ನಗರವಾಸಿಗಳಿಗೆ ಸಹಜವಾಗಿರಬೇಕಿದ್ದ ಕತ್ತಲೆಂದರೂ ಭಯ, ನಿಶ್ಯಬ್ದತೆಯೂ ಭಯ.. ಕೆಲಸದ ಬೆನ್ನೇರಿ ನಗರಗಳಲ್ಲಿ ಬಂದು ಕುಳಿತ ನಾವು ಪ್ರಕೃತಿಯಿಂದ ದೂರವುಳಿದು ನಮ್ಮದೇ ಕೃತಕ ಜಗತ್ತನ್ನು ಸೃಷ್ಟಿಸಿಕೊಂಡಿದ್ದೇವೆ. ನಾವು ಮಲಗುವ ಹೊತ್ತಿಗೆ ಪೂರ್ಣ ಕತ್ತಲೂ ಇಲ್ಲ, ನಿಶ್ಯಬ್ದತೆಯೂ ಇಲ್ಲ… ಅರೆಬರೆ ಕತ್ತಲಿಗೆ ಹೊಂದಿಕೊಂಡು ಮಲಗುತ್ತಿದ್ದೇವೆ. ಯಾವೊಂದೂ ಸದ್ದಿಲ್ಲದೇ, ಯಾದರೂ ಸಂಪರ್ಕವಿಲ್ಲದೇ ಈರುವ ಏಕಾಂತದ ಅನುಭವವೇ ಇಲ್ಲದಂತಾಗಿ ಹೋಗಿ, ಸಂತೆಯಲ್ಲಿ ಬದುಕುವವರಂತೆ ಬದುಕಿದ್ದೇವೆ. ಈಗ ಕೋವಿಡ್‌ ಕಾರಣದಿಂದಾಗಿ ತಮ್ಮತಮ್ಮ ಊರಿಗೆ ಮರಳಿರುವ ಜನರಿಗೆ ಈ ಅನುಭವವಾಗುತ್ತಿದೆ. ಇಷ್ಟು ದಿನ ಗಳಿಸಿದ್ದೇನು? ಕಳೆದುಕೊಂಡದ್ದೇನು ಎಂಬುದರ ಲೆಕ್ಕವೂ ಸರಿಯಾಗಿ ಸಿಗುತ್ತಿದೆ.
ರೂಪಶ್ರೀ ಕಲ್ಲಿಗನೂರ್‌ ಬರೆದ ಲೇಖನ

 

ಆವೊತ್ತೊಂದಿನ ಮೊದಲನೆ ಸಲ ವಿಪಿನ್‌ ಮತ್ತೆ ಅಲ್ಲಿನ ಸ್ಥಳೀಯ ಗೆಳೆಯರೊಟ್ಟಿಗೆ ಕಾಡಿಗೆ ಹೋಗಿದ್ದೆ. ಕಾಡಂದ್ರೆ ಗೊಂಡಾರಣ್ಯವೇನೂ ಅಲ್ಲ. ಮನುಷ್ಯರೇ ನಿರ್ಮಿಸಿದ್ದ ಕಾಡದು ಹಾಗಾಗಿ ಆ ಕಾಡಲ್ಲಿ ಅಲ್ಲಿನ ಸುತ್ತಮುತ್ತಲ ಹಳ್ಳಿಗರ ಸಂಪರ್ಕವಿದೆ. ಹಾಗೇ ವನ್ಯ ಮೃಗಗಳೂ ಅದರ ಪಾಲುದಾರರಾಗಿವೆ. ಒಟ್ಟಿನಲ್ಲಿ ಕಾಡಿನ ಸಂಪರ್ಕವೇ ನನಗೆ ಆಗ ಹೊಸತು. ಹಾಗಾಗಿ ಕಾಡಲ್ಲಿ ಸಿಗುತ್ತಿದ್ದ ಪ್ರತಿಯೊಂದು ಮರ-ಗಿಡವೂ, ಹೂಬಳ್ಳಿಯೂ, ಕೀಟ-ಪಕ್ಷಿಗಳೆಲ್ಲವೂ ನನ್ನ ಅಚ್ಚರಿಗೆ ಮೂಲ. ಎಲ್ಲವನ್ನೂ ಕಣ್ಣೂ-ಬಾಯಿ ಅರಳಿಸಿ ನೋಡುತ್ತಿದ್ದೆ. ತೀರಾ ಅನನ್ಯವಾಗಿ ಕಂಡದ್ದರ ಬಗ್ಗೆ ಕೇಳಿ ಕೇಳಿ ತಿಳಿದುಕೊಳ್ಳುತ್ತಿದ್ದೆ.

