ಎಲ್ಲಾ ಕಾಲದಲ್ಲೂ ತಮ್ಮ ತಮ್ಮ ಪರಿಸ್ಥಿತಿಗಳಲ್ಲಿ ಸ್ವತಂತ್ರ ಆಲೋಚನೆ ಮತ್ತು ನಡವಳಿಕೆ ತೋರುವುದಕ್ಕೆ ಎಲ್ಲ ಯುವಜನಾಂಗವೂ ಆಶಿಸುತ್ತಲೆ ಇರುತ್ತದೆ. ಅದು ಸಹಜ ಮತ್ತು ಹಾಗೇ ಇರಬೇಕಾದ್ದು. ಕಾಲಕ್ಕೆ ತಕ್ಕಂತೆ ಅವರ ಅಭಿವ್ಯಕ್ತಿಗಳಿಗೆ ನಡವಳಿಕೆಗಳಿಗೆ ಕಡಿವಾಣಗಳು ಬಿಗಿಯಾಗಿ, ಸಡಿಲಾಗಿ, ಉದುರಿಹೋಗಿ ಎಲ್ಲಾ ಆಗಿದೆ. ಈ ಸ್ಥಿತ್ಯಂತರದ ಕಾಲವನ್ನು ಅವರು ಆತ್ಮವಿಶ್ವಾಸ, ಓದು, ಆರ್ಥಿಕ ಸ್ವಾತಂತ್ರ್ಯ ಇದ್ದಾಗ ಹೇಗೆ ನಿಭಾಯಿಸುತ್ತಾರೆ ಎಂಬುದು ಯಶಸ್ಸು ಅಥವಾ ದುರಂತದ ಪರಿಣಾಮವನ್ನು ತಂದಿಡುತ್ತದೆ. ಓದು ಬರಿದೆ ಡಿಗ್ರಿಗಳಾದಾಗ, ಕೆಲಸದ ಪದಕಗಳಾದಾಗ ಏನಾಗುತ್ತದೆ ಎಂಬ ಪರಿಣಾಮವನ್ನು ನೋಡುತ್ತಲೇ ಇದ್ದೇವೆ.
ದಿವಂಗತ ಎನ್.ಎಸ್. ಚಿದಂಬರರಾವ್ ಅವರ “ಬೆಂಕಿಯ ನೆರಳು” ಕಾದಂಬರಿಯನ್ನು ಪುಸ್ತಕ ಮನೆ ಪ್ರಕಾಶನ ಮರುಮುದ್ರಿಸಿದ್ದು, ಈ ಕೃತಿಯ ಕುರಿತು ಸಿಂಧುರಾವ್ ಟಿ. ಬರಹ ನಿಮ್ಮ ಓದಿಗೆ
ವಿಥ್ ಫ್ರೀಡಂ ಕಮ್ಸ್ ರೆಸ್ಪಾನ್ಸಿಬಿಲಿಟಿ ಎನ್ನುವುದು ಮಹಾನ್ ಚಿಂತಕ ಸಾರ್ತ್ರೆಯ ವಿಚಾರಗಳಲ್ಲೊಂದು. ಇವತ್ತಿನ ದಿನಮಾನದಲ್ಲಿ ಇದು ಹಲವು ನೆಗೆಟಿವ್ ಆದ, ಭೀಕರವಾದ ಉದಾಹರಣೆಗಳೊಂದಿಗೆ ನಮ್ಮ ಮುಂದೆ ಪದೇ ಪದೇ ಎದುರಾಗುತ್ತಿದೆ. ಇದಕ್ಕಿಂತಲೂ ದುಃಖದ ವಿಷಯವೆಂದರೆ ನಾವು ಎಲ್ಲ ವಿಷಯಗಳಲ್ಲೂ ಜಡ್ಜ್‌ಗಳಾಗಿಬಿಟ್ಟಿರುವುದು. ನಮ್ಮ ಪೀಳಿಗೆ ನಮ್ಮ ಹಿಂದಿನವರ ತ್ಯಾಗ ಮತ್ತು ಹೋರಾಟಗಳ ಫಲವನ್ನು ಅನುಭವಿಸುತ್ತ ಬೆಳೆದಿವಿ. ಸ್ವತ್ರಂತ್ರ ವಿಚಾರ ಮತ್ತು ನಡವಳಿಕೆಗಳ ಬೆಲೆಯನ್ನು ಕಿಂಚಿತ್ ಗೊತ್ತಿದ್ದವರಾಗಿ ಅದಕ್ಕಾಗಿ ಪ್ರಯತ್ನಪಟ್ಟು ದಕ್ಕಿಸಿಕೊಳ್ಳುತ್ತ ಬೆಳೆದಿವಿ. ಹಾಗಂತ ಎಲ್ಲರೂ ಏನೂ ತಪ್ಪು ಮಾಡಲೇ ಇಲ್ಲ ಅಂತಲ್ಲ. ಭ್ರಷ್ಠತೆಯನ್ನು ಮೈತುಂಬ ಹೊದ್ದುಕೊಂಡಿರುವ ಸಮಾಜ ನಮ್ಮ ಕೊಡುಗೆಯೇ.
