ಉಮಾ ಅವರಿದ್ದ ಓಣಿಯ ಬಳಿ ಹೋಗಿ ಒಬ್ಬ ಹೆಂಗಸನ್ನು ‘ಇಲ್ಲಿ ಉಮಾ ಅನ್ನೋರ ಮನೆ ಎಲ್ಲಿ ಬರತ್ತೆ?’ ಅಂತ ಕೇಳಿದೆ. ಅದಕ್ಕವರು ‘ಓಹ್, ಶಾಹೀನಾ ಬೇಗಂ ಮನೆನಾ? ಬನ್ನಿ ಬನ್ನಿ. ನಮ್ಮ ಮನೆ ಪಕ್ಕದ ಮನೆನೇ ಶಾಹೀನಕ್ಕನದು. ನನ್ನ ಹೆಸರು ನಾಗವೇಣಿ. ಅಕಿ ನನ್ನ ಗೆಣತಿ ಅದಾಳೆ.’ ಎನ್ನುತ್ತಾ ನನ್ನನ್ನ ಹಿಂಬಾಲಿಸಿ ಎಂಬುವಂತೆ ಮುಂದೆ ಮುಂದೆ ನಡೆದಳು. ಸ್ವಲ್ಪ ಹೊತ್ತು ನಡೆದ ಮೇಲೆ ಒಂದು ಪುಟ್ಟ ಜನತಾ ಮನೆಯಂತಿದ್ದ ಮನೆಯ ಮುಂದೆ ನಿಂತು ‘ಶಾಹೀನಕ್ಕ, ನಿನ್ನ ನೋಡೋಕೆ ಯಾರೋ ಬಂದಾರೆ…’ ಎಂದು ಕೂಗಿದಳು.
ದಾದಾಪೀರ್‌ ಜೈಮನ್‌ ಬರೆಯುವ “ಜಂಕ್ಷನ್‌ ಪಾಯಿಂಟ್‌” ಅಂಕಣದಲ್ಲಿ ಹೊಸ ಬರಹ

”ಮಾಡಲಿಕ್ಕೇನು ಕೆಲ್ಸ ಐತೆ? ಯಾವಾಗಲಾದರೂ ಬಾ.” ಎಂದು ಉಮಾ ಹೇಳಿದ್ದಳಾದರೂ ಏಪ್ರಿಲ್ ತಿಂಗಳ ರಣ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಬೇಗನೆ ಹೋಗಿಬಂದರಾಯಿತೆಂದು ಬೆಳಿಗ್ಗೆ ಹತ್ತರ ಸುಮಾರಿಗೆ ಕಾಲ್ನಡಿಗೆಯಲ್ಲಿ ಹೊರಟೆ. ಬಿಕೋ ಎನ್ನುವ ಬೀದಿಗಳು, ಜನರ ಸುಳಿವಿಲ್ಲದ ಅಂಗಡಿಗಳು, ರೈಲ್ವೆ ನಿಲ್ದಾಣದ ಮುಂದೆ ತಮ್ಮ ತಮ್ಮ ಊರುಗಳಿಗೆ ಹೋಗಲು ಸಾಲು ಸಾಲಾಗಿ ನಿಂತ ಕಾರ್ಮಿಕರು; ದೃಶ್ಯಗಳು ಮನಕಲುಕುವಂತಿದ್ದವು. ಕಾಲಿಗೆ ಚಪ್ಪಲಿ ಮತ್ತು ತಲೆಗೆ ಛತ್ರಿ ಹಿಡಿದಿದ್ದ ನನ್ನೊಳಗೆ ಏನೋ ಒಂದು ಪಾಪಪ್ರಜ್ಞೆಯ ಚಿಟುಗುಮುಳ್ಳು.

ಉಮಾ ಅವರ ಮನೆ ತಲುಪಿದಾಗ ಹತ್ತೂ ಮೂವತ್ತಾಗಿರಬೇಕು. ಅವರಿದ್ದ ಓಣಿಯ ಬಳಿ ಹೋಗಿ ಒಬ್ಬ ಹೆಂಗಸನ್ನು ‘ಇಲ್ಲಿ ಉಮಾ ಅನ್ನೋರ ಮನೆ ಎಲ್ಲಿ ಬರತ್ತೆ?’ ಅಂತ ಕೇಳಿದೆ. ಅದಕ್ಕವರು ‘ಓಹ್, ಶಾಹೀನಾ ಬೇಗಂ ಮನೆನಾ? ಬನ್ನಿ ಬನ್ನಿ. ನಮ್ಮ ಮನೆ ಪಕ್ಕದ ಮನೆನೇ ಶಾಹೀನಕ್ಕನದು. ನನ್ನ ಹೆಸರು ನಾಗವೇಣಿ. ಅಕಿ ನನ್ನ ಗೆಣತಿ ಅದಾಳೆ.’ ಎನ್ನುತ್ತಾ ನನ್ನನ್ನ ಹಿಂಬಾಲಿಸಿ ಎಂಬುವಂತೆ ಮುಂದೆ ಮುಂದೆ ನಡೆದಳು. ಸ್ವಲ್ಪ ಹೊತ್ತು ನಡೆದ ಮೇಲೆ ಒಂದು ಪುಟ್ಟ ಜನತಾ ಮನೆಯಂತಿದ್ದ ಮನೆಯ ಮುಂದೆ ನಿಂತು ‘ಶಾಹೀನಕ್ಕ, ನಿನ್ನ ನೋಡೋಕೆ ಯಾರೋ ಬಂದಾರೆ…’ ಎಂದು ಕೂಗಿದಳು. ಕೂಡಲೇ ಮನೆಯಿಂದ ಹೊರಗಡೆ ಬಂದ ಶಾಹೀನಾ ಅಲಿಯಾಸ್ ಉಮಾಳನ್ನು ಕಂಡ ಕೊಡಲೇ ನನಗೆ ಅಯ್ಯೋ ಎನಿಸಿತು. ಅವಳ ದೇಹದ ಶೇಕಡಾ ನಲವತ್ತು ಭಾಗ ಬೆಂಕಿ ಅವಗಢದಲ್ಲಿ ಸುಟ್ಟುಹೋಗಿತ್ತು. ಒಂದು ಕೈಯಂತೂ ತೊಂಭತ್ತರಷ್ಟು ಭಾಗ ಸುಟ್ಟು ಕರಕಲಾಗಿತ್ತು. ಅವರು ಈ ಮೊದಲು ‘ಅಗ್ನಿ ರಕ್ಷಾ’ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೆಂಬುದು ಗೊತ್ತಿದ್ದರೂ ತಾವೇ ಸ್ವತಃ ಅಗ್ನಿ ಅವಘಡಕ್ಕೆ ತುತ್ತಾಗಿರಬಹುದೆಂದು ಊಹಿಸಿರಲಿಲ್ಲ.

