಿ?’ ಅಂತ ರೇಗಿಸಿದ್ದಿದೆ. ನನ್ನ ಸೆಕೆಂಡ್ ಹ್ಯಾಂಡ್ ಲಡಾಸ್ ಲೂನಾ ಹತ್ತುವಾಗ ಕಣ್ಣಿಗೊತ್ತಿಕೊಂಡು ಏರುವ ಅವಳ ಅಭ್ಯಾಸ; ಹತ್ತಿರದಲ್ಲೇ ಇದ್ದ ಅವಳ ಸಂಬಂಧಿಯ ಅಂಗಡಿಯ ಒಳಗೆ ಕಾಲಿಡುವ ಮುಂಚೆ ನೆಲವನ್ನು ಮುಟ್ಟಿ ಗಲ್ಲ ಬಡಿದುಕೊಳ್ಳುವ ಚಟ ಇತ್ಯಾದಿಗಳು ನನಗೆ ಕಿರಿಕಿರಿಯೆನ್ನಿಸುತ್ತಿತ್ತು. ‘ಯೋ, ಈ ಬೂಸಿ ವರಸೆ ಬೇಡ ತಾಯಿ, ಕೊನೆ ಪಕ್ಷ ನನ್ನ ಜೊತೆ ಇರುವಾಗಲಾದರೂ ಈ ನಾಟಕಗಳನ್ನೆಲ್ಲ ಬಿಟ್ಟುಬಿಡು,’ ಅಂತ ಗುರ್ರೆನ್ನುತ್ತಿದ್ದೆ. ಈ ಜೀನ್ಸುಧಾರಿ ದೇವತೆ ಕಂಡ ಕಂಡ ದೇವಸ್ಥಾನಗಳ ಎದುರಲ್ಲೆಲ್ಲ ನಿಂತು ಗಲ್ಲ ಬಡಿದುಕೊಂಡರೆ ಸುತ್ತಮುತ್ತಲಿನವರು ಮೆಚ್ಚುಗೆಯಿಂದ ನೋಡುತ್ತಿದ್ದರು. ಆ ಮೆಚ್ಚುಗೆ ಅವಳ ಉದ್ದೇಶವೂ ಆಗಿತ್ತು ಎನ್ನುವುದು ನನ್ನ ಗುಮಾನಿ. ‘ಜೊತೆಯಲ್ಲಿ ಇರುವ ಆ ಸಾಧಾರಣರೂಪದ ಹೆಣ್ಣನ್ನು ನೋಡಿ, ಅತ್ತ ಹೇಳಿಕೊಳ್ಳುವ ರೂಪವೂ ಇಲ್ಲ, ಇತ್ತ ಭಯಭಕ್ತಿ, ಸಂಪ್ರದಾಯಪ್ರಜ್ಞೆಯೂ ಸೊನ್ನೆ,’ ಎನ್ನುವಂತೆ ನನ್ನ ಕಡೆ ಒಂದಿಷ್ಟು ತಾತ್ಸಾರದಿಂದಲೇ ಕಣ್ಣು ಹಾಯಿಸುತ್ತಿದ್ದರು.

ಇನ್ನೊಂದು ಉದಾಹರಣೆ. ಹೀಗೊಂದು ನನ್ನ ಪರಿಚಯದ ಗುರುಮನೆ. ಅಲ್ಲೊಬ್ಬಳು ಕಂಪ್ಯೂಟರ್ ಸೈನ್ಸಿನಲ್ಲಿ ಇಂಜಿನಿಯರಿಂಗ್ ಮಾಡಿ ಯಾವುದೋ ಸ್ಟಾರ್ಟ್-ಅಪ್ ಕಂಪೆನಿಯಲ್ಲಿ ದುಡಿಯುವ ಯುವತಿ. ಮೂರೂ ಹೊತ್ತು ಗುರುಮನೆಯಲ್ಲಿ ಠಳಾಯಿಸುವವಳು. ಹಬ್ಬಹರಿ, ವ್ರತ, ತೀರ್ಥಯಾತ್ರೆ, ಆರತಿ ಪ್ರಸಾದ ಇತ್ಯಾದಿಗಳಲ್ಲಿ ಎಲ್ಲರನ್ನು ಹಿಂದಕ್ಕೆ ತಳ್ಳಿ ಮುಂದೆ ನಿಂತು ಸದಾ ಮೇಲಿನವರ ಮತ್ತು ಮಂದಿಯ ಕಣ್ಣಿಗೆ ಬೀಳುತ್ತಿರಲು ಹರಸಾಹಸ ಪಡುವ ಈಕೆ ಈ ಸಂಪ್ರದಾಯ-ಆಧುನಿಕಗಳನ್ನು ಸಮರ್ಥವಾಗಿ ಮೇಳೈಸಿಕೊಂಡಿರುವಂತೆ ತೋರುತ್ತಾ ಅತ್ತ ವ್ಯವಸ್ಥೆಯ ಮತ್ತು ಇತ್ತ ಭಕ್ತಗಣದ ಪ್ರಶಂಸೆಗೆ ಒದಗಿ ಬರುವಲ್ಲಿ ಯಶಸ್ವಿಯಾಗುವ ಚಾಣಾಕ್ಷೆ. ಒಂದು ತೀರ್ಥಯಾತ್ರೆಯ ಬಗ್ಗೆ ಬರೆದ ವರದಿಯನ್ನು ಆ ಸಾಂಸ್ಥಿಕ ಪತ್ರಿಕೆಯ ಸಂಪಾದಕರು ‘ಇದನ್ನು ಬರೆದವರು ಒಬ್ಬ ಕಂಪ್ಯೂಟರ್ ವಿಜ್ಞಾನಿ ಮತ್ತು….. ಆಶ್ರಮದ ಭಕ್ತರು’ ಎಂದು ಪರಿಚಯಿಸಿ ಬೀಗಿದರೆ ಭಕ್ತಮಂದಿ, ‘ನೋಡಿ ಅವಳು ರಂಗೋಲಿ ಹಾಕುತ್ತಾಳೆ; ಸರಸರನೆ ಹೂ ಕಟ್ಟುತ್ತಾಳೆ; ನಿತ್ಯ ಆರತಿ-ಪ್ರಸಾದ ಕೊಡುತ್ತಾಳೆ; ಸನ್ಯಾಸಿಗಳಷ್ಟೇ ಯಾಕೆ, ಆ ಭಗವಂತನು ಸಹ ಅವಳನ್ನು ಒಪ್ಪಿಕೊಂಡಿದಾನೆ,’ ಎಂದು ಭಗವಂತನ ಸೆಕ್ರೆಟರಿಯಂತೆ ಪಲುಕಿದರಂತೆ. ಈ ಸಂಪ್ರದಾಯಶೀಲೆ ಕಾವಿಯನ್ನು ತತ್ತರಬತ್ತರ ಹಿಂಬಾಲಿಸಿ ಕಾಲಿಗೆ ಬಿದ್ದು ಪುನೀತಳಾಗುತ್ತಾಳೆ. ಆಧುನಿಕ ಕಾಲದ ಹೆಣ್ಮಕ್ಕಳು ಸಂಪ್ರದಾಯ ಪಾಲಿಸುವುದನ್ನು ನೋಡುವುದೇ ಒಂದು ಸೊಗಸಲ್ಲವೇ?