ಆದರೆ ನಮ್ಮ ನಂತರದ ಪೀಳಿಗೆ ಬಹುಪಾಲು ಜನ ನಮ್ಮ ಸ್ವತಂತ್ರವಿಚಾರ, ಜವಾಬ್ದಾರಿ, ಮತ್ತು ನಡವಳಿಕೆಗಳನ್ನ ಅಳವಡಿಸಿಕೊಂಡರೆ? ಅವುಗಳ ಬೆಲೆಯಾದರೂ ಹೆಚ್ಚಿನವರಿಗೆ ಗೊತ್ತಿದೆಯೇ? ಇಲ್ಲ ಎಂದೇ ಎನಿಸುತ್ತಿದೆ. ಈಗ ನಡೆಯುತ್ತಿರುವ ಹಲವಾರು ದುರಂತಗಳಿಗೆ ವ್ಯಕ್ತಿ ಸ್ವಾತಂತ್ರ್ಯ, ಮತ್ತು ಆರ್ಥಿಕ ಸ್ವಾತಂತ್ರ್ಯ ಕಾರಣ ಅಲ್ಲ. ಆ ಸ್ವಾತಂತ್ರ್ಯಗಳು ಅನಾಯಾಸವಾಗಿ ದೊರೆತಿರುವುದರಿಂದ ಅದನ್ನು ಜವಾಬ್ದಾರಿಯೊಂದಿಗೆ, ಎಚ್ಚರಿಕೆಯೊಂದಿಗೆ ನಿರ್ವಹಿಸಲು ಹೆಚ್ಚಿನವರು ಕಲಿತಿಲ್ಲ ಮತ್ತು ಕಲಿಸಿದವರೂ ಯಾರಿಲ್ಲ ಎನ್ನುವುದೇ ಕಾರಣ ಅನ್ಸತ್ತೆ.

(ಎನ್.ಎಸ್. ಚಿದಂಬರರಾವ್)
ಚಿಕ್ಕ ಮಕ್ಕಳಿರುವ ಒಬ್ಬ ಅಮ್ಮನಾಗಿ ನನಗೆ ಅನಿಸುತ್ತಿರುವುದು ಇವೆಲ್ಲ ಯಾರನ್ನೂ ದೂರಲು ಬರುವುದಿಲ್ಲ. ಈಗ ಕಾಲಧರ್ಮವೇ ಹೀಗಿದೆ. ಏನೆ ಹೇಳಿಕೊಟ್ಟರೂ ನಡೆದುಕೊಂಡರೂ ಈಗಿನ ಹೆಚ್ಚಿನಂಶ ಚಿಕ್ಕವರಿಗೆ ತಾನಾಗಿಯೇ ದೊರಕುತ್ತಿರುವ ಸ್ವಾತಂತ್ರ್ಯ ಮತ್ತು ಅನುಕೂಲಗಳು ಅವುಗಳ ಬೆಲೆಯನ್ನು ಕಳೆದುಕೊಂಡಿವೆ. ಮತ್ತು ಯಾರಿಗೂ ಸ್ವಾತಂತ್ರ್ಯದ ಜೊತೆಗೆ ಇರಬೇಕಾದ ಜವಾಬ್ದಾರಿ ಇಲ್ಲ.