ಬಿಸಿಲು ನೆತ್ತಿಯನ್ನು ಸುಡುತ್ತಿತ್ತು. ಉಮಾ ನನ್ನನ್ನು ಮತ್ತು ನನ್ನೊಂದಿಗಿದ್ದ ನಾಗವೇಣಿಯನ್ನು ಒಳಗೆ ಕರೆದುಕೊಂಡು ಹೋದಳು. ನಾವು ಒಳಗೆ ಹೋದವರೇ ಅವರ ಗಂಡ ಮನೆಯಿಂದ ಆಚೆನಡೆದ. ಸ್ವಲ್ಪ ಹೊತ್ತಿನಲ್ಲೇ ಆಟೋ ಹೊರಟ ಸದ್ದು ಕೇಳಿಸಿತು. ‘ಸುಮ್ಮನೆ ಅದೇನು ಲಾಭ ಅಂತ ಆಟೋವನ್ನು ಸ್ಟ್ಯಾಂಡಿನಾಗೆ ಒಯ್ದು ನಿಲ್ಲಿಸಿ ಕಾಯ್ತಾರೋ? ಈ ಹೊತ್ತಿನಲ್ಲಿ ಜನ ಆದರೂ ಯಾರು ಬರ್ತಾರೆ? ಅವರ ಹತ್ತಿರ ಆದರೂ ದುಡ್ಡು ಎಲ್ಲಿಂದ ಬರತ್ತೆ ಹೇಳಿ ಮೇಡಂ. ಮೇಲಾಗಿ ಈ ಕೊರೋನಾ ಭಯ ಬೇರೆ. ಆಟೋದಲ್ಲಿ ಡ್ರೈವರ್ ಹತ್ತಿರಾನೆ ಕೂತಿರ್ತಾರೆ. ಜನರಿಗೂ ಭಯ. ಸುಮ್ನೆ ಪೆಟ್ರೋಲ್ ದಂಡ. ಗಾಡಿ ಮೇಲೆ ತೆಗೆದಿರೋ ಲೋನ್ ಕೂಡ ತೀರುತ್ತಾ ಇಲ್ಲ. ತಿಂಗಳಿಗೆ ೯೦೦೦/- emi. ದಿನದಿಂದ ದಿನಕ್ಕೆ ಹೆಚ್ಚಾಗ್ತಾನೆ ಹೋಗ್ತಾ ಇರೋ ಖರ್ಚುಗಳು. ಏನು ಮಾಡಬೇಕೋ ಗೊತ್ತಾಗ್ತಾನೆ ಇಲ್ಲ…’ ಎಂದು ಹೇಳುತ್ತಾ ಒಲೆಯ ಮೇಲೆ ಪಾತ್ರೆ ಇಟ್ಟು ಒಳಗಡೆ ಕಟ್ಟಿಗೆ ತುಂಡುಗಳನ್ನು ಪೇರಿಸಿ ಪಕ್ಕದ ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿಟ್ಟಿದ್ದ ಸೀಮೆಎಣ್ಣೆ ಸುರಿದು ಬೆಂಕಿ ಕಡ್ಡಿ ಗೀರಿ ಓಲೆ ಹೊತ್ತಿಸಿದಳು. ಹೊತ್ತಿಕೊಂಡ ಒಲೆಯ ಬೆಳಕು ಉಮಾಳ ಮೇಲೆ ಬಿದ್ದು ಗಾಯಗಳು ನೀನೀಗ ಮತ್ತೇನು ಮಾಡಲಿಕ್ಕೆ ಸಾಧ್ಯ ಎನ್ನುವಂತೆ ಗಟ್ಟಿಯಾಗಿ ಕೂತು ಬೆಂಕಿಯನ್ನೇ ಕನ್ನಡಿಯಂತೆ ಪ್ರತಿಫಲಿಸುತ್ತಿರುವಂತೆ ಕಂಡಿತು. ಉಮಾ ಪಾತ್ರೆಯಲ್ಲಿ ನೀರು ಸುರುವಿ ಚಾ ಪುಡಿ, ಸಕ್ಕರೆ, ಸ್ವಲ್ಪ ಹೊತ್ತಿನ ಮುಂಚೆ ಅಂಗಡಿಯಿಂದ ತಂದಂತಿದ್ದ ಹಾಲನ್ನು ಹಾಕಿ ತಾವು ಕುಳಿತ ಮನೆಯಿಂದಲೇ ಸ್ವಲ್ಪ ತಿರುಗಿ ನಮ್ಮ ಕಡೆ ಮುಖ ಮಾಡಿ ಕುಳಿತರು.