ವಸಾಹತು ಅನುಭವಕ್ಕೆ ಪಕ್ಕಾದ ಸಮುದಾಯವೊಂದು ಸಾಂಸ್ಕೃತಿಕ ಸಂಘರ್ಷಕ್ಕೆ ಎದುರಾದ ಮೇಲೆ ಸಂಪ್ರದಾಯ-ಆಧುನಿಕಗಳನ್ನು ಸಪಾಟಾಗಿಸುವ ಇಲ್ಲ ನಿರ್ಲಕ್ಷಿಸುವ ಪ್ರಯತ್ನಗಳನ್ನು ಮಾನವಶಾಸ್ತ್ರದಲ್ಲಿ cultural bi-polarity ಎಂದು ಕರೆಯಲಾಗುತ್ತದೆ. ಮನೋವೈದ್ಯದಲ್ಲಿ ದ್ವಿ-ಧ್ರುವಿ ಅಸ್ವಸ್ಥತೆ ಎಂದು ಕರೆಯಲ್ಪಡುವ ಈ ಪ್ರವೃತ್ತಿ ಈ ಗಳಿಗೆಯಲ್ಲಿ ಖುಷಿಖುಷಿಯಾಗಿದ್ದು ಸ್ವಲ್ಪ ಹೊತ್ತಿನಲ್ಲೇ ಖಿನ್ನತೆಯಲ್ಲಿ ಕುಸಿದು ಹೋಗುವ ಒಂದು ಖಾಯಿಲೆ. ಅದಕ್ಕೆ ಸಾಮಾಜಿಕ ಕಾರಣಗಳು ಸಾಕಷ್ಟು ಇರ್ತವೆ. ಇಂದಿನ ಉಲ್ಲಾಸ-ಹೀನ ವೃತ್ತಿಬದುಕಿನಲ್ಲಿ ಇದೊಂದು ಸಾಮಾನ್ಯ ಕಾಯಿಲೆ ಅಂತ ಗುರುತಿಸಲ್ಪಟ್ಟಿದೆ. ಅದಕ್ಕೆ ತುತ್ತಾದವರು ಸಮಾಜದ ಕಲ್ಚರಲ್ ಬೈಪೋಲಾರಿನ ಸಾಕಾರ ರೂಪ. ನಂಬಿಕೆಯ ನೆಲೆಗಳಲ್ಲಿ ಧೃವಗಳಷ್ಟು ಅಂತರವಿದ್ದರೂ ಸಹ ನಾವು ಇಲ್ಲಿಯೂ ಅಲ್ಲಿಯೂ ಸಮವಾಗಿ ಸಲ್ಲುವವರು ಎಂದು ಪೋಸು ಕೊಡುವ ಈ ಅಸ್ವಸ್ಥತೆ ತನ್ನದೇ ಬೆಲೆಯನ್ನು ಬೇಡುತ್ತದೆ. ಇಷ್ಟಾದರೂ ಸಂಪ್ರದಾಯ, ಧರ್ಮ, ಮತ್ತು ಮಾಧ್ಯಮಗಳಲ್ಲಿ ವ್ಯವಸ್ಥೆಗಳು ಈ modern-yet-modest ಅಥವಾ cultured-yet-controlled ಹೆಣ್ಮಕ್ಕಳನ್ನು ರೂಪದರ್ಶಿಗಳಾಗಿ ಬಳಸಿಕೊಳ್ಳುತ್ತವೆ. ರಾಜೇಶ್ವರಿ ಸುಂದರ್ ರಾಜನ್ ಎಂಬ ಫೆಮಿನಿಸ್ಟ್ ಚಿಂತಕಿಯ Real and Imagined Women ಕೃತಿಯಲ್ಲಿ ಇದರ ಬಗ್ಗೆ ಹಲವಾರು ಮಹತ್ವದ ಒಳನೋಟಗಳಿವೆ. ಈ selected ರೂಪದರ್ಶಿಗಳು ವ್ಯವಸ್ಥೆಯ imagined women. ವಾಸ್ತವದ ಹೆಂಗಸರು ದಿನನಿತ್ಯದ ಬದುಕಲ್ಲಿ ಅಂಚಿನಲ್ಲೇ ಉಳಿದು ಎದುರಿಸುವ ಸಮಸ್ಯೆಗಳು ಮಾತ್ರ ಇವತ್ತಿಗೂ ಘೋರವೇ!