ಇದರಿಂದ ಸಾರಾಸಗಟಾಗಿ ಎಲ್ಲ ಹೆಣ್ ಮಕ್ಕಳ ಓದು, ಕೆಲಸ, ಅವರ ಸ್ವತಂತ್ರ ವಿಚಾರ ನಡವಳಿಕೆಗಳು ಎಲ್ಲರ ದಾಳಿಗೆ ಒಳಗಾಗುತ್ತಿರುವುದು ತುಂಬ ದುಃಖದ ವಿಚಾರ. ಈ ಮುಂಚೆ ತಂದೆ ತಾಯಿಗಳು (ಎಲ್ಲರೂ ಅಲ್ಲ) ಮರ್ಯಾದಾ ಹತ್ಯೆ, ಅಥವಾ ಮರ್ಯಾದಾ ಮದುವೆ ಇತ್ಯಾದಿ ಮಾಡುತ್ತಿದ್ದರು. ಹೆಣ್ ಮಕ್ಕಳ ಜೀವನವನ್ನು ಅತಿಯಾಗಿ ನಿಯಂತ್ರಿಸಿ ಅವರನ್ನು ಶೋಷಿಸುತ್ತಿದ್ದರು. ಈಗ ಚಕ್ರ ತಿರುಗಿದೆ. ಮಕ್ಕಳೇ ತಂದೆತಾಯಿಗಳನ್ನು ಕೊಲೆ ಮಾಡುವ ಕಾಲ ಬಂದಿದೆ. ಹಾಗಂತ ಹೆಣ್ಮಕ್ಕಳು ಓದಲೇ ಬಾರದಿತ್ತು, ಕೆಲಸಕ್ಕೆ ಹೋಗಿ ಆರ್ಥಿಕವಾಗಿ ಸ್ವತಂತ್ರರಾಗಬಾರದಿತ್ತು ಎಂಬುದೆಲ್ಲ ವಿಪರೀತ ಚಿಂತನೆಗಳು. ಗಂಡಾಗಲೀ ಹೆಣ್ಣಾಗಲೀ ತನ್ನ ಸ್ವಾತಂತ್ರ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು. ತನ್ನ ನಡವಳಿಕೆಗಳಿಗೆ, ವರ್ತನೆಗಳಿಗೆ ಉತ್ತರದಾಯಿಯಾಗಿರಬೇಕು. ಬೇರೆಯವರನ್ನ ಹಿಂಸಿಸಿ, ಶೋಷಿಸಿ ತನ್ನ ಸಂತೋಷವನ್ನು ಪಡೆಯುತ್ತೇನೆ ಎಂಬ ಮನಸ್ಥಿತಿ ಇಲ್ಲದೆ ಇರಬೇಕು. ಹೇಗೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.
ಈ ಎಲ್ಲವನ್ನೂ ಹೇಳಲೇಬೇಕು ಅಂತ ನನಗನ್ನಿಸುವ ಹಾಗೆ ಮಾಡಿದ್ದು ಹಿರಿಯಸಾಹಿತಿ ದಿವಂಗತ ಎನ್.ಎಸ್. ಚಿದಂಬರರಾವ್ ಅವರ ಪುನರ್ಮುದ್ರಿತ ಕಾದಂಬರಿ “ಬೆಂಕಿಯ ನೆರಳು”. ಈ ಮೊದಲೇ ಅವರ ಕೆಲವು ಕಥೆಗಳನ್ನ ಓದಿ ಅವರ ಕಥೆಗಾರಿಕೆಗೆ, ಅದರಲ್ಲಿರುವ ವಿಷಯ ಮಂಡನೆಗೆ, ಮುಂದಾಲೋಚನೆಗೆ ನಾನು ಮಾರುಹೋಗಿದ್ದೆ. ಈ ಕಾದಂಬರಿ ನನ್ನ ಅಭಿಮಾನವನ್ನು ಹೆಚ್ಚಿಸಿದೆ. 