‘ಚಾ ಅದರ ಪಾಡಿಗೆ ಅದಾಗ್ತದೆ. ನೀವು ಏನು ಕೇಳ್ಬೇಕು ಅಂತಿದಿರೋ ಕೇಳಿ ಮೇಡಂ.’ ಎಂದು ನೇರವಾಗಿ ಹೇಳಿದರು. ನಾಗವೇಣಿ ಅಲ್ಲಿಯೇ ಗೋಡೆಗಾತುಕೊಂಡು ನಾನು ಕೇಳುವ ಪ್ರಶ್ನೆಯನ್ನೇ ಎದುರು ನೋಡುತ್ತಿದ್ದಳು. ನನಗೆ ಎಲ್ಲಿಂದ ಶುರು ಮಾಡಬೇಕೋ ತಿಳಿಯದೆ ‘ಈ ಗಾಯ…?’ ಎಂದು ಶುರು ಮಾಡಿದೆ. ಅದಕ್ಕವರು ನನ್ನ ಪ್ರಶ್ನೆಯನ್ನು ಪೂರ್ತಿ ಅರ್ಥ ಮಾಡಿಕೊಂಡವರಂತೆ;
“ಒಂಭತ್ತನೇ ಕ್ಲಾಸಿನಾಗೆ ಫೇಲಾಗಿದ್ದೆ. ಅಪ್ಪ ಎಲ್ಲಾರ ಮುಂದೆ ಹೊಡೆದುಬಿಟ್ಟ ಅನ್ನೋ ಒಂದೇ ಒಂದು ಕಾರಣಕ್ಕೆ ಸಿಟ್ಟಿನಿಂದ ಅವಮಾನದಿಂದ ಅಪ್ಪನನ್ನು ಹೆದ್ರಿಸ್ಬೇಕು ಅಂತ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳೋದಕ್ಕೆ ಹೋದೆ. ಪರಿಣಾಮ ಮಾತ್ರ ಭಯಂಕರವಾಗಿತ್ತು. ಅರ್ಧಕ್ಕರ್ಧ ದೇಹ ಸುಟ್ಟು ಹೋಗಿತ್ತು. ನಾನು ಅಡ್ಮಿಟ್ ಆಗಿದ್ದ ಆಸ್ಪತ್ರೆಯಲ್ಲಿ ಡಾಕ್ಟರ್ ಅಂದಿದ್ರು; ಈ ತರದ ಪರಿಸ್ಥಿತಿಯಲ್ಲಿ ಸುಟ್ಟುಹೋಗ್ತಾ ಇರೋರನ್ನು ಬದುಕಿಸೋದಕ್ಕೆ ಹೋಗೋರು ಕೂಡ ಬೆಂದು ಹೋಗ್ತಾರೆ ಅಂತ. ಸರ್ಜರಿಗಳಾದವು. ದುಡ್ಡು ಹೊಳೆಯ ತರ ಹರಿಸಬೇಕಾಯಿತು. ಆಸ್ಪತ್ರೆ ಖರ್ಚು, ಔಷಧಿ ಖರ್ಚು, ಊಟದ ಖರ್ಚು ಒಂದಾ ಎರಡಾ? ಅಪ್ಪ ನಮಗಿದ್ದ ಜಾಗವನ್ನೂ ಕೂಡ ಮಾರಿದ್ರು. ನನಗೆ ಹೀಗಾಯ್ತಲ್ಲ ಅಂತ ಶಾಕಲ್ಲೆ ಮನಸ್ಸಿಗೆ ಹಚ್ಚಿಕೊಂಡು ಹಾಸಿಗೆ ಹಿಡಿದು ತೀರಿಕೊಂಡುಬಿಟ್ರು.” ಅವರ ಕಣ್ಣಲ್ಲಿ ನೀರಿದ್ದವು. ನಾಗವೇಣಿ ಒಲೆಯೊಳಗಿನ ಬೆಂಕಿಯನ್ನೇ ದಿಟ್ಟಿಸುತ್ತಿದ್ದರು… ಉಮಾ ಸೆರಗಿನಿಂದ ಕಣ್ಣೊರೆಸಿಕೊಳ್ಳುತ್ತಾ ಮತ್ತೆ ಮುಂದುವರೆಸಿ “ನನ್ನ ತರದ ಅತಿರೇಕದ ನಿರ್ಧಾರವನ್ನು ಯಾರೂ ತಗೋಬಾರ್ದು! ಅದರಿಂದ ಯಾವ ಪ್ರಯೋಜನಾನೂ ಇಲ್ಲ. ಸಮಸ್ಯೆಯ ಬಗ್ಗೆ ಮಾತಾಡೋದಕ್ಕಿಂತ ಬೇರೆ ಪರಿಹಾರ ಯಾವುದೂ ಇಲ್ಲ. ಎಷ್ಟೋ ಸಲ ನಾವದನ್ನು ಮರೆತು ಏನನ್ನೋ ಮಾಡೋದಕ್ಕೆ ಹೋಗ್ತೀವಿ. ಅದು ಮತ್ತಿನ್ನೇನೋ ಆಗಿರತ್ತೆ… ಅವತ್ತು ವಿಕ್ಟೋರಿಯಾ ಆಸ್ಪತ್ರೆಲಿ ನನ್ನ ಜೀವ ಉಳಿಯೋದೆ ಇಲ್ಲ, ಅದಕ್ಕೆ ಬೇರೆ ಯಾವುದಾದರೂ ಆಸ್ಪತ್ರೆಗೆ ಕರ್ಕೊಂಡು ಹೋಗೋದೇ ಉತ್ತಮ ಅಂತ ಅಲ್ಲಿನ ಡಾಕ್ಟರು ಹೇಳಿದ್ರು. ನಾವು ಆಟೋದಲ್ಲಿರುವಾಗ ಒಮ್ಮೆ ಕನ್ನಡಿನಾಗೆ ನನ್ನ ಮುಖ ನೋಡಿಕೊಂಡು ನಾನೇ ಬೆಚ್ಚಿ ಬಿದ್ದಿದ್ದೆ. ಅದೆಷ್ಟು ಶಾಕ್ ಆಗಿತ್ತು ಅಂದ್ರೆ ಈಗ್ಲೂ ಮೈಯೆಲ್ಲಾ ನಡುಕ ಬರತ್ತೆ…” ಎಂದ ಅವಳ ಕಣ್ಣುಗಳು ಹನಿಗೂಡಿದ್ದವು.