ಸಾಮಾಜಿಕ ಶಕ್ತಿಗಳು, ಅದರಲ್ಲೂ ವಿಶೇಷವಾಗಿ ಧರ್ಮಗಳು, ಸ್ತ್ರೀಶೋಷಣೆ ಸಂಪ್ರದಾಯದಲ್ಲೇನೂ ಇರಲಿಲ್ಲ, ಅಂದೂ ಸಹ ಸ್ತ್ರೀಸ್ವಾತಂತ್ರ್ಯವಿತ್ತು, ನಮ್ಮ ಗಾರ್ಗಿ ಮೈತ್ರೇಯಿಯರ ಉದಾಹರಣೆಯನ್ನು ನೋಡಿದರೆ ಸಾಕಲ್ಲ ಎನ್ನುತ್ತಾ ‘ಸುವರ್ಣ ಯುಗ’ವೊಂದನ್ನು ಕಟ್ಟಿ ಹಾದಿ ತಪ್ಪಿಸಲು ಪ್ರಯತ್ನಿಸುತ್ತವೆ. ಹಾಗಿದ್ದರಿಂದಲೇ ಸಂಪ್ರದಾಯವೆನ್ನುವುದು ಆಧುನಿಕದ ಜೊತೆಗೆ ಸುಲಲಿತವಾಗಿ ಬೆರೆತು ಹರಿಯಿತು ಎಂದು ಸಂಪ್ರದಾಯದ ಗೋಡೆಯಲ್ಲಿ ಇರುವ ಘೋರ ಅರೆಕೊರೆಗಳನ್ನು ಮುಚ್ಚಿ ಸುಣ್ಣ ಬಳಿಯುವ ಪ್ರಯತ್ನ ಅದು. ಒಂದಾನೊಂದು ಕಾಲದಲ್ಲಿ ಸಹ ಎಲ್ಲವೂ ಚೆನ್ನಿತ್ತು, ಆ ಚೆನ್ನ ಚೆಲುವು ಇಂದು ಆಧುನಿಕದಲ್ಲಿ ಇನ್ನೊಂದು ರೂಪವನ್ನು ತಳೆದು ನಿಂತಿದೆ ಎಂದು ತಲೆ ಸವರುವ ಹುನ್ನಾರವೇ ಅದು.
ಇಂಗ್ಲೀಷಿನಲ್ಲಿ co-opting ಎಂಬ ಪರಿಕಲ್ಪನೆ ಇದೆ. ವಿಮಾನ ತಂತ್ರಜ್ಞಾನ ಏನ್ಮಹಾ? ನಮ್ಮ ಪುರಾತನ ಕಾಲದಲ್ಲೇ ಪುಷ್ಪಕ ವಿಮಾನ ಇರಲಿಲ್ಲವೇ? ಎಂಬ ವಿತಂಡವಾದ ಅದಕ್ಕೊಂದು ಉದಾಹರಣೆ. ಹೆಣ್ಣು ಎಚ್ಚೆತ್ತುಕೊಂಡು ಹೋರಾಟಕ್ಕಿಳಿದಳು ಎಂದರೆ ‘ಹೆಣ್ಣಿನ ಸಬಲೀಕರಣ’ದ ಬಗ್ಗೆ ಭಾಷಣ ಬಿಗಿಯುವುದು, ಅಥವಾ ಅವಳ ಹೋರಾಟದ ಪರಿಭಾಷೆಯನ್ನು ಮತ್ತು ಉದ್ದೇಶಗಳನ್ನು ತಮ್ಮ ಅಜೆಂಡಾಗೆ ಒಗ್ಗಿಸಿಕೊಳ್ಳುವುದು ಅದರ ಗುಣ.