1981ರಲ್ಲಿ ಪ್ರಕಟವಾದ ಕಾದಂಬರಿಯಲ್ಲಿನ ವಿಷಯ ಇವತ್ತಿಗೂ ಪ್ರಸ್ತುತ ಮತ್ತು ಹೆಚ್ಚು ಮುಖ್ಯವಾಗಿದೆ. ಈ ಕಾದಂಬರಿ ಹೆಣ್ಣೊಬ್ಬಳು ತನ್ನ ಸ್ವತಂತ್ರ್ಯ ಆಲೋಚನೆಗಳ ಮತ್ತು ವರ್ತನೆಗಳ ಫಲವನ್ನು ಹೇಗೆ ನಿಭಾಯಿಸುತ್ತಾಳೆ, ಅವಳ ನಿಭಾವಣೆಗೆ ಸಮಾಜ ಮತ್ತು ಕುಟುಂಬ ಹೇಗೆ ವರ್ತಿಸುತ್ತದೆ, ಅನೈಚ್ಛಿಕವಾಗಿ ಅವಳ ಆಲೋಚನೆಗಳನ್ನು ಹೇಗೆ ಸಪ್ರೆಸ್ ಮಾಡುತ್ತದೆ, ಮತ್ತು ಅದನ್ನು ವಿರೋಧಿಸುವ ದಾರಿಯಲ್ಲಿ ಅವಳ ಸೋಲು-ಗೆಲುವು, ಮಾನಸಿಕ ಪ್ರಬುದ್ಧತೆ, ಮುಗ್ಧತೆ, ಮತ್ತು ಮೌಢ್ಯ ಈ ಎಲ್ಲ ಅಂಶಗಳನ್ನೂ ಬಹಳ ಉತ್ತಮ ಉದಾಹರಣೆಗಳೊಂದಿಗೆ ಕಾದಂಬರಿಕಾರರು ಬರೆದಿದ್ದಾರೆ. ಇದು ಭಾವೋದ್ದೀಪನೆಯ ಕಥೆಯಲ್ಲ. ಮಾನವನ ವರ್ತನೆಗಳ ಆಳವಾದ ಅಧ್ಯಯನ ಪೂರ್ಣ ತಾರ್ಕಿಕ ನಿರೂಪಣೆ. ಹಾಗಂತ ಒಣ ಉಪನ್ಯಾಸ ಎಲ್ಲಿಯೂ ಇಲ್ಲ. ಗಟ್ಟಿ ಪಾತ್ರಗಳ ಮೂಲಕ, ಆ ಕಾಲಮಾನದ ಚಿತ್ರಣಗಳ ಮೂಲಕ ಬಹಳ ಮನಮುಟ್ಟುವ ಹಾಗೆ, ಓದಿದರೆ ನೋಡುತ್ತ ಕೂತಿರುವ ಹಾಗೆ ಅನಿಸುವಂತೆ ಬರೆದಿದ್ದಾರೆ. ಈ ಕಾದಂಬರಿಯಲ್ಲಿ ಎಲ್ಲಿಯೂ ಇದೇ ಇಷ್ಟೇ ಎಂಬಂತಹ ನಿರೂಪಣೆ ಇಲ್ಲ. ಹೀಗಾಗಿದೆ, ಹೀಗಾಗಬಹುದಿತ್ತೇನೋ, ಹೀಗಾದರೆ ಸರಿಯಾಗುತ್ತೇನೋ ಎಂಬ ಯೋಚನೆಗೆ ನಮ್ಮನ್ನು ಹಚ್ಚುವ ಬಹಳ ಪ್ರಬುದ್ಧ ಕಥನ.

ಎಲ್ಲಾ ಕಾಲದಲ್ಲೂ ತಮ್ಮ ತಮ್ಮ ಪರಿಸ್ಥಿತಿಗಳಲ್ಲಿ ಸ್ವತಂತ್ರ ಆಲೋಚನೆ ಮತ್ತು ನಡವಳಿಕೆ ತೋರುವುದಕ್ಕೆ ಎಲ್ಲ ಯುವಜನಾಂಗವೂ ಆಶಿಸುತ್ತಲೆ ಇರುತ್ತದೆ. ಅದು ಸಹಜ ಮತ್ತು ಹಾಗೇ ಇರಬೇಕಾದ್ದು. ಕಾಲಕ್ಕೆ ತಕ್ಕಂತೆ ಅವರ ಅಭಿವ್ಯಕ್ತಿಗಳಿಗೆ ನಡವಳಿಕೆಗಳಿಗೆ ಕಡಿವಾಣಗಳು ಬಿಗಿಯಾಗಿ, ಸಡಿಲಾಗಿ, ಉದುರಿಹೋಗಿ ಎಲ್ಲಾ ಆಗಿದೆ. ಈ ಸ್ಥಿತ್ಯಂತರದ ಕಾಲವನ್ನು ಅವರು ಆತ್ಮವಿಶ್ವಾಸ, ಓದು, ಆರ್ಥಿಕ ಸ್ವಾತಂತ್ರ್ಯ ಇದ್ದಾಗ ಹೇಗೆ ನಿಭಾಯಿಸುತ್ತಾರೆ ಎಂಬುದು ಯಶಸ್ಸು ಅಥವಾ ದುರಂತದ ಪರಿಣಾಮವನ್ನು ತಂದಿಡುತ್ತದೆ. ಓದು ಬರಿದೆ ಡಿಗ್ರಿಗಳಾದಾಗ, ಕೆಲಸದ ಪದಕಗಳಾದಾಗ ಏನಾಗುತ್ತದೆ ಎಂಬ ಪರಿಣಾಮವನ್ನು ನೋಡುತ್ತಲೇ ಇದ್ದೇವೆ.