ಮನೆಯಿಂದ ಹೊರಗಡೆ ಬಂದ ಶಾಹೀನಾ ಅಲಿಯಾಸ್ ಉಮಾಳನ್ನು ಕಂಡ ಕೊಡಲೇ ನನಗೆ ಅಯ್ಯೋ ಎನಿಸಿತು. ಅವಳ ದೇಹದ ಶೇಕಡಾ ನಲವತ್ತು ಭಾಗ ಬೆಂಕಿ ಅವಗಢದಲ್ಲಿ ಸುಟ್ಟುಹೋಗಿತ್ತು. ಒಂದು ಕೈಯಂತೂ ತೊಂಭತ್ತರಷ್ಟು ಭಾಗ ಸುಟ್ಟು ಕರಕಲಾಗಿತ್ತು. ಅವರು ಈ ಮೊದಲು ‘ಅಗ್ನಿ ರಕ್ಷಾ’ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೆಂಬುದು ಗೊತ್ತಿದ್ದರೂ ತಾವೇ ಸ್ವತಃ ಅಗ್ನಿ ಅವಘಡಕ್ಕೆ ತುತ್ತಾಗಿರಬಹುದೆಂದು ಊಹಿಸಿರಲಿಲ್ಲ.

ಚಹಾ ಪಾತ್ರೆಯೊಳಗಿನಿಂದ ಉಕ್ಕು ಬಂದಿದ್ದೆ ನಾಗವೇಣಿ ಕುಳಿತಲ್ಲಿಂದ ಎದ್ದು ಒಲೆಯ ಪಕ್ಕದಲ್ಲಿದ್ದ ಮಸಿ ಅರಿವೆಯನ್ನು ತೆಗೆದುಕೊಂಡು ಕೆಳಗಿಳಿಸಿ ನಾಲ್ಕು ಲೋಟದೊಳಗೆ ಸುರುವಿದಳು. ಒಂದು ಲೋಟವನ್ನು ತೆಗೆದುಕೊಂಡು ಹೊರಗಡೆ ಹೋಗಿ ‘ತೌಸಿಫ್… ಚಾ ಕುಡಿದು ಹೋಗು ಬಾ.’ ಎಂದು ಕರೆದಳು. ಉಮಾಳ ಮಗ ತೌಸಿಫ್ ಹಳೆಯ ಸೈಕಲ್ ಟೈರನ್ನು ಕೈಯಲ್ಲಿ ತಿರುಗಿಸುತ್ತಾ ಒಳಗೆ ಬಂದು ಗಾಲಿಯನ್ನು ಮಲಗಿಸಿ ಅದರ ನಡುವೆ ಕುಳಿತು ಚಹಾ ಕುಡಿದು ಮತ್ತೆ ಎದ್ದು ತನ್ನ ಗಾಲಿ ತೆಗೆದುಕೊಂಡು ಅದನ್ನು ತಳ್ಳಿ ತಿರುಗಿಸುತ್ತಾ ‘ರೈಯಾ ರೈಯಾ’ ಎಂದು ಜೋರಾಗಿ ಹೇಳುತ್ತಾ ಹೋದ. ಒಂದು ಕ್ಷಣ ಮೌನ ಆವರಿಸಿತು.

“ಇದಾದ ಮೇಲೇನೆ ಅಗ್ನಿರಕ್ಷಾ ಸಂಸ್ಥೆ ಸೇರಿಕೊಂಡಿದ್ದಾ?” ನಾನು ಕೇಳಿದೆ.