ಎಷ್ಟರ ಮಟ್ಟಿಗೆ ಎಂದರೆ ಪ್ರಗತಿಪರ ಸ್ತ್ರೀಪರ ಶಕ್ತಿಗಳು ಜಾಹೀರಾತುಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಹೆಣ್ಣಿನ ದೇಹವನ್ನು ಅಶ್ಲೀಲವಾಗಿ ಬಳಸಿಕೊಳ್ಳುವುದರ ವಿರುದ್ಧ ಹೋರಾಟಕ್ಕೆ ಬೀದಿಗಿಳಿದರೆ, ‘ಹೌದು, ಅದು ನಮ್ಮ ಸಂಸ್ಕೃತಿಗೆ ವಿರುದ್ಧ,’ ಎಂದು ಸನಾತನಿಗಳು ಆ ಹೋರಾಟವನ್ನೇ ಹೈಜ್ಯಾಕ್ ಮಾಡುತ್ತಾರೆ. ಹೆಣ್ಣು ಭ್ರೂಣಹತ್ಯೆಗೆ ಕಾರಣವಾಗುತ್ತಿರುವ ಶಿಶುವಿನ ಲಿಂಗಪರೀಕ್ಷೆಯನ್ನು ನಿಷೇಧಿಸಬೇಕು ಎಂದು ದನಿಯೆತ್ತಿದ ತಕ್ಷಣ, ‘ಹೌದು, ನಮಗೆ ಇಂದು ಸಂಖ್ಯಾಬಲ ಬೇಕು. ಆ ಇನ್ನೊಂದು ಧರ್ಮದವರು ನೋಡಿ ಎಷ್ಟು ಮಕ್ಕಳನ್ನು ಹುಟ್ಟಿಸುತ್ತಿದ್ದಾರೆ!’ ಎಂದು ಸುಳ್ಳಿನ ಬಲೆಯನ್ನು ವ್ಯವಸ್ಥಿತವಾಗಿ ಹರಡುತ್ತಾ ದ್ವೇಷರಾಜಕಾರಣ ಮಾಡುವ ಹುಮ್ಮಸ್ಸಿನಲ್ಲಿ ಬಾಯಿಬಡಿದುಕೊಳ್ಳುತ್ತಾರೆ. ಸ್ತ್ರೀಪರ ದೃಷ್ಟಿಯಿಂದ ಯೂನಿಫಾರ್ಮ್ ಸಿವಿಲ್ ಕೋಡ್ ತರಲು ಒತ್ತಾಯಿಸುವುದೂ ಸಹ ಅಂತದ್ದೇ ಧಾರ್ಮಿಕ ಹೈಜ್ಯಾಕಿಗೆ ಒಳಗಾಗುತ್ತದೆ. (ಪು. 135) ಇವರು ಕೂತು ಕಷ್ಟಪಟ್ಟು ತಯಾರಿಸಿ ಮೇಲೆ ಏರಲು ಬಿಟ್ಟ ಗಾಳಿಪಟವನ್ನು ಅವರು ನಡುವಿನಲ್ಲಿ ಕತ್ತರಿಸಿ ಎಗರಿಸಿಕೊಂಡು ತಾವೇ ಹಾರಿಸಿ ಚಪ್ಪಾಳೆ ತಟ್ಟುವ ತಿರುಬೋಕಿತನ ಅದು!
ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಪ್ರತಿವರ್ಷ ರಾಜ್ಯದ ಒಂದೊಂದು ಜಿಲ್ಲೆಯಲ್ಲಿ ಹೆಣ್ಮಕ್ಕಳನ್ನು ಸಬಲೀಕರಿಸುವ ಕಾರ್ಯಾಗಾರಗಳನ್ನು ನಡೆಸುತ್ತದೆ. ಕಳೆದ ತಿಂಗಳು ಅಲ್ಲಿ ಹಾಜರಿದ್ದೆ. ಪ್ರತಿ ತಿಂಗಳೂ ನಡೆಯುವ ಈ ಕಾರ್ಯಕ್ರಮಕ್ಕೆ ಜಾಗ ಕೊಡುವ ಉದಾರಿಗಳ ಅಗತ್ಯವಿದೆ. ಅದರ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಸ್ಥಳೀಯರೊಬ್ಬರು ಈ ಚರ್ಚು, ಆ ಮಠ, ಈ ಆಶ್ರಮ ಇತ್ಯಾದಿಗಳು ಸಿದ್ಧವಿರುತ್ತವೆ, ವಿಚಾರಿಸಬಹುದಲ್ಲ ಎಂದು ಸೂಚಿಸಿದಾಗ ಅಧ್ಯಕ್ಷೆ ಸ್ಪಷ್ಟ ಮಾತುಗಳಲ್ಲಿ ‘ಬೇಡವೇ ಬೇಡ. ಬಿಟ್ಟಿಯಾಗಿ ಯಾಕೆ, ಮೇಲೆ ಒಂದಷ್ಟು ದುಡ್ಡನ್ನು ಸಹ ಕೊಡುತ್ತೇವೆ ಅಂತ ಅವರು ಹೇಳಿದರೂ ಸಹ ನಮಗೆ ಬೇಡ,’ ಎಂದು ನಿರಾಕರಿಸಿದ್ದರ ಹಿನ್ನೆಲೆಯಲ್ಲಿ ಈ ಎಲ್ಲಾ ಚಾರಿತ್ರಿಕ ವಿದ್ಯಮಾನಗಳ ಸುಳುವಿತ್ತು.