ಈ ಕಾದಂಬರಿಯಲ್ಲಿ ನಾಲ್ಕು ಭಿನ್ನ ವ್ಯಕ್ತಿತ್ವದ ಹೆಚ್ಚೂ ಕಡಿಮೆ ಒಂದೇರೀತಿಯ ಅಪ್ ಬ್ರಿಂಗಿಂಗ್ ಇರುವ, ಓದಿರುವ ಕೆಲಸದಲ್ಲಿರುವ ವ್ಯಕ್ತಿಗಳು ಹೇಗೆ ತಮ್ಮ ಬದುಕನ್ನು ಕಟ್ಟುತ್ತಾರೆ, ಮುರಿಯುತ್ತಾರೆ, ನಿಭಾಯಿಸುತ್ತಾರೆ ಅಥವಾ ಹಳೆಯ ರಿವಾಜಿಗೆ ಕಟ್ಟುಬೀಳುತ್ತಾರೆ ಎಂಬುದನ್ನ ಕಥೆಗಾರರು ಅದ್ಭುತವಾಗಿ ಬರೆದಿದ್ದಾರೆ. ಅಸಹಾಯಕತೆಯನ್ನು ಮರೆಮಾಚಿ ಅದನ್ನು ಶೌರ್ಯವೆಂಬಂತೆ ಬಿಂಬಿಸುವುದು, ಓದಿದ ಆದರ್ಶಗಳನ್ನ ಬದುಕಲು ಇತರರನ್ನು ಪ್ರಯೋಗಪಶುಗಳಾಗಿ ಮಾಡಿಕೊಳ್ಳುವುದು, ಪರಿಣಾಮದಿಂದ ಓಡಿಹೋಗುವುದು, ಪರಿಸ್ಥಿತಿಯ ದುರುಪಯೋಗ ಮಾಡಿಕೊಳ್ಳುವುದು, ತನ್ನ ಹಂಬಲ ಮತ್ತು ವರ್ತನೆಗಳ ಪರಿಣಾಮವನ್ನು ಹೆದರಿದರೂ ಓಡಿಹೋಗದೆ ಎದುರಿಸುವುದು ಇವುಗಳನ್ನ ಪರಿಣಾಮಕಾರಿಯಾಗಿ ಬರೆದ ಈ ಕಾದಂಬರಿಯನ್ನು ನಾನು ಏಕೆ ಚಿಕ್ಕಂದಿನಲ್ಲಿ ಓದಲಿಲ್ಲ ಎನಿಸಿಹೋಯಿತು. ಕಾದಂಬರಿಯಲ್ಲಿ ಯುವಕಯುವತಿಯರ ಸ್ವತಂತ್ರ ವರ್ತನೆಗಳ ಪರಿಣಾಮಕ್ಕೆ ಅವರ ಹಿರಿಯರು ವರ್ತಿಸುವ ಸಂಯಮ ಭರಿತ ಆಕ್ರೋಶ ಮತ್ತು ವಿರೋಧಗಳು ಸಹಜವಾಗಿ ಮೂಡಿವೆ. ತಿಳುವಳಿಕೆಯನ್ನು ವಿವೇಕವನ್ನು ಶಾಲೆಕಾಲೇಜುಗಳಲ್ಲಿ ಕಲಿಸಲಾಗುವುದಿಲ್ಲ ಎಂಬುದನ್ನು ಈ ಕಾದಂಬರಿ ಮರುನಿರೂಪಿಸಿದೆ. ನಮ್ಮ ನಡವಳಿಕೆಗಳಿಗೆ ನಾವೆಷ್ಟು ಕಾರಣರೋ ಅದರಷ್ಟೆ ಸುತ್ತಲ ಪರಿಸರ ಮತ್ತು ನಮ್ಮ ಅರಿವಿನಾಚೆಯ ಕಾಲಧರ್ಮವೂ ಅಷ್ಟೇ ಕಾರಣ ಎಂಬುದನ್ನು ಹೊಳೆಯಿಸುತ್ತದೆ.