“ಹೌದು. ಮೊದಮೊದಲಿಗೆ ಕಷ್ಟ ಅನಿಸೋದು… ದೇಹ ಸುಟ್ಟುಕೊಂಡು ಬಂದು ಮುಂದೆ ಕೂತಿರುವ ರೋಗಿಗಳನ್ನು ನೋಡಿದರೆ ವಾಂತಿ ಬರೋದು. ಅವರ ಮುಖಗಳು ನೋಡೋ ಹಾಗಿರ್ತಾನೆ ಇರಲಿಲ್ಲ… ನಾನು ಒಮ್ಮೆ ಅದೇ ಸ್ಥಾನದಲ್ಲಿದ್ದೆನಲ್ಲ! ಅದನ್ನ ನೆನೆಸಿಕೊಳ್ಳುತ್ತಾ ಬಂದ ಮೇಲೆ ಆ ವಿಷಯದಲ್ಲಿ ಒಂದು ಹಂತಕ್ಕೆ ಬರೋದಕ್ಕೆ ಸಾಧ್ಯ ಆಯ್ತು. ಹದಿನೇಳನೆ ವರ್ಷದಿಂದ ಹದಿನಾಲ್ಕು ವರ್ಷದವರೆಗೆ ಅಗ್ನಿರಕ್ಷಾ ಸಂಸ್ಥೆಯಲ್ಲಿ ಅಡುಗೆಯವಳಾಗಿ, ಕಾಲಾನಂತರದಲ್ಲಿ ನರ್ಸ್ ಆಗಿ ಕೆಲಸ ಮಾಡಿದೆ. ಗಾಯ ಮಾಯಿಸುವುದು, ಸೈಕೋತೆರಪಿ ಮುಂತಾದ ಕೆಲಸಗಳಲ್ಲಿ ತೊಡಗಿಕೊಂಡೆ. ಅನುಭವ ಏನೋ ಬಂತು ಆದರೆ ಸರ್ಟಿಫಿಕೇಟ್ ಮಾತ್ರ ಬರಲಿಲ್ಲ.” ಎಂದು ಹೇಳುವಾಗ ಅವರ ಧ್ವನಿಯಲ್ಲಿ ಸಮಾಧಾನ ಮತ್ತು ನಿಟ್ಟುಸಿರು ಎರಡೂ ಇತ್ತು.

“ಕ್ಷಮಿಸಿ ಉಮಾ ಅವ್ರೆ.”

“ಉಮಾ ಅಲ್ಲಮ್ಮ. ಶಾಹೀನಾಕ್ಕ ಅನ್ನು,”

“ಉಮಾ ಇದ್ದದ್ದು ಶಾಹೀನಾ ಆಗಿದ್ದು ಯಾವಾಗ?”

”ನಾವ್ಯಾರೂ ಯಾರದ್ದೋ ಒತ್ತಾಯದಿಂದ ಇಸ್ಲಾಮರಾಗಿ ಕನ್ವರ್ಟ್ ಆಗಿದ್ದಲ್ಲ. ನಮ್ಮ ಸ್ವಂತ ಇಚ್ಚೆಯಿಂದಾನೆ ಮುಸಲ್ಮಾನರಾಗಿದ್ದು. ಅದೂ ನಾನು ನನ್ನ ತಂಗಿ ಮತ್ತೆ ನಮ್ಮ ತಮ್ಮ ಅಷ್ಟೇ ಕನ್ವರ್ಟ್ ಆಗಿರದು. ನಮ್ಮಮ್ಮ ಈಗಲೂ ಹಿಂದೂ ಆಗಿದಾರೆ. ಈಗ ನೋಡಿ ನಮ್ಮ ಮನೇಲಿ ನಾವು ಅರ್ಧ ಮುಸಲ್ಮಾನರು ಮತ್ತರ್ಧ ಹಿಂದೂಗಳು. ಎಲ್ಲಾ ದೇವರು ಒಂದೇನೆ ಮೇಡಂ. ಕನ್ನಡದಲ್ಲಿ ನಾವು ದೇವರು ಅಂತೀವಿ. ಇಂಗ್ಲೀಷಲ್ಲಿ ಗಾಡ್ ಅಂತೀವಿ. ಹಿಂದಿಯಲ್ಲಿ ನಾವು ಅಲ್ಲಾಹ್ ಅಂತೀವಿ. ತಮಿಳಲ್ಲಿ ಕಾದವಲ್ ಅಂತೀವಿ, ತೆಲುಗುವಿನಲ್ಲಿ ಥೇಹುದಾ ಅಂತೀವಿ… ಹೆಸರಷ್ಟೇ ಬೇರೆ. ಉಳಿದಿದ್ದೆಲ್ಲಾ ಒಂದೇ! ನಮ್ಮ ನಮ್ಮ ಮಧ್ಯೆ ಈ ಕೆಟ್ಟ ಜನಾನೇ ತಂದಿಡ್ತಾರೆ. ಆದರೆ ಈಗ ಒಂದೇ ಒಂದು ವ್ಯತ್ಯಾಸ ಅಂದರೆ ನಮ್ಮ ದೇವರನ್ನು ಪ್ರಾರ್ಥಿಸೋದಕ್ಕೆ ಏನನ್ನು ಖರ್ಚು ಮಾಡೋದು ಬೇಕಾಗಿಲ್ಲ. ನಮ್ಮ ನಮ್ಮ ಮನೆಗಳಲ್ಲೇ ಯಾವುದೇ ಖರ್ಚಿಲ್ಲದೆ ಪ್ರಾರ್ಥನೆ ಮಾಡಬಹುದು…” ಎಂದಾಗ ಅವರ ಕಣ್ಣಲ್ಲಿ ಹೊಳಪಿತ್ತು.

