ಅವ್ವ ಕಣ್ಮರೆಯಾದಳು
ಮಿನುಗುತ್ತಿರುವಾಗಲೇ
ಮುಗಿಲಂಗಳದ ಉಲ್ಕೆಯೊಂದು
ಕ್ಷಣಾರ್ಧದಲ್ಲಿ ಹೊತ್ತಿ ಉರಿದು
ನೆಲಕ್ಕೆ ಕಳಚಿಕೊಂಡಂತೆ..!
ಆದರೂ..
ಇಷ್ಟೊಂದು ಧಾವಂತವೇನಿರಲಿಲ್ಲ
ಉಸಿರು ನಿಲ್ಲುವ
ಆ.. ಕೊನೆಯ ಗಳಿಗೆಯಲ್ಲೂ
ಬಟ್ಟಲಿನಂತಹ ಅವಳ ಕಂಗಳು
ಜೀವನಪ್ರೀತಿಯ ಸಂಕೇತದಂತೆ
ತೆರೆದುಕೊಂಡೇ ಇದ್ದವು..!
ಎದೆಯೊಳಗೆ ಅಗಣಿತ
ಕನಸುಗಳೇನನ್ನೂ ಅವಳು ಕೂಡಿಟ್ಟಿರಲಿಲ್ಲ
ಆದರೆ ಯಾರಿಗೂ ಕಾಣದಂತೆ ಬಚ್ಚಿಟ್ಟಿದ್ದಳು
ಹೆಪ್ಪುಗಟ್ಟಿದ್ದ ಅಸಂಖ್ಯ
ಯಮಯಾತನೆಯ ನೋವುಗಳನ್ನು..!
ನಿಶ್ಚಲವಾದ ಅಂಗಾಂಗಗಳಲ್ಲಿ
ಮಡುಗಟ್ಟಿಕೊಂಡ
ಹಠಾತ್ ಹೃದಯಸ್ತಂಭನ
ಅವಳ ಅವಿಶ್ರಾಂತ ಬದುಕಿಗೆ
ದ್ಯೋತಕದ ಕುರುಹು..!
ಬದುಕಿದ್ದಷ್ಟು ದಿವಸ
ದುಡಿಮೆಗಾಗಿಯೇ ಹುಟ್ಟಿದ್ದವಳು..!
ಹೋಗುವ ಕೊನೆಯ ಗಳಿಗೆಯಲ್ಲೂ
ರಾಶಿಬಿದ್ದ ಬಟ್ಟೆಗಳನ್ನು
ಸೋಲೊಪ್ಪದ ನಿತ್ರಾಣ ರಟ್ಟೆಗಳಲ್ಲಿ
ಒಗೆದು ಸ್ವಚ್ಛಗೊಳಿಸಿ ಸುಮ್ಮನಾಗದೆ
ಅಯ್ಯೋ..!
ಇಂದು ಭಾನುವಾರವೆಂದು
ಮಕ್ಕಳಿರುವ ಮನೆಯಲ್ಲಿ
ರುಚಿ ತಪ್ಪಬಾರದೆಂದು
ರವಿಕೆಯೊಳಗೆ ಬಚ್ಚಿಟ್ಟ ಹಣದಿಂದ
ಮೀನು ಖರೀದಿಸಿ
ಅದರ ಹೊಲಸೆಲ್ಲಾ ತೊಳೆದು
ಶುಭ್ರವಾಗಿ ಶುಚಿಗೊಳಿಸಿ
ಒಲವು ತುಂಬಿದ ಒಲೆಯ ಮೇಲೆ
ಮೀನು ಸಾರಿನ ಘಮಲು
ಹೊಸ್ತಿಲಿನಾಚೆಗೂ ಹರಡುವಂತೆ
ಕೊತಕೊತ ಕುದಿಸಿ
ಕೊಂಚ ಸಾವರಿಸಿಕೊಳ್ಳಲು
ಮಂಚದ ಮೇಲೆ ಒರಗಿದಳಷ್ಟೇ..!
ತಣ್ಣನೆಯ ನಿದ್ರೆ.. ಪ್ರತಿನಿತ್ಯದಂತಲ್ಲ..!
ಒಮ್ಮೆ ಮಲಗಿ ಮತ್ತೆ ಮತ್ತೆ
ಹತ್ತಾರು ಬಾರಿ ಏಳಲು
ಎಣಗುತ್ತಿದ್ದ ಕಾಲುಗಳೊಂದಿಗೆ
ಇನ್ನು ತುಸುವೂ ಕೂಡ
ಸೆಣಸಾಟವಿಲ್ಲ..!