ಸಾಮಾನ್ಯವಾಗಿ ಎಲ್ಲರಿಗೂ ಕಾಡು ಕಾಣುವುದು ಯಾವುದೋ ಚಲನಚಿತ್ರಗಳಲ್ಲಿ. ಬಹುತೇಕ ಸಿನೆಮಾ ನಿರ್ದೇಶಕರು ಕಾಡನ್ನ ಕಳ್ಳರ ಅಡಗುದಾಣವಾಗಿ, ಭಯಾನಕ ಸ್ಥಳವೆಂಬಂತೆ ಬಿಂಬಿಸುವುದೇ ಹೆಚ್ಚು. ಅದನ್ನೊಂದು ಕೌತುಕದ ತಾಣವಾಗಿ, ಜೀವಸಂಕಲುಕ್ಕೆ ಅದರ ಅವಶ್ಯಕತೆಯ ಬಗ್ಗೆ ಹೇಳುವುದರ ಬಗ್ಗೆಯೆಲ್ಲ ಅವರೆಲ್ಲ ತಲೆಕೆಡಿಸಿಕೊಳ್ಳುವುದೇ ಇಲ್ಲ. ಹಾಗಾಗಿ ಹೆಚ್ಚಾನು ಹೆಚ್ಚು ಜನಸಾಮಾನ್ಯರಿಗೆ ಕಾಡಿನ ಚಿತ್ರಣವೆಂದರೆ ಕಾಡಿನಲ್ಲಿ ನಡೆದುಕೊಂಡುಹೋಗುವಾಗ, ಹುಲಿಯೋ, ಸಿಂಹವೋ, ಆನೆಯೋ ಅವರನ್ನು ಅಟ್ಟಾಡಿಸಿಕೊಂಡು ಕೊಂದು ತಿಂದುಬಿಡುವುದೇ ಆಗಿರುತ್ತದೆ. ಹಾಗಾಗಿ ಯಾರಿಗೂ ಕಾಡೆಂದರೆ ಅಷ್ಟು ಅಪ್ಯಾಯಮಾನವಲ್ಲ ಅಂತ ಮೇಲ್ನೋಟಕ್ಕೆ ಅನ್ನಿಸುತ್ತೆ. ನಾನೂ ಮೊದಲು ಅಂಥಜನರ ಗುಂಪಿನಲ್ಲೊಬ್ಬಳಾಗಿದ್ದವಳು. ಹಾಗಾಗಿ ಕಾಡೆಂದರೆ ನನಗೂ ಭಯವಿತ್ತಾದರೂ, ಪ್ರಕೃತಿಯ ಮೇಲಿನ ಪ್ರೀತಿಗೆ ಅವರೊಟ್ಟಿಗೆ ಹೋಗಿದ್ದೆ.

ಆ ಗುಂಪಿನಲ್ಲಿದ್ದ ಎಲ್ಲರಿಗೂ ಆ ಕಾಡಿನ ಪರಿಚಯವಿತ್ತು. ಒಬ್ಬೊಬ್ಬರಿಗೆ ಒಂದೊಂದು ವಿಷಯದ ಬಗ್ಗೆ ಆಸಕ್ತಿ. ಒಂದಿಬ್ಬರಿಗೆ ಕೀಟಗಳ ಬಗ್ಗೆ ಆಸಕ್ತಿಯಾದರೆ, ಮತ್ತಿಬ್ಬರಿಗೆ ಪಕ್ಷಿಗಳ ಬಗ್ಗೆ, ಇನ್ನೂ ಒಂದಿಬ್ಬರಿಗೆ ಮರ-ಗಿಡಗಳ ಬಗ್ಗೆ ಕುತೂಹಲ. ಹಾಗಾಗಿ ನಡೆಯುತ್ತಾ ಹೋದಂತೆ, ತಮ್ಮ ತಮ್ಮ ಆಸಕ್ತಿಯ ವಿಷಗಳನ್ನು ಹುಡುಕಿಕೊಂಡು ಬರುತ್ತಿದ್ದರು. ಮೊದಲೆಲ್ಲ ನಾನು ಒಂದರ್ಧ ಕಿ.ಮಿ. ನಡೆದೂ ಗೊತ್ತಿಲ್ಲದಂಥ ಪ್ರಾಣಿಯಾಗಿದ್ದೆ. ಅದರಲ್ಲೂ ಟ್ರೆಕ್‌ ಬೂಟುಗಳನ್ನು ಹಾಕಿಕೊಂಡು ನಡೆಯುವುದೊಂದು ನನಗೆ ಮಹಾ ತ್ರಾಸದಾಯಕ ವಿಷಯವೆನಿಸುತ್ತಿತ್ತು. ಹಾಗಾಗಿ ಸಿಕ್ಕ ಪ್ರತಿ ಗಿಡದ ಬುಡಗಳನ್ನು ಅಲ್ಲಾಡಿಸಿ, ಹಾವು, ಕಪ್ಪೆ, ಕೀಟಗಳನ್ನು ಹುಡುಕುತ್ತಿದ್ದವರ ಜೊತೆಗೆ ನಡೆಯುವಾಗ, ಒಂಚೂರು ದೂರ ಹೋಗುತ್ತಲೇ ನನಗೆ ಸಾಕು ಎನ್ನಿಸಲಾರಂಭಿಸಿತ್ತು. ಹಾಗಾಗಿ ಸಣ್ಣ ಕಲ್ಲೊಂದು ಸಿಕ್ಕ ತಕ್ಷಣವೇ ಉಸ್ಸಪ್ಪಾ ಅಂತ ನಾನು ಕುಳಿತುಕೊಂಡುಬಿಟ್ಟೆ. ಹಾಗಾಗಿ ಜೊತೆಗಿದ್ದವರು ಅಲ್ಲಲ್ಲೇ ಅದೂ ಇದೂ ಅಂತ ಹುಡುಕಿಕೊಂಡು ಆಚೀಚೆಯಾಗಿದ್ದರು.

ಒಂಚೂರು ಚೂರೇ ದೂರದಲ್ಲಿ ಸ್ನೇಹಿತರು ಹುಡುಕಾಟದಲ್ಲಿ ತಲ್ಲೀನರಾಗಿದ್ದರು. ನಾನೊಬ್ಬಳೇ ಸ್ವಲ್ಪ ಹಿಂದುಳಿದಿದ್ದೆ. ಅದು ಕಾಡಾಗಿದ್ದರಿಂದ ಹಕ್ಕಿ-ಪಕ್ಕಿಗಳ ಸದ್ದಲ್ಲದೇ ಬೇರಾವ ಸದ್ದೂ ಇರಲಿಲ್ಲ. ಚಿಕ್ಕಂದಿನಿಂದ ಬೆಂಗಳೂರಲ್ಲೇ ಬೆಳೆದ ನನಗೆ ನಿಶ್ಯಬ್ದದಲ್ಲಿದ್ದು ಅಭ್ಯಾಸವೇ ಇಲ್ಲ. ಹಾಗಾಗಿ ಸ್ನೇಹಿತರು ದೂರ ಹೋದಂತೆ, ಅವರ ಮಾತೂ ಕ್ಷೀಣಿಸಿ, ಕಾಡಿನ ಪ್ರತಿಯೊಂದೂ ಸದ್ದು, ಅಂದರೆ ಗಾಳಿಗೆ ಎಲೆಯದುರುವ ಸದ್ದೆಲ್ಲವೂ ನನಗೆ ಸ್ಪಷ್ಟವಾಗಿ ಕೇಳಲಾರಂಭಿಸಿದವು. ಅಸಹಜತೆಯ ಮಡಿಲಲ್ಲೇ ಬೆಳೆದಿದ್ದ ನನಗೆ ಸಹಜವಾದದ್ದೆಲ್ಲವೂ ವಿಚಿತ್ರವಾಗಿ, ಭಯಾನಕವಾಗಿ ಕೇಳಲಾರಂಭಿಸಿದ್ದವು. ಆಗ ಅಚಾನಕ್‌ ಆಗಿ ಕೇಳಿ ಬಂದ ಮತ್ತೊಂದು ಸದ್ದಿಗೆ ಸಣ್ಣಗೆ ಬೆವರಿದ್ದೆ… ಕಟ…ಕಟ…ಕಟ… ಎಂಬ ಸದ್ದು.. ಎಲ್ಲೋ ಕೇಳಿದ ಹಾಗಿದ್ಯಲ್ಲ ಈ ಸದ್ದನ್ನ ಅಂದುಕೊಂಡೆ… ಎಲ್ಲಿ… ಎಲ್ಲಿ… ಅಂತ ಯೋಚಿಸಿದ್ರೆ, ಅದೇ ಚಲನಚಿತ್ರದಲ್ಲಿ ಅಂತ ನೆನಪಾಗಿಬಿಡ್ತು.. ಹೌದು ಯಾವುದೋ ಚಿತ್ರದ ಭಯಾನಕ ದೃಶ್ಯವೊಂದಕ್ಕೆ ಬಳಸಿಕೊಂಡ ಸದ್ದದು ಎಂಬುದು, ನಿಮಿಷಾರ್ಧದಲ್ಲಿ ಥಟ್ಟನೇ ಹೊಳೆದುಬಿಡ್ತು. ಆ ಸದ್ದನ್ನು ನೇರವಾಗಿ ಕೇಳುತ್ತಿದ್ದೆ ನಾನು. ಏನು ಮಾಡಬಹುದು? ಅದಾಗಲೇ ನಾನು ಕತ್ತೆಯಂತೆ ಬೆಳೆದವಳಾಗಿದ್ದರಿಂದ ಸಣ್ಣ ಮಕ್ಕಳಂತೆ ಹೆದರಿಕೊಂಡು ಸ್ನೇಹಿತರ ಗುಂಪಿನತ್ತ ಓಡಿಹೋಗಲೂ ಆಗುವುದಿಲ್ಲವಲ್ಲ! ಹಾಗೆ ಮಾಡಿದರೆ ನನ್ನ ಮರ್ಯಾದೆ ಏನಾಗಬಹುದು? ಸುತ್ತಲಿದ್ದವರು ಏನಂದುಕೊಳ್ಳಬಹುದು? ಅಂತ ಮನಸ್ಸಲ್ಲೇ ಲೆಕ್ಕಹಾಕುತ್ತಾ, ಇಲ್ಲದ ದೇವರಿಗೆ ಒಳಗೊಳಗೇ ಕೈಮುಗಿಯುತ್ತಾ, ಪಿಳಿಪಿಳಿ ಕಣ್ಣುಬಿಡುತ್ತ, ದೂರದಲ್ಲಿದ್ದವರೆಲ್ಲ, ನನ್ನ ಕಣ್ಣಳತೆಯಲ್ಲೇ ಇದ್ದಾರಾ ಅಂತ ಆಗಾಗ ನೋಡಿಕೊಳ್ಳುತ್ತಿದ್ದೆ. ಮುಂದೇನಾಗಬಹುದೋ ಏನೋ ಅಂತ ಇದ್ದದ್ದು ಇಲ್ಲದ್ದನ್ನೆಲ್ಲ ನೆನೆಸಿಕೊಳ್ಳುತ್ತ ಸುತ್ತಮುತ್ತ ಮಿಕಿಮಿಕಿ ನೋಡುತ್ತ ಕುಳಿತಿದ್ದೆ. ಅಷ್ಟರಲ್ಲಿ ಯಾರೋ ಪುಣ್ಯಾತ್ಮರು ಏನನ್ನೋ ಹುಡುಕಿಕೊಂಡು ನನ್ನ ಬಳಿ ಬಂದಿದ್ರು. ಬದುಕಿದೆಯಾ ಬಡಜೀವ ಎಂದು ನನ್ನನ್ನು ನಾನು ಸಮಾಧಾನ ಮಾಡಿಕೊಳ್ಳುತ್ತಾ, “ಏನೋ ಸದ್ದು ಬರ್ತಿದ್ಯಲ್ಲಾ…. ಯಾವ್ದರದ್ದರು?” ಅಂತ ಕೇಳಿದೆ. ಅದಕ್ಕವರು “ಅದಾ… ಅದು ಬಿದಿರಿಂದು ಮೇಡಂ. ಅಲ್ನೋಡಿ… ಬಿದ್ರು ಮೆಳೆ ಇದ್ದಾವಲ್ಲ… ಗಾಳಿ ಬಂದಾಗ ಅವೆಲ್ಲ ಒಟ್ಟಿಗೇ ತೂಗಿದ್ರೆ ಹೀಗೆ ಸೌಂಡು ಬರತ್ತೆ” ಅಂತ ಹೇಳಿದ್ರು.. ಅಬ್ಬಾ ಅಂದುಕೊಂಡೆ ನಾನು. ಎಂಥಾ ಸದ್ದದು… ಪ್ರಕೃತಿಗೆ ಒಳಗೆ ಎಷ್ಟೆಲ್ಲ ಸೋಜಿಗದ ಸಂಗತಿಗಳಿವೆಯಲ್ಲ ಅಂತ ಅನ್ನಿಸಿತ್ತು.

ಈಗಿನ ಬಹುತೇಕ ವಿದ್ಯಾವಂತರೆಲ್ಲ ಕೆಲಸದ ಬೆನ್ನು ಹತ್ತಿ ನಮ್ಮ ಮೂಲನೆಲೆಗಳನ್ನು ಬಿಟ್ಟು, ಎಲ್ಲರೂ ಬಂದೂ ಬಂದೂ ಬೆಂಗಳೂರಿನಂಥ ನಗರಗಳಲ್ಲಿ ಸಹಜೀವನ ನಡೆಸಲಾರಂಭಿಸಿದ್ದೀವಿ. ಹೀಗೆ ಒಬ್ಬೊಬ್ಬರೇ ಒಬ್ಬೊಬ್ಬರೇ ಸೇರಿ, ಒಂದು ಮನೆಯಿಂದ ಮತ್ತೊಂದು ಮನೆಗೆ ಮೂರಡಿ ಜಾಗವನ್ನೂ ಬಿಟ್ಟುಕೊಳ್ಳಲಾರದಷ್ಟು ಇಕ್ಕಟ್ಟಿನಲ್ಲಿ ಬದುಕಲಾರಂಭಿಸಿದ್ದೀವಿ. ಹಾಗಾಗಿ ಇಲ್ಲಿ ಪ್ರೈವಸಿ, ಅಂದರೆ ಖಾಸಗೀತನ, ಏಕಾಂತ ಎಂಬುದು ಅಪರೂಪದ ವಸ್ತುವಾಗಿಬಿಟ್ಟಿದೆ. ಮೇಲಿನ ಮನೆಯಲ್ಲಿ ಖುರ್ಚಿ ಎಳೆದದ್ದೂ, ಕೆಳಗಿನ ಮನೆಯಲ್ಲಿ ಟಾಯ್ಲೆಟ್‌ ಫ್ಲಶ್‌ ಮಾಡಿದ್ದೂ ನಮ್ಮ ಮನೆಯಲ್ಲೇ ನಡೆದ ಸಂಗತಿಯಹಾಗೆ ಕೇಳಿಸುತ್ತೆ. ಅಂಥಾದ್ದರಲ್ಲಿ ʼಸಂತೆಯಲ್ಲಿ ಮನೆಮಾಡಿ ಶಬ್ದಕ್ಕೆ ಅಂಜಿದರೆ ಹೇಗೆʼ ಅನ್ನುವಂತೆ ಖಾಸಗೀತನಕ್ಕಿಲ್ಲಿ ಜಾಗ ತೀರ ಕಡಿಮೆಯೆ. ಹಾಗಾಗಿ ಅಪಾರ್ಟ್ಮೆಂಟೂ ಒಂದು ಐಶಾರಾಮಿ ವಠಾರವೇ.. ಅಷ್ಟೇ!

ಮೊನ್ನೆ ಗೆಳತಿಯೊಬ್ಬಳು ಕರೆ ಮಾಡಿದಾಗ ಹೇಳುತ್ತಿದ್ದಳು. ಅವಳು ಓದುವುದಕ್ಕಾಗಿ ಅಂತ ಹತ್ತನೇ ಕ್ಲಾಸು ಮುಗಿದದ್ದೇ ದೊಡ್ಡದೊಡ್ಡ ನಗರಗಳಲ್ಲಿ ಇದ್ದು ಕಾಲೇಜಿಗೆ ಸೇರಿದ್ದಳಂತೆ. ಊರಿಗೆ ಹೋಗೋದು ಅಪರೂಪವೇ. ಈಗ ಕೋವಿಡ್‌ ಶುರುವಾದಮೇಲೆ ಅವಳು ಕೆಲಸಮಾಡುವ ಕಂಪೆನಿಯವರು ವರ್ಕ್‌ ಫ್ರಂ ಹೋಂ ಕೊಟ್ಟದ್ದರಿಂದ, ಊರಿನಿಂದ ಕೆಲಸಮಾಡಲು ಆರಂಭಿಸಿದ್ದಳು. ಓದು ಕೆಲಸ ಅಂತ ಹತ್ತು ವರ್ಷದಿಂದ ಬೆಂಗಳೂರಿನ ವಾತಾವರಣಕ್ಕೆ ಹೊಂದಿಕೊಂಡಿದ್ದ ಅವಳಿಗೆ, ಊರಲ್ಲಿ ಹೊಂದಿಕೊಳ್ಳೋದೇ ಕಷ್ಟವಾಗಿತ್ತಂತೆ. ಏನದು ಸಮಸ್ಯೆ ಅಂದ್ರೆ, ಶಿಸ್ತಿನದ್ದಂತೆ! ʼಬೆಂಗಳೂರಲ್ಲೇ ಇದ್ದೂ ಇದ್ದೂ ಜೀವನಾ ಹೇಗೆ ಶಿಸ್ತಿಲ್ಲದೆ ಓಡ್ತಿತ್ತು. ಮಲಗೋಕೂ ಏಳೋಕೂ ಇದೇ ಸಮಯವಂತ ಇಲ್ಲ. ಊಟಕ್ಕೂ ಅಷ್ಟೇ. ಎಲ್ಲವೂ ಅವರವರ ಮನಸ್ಸಿನ ಅನುಕೂಲಕ್ಕೆ ತಕ್ಕಂತೆ. ಆದರೆ ಹಳ್ಳಿಗಳಲ್ಲಿ ಹಾಗಲ್ಲ ಇಡೀ ಊರೆ ಅಂಥದ್ದೊಂದು ಹೊತ್ತಿಗೆ ಮಲಗಿಬಿಡತ್ತೆ, ಏಳತ್ತೆ.

“Bombay never sleeps”, ಇಡೀ ದಿನ ವಾಹನಗಳ ಓಡಾಟವಿರುವ ಮುಂಬೈಗೆ ʼಬಾಂಬೆ ಯಾವತ್ತೂ ನಿದ್ರಿಸಲ್ಲʼ ಅನ್ನುವ ಅಂತ ಒಂದು ಮಾತಿತ್ತು, ಅದು ಈಗ ಎಲ್ಲ ನಗರಗಳಿಗೂ ಅನ್ವಯಿಸುವಂತಾಗುತ್ತಿದೆ, ಅದೇ ಹಾದಿಯಲ್ಲಿ ಬೆಂಗಳೂರು ನಗರವೂ ಇದೆ. ಎಲ್ಲರೂ ನಿದ್ರಿಸುವ ಹೊತ್ತಿನಲ್ಲಿ ಒಂದಷ್ಟು ಜನ ಕಣ್ಣುಗಳನ್ನು ಇಷ್ಟಗಲ ಬಿಟ್ಟುಕೊಂಡು, ಕೆಲಸಮಾಡುತ್ತಾರೆ, ಮತ್ತು ಎಲ್ಲರೂ ಎದ್ದು ಸೂರ್ಯನಿಗೆ ನಮಸ್ಕಾರ ಮಾಡುವ ಹೊತ್ತಿನಲ್ಲಿ, ಆಕಳಿಸುತ್ತಾ, ಕ್ಯಾಬಿಂದ ಇಳಿದು ಸೋತವರಂತೆ ಮನೆಯ ಗೇಟು ತೆರೆದು ಒಳಗಡೆ ಹೋಗುತ್ತಾರೆ. ನಸುಕಿಗೆ ಏಳಬೇಕು, ಕತ್ತಲಿಗೆ ಮಲಗಬೇಕು ಎಂಬುದನ್ನು ಪಾಲಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಊರಲ್ಲಿನ ನಿಶ್ಯಬ್ದತೆಗೂ, ಕಡುಕತ್ತಲ ರಾತ್ರಿಗೂ ಒಗ್ಗಿಕೊಳ್ಳಲು ಸಾಕಷ್ಟು ಸಮಯವೇ ಬೇಕಾಯ್ತು ಅಂತ ಹೇಳಿದಳು.

ಆಗಲೇ ನನಗೆ ಹೊಳೆದದ್ದು.. ಹೌದಲ್ಲ ನಗರವಾಸಿಗಳಿಗೆ ಸಹಜವಾಗಿರಬೇಕಿದ್ದ ಕತ್ತಲೆಂದರೂ ಭಯ, ನಿಶ್ಯಬ್ದತೆಯೂ ಭಯ.. ಕೆಲಸದ ಬೆನ್ನೇರಿ ನಗರಗಳಲ್ಲಿ ಬಂದು ಕುಳಿತ ನಾವು ಪ್ರಕೃತಿಯಿಂದ ದೂರವುಳಿದು ನಮ್ಮದೇ ಕೃತಕ ಜಗತ್ತನ್ನು ಸೃಷ್ಟಿಸಿಕೊಂಡಿದ್ದೇವೆ. ನಾವು ಮಲಗುವ ಹೊತ್ತಿಗೆ ಪೂರ್ಣ ಕತ್ತಲೂ ಇಲ್ಲ, ನಿಶ್ಯಬ್ದತೆಯೂ ಇಲ್ಲ… ಅರೆಬರೆ ಕತ್ತಲಿಗೆ ಹೊಂದಿಕೊಂಡು ಮಲಗುತ್ತಿದ್ದೇವೆ. ಯಾವೊಂದೂ ಸದ್ದಿಲ್ಲದೇ, ಯಾದರೂ ಸಂಪರ್ಕವಿಲ್ಲದೇ ಈರುವ ಏಕಾಂತದ ಅನುಭವವೇ ಇಲ್ಲದಂತಾಗಿ ಹೋಗಿ, ಸಂತೆಯಲ್ಲಿ ಬದುಕುವವರಂತೆ ಬದುಕಿದ್ದೇವೆ.

ಈಗ ಕೋವಿಡ್‌ ಕಾರಣದಿಂದಾಗಿ ತಮ್ಮತಮ್ಮ ಊರಿಗೆ ಮರಳಿರುವ ಜನರಿಗೆ ಈ ಅನುಭವವಾಗುತ್ತಿದೆ. ಇಷ್ಟು ದಿನ ಗಳಿಸಿದ್ದೇನು? ಕಳೆದುಕೊಂಡದ್ದೇನು ಎಂಬುದರ ಲೆಕ್ಕವೂ ಸರಿಯಾಗಿ ಸಿಗುತ್ತಿದೆ.