”ನಾನು ನಮ್ಮ ಮನೆಯವರನ್ನು ಮದುವೆಯಾಗ್ತೀನಿ ಅಂದಾಗ ಅಪ್ಪ ಬೇಡ ಅಂದಿದ್ರು. ಇಬ್ಬರು ಪ್ರೀತಿ ಮಾಡ್ತಿದ್ವಲ್ಲ ಮೇಡಂ ಅದಕ್ಕೆ ಮರೆಯೋದಕ್ಕೆ ಆಗಲಿಲ್ಲ. ಕೊನೆಗೆ ಅಪ್ಪ ತೀರಿಕೊಂಡ ಮೇಲೆ ಅಮ್ಮಾನೆ ಮುಂದೆ ನಿಂತು ಮದುವೆ ಮಾಡಿಕೊಟ್ರು. ಮದುವೆಯಾಗಿ ಮೊದಲನೇ ವರ್ಷಕ್ಕೇನೆ ತೌಸಿಫ್ ಹುಟ್ಟಿದ. ಮಗೂಗೆ ಎರಡು ವರ್ಷ ಆದ ಮೇಲೆ ಕೆಲ್ಸಕ್ಕೆ ಹೋಗ್ಬೇಕು ಅಂದುಕೊಳ್ತಾ ಇದ್ದೆ. ಅದರ ನಡುವೆನೆ ಈ ಕೊರೋನಾ ಬಂತು. ನಾನು ಈಗ ಮೂರು ತಿಂಗಳು ಹೊಟ್ಟೆಯಲ್ಲಿದೀನಿ. ಏನೇ ಅನ್ನಿ ಮೇಡಂ; ಕೆಲಸಕ್ಕೆ ಹೋಗ್ತಾ ಇರ್ಬೇಕಾದರೇನೇ ಚೆನ್ನಾಗಿತ್ತು. ಬೇಕಾದ ಹಾಗೆ ಇಷ್ಟ ಪಟ್ಟಿರೋ ಬಟ್ಟೆ ತಗೋಬೋದಿತ್ತು. ಈಗ ಆಗಲ್ಲ ಅಂತಲ್ಲ. ಆದರೂ ಮೊದಲಿದ್ದ ಸ್ವಾತಂತ್ರ್ಯ ಇಲ್ಲ… ಏನೇ ಅನ್ನಿ, ಹೆಣ್ಣುಮಕ್ಕಳು ಕೆಲಸಕ್ಕೆ ಹೋಗ್ಬೇಕು ಮೇಡಂ. ಈ ಮನೆಕೆಲಸಕ್ಕೆ ಕೊನೆ ಮೊದಲು ಯಾವುದೂ ಇಲ್ಲ. ಹಗಲೂ ರಾತ್ರಿ ಅನ್ನೋದು ಯಾವುದೂ ಇರಲ್ಲ. ಚಾಕರಿ, ಚಾಕರಿ, ಚಾಕರಿ.” ಎಂದು ಮತ್ತೆ ಕೆಲಸಕ್ಕೆ ಹೋಗುವ ಅಭಿಲಾಷೆಯನ್ನು ಕಣ್ಣಲ್ಲಿ ತುಳುಕಿಸಿದರು.

ಮಾತು ಮತ್ತೆ ಕೊರೋನಾ ಸಂಕಷ್ಟದ ಕಡೆಗೆ ಹೊರಳಿಕೊಂಡಾಗ ”ನಮ್ಮನಿಯವರಿಗೆ ಆಟೋ ಡ್ರೈವರ್ ಗಳಿಗೆ ಸರ್ಕಾರ ಕೊಟ್ಟ ಯಾವುದೇ ಸಹಾಯಧನ ಏನೂ ಸಿಗಲೇ ಇಲ್ಲ. ಒಂದು ಇವರ ಹೆಸರು ಯೂನಿಯನ್ನಿಯಲ್ಲಿ ಇಲ್ಲ ಮೇಲಾಗಿ ಇವರಿಗೆ ಆಟೋ ಲೈಸೆನ್ಸ್ ಇಲ್ಲ. ಎಲ್ಲಾ ಕಷ್ಟಗಳೂ ಒಮ್ಮೆಗೆ ವಕ್ಕರಿಸಿಕೊಂಡಿವೆ ಅನಿಸ್ತಾ ಇವೆ ನೋಡ್ರಿ ಮೇಡಂ.” ಎಂದು ಅಳಲು ತೋಡಿಕೊಂಡರು. ನಾಗವೇಣಿ ಅಷ್ಟರಲ್ಲಾಗಲೇ ಚಹಾ ಕುಡಿದು ಮುಗಿಸಿದ್ದಳು.