ಅದುರುವ ತೊಡೆಗಳ ನಡುವೆ
ಹರಿದು ಹೋಗುತ್ತಿದ್ದ
ಮೂತ್ರದ ವಾಸನೆಯ ಗೊಡವೆಯೂ ಇಲ್ಲ..!
ಕೊನೆಗೂ ಅವಳ ದೇಹವನ್ನು
ಒಳಗೊಳಗೇ ಇಂಚಿಂಚಾಗಿ
ಕಿತ್ತು ತಿನ್ನುತ್ತಿದ್ದ
ಕಾಯಿಲೆಗಳಿಗೆ ಮದ್ದಿನಂತಿದ್ದ
ಇನ್ಸುಲಿನ್ ಕೂಡ
ಲಯ ತಪ್ಪಿದ ಹೃದಯವ
ಇನ್ನಿಲ್ಲದಂತೆ ಘಾಸಿ ಮಾಡಿ
ನಿತ್ಯ ನರಕಯಾತನೆಯ
ಚರಮಗೀತೆಗೆ ಬೆನ್ನುಡಿ ಬರೆದಿತ್ತು..!
ಮಾರಿಯಂತೆ ಅವಳ ಅಂಗೈ
ಅಗಲದ ಜಾಗದಲ್ಲಿ
ನಿತ್ಯ ನರ್ತಿಸುತ್ತಿದ್ದ
ನೂರೆಂಟು ಮಾತ್ರೆಗಳ
ಕಹಿ ಅನುಭವದ ಘಾಟಿಗೆ
ಪ್ರತಿಬಾರಿ ನುಂಗುವಾಗಲೂ
ಮೃದು ಹೂವಿನಂತೆ ನಲುಗುತ್ತಿದ್ದವಳು
ಮೇಣದ ಬತ್ತಿಯಂತೆ ಕರಗುತ್ತಿದ್ದವಳು..!
ಇನ್ನು..
ಈ ಕ್ಷಣದಿಂದಾಚೆಗೆ
ಭಾರವಾಗುವ ಮಾತೆಲ್ಲಿ?
ಯಾರ ಹೆಗಲಿನ ಆಶ್ರಯಕ್ಕೂ
ಆಸೆಪಡದ ಆತ್ಮಾಭಿಮಾನದ
ಅವಳ ಬದುಕು
ಅನಾರೋಗ್ಯದಲ್ಲಿ ಎಡವಿಕೊಂಡ
ಅವಳ ಸಣ್ಣ ಅಲಕ್ಷ್ಯಕ್ಕೆ
ಕೊಡಲಿ ಪೆಟ್ಟು ಬೇಡವೆಂಬಂತೆ
ಆ ವಿಧಿಯು ಕೂಡ ತೀರ್ಮಾನಿಸಿದಂತಿತ್ತು..!
ಯಾರ ಸ್ಪರ್ಶಕ್ಕೂ ಸಿಗದೆ ಹೋದ
ತಣ್ಣಗಿನ ಮಿಂಚೊಂದು
ಕಣ್ಣೆದುರು ಹಾದು ಹೋದಂತೆ
ಅವಳ
ಇಹದ ಯಾತ್ರೆ ಕೂಡ
ನೋಡನೋಡುತ್ತಲೇ
ಅಂಗಳದಲ್ಲಿ ಆಡುತ್ತಲಿದ್ದ
ಚೆಂದದ ಗಿಳಿಯನ್ನು
ಮಾಯದ ಹದ್ದೊಂದು ಬಂದು
ಸೆಳೆದೊಯ್ಯುವ ಸೋಜಿಗವೆಂಬಂತೆ
ಕಾಲವಶವಾಗಿದ್ದಳು…!
ಮಣಭಾರದ ಹೂಗಳೊದ್ದು
ಮಣ್ಣಾಗುವ ವಿಷಾದದ ಗಳಿಗೆಯಲ್ಲೂ
ಅವಳೆದೆಯ ಗೂಡು ಮಾತ್ರ
ಅಚಲತೆಯ ಹಾಡು ಹಾಡುತ್ತಾ
ಪ್ರೀತಿಯನ್ನೇ ಮರಳಿ ತರಲಿರುವ
ಚೆಂಗುಲಾಬಿಯ ಪಕಳೆಯಂತೆ
ನನ್ನ ಕಂಬನಿ ತುಂಬಿದ
ಕಂಗಳೊಳಗೆ ನೆಟ್ಟುಕೊಂಡಿತ್ತು….!