ನನಗಿನ್ನೂ ನೆನಪಿದೆ, ತೊಂಬತ್ತರ ದಶಕದ ಮೊದಲಲ್ಲಿ ಸುದ್ದಿಪತ್ರಿಕೆಯ ಮುಖಪುಟದಲ್ಲಿ ಒಂದು ಪ್ರಧಾನ ಚಿಟ್ ಫಂಡ್ಸಿನ ದೊಡ್ಡ ಜಾಹೀರಾತು ಕಾಣಿಸಿಕೊಂಡಿತ್ತು. ಅದರಲ್ಲಿ ಒಬ್ಬಳು ಉದ್ಯೋಗಸ್ಥ ಮಹಿಳೆ ಆತ್ಮವಿಶ್ವಾಸದ ನಗು ಹೊತ್ತು ನಿಂತಿದ್ದಳು. ಕೆಳಗೆ ದಪ್ಪ ಅಕ್ಷರಗಳಲ್ಲಿ, ‘ನೀವು ಈಗ ನಿಮ್ಮ ಹೆಂಡತಿಯ ಸಂಬಳದ ಆಧಾರದ ಮೇಲೆ ಸಾಲವನ್ನು ಪಡೆಯಬಹುದು!’ ವಾರೆವ್ಹಾ! ಪುರುಷಪ್ರಧಾನ ಸಮಾಜದ ಲೆಕ್ಕಾಚಾರ ವಿಕೃತಗಳಿಗೆ ಬರವೇ ಇಲ್ಲವೆ!
ಈಗ್ಗೆ ಸ್ವಲ್ಪ ಹಿಂದೆ ಯಾರೋ ಸಂಬಂಧಿ ದಂಪತಿಗಳು ಬಂದು ನನ್ನ ಮನೆಯಲ್ಲಿ ಒಂದು ದಿನ ಇದ್ದು ಹೋಗಿದ್ದರು. ನನ್ನ ಬಗ್ಗೆ, ‘ಆಕೆ ಎದ್ದ ಮೇಲೆ ಅಡಿಗೆ ಮನೆಯ ಕಡೆ ಹೋಗಲೇ ಇಲ್ಲ ಕಣ್ರೀ! ಅತ್ತ ಡಿಶ್ ವಾಷರ್ ಪಾತ್ರೆ ತೊಳೆಯುತ್ತಿತ್ತು. ಇತ್ತ ವಾಷಿಂಗ್ ಮೆಷಿನ್ ಬಟ್ಟೆ ಒಗೆಯುತ್ತಿತ್ತು. ಮನೆ ತುಂಬಾ ರೋಬೊಟಿಕ್ ವ್ಯಾಕ್ಯೂಮ್ ಕ್ಲೀನರ್ ಓಡಾಡುತ್ತಾ ಸ್ವಚ್ಛ ಮಾಡುತ್ತಿತ್ತು. ನಡುವೆ ಇದ್ದ ಸೋಫಾದಲ್ಲಿ ಈಕೆ ಕಾಲ್ಮೇಲೆ ಕಾಲು ಹಾಕಿಕೊಂಡು ನ್ಯೂಸ್ ಪೇಪರ್ ಓದ್ತಾ ಇದ್ರು. ನಾನೇ ಕಣ್ಣಾರೆ ಕಂಡೆ ಕಣ್ರೀ!’ ಅಂತ ವರದಿಯನ್ನು ಊದಿದರೆಂದು ಕೇಳ್ಪಟ್ಟೆ. ಅದು ನನ್ನ ಕಿವಿಯನ್ನು ತಲುಪಿದಾಗ ಮನಸಾರೆ ನಕ್ಕಿದ್ದೆ. ನಾನು ಬೇರೆಯವರ ಕಣ್ಣಿಗೆ ಕಾಣಿಸಿದ ರೀತಿ ಅರೆಗಳಿಗೆ ಧನ್ಯಭಾವವನ್ನು ಮೂಡಿಸಿತ್ತು! ಜೊತೆಗೆ ಇನ್ನೆರಡು ಯೋಚನೆಗಳೂ ಹೊಳೆದಿದ್ದವು. ಪ್ರತಿಯೊಬ್ಬ ಮಹಿಳೆ, ಅವಳು ಉದ್ಯೋಗಸ್ಥಳೋ ಅಲ್ಲವೋ, ಒಟ್ಟಿನಲ್ಲಿ ಬೆಳಗಿನ ಹೊತ್ತಿನಲ್ಲಿ ಶತಾವಧಾನಿಯಾಗಿ ನೂರೆಂಟು ಕೆಲಸಗಳನ್ನು ಮಾಡುತ್ತಿರುವಾಗ ಮನೆಯ ಗಂಡಸೇನಾದರೂ ಸುದ್ದಿಪತ್ರಿಕೆ ಓದುತ್ತಿದ್ದರೆ ಅದು ‘ಸಹಜ’ ಅಂತಲೇ ಕಾಣಿಸುತ್ತದೆ. ಹೆಣ್ಣೊಬ್ಬಳು ಸುತ್ತ ಮಶೀನುಗಳಿಗೆ ಕೆಲಸ ಹಚ್ಚಿ, ನಡುವೆ ಓದುತ್ತಾ ಕೂತಿದ್ದರೂ ಅದು ‘ವಿಚಿತ್ರ’ವೇ!

ಇರಲಿ, ಈ ಲೇಖನದ ಉದ್ದೇಶ ಗಡಿಬಿಡಿಯಲ್ಲಾದರೂ ತುಳಸಿಕಟ್ಟೆ ಸುತ್ತಿಯೇ ಕೆಲಸಕ್ಕೆ ಹೋಗುವ ಉದ್ಯೋಗಸ್ಥ ಹೆಣ್ಣನ್ನು ಅಪಹಾಸ್ಯ ಮಾಡುವುದಲ್ಲ. ಅಥವಾ ಬದುಕಿನಲ್ಲಿ ನಾನು ಮಾಡಿಕೊಂಡ ಆಯ್ಕೆಗಳನ್ನು ಸಮರ್ಥಿಸಿಕೊಳ್ಳುವುದೂ ಅಲ್ಲ. ಸಂಪ್ರದಾಯ-ಆಧುನಿಕಗಳ ನಡುವೆ ನಡೆಯಬೇಕಾದ್ದು ಒಂದು ಪ್ರಜ್ಞಾಪೂರ್ವಕ ಅನುಸಂಧಾನ ಮಾತ್ರ. ಅಲ್ಲಿ ಯೋಚಿಸುವ ಶಕ್ತಿಯ ಮೇಲೆ ಕುರುಡುಭಕ್ತಿ ಸವಾರಿ ಮಾಡಬಾರದು. ಹೆಣ್ಣು ತನ್ನ ವರ್ತನೆ, ತಾನು ಮಾಡುವ ನಿರ್ಧಾರಗಳು ಎಷ್ಟರ ಮಟ್ಟಿಗೆ ತನ್ನದಾಗಿರುತ್ತವೆ ಎನ್ನುವುದರ ಬಗ್ಗೆ ಪ್ರಜ್ಞಾಪೂರ್ವಕವಾಗಿ ಯೋಚಿಸುವುದು ಅಪ್ರಸ್ತುತವಂತೂ ಅಲ್ಲ ಅಂತ ಹೇಳಬೇಕಿತ್ತು ಅಷ್ಟೆ.
***
ಬೌದ್ಧಿಕ ಋಣ
Rajeshwari Sunder Rajan. Real and Imagined Women: Gender, Culture, and Postcolonialism. Routledge: London and New York. 1993.