”ನನ್ನ ಕಥೆಯಾದರೂ ಹೀಗೆ. ನಮ್ಮ ನಾಗವೇಣಿ ಕಥೆ ಯಾರಿಗೂ ಬೇಡ ಅನ್ನೋಹಾಗಿದೆ. ಚಿಕ್ಕವಳಿದ್ದಾಗ ಇವಳ ಅಪ್ಪ ಅನುಮಾನದ ಪಿಶಾಚಿ ಅಂದರೆ ಅನುಮಾನದ ಪಿಶಾಚಿ. ಮೇಲಾಗಿ ಕುಡಿತಾ ಅಂದ್ರೆ ಕುಡಿತ. ಮೇಲಾಗಿ ಯಾವಳನ್ನೋ ಇಟ್ಕಂಡಿದ್ದ ಬೇರೆ! ಎಲ್ಲಾ ದುಡ್ಡನ್ನ ಅವಳ ಎದೆ ಮೇಲೆ ಹೋಗಿ ಸುರಿತಾ ಇದ್ದ. ಇವಳು ಒಂದಿಷ್ಟು ವರ್ಷ ಆಸ್ಪತ್ರೆನಾಗೆ ಕ್ಲೀನಿಂಗ್ ಕೆಲಸಕ್ಕೆ ಸೇರಿಕಂಡಿದ್ಲು. ಆಮೇಲೆ ಇವಳಪ್ಪ ಅದಕ್ಕೂ ಅನುಮಾನ ಪಟ್ಟಾಗ ಇದರ ಸಹವಾಸನೆ ಬೇಡ ಅಂತ ಮನೆಕೆಲಸಕ್ಕೆ ಸೇರಿಕಂದ್ಲು. ಇವಳು ನೋಡೋದಕ್ಕೆ ಬೇರೆ ಚೆನ್ನಾಗಿದ್ದಳು. ಇವಳಿದ್ದ ಪಕ್ಕದ ಓಣಿಯ ಹುಡುಗನೊಬ್ಬ ಇವಳನ್ನ ಪ್ರೀತಿಸ್ತೀನಿ ಅಂತ ಗಂಟು ಬಿದ್ದು ಒಪ್ಪಲಿಲ್ಲ ಅಂದ್ರೆ ಆತ್ಮಹತ್ಯೆ ಮಾಡಿಕೋತೀನಿ ಅಂತ ಹೆದರಿಸಿ ಮದುವೆಯಾದ. ಆದದ್ದೊಂದೇ ಬಂತು. ಇವಳ ಅತ್ತೆ ಉರಿಸಿದ್ದು ಯಾರಿಗೂ ಬೇಡ. ಇವಳಿಗೆ ಮಕ್ಕಳಾಗಿಲ್ಲ ಅಂತ ಗಂಡನಿಗೆ ಎರಡನೇ ಮದುವೆ ಮಾಡೋದಕ್ಕೆ ಓಡಾಡಿದ್ರು. ಈ ಮಹಾತಾಯಿಗೆ ಮೂರು ತಿಂಗಳಾಗೋವರೆಗೂ ತಾನು ಗರ್ಭಿಣಿ ಅಂತಾನೆ ಗೊತ್ತಿರಲಿಲ್ಲ. ಪಕ್ಕದ ಮನೆಯ ಹೆಂಗಸೊಬ್ಬಳು ಹೇಳಿದ ಮೇಲೇನೆ ಗೊತ್ತಾಗಿದ್ದು. ಇವಳ ಗಂಡ ಮಗು ಆಗಿ ಮೂರು ತಿಂಗಳಿಗೆ ಬಿಟ್ಟು ಹೋದ. ಮಗಳು ದೊಡ್ಡೋಳಾಗಿ ಮತ್ಯಾವನ್ನೋ ಪ್ರೀತಿಸಿ ಅವನ ನೆನಪಲ್ಲೇ ವಿಷ ಕುಡಿದು ಸತ್ತಳು. ಇರೋ ಒಬ್ಬ ಮಗನಿಗೆ ಕೆಲಸ ಇಲ್ಲ. ಇವಳಿಗೆ ಬಂದಿರೋ ಕಷ್ಟ ಸಾಲದು ಅಂತ ನಿಮಾನ್ಸ್ ನಾಗೆ ಅದೇನೋ ಮೆದುಳಿನಾಗೆ ಗಡ್ಡೆ ಆಗಿದೆ ಅಂತ ಆಪರೇಷನ್ ಕೂಡ ಆಯ್ತು. ಇವಳು ಅನುಭವಿಸಿದ್ದು ಒಂದೊಂದಲ್ಲ ಮೇಡಂ. ಈಗಲೂ ಹಳೇದನ್ನು ನೆನೆಸಿಕೊಂಡು ನಿದ್ದೆ ಇಲ್ಲದೆ ಒದ್ದಾಡ್ತಾಳೆ. ರಾತ್ರಿಯೆಲ್ಲಾ ಕನವರಿಸ್ತಾಳೆ. ನಾನೇ ಇವಳ ಮನೆಗೆ ಹೋಗಿ ಜೊತೆಗೆ ಮಲಗಿಕೊಂಡಿದ್ದೀನಿ. ಮೊನ್ನೆ ಮೊನ್ನೆ ೫೦೦೦ ರೂಪಾಯಿ ಸಂಬಳದ ಮನೆಗೆಲಸ ಸಿಕ್ತು ಅಂತ ಖುಷಿ ಪಡೋದ್ರೊಳಗೆ ಕೊರೋನಾ ಬಂತು. ಬಂದ ಕೆಲಸ ಬಂದ ಹಾಗೆ ಹೋಯ್ತು. ಇವಾಗೇಳಿ ಮೇಡಂ ನಾವು ಊಟಕ್ಕೆ ಏನು ಮಾಡಣ? ಸರ್ಕಾರ ಬರಿ ಅಕ್ಕಿ ಕೊಡ್ತಾರೆ. ಬರಿ ಅಕ್ಕಿ ಕೊಟ್ರೆ ಸಾಕಾ? ಉಳಿದದ್ದಕ್ಕೆ ಏನು ಮಾಡ್ಬೇಕು? ಇದರ ಬಗ್ಗೇನಾದರೂ ಯೋಚನೆ ಮಾಡ್ಬೇಕಲ್ವಾ? ಏನೋ ಮೇಡಂ, ಏನೇ ಬಂದರೂ ಮೊದಲು ಅನುಭವಿಸದು ಬಡವರೇ ನೋಡಿ… ಎಲ್ಲಾ ಯಾವಾಗಿಂದ ಮೊದಲಿನ ತರಾ ಆಗತ್ತೋ ನೋಡ್ಬೇಕು. ನಾನು ಮತ್ತೆ ಅಗ್ನಿ ರಕ್ಷಾಗೆ ಹೋಗ್ಬೇಕು ಅಂತ ಮಾಡೀನಿ. ನಾಲ್ಕು ಜನರಿಗೆ ಏನು ಸಹಾಯ ಮಾಡ್ತೀವೊ ಅದೇ ನಮ್ಮ ಹಿಂದೆ ಬರದು. ನಾಗವೇಣಿಗೆ ಮತ್ತೆ ಮನೆಗೆಲಸ ಸಿಕ್ಕರೆ ಇವಳಿಗೂ ಇವಳ ಮಗನಿಗೂ ಒಂದು ದಾರಿಯಾಗತ್ತೆ ಮೇಡಂ…” ಎಂದು ಒಂದೇ ಉಸಿರಿಗೆ ಹೇಳಿದಳು.

ಒಲೆಯಲ್ಲಿನ ಬೆಂಕಿ ಉರಿಯುತ್ತಲೇ ಇತ್ತು. ಹೊರಗಡೆ ಬಿಸಿಲು ಧೋ ಎಂದು ಸುರಿಯುತ್ತಿತ್ತು. ಬೆಳಿಗ್ಗೆ ಬರಿಗಾಲಲ್ಲಿ ತಮ್ಮೂರಿಗೆ ವಲಸೆ ಹೋಗುತ್ತಿದ್ದ ಕೂಲಿ ಕಾರ್ಮಿಕರ ಚಿತ್ರ ಕಣ್ಣಮುಂದೆ ಹಾದುಹೋಯಿತು. ಈಗ ಶಾಹೀನಾ ಮತ್ತು ನಾಗವೇಣಿಯ ಕಥೆಗಳು ಎಷ್ಟೆಲ್ಲಾ ಬವಣೆಗಳಿಗೆ ತಳುಕು ಹಾಕಿಕೊಂಡಿರುವುದನ್ನು ಊಹಿಸಿಕೊಳ್ಳಲೂ ಸಾಧ್ಯವಾಗದಿದ್ದರೂ ಜೀವಂತ ಪಾತ್ರಗಳಂತೆ ನನ್ನ ಮುಂದೆಯೇ ನಿಂತಿದ್ದರು. ನನಗೆ ಮಾತು ಹೊರಡಲಿಲ್ಲ. ”ಧೈರ್ಯ ತಂದುಕೊಳ್ಳಿ. ಈ ಕಷ್ಟಕಾಲ ಕೂಡ ಬೇಗನೆ ಕಳೆದುಹೋಗತ್ತೆ… ಅಷ್ಟು ನಂಬಿಕೆಯನ್ನು ನಾವು ಕಳೆದುಕೊಳ್ಳೋದು ಬೇಡ.” ಎಂದು ಸಾಂತ್ವನ ಹೇಳುವಂತೆ ಅವರ ಕೈ ಅಮುಕಿದೆ. ಪರ್ಸಿನೊಳಗಿಂದ ಒಂದಿಷ್ಟು ದುಡ್ಡು ತೆಗೆದುಕೊಡಲು ಹೋದೆ. ಮುಂಚೆ ಆಗಿದ್ರೆ ಬೇಡ ಅಂತಿದ್ವಿ… ಆದರೆ ಈಗ ಬೇಡ ಅನ್ನೋ ಪರಿಸ್ಥಿತಿಲಿ ನಾವಿಲ್ಲ ಮೇಡಂ. ನಮ್ಮ ಕಷ್ಟದ ಕಥೆ ಹೇಳಿಕೊಂಡು ದುಡ್ಡು ಇಸ್ಕೊತಿರೋದಕ್ಕೆ ಬೇಜಾರಿದೆ. ನೀವೇಳಿದಂಗೆ ಆ ಒಳ್ಳೆ ಕಾಲ ಬೇಗನೆ ಬರಲಿ.” ಎಂದರು. ನಾನು ರೆಕಾರ್ಡಿಂಗ್ ಆಫ್ ಮಾಡಿಕೊಂಡು ಅವರಿಗೆ ಸಮಾಧಾನ ಹೇಳಿ ಹೊರಡಲು ಅನುವಾದೆ. ಸ್ವಲ್ಪ ದೂರ ಹೋಗಿ ಓಣಿಯ ತಿರುವಿನಲ್ಲಿ ನಿಂತು ಹಿಂತಿರುಗಿ ನೋಡಿದೆ. ಮನೆಯ ಮುಂದೆ ತೌಸಿಫ್ ಗಾಲಿ ಉರುಳಿಸುತ್ತಲೇ ಇದ್ದ. ಶಾಹೀನಾ ಮತ್ತು ನಾಗವೇಣಿ ಟಾಟಾ ಮಾಡುತ್ತಲೇ ಇದ್ದರು.