ಮೊದಲೇ ಹೇಳಿದಂತೆ ನಮ್ಮ ವರ್ತನೆಗಳಿಗೆ ನಾವೇ ಅಕೌಂಟಬಲ್ ಆಗುವುದನ್ನ ಕಲಿತುಕೊಂಡರೆ, ತಪ್ಪು ಹೆಜ್ಜೆ ಇಟ್ಟಾಗ ಅದನ್ನ ಗಮನಿಸಿ ಸರಿದಾರಿಗೆ ಹತ್ತಲು ಪ್ರಯತ್ನ ಮಾಡುವ ಧೈರ್ಯ ಮಾಡಿದರೆ, ಹೇಳಬೇಕಾದ ವಿಷಯವನ್ನು ಹೇಳಲು ಅನುವಾಗುವಂತಹ ವಾತಾವರಣವನ್ನು ನಿರ್ಮಿಸಿದರೆ, ಸ್ವಾತಂತ್ರ್ಯ ಮತ್ತು ಸ್ವೇಚ್ಛೆಯ ನಡುವಿನ ತೆಳುಗೆರೆಯನ್ನ ಗುರುತಿಸುವ ವಿವೇಕ ಬಂದರೆ, ಗಂಡು ಹೆಣ್ಣು ಇಬ್ಬರೂ ಪರಸ್ಪರ ಗೌರವದಿಂದ ನಡೆದುಕೊಂಡರೆ ಇಂದಿನ ದುರಂತಮಯ ವಾತಾವರಣ ಆರೋಗ್ಯಪೂರ್ಣವಾಗಿ ಬದಲಾಗಬಹುದು. ಇಲ್ಲದಿದ್ದರೆ ಏನಾಗುತ್ತೋ ಅದನ್ನ ಮೂಕವಾಗಿ ಅನುಭವಿಸಿ ನೋಯುವುದಷ್ಟೆ ಉಳಿಯುತ್ತದೆ.

ಇದು ಈ ಕಾದಂಬರಿಯನ್ನು ಓದಿದಾಗ ತೀವ್ರವಾಗಿ ಅನಿಸಿತು. ಎಂತಹ ಸಮಯದಲ್ಲಿ ಈ ಪುಸ್ತಕ ಓದಲು ದೊರಕಿತಲ್ಲ ಎಂಬ ಅಚ್ಚರಿ ನನಗೆ. 1981ರಲ್ಲಿ ಪ್ರಕಟವಾದ ಪುಸ್ತಕದ ಪುನರ್ಮುದ್ರಣ ಇದು. ಕಥೆಗಾರನಿಗೆ ಧನ್ಯವಾದಗಳು. ಈ ಪುಸ್ತಕವನ್ನು ಮತ್ತೆ ಪ್ರಕಟಿಸಿ ನಮ್ಮ ಓದಿಗೆ ಒದಗಿಸಿದ ಪುಸ್ತಕಮನೆ ಪ್ರಕಾಶನಕ್ಕೆ ವಂದನೆಗಳು.
ನೀವು ಈ ಕಾದಂಬರಿಯನ್ನು ಓದಿರಿ ಎಂದು ಆಶಿಸುತ್ತೇನೆ.
(ಕೃತಿ: ಬೆಂಕಿಯ ನೆರಳು (ಕಾದಂಬರಿ), ಲೇಖಕರು: ಎನ್.ಎಸ್. ಚಿದಂಬರರಾವ್ , ಪ್ರಕಾಶಕರು: ಪುಸ್ತಕ ಮನೆ (9606474289) ಬೆಲೆ: 140/-)

ಹುಟ್ಟಿದ್ದು ಶಿವಮೊಗ್ಗದ ಸಾಗರದಲ್ಲಿ. ವೆಬ್ ಡಿಸೈನಿಂಗ್ ಡಿಪ್ಲೊಮಾ ಮತ್ತು ಇಂಗ್ಲಿಷ್ ಎಂ.ಎ ಮಾಡಿ, ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಸಂಸ್ಥೆಯೊಂದರ, ತರಬೇತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ


